वाचनम्
ಭಾಗಸೂಚನಾ
ದಶರಥನ ಸಲಹೆಯಂತೆ ವಸಿಷ್ಠರು ಸೀತಾ-ರಾಮರಿಗೆ ಉಪವಾಸ ವ್ರತವನ್ನು ಕೈಗೊಳ್ಳಲು ಸಂಕಲ್ಪ ಮಾಡಿಸಿದುದು, ಈ ವಾರ್ತೆಯನ್ನು ವಸಿಷ್ಠರು ದಶರಥನಿಗೆ ತಿಳಿಯಪಡಿಸಿದುದು
ಮೂಲಮ್ - 1
ಸಂದಿಶ್ಯ ರಾಮಂ ನೃಪತಿಃ ಶ್ವೋಭಾವಿನ್ಯಭಿಷೇಚನೇ ।
ಪುರೋಹಿತಂ ಸಮಾಹೂಯ ವಸಿಷ್ಠಮಿದಮಬ್ರವೀತ್ ॥
ಅನುವಾದ
ದಶರಥನು ಶ್ರೀರಾಮನಿಗೆ ಮರುದಿನ ನಡೆಯ ಬೇಕಾಗಿದ್ದ ಪಟ್ಟಾಭಿಷೇಕದ ವಿಷಯದಲ್ಲಿ ಸೂಕ್ತ ಸಂದೇಶವನ್ನು ಕೊಟ್ಟ ಬಳಿಕ ತನ್ನ ಪುರೋಹಿತರಾದ ವಸಿಷ್ಠರನ್ನು ಕರೆಸಿ ಇಂತೆಂದನು.॥1॥
ಮೂಲಮ್ - 2
ಗಚ್ಛೋಪವಾಸಂ ಕಾಕುತ್ಸ್ಥಂಕಾರಯಾದ್ಯ ತಪೋಧನ ।
ಶ್ರೇಯಸೇ ರಾಜ್ಯಲಾಭಾಯ ವಧ್ವಾ ಸಹ ಯತವ್ರತ ॥
ಅನುವಾದ
ತಪೋಧನರೇ! ನೀವು ಹೋಗಿ, ವಿಘ್ನನಿವಾರಣ ರೂಪೀ ಶ್ರೇಯಸ್ಸಿನ ಸಿದ್ಧಿಗಾಗಿ ಹಾಗೂ ರಾಜ್ಯದ ಪ್ರಾಪ್ತಿಗಾಗಿ ಸೀತಾ ಸಹಿತ ಶ್ರೀರಾಮನು ಕೈಗೊಳ್ಳಬೇಕಾದ ಉಪವಾಸ ವ್ರತಾನುಷ್ಠಾನದ ಸಂಕಲ್ಪ ಮಾಡಿಸಿರಿ.॥2॥
ಮೂಲಮ್ - 3
ತಥೇತಿ ಚ ಸ ರಾಜಾನಮುಕ್ತ್ವಾ ವೇದವಿದಾಂ ವರಃ ।
ಸ್ವಯಂ ವಸಿಷ್ಠೋ ಭಗವಾನ್ಯಯೌ ರಾಮನಿವೇಶನಮ್ ॥
ಮೂಲಮ್ - 4
ಉಪವಾಸಯಿತುಂ ವೀರಂ ಮಂತ್ರವಿನ್ಮಂತ್ರಕೋವಿದಮ್ ।
ಬ್ರಾಹ್ಮಂ ರಥವರಂ ಯುಕ್ತಮಾಸ್ಥಾಯ ಸುದೃಢವ್ರತಃ ॥
ಅನುವಾದ
ಆಗ ಹಾಗೆಯೇ ಆಗಲಿ ಎಂದು ಹೇಳಿ ವೇದವೇತ್ತ ವಿದ್ವಾಂಸರಲ್ಲಿ ಶ್ರೇಷ್ಠರೂ, ಉತ್ತಮ ವ್ರತಧಾರಿಗಳೂ ಆದ ಭಗವಾನ್ ವಸಿಷ್ಠರು ಮಂತ್ರವೇತ್ತನಾದ ವೀರ ಶ್ರೀರಾಮನಿಗೆ ಉಪವಾಸ ವ್ರತದ ದೀಕ್ಷೆಯನ್ನು ಕೊಡಲು ಬ್ರಾಹ್ಮಣರಿಗೆ ಯೋಗ್ಯವಾದ ದಿವ್ಯ ರಥಾರೂಢರಾಗಿ ಶ್ರೀರಾಮನ ಅರಮನೆಗೆ ಹೊರಟರು.॥3-4॥
