०१० दशरथकृतप्रसादनम्

वाचनम्
ಭಾಗಸೂಚನಾ

ದಶರಥನು ಕೈಕೆಯಿಯ ಅಂತಃಪುರಕ್ಕೆ ಹೋದುದು, ಆಕೆಯು ಕೋಪಭವನದಲ್ಲಿ ಇರುವುದನ್ನು ತಿಳಿದು ದುಃಖಿಯಾದುದು, ಆಕೆಯನ್ನು ಅನೇಕ ಪ್ರಕಾರದಿಂದ ಸಂತೈಸಿದುದು

ಮೂಲಮ್ - 1

ವಿದರ್ಶಿತಾ ಯದಾ ದೇವೀ ಕುಬ್ಜಯಾ ಪಾಪಯಾ ಭೃಶಮ್ ।
ತದಾ ಶೇತೇ ಸ್ಮ ಸಾ ಭೂಮೌ ದಿಗ್ಧವಿದ್ಧೇವ ಕಿನ್ನರೀ ॥

ಅನುವಾದ

ಪಾಪಿಷ್ಠೆಯಾದ ಕುಬ್ಜೆಯು ಕೈಕೆಯನ್ನು ತಪ್ಪುದಾರಿಗೆಳೆದಾಗ ಆಕೆಯು ವಿಷಯುಕ್ತ ಬಾಣಗಳಿಂದ ಗಾಸಿಗೊಂಡ ಕಿನ್ನರಿಯಂತೆ ನೆಲದ ಮೇಲೆ ಮಲಗಿದಳು.॥1॥

ಮೂಲಮ್ - 2

ನಿಶ್ಚಿತ್ಯ ಮನಸಾ ಕೃತ್ಯಂ ಸಾ ಸಮ್ಯಗಿತಿ ಭಾಮಿನೀ ।
ಮಂಥರಾಯೈ ಶನೈಃ ಸರ್ವಮಾಚಚಕ್ಷೇ ವಿಚಕ್ಷಣಾ ॥

ಅನುವಾದ

ಮಂಥರೆಯು ಹೇಳಿದುದೆಲ್ಲ ಬಹಳ ಒಳ್ಳೆಯ ಕಾರ್ಯವೆಂದು ಮನಸ್ಸಿನಲ್ಲಿ ನಿಶ್ಚಯಿಸಿದ ವಿಚಕ್ಷಣೆಯಾದ ಭಾಮಿನಿ ಕೈಕೆಯಿಯು ಮಂಥರೆಯ ಬಳಿ ತನ್ನ ಮನಸ್ಸಿನಲ್ಲಿರುವುದನ್ನು ನಿಧಾನವಾಗಿ ತಿಳಿಸಿದಳು.॥2॥

ಮೂಲಮ್ - 3½

ಸಾ ದೀನಾ ನಿಶ್ಚಯಂ ಕೃತ್ವಾ ಮಂಥರಾವಾಕ್ಯಮೋಹಿತಾ ।
ನಾಗಕನ್ಯೇವ ನಿಃಶ್ವಸ್ಯ ದೀರ್ಘಮುಷ್ಣಂ ಚ ಭಾಮಿನೀ ॥
ಮುಹೂರ್ತಂ ಚಿಂತಯಾಮಾಸ ಮಾರ್ಗಮಾತ್ಮಸುಖಾವಹಮ್ ।

ಅನುವಾದ

ಮಂಥರೆಯ ಮಾತುಗಳಿಂದ ಮೋಹಿತಳಾಗಿ ದೀನಳಾದ ಭಾಮಿನಿ ಕೈಕೆಯಿಯು ಹಿಂದಿನಂತೆ ನಿಶ್ಚಯಿಸಿನಾಗಿಣಿಯಂತೆ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ ತನಗಾಗಿ ಸುಖದಾಯಕ ಮಾರ್ಗವನ್ನು ಚಿಂತಿಸುತ್ತಾ ಎರಡುಗಳಿಗೆ ಕಳೆದಳು.॥3½॥

ಮೂಲಮ್ - 4½

ಸಾ ಸುಹೃಚ್ಛಾರ್ಥಕಾಮಾ ಚ ತಂ ನಿಶಮ್ಯ ವಿನಿಶ್ಚಯಮ್ ॥
ಬಭೂವ ಪರಮಪ್ರೀತಾ ಸಿದ್ಧಿಂ ಪ್ರಾಪ್ಯೇವ ಮಂಥರಾ ।

ಅನುವಾದ

ಕೈಕೆಯಿಯ ಹಿತವನ್ನು ಬಯಸುವ ಸುಹೃದ್ ಮಂಥರೆಯು ಆಕೆಯ ಮನೋರಥವನ್ನು ಸಿದ್ಧಗೊಳಿಸಲು ಬಯಸುತ್ತಿದ್ದವಳು, ಕೈಕೆಯ ನಿಶ್ಚಯವನ್ನು ಕೇಳಿ, ಯಾವುದೋ ದೊಡ್ಡ ಸಿದ್ಧಿಯೇ ದೊರಕಿದಂತೆ ಬಹಳ ಸಂತೋಷಗೊಂಡಳು.॥4½॥

ಮೂಲಮ್ - 5½

ಅಥ ಸಾ ರುಷಿತಾ ದೇವೀಸಮ್ಯಕ್ಕೃತ್ವಾ ವಿನಿಶ್ಚಯಮ್ ॥
ಸಂವಿವೇಶಾಬಲಾ ಭೂಮೌ ನಿವೇಶ್ಯ ಭ್ರುಕುಟಿಂ ಮುಖೇ ।

