वाचनम्
ಭಾಗಸೂಚನಾ
ಶ್ರೀರಾಮನು ಲಕ್ಷ್ಮಣನನ್ನು ಸಮಜಾಯಿಸುತ್ತಾ ತನ್ನ ವನವಾಸಕ್ಕೆ ದೈವವೇ ಕಾರಣವೆಂದು ತಿಳಿಸಿ, ಅಭಿಷೇಕದ ಸಾಮಗ್ರಿಗಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವಂತೆ ಆದೇಶಿಸಿದುದು
ಮೂಲಮ್ - 1
ಅಥ ತಂ ವ್ಯಥಯಾ ದೀನಂ ಸವಿಶೇಷಮಮರ್ಷಿತಮ್ ।
ಸರೋಷಮಿವ ನಾಗೇಂದ್ರಂರೋಷವಿಸ್ಫಾರಿತೇಕ್ಷಣಮ್ ॥
ಮೂಲಮ್ - 2
ಆಸಾದ್ಯ ರಾಮಃ ಸೌಮಿತ್ರಿಂ ಸುಹೃದಂ ಭ್ರಾತರಂ ಪ್ರಿಯಮ್ ।
ಉವಾಚೇದಂ ಸ ಧೈರ್ಯೇಣ ಧಾರಯನ್ಸತ್ತ್ವಮಾತ್ಮವಾನ್ ॥
ಅನುವಾದ
ಶ್ರೀರಾಮನ ಪಟ್ಟಾಭಿಷೇಕದಲ್ಲಿ ವಿಘ್ನವುಂಟಾದ ಕಾರಣ ಸುಮಿತ್ರಾಕುಮಾರ ಲಕ್ಷ್ಮಣನು ಮಾನಸಿಕ ವ್ಯಥೆಯಿಂದ ಬಹಳ ದುಃಖಿತನಾಗಿದ್ದನು. ಅವನ ಮನಸ್ಸಿನಲ್ಲಿ ಕೋಪಗೊಂಡಿದ್ದು, ರೋಷಗೊಂಡ ಗಜರಾಜನಂತೆ ಕ್ರೋಧದಿಂದ ಕಣ್ಣುಗಳನ್ನು ದೊಡ್ಡದಾಗಿಸಿ ನೋಡುತ್ತಿದ್ದನು. ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಶ್ರೀರಾಮನು ಧೈರ್ಯದಿಂದ, ನಿರ್ವಿಕಾರಚಿತ್ತನಾಗಿ ತನ್ನ ಹಿತೈಷಿ ಸುಹೃದ್ ಪ್ರಿಯ ತಮ್ಮನಾದ ಲಕ್ಷ್ಮಣನ ಬಳಿಗೆ ಹೋಗಿ ಇಂತೆಂದನು.॥1-2॥
ಮೂಲಮ್ - 3
ನಿಗೃಹ್ಯ ರೋಷಂ ಶೋಕಂ ಚ ಧೈರ್ಯಮಾಶ್ರಿತ್ಯ ಕೇವಲಮ್ ।
ಅವಮಾನಂ ನಿರಸ್ಯೈನಂ ಗೃಹೀತ್ವಾ ಹರ್ಷಮುತ್ತಮಮ್ ॥
ಮೂಲಮ್ - 4
ಉಪಕ್ಲೃಪ್ತಂ ಯದೈತನ್ಮೇ ಅಭಿಷೇಕಾರ್ಥಮುತ್ತಮಮ್ ।
ಸರ್ವಂ ನಿವರ್ತಯ ಕ್ಷಿಪ್ರಂ ಕುರು ಕಾರ್ಯಂ ನಿರವ್ಯಯಮ್ ॥
ಅನುವಾದ
