वाचनम्
ಭಾಗಸೂಚನಾ
ಸೀತಾದೇವಿಯು ತನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದರ ಔಚಿತ್ಯವನ್ನು ಶ್ರೀರಾಮನಿಗೆ ವಿವರಿಸಿ ಹೇಳಿದುದು
ಮೂಲಮ್ - 1
ಏತತ್ತು ವಚನಂ ಶ್ರುತ್ವಾ ಸೀತಾ ರಾಮಸ್ಯ ದುಃಖಿತಾ ।
ಪ್ರಸಕ್ತಾಶ್ರುಮುಖೀಮಂದಮಿದಂ ವಚನಮಬ್ರವೀತ್ ॥
ಅನುವಾದ
ಶ್ರೀರಾಮನ ಮಾತನ್ನು ಕೇಳಿ ಸೀತೆಗೆ ಬಹಳ ದುಃಖವಾಯಿತು. ಆಕೆಯ ಕಣ್ಣುಗಳಿಂದ ಕಣ್ಣೀರ ಧಾರೆಯೇ ಹರಿಯಿತು. ಅವಳು ನಿಧಾನವಾಗಿ ಹೇಳತೊಡಗಿದಳು.॥1॥
ಮೂಲಮ್ - 2
ಯೇ ತ್ವಯಾ ಕೀರ್ತಿತಾ ದೋಷಾ ವನೇ ವಸ್ತವ್ಯತಾಂ ಪ್ರತಿ ।
ಗುಣಾನಿತ್ಯೇವ ತಾನ್ವಿದ್ಧಿ ತವ ಸ್ನೇಹಪುರಸ್ಕೃತಾನ್ ॥
ಅನುವಾದ
ಪ್ರಾಣನಾಥ! ಕಾಡಿನಲ್ಲಿ ವಾಸಿಸುವ ಏನೇನು ದೋಷಗಳು ಇವೆ ಎಂದು ನೀವು ಹೇಳಿದಿರೋ, ಅವೆಲ್ಲವೂ ನಿಮ್ಮ ಪ್ರೀತಿ ಪಡೆದ ನನಗೆ ಗುಣರೂಪವೇ ಆಗುವವು. ಇದನ್ನು ನೀವು ಚೆನ್ನಾಗಿ ತಿಳಿದುಕೊಳ್ಳಬೇಕು.॥2॥
ಮೂಲಮ್ - 3
ಮೃಗಾಃ ಸಿಂಹಾ ಗಜಾಶ್ಚೈವ ಶಾರ್ದೂಲಾಃ ಶರಭಾಸ್ತಥಾ ।
ಚಮರಾಃ ಸೃಮರಾಶ್ಚೈವ ಯೇ ಚಾನ್ಯೇವನಚಾರಿಣಃ ॥
ಮೂಲಮ್ - 4
ಅದೃಷ್ಟಪೂರ್ವರೂಪತ್ವಾತ್ ಸರ್ವೇ ತೇತವ ರಾಘವ ।
ರೂಪಂ ದೃಷ್ಟ್ವಾಪಸರ್ಪೇಯುಸ್ತವ ಸರ್ವೇ ಹಿ ಬಿಭ್ಯತಿ ॥
ಅನುವಾದ
ರಘುನಂದನ! ಜಿಂಕೆ, ಸಿಂಹ, ಆನೆ, ಹುಲಿ, ಶರಭ, ಚಮರೀ ಹಸು, ನೀಲಿ ಹಸು ಹಾಗೂ ಇತರ ಕಾಡುಪ್ರಾಣಿಗಳೆಲ್ಲವೂ ನಿಮ್ಮ ರೂಪ ನೋಡಿ ಓಡಿಹೋಗುವವು; ಏಕೆಂದರೆ ಇಂತಹ ಪ್ರಭಾವಶಾಲೀ ಸ್ವರೂಪವನ್ನು ಅವು ಮೊದಲು ಎಂದೂ ನೋಡಿರಲಿಕ್ಕಿಲ್ಲ. ನಿಮಗಾದರೋ ಎಲ್ಲರೂ ಹೆದರುತ್ತಾರೆ. ಹಾಗಿರುವಾಗ ಈ ಪ್ರಾಣಿಗಳ ಮಾತಾದರೂ ಏನಿದೆ.॥3-4॥
