०२५ कौसल्याशीर्वचनम्

वाचनम्
ಭಾಗಸೂಚನಾ

ಕೌಸಲ್ಯಾದೇವಿಯು ಮಂಗಳಕರವಾದ ಶುಭಾಶಂಸನೆಗಳನ್ನು ಮಾಡಿದುದು, ಶ್ರೀರಾಮನು ತಾಯಿಗೆ ನಮಸ್ಕರಿಸಿ ಸೀತೆಯ ಅಂತಃಪುರಕ್ಕೆ ಹೋದುದು

ಮೂಲಮ್ - 1

ಸಾ ವಿನೀಯ ತಮಾಯಾಸಮುಪಸ್ಪೃಶ್ಯ ಜಲಂ ಶುಚಿ ।
ಚಕಾರ ಮಾತಾ ರಾಮಸ್ಯ ಮಂಗಲಾನಿ ಮನಸ್ವಿನೀ ॥

ಅನುವಾದ

ಶ್ರೀರಾಮನ ತಾಯಿಯಾದ ಕೌಸಲ್ಯೆಯು ಪುತ್ರ ವಿಯೋಗ ಶೋಕದಿಂದ ಉಂಟಾಗಿದ್ದ ಆಯಾಸವನ್ನು ದೂರ ಮಾಡಿ, ಶುದ್ಧಾಚಮನಮಾಡಿ, ಸುಮನಸ್ಕಳಾಗಿ ಮಂಗಳಾಶಂಸನೆಗಳನ್ನು ಮಾಡಲು ಉಪಕ್ರಮಿಸಿದಳು.॥1॥

ಮೂಲಮ್ - 2

ನ ಶಕ್ಯಸೇವಾರಯಿತುಂ ಗಚ್ಛೇದಾನೀಂ ರಘೂತ್ತಮ ।
ಶೀಘ್ರಂ ಚ ವಿನಿವರ್ತಸ್ವ ವರ್ತಸ್ವ ಚ ಸತಾಂ ಕ್ರಮೇ ॥

ಅನುವಾದ

ರಘುಕುಲ ಭೂಷಣ! ಈಗ ನಾನು ನಿನ್ನನ್ನು ತಡೆಯಲಾರೆ. ನೀನು ಕಾಡಿಗೆ ಹೊರಡು. ಸತ್ಪುರುಷರ ಮಾರ್ಗದಲ್ಲಿ ಸ್ಥಿರನಾಗಿದ್ದು, ಶೀಘ್ರವಾಗಿ ಕಾಡಿನಿಂದ ಮರಳಿ ಬಂದು ಬಿಡು.॥2॥

ಮೂಲಮ್ - 3

ಯಂ ಪಾಲಯಸಿ ಧರ್ಮಂ ತ್ವಂ ಪ್ರೀತ್ಯಾ ಚ ನಿಯಮೇನ ಚ ।
ಸ ವೈ ರಾಘವಶಾರ್ದೂಲ ಧರ್ಮಸ್ತ್ವಾಮಭಿರಕ್ಷತು ॥

ಅನುವಾದ

ರಘುಕುಲ ಸಿಂಹನೇ! ನೀನು ನಿಯಮ ಪೂರ್ವಕ ಪ್ರಸನ್ನತೆಯೊಂದಿಗೆ ಯಾವ ಧರ್ಮವನ್ನು ಪಾಲಿಸುವೆಯೋ, ಆ ಧರ್ಮವೇ ನಿನ್ನನ್ನು ಎಲ್ಲ ರೀತಿಯಿಂದ ರಕ್ಷಿಸಲಿ.॥3॥

ಮೂಲಮ್ - 4

ಯೇಭ್ಯಃ ಪ್ರಣಮಸೇ ಪುತ್ರ ದೇವೇಷ್ವಾಯತನೇಷು ಚ ।
ತೇ ಚ ತ್ವಾಮಭಿರಕ್ಷಂತು ವನೇ ಸಹ ಮಹರ್ಷಿಭಿಃ ॥

ಅನುವಾದ

ಮಗು! ದೇವಮಂದಿರಗಳಲ್ಲಿ ಮತ್ತು ಪವಿತ್ರಸ್ಥಳಗಳಲ್ಲಿ ನೀನು ಯಾವ ದೇವತೆಗಳನ್ನು ಭಕ್ತಿಯಿಂದ ವಂದಿಸುತ್ತಿರುವೆಯೋ ಆ ಎಲ್ಲ ದೇವತೆಗಳು ಕಾಡಿನಲ್ಲಿ ಋಷಿಗಳೊಡನೆ ಇರುವ ನಿನ್ನನ್ನು ರಕ್ಷಿಸಲಿ.॥4॥

ಮೂಲಮ್ - 5

ಯಾನಿ ದತ್ತಾನಿ ತೇಽಸ್ತ್ರಾಣಿ ವಿಶ್ವಾಮಿತ್ರೇಣ ಧೀಮತಾ ।
ತಾನಿ ತ್ವಾಮಭಿರಕ್ಷಂತು ಗುಣೈಃ ಸಮುದಿತಂ ಸದಾ ॥

ಅನುವಾದ

ನೀನು ಸದ್ಗುಣಗಳಿಂದ ಪ್ರಕಾಶಿತನಾಗು. ಧೀಮಂತರಾದ ವಿಶ್ವಾಮಿತ್ರರು ನಿನಗೆ ಕರುಣಿಸಿದ ಎಲ್ಲ ದಿವ್ಯಾಸ್ತ್ರಗಳು ಸದಾಕಾಲ ಎಲ್ಲ ಕಡೆಗಳಿಂದ ನಿನ್ನನ್ನು ಕಾಪಾಡಲಿ.॥5॥

ಮೂಲಮ್ - 6

ಪಿತೃಶುಶ್ರೂಷಯಾ ಪುತ್ರ ಮಾತೃಶುಶ್ರೂಷಯಾ ತಥಾ ।
ಸತ್ಯೇನ ಚ ಮಹಾಬಾಹೋ ಚಿರಂ ಜೀವಾಭಿರಕ್ಷಿತಃ ॥

ಅನುವಾದ

ಮಹಾಬಾಹುವೇ! ನೀನು ತಂದೆಯ ಶುಶ್ರೂಷೆ, ಮಾತೆಯ ಸೇವೆ ಹಾಗೂ ಸತ್ಯದ ಪಾಲನೆಯಿಂದ ಸುರಕ್ಷಿತನಾಗಿ ಚಿರಂಜೀವಿಯಾಗಿರು.॥6॥