ಅನುವಾದ

ಅನಂತರ ರೋಷಗೊಂಡು ದೇವಿ ಕೈಕೆಯಿಯು ತನ್ನ ಕರ್ತವ್ಯವನ್ನು ಸರಿಯಾಗಿ ನಿಶ್ಚಯಿಸಿ ಹುಬ್ಬನ್ನು ಏರಿಸಿ ನೆಲದಲ್ಲಿ ಮಲಗಿಬಿಟ್ಟಳು. ಅಬಲೆಯಾದ ಆಕೆಯು ಬೇರೆನು ಮಾಡಬಲ್ಲಳು.॥5½॥

ಮೂಲಮ್ - 6½

ತತಶ್ಚಿತ್ರಾಣಿ ಮಾಲ್ಯಾನಿ ದಿವ್ಯಾನ್ಯಾಭರಣಾನಿ ಚ ॥
ಅಪವಿದ್ಧಾನಿ ಕೈಕೇಯ್ಯಾತಾನಿ ಭೂಮಿಂ ಪ್ರಪೇದಿರೇ ।

ಅನುವಾದ

ಬಳಿಕ ಆ ಕೇಕಯ ರಾಜಕುಮಾರಿಯು ತನ್ನ ದಿವ್ಯಾಭರಣಗಳನ್ನು, ಪುಷ್ಪಮಾಲೆಯನ್ನು ಕಿತ್ತೆಸೆದುಬಿಟ್ಟಳು. ಆ ಒಡವೆಗಳು ನೆಲದಲ್ಲಿ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು.॥6½॥

ಮೂಲಮ್ - 7½

ತಯಾ ತಾನ್ಯಪವಿದ್ಧಾನಿ ಮಾಲ್ಯಾನ್ಯಾಭರಣಾನಿ ಚ ॥
ಅಶೋಭಯಂತ ವಸುಧಾಂ ನಕ್ಷತ್ರಾಣಿಯಥಾ ನಭಃ ।

ಅನುವಾದ

ಚದುರಿದ ನಕ್ಷತ್ರಗಳು ಆಕಾಶದ ಶೋಭೆಯನ್ನು ಹೆಚ್ಚಿಸುವಂತೆ ಆ ಎಸೆದಿರುವ ಹೂವಿನಹಾರ ಮತ್ತು ಒಡವೆಗಳಿಂದ ಅಲ್ಲಿನ ಭೂಮಿ ಶೋಭಿಸುತ್ತಿತ್ತು.॥7½॥

ಮೂಲಮ್ - 8½

ಕ್ರೋಧಾಗಾರೇ ಚ ಪತಿತಾ ಸಾ ಬಭೌ ಮಲಿನಾಂಬರಾ ॥
ಏಕವೇಣೀಂ ದೃಢಂ ಬಧ್ವಾ ಗತಸತ್ತ್ವೇವ ಕಿನ್ನರೀ ।

ಅನುವಾದ

ಮಲಿನಾಂಬರವನ್ನು ಉಟ್ಟು, ಕೂದಲುಗಳನ್ನು ಗಟ್ಟಿಯಾಗಿ ಒಂದೇ ಜಡೆಯಾಗಿ ಕಟ್ಟಿ ಕೋಪಭವನದಲ್ಲಿ ಬಿದ್ದಿರುವ ಕೈಕೆಯಿ ನಿರ್ಬಲ ಅಥವಾ ನಿಶ್ಚೇಷ್ಟಿತ ಕಿನ್ನರಿಯಂತೆ ಕಂಡು ಬರುತ್ತಿದ್ದಳು.॥8½॥

ಮೂಲಮ್ - 9½

ಆಜ್ಞಾಪ್ಯ ತು ಮಹಾರಾಜೋ ರಾಘವಸ್ಯಾಭಿಷೇಚನಮ್ ॥
ಉಪಸ್ಥಾನಮನುಜ್ಞಾಪ್ಯ ಪ್ರವಿವೇಶ ನಿವೇಶನಮ್ ।

ಅನುವಾದ

ಅತ್ತ ದಶರಥನು ಮಂತ್ರಿಗಳೇ ಮುಂತಾದವರಿಗೆ ಶ್ರೀರಾಮನ ಪಟ್ಟಾಭಿಷೇಕದ ಸಿದ್ಧತೆಗೆ ಆಜ್ಞಾಪಿಸಿ ಎಲ್ಲರೂ ಸಮಯಕ್ಕೆ ಸರಿಯಾಗಿ ಉಪಸ್ಥಿತರಿರುವಂತೆ ತಿಳಿಸಿ ರಾಣಿವಾಸಕ್ಕೆ ತೆರಳಿದನು.॥9½॥

ಮೂಲಮ್ - 10½

ಅದ್ಯ ರಾಮಾಭಿಷೇಕೋ ವೈ ಪ್ರಸಿದ್ಧ ಇತಿ ಜಜ್ಞಿವಾನ್ ॥
ಪ್ರಿಯಾರ್ಹೋ ಪ್ರಿಯಮಾಖ್ಯಾತುಂ ವಿವೇಶಾಂತಃಪುರಂ ವಶೀ ।