ಮೂಲಮ್ - 5
ಸ ರಾಮಭವನಂ ಪ್ರಾಪ್ಯಪಾಂಡುರಾಭ್ರಘನಪ್ರಭಮ್ ।
ತಿಸ್ರಃ ಕಕ್ಷ್ಯಾ ರಥೇನೈವ ವಿವೇಶ ಮುನಿಸತ್ತಮಃ ॥
ಅನುವಾದ
ಶ್ರೀರಾಮನ ಅರಮನೆಯು ಬಿಳಿಯ ಮೋಡಗಳಂತೆ ಉಜ್ವಲವಾಗಿತ್ತು. ಅದರ ಬಳಿಗೆ ಹೋಗಿ ಮೂರು ಪ್ರಾಕಾರಗಳನ್ನು ರಥದಲ್ಲಿ ಕುಳಿತೇ ಪ್ರವೇಶಿಸಿದರು.॥5॥
ಮೂಲಮ್ - 6
ತಮಾಗತಮೃಷಿಂ ರಾಮಸ್ತ್ವರನ್ನಿವ ಸಸಂಭ್ರಮಮ್ ।
ಮಾನಯಿಷ್ಯನ್ ಸ ಮಾನಾರ್ಹಂ ನಿಶ್ಚಕ್ರಾಮ ನಿವೇಶನಾತ್ ॥
ಅನುವಾದ
ಆಗಮಿಸಿದ ಸಮ್ಮಾನನೀಯ ಮಹರ್ಷಿಯನ್ನು ಸ್ವಾಗತಿಸಲು ಶ್ರೀರಾಮಚಂದ್ರನು ಬಹಳ ಆತುರದಿಂದ ವೇಗವಾಗಿ ಅರಮನೆಯಿಂದ ಹೊರಗೆ ಬಂದನು.॥6॥
ಮೂಲಮ್ - 7
ಅಭ್ಯೇತ್ಯ ತ್ವರಮಾಣೋಽಥ ರಥಾಭ್ಯಾಶಂ ಮನೀಷಿಣಃ ।
ತತೋಽವತಾರಯಾಮಾಸ ಪರಿಗೃಹ್ಯ ರಥಾತ್ಸ್ವಯಮ್ ॥
ಅನುವಾದ
ಆ ಮನೀಷೀ ಮಹರ್ಷಿಯ ರಥದ ಬಳಿಗೆ ಶೀಘ್ರವಾಗಿ ಹೋಗಿ ಶ್ರೀರಾಮನು ಸ್ವತಃ ಅವರ ಕೈಹಿಡಿದು ರಥದಿಂದ ಕೆಳಗೆ ಇಳಿಸಿಕೊಂಡನು.॥7॥
ಮೂಲಮ್ - 8
ಸ ಚೈನಂ ಪ್ರಶ್ರಿತಂ ದೃಷ್ಟ್ವಾಸಂಭಾಷ್ಯಾಭಿಪ್ರಸಾದ್ಯ ಚ ।
ಪ್ರಿಯಾರ್ಹಂ ಹರ್ಷಯನ್ ರಾಮಮಿತ್ಯುವಾಚ ಪುರೋಹಿತಃ ॥
ಅನುವಾದ
ಪ್ರಿಯ ವಚನಗಳನ್ನು ಕೇಳಲು ಅರ್ಹನಾದ ಶ್ರೀರಾಮನು ಇಷ್ಟು ವಿನೀತನಾಗಿರುವುದನ್ನು ಕಂಡು ಪುರೋಹಿತರು ವತ್ಸ! ಎಂದು ಕರೆದು ಅವನನ್ನು ಸಂತೋಷಗೊಳಿಸಿ ಹರ್ಷವನ್ನು ಹೆಚ್ಚಿಸುತ್ತಾ ಇಂತೆಂದರು.॥8॥
ಮೂಲಮ್ - 9
ಪ್ರಸನ್ನಸ್ತೇ ಪಿತಾ ರಾಮ ಯತ್ವಂ ರಾಜ್ಯಮವಾಪ್ಸಸಿ ।
ಉಪವಾಸಂ ಭವಾನದ್ಯ ಕರೋತು ಸಹ ಸೀತಯಾ ॥
ಅನುವಾದ
ಶ್ರೀರಾಮಾ! ನಿನ್ನ ತಂದೆಯವರು ನಿನ್ನ ಮೇಲೆ ಬಹಳ ಪ್ರಸನ್ನರಾಗಿರುವರು; ಏಕೆಂದರೆ, ನಿನಗೆ ಅವರಿಂದ ರಾಜ್ಯ ದೊರೆಯಲಿದೆ. ಆದ್ದರಿಂದ ಇಂದಿನ ರಾತ್ರಿಯಲ್ಲಿ ನೀನು ಸೀತೆಯೊಂದಿಗೆ ಉಪವಾಸ ಮಾಡು.॥9॥
