०२३ लक्ष्मणसान्त्वनम्

वाचनम्
ಭಾಗಸೂಚನಾ

ಲಕ್ಷ್ಮಣನ ಗಡುಸಾದ ಮಾತುಗಳು, ದೈವದ ಖಂಡನೆ, ಪುರುಷಪ್ರಯತ್ನದ ಪ್ರಶಂಸೆ, ವಿರೋಧಿಗಳ ಪ್ರತೀಕಾರಕ್ಕಾಗಿ ಉದ್ಯುಕ್ತನಾದುದು

ಮೂಲಮ್ - 1

ಇತಿ ಭ್ರುವತಿ ರಾಮೇ ತು ಲಕ್ಷ್ಮಣೋಽವಾಕ್ ಶಿರಾ ಇವ ।
ಧ್ಯಾತ್ವಾ ಮಧ್ಯಂ ಜಗಾಮಾಶು ಸಹಸಾ ದೈನ್ಯಹರ್ಷಯೋಃ ॥

ಅನುವಾದ

ಶ್ರೀರಾಮಚಂದ್ರನು ಹೀಗೆ ಹೇಳುತ್ತಿರುವಾಗ ಲಕ್ಷ್ಮಣನು ತಲೆತಗ್ಗಿಸಿ ಏನೋ ಯೋಚಿಸುತ್ತಿದ್ದನು. ಮತ್ತೆ ಸಟ್ಟನೇ ಅವನು ದುಃಖ ಮತ್ತು ಹರ್ಷದ ನಡುವಿನ ಸ್ಥಿತಿಯಲ್ಲಿ ತೊಳಲಾಡಿದನು. (ಶ್ರೀರಾಮನ ಪಟ್ಟಾಭಿಷೇಕದಲ್ಲಿ ವಿಘ್ನ ಉಂಟಾಗಿದ್ದರಿಂದ ದುಃಖ ಹಾಗೂ ಧರ್ಮದಲ್ಲಿ ಅವನ ದೃಢತೆ ಕಂಡು ಹರ್ಷವುಂಟಾಯಿತು.॥1॥

ಮೂಲಮ್ - 2

ತದಾ ತು ಬದ್ಧ್ವಾ ಭ್ರುಕುಟೀಂ ಭ್ರುವೋರ್ಮಧ್ಯೇ ನರರ್ಷಭಃ ।
ನಿಶಶ್ವಾಸ ಮಹಾಸರ್ಪೋ ಬಿಲಸ್ಥ ಇವ ರೋಷಿತಃ ॥

ಅನುವಾದ

ನರಶ್ರೇಷ್ಠ ಲಕ್ಷ್ಮಣನು ಆಗ ಹುಬ್ಬುಗಳನ್ನು ಗಂಟಿಕ್ಕಿ ಬಿಲದಲ್ಲಿ ಕುಳಿತಿದ್ದ ಸರ್ಪವು ರೋಷದಿಂದ ಫೂತ್ಕರಿಸುವಂತೆ ದೀರ್ಘವಾಗಿ ನಿಟ್ಟುಸಿರು ಬಿಡತೊಡಗಿದನು.॥2॥

ಮೂಲಮ್ - 3

ತಸ್ಯ ದುಷ್ಪ್ರತಿವೀಕ್ಷ್ಯಂ ತದ್ ಭ್ರುಕುಟೀಸಹಿತಂ ತದಾ ।
ಬಭೌ ಕ್ರುದ್ಧಸ್ಯ ಸಿಂಹಸ್ಯ ಮುಖಸ್ಯ ಸದೃಶಂ ಮುಖಮ್ ॥

ಅನುವಾದ

ಹುಬ್ಬುಗಳು ಗಂಟಿಕ್ಕಿದ ಅವನ ಮುಖವು ಕುಪಿತವಾಗಿ ಸಿಂಹದ ಮುಖದಂತೆ ಕಂಡುಬರುತ್ತಿತ್ತು. ಅವನ ಕಡೆಗೆ ನೋಡುವುದೇ ದುಸ್ತರವಾಗಿತ್ತು.॥3॥

ಮೂಲಮ್ - 4½

ಅಗ್ರಹಸ್ತಂ ವಿಧುನ್ವಂಸ್ತು ಹಸ್ತೀ ಹಸ್ತಮಿವಾತ್ಮನಃ ।
ತಿರ್ಯಗೂರ್ಧ್ವಂ ಶರೀರೇ ಚ ಪಾತಯಿತ್ವಾ ಶಿರೋಧರಾಮ್ ॥
ಅಗ್ರಾಕ್ಷ್ಣಾ ವೀಕ್ಷಮಾಣಸ್ತು ತಿರ್ಯಗ್ಭ್ರಾತರಮಬ್ರವೀತ್ ।

ಅನುವಾದ

ಆನೆಯು ಸೊಂಡಿಲನ್ನು ಅಲ್ಲಾಡಿಸುವಂತೆ ಅವನು ತನ್ನ ಬಲತೋಳನ್ನು ಬೀಸುತ್ತಾ, ಕತ್ತನ್ನು ಮೇಲೆ-ಕೆಳಗೆ ಎಡ-ಬಲಕ್ಕೆ ಹೊರಳಿಸುತ್ತಾ ಕಡೆಗಣ್ಣಿನ ಓರೇನೋಟದಿಂದ ಶ್ರೀರಾಮನನ್ನು ನೋಡಿ ಹೀಗೆ ಹೇಳಿದನು.॥4½॥