ಅನುವಾದ

ಇಂದೇ ಶ್ರೀರಾಮನ ಪಟ್ಟಾಭಿಷೇಕದ ವಿಚಾರವನ್ನು ಪ್ರಸಾರಗೊಳಿಸಲಾಗಿದೆ. ಅದಕ್ಕಾಗಿ ಈ ಸಮಾಚಾರ ಯಾವ ರಾಣಿಯರಿಗೂ ತಿಳಿಯದೇ ಇರಬಹುದು ಎಂದು ಯೋಚಿಸಿ, ಜಿತೇಂದ್ರಿಯ ರಾಜ ದಶರಥನು ತನ್ನ ಪ್ರಿಯ ರಾಣಿಗೆ ಈ ಸಮಾಚಾರ ತಿಳಿಸಲಿಕ್ಕಾಗಿ ಅಂತಃಪುರವನ್ನು ಪ್ರವೇಶಿಸಿದನು.॥10½॥

ಮೂಲಮ್ - 11½

ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ ॥
ಪಾಂಡುರಾಭ್ರಮಿವಾಕಾಶಂರಾಹುಯುಕ್ತಂ ನಿಶಾಕರಃ ।

ಅನುವಾದ

ಆ ಮಹಾಯಶಸ್ವೀ ರಾಜನು ಮೊದಲಿಗೆ ಕೈಕೆಯಿಯ ಶ್ರೇಷ್ಠ ಭವನವನ್ನು ಪ್ರವೇಶಿಸಿದನು. ಬಿಳಿಯ ಮೋಡಗಳಿಂದ ತುಂಬಿದ ರಾಹುಯುಕ್ತ ಆಕಾಶದಲ್ಲಿ ಚಂದ್ರನು ಕಾಲಿರಿಸಿದಂತೆ ಅಡಿಯಿಟ್ಟನು.॥11½॥

ಮೂಲಮ್ - 12

ಶುಕಬರ್ಹಿಸಮಾಯುಕ್ತಂ ಕ್ರೌಂಚಹಂಸರುತಾಯುತಮ್ ॥

ಮೂಲಮ್ - 13

ವಾದಿತ್ರರವಸಂಘುಷ್ಟಂ ಕುಬ್ಜಾವಾಮನಿಕಾಯುತಮ್ ।
ಲತಾಗೃಹೈಶ್ಚಿತ್ರಗೃಹೈಶ್ಚಂಪಕಾಶೋಕಶೋಭಿತೈಃ ॥

ಅನುವಾದ

ಆ ಭವನದಲ್ಲಿ ಗಿಳಿಗಳು, ನವಿಲುಗಳು, ಕ್ರೌಂಚ, ಹಂಸಗಳು ಕಲರವ ಮಾಡುತ್ತಿದ್ದವು. ಅಲ್ಲಿ ವಾದ್ಯಗಳ ಮಧುರ ಧ್ವನಿಗಳು ಮೊಳಗುತ್ತಿದ್ದವು. ಅದು ಅನೇಕ ಕುಬ್ಜೆಯರಾದ, ಗೂನು ಬೆನ್ನುಳ್ಳು ದಾಸಿಯರಿಂದ ತುಂಬಿಹೋಗಿತ್ತು. ಅಶೋಕ, ಚಂಪಕಾದಿ ಬಹಳಷ್ಟು ಲತಾಭವನಗಳಿಂದ, ಚಿತ್ರಮಂದಿರಗಳಿಂದ ಆ ಭವನದ ಶೋಭೆ ಅವರ್ಣನೀಯವಾಗಿತ್ತು.॥12-13॥

ಮೂಲಮ್ - 14

ದಾಂತ ರಾಜತ ಸೌವರ್ಣವೇದಿಕಾಭಿಃ ಸಮಾಯುತಮ್ ।
ನಿತ್ಯಪುಷ್ಪಲೈರ್ವೃಕ್ಷೈರ್ವಾಪೀಭಿರುಪಶೋಭಿತಮ್ ॥

ಅನುವಾದ

ಹಸ್ತಿದಂತ, ಬೆಳ್ಳಿ, ಬಂಗಾರಗಳಿಂದ ರಚಿಸಿದ ವೇದಿಕೆಗಳಿಂದಲೂ, ನಿತ್ಯವೂ ಫಲ-ಪುಷ್ಪಗಳಿಂದ ಭರಿತವಾದ ವೃಕ್ಷಗಳಿಂದಲೂ, ಸುಂದರ ಕಲ್ಯಾಣಿಗಳಿಂದಲೂ ಆ ಅಂತಃಪುರವು ಶೋಭಿಸುತ್ತಿತ್ತು.॥14॥

ಮೂಲಮ್ - 15½

ದಾಂತರಾಜತಸೌವರ್ಣೈಃ ಸಂವೃತಂ ಪರಮಾಸನೈಃ ।
ವಿವಿಧೈರನ್ನಪಾನೈಶ್ಚ ಭಕ್ಷ್ಯೈಶ್ಚ ವಿವಿಧೈರಪಿ ॥
ಉಪಪನ್ನಂ ಮಹಾರ್ಹೈಶ್ಚ ಭೂಷಣೈಸ್ತ್ರಿದಿವೋಪಮಮ್ ।

