वाचनम्
ಭಾಗಸೂಚನಾ
ಸೀತಾಸಹಿತ ಶ್ರೀರಾಮನು ವಸಿಷ್ಠಪುತ್ರನಾದ ಸುಯಜ್ಞನನ್ನು ಕರೆಸಿ ಅವನಿಗೂ ಅವನ ಪತ್ನಿಗೂ ಬಹುಮೂಲ್ಯವಾದ ಆಭರಣಗಳನ್ನು, ರತ್ನಗಳನ್ನು, ಧನವನ್ನು, ದಾನ ಮಾಡಿದುದು, ಲಕ್ಷ್ಮಣಸಹಿತನಾಗಿ ಬ್ರಾಹ್ಮಣರಿಗೂ, ಬ್ರಹ್ಮಚಾರಿಗಳಿಗೂ, ಸೇವಕರಿಗೂ, ತ್ರಿಜಟ ಬ್ರಾಹ್ಮಣರಿಗೂ, ಸುಹೃದರಿಗೂ ತನ್ನ ಐಶ್ವರ್ಯವೆಲ್ಲವನ್ನು ಹಂಚಿಕೊಟ್ಟಿದ್ದು
ಮೂಲಮ್ - 1
ತತಃ ಶಾಸನಮಾಜ್ಞಾಯ ಭ್ರಾತುಃ ಪ್ರಿಯಕರಂ ಹಿತಮ್ ।
ಗತ್ವಾ ಸ ಪ್ರವಿವೇಶಾಶು ಸುಯಜ್ಞಸ್ಯ ನಿವೇಶನಮ್ ॥
ಅನುವಾದ
ಬಳಿಕ ಲಕ್ಷ್ಮಣನು ಪ್ರಿಯಕರವೂ, ಶುಭಕರವೂ, ಹಿತಕರವೂ ಆದ ಶ್ರೀರಾಮನ ಆಜ್ಞೆಯನ್ನು ಪಡೆದು ಅಲ್ಲಿಂದ ಹೊರಟು ಶೀಘ್ರವಾಗಿ ಗುರುಪುತ್ರ ಸುಯಜ್ಞರ ಮನೆಯನ್ನು ಪ್ರವೇಶಿಸಿದನು.॥1॥
ಮೂಲಮ್ - 2
ತಂ ವಿಪ್ರಮಗ್ನ್ಯಗಾರಸ್ಥಂವಂದಿತ್ವಾ ಲಕ್ಷ್ಮಣೋಽಬ್ರವೀತ್ ।
ಸಖೇಽಭ್ಯಾಗಚ್ಛ ಪಶ್ಯ ತ್ವಂ ವೇಶ್ಮ ದುಷ್ಕರಕಾರಿಣಃ ॥
ಅನುವಾದ
ಆಗ ಸುಯಜ್ಞರು ಯಜ್ಞಶಾಲೆಯಲ್ಲಿ ಕುಳಿತಿದ್ದರು. ಲಕ್ಷ್ಮಣನು ಅವರನ್ನು ವಂದಿಸಿ ಹೇಳಿದನು - ಮಿತ್ರನೇ! ದುಷ್ಕರವಾದ ಕರ್ಮ ಮಾಡುವ ಶ್ರೀರಾಮನ ಮನೆಗೆ ಆಗಮಿಸಿ ಅವನ ಕಾರ್ಯವನ್ನು ನೋಡು.॥2॥
ಮೂಲಮ್ - 3
ತತಃ ಸಂಧ್ಯಾಮುಪಾಸ್ಥಾಯ ಗತ್ವಾ ಸೌಮಿತ್ರಿಣಾ ಸಹ ।
ಋದ್ಧಂ ಸ ಪ್ರಾವಿಶಲ್ಲಕ್ಷ್ಯ್ಮಾ ರಮ್ಯಂ ರಾಮನಿವೇಶನಮ್ ॥
ಅನುವಾದ
ಸುಯಜ್ಞರು ಮಧ್ಯಾಹ್ನಕಾಲದ ಸಂಧ್ಯೋಪಾಸನೆಯನ್ನು ಪೂರೈಸಿ ಲಕ್ಷ್ಮಣನೊಂದಿಗೆ ಹೊರಟು ಲಕ್ಷ್ಮಿಯಿಂದ ಸಂಪನ್ನನಾದ ರಮಣೀಯ ಶ್ರೀರಾಮನ ಭವನವನ್ನು ಪ್ರವೇಶಿಸಿದನು.॥3॥
ಮೂಲಮ್ - 4
ತಮಾಗತಂ ವೇದವಿದಂ ಪ್ರಾಂಜಲಿಃ ಸೀತಯಾ ಸಹ ।
ಸುಯಜ್ಞಮಭಿಚಕ್ರಾಮ ರಾಘವೋಽಗ್ನಿ ಮಿವಾರ್ಚಿತಮ್ ॥
ಅನುವಾದ
ಹೋಮಕಾಲದಲ್ಲಿ ಪೂಜಿತ ಅಗ್ನಿಯಂತೆ ತೇಜಸ್ವೀ, ವೇದ ವೇತ್ತರಾದ ಸುಯಜ್ಞರು ಬಂದಿರುವುದನ್ನು ನೋಡಿ ಸೀತಾ ಸಹಿತ ಶ್ರೀರಾಮನು ಕೈಮುಗಿದು ಸ್ವಾಗತಿಸಿದನು.॥4॥
ಮೂಲಮ್ - 5½
ಜಾತರೂಪಮಯೈರ್ಮುಖೈರಂಗದೈಃ ಕುಂಡಲೈಃ ಶುಭೈಃ ।
ಸಹೇಮಸೂತ್ರೈರ್ಮಣಿಭಿಃ ಕೇಯೂರೈರ್ವಲಯೈರಪಿ ॥
ಅನ್ಯೈಶ್ಚ ರತ್ನೈರ್ಬಹುಭಿಃ ಕಾಕುತ್ಸ್ಥಃ ಪ್ರತ್ಯಪೂಜಯತ್ ।
ಅನುವಾದ
ಬಳಿಕ ಕಾಕುತ್ಸ್ಥ ಶ್ರೀರಾಮನು ಸ್ವರ್ಣಮಯ ಶ್ರೇಷ್ಠ ಭುಜಕೀರ್ತಿಗಳನ್ನು, ಸುಂದರ ಕುಂಡಲಗಳನ್ನೂ, ಚಿನ್ನದ ಸೂತ್ರದಲ್ಲಿ ಪೋಣಿಸಿದ ಮಣಿಸರಗಳನ್ನೂ, ಕೇಯೂರ, ಕಡಗಗಳನ್ನು ಹಾಗೂ ಹೇರಳವಾದ ರತ್ನಗಳನ್ನು ಅರ್ಪಿಸಿ ಅವರನ್ನು ಪೂಜಿಸಿದನು.॥5½॥