ಮೂಲಮ್ - 5

ಅಸ್ಥಾನೇ ಸಂಭ್ರಮೋ ಯಸ್ಯ ಜಾತೋ ವೈ ಸುಮಹಾನಯಮ್ ॥

ಮೂಲಮ್ - 6

ಧರ್ಮದೋಷಪ್ರಸಂಗೇನ ಲೋಕಸ್ಯಾನತಿಶಂಕಯಾ ।
ಕಥಂ ಹ್ಯೇತದಸಂಭ್ರಾಂತಸ್ತ್ವದ್ವಿಧೋ ವಕ್ತುಮರ್ಹತಿ ॥

ಮೂಲಮ್ - 7

ಯಥಾ ಹ್ಯೇವಮಶೌಂಡೀರಂ ಶೌಂಡೀರಃ ಕ್ಷತ್ರಿಯರ್ಷಭಃ ।
ಕಿಂ ನಾಮ ಕೃಪಣಂ ದೈವಮಶಕ್ತಮಭಿಶಂಸಸಿ ॥

ಅನುವಾದ

ಅಣ್ಣಾ! ತಂದೆಯ ಈ ಆಜ್ಞೆಯನ್ನು ಪಾಲಿಸಲು ನಾನು ಕಾಡಿಗೆ ಹೋಗದಿದ್ದರೆ ಧರ್ಮದ ವಿರೋಧವಾದೀತು ಎಂದು ನೀನು ತಿಳಿದಿರುವೆ. ಇದಲ್ಲದೆ ತಂದೆಯ ಆಜ್ಞೆಯನ್ನು ಉಲ್ಲಂಘನೆ ಮಾಡುವವನು ರಾಜನಾದರೆ ನಮ್ಮನ್ನು ಧರ್ಮದಿಂದ ಹೇಗೆ ಪಾಲಿಸಬಲ್ಲನು? ಎಂಬ ಪ್ರಜಾ ಜನರಲ್ಲಿ ಭಾರೀ ಶಂಕೆ ಉಂಟಾದೀತು ಎಂದುಕೊಂಡಿರುವೆ. ಜೊತೆಗೆ ನಾನು ತಂದೆಯ ಆಜ್ಞೆಯನ್ನು ಪಾಲಿಸದಿದ್ದರೆ ಬೇರೆ ಜನರೂ ಇದನ್ನು ಪಾಲಿಸಲಾರರು ಎಂದು ಯೋಚಿಸುತ್ತಿವೆ. ಈ ಪ್ರಕಾರ ಧರ್ಮದ ಅವಹೇಳನೆ ಆಗುವುದರಿಂದ ಜಗತ್ತಿನ ವಿನಾಶದ ಭಯ ಉಪಸ್ಥಿತವಾದೀತು. ಹೀಗೆ ಇದೆಲ್ಲ ದೋಷ ಮತ್ತು ಶಂಕೆಗಳನ್ನು ನಿವಾರಿಸಲು ನಿನ್ನ ಮನಸ್ಸಿನಲ್ಲಿ ವನಗಮನದ ಕುರಿತು ಉಂಟಾದ ಭಾರೀ ಸಂಭ್ರಮವು ಸರ್ವಥಾ ಅನುಚಿತ ಹಾಗೂ ಭ್ರಮಮೂಲಕವಾಗಿದೆ; ಏಕೆಂದರೆ, ನೀನು ಅಸಮರ್ಥ ದೈವವೆಂಬ ತುಚ್ಛವಸ್ತುವನ್ನು ಪ್ರಬಲವೆಂದು ಹೇಳುತ್ತಿರುವೆ. ದೈವವನ್ನು ನಿರಾಕರಣ ಮಾಡುವಲ್ಲಿ ನಿನ್ನಂತಹ ಸಮರ್ಥ ಕ್ಷತ್ರಿಯ ಶಿರೋಮಣಿ ವೀರನು ಭ್ರಮೆಯಲ್ಲಿ ಬಿದ್ದು ಇಂತಹ ಮಾತನ್ನು ಹೇಳುತ್ತಿರುವೆ. ಆದ್ದರಿಂದ ಅಸಮರ್ಥ ಪುರುಷರೇ ಆಶ್ರಯಿಸಲು ಯೋಗ್ಯವಾದ ಹಾಗೂ ಪೌರುಷದ ಬಳಿ ಏನನ್ನೂ ಮಾಡಲು ಅಸಮರ್ಥವಾದ ದೈವವನ್ನು ನೀನು ಸಾಧಾರಣ ಮನುಷ್ಯರಂತೆ ಇಷ್ಟೊಂದು ಪ್ರಶಂಸಿಸುತ್ತಿರುವೆಯಲ್ಲ.॥5-7॥

ಮೂಲಮ್ - 8

ಪಾಪಯೋಸ್ತೇ ಕಥಂ ನಾಮ ತಯೋಃ ಶಂಕಾ ನ ವಿದ್ಯತೇ ।
ಸಂತಿ ಧರ್ಮೋಪಧಾಸಕ್ತಾ ಧರ್ಮಾತ್ಮನ್ಕಿಂ ನ ಬುಧ್ಯಸೇ ॥

ಅನುವಾದ

ಧರ್ಮಾತ್ಮನೇ! ಬೇರೆಯವರನ್ನು ಮೋಸಗೊಳಿಸಲು ಧರ್ಮದ ಮುಸುಕನ್ನು ಹಾಕಿದ ಎಷ್ಟು ಪಾಪಾತ್ಮರು ಈ ಜಗತ್ತಿನಲ್ಲಿ ಇಲ್ಲ? ನಿನಗೆ ಅವರ ಅರಿವಿಲ್ಲವೇ? ನಿನಗೆ ಪಾಪಿಗಳಾದ ಅವರಿಬ್ಬರ ಮೇಲೆ ಸಂದೇಹ ಏಕೆ ಉಂಟಾಗುವುದಿಲ್ಲ.॥8॥

ಮೂಲಮ್ - 9

ತಯೋಃ ಸುಚರಿತಂ ಸ್ವಾರ್ಥಂ ಶಾಠ್ಯಾತ್ ಪರಿಜಿಹೀರ್ಷತೋಃ ।
ಯದಿ ನೈವಂ ವ್ಯವಸಿತಂ ಸ್ಯಾದ್ಧಿ ಪ್ರಾಗೇವ ರಾಘವ ।
ತಯೋಃ ಪ್ರಾಗೇವ ದತ್ತಶ್ಚ ಸ್ಯಾದ್ವರಃಪ್ರಕೃತಶ್ಚ ಸಃ ॥

ಅನುವಾದ

ರಘುನಂದನಾ! ಅವರಿಬ್ಬರೂ ತಮ್ಮ ಸ್ವಾರ್ಥಸಿದ್ಧಿಗಾಗಿ ಮೋಸದಿಂದ ಧರ್ಮದ ನೆಪದಿಂದ ನಿನ್ನಂತಹ ಸಚ್ಚರಿತ್ರ ಪುರುಷನನ್ನು ತ್ಯಜಿಸಲು ಬಯಸುತ್ತಿರುವರು. ಇಂತಹ ವಿಚಾರ ಅವರಲ್ಲಿ ಇಲ್ಲದಿರುತ್ತಿದ್ದರೆ ಇಂದು ಆದ ಕಾರ್ಯವು ಮೊದಲೇ ಆಗಿ ಹೋಗಬಹುದಿತ್ತು. ವರದಾನದ ಮಾತು ನಿಜವಾಗಿದ್ದರೆ ನಿನ್ನ ಪಟ್ಟಾಭಿಷೇಕದ ಕಾರ್ಯ ಪ್ರಾರಂಭವಾಗುವ ಮೊದಲೇ ಇಂತಹ ವರ ಕೊಡಬಹುದಿತ್ತಲ್ಲ.॥9॥