ಅನುವಾದ

ಅದರಲ್ಲಿ ಚಿನ್ನ, ಬೆಳ್ಳಿ, ಆನೆಯ ದಂತಗಳಿಂದ ರಚಿಸಿದ ಉತ್ತಮ ಸಿಂಹಾಸನಗಳನ್ನು ಇರಿಸಿದ್ದರು. ಅದು ನಾನಾ ವಿಧದ ಭಕ್ಷ್ಯ-ಭೋಜ್ಯಗಳಿಂದ, ಬಗೆ-ಬಗೆಯ ಆಹಾರ ಪದಾರ್ಥಗಳಿಂದ ತುಂಬಿ ಹೋಗಿತ್ತು. ಅಮೂಲ್ಯ ಆಭೂಷಣಗಳಿಂದ ಸುಸಂಪನ್ನ ಆ ಕೈಕೆಯಿಯ ಭವನವು ಸ್ವರ್ಗದಂತೆ ಶೋಭಿತವಾಗಿತ್ತು.॥15½॥

ಮೂಲಮ್ - 16½

ಸ ಪ್ರವಿಶ್ಯ ಮಹಾರಾಜಃ ಸ್ವಮಂತಃಪುರಮೃದ್ಧಿಮತ್ ॥
ನ ದದರ್ಶ ಸ್ತ್ರಿಯಂ ರಾಜಾ ಕೈಕೇಯೀಂ ಶಯನೋತ್ತಮೇ ।

ಅನುವಾದ

ಆ ಸಮೃದ್ಧಶಾಲಿ ಅಂತಃಪುರವನ್ನು ಪ್ರವೇಶಿಸಿ ಮಹಾರಾಜಾ ದಶರಥನು ಅಲ್ಲಿಯ ಹಂಸತೂಲಿಕಾತಲ್ಪದಲ್ಲಿ ರಾಣಿ ಕೈಕೆಯಿ ಇಲ್ಲದಿರುವುದನ್ನು ಕಂಡನು.॥16½॥

ಮೂಲಮ್ - 17½

ಸ ಕಾಮಬಲಸಂಯುಕ್ತೋ ರತ್ಯರ್ಥೀ ಮನುಜಾಧಿಪಃ ॥
ಅಪಶ್ಯನ್ ದಯಿತಾಂ ಭಾರ್ಯಾಂ ಪಪ್ರಚ್ಛ ವಿಷಸಾದ ಚ ।

ಅನುವಾದ

ಕಾಮಪೀಡಿತನಾದ ರಾಜನು ರಾಣಿಯನ್ನು ಸಂತೋಷಗೊಳಿಸುವ ಇಚ್ಛೆಯಿಂದ ಒಳಗೆ ಪ್ರವೇಶಿಸಿದ್ದನು. ಅಲ್ಲಿ ತನ್ನ ಪ್ರಿಯಪತ್ನಿಯನ್ನು ಕಾಣದೆ ಮನಸ್ಸಿನಲ್ಲಿ ವಿಷಾದಗೊಂಡು ಅಲ್ಲಿರುವ ದಾಸಿಯರಲ್ಲಿ ವಿಚಾರಿಸಿದನು.॥17½॥

ಮೂಲಮ್ - 18

ನಹಿತಸ್ಯ ಪುರಾ ದೇವೀ ತಾಂ ವೇಲಾಮತ್ಯವರ್ತತ ॥

ಮೂಲಮ್ - 19½

ನ ಚ ರಾಜಾ ಗೃಹಂ ಶೂನ್ಯಂ ಪ್ರವಿವೇಶ ಕದಾಚನ ।
ತತೋ ಗೃಹಗತೋ ರಾಜಾ ಕೈಕೇಯೀಂ ಪರ್ಯಪೃಚ್ಛತ ॥
ಯಥಾಪುರಮವಿಜ್ಞಾಯ ಸ್ವಾರ್ಥಲಿಪ್ಸುಮಪಂಡಿತಾಮ್ ।

ಅನುವಾದ

ಇದಕ್ಕೆ ಮೊದಲು ರಾಜನು ಆಗಮಿಸುವ ಸಮಯದಲ್ಲಿ ಕೈಕೆ ಬೇರೆಲ್ಲಿಗೂ ಹೋಗುತ್ತಿರಲಿಲ್ಲ. ರಾಜನು ಎಂದೂ ಬರಿದಾದ ಅಂತಃಪುರವನ್ನು ಪ್ರವೇಶಿಸಿರಲಿಲ್ಲ. ಆದ್ದರಿಂದ ಬಂದು ಅವನು ಕೈಕೆಯ ವಿಷಯದಲ್ಲಿ ಕೇಳತೊಡಗಿದನು. ಅವನಿಗೆ ಆ ಮೂರ್ಖಳು ಯಾವುದೋ ಸ್ವಾರ್ಥವನ್ನು ಸಿದ್ಧಗೊಳಿಸಲು ಬಯಸುತ್ತಿರುವಳು ಎಂಬುದು ತಿಳಿದಿರಲಿಲ್ಲ. ಆದ್ದರಿಂದ ಅವನು ಮೊದಲಿನಂತೆ ಪ್ರತಿಹಾರಿಯಲ್ಲಿ ಆಕೆಯ ಕುರಿತು ವಿಚಾರಿಸಿದನು.॥18-19½॥

ಮೂಲಮ್ - 20½

ಪ್ರತಿಹಾರೀ ತ್ವಥೋವಾಚಸಂತ್ರಸ್ತಾ ತು ಕೃತಾಂಜಲಿಃ ॥
ದೇವ ದೇವೀ ಭೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ ।

