०१९ वनवासप्रतिज्ञा

वाचनम्
ಭಾಗಸೂಚನಾ

ಶ್ರೀರಾಮನು ಅರಣ್ಯಕ್ಕೆ ಹೋಗುವುದಾಗಿ ಕೈಕೆಯಿಗೆ ಹೇಳಿದುದು, ತಾಯಿಯಿಂದ ಅಪ್ಪಣೆ ಪಡೆಯಲು ಕೌಸಲ್ಯೆಯ ಬಳಿಗೆ ಹೋದುದು

ಮೂಲಮ್ - 1

ತದಪ್ರಿಯಮಮಿತ್ರಘ್ನೋ ವಚನಂ ಮರಣೋಪಮಮ್ ।
ಶ್ರುತ್ವಾ ನ ವಿವ್ಯಥೇ ರಾಮಃ ಕೈಕೇಯೀಂ ಚೇದಮಬ್ರವೀತ್ ॥

ಅನುವಾದ

ಆ ಅಪ್ರಿಯವಾದ ಹಾಗೂ ಮೃತ್ಯುವಿಗೆ ಸಮಾನವಾದ ಕಷ್ಟಕರ ಮಾತನ್ನು ಕೇಳಿಯೂ ಶತ್ರುಸೂದನ ಶ್ರೀರಾಮನು ವ್ಯಥಿತನಾಗಲಿಲ್ಲ. ಅವನು ಕೈಕೆಯ ಬಳಿ ಇಂತೆಂದನು.॥1॥

ಮೂಲಮ್ - 2

ಏವಮಸ್ತು ಗಮಿಷ್ಯಾಮಿ ವನಂ ವಸ್ತುಮಹಂ ತ್ವಿತಃ ।
ಜಟಾಚೀರಧರೋ ರಾಜ್ಞಃ ಪ್ರತಿಜ್ಞಾಮನುಪಾಲಯನ್ ॥

ಅನುವಾದ

ಅಮ್ಮಾ! ನೀನು ಹೇಳಿದಂತೆ ಆಗಲಿ. ನಾನು ಮಹಾರಾಜರ ಪ್ರತಿಜ್ಞೆಯನ್ನು ಪಾಲಿಸಲಿಕ್ಕಾಗಿ ಜಟಾ-ವಲ್ಕಲಗಳನ್ನು ಧರಿಸಿ ವನವಾಸಕ್ಕಾಗಿ ಅವಶ್ಯವಾಗಿ ಹೋಗುವೆನು.॥2॥

ಮೂಲಮ್ - 3

ಇದಂ ತು ಜ್ಞಾತುಮಿಚ್ಛಾಮಿ ಕಿಮರ್ಥಂ ಮಾಂ ಮಹೀಪತಿಃ ।
ನಾಭಿನಂದತಿ ದುರ್ಧರ್ಷೋ ಯಥಾಪೂರ್ವಮರಿಂದಮಃ ॥

ಅನುವಾದ

ಆದರೆ ಇಂದು ದುರ್ಜಯನೂ, ಶತ್ರುದಮನನೂ ಆದ ಮಹಾರಾಜರು ಮೊದಲಿನಂತೆ ನನ್ನಲ್ಲಿ ಸಂತೋಷವಾಗಿ ಏಕೆ ಮಾತನಾಡುವುದಿಲ್ಲ? ಇದನ್ನು ನಾನು ತಿಳಿಯಲು ಬಯಸುತ್ತಿರುವೆನು.॥3॥

ಮೂಲಮ್ - 4

ಮನ್ಯುರ್ನ ಚ ತ್ವಯಾ ಕಾರ್ಯೋದೇವಿ ಬ್ರೂಮಿ ತವಾಗ್ರತಃ ।
ಯಾಸ್ಯಾಮಿ ಭವ ಸುಪ್ರೀತಾ ವನಂ ಚೀರಜಟಾಧರಃ ॥

ಅನುವಾದ

ದೇವಿ! ನಾನು ನಿಮ್ಮಲ್ಲಿ ಹೀಗೆ ಕೇಳಿದೆನೆಂದು ನೀವು ಸಿಟ್ಟಾಗಬಾರದು. ಖಂಡಿತವಾಗಿ ನಾನು ಜಟಾ, ವಲ್ಕಲಗಳನ್ನು ಧರಿಸಿ ವನಕ್ಕೆ ಹೋಗುವೆನು. ನೀವು ಪ್ರಸನ್ನರಾಗಬೇಕು.॥4॥

ಮೂಲಮ್ - 5

ಹಿತೇನ ಗುರುಣಾ ಪಿತ್ರಾ ಕೃತಜ್ಞೇನ ನೃಪೇಣ ಚ ।
ನಿಯುಜ್ಯಮಾನೋ ವಿಸ್ರಬ್ಧಃ ಕಿಂ ನ ಕುರ್ಯಾಮಹಂ ಪ್ರಿಯಮ್ ॥

ಅನುವಾದ

ಮಹಾರಾಜರು ನನಗೆ ಹಿತೈಷೀ, ಗುರು, ತಂದೆ ಮತ್ತು ಕೃತಜ್ಞನಾಗಿದ್ದಾನೆ. ಇವರು ಆಜ್ಞಾಪಿಸಿದಾಗ ನಾನು ನಿಃಶಂಕವಾಗಿ ಮಾಡದಿರುವ ಪ್ರಿಯಕಾರ್ಯ ಯಾವುದಿದೆ.॥5॥