ಮೂಲಮ್ - 6
ಸುಯಜ್ಞಂ ಸ ತದೋವಾಚ ರಾಮಃ ಸೀತಾಪ್ರಚೋದಿತಃ ॥
ಮೂಲಮ್ - 7
ಹಾರಂ ಚ ಹೇಮಸೂತ್ರಂ ಚ ಭಾರ್ಯಾಯೈ ಸೌಮ್ಯ ಹಾರಯ ।
ರಶನಾಂ ಚಾಥ ಸಾ ಸೀತಾ ದಾತುಮಿಚ್ಛತಿ ತೇ ಸಖೀ ॥
ಅನುವಾದ
ಸೀತೆಯ ಪ್ರೇರಣೆಯಿಂದ ಶ್ರೀರಾಮನು ಸುಯಜ್ಞನಿಗೆ ಹೇಳಿದನು - ಸೌಮ್ಯ! ನಿಮ್ಮ ಪತ್ನಿಯ ಸಖಿಯಾದ ಸೀತೆಯು ಆಕೆಗೆ ತನ್ನ ಹಾರ, ಸುವರ್ಣಸೂತ್ರ, ಒಡ್ಯಾಣಗಳನ್ನು ಕೊಡಲು ಬಯಸುತ್ತಿರುವಳು. ಈ ವಸ್ತುಗಳನ್ನು ತಮ್ಮ ಪತ್ನಿಗಾಗಿ ಕೊಂಡು ಹೋಗಿರಿ.॥6-7॥
ಮೂಲಮ್ - 8
ಅಂಗದಾನಿ ಚ ಚಿತ್ರಾಣಿ ಕೇಯೂರಾಣಿ ಶುಭಾನಿ ಚ ।
ಪ್ರಯಚ್ಛತಿ ಸಖೇ ತುಭ್ಯಂ ಭಾರ್ಯಾಯೈ ಗಚ್ಛತೀ ವನಮ್ ॥
ಅನುವಾದ
ಕಾಡಿಗೆ ಹೊರಟಿರುವ ನಿಮ್ಮ ಪತ್ನಿಯ ಸಖಿ ಸೀತೆಯು ನಿಮ್ಮ ಪತ್ನಿಗಾಗಿ ಚಿತ್ರಿತವಾದ ತೋಳ್ಬಂದಿಗಳನ್ನು ಸುಂದರ ಕೇಯೂರಗಳನ್ನು ಕೊಡಲು ಬಯಸುತ್ತಿರುವಳು.॥8॥
ಮೂಲಮ್ - 9
ಪರ್ಯಂಕಮಗ್ರ್ಯಾಸ್ತರಣಂ ನಾನಾರತ್ನವಿಭೂಷಿತಮ್ ।
ತಮಪೀಚ್ಛತಿ ವೈದೇಹೀ ಪ್ರತಿಷ್ಠಾಪಯಿತುಂ ತ್ವಯಿ ॥
ಅನುವಾದ
ಉತ್ತಮವಾದ ಶಯ್ಯೆಯಿಂದ ಕೂಡಿದ ನಾನಾ ಪ್ರಕಾರದ ರತ್ನಗಳಿಂದ ಭೂಷಿತ ಮಂಚವನ್ನು ವಿದೇಹನಂದಿನೀ ಸೀತೆಯು ನಿಮ್ಮ ಮನೆಗೆ ಕಳಿಸಿಕೊಡಲು ಇಚ್ಛಿಸುತ್ತಿರುವಳು.॥9॥
ಮೂಲಮ್ - 10
ನಾಗಃ ಶತ್ರುಂಜಯೋ ನಾಮ ಮಾತುಲೋಯಂ ದದೌ ಮಮ ।
ತಂ ತೇ ನಿಷ್ಕಸಹಸ್ರೇಣ ದದಾಮಿ ದ್ವಿಜಪುಂಗವ ॥
ಅನುವಾದ
ವಿಪ್ರವರ್ಯ! ನನ್ನ ಮಾವನು ನನಗೆ ಉಡುಗೊರೆಯಾಗಿ ಕೊಟ್ಟ ಶತ್ರುಂಜಯ ಆನೆಯನ್ನು ಒಂದು ಸಾವಿನ ಸವರ್ಣ ಮುದ್ರೆಗಳೊಂದಿಗೆ ನಿಮಗೆ ಅರ್ಪಿಸುತ್ತಿದ್ದೇನೆ.॥10॥
ಮೂಲಮ್ - 11
ಇತ್ಯುಕ್ತಃ ಸ ತು ರಾಮೇಣ ಸುಯಜ್ಞಃ ಪ್ರತಿಗೃಹ್ಯ ತತ್ ।
ರಾಮಲಕ್ಷ್ಮಣಸೀತಾನಾಂ ಪ್ರಯುಯೋಜಾಶಿಷಃ ಶಿವಾಃ ॥
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ಸುಯಜ್ಞನು ಆ ಎಲ್ಲ ವಸ್ತುಗಳನ್ನು ಸ್ವೀಕರಿಸಿ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯರಿಗೆ ಶುಭಾಶೀರ್ವಾದವನ್ನು ಕೊಟ್ಟರು.॥11॥
ಮೂಲಮ್ - 12
ಅಥ ಭ್ರಾತರಮವ್ಯಗ್ರಂ ಪ್ರಿಯಂ ರಾಮಃ ಪ್ರಿಯಂವದಮ್ ।
ಸೌಮಿತ್ರಿಂ ತಮುವಾಚೇದಂ ಬ್ರಹ್ಮೇವ ತ್ರಿದಶೇಶ್ವರಮ್ ॥
ಅನುವಾದ