ಅನುವಾದ

ಹೆದರಿದ ಪ್ರತಿಹಾರಿಯು ಕೈಮುಗಿದು ಹೇಳಿದಳು - ಸ್ವಾಮಿ! ದೇವಿ ಕೈಕೆಯಿಯು ಅತ್ಯಂತ ಕುಪಿತಳಾಗಿ ಕ್ರೋಧಾಗಾರವನ್ನು ಪ್ರವೇಶಿಸಿರುವಳು.॥20½॥

ಮೂಲಮ್ - 21½

ಪ್ರತಿಹಾರ್ಯಾ ವಚಃ ಶ್ರುತ್ವಾ ರಾಜಾಪರಮದುರ್ಮನಾಃ ॥
ವಿಷಸಾದ ಪುನರ್ಭೂಯೋ ಲುಲಿತವ್ಯಾಕುಲೇಂದ್ರಿಯಃ ।

ಅನುವಾದ

ಪ್ರತಿಹಾರಿಯ ಮಾತನ್ನು ಕೇಳಿ ರಾಜನ ಮನಸ್ಸು ಖಿನ್ನವಾಯಿತು. ಇಂದ್ರಿಯಗಳು ಚಂಚಲವಾಗಿ ವ್ಯಾಕುಲಗೊಂಡವು. ಅವನು ಮತ್ತೆ ಬಹಳ ವಿಷಾದಿಸಿದನು.॥21½॥

ಮೂಲಮ್ - 22½

ತತ್ರ ತಾಂ ಪತಿತಾಂ ಭೂಮೌ ಶಯಾನಾಮತಥೋಚಿತಾಮ್ ॥
ಪ್ರತಪ್ತ ಇವ ದುಃಖೇನ ಸೋಽಪಶ್ಯಜ್ಜಗತೀಪತಿಃ ।

ಅನುವಾದ

ಬಳಿಕ ತಾನೂ ಅಲ್ಲಿಗೆ ಹೋಗಿ - ಮಲಿನಾಂಬರವನ್ನುಟ್ಟು ಅಸ್ತವ್ಯಸ್ತವಾಗಿ ಮಲಗಿದ್ದ, ದುಃಖದಿಂದ ಸಂತಪ್ತಳಾದ ಪ್ರೇಯಸಿಯನ್ನು ನೋಡಿದನು.॥22½॥

ಮೂಲಮ್ - 23

ಸ ವೃದ್ಧ ಸ್ತರುಣೀಂ ಭಾರ್ಯಾಂ ಪ್ರಾಣೇಭ್ಯೋಽಪಿ ಗರೀಯಸೀಮ್ ॥

ಮೂಲಮ್ - 24

ಅಪಾಪಃ ಪಾಪಸಂಕಲ್ಪಾಂ ದದರ್ಶ ಧರಣೀತಲೇ ।
ಲತಾಮಿವ ವಿನಿಷ್ಕೃತ್ತಾಂ ಪತಿತಾಂ ದೇವತಾಮಿವ ॥

ಅನುವಾದ

ರಾಜನು ಮುದುಕನಾಗಿದ್ದು, ಅವನ ಪತ್ನೀ ತರುಣಿಯಾಗಿದ್ದಳು. ಆದ್ದರಿಂದ ಅವನು ಆಕೆಯನ್ನು ಪ್ರಾಣಗಳಿಗಿಂತ ಹೆಚ್ಚು ಪ್ರೀತಿಸುತ್ತಿದ್ದನು. ರಾಜನ ಮನಸ್ಸಿನಲ್ಲಿ ಯಾವುದೇ ಪಾಪ ಇಲ್ಲದಿದ್ದರೂ ಕೈಕೆಯಿಯು ತನ್ನ ಮನಸ್ಸಿನಲ್ಲಿ ಪಾಪ ಸಂಕಲ್ಪವನ್ನು ಹೊಂದಿದ್ದಳು. ಕತ್ತರಿಸಿದ ಲತೆಯು ನೆಲಕ್ಕೆ ಬಿದ್ದಿರುವಂತೆ, ಯಾವುದೋ ದೇವಾಂಗನೆಯು ಸ್ವರ್ಗದಿಂದ ಭೂಮಿಗೆ ಬಿದ್ದಿರುವಂತೆ ಆಕೆಯನ್ನು ನೋಡಿದನು.॥23-24॥

ಮೂಲಮ್ - 25

ಕಿನ್ನರೀಮಿವ ನಿರ್ಧೂತಾಂ ಚ್ಯುತಾಮಪ್ಸರಸಂ ಯಥಾ ।
ಮಾಯಾಮಿವ ಪರಿಭ್ರಷ್ಟಾಂ ಹರಿಣೀಮಿವ ಸಂಯತಾಮ್ ॥

ಅನುವಾದ

ಆಕೆಯು ಸ್ವರ್ಗಭ್ರಷ್ಟ ಕಿನ್ನರಿಯೋ, ದೇವಲೋಕದಿಂದ ಚ್ಯುತಳಾದ ಅಪ್ಸರೆಯೋ, ಲಕ್ಷ್ಯಭ್ರಷ್ಟ ಮಾಯೆಯೋ, ಬೇಡನ ಬಲೆಯಲ್ಲಿ ಸಿಕ್ಕಿಬಿದ್ದ ಹೆಣ್ಣು ಜಿಂಕೆಯೋ ಎಂಬಂತೆ ಕಾಣುತ್ತಿದ್ದಳು.॥25॥