ಮೂಲಮ್ - 6

ಅಲೀಕಂ ಮಾನಸಂ ತ್ವೇಕಂ ಹೃದಯಂ ದಹತೇ ಮಮ ।
ಸ್ವಯಂ ಯನ್ನಾಹ ಮಾಂ ರಾಜಾ ಭರತಸ್ಯಾಭಿಷೇಚನಮ್ ॥

ಅನುವಾದ

ಆದರೆ ಸ್ವಯಂ ಮಹಾರಾಜರು ನನ್ನ ಬಳಿ ಭರತನ ಪಟ್ಟಾಭಿಷೇಕದ ಮಾತನ್ನು ಹೇಳಲಿಲ್ಲವಲ್ಲ! ಎಂಬುದೇ ನನ್ನ ಮನಸ್ಸಿನಲ್ಲಿ ಹಾರ್ದಿಕವಾದ ದುಃಖವು ಕಾಡುತ್ತಿದೆ.॥6॥

ಮೂಲಮ್ - 7

ಅಹಂ ಹಿ ಸೀತಾಂ ರಾಜ್ಯಂ ಚ ಪ್ರಾಣಾನಿಷ್ಟಾನ್ ಧನಾನಿ ಚ ।
ಹೃಷ್ಟೋ ಭ್ರಾತ್ರೇ ಸ್ವಯಂ ದದ್ಯಾಂ ಭರತಾಯ ಪ್ರಚೋದಿತಃ ॥

ಅನುವಾದ

ನಾನು ಕೇವಲ ನಿಮ್ಮ ಮಾತಿನಂತೆಯೂ ನನ್ನ ತಮ್ಮ ಭರತನಿಗೆ ರಾಜ್ಯವನ್ನು, ಸೀತೆಯನ್ನು, ಪ್ರಿಯ ಪ್ರಾಣಗಳನ್ನು ಹಾಗೂ ಎಲ್ಲ ಸಂಪತ್ತನ್ನು ಕೂಡ ಸಂತೋಷವಾಗಿಯೇ ಕೊಡಬಲ್ಲೆನು.॥7॥

ಮೂಲಮ್ - 8

ಕಿಂ ಪುನರ್ಮನುಜೇಂದ್ರೇಣ ಸ್ವಯಂ ಪಿತ್ರಾ ಪ್ರಚೋದಿತಃ ।
ತವ ಚ ಪ್ರಿಯಕಾಮಾರ್ಥಂ ಪ್ರತಿಜ್ಞಾಮನುಪಾಲಯನ್ ॥

ಅನುವಾದ

ಹಾಗಿರುವಾಗ ಸ್ವತಃ ನನ್ನ ತಂದೆ ಮಹಾರಾಜರೇ ಆಜ್ಞಾಪಿಸಿದರೆ, ಹಾಗೂ ಅದೂ ನಿನ್ನ ಪ್ರಿಯ ಕಾರ್ಯ ಮಾಡುವುದಕ್ಕಾಗಿಯಾದರೂ ಪ್ರತಿಜ್ಞಾ ಪಾಲನೆಯ ಅವರ ಕಾರ್ಯವನ್ನು ಏಕೆ ಮಾಡಲಾರೆನು.॥8॥

ಮೂಲಮ್ - 9

ತಥಾಶ್ವಾಸಯ ಹ್ರೀಮಂತಂ ಕಿಂ ತ್ವಿದಂ ಯನ್ಮಹೀಪತಿಃ ।
ವಸುಧಾಸಕ್ತನಯನೋ ಮಂದಮಶ್ರೂಣಿ ಮುಂಚತಿ ॥

ಅನುವಾದ

ನೀವು ನನ್ನ ಕಡೆಯಿಂದ ವಿಶ್ವಾಸ ಕೊಡಿಸಿ ಈ ಲಜ್ಜಾಶೀಲ ಮಹಾರಾಜರಿಗೆ ಆಶ್ವಾಸನೆ ಕೊಡಿರಿ. ಈ ಪೃಥಿವೀ ಪಾಲಕರು ನೆಲವನ್ನು ನೋಡಿ ಏಕೆ ಕಣ್ಣೀರು ಸುರಿಸುತ್ತಿರುವರು.॥9॥

ಮೂಲಮ್ - 10

ಗಚ್ಛಂತು ಚೈವಾನಯಿತುಂ ದೂತಾಃ ಶೀಘ್ರಜವೈರ್ಹಯೈಃ ।
ಭರತಂ ಮಾತುಲಕುಲಾದದ್ಯೈವ ನೃಪಶಾಸನಾತ್ ॥

ಅನುವಾದ

ಇಂದೇ ಮಹಾರಾಜರ ಆಜ್ಞೆಯಂತೆ ಶೀಘ್ರಗಾಮಿ ದೂತರು ಅಶ್ವಾರೂಢರಾಗಿ ಹೋಗಿ ಭರತನನ್ನು ಮಾವನ ಮನೆಯಿಂದ ಕರೆತರಲು ಕಳಿಸಲಾಗುವುದು.॥10॥

