०२० कौसल्याविलापः

वाचनम्
ಭಾಗಸೂಚನಾ

ದಶರಥರಾಜನ ಇತರ ಪತ್ನಿಯರ ವಿಲಾಪ, ಶ್ರೀರಾಮನು ಕೌಸಲ್ಯೆಯ ಅಂತಃಪುರಕ್ಕೆ ಹೋಗಿ ವನವಾಸದ ವಿಷಯವನ್ನು ತಿಳಿಸುವುದು, ಕೌಸಲ್ಯೆಯ ಮೂರ್ಛೆ, ಶ್ರೀರಾಮನ ಶೈತ್ಯೋಪಚಾರದಿಂದ ಮೂರ್ಛೆತಳೆದು, ಕೌಸಲ್ಯೆಯ ವಿಲಾಪ

ಮೂಲಮ್ - 1

ತಸ್ಮಿಂಸ್ತು ಪುರುಷವ್ಯಾಘ್ರೇ ನಿಷ್ಕ್ರಾಮತಿ ಕೃತಾಂಜಲೌ ।
ಆರ್ತಶಬ್ದೋ ಮಹಾನ್ ಜಜ್ಞೇ ಸ್ತ್ರೀಣಾಮಂತಃಪುರೇ ತದಾ ॥

ಅನುವಾದ

ಪುರುಷಸಿಂಹ ಶ್ರೀರಾಮನು ಕೈಮುಗಿದುಕೊಂಡು ಅಂತಃಪುರದಿಂದ ಹೊರಗೆ ಬರುತ್ತಲೇ, ಅಂತಃಪುರಗಳಲ್ಲಿದ್ದ ರಾಜ ಮಹಿಳೆಯರ ದೊಡ್ಡದಾದ ಆರ್ತನಾದವು ಕೇಳಿ ಬಂತು.॥1॥

ಮೂಲಮ್ - 2

ಕೃತ್ಯೇಷ್ವಚೋದಿತಃ ಪಿತ್ರಾ ಸರ್ವಸ್ಯಾಂತಃಪುರಸ್ಯ ಚ ।
ಗತಿಶ್ಚ ಶರಣಂಚಾಸೀತ್ ಸ ರಾಮೋಽದ್ಯ ಪ್ರವತ್ಸ್ಯತಿ ॥

ಅನುವಾದ

ಅಯ್ಯೋ! ನಮ್ಮ ರಾಮನು ಅಂತಃಪುರದಲ್ಲಿರುವ ನಮಗೆ ಆಗಬೇಕಾಗಿದ್ದ ಕಾರ್ಯಗಳೆಲ್ಲವನ್ನು ತಂದೆಯು ಹೇಳಿರದಿದ್ದರೂ ಆಯಾ ಕಾಲಕ್ಕೆ ಮಾಡಿಕೊಡುತ್ತಿದ್ದನು. ಅವನೇ ನಮಗೆ ಗತಿಯೂ, ರಕ್ಷಕನೂ ಆಗಿದ್ದಾನೆ. ಅಂತಹ ಶ್ರೀರಾಮನು ಇಂದು ವನಕ್ಕೆ ಹೊರಟುಹೋಗುವನಲ್ಲ.॥2॥

ಮೂಲಮ್ - 3

ಕೌಸಲ್ಯಾಯಾಂ ಯಥಾ ಯುಕ್ತೋ ಜನನ್ಯಾಂ ವರ್ತತೇ ಸದಾ ।
ತಥೈವ ವರ್ತತೇಽಸ್ಮಾಸು ಜನ್ಮಪ್ರಭೃತಿ ರಾಘವಃ ॥

ಅನುವಾದ

ಆ ರಘುನಾಥನು ಹುಟ್ಟಿದಾಗಿನಿಂದಾಗಿ ತನ್ನ ತಾಯಿ ಕೌಸಲ್ಯೆಯ ಹಿತದಲ್ಲಿ ಆಸಕ್ತನಾಗಿರುವಂತೆಯೇ ನಮ್ಮ ಹಿತದಲ್ಲಿಯೂ ಆಸಕ್ತನಾಗಿರುತ್ತಿದ್ದನು.॥3॥

ಮೂಲಮ್ - 4

ನ ಕ್ರುಧ್ಯತ್ಯಭಿಶಪ್ತೋಽಪಿ ಕ್ರೋಧನೀಯಾನಿ ವರ್ಜಯನ್ ।
ಕ್ರುದ್ಧಾನ್ ಪ್ರಸಾದಯನ್ ಸರ್ವಾನ್ ಸ ಇತೋಽದ್ಯ ಪ್ರವತ್ಸ್ಯತಿ ॥

ಅನುವಾದ

ಕಠೋರವಾಗಿ ನಾವು ಮಾತನಾಡಿದರೂ ಅವನು ಸಿಟ್ಟಾಗುತ್ತಿರಲಿಲ್ಲ. ಬೇರೆಯವರಿಗೆ ಸಿಟ್ಟು ಬರುವಂತಹ ಯಾವ ಮಾತನ್ನೂ ಆಡುತ್ತಿರಲಿಲ್ಲ ಹಾಗೂ ಮುನಿಸಿಕೊಂಡವರನ್ನು ಸಂತೈಸಿ ಪ್ರಸನ್ನಗೊಳಿಸುತ್ತಿದ್ದನು. ಅಂತಹ ಶ್ರೀರಾಮನು ಇಂದು ವನವಾಸಕ್ಕಾಗಿ ಹೋಗುತ್ತಿದ್ದಾನೆ. ಮುಂದೆ ನಮ್ಮ ಗತಿಯೇನು.॥4॥

ಮೂಲಮ್ - 5

ಅಬುದ್ಧಿರ್ಬತ ನೋ ರಾಜಾ ಜೀವಲೋಕಂ ಚರತ್ಯಯಮ್ ।
ಯೋ ಗತಿಂ ಸರ್ವಭೂತಾನಾಂ ಪರಿತ್ಯಜತಿ ರಾಘವಮ್ ॥

ಅನುವಾದ

ಅಯ್ಯೋ! ನಮ್ಮ ಮಹಾರಾಜರ ಬುದ್ಧಿ ನಿಶ್ಚಯವಾಗಿ ಕೆಟ್ಟುಹೋಗಿದೆ. ಇವರು ಸಮಸ್ತ ಜೀವ-ಜಗತ್ತನ್ನು ವಿನಾಶ ಮಾಡಲು ಹೊರಟಿರುವರು. ಅದರಿಂದಲೇ ಸಮಸ್ತ ಪ್ರಾಣಿಗಳ ಜೀವನಾಧಾರನಾದ ಶ್ರೀರಾಮನನ್ನು ತ್ಯಜಿಸುತ್ತಿದ್ದಾರೆ.॥5॥

ಮೂಲಮ್ - 6

ಇತಿ ಸರ್ವಾ ಮಹಿಷ್ಯಸ್ತಾ ವಿವತ್ಸಾ ಇವ ಧೇನವಃ ।
ಪತಿಮಾಚುಕ್ರುಶುಶ್ಚಾಪಿ ಸಸ್ವನಂ ಚಾಪಿ ಚಕ್ರುಶುಃ ॥

ಅನುವಾದ

ಈ ಪ್ರಕಾರ ಎಲ್ಲ ರಾಣಿಯರು ರಾಮನ ಗುಣಗಳನ್ನು ಹೊಗಳುತ್ತಾ, ಪತಿಯನ್ನು ನಿಂದಿಸುತ್ತಾ ಕರುವನ್ನು ಅಗಲಿದ ಗೋವು ಗೋಳಾಡುವಂತೆ ಗಟ್ಟಿಯಾಗಿ ಅಳತೊಡಗಿದರು.॥6॥