ಮೂಲಮ್ - 10

ಲೋಕವಿದ್ವಿಷ್ಟಮಾರಬ್ಧಂ ತ್ವದನ್ಯಸ್ಯಾಭಿಷೇಚನಮ್ ।
ನೋತ್ಸಹೇ ಸಹಿತುಂ ವೀರ ತತ್ರ ಮೇ ಕ್ಷಂತುಮರ್ಹಸಿ ॥

ಅನುವಾದ

ಗುಣವಂತ ಜ್ಯೇಷ್ಠಪುತ್ರನಿರುವಾಗ ಕಿರಿಯವನ ಪಟ್ಟಾಭಿಷೇಕ ಮಾಡುವುದು ಲೋಕವಿರುದ್ಧ ಕಾರ್ಯವಾಗಿದೆ. ನಿನ್ನದಲ್ಲದೆ ಬೇರೆ ಯಾರದೇ ಪಟ್ಟಾಭಿಷೇಕ ಆಗುವುದು ನನ್ನಿಂದ ಸಹಿಸಲಾಗುವುದಿಲ್ಲ. ಅದಕ್ಕಾಗಿ ನೀನು ನನ್ನನ್ನು ಕ್ಷಮಿಸು.॥10॥

ಮೂಲಮ್ - 11

ಯೇನೈವಮಾಗತಾ ದ್ವೆಧಂ ತವ ಬುದ್ಧಿರ್ಮಹಾಮತೇ ।
ಸೋಽಪಿ ಧರ್ಮೋ ಮಮ ದ್ವೇಷ್ಯೋ ಯತ್ಪ್ರಸಂಗಾದ್ವಿಮುಹ್ಯಸಿ ॥

ಅನುವಾದ

ಮಹಾಮತೇ! ತಂದೆಯ ಯಾವ ಮಾತನ್ನು ಒಪ್ಪಿಕೊಂಡು ನೀನು ಮೋಹದಲ್ಲಿ ಬಿದ್ದಿರುವೆಯೋ, ಯಾವುದರ ಕಾರಣದಿಂದ ನಿನ್ನ ಬುದ್ಧಿಯಲ್ಲಿ ಮಂಕುಕವಿದಿದೆಯೋ, ಅದನ್ನು ಧರ್ಮವೆಂದು ತಿಳಿಯುವ ಪಕ್ಷಪಾತಿ ನಾನಲ್ಲ. ಇಂತಹ ಧರ್ಮವನ್ನಾದರೋ ನಾನು ವಿರೋಧಿಸುತ್ತೇನೆ.॥11॥

ಮೂಲಮ್ - 12

ಕಥಂ ತ್ವಂ ಕರ್ಮಣಾ ಶಕ್ತಃ ಕೈಕೇಯೀವಶವರ್ತಿನಃ ।
ಕರಿಷ್ಯಸಿ ಪಿತುರ್ವಾಕ್ಯಮಧರ್ಮಿಷ್ಠಂ ವಿಗರ್ಹಿತಮ್ ॥

ಅನುವಾದ

ನೀನು ನಿನ್ನ ಪರಾಕ್ರಮದಿಂದ ಎಲ್ಲವನ್ನು ಮಾಡಲು ಸಮರ್ಥನಾಗಿದ್ದರೂ ಕೈಕೆಯ ವಶವಾಗಿರುವ ತಂದೆಯ ಅಧರ್ಮಪೂರ್ಣ ಹಾಗೂ ನಿಂದಿತ ವಚನವನ್ನು ಹೇಗೆ ಪಾಲಿಸುವೆ.॥12॥

ಮೂಲಮ್ - 13

ಯದಯಂ ಕಿಲ್ಬಿಷಾದ್ಭೇದಃ ಕೃತೋಽಪ್ಯೇವಂ ನ ಗೃಹ್ಯತೇ ।
ಜಾಯತೇ ತತ್ರ ಮೇ ದುಃಖಂ ಧರ್ಮಸಂಗಶ್ಚ ಗರ್ಹಿತಃ ॥

ಅನುವಾದ

ವರದಾನದ ಸುಳ್ಳು ಕಲ್ಪನೆಯ ಪಾಪ ಮಾಡಿ ನಿನ್ನ ಅಭಿಷೇಕದಲ್ಲಿ ಅಡ್ಡಿಪಡಿಸಲಾಗಿದೆ. ಹೀಗಿದ್ದರೂ ನೀನು ಈ ಪ್ರಕಾರವಾಗಿ ಗ್ರಹಿಸುವುದಿಲ್ಲ. ಇದಕ್ಕಾಗಿ ನನ್ನ ಮನಸ್ಸ್ಸಿನಲ್ಲಿ ಭಾರೀ ದುಃಖವಾಗುತ್ತಾ ಇದೆ. ಇಂತಹ ಕಪಟ ತುಂಬಿದ ಧರ್ಮದ ಕುರಿತು ಉಂಟಾಗುವ ಆಸಕ್ತಿಯು ನಿಂದಿತವಾಗಿದೆ.॥13॥

ಮೂಲಮ್ - 14

ತವಾಯಂ ಧರ್ಮಸಂಯೋಗೋ ಲೋಕಸ್ಯಾಸ್ಯ ವಿಗರ್ಹಿತಃ ।
ಮನಸಾಪಿ ಕಥಂ ಕಾಮಂ ಕುರ್ಯಾತ್ ತ್ವಾಂ ಕಾಮವೃತ್ತಯೋಃ ।
ತಯೋಸ್ತ್ವಹಿತಯೋರ್ನಿತ್ಯಂ ಶತ್ರವೋಃ ಪಿತ್ರಭಿಧಾನಯೋಃ ॥

