०१७ रामागमनम्

वाचनम्
ಭಾಗಸೂಚನಾ

ಶ್ರೀರಾಮನು ರಾಜಮಾರ್ಗದ ಸೊಬಗನ್ನು ನೋಡುತ್ತಾ, ಸುಹೃದಯರ ಪ್ರಿಯೋಕ್ತಿಗಳನ್ನು ಕೇಳುತ್ತಾ, ದಶರಥನ ಭವನವನ್ನು ಪ್ರವೇಶಿಸಿದನು

ಮೂಲಮ್ - 1

ಸ ರಾಮೋ ರಥಮಾಸ್ಥಾಯ ಸಂಪ್ರಹೃಷ್ಟಸುಹೃಜ್ಜನಃ ।
ಪತಾಕಾಧ್ವಜಸಂಪನ್ನಂ ಮಹಾರ್ಹಾಗುರುಧೂಪಿತಮ್ ॥

ಮೂಲಮ್ - 2½

ಅಪಶ್ಯನ್ನಗರಂ ಶ್ರೀಮನ್ನಾನಾಜನಸಮನ್ವಿತಮ್ ।
ಸ ಗೃಹೈರಭ್ರಸಂಕಾಶೈಃ ಪಾಂಡುರೈರುಪಶೋಭಿತಮ್ ॥
ರಾಜಮಾರ್ಗಂ ಯಯೌ ರಾಮೋಮಧ್ಯೇನಾಗುರುಧೂಪಿತಮ್ ।

ಅನುವಾದ

ಈ ಪ್ರಕಾರ ಶ್ರೀಮಾನ್ ರಾಮಚಂದ್ರನು ತನ್ನ ಸುಹೃದರನ್ನು ಆನಂದಗೊಳಿಸಿಸುತ್ತಾ, ರಥದಲ್ಲಿ ಕುಳಿತು ರಾಜಮಾರ್ಗದಲ್ಲಿ ಹೋಗುತ್ತಿರುವಾಗ ನೋಡುತ್ತಾನೆ-ಇಡೀ ನಗರವೆ ಧ್ವಜ-ಪತಾಕೆಗಳಿಂದ ಸುಶೋಭಿತವಾಗಿದೆ. ಎಲ್ಲೆಡೆ ಅಗರು ಧೂಪದ ಸುಗಂಧ ಪಸರಿಸಿದೆ. ಎಲ್ಲ ಕಡೆಗಳಲ್ಲಿ ಅಸಂಖ್ಯ ಮನುಷ್ಯರ ಗುಂಪುಗಳೇ ಕಂಡು ಬರುತ್ತವೆ. ಆ ರಾಜ ಮಾರ್ಗವು ಬಿಳಿಯ ಮೋಡಗಳಂತೆ ಉಜ್ವಲ ಭವನಗಳಿಂದ ಶೋಭಿಸುತ್ತಿದ್ದು, ಎಲ್ಲವು ಅಗರು ಸುಗಂಧದಿಂದ ವ್ಯಾಪ್ತವಾಗಿದ್ದವು.॥1-2½॥

ಮೂಲಮ್ - 3

ಚಂದನಾನಾಂ ಚ ಮುಖ್ಯಾನಾಮಗುರೂಣಾಂ ಚ ಸಂಚಯೈಃ ॥

ಮೂಲಮ್ - 4

ಉತ್ತಮಾನಾಂ ಚ ಗಂಧಾನಾಂ ಕ್ಷೌಮಕೌಶಾಂಬರಸ್ಯ ಚ ।
ಅವಿದ್ಧಾಭಿಶ್ಚ ಮುಕ್ತಾಭಿಮರುತ್ತಮೈಃ ಸ್ಫಾಟಿಕೈರಪಿ ॥