ಮೂಲಮ್ - 5
ತ್ವಯಾ ಚ ಸಹ ಗಂತವ್ಯಂ ಮಯಾ ಗುರುಜನಾಜ್ಞಯಾ ।
ತ್ವದ್ವಿಯೋಗೇನ ಮೇ ರಾಮ ತ್ಯಕ್ತವ್ಯಮಿಹ ಜೀವಿತಮ್ ॥
ಅನುವಾದ
ಶ್ರೀರಾಮಾ! ಗುರುಗಳ ಆಜ್ಞೆಯಿಂದ ನಾನು ನಿಶ್ಚಯವಾಗಿ ನಿಮ್ಮೊಂದಿಗೆ ಬರಲೇಬೇಕು; ಏಕೆಂದರೆ, ನಿಮ್ಮ ವಿಯೋಗ ಉಂಟಾದಾಗ ನಾನು ಇಲ್ಲಿ ನನ್ನ ಜೀವನವನ್ನು ತ್ಯಜಿಸಿಬಿಡುವೆನು.॥5॥
ಮೂಲಮ್ - 6
ನ ಹಿ ಮಾಂ ತ್ವತ್ಸಮೀಪಸ್ಥಾಮಪಿ ಶಕ್ನೋಽಪಿ ರಾಘವ ।
ಸುರಾಣಾಮೀಶ್ವರಃ ಶಕ್ತಃ ಪ್ರಧರ್ಷಯಿತುಮೋಜಸಾ ॥
ಅನುವಾದ
ರಘುನಾಥ! ನಿಮ್ಮ ಬಳಿ ಇದ್ದರೆ ದೇವತೆಗಳೊಡೆಯ ಇಂದ್ರನೂ ಕೂಡ ಬಲವಂತವಾಗಿ ನನ್ನನ್ನು ಭಯಪಡಿಸಲಾರನು.॥6॥
ಮೂಲಮ್ - 7
ಪತಿಹೀನಾ ತು ಯಾ ನಾರೀ ನ ಸಾ ಶಕ್ಷ್ಯತಿ ಜೀವಿತುಮ್ ।
ಕಾಮಮೇವಂ ವಿಧಂ ರಾಮ ತ್ವಯಾಮಮ ನಿದರ್ಶಿತಮ್ ॥
ಅನುವಾದ
ಶ್ರೀರಾಮ! ಪತಿವ್ರತಾ ಸ್ತ್ರೀಯು ತನ್ನ ಪತಿಯಿಂದ ವಿಯೋಗ ಪಡೆದಾಗ ಜೀವಿಸಿರಲಾರಳು; ಎಂಬ ಮಾತು ನೀವೂ ಕೂಡ ನನಗೆ ಚೆನ್ನಾಗಿ ತಿಳಿಸಿರುವಿರಿ.॥7॥
ಮೂಲಮ್ - 8
ಅಥಾಪಿ ಚ ಮಹಾಪ್ರಾಜ್ಞ ಬ್ರಾಹ್ಮಣಾನಾಂ ಮಯಾಶ್ರುತಮ್ ।
ಪುರಾ ಪಿತೃಗೃಹೇಸತ್ಯಂ ವಸ್ತವ್ಯಂ ಕಿಲ ಮೇ ವನೇ ॥
ಅನುವಾದ
