वाचनम्
ಭಾಗಸೂಚನಾ
ಶ್ರೀರಾಮನು ವನವಾಸದ ಕಷ್ಟಗಳನ್ನು ವರ್ಣಿಸಿ ಕಾಡಿಗೆ ಬಾರದಿರುವಂತೆ ಸೀತೆಗೆ ಸಲಹೆ ನೀಡಿದುದು
ಮೂಲಮ್ - 1
ಸ ಏವಂ ಬ್ರುವತೀಂ ಸೀತಾಂ ಧರ್ಮಜ್ಞಾಂ ಧರ್ಮವತ್ಸಲಃ ।
ನ ನೇತುಂ ಕುರುತೇ ಬುದ್ಧಿಂ ವನೇ ದುಃಖಾನಿ ಚಿಂತಯನ್ ॥
ಅನುವಾದ
ಧರ್ಮವನ್ನು ತಿಳಿದ ಸೀತೆಯು ಹೀಗೆ ಹೇಳಿದರೂ ಧರ್ಮವತ್ಸಲ ಶ್ರೀರಾಮನು ವನದಲ್ಲಿ ಆಗುವ ದುಃಖಗಳನ್ನು ನೆನೆದು ಅವಳನ್ನು ಜೊತೆಗೆ ಕರೆದುಕೊಂಡು ಹೋಗುವ ವಿಚಾರ ಮಾಡಲಿಲ್ಲ.॥1॥
ಮೂಲಮ್ - 2
ಸಾಂತ್ವಯಿತ್ವಾ ತತಸ್ತಾಂ ತು ಬಾಷ್ಪದೂಷಿತಲೋಚನಾಮ್ ।
ನಿವರ್ತನಾರ್ಥೇ ಧರ್ಮಾತ್ಮಾ ವಾಕ್ಯಮೇತದುವಾಚ ಹ ॥
ಅನುವಾದ
ಸೀತೆಯ ಕಣ್ಣುಗಳಲ್ಲಿ ನೀರು ತುಂಬಿತ್ತು. ಧರ್ಮಾತ್ಮಾ ಶ್ರೀರಾಮನು ಅವಳನ್ನು ವನವಾಸದ ವಿಚಾರದಿಂದ ನಿವೃತ್ತಗೊಳಿಸಲು ಸಾಂತ್ವನ ಪಡಿಸುತ್ತಾ ಇಂತೆಂದನು.॥2॥
ಮೂಲಮ್ - 3
ಸೀತೇ ಮಹಾಕುಲೀನಾಸಿ ಧರ್ಮೇ ಚ ನಿರತಾ ಸದಾ ।
ಇಹಾಚರಸ್ವ ಧರ್ಮಂ ತ್ವಂ ಯಥಾ ಮೇ ಮನಸಃ ಸುಖಮ್ ॥
ಅನುವಾದ
ಸೀತೇ! ನೀನು ಅತ್ಯಂತ ಉತ್ತಮ ಕುಲದಲ್ಲಿ ಹುಟ್ಟಿರುವೆ ಹಾಗೂ ಸದಾ ಧರ್ಮಾಚರಣೆಯಲ್ಲಿ ತೊಡಗಿರುವೆ. ಆದ್ದರಿಂದ ಇಲ್ಲೆ ಇದ್ದು ಧರ್ಮಪಾಲನೆ ಮಾಡು, ಅದರಿಂದ ನನ್ನ ಮನಸ್ಸಿಗೆ ಸಂತೋಷವಾಗುವುದು.॥3॥
ಮೂಲಮ್ - 4
ಸೀತೇ ಯಥಾ ತ್ವಾಂ ವಕ್ಷ್ಯಾಮಿ ತಥಾ ಕಾರ್ಯಂ ತ್ವಯಾಬಲೇ ।
ವನೇ ದೋಷಾ ಹಿ ಬಹವೋ ವಸತಸ್ತಾನ್ನಿಬೋಧ ಮೇ ॥
ಅನುವಾದ
