०२७ सीतायाः वनगमननिश्चयः

वाचनम्
ಭಾಗಸೂಚನಾ

ಸೀತೆಯು ರಾಮನಲ್ಲಿ ತನ್ನನ್ನು ನಿಮ್ಮೊಂದಿಗೆ ಕರೆದೊಯ್ಯುವಂತೆ ಪ್ರಾರ್ಥಿಸಿದುದು

ಮೂಲಮ್ - 1

ಏವಮುಕ್ತಾ ತು ವೈದೇಹೀ ಪ್ರಿಯಾರ್ಹಾ ಪ್ರಿಯವಾದಿನೀ ।
ಪ್ರಣಯಾದೇವ ಸಂಕ್ರುದ್ಧಾಭರ್ತಾರಮಿದಮಬ್ರವೀತ್ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ವಿದೇಹಕುಮಾರಿ, ಎಲ್ಲ ರೀತಿಯಿಂದಲೂ ತನ್ನ ಪತಿಯ ಪ್ರೇಮವನ್ನು ಪಡೆಯಲು ಯೋಗ್ಯಳಾದ ಸೀತೆಯು ಪ್ರಣಯಕೋಪದಿಂದ ಈ ಪ್ರಕಾರ ನುಡಿದಳು.॥1॥

ಮೂಲಮ್ - 2

ಕಿಮಿದಂ ಭಾಷಸೇ ರಾಮ ವಾಕ್ಯಂ ಲಘುತಯಾ ಧ್ರುವಮ್ ।
ತ್ವಯಾ ಯದಪಹಾಸ್ಯಂ ಮೇ ಶ್ರುತ್ವಾ ನರವರೋತ್ತಮ ॥

ಅನುವಾದ

ನರಶ್ರೇಷ್ಠ ಶ್ರೀರಾಮಾ! ನೀವು ನನ್ನನ್ನು ಇಷ್ಟೊಂದು ಹಗುರವಾಗಿ ತಿಳಿದು ಏನು ಮಾತನಾಡುತ್ತಿರುವಿರಿ? ನಿಮ್ಮ ಈ ಮಾತನ್ನು ಕೇಳಿ ನನಗೆ ನಗು ಬರುತ್ತಾ ಇದೆ.॥2॥

ಮೂಲಮ್ - 3

ವೀರಾಣಾಂ ರಾಜಪುತ್ರಾಣಾಂ ಶಸ್ತ್ರಾಸ್ತ್ರವಿದುಷಾಂ ನೃಪ ।
ಅನರ್ಹಮಯಶಸ್ಯಂ ಚ ನ ಶ್ರೋತವ್ಯಂ ತ್ವಯೋದಿತಮ್ ॥

ಅನುವಾದ

ನರೇಶ್ವರ! ನೀವು ಹೇಳಿದುದು ಅಸ್ತ್ರ-ಶಸ್ತ್ರಗಳನ್ನು ತಿಳಿದ ವೀರ ರಾಜಕುಮಾರರಿಗೆ ಯೋಗ್ಯವಲ್ಲ. ಅದು ಅನರ್ಹ ವಾದುದರಿಂದ ಕೇಳಲು ಯೋಗ್ಯವಾದುದಲ್ಲ.॥3॥

ಮೂಲಮ್ - 4

ಆರ್ಯಪುತ್ರ ಪಿತಾ ಮಾತಾ ಭ್ರಾತಾ ಪುತ್ರಸ್ತಥಾ ಸ್ನುಷಾ ।
ಸ್ವಾನಿ ಪುಣ್ಯಾನಿ ಭುಂಜಾನಾಃ ಸ್ವಂ ಸ್ವಂ ಭಾಗ್ಯಮುಪಾಸತೇ ॥

ಅನುವಾದ

ಆರ್ಯಪುತ್ರ! ತಂದೆ, ತಾಯಿ, ಸಹೋದರರು, ಪುತ್ರರು, ಸೊಸೆಯರು ಇವರೆಲ್ಲರೂ ಪುಣ್ಯದ ಕರ್ಮಗಳನ್ನು ಅನುಭವಿಸುತ್ತಾ ಶುಭಾಶುಭ ಕರ್ಮಕ್ಕನುಸಾರ ಜೀವನ ನಿರ್ವಾಹ ಮಾಡುತ್ತಾರೆ.॥4॥