ಮೂಲಮ್ - 5

ಶೋಭಮಾನಮಸಂಬಾಧಂ ತಂ ರಾಜಪಥಮುತ್ತಮಮ್ ।
ಸಂವೃತಂ ವಿವಿಧೈಃ ಪುಷ್ಪೈರ್ಭಕ್ಷೈರುಚ್ಚಾವಚೈರಪಿ ॥

ಮೂಲಮ್ - 6½

ದದರ್ಶ ತಂ ರಾಜಪಥಂ ದಿವಿ ದೇವಪತಿರ್ಯಥಾ ।
ದಧ್ಯಕ್ಷತಹವಿರ್ಲಾಜೈರ್ಧೂಪೈರಗುರುಚಂದನೈಃ ॥
ನಾನಾಮಾಲ್ಯೋಪಗಂಧೈಶ್ಚ ಸದಾಭ್ಯರ್ಚಿತಚತ್ವರಮ್ ।

ಅನುವಾದ

ಶ್ರೇಷ್ಠವಾದ ಚಂದನಗಳ ಮತ್ತು ಅಗರುಗಳ ರಾಶಿಗಳಿಂದಲೂ, ಶ್ರೇಷ್ಠವಾದ ನಾನಾ ವಿಧವಾದ ಗಂಧಗಳ ರಾಶಿಗಳಿಂದಲೂ, ದುಕೂಲಗಳ ಹಾಗೂ ರೇಷ್ಮೆವಸ್ತ್ರಗಳ ರಾಶಿಗಳಿಂದಲೂ, ಅಲ್ಲಲ್ಲಿ ತೂಗುಹಾಕಿದ್ದ ಮುತ್ತುಗಳ ಮತ್ತು ಸ್ಫಟಿಕ ಮಣಿಗಳ ಗೊಂಚಲಗಳಿಂದಲೂ ಶೋಭಾಯಮಾನವಾಗಿ ಕಾಣುತ್ತಿದ್ದ ವಿಧ-ವಿಧವಾದ ಪುಷ್ಪಗಳಿಂದಲೂ ನಾನಾ ಬಗೆಯ ಭಕ್ಷ್ಯಗಳ ರಾಶಿಗಳಿಂದಲೂ ಸಮಾವೃತವಾಗಿದ್ದ, ಯಾವುದೇ ಅಡೆ-ತಡೆಗಳಿಲ್ಲದ ಶ್ರೇಷ್ಠವಾದ ರಾಜ ಬೀದಿಯನ್ನು-ದೇವಲೋಕದ ರಾಜಮಾರ್ಗವನ್ನು ದೇವೇಂದ್ರನು ನೋಡುವಂತೆಯೇ ಶ್ರೀರಾಮನು ನೋಡಿದನು.॥3-6½॥

ಮೂಲಮ್ - 7½

ಆಶೀರ್ವಾದಾನ್ ಬಹೂನ್ ಶೃಣ್ವನ್ ಬಹುದ್ಭಿಃ ಸಮುದೀರಿತಾನ್ ॥
ಯಥಾರ್ಹಂ ಚಾಪಿ ಸಂಪೂಜ್ಯ ಸರ್ವಾನೇವನರಾನ್ ಯಯೌ ।

ಅನುವಾದ

ಶ್ರೀರಾಮನು ತನ್ನ ಸಹೃದಯರು ಹೇಳುತ್ತಿದ್ದ ಅನೇಕ ಆಶೀರ್ವಾದಾತ್ಮಕ ಮಾತುಗಳನ್ನು ಕೇಳುತ್ತಾ, ಯಥಾ ಯೋಗ್ಯವಾಗಿ ಅವರೆಲ್ಲರನ್ನು ಸಮ್ಮಾನಿಸುತ್ತಾ ಮುಂದುವರಿಯುತ್ತಿದ್ದನು.॥7½॥

