वाचनम्
ಭಾಗಸೂಚನಾ
ಸೀತಾದೇವಿಯು ಶ್ರೀರಾಮನನ್ನು ಕಾಡಿಗೆ ಕರೆದುಕೊಂಡು ಹೋಗಲು ಒತ್ತಾಯಿಸಿದುದು, ಅವಳ ವಿಲಾಪವನ್ನು ನೋಡಿ ಶ್ರೀರಾಮನು ತನ್ನೊಡನೆ ಅರಣ್ಯಕ್ಕೆ ಬರಲು ಒಪ್ಪಿಗೆಯನ್ನಿತ್ತುದುದು, ತಾಯಿ-ತಂದೆಯರ, ಗುರುಗಳ ಸೇವೆಯ ಮಹತ್ವವನ್ನು ಹೇಳಿದುದು, ವನವಾಸಕ್ಕೆ ಹೊರಡುವ ಮೊದಲು ತನ್ನಲ್ಲಿರುವ ವಸ್ತುಗಳೆಲ್ಲವನ್ನು ದಾನ ಮಾಡಿಬಿಡುವಂತೆ ಶ್ರೀರಾಮನು ಸೀತೆಗೆ ಹೇಳಿದುದು
ಮೂಲಮ್ - 1
ಸಾಂತ್ವ್ಯಮಾನಾ ತು ರಾಮೇಣ ಮೈಥಿಲೀ ಜನಕಾತ್ಮಜಾ ।
ವನವಾಸನಿಮಿತ್ತಾರ್ಥಂ ಭರ್ತಾರಮಿದಮಬ್ರವೀತ್ ॥
ಅನುವಾದ
ಜನಕನ ಮಗಳಾದ ಸೀತೆಯನ್ನು ಶ್ರೀರಾಮನು ಬಹಳವಾಗಿ ಸಂತೈಸಿದೂ ಅರಣ್ಯಕ್ಕೆ ಹೋಗಲೇಬೇಕೆಂಬ ದೃಢತೆಯಿಂದ ಪುನಃ ಸೀತೆಯು ರಾಮನನ್ನು ಒತ್ತಾಯಿಸುತ್ತಾ ಹೀಗೆಂದಳು.॥1॥
ಮೂಲಮ್ - 2
ಸಾ ತಮುತ್ತಮಸಂವಿಗ್ನಾ ಸೀತಾ ವಿಪುಲವಕ್ಷಸಮ್ ।
ಪ್ರಣಯಾಚ್ಚಾಭಿಮಾನಾಚ್ಚ ಪರಿಚಿಕ್ಷೇಪ ರಾಘವಮ್ ॥
ಅನುವಾದ
ಸೀತೆಯು ಅತ್ಯಂತ ಹೆದರಿದ್ದಳು. ಅವಳು ಪ್ರೇಮ ಮತ್ತು ಸ್ವಾಭಿಮಾನದಿಂದ ವಿಶಾಲ ಹೃದಯನಾದ ಶ್ರೀರಾಮನನ್ನು ಆಕ್ಷೇಪಿಸುವಂತೆ ಹೇಳತೊಡಗಿದಳು.॥2॥
ಮೂಲಮ್ - 3
ಕಿಂ ತ್ವಾಮನ್ಯತ ವೈದೇಹಃ ಪಿತಾ ಮೇ ಮಿಥಿಲಾಧಿಪಃ ।
ರಾಮ ಜಾಮಾತರಂ ಪ್ರಾಪ್ಯ ಸ್ತ್ರಿಯಂ ಪುರುಷವಿಗ್ರಹಮ್ ॥
ಅನುವಾದ
ಶ್ರೀರಾಮ! ನನ್ನ ತಂದೆಯಾದ ಜನಕನು ಗಂಡಸಿನ ರೂಪಲ್ಲಿರುವ ಹೆಣ್ಣಾಗಿರುವ ನಿನ್ನನ್ನು ಅಳಿಯನನ್ನಾಗಿ ಮಾಡಿಕೊಂಡೆನೆಂದು ಭಾವಿಸಲಾರನೇ.॥3॥
ಮೂಲಮ್ - 4
ಅನೃತಂ ಬತ ಲೋಕೋಽಯಮಜ್ಞಾನಾದ್ ಯದಿ ವಕ್ಷ್ಯತಿ ।
ತೇಜೋ ನಾಸ್ತಿ ಪರಂ ರಾಮೇ ತಪತೀವ ದಿವಾಕರೇ ॥
ಅನುವಾದ
ನಾಥ! ನೀವು ನನ್ನನ್ನು ಬಿಟ್ಟು ಹೊರಟುಹೋದರೆ, ಜಗತ್ತಿನ ಜನರು ಅಜ್ಞಾನದಿಂದ ಸೂರ್ಯನಂತೆ ಹೊಳೆಯುವ ಶ್ರೀರಾಮಚಂದ್ರನಲ್ಲಿ ತೇಜ ಮತ್ತು ಪರಾಕ್ರಮದ ಅಭಾವವಿದೆ ಎಂದು ಹೇಳತೊಡಗಿದರೆ, ಅವರ ಈ ಅಸತ್ಯಧಾರಣೆ ನನಗೆ ಎಷ್ಟು ದುಃಖದ ಮಾತಾಗಿರಬಹುದು.॥4॥
ಮೂಲಮ್ - 5
ಕಿಂ ಹಿ ಕೃತ್ವಾ ವಿಷಣ್ಣಸ್ತ್ವಂ ಕುತೋ ವಾ ಭಯಮಸ್ತಿ ತೇ ।
ಯತ್ಪರಿತ್ಯಕ್ತುಕಾಮಸ್ತ್ವಂ ಮಾಮನನ್ಯಪರಾಯಣಾಮ್ ॥
ಅನುವಾದ
ರಾಮಭದ್ರನೇ! ಮನಸ್ಸಿನಲ್ಲಿ ಏನನ್ನು ಕಲ್ಪಿಸಿಕೊಂಡು ವಿಷಣ್ಣನಾಗಿರುವೆ? ನಿನಗೆ ಭಯವೆಲ್ಲಿಯದು? ಅನನ್ಯ ಶರಣಳಾದ, ಪತಿಪರಾಯಣೆಯಾದ ನನ್ನನ್ನು ಯಾವ ಕಾರಣದಿಂದ ಇಲ್ಲಿಯೇ ಬಿಟ್ಟುಹೋಗಬೇಕೆಂದು ಬಯಸಿರುವೆ.॥5॥
ಮೂಲಮ್ - 6
ದ್ಯುಮತ್ಸೇನಸುತಂ ವೀರಂ ಸತ್ಯವಂತಮನುವ್ರತಾಮ್ ।
