वाचनम्
ಭಾಗಸೂಚನಾ
ರಾಮ-ಲಕ್ಷ್ಮಣರ ಸಂವಾದ, ಶ್ರೀರಾಮನ ಆಜ್ಞೆಯಂತೆ ಲಕ್ಷ್ಮಣನು ದಿವ್ಯಾಯುಧಗಳನ್ನು ತೆಗೆದುಕೊಂಡು ವನವಾಸಕ್ಕೆ ಸಿದ್ಧನಾದುದು, ಶ್ರೀರಾಮನು ಬ್ರಾಹ್ಮಣರಿಗೆ ತನ್ನ ಐಶ್ವರ್ಯವೆಲ್ಲವನ್ನೂ ದಾನ ಮಾಡಲು ಲಕ್ಷ್ಮಣನಿಗೆ ಹೇಳಿದುದು
ಮೂಲಮ್ - 1
ಏವಂ ಶ್ರುತ್ವಾ ಸ ಸಂವಾದಂ ಲಕ್ಷ್ಮಣಃ ಪೂರ್ವಮಾಗತಃ ।
ಬಾಷ್ಪಪರ್ಯಾಕುಲಮುಖಃ ಶೋಕಂ ಸೋಢುಮಶಕ್ನುವನ್ ॥
ಅನುವಾದ
ಕೌಸಲ್ಯೆಯ ಅಂತಃಪುರದಿಂದ ಶ್ರೀರಾಮನ ಜೊತೆಗೇ ಬಂದಿದ್ದ ಲಕ್ಷ್ಮಣನು ಪತಿ-ಪತ್ನಿಯರ ಈ ಸಂವಾದಗಳೆಲ್ಲವನ್ನೂ ಕೇಳಿ ಅವನ ಮುಖಮಂಡಲ ಕಣ್ಣೀರಿನಿಂದ ತೊಯ್ದು ಹೋಯಿತು. ಅಣ್ಣನ ವಿರಹದ ಶೋಕವು ಅವನಿಂದ ಸಹಿಸಲಾಗಲಿಲ್ಲ.॥1॥
ಮೂಲಮ್ - 2
ಸ ಭ್ರಾತುಶ್ಚರಣೌ ಗಾಢಂ ನಿಪೀಡ್ಯ ರಘುನಂದನಃ ।
ಸೀತಾಮುವಾಚಾತಿಯಶಾಂ ರಾಘವಂ ಚ ಮಹಾವ್ರತಮ್ ॥
ಅನುವಾದ
ರಘುನಂದನ ಲಕ್ಷ್ಮಣನು ಅಣ್ಣನ ಚರಣಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅತ್ಯಂತ ಯಶಸ್ವಿನೀ ಸೀತೆ ಹಾಗೂ ಮಹಾ ವ್ರತಧಾರೀ ಶ್ರೀರಘುನಾಥನಲ್ಲಿ ಈ ರೀತಿಯಾಗಿ ಪ್ರಾರ್ಥಿಸಿದನು.॥2॥
ಮೂಲಮ್ - 3
ಯದಿ ಗಂತುಂ ಕೃತಾ ಬುದ್ಧಿರ್ವನಂ ಮೃಗಗಜಾಯುತಮ್ ।
ಅಹಂ ತ್ವಾನುಗಮಿಷ್ಯಾಮಿ ವನಮಗ್ರೇ ಧನುರ್ಧರಃ ॥
ಅನುವಾದ
ಆರ್ಯ! ನೀವು ಸಾವಿರಾರು ಕಾಡುಪ್ರಾಣಿಗಳಿಂದ, ಆನೆಗಳಿಂದ ತುಂಬಿದ ವನಕ್ಕೆ ಹೋಗುವುದನ್ನು ನಿಶ್ಚಯಿಸಿದರೆ ನಾನೂ ನಿಮ್ಮನ್ನು ಅನುಸರಿಸುವೆನು. ಧನುರ್ಬಾಣಗಳನ್ನು ಧರಿಸಿ ಮುಂದೆ-ಮುಂದೆ ನಡೆಯುವೆನು.॥3॥
ಮೂಲಮ್ - 4
ಮಯಾ ಸಮೇತೋಽರಣ್ಯಾನಿರಮ್ಯಾಣಿ ವಿಚರಿಷ್ಯಸಿ ।
ಪಕ್ಷಿಭಿರ್ಮೃಗಯೂಥೈಶ್ಚ ಸಂಘುಷ್ಟಾನಿ ಸಮಂತತಃ ॥
ಅನುವಾದ
ನೀವು ನನ್ನೊಂದಿಗೆ ಪಕ್ಷಿಗಳ ಕಲರವ, ಭೃಂಗಗಳ ಗುಂಜಾರವದಿಂದ ಗುಂಜಿತವಾದ ರಮಣೀಯ ವನದಲ್ಲಿ ಎಲ್ಲೆಡೆ ಸಂಚರಿಸಿರಿ.॥4॥