ಮೂಲಮ್ - 7

ಸಮಿತ್ಕುಶಪವಿತ್ರಾಣಿ ವೇದ್ಯಶ್ಚಾಯತನಾನಿ ಚ ।
ಸ್ಥಂಡಿಲಾನಿ ಚ ವಿಪ್ರಾಣಾಂ ಶೈಲಾ ವೃಕ್ಷಾಃ ಕ್ಷುಪಾ ಹ್ರದಾಃ ।
ಪತಂಗಾಃ ಪನ್ನಗಾಃ ಸಿಂಹಾಸ್ತ್ವಾಂ ರಕ್ಷಂತು ನರೋತ್ತಮ ॥

ಅನುವಾದ

ನರಶ್ರೇಷ್ಠನೇ! ಸಮಿತ್ತು, ದರ್ಭೆ, ಪವಿತ್ರಕ, ವೇದಿಗಳು, ಮಂದಿರ, ಬ್ರಾಹ್ಮಣರ ದೇವಪೂಜಾಸ್ಥಾನ, ಪರ್ವತ, ವೃಕ್ಷ, ಗಿಡಗಳು, ಜಲಾಶಯ, ಪಕ್ಷಿ, ಸರ್ಪ ಮತ್ತು ಸಿಂಹ - ಇವೆಲ್ಲವೂ ವನದಲ್ಲಿ ನಿನ್ನನ್ನು ರಕ್ಷಿಸಲಿ.॥7॥

ಮೂಲಮ್ - 8

ಸ್ವಸ್ತಿ ಸಾಧ್ಯಾಶ್ಚ ವಿಶ್ವೇ ಚ ಮರುತಶ್ಚ ಮಹರ್ಷಭಿಃ ।
ಸ್ವಸ್ತಿ ಧಾತಾ ವಿಧಾತಾ ಚ ಸ್ವಸ್ತಿ ಪೂಷಾ ಭಗೋಽರ್ಯಮಾ ॥

ಅನುವಾದ

ಸಾಧ್ಯ, ವಿಶ್ವೇದೇವ, ಮಹರ್ಷಿಗಳ ಸಹಿತ ಮರುದ್ಗಣರು ನಿನಗೆ ಕಲ್ಯಾಣ ಮಾಡಲಿ. ಧಾತಾ-ವಿಧಾತಾ, ಪೂಷಾ, ಭಗ ಮತ್ತು ಅರ್ಯಮಾ ಇವರು ನಿನಗೆ ಮಂಗಲಕಾರಿಗಳಾಗಲಿ.॥8॥

ಮೂಲಮ್ - 9

ಲೋಕಪಾಲಾಶ್ಚ ತೇ ಸರ್ವೇ ವಾಸವಪ್ರಮುಖಾಸ್ತಥಾ ।
ಋತವಃ ಷಟ್ ಚ ತೇ ಸರ್ವೇ ಮಾಸಾಃ ಸಂವತ್ಸರಾಃ ಕ್ಷಪಾಃ ॥

ಮೂಲಮ್ - 10

ದಿನಾನಿ ಚ ಮುಹೂರ್ತಾಶ್ಚ ಸ್ವಸ್ತಿ ಕುರ್ವಂತು ತೇ ಸದಾ ।
ಶ್ರುತಿಃ ಸ್ಮೃತಿಶ್ಚ ಧರ್ಮಶ್ಚ ಪಾತು ತ್ವಾಂ ಪುತ್ರ ಸರ್ವತಃ ॥

ಅನುವಾದ

ಇಂದ್ರಾದಿ ಸಮಸ್ತ ಲೋಕಪಾಲಕರು, ಆರು ಋತುಗಳು, ಎಲ್ಲ ಮಾಸಗಳು, ಸಂವತ್ಸರ, ಹಗಲು, ರಾತ್ರಿ, ಮುಹೂರ್ತ ಇವೆಲ್ಲವೂ ನಿನಗೆ ಮಂಗಳಕರವಾಗಲಿ. ಶ್ರುತಿ, ಸ್ಮೃತಿ ಮತ್ತು ಧರ್ಮವೂ ಎಲ್ಲ ಕಡೆಯಿಂದ ನಿನ್ನನ್ನು ರಕ್ಷಿಸಲಿ.॥9-10॥

ಮೂಲಮ್ - 11

ಸ್ಕಂದಶ್ಚ ಭಗವಾನ್ ದೇವಃ ಸೋಮಶ್ಚ ಸಬೃಹಸ್ಪತಿಃ ।
ಸಪ್ತರ್ಷಯೋ ನಾರದಶ್ಚ ತೇ ತ್ವಾಂರಕ್ಷಂತು ಸರ್ವತಃ ॥

ಅನುವಾದ

ಭಗವಾನ್ ಸ್ಕಂದದೇವರು, ಸೋಮ, ಬೃಹಸ್ಪತಿ, ಸಪ್ತಋಷಿಗಳು, ನಾರದ - ಇವರೆಲ್ಲರೂ ನಿನ್ನನ್ನು ರಕ್ಷಿಸಲಿ.॥11॥

ಮೂಲಮ್ - 12

ಯೇ ಚಾಪಿ ಸರ್ವತಃ ಸಿದ್ಧಾ ದಿಶಶ್ಚ ಸದಿಗೀಶ್ವರಾಃ ।
ಸ್ತುತಾ ಮಯಾ ವನೇ ತಸ್ಮಿನ್ ಪಾಂತು ತ್ವಾಂ ಪುತ್ರ ನಿತ್ಯಶಃ ॥

ಅನುವಾದ

ಮಗು! ಪ್ರಸಿದ್ಧ ಸಿದ್ಧಗಣರು, ದಿಕ್ಕುಗಳು, ದಿಕ್ಪಾಲಕರು ನಾನು ಮಾಡಿದ ಸ್ತುತಿಯಿಂದ ಸಂತುಷ್ಟರಾಗಿ ಕಾಡಿನಲ್ಲಿ ಎಲ್ಲ ಕಡೆಗಳಿಂದ ನಿನ್ನನ್ನು ಕಾಪಾಡಲಿ.॥12॥