ಮೂಲಮ್ - 7

ಸ ಹಿ ಚಾಂತಃಪುರೇ ಘೋರಮಾರ್ತಶಬ್ದಂ ಮಹೀಪತಿಃ ।
ಪುತ್ರಶೋಕಾಭಿಸಂತಪ್ತಃ ಶ್ರುತ್ವಾ ವ್ಯಾಲೀಯತಾಸನೇ ॥

ಅನುವಾದ

ಅಂತಃಪುರದ ಆ ಭಯಂಕರ ಆರ್ತನಾದವನ್ನು ಕೇಳಿ ದಶರಥನು ಪುತ್ರಶೋಕದಿಂದ ಸಂತಪ್ತನಾಗಿ ಲಜ್ಜೆಯಿಂದ ಮುಖವನ್ನು ಮುಚ್ಚಿಕೊಂಡನು.॥7॥

ಮೂಲಮ್ - 8

ರಾಮಸ್ತು ಭೃಶಮಾಯಸ್ತೋ ನಿಃಶ್ವಸನ್ನಿವ ಕುಂಜರಃ ।
ಜಗಾಮ ಸಹಿತೋ ಭ್ರಾತ್ರಾ ಮಾತುರಂತಃಪುರಂ ವಶೀ ॥

ಅನುವಾದ

ಇತ್ತ ಜಿತೇಂದ್ರಿಯನಾದ ಶ್ರೀರಾಮಚಂದ್ರನು ಸ್ವಜನರ ದುಃಖದಿಂದ ದುಃಖಿತನಾಗಿ ಆನೆಯಂತೆ ದೀರ್ಘವಾಗಿ ನಿಟ್ಟಿಸುರುಬಿಡುತ್ತಾ ಲಕ್ಷ್ಮಣನೊಂದಿಗೆ ಮಾತೆಯ ಅಂತಃಪುರವನ್ನು ಹೊಕ್ಕನು.॥8॥

ಮೂಲಮ್ - 9

ಸೋಽಪಶ್ಯತ್ ಪುರುಷಂ ತತ್ರ ವೃದ್ಧಂ ಪರಮಪೂಜಿತಮ್ ।
ಉಪವಿಷ್ಟಂಗೃಹದ್ವಾರಿ ತಿಷ್ಠತಶ್ಚಾಪರಾನ್ ಬಹೂನ್ ॥

ಅನುವಾದ

ಕೌಸಲ್ಯಾದೇವಿಯ ಅಂತಃಪುರದ ಬಾಗಿಲಲ್ಲಿ ವೃದ್ಧನಾದ ಪರಮ ಪೂಜ್ಯ ದ್ವಾರಾಧ್ಯಕ್ಷನು ಕುಳಿತಿರುವುದನ್ನು ಹಾಗೂ ಇತರ ಅನೇಕ ದ್ವಾರಪಾಲಕರು ಇರುವುದನ್ನು ಶ್ರೀರಾಮನು ನೋಡಿದನು.॥9॥

ಮೂಲಮ್ - 10

ದೃಷ್ಟೈವ ತು ತದಾ ರಾಮಂ ತೇ ಸರ್ವೇ ಸಮುಪಸ್ಥಿತಾಃ ।
ಜಯೇನ ಜಯತಾಂ ಶ್ರೇಷ್ಠಂ ವರ್ಧಯಂತಿಸ್ಮ ರಾಘವಮ್ ॥

ಅನುವಾದ

ಅವರೆಲ್ಲರೂ ವಿಜಯೀ ವೀರರಲ್ಲಿ ಶ್ರೇಷ್ಠನಾದ ರಘುನಂದನ ಶ್ರೀರಾಮನನ್ನು ನೋಡುತ್ತಲೇ ಅವನ ಜಯ-ಜಯಕಾರ ಮಾಡುತ್ತಾ, ಸೇವೆಗಾಗಿ ಸಿದ್ಧರಾಗಿ ಅಭಿನಂದಿಸಿದರು.॥10॥

ಮೂಲಮ್ - 11

ಪ್ರವಿಶ್ಯ ಪ್ರಥಮಾಂ ಕಕ್ಷ್ಯಾಂ ದ್ವಿತೀಯಾಯಾಂ ದದರ್ಶ ಸಃ ।
ಬ್ರಾಹ್ಮಣಾನ್ ವೇದಸಂಪನ್ನಾನ್ ವೃದ್ಧಾನ್ ರಾಜ್ಞಾಭಿಸತ್ಕೃತಾನ್ ॥

ಅನುವಾದ

ಮೊದಲನೆಯ ಆವರಣವನ್ನು ದಾಟಿ, ಎರಡನೆಯ ಆವರಣವನ್ನು ಪ್ರವೇಶಿಸಿದಾಗ ಅಲ್ಲಿ ರಾಜನಿಂದ ಸಮ್ಮಾನಿತರಾದ ಅನೇಕ ವೇದಜ್ಞ ಬ್ರಾಹ್ಮಣರನ್ನು ಶ್ರೀರಾಮನು ನೋಡಿದನು.॥11॥

ಮೂಲಮ್ - 12

ಪ್ರಣಮ್ಯ ರಾಮಸ್ತಾನ್ ವೃದ್ಧಾಂ ಸ್ತೃತೃತೀಯಾಯಾಂ ದದರ್ಶ ಸಃ ।
ಸ್ತ್ರಿಯೋ ಬಾಲಾಶ್ಚ ವೃದ್ಧಾಶ್ಚ ದ್ವಾರರಕ್ಷಣತತ್ಪರಾಃ ॥

ಅನುವಾದ

ಆ ವೃದ್ಧ ಬ್ರಾಹ್ಮಣರನ್ನು ವಂದಿಸಿ ಶ್ರೀರಾಮಚಂದ್ರನು ಮೂರನೆಯ ಆವರಣವನ್ನು ತಲುಪಿದಾಗ ಅಲ್ಲಿ ದ್ವಾರ ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದ ಅನೇಕ ತರುಣಿಯರನ್ನು ಮತ್ತು ವೃದ್ಧ ಸ್ತ್ರೀಯರನ್ನು ನೋಡಿದನು.॥12॥

ಮೂಲಮ್ - 13

ವರ್ಧಯಿತ್ವಾ ಪ್ರಹೃಷ್ಟಾಸ್ತಾಃ ಪ್ರವಿಶ್ಯ ಚ ಗೃಹಂ ಸ್ತ್ರಿಯಃ ।
ನ್ಯವೇದಯಂತ ತ್ವರಿತಂ ರಾಮಮಾತುಃ ಪ್ರಿಯಂ ತದಾ ॥

ಅನುವಾದ

ಶ್ರೀರಾಮನನ್ನು ನೋಡಿ ಆ ಸ್ತ್ರೀಯರಿಗೆ ಬಹಳ ಸಂತೋಷವಾಯಿತು. ಅವರು ರಾಮನನ್ನು ಅಭಿನಂದಿಸುತ್ತಾ ಕೂಡಲೇ ಅಂತಃಪುರದೊಳಗೆ ಹೋಗಿ ಶ್ರೀರಾಮನು ಬಂದಿರುವ ಪ್ರಿಯ ಸಮಾಚಾರವನ್ನು ಕೌಸಲ್ಯೆಗೆ ಅರುಹಿದರು.॥13॥

ಮೂಲಮ್ - 14

ಕೌಸಲ್ಯಾಪಿ ತದಾ ದೇವೀ ರಾತ್ರಿಂ ಸ್ಥಿತ್ವಾ ಸಮಾಹಿತಾ ।
ಪ್ರಭಾತೇ ಚಾಕರೋತ್ ಪೂಜಾಂ ವಿಷ್ಣೋಃ ಪುತ್ರಹಿತೈಷಿಣೀ ॥

