वाचनम्
ಭಾಗಸೂಚನಾ
ವಿಲಪಿಸುತ್ತಿದ್ದ ಕೌಸಲ್ಯೆಯು ತನ್ನನ್ನೂ ಜೊತೆಯಲ್ಲಿ ಅರಣ್ಯಕ್ಕೆ ಕರೆದುಕೊಂಡು ಹೋಗುವಂತೆ ಆಗ್ರಹ ಪಡಿಸಿದುದು, ಪತಿಸೇವೆಯೇ ಹೆಂಗಸಿನ ಧರ್ಮವೆಂದು ಶ್ರೀರಾಮನು ಪ್ರತಿಪಾದಿಸಿದುದು, ಅರಣ್ಯಕ್ಕೆ ಹೋಗಲು ತಾಯಿಯ ಅನುಮತಿ ಪಡೆದುದು
ಮೂಲಮ್ - 1
ತಂ ಸಮೀಕ್ಷ್ಯ ವ್ಯವಸಿತಂ ಪಿತುರ್ನಿರ್ದೇಶಪಾಲನೇ ।
ಕೌಸಲ್ಯಾ ಬಾಷ್ಪಸಂರುದ್ಧಾ ವಚೋ ಧರ್ಮಿಷ್ಠಮಬ್ರವೀತ್ ॥
ಅನುವಾದ
ಶ್ರೀರಾಮನು ಪಿತೃವಾಕ್ಯಪಾಲನೆಯಲ್ಲೇ ದೃಢನಿಶ್ಚಯಿಸಿರುವನು ಎಂದು ನೋಡಿದಾಗ ಕೌಸಲ್ಯೆಯು ಕಣ್ಣೀರ ಸುರಿಸುತ್ತಾ ಗದ್ಗದ ವಾಣಿಯಿಂದ ಶ್ರೀರಾಮನಲ್ಲಿ ಹೀಗೆ ಹೇಳಿದಳು.॥1॥
ಮೂಲಮ್ - 2
ಅದೃಷ್ಟದುಃಖೋ ಧರ್ಮಾತ್ಮಾ ಸರ್ವಭೂತ ಪ್ರಿಯಂವದಃ ।
ಮಯಿ ಜಾತೋ ದಶರಥಾತ್ಕಥಮುಂಛೇನ ವರ್ತಯೇತ್ ॥
ಅನುವಾದ
ಮಗು! ನೀನು ದುಃಖವನ್ನೇ ಅರಿಯದವನು, ಧರ್ಮಾತ್ಮನು, ಸಕಲ ಪ್ರಾಣಿಗಳ ವಿಷಯದಲ್ಲಿಯೂ ಪ್ರಿಯವಾಗಿ ಮಾತನಾಡುವವನು, ದಶರಥರಿಂದ ನನ್ನಲ್ಲಿ ಹುಟ್ಟಿರುವ ರಾಜಕುಮಾರನಾಗಿರುವೆ. ನೀನಿಂದು ಉಂಛವೃತ್ತಿಯಿಂದ (ಹೊಲದಲ್ಲಿ ಬಿದ್ದಿರುವ ಒಂದೊಂದು ಕಾಳನ್ನು ಹೆಕ್ಕಿತಂದು ಜೀವನ ನಿರ್ವಾಹ ಮಾಡುವುದು) ಹೇಗೆ ಜೀವಿಸುವೆ.॥2॥
ಮೂಲಮ್ - 3
ಯಸ್ಯ ಭೃತ್ಯಾಶ್ಚ ದಾಸಾಶ್ಚ ಮೃಷ್ಟಾನ್ಯನ್ನಾನಿ ಭುಂಜತೇ ।
ಕಥಂ ನ ಭೋಕ್ಷ್ಯತೇ ರಾಮೋ ವನೇ ಮೂಲಫಲಾನ್ಯಯಮ್ ॥
ಅನುವಾದ
ನಿನ್ನ ಭೃತ್ಯರು, ದಾಸ-ದಾಸಿಯರೂ ಕೂಡ ಶುದ್ಧ ಸ್ವಾದಿಷ್ಟವಾಗಿ ಭೋಜನ ಮಾಡುತ್ತಾರೆ. ಹೀಗಿರುವಾಗ ಅವರಿಗೆ ಒಡೆಯನಾದ ನೀನು ವನದಲ್ಲಿ ಫಲ-ಮೂಲಗಳನ್ನು ತಿಂದು ಹೇಗೆ ಜೀವಿಸುವೆ.॥3॥
ಮೂಲಮ್ - 4
ಕ ಏತಚ್ಛ್ರದ್ದಧೇಚ್ಛ್ರುತ್ವಾ ಕಸ್ಯ ವಾ ನ ಭವೇದ್ ಭಯಮ್ ।
ಗುಣವಾನ್ ದಯಿತೋ ರಾಜ್ಞಃ ಕಾಕುತ್ಸ್ಥೋ ಯದ್ ವಿವಾಸ್ಯತೇ ॥
ಅನುವಾದ
ಸದ್ಗುಣಸಂಪನ್ನ ಮತ್ತು ದಶರಥನ ಪ್ರಿಯಪುತ್ರ, ಕಕುತ್ಸ್ಥ ಕುಲಭೂಷಣ ಶ್ರೀರಾಮನಿಗೆ ವಿಧಿಸಿದ ವನವಾಸವನ್ನು ಕೇಳಿ ಯಾರು ಇದನ್ನು ನಂಬುವರು? ಅಥವಾ ಇಂತಹ ಮಾತು ಕೇಳಿ ಯಾರಿಗೆ ತಾನೇ ಭಯವಾಗದು.॥4॥