ಸಾವಿತ್ರೀಮಿವ ಮಾಂ ವಿದ್ಧಿ ತ್ವಮಾತ್ಮವಶವರ್ತಿನೀಮ್ ॥
ಅನುವಾದ
ವೀರನೇ! ದ್ಯುಮತ್ಸೇನನ ಮಗನಾದ ಸತ್ಯವಂತನನ್ನು ಅನುಸರಿಸಿ ಯಮಾಲಯಕ್ಕೂ ಹೋದ ಸಾವಿತ್ರಿಯಂತೆಯೇ ನಾನು ನಿನ್ನ ವಶವರ್ತಿಯೆಂದು ತಿಳಿ.॥6॥
ಮೂಲಮ್ - 7
ನ ತ್ವಹಂ ಮನಸಾ ತ್ವನ್ಯಂ ದ್ರಷ್ಟಾಸ್ಮಿ ತ್ವದೃತೇಽನಘ ।
ತ್ವಯಾ ರಾಘವ ಗಚ್ಛೇಯಂ ಯಥಾನ್ಯಾ ಕುಲಪಾಂಸನೀ ॥
ಅನುವಾದ
ನಿಷ್ಪಾಪ ರಘುನಂದನ! ಯಾರಾದರೂ ಕುಲಕಲಂಕಿಣಿ ಸ್ತ್ರೀಯು ಪರಪುರುಷನ ಮೇಲೆ ದೃಷ್ಟಿ ಇರಿಸುತ್ತಾಳೋ, ಅಂತಹವಳು ನಾನಲ್ಲ. ನಾನಾದರೋ ನೀವಲ್ಲದೆ ಯಾವುದೇ ಬೇರೆ ಪುರುಷನನ್ನು ಮನಸ್ಸಿನಲ್ಲಿಯೂ ನೋಡುವುದಿಲ್ಲ. ಅದಕ್ಕಾಗಿ ನಿಮ್ಮೊಂದಿಗೆ ಬರುವೆನು. ನೀವು ಇಲ್ಲದೆ ಒಬ್ಬಂಟಿಗಳಾಗಿ ಇಲ್ಲಿ ಇರಲಾರೆನು.॥7॥
ಮೂಲಮ್ - 8
ಸ್ವಯಂ ತು ಭಾರ್ಯಾಂ ಕೌಮಾರೀಂ ಚಿರಮಧ್ಯುಷಿತಾಂ ಸತೀಮ್ ।
ಶೈಲೂಷ ಇವ ಮಾಂ ರಾಮ ಪರೇಭ್ಯೋ ದಾಮಿಚ್ಛಸಿ ॥
ಅನುವಾದ
ಶ್ರೀರಾಮ! ಕುಮಾರೀ ಅವಸ್ಥೆಯಲ್ಲೇ ನಿಮ್ಮೊಂದಿಗೆ ವಿವಾಹವಾದ, ಚಿರಕಾಲದಿಂದ ನಿಮ್ಮೊಂದಿಗೆ ಇದ್ದ, ನಿಮ್ಮ ಸತೀ-ಸಾಧ್ವೀ ಪತ್ನಿಯಾದ ನನ್ನನ್ನು ಬೇರೆಯವರ ಗಳಿಕೆಯಲ್ಲಿ ಜೀವನ ನಡೆಸುವ ನಟನಂತೆ, ಬೇರೆಯವರ ಕೈಗೆ ಒಪ್ಪಿಸಲು ಹೇಗೆ ಬಯಸುತ್ತಿರುವಿರಿ.॥8॥
ಮೂಲಮ್ - 9
ಯಸ್ಯ ಪಥ್ಯಂ ಚ ರಾಮಾತ್ಥ ಯಸ್ಯ ಚಾರ್ಥೇಽವರುಧ್ಯಸೇ ।
ತ್ವಂ ತಸ್ಯ ಭವ ವಶ್ಯಶ್ಚ ವಿಧೇಯಶ್ಚ ಸದಾನಘ ॥
ಅನುವಾದ
ಪುಣ್ಯಾತ್ಮ ರಘುನಂದನ! ನೀವು ನನಗೆ ಯಾರಿಗೆ ಅನುಕೂಲವಾಗಿ ನಡೆಯಲು ಉಪದೇಶಿಸುತ್ತಿರುವರೋ, ಯಾರಿಗಾಗಿ ನಿಮ್ಮ ಪಟ್ಟಾಭಿಷೇಕ ನಿಂತುಹೋಗಿದೆಯೋ, ಆ ಭರತನ ವಶವರ್ತಿಯಾಗಿ ಹಾಗೂ ಆಜ್ಞಾಧಾರಕರಾಗಿ ನೀವೇ ಇರಿ, ನಾನು ಇರಲಾರೆ.॥9॥
ಮೂಲಮ್ - 10
ಸ ಮಾಮನಾದಾಯ ವನಂ ನ ತ್ವಂ ಪ್ರಸ್ಥಿತುಮರ್ಹಸಿ ।
ತಪೋ ವಾ ಯದಿ ವಾರಣ್ಯಂ ಸ್ವರ್ಗೋ ವಾ ಸ್ಯಾತ್ತ್ವಯಾ ಸಹ ॥
ಅನುವಾದ
ಅದಕ್ಕಾಗಿ ನೀವು ನನ್ನನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗದೆ ಕಾಡಿಗೆ ಹೋಗುವುದು ಉಚಿತವಲ್ಲ. ತಪಸ್ಸು ಮಾಡುವುದಾದರೂ, ಕಾಡಿನಲ್ಲಿ ಇರುವುದಾದರೂ, ಅಥವಾ ಸ್ವರ್ಗಕ್ಕೆ ಹೋಗುವುದಿದ್ದರೂ ಎಲ್ಲ ಕಡೆ ನಾನು ನಿಮ್ಮೊಂದಿಗೇ ಇರುವೆನು.॥10॥
ಮೂಲಮ್ - 11
ನ ಚ ಮೇ ಭವಿತಾ ತತ್ರ ಕಶ್ಚಿತ್ ಪಥಿ ಪರಿಶ್ರಮಃ ।
ಪೃಷ್ಠತಸ್ತವ ಗಚ್ಛಂತ್ಯಾ ವಿಹಾರಶಯನೇಷ್ವಿವ ॥
ಅನುವಾದ