ಮೂಲಮ್ - 26

ಕರೇಣುಮಿವದಿಗ್ಧೇನ ವಿದ್ಧಾಂ ಮೃಗಯುನಾ ವನೇ ।
ಮಹಾಗಜ ಇವಾರಣ್ಯೇ ಸ್ನೇಹಾತ್ಪರಮದುಃಖಿತಾಮ್ ॥

ಮೂಲಮ್ - 27

ಪರಿಮೃಜ್ಯ ಚ ಪಾಣಿಭ್ಯಾಮಭಿಸಂತ್ರಸ್ತ ಚೇತನಃ ।
ಕಾಮೀ ಕಮಲಪತ್ರಾಕ್ಷೀಮುವಾಚ ವನಿತಾಮಿದಮ್ ॥

ಅನುವಾದ

ಬೇಡನ ವಿಷಯುಕ್ತ ಬಾಣದಿಂದ ದುಃಖಿತಳಾಗಿ ಬಿದ್ದಿರುವ ಹೆಣ್ಣಾನೆಯನ್ನು ಮಹಾಗಜರಾಜನು ಸ್ನೇಹವಶದಿಂದ ಸ್ಪರ್ಶಿಸುತ್ತಿರುವಂತೆ, ಕಾಮುಕನಾದ ದಶರಥನು ಮಹಾದುಃಖಿತೆಯಾಗಿ ಬಿದ್ದಿರುವ ಕಮಲನಯನೀ ಭಾರ್ಯೆ ಕೈಕೆಯನ್ನು ಪ್ರೀತಿಯಿಂದ ಎರಡೂ ಕೈಗಳಿಂದ ಸ್ಪರ್ಶಿಸಿದನು. ಆಗ ಈಕೆಯು ಏನು ಹೇಳುವಳೋ ಏನು ಮಾಡುವಳೋ ಎಂಬ ಭಯ ಅವನ ಮನಸ್ಸಿನಲ್ಲಿ ಆವರಿಸಿತ್ತು. ರಾಜನು ಆಕೆಯ ಮೈಯನ್ನು ನೇವರಿಸುತ್ತಾ ಹೀಗೆ ಹೇಳಿದನು .॥26-27॥

ಮೂಲಮ್ - 28

ನ ತೇಽಹಮಭಿಜಾನಾಮಿ ಕ್ರೋಧಮಾತ್ಮನಿ ಸಂಶ್ರಿತಮ್ ।
ದೇವಿ ಕೇನಾಭಿಯುಕ್ತ್ತಾಸಿ ಕೇನ ವಾಸಿ ವಿಮಾನಿತಾ ॥

ಅನುವಾದ

ದೇವಿ! ನಿನಗೆ ನನ್ನ ಮೇಲೆ ಕ್ರೋಧವಿರುವುದು ನನಗೆ ನಂಬಿಕೆಯೇ ಆಗುತ್ತಿಲ್ಲ. ಹಾಗಿರುವಾಗ ಯಾರು ನಿನ್ನನ್ನು ತಿರಸ್ಕರಿಸಿದರು? ಯಾರು ನಿನ್ನನ್ನು ನಿಂದಿಸಿದರು.॥28॥

ಮೂಲಮ್ - 29½

ಯದಿದಂ ಮಮ ದುಃಖಾಯ ಶೇಷೇ ಕಲ್ಯಾಣಿ ಪಾಂಸುಷು ।
ಭೂಮೌ ಶೇಷೇ ಕಿಮರ್ಥಂ ತ್ವಂ ಮಯಿ ಕಲ್ಯಾಣಚೇತಸಿ ॥
ಭೂತೋಪಹತಚಿತ್ತೇವ ಮಮ ಚಿತ್ತಪ್ರಮಾಥಿನಿ ।

ಅನುವಾದ

ಕಲ್ಯಾಣಿ! ನೀನು ಈ ರೀತಿ ನನಗೆ ದುಃಖಕೊಡಲು ಧೂಳಿನಲ್ಲಿ ಮಲಗಿರುವ ಕಾರಣವೇನು? ನನ್ನ ಮನಸ್ಸನ್ನು ಕಲಕುತ್ತಿರುವ ಸುಂದರಿಯೇ! ನನ್ನ ಮನಸ್ಸಿನಲ್ಲಿ ಸದಾ ಶ್ರೇಯಸ್ಸಿನ ಭಾವನೆಯೇ ಇರುತ್ತದೆ ಮತ್ತೆ ನಾನಿರುವಾಗ ನೀನು ಏಕೆ ನೆಲದಲ್ಲಿ ಮಲಗಿರುವೆ? ನಿನ್ನ ಮನಸ್ಸಿಗೆ ದೆವ್ವ ಬಡಿದಂತೆ ಕಾಣುತ್ತಿದೆ.॥29½॥

ಮೂಲಮ್ - 30½

ಸಂತಿ ಮೇ ಕುಶಲಾ ವೈದ್ಯಾಸ್ತ್ವಭಿತುಷ್ಟಾಶ್ಚ ಸರ್ವಶಃ ॥
ಸುಖಿತಾಂ ತ್ವಾಂ ಕರಿಷ್ಯಂತಿ ವ್ಯಾಧಿಮಾಚಕ್ಷ್ವ ಭಾಮಿನಿ ।

ಅನುವಾದ

ಭಾಮಿನಿ! ನಿನಗೆ ಉಂಟಾದ ರೋಗವನ್ನು ತಿಳಿಸು. ನಮ್ಮಲ್ಲಿ ಅನೇಕ ಕುಶಲ ಚಿಕಿತ್ಸಕರಿದ್ದಾರೆ. ನಾನು ಅವರನ್ನು ಎಲ್ಲ ರೀತಿಯಿಂದ ಸಂತೋಷದಲ್ಲಿರಿಸಿರುವೆನು. ಅವರು ನಿನ್ನ ರೋಗವನ್ನು ಗುಣಪಡಿಸಿ ಸುಖ ನೀಡುವರು.॥30½॥