ಲಕ್ಷ್ಮಣಾ! ಕೇವಲ ಧೈರ್ಯವನ್ನು ತಂದುಕೊಂಡು ತನ್ನ ಮನಸ್ಸಿನ ಕ್ರೋಧವನ್ನು, ಶೋಕವನ್ನು ದೂರಗೊಳಿಸು. ಚಿತ್ತದಿಂದ ಅಪಮಾನದ ಭಾವನೆಯನ್ನು ತೆಗೆದು ಹಾಕು. ಹೃದಯದಲ್ಲಿ ಚೆನ್ನಾಗಿ ಹರ್ಷವನ್ನು ತುಂಬಿಕೊಂಡು ನನ್ನ ಅಭಿಷೇಕಕ್ಕಾಗಿ ಅಣಿಗೊಳಿಸಿದ ಉತ್ತಮ ಸಾಮಗ್ರಿಗಳನ್ನು ಬದಿಗಿರಿಸು. ನನ್ನ ವನಗಮನದಲ್ಲಿ ಬಾಧೆ ಉಂಟಾಗದಿರುವಂತಹ ಕಾರ್ಯವನ್ನು ಮಾಡು.॥3-4॥
ಮೂಲಮ್ - 5
ಸೌಮಿತ್ರೇ ಯೋಽಭಿಷೇಕಾರ್ಥೇ ಮಮ ಸಂಭಾರಸಂಭ್ರಮಃ ।
ಅಭಿಷೇಕನಿವೃತ್ಯರ್ಥೇ ಸೋಽಸ್ತು ಸಂಭಾರಸಂಭ್ರಮಃ ॥
ಅನುವಾದ
ಸುಮಿತ್ರಾ ನಂದನನೇ! ಇಷ್ಟರವರೆಗೆ ಅಭಿಷೇಕಕ್ಕಾಗಿ ಸಾಮಗ್ರಿ ಒಟ್ಟುಗೂಡಿಸಲು ಇದ್ದ ನಿನ್ನ ಉತ್ಸಾಹವನ್ನು, ಈಗ ವನವಾಸಕ್ಕೆ ಹೋಗುವ ಸಿದ್ಧತೆಯಲ್ಲಿ ಮತ್ತು ನಾನು ವನವಾಸಕ್ಕೆ ಹೋಗುವ ಸಿದ್ಧತೆಯಲ್ಲಿ ತೊಡಗಿಸು.॥5॥
ಮೂಲಮ್ - 6
ಯಸ್ಯಾ ಮದಭಿಷೇಕಾರ್ಥೇ ಮಾನಸಂ ಪರಿತಪ್ಯತೇ ।
ಮಾತಾ ನಃ ಸಾ ಯಥಾ ನ ಸ್ಯಾತ್ ಸವಿಶಂಕಾ ತಥಾ ಕುರು ॥
ಅನುವಾದ
ನನ್ನ ಪಟ್ಟಾಭಿಷೇಕದ ಕಾರಣ ಚಿತ್ತದಲ್ಲಿ ಸಂತಾಪಪಡುತ್ತಿರುವ ನಮ್ಮ ತಾಯಿ ಕೈಕೆಯಿಗೆ ಯಾವುದೇ ವಿಧದ ಶಂಕೆ ಉಳಿಯದಂತಹ ಕಾರ್ಯವನ್ನು ಮಾಡು.॥6॥
ಮೂಲಮ್ - 7
ತಸ್ಯಾಃ ಶಂಕಾಮಯಂ ದುಃಖಂ ಮುಹೂರ್ತಮಪಿ ನೋತ್ಸಹೇ ।
ಮನಸಿ ಪ್ರತಿಸಂಜಾತಂ ಸೌಮಿತ್ರೇಽಹಮುಪೇಕ್ಷಿತುಮ್ ॥
ಅನುವಾದ
ಲಕ್ಷ್ಮಣ! ಆಕೆಯ ಮನಸ್ಸಿನಲ್ಲಿ ಸಂದೇಹ ಉಂಟಾಗಿ ದುಃಖ ಉತ್ಪನ್ನವಾಗುವುದನ್ನು ನಾನು ಒಂದು ಕ್ಷಣವಾದರೂ ಸಹಿಸುವುದಿಲ್ಲ. ಆಕೆಯ ಉಪೇಕ್ಷೆಯನ್ನು ಮಾಡಲಾರೆನು.॥7॥
ಮೂಲಮ್ - 8
ನ ಬುದ್ಧಿಪೂರ್ವಂ ನಾಬುದ್ಧಂ ಸ್ಮರಾಮೀಹ ಕದಾಚನ ।