ಅನುವಾದ

ಇಂತಹ ಕಪಟಪೂರ್ಣ ಧರ್ಮದ ಪಾಲನೆಯಲ್ಲಿ ನಿನಗೆ ಉಂಟಾದ ಪ್ರವೃತ್ತಿಯು ಇಲ್ಲಿಯ ಜನಸಮುದಾಯದ ದೃಷ್ಟಿಯಲ್ಲಿ ನಿಂದಿತವಾಗಿದೆ. ನಿನ್ನನ್ನು ಬಿಟ್ಟು ಬೇರೆ ಯಾವನೇ ಪುರುಷನು ಸದಾ ಪುತ್ರನ ಅಹಿತವನ್ನು ಮಾಡುವ ಹೆಸರಿಗಷ್ಟೇ ತಂದೆ-ತಾಯಿಯರಾದ ಕಾಮಚಾರಿ ಶತ್ರುಗಳ ಮನೋರಥವನ್ನು ಮನಸ್ಸಿನಿಂದಲಾದರೂ ಹೇಗೆ ಪೂರ್ಣ ಮಾಡಬಲ್ಲನು? (ಅದರ ಪೂರ್ಣತೆಯ ವಿಚಾರವನ್ನು ಮನಸ್ಸಿಗಾದರೂ ಹೇಗೆ ತರಬಲ್ಲನು?.॥14॥

ಮೂಲಮ್ - 15

ಯದ್ಯಪಿ ಪ್ರತಿಪತ್ತಿಸ್ತೇ ದೈವೀ ಚಾಪಿ ತಯೋರ್ಮತಮ್ ।
ತಥಾಪ್ಯುಪೇಕ್ಷಣೀಯಂ ತೇ ನ ಮೇ ತದಪಿರೋಚತೇ ॥

ಅನುವಾದ

ನಿನ್ನ ಪಟ್ಟಾಭಿಷೇಕ ಆಗದಿರಲಿ’ ಎಂಬ ತಂದೆ-ತಾಯಿಯರ ವಿಚಾರವನ್ನು ನೀನು ದೈವಪ್ರೇರಣೆಯ ಫಲ ಎಂದು ತಿಳಿಯುತ್ತಿರುವೆಯಲ್ಲ, ಇದೂ ನನಗೆ ಸರಿ ಕಾಣುವುದಿಲ್ಲ. ಅದು ನಿನ್ನ ಮತವಾಗಿದ್ದರೂ ನೀನು ಅದನ್ನು ಉಪೇಕ್ಷಿಸಬೇಕು.॥15॥

ಮೂಲಮ್ - 16

ವಿಕ್ಲವೋ ವೀರ್ಯಹೀನೋ ಯಃ ಸ ದೈವಮನುವರ್ತತೇ ।
ವೀರಾಃ ಸಂಭಾವಿತಾತ್ಮನೋ ನ ದೈವಂ ಪರ್ಯುಪಾಸತೇ ॥

ಅನುವಾದ

ಯಾರು ಹೇಡಿಯಾಗಿರುವನೋ, ಯಾರಲ್ಲಿ ಪರಾಕ್ರಮದ ಹೆಸರೇ ಇಲ್ಲವೋ, ಅವರೇ ದೈವದ ಮೇಲೆ ಭರವಸೆ ಇಡುತ್ತಾರೆ. ಇಡೀ ಜಗತ್ತು ಯಾರನ್ನು ಆದರದ ದೃಷ್ಟಿಯಿಂದ ನೋಡುತ್ತದೋ ಆ ಶಕ್ತಿಶಾಲಿ ವೀರಪುರುಷನು ದೈವದ ಉಪಾಸನೆ ಮಾಡುವುದಿಲ್ಲ.॥16॥

ಮೂಲಮ್ - 17

ದೈವಂ ಪುರುಷಕಾರೇಣ ಯಃ ಸಮರ್ಥಃ ಪ್ರಬಾಧಿತುಮ್ ।
ನ ದೈವೇನ ವಿಪನ್ನಾರ್ಥಃ ಪುರುಷಃ ಸೋಽವಸೀದತಿ ॥

ಅನುವಾದ

ತನ್ನ ಪುರುಷಾರ್ಥದಿಂದ ದೈವವನ್ನು ಹಿಮ್ಮೆಟ್ಟಿಸಲು ಸಮರ್ಥನಾದ ಪುರುಷನು ದೈವದಿಂದಾಗಿ ತನ್ನ ಕಾರ್ಯದಲ್ಲಿ ತಡೆ ಉಂಟಾದರೂ ದುಃಖಿಸುವುದಿಲ್ಲ; ಶಿಥಿಲವಾಗಿ ಕುಳಿತುಕೊಳ್ಳುವುದಿಲ್ಲ.॥17॥

ಮೂಲಮ್ - 18

ದ್ರಕ್ಷ್ಯಂತಿ ತ್ವದ್ಯ ದೈವಸ್ಯ ಪೌರುಷಂ ಪುರುಷಸ್ಯ ಚ ।
ದೈವಮಾನುಷಯೋರದ್ಯ ವ್ಯಕ್ತಾ ವ್ಯಕ್ತಿರ್ಭವಿಷ್ಯತಿ ॥

ಅನುವಾದ

ದೈವದ ಶಕ್ತಿ ದೊಡ್ಡದೋ ಅಥವಾ ಪುರುಷನ ಪುರುಷಾರ್ಥ ದೊಡ್ಡದೋ ಇದನ್ನು ಇಂದು ಜಗತ್ತಿನ ಜನರು ನೋಡಲಿ. ಇಂದು ದೈವ ಮತ್ತು ಮನುಷ್ಯನಲ್ಲಿ ಯಾರು ಬಲಿಷ್ಠರು, ಯಾರು ದುರ್ಬಲರು-ಇದರ ಸ್ಪಷ್ಟ ನಿರ್ಣಯ ಆಗಿಹೋಗುವುದು.॥18॥

ಮೂಲಮ್ - 19

ಅದ್ಯ ಮೇ ಪೌರುಷಹತಂ ದೈವಂ ದ್ರಕ್ಷ್ಯಂತಿ ವೈ ಜನಾಃ ।
ಯೈರ್ದೈವಾದಾಹತಂ ತೇಽದ್ಯ ದೃಷ್ಟಂ ರಾಜ್ಯಾಭಿಷೇಚನಮ್ ॥