ಮೂಲಮ್ - 5
ನದೇವಲೋಕಾಕ್ರಮಣಂ ನಾಮರತ್ವಮಹಂ ವೃಣೇ ।
ಐಶ್ವರ್ಯಂ ವಾಪಿ ಲೋಕಾನಾಂ ಕಾಮಯೇ ನ ತ್ವಯಾ ವಿನಾ ॥
ಅನುವಾದ
ನಿನ್ನನ್ನು ಬಿಟ್ಟು ಸ್ವರ್ಗಕ್ಕೆ ಹೋಗುವುದು, ಅಮರವಾಗುವುದು, ಸಮಸ್ತ ಲೋಕಗಳ ಐಶ್ವರ್ಯ ಪ್ರಾಪ್ತಿಮಾಡಿಕೊಳ್ಳುವುದು ಇವು ಯಾವುದನ್ನೂ ನಾನು ಇಚ್ಛಿಸುವುದಿಲ್ಲ.॥5॥
ಮೂಲಮ್ - 6
ಏವಂ ಬ್ರುವಾಣಃ ಸೌಮಿತ್ರಿರ್ವನವಾಸಾಯ ನಿಶ್ಚಿತಃ ।
ರಾಮೇಣ ಬಹುಭಿಃ ಸಾಂತ್ವೈರ್ನಿಷಿದ್ಧಃ ಪುನರಬ್ರವೀತ್ ॥
ಅನುವಾದ
ವನವಾಸಕ್ಕಾಗಿ ನಿಶ್ಚಯಿಸಿ ಹೇಳುತ್ತಿದ್ದ ಸುಮಿತ್ರಾನಂದನ ಲಕ್ಷ್ಮಣನಿಗೆ ಶ್ರೀರಾಮಚಂದ್ರನು ಅನೇಕ ಸಾಂತ್ವನಾಪೂರ್ಣ ಮಾತುಗಳಿಂದ ಸಮಜಾಯಿಸಿ, ಕಾಡಿಗೆ ತನ್ನೊಂದಿಗೆ ಬರಲು ಒಪ್ಪಿಕೊಳ್ಳದಿದ್ದಾಗ ಅವನು ಪುನಃ ನುಡಿದನು.॥6॥
ಮೂಲಮ್ - 7
ಅನುಜ್ಞಾತಸ್ತು ಭವತಾ ಪೂರ್ವಮೇವ ಯದಸ್ಮ್ಯಹಮ್ ।
ಕಿಮಿದಾನೀಂ ಪುನರಪಿಕ್ರಿಯತೇ ಮೇ ನಿವಾರಣಮ್ ॥
ಅನುವಾದ
ಅಣ್ಣಾ! ನೀವಾದರೋ ಮೊದಲಿನಿಂದಲೇ ತನ್ನೊಡನೆ ಇರಲು ಆಜ್ಞಾಪಿಸಿದ್ದೀರಿ. ಮತ್ತೆ ಈಗ ನಿನ್ನೊಂದಿಗೆ ಬರಲು ಏಕೆ ತಡೆಯುತ್ತಿರುವೆ.॥7॥
ಮೂಲಮ್ - 8
ಯದರ್ಥಂ ಪ್ರತಿಷೇಧೋ ಮೇ ಕ್ರಿಯತೇ ಗಂತುಮಿಚ್ಛತಃ ।
ಏತದಿಚ್ಛಾಮಿ ವಿಜ್ಞಾತುಂ ಸಂಶಯೋ ಹಿ ಮಮಾನಘ ॥
ಅನುವಾದ
ನಿಷ್ಪಾಪ ರಘುನಂದನ! ನಿಮ್ಮೊಂದಿಗೆ ಬರುವ ಇಚ್ಛೆಯುಳ್ಳ ನನ್ನನ್ನು ಯಾವ ಕಾರಣದಿಂದ ತಡೆಯುತ್ತಿರುವೆ? ಆ ಕಾರಣವನ್ನು ತಿಳಿಯಲು ಬಯಸುತ್ತಿರುವೆನು. ನನ್ನ ಹೃದಯದಲ್ಲಿ ಇದರ ಕುರಿತು ಸಂಶಯ ಉಂಟಾಗುತ್ತದೆ.॥8॥
ಮೂಲಮ್ - 9
ತತೋಽಬ್ರವೀನ್ಮಹಾತೇಜಾ ರಾಮೋ ಲಕ್ಷ್ಮಣಮಗ್ರತಃ ।
ಸ್ಥಿತಂ ಪ್ರಾಗ್ಗಾಮಿನಂ ಧೀರಂ ಯಾಚಮಾನಂ ಕೃತಾಂಜಲಿಮ್ ॥
ಅನುವಾದ
ಹೀಗೆ ಹೇಳಿ ಧೀರ-ವೀರ ಲಕ್ಷ್ಮಣ ಮುಂದಾಗಿ ಹೊರಡಲು ಸಿದ್ಧನಾಗಿ ಭಗವಾನ್ ಶ್ರೀರಾಮನ ಎದುರಿಗೆ ನಿಂತುಕೊಂಡು ಕೈಜೋಡಿಸಿ ಪ್ರಾರ್ಥಿಸತೊಡಗಿದನು. ಆಗ ಮಹಾತೇಜಸ್ವೀ ಶ್ರೀರಾಮನು ಅವನಲ್ಲಿ ಹೇಳಿದನು.॥9॥