ಮೂಲಮ್ - 5
ನೂನಂ ತು ಬಲವಾನ್ಲ್ಲೋಕೇ ಕೃತಾಂತಃಸರ್ವಮಾದಿಶನ್ ।
ಲೋಕೇ ರಾಮಾಭಿರಾಮಸ್ತ್ವಂ ವನಂ ಯತ್ರ ಗಮಿಷ್ಯಸಿ ॥
ಅನುವಾದ
ಶ್ರೀರಾಮಾ! ನಿಶ್ಚಯವಾಗಿ ಈ ಜಗತ್ತಿನಲ್ಲಿ ದೈವವೇ ಎಲ್ಲರಿಗಿಂತ ಹೆಚ್ಚು ಬಲವತ್ತರವಾಗಿದೆ. ಅವನ ಆಜ್ಞೆಯೇ ಎಲ್ಲರ ಮೇಲೆ ನಡೆಯುತ್ತದೆ. ಅವನೇ ಸುಖ-ದುಃಖಗಳನ್ನು ತಂದಿಡುವನು; ಏಕೆಂದರೆ ಅವನ ಪ್ರಭಾವಕ್ಕೆ ಒಳಗಾಗಿಯೇ ನಿನ್ನಂತಹ ಲೋಕಪ್ರಿಯ ಮನುಷ್ಯನೂ ಕೂಡ ಕಾಡಿಗೆ ಹೋಗಲು ಹೊರಟಿರುವೆ.॥5॥
ಮೂಲಮ್ - 6
ಅಯಂ ತು ಮಾಮಾತ್ಮಭವಸ್ತವಾದರ್ಶನಮಾರುತಃ ।
ವಿಲಾಪದುಃಖಸಮಿಧೋ ರುದಿತಾಶ್ರುಹುತಾಹುತಿಃ ॥
ಮೂಲಮ್ - 7
ಚಿಂತಾವಾಷ್ಪಮಹಾಧೂಮಸ್ತವಾಗಮನಚಿಂತಜಃ ।
ಕರ್ಶಯಿತ್ವಾಧಿಕಂ ಪುತ್ರ ನಿಃಶ್ವಾಸಾಯಾಸಸಂಭವಃ ॥
ಮೂಲಮ್ - 8
ತ್ವಯಾ ವಿಹೀನಾಮಿಹ ಮಾಂ ಶೋಕಾಗ್ನಿರತುಲೋ ಮಹಾನ್ ।
ಪ್ರಧಕ್ಷ್ಯತಿ ಯಥಾ ಕಕ್ಷಂ ಚಿತ್ರಭಾನುರ್ಹಿಮಾತ್ಯಯೇ ॥
ಅನುವಾದ
ಆದರೆ ಮಗು! ನಿನ್ನಿಂದ ಅಗಲಿದ ಬಳಿಕ ಇಲ್ಲಿ ನನ್ನನ್ನು ಶೋಕದ ಅನುಪಮ ಹಾಗೂ ಧಗಧಗನೆ ಉರಿಯುತ್ತಿರುವ ಬೆಂಕಿಯು - ಗ್ರೀಷ್ಮಋತುವಿನಲ್ಲಿ ದಾವಾನಲವು ಕಟ್ಟಿಗೆ ಮತ್ತು ಹುಲ್ಲನ್ನು ಸುಟ್ಟುಬಿಡುವಂತೆ, ಬೂದಿಮಾಡಿ ಬಿಡುವುದು. ಈ ಶೋಕಾಗ್ನಿಯು ನನ್ನ ಮನಸ್ಸಿನಲ್ಲೇ ಪ್ರಕಟಗೊಂಡಿದೆ. ನಿನ್ನನ್ನು ನೋಡದಿರುವ ವಾಯುವೇ ಈ ಅಗ್ನಿಯನ್ನು ಉದ್ದೀಪನಗೊಳಿಸುವುದು. ವಿಲಾಪಜನಿತ ದುಃಖವೇ ಇದರಲ್ಲಿ ಕಟ್ಟಿಗೆಗಳು. ಕಣ್ಣುಗಳಿಂದ ಹರಿಯುವ ಕಣ್ಣೀರೇ ಇದರಲ್ಲಿ ಕೊಡುವ ಆಹುತಿಗಳು. ಚಿಂತೆಯಿಂದ ಬಿಡುವ ಬಿಸಿಯ ಉಸಿರೇ ಇದರ ಹೊಗೆಯಾಗಿದೆ. ನೀನು ದೂರ ದೇಶಕ್ಕೆ ಹೋಗಿ ಮತ್ತೆ ಹೇಗೆ ಬರುವೆ? ಎಂಬ ಚಿಂತೆಯೇ ಈ ಶೋಕಾಗ್ನಿಗೆ ಜನ್ಮನೀಡುತ್ತಿದೆ. ಉಸಿರಾಡುವ ಪ್ರಯತ್ನದಿಂದಲೇ ಈ ಬೆಂಕಿಯು ಪ್ರತಿಕ್ಷಣ ವೃದ್ಧಿಯಾಗುತ್ತಾ ಇದೆ. ಇದನ್ನು ಆರಿಸಲು ನೀನೇ ನೀರು ಆಗಿರುವೆ. ನೀನಿಲ್ಲದೆ ಈ ಬೆಂಕಿಯು ನನ್ನನ್ನು ಒಣಗಿಸಿ ಸುಟ್ಟುಬಿಡುವುದು.॥6-8॥