ಮೂಲಮ್ - 8½

ಪಿತಾಮಹೈರಾಚರಿತಂ ತಥೈವ ಪ್ರಪಿತಾಮಹೈಃ ॥
ಅದ್ಯೋಪಾದಾಯ ತಂಮಾರ್ಗಮಭಿಷಿಕ್ತೋಽನುಪಾಲಯ ।

ಅನುವಾದ

ರಾಮನ ಹಿತೈಷಿಗಳು ಈ ಪ್ರಕಾರ ಹೇಳುತ್ತಾ ಇದ್ದರು - ರಘುನಂದನ! ನಿನ್ನ ಪಿತಾಮಹ-ಪ್ರಪಿತಾಮಹ ಆಚರಿಸುತ್ತಾ ಬಂದ ಧರ್ಮಮಾರ್ಗವನ್ನೇ ಅಂಗೀಕರಿಸಿ ಯುವರಾಜನಾಗಿ ಪಟ್ಟಾಭಿಷಿಕ್ತನಾಗಿ ನಮ್ಮೆಲ್ಲರನ್ನು ನಿರಂತರ ಪಾಲಿಸು.॥8½॥

ಮೂಲಮ್ - 9

ಯಥಾ ಸ್ಮ ಪೋಷಿತಾಃ ಪಿತ್ರಾ ಯಥಾ ಸರ್ವೈಃ ಪಿತಾಮಹೈಃ ।
ತತಃ ಸುಖತರಂ ಸರ್ವೇ ರಾಮೇ ವತ್ಸ್ಯಾಮ ರಾಜನಿ ॥

ಅನುವಾದ

ಅವರು ಪರಸ್ಪರ ಮಾತನಾಡಿಕೊಳ್ಳುವರು-ಸಹೋದರರೆ! ಶ್ರೀರಾಮನ ತಂದೆ ದಶರಥನಿಂದಲೂ, ಪಿತಾಮಹರಿಂದಲೂ ನಮ್ಮೆಲ್ಲರ ಪಾಲನೆ-ಪೋಷಣೆ ಆಗಿದೆ; ಆದರೆ ಶ್ರೀರಾಮನು ರಾಜನಾದರೆ ನಾವು ಅದಕ್ಕಿಂತಲು ಹೆಚ್ಚು ಸುಖವಾಗಿ ಇರುವೆವು.॥9॥

ಮೂಲಮ್ - 10

ಅಲಮದ್ಯ ಹಿ ಭುಕ್ತೇನ ಪರಮಾರ್ಥೈರಲಂ ಚ ನಃ ।
ಯದಿ ಪಶ್ಯಾಮ ನಿರ್ಯಾಂತಂ ರಾಮಂ ರಾಜ್ಯೇ ಪ್ರತಿಷ್ಠಿತಮ್ ॥

ಅನುವಾದ

ರಾಜನಾಗಿ ಪ್ರತಿಷ್ಠಿತನಾದ ಶ್ರೀರಾಮನು ಅರಮನೆಯಿಂದ ಹೊರಗೆ ಬಂದಾಗ ನಾವು ನೋಡಿದರೆ, ರಾಜಾ ರಾಮನ ದರ್ಶನ ಪಡೆದರೆ, ಇನ್ನು ನಮಗೆ ಇಹಲೋಕದ ಭೋಗದಿಂದಾಗಲೀ, ಪರಮಾರ್ಥಸ್ವರೂಪ ಮೋಕ್ಷದಿಂದಾಗಲೀ ಏನಾಗಬೇಕಿದೆ.॥10॥

ಮೂಲಮ್ - 11

ತತೋ ಹಿ ನಃ ಪ್ರಿಯತರಂ ನಾನ್ಯತ್ ಕಿಂಚಿದ್ಭವಿಷ್ಯತಿ ।
ಯಥಾಭಿಷೇಕೋ ರಾಮಸ್ಯ ರಾಜ್ಯೇನಾಮಿತತೇಜಸಃ ॥

ಅನುವಾದ

ಅಮಿತ ತೇಜಸ್ವಿ ಶ್ರೀರಾಮನ ಪಟ್ಟಾಭಿಷೇಕವಾದರೆ ಅವನು ನಮಗಾಗಿ ಮಾಡುವ ಪ್ರಿಯಕಾರ್ಯಕ್ಕಿಂತ ಮಿಗಿಲಾಗಿ ಪ್ರಿಯಕಾರ್ಯವನ್ನು ಬೇರೆ ಯಾರೂ ಮಾಡಲಾರರು.॥11॥

