००६ अभिषेकार्थं जनोल्लासः

वाचनम्
ಭಾಗಸೂಚನಾ

ಸೀತಾಸಹಿತ ಶ್ರೀರಾಮನು ನಿಯಮವ್ರತವನ್ನು ಕೈಗೊಂಡುದು, ಹರ್ಷಭರಿತರಾದ ನಗರವಾಸಿಗಳು ಪುರವನ್ನು ಸಿಂಗರಿಸಿದುದು, ಶ್ರೀರಾಮನ ಪಟ್ಟಾಭಿಷೇಕಕ್ಕೆ ಒಪ್ಪಿದ ದಶರಥರಾಜನಿಗೆ ಅಯೋಧ್ಯಾಪುರ ನಿವಾಸಿಗಳ ಕೃತಜ್ಞತೆ

ಮೂಲಮ್ - 1

ಗತೇ ಪುರೋಹಿತೇ ರಾಮಃ ಸ್ನಾತೋ ನಿಯತಮಾನಸಃ ।
ಸಹ ಪತ್ನ್ಯಾ ವಿಶಾಲಾಕ್ಷ್ಯಾ ನಾರಾಯಣಮುಪಾಗಮತ್ ॥

ಅನುವಾದ

ಪುರೋಹಿತರು ಹೊರಟುಹೋದ ಬಳಿಕ ಮನಸ್ಸನ್ನು ಸಂಯಮದಲ್ಲಿ ಇಡುವ ಶ್ರೀರಾಮನು ಸ್ನಾನಮಾಡಿ ವಿಶಾಲ ಲೋಚನೆ ಪತ್ನೀ ಸೀತೆಯೊಂದಿಗೆ ಶ್ರೀನಾರಾಯಣನ ಉಪಾಸನೆಯನ್ನು ಪ್ರಾರಂಭಿಸಿದನು.॥1॥

ಮೂಲಮ್ - 2

ಪ್ರಗೃಹ್ಯ ಶಿರಸಾ ಪಾತ್ರೀಂ ಹವಿಷೋ ವಿಧಿವತ್ ತತಃ ।
ಮಹತೇ ದೈವತಾಯಾಜ್ಯಂಜುಹಾವ ಜ್ವಲಿತಾನಲೇ ॥

ಅನುವಾದ

ಅವನು ಹವಿಷ್ಯಪಾತ್ರಕ್ಕೆ ತಲೆಬಾಗಿ ನಮಸ್ಕರಿಸಿ, ಪ್ರಜ್ವಲಿತ ಅಗ್ನಿಯಲ್ಲಿ ಮಹಾನ್ ದೇವತೆಯ (ಶೇಷಶಾಯಿ ನಾರಾಯಣ) ಪ್ರಸನ್ನತೆಗಾಗಿ ವಿಧಿವತ್ತಾಗಿ ಹೋಮ ಮಾಡಿದನು.॥2॥

ಮೂಲಮ್ - 3

ಶೇಷಂ ಚ ಹವಿಷಸ್ತಸ್ಯ ಪ್ರಾಶ್ಯಾಶಾಸ್ಯಾತ್ಮನಃ ಪ್ರಿಯಮ್ ।
ಧ್ಯಾಯನ್ನಾರಾಯಣಂ ದೇವಂ ಸ್ವಾಸ್ತೀರ್ಣೇ ಕುಶಸಂಸ್ತರೇ ॥