ಉದ್ಯಾನವನದಲ್ಲಿ ಅಡ್ಡಾಡುವುದು, ಹಾಗೂ ಹಾಸಿಗೆಯಲ್ಲಿ ಮಲಗುವುದರಲ್ಲಿ ಯಾವುದೇ ಕಷ್ಟವಾಗುವುದಿಲ್ಲವೋ; ಹಾಗೆಯೇ ನಿಮ್ಮ ಹಿಂದೆ-ಹಿಂದೆ ಕಾಡಿನಲ್ಲಿ ನಡೆಯುವಾಗಲೂ ಯಾವುದೇ ಪರಿಶ್ರಮ ನನಗೆ ತಿಳಿಯದು.॥11॥
ಮೂಲಮ್ - 12
ಕುಶಕಾಶಶರೇಷೀಕಾ ಯೇ ಚ ಕಂಟಕಿನೋ ದ್ರುಮಾಃ ।
ತೂಲಾಜಿನಸಮಸ್ಪರ್ಶಾ ಮಾರ್ಗೋ ಮಮ ಸಹ ತ್ವಯಾ ॥
ಅನುವಾದ
ನಿಮ್ಮೊಡನೆ ಕಾಡಿನಲ್ಲಿರುವಾಗ ದರ್ಭೆ, ನೂಜೆ, ಜಂಬು ಹುಲ್ಲು, ಮುಳ್ಳುಗಳುಳ್ಳ ವೃಕ್ಷಗಳು ಇವುಗಳ ಸ್ವರ್ಶವು ನನಗೆ ಹತ್ತಿಯಂತೆ ಮೆದುವಾದ ಕೃಷ್ಣಾಜಿನದಂತೆ ಸುಖಮಯವಾಗುವುದು.॥12॥
ಮೂಲಮ್ - 13
ಮಹಾವಾತಸಮುದ್ಭೂತಂ ಯನ್ಮಾಮವಕರಿಷ್ಯತಿ ।
ರಜೋ ರಮಣ ತನ್ಮನ್ಯೇ ಪರಾರ್ಧ್ಯಮಿವ ಚಂದನಮ್ ॥
ಅನುವಾದ
ಪ್ರಾಣವಲ್ಲಭ! ಪ್ರಚಂಡ ಬಿರುಗಾಳಿಯಿಂದ ಹಾರಿದ ಧೂಳು ನನ್ನ ಶರೀರದಲ್ಲಿ ಬಿದ್ದಾಗ ಅದನ್ನು ನಾನು ಉತ್ತಮ ಚಂದನದಂತೆ ತಿಳಿಯುವೆನು.॥13॥
ಮೂಲಮ್ - 14
ಶಾದ್ವಲೇಷು ಯಥಾ ಶಿಶ್ಯೇ ವನಾಂತರ್ವನಗೋಚರಾ ।
ಕುಥಾಸ್ತರಣಯುಕ್ತೇಷು ಕಿಂ ಸ್ಯಾತ್ಸುಖತರಂ ತತಃ ॥
ಅನುವಾದ
ನಿಮ್ಮೊಡನೆ ಕಾಡಿನಲ್ಲಿ ಇರುವಾಗ ಹುಲ್ಲಿನ ಹಾಸಿಗೆಯ ಮೇಲೆ ಮಲಗುವ ಸುಖಕ್ಕಿಂತ ಅರಮನೆಯಲ್ಲಿರುವ ರತ್ನಗಂಬಳಿಯಿಂದ ಕೂಡಿದ ಹಂಸತೂಲಿಕಾತಲ್ಪದ ಮೇಲೆ ನೀವಿಲ್ಲದೆ ಮಲಗುವುದು ಸುಖಕರ ಹೇಗಾಗುವುದು.॥14॥
ಮೂಲಮ್ - 15
ಪತ್ರಂ ಮೂಲಂ ಫಲಂ ಯತ್ತು ಅಲ್ಪಂ ವಾ ಯದಿ ವಾ ಬಹು ।
ದಾಸ್ಯಸೇ ಸ್ವಯಮಾಹೃತ್ಯ ತನ್ಮೇಽಮೃತರಸೋಪಮಮ್ ॥
ಅನುವಾದ
ನೀವು ನಿಮ್ಮ ಕೈಯಿಂದ ತಂದು ಕೊಡುವ ಫಲ-ಮೂಲ-ಕಂದಗಳು ಸ್ವಲ್ಪವಿರಲೀ, ಹೆಚ್ಚಿರಲಿ, ಅದು ನನಗೆ ಅಮೃತರಸದಂತೆ ಆಗುವುದು.॥15॥
ಮೂಲಮ್ - 16
ನ ಮಾತುರ್ನ ಪಿತುಸ್ತತ್ರ ಸ್ಮರಿಷ್ಯಾಮಿ ನ ವೇಶ್ಮನಃ ।
ಆರ್ತವಾನ್ಯುಪಭುಂಜಾನಾ ಪುಷ್ಪಾಣಿ ಚ ಫಲಾನಿ ಚ ॥
ಅನುವಾದ
ಆಯಾ ಋತುಗಳಲ್ಲಿ ಪ್ರಾಪ್ತವಾಗುವ ಪುಷ್ಪಗಳನ್ನು ಮುಡಿದುಕೊಳ್ಳುತ್ತಾ ಫಲಗಳನ್ನು ತಿನ್ನುತ್ತಾ ನಿಮ್ಮೊಡನೆ ಸಂತೋಷದಿಂದ ಇರುವಾಗ ನಾನು ತಂದೆಯನ್ನಾಗಲೀ, ತಾಯಿಯನ್ನಾಗಲೀ, ಅರಮನೆಯನ್ನಾಗಲೀ ಎಂದೂ ಸ್ಮರಿಸುವುದಿಲ್ಲ.॥16॥
ಮೂಲಮ್ - 17
ನ ಚ ತತ್ರ ಗತಃ ಕಿಂಚಿದ್ ದ್ರಷ್ಟುಮರ್ಹಸಿ ವಿಪ್ರಿಯಮ್ ।
ಮತ್ಕೃತೇ ನ ಚ ತೇ ಶೋಕೋ ನ ಭವಿಷ್ಯಾಮಿ ದುರ್ಭರಾ ॥
ಅನುವಾದ
ಅಲ್ಲಿ ಇರುವಾಗ ನನ್ನ ಯಾವುದೇ ಪ್ರತಿಕೂಲ ವ್ಯವಹಾರ ನೀವು ನೋಡಲಾರಿರಿ. ನನಗಾಗಿ ನೀವು ಯಾವುದೇ ಕಷ್ಟಪಡಬೇಕಾಗುವುದಿಲ್ಲ. ನನ್ನ ನಿರ್ವಾಹ ನಿಮಗೆ ಏನೂ ಭಾರವಾಗದು.॥17॥
ಮೂಲಮ್ - 18