ಮೂಲಮ್ - 10
ಸ್ನಿಗ್ಧೋ ಧರ್ಮರತೋ ವೀರಃ ಸತತಂ ಸತ್ಪಥೇ ಸ್ಥಿತಃ ।
ಪ್ರಿಯಃ ಪ್ರಾಣಸಮೋ ವಶ್ಯೋ ವಿಜೇಯಶ್ಚ ಸಖಾ ಚ ಮೇ ॥
ಅನುವಾದ
ಲಕ್ಷ್ಮಣ! ನೀನು ನನ್ನ ಸ್ನೇಹೀ, ಧರ್ಮಪರಾಯಣ, ಧೀರ-ವೀರನಾಗಿದ್ದು ಸದಾ ಸನ್ಮಾರ್ಗದಲ್ಲಿ ಸ್ಥಿತನಾಗಿರುವೆ. ನನಗೆ ಪ್ರಾಣಗಳಂತೆ ಪ್ರಿಯನಾಗಿರುವೆ. ನನ್ನ ವಶದಲ್ಲಿ ಇದ್ದು ಆಜ್ಞಾಪಾಲಕ ಸಖನಾಗಿರುವೆ.॥10॥
ಮೂಲಮ್ - 11
ಮಯಾದ್ಯ ಸಹ ಸೌಮಿತ್ರೇ ತ್ವಯಿ ಗಚ್ಛತಿ ತದ್ವನಮ್ ।
ಕೋ ಭಜಿಷ್ಯತಿ ಕೌಸಲ್ಯಾಂ ಸುಮಿತ್ರಾಂ ವಾ ಯಶಸ್ವಿನೀಮ್ ॥
ಅನುವಾದ
ಸುಮಿತ್ರಾನಂದನ! ಇಂದು ನೀನು ನನ್ನೊಡನೆ ಕಾಡಿಗೆ ಹೊರಟರೆ ಪರಮ ಯಶಸ್ವೀ ಮಾತೆ ಕೌಸಲ್ಯೆ ಮತ್ತು ಸುಮಿತ್ರಾ ದೇವಿಯ ಸೇವೆ ಯಾರು ಮಾಡುವರು.॥11॥
ಮೂಲಮ್ - 12
ಅಭಿವರ್ಷತಿಕಾಮೈರ್ಯಃ ಪರ್ಜನ್ಯಃ ಪೃಥಿವೀಮಿವ ।
ಸ ಕಾಮಪಾಶಪರ್ಯಸ್ತೋ ಮಹಾತೇಜಾ ಮಹೀಪತಿಃ ॥
ಅನುವಾದ
ಮೋಡಗಳು ಪೃಥಿವಿಯ ಮೇಲೆ ಮಳೆಗರೆಯುವಂತೆ ಎಲ್ಲರ ಕಾಮನೆಗಳನ್ನು ಪೂರ್ಣ ಗೊಳಿಸುತ್ತಿದ್ದ ಮಹಾತೇಜಸ್ವೀ ಮಹಾರಾಜರು ಈಗ ಕೈಕೆಯಿಯ ಪ್ರೇಮಪಾಶದಲ್ಲಿ ಬಂಧಿತರಾಗಿರುವರು.॥12॥
ಮೂಲಮ್ - 13
ಸಾ ಹಿ ರಾಜ್ಯಮಿದಂ ಪ್ರಾಪ್ಯ ನೃಪಸ್ಯಾಶ್ವಪತೇಃ ಸುತಾ ।
ದುಃಖಿತಾನಾಂ ಸಪತ್ನೀನಾಂ ನ ಕರಿಷ್ಯತಿ ಶೋಭನಮ್ ॥
ಅನುವಾದ
ಕೇಕೆಯ ರಾಜಾ ಅಶ್ವಪತಿಯ ಪುತ್ರಿ ಕೈಕೆಯಿಯು ಮಹಾರಾಜರ ಈ ರಾಜ್ಯವನ್ನು ಪಡೆದು, ನನ್ನ ವಿಯೋಗದ ದುಃಖದಲ್ಲಿ ಮುಳುಗಿದ ತನ್ನ ಸವತಿಯರೊಂದಿಗೆ ಚೆನ್ನಾಗಿ ವರ್ತಿಸಲಾರಳು.॥13॥
ಮೂಲಮ್ - 14
ನ ಭರಿಷ್ಯತಿ ಕೌಸಲ್ಯಾಂ ಸುಮಿತ್ರಾಂ ಚ ಸುದುಃಖಿತಾಮ್ ।
ಭರತೋ ರಾಜ್ಯಮಾಸಾದ್ಯ ಕೈಕೇಯ್ಯಾಂ ಪರ್ಯವಸ್ಥಿತಃ ॥
ಅನುವಾದ
