वाचनम्
ಭಾಗಸೂಚನಾ
ಶ್ರೀರಾಮನ ವಿಮನಸ್ಕತೆಯ ಕಾರಣವನ್ನು ಸೀತೆಯು ಪ್ರಶ್ನಿಸಿದುದು, ಶ್ರೀರಾಮನು ತಂದೆಯ ಆಜ್ಞೆಯಂತೆ ತಾನು ಅರಣ್ಯಕ್ಕೆ ಹೊರಟಿರುವುದಾಗಿ ತಿಳಿಸುತ್ತಾ ಸೀತೆಗೆ ಮನೆಯಲ್ಲೇ ಇರುವಂತೆ ಸಮಜಾಯಿಸುವುದು
ಮೂಲಮ್ - 1
ಅಭಿವಾದ್ಯ ತು ಕೌಸಲ್ಯಾಂ ರಾಮಃ ಸಂಪ್ರಸ್ಥಿತೋ ವನಮ್ ।
ಕೃತಸ್ವಸ್ತ್ಯಯನೋ ಮಾತ್ರಾ ಧರ್ಮಿಷ್ಠೇ ವರ್ತ್ಮನಿ ಸ್ಥಿತಃ ॥
ಅನುವಾದ
ಧರ್ಮಿಷ್ಠರ ಮಾರ್ಗಾನುವರ್ತಿಯಾದ ಶ್ರೀರಾಮನು ಕೌಸಲ್ಯಾದೇವಿಯನ್ನು ಅಭಿವಾದನಪೂರ್ವಕ ನಮಸ್ಕರಿಸಿ ಅವಳಿಂದ ಮಂಗಳಾಶಾಸವನ್ನು ಪಡೆದು ಅರಣ್ಯಕ್ಕೆ ಹೊರಡಲು ಉದ್ಯುಕ್ತನಾದನು.॥1॥
ಮೂಲಮ್ - 2
ವಿರಾಜಯನ್ ರಾಜಸುತೋ ರಾಜಮಾರ್ಗಂ ನರೈರ್ವೃತಮ್ ।
ಹೃದಯಾನ್ಯಾಮಮಂಥೇವ ಜನಸ್ಯ ಗುಣವತ್ತಯಾ ॥
ಅನುವಾದ
ಶ್ರೀರಾಮನ ದರ್ಶನಾಕಾಂಕ್ಷಿಗಳಾಗಿದ್ದ ಅನೇಕ ಪೌರರಿಂದ ನಿಬಿಡವಾದ ರಾಜಮಾರ್ಗವನ್ನು ಬೆಳಗುತ್ತಾ ಹೋಗುತ್ತಿದ್ದ ರಾಜಪುತ್ರನು ತನ್ನ ಗುಣಾತಿಶಯಗಳಿಂದ ನಾಗರೀಕರ ಮನಸ್ಸು ಕಲಕುತ್ತಿರುವನೋ ಎಂಬಂತೆ ಕಾಣುತ್ತಿದ್ದನು.॥2॥
ಮೂಲಮ್ - 3
ವೈದೇಹೀ ಚಾಪಿ ತತ್ ಸರ್ವಂ ನ ಶುಶ್ರಾವ ತಪಸ್ವಿನೀ ।
ತದೇವಹೃದಿ ತಸ್ಯಾಶ್ಚ ಯೌವರಾಜ್ಯಾಭಿಷೇಚನಮ್ ॥
ಅನುವಾದ
ತಪಸ್ವಿನೀ ವಿದೇಹನಂದಿನೀ ಸೀತೆಯು ಇಷ್ಟರವರೆಗೆ ನಡೆದ ಘಟನೆಗಳನ್ನು ಕೇಳಿರಲಿಲ್ಲ. ನನ್ನ ಪತಿಯು ಯುವರಾಜರಾಗಿ ಪಟ್ಟಾಭಿಷಿಕ್ತರಾಗುವರೆಂದೇ ಮನಸ್ಸಿನಲ್ಲಿ ತಿಳಿದಿದ್ದಳು.॥3॥
ಮೂಲಮ್ - 4
ದೇವಕಾರ್ಯಂ ಸ್ಮ ಸಾ ಕೃತ್ವಾ ಕೃತಜ್ಞಾ ಹೃಷ್ಟಚೇತನಾ ।
ಅಭಿಜ್ಞಾರಾಜಧರ್ಮಾಣಾಂ ರಾಜಪುತ್ರೀ ಪ್ರತೀಕ್ಷತಿ ॥
ಅನುವಾದ
ವಿದೇಹರಾಜಕುಮಾರೀ ಸೀತೆಯು ರಾಜಧರ್ಮವನ್ನು ಅರಿತಿದ್ದಳು; ಅದಕ್ಕಾಗಿ ದೇವತೆಗಳ ಪೂಜೆ ಮಾಡಿ ಪ್ರಸನ್ನ ಚಿತ್ತದಿಂದ ಶ್ರೀರಾಮನ ಬರುವಿಕೆಯನ್ನು ಪ್ರತೀಕ್ಷೆ ಮಾಡುತ್ತಿದ್ದಳು.॥4॥