ಯಸ್ತ್ವಯಾ ಸಹ ಸ ಸ್ವರ್ಗೋ ನಿರಯೋ ಯಸ್ತ್ವಯಾ ವಿನಾ ।
ಇತಿ ಜಾನಾನ್ ಪರಾಂ ಪ್ರೀತಿಂ ಗಚ್ಛ ರಾಮ ಮಯಾ ಸಹ ॥
ಅನುವಾದ
ನಿಮ್ಮ ಜೊತೆಗೆ ಇರುವಲ್ಲಿಯೇ ನನಗೆ ಸ್ವರ್ಗವಾಗಿದೆ ಹಾಗೂ ನೀವು ಇಲ್ಲದಿರುವ ಸ್ಥಾನವು ನನಗೆ ನರಕದಂತೆ ಆಗಿದೆ. ಶ್ರೀರಾಮಾ! ನನ್ನ ಈ ನಿಶ್ಚಯವನ್ನು ತಿಳಿದು ನೀವು ನನ್ನನ್ನು ಕರೆದುಕೊಂಡು ಪ್ರಸನ್ನತೆಯಿಂದ ಕಾಡಿಗೆ ಹೋಗಿರಿ.॥18॥
ಮೂಲಮ್ - 19
ಅಥ ಮಾಮೇವಮವ್ಯಗ್ರಾಂ ವನಂ ನೈವ ನಯಿಷ್ಯಸೆ ।
ವಿಷಮದ್ಯೈವ ಪಾಸ್ಯಾಮಿ ಮಾ ವಶಂ ದ್ವಿಷತಾಂ ಗಮಮ್ ॥
ಅನುವಾದ
ವನವಾಸದ ಕಷ್ಟಗಳಿಂದ ನನಗೆ ಯಾವುದೇ ಗಾಬರಿ ಇಲ್ಲ. ಈ ಸ್ಥಿತಿಯಲ್ಲಿ ನೀವು ಜೊತೆಯಲ್ಲಿ ಕರೆದುಕೊಂಡು ಹೋಗದಿದ್ದರೆ ನಾನು ಇಂದೇ ವಿಷ ಸೇವಿಸುವೆನು, ಆದರೆ ಶತ್ರುಗಳ ಅಧೀನಳಾಗಿ ಇರಲಾರೆ.॥19॥
ಮೂಲಮ್ - 20
ಪಶ್ಚಾದಪಿ ಹಿ ದುಃಖೇನ ಮಮ ನೈವಾಸ್ತಿ ಜೀವಿತಮ್ ।
ಉಜ್ಝಿತಾಯಾಸ್ತ್ವಯಾ ನಾಥ ತದೈವ ಮರಣಂ ವರಮ್ ॥
ಅನುವಾದ
ನಾಥ! ನೀವು ನನ್ನನ್ನು ತ್ಯಜಿಸಿ ಕಾಡಿಗೆ ಹೊರಟು ಹೋದರೆ ಮತ್ತೆ ಈ ಭಾರೀ ದುಃಖದಿಂದ ನಾನು ಜೀವಿಸಿ ಇರುವ ಸಂಭವವೇ ಇಲ್ಲ. ಇಂತಹ ಸ್ಥಿತಿಯಲ್ಲಿ ನಾನು ಈಗಲೇ, ನೀವು ಹೋಗುತ್ತಲೇ ನನ್ನ ಪ್ರಾಣಗಳನ್ನು ತ್ಯಜಿಸುವುದು ಒಳ್ಳೆಯದು ಎಂದು ತಿಳಿಯುತ್ತೇನೆ.॥20॥
ಮೂಲಮ್ - 21
ಇಮಂ ಹಿ ಸಹಿತುಂ ಶೋಕಂ ಮುಹೂರ್ತಮಪಿ ನೋತ್ಸಹೇ ।
ಕಿಂ ಪುನರ್ದಶ ವರ್ಷಾಣಿ ತ್ರೀಣಿ ಚೈಕಂ ಚ ದುಃಖಿತಾ ॥
ಅನುವಾದ
ನಿಮ್ಮ ವಿರಹದ ಈ ಶೋಕವನ್ನು ಒಂದು ಮುಹೂರ್ತವಾದರೂ ಸಹಿಸಲಾರೆನು. ಮತ್ತೆ ದುಃಖಿತೆಯಾದ ನಾನು ಹದಿನಾಲ್ಕು ವರ್ಷಗಳವರೆಗೆ ಹೇಗೆ ಸಹಿಸಬಲ್ಲೆನು.॥21॥
ಮೂಲಮ್ - 22
ಇತಿ ಸಾ ಶೋಕಸಂತಪ್ತಾ ವಿಲಪ್ಯ ಕರುಣಂ ಬಹು ।
ಚುಕ್ರೋಶ ಪತಿಮಾಯಸ್ತಾ ಭೃಶಮಾಲಿಂಗ್ಯ ಸಸ್ವರಮ್ ॥
ಅನುವಾದ
ಈ ಪ್ರಕಾರ ಬಹಳ ಹೊತ್ತು ಕರುಣಾಜನಕವಾಗಿ ವಿಲಾಪಿಸುತ್ತಾ, ಶೋಕದಿಂದ ತಪ್ತಳಾದ ಸೀತೆಯು ಶಿಥಿಲಳಾಗಿ ಪತಿಯನ್ನು ಗಟ್ಟಿಯಾಗಿ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದಳು.॥22॥
ಮೂಲಮ್ - 23
ಸಾ ವಿದ್ಧಾ ಬಹುಭಿರ್ವಾಕ್ಯೈರ್ದಿಗ್ಧೈರಿವ ಗಜಾಂಗನಾ ।
ಚಿರಸಂನಿಯತಂ ಬಾಷ್ಪಂ ಮುಮೋಚಾಗ್ನಿಮಿವಾರಣಿಃ ॥
ಅನುವಾದ
ವಿಷಯುಕ್ತ ಅನೇಕ ಬಾಣಗಳಿಂದ ಘಾಸಿಗೊಂಡ ಹೆಣ್ಣಾನೆಯಂತೆ ಸೀತೆಯು ಶ್ರೀರಾಮನು ಹಿಂದೆ ಹೇಳಿದ ಅನೇಕ ಮಾತುಗಳಿಂದ ಮರ್ಮಾಹತಳಾಗಿದ್ದಳು; ಆದ್ದರಿಂದ ಅರಣಿಯು ಅಗ್ನಿಯನ್ನು ಪ್ರಕಟಿಸುವಂತೆ ಅವಳು ಬಹಳ ಹೊತ್ತಿನಿಂದ ತಡೆಹಿಡಿದ ಕಣ್ಣೀರು ಹರಿಯತೊಡಗಿತು.॥23॥