ಮೂಲಮ್ - 11

ದಂಡಕಾರಣ್ಯಮೇಷೋಽಹಂ ಗಚ್ಛಾಮ್ಯೇವಹಿ ಸತ್ವರಃ ।
ಅವಿಚಾರ್ಯ ಪಿತುರ್ವಾಕ್ಯಂ ಸಮಾ ವಸ್ತುಂ ಚತುರ್ದಶ ॥

ಅನುವಾದ

ನಾನು ಈಗ ತಂದೆಯ ಮಾತಿನ ಕುರಿತು ಯಾವುದೇ ವಿಚಾರ ಮಾಡದೆ ಹದಿನಾಲ್ಕು ವರ್ಷ ವನದಲ್ಲಿ ವಾಸಿಸಲು ಕೂಡಲೇ ದಂಡಕಾರಣ್ಯಕ್ಕೆ ಹೋಗುವೆನು.॥11॥

ಮೂಲಮ್ - 12

ಸಾ ಹೃಷ್ಟಾ ತಸ್ಯತದ್ವಾಕ್ಯಂ ಶ್ರುತ್ವಾ ರಾಮಸ್ಯ ಕೇಕಯೀ ।
ಪ್ರಸ್ಥಾನಂ ಶ್ರದ್ದಧಾನಾ ಸಾ ತ್ವರಯಾಮಾಸ ರಾಘವಮ್ ॥

ಅನುವಾದ

ಶ್ರೀರಾಮನ ಈ ಮಾತನ್ನು ಕೇಳಿ ಕೈಕೆಯಿಗೆ ಬಹಳ ಸಂತೋಷವಾಯಿತು. ಇವನು ಕಾಡಿಗೆ ಹೋಗುವನು ಎಂಬ ವಿಶ್ವಾಸ ಅವಳಿಗುಂಟಾಯಿತು. ಆದ್ದರಿಂದ ಶ್ರೀರಾಮನು ಬೇಗನೇ ಹೋಗುವಂತೆ ಪ್ರೇರೇಪಿಸುವಂತೆ ಇಂತೆಂದಳು.॥12॥

ಮೂಲಮ್ - 13

ಏವಂ ಭವತು ಯಾಸ್ಯಂತಿ ದೂತಾಃ ಶೀಘ್ರಜವೈರ್ಹಯೈಃ ।
ಭರತಂ ಮಾತುಲಕುಲಾದಿಹಾವರ್ತಯಿತುಂ ನರಾಃ ॥

ಅನುವಾದ

ರಾಮನೇ! ನೀನು ಸರಿಯಾಗಿ ಹೇಳಿದೆ, ಹಾಗೆಯೇ ಆಗಬೇಕು. ಮಾವನ ಮನೆಯಿಂದ ಭರತನನ್ನು ಕರೆತರಲು ದೂತರು ಶೀಘ್ರಗಾಮಿ ಕುದುರೆಯನ್ನೇರಿ ಅವಶ್ಯವಾಗಿ ಹೋಗುವರು.॥13॥

ಮೂಲಮ್ - 14

ತವ ತ್ವಹಂ ಕ್ಷಮಂ ಮನ್ಯೇ ನೋತ್ಸುಕಸ್ಯ ವಿಲಂಬನಮ್ ।
ರಾಮ ತಸ್ಮಾದಿತಃ ಶೀಘ್ರಂವನಂ ತ್ವಂ ಗಂತುಮರ್ಹಸಿ ॥

ಅನುವಾದ

ಆದರೆ ರಾಮಾ! ನೀನು ಕಾಡಿಗೆ ಹೋಗಲು ಸ್ವತಃ ಉತ್ಸುಕನಾಗಿರುವಂತೆ ಕಾಣುತ್ತದೆ. ಆದ್ದರಿಂದ ಇನ್ನು ತಡ ಮಾಡುವುದು ಸರಿಯಲ್ಲ. ಎಷ್ಟು ಬೇಗ ಆಗುವುದೋ ಅಷ್ಟು ಬೇಗ ವನಕ್ಕೆ ಹೊರಟುಹೋಗಬೇಕು.॥14॥

ಮೂಲಮ್ - 15

ವ್ರೀಡಾನ್ವಿತಃ ಸ್ವಯಂ ಯಚ್ಛ ನೃಪಸ್ತ್ವಾಂ ನಾಭಿಭಾಷತೇ ।
ನೈತತ್ ಕಿಂಚನ್ನರಶ್ರೇಷ್ಠ ಮನ್ಯುರೇಷೋಪನೀಯತಾಮ್ ॥

ಅನುವಾದ

ನರಶ್ರೇಷ್ಠನೇ! ಮಹಾರಾಜರು ಲಜ್ಜಿತವಾದ್ದರಿಂದ ನಿನ್ನಲ್ಲಿ ಹೇಳಲೊಲ್ಲರು, ಇದೇನು ವಿಚಾರಣೀಯ ಮಾತಲ್ಲ. ಆದ್ದರಿಂದ ಈ ಕುರಿತಾದ ದುಃಖವನ್ನು ಮನಸ್ಸಿನಿಂದ ತೆಗೆದು ಹಾಕು.॥15॥

ಮೂಲಮ್ - 16

ಯಾವತ್ತ್ವಂ ನ ವನಂ ಯಾತಃ ಪುರಾದಸ್ಮಾದತಿತ್ವರಮ್ ।
ಪಿತಾ ತಾವನ್ನ ತೇ ರಾಮ ಸ್ನಾಸ್ಯತೇ ಭೋಕ್ಷ್ಯತೇಽಪಿ ವಾ ॥

