००४ रामाय दशरथस्योपदेशः

वाचनम्
ಭಾಗಸೂಚನಾ

ಶ್ರೀರಾಮನಿಗೆ ಯುವರಾಜ ಪಟ್ಟಕಟ್ಟಲು ನಿಶ್ಚಯಿಸಿದ ದಶರಥನು ಪುನಃ ಸುಮಂತ್ರನ ಮೂಲಕ ಶ್ರೀರಾಮಚಂದ್ರನನ್ನು ಕರೆಯಿಸಿ ಅವನಿಗೆ ಆವಶ್ಯಕ ಮಾತುಗಳನ್ನು ಹೇಳಿದುದು, ಶ್ರೀರಾಮನು ತಾಯಿ ಕೌಸಲ್ಯೆಯ ಬಳಿಗೆ ಹೋಗಿ ಪಟ್ಟಾಭಿಷೇಕದ ಶುಭಸಮಾಚಾರವನ್ನು ತಿಳಿಸುವುದು, ತಾಯಿಯಿಂದ ಆಶೀರ್ವಾದ ಪಡೆದು ಲಕ್ಷ್ಮಣನೊಡನೆ ಪ್ರೇಮಪೂರ್ವಕವಾಗಿ ಮಾತನಾಡುತ್ತಾ ತನ್ನ ಅರಮನೆಗೆ ತೆರಳಿದುದು

ಮೂಲಮ್ - 1

ಗತೇಷ್ವಥ ನೃಪೋ ಭೂಯಃ ಪೌರೇಷು ಸಹ ಮಂತ್ರಿಭಿಃ ।
ಮಂತ್ರಯಿತ್ವಾ ತತಶ್ಚಕ್ರೇ ನಿಶ್ಚಯಜ್ಞಃ ಸ ನಿಶ್ಚಯಮ್ ॥

ಮೂಲಮ್ - 2

ಶ್ವ ಏವ ಪುಷ್ಯೋ ಭವಿತಾ ಶ್ವೋಽಭಿಷೇಚ್ಯಸ್ತು ಮೇ ಸುತಃ ।
ರಾಮೋ ರಾಜೀವಪತ್ರಾಕ್ಷೋ ಯುವರಾಜ್ಯ ಇತಿಪ್ರಭುಃ ॥

ಅನುವಾದ

ಪಟ್ಟಣಿಗಳೆಲ್ಲರೂ ತಮ್ಮ ಮನೆಗಳಿಗೆ ಹೊರಟುಹೋದ ಬಳಿಕ ಕಾರ್ಯಸಿದ್ಧಿಗಾಗಿ ಯೋಗ್ಯ ದೇಶಕಾಲದ ನಿಯಮವನ್ನು ತಿಳಿದಿರುವ ದಶರಥನು ಪುನಃ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ - ನಾಳೆಯ ಪುಷ್ಯ ನಕ್ಷತ್ರದಲ್ಲೇ ನನ್ನ ಪುತ್ರ ಕಮಲನಯನ ಶ್ರೀರಾಮನಿಗೆ ಯುವರಾಜ ಪಟ್ಟ ಕಟ್ಟಬೇಕು ಎಂದು ನಿಶ್ಚಯಿಸಿದನು.॥1-2॥

ಮೂಲಮ್ - 3

ಅಥಾಂತರ್ಗೃಹಮಾವಿಶ್ಯ ರಾಜಾ ದಶರಥಸ್ತದಾ ।
ಸೂತಮಾಮಂತ್ರಯಾಮಾಸ ರಾಮಂಪುನರಿಹಾನಯ ॥

ಅನುವಾದ

ಅನಂತರ ಅಂತಃಪುರಕ್ಕೆ ಹೋಗಿ ದಶರಥನು ಸೂತನನ್ನು ಕರೆದು - ಹೋಗು, ಶ್ರೀರಾಮನನ್ನು ಇನ್ನೊಮ್ಮೆ ಇಲ್ಲಿಗೆ ಕರೆದು ಕೊಂಡು ಬಾ ಎಂದು ಆಜ್ಞಾಪಿಸಿದನು.॥3॥