ಮೂಲಮ್ - 5

ಭರ್ತುರ್ಭಾಗ್ಯಂ ತು ನಾರ್ಯೆಕಾ ಪ್ರಾಪ್ನೋತಿ ಪುರುಷರ್ಷಭ ।
ಅತಶ್ಚೈವಾಹಮಾದಿಷ್ಟಾ ವನೇ ವಸ್ತವ್ಯಮಿತ್ಯಪಿ ॥

ಅನುವಾದ

ಪುರುಷಪ್ರವರ! ಕೇವಲ ಪತ್ನಿಯೇ ತನ್ನ ಪತಿಯ ಭಾಗ್ಯವನ್ನು ಅನುಸರಿಸುವಳು. ಆದ್ದರಿಂದ ನಿಮ್ಮೊಂದಿಗೆ ನನಗೂ ಕೂಡ ವನವಾಸದ ಆಜ್ಞೆ ದೊರೆತಂತಾಯಿತು.॥5॥

ಮೂಲಮ್ - 6

ನ ಪಿತಾ ನಾತ್ಮಜೋ ವಾತ್ಮಾ ನ ಮಾತಾ ನ ಸಖೀಜನಃ ।
ಇಹ ಪ್ರೇತ್ಯ ಚ ನಾರೀಣಾಂ ಪತಿರೇಕೋ ಗತಿಃ ಸದಾ ॥

ಅನುವಾದ

ನಾರಿಯರಿಗೆ ಈ ಲೋಕ ಮತ್ತು ಪರಲೋಕದಲ್ಲಿ ಏಕಮಾತ್ರ ಪತಿಯೇ ಸದಾ ಆಶ್ರಯ ಕೊಡುವವನು. ಪಿತಾ, ಪುತ್ರ, ಮಾತೆ, ಸಖಿಯರು ಹಾಗೂ ತನ್ನ ಈ ಶರೀರವೂ ಕೂಡ ನಿಜ ಸಹಾಯಕವಲ್ಲ.॥6॥

ಮೂಲಮ್ - 7

ಯದಿ ತ್ವಂ ಪ್ರಸ್ಥಿತೋ ದುರ್ಗಂ ವನಮದ್ಯೈವ ರಾಘವ ।
ಅಗ್ರತಸ್ತೇ ಗಮಿಷ್ಯಾಮಿ ಮೃದ್ನಂತೀ ಕುಶಕಂಟಕಾನ್ ॥

ಅನುವಾದ

ರಘುನಂದನ! ನೀವು ಇಂದೇ ದುರ್ಗಮ ವನಕ್ಕೆ ಹೋಗುವುದಾದರೆ ನಾನು ದಾರಿಯ ಹುಲ್ಲು-ಮುಳ್ಳುಗಳನ್ನು ತುಳಿಯುತ್ತಾ ನಿಮ್ಮ ಮುಂದೆ-ಮುಂದೆ ನಡೆಯುತ್ತಾ ಹೋಗುವೆನು.॥7॥

ಮೂಲಮ್ - 8

ಈರ್ಷ್ಯಾ ರೋಷಂಬಹಿಷ್ಕೃತ್ಯ ಭುಕ್ತಶೇಷಮಿವೋದಕಮ್ ।
ನಯ ಮಾಂ ವೀರ ವಿಸ್ರಬ್ಧಃ ಪಾಪಂ ಮಯಿ ನ ವಿದ್ಯತೇ ॥

ಅನುವಾದ

ಆದ್ದರಿಂದ ವೀರ! ಈರ್ಷಾ1 ಮತ್ತು ರೋಷ2ವನ್ನು ದೂರಗೊಳಿಸಿ ಕುಡಿದು ಉಳಿದ ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವಂತೆ3 ನನ್ನನ್ನು ನಿಃಶಂಕರಾಗಿ ಜೊತೆಗೆ ಕರೆದುಕೊಂಡು ಹೋಗಿರಿ. ನೀವು ನನ್ನನ್ನು ಇಲ್ಲಿ ತ್ಯಜಿಸಿ ಹೋಗುವಂತಹ ಯಾವುದೇ ಪಾಪ ಅಥವಾ ಅಪರಾಧ ನನ್ನಲ್ಲಿ ಇಲ್ಲ.॥8॥