ಅನುವಾದ

ಆಗ ಕೌಸಲ್ಯಾದೇವಿಯು ಮಗನ ಹಿತಕ್ಕಾಗಿ ರಾತ್ರಿಯಿಡೀ ಎಚ್ಚರವಾಗಿದ್ದು, ಬೆಳಗ್ಗೆ ಏಕಾಗ್ರಚಿತ್ತಳಾಗಿ ಭಗವಾನ್ ವಿಷ್ಣುವನ್ನು ಪೂಜಿಸುತ್ತಿದ್ದಳು.॥14॥

ಮೂಲಮ್ - 15

ಸಾ ಕ್ಷೌಮವಸನಾ ಹೃಷ್ಟಾ ನಿತ್ಯಂ ವ್ರತಪರಾಯಣಾ ।
ಅಗ್ನಿ ಜುಹೋತಿ ಸ್ಮ ತದಾಮಂತ್ರವತ್ ಕೃತಮಂಗಲಾ ॥

ಅನುವಾದ

ಆಕೆಯು ರೇಶ್ಮೆಸೀರೆಯನ್ನುಟ್ಟು ಬಹಳ ಸಂತೋಷದಿಂದ ನಿರಂತರ ವ್ರತಪರಾಯಣಳಾಗಿ ಮಂಗಲಕಾರ್ಯಗಳನ್ನು ಮುಗಿಸಿ, ಆಗ ಮಂತ್ರೋಚ್ಚಾರ ಪೂರ್ವಕ ಅಗ್ನಿಯಲ್ಲಿ ಹವನ ಮಾಡುತ್ತಿದ್ದಳು.॥15॥

ಮೂಲಮ್ - 16

ಪ್ರವಿಶ್ಯ ತು ತದಾ ರಾಮೋ ಮಾತುರಂತಃಪುರಂ ಶುಭಮ್ ।
ದದರ್ಶ ಮಾತರಂ ತತ್ರ ಹಾವಯಂತೀಂ ಹುತಾಶನಮ್ ॥

ಅನುವಾದ

ಆಗಲೇ ಶ್ರೀರಾಮನು ಮಾತೆಯ ಶುಭ ಅಂತಃಪುರವನ್ನು ಪ್ರವೇಶಿಸಿ ಅಲ್ಲಿ ಯಜ್ಞೇಶ್ವರನಲ್ಲಿ ಹೋಮ ಮಾಡುತ್ತಾ ಇರುವ ತಾಯಿಯನ್ನು ನೋಡಿದನು.॥16॥

ಮೂಲಮ್ - 17

ದೇವಕಾರ್ಯ ನಿಮಿತ್ತಂ ಚ ತತ್ರಾಪಶ್ಯತ್ ಸಮುದ್ಯತಮ್ ।
ದಧ್ಯಕ್ಷತಘೃತಂ ಚೈವ ಮೋದಕಾನ್ಹವಿಷಸ್ತಥಾ ॥

ಮೂಲಮ್ - 18

ಲಾಜಾನ್ಮಾಲ್ಯಾನಿ ಶುಕ್ಲಾನಿ ಪಾಯಸಂ ಕೃಸರಂ ತಥಾ ।
ಸಮಿಧಃ ಪೂರ್ಣಕುಂಭಾಂಶ್ಚ ದದರ್ಶ ರಘುನಂದನಃ ॥

ಅನುವಾದ

ರಘುನಂದನನು ನೋಡುತ್ತಾನೆ - ಅಲ್ಲಿ ದೇವಕಾರ್ಯಕ್ಕಾಗಿ ಬಹಳಷ್ಟು ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದರು. ಮೊಸರು, ಅಕ್ಷತೆ, ತುಪ್ಪ, ಕಜ್ಜಾಯ, ಹವಿಸ್ಸು, ಅರಳು, ಬಿಳಿಯ ಹೂಮಾಲೆಗಳು, ಪಾಯಸ, ಪೊಂಗಲು, ಸಮಿತ್ತುಗಳು, ಪುಣ್ಯಜಲ ತುಂಬಿದ ಅನೇಕ ಕಲಶಗಳು ಅಣಿಗೊಳಿಸಿ ಇಟ್ಟಿದ್ದರು.॥17-18॥

ಮೂಲಮ್ - 19

ತಾಂ ಶುಕ್ಲಕ್ಷೌಮಸಂವೀತಾಂ ವ್ರತಯೋಗೇನ ಕರ್ಶಿತಾಮ್ ।
ತರ್ಪಯಂತೀಂ ದದರ್ಶಾದ್ಭಿರ್ದೇವತಾಂ ವರವರ್ಣಿನೀಮ್ ॥

ಅನುವಾದ

ಕಾಂತಿಮತಿ ಕೌಸಲ್ಯೆಯು ಶುಭ್ರ ರೇಶ್ಮೆಸೀರೆಯನ್ನು ಉಟ್ಟಿದ್ದಳು. ವ್ರತಾನುಷ್ಠಾನಗಳಿಂದ ಸೊರಗಿ ಹೋಗಿದ್ದಳು ಮತ್ತು ಇಷ್ಟದೇವತೆಯ ತರ್ಪಣ ಮಾಡುತ್ತಿರುವ ತಾಯಿಯನ್ನು ಶ್ರೀರಾಮನು ನೋಡಿದನು.॥19॥

ಮೂಲಮ್ - 20

ಸಾ ಚಿರಸ್ಯಾತ್ಮಜಂ ದೃಷ್ಟ್ವಾ ಮಾತೃನಂದನಮಾಗತಮ್ ।
ಅಭಿಚಕ್ರಾಮ ಸಂಹೃಷ್ಟಾ ಕಿಶೋರಂ ವಡವಾ ಯಥಾ ॥

ಅನುವಾದ

ಮಾತೆಯ ಆನಂದವರ್ಧನನಾದ ಶ್ರೀರಾಮನು ಬಹಳ ಹೊತ್ತಿನ ಬಳಿಕ ಮುಂದೆ ನಿಂತಿರುವುದನ್ನು ನೋಡಿ ಕೌಸಲ್ಯೆಯು ಬಹಳ ಹರ್ಷಗೊಂಡು ಹೆಣ್ಣುಕುದುರೆಯು ಮರಿಯನ್ನು ನೋಡಿ ಬಳಿಗೆ ಓಡಿಬರುವಂತೆ ರಾಮನ ಬಳಿಗೆ ಬಂದಳು.॥20॥

ಮೂಲಮ್ - 21

ಸ ಮಾತರಮುಪಕ್ರಾಂತಾಮುಪಸಂಗೃಹ್ಯ ರಾಘವಃ ।
ಪರಿಷ್ವಕ್ತಶ್ಚ ಬಾಹುಭ್ಯಾಮವಘ್ರಾತಶ್ಚ ಮೂರ್ಧನಿ ॥

ಅನುವಾದ

ಬಳಿಗೆ ಬಂದ ತಾಯಿಯನ್ನು ನೋಡಿ ಶ್ರೀರಾಮನು ಆಕೆಯ ಚರಣಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಆಗ ಕೌಸಲ್ಯೆಯು ಆತನನ್ನು ಎರಡೂ ಕೈಗಳಿಂದ ಮೇಲೆತ್ತಿ ಎದೆಗೊತ್ತಿಕೊಂಡು ಶಿರವನ್ನು ಆಘ್ರಾಣಿಸಿದಳು.॥21॥