ಮೂಲಮ್ - 13

ಶೈಲಾಃ ಸರ್ವೇ ಸಮುದ್ರಾಶ್ಚ ರಾಜಾ ವರುಣ ಏವ ಚ ।
ದ್ಯೌರಂತರಿಕ್ಷಂ ಪೃಥಿವೀ ವಾಯುಶ್ಚ ಸಚರಾಚರಃ ॥

ಮೂಲಮ್ - 14

ನಕ್ಷತ್ರಾಣಿ ಚ ಸರ್ವಾಣಿ ಗ್ರಹಾಶ್ಚ ಸಹದೈವತೈಃ ।
ಅಹೋರಾತ್ರೇ ತಥಾ ಸಂಧ್ಯೇ ಪಾಂತು ತ್ವಾಂ ವನಮಾಶ್ರಿತಮ್ ॥

ಅನುವಾದ

ಸಮಸ್ತ ಪರ್ವತಗಳು, ಸಮುದ್ರಗಳು, ವರುಣರಾಜ, ದ್ಯುಲೋಕ, ಅಂತರಿಕ್ಷ, ಪೃಥಿವೀ, ವಾಯು, ಚರಾಚರ ಪ್ರಾಣಿಗಳು, ಸಮಸ್ತ ನಕ್ಷತ್ರಗಳು, ಅಧಿ-ಪ್ರತ್ಯಧಿ ದೇವತೆಗಳ ಸಹಿತ ಗ್ರಹರು, ಹಗಲು, ರಾತ್ರಿ, ಎರಡೂ ಸಂಧ್ಯೆಗಳೂ ಇವರೆಲ್ಲರೂ ವನವಾಸದಲ್ಲಿ ನಿನ್ನನ್ನು ರಕ್ಷಿಸಲಿ.॥13-14॥

ಮೂಲಮ್ - 15

ಋತವಶ್ಚಾಪಿ ಷಟ್ ಚಾನ್ಯೇ ಮಾಸಾಃ ಸಂವತ್ಸರಾಸ್ತಥಾ ।
ಕಲಾಶ್ಚ ಕಾಷ್ಠಾಶ್ಚ ತಥಾ ತವ ಶರ್ಮ ದಿಶಂತು ತೇ ॥

ಅನುವಾದ

ಆರು ಋತುಗಳು, ಇತರ ಮಾಸಗಳು, ಸಂವತ್ಸರ, ಕಲಾ ಮತ್ತು ಕಾಷ್ಠ ಇವೆಲ್ಲವೂ ನಿನ್ನನ್ನು ರಕ್ಷಿಸಲಿ.॥15॥

ಮೂಲಮ್ - 16

ಮಹಾವನೇಽಪಿ ಚರತೋ ಮುನಿವೇಷಸ್ಯ ಧೀಮತಃ ।
ತಥಾ ದೇವಾಶ್ಚ ದೈತ್ಯಾಶ್ಚ ಭವಂತು ಸುಖದಾಃ ಸದಾ ॥

ಅನುವಾದ

ಮುನಿವೇಷ ಧರಿಸಿ ಆ ವಿಶಾಲ ವನದಲ್ಲಿ ಸಂಚರಿಸುವ ಬುದ್ಧಿವಂತ ಪುತ್ರನಾದ ನಿನಗೆ ಸಮಸ್ತ ದೇವತೆಗಳು, ದೈತ್ಯರು ಸುಖದಾಯಕವಾಗಿರಲಿ.॥16॥

ಮೂಲಮ್ - 17

ರಾಕ್ಷಸಾನಾಂ ಪಿಶಾಚಾನಾಂ ರೌದ್ರಾಣಾಂ ಕ್ರೂರಕರ್ಮಣಾಮ್ ।
ಕ್ರವ್ಯಾದಾನಾಂ ಚ ಸರ್ವೇಷಾಂ ಮಾ ಭೂತ್ಪುತ್ರಕ ತೇ ಭಯಮ್ ॥

ಅನುವಾದ

ಮಗು! ಭಯಂಕರ ರಾಕ್ಷಸರು, ಕ್ರೂರಕರ್ಮಿ ಪಿಶಾಚಿಗಳು, ಸಮಸ್ತ ಮಾಂಸಭಕ್ಷಿ ಜಂತುಗಳು ಇವುಗಳಿಂದ ನಿನಗೆ ಎಂದೂ ಭಯವಾಗದಿರಲಿ.॥17॥

ಮೂಲಮ್ - 18

ಪ್ಲವಗಾ ವೃಶ್ಚಿಕಾ ದಂಶಾ ಮಶಕಾಶ್ಚೈವ ಕಾನನೇ ।
ಸರೀಸೃಪಾಶ್ಚ ಕೀಟಾಶ್ಚ ಮಾ ಭೂವನ್ ಗಹನೇ ತವ ॥

ಅನುವಾದ

ಗಹನವಾದ ಕಾಡಿನಲ್ಲಿರುವ ಕಪಿಗಳೂ, ಚೇಳುಗಳೂ, ಕಾಡುನೊಣಗಳು, ಸೊಳ್ಳೆಗಳು, ಸರ್ಪಗಳೂ ಕೀಟಗಳೂ ನಿನಗೆ ಬಾಧೆಯನ್ನುಂಟು ಮಾಡದಿರಲಿ.॥18॥

ಮೂಲಮ್ - 19

ಮಹಾದ್ವಿಪಾಶ್ಚ ಸಿಂಹಾಶ್ಚ ವ್ಯಾಘ್ರಾ ಋಕ್ಷಾಶ್ಚ ದಂಷ್ಟ್ರಿಣಃ ।
ಮಹೀಷಾಃ ಶೃಂಗಿಣೋ ರೌದ್ರಾ ನ ತೇ ದ್ರುಹ್ಯಂತು ಪುತ್ರಕ ॥