ಟಿಪ್ಪನೀ

1 ಸ್ತ್ರೀಯಾಗಿದ್ದರೂ ಇವಳು ಕಾಡಿಗೆ ಹೋಗುವ ಸಾಹಸ ಮಾಡುತ್ತಿರುವಳಲ್ಲ? ಈ ವಿಚಾರದಿಂದ ಈರ್ಷ್ಯೆಯಾಗುತ್ತಿದೆ.
2 ಈಕೆ ನನ್ನ ಮಾತನ್ನು ಮನ್ನಿಸುತ್ತಿಲ್ಲವಲ್ಲ ಎಂದು ಯೋಚಿಸಿ, ರೋಷ ಇವೆರಡರ ತ್ಯಾಗವು ಅಪೇಕ್ಷಿತವಾಗಿದೆ.
3. ನೀರಿಲ್ಲದ ಒಡೆದ ಪಾತ್ರೆಯನ್ನು ದಾರಿಹೋಕನು ತಾನು ಕುಡಿದ ನೀರನ್ನು ಜೊತೆಯಲ್ಲೆತ್ತಿಕೊಂಡು ಹೋಗುವಂತೆ, ನೀವೂ ನನ್ನನ್ನು ಜೊತೆಗೆ ಕರೆದುಕೊಂಡು ಹೋಗಬೇಕೆಂಬುದು ಸೀತೆಯ ಒತ್ತಾಯ.

ಮೂಲಮ್ - 9

ಪ್ರಾಸಾದಾಗ್ರೇ ವಿಮಾನೈರ್ವಾವೈಹಾಯಸಗತೇನ ವಾ ।
ಸರ್ವಾವಸ್ಥಾಗತಾ ಭರ್ತುಃ ಪಾದಚ್ಛಾಯಾ ವಿಶಿಷ್ಯತೇ ॥

ಅನುವಾದ

ಎತ್ತರವಾದ ಭವನದಲ್ಲಿ ವಾಸಿಸುವುದು, ವಿಮಾನಗಳನ್ನು ಹತ್ತಿ ತಿರುಗುವುದು, ಅಥವಾ ಅಣಿಮಾದಿ ಸಿದ್ಧಿಗಳಿಂದ ಆಕಾಶದಲ್ಲಿ ಸಂಚರಿಸುವುದು ಇವೆಲ್ಲಕ್ಕಿಂತ ಮಹತ್ವ ಸ್ತ್ರೀಯಳಿಗೆ ಎಲ್ಲ ಸ್ಥಿತಿಗಳಲ್ಲಿ ಪತಿಯ ಚರಣಛಾಯೆಯಲ್ಲಿ ವಾಸಿಸುವುದೇ ಆಗಿದೆ.॥9॥

ಮೂಲಮ್ - 10

ಅನುಶಿಷ್ಟಾಸ್ಮಿ ಮಾತ್ರಾ ಚ ಪಿತ್ರಾ ಚ ವಿವಿಧಾಶ್ರಯಮ್ ।
ನಾಸ್ಮಿ ಸಂಪ್ರತಿ ವಕ್ತವ್ಯಾ ವರ್ತಿತವ್ಯಂ ಯಥಾ ಮಯಾ ॥

ಅನುವಾದ

ಯಾರೊಂದಿಗೆ ಹೇಗೆ ವರ್ತಿಸಬೇಕೆಂಬ ವಿಷಯದಲ್ಲಿ ನನ್ನ ತಾಯಿ ಮತ್ತು ತಂದೆಯವರು ನನಗೆ ಅನೇಕ ಪ್ರಕಾರದಿಂದ ಶಿಕ್ಷಣ ಕೊಟ್ಟಿರುವರು. ಈಗ ಈ ವಿಷಯವಾಗಿ ಯಾವುದೇ ಉಪದೇಶದ ಆವಶ್ಯಕತೆ ಇಲ್ಲ.॥10॥