ಭರತನೂ ಕೂಡ ರಾಜ್ಯ ಪಡೆದು ಕೈಕೆಯಿಯ ಅಧೀನನಾಗಿರುವುದರಿಂದ ದುಃಖಿತೆಯಾದ ಕೌಸಲ್ಯೆ ಮತ್ತು ಸುಮಿತ್ರೆಯರನ್ನು ಸರಿಯಾಗಿ ನೋಡಿಕೊಳ್ಳಲಾರನು.॥14॥
ಮೂಲಮ್ - 15
ತಾಮಾರ್ಯಾಂ ಸ್ವಯಮೇವೇಹ ರಾಜಾನುಗ್ರಹಣೇನ ವಾ ।
ಸೌಮಿತ್ರೇ ಭರ ಕೌಸಲ್ಯಾಮುಕ್ತಮರ್ಥಮಮುಂ ಚರ ॥
ಅನುವಾದ
ಆದ್ದರಿಂದ ಸುಮಿತ್ರಾಕುಮಾರ! ನೀನು ಇಲ್ಲೇ ಇದ್ದು ತನ್ನ ಪ್ರಯತ್ನದಿಂದ ಅಥವಾ ರಾಜನ ಕೃಪೆ ಸಂಪಾದಿಸಿ ಮಾತೆ ಕೌಸಲ್ಯೆಯನ್ನು ಪಾಲಿಸು. ನಾನು ಹೇಳಿದ ಈ ಪ್ರಯೋಜನ ವನ್ನು ಸಿದ್ಧಗೊಳಿಸು.॥15॥
ಮೂಲಮ್ - 16
ಏವಂ ಮಯಿ ಚ ತೇ ಭಕ್ತಿರ್ಭವಿಷ್ಯತಿ ಸುದರ್ಶಿತಾ ।
ಧರ್ಮಜ್ಞ ಗುರುಪೂಜಾಯಾಂ ಧರ್ಮಾಶ್ಚಾಪ್ಯತುಲೋ ಮಹಾನ್ ॥
ಅನುವಾದ
ಹೀಗೆ ಮಾಡುವುದರಿಂದ ನನ್ನ ಕುರಿತು ಇರುವ ನಿನ್ನ ಭಕ್ತಿಯೂ ಚೆನ್ನಾಗಿ ಪ್ರಕಟವಾಗುವುದು ಹಾಗೂ ಧರ್ಮಜ್ಞ ಗುರು ಹಿರಿಯರ ಪೂಜೆ ಮಾಡುವುದರಿಂದ ಸಿಗುವ ಅನುಪಮ ಧರ್ಮವೂ ನಿನಗೆ ಪ್ರಾಪ್ತವಾಗುವುದು.॥16॥
ಮೂಲಮ್ - 17
ಏವಂ ಕುರುಷ್ವ ಸೌಮಿತ್ರೇ ಮತ್ಕೃತೇ ರಘುನಂದನ ।
ಅಸ್ಮಾಭಿರ್ವಿಪ್ರಹೀಣಾಯಾ ಮಾತುರ್ನೋ ನ ಭವೇತ್ಸುಖಮ್ ॥
ಅನುವಾದ
ರಘುನಂದನ ಲಕ್ಷ್ಮಣ! ನೀನು ನನಗಾಗಿ ಹೀಗೆ ಮಾಡು; ಏಕೆಂದರೆ ನಮ್ಮಿಂದ ಅಗಲಿದ ನಮ್ಮ ಮಾತೆಗೆ ಎಂದೂ ಸುಖವಾಗಲಾರದು. (ಅವಳು ಸದಾ ನಮ್ಮ ಚಿಂತೆಯಲ್ಲೇ ಮುಳುಗಿ ಇರುವಳು..॥17॥
ಮೂಲಮ್ - 18
ಏವಮುಕ್ತಸ್ತು ರಾಮೇಣ ಲಕ್ಷ್ಮಣಃ ಶ್ಲಕ್ಷ್ಣಯಾ ಗಿರಾ ।
ಪ್ರತ್ಯುವಾಚ ತದಾ ರಾಮಂ ವಾಕ್ಯಜ್ಞೋ ವಾಕ್ಯಕೋವಿದಮ್ ॥
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ಮಾತಿನ ಮರ್ಮವನ್ನು ತಿಳಿದ ಲಕ್ಷ್ಮಣನು ಮಾತಿನ ತಾತ್ಪರ್ಯ ಬಲ್ಲ ಶ್ರೀರಾಮನಲ್ಲಿ ಮಧುರವಾಣಿಯಿಂದ ಹೀಗೆ ಉತ್ತರಿಸಿದನು.॥18॥
ಮೂಲಮ್ - 19
ತವೈವ ತೇಜಸಾ ವೀರ ಭರತಃ ಪೂಜಯಿಷ್ಯತಿ ।