ಸೀತೇ! ನಾನು ಹೇಳಿದಂತೆ ಮಾಡುವುದು ನಿನ್ನ ಕರ್ತವ್ಯವಾಗಿದೆ. ನೀನು ಅಬಲೆಯಾಗಿರುವೆ, ವನದಲ್ಲಿ ಬಹಳ ತೊಂದರೆಗಳಿವೆ. ಅವನ್ನು ನಿನಗೆ ಹೇಳುತ್ತೇನೆ ಕೇಳು.॥4॥
ಮೂಲಮ್ - 5
ಸೀತೇ ವಿಮುಚ್ಯತಾಮೇಷಾ ವನವಾಸಕೃತಾ ಮತಿಃ ।
ಬಹುದೋಷಂ ಹಿ ಕಾಂತಾರಂ ವನಮಿತ್ಯಭಿಧೀಯತೇ ॥
ಅನುವಾದ
ಸೀತೆ! ವನವಾಸಕ್ಕೆ ಹೋಗುವ ನಿನ್ನ ವಿಚಾರವನ್ನು ಬಿಡು. ವನವು ಅನೇಕ ಪ್ರಕಾರದ ದೋಷಗಳಿಂದ ವ್ಯಾಪ್ತವಾಗಿ ದುರ್ಗಮವಾಗಿದೆ.॥5॥
ಮೂಲಮ್ - 6
ಹಿತಬುದ್ಧ್ಯಾಖಲುವಚೋ ಮಯೈತದಭಿಧೀಯತೇ ।
ಸದಾ ಸುಖಂ ನ ಜಾನಾಮಿ ದುಃಖಮೇವ ಸದಾ ವನಮ್ ॥
ಅನುವಾದ
ನಿನ್ನ ಹಿತದೃಷ್ಟಿಯಿಂದಲೇ ನಾನು ಇದೆಲ್ಲವನ್ನು ಹೇಳುತ್ತಿದ್ದೇನೆ. ನನಗೆ ತಿಳಿದಂತೆ ಕಾಡಿನಲ್ಲಿ ಸದಾ ಸುಖ ಸಿಗುವುದಿಲ್ಲ. ಅಲ್ಲಿ ಸದಾ ದುಃಖವೇ ಸಿಗುತ್ತಾ ಇರುತ್ತದೆ.॥6॥
ಮೂಲಮ್ - 7
ಗಿರಿನಿರ್ಝರಸಂಭೂತಾ ಗಿರಿನಿರ್ದರಿವಾಸಿನಾಮ್ ।
ಸಿಂಹಾನಾಂ ನಿನದಾ ದುಃಖಾಃ ಶ್ರೋತುಂ ದುಃಖಮತೋವನಮ್ ॥
ಅನುವಾದ
ಪರ್ವತಗಳಿಂದ ಧುಮುಕುವ ಜಲಪಾತದ ಶಬ್ದವನ್ನು ಕೇಳಿ, ಪರ್ವತಗಳ ಗುಹೆಗಳಲ್ಲಿ ಇರುವ ಸಿಂಹಗಳು ಗರ್ಜಿಸತೊಡಗುತ್ತವೆ. ಅವುಗಳ ಗರ್ಜನೆ ಕೇಳಲು ಬಹಳ ದುಃಖಮಯವಾಗಿ ಇರುತ್ತದೆ. ಅದಕ್ಕಾಗಿ ವನವು ದುಃಖದಾಯಕವಾಗಿದೆ.॥7॥
ಮೂಲಮ್ - 8
ಕ್ರೀಡಮಾನಾಶ್ಚ ವಿಸ್ರಬ್ಧಾ ಮತ್ತಾಃ ಶೂನ್ಯೇ ತಥಾ ಮೃಗಾಃ ।
ದೃಷ್ಟ್ವಾ ಸಮಭಿವರ್ತಂತೇ ಸೀತೇ ದುಃಖಮತೋ ವನಮ್ ॥
ಅನುವಾದ