ಅನುವಾದ

ಶ್ರೀರಾಮಾ! ನೀನು ಅವಸರವಾಗಿ ಈ ನಗರದಿಂದ ಹೊರಟು ಹೋಗುವ ತನಕ ನಿನ್ನ ತಂದೆಯವರು ಸ್ನಾನ ಅಥವಾ ಭೋಜನ ಮಾಡಲಾರರು.॥16॥

ಮೂಲಮ್ - 17

ದಿಕ್ಕಷ್ಟಮಿತಿ ನಿಃಶ್ವಸ್ಯ ರಾಜಾ ಶೋಕಪರಿಪ್ಲುತಃ ।
ಮೂರ್ಛಿತೋ ನ್ಯಪತತ್ತಸ್ಮಿನ್ ಪರ್ಯಂಕೇ ಹೇಮಭೂಷಿತೇ ॥

ಅನುವಾದ

ಕೈಕೆಯಿಯ ಈ ಮಾತನ್ನು ಕೇಳಿ ಶೋಕದಲ್ಲಿ ಮುಳುಗಿದ ದಶರಥನು ದೀರ್ಘವಾಗಿ ನಿಟ್ಟುಸಿರುಬಿಡುತ್ತಾ ‘ಧಿಕ್ಕಾರ- ಧಿಕ್ಕಾರ! ಅಯ್ಯೋ! ಶಿವ ಶಿವಾ!’ ಎಂದು ಹೇಳುತ್ತಾ ಮೂರ್ಛಿತನಾಗಿ ಸ್ವರ್ಣಭೂಷಿತ ಮಂಚದಲ್ಲಿ ಬಿದ್ದುಬಿಟ್ಟನು.॥17॥

ಮೂಲಮ್ - 18

ರಾಮೋಽಪ್ಯುತ್ಥಾಪ್ಯ ರಾಜಾನಂ ಕೈಕೇಯ್ಯಾಭಿಪ್ರಚೋದಿತಃ ।
ಕಶಯೇವ ಹತೋವಾಜೀ ವನಂ ಗಂತುಂ ಕೃತತ್ವರಃ ॥

ಅನುವಾದ

ಆಗ ಶ್ರೀರಾಮನು ರಾಜನನ್ನು ಎಬ್ಬಿಸಿ ಕುಳ್ಳಿರಿಸಿದನು ಹಾಗೂ ಕೈಕೆಯಿಯಿಂದ ಪ್ರೇರಿತವಾಗಿ ಚಾವಟಿ ಏಟು ತಿಂದ ಕುದುರೆಯಂತೆ ಥಟ್ಟನೆ ಎದ್ದು ಕಾಡಿಗೆ ಹೋಗಲು ಅವಸರಪಡಿಸಿದನು.॥18॥

ಮೂಲಮ್ - 19

ತದಪ್ರಿಯಮನಾರ್ಯಾಯಾ ವಚನಂ ದಾರುಣೋದಯಮ್ ।
ಶ್ರುತ್ವಾ ಗತವ್ಯಥೋ ರಾಮಃ ಕೈಕೇಯೀಂ ವಾಕ್ಯಮಬ್ರವೀತ್ ॥

ಅನುವಾದ

ಅನಾರ್ಯಳಾದ ಕೈಕೆಯಿಯ ಆ ಅಪ್ರಿಯ ಹಾಗೂ ದಾರುಣ ಮಾತನ್ನು ಕೇಳಿಯೂ ಶ್ರೀರಾಮನ ಮನಸ್ಸಿಗೆ ದುಃಖವಾಗಲಿಲ್ಲ. ಅವನು ಕೈಕೆಯಿಯ ಬಳಿ ಹೇಳಿದನು.॥19॥

ಮೂಲಮ್ - 20

ನಾಹಮರ್ಥಪರೋ ದೇವಿ ಲೋಕಮಾವಸ್ತುಮುತ್ಸಹೇ ।
ವಿದ್ಧಿ ಮಾಮೃಷಿಭಿಸ್ತುಲ್ಯಂ ವಿಮಲಂ ಧರ್ಮಮಾಸ್ಥಿತಮ್ ॥

ಅನುವಾದ

ದೇವಿ! ನಾನು ಧನದ ಉಪಾಸಕನಾಗಿ ಜಗತ್ತಿನಲ್ಲಿ ಇರಲು ಬಯಸುವುದಿಲ್ಲ. ನೀವು ವಿಶ್ವಾಸವಿಡಿರಿ. ನಾನೂ ಋಷಿಗಳಂತೆ ನಿರ್ಮಲ ಧರ್ಮವನ್ನು ಆಶ್ರಯಿಸಿರುವೆನು.॥20॥

ಮೂಲಮ್ - 21

ಯದತ್ರಭವತಃ ಕಿಂಚಿಚ್ಛಕ್ಯಂ ಕರ್ತುಂ ಪ್ರಿಯಂ ಮಯಾ ।
ಪ್ರಾಣಾನಪಿ ಪರಿತ್ಯಜ್ಯ ಸರ್ವಥಾ ಕೃತಮೇವ ತತ್ ॥