ಮೂಲಮ್ - 4

ವಾಗ್ಯತಃ ಸಹ ವೈದೇಹ್ಯಾ ಭೂತ್ವಾ ನಿಯತಮಾನಸಃ ।
ಶ್ರೀಮತ್ಯಾಯತನೇ ವಿಷ್ಣೋಃ ಶಿಶ್ಯೇ ನರವರಾತ್ಮಜಃ ॥

ಅನುವಾದ

ಅನಂತರ ತನ್ನ ಪ್ರಿಯ ಮನೋರಥ ಸಿದ್ಧಿಗಾಗಿ ಸಂಕಲ್ಪ ಮಾಡಿ ಆ ಯಜ್ಞಶೇಷ ಹವಿಸ್ಸನ್ನು ಭಕ್ಷಿಸಿದನು. ಮನಸ್ಸನ್ನು ಸಂಯಮದಲ್ಲಿಟ್ಟು ಮೌನವಾಗಿ ರಾಜಕುಮಾರ ಶ್ರೀರಾಮನು ವಿದೇಹನಂದಿನೀ ಸೀತೆಯೊಂದಿಗೆ ಭಗವಾನ್ ವಿಷ್ಣುವಿನ ಸುಂದರ ಮಂದಿರದಲ್ಲಿ ಶ್ರೀಮನ್ನಾರಾಯಣನನ್ನು ಧ್ಯಾನಿಸುತ್ತಾ, ಅಲ್ಲಿ ಚೆನ್ನಾಗಿ ಹಾಸಿದ ದರ್ಭೆಯ ಚಾಪೆಯ ಮೇಲೆ ಮಲಗಿದನು.॥3-4॥

ಮೂಲಮ್ - 5

ಏಕಯಾಮಾವಶಿಷ್ಟಾಯಾಂ ರಾತ್ರ್ಯಾಂ ಪ್ರತಿವಿಬುಧ್ಯ ಸಃ ।
ಅಲಂಕಾರವಿಧಿಂ ಸಮ್ಯಕ್ ಕಾರಯಾಮಾಸ ವೇಶ್ಮನಃ ॥

ಅನುವಾದ

ಮೂರು ಜಾವ ಕಳೆದಾಗ ನಾಲ್ಕನೆಯ ಜಾವದಲ್ಲಿ ನಿದ್ದೆಯಿಂದ ಶ್ರೀರಾಮನು ಎದ್ದನು. ಆಗ ಅವನು ಸಭಾ ಮಂಟಪವನ್ನು ಅಲಂಕರಿಸಲು ಸೇವಕರಿಗೆ ಆಜ್ಞಾಪಿಸಿದನು.॥5॥

ಮೂಲಮ್ - 6

ತತ್ರ ಶೃಣ್ವನ್ ಸುಖಾ ವಾಚಃ ಸೂತಮಾಗಧವಂದಿನಾಮ್ ।
ಪೂರ್ವಾಂ ಸಂಧ್ಯಾಮುಪಾಸೀನೋ ಜಜಾಪ ಸುಸಮಾಹಿತಃ ॥

ಅನುವಾದ

ಅಲ್ಲಿ ಸೂತ, ಮಾಗಧ ಮತ್ತು ಬಂದಿಗಳ ಕಿವಿಗಿಂಪಾದ ಪರಾಕುಗಳನ್ನು ಕೇಳುತ್ತಾ ಶ್ರೀರಾಮನು ಪ್ರಾತಃಕಾಲದ ಸಂಧ್ಯಾವಂದನೆ ಮಾಡಿ, ಏಕಾಗ್ರಚಿತ್ತನಾಗಿ ಜಪಮಾಡತೊಡಗಿದನು.॥6॥

ಮೂಲಮ್ - 7

ತುಷ್ಟಾವ ಪ್ರಣತಶ್ಚೈವ ಶಿರಸಾ ಮಧುಸೂದನಮ್ ।
ವಿಮಲಕ್ಷೌಮಸಂವೀತೋ ವಾಚಯಾಮಾಸ ಸ ದ್ವಿಜಾನ್ ॥

ಅನುವಾದ

ಅನಂತರ ರೇಷ್ಮೆ ಪೀತಾಂಬರ ಧರಿಸಿದ ಶ್ರೀರಾಮನು ತಲೆಬಾಗಿ ಭಗವಾನ್ ಮಧುಸೂದನನಿಗೆ ವಂದಿಸಿ, ಅವನನ್ನು ಸ್ತೋತ್ರಮಾಡಿ, ಬ್ರಾಹ್ಮಣರಿಂದ ಸ್ವಸ್ತಿ ವಾಚನ ಮಾಡಿಸಿದನು.॥7॥