ಮೂಲಮ್ - 22

ತಮುವಾಚ ದುರಾಧರ್ಷಂ ರಾಘವಂ ಸುತಮಾತ್ಮನಃ ।
ಕೌಸಲ್ಯಾ ಪುತ್ರವಾತ್ಸಲ್ಯಾದಿದಂ ಪ್ರಿಯಹಿತಂ ವಚಃ ॥

ಅನುವಾದ

ಆಗ ಕೌಸಲ್ಯಾದೇವಿಯು ತನ್ನ ದುರ್ಜಯ ಪುತ್ರನಾದ ಶ್ರೀರಾಮಚಂದ್ರನಲ್ಲಿ ಪುತ್ರಸ್ನೇಹವಶಳಾಗಿ ಹೀಗೆ ಪ್ರಿಯವಾದ ಮತ್ತು ಹಿತಕರ ಮಾತನ್ನು ಹೇಳಿದಳು.॥22॥

ಮೂಲಮ್ - 23

ವೃದ್ಧಾನಾಂ ಧರ್ಮಶೀಲಾನಾಂ ರಾಜರ್ಷೀಣಾಂ ಮಹಾತ್ಮನಾಮ್ ।
ಪ್ರಾಪ್ನುಹ್ಯಾಯುಶ್ಚ ಕೀರ್ತಿಂ ಚ ಧರ್ಮಂ ಚಾಪ್ಯುಚಿತಂ ಕುಲೇ ॥

ಅನುವಾದ

ಮಗು! ನೀನು ಧರ್ಮಶೀಲ, ವೃದ್ಧ ಹಾಗೂ ರಾಜರ್ಷಿಗಳಂತೆ ಆಯುಸ್ಸು, ಕೀರ್ತಿ ಮತ್ತು ಕ್ಷತ್ರಿಯಕುಲೋಚಿತ ಧರ್ಮವನ್ನು ಪಡೆ.॥23॥

ಮೂಲಮ್ - 24

ಸತ್ಯಪ್ರತಿಜ್ಞಂ ಪಿತರಂ ರಾಜಾನಂ ಪಶ್ಯ ರಾಘವ ।
ಅದ್ವೈವ ತ್ವಾಂ ಸ ಧರ್ಮಾತ್ಮಾಯೌವರಾಜ್ಯೇಽಭಿಷೇಕ್ಷ್ಯತಿ ॥

ಅನುವಾದ

ರಘುನಂದನಾ! ಈಗ ನೀನು ಹೋಗಿ ಸತ್ಯಪ್ರತಿಜ್ಞ ನಿನ್ನ ತಂದೆ ಮಹಾರಾಜರ ದರ್ಶನ ಮಾಡು. ಆ ಧರ್ಮಾತ್ಮರಾದ ಅರಸರು ಇಂದೇ ನಿನಗೆ ಯುವರಾಜ ಪಟ್ಟಾಭಿಷೇಕ ಮಾಡುವರು.॥24॥

ಮೂಲಮ್ - 25

ದತ್ತಮಾಸನಮಾಲಭ್ಯ ಭೋಜನೇನ ನಿಮಂತ್ರಿತಃ ।
ಮಾತರಂ ರಾಘವಃ ಕಿಂಚಿತ್ ಪ್ರಸಾರ್ಯಾಂಜಲಿಮಬ್ರವೀತ್ ॥

ಅನುವಾದ

ಹೀಗೆ ಹೇಳಿ ತಾಯಿಯು ಅವನಿಗೆ ಕುಳಿತುಕೊಳ್ಳಲು ಆಸನವನ್ನಿತ್ತು, ಭೋಜನ ಮಾಡಲು ಹೇಳಿದಳು. ಭೋಜನಕ್ಕಾಗಿ ನಿಮಂತ್ರಿತನಾಗಿ ಶ್ರೀರಾಮನು ಆಸನವನ್ನು ಕೇವಲ ಸ್ಪರ್ಶಿಸಿದನು. ಮತ್ತೆ ಅವನು ಅಂಜಲೀ ಬದ್ಧನಾಗಿ ತಾಯಿಯ ಬಳಿ ಏನನ್ನೋ ಹೇಳಲು ಮುಂದಾದನು.॥25॥

ಮೂಲಮ್ - 26

ಸ ಸ್ವಭಾವವಿನೀತಶ್ಚ ಗೌರವಾಚ್ಚ ತಥಾನತಃ ।
ಪ್ರಸ್ಥಿತೋ ದಂಡಕಾರಣ್ಯಮಾಪ್ರಷ್ಟುಮುಪಚಕ್ರಮೇ ॥

ಅನುವಾದ

ಶ್ರೀರಾಮನು ಸ್ವಭಾವತಃ ವಿನಯಶೀಲನಾಗಿದ್ದನು, ತಾಯಿಯ ಮೇಲಿನ ಗೌರವದಿಂದ ಆಕೆಯ ಎದುರಿಗೆ ನತಮಸ್ತಕನಾಗಿದ್ದನು. ಅವನಿಗೆ ದಂಡಕಾರಣ್ಯಕ್ಕೆ ಹೋಗುವುದಿತ್ತು. ಆದ್ದರಿಂದ ಅವನು ಅದಕ್ಕಾಗಿ ಅಪ್ಪಣೆ ಪಡೆಯಲು ತೊಡಗಿದನು.॥26॥

ಮೂಲಮ್ - 27

ದೇವಿ ನೂನಂ ನ ಜಾನೀಷೇ ಮಹದ್ ಭಯಮುಪಸ್ಥಿತಮ್ ।
ಇದಂ ತವ ಚ ದುಃಖಾಯ ವೈದೇಹ್ಯಾ ಲಕ್ಷ್ಮಣಸ್ಯ ಚ ॥

ಅನುವಾದ

ಶ್ರೀರಾಮನು ಹೇಳಿದನು-ದೇವಿ! ನಿನ್ನ ಮೇಲೆ ಮಹಾಭಯವು ಆವರಿಸಿರುವುದು ನಿನಗೆ ನಿಶ್ಚಯವಾಗಿ ತಿಳಿಯದು. ಈಗ ನಾನು ಹೇಳುವುದನ್ನು ಕೇಳಿ ನಿನಗೆ, ಸೀತೆಗೆ ಮತ್ತು ಲಕ್ಷ್ಮಣನಿಗೂ ದುಃಖವಾದೀತು; ಆದರೂ ಹೇಳುವೆನು.॥27॥

ಮೂಲಮ್ - 28

ಗಮಿಷ್ಯೇ ದಂಡಕಾರಣ್ಯಂ ಕಿಮನೇನಾಸನೇನ ಮೇ ।
ವಿಷ್ಟರಾಸನಯೋಗ್ಯೋ ಹಿ ಕಾಲೋಽಯಂ ಮಾಮುಪಸ್ಥಿತಃ ॥

ಅನುವಾದ

ಈಗ ನಾನಾದರೋ ದಂಡಕಾರಣ್ಯಕ್ಕೆ ಹೋಗುವೆನು. ಆದ್ದರಿಂದ ಇಂತಹ ಅಮೂಲ್ಯ ಆಸನದ ಆವಶ್ಯಕತೆ ನನಗಿಲ್ಲ. ಈಗ ನನಗೆ ದರ್ಭೆಯ ಚಾಪೆಯಲ್ಲಿ ಕುಳಿತುಕೊಳ್ಳುವ ಸಮಯ ಬಂದಿದೆ.॥28॥