ಸೀತೇ! ನಿರ್ಜನ ಕಾಡಿನಲ್ಲಿ ನಿರ್ಭಯವಾಗಿ ಕ್ರೀಡಿಸುವ ಕೊಬ್ಬಿದ ಕಾಡುಪಶುಗಳು ಮನುಷ್ಯರನ್ನು ನೋಡುತ್ತಲೇ ಅವರ ಮೇಲೆ ಆಕ್ರಮಣ ಮಾಡುತ್ತವೆ. ಆದ್ದರಿಂದ ವನವು ದುಃಖದಿಂದ ತುಂಬಿದೆ.॥8॥
ಮೂಲಮ್ - 9
ಸಗ್ರಾಹಾಃ ಸರಿತಶ್ಚೈವ ಪಂಕವತ್ಯಸ್ತು ದುಸ್ತರಾಃ ।
ಮತ್ತೈರಪಿ ಗಜೈರ್ನಿತ್ಯಮತೋ ದುಃಖತರಂ ವನಮ್ ॥
ಅನುವಾದ
ಕಾಡಿನಲ್ಲಿರುವ ನದಿಗಳಲ್ಲಿ ಭಯಂಕರ ಮೊಸಳೆಗಳು ಇರುತ್ತದೆ. ಅವುಗಳಲ್ಲಿ ಕೆಸರು ಹೆಚ್ಚಾಗಿರುವುದರಿಂದ ಅವುಗಳನ್ನು ದಾಟುವುದು ಅತ್ಯಂತ ಕಠಿಣವಾಗಿದೆ. ಇದಲ್ಲದೆ ಕಾಡಿನಲ್ಲಿ ಮತ್ತ ಗಜಗಳು ತಿರುಗಾಡುತ್ತಾ ಇರುತ್ತವೆ. ಇವೆಲ್ಲ ಕಾರಣಗಳಿಂದ ವನವು ಬಹಳ ದುಃಖದಾಯಕವಾಗಿದೆ.॥9॥
ಮೂಲಮ್ - 10
ಲತಾಕಂಟಕಸಂಕೀರ್ಣಾಃ ಕೃಕವಾಕೂಪನಾದಿತಾಃ ।
ನಿರಪಾಶ್ಚ ಸುದುಃಖಾಶ್ಚ ಮಾರ್ಗಾ ದುಃಖಮತೋವನಮ್ ॥
ಅನುವಾದ
ಕಾಡಿನ ದಾರಿಗಳು ಬಳ್ಳಿಗಳಿಂದ, ಮುಳ್ಳುಗಳಿಂದ ತುಂಬಿರುತ್ತವೆ. ಅಲ್ಲಿ ಕಾಡುಕೋಳಿಗಳು ಕೂಗುತ್ತಾ ಇರುತ್ತವೆ. ಆ ದಾರಿಗಳಲ್ಲಿ ನಡೆಯಲು ಬಹಳ ಕಷ್ಟವಾಗುತ್ತದೆ. ಕೆಲವೊಮ್ಮೆ ಹತ್ತಿರದಲ್ಲಿ ನೀರೂ ಸಿಗುವುದಿಲ್ಲ. ಇದರಿಂದ ಕಾಡಿನಲ್ಲಿ ದುಃಖವೇ ದುಃಖ ಇರುತ್ತದೆ.॥10॥
ಮೂಲಮ್ - 11
ಸುಪ್ಯತೇ ಪರ್ಣಶಯ್ಯಾಸುಸ್ವಯಂಭಗ್ನಾಸು ಭೂತಲೇ ।
ರಾತ್ರಿಷು ಶ್ರಮಖಿನ್ನೇನ ತಸ್ಮಾದ್ದುಃಖಮತೋ ವನಮ್ ॥
ಅನುವಾದ
ಇಡೀ ದಿನದ ಬಳಲಿಕೆಯಿಂದ ಮನುಷ್ಯನು ರಾತ್ರಿಯಲ್ಲಿ ತಾನಾಗಿ ಬಿದ್ದ ತರಗೆಲೆಯ ಶಯ್ಯೆಯಲ್ಲಿ ಮಲಗಬೇಕಾಗುತ್ತದೆ. ಆದ್ದರಿಂದ ವನವು ದುಃಖದಿಂದ ತುಂಬಿದೆ.॥11॥