ಮೂಲಮ್ - 5
ಪ್ರವಿವೇಶಾಥ ರಾಮಸ್ತು ಸ್ವವೇಶ್ಮ ಸುವಿಭೂಷಿತಮ್ ।
ಪ್ರಹೃಷ್ಟಜನಸಂಪೂರ್ಣಂ ಹ್ರಿಯಾ ಕಿಂಚಿದವಾಙ್ಮುಖಃ ॥
ಅನುವಾದ
ಇಷ್ಟರಲ್ಲೇ ಶ್ರೀರಾಮನು ಪ್ರಸನ್ನ ಮನುಷ್ಯರಿಂದ ತುಂಬಿದ್ದು, ಚೆನ್ನಾಗಿ ಅಲಂಕೃತವಾದ ತನ್ನ ಅಂತಃಪುರವನ್ನು ಪ್ರವೇಶಿಸಿದನು. ಆಗ ನಾಚಿಕೆಯಿಂದ ಅವನ ಮುಖ ಸ್ವಲ್ಪ ಬಾಗಿದಂತೆ ಇತ್ತು.॥5॥
ಮೂಲಮ್ - 6
ಅಥ ಸೀತಾ ಸಮುತ್ಪತ್ಯ ವೇಪಮಾನಾ ಚ ತಂ ಪತಿಮ್ ।
ಅಪಶ್ಯಚ್ಛೋಕಸಂತಪ್ತಂ ಚಿಂತಾವ್ಯಾಕುಲಿತೇಂದ್ರಿಯಮ್ ॥
ಅನುವಾದ
ಸೀತೆಯು ಅವನನ್ನು ನೋಡುತ್ತಲೇ ಎದ್ದು ನಿಂತು ಅವನ ಸ್ಥಿತಿಯನ್ನು ನೋಡಿ ನಡುಗಿಹೋದಳು. ಚಿಂತೆಯಿಂದ ವ್ಯಾಕುಲವಾದ ಇಂದ್ರಿಯವುಳ್ಳ ಅವಳು ಶೋಕಸಂತಪ್ತನಾದ ಪತಿಯನ್ನೇ ದಿಟ್ಟಿಸಿ ನೋಡತೊಡಗಿದಳು.॥6॥
ಮೂಲಮ್ - 7
ತಾಂ ದೃಷ್ಟ್ವಾ ಸ ಹಿ ಧರ್ಮಾತ್ಮಾ ನ ಶಶಾಕ ಮನೋಗತಮ್ ।
ತಂ ಶೋಕಂ ರಾಘವಃ ಸೋಢುಂ ತತೋ ವಿವೃತತಾಂ ಗತಃ ॥
ಅನುವಾದ
ಧರ್ಮಾತ್ಮನಾದ ಶ್ರೀರಾಮನು ಸೀತೆಯನ್ನು ನೋಡಿ ತನ್ನ ಮಾನಸಿಕ ಶೋಕದ ವೇಗವನ್ನು ಸಹಿಸಲಾರದೆ, ಅವನ ಆ ಶೋಕ ಪ್ರಕಟವಾಗಿ ಹೋಯಿತು.॥7॥
ಮೂಲಮ್ - 8
ವಿವರ್ಣವದನಂ ದೃಷ್ಟ್ವಾ ತಂ ಪ್ರಸ್ವಿನ್ನಮಮರ್ಷಣಮ್ ।
ಆಹ ದುಃಖಾಭಿಸಂತಪ್ತಾ ಕಿಮಿದಾನೀಮಿದಂ ಪ್ರಭೋ ॥
ಅನುವಾದ
ಅವನ ಮುಖ ಉದಾಸವಾಗಿತ್ತು. ಶರೀರ ಬೆವೆತುಕೊಂಡಿತ್ತು. ತನ್ನ ಶೋಕವನ್ನು ಅದುಮಿಡಲು ಅಸಮರ್ಥನಾಗಿದ್ದನು. ಅವನನ್ನು ಈ ಸ್ಥಿತಿಯಲ್ಲಿ ನೋಡಿ ಸೀತೆಯು ದುಃಖಸಂತಪ್ತಳಾಗಿ ಕೇಳಿದಳು - ಸ್ವಾಮಿ! ಈಗ ನಿಮ್ಮ ಈ ಸ್ಥಿತಿ ಹೀಗೇಕೇ.॥8॥
ಮೂಲಮ್ - 9
ಅದ್ಯ ಬಾರ್ಹಸ್ಪತಃ ಶ್ರೀಮಾನ್ ಯುಕ್ತಃ ಪುಷ್ಯೇಣ ರಾಘವ ।
ಪ್ರೋಚ್ಯತೇ ಬ್ರಾಹ್ಮಣೈಃ ಪ್ರಾಜ್ಞೈಃ ಕೇನ ತ್ವಮಸಿ ದುರ್ಮನಾಃ ॥
ಅನುವಾದ