ಮೂಲಮ್ - 4

ಪ್ರತಿಗೃಹ್ಯ ತು ತದ್ವಾಕ್ಯಂ ಸೂತಃ ಪುನರುಪಾಯಯೌ ।
ರಾಮಸ್ಯ ಭವನಂ ಶೀಘ್ರಂ ರಾಮಮಾನಯಿತುಂ ಪುನಃ ॥

ಅನುವಾದ

ರಾಜನ ಆಜ್ಞೆಯನ್ನು ಶಿರಸಾವಹಿಸಿ ಸೂತನು ಶ್ರೀರಾಮನನ್ನು ಶೀಘ್ರವಾಗಿ ಕರೆತರಲು ಅವನ ಅರಮನೆಗೆ ಹೋದನು.॥4॥

ಮೂಲಮ್ - 5

ದ್ವಾಃಸ್ಥೈರಾವೇದಿತಂ ತಸ್ಯ ರಾಮಾಯಾಗಮನಂ ಪುನಃ ।
ಶ್ರುತ್ವೈವ ಚಾಪಿ ರಾಮಸ್ತಂ ಪ್ರಾಪ್ತಂ ಶಂಕಾನ್ವಿತೋಽಭವತ್ ॥

ಅನುವಾದ

ದ್ವಾರಪಾಲಕರು ಶ್ರೀರಾಮನಿಗೆ ಸೂತನು ಬಂದಿರುವ ಸೂಚನೆ ಕೊಟ್ಟರು. ಅವನು ಬಂದಿರುವುದನ್ನು ಕೇಳಿ ಶ್ರೀರಾಮನ ಮನಸ್ಸಿನಲ್ಲಿ ಸಂದೇಹ ಉಂಟಾಯಿತು.॥5॥

ಮೂಲಮ್ - 6

ಪ್ರವೇಶ್ಯ ಚೈನಂ ತ್ವರಿತೋ ರಾಮೋ ವಚನಮಬ್ರವೀತ್ ।
ಯದಾಗಮನಕೃತ್ಯಂ ತೇ ಭೂಯಸ್ತದ್ಬ್ರೂಹ್ಯಶೇಷತಃ ॥

ಅನುವಾದ

ಅವನನ್ನು ಒಳಗೆ ಕರೆದು ಶ್ರೀರಾಮನು ಬಹಳ ಆತುರದಿಂದ ಕೇಳಿದನು. ನೀವು ಈಗ ಇಲ್ಲಿಗೆ ಪುನಃ ಬರುವ ಅವಶ್ಯಕತೆ ಏನಿತ್ತು? ಇದನ್ನು ವಿಸ್ತಾರವಾಗಿ ಹೇಳಿರಿ.॥6॥

ಮೂಲಮ್ - 7

ತಮುವಾಚ ತತಃ ಸೂತೋ ರಾಜಾ ತ್ವಾಂ ದ್ರಷ್ಟುಮಿಚ್ಛತಿ ।
ಶ್ರುತ್ವಾ ಪ್ರಮಾಣಂ ತತ್ರ ತ್ವಂ ಗಮನಾಯೇತರಾಯ ವಾ ॥

ಅನುವಾದ

ಆಗ ಸೂತನು ಹೇಳಿದನು - ಸ್ವಾಮಿ! ಮಹಾರಾಜರು ನಿಮ್ಮನ್ನು ನೋಡಲು ಬಯಸುತ್ತಿದ್ದಾರೆ. ನನ್ನ ಮಾತನ್ನು ಕೇಳಿ ಅಲ್ಲಿಗೆ ಹೋಗುವುದು, ಹೋಗದಿರುವುದನ್ನು ತಾವೇ ನಿಶ್ಚಯಿಸಿರಿ.॥7॥

ಮೂಲಮ್ - 8

ಇತಿ ಸೂತವಚಃ ಶ್ರುತ್ವಾ ರಾಮೋಽಪಿ ತ್ವರಯಾನ್ವಿತಃ ।
ಪ್ರಯಯೌ ರಾಜಭವನಂ ಪುನರ್ದ್ರಷ್ಟುಂ ನರೇಶ್ವರಮ್ ॥

ಅನುವಾದ

ಸೂತನ ಮಾತನ್ನು ಕೇಳಿ ಶ್ರೀರಾಮಚಂದ್ರನು ಮಹಾರಾಜಾ ದಶರಥನನ್ನು ಪುನಃ ನೋಡಲು ಕೂಡಲೇ ಅವನ ಅರಮನೆಯ ಕಡೆಗೆ ಹೊರಟನು.॥8॥

ಮೂಲಮ್ - 9

ತಂ ಶ್ರುತ್ವಾ ಸಮನುಪ್ರಾಪ್ತಂ ರಾಮಂ ದಶರಥೋ ನೃಪಃ ।
ಪ್ರವೇಶಯಾಮಾಸ ಗೃಹಂ ವಿವಕ್ಷುಃ ಪ್ರಿಯಮುತ್ತಮಮ್ ॥