ಮಾತೄಣಾಂ ವಾ ಪಿತುರ್ವಾಹಂ ಕೃತಮಲ್ಪಂ ಚ ವಿಪ್ರಿಯಮ್ ॥
ಅನುವಾದ
ನಾನು ಇಲ್ಲಿ ಎಂದು ತಿಳಿದೂ-ತಿಳಿದೂ ಅಥವಾ ತಿಳಿಯದೆ ತಾಯಂದಿರ ಅಥವಾ ತಂದೆಯವರ ಯಾವುದೇ ಸಣ್ಣದಾದ ಅಪರಾಧವನ್ನು ಮಾಡಿದುದು ನೆನಪಿಲ್ಲ.॥8॥
ಮೂಲಮ್ - 9
ಸತ್ಯಃ ಸತ್ಯಾಭಿಸಂಧಶ್ಚ ನಿತ್ಯಂ ಸತ್ಯಪರಾಕ್ರಮಃ ।
ಪರಲೋಕಭಯಾದ್ಭೀತೋ ನಿರ್ಭಯೋಽಸ್ತು ಪಿತಾ ಮಮ ॥
ಅನುವಾದ
ತಂದೆಯವರು ಸದಾ ಸತ್ಯವಾದಿಗಳು ಮತ್ತು ಸತ್ಯ ಪರಾಕ್ರಮಿಗಳಾಗಿದ್ದಾರೆ. ಅವರು ಪರಲೋಕದ ಭಯದಿಂದ ಹೆದರುತ್ತಾರೆ; ಅದಕ್ಕಾಗಿ ನನ್ನ ತಂದೆಯ ಪಾರಲೌಕಿಕ ಭಯವು ದೂರಾಗುವಂತಹ ಕಾರ್ಯವನ್ನೇ ನಾನು ಮಾಡಬೇಕು.॥9॥
ಮೂಲಮ್ - 10
ತಸ್ಯಾಪಿ ಹಿ ಭವೇದಸ್ಮಿನ್ ಕರ್ಮಣ್ಯ ಪ್ರತಿಸಂಹೃತೇ ।
ಸತ್ಯಂ ನೇತಿ ಮನಸ್ತಾಪಸ್ತಸ್ಯ ತಾಪಸ್ತಪೇಚ್ಚ ಮಾಮ್ ॥
ಅನುವಾದ
ಈ ಅಭಿಷೇಕ ಸಂಬಂಧೀ ಕಾರ್ಯವು ತಡೆಯದಿದ್ದರೆ ನನ್ನ ಮಾತು ನಿಜವಾಗಲಿಲ್ಲವಲ್ಲ ಎಂಬ ಸಂತಾಪ ಮನಸ್ಸಿಗೆ ಉಂಟಾಗಿ ಆ ಮನಸ್ತಾಪವು ನನ್ನನ್ನು ಸದಾ ಸಂತಪ್ತಮಾಡುತ್ತಾ ಇದ್ದೀತು.॥10॥
ಮೂಲಮ್ - 11
ಅಭಿಷೇಕವಿಧಾನಂ ತು ತಸ್ಮಾತ್ ಸಂಹೃತ್ಯ ಲಕ್ಷ್ಮಣ ।
ಅನ್ವಗೇವಾಹಮಿಚ್ಛಾಮಿ ವನಂ ಗಂತುಮಿತಃ ಪುನಃ ॥
ಅನುವಾದ
ಲಕ್ಷ್ಮಣ! ಇವೆಲ್ಲ ಕಾರಣಗಳಿಂದ ನಾನು ನನ್ನ ಪಟ್ಟಾಭಿಷೇಕದ ಕಾರ್ಯವನ್ನು ತಡೆದು, ಶೀಘ್ರವಾಗಿಯೇ ಈ ನಗರದಿಂದ ಹೊರಟು ವನಕ್ಕೆ ಹೋಗಲು ಬಯಸುತ್ತಿರುವೆನು.॥11॥
ಮೂಲಮ್ - 12
ಮಮ ಪ್ರವ್ರಾಜನಾದದ್ಯ ಕೃತಕೃತ್ಯಾ ನೃಪಾತ್ಮಜಾ ।
ಸುತಂ ಭರತಮವ್ಯಗ್ರಮಭಿಷೇಚಯಿತಾಂ ತತಃ ॥
ಅನುವಾದ