ಮೂಲಮ್ - 24
ತಸ್ಯಾಃ ಸ್ಫಟಿಕಸಂಕಾಶಂ ವಾರಿ ಸಂತಾಪಸಂಭವಮ್ ।
ನೇತ್ರಾಭ್ಯಾಂ ಪರಿಸುಸ್ರಾವ ಪಂಕಜಾಭ್ಯಾಮಿವೋದಕಮ್ ॥
ಅನುವಾದ
ಆಕೆಯ ಎರಡು ಕಣ್ಣುಗಳಿಂದಲೂ ಕಮಲಗಳಿಂದ ನೀರು ಹರಿಯುವಂತೆ ಸ್ಫಟಿಕದಂತೆ ನಿರ್ಮಲ ಸಂತಾಪಜನಿತ ಅಶ್ರುಧಾರೆ ಹರಿಯುತ್ತಿತ್ತು.॥24॥
ಮೂಲಮ್ - 25
ತತ್ಸಿತಾಮಲಚಂದ್ರಾಭಂ ಮುಖಮಾಯತಲೋಚನಮ್ ।
ಪರ್ಯಶುಷ್ಯತ ಬಾಷ್ಪೇಣ ಜಲೋದ್ಧೃತಮಿವಾಂಬುಜಮ್ ॥
ಅನುವಾದ
ವಿಶಾಲನೇತ್ರಗಳಿಂದ ಸುಶೋಭಿತ ಮತ್ತು ಪೂರ್ಣಿಮೆಯ ನಿರ್ಮಲ ಚಂದ್ರನಂತೆ ಇರುವ ಆಕೆಯ ಕಾಂತಿಯುಕ್ತ ಮನೋಹರ ಮುಖವು ಸಂತಾಪಜನಿತ ತಾಪದಿಂದ ನೀರಿನಿಂದ ಹೊರಗೆ ಎಸೆದ ಕಮಲದಂತೆ ಒಣಗಿಹೋಗಿತ್ತು.॥25॥
ಮೂಲಮ್ - 26
ತಾಂ ಪರಿಷ್ವಜ್ಯ ಬಾಹುಭ್ಯಾಂ ವಿಸಂಜ್ಞಾಮಿವ ದುಃಖಿತಾಮ್ ।
ಉವಾಚ ವಚನಂ ರಾಮಃ ಪರಿವಿಶ್ವಾಸಯಂಸ್ತದಾ ॥
ಅನುವಾದ
ಸೀತೆಯು ದುಃಖದಿಂದಾಗಿ ನಿಶ್ಚೇಷ್ಟಿತಳಂತೆ ಆಗಿದ್ದಳು. ಶ್ರೀರಾಮಚಂದ್ರನು ಆಕೆಯನ್ನು ಎರಡೂ ಕೈಗಳಿಂದ ಆಸರೆಯನ್ನಿತ್ತು ಎದೆಗೊತ್ತಿಕೊಂಡು ಹಾಗೂ ಆಕೆಯನ್ನು ಆಗ ಸಾಂತ್ವನಗೊಳಿಸುತ್ತಾ ಹೀಗೆಂದನು.॥26॥
ಮೂಲಮ್ - 27
ನ ದೇವಿಬತ ದುಃಖೇನ ಸ್ವರ್ಗಮಪ್ಯಭಿರೋಚಯೇ ।
ನಹಿ ಮೇಸ್ತಿ ಭಯಂ ಕಿಂಚಿತ್ ಸ್ವಯಂಭೋರಿವ ಸರ್ವತಃ ॥
ಅನುವಾದ
ದೇವಿ! ನಿನಗೆ ದುಃಖಕೊಟ್ಟು ನನಗೆ ಸ್ವರ್ಗದ ಸುಖ ದೊರೆತರೂ ನಾನು ಅದನ್ನು ಪಡೆಯಲಾರೆ. ಸ್ವಯಂಭೂ ಬ್ರಹ್ಮದೇವರಂತೆ ನನಗೆ ಯಾವುದರಿಂದಲೂ ಕೊಂಚವಾದರೂ ಭಯವಿಲ್ಲ.॥27॥
ಮೂಲಮ್ - 28
ತವಸರ್ವಮಭಿಪ್ರಾಯಮವಿಜ್ಞಾಯ ಶುಭಾನನೇ ।
ವಾಸಂ ನ ರೋಚಯೇಽರಣ್ಯೇ ಶಕ್ತಿಮಾನಪಿ ರಕ್ಷಣೇ ॥
ಅನುವಾದ
ಶುಭಾನನೇ! ಕಾಡಿನಲ್ಲಿ ನಿನ್ನನ್ನು ರಕ್ಷಿಸಲು ನಾನು ಸರ್ವಥಾ ಸಮರ್ಥನಾಗಿದ್ದರೂ ನಿನ್ನ ಹಾರ್ದಿಕ ಅಭಿಪ್ರಾಯವನ್ನು ಪೂರ್ಣವಾಗಿ ತಿಳಿಯದೆ ನಿನ್ನನ್ನು ವನವಾಸಿಯಾಗಿಸಲು ನಾನು ಉಚಿತವಾಗಿ ತಿಳಿಯುವುದಿಲ್ಲ.॥28॥
ಮೂಲಮ್ - 29
ಯತ್ಸೃಷ್ಟಾಸಿ ಮಯಾ ಸಾರ್ಧಂ ವನವಾಸಾಯ ಮೈಥಿಲಿ ।
ನ ವಿಹಾತುಂ ಮಯಾ ಶಕ್ಯಾ ಪ್ರೀರ್ತಿರಾತ್ಮವತಾ ಯಥಾ ॥
ಅನುವಾದ
ಮಿಥಿಲೇಶಕುಮಾರೀ! ನೀನು ನನ್ನೊಂದಿಗೆ ವನದಲ್ಲಿ ಇರಲೆಂದೇ ಹುಟ್ಟಿರುವೆಯಾದರೆ ನಾನು ನಿನ್ನನ್ನು ಬಿಡಲಾರೆನು. ಆತ್ಮಜ್ಞಾನೀ ಪುರಷನು ಸ್ವಾಭಾವಿಕ ಪ್ರಸನ್ನತೆಯನ್ನು ತ್ಯಜಿಸದಂತೆ ನಿನ್ನನ್ನು ತ್ಯಜಿಸಲಾರೆನು.॥29॥
ಮೂಲಮ್ - 30