ಮೂಲಮ್ - 29

ಚತುರ್ದಶ ಹಿ ವರ್ಷಾಣಿ ವತ್ಸ್ಯಾಮಿ ವಿಜನೇವನೇ ।
ಕಂದಮೂಲಲೈರ್ಜೀವನ್ ಹಿತ್ವಾ ಮುನಿವದಾಮಿಷಮ್ ॥

ಅನುವಾದ

ನಾನು ರಾಜಭೋಗ್ಯ ವಸ್ತುಗಳನ್ನು ತ್ಯಜಿಸಿ ಮುನಿಗಳಂತೆ ಕಂದ-ಮೂಲ, ಫಲಗಳಿಂದ ಜೀವನ ನಿರ್ವಾಹ ಮಾಡುತ್ತಾ, ಹದಿನಾಲ್ಕು ವರ್ಷಗಳವರೆಗೆ ನಿರ್ಜನ ವನದಲ್ಲಿ ವಾಸಿಸುವೆನು.॥29॥

ಮೂಲಮ್ - 30

ಭರತಾಯ ಮಹಾರಾಜೋ ಯೌವರಾಜ್ಯಂ ಪ್ರಯಚ್ಛತಿ ।
ಮಾಂ ಪುನರ್ದಂಡಕಾರಣ್ಯಂ ವಿವಾಸಯತಿತಾಪಸಮ್ ॥

ಅನುವಾದ

ಮಹಾರಾಜರು ಯುವರಾಜ ಪದವಿಯನ್ನು ಭರತನಿಗೆ ಕೊಡುತ್ತಿದ್ದಾರೆ ಹಾಗೂ ನನ್ನನ್ನು ತಪಸ್ವಿಯಾಗಿಸಿ ದಂಡಕಾರಣ್ಯಕ್ಕೆ ಕಳಿಸುತ್ತಿದ್ದಾರೆ.॥30॥

ಮೂಲಮ್ - 31

ಸ ಷಟ್ ಚಾಷ್ಟೌ ಚ ವರ್ಷಾಣಿ ವತ್ಸ್ಯಾಮಿ ವಿಜನೇ ವನೇ ।
ಅಸೇವಮಾನೋ ವನ್ಯಾನಿ ಫಲಮೂಲೈಶ್ಚ ವರ್ತಯನ್ ॥

ಅನುವಾದ

ಆದ್ದರಿಂದ ಹದಿನಾಲ್ಕುವರ್ಷ ನಿರ್ಜನ ಕಾಡಿನಲ್ಲಿ ಇರುವೆನು ಮತ್ತು ಕಾಡಿನಲ್ಲಿ ಸುಲಭವಾಗುವ ವಲ್ಕಲಾದಿಗಳನ್ನು ಧರಿಸಿ ಫಲ-ಮೂಲಗಳ ಆಹಾರದಿಂದ ಜೀವನ ನಿರ್ವಹಣೆ ಮಾಡುತ್ತಾ ಇರುವೆನು.॥31॥

ಮೂಲಮ್ - 32

ಸಾ ನಿಕೃತ್ತೇವ ಸಾಲಸ್ಯ ಯಷ್ಟಿಃ ಪರಶುನಾ ವನೇ ।
ಪಪಾತ ಸಹಸಾ ದೇವೀ ದೇವತೇವ ದಿವಶ್ಚ್ಯುತಾ ॥

ಅನುವಾದ

ಈ ಅಪ್ರಿಯ ಮಾತನ್ನು ಕೇಳಿ ಕಾಡಿನಲ್ಲಿ ಕೊಡಲಿಯಿಂದ ಕತ್ತರಿಸಿದ ಶಾಲವೃಕ್ಷದ ರೆಂಬೆಯಂತೆ, ಸ್ವರ್ಗದಿಂದ ಯಾವುದೋ ದೇವಾಂಗನೆಯು ಭೂತಳಕ್ಕೆ ಪತಿತಳಾದಂತೆ, ಕೌಸಲ್ಯೆಯು ಥಟ್ಟನೆ ನೆಲಕ್ಕೆ ಕುಸಿದುಬಿದ್ದಳು.॥32॥

ಮೂಲಮ್ - 33

ತಾಮದುಃಖೋಚಿತಾಂ ದೃಷ್ಟ್ವಾ ಪತಿತಾಂ ಕದಲೀಮಿವ ।
ರಾಮಸ್ತೂತ್ಥಾಪಯಾಮಾಸ ಮಾತರಂ ಗತಚೇತಸಮ್ ॥

ಅನುವಾದ

ದುಃಖವನ್ನು ಭೋಗಿಸಲು ಯೋಗ್ಯಳಲ್ಲದ, ಜೀವನದಲ್ಲಿ ಎಂದೂ ದುಃಖವನ್ನೇ ನೋಡದ ತಾಯಿ ಕೌಸಲ್ಯೆಯು ಕಡಿದ ಬಾಳೆಯಂತೆ ನಿಶ್ಚೇಷ್ಟಿತಳಾಗಿ ನೆಲಕ್ಕೆ ಬಿದ್ದಿರುವುದನ್ನು ನೋಡಿ ಶ್ರೀರಾಮನು ಕೈಯ ಆಸರೆಯನ್ನಿತ್ತು ಎಬ್ಬಿಸಿದನು.॥33॥

ಮೂಲಮ್ - 34

ಉಪಾವೃತ್ಯೋತ್ಥಿತಾಂ ದೀನಾಂ ವಡವಾಮಿವ ವಾಹಿತಾಮ್ ।
ಪಾಂಸುಗುಂಠಿತಸರ್ವಾಂಗೀಂ ವಿಮಮರ್ಶ ಚ ಪಾಣಿನಾ ॥

ಅನುವಾದ

ಹೆಣ್ಣುಕುದುರೆ ಮೊಟ್ಟಮೊದಲು ಭಾರೀ ಭಾರವನ್ನು ಹೊತ್ತು ಬಳಲಿ ನೆಲದಲ್ಲಿ ಹೊರಳಾಡುವಂತೆ, ಎದ್ದಿರುವ ಕೌಸಲ್ಯೆಯ ಮೈಯಲ್ಲಿ ಧೂಳು ಮೆತ್ತಿಕೊಂಡು, ಅತ್ಯಂತ ದೀನಸ್ಥಿತಿಗೆ ತಲುಪಿದ್ದಳು. ಆ ಸ್ಥಿತಿಯಲ್ಲಿ ಶ್ರೀರಾಮನು ತನ್ನ ಕರಗಳಿಂದ ಆಕೆಯ ಮೈಯ ಧೂಳನ್ನು ಜಾಡಿಸಿದನು.॥34॥

ಮೂಲಮ್ - 35

ಸಾ ರಾಘವಮುಪಾಸೀನಮಸುಖಾರ್ತಾ ಸುಖೋಚಿತಾ ।
ಉವಾಚ ಪುರುಷವ್ಯಾಘ್ರಮುಪಶೃಣ್ವತಿ ಲಕ್ಷ್ಮಣೇ ॥

ಅನುವಾದ

ಕೌಸಲ್ಯೆಯ ಜೀವನದಲ್ಲಿ ಮೊದಲು ಸದಾ ಸುಖವನ್ನೇ ನೋಡಿದ್ದಳು ಹಾಗೂ ಅದಕ್ಕೆ ಯೋಗ್ಯಳಾಗಿದ್ದಳು; ಆದರೆ ಆಗ ಆಕೆಯು ದುಃಖದಿಂದ ಕಾತರಳಾಗಿದ್ದಳು. ಅವಳು ಲಕ್ಷ್ಮಣನು ಕೇಳುವಂತೆ ಬಳಿಯಲ್ಲಿ ಕುಳಿತಿರುವ ಪುರುಷಸಿಂಹ ಶ್ರೀರಾಮನಲ್ಲಿ ಹೀಗೆ ನುಡಿದಳು.॥35॥