ಮೂಲಮ್ - 9
ಕಥಂ ಹಿ ಧೇನುಃ ಸ್ವಂ ವತ್ಸಂ ಗಚ್ಛಂತಮನುಗಚ್ಛತಿ ।
ಅಹಂ ತ್ವಾನುಗಮಿಷ್ಯಾಮಿ ಯತ್ರ ವತ್ಸ ಗಮಿಷ್ಯಸಿ ॥
ಅನುವಾದ
ವತ್ಸ! ತನ್ನ ಕರುವು ಮುಂದೆ ಹೋಗುತ್ತಿರುವುದನ್ನು ನೋಡಿ ಹಸುವು ಅದರ ಹಿಂದೆ-ಹಿಂದೆ ಹೋಗುವಂತೆಯೇ ನಾನೂ ನೀನು ಹೋಗುವಲ್ಲಿಗೆ ನಿನ್ನ ಹಿಂದೆ-ಹಿಂದೆ ಬರುತ್ತೇನೆ.॥9॥
ಮೂಲಮ್ - 10
ಯಥಾ ನಿಗದಿತಂ ಮಾತ್ರಾ ತದ್ವಾಕ್ಯಂ ಪುರುಷರ್ಷಭಃ ।
ಶ್ರುತ್ವಾ ರಾಮೋಽಬ್ರವೀದ್ವಾಕ್ಯಂ ಮಾತರಂ ಭೃಶದುಃಖಿತಾಮ್ ॥
ಅನುವಾದ
ಮಾತೆ ಕೌಸಲ್ಯೆಯು ಹೇಳಿದುದನ್ನು ಕೇಳಿ ಪುರಷೋತ್ತಮ ಶ್ರೀರಾಮನು ಅತ್ಯಂತ ದುಃಖದಲ್ಲಿ ಮುಳುಗಿದ್ದ ತನ್ನ ತಾಯಿಯಲ್ಲಿ ಪುನಃ ಹೇಳಿದನು.॥10॥
ಮೂಲಮ್ - 11
ಕೈಕೇಯ್ಯಾ ವಂಚಿತೋ ರಾಜಾ ಮಯಿ ಚಾರಣ್ಯಮಾಶ್ರಿತೇ ।
ಭವತ್ಯಾ ಚಪರಿತ್ಯಕ್ತೋ ನ ನೂನಂ ವರ್ತಯಿಷ್ಯತಿ॥
ಅನುವಾದ
ಅಮ್ಮಾ! ಕೈಕೆಯಿಯಿಂದ ರಾಜನು ವಂಚಿತನಾಗಿರುವನು. ಇತ್ತ ನಾನೂ ಕಾಡಿಗೆ ಹೋಗುತ್ತಿದ್ದೇನೆ. ಇಂತಹ ಸ್ಥಿತಿಯಲ್ಲಿ ನೀನೂ ಅವನನ್ನು ಪರಿತ್ಯಜಿಸಿದರೆ ನಿಶ್ಚಯವಾಗಿ ಅವನು ಬದುಕಿರಲಾರನು.॥11॥
ಮೂಲಮ್ - 12
ಭರ್ತುಃ ಕಿಲ ಪರಿತ್ಯಾಗೋ ನೃಶಂಸಃ ಕೇವಲಂ ಸ್ತ್ರಿಯಾಃ ।
ಸ ಭವತ್ಯಾ ನ ಕರ್ತವ್ಯೋ ಮನಸಾಪಿ ವಿಗರ್ಹಿತಃ ॥
ಅನುವಾದ
ಪತಿಯನ್ನು ತ್ಯಜಿಸುವುದು ಹೆಣ್ಣಿಗೆ ಬಹಳ ದೊಡ್ಡ ಕ್ರೂರ ಕರ್ಮವಾಗಿದೆ. ಸತ್ಪುರುಷರು ಇದನ್ನು ನಿಂದಿಸಿರುವರು; ಆದ್ದರಿಂದ ನೀನು ಇಂತಹ ಮಾತನ್ನು ಎಂದೂ ಮನಸ್ಸಿಗೂ ತರಬಾರದು.॥12॥
ಮೂಲಮ್ - 13
ಯಾವಜ್ಜೀವತಿ ಕಾಕುತ್ಸ್ಥಃ ಪಿತಾ ಮೇ ಜಗತೀಪತಿಃ ।
ಶುಶ್ರೂಷಾ ಕ್ರಿಯತಾಂ ತಾವತ್ಸ ಹಿ ಧರ್ಮಃ ಸನಾತನಃ ॥
ಅನುವಾದ
ನಮ್ಮ ತಂದೆ ಕಕುತ್ಸ್ಥಕುಲಭೂಷಣ ಮಹಾರಾಜರು ಜೀವಂತವಾಗಿರುವವರೆಗೆ ನೀನು ಅವನ ಸೇವೆ ಮಾಡಬೇಕು. ಪತಿಯ ಸೇವೆಯೇ ಸ್ತ್ರೀಯರಿಗೆ ಸನಾತನ ಧರ್ಮವಾಗಿದೆ.॥13॥
ಮೂಲಮ್ - 14