ಮೂಲಮ್ - 11

ಅಹಂ ದುರ್ಗಂ ಗಮಿಷ್ಯಾಮಿ ವನಂ ಪುರುಷವರ್ಜಿತಮ್ ।
ನಾನಾಮೃಗಗಣಾಕೀರ್ಣಂ ಶಾರ್ದೂಲಗಣಸೇವಿತಮ್ ॥

ಅನುವಾದ

ಆದ್ದರಿಂದ ನಾನಾ ಪ್ರಕಾರದ ಕಾಡುಪ್ರಾಣಿಗಳಿಂದ ತುಂಬಿದ, ಸಿಂಹ, ಹುಲಿ ಮೊದಲಾದ ಹಿಂಸ್ರ ಪಶುಗಳಿರುವ ಆ ನಿರ್ಜನ, ದುರ್ಗಮ ವನದಲ್ಲಿ ಅವಶ್ಯವಾಗಿ ನಿಮ್ಮೊಂದಿಗೆ ನಡೆಯುವೆನು.॥11॥

ಮೂಲಮ್ - 12

ಸುಖಂ ವನೇ ನಿವತ್ಸ್ಯಾಮಿ ಯಥೈವ ಭವನೇ ಪಿತುಃ ।
ಅಚಿಂತ್ಯಯಂತೀ ತ್ರೀನ್ಲ್ಲೋಕಾಂಶ್ಚಿಂತಯಂತೀ ಪತಿವ್ರತಮ್ ॥

ಅನುವಾದ

ನಾನು ತಂದೆಯ ಮನೆಯಲ್ಲಿ ಇರುವಂತೆಯೇ ವನದಲ್ಲಿಯೂ ಸುಖವಾಗಿ ವಾಸಿಸುವೆನು. ಅಲ್ಲಿ ಮೂರು ಲೋಕದ ಐಶ್ವರ್ಯವನ್ನು ತುಚ್ಛವೆಂದು ತಿಳಿಯುತ್ತಾ ನಾನು ಸದಾ ಪತಿವ್ರತಾಧರ್ಮವನ್ನು ಚಿಂತಿಸುತ್ತಾ ನಿಮ್ಮ ಸೇವೆಯಲ್ಲಿ ತೊಡಗಿರುವೆನು.॥12॥

ಮೂಲಮ್ - 13

ಶುಶ್ರೂಷಮಾಣಾ ತೇ ನಿತ್ಯಂ ನಿಯತಾ ಬ್ರಹ್ಮಚಾರಿಣೀ ।
ಸಹ ರಂಸ್ಯೇ ತ್ವಯಾ ವೀರ ವನೇಷು ಮಧುಗಂಧೀಷು0 ॥

ಅನುವಾದ

ವೀರನೇ! ನಿಯಮಪೂರ್ವಕ ಇದ್ದು ಬ್ರಹ್ಮಚರ್ಯ ವ್ರತವನ್ನು ಪಾಲಿಸುವೆನು. ಸದಾಕಾಲ ನಿಮ್ಮ ಸೇವೆಯಲ್ಲಿ ತತ್ಪರಳಾಗಿದ್ದು, ನಿಮ್ಮೊಂದಿಗೆ ಮಧುರ ಸುಗಂಧ ತುಂಬಿದ ವನಗಳಲ್ಲಿ ಸಂಚರಿಸುವೆನು.॥13॥

ಮೂಲಮ್ - 14

ತ್ವಂ ಹಿ ಕರ್ತುಂ ವನೇ ಶಕ್ತೋ ರಾಮ ಸಂಪರಿಪಾಲನಮ್ ।
ಅನ್ಯಸ್ಯಾಪಿ ಜನಸ್ಯೇಹ ಕಿಂ ಪುನರ್ಮಮ ಮಾನದ ॥

ಅನುವಾದ

ಬೇರೆಯವರಿಗೆ ಮಾನವನ್ನು ಕೊಡುವ ಶ್ರೀರಾಮಾ! ನೀವಾದರೋ ಕಾಡಿನಲ್ಲಿ ಇರುತ್ತಾ ಇತರರನ್ನೂ ರಕ್ಷಿಸಬಲ್ಲಿರಿ, ಹಾಗಿರುವಾಗ ನನ್ನನ್ನು ರಕ್ಷಿಸುವುದು ಯಾವ ದೊಡ್ಡ ಮಾತು.॥14॥