ಮೂಲಮ್ - 36

ಯದಿ ಪುತ್ರ ನ ಜಾಯೇಥಾ ಮಮ ಶೋಕಾಯ ರಾಘವ ।
ನ ಸ್ಮ ದುಃಖಮತೋ ಭೂಯಃ ಪಶ್ಯೇಯಮಹಮಪ್ರಜಾಃ ॥

ಅನುವಾದ

ಮಗು ರಾಘವ! ನೀನು ಹುಟ್ಟದಿದ್ದರೆ ನಾನು ಬಂಜೆ ಎಂಬ ಒಂದೇ ಶೋಕ ಇರುತ್ತಿತ್ತು. ಆದರೆ ಇಂದು ನನ್ನ ಮೇಲೆ ಬಂದೆರಗಿದ ಭಾರೀ ದುಃಖವನ್ನು ಆಗ ನಾನು ನೋಡುತ್ತಿರಲಿಲ್ಲ.॥36॥

ಮೂಲಮ್ - 37

ಏಕ ಏವ ಹಿ ವಂಧ್ಯಾಯಾಃ ಶೋಕೋ ಭವತಿ ಮಾನಸಃ ।
ಅಪ್ರಜಾಸ್ಮೀತಿಸಂತಾಪೋ ನ ಹ್ಯನ್ಯಃ ಪುತ್ರ ವಿದ್ಯತೇ ॥

ಅನುವಾದ

ಮಗು! ವಂಧ್ಯೆಯಾದವಳಿಗೆ ಒಂದೇ ಮಾನಸಿಕ ಶೋಕ ಇರುತ್ತದೆ. ಆಕೆಗೆ ಯಾವುದೇ ಸಂತಾನವಿಲ್ಲ ಎಂಬ ಸಂತಾಪ ಮಾತ್ರ ಇರುತ್ತದೆ. ಇದಲ್ಲದೆ ಬೇರೆ ಯಾವುದೇ ದುಃಖ ಆಕೆಗಿರುವುದಿಲ್ಲ.॥37॥

ಮೂಲಮ್ - 38

ನ ದೃಷ್ಟಪೂರ್ವಂ ಕಲ್ಯಾಣಂ ಸುಖಂ ವಾ ಪತಿಪೌರುಷೇ ।
ಅಪಿ ಪುತ್ರೇ ವಿಪಶ್ಯೇಯಮಿತಿ ರಾಮಾಸ್ಥಿತಂ ಮಯಾ ॥

ಅನುವಾದ

ಪುತ್ರ ರಾಮ! ಪೌರುಷ ಪತಿಯಿದ್ದಾಗಲೂ ನಾನು ಪಟ್ಟ ಮಹಿಷಿಗೆ ಉಚಿತವಾದ ಶುಭವನ್ನಾಗಲೀ, ಸುಖವನ್ನಾಗಲೀ ಕಂಡವಳೇ ಅಲ್ಲ. ಮಗನ ರಾಜ್ಯದಲ್ಲಾದರೂ ಎಲ್ಲ ಸುಖವನ್ನು ಪಡೆಯಬಹುದೆಂಬ ಆಸೆಯಿಂದ ನಾನು ಇಂದಿನವರೆಗೆ ಜೀವಂತನಾಗಿರುವೆನು.॥38॥

ಮೂಲಮ್ - 39

ಸಾ ಬಹೂನ್ಯಮನೋಜ್ಞಾನಿ ವಾಕ್ಯಾನಿ ಹೃದಯಚ್ಛಿದಾಮ್ ।
ಅಹಂ ಶ್ರೋಷ್ಯೇ ಸಪತ್ನೀನಾಮವರಾಣಾಂ ಪರಾ ಸತೀ ॥

ಅನುವಾದ

ನಾನು ಹಿರಿಯ ರಾಣಿಯಾಗಿದ್ದರೂ ನನಗೆ ತನ್ನ ಮಾತುಗಳಿಂದ ಹೃದಯವನ್ನು ವಿದೀರ್ಣಗೊಳಿಸುವ ಸವತಿಯ ಅತ್ಯಂತ ಅಪ್ರಿಯ ವಚನಗಳನ್ನು ಕೇಳಬೇಕಾದೀತು.॥39॥

ಮೂಲಮ್ - 40

ಅತೋ ದುಃಖತರಂ ಕಿಂ ನು ಪ್ರಮದಾನಾಂ ಭವಿಷ್ಯತಿ ।
ಮಮ ಶೋಕೋ ವಿಲಾಪಶ್ಚ ಯಾದೃಶೋಽಯಮನಂತಕಃ ॥

ಅನುವಾದ

ಸ್ತ್ರೀಯರಿಗೆ ಇದಕ್ಕಿಂತ ಮಿಗಿಲಾಗಿ ಮಹಾದುಃಖ ಬೇರೆ ಯಾವುದಿರಬಹುದು? ಆದ್ದರಿಂದ ನನ್ನ ಶೋಕ ಮತ್ತು ವಿಲಾಪದ ಅಂತ್ಯವು ಎಂದಿಗೂ ಆಗಲಾರದು.॥40॥

ಮೂಲಮ್ - 41

ತ್ವಯಿ ಸಂನಿಹಿತೇಽಪ್ಯೇವಮಹಮಾಸಂ ನಿರಾಕೃತಾ ।
ಕಿಂ ಪುನಃ ಪ್ರೋಷಿತೇ ತಾತ ಧ್ರುವಂ ಮರಣಮೇವ ಹಿ ॥

ಅನುವಾದ

ಅಪ್ಪಾ! ನಿನ್ನ ಬಳಿಯಿದ್ದಾಗಲೇ ನಾನು ಈ ಸವತಿಯರಿಂದ ತಿರಸ್ಕೃತನಾಗಿರುವಾಗ ಮತ್ತೆ ನೀನು ಪರದೇಶಕ್ಕೆ ಹೋದ ಮೇಲೆ ನನ್ನ ಸ್ಥಿತಿ ಏನಾಗುವುದೋ? ಆ ಸ್ಥಿತಿಯಲ್ಲಿ ನನ್ನ ಸಾವು ನಿಶ್ಚಿತವಾಗಿ ಆಗುವುದು.॥41॥

ಮೂಲಮ್ - 42

ಅತ್ಯಂತಂ ನಿಗೃಹೀತಾಸ್ಮಿ ಭರ್ತುರ್ನಿತ್ಯಮಸಮ್ಮತಾ ।
ಪರಿವಾರೇಣ ಕೈಕೇಯ್ಯಾಃ ಸಮಾ ವಾಪ್ಯಥವಾವರಾ ॥

ಅನುವಾದ

ಪತಿಯಿಂದ ನನಗೆ ಸದಾ ಅತ್ಯಂತ ತಿರಸ್ಕಾರ ಅಥವಾ ಗದರಿಕೆಯೇ ದೊರಕಿದೆ, ಎಂದೂ ಪ್ರೀತಿ, ಸಮ್ಮಾನಗಳು ದೊರೆಯಲೇ ಇಲ್ಲ. ನಾನು ಕೈಕೆಯಿಯ ದಾಸಿಯಂತೆ ಅಥವಾ ಅದಕ್ಕಿಂತಲೂ ಕೀಳೆಂದು ತಿಳಿಯುತ್ತೇನೆ.॥42॥

ಮೂಲಮ್ - 43

ಯೋ ಹಿ ಮಾಂ ಸೇವತೇ ಕಶ್ಚಿದಪಿ ವಾಪ್ಯನುವರ್ತತೇ ।
ಕೈಕೇಯ್ಯಾಃ ಪುತ್ರಮನ್ವೀಕ್ಷ್ಯ ಸ ಜನೋ ನಾಭಿಭಾಷತೇ ॥

ಅನುವಾದ

ನನ್ನ ಸೇವೆಯಲ್ಲಿ ಇರುವವರು, ನನ್ನನ್ನು ಅನುಸರಿಸುವವರೂ ಕೂಡ ಕೈಕೆಯ ಮಗನನ್ನು ನೋಡಿ ಸುಮ್ಮನಾಗಿ ನನ್ನ ಬಳಿ ಮಾತುಗಳನ್ನು ಆಡಲಾರರು.॥43॥