ರಘುನಂದನ! ಇಂದು ಪಟ್ಟಾಭಿಷೇಕಕ್ಕೆ ಯೋಗ್ಯವಾದ ಬೃಹಸ್ಪತಿ ದೇವತಾ ಸಂಬಂಧೀ ಮಂಗಲಮಯ ಪುಷ್ಯ ನಕ್ಷತ್ರವಿದೆ. ಇದೇ ಯೋಗದಲ್ಲಿ ನಿಮ್ಮ ಪಟ್ಟಾಭಿಷೇಕವೆಂದು ವಿದ್ವಾಂಸ ಬ್ರಾಹ್ಮಣರು ತಿಳಿಸಿದ್ದರು. ಇಂತಹ ಸಮಯದಲ್ಲಿ ನೀವು ಪ್ರಸನ್ನರಾಗಬೇಕಿತ್ತು, ಆದರೆ ನಿಮ್ಮ ಮನಸ್ಸು ಇಷ್ಟೊಂದು ಉದಾಸವೇಕೆ ಆಗಿದೆ.॥9॥
ಮೂಲಮ್ - 10
ನ ತೇ ಶತಶಲಾಕೇನ ಜಲೇನನಿಭೇನ ಚ ।
ಆವೃತಂ ವದನಂ ವಲ್ಗು ಚ್ಛತ್ರೇಣಾಭಿವಿರಾಜತೇ ॥
ಅನುವಾದ
ನೀರಿನ ನೊರೆಯಂತೆ ನೂರಾರು ಕಡ್ಡಿಗಳಿಂದ ಕೂಡಿದ ಬಿಳುಪಾದ ಶ್ವೇತಚ್ಛತ್ರದಿಂದ ಆವೃತವಾಗಿ ನಿನ್ನ ಸುಂದರ ಮುಖವು ಏಕೆ ಶೋಭಿಸುತ್ತಿಲ್ಲ.॥10॥
ಮೂಲಮ್ - 11
ವ್ಯಜನಾಭ್ಯಾಂ ಚ ಮುಖ್ಯಾಭ್ಯಾಂ ಶತಪತ್ರನಿಭೇಕ್ಷಣಮ್ ।
ಚಂದ್ರಹಂಸಪ್ರಕಾಶಾಭ್ಯಾಂ ವೀಜ್ಯತೇ ನ ತವಾನನಮ್ ॥
ಅನುವಾದ
ಕಮಲದಂತೆ ಸುಂದರ ನೇತ್ರಗಳುಳ್ಳ ತಮ್ಮ ಈ ಮುಖದಲ್ಲಿ ಚಂದ್ರ ಮತ್ತು ಹಂಸದಂತೆ ಬೆಳ್ಳಗಿರುವ ಚಾಮರಗಳು ಏಕೆ ಬೀಸುತ್ತಿಲ್ಲ.॥11॥
ಮೂಲಮ್ - 12
ವಾಗ್ಮಿನೋ ವಂದಿನಶ್ಚಾಪಿ ಪ್ರಹೃಷ್ಟಾಸ್ತ್ವಾಂ ನರರ್ಷಭ ।
ಸ್ತುವಂತೋ ನಾತ್ರ ದೃಶ್ಯಂತೇ ಮಂಗಲೈಃ ಸೂತಮಾಗಧಾಃ ॥
ಅನುವಾದ
ನರಶ್ರೇಷ್ಠ! ಪ್ರವಚನಕುಶಲ ವಂದೀ, ಸೂತ, ಮಾಗಧರು ಇಂದು ಅತ್ಯಂತ ಪ್ರಸನ್ನರಾಗಿ ನಿಮ್ಮನ್ನು ಮಾಂಗಲಿಕ ವಚನಗಳಿಂದ ಸ್ತುತಿಸುವುದನ್ನು ಕಾಣುವುದಿಲ್ಲವಲ್ಲ.॥12॥
ಮೂಲಮ್ - 13
ನ ತೇ ಕ್ಷೌದ್ರಂ ಚ ದಧಿ ಚ ಬ್ರಾಹ್ಮಣಾ ವೇದಪಾರಗಾಃ ।
ಮೂರ್ಧ್ನಿ ಮೂರ್ಧಾಭಿಷಿಕ್ತಸ್ಯ ದದತಿ ಸ್ಮ ವಿಧಾನತಃ ॥
ಅನುವಾದ
ವೇದಪಾರಂಗತ ವಿದ್ವಾಂಸ ಬ್ರಾಹ್ಮಣರು ಇಂದು ಮೂರ್ಧಾಭಿಷಿಕ್ತನಾದ ನಿಮ್ಮ ಮಸ್ತಕದಲ್ಲಿ ತೀರ್ಥೋದಕ ಮಿಶ್ರಿತ ಮಧುಪರ್ಕದಿಂದ ಅಭಿಷೇಕ ಮಾಡಲಿಲ್ಲ.॥13॥
ಮೂಲಮ್ - 14
ನ ತ್ವಾಂ ಪ್ರಕೃತಯಃ ಸರ್ವಾಃ ಶ್ರೇಣೀಮುಖ್ಯಾಶ್ಚ ಭೂಷಿತಾಃ ।
ಅನುವ್ರಜಿತುಮಿಚ್ಛಂತಿ ಪೌರಜಾನಪದಾಸ್ತಥಾ ॥
ಅನುವಾದ