ಮೂಲಮ್ - 12

ಏತಾಶ್ಚಾನ್ಯಾಶ್ಚ ಸುಹೃದಾಮುದಾಸೀನಃ ಶುಭಾಃ ಕಥಾಃ
ಆತ್ಮಸಂಪೂಜನೀಃ ಶೃಣ್ವನ್ ಯಯೌ ರಾಮೋ ಮಹಾಪಥಮ್ ॥

ಅನುವಾದ

ಸುಹೃದಯರು ಆಡುತ್ತಿದ್ದ ಇಂತಹ ಮಾತುಗಳನ್ನು ಹಾಗೂ ಇದೇ ರೀತಿಯ ಪ್ರಶಂಸೆಯ ಸುಂದರ ಮಾತುಗಳನ್ನು ಕೇಳುತ್ತಾ ಶ್ರೀರಾಮಚಂದ್ರನು ರಥಾರೂಢನಾಗಿ ರಾಜಬೀದಿಯಲ್ಲಿ ಹೋಗುತ್ತಾ ಇದ್ದನು.॥12॥

ಮೂಲಮ್ - 13

ನ ಹಿ ತಸ್ಮಾನ್ಮನಃ ಕಶ್ಚಿಚ್ಚಕ್ಷುಷೀ ವಾ ನರೋತ್ತಮಾತ್ ।
ನರಃ ಶಕ್ನೋತ್ಯಪಾಕ್ರಷ್ಟುಮತಿಕ್ರಾಂತೇಽಪಿ ರಾಘವೇ ॥

ಅನುವಾದ

ಶ್ರೀರಾಮನನ್ನು ಒಮ್ಮೆ ನೋಡಿದವನು ಮತ್ತೆ-ಮತ್ತೆ ನೋಡುತ್ತಾ ಇರುತ್ತಿದ್ದನು. ಶ್ರೀರಘುನಾಥನು ದೂರಕ್ಕೆ ಹೋದರೂ ಆ ಪುರುಷೋತ್ತಮನ ಕಡೆಯಿಂದ ತಮ್ಮ ಕಣ್ಮನಗಳನ್ನು ಯಾರೂ ಹೊರಳಿಸುತ್ತಿರಲಿಲ್ಲ.॥13॥

ಮೂಲಮ್ - 14

ಯಶ್ಚ ರಾಮಂ ನ ಪಶ್ಯೇತ್ತು ಯಂ ಚ ರಾಮೋ ನ ಪಶ್ಯತಿ ।
ನಿಂದಿತಃ ಸರ್ವಲೋಕೇಷು ಸ್ವಾತ್ಮಾಪ್ಯೇನಂ ವಿಗರ್ಹತೇ ॥

ಅನುವಾದ

ಆಗ ಶ್ರೀರಾಮನನ್ನು ನೋಡದವರು ಮತ್ತು ಶ್ರೀರಾಮನು ಯಾರನ್ನು ನೋಡಲಿಲ್ಲವೋ ಅವನು ಜನರಲ್ಲಿ ನಿಂದಿತನೆಂದು ತಿಳಿಯುತ್ತಿದ್ದನು ಹಾಗೂ ಸ್ವತಃ ಅಂತರಾತ್ಮವು ಧಿಕ್ಕರಿಸುತಿತ್ತು.॥14॥

ಮೂಲಮ್ - 15

ಸರ್ವೇಷು ಸ ಹಿ ಧರ್ಮಾತ್ಮಾ ವರ್ಣಾನಾಂ ಕುರುತೇ ದಯಾಮ್ ।
ಚತುರ್ಣಾಂ ಹಿ ವಯಃಸ್ಥಾನಾಂ ತೇನ ತೇ ಸಮನುವ್ರತಾಃ ॥

ಅನುವಾದ

ಧರ್ಮಾತ್ಮನಾದ ಶ್ರೀರಾಮನು ನಾಲ್ಕು ವರ್ಣದ ಎಲ್ಲ ಜನರ ಮೇಲೆ ಅವರ ವಯಸ್ಸಿಗೆ ಅನುಸಾರ ದಯೆ ತೋರುತ್ತಿದ್ದನು. ಅದಕ್ಕಾಗಿ ಅವರೆಲ್ಲರೂ ಶ್ರೀರಾಮನ ಭಕ್ತರಾಗಿದ್ದರು.॥15॥