ಅನುವಾದ

ಶ್ರೀರಾಮನು ಬಂದಿರುವುದನ್ನು ಕೇಳಿ ದಶರಥನು ಅವನಲ್ಲಿ ಪ್ರಿಯ ಹಾಗೂ ಉತ್ತಮ ಮಾತನ್ನು ತಿಳಿಸಲು ಅವನನ್ನು ಅಂತಃಪುರಕ್ಕೆ ಕರೆಸಿಕೊಂಡನು.॥9॥

ಮೂಲಮ್ - 10

ಪ್ರವಿಶನ್ನೇವ ಚ ಶ್ರೀಮಾನ್ ರಾಘವೋ ಭವನಂ ಪಿತುಃ ।
ದದರ್ಶ ಪಿತರಂ ದೂರಾತ್ಪ್ರಣಿಪತ್ಯ ಕೃತಾಂಜಲಿಃ ॥

ಅನುವಾದ

ತಂದೆಯ ಭವನವನ್ನು ಪ್ರವೇಶಿಸುತ್ತಲೇ ಶ್ರೀಮಾನ್ ರಘುನಾಥನು ರಾಜನನ್ನು ನೋಡುತ್ತಲೇ ದೂರದಿಂದಲೇ ಕೈ ಮುಗಿದು ಅವರ ಚರಣಗಳಲ್ಲಿ ವಂದಿಸಿಕೊಂಡನು.॥10॥

ಮೂಲಮ್ - 11

ಪ್ರಣಮಂತಂ ತಮುತ್ಥಾಪ್ಯ ಸಂಪರಿಷ್ವಜ್ಯ ಭೂಮಿಪಃ ।
ಪ್ರದಿಶ್ಯ ಚಾಸನಂ ಚಾಸ್ಮೈ ರಾಮಂ ಚ ಪುನರಬ್ರವೀತ್ ॥

ಅನುವಾದ

ಮಹಾರಾಜನು ನಮಸ್ಕರಿಸುತ್ತಿರುವ ಶ್ರೀರಾಮನನ್ನು ಎತ್ತಿ ಅಪ್ಪಿಕೊಂಡನು. ಅವನಿಗೆ ಕುಳಿತುಕೊಳ್ಳಲು ಆಸನ ನೀಡಿ ಪುನಃ ಅವನಲ್ಲಿ ಈ ಪ್ರಕಾರ ಹೇಳತೊಡಗಿದನು .॥11॥

ಮೂಲಮ್ - 12

ರಾಮ ವೃದ್ಧೋಽಸ್ಮಿ ದೀರ್ಘಾಯುರ್ಭುಕ್ತಾಭೋಗಾ ಯಥೇಪ್ಸಿತಾಃ ।
ಅನ್ನವದ್ಭಿಃ ಕ್ರತುಶತೈರ್ಯಥೇಷ್ಟಂ ಭೂರಿದಕ್ಷಿಣೈಃ ॥

ಅನುವಾದ

ಶ್ರೀರಾಮಾ! ಈಗ ನಾನು ಮುದುಕನಾಗಿದ್ದೇನೆ. ವಯಸ್ಸು ಹೆಚ್ಚಾಯಿತು. ನಾನು ಬಹಳ ಮನೋವಾಂಛಿತ ಭೋಗಗಳನ್ನು ಅನುಭವಿಸಿರುವೆನು ಹಾಗೂ ಹೇರಳ ದಕ್ಷಿಣೆಗಳುಳ್ಳ ನೂರಾರು ಯಜ್ಞಗಳನ್ನು ಮಾಡಿರುವೆನು.॥12॥

ಮೂಲಮ್ - 13

ಜಾತಮಿಷ್ಟಮಪತ್ಯಂ ಮೇತ್ವಮದ್ಯಾನುಪಮಂ ಭುವಿ ।
ದತ್ತಮಿಷ್ಟ ಮಧೀತಂ ಚ ಮಯಾ ಪುರುಷಸತ್ತಮ ॥

ಅನುವಾದ

ಪುರುಷೋತ್ತಮನೇ! ನೀನು ನನ್ನ ಪರಮಪ್ರಿಯ ಅಭೀಷ್ಟ ಸಂತಾನವಾಗಿ ದೊರೆತುದುದು ಇದಕ್ಕೆ ಭೂಮಂಡಲದಲ್ಲಿ ಯಾವುದೇ ಉಪಮೆ ಇಲ್ಲ. ನಾನು ದಾನ, ಯಜ್ಞ ಮತ್ತು ಸ್ವಾಧ್ಯಾಯವನ್ನು ಮಾಡಿರುವೆನು.॥13॥