ಏವಮುಕ್ತಾ ತು ರಾಮೇಣ ಕೌಸಲ್ಯಾ ಶುಭದರ್ಶನಾ ।
ತಥೇತ್ಯುವಾಚ ಸುಪ್ರೀತಾ ರಾಮಮಕ್ಲಿಷ್ಟಕಾರಿಣಮ್ ॥
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ಶುಭಕರ್ಮಗಳನ್ನು ನೋಡುವ ದೇವೀ ಕೌಸಲ್ಯೆಯು ಅತ್ಯಂತ ಪ್ರಸನ್ನಳಾಗಿ ಆಯಾಸವಿಲ್ಲದೆ ಮಹಾಕರ್ಮ ಮಾಡುವ ಶ್ರೀರಾಮನಲ್ಲಿ- ‘ಸರಿ, ಹಾಗೇ ಮಾಡುವೆನು’ ಎಂದು ಹೇಳಿದಳು.॥14॥
ಮೂಲಮ್ - 15
ಏವಮುಕ್ತಸ್ತು ವಚನಂ ರಾಮೋ ಧರ್ಮಭೃತಾಂ ವರಃ ।
ಭೂಯಸ್ತಾಮಬ್ರವೀದ್ವಾಕ್ಯಂ ಮಾತರಂ ಭೃಶದುಃಖಿತಾಮ್ ॥
ಅನುವಾದ
ತಾಯಿಯು ಹೀಗೆ ಸ್ವೀಕೃತಿಸೂಚಕ ಮಾತನ್ನು ಹೇಳಿದಾಗ ಧರ್ಮಾತ್ಮರಲ್ಲಿ ಶ್ರೇಷ್ಠನಾದ ಶ್ರೀರಾಮನು ಅತ್ಯಂತ ದುಃಖಿತೆಯಾದ ಮಾತೆಯಲ್ಲಿ ಪುನಃ ಹೀಗೆ ಹೇಳಿದನು.॥15॥
ಮೂಲಮ್ - 16
ಮಯಾ ಚೈವ ಭವತ್ಯಾ ಚ ಕರ್ತವ್ಯಂ ವಚನಂ ಪಿತುಃ ।
ರಾಜಾ ಭರ್ತಾ ಗುರುಃ ಶ್ರೇಷ್ಠಃ ಸರ್ವೇಷಾಮೀಶ್ವರಃ ಪ್ರಭುಃ ॥
ಅನುವಾದ
ಅಮ್ಮಾ! ತಂದೆಯ ಆಜ್ಞೆಯನ್ನು ಪಾಲಿಸುವುದು ನನಗೆ ಮತ್ತು ನಿನಗೆ ಇಬ್ಬರಿಗೂ ಕರ್ತವ್ಯವಾಗಿದೆ; ಏಕೆಂದರೆ ರಾಜನು ನಮ್ಮೆಲ್ಲರಿಗೆ ಸ್ವಾಮಿ, ಶ್ರೇಷ್ಠ ಗುರು, ದೇವರು ಹಾಗೂ ಒಡೆಯನಾಗಿದ್ದಾನೆ.॥16॥
ಮೂಲಮ್ - 17
ಇಮಾನಿ ತು ಮಹಾರಣ್ಯೇ ವಿಹೃತ್ಯ ನವ ಪಂಚ ಚ ।
ವರ್ಷಾಣಿ ಪರಮಪ್ರೀತ್ಯಾ ಸ್ಥಾಸ್ಯಾಮಿ ವಚನೇ ತವ ॥
ಅನುವಾದ
ಈ ಹದಿನಾಲ್ಕು ವರ್ಷ ನಾನು ವಿಶಾಲವನದಲ್ಲಿ ಸುತ್ತಾಡಿ ಮರಳಿ ಬಂದು ಪ್ರೇಮದಿಂದ ನಿನ್ನ ಆಜ್ಞೆಯನ್ನು ಪಾಲಿಸುವೆನು.॥17॥
ಮೂಲಮ್ - 18
ಏವಮುಕ್ತಾ ಪ್ರಿಯಂ ಪುತ್ರಂ ಬಾಷ್ಪಪೂರ್ಣಾನನಾ ತದಾ ।
ಉವಾಚ ಪರಮಾರ್ತಾ ತು ಕೌಸಲ್ಯಾ ಸುತವತ್ಸಲಾ ॥
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ಪುತ್ರವತ್ಸಲೆ ಕೌಸಲ್ಯೆಯ ಮುಖದಲ್ಲಿ ಪುನಃ ಕಣ್ಣೀರ ಕೋಡಿಯೇ ಹರಿಯಿತು. ಆಕೆ ಅತ್ಯಂತ ಆರ್ತಳಾಗಿ ತನ್ನ ಪ್ರಿಯಪುತ್ರನಲ್ಲಿ ಇಂತೆಂದಳು.॥18॥
ಮೂಲಮ್ - 19½
ಆಸಾಂ ರಾಮ ಸಪತ್ನೀನಾಂ ವಸ್ತುಂ ಮಧ್ಯೇ ನ ಮೇ ಕ್ಷಮಮ್ ।
