०१५ सुमन्त्रस्य रामगृहगमनम्

वाचनम्
ಭಾಗಸೂಚನಾ

ರಾಜಾಜ್ಞೆಯಂತೆ ಸುಮಂತ್ರನು ಶ್ರೀರಾಮನನ್ನು ಕರೆಯಲು ಅವನ ಭವನಕ್ಕೆ ಹೋದುದು

ಮೂಲಮ್ - 1

ತೇ ತು ತಾಂ ರಜನೀಮುಷ್ಯ ಬ್ರಾಹ್ಮಣಾ ವೇದಪಾರಗಾಃ ।
ಉಪತಸ್ಥುರುಪಸ್ಥಾನಂ ಸಹ ರಾಜಪುರೋಹಿತಾಃ ॥

ಅನುವಾದ

ರಾಜನ ಪ್ರೇರಣೆಯಂತೆ ಅನೇಕ ವೇದಪಾರಂಗತ ಬ್ರಾಹ್ಮಣರು, ಪುರೋಹಿತರು ಬೆಳಗಾಗುತ್ತಲೇ ರಾಜದ್ವಾರದಲ್ಲಿ ಬಂದು ಸೇರಿದ್ದರು.॥1॥

ಮೂಲಮ್ - 2

ಅಮಾತ್ಯಾ ಬಲಮುಖ್ಯಾಶ್ಚ ಮುಖ್ಯಾ ಯೇ ನಿಗಮಸ್ಯ ಚ ।
ರಾಘವಸ್ಯಾಭಿಷೇಕಾರ್ಥೇ ಪ್ರೀಯಮಾಣಾಃ ಸುಸಂಗತಾಃ ॥

ಅನುವಾದ

ಮಂತ್ರಿಗಳು, ಮುಖ್ಯ-ಮುಖ್ಯ ಸೈನ್ಯಾಧಿಕಾರಿಗಳು, ದೊಡ್ಡ-ದೊಡ್ಡ ವರ್ತಕರು ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಬಹಳ ಸಂತೋಷದಿಂದ ಅಲ್ಲಿ ನೆರೆದಿದ್ದರು.॥2॥

ಮೂಲಮ್ - 3

ಉದಿತೇ ವಿಮಲೇ ಸೂರ್ಯೇ ಪುಷ್ಯೇಚಾಭ್ಯಾಗತೇಽಹನಿ ।
ಲಗ್ನೇ ಕರ್ಕಾಟಕೇ ಪ್ರಾಪ್ತೇ ಜನ್ಮ ರಾಮಸ್ಯ ಚ ಸ್ಥಿತೇ ॥

ಮೂಲಮ್ - 4

ಅಭಿಷೇಕಾಯ ರಾಮಸ್ಯ ದ್ವಿಜೇಂದ್ರೈರುಪಕಲ್ಪಿತಮ್ ।
ಕಾಂಚನಾಜಲಕುಂಭಾಶ್ಚ ಭದ್ರಪೀಠಂ ಸ್ವಲಂಕೃತಮ್ ॥

ಮೂಲಮ್ - 5

ರಥಶ್ಚ ಸಮ್ಯಗಾಸ್ತೀರ್ಣೋ ಭಾಸ್ವತಾ ವ್ಯಾಘ್ರಚರ್ಮಣಾ ।
ಗಂಗಾಯಮುನಯೋಃ ಪುಣ್ಯಾತ್ಸಂಗಮಾದಾಹೃತಂ ಜಲಮ್ ॥

ಅನುವಾದ

ನಿರ್ಮಲ ಸೂರ್ಯೋದಯವಾಗಿ ಪುಷ್ಯ ನಕ್ಷತ್ರದ ಯೋಗ ಹಾಗೂ ಶ್ರೀರಾಮನ ಜನ್ಮ ಕರ್ಕಾಟಕ ಲಗ್ನ ಪ್ರಾಪ್ತವಾದಾಗ ಶ್ರೇಷ್ಠ ಬ್ರಾಹ್ಮಣರು ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಎಲ್ಲ ಸಾಮಗ್ರಿಗಳನ್ನು ಜೊತೆ ಸೇರಿಸಿ, ಸಿದ್ಧವಾಗಿ ಇರಿಸಿದ್ದರು. ಪುಣ್ಯಜಲದಿಂದ ತುಂಬಿದ ಸ್ವರ್ಣಕಲಶಗಳು, ಚೆನ್ನಾಗಿ ಅಲಂಕರಿಸಿದ ಭದ್ರಪೀಠ, ಹೊಳೆಯುತ್ತಿರುವ ವ್ಯಾಘ್ರ ಚರ್ಮವನ್ನು ಹೊದಿಸಿದ ದಿವ್ಯರಥ, ಗಂಗಾ-ಯಮುನಾ ಸಂಗಮದಿಂದ ತಂದ ಪವಿತ್ರಜಲ, ಹೀಗೆ ಎಲ್ಲ ವಸ್ತುಗಳನ್ನು ತಂದು ಅಣಿಗೊಳಿಸಿದ್ದರು.॥3-5॥

ಮೂಲಮ್ - 6

ಯಾಶ್ಚಾನ್ಯಾಃ ಸರಿತಃ ಪುಣ್ಯಾ ಹ್ರದಾಃ ಕೂಪಾಃ ಸರಾಂಸಿ ಚ
ಪ್ರಾಗ್ವಹಾಶ್ಚೋರ್ಧ್ವವಾಹಾಶ್ಚ ತಿರ್ಯಗ್ವಾಹಾಶ್ಚ ಕ್ಷೀರಿಣಃ ॥

ಮೂಲಮ್ - 7

ತಾಭ್ಯಶ್ಚೈವಾಹೃತಂ ತೋಯಂ ಸಮುದ್ರೇಭ್ಯಶ್ಚ ಸರ್ವಶಃ ।
ಕ್ಷೌದ್ರಂ ದಧಿ ಘೃತಂ ಲಾಜಾ ದರ್ಭಾಃಸುಮನಸಃ ಪಯಃ ॥

ಮೂಲಮ್ - 8½

ಅಷ್ಟೌ ಚ ಕನ್ಯಾ ರುಚಿರಾ ಮತ್ತಶ್ಚ ವರವಾರಣಃ ।
ಸಜಲಾಃ ಕ್ಷೀರಿಭಿಶ್ಛನ್ನಾ ಘಟಾಃ ಕಾಂಚನರಾಜತಾಃ ॥
ಪದ್ಮೋತ್ಪಲಯುತಾ ಭಾಂತಿ ಪೂರ್ಣಾಃ ಪರಮವಾರಿಣಾ ।