ಸದಾ ನಿಮ್ಮನ್ನು ಅನುಸರಿಸಿ ಬರುವ ಮಂತ್ರೀ, ಸೇನಾಪತಿ, ವಸ್ತ್ರಾಭೂಷಣಗಳಿಂದ ಅಲಂಕೃತ ಮುಖ್ಯ-ಮುಖ್ಯ ಸಾಹುಕಾರರು, ಪ್ರಜಾಜನರು ಇಂದು ಏಕೆ ಯಾರೂ ಕಾಣುತ್ತಿಲ್ಲವಲ್ಲ; ಹೀಗೇಕೆ.॥14॥
ಮೂಲಮ್ - 15
ಚತುರ್ಭಿರ್ವೇಗಸಂಪನ್ನೈರ್ಹಯೈಃ ಕಾಂಚನಭೂಷಣೈಃ ।
ಮುಖ್ಯಃ ಪುಷ್ಯರಥೋ ಯುಕ್ತಃ ಕಿಂ ನ ಗಚ್ಛತಿ ತೇಽಗ್ರತಃ ॥
ಅನುವಾದ
ನೀವು ದಿವ್ಯರಥದಲ್ಲಿ ಮೆರವಣಿಗೆ ಹೊರಟಿರುವಾಗ ಎದುರಿಗೆ ಸ್ವರ್ಣಭೂಷಿತ ವೇಗಶಾಲಿ ನಾಲ್ಕು ಕುದುರೆಗಳಿಂದ ಕೂಡಿದ ಪುಷ್ಪರಥವೂ ಇಂದು ನಿನ್ನ ಮುಂದೆ ಏಕಿಲ್ಲ.॥15॥
ಮೂಲಮ್ - 16
ನ ಹಸ್ತೀ ಚಾಗ್ರತಃ ಶ್ರೀಮಾನ್ಸರ್ವಲಕ್ಷಣಪೂಜಿತಃ ।
ಪ್ರಯಾಣೇ ಲಕ್ಷ್ಯತೇ ವೀರ ಕೃಷ್ಣಮೇಘಗಿರಿಪ್ರಭಃ ॥
ಅನುವಾದ
ವೀರವರ! ನೀವು ಮೆರವಣಿಗೆಯಲ್ಲಿ ಶುಭಲಕ್ಷಣ ಪ್ರಶಂಸಿತ, ಕಪ್ಪು ಮೋಡಗಳ ಪರ್ವತದಂತೆ ವಿಶಾಲಕಾಯ ತೇಜಸ್ವಿ ಪಟ್ಟದಾನೆಯು ಇಂದು ನಿಮ್ಮ ಮುಂದೆ ಏಕೆ ಕಂಡು ಬರುತ್ತಿಲ್ಲ.॥16॥
ಮೂಲಮ್ - 17
ನ ಚ ಕಾಂಚನಚಿತ್ರಂ ತೇ ಪಶ್ಯಾಮಿ ಪ್ರಿಯದರ್ಶನ ।
ಭದ್ರಾಸನಂ ಪುರಸ್ಕೃತ್ಯ ಯಾಂತಂ ವೀರ ಪುರಃಸರಮ್ ॥
ಅನುವಾದ
ಪ್ರಿಯದರ್ಶನ ವೀರ! ನೀವು ಕುಳಿತುಕೊಳ್ಳುವ ಸ್ವರ್ಣಮಯ ಚಿತ್ರಿತವಾದ ಭದ್ರಾಸನವನ್ನು ಎತ್ತಿಕೊಂಡು ನಿಮ್ಮ ಮುಂದೆ-ಮುಂದೆ ಸಾಗುತ್ತಿರುವ ಸೇವಕರು ಎಲ್ಲಿಗೆ ಹೋಗಿರುವರು.॥17॥
ಮೂಲಮ್ - 18
ಅಭಿಷೇಕೋ ಯದಾಸಜ್ಜಃ ಕಿಮಿದಾನೀಮಿದಂ ತವ ।
ಅಪೂರ್ವೋ ಮುಖವರ್ಣಶ್ಚ ನ ಪ್ರಹರ್ಷಶ್ಚ ಲಕ್ಷ್ಯತೇ ॥
ಅನುವಾದ
ಪಟ್ಟಾಭಿಷೇಕದ ಎಲ್ಲ ಸಿದ್ಧತೆ ಆಗಿರುವಾಗ ನಿಮ್ಮ ಸ್ಥಿತಿ ಹೀಗೆ ಏಕಾಗಿದೆ? ನಿಮ್ಮ ಮುಖ ಬಾಡಿದೆ. ಹೀಗೆ ಮೊದಲು ಎಂದೂ ಆಗಿರಲಿಲ್ಲ. ನಿಮ್ಮ ಮುಖದಲ್ಲಿ ಪ್ರಸನ್ನತೆಯ ಚಿಹ್ನೆಯೇ ಕಾಣುತ್ತಿಲ್ಲ, ಇದರ ಕಾರಣವೇನು.॥18॥
ಮೂಲಮ್ - 19
ಇತೀವ ವಿಲಪಂತೀಂ ತಾಂ ಪ್ರೋವಾಚ ರಘುನಂದನಃ ।