ಅನಂತರ ಶ್ರೀರಾಮನು ಶಾಂತಭಾವದಿಂದ ನಿಂತಿದ್ದ, ಪ್ರಿಯವಚನಗಳನ್ನಾಡುವ, ಪ್ರಿಯಸಹೋದರ ಲಕ್ಷ್ಮಣನಲ್ಲಿ ಬ್ರಹ್ಮದೇವರು ಇಂದ್ರನಲ್ಲಿ ಏನೋ ಹೇಳುವಂತೆ ಇಂತು ನುಡಿದನು.॥12॥
ಮೂಲಮ್ - 13
ಅಗಸ್ತ್ಯಂ ಕೌಶಿಕಂ ಚೈವ ತಾವುಭೌ ಬ್ರಾಹ್ಮಣೋತ್ತಮೌ ।
ಅರ್ಚಯಾಹೂಯ ಸೌಮಿತ್ರೇ ರತ್ನೈಃ ಸಸ್ಯಮಿವಾಮಂಬುಭಿಃ ॥
ಮೂಲಮ್ - 14
ತರ್ಪಯಸ್ವ ಮಹಾಬಾಹೋ ಗೋಸಹಸ್ರೇಣ ರಾಘವ ।
ಸುವರ್ಣರಜತೈಶ್ಚೈವ ಮಣಿಭಿಶ್ಚ ಮಹಾಧನೈಃ ॥
ಅನುವಾದ
ಸುಮಿತ್ರಾನಂದನ! ಅಗಸ್ತ್ಯ ಮತ್ತು ವಿಶ್ವಾಮಿತ್ರ ಇವರಿಬ್ಬರು ಉತ್ತಮ ಬ್ರಾಹ್ಮಣರನ್ನು ಕರೆಸಿ ರತ್ನಗಳಿಂದ ಅವರನ್ನು ಪೂಜಿಸು. ಮಹಾಬಾಹು ರಘುನಂದನ! ಮೋಡಗಳು ಮಳೆಯಿಂದ ಹೊಲವನ್ನು ತೃಪ್ತಿಪಡಿಸುವಂತೆಯೇ ನೀನು ಅವರಿಗೆ ಸಾವಿರಾರು ಗೋವುಗಳನ್ನು, ಸ್ವರ್ಣಮುದ್ರೆಗಳನ್ನು, ಬೆಳ್ಳಿನಾಣ್ಯಗಳನ್ನು, ಅಮೂಲ್ಯವಾದ ಮಣಿಗಳಿಂದಲೂ ಸಂತುಷ್ಟಗೊಳಿಸು.॥13-14॥
ಮೂಲಮ್ - 15
ಕೌಸಲ್ಯಾಂ ಚ ಯ ಆಶೀರ್ಭಿರ್ಭಕ್ತಃ ಪರ್ಯುಪತಿಷ್ಠತಿ ।
ಆಚಾರ್ಯಸ್ತೈತ್ತಿರೀಯಾಣಾಮಭಿರೂಪಶ್ಚ ವೇದವಿತ್ ॥
ಮೂಲಮ್ - 16
ತಸ್ಯ ಯಾನಂ ಚ ದಾಸೀಶ್ಚ ಸೌಮಿತ್ರೇ ಸಂಪ್ರದಾಪಯ ।
ಕೌಶೇಯಾನಿ ಚ ವಸ್ತ್ರಾಣಿ ಯಾವತ್ ತುಷ್ಯತಿ ಸ ದ್ವಿಜಃ ॥
ಅನುವಾದ
ಲಕ್ಷ್ಮಣ! ಯಜುರ್ವೇದಿಯ ತೈತ್ತಿರೀಯ ಶಾಖೆಯನ್ನು ಅಧ್ಯಯನ ಮಾಡಿರುವ ಆಚಾರ್ಯ ಮತ್ತು ಸಂಪೂರ್ಣ ವೇದ ವಿದ್ವಾಂಸರಾದ ಬ್ರಾಹ್ಮಣರನ್ನು, ದಾನಪಡೆಯಲು ಯೋಗ್ಯರಾದ ಬ್ರಾಹ್ಮಣರನ್ನು, ತಾಯಿ ಕೌಸಲ್ಯೆಯ ಕುರಿತು ಭಕ್ತಿಭಾವ ವಿರಿಸಿ ಪ್ರತಿದಿನ ಆಕೆಯ ಬಳಿಗೆ ಹೋಗಿ ಆಶೀರ್ವಾದಗಳನ್ನು ಕೊಡುತ್ತಿರುವವರನ್ನು ಕರೆಸಿ ಅವರಿಗೆ ವಾಹನ, ದಾಸ-ದಾಸಿಯರನ್ನು, ರೇಶ್ಮೆವಸ್ತ್ರಗಳನ್ನು, ಅವರಿಗೆ ತೃಪ್ತಿಯಾಗುವಷ್ಟು ಧನವನ್ನು ಭಂಡಾರದಿಂದ ಕೊಡಿಸು.॥15-16॥
ಮೂಲಮ್ - 17½
ಸೂತಶ್ಚಿತ್ರರಥಶ್ಚಾರ್ಯಃ ಸಚಿವಃ ಸುಚಿರೋಷಿತಃ ।
ತೋಷಯೈನಂ ಮಹಾರ್ಹೈಶ್ಚ ರತ್ನೈರ್ವಸ್ತ್ರೈರ್ಧನೈಸ್ತಥಾ ॥
ಪಶುಕಾಭಿಶ್ಚ ಸರ್ವಾಭಿರ್ಗವಾಂ ದಶಶತೇನ ಚ ।
ಅನುವಾದ
ಸೂತಶ್ರೇಷ್ಠ ಚಿತ್ರರಥ ಎಂಬ ಸಚಿವನಿದ್ದಾನೆ. ಅವನು ದೀರ್ಘಕಾಲದಿಂದ ಇದೇ ರಾಜಕುಲದ ಸೇವೆಯಲ್ಲಿ ಇದ್ದಾನೆ. ಅವನಿಗೂ ನೀನು ಅಮೂಲ್ಯ ರತ್ನ, ವಸ್ತ್ರ, ಧನವನ್ನು ಕೊಟ್ಟು ಸಂತುಷ್ಟಗೊಳಿಸು. ಜೊತೆಗೆ ಅವನಿಗೆ ಉತ್ತಮ ಜಾತಿಯ ಆಡು ಮೊದಲಾದ ಪಶುಗಳನ್ನೂ, ಒಂದು ಸಾವಿರ ಹಸುಗಳನ್ನೂ ಅರ್ಪಿಸಿ ಸಂತೋಷಗೊಳಿಸು.॥17½॥