ಧರ್ಮಸ್ತು ಗಜನಾಸೋರು ಸದ್ಭಿರಾಚರಿತಃ ಪುರಾ ।
ತಂ ಚಾಹಮನುವರ್ತಿಷ್ಯೇ ಯಥಾ ಸೂರ್ಯಂ ಸುವರ್ಚಲಾ ॥
ಅನುವಾದ
ಸುಂದರೀ! ಹಿಂದಿನ ಸತ್ಪುರುಷರು ತಮ್ಮ ಪತ್ನಿಯೊಂದಿಗೆ ಇದ್ದು ಆಚರಿಸಿದ ಧರ್ಮವನ್ನೇ ನಾನೂ ನಿನ್ನೊಡನೆ ಇದ್ದು ಧರ್ಮವನ್ನು ಅನುಸರಿಸುವೆನು. ಸುವರ್ಚಲಾ (ಸಂಜ್ಞಾ) ತನ್ನ ಪತಿ ಸೂರ್ಯನನ್ನು ಅನುಗಮನ ಮಾಡುವಂತೆ ನೀನೂ ನನ್ನನ್ನು ಅನುಗಮನ ಮಾಡು.॥30॥
ಮೂಲಮ್ - 31
ನ ಖಲ್ವಹಂ ನ ಗಚ್ಛೇಯಂ ವನಂ ಜನಕನಂದಿನಿ ।
ವಚನಂ ತನ್ನಯತಿ ಮಾಂ ಪಿತುಃ ಸತ್ಯೋಪಬೃಂಹಿತಮ್ ॥
ಅನುವಾದ
ಜನಕನಂದಿನೀ! ನಾನು ಕಾಡಿಗೆ ಹೋಗದಿರುವುದು ಯಾವ ರೀತಿಯಿಂದಲೂ ಸಂಭವಿಸಲಾರದು; ಏಕೆಂದರೆ ತಂದೆಯ ಆ ಸತ್ಯಯುಕ್ತ ವಚನವೇ ನನ್ನನ್ನು ವನಕ್ಕೆ ಕೊಂಡು ಹೋಗುತ್ತಾ ಇದೆ.॥31॥
ಮೂಲಮ್ - 32
ಏಷ ಧರ್ಮಶ್ಚಸುಶ್ರೋಣಿ ಪಿತುರ್ಮಾತುಶ್ಚವಶ್ಯತಾ ।
ಆಜ್ಞಾಂ ಚಾಹಂ ವ್ಯತಿಕ್ರಮ್ಯ ನಾಹಂ ಜೀವಿತುಮತ್ಸಹೇ ॥
ಅನುವಾದ
ಚೆಲುವೇ! ತಂದೆ ಮತ್ತು ತಾಯಿಯ ಆಜ್ಞೆಗೆ ಅಧೀನನಾಗಿರುವುದು ಪುತ್ರನ ಧರ್ಮವಾಗಿದೆ. ಅದಕ್ಕಾಗಿ ನಾನು ಅದನ್ನು ಉಲ್ಲಂಘಿಸಿ ಬದುಕಿರಲಾರೆನು.॥32॥
ಮೂಲಮ್ - 33
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ ।
ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಮ್ ॥
ಅನುವಾದ
ತಾಯಿ, ತಂದೆ ಮತ್ತು ಆಚಾರ್ಯರು ಪ್ರತ್ಯಕ್ಷವಾಗಿ ಕಾಣುವ ದೇವತೆಗಳು. ಇವರೆಲ್ಲರನ್ನು ಅತಿಕ್ರಮಿಸಿ (ಅನಾದರಿಸಿ) ನಮ್ಮ ಸ್ವಾಧೀನಕ್ಕೆ ಸಿಗದಿರುವ (ಪ್ರತ್ಯಕ್ಷವಾಗಿ ಕಾಣದಿರುವ) ದೇವತೆಗಳನ್ನು ನಾನಾ ಪ್ರಕಾರಗಳಿಂದ ಹೇಗೆ ತಾನೇ ಆರಾಧಿಸಲು ಸಾಧ್ಯ.॥33॥
ಮೂಲಮ್ - 34
ಯತ್ರ ತ್ರಯಂ ತ್ರಯೋ ಲೋಕಾಃಪವಿತ್ರಂ ತತ್ಸಮಂ ಭುವಿ ।
ನಾನ್ಯದಸ್ತಿ ಶುಭಾಪಾಂಗೇ ತೇನೇದಮಭಿರಾಧ್ಯತೇ ॥
ಅನುವಾದ
ಸುಂದರ ಕಣ್ಣುಗಳುಳ್ಳವಳೇ! ಯಾರ ಆರಾಧನೆ ಮಾಡಿದಾಗ ಧರ್ಮ, ಅರ್ಥ, ಕಾಮ ಮೂರೂ ಪ್ರಾಪ್ತವಾಗುತ್ತವೋ, ಹಾಗೂ ಮೂರು ಲೋಕಗಳ ಆರಾಧನೆಯಾಗುತ್ತದೋ, ಆ ತಂದೆ, ತಾಯಿ ಮತ್ತು ಗುರು ಇವರಿಗೆ ಸಮಾನವಾಗಿ ಬೇರೆ ಯಾವ ದೇವತೆಯೂ ಈ ಭೂಲೋಕದಲ್ಲಿ ಇಲ್ಲ. ಅದಕ್ಕಾಗಿ ಜಗತ್ತಿನ ಜನರು ಈ ಮೂರು ದೇವತೆಗಳನ್ನು ಆರಾಧಿಸುತ್ತಾರೆ.॥34॥
ಮೂಲಮ್ - 35
ನ ಸತ್ಯಂ ದಾನಮಾನೌ ವಾ ಯಜ್ಞೋವಾಪ್ಯಾಪ್ತದಕ್ಷಿಣಾಃ ।
ತಥಾ ಬಲಕರಾಃ ಸೀತೇ ಯಥಾ ಸೇವಾ ಪಿತುರ್ಮತಾ ॥
ಅನುವಾದ