ಅನುವಾದ

ಮದಿಸಿದ ಕಾಡಾನೆಗಳೂ, ಸಿಂಹಗಳೂ, ಹುಲಿಗಳೂ, ಕರಡಿಗಳೂ, ಕಾಡುಹಂದಿಗಳೂ, ದೊಡ್ಡ-ದೊಡ್ಡ ಕೋಡುಗಳುಳ್ಳ ಕಾಡುಕೋಣಗಳೂ, ಕಾಡೆಮ್ಮೆಗಳೂ ಮತ್ತು ಭಯಂಕರ ದುಷ್ಟ ಪ್ರಾಣಿಗಳೂ ಅರಣ್ಯದಲ್ಲಿ ನಿನ್ನನ್ನು ಘಾಸಿಪಡಿಸದಿರಲಿ.॥19॥

ಮೂಲಮ್ - 20

ನೃಮಾಂಸಭೋಜನಾ ರೌದ್ರಾ ಯೇ ಚಾನ್ಯೇ ಸರ್ವ ಜಾತಯಃ ।
ಮಾ ಚ ತ್ವಾಂ ಹಿಂಸಿಷುಃ ಪುತ್ರ ಮಯಾ ಸಂಪೂಜಿತಾಸ್ತ್ವಿಹ ॥

ಅನುವಾದ

ವತ್ಸ! ಇತರ ಎಲ್ಲ ಜಾತಿಯ ನರಮಾಂಸಭಕ್ಷಿ ಭಯಂಕರ ಪ್ರಾಣಿಗಳು-ನನ್ನಿಂದ ಪೂಜಿತರಾಗಿ ಸಂತುಷ್ಟರಾಗಿ ಕಾಡಿನಲ್ಲಿ ನಿನ್ನನ್ನು ಹಿಂಸಿಸದಿರಲಿ.॥20॥

ಮೂಲಮ್ - 21

ಆಗಮಾಸ್ತೇ ಶಿವಾಃ ಸಂತು ಸಿಧ್ಯಂತು ಚ ಪರಾಕ್ರಮಾಃ ।
ಸರ್ವಸಂಪತ್ತಯೋ ರಾಮ ಸ್ವಸ್ತಿಮಾನ್ ಗಚ್ಚ ಪುತ್ರಕ ॥

ಅನುವಾದ

ಮಗು ರಾಮ! ಎಲ್ಲ ಮಾರ್ಗಗಳು ನಿನಗೆ ಮಂಗಲಕಾರಿಯಾಗಿರಲಿ. ನಿನ್ನ ಪರಾಕ್ರಮ ಸಫಲವಾಗಲಿ ಹಾಗೂ ನಿನಗೆ ಎಲ್ಲ ಸಂಪತ್ತುಗಳು ಪ್ರಾಪ್ತವಾಗಲಿ. ನೀನು ಕ್ಷೇಮದಿಂದ ಅರಣ್ಯಕ್ಕೆ ಪ್ರಯಾಣಮಾಡು.॥21॥

ಮೂಲಮ್ - 22

ಸ್ವಸ್ತಿ ತೇಽಸ್ತ್ವಾಂತರಿಕ್ಷೇಭ್ಯಃ ಪಾರ್ಥಿವೇಭ್ಯಃ ಪುನಃ ಪುನಃ ।
ಸರ್ವೇಭ್ಯಶ್ಚೈವ ದೇವೇಭ್ಯೋ ಯೇ ಚ ತೇ ಪರಿಪಂಥಿನಃ ॥

ಅನುವಾದ

ಅಂತರಿಕ್ಷದಲ್ಲಿ ಸಂಚರಿಸುವವರಿಂದಲೂ, ಭೂಮಿಯಲ್ಲಿ ಸಂಚರಿಸುವವರಿಂದಲೂ, ಸಕಲ ದೇವತೆಗಳಿಂದಲೂ ಮತ್ತು ಶತ್ರುಗಳಿಂದಲೂ ನಿನಗೆ ಮಂಗಳವಾಗುತ್ತಿರಲಿ.॥22॥

ಮೂಲಮ್ - 23

ಶುಕ್ರಃ ಸೋಮಶ್ಚ ಸೂರ್ಯಶ್ಚ ಧನದೋಽಥ ಯಮಸ್ತಥಾ ।
ಪಾಂತು ತ್ವಾಮರ್ಚಿತಾ ರಾಮದಂಡಕಾರಣ್ಯವಾಸಿನಮ್ ॥

ಅನುವಾದ

ಶ್ರೀರಾಮಾ! ಶುಕ್ರ, ಸೋಮ, ಸೂರ್ಯ, ಕುಬೇರ, ಯಮ-ಇವರು ನನ್ನಿಂದ ಪೂಜೆ ಕೈಗೊಂಡು ದಂಡಕಾರಣ್ಯದಲ್ಲಿ ವಾಸಿಸುತ್ತಿರುವಾಗ ನಿನ್ನನ್ನು ಸದಾ ರಕ್ಷಿಸುತ್ತಿರಲಿ.॥23॥

ಮೂಲಮ್ - 24

ಅಗ್ನಿರ್ವಾಯುಸ್ತಥಾ ಧೂಮೋ ಮಂತ್ರಾಶ್ಚಿರ್ಷಿಮುಖಚ್ಚ್ಯುತಾಃ ।
ಉಪಸ್ಪರ್ಶನಕಾಲೇ ತು ಪಾಂತು ತ್ವಾಂ ರಘುನಂದನ ॥

ಅನುವಾದ

ರಘುನಂದನ! ಸ್ನಾನ ಮತ್ತು ಆಚಮನ ಸಮಯದಲ್ಲಿ, ಅಗ್ನಿ, ವಾಯು, ಧೂಮ ಹಾಗೂ ಋಷಿಗಳ ಮುಖದಿಂದ ಹೊರಡುವ ವೇದಮಂತ್ರಗಳು ನಿನ್ನನ್ನು ರಕ್ಷಿಸಲಿ.॥24॥

ಮೂಲಮ್ - 25

ಸರ್ವಲೋಕಪ್ರಭುರ್ಬ್ರಹ್ಮಾ ಭೂತಕರ್ತೃ ತಥರ್ಷಯಃ ।
ಯೇ ಚ ಶೇಷಾಃ ಸುರಾಸ್ತೇ ತು ರಕ್ಷಂತು ವನವಾಸಿನಮ್ ॥