ಮಹಾಪ್ರಾಜ್ಞರೇ! ವನದಲ್ಲಿ ದೋಷ ಮತ್ತು ದುಃಖಗಳೇ ತುಂಬಿದ್ದರೂ, ನನ್ನ ತಂದೆಯ ಮನೆಯಲ್ಲಿದ್ದಾಗ ‘ನಾನು ಖಂಡಿತವಾಗಿ ಕಾಡಿನಲ್ಲಿರಬೇಕಾಗುವುದು’ ಎಂದು ಬ್ರಾಹ್ಮಣರ ಮುಖದಿಂದ ಕೇಳಿರುವೆನು. ಈ ಮಾತು ನನ್ನ ಜೀವನದಲ್ಲಿ ಅವಶ್ಯವಾಗಿ ಸತ್ಯವಾಗುವುದು.॥8॥
ಮೂಲಮ್ - 9
ಲಕ್ಷಣಿಭ್ಯೋ ದ್ವಿಜಾತಿಭ್ಯಃಶ್ರುತ್ವಾಹಂ ವಚನಂ ಗೃಹೇ ।
ವನವಾಸಕೃತೋತ್ಸಾಹಾ ನಿತ್ಯಮೇವ ಮಹಾಬಲ ॥
ಅನುವಾದ
ಮಹಾಬಲಿ ವೀರ! ಹಸ್ತರೇಖೆ ನೋಡಿ ಭವಿಷ್ಯ ಹೇಳುವ ಬ್ರಾಹ್ಮಣರು ಹೇಳಿರುವುದನ್ನು ಕೇಳಿ ನಾನು ಸದಾ ವನವಾಸಕ್ಕಾಗಿ ಉತ್ಸಾಹಿತಳಾಗಿದ್ದೇನೆ.॥9॥
ಮೂಲಮ್ - 10
ಆದೇಶೋ ವನವಾಸಸ್ಯ ಪ್ರಾಪ್ತವ್ಯಃ ಸ ಮಯಾ ಕಿಲ ।
ಸಾ ತ್ವಯಾ ಸಹ ಭರ್ತಾಹಂ ಯಾಸ್ಯಾಮಿ ಪ್ರಿಯ ನಾನ್ಯಥಾ ॥
ಅನುವಾದ
ಪ್ರಿಯತಮ! ವನದಲ್ಲಿ ವಾಸಿಸುವ ಆದೇಶವನ್ನು ಬ್ರಾಹ್ಮಣರಿಂದ ಅರಿತ ಮೇಲೆ ಒಂದಲ್ಲ ಒಂದು ದಿನ ನಾನು ಪೂರ್ಣಗೊಳಿಸಲೇಬೇಕಾಗುವುದು. ಇದು ಯಾವ ರೀತಿಯಿಂದಲೂ ತಪ್ಪಿಸಲಾಗುವುದಿಲ್ಲ. ಆದ್ದರಿಂದ ನಾನು ನನ್ನ ಸ್ವಾಮಿಯಾದ ನಿಮ್ಮೊಂದಿಗೆ ಕಾಡಿಗೆ ಅವಶ್ಯವಾಗಿ ಬರುವೆನು.॥10॥
ಮೂಲಮ್ - 11
ಕೃತಾದೇಶಾಭವಿಷ್ಯಾಮಿ ಗಮಿಷ್ಯಾಮಿ ತ್ವಯಾ ಸಹ ।
ಕಾಲಶ್ಚಾಯಂ ಸಮುತ್ಪನ್ನಃ ಸತ್ಯವಾನ್ ಭವತು ದ್ವಿಜಃ ॥
ಅನುವಾದ
ಹೀಗಿರುವುದರಿಂದ ನಾನು ಆ ಭಾಗ್ಯದ ವಿಧಾನವನ್ನು ಅನುಭವಿಸುವೆನು. ಅದಕ್ಕಾಗಿ ಈಗ ಸಮಯ ಬಂದಿದೆ. ಆದ್ದರಿಂದ ನಿಮ್ಮೊಂದಿಗೆ ನಾನು ಹೊರಡಲೇಬೇಕು. ಇದರಿಂದ ಆ ಬ್ರಾಹ್ಮಣರ ಮಾತು ನಿಜವಾಗುವುದು.॥11॥
ಮೂಲಮ್ - 12