ಸೀತೇ ತತ್ರಭವಾಂಸ್ತಾತಃ ಪ್ರವ್ರಾಜಯತಿ ಮಾಂ ವನಮ್ ॥
ಅನುವಾದ
ಈ ಪ್ರಕಾರ ವಿಲಾಪ ಮಾಡುತ್ತಿರುವ ಸೀತೆಯಲ್ಲಿ ರಘುನಂದನ ಶ್ರೀರಾಮನು ಹೇಳಿದನು - ಸೀತೇ! ಇಂದು ಪೂಜ್ಯ ತಂದೆಯವರು ನನ್ನನ್ನು ಕಾಡಿಗೆ ಕಳಿಸುತ್ತಿದ್ದಾರೆ.॥19॥
ಮೂಲಮ್ - 20
ಕುಲೇ ಮಹತಿ ಸಂಭೂತೇ ಧರ್ಮಜ್ಞೇ ಧರ್ಮಚಾರಿಣಿ ।
ಶೃಣು ಜಾನಕಿ ಯೇನೇದಂ ಕ್ರಮೇಣಾದ್ಯಾಗತಂ ಮಮ ॥
ಅನುವಾದ
ಮಹಾಕುಲದಲ್ಲಿ ಹುಟ್ಟಿದ, ಧರ್ಮವನ್ನು ತಿಳಿದಿರುವ ಹಾಗೂ ಧರ್ಮಪರಾಯಣೆ ಜನಕನಂದಿನೀ! ಯಾವ ಕಾರಣದಿಂದ ಈ ವನವಾಸ ಇಂದು ನನಗೆ ಪ್ರಾಪ್ತವಾಗಿದೆಯೋ ಅದನ್ನು ಕ್ರಮವಾಗಿ ತಿಳಿಸುವೆನು, ಕೇಳು.॥20॥
ಮೂಲಮ್ - 21
ರಾಜ್ಞಾ ಸತ್ಯಪ್ರತಿಜ್ಞೇನ ಪಿತ್ರಾ ದಶರಥೇನ ವೈ ।
ಕೈಕೇಯ್ಯೈ ಮಮ ಮಾತ್ರೇ ತು ಪುರಾ ದತ್ತೌ ಮಹಾವರೌ ॥
ಅನುವಾದ
ಸತ್ಯಪ್ರತಿಜ್ಞ ನಮ್ಮ ತಂದೆ ದಶರಥ ಮಹಾರಾಜರು ಮಾತೆ ಕೈಕೆಯಿಗೆ ಮೊದಲು ಎಂದೋ ಎರಡು ಮಹಾ ವರಗಳನ್ನು ಕೊಟ್ಟಿದ್ದರು.॥21॥
ಮೂಲಮ್ - 22
ತಯಾದ್ಯ ಮಮ ಸಜ್ಜೇಽಸ್ಮಿನ್ನಭಿಷೇಕೇ ನೃಪೋದ್ಯತೇ ।
ಪ್ರಚೋದಿತಃ ಸ ಸಮಯೋ ಧರ್ಮೇಣ ಪ್ರತಿನಿರ್ಜಿತಃ ॥
ಅನುವಾದ
ಈಗ ಮಹಾರಾಜರು ನನ್ನ ಪಟ್ಟಾಭಿಷೇಕದ ಸಿದ್ಧತೆ ನಡೆಸಿದಾಗ ಕೈಕೆಯಿಯು ಆ ವರದಾನದ ಪ್ರತಿಜ್ಞೆಯನ್ನು ಜ್ಞಾಪಿಸಿ, ಮಹಾರಾಜರನ್ನು ಧರ್ಮಬಂಧನದಲ್ಲಿ ಕಟ್ಟಿಹಾಕಿರುವಳು.॥22॥
ಮೂಲಮ್ - 23
ಚತುದರ್ಶ ಹಿ ವರ್ಷಾಣಿ ವಸ್ತವ್ಯಂ ದಂಡಕೇ ಮಯಾ ।
ಪಿತ್ರಾ ಮೇಭರಶ್ಚಾಪಿ ಯೌವರಾಜ್ಯೇ ನಿಯೋಜಿತಃ ॥
ಅನುವಾದ
ಇದರಿಂದ ವಿವಶರಾದ ತಂದೆಯವರು ಒಂದು ವರದಿಂದ ಭರತನನ್ನು ಯುವರಾಜನಾಗಿ ನಿಯುಕ್ತಗೊಳಿಸಿದರು ಮತ್ತು ಇನ್ನೊಂದು ವರಕ್ಕನುಸಾರವಾಗಿ ನಾನು ಹದಿನಾಲ್ಕು ವರ್ಷ ದಂಡಕಾರಣ್ಯದಲ್ಲಿ ವಾಸಮಾಡಬೇಕಾಗುವುದು.॥23॥
ಮೂಲಮ್ - 24
ಸೋಽಹಂ ತ್ವಾಮಾಗತೋ ದ್ರಷ್ಟುಂ ಪ್ರಸ್ಥಿತೋ ವಿಜನಂ ವನಮ್ ।