ಸೀತೇ! ತಂದೆಯ ಸೇವೆ ಮಾಡುವಂತಹ ಶ್ರೇಯಸ್ಕರ ಪ್ರಬಲ ಸಾಧನೇ-ಸತ್ಯವಾಗಲೀ, ದಾನವಾಗಲಿ, ಮಾನವಾಗಲೀ ವಿಪುಲ ದಕ್ಷಿಣೆಯುಳ್ಳ ಯಜ್ಞಗಳಾಗಲೀ ಯಾವುದೂ ಅಲ್ಲ.॥35॥
ಮೂಲಮ್ - 36
ಸ್ವರ್ಗೋ ಧನಂ ವಾ ಧಾನ್ಯಂ ವಾವಿದ್ಯಾ ಪುತ್ರಾಃ ಸುಖಾನಿ ಚ ।
ಗುರುವೃತ್ತ್ಯನುರೋಧೇನ ನ ಕಿಂಚಿದಪಿ ದುರ್ಲಭಮ್ ॥
ಅನುವಾದ
ಗುರು-ಹಿರಿಯರ ಸೇವೆಯನ್ನು ಮಾಡುವುದರಿಂದ ಸ್ವರ್ಗ, ಧನ, ಧಾನ್ಯ, ವಿದ್ಯಾ, ಪುತ್ರರು ಮತ್ತು ಸುಖ ಇವು ಯಾವುವೂ ದುರ್ಲಭವಿಲ್ಲ.॥36॥
ಮೂಲಮ್ - 37
ದೇವಗಂಧರ್ವಗೋಲೋಕಾನ್ ಬ್ರಹ್ಮಲೋಕಾಂಸ್ತಥಾಪರಾನ್ ।
ಪ್ರಾಪ್ನುವಂತಿ ಮಹಾತ್ಮನೋ ಮಾತಾಪಿತೃಪರಾಯಣಾಃ ॥
ಅನುವಾದ
ತಾಯಿ-ತಂದೆಯರ ಸೇವೆಯಲ್ಲಿ ತೊಡಗಿರುವ ಮಹಾತ್ಮರು ದೇವಲೋಕ, ಗಂಧರ್ವಲೋಕ, ಬ್ರಹ್ಮಲೋಕ, ಗೋಲೋಕ ಹಾಗೂ ಇತರ ಎಲ್ಲ ಲೋಕಗಳನ್ನು ಪಡೆದುಕೊಳ್ಳುತ್ತಾರೆ.॥37॥
ಮೂಲಮ್ - 38
ಸ ಮಾ ಪಿತಾ ಯಥಾ ಶಾಸ್ತಿಸತ್ಯಧರ್ಮಪಥೇ ಸ್ಥಿತಃ ।
ತಥಾ ವರ್ತಿತುಮಿಚ್ಛಾಮಿ ಸ ಹಿ ಧರ್ಮಃ ಸನಾತನಃ ॥
ಅನುವಾದ
ಅದಕ್ಕಾಗಿ ಸತ್ಯ ಮತ್ತು ಧರ್ಮಮಾರ್ಗದಲ್ಲಿ ಸ್ಥಿತರಾದ ಪೂಜ್ಯ ತಂದೆಯವರು ಆಜ್ಞೆ ಕೊಟ್ಟಂತೆ ನಡೆಯುವುದನ್ನೇ ನಾನು ಬಯಸುತ್ತೇನೆ; ಏಕೆಂದರೆ ಅದೇ ಸನಾತನ ಧರ್ಮವಾಗಿದೆ.॥38॥
ಮೂಲಮ್ - 39
ಮಮ ಸನ್ನಾ ಮತಿಃ ಸೀತೇ ನೇತುಂ ತ್ವಾಂ ದಂಡಕಾವನಮ್ ।
ವಸಿಷ್ಯಾಮೀತಿ ಸಾ ತ್ವಂ ಮಾಮನುಯಾತುಂ ಸುನಿಶ್ಚಿತಾ ॥
ಅನುವಾದ
ಸೀತೇ! ‘ನಾನು ನಿಮ್ಮೊಂದಿಗೆ ಕಾಡಿನಲ್ಲಿ ವಾಸಿಸುವೆ’ ಎಂದು ಹೇಳಿ ನೀನು ನನ್ನೊಡನೆ ಹೊರಡಲು ದೃಢನಿಶ್ಚಯ ಮಾಡಿರುವೆ. ಅದಕ್ಕಾಗಿ ನಿನ್ನನ್ನು ದಂಡಕಾರಣ್ಯಕ್ಕೆ ಕರೆದುಕೊಂಡು ಹೋಗದಿರುವ ನನ್ನ ವಿಚಾರ ಬದಲಾಯಿಸಿದ್ದೇನೆ.॥39॥
ಮೂಲಮ್ - 40
ಸಾ ಹಿ ದಿಷ್ಟಾ ನವದ್ಯಾಂಗಿ ವನಾಯ ಮದಿರೇಕ್ಷಣೇ ।
ಅನುಗಚ್ಛಸ್ವ ಮಾಂ ಭೀರು ಸಹಧರ್ಮಚರೀ ಭವ ॥
ಅನುವಾದ
ಸುಂದರ ನೇತ್ರವುಳ್ಳವಳೇ! ಈಗ ನಾನು ನಿನಗೆ ವನಕ್ಕೆ ಹೊರಡಲು ಅಪ್ಪಣೆ ಮಾಡುತ್ತಿದ್ದೇನೆ. ಭೀರು! ನೀನು ನನ್ನ ಅನುಗಾಮಿನಿಯಾಗು ಮತ್ತು ನನ್ನೊಂದಿಗೆ ಇದ್ದು ಧರ್ಮವನ್ನು ಆಚರಿಸು.॥40॥
ಮೂಲಮ್ - 41
ಸರ್ವಥಾ ಸದೃಶಂ ಸೀತೇ ಮಮ ಸ್ವಸ್ಯ ಕುಲಸ್ಯ ಚ ।
ವ್ಯವಸಾಯಮನುಕ್ರಾಂತಾ ಕಾಂತೇ ತ್ವಮತಿಶೋಭನಮ್ ॥
ಅನುವಾದ
ಪ್ರಾಣವಲ್ಲಭೆ ಸೀತೇ! ನನ್ನೊಂದಿಗೆ ಹೊರಡಲು ನೀನು ಮಾಡಿದ ಈ ಪರಮ ಸುಂದರ ನಿಶ್ಚಯವು ನಿನಗೆ ಮತ್ತು ನಮ್ಮ ಕುಲಕ್ಕೆ ಸರ್ವಥಾ ಯೋಗ್ಯವಾಗಿದೆ.॥41॥
ಮೂಲಮ್ - 42
ಆರಭಸ್ವ ಶುಭಶ್ರೋಣಿ ವನವಾಸಕ್ಷಮಾಃ ಕ್ರಿಯಾಃ ।