ವನವಾಸೇ ಹಿ ಜಾನಾಮಿ ದುಃಖಾನಿ ಬಹುಧಾ ಕಿಲ ।
ಪ್ರಾಪ್ಯಂತೇ ನಿಯತಂ ವೀರ ಪುರುಷೈರಕೃತಾತ್ಮಭಿಃ ॥
ಅನುವಾದ
ವೀರನೇ! ವನವಾಸದಲ್ಲಿ ಅವಶ್ಯವಾಗಿ ಬಹಳ ದುಃಖಗಳು ಪ್ರಾಪ್ತವಾಗುತ್ತವೆ; ಆದರೆ ಯಾರ ಇಂದ್ರಿಯಗಳು ಮತ್ತು ಮನಸ್ಸು ತನ್ನ ವಶದಲ್ಲಿ ಇಲ್ಲವೋ, ಅವರಿಗೆ ಈ ದುಃಖಗಳ ಅರಿವಾಗುತ್ತವೆ.॥12॥
ಮೂಲಮ್ - 13
ಕನ್ಯಯಾ ಚ ಪಿತುರ್ಗೇಹೇ ವನವಾಸಃ ಶ್ರುತೋ ಮಯಾ ।
ಭಿಕ್ಷಿಣ್ಯಾಃ ಶಮವೃತ್ತಾಯಾ ಮಮ ಮಾತುರಿಹಾಗ್ರತಃ ॥
ಅನುವಾದ
ತಂದೆಯ ಮನೆಯಲ್ಲಿ ಬಾಲ್ಯದಲ್ಲಿ ಶಾಂತಿಪರಾಯಣ ಓರ್ವ ಭಿಕ್ಷುಕಿಯ ಬಾಯಿಯಿಂದಲೂ ನಾನು ವನವಾಸದ ಮಾತನ್ನು ಕೇಳಿರುವೆನು. ಅವಳು ನನ್ನ ತಾಯಿಯ ಮುಂದೆಯೇ ಈ ಮಾತನ್ನು ಹೇಳಿರುವಳು.॥13॥
ಮೂಲಮ್ - 14
ಪ್ರಸಾದಿತಶ್ಚ ವೈ ಪೂರ್ವಂ ತ್ವಂ ಮೇ ಬಹುತಿಥಂ ಪ್ರಭೋ ।
ಗಮನಂ ವನವಾಸಸ್ಯ ಕಾಂಕ್ಷಿತಂ ಹಿ ಸಹ ತ್ವಯಾ ॥
ಅನುವಾದ
ಪ್ರಭೋ! ಇಲ್ಲಿಗೆ ಬಂದಮೇಲೆಯೂ ನಾನು ಮೊದಲೇ ಅನೇಕ ಬಾರಿ ನಿಮ್ಮಲ್ಲಿ ಸ್ವಲ್ಪ ಕಾಲವಾದರೂ ವನದಲ್ಲಿ ಇರಲು ಪ್ರಾರ್ಥಿಸಿದ್ದೆ ಹಾಗೂ ನೀವೂ ಅದಕ್ಕೆ ಒಪ್ಪಿಕೊಂಡಿರುವಿರಿ. ಇದರಿಂದ ನಿಶ್ಚಿತವಾಗಿ ನಿಮ್ಮೊಂದಿಗೆ ಕಾಡಿಗೆ ಹೋಗುವುದು ನನಗೆ ಮೊದಲೇ ಅಭೀಷ್ಟವಾಗಿತ್ತು ಎಂಬುದನ್ನು ನೀವು ತಿಳಿದುಕೊಳ್ಳಿರಿ.॥14॥
ಮೂಲಮ್ - 15
ಕೃತಕ್ಷಣಾಹಂ ಭದ್ರಂ ತೇ ಗಮನಂ ಪ್ರತಿ ರಾಘವ ।
ವನವಾಸಸ್ಯ ಶೂರಸ್ಯ ಮಮ ಚರ್ಯಾ ಹಿ ರೋಚತೇ ॥
ಅನುವಾದ