ಭರತಸ್ಯ ಸಮೀಪೇ ತೇ ನಾಹಂ ಕಥ್ಯಃ ಕದಾಚನ ॥
ಮೂಲಮ್ - 25
ಋದ್ಧಿಯುಕ್ತಾ ಹಿ ಪುರುಷಾ ನ ಸಹಂತೇ ಪರಸ್ತವಮ್ ।
ತಸ್ಮಾನ್ನ ತೇ ಗುಣಾಃ ಕಥ್ಯಾ ಭರತಸ್ಯಾಗ್ರತೋ ಮಮ ॥
ಅನುವಾದ
ಈಗ ನಾನು ನಿರ್ಜನ ವನಕ್ಕೆ ಹೋಗಲು ಹೊರಟಿರುವೆನು ಹಾಗೂ ನಿನ್ನನ್ನು ನೋಡಲು ಇಲ್ಲಿಗೆ ಬಂದಿರುವೆನು. ನೀನು ಭರತನ ಬಳಿ ನನ್ನನ್ನು ಎಂದೂ ಪ್ರಶಂಸಿಸಬೇಡ; ಏಕೆಂದರೆ ಸಮೃದ್ಧಶಾಲಿ ಪುರುಷರು ಇತರರ ಸ್ತುತಿಯನ್ನು ಸಹಿಸುವುದಿಲ್ಲ. ಅದಕ್ಕಾಗಿ ಭರತನ ಮುಂದೆ ನನ್ನ ಗುಣಗಳನ್ನು ಹೊಗಳಬೇಡ ಎಂದು ಹೇಳುತ್ತಿದ್ದೇನೆ.॥24-25॥
ಮೂಲಮ್ - 26
ಅಹಂ ತೇ ನಾನುವಕ್ತವ್ಯೋ ವಿಶೇಷೇಣ ಕದಾಚನ ।
ಅನುಕೂಲತಯಾ ಶಕ್ಯಂ ಸಮೀಪೇ ತಸ್ಯ ವರ್ತಿತುಮ್ ॥
ಅನುವಾದ
ವಿಶೇಷವಾಗಿ ನೀನು ಭರತನ ಎದುರಿಗೆ ತನ್ನ ಸಖಿಯರೊಂದಿಗೆ ಪದೇ-ಪದೇ ನನ್ನ ಕುರಿತು ಚರ್ಚಿಸಬೇಡ; ಏಕೆಂದರೆ ಅವನ ಮನಸ್ಸಿಗೆ ಅನುಕೂಲಳಾಗಿ ವರ್ತಿಸಿಯೇ ನೀನು ಅವನ ಬಳಿ ಇರಬಲ್ಲೆ.॥26॥
ಮೂಲಮ್ - 27
ತಸ್ಮೈ ದತ್ತಂ ನೃಪತಿನಾ ಯೌವರಾಜ್ಯಂ ಸನಾತನಮ್ ।
ಸ ಪ್ರಸಾದ್ಯಸ್ತ್ವಯಾ ಸೀತೇ ನೃಪತಿಶ್ಚ ವಿಶೇಷತಃ ॥
ಅನುವಾದ
ಸೀತೇ! ಮಹಾರಾಜರು ಎಂದೆಂದಿಗೂ ಯುವರಾಜ ಪಟ್ಟವನ್ನು ಅವನಿಗೆ ಕೊಟ್ಟಿರುವರು. ಅದಕ್ಕಾಗಿ ನೀನು ವಿಶೇಷ ಪ್ರಯತ್ನಪೂರ್ವಕ ಅವನನ್ನು ಪ್ರಸನ್ನನಾಗಿಡಬೇಕು; ಏಕೆಂದರೆ ಈಗ ಅವನೇ ರಾಜನಾಗುವನು.॥27॥
ಮೂಲಮ್ - 28
ಅಹಂ ಚಾಪಿ ಪ್ರತಿಜ್ಞಾಂ ತಾಂ ಗುರೋಃ ಸಮನುಪಾಲಯನ್ ।
ವನಮದ್ಯೈವ ಯಾಸ್ಯಾಮಿ ಸ್ಥಿರೀಭವ ಮನಸ್ವಿನಿ ॥
ಅನುವಾದ
ನಾನೂ ಕೂಡ ತಂದೆಯ ಪ್ರತಿಜ್ಞೆಯನ್ನು ಪಾಲಿಸಲು ಇಂದೇ ಕಾಡಿಗೆ ಹೊರಟುಹೋಗುವೆನು. ಸ್ಥಿರಮನಸ್ಸುಳ್ಳವಳೇ! ನೀನು ಧೈರ್ಯವಹಿಸಿ ಇಲ್ಲೇ ಇರುವುದು.॥28॥
ಮೂಲಮ್ - 29
ಯಾತೇ ಚ ಮಯಿ ಕಲ್ಯಾಣಿ ವನಂ ಮುನಿ ನಿಷೇವಿತಮ್ ।