ಮೂಲಮ್ - 14

ಅನುಭೂತಾನಿ ಚೇಷ್ಟಾನಿ ಮಯಾವೀರ ಸುಖಾನ್ಯಪಿ ।
ದೇವರ್ಷಿಪಿತೃವಿಪ್ರಾಣಾಮನೃಣೋಽಸ್ಮಿ ತಥಾಽಽತ್ಮನಃ ॥

ಅನುವಾದ

ವೀರನೇ! ನಾನು ಮನೋವಾಂಛಿತ ಸುಖಗಳನ್ನು ಅನುಭವಿಸಿರುವೆನು. ದೇವತಾ, ಋಷಿ, ಪಿತೃಗಳ ಮತ್ತು ಬ್ರಾಹ್ಮಣ ಹಾಗೂ ಆತ್ಮ ಋಣಗಳಿಂದಲೂ ನಾನು ಮುಕ್ತನಾಗಿರುವೆನು.॥14॥

ಮೂಲಮ್ - 15

ನ ಕಿಂಚಿನ್ಮಮ ಕರ್ತವ್ಯಂ ತವಾನ್ಯತ್ರಾಭಿಷೇಚನಾತ್ ।
ಅತೋ ಯತ್ತ್ವಾಮಹಂ ಬ್ರೂಯಾಂ ತನ್ಮೇ ತ್ವಂ ಕರ್ತುಮರ್ಹಸಿ ॥

ಅನುವಾದ

ಈಗ ನಿನಗೆ ಯುವರಾಜ ಪಟ್ಟಕಟ್ಟುವುದಲ್ಲದೆ ಬೇರೆ ಯಾವುದೇ ಕರ್ತವ್ಯವು ನನಗಾಗಿ ಉಳಿದಿಲ್ಲ. ಆದ್ದರಿಂದ ನಾನು ನಿನಗೆ ಹೇಳುವುದನ್ನು ನನ್ನ ಆಜ್ಞೆ ಎಂದು ತಿಳಿದು ನೀನು ಪಾಲಿಸಬೇಕು.॥15॥

ಮೂಲಮ್ - 16

ಅದ್ಯ ಪ್ರಕೃತಯಃ ಸರ್ವಾಸ್ತ್ವಾಮಿಚ್ಛಂತಿ ನರಾಧಿಪಮ್ ।
ಅತಸ್ತ್ವಾಂ ಯುವರಾಜಾನಮಭಿಷೇಕ್ಷ್ಯಾಮಿ ಪುತ್ರಕ ॥

ಅನುವಾದ

ಮಗನೇ! ಈಗ ಸಮಸ್ತ ಪ್ರಜೆಯು ನಿನ್ನನ್ನು ರಾಜನನ್ನಾಗಿಸಲು ಬಯಸುತ್ತಿದೆ, ಆದ್ದರಿಂದ ನಾನು ನಿನಗೆ ಯುವರಾಜ ಪಟ್ಟಾಭಿಷೇಕ ಮಾಡುವೆನು.॥16॥

ಮೂಲಮ್ - 17

ಅಪಿ ಚಾದ್ಯಾಶುಭಾನ್ ರಾಮ ಸ್ವಪ್ನಾನ್ ಪಶ್ಯಾಮಿ ರಾಘವ ।
ಸನಿರ್ಘಾತಾದಿವೋಲ್ಕಾಶ್ಚ ಪತಂತಿ ಹಿ ಮಹಾಸ್ವನಾಃ ॥

ಅನುವಾದ

ರಘುಕುಲನಂದನ ರಾಮಾ! ಇತ್ತೀಚೆಗೆ ನನಗೆ ಕೆಟ್ಟ ಸ್ವಪ್ನಗಳು ಕಾಣುತ್ತಿವೆ. ಹಗಲಿನಲ್ಲಿ ವಜ್ರಪಾತದೊಂದಿಗೆ ಭಾರೀ ಶಬ್ದಮಾಡುವ ಉಲ್ಕೆಗಳು ಬೀಳುತ್ತಿವೆ.॥17॥