ಕೌಸಲ್ಯಾಂ ಚ ಸುಮಿತ್ರಾಂ ಚ ಪ್ರಯತೋ ನಾತ್ರ ಸಂಶಯಃ ॥
ಅನುವಾದ
ವೀರನೇ! ನಿನ್ನ ತೇಜದಿಂದಲೇ ಭರತನು ಮಾತಾ ಕೌಸಲ್ಯೆಯ ಮತ್ತು ಸುಮಿತ್ರೆಯರಿಬ್ಬರನ್ನು ಪವಿತ್ರಭಾವದಿಂದ ಪೂಜಿಸುವನು, ಇದರಲ್ಲಿ ಸಂಶಯವೇ ಇಲ್ಲ.॥19॥
ಮೂಲಮ್ - 20
ಯದಿ ದುಃಸ್ಥೋ ನ ರಕ್ಷೇತ ಭರತೋ ರಾಜ್ಯಮುತ್ತಮಮ್ ।
ಪ್ರಾಪ್ಯ ದುರ್ಮನಸಾ ವೀರಗರ್ವೇಣ ಚ ವಿಶೇಷತಃ ॥
ಮೂಲಮ್ - 21
ತಮಹಂ ದುರ್ಮತಿಂ ಕ್ರೂರಂ ವಧಿಷ್ಯಾಮಿ ನ ಸಂಶಯಃ ।
ತತ್ಪಕ್ಷಾನಪಿ ತಾನ್ ಸರ್ವಾಂ ಸ್ತ್ರೈಲೋಕ್ಯಮಪಿಕಿಂ ನು ಸಾ ॥
ಮೂಲಮ್ - 22
ಕೌಸಲ್ಯಾ ಬಿಭೃಯಾದಾರ್ಯಾ ಸಹಸ್ರಂ ಮದ್ವಿಧಾನಪಿ ।
ಯಸ್ಯಾಃ ಸಹಸ್ರಂ ಗ್ರಾಮಾಣಂ ಸಾಂಪ್ರಾಪ್ತಮುಪಜೀವಿನಾಮ್ ॥
ಅನುವಾದ
ವೀರವರನೇ! ಈ ಉತ್ತಮ ರಾಜ್ಯವನ್ನು ಪಡೆದು ಭರತನು ತಪ್ಪು ದಾರಿಯಲ್ಲಿ ನಡೆದರೆ, ದೂಷಿತ ಹೃದಯದಿಂದ ಹಾಗೂ ಉದ್ಧಟತನದಿಂದ ತಾಯಂದಿರನ್ನು ರಕ್ಷಿಸದಿದ್ದರೆ ನಾನು ಆ ದುರ್ಬುದ್ಧಿ, ಕ್ರೂರ ಭರತನನ್ನು, ಮತ್ತು ಅವನ ಪಕ್ಷವನ್ನು ಸಮರ್ಥಿಸುವ ಎಲ್ಲ ಜನರನ್ನು ವಧಿಸಿಬಿಡುವೆನು; ಇದರಲ್ಲಿ ಸಂಶಯವಿಲ್ಲ. ಮೂರು ಲೋಕಗಳೂ ಅವನ ಪಕ್ಷವನ್ನು ವಹಿಸಿದರೆ ಅವರು ಯಮಸದನಕ್ಕೆ ಹೋಗಬೇಕಾಗುವುದು. ಆದರೆ ದೊಡ್ಡಮ್ಮ ಕೌಸಲ್ಯೆಯಾದರೋ ಸ್ವತಃ ನನ್ನಂತಹ ಸಾವಿರಾರು ಮನುಷ್ಯರನ್ನು ಸಾಕಬಲ್ಲಳು; ಏಕೆಂದರೆ ಅವಳಿಗೆ ತನ್ನ ಆಶ್ರಿತರನ್ನು ಪಾಲಿಸಲು ಒಂದು ಸಾವಿರ ಊರುಗಳು ಸಿಕ್ಕಿವೆ.॥20-22॥
ಮೂಲಮ್ - 23
ತದಾತ್ಮಭರಣೇ ಚೈವ ಮಮ ಮಾತುಸ್ತಥೈವ ಚ ।
ಪರ್ಯಾಪ್ತಾ ಮದ್ವಿಧಾನಾಂ ಚ ಭರಣಾಯ ಮನಶಸ್ವಿನೀ ॥
ಅನುವಾದ
ಆದ್ದರಿಂದ ಮಹಾತ್ಮಳಾದ ಕೌಸಲ್ಯೆಯು ಸ್ವಯಂ ತನ್ನನ್ನು, ನನ್ನ ತಾಯಿಯನ್ನು ಹಾಗೂ ನನ್ನಂತಹ ಅನೇಕ ಜನರನ್ನು ಪೋಷಿಸಿವುದರಲ್ಲಿ ಸಮರ್ಥಳಾಗಿದ್ದಾಳೆ.॥23॥
ಮೂಲಮ್ - 24
ಕುರುಷ್ವ ಮಾಮನುಚರಂ ವೈಧರ್ಮ್ಯಂ ನೇಹ ವಿದ್ಯತೇ ।