ನಯ ಮಾಮಪಿ ಕಾಕುತ್ಸ್ಥ ವನಂ ವನ್ಯಾಂಮೃಗೀಮಿವ ॥
ಯದಿ ತೇ ಗಮನೇ ಬುದ್ಧಿಃ ಕೃತಾ ಪಿತುರಪೇಕ್ಷಯಾ ।
ಅನುವಾದ
ಮಗು ರಾಮಾ! ಈ ಸವತಿಯರ ನಡುವೆ ನನ್ನಿಂದ ಇರಲಾಗದು. ಕಾಕುತ್ಸ್ಥನೇ! ಪಿತೃವಾಕ್ಯಪರಿಪಾಲನೆ ಮಾಡುವ ಇಚ್ಛೆಯಿಂದ ನೀನು ಕಾಡಿಗೆ ಹೋಗುವುದನ್ನು ನಿಶ್ಚಯಿಸಿರುವೆಯಾದರೆ ನನ್ನನ್ನೂ ಕೂಡ ವನವಾಸಿನೀ ಹೆಣ್ಣು ಜಿಂಕೆಯಂತೆ ಕಾಡಿಗೆ ಕರೆದುಕೊಂಡು ಹೋಗು.॥19॥
ಮೂಲಮ್ - 20
ತಾಂ ತಥಾ ರುದತೀಂ ರಾಮೋ ರುದನ್ವಚನಮಬ್ರವೀತ್ ॥
ಮೂಲಮ್ - 21
ಜೀವಂತ್ಯಾ ಹಿ ಸ್ತ್ರಿಯಾ ಭರ್ತಾ ದೈವತಂ ಪ್ರಭುರೇವ ಚ ।
ಭವತ್ಯಾ ಮಮ ಚೈವಾದ್ಯ ರಾಜಾ ಪ್ರಭವತಿ ಪ್ರಭುಃ ॥
ಅನುವಾದ
ಹೀಗೆ ಹೇಳಿ ಕೌಸಲ್ಯೆಯು ಅಳತೊಡಗಿದಳು. ಆಕೆಯು ಹೀಗೆ ಅಳುತ್ತಿರುವುದನ್ನು ಕಂಡು ಶ್ರೀರಾಮನೂ ಕೂಡ ಅತ್ತುಬಿಟ್ಟನು ಹಾಗೂ ಆಕೆಯನ್ನು ಸಮಾಧಾನಪಡಿಸುತ್ತಾ ಹೇಳಿದನು - ಅಮ್ಮಾ! ಸ್ತ್ರೀಯು ಬದುಕಿರುವಾಗ ಆಕೆಯ ಪತಿಯೇ ಆಕೆಗೆ ದೇವರಂತೆ ಇದ್ದಾನೆ. ಮಹಾರಾಜರು ನಿನಗೆ ಮತ್ತು ನನಗೆ ಸ್ವಾಮಿಯಾಗಿರುವರು.॥20-21॥
ಮೂಲಮ್ - 22½
ನ ಹ್ಯನಾಥಾ ವಯಂ ರಾಜ್ಞಾ ಲೋಕನಾಥೇನ ಧೀಮತಾ ।
ಭರತಶ್ಚಾಪಿ ಧರ್ಮಾತ್ಮಾ ಸರ್ವಭೂತಪ್ರಿಯಂವದಃ ॥
ಭವತೀಮನುವರ್ತೇತ ಸ ಹಿ ಧರ್ಮರತಃ ಸದಾ ।
ಅನುವಾದ
ಬುದ್ಧಿವಂತ ಜಗದೀಶ್ವರ ಮಹಾರಾಜರು ಜೀವಿಸಿ ಇರುವವರೆಗೆ ನಮ್ಮನ್ನು ನಾವು ಅನಾಥರೆಂದು ತಿಳಿಯಬಾರದು. ಭರತನೂ ಬಹಳ ಧರ್ಮಾತ್ಮನಾಗಿರುವನು. ಅವನು ಸಮಸ್ತ ಪ್ರಾಣಿಗಳ ಕುರಿತು ಪ್ರಿಯವಾಗಿ ಮಾತನಾಡುವವನೂ, ಸದಾ ಧರ್ಮತತ್ಪರನೂ ಆಗಿದ್ದಾನೆ. ಆದ್ದರಿಂದ ಅವನು ನಿನ್ನನ್ನು ಅನುಸರಿಸಿ, ನಿನ್ನ ಸೇವೆ ಮಾಡುವನು.॥22॥
ಮೂಲಮ್ - 23½
ಯಥಾ ಮಯಿ ತು ನಿಷ್ಕ್ರಾಂತೇ ಪುತ್ರಶೋಕೇನ ಪಾರ್ಥಿವಃ ॥
ಶ್ರಮಂ ನಾವಾಪ್ನುಯಾತ್ ಕಿಂಚಿದಪ್ರಮತ್ತಾ ತಥಾ ಕುರು ।
ಅನುವಾದ
ನಾನು ಹೊರಟುಹೋದಾಗ ಯಾವ ರೀತಿಯಿಂದಲೂ ಮಹಾರಾಜರಿಗೆ ಪುತ್ರಶೋಕದಿಂದಾಗಿ ವಿಶೇಷ ಕಷ್ಟವಾಗದಂತೆ ನೀನು ಎಚ್ಚರಿಕೆಯಿಂದ ಪ್ರಯತ್ನ ಮಾಡಬೇಕು.॥23½॥