ಮೂಲಮ್ - 15

ಸಾಹಂ ತ್ವಯಾ ಗಮಿಷ್ಯಾಮಿ ವನಮದ್ಯನ ಸಂಶಯಃ ।
ನಾಹಂ ಶಕ್ಯಾ ಮಹಾಭಾಗ ನಿವರ್ತಯಿತುಮುದ್ಯತಾ ॥

ಅನುವಾದ

ಮಹಾಭಾಗ! ಆದ್ದರಿಂದ ನಾನು ನಿಮ್ಮೊಂದಿಗೆ ಅವಶ್ಯವಾಗಿ ವನಕ್ಕೆ ಬರುವೆನು. ಇದರಲ್ಲಿ ಸಂಶಯವೇ ಇಲ್ಲ. ನಾನು ಎಲ್ಲ ಪರಿಸ್ಥಿತಿಗಳಿಗೂ ಹೊಂದಿಕೊಳ್ಳಲು ಸಿದ್ಧಳಾಗಿದ್ದೇನೆ. ನನ್ನನ್ನು ಯಾವ ರೀತಿಯಿಂದಲೂ ತಡೆಯಬಾರದು.॥15॥

ಮೂಲಮ್ - 16

ಫಲಮೂಲಾಶನಾ ನಿತ್ಯಂಭವಿಷ್ಯಾಮಿ ನ ಸಂಶಯಃ ।
ನ ತೇ ದುಃಖಂ ಕರಿಷ್ಯಾಮಿ ನಿವಸಂತೀ ತ್ವಯಾ ಸದಾ ॥

ಅನುವಾದ

ಅಲ್ಲಿಗೆ ಬಂದು ನಿಮಗೆ ಯಾವುದೇ ಕಷ್ಟಕೊಡಲಾರೆ. ಸದಾ ನಿಮ್ಮೊಂದಿಗೆ ಇದ್ದು, ಪ್ರತಿದಿನ ಫಲ-ಮೂಲಗಳನ್ನು ತಿಂದು ನಿರ್ವಾಹ ಮಾಡುವೆನು. ನನ್ನ ಈ ಮಾತಿನಲ್ಲಿ ಯಾವುದೇ ಸಂದೇಹವಿಲ್ಲ.॥16॥

ಮೂಲಮ್ - 17½

ಅಗ್ರತಸ್ತೇ ಗಮಿಷ್ಯಾಮಿ ಭೋಕ್ಷ್ಯೇ ಭುಕ್ತವತಿ ತ್ವಯಿ ।
ಇಚ್ಛಾಮಿ ಪರತಃ ಶೈಲಾನ್ ಪಲ್ವಲಾನಿ ಸರಾಂಸಿ ಚ ॥
ದ್ರಷ್ಟುಂ ಸರ್ವತ್ರ ನಿರ್ಭೀತಾ ತ್ವಯಾ ನಾಥೇನ ಧೀಮತಾ ।

ಅನುವಾದ

ನಿಮಗಿಂತ ಮುಂದೆ-ಮುಂದೆ ನಡೆಯುತ್ತಾ, ನೀವು ಭೋಜನ ಮಾಡಿದ ಬಳಿಕ ಅಳಿದುಳಿದುದನ್ನು ನಾನು ತಿಂದುಕೊಂಡು ಇರುವೆನು. ಪ್ರಭೋ! ನಾನು ಬುದ್ಧಿವಂತರಾದ ಪ್ರಾಣನಾಥನೊಂದಿಗೆ ನಿರ್ಭಯಳಾಗಿ ವನದಲ್ಲಿ ಎಲ್ಲೆಡೆ ಸುತ್ತಾಡುತ್ತಾ, ಪರ್ವತಗಳನ್ನು, ಸಣ್ಣ-ಸಣ್ಣ ಸರೋವರಗಳನ್ನು ನೋಡಬೇಕೆಂದು ಇಚ್ಛಿಸುತ್ತೇನೆ.॥17½॥

ಮೂಲಮ್ - 18½

ಹಂಸಕಾರಂಡವಾಕೀರ್ಣಾಃ ಪದ್ಮಿನೀಃ ಸಾಧುಪುಷ್ಪಿತಾಃ ॥
ಇಚ್ಛೇಯಂ ಸುಖಿನೀ ದ್ರಷ್ಟುಂ ತ್ವಯಾ ವೀರೇಣ ಸಂಗತಾ ।

ಅನುವಾದ

ನೀವು ನನ್ನ ವೀರ ಸ್ವಾಮಿಗಳಾಗಿರುವಿರಿ. ನಾನು ನಿಮ್ಮೊಂದಿಗೆ ಇದ್ದು ಶ್ರೇಷ್ಠ ಕಮಲ ಪುಷ್ಪಗಳಿಂದ ಸುಶೋಭಿತ ಹಾಗೂ ಹಂಸ, ಕಾರಂಡವ ಪಕ್ಷಿಗಳಿಂದ ತುಂಬಿದ ಸುಂದರ ಸರೋವರಗಳನ್ನು ನೋಡಲು ಬಯಸುವೆನು.॥18½॥