ರಘುನಂದನ! ನಿಮಗೆ ಮಂಗಳವಾಗಲಿ. ನಾನು ಕಾಡಿಗೆ ಹೋಗಲು ಮೊದಲೇ ನಿಮ್ಮ ಅನುಮತಿ ಪಡೆದಿರುವೆನು. ತನ್ನ ಶೂರವೀರ ವನವಾಸೀ ಪತಿಯ ಸೇವೆ ಮಾಡುವುದೇ ನನಗೆ ಹೆಚ್ಚು ರುಚಿಕರವಾಗಿದೆ.॥15॥
ಮೂಲಮ್ - 16
ಶುದ್ಧಾತ್ಮನ್ ಪ್ರೇಮಭಾವಾದ್ಧಿ ಭವಿಷ್ಯಾಮಿ ವಿಕಲ್ಮಷಾ ।
ಭರ್ತಾರಮನುಗಚ್ಛಂತೀ ಭರ್ತಾ ಹಿ ಪರದೈವತಮ್ ॥
ಅನುವಾದ
ಶುದ್ಧಾತ್ಮನೇ! ನೀವು ನನ್ನ ಸ್ವಾಮಿಯಾಗಿರುವಿರಿ. ನಿಮ್ಮ ಹಿಂದೆ ಪ್ರೇಮಭಾವದಿಂದ ಕಾಡಿಗೆ ಹೋದಾಗ ನನ್ನ ಪಾಪಗಳು ದೂರವಾಗುವವು; ಏಕೆಂದರೆ ಸ್ವಾಮಿಯೇ ಸ್ತ್ರೀಗೆ ಎಲ್ಲಕ್ಕಿಂತ ದೊಡ್ಡ ದೇವತೆಯಾಗಿದ್ದಾನೆ.॥16॥
ಮೂಲಮ್ - 17
ಪ್ರೇತ್ಯಭಾವೇ ಹಿ ಕಲ್ಯಾಣಃ ಸಂಗಮೋ ಮೇಸಹ ತ್ವಯಾ
ಶ್ರುತಿರ್ಹಿ ಶ್ರೂಯತೇ ಪುಣ್ಯಾ ಬ್ರಾಹ್ಮಣಾನಾಂ ಯಶಸ್ವಿನಾಮ್ ॥
ಅನುವಾದ
ನಿಮ್ಮನ್ನು ಹಿಂಬಾಲಿಸುವುದರಿಂದ ಪರಲೋಕದಲ್ಲಿಯೂ ನನ್ನ ಶ್ರೇಯಸ್ಸು ಆಗುವುದು ಹಾಗೂ ಸದಾ ನಿಮ್ಮೊಂದಿಗೆ ನನ್ನ ಸಂಯೋಗ ಇರುವುದು. ಈ ವಿಷಯದಲ್ಲಿ ಯಶಸ್ವೀ ಬ್ರಾಹ್ಮಣರಿಂದೊಂದು ಪವಿತ್ರ ಶ್ರುತಿ ಕೇಳಲಾಗುತ್ತದೆ. ಅದು ಈ ಪ್ರಕಾರ ಇದೆ.॥17॥
ಮೂಲಮ್ - 18
ಇಹಲೋಕೇ ಚ ಪಿತೃಭಿರ್ಯಾ ಸ್ತ್ರೀ ಯಸ್ಯ ಮಹಾಬಲ ।
ಅದ್ಭಿರ್ದತ್ತಾ ಸ್ವಧರ್ಮೇಣ ಪ್ರೇತ್ಯಭಾವೇಽಪಿ ತಸ್ಯ ಸಾ ॥
ಅನುವಾದ
ಮಹಾಬಲೀ ವೀರನೇ! ಈ ಭೂಲೋಕದಲ್ಲಿ ಕನ್ಯಾಪಿತೃಗಳು ತಮ್ಮ ಮಗಳನ್ನು ಯಾರಿಗೆ ಧಾರೆ ಎರೆದುಕೊಡುವರೋ ಅವನೇ ಪರಲೋಕದಲ್ಲಿಯೂ ಆ ಕನ್ಯೆಗೆ ಪತಿಯಾಗುತ್ತಾನೆ.॥18॥