ಮೂಲಮ್ - 10
ಪ್ರಾತಸ್ತ್ವಾಮಭಿಷೇಕ್ತಾ ಹಿ ಯೌವರಾಜ್ಯೇ ನರಾಧಿಪಃ ।
ಪಿತಾ ದಶರಥಃ ಪ್ರೀತ್ಯಾ ಯಯಾತಿಂ ನಹುಷೋ ಯಥಾ ॥
ಅನುವಾದ
ರಘುನಂದನ! ನಹುಷನು ಯಯಾತಿಯ ಪಟ್ಟಾಭಿಷೇಕ ಮಾಡಿದಂತೆ ನಿನ್ನ ತಂದೆ ಮಹಾರಾಜಾ ದಶರಥನು ನಾಳೆ ಬೆಳಿಗ್ಗೆ ಬಹಳ ಪ್ರೇಮದಿಂದ ನಿನಗೆ ರಾಜ್ಯಪಟ್ಟಾಭಿಷೇಕ ಮಾಡುವರು.॥10॥
ಮೂಲಮ್ - 11
ಇತ್ಯುಕ್ತ್ವಾ ಸ ತದಾ ರಾಮಮುಪವಾಸಂ ಯತವ್ರತಃ ।
ಮಂತ್ರವತ್ಕಾರಯಾಮಾಸ ವೈದೇಹ್ಯಾ ಸಹಿತಂ ಶುಚಿಃ ॥
ಅನುವಾದ
ಹೀಗೆ ಹೇಳಿ ವ್ರತಧಾರಿ ಹಾಗೂ ಪವಿತ್ರ ಮಹರ್ಷಿಗಳು ಮಂತ್ರೋಚ್ಚಾರಣ ಪೂರ್ವಕ ಸೀತಾ ಸಹಿತ ಶ್ರೀರಾಮನಿಗೆ ಆ ಉಪವಾಸ ವ್ರತದ ದೀಕ್ಷೆಯನ್ನು ಕೊಡಿಸಿದರು.॥11॥
ಮೂಲಮ್ - 12
ತತೋ ಯಥಾವದ್ ರಾಮೇಣ ಸ ರಾಜ್ಞೋ ಗುರುರರ್ಚಿತಃ ।
ಅಭ್ಯನುಜ್ಞಾಪ್ಯ ಕಾಕುತ್ಸ್ಥಂ ಯಯೌ ರಾಮನಿವೇಶನಾತ್ ॥
ಅನುವಾದ
ಅನಂತರ ಶ್ರೀರಾಮಚಂದ್ರನು ಮಹಾರಾಜರಿಗೂ ಗುರುಗಳಾದ ವಸಿಷ್ಠರನ್ನು ಯಥಾವಿಧಿಯಾಗಿ ಪೂಜಿಸಿದನು. ಮತ್ತೆ ಅವರು ಶ್ರೀರಾಮನ ಅನುಮತಿ ಪಡೆದು ಅರಮನೆಯಿಂದ ಹೊರಟರು.॥12॥
ಮೂಲಮ್ - 13
ಸುಹೃದ್ಭಿಸ್ತತ್ರ ರಾಮೋಽಪಿ ಸುಖಾಸೀನಃ ಪ್ರಿಯಂವದೈಃ ।
ಸಭಾಜಿತೋ ವಿವೇಶಾಥ ತಾನನುಜ್ಞಾಪ್ಯ ಸರ್ವಶಃ ॥
ಅನುವಾದ
ಶ್ರೀರಾಮನೂ ಕೂಡ ಪ್ರಿಯವಚನವನ್ನಾಡುವ ಸುಹೃದರೊಂದಿಗೆ ಸ್ವಲ್ಪ ಹೊತ್ತು ಕುಳಿತು, ಮತ್ತೆ ಅವರಿಂದ ಸಮ್ಮಾನಿತನಾಗಿ ಎಲ್ಲರ ಅನುಮತಿ ಪಡೆದು ಅಂತಃಪುರಕ್ಕೆ ತೆರಳಿದನು.॥13॥
ಮೂಲಮ್ - 14
ಹೃಷ್ಟನಾರೀನರಯುತಂ ರಾಮವೇಶ್ಮ ತದಾ ಬಭೌ ।