ಮೂಲಮ್ - 12
ಅಹೋರಾತ್ರಂ ಚ ಸಂತೋಷಃ ಕರ್ತವ್ಯೋನಿಯತಾತ್ಮನಾ ।
ಫಲೈರ್ವೃಕ್ಷಾವಪತಿತೈಃ ಸೀತೇ ದುಃಖಮತೋ ವನಮ್ ॥
ಅನುವಾದ
ಸೀತೇ! ಅಲ್ಲಿ ಮನಸ್ಸನ್ನು ವಶಪಡಿಸಿಕೊಂಡು ಮರಗಳಿಂದ ತಾನಾಗಿ ಬಿದ್ದ ಫಲಗಳ ಆಹಾರದಲ್ಲೇ ಹಗಲು ರಾತ್ರಿ ಸಂತೋಷಪಡಬೇಕು. ಆದ್ದರಿಂದ ಕಾಡು ದುಃಖಕೊಡುವಂತಹುದು.॥12॥
ಮೂಲಮ್ - 13
ಉಪವಾಸಶ್ಚ ಕರ್ತವ್ಯೋ ಯಥಾಪ್ರಾಣೇನ ಮೈಥಿಲಿ ।
ಜಟಾಭಾರಶ್ಚ ಕರ್ತವ್ಯೋ ವಲ್ಕಲಾಂಬರಧಾರಣಮ್ ॥
ಅನುವಾದ
ಮಿಥಿಲೇಶಕುಮಾರೀ! ತನ್ನ ಶಕ್ತಿಗನುಸಾರ ಉಪವಾಸ ಮಾಡುವುದು, ತಲೆಯಲ್ಲಿ ಜಟೆ ಧರಿಸುವುದು, ವಲ್ಕಲ, ನಾರುಬಟ್ಟೆಯನ್ನು ಉಡುವುದು ಅಲ್ಲಿಯ ಜೀವನ ಶೈಲಿಯಾಗಿದೆ.॥13॥
ಮೂಲಮ್ - 14
ದೇವತಾನಾಂ ಪಿತೄಣಾಂ ಚ ಕರ್ತವ್ಯಂ ವಿಧಿಪೂರ್ವಕಮ್ ।
ಪ್ರಾಪ್ತಾನಾಮತಿಥೀನಾಂ ಚ ನಿತ್ಯಶಃ ಪ್ರತಿಪೂಜನಮ್ ॥
ಅನುವಾದ
ಪ್ರತಿದಿನ ಶಾಸ್ತ್ರೋಕ್ತವಿಧಿಗನುಸಾರ ದೇವತೆಗಳ, ಪಿತೃಗಳ ಹಾಗೂ ಬಂದಿರುವ ಅತಿಥಿಗಳ ಪೂಜೆ ಮಾಡುವುದು - ಇದೇ ವನವಾಸಿಯ ಪ್ರಧಾನ ಕರ್ತವ್ಯವಾಗಿದೆ.॥14॥
ಮೂಲಮ್ - 15
ಕಾರ್ಯಸ್ತ್ರಿರಭಿಷೇಕಶ್ಚ ಕಾಲೇ ಕಾಲೇ ಚ ನಿತ್ಯಶಃ ।
ಚರತಾಂ ನಿಯಮೇನೈವ ತಸ್ಮಾದ್ದುಃಖತರಂ ವನಮ್ ॥
ಅನುವಾದ
ವನವಾಸಿಗೆ ದಿನನಿತ್ಯ ನಿಯಮ ಪೂರ್ವಕ ಮೂರು ಹೊತ್ತಿನಲ್ಲಿಯೂ ಸ್ನಾನ ಮಾಡಬೇಕಾಗುತ್ತದೆ. ಇದಕ್ಕಾಗಿ ಕಾಡು ಬಹಳ ಕಷ್ಟ ಕೊಡುವುದಾಗಿದೆ.॥15॥
ಮೂಲಮ್ - 16