ಮೂಲಮ್ - 18

ಅವಷ್ಟಬ್ಧಂಚ ಮೇ ರಾಮ ನಕ್ಷತ್ರಂ ದಾರುಣಗ್ರಹೈಃ ।
ಆವೇದಯಂತಿ ದೈವಜ್ಞಾಃ ಸೂರ್ಯಾಂಗಾರಕರಾಹುಭಿಃ ॥

ಅನುವಾದ

ಶ್ರೀರಾಮನೇ! ನನ್ನ ಜನ್ಮ ನಕ್ಷತ್ರವನ್ನು ಸೂರ್ಯ, ಮಂಗಳ ಮತ್ತು ರಾಹು ಎಂಬ ಭಯಂಕರ ಗ್ರಹರು ಆಕ್ರಮಿಸಿರುವರು ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ.॥18॥

ಮೂಲಮ್ - 19

ಪ್ರಾಯೇಣ ಚ ನಿಮಿತ್ತಾನಾಮೀದೃಶಾನಾಂ ಸಮುದ್ಭವೇ ।
ರಾಜಾ ಹಿ ಮೃತ್ಯುಮಾಪ್ನೋತಿ ಘೋರಾಂ ಚಾಪದಮೃಚ್ಛತಿ ॥

ಅನುವಾದ

ಇಂತಹ ಅನುಭವಗಳು ಪ್ರಕಟವಾದಾಗ ರಾಜನು ಸಾಮಾನ್ಯವಾಗಿ ಘೋರ ಆಪತ್ತಿಗೆ ಸಿಲುಕುತ್ತಾನೆ ಮತ್ತು ಕೊನೆಗೆ ಅವನ ಮೃತ್ಯುವೂ ಆಗಬಲ್ಲದು.॥19॥

ಮೂಲಮ್ - 20

ತದ್ಯಾವದೇವ ಮೇ ಚೇತೋ ನ ವಿಮುಹ್ಯತಿ ರಾಘವ ।
ತಾವದೇವಾಭಿಷಿಂಚಸ್ವ ಚಲಾ ಹಿ ಪ್ರಾಣಿನಾಂಮತಿಃ ॥

ಅನುವಾದ

ಆದ್ದರಿಂದ ರಘುನಂದನ! ನನ್ನ ಮನಸ್ಸಿನಲ್ಲಿ ಮೋಹವು ಆವರಿಸುವ ಮೊದಲೇ ನೀನು ಯುವರಾಜನಾಗಿ ಪಟ್ಟಾಭಿಷೇಕವನ್ನು ಮಾಡಿಸಿಕೋ; ಏಕೆಂದರೆ ಪ್ರಾಣಿಗಳ ಬುದ್ಧಿಯು ಚಂಚಲವಾಗಿರುತ್ತದೆ.॥20॥

ಮೂಲಮ್ - 21

ಅದ್ಯ ಚಂದ್ರೋಽಭ್ಯುಪಗಮತ್ ಪುಷ್ಯಾತ್ಪೂರ್ವಂ ಪುನರ್ವಸುಮ್ ।
ಶ್ವಃ ಪುಷ್ಯಯೋಗಂ ನಿಯತಂ ವಕ್ಷ್ಯಂತೇ ದೈವಚಿಂತಕಾಃ ॥

ಅನುವಾದ

ಇಂದು ಚಂದ್ರನು ಪುನರ್ವಸು ನಕ್ಷತ್ರದಲ್ಲಿ ಇದ್ದು, ನಾಳೆ ನಿಶ್ಚಯವಾಗಿ ಪುಷ್ಯ ನಕ್ಷತ್ರದಲ್ಲಿ ಇರುವನು ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ.॥21॥

ಮೂಲಮ್ - 22

ತತ್ರ ಪುಷ್ಯೇಽಭಿಷಿಂಚಸ್ವಮನಸ್ತ್ವರಯತೀವ ಮಾಮ್ ।
ಶ್ವಸ್ತ್ವಾಹಮಭಿಷೇಕ್ಷ್ಯಾಮಿ ಯೌವರಾಜ್ಯೇ ಪರಂತಪ ॥

ಅನುವಾದ

ಅದಕ್ಕಾಗಿ ಪುಷ್ಯನಕ್ಷತ್ರದಲ್ಲೇ ನೀನು ಪಟ್ಟಾಭಿಷಿಕ್ತನಾಗು. ಪರಂತಪ ವೀರನೇ! ಈ ಕಾರ್ಯದಲ್ಲಿ ಬಹಳ ಶೀಘ್ರವಾಗಿ ಮಾಡುವಂತೆ ನನ್ನ ಮನಸ್ಸು ಹೇಳುತ್ತದೆ. ಅದರಿಂದ ನಾಳೆ ಖಂಡಿತವಾಗಿ ನಿನಗೆ ಯುವರಾಜ ಪಟ್ಟಾಭಿಷೇಕ ಮಾಡಿ ಬಿಡುವೆನು.॥22॥