ಯಥಾ ಮತ್ತದ್ವಿಜಗಣಂ ಪ್ರಫುಲ್ಲನಲಿನಂ ಸರಃ ॥
ಅನುವಾದ
ಆಗ ಶ್ರೀರಾಮನ ಭವನವು ಹರ್ಷೋತ್ಫುಲ್ಲ ನರ-ನಾರಿಯರಿಂದ ತುಂಬಿದ್ದು, ಮತ್ತ ಪಕ್ಷಿಗಳ ಕಲರವದಿಂದ ಕೂಡಿದ ಅರಳಿದ ಕಮಲಗಳ ಸರೋವರದಂತೆ ಶೋಭಿಸುತ್ತಿತ್ತು.॥14॥
ಮೂಲಮ್ - 15
ಸ ರಾಜಭವನಪ್ರಖ್ಯಾತ್ತಸ್ಮಾದ್ ರಾಮನಿವೇಶನಾತ್ ।
ನಿರ್ಗತ್ಯ ದದೃಶೇ ಮಾರ್ಗಂ ವಸಿಷ್ಠೋ ಜನಸಂವೃತಮ್ ॥
ಅನುವಾದ
ರಾಜಭವನಗಳಲ್ಲಿ ಶ್ರೇಷ್ಠವಾದ ಶ್ರೀರಾಮನ ಅರಮನೆಯಿಂದ ಹೊರಗೆ ಬಂದು ವಸಿಷ್ಠರು - ಎಲ್ಲ ರಾಜಮಾರ್ಗಗಳು ಜನ ಜಂಗುಳಿಯಿಂದ ತುಂಬಿರುವುದನ್ನು ನೋಡಿದರು.॥15॥
ಮೂಲಮ್ - 16
ವೃಂದವೃಂದೈರಯೋಧ್ಯಾಯಾಂ ರಾಜಮಾರ್ಗಾಃ ಸಮಂತತಃ ।
ಬಭೂವುರಭಿಸಂಬಾಧಾಃ ಕುತೂಹಲಜನೈರ್ವೃತಾಃ॥
ಅನುವಾದ
ಅಯೋಧ್ಯೆಯ ರಾಜಬೀದಿಗಳು ಶ್ರೀರಾಮನ ಪಟ್ಟಾಭಿಷೇಕವನ್ನು ನೋಡಲು ಉತ್ಸುಕರಾದ ಗುಂಪು-ಗುಂಪಾದ ಜನರಿಂದ ತುಂಬಿತುಳುಕುತ್ತಿದ್ದವು. ಹೀಗೆ ಎಲ್ಲ ಬೀದಿಗಳೂ ಜನರಿಂದ ತುಂಬಿಹೋಗಿದ್ದವು.॥16॥
ಮೂಲಮ್ - 17
ಜನವೃಂದೋರ್ಮಿಸಂಘರ್ಷಹರ್ಷಸ್ವನವತಸ್ತದಾ ।
ಬಭೂವ ರಾಜಮಾರ್ಗಸ್ಯ ಸಾಗರಸ್ಯೇವ ನಿಸ್ವನಃ ॥
ಅನುವಾದ
ಜನಸಮುದಾಯರೂಪಿ ತರಂಗಗಳ ಘರ್ಷಣೆಯಿಂದ ಕೇಳಿಬರುತ್ತಿದ್ದ ಹರ್ಷಧ್ವನಿಯಿಂದ ವ್ಯಾಪ್ತವಾದ ರಾಜಮಾರ್ಗದ ಕೋಲಾಹಲವು ಸಮುದ್ರದ ಗರ್ಜನೆಯಂತೆ ಕೇಳಿಬರುತ್ತಿತ್ತು.॥17॥
ಮೂಲಮ್ - 18
ಸಿಕ್ತಸಂಮೃಷ್ಟರಥ್ಯಾ ಹಿ ತಥಾ ಚ ವನಮಾಲಿನೀ ।
ಅಸೀದಯೋಧ್ಯಾ ತದಹಃ ಸಮುಚ್ಛ್ರಿತಗೃಹಧ್ವಜಾ ॥
ಅನುವಾದ