ಅನುವಾದ

ಇವುಗಳಲ್ಲದೆ ಇತರ ನದಿಗಳ, ಪವಿತ್ರಜಲಾಶಯಗಳ, ಬಾವಿ, ಸರೋವರಗಳ, ಪೂರ್ವಾಭಿಮುಖವಾಗಿ ಹರಿಯುವ ಗೋದಾವರೀ, ಕಾವೇರಿ ಮೊದಲಾದ ನದಿಗಳ, ಬ್ರಹ್ಮಾವರ್ತಾದಿ ಸರೋವರಗಳ, ದಕ್ಷಿಣೋತ್ತರವಾಗಿ ಹರಿಯುವ ಗಂಡಕೀ, ಶೋಣಭದ್ರಾ ಮುಂತಾದ ನದಿಗಳ, ಹಾಲಿನಂತೆ ನಿರ್ಮಲ ಜಲದಿಂದ ತುಂಬಿರುವ ಎಲ್ಲ ನದಿಗಳ, ಸಮುದ್ರ ಇವುಗಳಿಂದ ತಂದ ಜಲವನ್ನು ಸಂಗ್ರಹಿಸಿ ಅಲ್ಲಿ ಇಡಲಾಗಿತ್ತು. ಜೊತೆಗೆ ಹಾಲು, ಮೊಸರು, ತುಪ್ಪ, ಜೇನು, ಅರಳು, ಕುಶ, ಹೂವುಗಳು, ಎಂಟು ಮಂದಿ ಸುಂದರ ಕನ್ಯೆಯರು, ಪಟ್ಟದ ಆನೆ, ಕ್ಷೀರವೃಕ್ಷದ ಪಲ್ಲವಗಳಿಂದ ಅಲಂಕರಿಸಿದ ಚಿನ್ನ-ಬೆಳ್ಳಿಯ ನೀರು ತುಂಬಿದ ಕಲಶಗಳು ಕಮಲ ಮತ್ತು ನೀಲೋತ್ಪಲ ಪುಷ್ಪಗಳಿಂದ ಸಿಂಗರಿಸಿದ್ದ ಕಾರಣ ಬಹಳ ಶೋಭಿಸುತ್ತಿದ್ದವು.॥6-8½॥

ಮೂಲಮ್ - 9½

ಚಂದ್ರಾಂಶುವಿಕಚಪ್ರಖ್ಯಂ ಪಾಂಡುರಂ ರತ್ನಭೂಷಿತಮ್ ॥
ಸಜ್ಜಂ ತಿಷ್ಠತಿ ರಾಮಸ್ಯ ವಾಲವ್ಯಜನಮುತ್ತಮಮ್ ।

ಅನುವಾದ

ಶ್ರೀರಾಮನಿಗಾಗಿ ಚಂದ್ರಕಿರಣಗಳ ಕಾಂತಿಯಿಂದ ಕೂಡಿದ ಬಿಳಿಯ ಮತ್ತು ಹಳದಿ ವರ್ಣದ ರತ್ನಖಚಿತ ಉತ್ತಮ ಚಾಮರಗಳನ್ನು ಸುಸಜ್ಜಿತಗೊಳಿಸಿ ಇಟ್ಟಿದ್ದರು.॥9½॥

ಮೂಲಮ್ - 10½

ಚಂದ್ರಮಂಡಲಸಂಕಾಶಮಾತಪತ್ರಂ ಚ ಪಾಂಡುರಮ್ ॥
ಸಜ್ಜಂ ದ್ಯುತಿಕರಂ ಶ್ರೀಮದಭೀಷೇಕಪುರಸ್ಸರಮ್ ।

ಅನುವಾದ

ಚಂದ್ರಮಂಡಲದಂತೆ ಪ್ರಕಾಶಬೀರುವ, ಪರಮ ಸುಂದರ ಶ್ವೇತಚ್ಛತ್ರವು ಅಭಿಷೇಕದ ಸಾಮಗ್ರಿಗಳೊಂದಿಗೆ ಶೋಭಿಸುತ್ತಿತ್ತು.॥10½॥

ಮೂಲಮ್ - 11

ಪಾಂಡುರಶ್ಚ ವೃಷಃ ಸಜ್ಜಃ ಪಾಂಡುರಾಶ್ವಶ್ಚ ಸಂಸ್ಥಿತಃ ॥

ಅನುವಾದ

ಅಲಂಕೃತವಾದ ಬಿಳಿಯ ವೃಷಭ ಮತ್ತು ಉತ್ತಮ ಜಾತಿಯ ಬಿಳಿಯ ಕುದುರೆ ಇವೂ ಅಲ್ಲೇ ನಿಂತಿದ್ದವು.॥11॥

ಮೂಲಮ್ - 12

ವಾದಿತ್ರಾಣಿ ಚ ಸರ್ವಾಣಿ ವಂದಿನಶ್ಚ ತಥಾಪರೇ ।
ಇಕ್ಷ್ವಾಕೂಣಾಂ ಯಥಾ ರಾಜ್ಯೇ ಸಂಭ್ರಿಯೇತಾಭಿಷೇಚನಮ್ ॥

ಮೂಲಮ್ - 13

ತಥಾ ಜಾತೀಯಮಾದಾಯ ರಾಜಪುತ್ರಾಭಿಷೇಚನಮ್ ।
ತೇ ರಾಜವಚನಾತ್ ತತ್ರ ಸಮವೇತಾ ಮಹೀಪತಿಮ್ ॥

ಅನುವಾದ

ಎಲ್ಲ ರೀತಿಯ ವಾದ್ಯಗಾರರು ಸಿದ್ಧರಾಗಿದ್ದರು. ಸ್ತುತಿಪಾಠಕರಾದ ವಂದಿ ಮಾಗಧರೂ ಅಲ್ಲಿ ಉಪಸ್ಥಿತರಾಗಿದ್ದರು. ಇಕ್ಷ್ವಾಕು ವಂಶೀಯ ರಾಜರ ಪಟ್ಟಾಭಿಷೇಕಕ್ಕಾಗಿ ಯಾವ ರೀತಿಯ ಯೋಗ್ಯಸಾಮಗ್ರಿಗಳ ಸಂಗ್ರಹವಾಗಬೇಕಿತ್ತೋ, ಹಾಗೆಯೇ ರಾಜಕುಮಾರನ ಅಭಿಷೇಕದ ಸಾಮಗ್ರಿಯನ್ನು ಹಿಡಿದುಕೊಂಡು ಎಲ್ಲ ಜನರು ಮಹಾರಾಜ ದಶರಥನ ಅಪ್ಪಣೆಯಂತೆ ರಾಜನ ದರ್ಶನಕ್ಕಾಗಿ ಒಂದಾಗಿ ಸೇರಿದ್ದರು.॥12-13॥