ಮೂಲಮ್ - 8

ತೇಷಾಂ ಪುಣ್ಯಾಹಘೋಷೋಽಥ ಗಂಭೀರಮಧುರಸ್ತದಾ ।
ಅಯೋಧ್ಯಾಂ ಪೂರಯಾಮಾಸ ತೂರ್ಯ ಘೋಷಾನುನಾದಿತಃ ॥

ಅನುವಾದ

ಆ ಬ್ರಾಹ್ಮಣರ ಪುಣ್ಯಾಹವಾಚನ ಸಂಬಂಧಿ ಗಂಭೀರ ಮತ್ತು ಮಧುರ ಮಂತ್ರ ಘೋಷವು ನಾನಾ ವಿಧದ ವಾದ್ಯಗಳ ಧ್ವನಿಯೊಂದಿಗೆ ಸೇರಿ ಅಯೋಧ್ಯೆಯಲ್ಲಿ ಎಲ್ಲೆಡೆ ಪ್ರತಿಧ್ವನಿಸಿತು.॥8॥

ಮೂಲಮ್ - 9

ಕೃತೋಪವಾಸಂ ತು ತದಾ ವೈದೇಹ್ಯಾ ಸಹ ರಾಘವಮ್ ।
ಅಯೋಧ್ಯಾನಿಲಯಃ ಶ್ರುತ್ವಾ ಸರ್ವಃ ಪ್ರಮುದಿತೋ ಜನಃ ॥

ಅನುವಾದ

ಆಗ ಅಯೋಧ್ಯಾ ನಿವಾಸಿ ಜನರು - ಶ್ರೀರಾಮಚಂದ್ರನು ಸೀತೆಯೊಂದಿಗೆ ಉಪವಾಸ ವ್ರತವನ್ನು ಪ್ರಾರಂಭಿಸಿರುವನು ಎಂದು ತಿಳಿದಾಗ ಅವರೆಲ್ಲರಿಗೂ ಬಹಳ ಸಂತೋಷವಾಯಿತು.॥9॥

ಮೂಲಮ್ - 10

ತತಃ ಪೌರಜನಃ ಸರ್ವಃ ಶ್ರುತ್ವಾ ರಾಮಾಭಿಷೇಚನಮ್ ।
ಪ್ರಭಾತಾಂ ರಜನೀಂ ದೃಷ್ಟ್ವಾ ಚಕ್ರೇ ಶೋಭಯಿತುಂ ಪುರೀಮ್ ॥

ಅನುವಾದ

ಬೆಳಗಾಗುತ್ತಲೇ ಶ್ರೀರಾಮನ ಪಟ್ಟಾಭಿಷೇಕದ ಸಮಾಚಾರ ಕೇಳಿದ ಸಮಸ್ತ ಪುರವಾಸಿಗಳು ಅಯೋಧ್ಯೆಯನ್ನು ಸಿಂಗರಿಸಲು ತೊಡಗಿದರು.॥10॥

ಮೂಲಮ್ - 11

ಸಿತಾಭ್ರಶಿಖರಾಭೇಷು ದೇವತಾಯತನೇಷು ಚ ।
ಚತುಷ್ಟಥೇಷು ರಥ್ಯಾಸು ಚೈತ್ಯೇಷ್ವಟ್ಟಾಲಕೇಷು ಚ ॥

ಮೂಲಮ್ - 12

ನಾನಾ ಪಣ್ಯಸಮೃದ್ಧೇಷು ವಣಿಜಾಮಾಪಣೇಷು ಚ
ಕುಟುಂಬಿನಾಂ ಸಮೃದ್ಧೇಷು ಶ್ರೀಮತ್ಸು ಭವನೇಷು ಚ ॥

ಮೂಲಮ್ - 13

ಸಭಾಸು ಚೈವ ಸರ್ವಾಸು ವೃಕ್ಷೇಷ್ವಾಲಕ್ಷಿತೇಷು ಚ ।
ಧ್ವಜಾಃ ಸಮುಚ್ಛ್ರಿತಾಃ ಸಾಧು ಪತಾಕಾಶ್ಚಾಭವಂಸ್ತಥಾ ॥