ಆ ದಿನ ವನ-ಉಪವನಗಳ ಸಾಲುಗಳಿಂದ ಶೋಭಿಸುವ ಅಯೋಧ್ಯಾ ಪಟ್ಟಣದ ಮನೆ-ಮನೆಗಳಲ್ಲಿ ಎತ್ತರವಾಗಿ ಧ್ವಜಗಳು ಹಾರಾಡುತ್ತಿದ್ದವು. ಅಲ್ಲಿಯ ಎಲ್ಲ ದಾರಿ ಮತ್ತು ಬೀದಿಗಳನ್ನು ಗುಡಿಸಿ-ಸಾರಿಸಿ ಪನ್ನೀರನ್ನು ಚಿಮುಕಿಸಿದ್ದರು.॥18॥
ಮೂಲಮ್ - 19
ತದಾ ಹ್ಯಯೋಧ್ಯಾನಿಲಯಃ ಸಸ್ತ್ರೀಬಾಲಾಕುಲೋ ಜನಃ ।
ರಾಮಾಭಿಷೇಕಮಾಕಾಂಕ್ಷನ್ನಾಕಾಂಕ್ಷನ್ನುದಯಂ ರವೇಃ ॥
ಅನುವಾದ
ಅಯೋಧ್ಯಾನಿವಾಸೀ ಸ್ತ್ರೀಯರು ಮತ್ತು ಬಾಲಕರ ಸಹಿತ ಜನಸಮುದಾಯವು ಶ್ರೀರಾಮನ ಪಟ್ಟಾಭಿಷೇಕವನ್ನು ನೋಡುವ ತವಕದಿಂದ ಆಗ ಬೇಗನೇ ಬೆಳಗಾಗುವಂತೆ ಬಯಸುತ್ತಿದ್ದರು.॥19॥
ಮೂಲಮ್ - 20
ಪ್ರಜಾಲಂಕಾರಭೂತಂ ಚ ಜನಸ್ಯಾನಂದವರ್ಧನಮ್ ।
ಉತ್ಸುಕೋಽಭೂಜ್ಜನೋ ದ್ರಷ್ಟುಂ ತಮಯೋಧ್ಯಾಮಹೋತ್ಸವಮ್ ॥
ಅನುವಾದ
ಅಯೋಧ್ಯೆಯ ಆ ಮಹೋತ್ಸವವು ಪ್ರಜೆಗಳಿಗೆ ಅಲಂಕಾರ ಪ್ರಾಯವಾಗಿ ಜನರಿಗೆ ಆನಂದವನ್ನು ಹೆಚ್ಚಿಸುವುದಾಗಿತ್ತು; ಅಲ್ಲಿಯ ಎಲ್ಲ ಜನರೂ ಅದನ್ನು ನೋಡಲು ಉತ್ಕಂಠಿತರಾಗಿದ್ದರು.॥20॥
ಮೂಲಮ್ - 21
ಏವಂ ತಜ್ಜನಸಂಬಾಧಂ ರಾಜಮಾರ್ಗಂ ಪುರೋಹಿತಃ ।
ವ್ಯೆಹನ್ನಿವ ಜನೌಘಂ ತಂ ಶನೈ ರಾಜಕುಲಂ ಯಯೌ ॥
ಅನುವಾದ
ಈ ಪ್ರಕಾರ ಜನ ಸಮೂಹಗಳಿಂದ ತುಂಬಿದ ರಾಜ ಬೀದಿಗೆ ಬಂದು ಪುರೋಹಿತರು ಆ ಜನ ಸಮೂಹವನ್ನು ಪಕ್ಕಕ್ಕೆ ಸರಿಸುತ್ತಾ ನಿಧಾನವಾಗಿ ಅರಮನೆಯ ಕಡೆಗೆ ಹೊರಟರು.॥21॥
ಮೂಲಮ್ - 22
ಸಿತಾಭ್ರಶಿಖಿರಪ್ರಖ್ಯಂ ಪ್ರಾಸಾದಮಧಿರುಹ್ಯ ಚಃ ।
ಸಮೀಯಾಯ ನರೇಂದ್ರೇಣ ಶಕ್ರೇಣೇವ ಬೃಹಸ್ಪತಿಃ ॥
ಅನುವಾದ
ಬೆಳ್ಳಿಯ ಮೋಡದಂತೆ ಸುಶೋಭಿತವಾದ ಅರಮನೆಯನ್ನು ಪ್ರವೇಶಿಸಿ ವಸಿಷ್ಠರು ಬೃಹಸ್ಪತಿಗಳು ಇಂದ್ರನನ್ನು ಭೆಟ್ಟಿಯಾಗುವಂತೆ ರಾಜಾ ದಶರಥನನ್ನು ಭೆಟ್ಟಿಯಾದರು.॥22॥
ಮೂಲಮ್ - 23
ತಮಾಗತಮಭಿಪ್ರೇಕ್ಷ್ಯ ಹಿತ್ವಾ ರಾಜಾಸನಂ ನೃಪಃ ।