ಉಪಹಾರಶ್ಚ ಕರ್ತವ್ಯಃ ಕುಸುಮೈಃ ಸ್ವಯಮಾಹೃತೈಃ ।
ಆರ್ಷೇಣ ವಿಧಿನಾ ವೇದ್ಯಾಂ ಸೀತೇ ದುಃಖಮತೋ ವನಮ್ ॥
ಅನುವಾದ
ಸೀತೆ! ಅಲ್ಲಿ ಸ್ವತಃ ಕಿತ್ತು-ಹೆಕ್ಕಿ ತಂದ ಹೂವುಗಳಿಂದ ವೇದೋಕ್ತ ವಿಧಿಯಿಂದ ವೇದಿಯ ಮೇಲೆ ದೇವತೆಗಳನ್ನು ಪೂಜಿಸಬೇಕಾಗುತ್ತದೆ. ಅದಕ್ಕಾಗಿ ವನವನ್ನು ಕಷ್ಟಪ್ರದವೆಂದು ಹೇಳಲಾಗಿದೆ.॥16॥
ಮೂಲಮ್ - 17
ಯಥಾಲಬ್ಧೇನ ಕರ್ತವ್ಯಃ ಸಂತೋಷಸ್ತೇನ ಮೈಥಿಲಿ ।
ಯತಾಹಾರೈರ್ವನಚರೈಃ ಸೀತೇ ದುಃಖಮತೋ ವನಮ್ ॥
ಅನುವಾದ
ಮಿಥಿಲೇಶಕುಮಾರೀ ಜಾನಕೀ! ವನವಾಸಿಗಳಿಗೆ ಯಾವಾಗ ಎಂತಹ ಆಹಾರ ಸಿಗುವುದೋ ಅದರಲ್ಲೇ ಸಂತೋಷಪಡ ಬೇಕಾಗುತ್ತದೆ. ಆದ್ದರಿಂದ ವನವು ದುಃಖರೂಪವೇ ಆಗಿದೆ.॥17॥
ಮೂಲಮ್ - 18
ಅತೀವ ವಾತಾಸ್ತಿಮಿರಂ ಬುಭುಕ್ಷಾ ಚಾತ್ರಿ ನಿತ್ಯಶಃ ।
ಭಯಾನಿ ಚ ಮಹಾಂತ್ಯತ್ರ ತತೋ ದುಃಖತರಂ ವನಮ್ ॥
ಅನುವಾದ
ಕಾಡಿನಲ್ಲಿ ಪ್ರಚಂಡ ಬಿರುಗಾಳಿ, ಘೋರ ಅಂಧಕಾರ, ಪ್ರತಿದಿನ ಹಸಿವಿನ ಕಷ್ಟ ಹಾಗೂ ಇನ್ನೂ ದೊಡ್ಡ-ದೊಡ್ಡ ಭಯಗಳು ಪ್ರಾಪ್ತವಾಗುತ್ತವೆ. ಆದ್ದರಿಂದ ವನವು ಅತ್ಯಂತ ಕಷ್ಟಪ್ರದವಾಗಿದೆ.॥18॥
ಮೂಲಮ್ - 19
ಸರೀಸೃಪಾಶ್ಚ ಬಹವೋ ಬಹುರೂಪಾಶ್ಚ ಭಾಮಿನಿ ।
ಚರಂತಿ ಪಥಿ ತೇದರ್ಪಾತ್ತತೋ ದುಃಖತರಂ ವನಮ್ ॥
ಅನುವಾದ
ಭಾಮಿನಿ! ಅಲ್ಲಿ ಅನೇಕ ಪ್ರಕಾರದ ಬಹಳ ಕಾಡು ಸರ್ಪಗಳು ದರ್ಪದಿಂದ ದಾರಿಯಲ್ಲಿ ಸಂಚರಿಸುತ್ತಾ ಇರುತ್ತವೆ. ಆದ್ದರಿಂದ ಕಾಡು ಬಹಳ ಕಷ್ಟದಾಯಕವಾಗಿದೆ.॥19॥
ಮೂಲಮ್ - 20