ಅನುವಾದ

ಬಿಳಿಯ ಮೋಡಗಳಂತೆ ಶುಭ್ರವಾದ ಕಾಂತಿಯುಕ್ತ ಗಗನಚುಂಬಿ ಶಿಖರಗಳಿಂದ ಕೂಡಿದ್ದ ದೇವಾಲಯಗಳ ಮೇಲೆ, ನಾಲ್ಕು ರಸ್ತೆಗಳು ಕೂಡುವ ಚೌಕಗಳಲ್ಲಿ, ರಾಜ ಬೀದಿಗಳಲ್ಲಿ, ದೇವವೃಕ್ಷಗಳಲ್ಲಿ, ಸಮಸ್ತ ಸಭಾ ಗೃಹಗಳಲ್ಲಿ, ಮಾಳಿಗೆಗಳಲ್ಲಿ, ಅಂಗಡೀ ಬೀದಿಯ ವೈಶ್ಯರ ದೊಡ್ಡ-ದೊಡ್ಡ ಅಂಗಡಿಗಳ ಮೇಲೆ, ಗೃಹಸ್ಥರ ಸುಂದರ ಸಮೃದ್ಧಶಾಲೀ ಭವನಗಳ ಮೇಲೆ, ಎತ್ತರವಾದ ವೃಕ್ಷಗಳ ಮೇಲೆ ಧ್ವಜಗಳನ್ನು, ಪತಾಕೆಗಳನ್ನು ಹಾರಿಸಲಾಯಿತು.॥11-13॥

ಮೂಲಮ್ - 14

ನಟನರ್ತಕಸಂಘಾನಾಂ ಗಾಯಕಾನಾಂ ಚ ಗಾಯತಾಮ್ ।
ಮನಃ ಕರ್ಣಸುಖಾ ವಾಚಃ ಶುಶ್ರಾವ ಜನತಾ ತತಃ ॥

ಅನುವಾದ

ಆಗ ಎಲ್ಲೆಡೆ ನಟರು, ನರ್ತಕರ ಸಮೂಹಗಳು, ಗಾಯಕರು ಪ್ರದರ್ಶಿಸುತ್ತಿದ್ದ ತಮ್ಮ ಕಲೆಯಿಂದ ಅಲ್ಲಿಯ ಜನರ ಮನಸ್ಸಿಗೆ ಆಹ್ಲಾದನ್ನೂ, ಶ್ರವಣ ಸುಖವನ್ನು ನೀಡುತ್ತಿದ್ದರು.॥14॥

ಮೂಲಮ್ - 15

ರಾಮಾಭಿಷೇಕಯುಕ್ತಾಶ್ಚ ಕಥಾಶ್ಚಕ್ರುರ್ಮಿಥೋ ಜನಾಃ ।
ರಾಮಾಭಿಷೇಕೇ ಸಂಪ್ರಾಪ್ತೇಚತ್ವರೇಷು ಗೃಹೇಷು ಚ ॥

ಅನುವಾದ

ಶ್ರೀರಾಮನ ಪಟ್ಟಾಭಿಷೇಕದ ಶುಭ ಅವಕಾಶ ಪ್ರಾಪ್ತವಾದಾಗ ಎಲ್ಲ ಪ್ರಜಾಜನರು ಕೂಡುರಸ್ತೆಗಳಲ್ಲಿ ಮತ್ತು ಮನೆಗಳಲ್ಲಿಯೂ ಪರಸ್ಪರ ಶ್ರೀರಾಮನ ಪಟ್ಟಾಭಿಷೇಕದ ಚರ್ಚೆಯನ್ನೇ ಮಾಡುತ್ತಿದ್ದರು.॥15॥

ಮೂಲಮ್ - 16

ಬಾಲಾ ಅಪಿ ಕ್ರೀಡಮಾನಾ ಗೃಹದ್ವಾರೇಷು ಸಂಘಶಃ ।
ರಾಮಾಭಿಷವಸಂಯುಕ್ತಾಶ್ಚಕ್ರುರೇವ ಕಥಾ ಮಿಥಃ ॥

ಅನುವಾದ

ಮನೆಗಳ ಅಂಗಳಗಳಲ್ಲಿ ಆಡುತ್ತಿದ್ದ ಬಾಲಕರ ಗುಂಪುಗಳೂ ಕೂಡ ಪರಸ್ಪರ ಶ್ರೀರಾಮನ ಪಟ್ಟಾಭಿಷೇಕದ ಮಾತುಗಳನ್ನೇ ಆಡುತ್ತಿದ್ದರು.॥16॥