ಮೂಲಮ್ - 18
ಯೇ ಚೇಮೇ ಕಠಕಾಲಾಪಾ ಬಹವೋ ದಂಡಮಾಣವಾಃ ॥
ಮೂಲಮ್ - 19
ನಿತ್ಯಸ್ವಾದ್ಯಾಯಶೀಲತ್ವಾನ್ನಾನ್ಯತ್ ಕುರ್ವಂತಿ ಕಿಂಚನ ।
ಅಲಸಾಃ ಸ್ವಾದುಕಾಮಾಶ್ಚ ಮಹತಾಂ ಚಾಪಿಸಂಮತಾಃ ॥
ಮೂಲಮ್ - 20
ತೇಷಾಮಶೀತಿಯಾನಾನಿ ರತ್ನಪೂರ್ಣಾನಿ ದಾಪಯ
ಶಾಲಿವಾಹಸಹಸ್ರಂ ಚ ದ್ವೇ ಶತೇ ಭದ್ರಕಾಂಸ್ತಥಾ ॥
ಅನುವಾದ
ನನ್ನೊಂದಿಗೆ ಸಂಬಂಧವಿರಿಸಿಕೊಂಡ ಕಠಶಾಖೆ ಮತ್ತು ಕಲಾಪ ಶಾಖೆಯನ್ನು ಅಧ್ಯಯನ ಮಾಡುವ ಅನೇಕ ದಂಡಧಾರೀ ಬ್ರಹ್ಮಚಾರಿಗಳು ಸದಾ ಅಧ್ಯಯನದಲ್ಲೇ ಮುಳುಗಿದ್ದ ಕಾರಣ ಬೇರೆ ಯಾವ ಕೆಲಸವನ್ನೂ ಮಾಡುವುದಿಲ್ಲ. ಭಿಕ್ಷೆ ಎತ್ತಲೂ ಅಲಸಿಗಳಾಗಿದ್ದರೂ ರುಚಿಕರವಾದ ಅನ್ನ ಉಣ್ಣಲು ಬಯಸುತ್ತಾರೆ. ಮಹಾಪುರುಷರೂ ಅವರನ್ನು ಸಮ್ಮಾನಿಸುತ್ತಾರೆ. ಅವರಿಗೂ ರತ್ನಗಳನ್ನು ಹೇರಿದ ಎಂಭತ್ತು ಒಂಟೆಗಳನ್ನು, ಅಕ್ಕಿಮೂಟೆಗಳನ್ನು ಹೊತ್ತ ಒಂದು ಸಾವಿರ ಎತ್ತುಗಳನ್ನು, ಕಡಲೆ, ಹೆಸರು ಮುಂತಾದ ಧಾನ್ಯವಿಶೇಷಗಳಿಂದ ತುಂಬಿದ ಇನ್ನೂರು ಬಂಡಿಗಳನ್ನು ಕೊಡಿಸು.॥18-20॥
ಮೂಲಮ್ - 21
ವ್ಯಂಜನಾರ್ಥಂ ಚ ಸೌಮಿತ್ರೇ ಗೋಸಹಸ್ರಮುಪಾಕುರು ।
ಮೇಖಲೀನಾಂ ಮಹಾಸಂಘಃ ಕೌಸಲ್ಯಾಂ ಸಮುಪಸ್ಥಿತಃ ॥
ತೇಷಾಂ ಸಹಸ್ರಂ ಸೌಮಿತ್ರೇ ಪ್ರತ್ಯೇಕಂ ಸಂಪ್ರದಾಪಯ ॥
ಅನುವಾದ
ಸುಮಿತ್ರಾಕುಮಾರ! ಮೇಲೆ ಹೇಳಿದ ವಸ್ತುಗಳಲ್ಲದೆ ಅವರಿಗೆ ಮೊಸರು, ತುಪ್ಪ ಮೊದಲಾದ ವ್ಯಂಜನಗಳ ನಿಮಿತ್ತ ಒಂದು ಸಾವಿರ ಆಕಳುಗಳನ್ನು ಕಳಿಸಿಕೊಡು. ತಾಯಿ ಕೌಸಲ್ಯೆಯು ಮೇಖಲಾಧಾರಿ ಬಹಳ ದೊಡ್ಡ ಬ್ರಹ್ಮಚಾರೀ ಸಮುದಾಯವನ್ನು ಪೋಷಿಸುತ್ತಿರುವಳು. ಅವರಲ್ಲಿ ಪ್ರತಿಯೊಬ್ಬನಿಗೂ ಒಂದೊಂದು ಸಾವಿರ ಸ್ವರ್ಣಮುದ್ರೆಗಳನ್ನು ಕೊಡಿಸು.॥21॥
ಮೂಲಮ್ - 22
ಅಂಬಾ ಯಥಾ ನೋ ನಂದೇಚ್ಚ ಕೌಸಲ್ಯಾ ಮಮ ದಕ್ಷಿಣಾಮ್ ।
ತಥಾ ದ್ವಿಜಾತೀಂಸ್ತಾನ್ ಸರ್ವಾನ್ಲ್ಲಕ್ಷ್ಮಣಾರ್ಚಯ ಸರ್ವಶಃ ॥
ಅನುವಾದ
ಲಕ್ಷ್ಮಣ! ಆ ಎಲ್ಲ ಬ್ರಹ್ಮಚಾರೀ ಬ್ರಾಹ್ಮಣರಿಗೆ ನಾವು ಕೊಟ್ಟ ದಕ್ಷಿಣೆಯಿಂದ ನನ್ನ ತಾಯಿ ಕೌಸಲ್ಯೆಯು ಸಂತೋಷ ಪಡುವಂತೆ ಅವರೆಲ್ಲರನ್ನು ಎಲ್ಲ ರೀತಿಯಿಂದ ಪೂಜಿಸು.॥22॥
ಮೂಲಮ್ - 23
ತತಃ ಪುರುಷಶಾರ್ದೂಲಸ್ತದ್ಧನಂ ಲಕ್ಷ್ಮಣಃ ಸ್ವಯಮ್ ।
ಯಥೋಕ್ತಂ ಬ್ರಾಹ್ಮಣೇಂದ್ರಾಣಾಮದದಾದ್ಧನದೋ ಯಥಾ ॥
ಅನುವಾದ