ಮೂಲಮ್ - 31½

ಕಸ್ಯವಾಪಿ ಪ್ರಿಯಂ ಕಾರ್ಯೇ ಕೇನ ವಾ ವಿಪ್ರಿಯಂ ಕೃತಮ್ ॥
ಕಃ ಪ್ರಿಯಂ ಲಭತಾಮದ್ಯ ಕೋ ವಾ ಸುಮಹದಪ್ರಿಯಮ್ ।

ಅನುವಾದ

ಇಂದು ಯಾರ ಪ್ರಿಯಕಾರ್ಯ ಮಾಡಬೇಕು, ಹೇಳು. ಅಥವಾ ಯಾರು ನಿನ್ನ ಅಪ್ರಿಯ ಕಾರ್ಯಮಾಡಿರುವನು? ಯಾರಿಗೆ ನಿನ್ನಿಂದ ಒಳ್ಳೆಯದಾಗಬೇಕು? ಇಲ್ಲವೇ ನಿನ್ನ ಅಪಕಾರ ಮಾಡಿದವನಿಗೆ ಕಠೋರ ದಂಡ ವಿಧಿಸಲೇ.॥31½॥

ಮೂಲಮ್ - 32

ಮಾ ರೋತ್ಸೀರ್ಮಾ ಚ ಕಾರ್ಷೀಸ್ತ್ವಂ ದೇವಿ ಸಂಪರಿಶೋಷಣಮ್ ॥

ಮೂಲಮ್ - 33

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋ ವಾವಿಮುಚ್ಯತಾಮ್ ।
ದರಿದ್ರಃ ಕೋ ಭವೇದಾಢ್ಯೋದ್ರವ್ಯವಾನ್ ವಾಪ್ಯಕಿಂಚನಃ ॥

ಅನುವಾದ

ದೇವಿ! ಅಳಬೇಡ, ಈ ರೀತಿ ದೇಹವನ್ನು ಒಣಗಿಸ ಬೇಡ. ಇಂದು ನಿನ್ನ ಇಚ್ಛೆಗನುಸಾರವಾಗಿ ಯಾರೇ ಅವಧ್ಯನಾಗಿದ್ದರೂ ಅವನನ್ನು ವಧಿಸಲೇ? ಅಥವಾ ಪ್ರಾಣದಂಡಕ್ಕೆ ಅರ್ಹನಾದ ಯಾರೇ ಅಪರಾಧಿಯನ್ನು ಬಿಡುಗಡೆಗೊಳಿಸಲೇ? ಯಾವ ದರಿದ್ರನನ್ನು ಶ್ರೀಮಂತಗೊಳಿಸಲೇ? ಶ್ರೀಮಂತನನ್ನು ದರಿದ್ರನಾಗಿಸಲೇ.॥32-33॥

ಮೂಲಮ್ - 34½

ಅಹಂ ಚ ಹಿ ಮದೀಯಾಶ್ಚ ಸರ್ವೇ ತವ ವಶಾನುಗಾಃ ।
ನ ತೇಕಂಚಿದಭಿಪ್ರಾಯಂ ವ್ಯಾಹಂತುಮಹಮುತ್ಸಹೇ ॥
ಆತ್ಮನೋ ಜೀವಿತೇನಾಪಿ ಬ್ರೂಹಿ ಯನ್ಮನಸಿ ಸ್ಥಿತಮ್ ।

ಅನುವಾದ

ನಾನು ಮತ್ತು ನನ್ನ ಎಲ್ಲ ಸೇವಕರು ನಿನ್ನ ಆಜ್ಞಾಧೀನರಾಗಿದ್ದೇವೆ. ನಿನ್ನ ಯಾವುದೇ ಮನೋರಥವನ್ನು ಪೂರ್ಣಗೊಳಿಸುವೆನು. ಬೇಕಾದರೆ ಅದಕ್ಕಾಗಿ ನನ್ನ ಪ್ರಾಣಗಳನ್ನೂ ಕೊಡುವೆನು. ಆದ್ದರಿಂದ ನಿನ್ನ ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ ತಿಳಿಸು.॥34½॥

ಮೂಲಮ್ - 35½

ಬಲಮಾತ್ಮನಿ ಜಾನಂತೀ ನ ಮಾಂ ಶಂಕಿತುಮರ್ಹಸಿ ॥
ಕರಿಷ್ಯಾಮಿ ತವ ಪ್ರೀತಿಂ ಸುಕೃತೇನಾಪಿ ತೇ ಶಪೇ ।

ಅನುವಾದ

ನನ್ನ ಬಲವನ್ನು ತಿಳಿದಿದ್ದರೂ ನೀನು ನನ್ನ ಮೇಲೆ ಸಂದೇಹ ಪಡಬಾರದು. ನಾನು ನನ್ನ ಸತ್ಕರ್ಮಗಳ ಮೇಲೆ ಆಣೆಯಿಟ್ಟು ಹೇಳುತ್ತೇನೆ- ನಿನಗೆ ಸಂತೋಷವಾಗುವುದನ್ನೇ ಮಾಡುವೆನು.॥35½॥