ಅನುವಾದ

ಪೂಜ್ಯರಾದ ತಂದೆಯವರ ಪ್ರಿಯಕಾರ್ಯವನ್ನು ನಾನು ಮಾಡಬಲ್ಲೆ, ಅದನ್ನು ಪ್ರಾಣಗಳನ್ನು ಒತ್ತೆಯಿಟ್ಟಾದರೂ ಮಾಡುವೆನು. ಅದು ನನ್ನಿಂದ ನಡೆಯಿತೆಂದೇ ತಿಳಿಯಿರಿ.॥21॥

ಮೂಲಮ್ - 22

ನ ಹ್ಯತೋ ಧರ್ಮಚರಣಂ ಕಿಂಚಿದಸ್ತಿ ಮಹತ್ತರಮ್ ।
ಯಥಾ ಪಿತರಿ ಶುಶ್ರೂಷಾ ತಸ್ಯ ವಾ ವಚನಚಕ್ರಿಯಾ ॥

ಅನುವಾದ

ತಂದೆಯ ಸೇವೆ ಅಥವಾ ಅವರ ಆಜ್ಞಾಪಾಲನೆ ಮಾಡುವುದೇ ಮಹತ್ವಪೂರ್ಣ ಧರ್ಮವಾಗಿದೆ. ಅದಕ್ಕಿಂತ ಮಿಗಿಲಾದ ಧರ್ಮಾಚರಣೆ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ.॥22॥

ಮೂಲಮ್ - 23

ಅನುಕ್ತೋಽಪ್ಯತ್ರಭವತಾ ಭವತ್ಯಾ ವಚನಾದಹಮ್ ।
ವನೇ ವತ್ಸ್ಯಾಮಿವಿಜನೇ ವರ್ಷಾಣೀಹ ಚತುದರ್ಶ ॥

ಅನುವಾದ

ಪೂಜ್ಯ ತಂದೆಯವರು ಸ್ವತಃ ನನ್ನಲ್ಲಿ ಹೇಳದಿದ್ದರೂ ನೀವು ಹೇಳುವುದರಿಂದ ನಾನು ಹದಿನಾಲ್ಕು ವರ್ಷಗಳ ಕಾಲ ನಿರ್ಜನ ವನದಲ್ಲಿ ವಾಸಿಸುವೆನು.॥23॥

ಮೂಲಮ್ - 24

ನ ನ್ಯೂನಂ ಮಯಿ ಕೈಕೇಯಿ ಕಿಂಚಿದಾಶಂಸಸೇ ಗುಣಾನ್ ।
ಯದ್ರಾಜಾನಮವೋಚಸ್ತ್ವಂ ಮಮೇಶ್ವರತರಾ ಸತೀ ॥

ಅನುವಾದ

ಕೈಕೆಯಮ್ಮ! ನಿಮಗೆ ನನ್ನ ಮೇಲೆ ಪೂರ್ಣ ಅಧಿಕಾರವಿದೆ. ನಾನು ನಿಮ್ಮ ಪ್ರತಿಯೊಂದು ಆಜ್ಞೆಯನ್ನು ಪಾಲಿಸಬಲ್ಲೆನು. ಹೀಗಿದ್ದರೂ ನೀವು ಸ್ವತಃ ನನ್ನಲ್ಲಿ ಹೇಳದೆ ಈ ಕಾರ್ಯಕ್ಕಾಗಿ ಮಹಾರಾಜರಲ್ಲಿ ಹೇಳಿ ಅವರಿಗೆ ಕಷ್ಟಕೊಟ್ಟೆ. ಇದರಿಂದ ನೀವು ನನ್ನಲ್ಲಿ ಯಾವ ಗುಣವನ್ನೂ ನೋಡಿಲ್ಲ ಎಂದು ಅನಿಸುತ್ತದೆ.॥24॥

ಮೂಲಮ್ - 25

ಯಾವನ್ಮಾತರಮಾಪೃಚ್ಛೇ ಸೀತಾಂ ಚಾನುನಯಾಮ್ಯಹಮ್ ।
ತತೋಽದ್ಯೈವ ಗಮಿಷ್ಯಾಮಿ ದಂಡಕಾನಾಂ ಮಹದ್ವನಮ್ ॥

ಅನುವಾದ

ಸರಿ, ಈಗ ನಾನು ಮಾತೆ ಕೌಸಲ್ಯೆಯಿಂದ ಆಜ್ಞೆ ಪಡೆದು, ಸೀತೆಯನ್ನು ಸಮಜಾಯಿಷಿ, ಬಳಿಕ ಇಂದೇ ವಿಶಾಲವಾದ ದಂಡಕಾರಣ್ಯಕ್ಕಾಗಿ ಹೊರಡುವೆನು.॥25॥

ಮೂಲಮ್ - 26

ಭರತಃ ಪಾಲಯೇದ್ರಾಜ್ಯಂ ಶುಶ್ರೂಷೇಚ್ಚ ಪಿತುರ್ಯಥಾ ।
ತಥಾ ಭವತ್ಯಾ ಕರ್ತವ್ಯಂ ಸ ಹಿ ಧರ್ಮಃ ಸನಾತನಃ ॥

ಅನುವಾದ

ಅಮ್ಮಾ! ಭರತನು ಈ ರಾಜ್ಯವನ್ನು ಪಾಲಿಸುತ್ತಾ ತಂದೆಯ ಸೇವೇ ಮಾಡುತ್ತಾ ಇರುವಂತೆ ನೀವು ಪ್ರಯತ್ನಿಸಿರಿ; ಏಕೆಂದರೆ ಇದೇ ಸನಾತನ ಧರ್ಮವಾಗಿದೆ.॥26॥