ಮೂಲಮ್ - 44

ನಿತ್ಯಕ್ರೋಧತಯಾ ತಸ್ಯಾಃ ಕಥಂ ನು ಖರವಾದಿ ತತ್ ।
ಕೈಕೇಯ್ಯಾ ವದನಂ ದ್ರಷ್ಟುಂ ಪುತ್ರ ಶಕ್ಷ್ಯಾಮಿ ದುರ್ಗತಾ ॥

ಅನುವಾದ

ಮಗು! ಈ ದುರ್ಗತಿಗೆ ತುತ್ತಾಗಿ, ಸದಾ ಸಿಟ್ಟಿನ ಸ್ವಭಾವದ ಕಾರಣ ಕಟುವಚನಗಳನ್ನಾಡುವ ಆ ಕೈಕೆಯಿಯ ಮುಖವನ್ನು ನಾನು ಹೇಗೆ ನೋಡಬಲ್ಲೆನು.॥44॥

ಮೂಲಮ್ - 45

ದಶ ಸಪ್ತ ಚ ವರ್ಷಾಣಿ ಜಾತಸ್ಯ ತವ ರಾಘವ ।
ಅತೀತಾನಿ ಪ್ರಕಾಂಕ್ಷಂತ್ಯಾ ಮಯಾ ದುಃಖಪರಿಕ್ಷಯಮ್ ॥

ಅನುವಾದ

ರಘುನಂದನ! ನಿನ್ನ ಉಪನಯನವಾಗಿ ಹದಿನೇಳು ವರ್ಷಗಳು ಕಳೆದಿವೆ. (ಅರ್ಥಾತ್ ಈಗ ನೀನು ಇಪ್ಪತ್ತೇಳು ವರ್ಷದವನಾಗಿರುವೆ) ಇನ್ನು ನನ್ನ ದುಃಖ ದೂರವಾಗಬಹುದೆಂಬ ಆಸೆಯಿಂದ ಇಷ್ಟರವರೆಗೆ ಬದುಕುತ್ತಾ ಇದ್ದೆ.॥45॥

ಮೂಲಮ್ - 46

ತದಕ್ಷಯಂ ಮಹದ್ದುಃಖಂ ನೋತ್ಸಹೇ ಸಹಿತುಂ ಚಿರಾತ್ ।
ವಿಪ್ರಕಾರಂ ಸಪತ್ನೀನಾಮೇವಂ ಜೀರ್ಣಾಪಿ ರಾಘವ ॥

ಅನುವಾದ

ರಾಘವ! ಈಗ ಈ ವೃದ್ಧಾಪ್ಯದಲ್ಲಿ ಈ ರೀತಿಯ ಸವತಿಯರ ತಿರಸ್ಕಾರ ಮತ್ತು ಅದರಿಂದ ಆಗುವ ಅಕ್ಷಯ ಮಹಾ ದುಃಖವನ್ನು ನಾನು ಹೆಚ್ಚು ಕಾಲದವರೆಗೆ ಸಹಿಸಲಾರೆನು.॥46॥

ಮೂಲಮ್ - 47

ಅಪಶ್ಯಂತೀ ತವ ಮುಖಂ ಪರಿಪೂರ್ಣಶಶಿಪ್ರಭಮ್ ।
ಕೃಪಣಾ ವರ್ತಯಿಷ್ಯಾಮಿ ಕಥಂ ಕೃಪಣಜೀವಿಕಾ ॥

ಅನುವಾದ

ಪೂರ್ಣಚಂದ್ರನಂತಿರುವ ನಿನ್ನ ಮನೋಹರ ಮುಖವನ್ನು ನೋಡದೆ ದುಃಖಮಯ ದಯನೀಯ ಜೀವನ ವೃತ್ತಿಯಲ್ಲಿದ್ದು ಹೇಗೆ ಬದುಕಿರಲಿ.॥47॥

ಮೂಲಮ್ - 48

ಉಪವಾಸೈಶ್ಚ ಯೋಗೈಶ್ಚ ಬಹುಭಿಶ್ಚ ಪರಿಶ್ರಮೈಃ ।
ದುಃಖಂ ಸಂವರ್ಧಿತೋ ಮೋಘಂ ತ್ವಂ ಹಿದುರ್ಗತಯಾ ಮಯಾ ॥

ಅನುವಾದ

ಮಗು! ನೀನು ಕಾಡಿಗೆ ಹೋಗುವುದೇ ಇದ್ದರೆ ಭಾಗ್ಯ ಹೀನಳಾದ ನಾನು ಪದೇ-ಪದೇ ಉಪವಾಸ, ದೇವತೆಗಳ ಧ್ಯಾನ ಹಾಗೂ ಬಹಳ ಪರಿಶ್ರಮಪೂರ್ವಕ ಉಪಾಯ ಮಾಡಿ ನಿನ್ನನ್ನು ಕಷ್ಟದಿಂದ ಪಾಲಿಸಿ-ಪೋಷಿಸಿದುದು ವ್ಯರ್ಥವೇ ಸರಿ.॥48॥

ಮೂಲಮ್ - 49

ಸ್ಥಿರಂ ನು ಹೃದಯಂ ಮನ್ಯೇ ಮಮೇದಂ ಯನ್ನ ದೀರ್ಯತೇ ।
ಪ್ರಾವೃಷೀವ ಮಹಾನದ್ಯಾಃ ಸ್ಪೃಷ್ಟಂ ಕೂಲಂ ನವಾಂಭಸಾ ॥

ಅನುವಾದ

ರಾಮಾ! ಆದರೆ ನನ್ನ ಹೃದಯವು ಬಹಳ ಗಟ್ಟಿಯಾದುದು. ಏಕೆಂದರೆ ನಿನ್ನ ವಿಯೋಗವಾರ್ತೆಯನ್ನು ಕೇಳಿಯೂ ವರ್ಷಋತುವಿನಲ್ಲಿ ನದಿಯ ವೇಗವಾದ ಪ್ರವಾಹವು ತೀರಗಳನ್ನು ಕೊಚ್ಚಿಕೊಂಡು ಹೋಗುವಂತೆ ನನ್ನ ಹೃದಯ ಒಡೆದು ಹೋಗಿಲ್ಲವಲ್ಲ.॥49॥

ಮೂಲಮ್ - 50

ಮಮೈವ ನೂನಂ ಮರಣಂ ನ ವಿದ್ಯತೇ
ನ ಚಾವಕಾಶೋಽಸ್ತಿ ಯಮಕ್ಷಯೇ ಮಮ ।
ಯದಂತಕೋಽದ್ಯೈವ ನ ಮಾಂ ಜಿಹೀರ್ಷತಿ
ಪ್ರಸಹ್ಯ ಸಿಂಹೋರುದತೀಂ ಮೃಗೀಮಿವ ॥

ಅನುವಾದ

ಚೀತ್ಕಾರ ಮಾಡುತ್ತಿರುವ ಹೆಣ್ಣುಜಿಂಕೆಯನ್ನು ಸಿಂಹವು ಬಲವಂತವಾಗಿ ಸೆಳೆದುಕೊಂಡು ಹೋಗುವಂತೆ ಬಹಳ ದುಃಖಿತೆಯಾದ ನನ್ನನ್ನು ಮೃತ್ಯುವೂ ಈಗಲೇ ಸೆಳೆದುಕೊಂಡು ಹೋಗದಿರುವುದನ್ನು ನೋಡಿದರೆ ನನಗೆ ನಿಶ್ಚಯವಾಗಿ ಸಾವೇ ಇಲ್ಲ ಎಂದೆನಿಸುತ್ತದೆ. ಯಮನ ಮನೆಯಲ್ಲಿಯೂ ನನಗೆ ಸ್ಥಳವೇ ಇಲ್ಲ.॥50॥