ಕೃತಾರ್ಥೋಹಂ ಭವಿಷ್ಯಾಮಿ ತವ ಚಾರ್ಥಃ ಪ್ರಕಲ್ಪತೇ ॥
ಅನುವಾದ
ಆದ್ದರಿಂದ ನೀವು ನನ್ನನ್ನು ತಮ್ಮ ಅನುಗಾಮಿಯಾಗಿಸಿಕೊಳ್ಳಿ. ಇದರಲ್ಲಿ ಯಾವುದೇ ಧರ್ಮದ ಹಾನಿಯಾಗಲಾರದು. ನಾನು ಕೃತಾರ್ಥನಾಗುವೆನು ಮತ್ತು ನಿಮಗೂ ನನ್ನಿಂದ ಪ್ರಯೋಜನವಾಗುವುದು.॥24॥
ಮೂಲಮ್ - 25
ಧನುರಾದಾಯ ಸಗುಣಂ ಖನಿತ್ರಪಿಟಕಾಧರಃ ।
ಅಗ್ರತಸ್ತೇ ಗಮಿಷ್ಯಾಮಿ ಪಂಥಾನಂ ತವ ದರ್ಶಯನ್ ॥
ಅನುವಾದ
ಗುದ್ದಲಿ ಮತ್ತು ಮಂಕರಿಗಳೊಡನೆ ಧನುರ್ಬಾಣಗಳನ್ನು ತೆಗೆದುಕೊಂಡು ನಿನಗೆ ದಾರಿಯನ್ನು ತೋರಿಸುತ್ತಾ ನಿನ್ನ ಮುಂದೆ-ಮುಂದೆ ನಡೆಯುವೆನು.॥25॥
ಮೂಲಮ್ - 26
ಆಹರಿಷ್ಯಾಮಿ ತೇ ನಿತ್ಯಂ ಮೂಲಾನಿ ಚ ಲಾನಿ ಚ ।
ವನ್ಯಾನಿ ಚ ತಥಾನ್ಯಾನಿ ಸ್ವಾಹಾರ್ಹಾಣಿ ತಪಸ್ವಿನಾಮ್ ॥
ಅನುವಾದ
ಪ್ರತಿದಿನ ನಿಮಗಾಗಿ ಫಲ-ಮೂಲಗಳನ್ನು ತರುವೆನು ಹಾಗೂ ತಪಸ್ವಿಗಳಿಗೆ ಕಾಡಿನಲ್ಲಿ ಸಿಗುವ ಇತರ ಹವನ ಸಾಮಗ್ರಿಗಳನ್ನು ಒದಗಿಸಿಕೊಡುವೆನು.॥26॥
ಮೂಲಮ್ - 27
ಭವಾಂಸ್ತು ಸಹ ವೈದೇಹ್ಯಾ ಗಿರಿಸಾನುಷು ರಂಸ್ಯ ತೇ ।
ಅಹಂ ಸರ್ವಂ ಕರಿಷ್ಯಾಮಿ ಜಾಗ್ರತಃ ಸ್ವಪತಶ್ಚ ತೇ ॥
ಅನುವಾದ
ನೀವು ವಿದೇಹ ಕುಮಾರಿಯ ಜೊತೆಗೆ ಪರ್ವತ ಶಿಖರಗಳಲ್ಲಿ ಭ್ರಮಣ ಮಾಡುವಾಗ, ನೀವು ಮಲಗಿರುವಾಗ, ಎಚ್ಚರವಾಗಿರುವಾಗ ಎಲ್ಲ ಸಮಯದಲ್ಲಿ ನಿಮ್ಮ ಎಲ್ಲ ಆವಶ್ಯಕತೆಗಳನ್ನು ಪೂರ್ಣಗೊಳಿಸುವೆನು.॥27॥
ಮೂಲಮ್ - 28
ರಾಮಸ್ತ್ವನೇನ ವಾಕ್ಯೇನ ಸುಪ್ರೀತಃ ಪ್ರತ್ಯುವಾಚ ತಮ್ ।
ವ್ರಜಾಪೃಚ್ಛಸ್ವ ಸೌಮಿತ್ರೇ ಸರ್ವಮೇವ ಸುಹೃಜ್ಜನಮ್ ॥
ಅನುವಾದ
ಲಕ್ಷ್ಮಣನ ಈ ಮಾತಿ ನಿಂದ ಶ್ರೀರಾಮಚಂದ್ರನಿಗೆ ಬಹಳ ಸಂತೋಷವಾಯಿತು. ಅವನು ಹೇಳಿದನು - ಸುಮಿತ್ರಾನಂದನ! ಹೋಗು, ತಾಯಿಯೇ ಮೊದಲಾದ ಎಲ್ಲ ಸುಹೃದರನ್ನು ಭೆಟ್ಟಿಯಾಗಿ ವನವಾಸದ ವಿಷಯವನ್ನು ತಿಳಿಸಿ ಅವರಿಂದ ಅನುಮತಿಯನ್ನು ಮತ್ತು ಆಜ್ಞೆಯನ್ನು ಪಡೆದುಕೋ.॥28॥