ಅನುವಾದ

ಯಾವ ಜನರು ದೈವದ ಬಲದಿಂದ ಇಂದು ನಿನ್ನ ಪಟ್ಟಾಭಿಷೇಕವು ನಾಶವಾಗುವುದನ್ನು ನೋಡಿರುವರೋ, ಅವರೇ ಇಂದು ನನ್ನ ಪುರುಷಾರ್ಥದಿಂದ ಅವಶ್ಯವಾಗಿ ದೈವದ ವಿನಾಶವನ್ನು ನೋಡುವರು.॥19॥

ಮೂಲಮ್ - 20

ಅತ್ಯಂಕುಶಮಿವೋದ್ದಾಮಂ ಗಜಂ ಮದಜಲೋದ್ಧತಮ್ ।
ಪ್ರಧಾವಿತಮಹಂದೈವಂ ಪೌರುಷೇಣ ನಿವರ್ತಯೇ ॥

ಅನುವಾದ

ಅಂಕುಶವನ್ನು ಲೆಕ್ಕಿಸದೆ, ಹಗ್ಗ-ಸಂಕೋಲೆಗಳನ್ನು ತುಂಡರಿಸಿ, ಮದಜಲವನ್ನು ಹರಿಸುತ್ತಿರುವ ಮತ್ತಗಜರಾಜನಂತೆ ವೇಗವಾಗಿ ಓಡುತ್ತಿರುವ ದೈವವನ್ನು ಇಂದು ನಾನು ನನ್ನ ಪುರುಷಾರ್ಥದಿಂದ ಹಿಮ್ಮೆಟ್ಟಿಸುವೆನು.॥20॥

ಮೂಲಮ್ - 21

ಲೋಕಪಾಲಾಃ ಸಮಸ್ತಾಸ್ತೇ ನಾದ್ಯ ರಾಮಾಭಿಷೇಚನಮ್ ।
ನ ಚ ಕೃತ್ನ್ಸಾಸ್ತ್ರಯೋ ಲೋಕಾ ವಿಹನ್ಯುಃ ಕಿಂ ಪುನಃ ಪಿತಾ ॥

ಅನುವಾದ

ಸಮಸ್ತ ಲೋಕಪಾಲಕರು ಮತ್ತು ಮೂರು ಲೋಕದ ಸಮಸ್ತ ಪ್ರಾಣಿಗಳು ಇಂದು ಶ್ರೀರಾಮನ ಪಟ್ಟಾಭಿಷೇಕವನ್ನು ತಡೆಯಲಾರರು. ಹಾಗಿರುವಾಗ ಕೇವಲ ತಂದೆಯ ಮಾತಾದರೂ ಏನಿದೆ.॥21॥

ಮೂಲಮ್ - 22

ಯೈರ್ವಿವಾಸಸ್ತವಾರಣ್ಯೇ ಮಿಥೋ ರಾಜನ್ ಸಮರ್ಥಿತಃ ।
ಅರಣ್ಯೇ ತೇ ವಿವತ್ಸ್ಯಂತಿ ಚತುರ್ದಶ ಸಮಾಸ್ತಥಾ ॥

ಅನುವಾದ

ರಾಜನೇ! ಯಾವ ಜನರು ಪರಸ್ಪರ ನಿನ್ನ ವನವಾಸವನ್ನು ಸಮರ್ಥಿಸಿರುವರೋ, ಅವರೇ ಹದಿನಾಲ್ಕುವರ್ಷ ಕಾಲ ಕಾಡಿಗೆ ಹೋಗಿ ಅಡಗಿಕೊಳ್ಳುವರು.॥22॥

ಮೂಲಮ್ - 23

ಅಹಂ ತದಾಶಾಂ ಧಕ್ಷ್ಯಾಮಿ ಪಿತುಸ್ತಸ್ಯಾಶ್ಚ ಯಾ ತವ ।
ಅಭಿಷೇಕವಿಘಾತೇನ ಪುತ್ರರಾಜ್ಯಾಯ ವರ್ತತೇ ॥

ಅನುವಾದ

ನಾನು ತಂದೆಯ ಮತ್ತು ನಿನ್ನ ಪಟ್ಟಾಭಿಷೇಕದಲ್ಲಿ ವಿಘ್ನವನ್ನೊಡ್ಡಿ ತನ್ನ ಪುತ್ರನಿಗೆ ರಾಜ್ಯವನ್ನು ಕೊಡಿಸಲು ಪ್ರಯತ್ನಿಸುತ್ತಿರುವ ಆ ಕೈಕೆಯಿಯ ಆಸೆಯನ್ನು ಸುಟ್ಟು ಬೂದಿ ಮಾಡಿಬಿಡುವೆನು.॥23॥

ಮೂಲಮ್ - 24

ಮದ್ಬಲೇನ ವಿರುದ್ಧಾಯ ನ ಸ್ಯಾದ್ದೈವಬಲಂ ತಥಾ ।
ಪ್ರಭವಿಷ್ಯತಿ ದುಃಖಾಯ ಯಥೋಗ್ರಂ ಪುರುಷಂಮಮ ॥

ಅನುವಾದ

ನನ್ನ ಪರಾಕ್ರಮಕ್ಕೆ ಎದುರು ನಿಲ್ಲುವವನಿಗೆ ನನ್ನ ಭಯಂಕರ ಪುರುಷಾರ್ಥವು ದುಃಖಕೊಡಲು ಸಮರ್ಥವಾಗುವಂತೆ, ದೈವಬಲವೂ ಅವನಿಗೆ ಸುಖ ಕೊಡಲಾರದು.॥24॥

ಮೂಲಮ್ - 25

ಊರ್ಧ್ವಂ ವರ್ಷ ಸಹಸ್ರಾಂತೇ ಪ್ರಜಾಪಾಲ್ಯಮನಂತರಮ್ ।
ಆರ್ಯಪುತ್ರಾಃ ಕರಿಷ್ಯಂತಿ ವನವಾಸಂ ಗತೇ ತ್ವಯಿ ॥