ಮೂಲಮ್ - 19½

ಅಭಿಷೇಕಂ ಕರಿಷ್ಯಾಮಿ ತಾಸು ನಿತ್ಯ ಮನುವ್ರತಾ ॥
ಸಹ ತ್ವಯಾ ವಿಶಾಲಾಕ್ಷ ರಂಸ್ಯೇ ಪರಮನಂದಿನೀ ।

ಅನುವಾದ

ವಿಶಾಲನೇತ್ರವುಳ್ಳ ಆರ್ಯಪುತ್ರ! ನಿಮ್ಮ ಚರಣಗಳಲ್ಲಿ ಅನುರಕ್ತಳಾಗಿದ್ದು ನಾನು ಪ್ರತಿದಿನ ಆ ಸರೋವರಗಳಲ್ಲಿ ಸ್ನಾನ ಮಾಡುವೆನು ಹಾಗೂ ನಿಮ್ಮೊಂದಿಗೆ ಅಲ್ಲಿ ಎಲ್ಲೆಡೆ ಸಂಚರಿಸುವೆನು. ಇದರಿಂದ ನಾನು ಪರಮಾನಂದವನ್ನು ಅನುಭವಿಸುವೆನು.॥19½॥

ಮೂಲಮ್ - 20½

ಏವಂ ವರ್ಷಸಹಸ್ರಾಣಿಂ ಶತಂ ವಾಪಿ ತ್ವಯಾ ಸಹ ॥
ವ್ಯತಿಕ್ರಮಂ ನ ವೇತ್ಸ್ಯಾಮಿ ಸ್ವರ್ಗೋಪಿ ಹಿ ನ ಮೇ ಮತಃ ।

ಅನುವಾದ

ಹೀಗೆ ಸಾವಿರಾರು ವರ್ಷಗಳವರೆವಿಗೂ ನಿಮ್ಮೊಡನೆ ಇರುವ ಸೌಭಾಗ್ಯ ದೊರಕಿದರೂ ನನಗೆ ಎಂದೂ ಕಷ್ಟದ ಅನುಭವ ಆಗಲಾರದು. ನೀವು ಜೊತೆಯಲ್ಲಿ ಇಲ್ಲದಿದ್ದರೆ ಸ್ವರ್ಗಲೋಕದ ಪ್ರಾಪ್ತಿಯೂ ಸುಖ ಕೊಡಲಾರದು.॥20½॥

ಮೂಲಮ್ - 21

ಸ್ವರ್ಗೇಽಪಿ ಚ ವಿನಾ ವಾಸೋ ಭವಿತಾ ಯದಿ ರಾಘವ ।
ತ್ವಯಾ ವಿನಾ ನರವ್ಯಾಘ್ರ ನಾಹಂ ತದಪಿ ರೋಚಯೇ ॥

ಅನುವಾದ

ಪುರುಷಸಿಂಹ ರಘುನಂದನ! ನೀವಿಲ್ಲದೆ ನನಗೆ ಸ್ವರ್ಗಲೋಕದ ವಾಸ ಸಿಗುವುದಿದ್ದರೂ ಅದು ನನಗೆ ರುಚಿಸದು. ಅದನ್ನು ನಾನು ಬಯಸಲಾರೆ.॥21॥

ಮೂಲಮ್ - 22

ಅಹಂ ಗಮಿಷ್ಯಾಮಿ ವನಂ ಸುದುರ್ಗಮಂ
ಮೃಗಾಯುತಂವಾನರವಾರಣೈಶ್ಚ ।
ವನೇ ನಿವತ್ಸ್ಯಾಮಿ ಯಥಾ ಪಿತುರ್ಗೃಹೇ
ತವೈವಪಾದವುಪಗೃಹ್ಯ ಸಮ್ಮತಾ ॥