ಈ ರೀತಿ ಅಪ್ಪಣೆ ಪಡೆದು ಪುರುಷಸಿಂಹ ಲಕ್ಷ್ಮಣನು ಸ್ವತಃ ಕುಬೇರನಂತೆ ಶ್ರೀರಾಮನು ಹೇಳಿದಂತೆ ಆ ಶ್ರೇಷ್ಠಬ್ರಾಹ್ಮಣರಿಗೆ ಹೇರಳವಾಗಿ ಧನವನ್ನು ದಾನ ಮಾಡಿದನು.॥23॥
ಮೂಲಮ್ - 24
ಅಥಾಬ್ರವೀದ್ ಬಾಷ್ಪಗಲಾಂಸ್ತಿಷ್ಠತಶ್ಚೋಪಜೀವಿನಃ ।
ಸ ಪ್ರದಾಯ ಬಹುದ್ರವ್ಯಮೇಕೈಕಸ್ಯೋಪಜೀವನಮ್ ॥
ಮೂಲಮ್ - 25
ಲಕ್ಷ್ಮಣಸ್ಯಚ ಯದ್ ವೇಶ್ಮ ಗೃಹಂ ಚ ಯದಿದಂ ಮಮ ।
ಅಶೂನ್ಯಂ ಕಾರ್ಯಮೇಕೈಕಂ ಯಾವದಾಗಮನಂ ಮಮ ॥
ಅನುವಾದ
ಅನಂತರ ಅಲ್ಲಿ ನಿಂತಿರುವ ದುಃಖದಿಂದ ಗಂಟಲು ಕಟ್ಟಿಹೋಗಿದ್ದ ತಮ್ಮ ಆಶ್ರಿತ ಸೇವಕರನ್ನು ಕರೆದು ಶ್ರೀರಾಮನು ಅವರಲ್ಲಿ ಒಬ್ಬೊಬ್ಬರಿಗೆ ಹದಿನಾಲ್ಕುವರ್ಷ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಹೇರಳವಾಗಿ ಧನವನ್ನು ಕೊಟ್ಟು, ಅವರಲ್ಲಿ ಹೇಳಿದನು - ‘ನಾನು ಕಾಡಿನಿಂದ ಬರುವ ತನಕ ನೀವು ಲಕ್ಷ್ಮಣನ ಮತ್ತು ನನ್ನ ಭವನವನ್ನು ಬಿಟ್ಟು ಎಲ್ಲಿಗೂ ಹೋಗಬಾರದು’ ಅಂದರೆ ಬರಿದಾಗಿಸಬಾರದು.॥24-25॥
ಮೂಲಮ್ - 26
ಇತ್ಯುಕ್ತ್ವಾ ದುಃಖಿತಂ ಸರ್ವಂ ಜನಂ ತಮುಪಜೀವಿನಮ್ ।
ಉವಾಚೇದಂ ಧನಾಧ್ಯಕ್ಷಂ ಧನಮಾನೀಯತಾಂ ಮಮ ॥
ಅನುವಾದ
ಆ ಎಲ್ಲ ಸೇವಕರು ಶ್ರೀರಾಮನ ವನಗಮನದಿಂದ ಬಹಳ ದುಃಖಿತರಾಗಿದ್ದರು. ಅವರಿಗೆ ಸಾಂತ್ವನಹೇಳಿ ಶ್ರೀರಾಮನು ತನ್ನ ಧನಾಧ್ಯಕ್ಷ (ಖಜಾಂಚಿ)ನಲ್ಲಿ - ‘ಭಂಡಾರದಲ್ಲಿ ಇರುವ ನನ್ನ ಎಲ್ಲ ಧನವನ್ನು ಇವರಿಗೆ ಕೊಟ್ಟುಬಿಡು’ ಎಂದು ಹೇಳಿದನು.॥26॥
ಮೂಲಮ್ - 27
ತತೋಽಸ್ಯ ಧನಮಾಜಹ್ನುಃ ಸರ್ವ ಏವೋಪಜೀವಿನಃ ।
ಸ ರಾಶಿಃ ಸುಮಹಾಂಸ್ತತ್ರ ದರ್ಶನೀಯೋ ಹ್ಯದೃಶ್ಯತ ॥
ಅನುವಾದ
ಇದನ್ನು ಕೇಳಿ ಎಲ್ಲ ಸೇವಕರು ಧನವನ್ನು ಹೊತ್ತುಕೊಂಡು ಹೋಗತೊಡಗಿದರು. ಅಲ್ಲಿ ಆ ಧನದ ಬಹಳ ದೊಡ್ಡ ರಾಶಿಯೇ ಕಂಡುಬಂತು, ಅದನ್ನು ನೋಡಲು ಯೋಗ್ಯವಾಗಿತ್ತು.॥27॥
ಮೂಲಮ್ - 28
ತತಃ ಸ ಪುರುಷವ್ಯಾಘ್ರಸ್ತದ್ಧನಂ ಸಹಲಕ್ಷ್ಮಣಃ ।
ದ್ವಿಜೇಭ್ಯೋ ಬಾಲವೃದ್ಧೇಭ್ಯಃ ಕೃಪಣೇಭ್ಯೋ ಹ್ಯದಾಪವತ್ ॥
ಅನುವಾದ
ಆಗ ಲಕ್ಷ್ಮಣ ಸಹಿತ ಪುರುಷಸಿಂಹ ಶ್ರೀರಾಮನು ಬಾಲಕರು ಮತ್ತು ವೃದ್ಧಬ್ರಾಹ್ಮಣರಿಗೆ ಹಾಗೂ ದೀನ-ದುಃಖಿತರಿಗೆ ಆ ಎಲ್ಲ ಧನವನ್ನು ಹಂಚಿಬಿಟ್ಟನು.॥28॥
ಮೂಲಮ್ - 29
ತತ್ರಾಸೀತ್ ಪಿಂಗಲೋ ಗಾರ್ಗ್ಯಸ್ತ್ರಿಜಟೋ ನಾಮ ವೈ ದ್ವಿಜಃ ।
ಕ್ಷತವೃತ್ತಿರ್ವನೇ ನಿತ್ಯಂ ಫಾಲಕುದ್ದಾಲಲಾಂಗುಲೀ ॥
ಅನುವಾದ