ಮೂಲಮ್ - 14½

ಅಪಶ್ಯಂತೋಽಬ್ರುವನ್ಕೋನು ರಾಜ್ಞೋ ನಃ ಪ್ರತಿವೇದಯೇತ್ ।
ನ ಪಶ್ಯಾಮಶ್ಚ ರಾಜಾನಮುದಿತಶ್ಚ ದಿವಾಕರಃ ॥
ಯೌವರಾಜ್ಯಾಭಿಷೇಕಶ್ಚ ಸಜ್ಜೋ ರಾಮಸ್ಯ ಧೀಮತಃ ।

ಅನುವಾದ

ದ್ವಾರದಲ್ಲಿ ರಾಜನನ್ನು ನೋಡದಿರುವಾಗ ರಾಜರ ಬಳಿಗೆ ಹೋಗಿ ನಾವು ಬಂದಿರುವ ಸೂಚನೆಯನ್ನು ಯಾರು ಹೇಳುವರು? ಎಂದು ಅಂದುಕೊಂಡರು. ಮಹಾರಾಜರು ಇಲ್ಲಿ ಕಾಣುವುದಿಲ್ಲ. ಸೂರ್ಯೋದಯವಾಗಿ ಬುದ್ಧಿವಂತ ಶ್ರೀರಾಮನ ಪಟ್ಟಾಭಿಷೇಕದ ಎಲ್ಲ ಸಾಮಗ್ರಿಗಳು ಸಿದ್ಧವಾಗಿದೆ.॥14½॥

ಮೂಲಮ್ - 15½

ಇತಿ ತೇಷು ಭ್ರುವಾಣೇಷು ಸರ್ವಾಂಸ್ತಾಂಶ್ಚ ಮಹೀಪತೀನ್ ॥

ಅನುವಾದ

ಎಲ್ಲ ಜನರು ಹೀಗೆ ಮಾತನಾಡುತ್ತಿರುವಾಗಲೇ ರಾಜನಿಂದ ಸಮ್ಮಾನಿತನಾದ ಸುಮಂತ್ರನು ಅಲ್ಲಿ ನಿಂತಿರುವ ಎಲ್ಲ ಮಹೀಪತಿಗಳಲ್ಲಿ ಇಂತೆಂದನು.॥15½॥

ಮೂಲಮ್ - 16

ಅಬ್ರವೀತ್ತಾನಿದಂ ವಾಕ್ಯಂ ಸುಮಂತ್ರೋ ರಾಜಸತ್ಕೃತಃ ।
ರಾಮಂ ರಾಜ್ಞೋ ನಿಯೋಗೇನ ತ್ವರಯಾಪ್ರಸ್ಥಿತೋ ಹ್ಯಹಮ್ ॥

ಮೂಲಮ್ - 17

ಪೂಜ್ಯಾ ರಾಜ್ಞೋ ಭವಂತಶ್ಚ ರಾಮಸ್ಯ ತು ವಿಶೇಷತಃ ।
ಅಯಂ ಪೃಚ್ಛಾಮಿ ವಚನಾತ್ಸುಖಮಾಯುಷ್ಮತಾಮಹಮ್ ॥

ಅನುವಾದ

ನಾನು ಮಹಾರಾಜರ ಅಪ್ಪಣೆಯಂತೆ ಶ್ರೀರಾಮನನ್ನು ಕರೆತರಲು ಬೇಗನೇ ಹೋಗುತ್ತಿದ್ದೇನೆ. ನೀವೆಲ್ಲರೂ ಮಹಾರಾಜರ ಹಾಗೂ ವಿಶೇಷವಾಗಿ ಶ್ರೀರಾಮಚಂದ್ರನಿಗೆ ಪೂಜ್ಯರಾಗಿದ್ದೀರಿ. ನಾನು ಅವರ ಕಡೆಯಿಂದ ನಿಮ್ಮೆಲ್ಲರಲ್ಲಿ ಕ್ಷೇಮ ಸಮಾಚಾರವನ್ನು ಕೇಳುತ್ತಿದ್ದೇನೆ. ನೀವೆಲ್ಲರೂ ಸುಖವಾಗಿರುವಿರಿ ತಾನೇ.॥16-17॥

ಮೂಲಮ್ - 18

ರಾಜ್ಞಃ ಸಂಪ್ರತಿಬುದ್ಧಸ್ಯ ಚಾನಾಗಮನಕಾರಣಮ್ ।
ಇತ್ಯುಕ್ತ್ವಾಂತಃ ಪುರದ್ವಾರಮಾಜಗಾಮ ಪುರಾಣವಿತ್ ॥

ಅನುವಾದ

ಹೀಗೆ ಹೇಳಿ, ಎಚ್ಚರಗೊಂಡಿದ್ದರೂ ಮಹಾರಾಜರು ಹೊರಗೆ ಬಾರದಿರುವ ಕಾರಣವನ್ನು ತಿಳಿಸಿ, ಹಿಂದಿನ ವೃತ್ತಾಂತವನ್ನು ತಿಳಿದ ಸುಮಂತ್ರನು ಪುನಃ ಅಂತಃಪುರದ ಬಾಗಿಲಿಗೆ ಮರಳಿ ಬಂದನು.॥18॥

ಮೂಲಮ್ - 19

ಸದಾ ಸಕ್ತಂ ಚ ತದ್ವೇಶ್ಮ ಸುಮಂತ್ರಃ ಪ್ರವಿವೇಶ ಹ ।
ತುಷ್ಟಾವಾಸ್ಯ ತದಾ ವಂಶಂ ಪ್ರವಿಶ್ಯ ಸ ವಿಶಾಂಪತೇಃ ॥

ಅನುವಾದ

ಆ ರಾಜಭವನವು ಸುಮಂತ್ರನಿಗಾಗಿ ಸದಾ ತೆರೆದೇ ಇರುತ್ತಿತ್ತು. ಅವನು ಒಳಗೆ ಪ್ರವೇಶಿಸಿ ಮಹಾರಾಜರ ವಂಶವನ್ನು ಸ್ತುತಿಸತೊಡಗಿದನು.॥19॥

ಮೂಲಮ್ - 20½

ಶಯನೀಯಂ ನರೇಂದ್ರಸ್ಯ ತದಾಸಾದ್ಯ ವ್ಯತಿಷ್ಠತ ।
ಸೋಽತ್ಯಾಸಾದ್ಯ ತು ತದ್ವೇಶ್ಮ ತಿರಸ್ಕರಣಿಮಂತರಾ ॥
ಆಶೀರ್ಭಿಗುಣಯುಕ್ತಾಭಿರಭಿತುಷ್ಟಾವ ರಾಘವಮ್ ।