ಇಂದು ನಾನು ಹೊರಟು ಹೋದದ್ದರಿಂದ ಕೃತಕೃತ್ಯಳಾದ ಕೈಕೆಯಿಯು ತನ್ನ ಪುತ್ರ ಭರತನಿಗೆ ನಿರ್ಭಯ ಹಾಗೂ ನಿಶ್ಚಿಂತಳಾಗಿ ಪಟ್ಟಾಭಿಷೇಕ ಮಾಡಿಸಲಿ.॥12॥
ಮೂಲಮ್ - 13
ಮಯಿ ಚೀರಾಜಿನಧರೇ ಜಟಾಮಂಡಲಧಾರಿಣಿ ।
ಗತೇಽರಣ್ಯಂ ಚ ಕೈಕೇಯ್ಯಾ ಭವಿಷ್ಯತಿ ಮನಃ ಸುಖಮ್ ॥
ಅನುವಾದ
ನಾನು ವಲ್ಕಲ-ಮೃಗಚರ್ಮ ಧರಿಸಿ, ತಲೆಯಲ್ಲಿ ಜಟಾಜೂಟ ಕಟ್ಟಿ ವನವಾಸಕ್ಕೆ ಹೋದಾಗಲೇ ಕೈಕೆಯಿಯ ಮನಸ್ಸಿಗೆ ಸುಖ ಪ್ರಾಪ್ತವಾದೀತು.॥13॥
ಮೂಲಮ್ - 14
ಬುದ್ಧಿಃ ಪ್ರಣೀತಾ ಯೇನೇಯಂ ಮನಶ್ಚ ಸುಸಮಾಹಿತಮ್ ।
ತಂ ತು ನಾರ್ಹಾ ಸಂಕ್ಲೇಷ್ಟುಂ ಪ್ರವ್ರಜಿಷ್ಯಾಮಿ ಮಾ ಚಿರಮ್ ॥
ಅನುವಾದ
ಯಾವ ವಿಧಾತನು ಕೈಕೆಯಿಗೆ ಇಂತಹ ಬುದ್ಧಿಕೊಟ್ಟಿರುವುದೋ ಹಾಗೂ ಯಾರ ಪ್ರೇರಣೆಯಿಂದ ಆಕೆಯ ಮನಸ್ಸು ನನ್ನನ್ನು ಕಾಡಿಗೆ ಕಳಿಸುವುದರಲ್ಲಿ ದೃಢವಾಗಿದೆಯೋ, ಆಕೆಯನ್ನು ವಿಫಲ ಮನೋರಥಳನ್ನಾಗಿ ಮಾಡಿ ಕಷ್ಟಕೊಡುವುದು ನನಗೆ ಉಚಿತವಲ್ಲ.॥14॥
ಮೂಲಮ್ - 15
ಕೃತಾಂತ ಏವ ಸೌಮಿತ್ರೇ ದ್ರಷ್ಟವ್ಯೋ ಮತ್ಪ್ರವಾಸನೇ ।
ರಾಜ್ಯಸ್ಯ ಚ ವಿತೀರ್ಣಸ್ಯ ಪುನರೇವ ನಿವರ್ತನೇ ॥
ಅನುವಾದ
ಸುಮಿತ್ರಾಕುಮಾರ! ನನ್ನ ಈ ವನವಾಸದಲ್ಲಿ ಹಾಗೂ ತಂದೆಯವರು ಕೊಟ್ಟಿರುವ ರಾಜ್ಯವು ಕೈತಪ್ಪಿ ಹೋಗುವುದರಲ್ಲಿ ದೈವವೇ ಕಾರಣವೆಂದು ತಿಳಿಯಬೇಕು.॥15॥
ಮೂಲಮ್ - 16
ಕೈಕೇಯ್ಯಾಃ ಪ್ರತಿಪತ್ತಿರ್ಹಿ ಕಥಂ ಸ್ಯಾನ್ಮಮ ವೇದನೇ ।
ಯದಿ ತಸ್ಯಾ ನ ಭಾವೋಽಯಂ ಕೃತಾಂತವಿಹಿತೋ ಭವೇತ್ ॥
ಅನುವಾದ
ನಾನು ತಿಳಿದಂತೆ ಕೈಕೆಯಮ್ಮನ ಈ ವಿಪರೀತ ಮನೋಭಾವವು ದೈವದ ವಿಧಾನವೇ ಆಗಿದೆ. ಹೀಗಲ್ಲದಿದ್ದರೆ ಆಕೆಯು ನನ್ನನ್ನು ಕಾಡಿಗೆ ಕಳಿಸಿ ದುಃಖ ಕೊಡುವ ವಿಚಾರ ಏಕೆ ಮಾಡುತ್ತಿದ್ದಳು.॥16॥