ಮೂಲಮ್ - 16

ಚತುಷ್ಪಥಾನ್ ದೇವಪಥಾಂಶ್ಚೈತ್ಯಾಂಶ್ಚಾಯತನಾನಿ ಚ ।
ಪ್ರದಕ್ಷಿಣಂ ಪರಿಹರಜ್ಜಗಾಮ ನೃಪತೇಃ ಸುತಃ ॥

ಅನುವಾದ

ರಾಜಕುಮಾರ ಶ್ರೀರಾಮನು ನಾಲ್ಕು ಮಾರ್ಗಗಳು ಸೇರುವ ಚೌಕಗಳನ್ನು, ಚೈತ್ಯವೃಕ್ಷಗಳನ್ನು, ಮಂದಿರಗಳನ್ನು ಬಲಪಾರ್ಶ್ವಕ್ಕೆ ಬಿಟ್ಟುಕೊಂಡು ಮುಂದೆ ಹೋಗುತ್ತಾ ಅರಮನೆಯ ಬಳಿಗೆ ಬಂದನು.॥16॥

ಮೂಲಮ್ - 17

ಸ ರಾಜಕುಲಮಾಸಾದ್ಯ ಮೇಘಸಂಘೋಪಮೈಃ ಶುಭೈಃ ।
ಪ್ರಾಸಾದಶೃಂಗೈರ್ವಿವಿಧೈಃ ಕೈಲಾಸಶಿಖರೋಪಮೈಃ ॥

ಮೂಲಮ್ - 18

ಆವಾರಯದ್ಭಿರ್ಗಗನಂ ವಿಮಾನೈರಿವ ಪಾಂಡುರೈಃ ।
ವರ್ಧಮಾನಗೃಹೈಶ್ಚಾಪಿ ರತ್ನಜಾಲಪರಿಷ್ಕೃತೈಃ ॥

ಮೂಲಮ್ - 19

ತತ್ ಪೃಥಿವ್ಯಾಂ ಗೃಹವರಂ ಮಹೇಂದ್ರಸದನೋಪಮಮ್ ।
ರಾಜಪುತ್ರಃ ಪಿತುರ್ವೇಶ್ಮ ಪ್ರವಿವೇಶ ಶ್ರಿಯಾ ಜ್ವಲನ್ ॥

ಅನುವಾದ

ದಶರಥ ರಾಜನ ಅರಮನೆಯು ಮೇಘಸಮೂಹದಂತೆ ಶೋಭಿಸುವ ಸುಂದರವಾದ ಅನೇಕ ರೂಪ-ರಂಗಗಳುಳ್ಳ ಕೈಲಾಸ ಶಿಖರದಂತೆ ಎತ್ತರವಾದ ಪ್ರಾಸಾದಗಳಿಂದ ಸುಶೋಭಿತವಾಗಿತ್ತು. ಅವುಗಳಲ್ಲಿ ರತ್ನಜಾಲರಿಗಳಿಂದ ವಿಭೂಷಿತ ಹಾಗು ವಿಮಾನ ಆಕಾರದ ಶ್ವೇತ ವರ್ಣದಿಂದ ಪ್ರಕಾಶಿಸುವ ಕ್ರೀಡಾಗೃಹಗಳಿದ್ದವು. ಅವು ಆಕಾಶವನ್ನೇ ಮುಟ್ಟುವವೋ ಎಂಬಂತೆ ಕಂಡುಬರುತ್ತಿದ್ದವು. ಇಂತಹ ಸೌಧಗಳಿಂದ ಕೂಡಿದ್ದು ಆ ಶ್ರೇಷ್ಠ ಅರಮನೆಯು ಭೂವಿಯಲ್ಲಿನ ಇಂದ್ರ ಸದನದಂತೆ ಶೋಭಿಸುತ್ತಿತ್ತು. ಆ ಅರಮನೆಯ ಬಳಿಗೆ ಹೋಗಿ, ತನ್ನ ಶೋಭೆಯಿಂದಲೇ ಪ್ರಕಾಶಿತನಾಗಿದ್ದ ರಾಜಕುಮಾರ ಶ್ರೀರಾಮನು ತಂದೆಯ ಭವನವನ್ನು ಪ್ರವೇಶಿಸಿದನು.॥17-19॥