ಅನುವಾದ

ಅನಂತರ ಅವನು ರಾಜನ ಶಯನಗೃಹದ ಹತ್ತಿರ ಹೋಗಿ ನಿಂತುಕೊಂಡು ಗುಣವರ್ಣನಪೂರ್ವಕ ಆಶೀರ್ವಾದ ಸೂಚಕ ಮಾತುಗಳಿಂದ ರಘುಕುಲ ನರೇಶನನ್ನು ಸ್ತುತಿಸತೊಡಗಿದನು.॥20½॥

ಮೂಲಮ್ - 21½

ಸೋಮಸೂರ್ಯೌ ಚ ಕಾಕುತ್ಸ್ಥ ಶಿವವೈಶ್ರವಣಾವಪಿ ॥
ವರುಣಶ್ಚಾಗ್ನಿರಿಂದ್ರಶ್ಚ ವಿಜಯಂ ಪ್ರವಿಶಂತು ತೇ ।

ಅನುವಾದ

ಕಕುತ್ಥ್ಸನಂದನನೇ! ಸೂರ್ಯ, ಚಂದ್ರ, ಶಿವ, ಕುಬೇರ, ವರುಣ, ಅಗ್ನಿ, ಇಂದ್ರ ಇವರೆಲ್ಲರೂ ನಿಮಗೆ ವಿಜಯಕೊಡಲಿ.॥21½॥

ಮೂಲಮ್ - 22½

ಗತಾ ಭಗವತೀ ರಾತ್ರಿರಹಃ ಶಿವಮುಪಸ್ಥಿತಮ್ ॥
ಬುದ್ಧ್ಯಸ್ವ ರಾಜಶಾರ್ದೂಲ ಕುರು ಕಾರ್ಯಮನಂತರಮ್ ।

ಅನುವಾದ

ಭಗವತಿ ರಾತ್ರಿಯು ಸರಿದಳು. ಈಗ ಮಂಗಳಕರ ಬೆಳಗಾಗಿದೆ. ರಾಜಸಿಂಹನೇ! ನಿದ್ದೆ ಬಿಟ್ಟು ಎಚ್ಚರಗೊಳ್ಳಿರಿ. ಈಗ ಪ್ರಾಪ್ತವಾದ ಕಾರ್ಯವನ್ನು ನೇರವೇರಿಸಿರಿ.॥22½॥

ಮೂಲಮ್ - 23½

ಬ್ರಾಹ್ಮಣಾ ಬಲಮುಖ್ಯಾಶ್ಚ ನೈಗಮಾಶ್ಚಾಗತಾಸ್ತ್ವಿಹ ॥
ದರ್ಶನಂ ತೇಽಭಿಕಾಂಕ್ಷಂತೇ ಪ್ರತಿಬುಧ್ಯಸ್ವ ರಾಘವ ।

ಅನುವಾದ

ಬ್ರಾಹ್ಮಣರು, ಸೇನಾಪ್ರಮುಖರು, ದೊಡ್ಡ-ದೊಡ್ಡ ವ್ಯಾಪಾರಿಗಳು, ಇವರೆಲ್ಲರೂ ಇಲ್ಲಿಗೆ ಬಂದಿರುವರು. ಇವರೆಲ್ಲರೂ ತಮ್ಮ ದರ್ಶನವನ್ನು ಬಯಸುತ್ತಿರುವರು. ರಘುನಂದರೇ! ಎಚ್ಚರಗೊಳ್ಳಿರಿ.॥23½॥

ಮೂಲಮ್ - 24½

ಸ್ತುವಂತಂ ತಂ ತದಾ ಸೂತಂ ಸುಮಂತ್ರಂ ಮಂತ್ರಕೋವಿದಮ್ ॥
ಪ್ರತಿಬುಧ್ಯ ತತೋ ರಾಜಾ ಇದಂ ವಚನಮಬ್ರವೀತ್ ।

ಅನುವಾದ

ರಾಜನೀತಿಜ್ಞ ಕುಶಲ ಸೂತನಾದ ಸುಮಂತ್ರನು ಹೀಗೆ ಸ್ತುತಿಸತೊಡಗಿದಾಗ ರಾಜನು ಎಚ್ಚರಗೊಂಡು ಅವನಲ್ಲಿ ಇಂತೆಂದನು.॥24½॥

ಮೂಲಮ್ - 25

ರಾಮಮಾನಯ ಸೂತೇತಿ ಯದಸ್ಯಭಿಹಿತೋ ಮಯಾ ॥

ಮೂಲಮ್ - 26

ಕಿಮಿದಂ ಕಾರಣಂ ಯೇನ ಮಮಾಜ್ಞಾ ಪ್ರತಿವಾಹ್ಯತೇ ।
ನ ಚೈವ ಸಂಪ್ರಸುಪ್ತೋಽಹಮಾನಯೇಹಾಶು ರಾಘವಮ್ ॥

ಅನುವಾದ

ಸುಮಂತ್ರನೇ! ‘ಶ್ರೀರಾಮನನ್ನು ಕರೆದುಕೊಂಡು ಬಾ’ ಎಂದು ನಾನು ಹೇಳಿದುದನ್ನು ಏಕೆ ಪಾಲಿಸಲಿಲ್ಲ? ನನ್ನ ಆಜ್ಞೆಯನ್ನು ಉಲ್ಲಂಘಿಸುವ ಕಾರಣವಾದರೂ ಏನು? ನಾನು ಮಲಗಿಲ್ಲ. ನೀನು ಬೇಗನೇ ಶ್ರೀರಾಮನನ್ನು ಕರೆದುಕೊಂಡು ಬಾ.॥25-26॥

ಮೂಲಮ್ - 27

ಇತಿ ರಾಜಾ ದಶರಥಃ ಸೂತಂ ತತ್ರಾನ್ವಶಾತ್ಪುನಃ ।
ಸ ರಾಜವಚನಂ ಶ್ರುತ್ವಾ ಶಿರಸಾ ಪ್ರತಿಪೂಜ್ಯ ತಮ್ ॥

ಮೂಲಮ್ - 28

ನಿರ್ಜಗಾಮ ನೃಪಾವಾಸಾನ್ಮನ್ಯಮಾನಃ ಪ್ರಿಯಂ ಮಹತ್ ।
ಪ್ರಸನ್ನೋ ರಾಜಮಾರ್ಗಂ ಚ ಪತಾಕಾಧ್ವಜಶೋಭಿತಮ್ ॥