ಮೂಲಮ್ - 29
ಯೇ ಚ ರಾಜ್ಞೋ ದದೌ ದಿವ್ಯೇ ಮಹಾತ್ಮಾ ವರುಣಃ ಸ್ವಯಮ್ ।
ಜನಕಸ್ಯ ಮಹಾಯಜ್ಞೇ ಧನುಷೀ ರೌದ್ರದರ್ಶನೇ ॥
ಮೂಲಮ್ - 30
ಅಭೇದ್ಯೇ ಕವಚೇ ದಿವ್ಯೇ ತೂಣೀ ಚಾಕ್ಷಯಸಾಯಕೌ ।
ಆದಿತ್ಯವಿಮಲಾಭೌ ದ್ವೌ ಖಡ್ಗೌ ಹೇಮಪರಿಷ್ಕೃತೌ ॥
ಮೂಲಮ್ - 31
ಸತ್ಕೃತ್ಯ ನಿಹಿತಂ ಸರ್ವಮೇತದಾಚಾರ್ಯಸದ್ಮನಿ ।
ಸರ್ವಮಾಯುಧಮಾದಾಯ ಕ್ಷಿಪ್ರಮಾವ್ರಜ ಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ರಾಜಾ ಜನಕನ ಮಹಾಯಜ್ಞದಲ್ಲಿ ಸ್ವಯಂ ಮಹಾತ್ಮಾ ವರುಣನು ನೋಡಲು ಭಯಂಕರವಾದ ಎರಡು ದಿವ್ಯ ಧನುಸ್ಸುಗಳನ್ನು ಕೊಟ್ಟಿದ್ದನು; ಜೊತೆಗೆ ಎರಡು ದಿವ್ಯ ಅಭೇದ್ಯ ಕವಚಗಳು, ಅಕ್ಷಯಬಾಣಗಳಿಂದ ತುಂಬಿದ ಎರಡು ಬತ್ತಳಿಕೆಗಳು, ಸೂರ್ಯನಂತೆ ಹೊಳೆಯುವ ಎರಡು ಸುವರ್ಣಭೂಷಿತ ಖಡ್ಗಗಳು, ಇವನ್ನು ಮಿಥಿಲಾ ನರೇಶನು ನನಗೆ ಬಳುವಳಿಯಾಗಿ ಕೊಟ್ಟಿದ್ದನು. ಅವೆಲ್ಲ ವನ್ನು ಆಚಾರ್ಯದೇವನ ಮನೆಯಲ್ಲಿ ಸತ್ಕಾರಪೂರ್ವಕ ಇಡಲಾಗಿದೆ. ನೀನು ಅವೆಲ್ಲ ಆಯುಧಗಳನ್ನು ಎತ್ತಿಕೊಂಡು ಬೇಗನೇ ಬಂದು ಬಿಡು.॥29-31॥
ಮೂಲಮ್ - 32
ಸ ಸುಹೃಜ್ಜನಮಾಮಂತ್ರ್ಯ ವನವಾಸಾಯ ನಿಶ್ಚಿತಃ ।
ಇಕ್ಷ್ವಾಕುಗುರುಮಾಗಮ್ಯ ಜಗ್ರಾಹಾಯುಧಮುತ್ತಮಮ್ ॥
ಅನುವಾದ
ರಾಮನಿಂದ ಆಜ್ಞೆಯನ್ನು ಪಡೆದು ಲಕ್ಷ್ಮಣನು ಹೋಗಿ ಸುಹೃದರ ಅನುಮತಿ ಪಡೆದು, ವನವಾಸಕ್ಕಾಗಿ ಸಿದ್ಧನಾಗಿ ಇಕ್ಷ್ವಾಕು ಕುಲಗುರು ವಸಿಷ್ಠರಲ್ಲಿಗೆ ಹೋದನು. ಅಲ್ಲಿಂದ ಅವನು ಉತ್ತಮ ಆಯುಧಗಳನ್ನು ತೆಗೆದುಕೊಂಡನು.॥32॥
ಮೂಲಮ್ - 33
ತದ್ದಿವ್ಯಂ ರಾಜಶಾರ್ದೂಲಃ ಸತ್ಕೃತಂಮಾಲ್ಯಭೂಷಿತಮ್ ।
ರಾಮಾಯ ದರ್ಶಯಾಮಾಸ ಸೌಮಿತ್ರಿಃ ಸರ್ವಮಾಯುಧಮ್ ॥
ಅನುವಾದ
ಕ್ಷತ್ರಿಯ ಶಿರೋಮಣಿ ಸುಮಿತ್ರಾಕುಮಾರ ಲಕ್ಷ್ಮಣನು ಸತ್ಕಾರಪೂರ್ವಕ ಇಟ್ಟಿರುವ, ಮಾಲೆಗಳಿಂದ ಅಲಂಕರಿಸಲ್ಪಟ್ಟ ಆ ದಿವ್ಯ ಆಯುಧಗಳನ್ನು ತಂದು ಶ್ರೀರಾಮನ ಮುಂದಿಟ್ಟನು.॥33॥