ನದೀನಿಲಯನಾಃ ಸರ್ಪಾ ನದೀಕುಟಿಲಗಾಮಿನಃ ।
ತಿಷ್ಠಂತ್ಯಾವೃತ್ಯ ಪಂಥಾನಮತೋ ದುಃಖತರಂ ವನಮ್ ॥
ಅನುವಾದ
ನದಿಗಳಲ್ಲಿ ವಾಸಿಸುವ ಸರ್ಪಗಳು, ನದಿಗಳಂತೆ ವಕ್ರಗತಿಯಿಂದ ಓಡಾಡುವ ಬಹಳ ಸಂಖ್ಯೆಯಲ್ಲಿ ಹಾವುಗಳು ಕಾಡಿನ ದಾರಿಯನ್ನು ಅಡ್ಡಗಟ್ಟಿ ಬಿದ್ದಿರುತ್ತವೆ. ಇದಕ್ಕಾಗಿ ಕಷ್ಟದಾಯಕವಾಗಿದೆ.॥20॥
ಮೂಲಮ್ - 21
ಪತಂಗಾ ವೃಶ್ಚಿಕಾಃ ಕೀಟಾ ದಂಶಾಶ್ಚ ಮಶಕೈಃ ಸಹ ।
ಬಾಧಂತೇ ನಿತ್ಯಮಬಲೇ ಸರ್ವಂ ದುಃಖಮತೋವನಮ್ ॥
ಅನುವಾದ
ಅಬಲೆ! ಮಿಡತೆಗಳು, ಚೇಳುಗಳು, ಕೀಟಗಳು, ಸೊಳ್ಳೆಗಳು, ನೊಣಗಳು ಅಲ್ಲಿ ಸದಾ ಕಷ್ಟ ಕೊಡುತ್ತಾ ಇರುತ್ತವೆ; ಆದ್ದರಿಂದ ಇಡೀ ವನವು ದುಃಖರೂಪವೇ ಆಗಿದೆ.॥21॥
ಮೂಲಮ್ - 22
ಧ್ರುಮಾಃ ಕಂಟಕಿನಶ್ಚೈವ ಕುಶಾಃ ಕಾಶಾಶ್ಚ ಭಾಮಿನಿ ।
ವನೇ ವ್ಯಾಕುಲ ಶಾಖಾಗ್ರಾಸ್ತೇನ ದುಃಖಮತೋ ವನಮ್ ॥
ಅನುವಾದ
ಭಾಮಿನಿ! ಕಾಡಿನಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಕೊಂಬೆಗಳುಳ್ಳ ಮುಳ್ಳಿನ ಮರಗಳು, ಕುಶ-ಕಾಶ ಮುಂತಾದ ಹಲ್ಲುಗಳು ಎಲ್ಲೆಲ್ಲೂ ಹರಡಿಕೊಂಡಿವೆ. ಅದಕ್ಕಾಗಿ ಕಾಡು ವಿಶೇಷ ಕಷ್ಟದಾಯಕವಾಗಿದೆ.॥22॥
ಮೂಲಮ್ - 23
ಕಾಯಕ್ಲೇಶಾಶ್ಚ ಬಹವೋ ಭಯಾನಿ ವಿವಿಧಾನಿ ಚ ।
ಅರಣ್ಯವಾಸೇ ವಸತೋ ದುಃಖಮೇವ ಸದಾ ವನಮ್ ॥
ಅನುವಾದ
ವನದಲ್ಲಿ ವಾಸಿಸುವ ಮನುಷ್ಯನು ಬಹಳಷ್ಟು ಶಾರೀರಿಕ ಕ್ಲೇಶಗಳನ್ನು ಮತ್ತು ನಾನಾ ಪ್ರಕಾರದ ಭಯಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ವನವು ಸದಾ ದುಃಖರೂಪವೇ ಆಗಿದೆ.॥23॥