ವ್ರತೋಪವಾಸಪರಯಾ ಭವಿತವ್ಯಂ ತ್ವಯಾನಘೇ ॥
ಅನುವಾದ
ಪುಣ್ಯಾತ್ಮಳಾದ ಕಲ್ಯಾಣೀ! ನಾನು ಮುನಿಜನ ಸೇವಿತ ವನಕ್ಕೆ ಹೋದ ಮೇಲೆ ನೀನು ಪ್ರಾಯಶಃ ವ್ರತ, ಉಪವಾಸಾದಿಗಳಲ್ಲೇ ಸಂಲಗ್ನಳಾಗಿರಬೇಕು.॥29॥
ಮೂಲಮ್ - 30
ಕಲ್ಯಮುತ್ಥಾಯ ದೇವಾನಾಂ ಕೃತ್ವಾ ಪೂಜಾಂ ಯಥಾವಿಧಿ ।
ವಂದಿತವ್ಯೋ ದಶರಥಃ ಪಿತಾ ಮಮ ಜನೇಶ್ವರಃ ॥
ಅನುವಾದ
ನೀನು ಪ್ರತಿದಿನ ಪ್ರಾತಃಕಾಲ ಎದ್ದು ದೇವತೆಗಳನ್ನು ವಿಧಿವತ್ತಾಗಿ ಪೂಜಿಸಿ, ನಮ್ಮ ತಂದೆ ದಶರಥ ಮಹಾರಾಜರಿಗೆ ನಮಸ್ಕಾರ ಮಾಡಬೇಕು.॥30॥
ಮೂಲಮ್ - 31
ಮಾತಾ ಚ ಮಮ ಕೌಸಲ್ಯಾ ವೃದ್ಧಾ ಸಂತಾಪಕರ್ಶಿತಾ ।
ಧರ್ಮಮೇವಾಗ್ರತಃ ಕೃತ್ವಾ ತ್ವತ್ತಃ ಸಮ್ಮಾನಮರ್ಹತಿ ॥
ಅನುವಾದ
ನನ್ನ ತಾಯಿ ಕೌಸಲ್ಯೆಗೂ ವಂದಿಸಬೇಕು. ಆಕೆ ಮುದುಕಿಯಾಗಿದ್ದಾಳೆ; ದುಃಖ-ಸಂತಾಪದಿಂದ ಬೇರೆ ದುರ್ಬಲಳಾಗಿದ್ದಾಳೆ. ಆದ್ದರಿಂದ ಧರ್ಮೈಕ ದೃಷ್ಟಿಯಿಂದ ಆಕೆಯನ್ನು ವಿಶೇಷವಾಗಿ ಗೌರವಿಸಬೇಕು.॥31॥
ಮೂಲಮ್ - 32
ವಂದಿತವ್ಯಾಶ್ಚ ತೇ ನಿತ್ಯಂ ಯಾಃ ಶೇಷಾ ಮಮ ಮಾತರಃ ।
ಸ್ನೇಹಪ್ರಣಯಸಂಭೋಗೈಃ ಸಮಾ ಹಿ ಮಮ ಮಾತರಃ ॥
ಅನುವಾದ
ಉಳಿದ ನನ್ನ ತಾಯಂದಿರ ಚರಣಗಳಿಗೆ ನೀನು ಪ್ರತಿದಿನ ನಮಸ್ಕರಿಸಬೇಕು; ಏಕೆಂದರೆ ಸ್ನೇಹ, ಪ್ರೇಮ ಮತ್ತು ಪಾಲನೆ-ಪೋಷಣೆಯ ದೃಷ್ಟಿಯಿಂದ ಎಲ್ಲ ತಾಯಂದಿರು ನನಗೆ ಸಮಾನರಾಗಿದ್ದಾರೆ.॥32॥
ಮೂಲಮ್ - 33
ಭ್ರಾತೃಪುತ್ರಸಮೌ ಚಾಪಿ ದ್ರಷ್ಟವ್ಯೌ ಚ ವಿಶೇಷತಃ ।
ತ್ವಯಾ ಭರತಶತ್ರುಘ್ನೌಪ್ರಾಣೈಃ ಪ್ರಿಯತರೌ ಮಮ ॥
ಅನುವಾದ
ಭರತ-ಶತ್ರುಘ್ನರು ನನಗೆ ಪ್ರಾಣಗಳಿಗಿಂತ ಹೆಚ್ಚು ಪ್ರಿಯರಾಗಿದ್ದಾರೆ. ಆದ್ದರಿಂದ ನೀನು ಅವರಿಬ್ಬರನ್ನು ವಿಶೇಷವಾಗಿ ಸಹೋದರ, ಪುತ್ರರಂತೆ ನೋಡಬೇಕು.॥33॥
ಮೂಲಮ್ - 34
ವಿಪ್ರಿಯಂ ಚ ನ ಕರ್ತವ್ಯಂ ಭರತಸ್ಯ ಕದಾಚನ ।
ಸ ಹಿ ರಾಜಾಚ ವೈದೇಹಿ ದೇಶಸ್ಯ ಚ ಕುಲಸ್ಯ ಚ ॥
ಅನುವಾದ