ಮೂಲಮ್ - 17
ಜಾನಾಸಿ ಹಿ ಯಥಾ ಸೌಮ್ಯ ನ ಮಾತೃಷು ಮಮಾಂತರಮ್ ।
ಭೂತಪೂರ್ವಂ ವಿಶೇಷೋ ವಾ ತಸ್ಯಾ ಮಯಿ ಸುತೇಽಪಿ ವಾ ॥
ಅನುವಾದ
ಸೌಮ್ಯ! ನನ್ನ ಮನಸ್ಸಿನಲ್ಲಿ ಮೊದಲಿನಿಂದಲೂ ತಾಯಂದಿರ ಕುರಿತು ಭೇದಭಾವ ಇರಲಿಲ್ಲ ಹಾಗೂ ಕೈಕೆಯಿಯೂ ಕೂಡ ನನ್ನಲ್ಲಿ ಅಥವಾ ತನ್ನ ಪುತ್ರನಲ್ಲಿ ಯಾವುದೇ ಅಂತರ ತಿಳಿಯುತ್ತಿರಲಿಲ್ಲ.॥17॥
ಮೂಲಮ್ - 18
ಸೋಽಭಿಷೇಕನಿವೃತ್ತ್ಯರ್ಥೈಃ ಪ್ರವಾಸಾರ್ಥೈಶ್ಚ ದುರ್ವಚೈಃ ।
ಉಗ್ರೈರ್ವಾಕ್ಯೈರಹಂ ತಸ್ಯಾ ನಾನ್ಯದ್ದೈವಾತ್ ಸಮರ್ಥಯೇ ॥
ಅನುವಾದ
ನನ್ನ ಪಟ್ಟಾಭಿಷೇಕವನ್ನು ತಡೆಯಲು ಹಾಗೂ ನನ್ನನ್ನು ಕಾಡಿಗೆ ಕಳಿಸಲು ಮಹಾರಾಜರನ್ನು ಪ್ರೇರಿತಗೊಳಿಸುವ ನಿಮಿತ್ತ ಪ್ರಯೋಗಿಸಿದ ಕಟುವಚನಗಳು ಸಾಧಾರಣ ಮನುಷ್ಯನ ಬಾಯಿಯಿಂದ ಬರುವುದು ಕಠಿಣವಾಗಿದೆ. ಆಕೆಯ ಇಂತಹ ಚೇಷ್ಟೆಯಲ್ಲಿ ನಾನು ದೈವವಲ್ಲದೆ ಬೇರೆ ಯಾವುದೇ ಕಾರಣವನ್ನು ಸಮರ್ಥಿಸುವುದಿಲ್ಲ.॥18॥
ಮೂಲಮ್ - 19
ಕಥಂ ಪ್ರಕೃತಿಸಂಪನ್ನಾ ರಾಜಪುತ್ರೀ ತಥಾಗುಣಾ ।
ಬ್ರೂಹಾತ್ ಸಾ ಪ್ರಾಕೃತೇವ ಸ್ತ್ರೀಮತ್ಪೀಡ್ಯಾಂ ಭರ್ತೃಸನ್ನಿಧೌ ॥
ಅನುವಾದ
ಹೀಗಲ್ಲದಿದ್ದರೆ ಅಂತಹ ಉತ್ತಮ ಸ್ವಭಾವದ, ಶ್ರೇಷ್ಠಗುಣ ಸಂಪನ್ನ ರಾಜಕುಮಾರಿ ಕೈಕೆಯಿಯು ಓರ್ವ ಸಾಧಾರಣ ಸ್ತ್ರೀಯಂತೆ ತನ್ನ ಪತಿಯ ಬಳಿ ನನಗೆ ಅನಿಷ್ಟಕರ ಮಾತನ್ನು ಹೇಗೆ ಆಡುತ್ತಿದ್ದಳು.॥19॥
ಮೂಲಮ್ - 20
ಯದಚಿಂತ್ಯಂ ತು ತದ್ದೈವಂ ಭೂತೇಷ್ವಪಿ ನ ಹನ್ಯತೇ ।