ಅನುವಾದ

ಸಾವಿರಾರು ವರ್ಷಗಳು ಕಳೆದ ಬಳಿಕ ನೀನು ವೃದ್ಧನಾಗಿ ವನವಾಸಕ್ಕೆ ಹೋದಾಗಲೂ ಕೂಡ ನಿನ್ನ ಬಳಿಕ ನಿನ್ನ ಪುತ್ರನೇ ಪ್ರಜಾಪಾಲನರೂಪೀ ಕಾರ್ಯ ಮಾಡುವನು. (ಅರ್ಥಾತ್-ಆಗಲೂ ಕೂಡ ಇತರ ಯಾರೂ ರಾಜ್ಯಾಧಿಕಾರ ಪಡೆಯಲಾರರು.॥25॥

ಮೂಲಮ್ - 26

ಪೂರ್ವರಾಜರ್ಷಿವೃತ್ತ್ಯಾ ಹಿ ವನವಾಸೋಽಭಿಧೀಯತೇ ।
ಪ್ರಜಾ ನಿಕ್ಷಿಪ್ಯ ಪುತ್ರೇಷು ಪುತ್ರವತ್ ಪರಿಪಾಲನೇ ॥

ಅನುವಾದ

ಪುರಾತನ ರಾಜರ್ಷಿಗಳ ಆಚರಣ ಪರಂಪರೆಯಂತೆ ಪ್ರಜೆಗಳನ್ನು ಮಕ್ಕಳಂತೆ ಪಾಲಿಸಿ, ಪ್ರಜಾವರ್ಗವನ್ನು ಪುತ್ರನ ಕೈಗೆ ಒಪ್ಪಿಸಿ ವೃದ್ಧನಾದ ರಾಜನು ವನವಾಸದಲ್ಲಿ ವಾಸಿಸುವುದು ಉಚಿತವೆಂದು ಹೇಳಲಾಗಿದೆ.॥26॥

ಮೂಲಮ್ - 27

ಸ ಚೇದ್ ರಾಜನ್ಯನೇಕಾಗ್ರೇ ರಾಜ್ಯವಿಭ್ರಮಶಂಕಯಾ ।
ನೈವಮಿಚ್ಛಸಿ ಧರ್ಮಾತ್ಮನ್ ರಾಜ್ಯಂ ರಾಮ ತ್ವಮಾತ್ಮನಿ ॥

ಅನುವಾದ

ಧರ್ಮಾತ್ಮಾ ಶ್ರೀರಾಮ! ನಮ್ಮ ಮಹಾರಾಜರು ವಾನಪ್ರಸ್ಥಧರ್ಮದ ಪಾಲನೆಯಲ್ಲಿ ಮನಸ್ಸು ಮಾಡುವುದಿಲ್ಲ. ಅದಕ್ಕಾಗಿ ಅವರ ಆಜ್ಞೆಗೆ ವಿರುದ್ಧವಾಗಿ ರಾಜ್ಯವನ್ನು ಸ್ವೀಕರಿಸಿದರೆ ಸಮಸ್ತ ಜನತೆ ವಿದ್ರೋಹ ಮಾಡುವರು ಎಂದು ನೀನು ತಿಳಿಯುತ್ತಿರುವೆ; ಆದ್ದರಿಂದ ರಾಜ್ಯವು ತನ್ನ ಕೈಯಲ್ಲಿ ಉಳಿಯಲಾರದು ಎಂಬ ಆಶಂಕೆಯಿಂದ ನೀನು ರಾಜ್ಯಾಧಿಕಾರವನ್ನು ಸ್ವೀಕರಿಸುವುದಿಲ್ಲ ಅಥವಾ ಕಾಡಿಗೆ ಹೋಗಲು ಬಯಸುವೆಯಾದರೆ ಆ ಆಶಂಕೆಯನ್ನು ಬಿಟ್ಟುಬಿಡು.॥27॥

ಮೂಲಮ್ - 28

ಪ್ರತಿಜಾನೇ ಚ ತೇ ವೀರ ಮಾ ಭೂವಂ ವೀರಲೋಕಭಾಕ್ ।
ರಾಜ್ಯಂ ಚ ತವ ರಕ್ಷೇಯಮಹಂ ವೇಲೇವ ಸಾಗರಮ್ ॥

ಅನುವಾದ

ವೀರನೇ! ದಡವು ಸಮುದ್ರವನ್ನು ತಡೆದಿಡುವಂತೆಯೇ ನಾನು ನಿನ್ನನ್ನು ಮತ್ತು ರಾಜ್ಯವನ್ನು ರಕ್ಷಿಸುವೆನು. ಹೀಗೆ ನಾನು ಮಾಡದೆ ಹೋದರೆ ವೀರಲೋಕಕ್ಕೆ ಭಾಗಿಯಾಗುವೆನು ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ.॥28॥

ಮೂಲಮ್ - 29

ಮಂಗಲೈರಭಿಷಿಂಚಸ್ವ ತತ್ರ ತ್ವಂ ವ್ಯಾಪೃತೋ ಭವ ।
ಅಹಮೇಕೋ ಮಹೀಪಾಲಾನಲಂ ವಾರಯಿತುಂ ಬಲಾತ್ ॥

ಅನುವಾದ

ಅದಕ್ಕಾಗಿ ಮಂಗಲಮಯ ಅಭಿಷೇಕ ಸಾಮಗ್ರಿಯಿಂದ ನಿನ್ನ ಪಟ್ಟಾಭಿಷೇಕ ಆಗಿಹೋಗಲಿ. ಈ ಪಟ್ಟಾಭೀಷೇಕದ ಕಾರ್ಯದಲ್ಲಿ ನೀನು ತತ್ಪರನಾಗು. ನಾನೊಬ್ಬನೇ ಬಲವಂತವಾಗಿ ಸಮಸ್ತ ವಿರೋಧೀ ಭೂಪಾಲಕರನ್ನು ತಡೆದಿಡಲು ಸಮರ್ಥನಾಗಿರುವೆನು.॥29॥

ಮೂಲಮ್ - 30

ನ ಶೋಭಾರ್ಥಾವಿಮೌ ಬಾಹೂ ನ ಧನುರ್ಭೂಷಣಾಯ ಮೇ ।
ನಾಸಿರಾಬಂಧನಾರ್ಥಾಯ ನ ಶರಾಃ ಸ್ತಂಭಹೇತವಃ ॥

ಅನುವಾದ

ಈ ನನ್ನ ಎರಡು ಭುಜಗಳು ಕೇವಲ ಅಲಂಕಾರಕ್ಕಾಗಿ ಇಲ್ಲ. ನನ್ನ ಈ ಧನುಸ್ಸು ಆಭೂಷಣವಲ್ಲ. ಈ ಖಡ್ಗ ಕೇವಲ ಸೊಂಟಕ್ಕೆ ಕಟ್ಟಿಕೊಳ್ಳುವುದಕ್ಕಲ್ಲ, ಈ ಬಾಣಗಳು ಕಂಬಗಳಾಗಲಾರವು.॥30॥