ಆ ದಿನಗಳಲ್ಲಿ ಅಯೋಧ್ಯೆಯ ಸಮೀಪದ ವನದಲ್ಲಿ ತ್ರಿಜಟ ಎಂಬ ಗರ್ಗಗೋತ್ರೀಯ ಬ್ರಾಹ್ಮಣನು ಇರುತ್ತಿದ್ದನು. ಅವನ ಬಳಿ ಜೀವನ ನಿರ್ವಾಹದ ಯಾವ ಸಾಧನವೂ ಇರಲಿಲ್ಲ. ಇದಕ್ಕಾಗಿ ಉಪವಾಸಾದಿಗಳಿಂದ ಅವನು ಬಿಳಿಚಿಕೊಂಡಿದ್ದನು. ಅವನು ಸದಾ ಗುದ್ದಲಿ, ನೇಗಿಲು ಹಿಡಿದುಕೊಂಡು ಕಾಡಿನಲ್ಲಿ ಫಲ-ಮೂಲದ ಶೋಧದಲ್ಲಿ ಅಲೆಯುತ್ತಿದ್ದನು.॥29॥
ಮೂಲಮ್ - 30
ತಂ ವೃದ್ಧಂ ತರುಣೀ ಬಾರ್ಯಾ ಬಾಲಾನಾದಾಯ ದಾರಕಾನ್ ।
ಅಬ್ರವೀದ್ಬ್ರಾಹ್ಮಣಂ ವಾಕ್ಯಂ ಸ್ತ್ರೀಣಾಂ ಭರ್ತಾಹಿದೇವತಾ ॥
ಮೂಲಮ್ - 31
ಅಪಾಸ್ಯ ಫಾಲಂ ಕುದ್ದಾಲಂ ಕುರುಷ್ವ ವಚನಂ ಮಮ ।
ರಾಮಂ ದರ್ಶಯ ಧರ್ಮಜ್ಞಂ ಯದಿ ಕಿಂಚಿದವಾಪ್ಸ್ಯಸಿ ॥
ಅನುವಾದ
ಅವನು ಮುದುಕನಾಗಿದ್ದ, ಆದರೆ ಅವನ ಪತ್ನೀ ಇನ್ನೂ ತರುಣಿಯಾಗಿದ್ದಳು. ಆಕೆಯು ಪುಟ್ಟ ಮಗುವನ್ನೆತ್ತಿಕೊಂಡು ಗಂಡನಲ್ಲಿ - ಪ್ರಾಣನಾಥ! ಸ್ತ್ರೀಯರಿಗೆ ಪತಿಯೇ ದೇವತೆಯಾಗಿದೆ. (ಆದ್ದರಿಂದ ನಿಮಗೆ ಆದೇಶಿಸುವ ಅಧಿಕಾರ ನನಗಿಲ್ಲ. ಆದರೂ ನಾನು ನಿಮ್ಮ ಭಕ್ತಳಾಗಿರುವೆನು. ಅದಕ್ಕಾಗಿ ವಿನಯಪೂರ್ವಕ ತಮ್ಮಲ್ಲಿ ಬೇಡಿಕೊಳ್ಳುವೆ) ನೀವು ಈ ಗುದ್ದಲಿ, ನೊಗ ಎಸೆದುಬಿಟ್ಟು ಧರ್ಮಜ್ಞನಾದ ಶ್ರೀರಾಮನನ್ನು ಭೆಟ್ಟಿಯಾಗಿ. ನೀವು ಹೀಗೆ ಮಾಡಿದರೆ ಅಲ್ಲಿ ಅವಶ್ಯವಾಗಿ ಏನಾದರೂ ಸಿಗಬಹುದು.॥30-31॥
ಮೂಲಮ್ - 32
ಸ ಭಾರ್ಯಾಯಾ ವಚಃ ಶ್ರುತ್ವಾ ಶಾಟೀಮಾಚ್ಛಾದ್ಯ ದುಶ್ಛದಾಮ್ ।
ಸ ಪ್ರಾತಿಷ್ಠತ ಪಂಥಾನಂ ಯತ್ರ ರಾಮನಿವೇಶನಮ್ ॥
ಅನುವಾದ
ಪತ್ನಿಯ ಮಾತನ್ನು ಕೇಳಿ ಬ್ರಾಹ್ಮಣನು ಹರಿದ ಪಂಚೆ ಉಟ್ಟು, ಕಷ್ಟದಿಂದ ಶರೀರವನ್ನು ಮುಚ್ಚಿಕೊಂಡನು. ಅವನು ಶ್ರೀರಾಮಚಂದ್ರನ ಭವನವಿರುವ ದಾರಿಯನ್ನು ಹಿಡಿದನು.॥32॥
ಮೂಲಮ್ - 33
ಭೃಗ್ವಂಗಿರಃ ಸಮಂ ದೀಪ್ತ್ಯಾ ತ್ರಿಜಟಂ ಜನಸಂಸದಿ ।
ಆಪಂಚಮಾಯಾಃ ಕಕ್ಷ್ಯಾಯಾ ನೈತಂಕಶ್ಚಿದವಾರಯತ್ ॥
ಅನುವಾದ
ಭೃಗು ಮತ್ತು ಅಂಗಿರಸ್ಸುನಂತೆ ತೇಜಸ್ವೀ ತ್ರಿಜಟನು ಜನಸಮುದಾಯದ ನಡುವೆ ನುಸುಳಿ ಶ್ರೀರಾಮಭವನದ ಐದನೆಯ ಹಜಾರಕ್ಕೆ ಹೋದನು. ಆದರೆ ಅವನನ್ನು ಯಾರೂ ತಡೆಯಲಿಲ್ಲ.॥33॥
ಮೂಲಮ್ - 34½
ಸ ರಾಮಮಾಸಾದ್ಯ ತದಾ ತ್ರಿಜಟೋ ವಾಕ್ಯಮಬ್ರವೀತ್ ।
ನಿರ್ಧನೋ ಬಹುಪುತ್ರೋಽಸ್ಮಿ ರಾಜಪುತ್ರ ಮಹಾಬಲ ॥
ಕ್ಷತವೃತ್ತಿರ್ವನೇ ನಿತ್ಯಂ ಪ್ರತ್ಯವೇಕ್ಷಸ್ವ ಮಾಮಿತಿ ।
ಅನುವಾದ