ಪಪ್ರಚ್ಛ ಸ್ವಮತಂ ತಸ್ಮೈ ಕೃತಮಿತ್ಯಭಿವೇದಯತ್ ॥
ಅನುವಾದ
ಬಂದಿರುವ ಗುರುಗಳನ್ನು ನೋಡಿ ರಾಜನು ಸಿಂಹಾಸನದಿಂದ ಎದ್ದು ನಿಂತು ಕೇಳತೊಡಗಿದನು - ಮುನಿಗಳೇ! ನನ್ನ ಅಭಿಪ್ರಾಯವನ್ನು ಪುರೈಸಿದಿರಲ್ಲ? ವಸಿಷ್ಠರು ಹೌದು ಎಂದು ಉತ್ತರಿಸಿದರು.॥23॥
ಮೂಲಮ್ - 24
ತೇನ ಚೈವ ತದಾ ತುಲ್ಯಂ ಸಹಾಸೀನಾಃ ಸಭಾಸದಃ ।
ಆಸನೇಭ್ಯಃ ಸಮುತ್ತಸ್ಥುಃ ಪೂಜಯಂತಃ ಪುರೋಹಿತಮ್ ॥
ಅನುವಾದ
ದಶರಥನೊಂದಿಗೆ ಆಗ ಅಲ್ಲಿ ಕುಳಿತಿರುವ ಇತರ ಸಭಾಸದರೂ ಪುರೋಹಿತರನ್ನು ಆದರಿಸುತ್ತಾ ತಮ್ಮ-ತಮ್ಮ ಆಸನಗಳಿಂದ ಎದ್ದು ನಿಂತುಕೊಂಡರು.॥24॥
ಮೂಲಮ್ - 25
ಗುರುಣಾ ತ್ವಭ್ಯನುಜ್ಞಾತೋ ಮನುಜೌಘಂ ವಿಸೃಜ್ಯ ತಮ್ ।
ವಿವೇಶಾಂತಃ ಪುರಂ ರಾಜಾ ಸಿಂಹೋ ಗಿರಿಗುಹಾಮಿವ ॥
ಅನುವಾದ
ಅನಂತರ ಗುರುಗಳ ಅಪ್ಪಣೆ ಪಡೆದು ದಶರಥನು ಅಲ್ಲಿನ ಸಮುದಾಯವನ್ನು ಬೀಳ್ಕೊಟ್ಟು ಪರ್ವತದ ಗುಹೆಯನ್ನು ಪ್ರವೇಶಿಸುವ ಸಿಂಹದಂತೆ ತನ್ನ ಅಂತಃಪುರಕ್ಕೆ ನಡೆದನು.॥25॥
ಮೂಲಮ್ - 26
ತದಗ್ರ್ಯವೇಷ ಪ್ರಮದಾಜನಾಕುಲಂ
ಮಹೇಂದ್ರವೇಶ್ಮ ಪ್ರತಿಮಂನಿವೇಶನಮ್ ।
ವಿದೀಪಯಂಶ್ಚಾರು ವಿವೇಶ ಪಾರ್ಥಿವಃ
ಶಶೀವ ತಾರಾಗಣಸಂಕುಲಂ ನಭಃ ॥
ಅನುವಾದ
ಸುಂದರ ವೇಷ-ಭೂಷಣಗಳನ್ನು ಧರಿಸಿದ ಸುಂದರಿಯರಿಂದ ತುಂಬಿದ ಇಂದ್ರಸದನದಂತೆ ಆ ಮನೋಹರ ಅಂತಃಪುರವನ್ನು ತನ್ನ ಶೋಭೆಯಿಂದ ಬೆಳಗುತ್ತಾ ಚಂದ್ರನು ತಾರೆಗಳಿಂದ ತುಂಬಿದ ಆಕಾಶವನ್ನು ಪ್ರವೇಶಿಸುವಂತೆ ರಾಜಾ ದಶರಥನು ಪದಾರ್ಪಣಗೈದನು.॥26॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಐದನೆಯ ಸರ್ಗ ಪೂರ್ಣವಾಯಿತು.॥5॥