ಮೂಲಮ್ - 20

ಸ ಕಕ್ಷ್ಯಾ ಧ್ವನಿಭಿರ್ಗುಪ್ತಾಸ್ತಿಸ್ರೋಽತಿಕ್ರಮ್ಯ ವಾಜಿಭಿಃ ।
ಪದಾತಿರಪರೇ ಕಕ್ಷ್ಯೇ ದ್ವೇ ಜಗಾಮ ನರೋತ್ತಮಃ ॥

ಅನುವಾದ

ಧನುರ್ಧರ ವೀರರಿಂದ ಸುರಕ್ಷಿತವಾದ ಭವನದ ಮೂರು ಹಜಾರಗಳನ್ನು ರಥದಲ್ಲಿ ಕುಳಿತೇ ದಾಟಿ, ಮುಂದಿನ ಎರಡು ಹಜಾರಗಳನ್ನು ಶ್ರೀರಾಮನು ಕಾಲ್ನಡಿಗೆಯಲ್ಲೇ ಪ್ರವೇಶಿಸಿದನು.॥20॥

ಮೂಲಮ್ - 21

ಸ ಸರ್ವಾಃ ಸಮತಿ ಕ್ರಮ್ಯ ಕಕ್ಷ್ಯಾ ದಶರಥಾತ್ಮಜಃ ।
ಸಂನಿವರ್ತ್ಯ ಜನಂ ಸರ್ವಂ ಶುದ್ಧಾಂತಃ ಪುರನತ್ಯಗಾತ್ ॥

ಅನುವಾದ

ಈ ಪ್ರಕಾರ ಎಲ್ಲ ಹಜಾರಗಳನ್ನು ದಾಟಿ ದಶರಥ ನಂದನ ಶ್ರೀರಾಮನು ಜೊತೆಗೆ ಬಂದ ಎಲ್ಲ ಜನರನ್ನು ಹಿಂದಕ್ಕೆ ಕಳಿಸಿ, ಸ್ವತಃ ಅಂತಃಪುರವನ್ನು ಹೊಕ್ಕನು.॥21॥

ಮೂಲಮ್ - 22

ತಸ್ಮಿನ್ ಪ್ರವಿಷ್ಟೇ ಪಿತುರಂತಿಕಂ ತದಾ
ಜನಃ ಸ ಸರ್ವೋ ಮುದಿತೋನೃಪಾತ್ಮಜೇ ।
ಪ್ರತೀಕ್ಷತೇ ತಸ್ಯ ಪುನಃ ಸ್ಮ ನಿರ್ಗಮಂ
ಯಥೋದಯಂ ಚಂದ್ರಮಸಃ ಸರಿತ್ಪತಿಃ ॥

ಅನುವಾದ

ರಾಜಕುಮಾರ ಶ್ರೀರಾಮನು ಪಿತನ ಬಳಿಗೆ ಹೋಗಲು ಅಂತಃಪುರವನ್ನು ಪ್ರವೇಶಿಸಿದಾಗ, ಆನಂದಮಗ್ನರಾದ ಎಲ್ಲ ಜನರು ಬಾಗಿಲಲ್ಲೆ ನಿಂತು ಅವನು ಪುನಃ ಹೊರಗೆ ಬರುವುದನ್ನು ನದೀಪತಿ ಸಮುದ್ರವು ಚಂದ್ರೋದಯವನ್ನು ಪ್ರತೀಕ್ಷಿಸುತ್ತಿರುವಂತೆ, ಪ್ರತೀಕ್ಷೆ ಮಾಡುತ್ತಿದ್ದರು.॥22॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಹದಿನೇಳನೆಯ ಸರ್ಗ ಪೂರ್ಣವಾಯಿತು.॥17॥