ಆಗ ಶ್ರೀರಾಮನ ಬಳಿಗೆ ಹೋಗಿ ತ್ರಿಜಟನು ಹೇಳಿದನು - ಮಹಾಬಲಿ ರಾಜಕುಮಾರಾ! ನಾನು ನಿರ್ಧನನಾಗಿದ್ದೇನೆ, ನನಗೆ ಅನೇಕ ಮಕ್ಕಳಿದ್ದಾರೆ. ಜೀವನ ನಿರ್ವಾಹ ಕಷ್ಟವಾದ್ದರಿಂದ ಸದಾ ಕಾಡಿನಲ್ಲೇ ಇರುತ್ತೇನೆ. ನೀನು ನನ್ನ ಮೇಲೆ ಕೃಪಾದೃಷ್ಟಿ ಬೀರು.॥34½॥
ಮೂಲಮ್ - 35
ತಮುವಾಚತತೋ ರಾಮಃ ಪರಿಹಾಸಸಮನ್ವಿತಮ್ ॥
ಮೂಲಮ್ - 36
ಗವಾಂ ಸಹಸ್ರಮಪ್ಯೇಕಂ ನಚ ವಿಶ್ರಾಣಿತಂ ಮಯಾ ।
ಪರಿಕ್ಷಿಪಸಿ ದಂಡೇನ ಯಾವತ್ತಾವದವಾಪ್ಸ್ಯಸೆ ॥
ಅನುವಾದ
ಆಗ ಶ್ರೀರಾಮನು ವಿನೋದದಿಂದ ಹೇಳಿದನು - ಬ್ರಾಹ್ಮಣ! ನನ್ನ ಬಳಿ ಅಸಂಖ್ಯ ಗೋವುಗಳಿವೆ. ಇವುಗಳಲ್ಲಿ ಒಂದು ಸಾವಿರವನ್ನು ನಾನು ಯಾರಿಗೂ ಇಷ್ಟರವರೆಗೆ ದಾನ ಮಾಡಲಿಲ್ಲ. ನೀವು ನಿಮ್ಮ ದಂಡವನ್ನು ಎಷ್ಟು ದೂರ ಎಸೆಯಬಲ್ಲಿರೋ ಅಲ್ಲಿಯವರೆಗಿನ ಎಲ್ಲ ಗೋವುಗಳು ನಿಮ್ಮದಾಗುವವು.॥35-36॥
ಮೂಲಮ್ - 37
ಸ ಶಾಟೀಂ ಪರಿತಃ ಕಟ್ಯಾಂ ಸಂಭ್ರಾಂತಃ ಪರಿವೇಷ್ಟ್ಯತಾಮ್ ।
ಆವಿಧ್ಯ ದಂಡಂ ಚಿಕ್ಷೇಪ ಸರ್ವಪ್ರಾಣೇನ ವೇಗತಃ ॥
ಅನುವಾದ
ಇದನ್ನು ಕೇಳಿ ಅವನು ಲಗುಬಗೆಯಿಂದ ಪಂಚೆಯನ್ನು ಸೊಂಟಕ್ಕೆ ಗಟ್ಟಿಯಾಗಿ ಕಟ್ಟಿ, ತನ್ನ ಎಲ್ಲ ಬಲವನ್ನು ಹಾಕಿ ದಂಡವನ್ನು ಬೀಸಿ ವೇಗವಾಗಿ ಎಸೆದನು.॥37॥
ಮೂಲಮ್ - 38
ಸ ತೀರ್ತ್ವಾ ಸರಯೂಪಾರಂ ದಂಡಸ್ತಸ್ಯ ಕರಾಚ್ಚ್ಯುತಃ ।
ಗೋವ್ರಜೇ ಬಹುಸಾಹಸ್ರೇ ಪಪಾತೋಕ್ಷಣಸಸಂಧೌ ॥
ಅನುವಾದ
ಬ್ರಾಹ್ಮಣನು ಎಸೆದಿರುವ ಆ ದಂಡವು ಸರಯು ನದಿಯ ಆಚೆ ದಡದಲ್ಲಿರುವ ಸಾವಿರಾರು ಗೋವುಗಳ ಹಟ್ಟಿಯಲ್ಲಿ ಒಂದು ಗೂಳಿಯ ಬಳಿಗೆ ಹೋಗಿ ಬಿತ್ತು.॥38॥
ಮೂಲಮ್ - 39
ತಂ ಪರಿಷ್ವಜ್ಯ ಧರ್ಮಾತ್ಮಾ ಆ ತಸ್ಮಾತ್ ಸರಯೂ ತಟಾತ್ ।
ಆನಯಾಮಾಸ ತಾ ಗಾವಸ್ತ್ರಿಜಟಸ್ಯಾಶ್ರಮಂ ಪ್ರತಿ ॥
ಅನುವಾದ
ಧರ್ಮಾತ್ಮಾ ರಾಮನು ತ್ರಿಜಟನನ್ನು ಅಪ್ಪಿಕೊಂಡು, ಸರಯೂ ತಟದಿಂದ ಹಿಡಿದು ಆಚೆಯ ದಡದಲ್ಲಿ ಬಿದ್ದಿರುವ ದಂಡದ ಸ್ಥಾನದವರೆಗಿನ ಎಲ್ಲ ಗೋವುಗಳನ್ನು ತ್ರಿಜಟನ ಆಶ್ರಮಕ್ಕೆ ಕಳಿಸಿ ಕೊಟ್ಟನು.॥39॥
ಮೂಲಮ್ - 40
ಉವಾಚ ಚ ತದಾ ರಾಮಸ್ತಂ ಗಾರ್ಗ್ಯಮಭಿಸಾಂತ್ವಯನ್ ।
ಮನ್ಯುರ್ನ ಖಲು ಕರ್ತವ್ಯಃ ಪರಿಹಾಸೋ ಹ್ಯಯಂ ಮಮ ॥
ಅನುವಾದ
ಆಗ ಶ್ರೀರಾಮನ ಗರ್ಗವಂಶೀ ತ್ರಿಜಟನನ್ನು ಸಾಂತ್ವನಗೊಳಿಸುತ್ತಾ ಹೇಳಿದನು-ವಿಪ್ರೋತ್ತಮನೇ! ನಾನು ವಿನೋದದಿಂದ ಈ ಮಾತು ಹೇಳಿದ್ದೆ; ನೀವು ಬೇಸರಪಡಬಾರದು.॥40॥
ಮೂಲಮ್ - 41
ಇದಂ ಹಿ ತೇಜಸ್ತವ ಯದ್ದುರತ್ಯಯಂ
ತದೇವ ಜಿಜ್ಞಾಸಿತುಮಿಚ್ಛತಾ ಮಯಾ ।