ಮೂಲಮ್ - 19
ಏವಮಸ್ಮಾತ್ ಸ್ವಕಾಂ ನಾರೀಂ ಸುವೃತ್ತಾಂಹಿ ಪತಿವ್ರತಾಮ್ ।
ನಾಭಿರೋಚಯಸೇ ನೇತುಂ ತ್ವಂ ಮಾಂ ಕೇನೇಹ ಹೇತುನಾ ॥
ಅನುವಾದ
ನಾನು ನಿಮ್ಮ ಧರ್ಮಪತ್ನಿಯಾಗಿರುವೆನು. ಉತ್ತಮ ವ್ರತವನ್ನು ಪಾಲಿಸುವ ಪತಿವ್ರತೆಯಾಗಿದ್ದೇನೆ. ಮತ್ತೆ ನೀನು ನನ್ನನ್ನು ಜೊತೆಗೆ ಕರೆದುಕೊಂಡು ಹೋಗಲು ಏಕೆ ಬಯಸುವುದಿಲ್ಲ? ಇದರ ಕಾರಣವೇನು.॥19॥
ಮೂಲಮ್ - 20
ಭಕ್ತಾಂ ಪತಿವ್ರತಾಂ ದೀನಾಂ ಮಾಂ ಸಮಾಂ ಸುಖದುಃಖಯೋಃ ।
ನೇತುಮರ್ಹಸಿ ಕಾಕುತ್ಸ್ಥ ಸಮಾನಸುಖದುಃಖಿನೀಮ್ ॥
ಅನುವಾದ
ಕಕುತ್ಸ್ಥಕುಲಭೂಷಣನೇ! ನಾನು ನಿಮ್ಮ ಭಕ್ತೆಯಾಗಿ ಇರುವೆನು, ಪಾತಿವ್ರತ್ಯವನ್ನು ಪಾಲಿಸುತ್ತಿದ್ದೇನೆ. ನಿಮ್ಮ ಅಗಲುವಿಕೆಯ ಭಯದಿಂದ ದೀನಳಾಗುತ್ತಿದ್ದೇನೆ ಹಾಗೂ ನಿಮ್ಮ ಸುಖ-ದುಃಖಗಳಲ್ಲಿ ಸಮಾನವಾಗಿ ಪಾಲುಗೊಳ್ಳುವೆನು. ನನಗೆ ಸುಖ ಸಿಗಲಿ ಅಥವಾ ದುಃಖ ಸಿಗಲಿ ನಾನು ಎರಡೂ ಅವಸ್ಥೆಗಳಲ್ಲಿ ಸಮವಾಗಿ ಇರುವೆನು, ಹರ್ಷ-ಶೋಕಗಳಿಗೆ ವಶೀಭೂತಳಾಗಲಾರೆ. ಆದ್ದರಿಂದ ನೀವು ಅವಶ್ಯವಾಗಿ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಕೃಪೆ ಮಾಡಬೇಕು.॥20॥
ಮೂಲಮ್ - 21
ಯದಿ ಮಾಂ ದುಃಖಿತಾಮೇವಂ ವನಂ ನೇತುಂ ನ ಚೇಚ್ಛಸಿ ।
ವಿಷಮಗ್ನಿಂ ಜಲಂ ವಾಹಮಾಸ್ಥಾಸ್ಯೇ ಮೃತ್ಯುಕಾರಣಾತ್ ॥
ಅನುವಾದ