ಮೂಲಮ್ - 31

ಅಮಿತ್ರಮಥನಾರ್ಥಾಯ ಸರ್ವಮೇತಚ್ಚತುಷ್ಟಯಮ್ ।
ನ ಚಾಹಂ ಕಾಮಯೇಽತ್ಯರ್ಥಂ ಯಃ ಸ್ಯಾಚ್ಛತ್ರುರ್ಮತೋ ಮಮ ॥

ಅನುವಾದ

ಈ ನಾಲ್ಕು ವಸ್ತುಗಳು ಶತ್ರುಗಳನ್ನು ದಮನ ಮಾಡುವುದಕ್ಕಾಗಿ ಇವೆ. ನಾನು ಯಾರನ್ನು ಶತ್ರುಗಳೆಂದು ತಿಳಿಯುವೆನೋ, ಅವನನ್ನು ಎಂದೂ ಜೀವಿತನಾಗಿರಲು ಬಿಡಲಾರೆ.॥31॥

ಮೂಲಮ್ - 32

ಅಸಿನಾ ತೀಕ್ಷ್ಣಧಾರೇಣ ವಿದ್ಯುಚ್ಚಲಿತವರ್ಚಸಾ ।
ಪ್ರಗೃಹೀತೇನ ವೈ ಶತ್ರುಂ ವಜ್ರಿಣಂ ವಾ ನ ಕಲ್ಪಯೇ ॥

ಅನುವಾದ

ನಾನು ಈ ಹರಿತವಾದ ಖಡ್ಗವನ್ನು ಎತ್ತಿಕೊಂಡಾಗ ವಿದ್ಯುತ್ತಿನಂತೆ ಹೊಳೆಯುತ್ತಾ ಇರುತ್ತದೆ. ಇದರ ಮೂಲಕ ನನ್ನ ಯಾವುದೇ ಶತ್ರುವಾಗಿದ್ದರೂ ಅವನು ವಜ್ರಧಾರೀ ಇಂದ್ರನೇ ಆಗಿದ್ದರೂ ಸರಿ, ನಾನು ಲೆಕ್ಕಿಸುವುದಿಲ್ಲ.॥32॥

ಮೂಲಮ್ - 33

ಖಡ್ಗನಿಷ್ಪೇಷನಿಷ್ಪಿಷ್ಟೈರ್ಗಹನಾ ದುಶ್ಚರಾ ಚ ಮೇ ।
ಹರತ್ಯಶ್ವರಥಿಹಸ್ತೋರುಶಿರೋಭಿರ್ಭವಿತಾ ಮಹೀ ॥

ಅನುವಾದ

ಇಂದು ನನ್ನ ಖಡ್ಗದ ಪ್ರಹಾರದಿಂದ ನುಚ್ಚುನೂರಾದ ಆನೆ, ಕುದುರೆ, ರಥಿಕರ ಕೈಗಳು, ತೊಡೆ, ಮಸ್ತಕ ಇವುಗಳಿಂದ ಈ ಭೂಮಿಯು ತುಂಬಿಹೋಗುವುದು. ಇದರಿಂದ ಓಡಾಡಲು ಕಷ್ಟವಾಗಬಹುದು.॥33॥

ಮೂಲಮ್ - 34

ಖಡ್ಗಧಾರಾಹತಾ ಮೇಽದ್ಯ ದೀಪ್ಯಮಾನಾ ಇವಾಗ್ನಯಃ ।
ಪತಿಷ್ಯಂತಿ ದ್ವಿಷೋ ಭೂಮೌ ಮೇಘಾ ಇವ ಸವಿದ್ಯುತಃ ॥

ಅನುವಾದ

ನನ್ನ ಖಡ್ಗದ ಅಲಗಿನಿಂದ ತುಂಡಾಗಿ ರಕ್ತದಿಂದ ತೊಯ್ದಿರುವ ಶತ್ರುಗಳು ಉರಿಯುವ ಬೆಂಕಿಯಂತೆ ಕಂಡು ಬರುವರು ಮತ್ತು ಮಿಂಚಿನೊಂದಿಗೆ ಮೋಡಗಳಂತೆ ಇಂದು ಭೂಮಿಗೆ ಬೀಳುವರು.॥34॥

ಮೂಲಮ್ - 35

ಬದ್ಧ ಗೋಧಾಂಗುಲಿತ್ರಾಣೇ ಪ್ರಗೃಹೀತಶರಾಸನೇ ।
ಕಥಂ ಪುರುಷಮಾನೀ ಸ್ಯಾತ್ಪುರುಷಾಣಾಂ ಮಯಿ ಸ್ಥಿತೇ ॥

ಅನುವಾದ

ನನ್ನ ಕೈಯಲ್ಲಿ ನೀರುಡದ ಚರ್ಮದ ರಕ್ಷಾಕವಚವನ್ನು ತೊಟ್ಟು ಕೈಯಲ್ಲಿ ಧನುಸ್ಸನ್ನು ಹಿಡಿದು ನಾನು ಯುದ್ಧಕ್ಕೆ ನಿಂತರೆ, ನನ್ನ ಎದುರುನಿಂತು ಯಾವ ಪುರುಷನು ತಾನೆ ತನ್ನ ಪೌರುಷವನ್ನು ತೋರಬಲ್ಲನು.॥35॥

ಮೂಲಮ್ - 36

ಬಹುಭಿಶ್ಚೈಕಮತ್ಯಸ್ಯನ್ನೇಕೇನ ಚ ಬಹೂಂಜನಾನ್ ।
ವಿನಿಯೋಕ್ಷ್ಯಾಮ್ಯಹಂ ಬಾಣಾನ್ನೃವಾಜಿಗಜಮರ್ಮಸು ॥

ಅನುವಾದ

ನಾನು ಅನೇಕ ಬಾಣಗಳಿಂದ ಒಬ್ಬನನ್ನು ಮತ್ತು ಒಂದೇ ಬಾಣದಿಂದ ಅನೇಕ ಯೋಧರನ್ನು ಧರಾಶಾಯಿಯಾಗಿಸುತ್ತಾ ಮನುಷ್ಯರ, ಆನೆ, ಕುದುರೆ ಇವುಗಳ ಮರ್ಮಸ್ಥಾನಗಳಿಗೆ ಬಾಣಗಳನ್ನು ಪ್ರಯೋಗಿಸುವೆನು.॥36॥