ಅನುವಾದ

ಈ ಪ್ರಕಾರ ದಶರಥನು ಸೂತನಲ್ಲಿ ಪುನಃ ಹೇಳಿದಾಗ, ಅವನು ರಾಜಾಜ್ಞೆಯನ್ನು ಶಿರಸಾವಹಿಸಿ, ಅದನ್ನು ಗೌರವಿಸಿ ರಾಜಭವನದಿಂದ ಹೊರಗೆ ಹೊರಟನು. ಅವನು ಮನಸ್ಸಿನಲ್ಲೇ ತನ್ನ ಮಹಾಪ್ರಿಯವಾಯಿತೆಂದು ತಿಳಿಯ ತೊಡಗಿದನು. ರಾಜಭವನದಿಂದ ಹೊರಟ ಸುಮಂತ್ರನು ಧ್ವಜ-ಪತಾಕೆಗಳಿಂದ ಶೋಭಿತವಾದ ರಾಜಬೀದಿಗೆ ಬಂದನು.॥27-28॥

ಮೂಲಮ್ - 29½

ಹೃಷ್ಟಃ ಪ್ರಮುದಿತಃ ಸೂತೋ ಜಾಗಮಾಶು ವಿಲೋಕಯನ್ ।
ಸ ಸೂತಸ್ತತ್ರ ಶುಶ್ರಾವ ರಾಮಾಧಿಕರಣಾಃ ಕಥಾಃ ॥
ಅಭಿಷೇಚನಸಂಯುಕ್ತಾ ಸರ್ವಲೋಕಸ್ಯ ಹೃಷ್ಟವತ್ ।

ಅನುವಾದ

ಸುಮಂತ್ರನು ಹರ್ಷೋಲ್ಲಾಸಗೊಂಡು ಸುತ್ತಲೂ ದೃಷ್ಟಿ ಬೀರುತ್ತಾ ಶೀಘ್ರವಾಗಿ ಮುಂದುವರಿದನು. ಸುಮಂತ್ರನು ದಾರಿಯಲ್ಲಿ ಎಲ್ಲ ಜನರ ಬಾಯಲ್ಲಿ ಶ್ರೀರಾಮನ ಪಟ್ಟಾಭಿಷೇಕದ ಆನಂದಮಯ ಮಾತುಗಳನ್ನೇ ಕೇಳುತ್ತಾ ಮುಂದೆ ಹೋಗುತ್ತಿದ್ದನು.॥29½॥

ಮೂಲಮ್ - 30

ತತೋ ದದರ್ಶ ರುಚಿರಂ ಕೈಲಾಸಸದೃಶಪ್ರಭಮ್ ॥

ಮೂಲಮ್ - 31

ರಾಮವೇಶ್ಮ ಸುಮಂತ್ರಸ್ತು ಶಕ್ರವೇಶ್ಮ ಸಮಪ್ರಭಮ್ ।
ಮಹಾಕವಾಟಪಿಹಿತಂ ವಿತರ್ದಿಶತಶೋಭಿತಮ್ ॥

ಅನುವಾದ

ಅನಂತರ ಸುಮಂತ್ರನಿಗೆ ಕೈಲಾಸ ಪರ್ವತದಂತೆ ಶುಭ್ರಪ್ರಭೆಯಿಂದ ಪ್ರಕಾಶಿಸುತ್ತಿದ್ದ, ಶ್ರೀರಾಮನ ಸುಂದರ ಭವನವು ಕಂಡು ಬಂತು. ಅದು ಇಂದ್ರಭವನದಂತೆ ಹೊಳೆಯುತ್ತಿತ್ತು. ಅದರ ವಿಶಾಲ ಮಹಾದ್ವಾರವು ಮುಚ್ಚಿಕೊಂಡಿದ್ದು, ಅದರಲ್ಲಿ ಸಣ್ಣದಾದ ಒಂದು ದ್ವಾರ ತೆರೆದುಕೊಂಡಿತ್ತು. ನೂರಾರು ವೇದಿಕೆಗಳು ಆ ಭವನದ ಶೋಭೆಯನ್ನು ಹೆಚ್ಚಿಸಿದ್ದವು.॥30-31॥

ಮೂಲಮ್ - 32

ಕಾಂಚನಪ್ರತಿಮೈಕಾಗ್ರಂ ಮಣಿವಿದ್ರುಮತೋರಣಮ್ ।
ಶಾರದಾಭ್ರಘನಪ್ರಖ್ಯಂ ದೀಪ್ತಂ ಮೇರುಗುಹಾಸಮಮ್ ॥

ಅನುವಾದ

ಅದರ ಪ್ರಧಾನ ಮುಂಬಾಗಿಲು ಬಂಗಾರದ ದೇವತಾ ಪ್ರತಿಮೆಗಳಿಂದ ಅಲಂಕೃತವಾಗಿತ್ತು. ಆ ಇಡೀ ಭವನವು ಶರದ್ ಋತುವಿನ ಮೇಘಗಳಂತೆ ಬೆಳ್ಳಗಿನ ಕಾಂತಿಯಿಂದ ಕೂಡಿ ದೇದೀಪ್ಯಮಾನ ಮೇರುಪರ್ವತದ ಗುಹೆಯಂತಿತ್ತು.॥32॥

ಮೂಲಮ್ - 33

ಮಣಿಭಿರ್ವರಮಾಲ್ಯಾನಾಂ ಸುಮಹದ್ಭಿರಲಂಕೃತಮ್ ।
ಮುಕ್ತಾಮಣಿಭಿರಾಕೀರ್ಣಂ ಚಂದನಾಗುರುಭೂಷಿತಮ್ ॥

ಅನುವಾದ

ಸುವರ್ಣನಿರ್ಮಿತ ಪುಷ್ಪಗಳ ಮೂಲೆಗಳಲ್ಲಿ ನಡು-ನಡುವೆ ಪೋಣಿಸಿದ ಅಮೂಲ್ಯ ಮಣಿಗಳಿಂದ ಕೂಡಿದ ಹಾರಗಳಿಂದ ಆ ಭವನವು ಅಲಂಕೃತವಾಗಿತ್ತು, ಗೋಡೆಗಳಲ್ಲಿ ಕೋದ ಮುಕ್ತಾಮಣಿಗಳಿಂದ ಹೊಳೆಯುತ್ತಿತ್ತು. ಮುತ್ತು ರತ್ನಗಳ ಭಂಡಾರವೇ ಎಲ್ಲೆಡೆ ತುಂಬಿತ್ತು. ಚಂದನ, ಅಗರುಗಳ ಸುಗಂಧದಿಂದ ಅದರ ಶೋಭೆ ಇನ್ನೂ ಹೆಚ್ಚಿತ್ತು.॥33॥

ಮೂಲಮ್ - 34

ಗಾಂಧಾನ್ಮನೋಜ್ಞಾನ್ ವಿಸೃಜದ್ದಾರ್ದುರಂ ಶಿಖರಂ ಯಥಾ ।
ಸಾರಸೈಶ್ಚ ಮಯೂರೈಶ್ಚ ವಿನದದ್ಭಿರ್ವಿರಾಜಿತಮ್ ॥