ನೇದಾನೀಂ ತ್ವದೃತೇ ಸೀತೇ ಸ್ವರ್ಗೋಽಪಿ ಮಮ ರೋಚತೇ ॥
ಅನುವಾದ
ಸುಂದರೀ! ಈಗ ನೀನು ವನವಾಸಕ್ಕೆ ಯೋಗ್ಯವಾದ ದಾನಾದಿ ಕರ್ಮಗಳನ್ನು ಪ್ರಾರಂಭಿಸು. ಸೀತೇ! ಈಗ ನಿನ್ನ ಈ ಪ್ರಕಾರ ದೃಢನಿಶ್ಚಯ ಮಾಡಿರುವುದರಿಂದ ನಿನ್ನನ್ನು ಬಿಟ್ಟು ಸ್ವರ್ಗವೂ ನನಗೆ ಒಳ್ಳೆಯದೆನಿಸುವುದಿಲ್ಲ.॥42॥
ಮೂಲಮ್ - 43
ಬ್ರಾಹ್ಮಣೇಭ್ಯಶ್ಚ ರತ್ನಾನಿ ಭಿಕ್ಷುಕೇಭ್ಯಶ್ಚ ಭೋಜನಮ್ ।
ದೇಹಿ ಚಾಶಂಸಮಾನೇಭ್ಯಃ ಸಂತ್ವರಸ್ವ ಚ ಮಾ ಚಿರಮ್ ॥
ಅನುವಾದ
ಬ್ರಾಹ್ಮಣರಿಗೆ ರತ್ನಾದಿ ಉತ್ತಮ ವಸ್ತುಗಳನ್ನು ದಾನ ಮಾಡು. ಭೋಜನ ಬಯಸುವ ಭಿಕ್ಷುಕರಿಗೆ ಊಟ ಹಾಕು. ತಡ ಮಾಡದೆ ಬೇಗನೇ ಮಾಡಿಮುಗಿಸು.॥43॥
ಮೂಲಮ್ - 44
ಭೂಷಣಾನಿ ಮಹಾರ್ಹಾಣಿ ವರವಸ್ತ್ರಾಣಿ ಯಾನಿ ಚ ।
ರಮಣೀಯಾಶ್ಚ ಯೇ ಕೇಚಿತ್ ಕ್ರೀಡಾರ್ಥಾಶ್ಚಾಪ್ಯುಪಸ್ಕರಾಃ ॥
ಮೂಲಮ್ - 45
ಶಯನೀಯಾನಿ ಯಾನಾನಿ ಮಮ ಚಾನ್ಯಾನಿ ಯಾನಿ ಚ ।
ದೇಹಿ ಸ್ವಭೃತ್ಯವರ್ಗಸ್ಯ ಬ್ರಾಹ್ಮಣಾನಾಮನಂತರಮ್ ॥
ಅನುವಾದ
ನಿನ್ನ ಬಳಿಯಲ್ಲಿ ಇರುವ ಉತ್ತಮ ವಸ್ತ್ರಗಳನ್ನು, ರಮಣೀಯ ಪದಾರ್ಥಗಳನ್ನು, ಮನೋರಂಜನೆಯ ಸುಂದರ ಸಾಮಗ್ರಿಗಳನ್ನು ನನ್ನ ಮತ್ತು ನಿನ್ನ ಉಪಯೋಗದಲ್ಲಿರುವ ಉತ್ತಮೋತ್ತಮ ಶಯ್ಯೆಗಳು, ವಾಹನಗಳು ಹಾಗೂ ಇತರ ವಸ್ತುಗಳನ್ನು ಬ್ರಾಹ್ಮಣರಿಗೆ ಯೋಗ್ಯವಾದವುಗಳನ್ನು ಅವರಿಗೆ, ಬಳಿಕ ಉಳಿದ ಪದಾರ್ಥಗಳೆಲ್ಲವನ್ನು ಸೇವಕರಿಗೆ ಹಂಚಿಬಿಡು.॥44-45॥
ಮೂಲಮ್ - 46
ಅನುಕೂಲಂ ತು ಸಾಭರ್ತುರ್ಜ್ಞಾತ್ವಾ ಗಮನಮಾತ್ಮನಃ ।
ಕ್ಷಿಪ್ರಂ ಪ್ರಮುದಿತಾ ದೇವೀ ದಾತುಮೇವ ಪ್ರಚಕ್ರಮೇ ॥
ಅನುವಾದ
‘ಸ್ವಾಮಿಯು ನಾನು ವನಕ್ಕೆ ಹೋಗುವುದನ್ನು ಸ್ವೀಕರಿಸಿದರು, ನನ್ನ ವನಗಮನ ಅವರ ಮನಸ್ಸಿಗೆ ಅನುಕೂಲವಾಯಿತು’ ಎಂದು ತಿಳಿದು ಸೀತೆಗೆ ಬಹಳ ಸಂತೋಷವಾಯಿತು ಮತ್ತು ಶೀಘ್ರವಾಗಿ ಎಲ್ಲ ವಸ್ತುಗಳನ್ನು ದಾನ ಮಾಡುವುದರಲ್ಲಿ ತೊಡಗಿದಳು.॥46॥
ಮೂಲಮ್ - 47
ತತಃ ಪ್ರಹೃಷ್ಟಾ ಪ್ರತಿಪೂರ್ಣಮಾನಸಾ
ಯಶಸ್ವೀನೀ ಭರ್ತುರವೇಕ್ಷ್ಯ ಭಾಷಿತಮ್ ।
ಧನಾನಿ ರತ್ನಾನಿ ಚ ದಾತುಮಂಗನಾ
ಪ್ರಚಕ್ರಮೇ ಧರ್ಮಭೃತಾಂ ಮನಸ್ವಿನೀ ॥
ಅನುವಾದ
ಅನಂತರ ತನ್ನ ಮನೋರಥ ಪೂರ್ಣವಾದ್ದರಿಂದ ಅತ್ಯಂತ ಹರ್ಷಗೊಂಡು ಯಶಸ್ವಿನೀ ಸೀತಾದೇವಿಯು ಗಂಡನ ಆದೇಶದಂತೆ ಧರ್ಮಾತ್ಮಾ ಬ್ರಾಹ್ಮಣರಿಗೆ ಧನ, ರತ್ನಾದಿಗಳನ್ನು ದಾನ ಮಾಡಲು ಮುಂದಾದಳು.॥47॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೂವತ್ತನೆಯ ಸರ್ಗ ಪೂರ್ಣವಾಯಿತು ॥30॥