ಮೂಲಮ್ - 27

ರಾಮಸ್ಯ ತು ವಚಃ ಶ್ರುತ್ವಾ ಭೃಶಂ ದುಃಖಗತಃ ಪಿತಾ ।
ಶೋಕಾದಶಕ್ನುವನ್ ವಕ್ತುಂ ಪ್ರರುರೋದ ಮಹಾಸ್ವನಮ್ ॥

ಅನುವಾದ

ಶ್ರೀರಾಮನ ಈ ಮಾತನ್ನು ಕೇಳಿ ತಂದೆಗೆ ಬಹಳ ದುಃಖವಾಯಿತು. ದಶರಥನು ಶೋಕದ ಆವೇಗದಿಂದ ಏನನ್ನೂ ಮಾತನಾಡದಾದನು, ಕೇವಲ ಬಿಕ್ಕಿ-ಬಿಕ್ಕಿ ಅಳುತ್ತಾ ಇದ್ದನು.॥27॥

ಮೂಲಮ್ - 28

ವಂದಿತ್ವಾ ಚರಣೌ ರಾಜ್ಞೋ ವಿಸಂಜ್ಞಸ್ಯ ಪಿತುಸ್ತದಾ ।
ಕೈಕೇಯ್ಯಾಶ್ಚಾಪ್ಯನಾರ್ಯಾಯಾ ನಿಷ್ಪಪಾತ ಮಹಾದ್ಯುತಿಃ ॥

ಅನುವಾದ

ಮಹಾತೇಜಸ್ವೀ ಶ್ರೀರಾಮನು ಆಗ ನಿಶ್ಚೇಷ್ಟಿತನಾಗಿ ಬಿದ್ದಿರುವ ದಶರಥನ ಹಾಗೂ ಅನಾರ್ಯ ಕೈಕೆಯಿಯ ಚರಣಗಳಿಗೆ ನಮಸ್ಕರಿಸಿ ಆ ಭವನದಿಂದ ಹೊರಟನು.॥28॥

ಮೂಲಮ್ - 29

ಸ ರಾಮಃ ಪಿತರಂ ಕೃತ್ವಾ ಕೈಕೆಯೀಂ ಚ ಪ್ರದಕ್ಷಿಣಮ್ ।
ನಿಷ್ಕ್ರಮ್ಯಾಂತಃಪುರಾತ್ ತಸ್ಮಾತ್ಸ್ವಂ ದದರ್ಶ ಸುಹೃಜ್ಜನಮ್ ॥

ಅನುವಾದ

ತಂದೆ ದಶರಥ ಮತ್ತು ತಾಯಿ ಕೈಕೆಯಿಗೆ ಪ್ರದಕ್ಷಿಣೆ ಬಂದು ಆ ಅಂತಃಪುರದಿಂದ ಹೊರಗೆ ಹೊರಟು ಶ್ರೀರಾಮನು ತನ್ನ ಸುಹೃದರನ್ನು ಭೆಟ್ಟಿಯಾದನು.॥29॥

ಮೂಲಮ್ - 30

ತಂ ಬಾಷ್ಪಪರಿಪೂರ್ಣಾಕ್ಷಃ ಪೃಷ್ಠತೋಽನುಜಗಾಮ ಹ ।
ಲಕ್ಷ್ಮಣಃ ಪರಮಕ್ರುದ್ಧಃ ಸುಮಿತ್ರಾನಂದವರ್ಧನಃ ॥

ಅನುವಾದ

ಸುಮಿತ್ರಾನಂದ ವರ್ಧನನಾದ ಲಕ್ಷ್ಮಣನು ಆ ಅನ್ಯಾಯವನ್ನು ನೋಡಿ ಅತ್ಯಂತ ಕುಪಿತನಾಗಿದ್ದರೂ, ಎರಡೂ ಕಣ್ಣುಗಳಿಂದ ನೀರು ಸುರಿಸುತ್ತಾ ಮೌನವಾಗಿ ಶ್ರೀರಾಮಚಂದ್ರನ ಹಿಂದೆ ಹಿಂದೆ ಹೊರಟನು.॥30॥

ಮೂಲಮ್ - 31

ಅಭಿಷೇಚನಿಕಂ ಭಾಂಡಂ ಕೃತ್ವಾ ರಾಮಃ ಪ್ರದಕ್ಷಿಣಮ್ ।
ಶನೈರ್ಜಗಾಮ ಸಾಪೇಕ್ಷೋ ದೃಷ್ಟಿಂ ತತ್ರಾವಿಚಾಲಯನ್ ॥

ಅನುವಾದ

ಶ್ರೀರಾಮಚಂದ್ರನ ಮನಸ್ಸಿನಲ್ಲಿ ಈಗ ಕಾಡಿಗೆ ಹೋಗುವ ಆಕಾಂಕ್ಷೆ ಉಂಟಾಗಿತ್ತು; ಆದ್ದರಿಂದ ಅಭಿಷೇಕಕ್ಕಾಗಿ ಸಿದ್ಧಪಡಿಸಿದ್ದ ಸಾಮಗ್ರಿಗಳಿಗೆ ಪ್ರದಕ್ಷಿಣೆ ಬಂದು, ಅದರ ಕಡೆಗೆ ಕಣ್ಣೆತ್ತಿಯೂ ನೋಡದೆ ನಿಧಾನವಾಗಿ ಮುಂದೆ ನಡೆದನು.॥31॥