ಮೂಲಮ್ - 17

ಕೃತಪುಷ್ಪೋಪಹಾರಶ್ಚ ಧೂಪಗಂಧಾಧಿವಾಸಿತಃ ।
ರಾಜಮಾರ್ಗಃ ಕೃತಃ ಶ್ರೀಮಾನ್ ಪೌರೈರಾಮಾಭಿಷೇಚನೇ ॥

ಅನುವಾದ

ಪುರವಾಸಿಗಳು ಶ್ರೀರಾಮನ ಪಟ್ಟಾಭಿಷೇಕದ ಸಮಯ ರಾಜಮಾರ್ಗಗಳಲ್ಲಿ ಹೂವುಗಳ ಚೆಲ್ಲಿ, ಎಲ್ಲೆಡೆ ಧೂಪದ ಸುಗಂಧವನ್ನು ಬೀರಿ, ಅವರು ರಾಜಬೀದಿಯನ್ನು ಬಹಳ ಸುಂದರವಾಗಿ ಸಿಂಗರಿಸಿದರು.॥17॥

ಮೂಲಮ್ - 18

ಪ್ರಕಾಶಕರಣಾರ್ಥಂ ಚ ನಿಶಾಗಮನಶಂಕಯಾ ।
ದೀಪವೃಕ್ಷಾಂಸ್ತಥಾ ಚಕ್ರುರನುರಥ್ಯಾಸು ಸರ್ವಶಃ ॥

ಅನುವಾದ

ರಾಜ್ಯಾಭಿಷೇಕವು ಮುಗಿದಾಗ ರಾತ್ರೆಯಾಗಬಹುದೆಂದು ಎಣಿಸಿ ಪುರವಾಸಿಗಳು ಎಲ್ಲ ರಸ್ತೆಗಳ ಇಕ್ಕೆಲಗಳಲ್ಲಿ ಸಾಲು ಮರಗಳಂತೆ ಬೆಳಿಕಿನ ವ್ಯವಸ್ಥೆಗಾಗಿ ದೀಪಸ್ತಂಭಗಳನ್ನು ನಿಲ್ಲಿಸಿದರು.॥18॥

ಮೂಲಮ್ - 19

ಅಲಂಕಾರಂ ಪುರಸ್ಯೈವಂ ಕೃತ್ವಾ ತತ್ಪುರವಾಸಿನಃ ।
ಆಕಾಂಕ್ಷಮಾಣಾ ರಾಮಸ್ಯಯೌವರಾಜ್ಯಾಭಿಷೇಚನಮ್ ॥

ಮೂಲಮ್ - 20

ಸಮೇತ್ಯ ಸಂಘಶಃ ಸರ್ವೇ ಚತ್ವರೇಷು ಸಭಾಸು ಚ ।
ಕಥಯಂತೋ ಮಿಥಸ್ತತ್ರ ಪ್ರಶಶಂಸುರ್ಜನಾಧಿಪಮ್ ॥

ಅನುವಾದ

ಈ ಪ್ರಕಾರ ನಗರವನ್ನು ಅಲಂಕರಿಸಿ ಶ್ರೀರಾಮನು ಯುವರಾಜನಾಗಬೇಕೆಂದು ಬಯಸುವ ಸಮಸ್ತ ನಗರ ವಾಸಿಗಳು ಚೌಕಗಳಲ್ಲಿ ಮತ್ತು ಸಭಾಗೃಹಗಳಲ್ಲಿ ಗುಂಪು-ಗುಂಪಾಗಿ ಒಂದಾಗಿ ಪರಸ್ಪರ ಮಾತುಗಳನ್ನಾಡುತ್ತಾ ಮಹಾರಾಜನನ್ನು ಪ್ರಶಂಸಿಸ ತೊಡಗಿದರು.॥19-20॥

ಮೂಲಮ್ - 21

ಅಹೋಮಹಾತ್ಮಾ ರಾಜಾಯಮಿಕ್ಷ್ವಾಕುಕುಲನಂದನಃ ।
ಜ್ಞಾತ್ವಾ ವೃದ್ಧ ಂ ಸ್ವಮಾತ್ಮಾನಾಂ ರಾಮಂ ರಾಜ್ಯೇಽಭಿಷೇಕ್ಷ್ಯತಿ ॥