ವಿದೇಹನಂದಿನೀ! ನೀನು ಭರತನ ಇಚ್ಛೆಗೆ ವಿರೋಧವಾಗಿ ಯಾವ ಕಾರ್ಯವನ್ನೂ ಮಾಡಬಾರದು; ಏಕೆಂದರೆ ಈಗ ಅವನು ನನ್ನ ದೇಶ ಮತ್ತು ಕುಲದ ರಾಜನಾಗಿದ್ದಾನೆ.॥34॥
ಮೂಲಮ್ - 35
ಆರಾಧಿತಾ ಹಿ ಶೀಲೇನ ಪ್ರಯತ್ನೈಶ್ಚೋಪಸೇವಿತಾಃ ।
ರಾಜಾನಃ ಸಂಪ್ರಸೀದಂತಿ ಪ್ರಕುಪ್ಯಂತಿ ವಿಪರ್ಯಯೇ ॥
ಅನುವಾದ
ಅನುಕೂಲ ಆಚರಣೆಯಿಂದ ಆರಾಧನೆ ಮತ್ತು ಪ್ರಯತ್ನ ಪೂರ್ವಕ ಸೇವೆ ಮಾಡಿದಾಗ ರಾಜರು ಪ್ರಸನ್ನರಾಗುತ್ತಾರೆ. ವಿಪರೀತ ವರ್ತನೆಯಿಂದ ಕುಪಿತರಾಗುತ್ತಾರೆ.॥35॥
ಮೂಲಮ್ - 36
ಔರಸ್ಯಾನಪಿ ಪುತ್ರಾನ್ ಹಿ ತ್ಯಜಂತ್ಯಹಿತಕಾರಿಣಃ ।
ಸಮರ್ಥಾನ್ ಸಂಪ್ರಗೃಹ್ಣಂತಿ ಜನಾನಪಿ ನರಾಧಿಪಾಃ ॥
ಅನುವಾದ
ಅಹಿತ ಮಾಡುವವನು ತನ್ನ ಔರಸಪುತ್ರನಾದರೂ ರಾಜರು ಅವನನ್ನು ತ್ಯಜಿಸಿಬಿಡುತ್ತಾರೆ. ಆತ್ಮೀಯನಾಗದಿದ್ದರೂ ಸಾಮರ್ಥಶಾಲಿಯನ್ನು ಅವರು ತನ್ನವನನ್ನಾಗಿಸಿಕೊಳ್ಳುವರು.॥36॥
ಮೂಲಮ್ - 37
ಸಾ ತ್ವಂ ವಸೇಹ ಕಲ್ಯಾಣಿ ರಾಜ್ಞಃ ಸಮನುವರ್ತಿನೀ ।
ಭರತಸ್ಯ ರತಾ ಧರ್ಮೇ ಸತ್ಯವ್ರತಪರಾಯಣಾ ॥
ಅನುವಾದ
ಆದ್ದರಿಂದ ಕಲ್ಯಾಣೀ! ನೀನು ರಾಜಾ ಭರತನಿಗೆ ಅನುಕೂಲವಾಗಿ ವರ್ತಿಸುತ್ತಾ ಧರ್ಮ ಹಾಗೂ ಸತ್ಯವ್ರತದಲ್ಲಿ ತತ್ಪರಳಾಗಿ ಇಲ್ಲಿ ವಾಸಿಸು.॥37॥
ಮೂಲಮ್ - 38
ಅಹಂ ಗಮಿಷ್ಯಾಮಿ ಮಹಾವನಂ ಪ್ರಿಯೇ
ತ್ವಯಾ ಹಿ ವಸ್ತವ್ಯಮಿಹೈವ ಭಾಮಿನಿ ।
ಯಥಾ ವ್ಯಲೀಕಂ ಕುರುಷೇ ನ ಕಸ್ಯಚಿತ್ -
ತಥಾ ತ್ವಯಾ ಕಾರ್ಯಮಿದಂವಚೋ ಮಮ ॥
ಅನುವಾದ
ಪ್ರಿಯೇ! ಈಗ ನಾನು ವಿಶಾಲವಾದ ವನಕ್ಕೆ ಹೋಗುತ್ತಿದ್ದೇನೆ. ಭಾಮಿನಿ! ನೀನು ಇಲ್ಲೇ ವಾಸಿಸು. ನಿನ್ನ ವರ್ತನೆಯಿಂದ ಯಾರಿಗೂ ಕಷ್ಟವಾಗದಿರುವಂತೆ ಗಮನವಿಡು. ನನ್ನ ಈ ಆಜ್ಞೆಯನ್ನು ಮನ್ನಿಸಿ ನೀನು ಇಲ್ಲೇ ಇರು.॥38॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತಾರನೆಯ ಸರ್ಗ ಪೂರ್ಣವಾಯಿತು.॥26॥