ಅನುವಾದ

ಪ್ರಾಣನಾಥ! ಆದ್ದರಿಂದ ಸಾವಿರಾರು ಮೃಗ, ವಾನರ, ಆನೆಗಳು ವಾಸಿಸುವ ಅತ್ಯಂತ ದುರ್ಗಮವಾದ ವನಕ್ಕೆ ಅವಶ್ಯವಾಗಿ ಬರುವೆನು ಹಾಗೂ ತಮ್ಮ ಚರಣಗಳ ಸೇವೆಯಲ್ಲಿ ತತ್ಪರವಾಗಿದ್ದು, ನಿಮಗೆ ಅನುಕೂಲಳಾಗಿ ನಡೆಯುತ್ತಾ ಆ ವನದಲ್ಲಿ ತಂದೆಯ ಮನೆಯಲ್ಲಿ ಇರುವಂತೆ ಸುಖವಾಗಿ ಇರುವೆನು.॥22॥

ಮೂಲಮ್ - 23

ಅನನ್ಯಭಾವಾಮನುರಕ್ತಚೇತಸಂ
ತ್ವಯಾ ವಿಯುಕ್ತಾಂ ಮರಣಾಯ ನಿಶ್ಚಿತಾಮ್ ।
ನಯಸ್ವ ಮಾಂ ಸಾಧು ಕುರುಷ್ವ ಯಾಚನಾಂ
ನಾತೋ ಮಯಾ ತೇ ಗುರುತಾ ಭವಿಷ್ಯತಿ ॥

ಅನುವಾದ

ನನ್ನ ಹೃದಯದ ಪೂರ್ಣಪ್ರೇಮ ಏಕಮಾತ್ರ ನಿಮಗೇ ಅರ್ಪಿತವಾಗಿದೆ. ನೀವಿಲ್ಲದೆ ಬೇರೆ ಎಲ್ಲಿಗೂ ನನ್ನ ಮನಸ್ಸು ಹೋಗುವುದಿಲ್ಲ. ನಿಮ್ಮಿಂದ ವಿಯೋಗವಾದರೆ ನಿಶ್ಚಯವಾಗಿ ನನ್ನ ಮೃತ್ಯು ಆಗುವುದು. ಇದಕ್ಕಾಗಿ ನೀವು ನನ್ನ ಪ್ರಾರ್ಥನೆಯನ್ನು ಸಫಲಗೊಳಿಸಿರಿ. ನನ್ನನ್ನು ಜೊತೆಗೆ ಕರೆದುಕೊಂಡು ಹೋಗಿರಿ, ಇದೇ ಚೆನ್ನಾಗಿರುವುದು. ನಾನು ಇರುವುದರಿಂದ ನಿಮ್ಮ ಮೇಲೆ ಯಾವುದೇ ಭಾರ ಬೀಳಲಾರದು.॥23॥

ಮೂಲಮ್ - 24

ತಥಾ ಬ್ರುವಾಣಾಮಪಿ ಧರ್ಮವತ್ಸಲಾಂ
ನ ಚ ಸ್ಮ ಸೀತಾಂ ನೃವರೋ ನಿನೀಷತಿ ।
ಉವಾಚ ಚೈನಾಂ ಬಹು ಸನ್ನಿವರ್ತನೇ
ವನೇ ನಿವಾಸಸ್ಯ ಚ ದುಃಖಿತಾಂಪ್ರತಿ ॥

ಅನುವಾದ

ಧರ್ಮದಲ್ಲಿ ಅನುರಕ್ತಳಾದ ಸೀತೆಯು ಈ ಪ್ರಕಾರ ಪ್ರಾರ್ಥಿಸಿದರೂ ನರಶ್ರೇಷ್ಠ ಶ್ರೀರಾಮನಿಗೆ ಆಕೆಯನ್ನು ಜೊತೆಗೆ ಕರೆದುಕೊಂಡು ಹೋಗಲು ಇಚ್ಛೆ ಉಂಟಾಗಲಿಲ್ಲ. ಅವನು ಆಕೆಯನ್ನು ವನವಾಸದ ವಿಚಾರದಿಂದ ನಿವೃತ್ತಗೊಳಿಸಲು ಅಲ್ಲಿಯ ಕಷ್ಟಗಳನ್ನು ಅನೇಕ ವಿಧದಿಂದ ವಿಸ್ತಾರವಾಗಿ ವರ್ಣಿಸತೊಡಗಿದನು.॥24॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತೇಳನೆಯ ಸರ್ಗ ಪೂರ್ಣವಾಯಿತು ॥27॥