ಅನುವಾದ

ಅಯ್ಯಾ! ಇಕ್ಷ್ವಾಕು ಕುಲನಂದನ ಈ ರಾಜಾದಶರಥನು ಬಹಳ ಧರ್ಮಾತ್ಮನಾಗಿದ್ದಾನೆ. ತಾನು ಮುದುಕನಾದೆ ಎಂದು ತಿಳಿದು ಶ್ರೀರಾಮನಿಗೆ ಪಟ್ಟಕಟ್ಟಲು ಹೊರಟಿರುವನು.॥21॥

ಮೂಲಮ್ - 22

ಸರ್ವೇ ಹ್ಯನುಗೃಹೀತಾಃ ಸ್ಮ ಯನ್ನೋ ರಾಮೋ ಮಹೀಪತಿಃ ।
ಚಿರಾಯ ಭವಿತಾ ಗೋಪ್ತಾ ದೃಷ್ಟಲೋಕಪರಾವರಃ ॥

ಅನುವಾದ

ಶ್ರೀರಾಮಚಂದ್ರನು ನಮಗೆ ರಾಜನಾಗಿ ಚಿರಕಾಲ ನಮ್ಮನ್ನು ರಕ್ಷಿಸುತ್ತಾ ಇರುವನು, ಇದರಲ್ಲಿ ಭಗವಂತನೇ ನಮ್ಮ ಮೇಲೆ ಅನುಗ್ರಹಿಸಿರುವನು; ಏಕೆಂದರೆ ಅವನು ಜನರ ಒಳಿತು-ಕೆಡುಕುಗಳನ್ನು ಚೆನ್ನಾಗಿ ತಿಳಿದಿರುವನು.॥22॥

ಮೂಲಮ್ - 23

ಅನುದ್ಧತಮನಾ ವಿದ್ವಾನ್ ಧರ್ಮಾತ್ಮಾ ಭ್ರಾತೃವತ್ಸಲಃ ।
ಯಥಾ ಚ ಭ್ರಾತೃಷು ಸ್ನಿಗ್ಧಸ್ತಥಾಸ್ಮಾಸ್ವಪಿ ರಾಘವಃ ॥

ಅನುವಾದ

ಶ್ರೀರಾಮನ ಮನಸ್ಸು ಎಂದೂ ಉದ್ಧತವಾಗುವುದಿಲ್ಲ. ಅವನು ವಿದ್ವಾಂಸನೂ, ಧರ್ಮಾತ್ಮನೂ, ಸಹೋದರರ ಮೇಲೆ ಸ್ನೇಹವನ್ನಿಡುವವನೂ ಆಗಿದ್ದಾನೆ. ಅವನಿಗೆ ಸಹೋದರರ ಮೇಲೆ ಪ್ರೇಮ ಇರುವಂತೆಯೇ ನಮ್ಮ ಮೇಲೆಯೂ ಪ್ರೇಮವಿದೆ.॥23॥

ಮೂಲಮ್ - 24

ಚಿರಂ ಜೀವತು ಧರ್ಮಾತ್ಮಾ ರಾಜಾ ದಶರಥೋನಘಃ ।
ಯತ್ಪ್ರಸಾದೇನಾಭಿಷಿಕ್ತಂ ರಾಮಂ ದ್ರಕ್ಷ್ಯಾಮಹೇ ವಯಮ್ ॥

ಅನುವಾದ

ಧರ್ಮಾತ್ಮಾ ಹಾಗೂ ಪುಣ್ಯಾತ್ಮನಾದ ದಶರಥ ರಾಜನು ಚಿರಕಾಲ ಜೀವಿಸಿರಲಿ. ಅವನ ಕೃಪೆಯಿಂದ ನಮಗೆ ಶ್ರೀರಾಮನ ಪಟ್ಟಾಭಿಷೇಕದ ದರ್ಶನ ಸುಲಭವಾಯಿತು.॥24॥

ಮೂಲಮ್ - 25

ಏವಂ ವಿಧಂ ಕಥಯತಾಂ ಪೌರಾಣಾಂಶುಶ್ರುವುಃ ಪರೇ ।
ದಿಗ್ಭ್ಯೋ ವಿಶ್ರುತ ವೃತ್ತಾಂತಾಃ ಪ್ರಾಪ್ತಾ ಜಾನಪದಾ ಜನಾಃ ॥