ವ್ಯಕ್ತಂ ಮಯಿ ಚ ತಸ್ಯಾಂ ಚ ಪತಿತೋ ಹಿ ವಿಪರ್ಯಯಃ ॥
ಅನುವಾದ
ನಮ್ಮ ಚಿಂತನೆಗೆ ಯಾವಾಗ ಏನೂ ನಿಲುಕುವುದಿಲ್ಲವೋ ಅದೇ ದೈವವಿಧಾನವಾಗಿದೆ. ಪ್ರಾಣಿಗಳ ಅಧಿಷ್ಠಾತೃಗಳಾದ ಬ್ರಹ್ಮಾದಿಗಳಲ್ಲಿಯೂ ವಿಧಿಯು ಪರಾಭವ ಹೊಂದುವುದಿಲ್ಲ. ನನಗೆ ಪ್ರಾಪ್ತವಾದ ವನವಾಸ ಮತ್ತು ಕೈಕೆಯಿಯ ಬುದ್ಧಿಯಲ್ಲಿ ಉಂಟಾದ ವಿಪರ್ಯಾಸ - ಇವುಗಳಿಂದಲೇ ವಿಧಿಯ ಪ್ರಭಾವ ವ್ಯಕ್ತವಾಗುತ್ತದೆ.॥20॥
ಮೂಲಮ್ - 21
ಕಶ್ಚ ದೈವೇನ ಸೌಮಿತ್ರೇ ಯೋದ್ಧುಮುತ್ಸಹತೇ ಪುಮಾನ್ ।
ಯಸ್ಯನು ಗ್ರಹಣಂ ಕಿಂಚಿತ್ಕರ್ಮಣೋಽನ್ಯನ್ನ ದೃಶ್ಯತೇ ॥
ಅನುವಾದ
ಸುಮಿತ್ರಾನಂದನ! ಕರ್ಮಗಳ ಸುಖ-ದುಃಖರೂಪೀ ಫಲವು ಪ್ರಾಪ್ತವಾದಾಗಲೇ ಅದರ ಜ್ಞಾನ ಉಂಟಾಗುತ್ತದೆ. ಕರ್ಮಫಲ ಬಿಟ್ಟು ಬೇರೆ ಎಲ್ಲಿಯೂ ಇದರ ಸುಳಿವು ಸಿಗುವುದಿಲ್ಲ. ಅಂತಹ ದೈವದೊಂದಿಗೆ ಯಾರು ತಾನೇ ಕಾದಾಡಬಲ್ಲನು.॥21॥
ಮೂಲಮ್ - 22
ಸುಖದುಃಖೇ ಭಯಕ್ರೋಧೌ ಲಾಭಾಲಾಭೌ ಭವಾಭವೌ ।
ಯಸ್ಯ ಕಿಂಚಿತ್ತಥಾಭೂತಂ ನನು ದೈವಸ್ಯ ಕರ್ಮ ತತ್ ॥
ಅನುವಾದ
ಸುಖ-ದುಃಖ, ಭಯ-ಕ್ರೋಧ, (ಕ್ಷೋಭ) ಲಾಭ-ಹಾನಿ, ಉತ್ಪತ್ತಿ-ವಿನಾಶ ಹಾಗೂ ಇಂತಹುದೇ ಬೇರೆ ಎಷ್ಟೋ ಪರಿಣಾಮಗಳು ಪ್ರಾಪ್ತವಾಗುತ್ತವೆ. ಅದರ ಯಾವುದೇ ಕಾರಣ ಅರಿವಿಗೆ ಬರುವುದಿಲ್ಲ, ಅದೆಲ್ಲ ದೈವದ್ದೇ ಕಾರ್ಯವಾಗಿದೆ.॥22॥
ಮೂಲಮ್ - 23
ಋಷಯೋಽಪ್ಯುಗ್ರತಪಸೋ ದೈವೇನಾಭಿಪ್ರಚೋದಿತಾಃ ।
ಉತ್ಸೃಜ್ಯ ನಿಯಮಾಂಸ್ತೀವ್ರಾನ್ ಭ್ರಶ್ಯಂತೇ ಕಾಮಮನ್ಯುಭಿಃ ॥
ಅನುವಾದ