ಇಮಂ ಭವಾನರ್ಥಮಭಿಪ್ರಚೋದಿತೋ
ವೃಣೀಷ್ವ ಕಿಂಚೇದಪರಂ ವ್ಯವಸ್ಯಸಿ ॥
ಅನುವಾದ
ನಿಮ್ಮ ಈ ದುರ್ಲಂಘ್ಯ ತೇಜವನ್ನು ತಿಳಿಯಲಿಕ್ಕಾಗಿಯೇ ನಾನು ನಿಮಗೆ ದಂಡವನ್ನು ಎಸೆಯಲು ಪ್ರೇರೇಪಿಸಿದ್ದೆ. ನೀವು ಇನ್ನು ಏನಾದರೂ ಬೇಕಿದ್ದರೆ ಬೇಡಿಕೊಳ್ಳಿರಿ.॥41॥
ಮೂಲಮ್ - 42
ಬ್ರವೀಮಿ ಸತ್ಯೇನ ನ ತೇ ಸ್ಮ ಯಂತ್ರಣಾಂ
ಧನಂ ಹಿ ಯದ್ಯನ್ಮಮ ವಿಪ್ರಕಾರಣಾತ್ ।
ಭವತ್ಸು ಸಮ್ಯಕ್ಪ್ರತಿಪಾದನೇನ
ಮಯಾರ್ಜಿತಂ ಚೈವ ಯಶಸ್ಕರಂ ಭವೇತ್ ॥
ಅನುವಾದ
ನಾನು ಸತ್ಯವಾಗಿ ಹೇಳುತ್ತೇನೆ - ನೀವು ಯಾವುದೇ ಸಂಕೋಚ ಪಡಬೇಡಿ. ನನ್ನ ಬಳಿ ಇರುವ ಎಲ್ಲ ಧನವೂ ಬ್ರಾಹ್ಮಣರಿಗಾಗಿಯೇ ಇದೆ. ನಿಮ್ಮಂತಹ ಬ್ರಾಹ್ಮಣರಿಗೆ ಶಾಸ್ತ್ರವಿಧಿಗನುಸಾರ ದಾನ ಮಾಡುವುದರಿಂದ ನಾನು ಗಳಿಸಿದ ಧನವು ನನ್ನ ಯಶವನ್ನು ವೃದ್ಧಿಪಡಿಸುವುದು.॥42॥
ಮೂಲಮ್ - 43
ತತಃ ಸಭಾರ್ಯಸ್ತ್ರಿಜಟೋ ಮಹಾಮುನಿ-
ರ್ಗವಾಮನೀಕಂ ಪ್ರತಿಗೃಹ್ಯ ಮೋದಿತಃ ।
ಯಶೋಬಲಪ್ರೀತಿಸುಖೋಪಬೃಂಹಿಣೀ-
ಸ್ತದಾಶಿಷಃ ಪ್ರತ್ಯವದನ್ಮಹಾತ್ಮನಃ ॥
ಅನುವಾದ
ಗೋವುಗಳ ಆ ದೊಡ್ಡ ಗುಂಪನ್ನು ಪಡೆದು ಪತ್ನೀಸಹಿತ ಮಹಾಮುನಿ ತ್ರಿಜಟನಿಗೆ ಬಹಳ ಸಂತೋಷವಾಯಿತು. ಅವನು ಮಹಾತ್ಮಾ ಶ್ರೀರಾಮನಿಗೆ ಯಶ, ಬಲ, ಪ್ರೀತಿ ಹಾಗೂ ಸುಖ ಹೆಚ್ಚುವಂತೆ ಆಶೀರ್ವದಿಸತೊಡಗಿದನು.॥43॥
ಮೂಲಮ್ - 44
ಸ ಚಾಪಿ ರಾಮಃ ಪರಿಪೂರ್ಣಪೌರುಷೋ
ಮಹಾಧನಂಧರ್ಮಬಲೈರುಪಾರ್ಜಿತಮ್ ।
ನಿಯೋಜಯಾಮಾಸ ಸುಹೃಜ್ಜನೇ ಚಿರಾದ್
ಯಥಾರ್ಹಸಮ್ಮಾನವಚಃ ಪ್ರಚೋದಿತಃ ॥
ಅನುವಾದ
ಅನಂತರ ಪೂರ್ಣಪರಾಕ್ರಮಿ ಭಗವಾನ್ ಶ್ರೀರಾಮನು ಧರ್ಮಬಲದಿಂದ ಗಳಿಸಿದ ಮಹಾಧನವನ್ನು ಜನರಿಗೆ ಯಥಾಯೋಗ್ಯ ಸಮ್ಮಾನಪೂರ್ವಕ ಮಾತುಗಳಿಂದ ಪ್ರೇರಿತನಾಗಿ ಬಹಳ ಹೊತ್ತು ತನ್ನ ಸುಹೃದರಿಗೆ ಹಂಚುತ್ತಾ ಇದ್ದನು.॥44॥
ಮೂಲಮ್ - 45
ದ್ವಿಜಃ ಸುಹೃದ್ ಭೃತ್ಯಜನೋಽಥವಾ ತದಾ
ದರಿದ್ರಭಿಕ್ಷಾಚರಣಶ್ಚಯೋ ಭವತ್ ।
ನ ತತ್ರ ಕಶ್ಚಿನ್ನ ಬಭೂವ ತರ್ಪಿತೋ
ಯಥಾರ್ಹಸಮ್ಮಾನನದಾನಸಂಭ್ರಮೈಃ ॥
ಅನುವಾದ
ಆಗ ಅಲ್ಲಿ ಶ್ರೀರಾಮನು ಯಥಾಯೋಗ್ಯ ಸಮ್ಮಾನ, ದಾನ, ಆದರ-ಸತ್ಕಾರಗಳಿಂದ ತೃಪ್ತನಾಗದೇ ಇರುವ ಯಾವ ಬ್ರಾಹ್ಮಣರು, ಸುಹೃದರು, ಸೇವಕರು, ದರಿದ್ರರು, ಅಥವಾ ಭಿಕ್ಷುಕರು ಯಾರೂ ಉಳಿಯಲಿಲ್ಲ.॥45॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೂವತ್ತೆರಡನೆಯ ಸರ್ಗ ಪೂರ್ಣವಾಯಿತು.॥32॥