ಮೂಲಮ್ - 24½
ದಾರುಣಶ್ಚಾಪ್ಯಯಂ ಶೋಕೋ ಯಥೈನಂ ನವಿನಾಶಯೇತ್ ॥
ರಾಜ್ಞೋ ವೃದ್ಧಸ್ಯ ಸತತಂ ಹಿತಂ ಚರ ಸಮಾಹಿತಾ ।
ಅನುವಾದ
ಈ ದಾರುಣಶೋಕವು ಇವರ ಜೀವನಲೀಲೆಯೇ ಸಮಾಪ್ತವಾಗುವಂತೆ ಆಗದಿರಲಿ. ಯಾವ ರೀತಿಯಿಂದಲಾದರೂ ನೀನು ಸದಾ ಜಾಗರೂಕಳಾಗಿದ್ದು ಮುದುಕ ತಂದೆಯ ಹಿತಸಾಧನೆಯಲ್ಲಿ ತೊಡಗಿರಬೇಕು.॥24½॥
ಮೂಲಮ್ - 25½
ವ್ರತೋಪವಾಸನಿರತಾ ಯಾ ನಾರೀ ಪರಮೋತ್ತಮಾ ॥
ಭರ್ತಾರಂ ನಾನುವರ್ತೇತ ಸಾ ಚ ಪಾಪಗತಿರ್ಭವೇತ್ ।
ಅನುವಾದ
ಉತ್ಕೃಷ್ಟ ಗುಣ ಮತ್ತು ಜಾತಿಯ ದೃಷ್ಟಿಯಿಂದ ಪರಮೋತ್ತಮ ವ್ರತ-ಉಪವಾಸಗಳಲ್ಲಿ ತತ್ಪರಳಾಗಿದ್ದರೂ ಪತಿಯ ಸೇವೆ ಮಾಡದಿರುವ ನಾರಿಗೆ ಪಾಪಿಗಳಿಗೆ ಸಿಗುವ ಗತಿ (ನರಕಾದಿಗಳು) ಪ್ರಾಪ್ತವಾಗುತ್ತವೆ.॥25½॥
ಮೂಲಮ್ - 26½
ಭರ್ತುಃ ಶುಶ್ರೂಷಯಾ ನಾರೀ ಲಭತೇ ಸ್ವರ್ಗಮುತ್ತಮಮ್ ॥
ಅಪಿ ಯಾ ನಿರ್ನಮಸ್ಕಾರಾ ನಿವೃತ್ತಾ ದೇವಪೂಜನಾತ್ ।
ಅನುವಾದ
ಇತರ ದೇವತೆಗಳ ವಂದನೆ-ಪೂಜೆಯಿಂದ ದೂರವಿರುವ ಸ್ತ್ರೀಯೂ ಕೂಡ ಕೇವಲ ಪತಿಯ ಸೇವಾವ್ರತದಿಂದ ಉತ್ತಮ ಸ್ವರ್ಗಲೋಕವನ್ನು ಪಡೆಯುವಳು.॥26½॥
ಮೂಲಮ್ - 27½
ಶುಶ್ರೂಷಾಮೇವ ಕುರ್ವೀತ ಭರ್ತುಃ ಪ್ರಿಯಹಿತೇ ರತಾ ॥
ಏಷ ಧರ್ಮಃ ಸ್ತ್ರಿಯಾ ನಿತ್ಯೋ ವೇದೇಲೋಕೇ ಶ್ರುತಃ ಸ್ಮೃತಃ ।
ಅನುವಾದ
ಆದ್ದರಿಂದ ನಾರಿಯು ಪತಿಯ ಪ್ರಿಯ ಹಾಗೂ ಹಿತ ಸಾಧನೆಯಲ್ಲೇ ತತ್ಪರಳಾಗಿದ್ದು ಸದಾ ಅವನ ಸೇವೆಯನ್ನೇ ಮಾಡುವುದು ಸ್ತ್ರೀಗೆ ವೇದ ಮತ್ತು ಲೋಕದಲ್ಲಿ ಪ್ರಸಿದ್ಧ ಸನಾತನ ಧರ್ಮವಾಗಿದೆ. ಇದನ್ನೇ ಶ್ರುತಿ-ಸ್ಮೃತಿಗಳು ವರ್ಣಿಸಿವೆ.॥27½॥
ಮೂಲಮ್ - 28½
ಅಗ್ನಿಕಾರ್ಯೇಷು ಚ ಸದಾ ಸುಮನೋಭಿಶ್ಚ ದೇವತಾಃ ॥
ಪೂಜ್ಯಾಸ್ತೇ ಮತ್ಕೃತೇ ದೇವಿ ಬ್ರಾಹ್ಮಣಾಶ್ಚೈವ ಸತ್ಕೃತಾಃ ।
ಅನುವಾದ
ದೇವಿ! ನೀನು ನನ್ನ ಮಂಗಲ ಕಾಮನೆಯಿಂದ ಸದಾ ಅಗ್ನಿಹೋತ್ರದ ಸಂದರ್ಭ ಪುಷ್ಪಗಳಿಂದ ದೇವತೆಗಳ ಮತ್ತು ಸತ್ಕಾರಪೂರ್ವಕ ಬ್ರಾಹ್ಮಣರನ್ನು ಪೂಜೆ ಮಾಡುತ್ತಾ ಇರಬೇಕು.॥28½॥