ಈ ಪ್ರಕಾರ ದುಃಖದಲ್ಲಿ ಬಿದ್ದಿರುವ ಸೇವಿಕೆಯಾದ ನನ್ನನ್ನು ನಿಮ್ಮೊಂದಿಗೆ ಕಾಡಿಗೆ ಕರೆದುಕೊಂಡು ಹೋಗಲು ಬಯಸದಿದ್ದರೆ ನಾನು ವಿಷ ತಿಂದು, ಬೆಂಕಿಗೆ ಬಿದ್ದು, ಅಥವಾ ನೀರಿನಲ್ಲಿ ಧುಮುಕಿ ಸತ್ತುಹೋಗುವೆನು.॥21॥
ಮೂಲಮ್ - 22
ಏವಂ ಬಹುವಿಧಂ ತಂ ಸಾ ಯಾಚತೇ ಗಮನಂ ಪ್ರತಿ ।
ನಾನುಮೇನೇ ಮಹಾಬಾಹುಸ್ತಾಂ ನೇತು ವಿಜನಂ ವನಮ್ ॥
ಅನುವಾದ
ಹೀಗೆ ಅನೇಕ ಪ್ರಕಾರದಿಂದ ಸೀತೆಯು ಕಾಡಿಗೆ ಹೋಗಲು ಯಾಚಿಸುತ್ತಾ ಇದ್ದರೂ ಮಹಾಬಾಹು ಶ್ರೀರಾಮನು ಆಕೆಯನ್ನು ತನ್ನೊಂದಿಗೆ ನಿರ್ಜನವನಕ್ಕೆ ಕರೆದುಕೊಂಡು ಹೋಗಲು ಅನುಮತಿ ಕೊಡಲಿಲ್ಲ.॥22॥
ಮೂಲಮ್ - 23
ಏವಮುಕ್ತಾ ತು ಸಾ ಚಿಂತಾಂ ಮೈಥಿಲೀ ಸಮುಪಾಗತಾ ।
ಸ್ನಾಪಯಂತೀವ ಗಾಮುಷ್ಣೈರಶ್ರುಭಿರ್ನಯನಚ್ಯುತೈಃ ॥
ಅನುವಾದ
ಈ ಪ್ರಕಾರ ಅವನು ಅಸ್ವೀಕಾರ ಮಾಡಿದಾಗ ಮಿಥಿಲೇಶಕುಮಾರಿ ಸೀತೆಗೆ ಬಹಳ ಚಿಂತೆಯಾಗಿ, ತನ್ನ ಕಣ್ಣುಗಳಿಂದ ಬಿಸಿ-ಬಿಸಿಯಾದ ಕಣ್ಣೀರನ್ನು ಹರಿಸಿ, ನೆಲವನ್ನು ತೋಯಿಸಿಬಿಟ್ಟಳು.॥23॥
ಮೂಲಮ್ - 24
ಚಿಂತಯಂತೀಂ ತದಾ ತಾಂ ತು ನಿವರ್ತಯಿತುಮಾತ್ಮವಾನ್ ।
ಕ್ರೋಧಾವಿಷ್ಟಂ ತು ವೈದೇಹೀಂ ಕಾಕುತ್ಸ್ಥೋ ಬಹ್ವಸಾಂತ್ವಯತ್ ॥
ಅನುವಾದ
ಆಗ ಚಿಂತಿತ ಮತ್ತು ಕುಪಿತಳಾದ ವಿದೇಹನಂದಿನೀ ಜಾನಕಿಯನ್ನು ನೋಡಿ ಮನಸ್ಸನ್ನು ವಶದಲ್ಲಿರಿಸಿಕೊಂಡ ಶ್ರೀರಾಮಚಂದ್ರನು ಆಕೆಯ ವನವಾಸದ ವಿಚಾರದಿಂದ ನಿವೃತ್ತಗೊಳಿಸಲು ಬಗೆ-ಬಗೆಯ ಮಾತುಗಳನ್ನು ಹೇಳಿ ಸಮಜಾಯಿಸಿದನು.॥24॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥29॥