ಅನುವಾದ

ಸಮಸ್ತಲೋಕಗಳ ಸ್ವಾಮೀ ಬ್ರಹ್ಮದೇವರು, ಜಗತ್ಕಾರಣನಾದ ಪರಬ್ರಹ್ಮ, ಋಷಿಗಳು, ಇವರಲ್ಲದೆ ಇತರ ದೇವತೆಗಳು ಹೀಗೆ ಎಲ್ಲರೂ ವನವಾಸ ಕಾಲದಲ್ಲಿ ನಿನ್ನನ್ನು ರಕ್ಷಿಸಲಿ.॥25॥

ಮೂಲಮ್ - 26

ಇತಿ ಮಾಲ್ಯೈಃ ಸುರಗಣಾನ್ ಗಂಧೈಶ್ಚಾಪಿ ಯಶಸ್ವಿನೀ ।
ಸ್ತುತಿಭಿಶ್ಚಾನುರೂಪಾಭಿರಾನರ್ಚಾಯತಲೋಚನಾ ॥

ಅನುವಾದ

ಹೀಗೆ ಹೇಳಿ ವಿಶಾಲಲೋಚನೆ ಯಶಸ್ವಿನೀ ರಾಣಿ ಕೌಸಲ್ಯೆಯು ಪುಷ್ಪಮಾಲೆ, ಗಂಧಾದಿ ಉಪಚಾರಗಳಿಂದ ಸ್ತುತಿ-ಸ್ತೋತ್ರಗಳಿಂದ ದೇವತೆಗಳನ್ನು ಪೂಜಿಸಿದಳು.॥26॥

ಮೂಲಮ್ - 27

ಜ್ವಲನಂ ಸಮುಪಾದಾಯ ಬ್ರಾಹ್ಮಣೇನ ಮಹಾತ್ಮನಾ ।
ಹಾವಯಾಮಾಸ ವಿಧಿನಾ ರಾಮಮಂಗಲಕಾರಣಾತ್ ॥

ಅನುವಾದ

ಆಕೆಯು ಶ್ರೀರಾಮನ ಕಲ್ಯಾಣಕ್ಕಾಗಿ ಮಹಾತ್ಮನಾದ ಬ್ರಾಹ್ಮಣರ ಮೂಲಕ ಯಜ್ಞೇಶ್ವರನನ್ನು ಪ್ರತಿಷ್ಠಾಪಿಸಿ ವಿಧಿವತ್ತಾಗಿ ಹೋಮ ಮಾಡಿಸಿದಳು.॥27॥

ಮೂಲಮ್ - 28

ಘೃತಂ ಶ್ವೇತಾನಿ ಮಾಲ್ಯಾನಿ ಸಮಿಧಶ್ಚೈವ ಸರ್ಷಪಾನ್ ।
ಉಪಸಂಪಾದಯಾಮಾಸ ಕೌಸಲ್ಯಾ ಪರಮಾಂಗನಾ ॥

ಅನುವಾದ

ತುಪ್ಪ, ಬಿಳಿಯ ಹೂವಿನ ಮಾಲೆಗಳು, ಸಮಿತ್ತುಗಳು, ಬಿಳಿಯ ಸಾಸಿವೆ ಮೊದಲಾದ ಹೋಮದ್ರವ್ಯಗಳನ್ನು ಮಹಾರಾಣಿ ಕೌಸಲ್ಯೆಯು ಸಿದ್ಧಪಡಿಸಿದಳು.॥28॥

ಮೂಲಮ್ - 29

ಉಪಾಧ್ಯಾಯಃ ಸ ವಿಧಿನಾ ಹುತ್ವಾ ಶಾಂತಿಮನಾಮಯಮ್ ।
ಹುತಹವ್ಯಾವಶೇಷೇಣ ಬಾಹ್ಯಂ ಬಲಿಮಕಲ್ಪಯತ್ ॥

ಅನುವಾದ

ಪುರೋಹಿತನು ಸಮಸ್ತ ಉಪದ್ರವಗಳ ಶಾಂತಿಗಾಗಿ ಹಾಗೂ ಆರೋಗ್ಯದ ಉದ್ದೇಶದಿಂದ ವಿಧಿವತ್ತಾಗಿ ಅಗ್ನಿಯಲ್ಲಿ ಹವನಮಾಡಿ, ಉಳಿದ ಹವಿಸ್ಸಿನಿಂದ ವೇದಿಯ ಸುತ್ತಲೂ ಇಂದ್ರಾದಿ ಲೋಕಪಾಲಕರಿಗೆ ಬಲಿಪ್ರದಾನವನ್ನು ಮಾಡಿದನು.॥29॥

ಮೂಲಮ್ - 30

ಮಧುದಧ್ಯಕ್ಷತಘೃತೈಃ ಸ್ವಸ್ತಿವಾಚ್ಯಂ ದ್ವಿಜಾಂಸ್ತತಃ ।
ವಾಚಯಾಮಾಸ ರಾಮಸ್ಯ ವನೇ ಸ್ವಸ್ತ್ಯಯನಕ್ರಿಯಾಮ್ ॥

ಅನುವಾದ

ಅನಂತರ ಸ್ವಸ್ತಿವಾಚನಕ್ಕೆ ಬಂದ ದ್ವಿಜರನ್ನು ಜೇನು, ಮೊಸರು, ಅಕ್ಷತೆ, ತುಪ್ಪ ಮುಂತಾದುವನ್ನು ಅರ್ಪಿಸಿ ‘ವನದಲ್ಲಿ ಶ್ರೀರಾಮನಿಗೆ ಮಂಗಲವಾಗಲಿ’ ಎಂದು ಕೌಸಲ್ಯೆಯು ಅವರೆಲ್ಲರಿಂದ ಸ್ವಸ್ತಿವಾಚನ ಮಂತ್ರಗಳ ಪಠಣ ಮಾಡಿಸಿದಳು.॥30॥

ಮೂಲಮ್ - 31

ತತಸ್ತಸ್ಮೈ ದ್ವಿಜೇಂದ್ರಾಯ ರಾಮಮಾತಾ ಯಶಸ್ವಿನೀ ।
ದಕ್ಷಿಣಾಂ ಪ್ರದದೌ ಕಾಮ್ಯಾಂ ರಾಘವಂ ಚೇದಮಬ್ರವೀತ್ ॥