ಅನುವಾದ

ಆ ಭವನದಲ್ಲಿ ಮಲಯಾಚಲದ ದುರ್ದರ ಎಂಬ ಚಂದನಗಿರಿ ಶಿಖರದಂತೆ ಎಲ್ಲೆಡೆ ಮನೋಹರ ಸುಗಂಧವು ಹರಡಿಕೊಂಡಿತ್ತು. ಸಾರಸ, ಮಯೂರವೇ ಮೊದಲಾದ ಪಕ್ಷಿಗಳ ಕಲರವದಿಂದ ಅದರ ಶೋಭೆ ಇಮ್ಮಡಿಯಾಗಿತ್ತು.॥34॥

ಮೂಲಮ್ - 35

ಸುಕೃತೇಹಾಮೃಗಾಕೀರ್ಣಮುತ್ಕೀರ್ಣಂ ಭಕ್ತಿಭಿಸ್ತಥಾ ।
ಮನಶ್ಚಕ್ಷುಶ್ಚ ಭೂತಾನಾಮಾದದತ್ತಿಗ್ಮತೇಜಸಾ ॥

ಅನುವಾದ

ಸ್ವರ್ಣವೇ ಮೊದಲಾದ ಧಾತುಗಳಿಂದ ಸುಂದರವಾಗಿ ನಿರ್ಮಿಸಿದ ತೋಳಗಳೇ ಮೊದಲಾದ ಮೂರ್ತಿಗಳಿಂದ ಅದು ಆವರಿಸಿತ್ತು. ಶಿಲ್ಪಿಗಳು ಅದರ ಗೋಡೆಗಳಲ್ಲಿ ಮನೋಹರ ಚಿತ್ತಾರಗಳನ್ನು ಕೆತ್ತಿದ್ದರು. ಅದು ತನ್ನ ಉತ್ಕೃಷ್ಟ ಶೋಭೆಯಿಂದ ಸಮಸ್ತ ಪ್ರಾಣಿಗಳ ಕಣ್ಮನಗಳನ್ನು ಆಕರ್ಷಿಸುತ್ತಿತ್ತು.॥35॥

ಮೂಲಮ್ - 36

ಚಂದ್ರಭಾಸ್ಕರಸಂಕಾಶಂ ಕುಬೇರಭವನೋಪಮಮ್ ।
ಮಹೇಂದ್ರಧಾಮಪ್ರತಿಮಂ ನಾನಾಪಕ್ಷಿಸಮಾಕುಲಮ್ ॥

ಅನುವಾದ

ಚಂದ್ರ-ಸೂರ್ಯರಂತೆ ತೇಜಸ್ವೀ, ಕುಬೇರನ ಭವನದಂತೆ ಅಕ್ಷಯ ಸಂಪತ್ತಿನಿಂದ ಪೂರ್ಣ ಹಾಗೂ ಇಂದ್ರಧಾಮದಂತೆ ಭವ್ಯ ಮತ್ತು ಮನೋಹರವಾದ ಆ ಶ್ರೀರಾಮಭವನದಲ್ಲಿ ನಾನಾ ವಿಧದ ಪಕ್ಷಿಗಳು ತುಂಬಿದ್ದವು.॥36॥

ಮೂಲಮ್ - 37

ಮೇರುಶೃಂಗಸಮಂ ಸೂತೋ ರಾಮವೇಶ್ಮ ದದರ್ಶ ಹ ।
ಉಪಸ್ಥಿತೈಃ ಸಮಾಕೀರ್ಣಂ ಜನೈರಂಜಲಿಕಾರಿಭಿಃ ॥

ಅನುವಾದ

ಶ್ರೀರಾಮಭವನವು ಮೇರು ಪರ್ವತದ ಶಿಖರದಂತೆ ಶೋಭಿಸುತ್ತಿತ್ತು. ಶ್ರೀರಾಮನಿಗೆ ಕೈಮುಗಿದು ವಂದಿಸಲು ಬಂದಿರುವ ಅಸಂಖ್ಯ ಜನರಿಂದ ತುಂಬಿಹೋದ ಅದನ್ನು ಸುಮಂತ್ರನು ನೋಡಿದನು.॥37॥

ಮೂಲಮ್ - 38

ಉಪಾದಾಯ ಸಮಾಕ್ರಾಂತೈಸ್ತದಾ ಜಾನಪದೈರ್ಜನೈಃ ।
ರಾಮಾಭಿಷೇಕಸುಮುಖೈರುನ್ಮುಖೈಃ ಸಮಲಂಕೃತಮ್ ॥

ಅನುವಾದ

ಬಗೆ-ಬಗೆಯ ಉಡುಗೊರೆಗಳನ್ನೆತ್ತಿಕೊಂಡು ಪ್ರಜಾ ಜನರು ಅಲ್ಲಿ ನೆರೆದಿದ್ದರು. ಶ್ರೀರಾಮನ ಪಟ್ಟಾಭಿಷೇಕದ ಸಮಾಚಾರ ಕೇಳಿ ಅವರ ಮುಖಗಳು ಅರಳಿದ್ದವು, ಅವರು ಆ ಉತ್ಸವವನ್ನು ನೋಡಲು ಉತ್ಕಂಠಿತರಾಗಿದ್ದರು. ಅವರೆಲ್ಲರ ಉಪಸ್ಥಿತಿಯಿಂದ ಆ ಭವನವು ಶೋಭಿಸುತ್ತಿತ್ತು.॥38॥

ಮೂಲಮ್ - 39

ಮಹಾಮೇಘಸಮಪ್ರಖ್ಯಮುದಗ್ರಂ ಸುವಿರಾಜಿತಮ್ ।
ನಾನಾರತ್ನ ಸಮಾಕೀರ್ಣಂ ಕುಬ್ಜಕೈರಪಿ ಚಾವೃತಮ್ ॥

ಅನುವಾದ

ಆ ವಿಶಾಲ ಭವನವು ಮಹಾಮೇಘ ಖಂಡದಂತೆ ಎತ್ತರವಾಗಿ, ಸುಂದರವಾಗಿ ಶೋಭಾ ಸಂಪನ್ನವಾಗಿತ್ತು. ಅದರ ಗೋಡೆಗಳಲ್ಲಿ ನಾನಾ ವಿಧದ ರತ್ನಗಳನ್ನು ಜೋಡಿಸಿದ್ದರು ಮತ್ತು ಕುಳ್ಳರಾದ ಸೇವಕರಿಂದ ಅದು ತುಂಬಿಹೋಗಿತ್ತು.॥39॥