ಮೂಲಮ್ - 32

ನ ಚಾಸ್ಯ ಮಹತೀಂ ಲಕ್ಷ್ಮೀಂ ರಾಜ್ಯನಾಶೋಽಪಕರ್ಷತಿ ।
ಲೋಕಕಾಂತಸ್ಯ ಕಾಂತತ್ವಾಚ್ಛೀತರಶ್ಮೇರಿವ ಕ್ಷಯಃ ॥

ಅನುವಾದ

ಚಂದ್ರನು ಕ್ಷೀಣಿಸಿದರೂ ಅವನ ಸಹಜ ಶೋಭೆಯು ಕುಂದಿಹೋಗುವುದಿಲ್ಲ; ಹಾಗೆಯೇ ಶ್ರೀರಾಮನ ಸಹಜವಾದ ಮಹಾತೇಜಸ್ಸು ರಾಜ್ಯವು ಸಿಗದೇ ಇದ್ದುದರಿಂದ ಅವನ ಮುಖವು ಕಾಂತಿಹೀನವಾಗಲಿಲ್ಲ.॥32॥

ಮೂಲಮ್ - 33

ನ ವನಂ ಗಂತುಕಾಮಸ್ಯ ತ್ಯಜತಶ್ಚ ವಸುಂಧರಾಮ್ ।
ಸರ್ವಲೋಕಾತಿಗಸ್ಯೇವ ಲಕ್ಷ್ಯತೇ ಚಿತ್ತವಿಕ್ರಿಯಾ ॥

ಅನುವಾದ

ಶ್ರೀರಾಮನು ಕಾಡಿಗೆ ಹೋಗಲು ಉತ್ಸುಕನಾಗಿದ್ದನು ಹಾಗೂ ಎಲ್ಲ ಪೃಥಿವಿಯ ರಾಜ್ಯವನ್ನು ಬಿಡುತ್ತಿದ್ದನು; ಹೀಗಿದ್ದರೂ ಅವನ ಚಿತ್ತದಲ್ಲಿ ಸರ್ವಲೋಕಾತೀತ ಜೀವನ್ಮುಕ್ತ ಮಹಾತ್ಮರಂತೆ ಯಾವುದೇ ವಿಕಾರ ಕಂಡುಬರಲಿಲ್ಲ.॥33॥

ಮೂಲಮ್ - 34

ಪ್ರತಿಷಿಧ್ಯ ಶುಭಂ ಛತ್ರಂ ವ್ಯಜನೇ ಚ ಸ್ವಲಂಕೃತೇ ।
ವಿಸರ್ಜಯಿತ್ವಾ ಸ್ವಜನಂ ರಥಂ ಪೌರಾಂಸ್ತಥಾ ಜನಾನ್ ॥

ಮೂಲಮ್ - 35

ಧಾರಯನ್ಮನಸಾ ದುಃಖಮಿಂದ್ರಿಯಾಣಿ ನಿಗೃಹ್ಯ ಚ ।
ಪ್ರವಿವೇಶಾತ್ಮನಾನ್ ವೇಶ್ಮ ಮಾತುರಪ್ರಿಯಶಂಸಿವಾನ್ ॥

ಅನುವಾದ

ಶ್ರೀರಾಮನು ತನ್ನ ಮೇಲೆ ಹಿಡಿದಿರುವ ಛತ್ರವನ್ನು ಬದಿಗಿರಿಸಿದನು. ಸುಸಜ್ಜಿತ ಚಾಮರ ಬೀಸುವುದನ್ನು ತಡೆದನು. ಅವನು ರಥವನ್ನು ಹಿಂದಕ್ಕೆ ಕಳಿಸಿ, ಸ್ವಜನರನ್ನು ಹಾಗೂ ಪುರವಾಸಿಗಳನ್ನು ಬೀಳ್ಕೊಟ್ಟನು. ಆತ್ಮೀಯ ಜನರ ಅಗಲುವಿಕೆಯ ದುಃಖವನ್ನು ಮನಸ್ಸಿನಲ್ಲೇ ಅದುಮಿ, ಇಂದ್ರಿಯಗಳನ್ನು ಹತೋಟಿಯಲ್ಲಿರಿಸಿಕೊಂಡು ಈ ಅಪ್ರಿಯ ಸಮಾಚಾರವನ್ನು ತಿಳಿಸಲು ಮಾತೆ ಕೌಸಲ್ಯೆಯ ಭವನಕ್ಕೆ ಹೋದನು. ಆಗ ಅವನು ಮನಸ್ಸನ್ನು ಪೂರ್ಣವಾಗಿ ವಶಪಡಿಸಿಕೊಂಡಿದ್ದನು.॥34-35॥