ಅನುವಾದ

ಬಳಿಕ ಯಶಸ್ವಿನೀ ಶ್ರೀರಾಮಮಾತೆಯು ಆ ವಿಪ್ರವರ ಪುರೋಹಿತರಿಗೆ ಯಥೇಚ್ಛವಾಗಿ ದಕ್ಷಿಣೆಯನ್ನು ಕೊಟ್ಟು ಶ್ರೀರಾಮನಲ್ಲಿ ಹೇಳಿದಳು.॥31॥

ಮೂಲಮ್ - 32

ಯನ್ಮಙ್ಗಲಂ ಸಹಸ್ರಾಕ್ಷೇ ಸರ್ವದೇವನಮಸ್ಕೃತೇ ।
ವೃತ್ರನಾಶೇ ಸಮಭವತ್ತತ್ತೇ ಭವತು ಮಂಗಲಮ್ ॥

ಅನುವಾದ

ವೃತ್ರಾಸುರನನ್ನು ನಾಶಮಾಡುವ ನಿಮಿತ್ತದಿಂದ ಸರ್ವದೇವವಂದಿತ ಸಹಸ್ರಾಕ್ಷ ಇಂದ್ರನಿಗೆ ಪ್ರಾಪ್ತವಾದ ಮಂಗಲಮಯ ಆಶೀರ್ವಾದಗಳು ನಿನಗೂ ದೊರೆಯಲಿ.॥32॥

ಮೂಲಮ್ - 33

ಯನ್ಮಙ್ಗಲಂ ಸುಪರ್ಣಸ್ಯ ವಿನತಾಕಲ್ಪಯತ್ ಪುರಾ ।
ಅಮೃತಂ ಪಾರ್ಥಯಾನಸ್ಯ ತತ್ತೇ ಭವತು ಮಂಗಲಮ್ ॥

ಅನುವಾದ

ಹಿಂದೆ ವಿನತಾದೇವಿಯು ಅಮೃತವನ್ನು ತರಲು ಇಚ್ಛಿಸಿದ ತನ್ನ ಪುತ್ರ ಗರುಡನಿಗೆ ಯಾವ ಮಂಗಲಕೃತ್ಯ ಮಾಡಿದ್ದಳೋ, ಅದೇ ಮಂಗಲವು ನಿನಗೂ ಸಿಗಲಿ.॥33॥

ಮೂಲಮ್ - 34

ಅಮೃತೋತ್ಪಾದನೇ ದೈತ್ಯಾನ್ ಘ್ನತೋ ವಜ್ರಧರಸ್ಯ ಯತ್ ।
ಅದಿತಿರ್ಮಂಗಲಂ ಪ್ರಾದಾತ್ ತತ್ ತೇ ಭವತು ಮಂಗಲಮ್ ॥

ಅನುವಾದ

ಅಮೃತದ ಉತ್ಪತ್ತಿಯ ಸಮಯ ದೈತ್ಯರನ್ನು ಸಂಹರಿಸುವ ವಜ್ರಧಾರೀ ಇಂದ್ರನಿಗೆ ಅದಿತಿಮಾತೆಯು ಮಾಡಿದ ಮಂಗಲ ಆಶೀರ್ವಾದಗಳು ನಿನಗೆ ದೊರೆಯಲಿ.॥34॥

ಮೂಲಮ್ - 35

ತ್ರೀವಿಕ್ರಮಾನ್ ಪ್ರಕ್ರಮತೋ ವಿಷ್ಣೋರತುಲತೇಜಸಃ ।
ಯದಾಸೀನ್ಮಗಲಂ ರಾಮ ತತ್ತೇ ಭವತು ಮಂಗಲಮ್ ॥

ಅನುವಾದ

ಶ್ರೀರಾಮಾ! ಒಂದೆ ಹೆಜ್ಜೆಯಿಂದ ಜಗತ್ತನ್ನು ಅಳೆದ ತೇಜಸ್ವೀ ಭಗವಾನ್ ತ್ರಿವಿಕ್ರಮನಿಗೆ ಯಾವ ಮಗಲಾಶಂಸನೆ ಮಾಡಿದ್ದರೋ ಅದೇ ಮಂಗಲಾಶಂಸನೆ ನಿನಗೂ ಪ್ರಾಪ್ತವಾಗಲಿ.॥35॥

ಮೂಲಮ್ - 36

ಋಷಯಃ ಸಾಗರಾ ದ್ವೀಪಾ ವೇದಾ ಲೋಕಾ ದಿಶಶ್ಚ ತೇ ।
ಮಂಗಲಾನಿ ಮಹಾಬಾಹೋ ದಿಶಂತು ಶುಭಮಂಗಲಮ್ ॥

ಅನುವಾದ

ಮಹಾಬಾಹೋ! ಋಷಿ, ಮುನಿ, ಸಮುದ್ರ, ದ್ವೀಪ, ವೇದ, ಸಮಸ್ತ ಲೋಕಗಳು, ದಿಕ್ಕುಗಳು ನಿನಗೆ ಮಂಗಲವನ್ನು ಕೊಡಲಿ. ನಿನಗೆ ಸದಾ ಶುಭಮಂಗಲವಾಗಲಿ.॥36॥