ಮೂಲಮ್ - 40

ಸ ವಾಜೀಯುಕ್ತೇನ ರಥೇನ ಸಾರಥಿಃ
ಸಮಾಕುಲಂ ರಾಜಕುಲಂ ವಿರಾಜಯನ್ ।
ವರೂಥಿನಾ ರಾಜಗೃಹಾಭಿಪಾತಿನಾ
ಪುರಸ್ಯ ಸರ್ವಸ್ಯ ಮನಾಂಸಿ ಹರ್ಷಯನ್ ॥

ಅನುವಾದ

ಸುಮಂತ್ರನು ಒಳ್ಳೆಯ ಕುದುರೆಗಳಿಂದ ಯುಕ್ತವಾಗಿದ್ದ ರಥದಲ್ಲಿ ಕುಳಿತು ಜನಭರಿತವಾದ ರಾಜಮಾರ್ಗವನ್ನು ಅವಲೋಕಿಸುತ್ತಾ ಹೋಗುತ್ತಿದ್ದನು. ರಾಮನ ಅರಮನೆಯ ಕಡೆಗೆ ಹೋಗುತ್ತಿದ್ದ ರಕ್ಷಣಾ ಕವಚಯುಕ್ತವಾಗಿದ್ದ ರಥವನ್ನು ನೋಡಿ ಅಲ್ಲಿದ್ದ ಜನರ ಮನಸ್ಸುಗಳು ಹರ್ಷಗೊಂಡವು.॥40॥

ಮೂಲಮ್ - 41

ತತಃ ಸಮಾಸಾದ್ಯ ಮಹಾಧನಂ ಮಹತ್
ಪ್ರಹೃಷ್ಟರೋಮಾ ಸ ಬಭೂವ ಸಾರಥಿಃ ।
ಮೃಗೈರ್ಮಯೂರೈಶ್ಚ ಸಮಾಕುಲೋಲ್ಬಣಂ
ಗೃಹಂ ವರಾರ್ಹಸ್ಯ ಶಚೀಪತೇರಿವ ॥

ಅನುವಾದ

ಇಷ್ಟಾರ್ಥಸಿದ್ಧಿಗೆ ಕಾರಣವಾದ ದೇವೇಂದ್ರನ ಅರಮನೆಗೆ ಸಮಾನವಾಗಿದ್ದ, ಮಹದೈಶ್ವರ್ಯಯುಕ್ತವಾಗಿದ್ದ ಆ ಭವನದಲ್ಲಿ ಜಿಂಕೆ, ಸಾರಂಗ ಮೊದಲಾದ ಸಾಧು ಪ್ರಾಣಿಗಳಿಂದಲೂ, ನವಿಲು, ಕೋಗಿಲೆ, ಗಿಣಿ ಮುಂತಾದ ಪಕ್ಷಿಗಳಿಂದ ಅತ್ಯಂತ ಶೋಭಿಸುತ್ತಿತ್ತು. ಅಲ್ಲಿಗೆ ತಲುಪಿದ ಸಾರಥಿ ಸುಮಂತ್ರನ ಶರೀರವು ಹೆಚ್ಚಾದ ಹರ್ಷದಿಂದ ರೋಮಾಂಚಿತವಾಯಿತು.॥41॥

ಮೂಲಮ್ - 42

ಸ ತತ್ರ ಕೈಲಾಸನಿಭಾಃ ಸ್ವಲಂಕೃತಾಃ
ಪ್ರವಿಶ್ಯ ಕಕ್ಷ್ಯಾಸ್ತ್ರಿದಶಾಲಯೋಪಮಾಃ ।
ಪ್ರಿಯಾನ್ ವರಾನ್ರಾಮಮತೇ ಸ್ಥಿತಾನ್ ಬಹೂನ್
ವ್ಯಪೋಹ್ಯ ಶುದ್ಧಾಂತಮುಪಸ್ಥಿತೌ ರಥೀ ॥

ಅನುವಾದ

ಕೈಲಾಸ ಮತ್ತು ಸ್ವರ್ಗದಂತೆ ದಿವ್ಯ ಶೋಭಾಸಂಪನ್ನ, ಸುಂದರವಾಗಿ ಅಲಂಕೃತ ಅನೇಕ ಹಜಾರಗಳನ್ನು ದಾಟಿ ಶ್ರೀರಾಮಚಂದ್ರನ ಆಜ್ಞೆಯಂತೆ ನಡೆಯುವ ಬಹಳಷ್ಟು ಶ್ರೇಷ್ಠ ಮನುಷ್ಯರನ್ನು ಹಿಂದಕ್ಕೆ ಹಾಕಿ, ರಥಸಹಿತ ಸುಮಂತ್ರನು ಅಂತಃಪುರದ ದ್ವಾರದ ಬಳಿಗೆ ತಲುಪಿದನು.॥42॥

ಮೂಲಮ್ - 43

ಸ ತತ್ರ ಶುಶ್ರಾವ ಚ ಹರ್ಷಯುಕ್ತಾ
ರಾಮಾಭಿಷೇಕಾರ್ಥಕೃತಾಂ ಜನಾನಾಮ್ ।
ನರೇಂದ್ರಸೂನೋರಭಿಮಂಗಲಾರ್ಥಾಃ
ಸರ್ವಸ್ಯ ಲೋಕಸ್ಯ ಗಿರಃ ಪ್ರಹೃಷ್ಟಾಃ ॥

ಅನುವಾದ

ಅಲ್ಲಿ ಅವನು ಶ್ರೀರಾಮನ ಅಭಿಷೇಕ ಸಂಬಂಧವಾದ ಕಾರ್ಯ ಮಾಡುವ ಜನರು-ರಾಜಕುಮಾರ ಶ್ರೀರಾಮನ ಶ್ರೇಯಕ್ಕಾಗಿ ಮಂಗಳಾಶಾಸನ ಮಾಡುತ್ತಿದ್ದು, ಹರ್ಷಯುಕ್ತ ಮಾತುಗಳನ್ನು ಕೇಳಿದನು. ಹೀಗೆಯೇ ಇತರ ಎಲ್ಲ ಜನರು ಹರ್ಷೋಲ್ಲಾಸದಿಂದ ಆಡಿಕೊಳ್ಳುತ್ತಿದ್ದುದನ್ನು ಕೇಳಿದನು.॥43॥

ಮೂಲಮ್ - 44

ಮಹೇಂದ್ರಸದ್ಮಪ್ರತಿಮಂ ಚ ವೇಶ್ಮ
ರಾಮಸ್ಯ ರಮ್ಯಂ ಮೃಗಪಕ್ಷಿಜುಷ್ಟಮ್ ।
ದದರ್ಶ ಮೇರೋರಿವ ಶೃಂಗಮುಚ್ಚಂ
ವಿಭ್ರಾಜಮಾನಂ ಪ್ರಭಯಾ ಸುಮಂತ್ರಃ ॥