ಮೂಲಮ್ - 51

ಸ್ಥಿರಂ ಹಿ ನೂನಂ ಹೃದಯಂ ಮಮಾಯಸಂ
ನ ಭಿದ್ಯತೇ ಯದ್ಭುವಿ ನೋ ವಿದೀರ್ಯತೇ ।
ಅನೇನ ದುಃಖೇನ ಚ ದೇಹಮರ್ಪಿತಂ
ಧ್ರುವಂ ಹ್ಯಕಾಲೇ ಮರಣಂ ನ ವಿದ್ಯತೇ ॥

ಅನುವಾದ

ನನ್ನ ಹೃದಯವು ನಿಶ್ಚಯವಾಗಿ ಕಬ್ಬಿಣದಂತೆ ಕಠೋರವಾಗಿದೆ. ದೇಹವು ನೆಲಕ್ಕೆ ಬಿದ್ದರೂ ಇದು ಒಡೆಯುವುದಿಲ್ಲ, ಸೀಳಿ ಹೋಗುವುದಿಲ್ಲ. ಈ ದುಃಖದಿಂದ ವ್ಯಾಪ್ತವಾದ ಈ ಶರೀರವೂ ಕೂಡ ನುಚ್ಚು ನೂರಾಗುವುದಿಲ್ಲ. ಮೃತ್ಯು ಬರದೆ ಯಾರೂ ಸಾಯುವುದಿಲ್ಲ ಇದು ನಿಶ್ಚಯವಾಗಿದೆ.॥51॥

ಮೂಲಮ್ - 52

ಇದಂ ತು ದುಃಖಂ ಯದನರ್ಥಕಾನಿ ಮೇ
ವ್ರತಾನಿ ದಾನಾನಿ ಚ ಸಂಯಮಾಶ್ಚ ಹಿ ।
ತಪಶ್ಚ ತಪ್ತಂ ಯದಪತ್ಯಕಾಮ್ಯಯಾ
ಸುನಿಷ್ಫಲಂ ಬೀಜಮಿವೋಪ್ತಮೂಷರೇ ॥

ಅನುವಾದ

ಮಗನ ಸುಖಕ್ಕಾಗಿ ನಾನು ಮಾಡಿದ ವ್ರತ, ದಾನ, ಸಂಯಮ ಎಲ್ಲವೂ ವ್ಯರ್ಥವಾಯಿತಲ್ಲ, ಇದೇ ಹೆಚ್ಚು ದುಃಖದ ಮಾತಾಗಿದೆ. ನಾನು ಸಂತಾನದ ಹಿತಕ್ಕಾಗಿ ಮಾಡಿದ ತಪಸ್ಸೂ ಕೂಡ ಬಂಜರು ಭೂಮಿಯಲ್ಲಿ ಬಿತ್ತಿದ ಬೀಜದಂತೇ ನಿಷ್ಫಲವಾಯಿತು.॥52॥

ಮೂಲಮ್ - 53

ಯದಿ ಹ್ಯಕಾಲೇ ಮರಣಂ ಸ್ವಯೇಚ್ಛಯಾ
ಲಭೇತ ಕಶ್ಚಿದ್ಗುರುದುಃಖಕರ್ಶಿತಃ ।
ಗತಾಹಮದ್ಯೈವ ಪರೇತ ಸಂಸದಂ
ವಿನಾ ತ್ವಯಾ ಧೇನುರಿವಾತ್ಮಜೇನ ವೈ ॥

ಅನುವಾದ

ಯಾವನಾದರೂ ಮನುಷ್ಯನು ಭಾರೀ ದುಃಖದಿಂದ ಪೀಡಿತನಾಗಿ ಅಸಮಯದಲ್ಲಿ ತನ್ನಿಚ್ಛೆಯಂತೆ ಸಾಯುವುದಾದರೆ ನಾನು ನಿನ್ನನ್ನು ಅಗಲಿ ತನ್ನ ಕರುವನ್ನು ಅಗಲಿದ ಹಸುವಿನಂತೆ ಇಂದೇ ಯಮನ ಮನೆಗೆ ಹೊರಟು ಹೋಗುವೆನು.॥53॥

ಮೂಲಮ್ - 54

ಅಥಾಪಿ ಕಿಂ ಜೀವಿತಮದ್ಯ ಮೇ ವೃಥಾ
ತ್ವಯಾ ವಿನಾ ಚಂದ್ರನಿಭಾನನಪ್ರಭ ।
ಅನುವ್ರಜಿಷ್ಯಾಮಿ ವನಂ ತ್ವಯೈವ ಗೌಃ
ಸುದುರ್ಬಲಾ ವತ್ಸಮಿವಾಭಿಕಾಂಕ್ಷಯಾ ॥

ಅನುವಾದ

ಚಂದ್ರನಂತೆ ಮನೋಹರ ಮುಖಕಾಂತಿಯುಳ್ಳ ಶ್ರೀರಾಮಾ! ನನ್ನ ಮೃತ್ಯು ಆಗದಿದ್ದರೆ ನಿನ್ನನ್ನು ಬಿಟ್ಟು ಇಲ್ಲಿ ಕುತ್ಸಿತವಾದ ಈ ಜೀವನ ವ್ಯರ್ಥವಾಗಿ ಏಕೆ ಕಳೆಯಲಿ? ಮಗು! ಆಕಳು ದುರ್ಬಲವಾದರೂ ತನ್ನ ಕರುವಿನ ಹಿಂದೆ-ಹಿಂದೆ ಹೋಗುವಂತೆಯೇ ನಾನೂ ಕೂಡ ನಿನ್ನ ಜೊತೆಗೆ ಕಾಡಿಗೆ ಹೊರಡುವೆನು.॥54॥

ಮೂಲಮ್ - 55

ಭೃಶಮಸುಖಮಮರ್ಷಿತಾ ತದಾ ಬಹು
ವಿಲಲಾಪ ಸಮೀಕ್ಷ್ಯ ರಾಘವಮ್ ।
ವ್ಯಸನಮುಪನಿಶಾಮ್ಯ ಸಾ ಮಹತ್
ಸುತಮಿವ ಬದ್ಧಮವೇಕ್ಷ್ಯ ಕಿನ್ನರೀ ॥

ಅನುವಾದ

ಕೌಸಲ್ಯಾ ದೇವಿಯು ಆಗ ಆಕಸ್ಮಿಕವಾಗಿ ಒದಗಿದ ದುಃಖವನ್ನು ಸಹಿಸಿಕೊಳ್ಳಲಾರದೇ ಹೋದಳು. ದುಃಖದ ವಾರ್ತೆಯನ್ನು ಕೇಳಿ, ಮಗನು ತಂದೆಯ ಆಜ್ಞೆಗೆ ಕಟ್ಟು ಬಿದ್ದಿರುವುದನ್ನು ಮನಗಂಡು ಶ್ರೀರಾಮನನ್ನೇ ಎವೆಯಿಕ್ಕದೆ ನೋಡುತ್ತಾ ಯಾವುದಾದರು ಕಿನ್ನರಿ ತನ್ನ ಪುತ್ರನನ್ನು ಬಂಧನದಲ್ಲಿ ಬಿದ್ದಿರುವುದನ್ನು ನೋಡಿ ಗೋಳಾಡುವಂತೆ ದುಃಖಿಸಿದಳು.॥55॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತನೆಯ ಸರ್ಗ ಪೂರ್ಣವಾಯಿತು ॥20॥