ಮೂಲಮ್ - 34
ತಮುವಾಚಾತ್ಮವಾನ್ ರಾಮಃ ಪ್ರೀತ್ಯಾ ಲಕ್ಷ್ಮಣಮಾಗತಮ್ ।
ಕಾಲೇ ತ್ವಮಾಗತಃ ಸೌಮ್ಯ ಕಾಂಕ್ಷಿತೇ ಮಮ ಲಕ್ಷ್ಮಣ ॥
ಅನುವಾದ
ಆಗ ಮಹಾತ್ಮಾ ಶ್ರೀರಾಮನು ಅಲ್ಲಿಗೆ ಬಂದಿರುವ ಲಕ್ಷ್ಮಣನನ್ನು ನೋಡಿ ಪ್ರಸನ್ನನಾಗಿ - ಸೌಮ್ಯ! ಲಕ್ಷ್ಮಣ! ನೀನು ಸರಿಯಾದ ಸಮಯಕ್ಕೆ ಬಂದಿರುವೆ. ಈಗಲೇ ನೀನು ಬರುವುದು ನನಗೆ ಇಷ್ಟವಿತ್ತು.॥34॥
ಮೂಲಮ್ - 35
ಅಹಂ ಪ್ರದಾತುಮಿಚ್ಛಾಮಿ ಯದಿದಂ ಮಾಮಕಂಧನಮ್ ।
ಬ್ರಾಹ್ಮಣೇಭ್ಯಸ್ತಪಸ್ವಿಭ್ಯಸ್ತ್ವಯಾ ಸಹ ಪರಂತಪ ॥
ಅನುವಾದ
ಪರಂತಪ ಲಕ್ಷ್ಮಣ! ಈ ನನ್ನ ಧನವನ್ನು ನಾನು ನಿನ್ನ ಜೊತೆಗೆ ತಪಸ್ವೀ ಬ್ರಾಹ್ಮಣರಿಗೆ ಹಂಚಲು ಬಯಸುತ್ತಿರುವೆನು.॥35॥
ಮೂಲಮ್ - 36
ವಸಂತೀಹ ದೃಢಂ ಭಕ್ತ್ಯಾ ಗುರುಷು ದ್ವಿಜಸತ್ತಮಾಃ ।
ತೇಷಾಮಪಿ ಚ ಮೇ ಭೂಯಃ ಸರ್ವೇಷಾಂ ಚೋಪಜೀವಿನಾಮ್ ॥
ಅನುವಾದ
ಗುರುಹಿರಿಯರ ಕುರಿತು ಸುದೃಢ ಭಕ್ತಿಭಾವದಿಂದ ಕೂಡಿದ್ದು, ನಮ್ಮ ಬಳಿ ಇರುವ ಶ್ರೇಷ್ಠ ಬ್ರಾಹ್ಮಣರಿಗೆ ಹಾಗೂ ಸಮಸ್ತ ಆಶ್ರಿತ ಜನರಿಗೂ ನನ್ನ ಈ ಧನವನ್ನು ಹಂಚುವುದಿದೆ.॥36॥
ಮೂಲಮ್ - 37
ವಸಿಷ್ಠ ಪುತ್ರಂ ತು ಸುಯಜ್ಞಮಾರ್ಯಂ
ತ್ವಮಾನಯಾಶು ಪ್ರವರಂದ್ವಿಜಾನಾಮ್ ।
ಅಪಿ ಪ್ರಾಯಾಸ್ಯಾಮಿ ವನಂ ಸಮಸ್ತಾ-
ನಭ್ಯರ್ಚ್ಯ ಶಿಷ್ಟಾನಪರಾನ್ ದ್ವಿಜಾತೀನ್ ॥
ಅನುವಾದ
ಬ್ರಾಹ್ಮಣರಲ್ಲಿ ಶ್ರೇಷ್ಠರಾದ ವಸಿಷ್ಠರ ಪುತ್ರ ಆರ್ಯ ಸುಯಜ್ಞರನ್ನು ನೀನು ಬೇಗನೆ ಇಲ್ಲಿಗೆ ಕರೆದುಕೊಂಡು ಬಾ. ನಾನು ಇದೆಲ್ಲವನ್ನು ಅವರಿಗೆ ಇತ್ತು, ಉಳಿದುದನ್ನು ಇತರ ಬ್ರಾಹ್ಮಣರಿಗೆ ಸತ್ಕಾರಪೂರ್ವಕ ಕೊಟ್ಟು ಕಾಡಿಗೆ ಹೋಗುವೆನು.॥37॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೂವತ್ತೊಂದನೆಯ ಸರ್ಗ ಪೂರ್ಣವಾಯಿತು.॥31॥