ಉಗ್ರ ತಪಸ್ವೀ ಋಷಿಗಳೂ ಕೂಡ ದೈವದಿಂದ ಪ್ರೇರಣೆಗೊಂಡು ತಮ್ಮ ತೀವ್ರ ನಿಯಮಗಳನ್ನು ಬಿಟ್ಟುಬಿಡುತ್ತಾರೆ. ಕಾಮ-ಕ್ರೋಧದಿಂದ ವಿವಶರಾಗಿ ಮೇರೆ ಮೀರಿ ಭ್ರಷ್ಟರಾಗುತ್ತಾರೆ.॥23॥
ಮೂಲಮ್ - 24
ಅಸಂಕಲ್ಪಿತಮೇವೇಹ ಯದಕಸ್ಮಾತ್ ಪ್ರವರ್ತತೇ ।
ನಿವರ್ತ್ಯಾರಬ್ಧಮಾರಂಭೈರ್ನನು ದೈವಸ್ಯ ಕರ್ಮ ತತ್ ॥
ಅನುವಾದ
ಯಾವುದನ್ನು ವಿಚಾರ ಮಾಡದೆಯೂ, ಯೋಚಿಸದೆಯೂ ಒಮ್ಮಿಂದೊಮ್ಮೆಲೇ ಯಾವುದೋ ವಿಪತ್ತು ನಮ್ಮ ಮೇಲೆ ಎರಗುತ್ತದೆ. ಹಾಗೆಯೇ ನಾವು ಆರಂಭಿಸಿದ ಕಾರ್ಯ ಮಧ್ಯದಲ್ಲಿಯೇ ನಿಂತುಹೋಗಬಹುದು ಇದು ದೈವದ ಕಾರ್ಯವಲ್ಲದೆ ಮತ್ತೇನು.॥24॥
ಮೂಲಮ್ - 25
ಏತಯಾ ತತ್ತ್ವಯಾ ಬುದ್ಧ್ಯಾ ಸಂಸ್ತಭ್ಯಾತ್ಮಾನಮಾತ್ಮನಾ ।
ವ್ಯಾಹತೇಽಪ್ಯಭಿಷೇಕೇ ಮೇ ಪರಿತಾಪೋ ನ ವಿದ್ಯತೇ ॥
ಅನುವಾದ
ಈ ತಾತ್ತ್ವಿಕ ಬುದ್ಧಿಯ ಮೂಲಕ ಸ್ವತಃ ಮನಸ್ಸನ್ನು ಸ್ಥಿರಗೊಳಿಸಿದ ಕಾರಣ ನನಗೆ ಅಭಿಷೇಕದಲ್ಲಿ ವಿಘ್ನ ಉಂಟಾದರೂ ದುಃಖ, ಸಂತಾಪ ಆಗುತ್ತಿಲ್ಲ.॥25॥
ಮೂಲಮ್ - 26
ತಸ್ಮಾದಪರಿತಾಪಃ ಸಂಸ್ತ್ವಮಪ್ಯನುವಿಧಾಯ ಮಾಮ್ ।
ಪ್ರತಿಸಂಹಾರಯ ಕ್ಷಿಪ್ರಮಾಭಿಷೇಚನಿಕೀಂ ಕ್ರಿಯಾಮ್ ॥
ಅನುವಾದ
ಈ ಪ್ರಕಾರವೇ ನೀನೂ ಕೂಡ ನನ್ನ ವಿಚಾರವನ್ನು ಅನುಸರಿಸುತ್ತಾ ಸಂತಾಪಶೂನ್ಯನಾಗಿ ಪಟ್ಟಾಭಿಷೇಕದ ಈ ಆಯೋಜನವನ್ನು ಬೇಗನೇ ನಿಲ್ಲಿಸಿಬಿಡು.॥26॥
ಮೂಲಮ್ - 27
ಏಭೀರೇವ ಘಟೈಃ ಸರ್ವೈರಭಿಷೇಚನಸಂಭೃತೈಃ ।
ಮಮ ಲಕ್ಷ್ಮಣ ತಾಪಸ್ಯೇ ವ್ರತಸ್ನಾನಂ ಭವಿಷ್ಯತಿ ॥
ಅನುವಾದ
ಲಕ್ಷ್ಮಣ! ಪಟ್ಟಾಭಿಷೇಕಕ್ಕಾಗಿ ಸಿದ್ಧಗೊಳಿಸಿಟ್ಟಿರುವ ಈ ಎಲ್ಲ ಕಲಶಗಳಿಂದ ನನ್ನ ತಾಪಸ ವ್ರತದ ಸಂಕಲ್ಪಕ್ಕಾಗಿ ಆಗಬೇಕಾದ ಸ್ನಾನ ನಡೆಯುವುದು.॥27॥