ಮೂಲಮ್ - 37

ಅದ್ಯ ಮೇಽಸ್ತ್ರಪ್ರಭಾವಸ್ಯ ಪ್ರಭಾವಃ ಪ್ರಭವಿಷ್ಯತಿ ।
ರಾಜ್ಞಶ್ಚಾಪ್ರಭುತಾಂ ಕರ್ತುಂ ಪ್ರಭುತ್ವಂ ಚ ತವ ಪ್ರಭೋ ॥

ಅನುವಾದ

ಸ್ವಾಮಿ! ಇಂದು ದಶರಥರಾಜರ ಪ್ರಭುತ್ವವನ್ನು ಅಳಿಸುವ ಮತ್ತು ನಿನ್ನ ಪ್ರಭುತ್ವವನ್ನು ಸ್ಥಾಪಿಸಲಿಕ್ಕಾಗಿ ಅಸಮಬಲದಿಂದ ಸಂಪನ್ನನಾದ ಲಕ್ಷ್ಮಣನ ಪ್ರಭಾವ ಪ್ರಕಟವಾಗುವುದು.॥37॥

ಮೂಲಮ್ - 38

ಅದ್ಯ ಚಂದನಸಾರಸ್ಯ ಕೇಯೂರಾಮೋಕ್ಷಣಸ್ಯ ಚ ।
ವಸೂನಾಂ ಚ ವಿಮೋಕ್ಷಸ್ಯ ಸುಹೃದಾಂ ಪಾಲನಸ್ಯ ಚ ॥

ಮೂಲಮ್ - 39

ಅನುರೂಪಾವಿಮೌ ಬಾಹೂ ರಾಮ ಕರ್ಮ ಕರಿಷ್ಯತಃ ।
ಅಭಿಷೇಚನವಿಘ್ನಸ್ಯ ಕರ್ತೃಣಾಂ ತೇ ನಿವಾರಣೇ ॥

ಅನುವಾದ

ಶ್ರೀರಾಮಾ! ನನ್ನ ಈ ಎರಡು ಭುಜಗಳು ಚಂದನ ಹಚ್ಚಲು, ತೋಳ್ಬಂದಿ ಧರಿಸಲು, ಧನವನ್ನು ದಾನ ಮಾಡಲು, ಸುಹೃದರನ್ನು ಪಾಲಿಸಲು ಸಂಲಗ್ನವಾಗಿವೆ; ಇಂದು ನಿನ್ನ ಪಟ್ಟಾಭಿಷೇಕದಲ್ಲಿ ವಿಘ್ನವನ್ನೊಡ್ಡುವವರನ್ನು ತಡೆಯಲೂ ಅದೇ ಭುಜಗಳ ಪರಾಕ್ರಮ ಪ್ರಕಟವಾಗುವುದು.॥38-39॥

ಮೂಲಮ್ - 40

ಬ್ರವೀಹಿ ಕೋಽದ್ಯೈವ ಮಯಾ ವಿಯುಜ್ಯತಾಂ
ತವಾಸುಹೃತ್ಪ್ರಾಣಯಶಃಸುಹೃಜ್ಜನೈಃ ।
ಯಥಾ ತವೇಯಂ ವಸುಧಾ ವಶಾ ಭವೇತ್
ತಥೈವ ಮಾಂ ಶಾಧಿ ತವಾಸ್ಮಿ ಕಿಂಕರಃ ॥

ಅನುವಾದ

ಪ್ರಭೋ! ನಾನು ನಿನ್ನ ಯಾವ ಶತ್ರುವನ್ನು ಈಗ ಪ್ರಾಣ, ಯಶ ಮತ್ತು ಸುಹೃಜ್ಜನರಿಂದ ಅಗಲಿಸಿಬಿಡಲಿ, ಹೇಳು. ಯಾವ ಉಪಾಯದಿಂದ ಈ ಇಡೀ ಪೃಥಿವಿಯು ನಿನ್ನ ಅಧಿಕಾರಕ್ಕೆ ಬರುವುದೋ ಅದಕ್ಕಾಗಿ ನನಗೆ ಆಜ್ಞಾಪಿಸು. ನಾನು ನಿನ್ನ ದಾಸನಾಗಿರುವೆನು.॥40॥

ಮೂಲಮ್ - 41

ವಿಮೃಜ್ಯ ಬಾಷ್ಪಂ ಪರಿಸಾಂತ್ವಯ ಚಾಸಕೃತ್
ಸ ಲಕ್ಷಣಂ ರಾಘವ ವಂಶವರ್ಧನಃ ।
ಉವಾಚ ಪಿತ್ರೋರ್ವಚನೇ ವ್ಯವಸ್ಥಿತಂ
ನಿಬೋಧ ಮಾಮೇಷ ಹಿಸೌಮ್ಯ ಸತ್ಪಥಃ ॥

ಅನುವಾದ

ರಘುವಂಶದ ವೃದ್ಧಿಯನ್ನು ಮಾಡುವ ಶ್ರೀರಾಮನು ಲಕ್ಷ್ಮಣನ ಈ ಮಾತನ್ನು ಕೇಳಿ, ಅವನ ಕಣ್ಣೀರನ್ನು ಒರೆಸಿ, ಅವನನ್ನು ಪದೇ-ಪದೇ ಸಮಾಧಾನಪಡಿಸುತ್ತಾ ಹೇಳಿದನು - ಸೌಮ್ಯ! ನೀನು ನನ್ನನ್ನು ತಂದೆ-ತಾಯಿಯರ ಆಜ್ಞಾಪಾಲನೆಯಲ್ಲಿ ದೃಡವಾಗಿ ಸ್ಥಿತವೆಂದು ತಿಳಿ. ಇದೇ ಸತ್ಪುರುಷರ ಮಾರ್ಗವಾಗಿದೆ.॥41॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತಮೂರನೆಯ ಸರ್ಗ ಪೂರ್ಣವಾಯಿತು. ॥23॥