ಮೂಲಮ್ - 36

ಯಾವದಾವರ್ತತೇ ಚಕ್ರಂ ತಾವತೀ ಮೇವಸುಂಧರಾ ॥

ಮೂಲಮ್ - 37

ದ್ರಾವಿಡಾಃ ಸಿಂಧು ಸೌವೀರಾಃ ಸೌರಾಷ್ಟ್ರಾ ದಕ್ಷಿಣಾಪಥಾಃ ।
ವಂಗಾಂಗಮಗಧಾ ಮತ್ಸ್ಯಾಃ ಸಮೃದ್ಧಾಃ ಕಾಶಿಕೋಸಲಾಃ ॥

ಅನುವಾದ

ಸೂರ್ಯನ ಚಕ್ರ ತಿರುಗುತ್ತಾ ಇರುವವರೆಗೆ, ಇಡೀ ಪೃಥಿವಿಯು ನನ್ನ ಅಧಿಕಾರದಲ್ಲಿದೆ. ದ್ರವಿಡ, ಸಿಂಧು-ಸೌವೀರ, ಸೌರಾಷ್ಟ್ರ, ದಕ್ಷಿಣ ಭಾರತದ ಎಲ್ಲ ಪ್ರದೇಶ ಹಾಗೂ ಅಂಗ, ವಂಗ ಮಗಧ, ಮತ್ಸ್ಯ, ಕಾಶೀ ಮತ್ತು ಕೋಸಲ ಇವೆಲ್ಲ ಸಮೃದ್ಧಶಾಲೀ ದೇಶಗಳ ಮೇಲೆ ನನ್ನ ಆಧಿಪತ್ಯವಿದೆ.॥36-37॥

ಮೂಲಮ್ - 38

ತತ್ರ ಜಾತಂ ಬಹುದ್ರವ್ಯಂ ಧನಧಾನ್ಯ ಮಜಾವಿಕಮ್ ।
ತತೋ ವೃಣೀಷ್ವಕೈಕೇಯಿ ಯದ್ಯತ್ತ್ವಂ ಮನಸೇಚ್ಛಸಿ ॥

ಅನುವಾದ

ಕೇಕೆಯ ರಾಜನಂದಿನಿ! ಆ ದೇಶಗಳಲ್ಲಿ ಸಿಗುವ ಬಗೆ-ಬಗೆಯ ದ್ರವ್ಯ, ಧನ, ಧಾನ್ಯ ಹಾಗೂ ಕುರಿಯೇ ಮೊದಲಾದ ಪ್ರಾಣಿಗಳಲ್ಲಿ ನೀನು ಮನಸ್ಸಿನಿಂದ ಬಯಸುವುದನ್ನು ನನ್ನಿಂದ ಕೇಳಿ ಪಡೆಯಬಹುದು.॥38॥

ಮೂಲಮ್ - 39

ಕಿಮಾಯಾಸೇನ ತೇ ಭೀರು ಉತ್ತಿಷ್ಠೋತ್ತಿಷ್ಠ ಶೋಭನೇ ।
ತತ್ತ್ವಂ ಮೇ ಬ್ರೂಹಿ ಕೈಕೇಯಿ ಯತಸ್ತೇ ಭಯಮಾಗತಮ್ ।
ತತ್ತೇ ವ್ಯಪನಯಿಷ್ಯಾಮಿ ನೀಹಾರಮಿವ ರಶ್ಮಿವಾನ್ ॥

ಅನುವಾದ

ಸುಂದರೀ! ಇಷ್ಟೊಂದು ಕ್ಲೇಶ ಪಡೆಯುವ ಆವಶ್ಯಕತೆ ಏನಿದೆ? ಶೋಭನೇ! ಏಳು, ಏಳು! ಕೈಕೇ! ನಿನಗೆ ಯಾರಿಂದ ಭಯ ಉಂಟಾಗಿದೆ? ಸರಿಯಾಗಿ ಹೇಳು. ಸೂರ್ಯನು ಮಂಜನ್ನು ದೂರಗೊಳಿಸುವಂತೆಯೇ ನಾನು ನಿನ್ನ ಭಯವನ್ನು ಇಲ್ಲವಾಗಿಸುವೆನು.॥39॥

ಮೂಲಮ್ - 40

ತಥೋಕ್ತಾ ಸಾ ಸಮಾಶ್ವಸ್ತಾ ವಕ್ತುಕಾಮಾ ತದಪ್ರಿಯಮ್ ।
ಪರಿಪೀಡಯಿತುಂ ಭೂಯೋ ಭರ್ತಾರಮುಪಚಕ್ರಮೇ॥

ಅನುವಾದ

ರಾಜನು ಹೀಗೆ ಹೇಳಿದಾಗ ಕೈಕೆಗೆ ಸ್ವಲ್ಪ ಸಾಂತ್ವನ ಸಿಕ್ಕಿದಂತಾಯಿತು. ಆಗ ಆಕೆಯು ತನ್ನ ಸ್ವಾಮಿಯ ಬಳಿ ಆ ಅಪ್ರಿಯ ಮಾತನ್ನು ಹೇಳಲು ಬಯಸಿ, ತನ್ನ ಪತಿಗೆ ಇನ್ನು ಹೆಚ್ಚು ಪೀಡಿಸಲು ಸಿದ್ಧಳಾದಳು.॥40॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಹತ್ತನೆಯ ಸರ್ಗ ಪೂರ್ಣವಾಯಿತು. ॥10॥