ಮೂಲಮ್ - 29½
ಏವಂ ಕಾಲಂ ಪ್ರತೀಕ್ಷಸ್ವ ಮಮಾಗಮನಕಾಂಕ್ಷಿಣೀ ॥
ನಿಯತಾ ನಿಯತಾಹಾರಾ ಭರ್ತೃಶುಶ್ರೂಷಣೇ ರತಾ ।
ಅನುವಾದ
ಹೀಗೆ ನೀನು ನಿಯಮಿತ ಆಹಾರ-ನಿಯಮಗಳನ್ನು ಪಾಲಿಸುತ್ತಾ ಸ್ವಾಮಿಯ ಸೇವೆಯಲ್ಲಿ ತೊಡಗಿರು ಹಾಗೂ ನನ್ನ ಆಗಮನದ ಇಚ್ಛೆಯಿಂದ ಪ್ರತೀಕ್ಷೆ ಮಾಡುತ್ತಾ ಇರು.॥29½॥
ಮೂಲಮ್ - 30½
ಪ್ರಾಪ್ಸ್ಯಸೇ ಪರಮಂ ಕಾಮಂ ಮಯಿ ಪ್ರತ್ಯಾಗತೇಸತಿ ॥
ಯದಿ ಧರ್ಮಭೃತಾಂ ಶ್ರೇಷ್ಠೋ ಧಾರಯಿಷ್ಯತಿ ಜೀವಿತಮ್ ।
ಅನುವಾದ
ಧರ್ಮಾತ್ಮರಲ್ಲಿ ಶ್ರೇಷ್ಠರಾದ ಮಹಾರಾಜರು ಜೀವಿಸಿದ್ದರೆ ನಾನು ಮರಳಿ ಬಂದಮೇಲೆ ನಿನ್ನ ಶುಭಕಾಮನೆಯೂ ಪೂರ್ಣವಾಗುವುದು.॥30½॥
ಮೂಲಮ್ - 31½
ಏವಮುಕ್ತಾ ತು ರಾಮೇಣ ಬಾಷ್ಪಪರ್ಯಾಕುಲೇಕ್ಷಣಾ ॥
ಕೌಸಲ್ಯಾ ಪುತ್ರಶೋಕಾರ್ತಾ ರಾಮಂ ವಚನಮಬ್ರವೀತ್ ।
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ಕೌಸಲ್ಯೆಯ ಕಣ್ಣುಗಳಿಂದ ಕಣ್ಣೀರು ಚಿಮ್ಮಿತು. ಅವಳು ಪುತ್ರಶೋಕದಿಂದ ಪೀಡಿತಳಾಗಿ ಶ್ರೀರಾಮಚಂದ್ರನಲ್ಲಿ ಹೇಳಿದಳು.॥31½॥
ಮೂಲಮ್ - 32½
ಗಮನೇ ಸುಕೃತಾಂ ಬುದ್ಧಿಂ ನ ತೇ ಶಕ್ನೋಮಿ ಪುತ್ರಕ ॥
ವಿನಿವರ್ತಯಿತುಂ ವೀರ ನೂನಂ ಕಾಲೋ ದುರತ್ಯಯಃ ।
ಅನುವಾದ
ಮಗು! ಕಾಡಿಗೆ ಹೋಗುವ ನಿನ್ನ ನಿಶ್ಚಯವನ್ನು ನಾನು ಬದಲಿಸಲಾರೆನು. ವೀರನೇ! ನಿಶ್ಚಯವಾಗಿಯೂ ಕಾಲನ ಆಜ್ಞೆಯನ್ನು ಉಲ್ಲಂಘಿಸುವುದು ಅತ್ಯಂತ ಕಠಿಣವಾಗಿದೆ.॥32½॥
ಮೂಲಮ್ - 33½
ಗಚ್ಛ ಪುತ್ರ ತ್ವಮೇಕಾಗ್ರೋ ಭದ್ರಂ ತೇಽಸ್ತು ಸದಾ ವಿಭೋ ॥
ಪುನಸ್ತ್ವಯಿ ನಿವೃತ್ತೇ ತು ಭವಿಷ್ಯಾಮಿ ಗತಕ್ಲಮಾ ।
ಅನುವಾದ
ಸಮರ್ಥಪುತ್ರನೇ! ಈಗ ನೀನು ನಿಶ್ಚಿಂತನಾಗಿ ಕಾಡಿಗೆ ಹೋಗು, ನಿನಗೆ ಸದಾ ಶ್ರೇಯಸ್ಸಾಗಲೀ. ಮತ್ತೆ ನೀನು ವನದಿಂದ ಮರಳಿ ಬಂದಾಗ ನನ್ನ ಎಲ್ಲ ಕ್ಲೇಶಗಳು ಸಂತಾಪಗಳು ದೂರವಾಗುವವು.॥33½॥
ಮೂಲಮ್ - 34
ಪ್ರತ್ಯಾಗತೇ ಮಹಾಭಾಗೇ ಕೃತಾರ್ಥೇ ಚರಿತವ್ರತೇ ।