ಮೂಲಮ್ - 37

ಇತಿ ಪುತ್ರಸ್ಯ ಶೇಷಾಶ್ಚ ಕೃತ್ವಾ ಶಿರಸಿ ಭಾಮಿನೀ ।
ಗಂಧೈಶ್ಚಾಪಿ ಸಮಾಲಭ್ಯ ರಾಮಮಾಯತಲೋಚನಾ ॥

ಮೂಲಮ್ - 38

ಔಷಧೀಂ ಚ ಸುಸಿದ್ಧಾರ್ಥಾಂ ವಿಶಲ್ಯಕರಣೀಂ ಶುಭಾಮ್ ।
ಚಕಾರ ರಕ್ಷಾಂ ಕೌಸಲ್ಯಾ ಮಂತ್ರೈರಭಿಜಜಾಪ ಚ ॥

ಅನುವಾದ

ಈ ಪ್ರಕಾರ ಆಶೀರ್ವಾದವನ್ನು ಕೊಟ್ಟು ವಿಶಾಲಲೋಚನೆ ಭಾಮಿನಿ ಕೌಸಲ್ಯೆಯು ಮಗನ ಮಸ್ತಕದ ಮೇಲೆ ಪ್ರಸಾದ ರೂಪೀ ಅಕ್ಷತೆಯನ್ನು ಹಾಕಿ ತಿಲಕವನ್ನಿಟ್ಟಳು. ಎಲ್ಲ ಮನೋರಥಗಳನ್ನು ಸಿದ್ಧಪಡಿಸುವ ವಿಶಲ್ಯಕರಣೀ ಎಂಬ ಮೂಲಿಕೆಯನ್ನು ರಕ್ಷೆಯಾಗಿ ಶ್ರೀರಾಮನ ಕೈಗೆ ಕಟ್ಟಿ ಮೂಲಿಕಾಧಿದೇವತಾ ಮಂತ್ರವನ್ನು ರಕ್ಷಾಬಂಧನ ಮಂತ್ರವನ್ನು ಜಪಿಸಿದಳು.॥37-38॥

ಮೂಲಮ್ - 39

ಉವಾಚಾಃ ಪ್ರಹೃಷ್ಟೇವ ಸಾ ದುಃಖವಶವರ್ತಿನೀ ।
ವಾಙ್ಮಾತ್ರೇಣ ನ ಭಾವೇನ ವಾಚಾ ಸಂಸಜ್ಜಮಾನಯಾ ॥

ಅನುವಾದ

ತದನಂತರ ಕೌಸಲ್ಯೆಯು ಸಂತೋಷಗೊಂಡವಳಂತೆ ಮಾತನ್ನೇನೋ ಆಡಿದಳು, ಮಂಗಳಾಶಾಸನವನ್ನೂ ಮಾಡಿಸಿದಳು. ಆದರೆ ಆಕೆಯ ಹೃದಯದಲ್ಲಿ ದುಃಖವು ತುಂಬಿಕೊಂಡಿತ್ತು. ಮಾತಿನಲ್ಲಿ ರಾಮನನ್ನು ಹೋಗಿಬಾ ಎಂದು ಹೇಳಿದರೂ ಅವಳ ಭಾವನೆ ಶ್ರೀರಾಮನನ್ನು ತ್ಯಜಿಸುವುದಾಗಿರಲಿಲ್ಲ. ಆಕೆಯು ಖೇದಗೊಂಡು ಗದ್ಗದಿತಳಾಗಿ ಅಸ್ಪಷ್ಟವಾದ ಮಾತುಗಳಿಂದ ಮಂತ್ರವನ್ನು ಪಠಿಸುತ್ತಿದ್ದಳು.॥39॥

ಮೂಲಮ್ - 40

ಆನಮ್ಯ ಮೂರ್ಧ್ನಿ ಚಾಘ್ರಾಯಪರಿಷ್ವಜ್ಯ ಯಶಸ್ವಿನೀ ।
ಅವದತ್ ಪತ್ರಮಿಷ್ಟಾರ್ಥೋ ಗಚ್ಛ ರಾಮ ಯಥಾಸುಖಮ್ ॥

ಮೂಲಮ್ - 41

ಅರೋಗಂ ಸರ್ವಸಿದ್ಧಾರ್ಥಮಯೋಧ್ಯಾಂ ಪುನರಾಗತಮ್ ।
ಪಶ್ಯಾಮಿ ತ್ವಾಂ ಸುಖಂ ವತ್ಸ ಸಂಧಿತಂ ರಾಜವರ್ತ್ಮಸು ॥

ಅನುವಾದ

ಆನಂತರ ರಾಮನ ತಲೆಯನ್ನು ಬಗ್ಗಿಸಿಕೊಂಡು ಆಘ್ರಾಣಿಸಿ ಯಶಸ್ವಿನೀ ಕೌಸಲ್ಯೆಯು ಅವನನ್ನು ತಬ್ಬಿಕೊಂಡು ಹೇಳಿದಳು- ವತ್ಸ ರಾಮಾ! ನೀನು ಸಫಲ ಮನೋರಥನಾಗಿ ಸುಖವಾಗಿ ವನಕ್ಕೆ ಹೋಗಿ ಬಾ. ಪೂರ್ಣ ಕಾಮನಾಗಿ, ರೋಗರಹಿತನಾಗಿ ಕ್ಷೇಮವಾಗಿ ಅಯೋಧ್ಯೆಗೆ ಮರಳಿದಾಗ ನಿನ್ನನ್ನು ಹಿಂದಿನ ರಾಜರ್ಷಿಗಳ ಮಾರ್ಗದಲ್ಲಿ ಸುಸ್ಥಿರನಾಗಿರುವುದನ್ನು ನೋಡಿ ಸುಖಿಯಾಗುವೆನು.॥40-41॥

ಮೂಲಮ್ - 42

ಪ್ರಣಷ್ಟದುಃಖಸಂಕಲ್ಪಾ ಹರ್ಷವಿದ್ಯೋತಿತಾನನಾ ।
ದ್ರಕ್ಷ್ಯಾಮಿ ತ್ವಾಂ ವನಾತ್ಪ್ರಾಪ್ತಂ ಪೂರ್ಣಚಂದ್ರಮಿವೋದಿತಮ್ ॥

ಅನುವಾದ

ಆಗ ನನ್ನ ದುಃಖಪೂರ್ಣ ಸಂಕಟವು ಇಲ್ಲವಾಗುವುದು, ಮುಖದಲ್ಲಿ ಹರ್ಷಯುಕ್ತ ಉಲ್ಲಾಸವು ಆವರಿಸೀತು. ವನವಾಸದಿಂದ ಬಂದಿರುವ ನಿನ್ನನ್ನು ನಾನು ಪೂರ್ಣಿಮೆಯ ದಿನ ಉದಿಸಿದ ಪೂರ್ಣಚಂದ್ರನಂತೆ ನೋಡುವೆನು.॥42॥