ಮೂಲಮ್ - 24
ಕ್ರೋಧಲೋಭೌ ವಿಮೋಕ್ತವ್ಯೌ ಕರ್ತವ್ಯಾ ತಪಸೇ ಮತಿಃ ।
ನ ಭೇತವ್ಯಂ ಚ ಭೇತವ್ಯೇ ದುಃಖಂ ನಿತ್ಯಮತೋ ವನಮ್ ॥
ಅನುವಾದ
ಅಲ್ಲಿ ಕ್ರೋಧ ಮತ್ತು ಲೋಭವನ್ನು ತ್ಯಜಿಸಬೇಕಾಗುತ್ತದೆ, ತಪಸ್ಸಿನಲ್ಲೇ ಮನಸ್ಸನ್ನು ತೊಡಗಿಸಬೇಕಾಗುತ್ತದೆ. ಭಯವಿರುವ ಸ್ಥಾನದಲ್ಲಿಯೂ ನಿರ್ಭಯನಾಗಿ ಇರಬೇಕಾಗುತ್ತದೆ. ಆದ್ದರಿಂದ ಅಲ್ಲಿ ದುಃಖವೇ ದುಃಖ ಇದೆ.॥24॥
ಮೂಲಮ್ - 25
ತದಲಂ ತೇ ವನಂ ಗತ್ವಾ ಕ್ಷೇಮಂ ನಹಿ ವನಂ ತವ ।
ವಿಮೃಶನ್ನಿ ಹ ಪಶ್ಯಾಮಿ ಬಹುದೋಷಕರಂ ವನಮ್ ॥
ಅನುವಾದ
ಅದಕ್ಕಾಗಿ ನೀನು ವನಕ್ಕೆ ಬರುವುದು ಸರಿಯಲ್ಲ. ಅಲ್ಲಿಗೆ ಹೋಗಿ ನೀನು ಕ್ಷೇಮದಿಂದ ಇರಲಾರೆ. ನೀನು ವನದಲ್ಲಿ ಇರುವುದು ಅನೇಕ ದೋಷಗಳ ಉತ್ಪಾದಕ ಬಹಳ ಕಷ್ಟದಾಯಕವೆಂದು ನಾನು ಬಹಳ ವಿಚಾರ ಮಾಡಿ ನೋಡಿದೆ.॥25॥
ಮೂಲಮ್ - 26
ವನಂ ತು ನೇತುಂ ನ ಕೃತಾ ಮತಿರ್ಯದಾ
ಬಭೂವ ರಾಮೇಣ ತದಾ ಮಹಾತ್ಮನಾ ।
ನ ತಸ್ಯ ಸೀತಾ ವಚನಂ ಚಕಾರ ತಂ
ತತೋಽಬ್ರವೀದ್ ರಾಮಮಿದಂ ಸುದುಃಖಿತಾ ॥
ಅನುವಾದ
ಮಹಾತ್ಮಾ ಶ್ರೀರಾಮನು ಆಗ ಸೀತೆಯನ್ನು ಕಾಡಿಗೆ ಕರೆದುಕೊಂಡು ಹೋಗಲು ವಿಚಾರ ಮಾಡದಿದ್ದಾಗ ಸೀತೆಯೂ ಅವನ ಮಾತನ್ನು ಒಪ್ಪಲಿಲ್ಲ. ಅವಳು ಅತ್ಯಂತ ದುಃಖಿತಳಾಗಿ ಶ್ರೀರಾಮನಲ್ಲಿ ಹೀಗೆ ಹೇಳಿದಳು.॥26॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತೆಂಟನೆಯ ಸರ್ಗ ಪೂರ್ಣವಾಯಿತು ॥28॥