ಪಿತುರಾನೃಣ್ಯತಾಂ ಪ್ರಾಪ್ತೇ ಸ್ವಪಿಷ್ಯೇ ಪರಮಂ ಸುಖಮ್ ॥
ಅನುವಾದ
ಮಗು! ನೀನು ವನವಾಸದ ಮಹಾವ್ರತವನ್ನು ಪೂರ್ಣಗೊಳಿಸಿ ಕೃತಾರ್ಥ ಮತ್ತು ಮಹಾಸೌಭಾಗ್ಯಶಾಲಿಯಾಗಿ ಮರಳಿ ಬಂದಾಗ ಹಾಗೂ ಹೀಗೆ ಮಾಡಿ ಪಿತೃಋಣದಿಂದ ಮುಕ್ತನಾದಾಗ ನಾನು ಚೆನ್ನಾಗಿ ಸುಖದ ನಿದ್ದೆ ಮಾಡಬಲ್ಲೆನು.॥34॥
ಮೂಲಮ್ - 35
ಕೃತಾಂತಸ್ಯ ಗತಿಃ ಪುತ್ರದುರ್ವಿಭಾವ್ಯಾ ಸದಾ ಭುವಿ ।
ಯಸ್ತ್ವಾಂ ಸಂಚೋದಯತಿ ಮೇ ವಚ ಆವಿಧ್ಯ ರಾಘವ ॥
ಅನುವಾದ
ಮಗು ರಘುನಂದನ! ಈ ಭೂತಳದಲ್ಲಿ ದೈವದ ಗತಿಯನ್ನು ತಿಳಿಯುವುದು ಬಹಳ ಕಠಿಣವಾಗಿದೆ. ನನ್ನ ಮಾತನ್ನು ಮೀರಿ ನಿನಗೆ ಕಾಡಿಗೆ ಹೋಗಲು ಪ್ರೇರೇಪಿಸುವುದು ಆ ದೈವವೇ ಆಗಿದೆ.॥35॥
ಮೂಲಮ್ - 36
ಗಚ್ಛೇದಾನೀಂ ಮಹಾಬಾಹೋ ಕ್ಷೇಮೇಣ ಪುನರಾಗತಃ ।
ನಂದಯಿಷ್ಯಸಿ ಮಾಂ ಪುತ್ರ ಸಾಮ್ನಾ ಶ್ಲಕ್ಷ್ಣೇನ ಚಾರುಣಾ ॥
ಅನುವಾದ
ಮಹಾಬಾಹು ಮಗನೇ! ಈಗ ಹೋಗು, ಮತ್ತೆ ಕ್ಷೇಮವಾಗಿ ಮರಳಿ ಬಂದು ಸಾಂತ್ವನ ಪೂರ್ಣ ಮಧುರ ಹಾಗೂ ಮನೋಹರ ಮಾತುಗಳಿಂದ ನನ್ನನ್ನು ಆನಂದಗೊಳಿಸು.॥36॥
ಮೂಲಮ್ - 37
ಅಪೀದಾನೀಂ ಸ ಕಾಲಃ ಸ್ಯಾದ್ ವನಾತ್ ಪ್ರತ್ಯಾಗತಂ ಪುನಃ ।
ಯತ್ ತ್ವಾಂ ಪುತ್ರಕ ಪಶ್ಯೇಯಂ ಜಟಾವಲ್ಕಲಧಾರಿಣಮ್ ॥
ಅನುವಾದ
ವತ್ಸ! ಜಟಾ-ವಲ್ಕಲಧಾರಿಯಾಗಿ ಕಾಡಿನಿಂದ ಮರಳಿ ಬಂದ ನಿನ್ನನ್ನು ಪುನಃ ನೋಡುವಂತಹ ಸಮಯ ಈಗಲೇ ಬರಬಲ್ಲುದೇ.॥37॥
ಮೂಲಮ್ - 38
ತಥಾ ಹಿ ರಾಮಂ ವನವಾಸನಿಶ್ಚಿತಂ
ದದರ್ಶ ದೇವೀ ಪರಮೇಣ ಚೇತಸಾ ।
ಉವಾಚ ರಾಮಂ ಶುಭಲಕ್ಷಣಂ ವಚೋ
ಬಭೂವ ಚ ಸ್ವಸ್ತ್ಯಯನಾಭಿಕಾಂಕ್ಷಿಣೀ ॥
ಅನುವಾದ
ದೇವೀ ಕೌಸಲ್ಯೆಯು ಶ್ರೀರಾಮನು ಹೀಗೆ ವನವಾಸದ ದೃಢನಿಶ್ಚಯ ಮಾಡಿರುವುದನ್ನು ನೋಡಿದಾಗ ಅವಳು ಪರಮ ಆದರಯುಕ್ತ ಹೃದಯದಿಂದ ಅವನಿಗೆ ಶುಭಾಶೀರ್ವಾದ ಕೊಡಲು ಮತ್ತು ಸ್ವಸ್ತಿವಾಚನ ಮಾಡಲು ಬಯಸಿದಳು.॥38॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತನಾಲ್ಕನೆಯ ಸರ್ಗ ಪೂರ್ಣವಾಯಿತು॥24॥