ಮೂಲಮ್ - 43

ಭದ್ರಾಸನಗತಂ ರಾಮ ವನವಾಸಾದಿಹಾಗತಮ್ ।
ದ್ರಕ್ಷ್ಯಾಮಿ ಚ ಪುನಸ್ತ್ವಾಂ ತು ತೀರ್ಣವಂತಂ ಪಿತುರ್ವಚಃ ॥

ಅನುವಾದ

ಶ್ರೀರಾಮಾ! ತಂದೆಯ ಪ್ರತಿಜ್ಞೆಯನ್ನು ಪೂರ್ಣಗೊಳಿಸಿ ವನವಾಸದಿಂದ ಇಲ್ಲಿಗೆ ಬಂದು ನೀನು ರಾಜಸಿಂಹಾಸನದಲ್ಲಿ ಕುಳಿತಿರುವಾಗ ನಾನು ಪುನಃ ನಿನ್ನನ್ನು ದರ್ಶಿಸುವೆನು.॥43॥

ಮೂಲಮ್ - 44

ಮಂಗಲೈರುಪಸಂಪನ್ನೋ ವನವಾಸಾದಿಹಾಗತಃ ।
ವಧ್ವಾ ಚ ಮಮ ನಿತ್ಯಂ ತ್ವಂ ಕಾಮಾನ್ ಸಂವರ್ಧಯಾಹಿ ಭೋಃ ॥

ಅನುವಾದ

ಈಗ ವನಕ್ಕೆ ಹೋಗಿ ವನವಾಸದಿಂದ ಇಲ್ಲಿಗೆ ಮರಳಿ ಬಂದು ರಾಜೋಚಿತ ಮಂಗಲಮಯ ವಸ್ತ್ರಾಭೂಷಣಗಳಿಂದ ಅಲಂಕೃತನಾಗಿ ನೀನು ಸದಾ ನನ್ನ ಸೊಸೆ ಸೀತೆಯ ಸಮಸ್ತ ಕಾಮನೆಗಳನ್ನು ಪೂರ್ಣಮಾಡುತ್ತಾ ಇರು.॥44॥

ಮೂಲಮ್ - 45

ಮಯಾರ್ಚಿತಾ ದೇವಗಣಾಃ ಶಿವಾದಯೋ
ಮಹರ್ಷಯೋ ಭೂತಗಣಾಃ ಸುರೋರಗಾಃ ।
ಅಭಿಪ್ರಯಾತಸ್ಯ ವನಂ ಚಿರಾಯ ತೇ
ಹಿತಾನಿ ಕಾಂಕ್ಷಂತು ದಿಶಶ್ಚ ರಾಘವ ॥

ಅನುವಾದ

ರಘುನಂದನ! ನಾನು ಸದಾ ಪೂಜೆ, ಸಮ್ಮಾನ ಮಾಡುವ ಶಿವನೇ ಮೊದಲಾದ ದೇವತೆಗಳು, ಮಹರ್ಷಿಗಳು, ಭೂತ ಗಣಗಳು, ದೇವೋಪಮ ನಾಗಗಳು, ಸಮಸ್ತ ದಿಕ್ಕುಗಳು-ಇವರೆಲ್ಲರೂ ವನಕ್ಕೆ ಹೋದ ಮೇಲೆ ಚಿರಕಾಲದವರೆಗೆ ನಿನ್ನ ಹಿತಸಾಧನೆಯ ಕಾಮನೆ ಮಾಡುತ್ತಿರಲಿ.॥45॥

ಮೂಲಮ್ - 46

ಅತೀವ ಚಾಶ್ರುಪ್ರತಿಪೂರ್ಣಲೋಚನಾ
ಸಮಾಪ್ಯ ಚ ಸ್ವಸ್ತ್ಯಯನಂ ಯಥಾವಿಧಿ ।
ಪ್ರದಕ್ಷಿಣಂ ಚಾಪಿ ಚಕಾರ ರಾಘವಂ
ಪುನಃ ಪುನಶ್ಚಾಪಿ ನಿರೀಕ್ಷ್ಯ ಸಸ್ವಜೇ ॥

ಅನುವಾದ

ಹೀಗೆ ತಾಯಿಯು ಕಣ್ಣುಗಳಲ್ಲಿ ನೀರು ತುಂಬಿಕೊಂಡು ವಿಧಿವತ್ತಾಗಿ ಸ್ವಸ್ತಿವಾಚನ ಕರ್ಮವನ್ನು ಪೂರ್ಣಗೊಳಿಸಿದಳು. ಮತ್ತೆ ಶ್ರೀರಾಮನಿಗೆ ಪ್ರದಕ್ಷಿಣೆ ಬಂದು ಅವನನ್ನೇ ದಿಟ್ಟಿಸಿ ನೋಡುತ್ತಾ ಎದೆಗೊತ್ತಿಕೊಂಡಳು.॥46॥

ಮೂಲಮ್ - 47

ತಥಾ ಹಿ ದೇವ್ಯಾ ಚ ಕೃತಪ್ರದಕ್ಷಿಣೋ
ನಿಪೀಡ್ಯ ಮಾತುಶ್ಚರಣೌ ಪುನಃ ಪುನಃ ।
ಜಗಾಮ ಸೀತಾನಿಲಯಂ ಮಹಾಯಶಾಃ
ಸ ರಾಘವಃ ಪ್ರಜ್ವಲಿತಸ್ತಯಾ ಶ್ರಿಯಾ ॥

ಅನುವಾದ

ದೇವೀ ಕೌಸಲ್ಯೆಯು ಶ್ರೀರಾಮನು ಪ್ರದಕ್ಷಿಣೆ ಮಾಡಿದಾಗ ಮಹಾಯಶಸ್ವೀ ರಘುನಾಥನು ಪದೇ-ಪದೇ ಮಾತೆಯ ಚರಣಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಮಂಗಲಕಾಮನಾ ಜನಿತ ಉತ್ಕೃಷ್ಟ ಶೋಭೆಯಿಂದ ಸಂಪನ್ನನಾಗಿ ಸೀತೆಯ ಭವನದ ಕಡೆಗೆ ನಡೆದನು.॥47॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತೈದನೆಯ ಸರ್ಗ ಪೂರ್ಣವಾಯಿತು.॥25॥