ಅನುವಾದ

ರಾಮನ ಅರಮನೆಯು ದೇವೇಂದ್ರನ ಅರಮನೆಗೆ ಸದೃಶವಾಗಿತ್ತು. ಸುಮನೋಹರವಾಗಿ ಧ್ವನಿಮಾಡುವ ಸುಂದರವಾದ ಮೃಗ-ಪಕ್ಷಿಗಳಿಗೆ ಅದು ಆಶ್ರಯವಾಗಿತ್ತು. ಮೇರುಪರ್ವತದ ಶಿಖರದಂತೆ ಎತ್ತರವಾಗಿದ್ದ ಆ ಅನುಪಮ ಸೌಂದರ್ಯದಿಂದ ವಿರಾಜಿಸುತ್ತಿದ್ದ ರಾಮಭವನವನ್ನು ಸುಮಂತ್ರನು ನೋಡಿದನು.॥44॥

ಮೂಲಮ್ - 45

ಉಪಸ್ಥಿತೈರಂಜಲಿಕಾರಿಭಿಶ್ಚ
ಸೋಪಾಯನೈರ್ಜಾನಪದೈರ್ಜನೈಶ್ಚ ।
ಕೋಟ್ಯಾ ಪರಾರ್ಧೈಶ್ಚ ವಿಮುಕ್ತಯಾನೈಃ
ಸಮಾಕುಲಂದ್ವಾರಪದಂ ದದರ್ಶ ॥

ಅನುವಾದ

ರಾಮಭವನದ ಬಾಗಿಲಿಗೆ ಹೋಗಿ ಸುಮಂತ್ರನು ನೋಡುತ್ತಾನೆ-ಶ್ರೀರಾಮನನ್ನು ವಂದಿಸಲು ಕೈಮುಗಿದು ಉಪಸ್ಥಿತರಾದ ಪುರಜನರು ತಮ್ಮ ವಾಹನಗಳಿಂದ ಇಳಿದು ಬಗೆ-ಬಗೆಯ ಉಡುಗೊರೆಗಳನ್ನು ಹಿಡಿದುಕೊಂಡು ಕೋಟಿ-ಕೋಟಿ ಸಂಖ್ಯೆಯಲ್ಲಿ ನೆರೆದು ಭಾರೀ ಗದ್ದಲವೇ ಉಂಟಾಗಿತ್ತು.॥45॥

ಮೂಲಮ್ - 46

ತತೋ ಮಹಾಮೇಘಮಹೀಧರಾಭಂ
ಪ್ರಭಿನ್ನಮತ್ಯಂಕುಶಮತ್ಯಸಹ್ಯಮ್ ।
ರಾಮೋಪವಾಹ್ಯಂ ರುಚಿರಂ ದದರ್ಶ
ಶತ್ರುಂಜಯಂ ನಾಗಮುದಗ್ರಕಾಯಮ್ ॥

ಅನುವಾದ

ಮಹಾಮೇಘದಿಂದ ಕೂಡಿದ ಪರ್ವತದಂತೆ ಇದ್ದ, ಮದಿಸಿದ, ಅಂಕುಶ ಪ್ರಹಾರವನ್ನು ಸಹಿಸದ, ಸುಂದರವಾದ, ಶತ್ರುಸೈನ್ಯವನ್ನು ಭೇದಿಸುವ ಸಾಮರ್ಥ್ಯವುಳ್ಳ ಮಹಾಕಾಯ ಶತ್ರುಂಜಯ ಎಂಬ ಶ್ರೀರಾಮನ ಪಟ್ಟದಾನೆಯನ್ನು ಸುಮಂತ್ರನು ಅಲ್ಲಿ ನೋಡಿದನು.॥46॥

ಮೂಲಮ್ - 47

ಸ್ವಲಂಕೃತಾನ್ ಸಾಶ್ವರಥಾನ್ ಸಕುಂಜರಾ-
ನಮಾತ್ಯಮುಖ್ಯಾಂಶ್ಚ ದದರ್ಶ ವಲ್ಲಭಾನ್ ।
ವ್ಯಪೋಹ್ಯ ಸೂತಃ ಸಹಿತಾನ್ ಸಮಂತತಃ
ಸಮೃದ್ಧಮಂತಃಪುರಮಾವಿವೇಶ ಹ ॥

ಅನುವಾದ

ಸುಂದರ ವಸ್ತ್ರಾಭೂಷಣಗಳಿಂದ ಅಲಂಕೃತರಾಗಿ, ರಥ, ಕುದುರೆ, ಆನೆ ಮೊದಲಾದವುಗಳೊಂದಿಗೆ ಅಲ್ಲಿಗೆ ಬಂದಿರುವ ರಾಜನ ಪರಮಪ್ರಿಯ ಮುಖ್ಯ-ಮುಖ್ಯ ಮಂತ್ರಿಗಳೂ ಅಲ್ಲಿ ಉಪಸ್ಥಿತರಾಗಿರುವುದನ್ನು ನೋಡಿದನು. ಸುಮಂತ್ರನು ಅವರೆಲ್ಲರನ್ನು ಬದಿಗೆ ಸರಿಸಿ ಶ್ರೀರಾಮನ ಸಮೃದ್ಧಿಶಾಲಿ ಅಂತಃಪುರವನ್ನು ಪ್ರವೇಶಿಸಿದನು.॥47॥

ಮೂಲಮ್ - 48

ತತೋದ್ರಿಕೂಟಾಚಲಮೇಘಸನ್ನಿಭಂ
ಮಹಾವಿಮಾನೋಪಮವೇಶ್ಮ ಸಂಯುತಮ್ ।
ಅವಾರ್ಯಮಾಣಃ ಪ್ರವಿವೇಶ ಸಾರಥಿಃ
ಪ್ರಭೂತರತ್ನಂ ಮಕರೋ ಯಥಾರ್ಣವಮ್ ॥

ಅನುವಾದ

ಹೇರಳವಾದ ರತ್ನಗಳಿಂದ ತುಂಬಿದ್ದ ಸಮುದ್ರವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮೊಸಳೆಯು ಪ್ರವೇಶಿಸುವಂತೆಯೇ ಸಾರಥಿ ಸುಮಂತ್ರನು ಪರ್ವತ ಶಿಖರದ ಮೇಲೆ ಆರೂಢವಾದ ಮೇಘದಂತೆ ಶೋಭಿಸುವ, ಮಹಾವಿಮಾನದಂತೆ ಸುಂದರ ಗೃಹಗಳಿಂದ ಕೂಡಿದ ಹೇರಳ ರತ್ನ ಭಂಡಾರದಿಂದ ತುಂಬಿದ ಆ ಭವನವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪ್ರವೇಶಿಸಿದನು.॥48॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಹದಿನೈದನೆಯ ಸರ್ಗ ಪೂರ್ಣವಾಯಿತು.॥15॥