ಅನುವಾದ

ಪಟ್ಟಾಭಿಷೇಕದ ವೃತ್ತಾಂತ ಕೇಳಿ ನಾನಾ ದಿಕ್ಕುಗಳಿಂದ ಅನೇಕ ದೇಶಗಳ ಜನರು ಅಲ್ಲಿಗೆ ಬಂದಿದ್ದರು. ಅವರೆಲ್ಲರೂ ಪ್ರಜಾ ಜನರು ಆಡುತ್ತಿರುವ ಎಲ್ಲ ಮಾತುಗಳನ್ನು ಕೇಳುತ್ತಿದ್ದರು.॥25॥

ಮೂಲಮ್ - 26

ತೇ ತು ದಿಗ್ಭ್ಯಃ ಪುರೀಂ ಪ್ರಾಪ್ತಾ ದ್ರಷ್ಟುಂರಾಮಾಭಿಷೇಚನಮ್ ।
ರಾಮಸ್ಯ ಪೂರಯಾಮಾಸುಃ ಪುರೀಂ ಜಾನಪದಾಜನಾಃ ॥

ಅನುವಾದ

ಅವರೆಲ್ಲರೂ ಶ್ರೀರಾಮನ ಪಟ್ಟಾಭಿಷೇಕವನ್ನು ನೋಡಲಿಕ್ಕಾಗಿ ಅನೇಕ ಕಡೆಗಳಿಂದ ಅಯೋಧ್ಯೆಗೆ ಬಂದಿದ್ದರು. ಆ ನಾಗರಿಕ ಜನರು ಶ್ರೀರಾಮಪುರಿಯನ್ನು ತಮ್ಮ ಉಪಸ್ಥಿತಿಯಿಂದ ತುಂಬಿ ಬಿಟ್ಟಿದ್ದರು.॥26॥

ಮೂಲಮ್ - 27

ಜನೌಘೈಸ್ತೈರ್ವಿಸರ್ಪದ್ಭಿಃ ಶುಶ್ರುವೇ ತತ್ರ ನಿಃಸ್ವನಃ ।
ಪರ್ವಸೂದೀರ್ಣವೇಗಸ್ಯ ಸಾಗರಸ್ಯೇವ ನಿಃಸ್ವನಃ ॥

ಅನುವಾದ

ಅಲ್ಲಿ ನೆರೆದ ಮನುಷ್ಯರು ಮಾಡುತ್ತಿದ್ದ ಗದ್ದಲವು ಪೌರ್ಣಮಿ-ಅಮಾವಾಸ್ಯೆಗೆ ಉಕ್ಕುವ ಸಮುದ್ರದ ಗರ್ಜನೆಯಂತೆ ಕೇಳಿಬರುತ್ತಿತ್ತು.॥27॥

ಮೂಲಮ್ - 28

ತತಸ್ತದಿಂದ್ರಕ್ಷಯಸಂನಿಭಂ ಪುರಂ
ದಿದೃಕ್ಷುಭಿರ್ಜಾನಪದೈರುಪಾಹಿತೈಃ ।
ಸಮಂತತಃ ಸಸ್ವನಮಾಕುಲಂ ಬಭೌ
ಸಮುದ್ರಯಾದೋಭಿರಿವಾರ್ಣವೋದಕಮ್ ॥

ಅನುವಾದ

ಆಗ ಶ್ರೀರಾಮನ ಪಟ್ಟಾಭಿಷೇಕ ಉತ್ಸವವನ್ನು ನೋಡಲು ಬಂದಿರುವ ಪುರವಾಸೀ ಜನರಿಂದ ಎಲ್ಲೆಡೆ ತುಂಬಿದ ಆ ಇಂದ್ರಪುರಿ ಯಂತಿರುವ ನಗರವು ಅತ್ಯಂತ ಕೋಲಾಹಲಪೂರ್ಣವಾದ್ದರಿಂದ. ಮೀನು, ಮೊಸಳೆ, ತಿಮಿಂಗಿಲ ಮುಂತಾದ ಜಲ-ಜಂತುಗಳಿಂದ ತುಂಬಿ ತುಳುಕುವ ಮಹಾಸಾಗರದಂತೆ ಕಂಡುಬರುತ್ತಿತ್ತು.॥28॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಆರನೆಯ ಸರ್ಗ ಪೂರ್ಣವಾಯಿತು. ॥6॥