ಮೂಲಮ್ - 28
ಅಥವಾ ಕಿಂ ಮಯೈತೇನ ರಾಜ್ಯದ್ರವ್ಯಮಯೇನ ತು ।
ಉದ್ಧೃತಂ ಮೇ ಸ್ವಯಂ ತೋಯಂ ವ್ರತಾದೇಶಂ ಕರಿಷ್ಯತಿ ॥
ಅನುವಾದ
ಅಥವಾ ರಾಜ್ಯಾಭಿಷೇಕ ಸಂಬಂಧೀ ಮಂಗಲದ್ರವ್ಯಮಯ ಈ ಕಲಶಜಲದ ಆವಶ್ಯಕತೆ ನನಗೇನಿದೆ? ಸ್ವತಃ ನಾನು ಕೈಯಿಂದಲೇ ಸೇದಿದ ನೀರೇ ನನ್ನ ವ್ರತಾದೇಶಕ್ಕೆ ಸಾಧನವಾಗುವುದು.॥28॥
ಮೂಲಮ್ - 29
ಮಾ ಚ ಲಕ್ಷ್ಮಣ ಸಂತಾಪಂ ಕಾರ್ಷೀರ್ಲಂಕ್ಷ್ಮ್ಯಾ ವಿಪರ್ಯಯೇ ।
ರಾಜ್ಯಂ ವಾ ವನವಾಸೋವಾ ವನವಾಸೋ ಮಹೋದಯಃ ॥
ಅನುವಾದ
ಲಕ್ಷ್ಮಣ! ರಾಜ್ಯಲಕ್ಷ್ಮಿಯು ಸಿಕ್ಕುವ ಬದಲು, ವನಲಕ್ಷ್ಮಿಯು ಸಿಕ್ಕಿ ದುದಕ್ಕಾಗಿ ಸಂತಾಪಪಡಬೇಡ. ರಾಜ್ಯಲಕ್ಷ್ಮಿಯಾದರೇನು? ನನ್ನ ಅಭಿಪ್ರಾಯದಲ್ಲಿ ಇಂದು ನನಗೆ ವನವಾಸವೇ ಅಭ್ಯುದಯಕಾರಕವಾಗಿದೆ.॥29॥
ಮೂಲಮ್ - 30
ನ ಲಕ್ಷ್ಮಣಾಸ್ಮಿನ್ ಮಮ ರಾಜ್ಯವಿಘ್ನೋ
ಮಾತಾ ಯವೀಯಸ್ಯಭಿಶಂಕಿತವ್ಯಾ ।
ದೈವಾಭಿಪನ್ನಾ ನ ಪಿತಾ ಕಥಂಚಿ-
ಜ್ಞಾನಾಸಿ ದೈವಂ ಚ ತಥಾ ಪ್ರಭಾವಮ್ ॥
ಅನುವಾದ
ಲಕ್ಷ್ಮಣಾ! ನನ್ನ ರಾಜ್ಯಾಭಿಷೇಕದಲ್ಲಿ ಉಂಟಾದ ವಿಘ್ನಕ್ಕೆ ಚಿಕ್ಕಮ್ಮ ಕಾರಣಳೆಂದು ಶಂಕಿಸಬೇಡ; ಏಕೆಂದರೆ ದೈವದಿಂದ ಪ್ರಚೋದಿತಳಾಗಿ ಆಕೆಯು ಹೀಗೆ ಮಾಡುತ್ತಿದ್ದಾಳೆ. ನಮ್ಮ ತಂದೆಯೂ ಇದಕ್ಕೆ ಕಾರಣರಲ್ಲ. ಇವರಿಬ್ಬರೂ ದೈವದಿಂದ ಪ್ರೇರಿತರಾಗಿದ್ದಾರೆ. ವಿಧಿವಿಲಾಸವು ಎಷ್ಟೊಂದು ಪ್ರಭಾವಯುತವಾದುದೆಂಬ ವಿಚಾರ ನಿನಗೆ ತಿಳಿಯದುದೇನಲ್ಲ ಇದು ಅದೇ ಕಾರಣ.॥30॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತೆರಡನೆಯ ಸರ್ಗ ಪೂರ್ಣವಾಯಿತು.॥22॥