ಮೂಲಮ್ - 36

ಸರ್ವೋಪ್ಯಭಿಜನಃ ಶ್ರೀಮಾನ್ ಶ್ರೀಮತಃ ಸತ್ಯವಾದಿನಃ ।
ನಾಲಕ್ಷಯತ ರಾಮಸ್ಯ ಕಂಚಿದಾಕಾರಮಾನನೇ ॥

ಅನುವಾದ

ಸತ್ಯವಾದೀ ಶ್ರೀಮಾನ್ ರಾಮನ ಬಳಿಯಲ್ಲೇ ಇರುತ್ತಿದ್ದ ಶೋಭಾಶಾಲಿ ಮನುಷ್ಯರು ಕೂಡ ಅವನ ಮುಖದಲ್ಲಿ ಯಾವುದೇ ವಿಕಾರವನ್ನು ನೋಡಲಿಲ್ಲ.॥36॥

ಮೂಲಮ್ - 37

ಉಚಿತಂ ಚ ಮಹಾಬಾಹುರ್ನ ಜಹೌ ಹರ್ಷಮಾತ್ಮವಾನ್ ।
ಶಾರದಃ ಸಮುದೀರ್ಣಾಂಶುಶ್ಚಂದ್ರಸ್ತೇಜ ಇವಾತ್ಮಜಮ್ ॥

ಅನುವಾದ

ಮನಸ್ಸನ್ನು ವಶಪಡಿಸಿಕೊಂಡು ಮಹಾಬಾಹು ಶ್ರೀರಾಮನು ತನ್ನ ಸ್ವಾಭಾವಿಕ ಪ್ರಸನ್ನತೆಯನ್ನು ಶರತ್ಕಾಲದ ಉದ್ದೀಪ್ತ ಕಿರಣಗಳುಳ್ಳ ಚಂದ್ರನು ತನ್ನ ಸಹಜ ತೇಜವನ್ನು ತ್ಯಜಿಸದಂತೆ ಬಿಡಲಿಲ್ಲ.॥37॥

ಮೂಲಮ್ - 38

ವಾಚಾ ಮಧುರಯಾ ರಾಮಃ ಸರ್ವಂ ಸಂಮಾನಯಂಜನಮ್ ।
ಮಾತುಃ ಸಮೀಪಂ ಧರ್ಮಾತ್ಮಾ ಪ್ರವಿವೇಶ ಮಹಾಯಶಾಃ ॥

ಅನುವಾದ

ಮಹಾಯಶಸ್ವೀ ಧರ್ಮಾತ್ಮಾ ಶ್ರೀರಾಮನು ಮಧುರ ವಾಣಿಯಿಂದ ಎಲ್ಲ ಜನರನ್ನು ಸಮ್ಮಾನಿಸುತ್ತಾ ತನ್ನ ತಾಯಿಯ ಬಳಿಗೆ ಹೋದನು.॥38॥

ಮೂಲಮ್ - 39

ತಂ ಗುಣೈಃ ಸಮತಾಂ ಪ್ರಾಪ್ತೋ ಭ್ರಾತಾ ವಿಪುಲವಿಕ್ರಮಃ ।
ಸೌಮಿತ್ರಿರನುವವ್ರಾಜ ಧಾರಯನ್ ದುಃಖಮಾತ್ಮಜಮ್ ॥

ಅನುವಾದ

ಆಗ ಗುಣಗಳಲ್ಲಿ ಶ್ರೀರಾಮನಂತೆ ಇರುವ ಮಹಾ ಪರಾಕ್ರಮಿ ತಮ್ಮನಾದ ಸುಮಿತ್ರಾಕುಮಾರ ಲಕ್ಷ್ಮಣನೂ ಕೂಡ ತನ್ನ ಮಾನಸಿಕ ದುಃಖವನ್ನು ಮನಸ್ಸಿನಲ್ಲೇ ಅದುಮಿ ಹಿಡಿದು ಶ್ರೀರಾಮನ ಹಿಂದೆ-ಹಿಂದೆ ಹೋಗುತ್ತಿದ್ದನು.॥39॥

ಮೂಲಮ್ - 40

ಪ್ರವಿಶ್ಯ ವೇಶ್ಮಾತಿಭೃಶಂ ಮುದಾ ಯುತಂ
ಸಮೀಕ್ಷ್ಯ ತಾಂ ಚಾರ್ಥವಿಪತ್ತಿಮಾಗತಾಮ್ ।
ನ ಚೈವ ರಾಮೋಽತ್ರ ಜಗಾಮ ವಿಕ್ರಿಯಾಂ
ಸುಹೃಜ್ಜನಸ್ಯಾತ್ಮವಿಪತ್ತಿಶಂಕಯಾ॥

ಅನುವಾದ

ಅತ್ಯಂತ ಆನಂದದಿಂದ ತುಂಬಿದ ಆ ಭವನವನ್ನು ಪ್ರವೇಶಿಸಿ ಲೌಕಿಕ ದೃಷ್ಟಿಯಿಂದ ತನ್ನ ಅಭೀಷ್ಟ ಅರ್ಥದ ವಿನಾಶವಾದುದನ್ನು ನೋಡಿಯೂ, ಹಿತೈಷಿ, ಸುಹೃದರ ಮೇಲೆ ಬರುವ ಪ್ರಾಣಸಂಕಟದ ಆಶಂಕೆ ಇದ್ದರೂ ಶ್ರೀರಾಮನು ಅಲ್ಲಿ ತನ್ನ ಮುಖದಲ್ಲಿ ಯಾವುದೇ ವಿಕಾರಗಳನ್ನು ಪ್ರಕಟವಾಗಲು ಬಿಡಲಿಲ್ಲ.॥40॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಹತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥19॥