ಮೂಲಮ್ - 23

ತಸ್ಮಾತ್ ತ್ವಯಾದ್ಯಪ್ರಭೃತಿ ನಿಶೇಯಂ ನಿಯತಾತ್ಮನಾ ।
ಸಹ ವಧ್ವೋಪವಸ್ತವ್ಯಾ ದರ್ಭಪ್ರಸ್ತರಶಾಯಿನಾ ॥

ಅನುವಾದ

ಆದ್ದರಿಂದ ನೀನು ಈಗಿನಿಂದಲೇ ಇಡೀ ರಾತ್ರಿ ಇಂದ್ರಿಯ ಸಂಯಮದಿಂದ ಸೀತೆಯ ಸಹಿತ ಉಪವಾಸ ಮಾಡು ಮತ್ತು ದರ್ಭೆಯ ಹಾಸಿಗೆಯ ಮೇಲೆ ಮಲಗು.॥23॥

ಮೂಲಮ್ - 24

ಸುಹೃದಶ್ಚಾಪ್ರಮತ್ತಾಸ್ತ್ವಾಂ ರಕ್ಷಂ ತ್ವದ್ಯ ಸಮಂತತಃ ।
ಭವಂತಿ ಬಹುವಿಘ್ನಾನಿ ಕಾರ್ಯಾಣ್ಯೇವಂ ವಿಧಾನಿ ಹಿ ॥

ಅನುವಾದ

ಇಂದು ನಿನ್ನ ಸುಹೃದಯರು ಎಚ್ಚರವಾಗಿ ಎಲ್ಲ ರೀತಿಯಿಂದ ನಿನ್ನನ್ನು ರಕ್ಷಿಸಲಿ; ಏಕೆಂದರೆ ಈ ಪ್ರಕಾರದ ಶುಭ ಕಾರ್ಯದಲ್ಲಿ ಅನೇಕ ವಿಘ್ನಗಳು ಬರುವ ಸಂಭವವಿರುತ್ತದೆ.॥24॥

ಮೂಲಮ್ - 25

ವಿಪ್ರೋಷಿತಶ್ಚ ಭರತೋ ಯಾವ ದೇವ ಪುರಾದಿತಃ ।
ತಾವದೇವಾಭಿಷೇಕಸ್ತೇ ಪ್ರಾಪ್ತಕಾಲೋ ಮತೋ ಮಮ ॥

ಅನುವಾದ

ಭರತನು ಈ ನಗರದಿಂದ ಹೊರಗೆ ತನ್ನ ಸೋದರಮಾವನ ಮನೆಯಲ್ಲಿ ವಾಸಿಸುತ್ತಿರುವಾಗಲೇ ನಿನ್ನ ಪಟ್ಟಾಭಿಷೇಕ ಆಗಿಹೋಗುವುದು ಉಚಿತವಾಗಿದೆ.॥25॥

ಮೂಲಮ್ - 26

ಕಾಮಂ ಖಲು ಸತಾಂ ವೃತ್ತೇ ಭ್ರಾತಾ ತೇ ಭರತಃ ಸ್ಥಿತಃ ।
ಜ್ಯೇಷ್ಠಾನುವರ್ತೀ ಧರ್ಮಾತ್ಮಾ ಸಾನುಕ್ರೋಶೋ ಜಿತೇಂದ್ರಿಯಃ ॥

ಮೂಲಮ್ - 27

ಕಿಂ ನು ಚಿತ್ತಂ ಮನುಷ್ಯಾಣಾಮನಿತ್ಯಮಿತಿ ಮೇ ಮತಮ್ ।
ಸತಾಂ ಚ ಧರ್ಮನಿತ್ಯಾನಾಂ ಕೃತಶೋಭಿ ಚ ರಾಘವ ॥

ಅನುವಾದ

ನಿನ್ನ ತಮ್ಮ ಭರತನು ಸತ್ಪುರುಷರ ಆಚಾರ-ವ್ಯವಹಾರದಲ್ಲೇ ಸ್ಥಿತನಾಗಿರುವುದರಲ್ಲಿ ಸಂದೇಹವೇ ಇಲ್ಲ. ತನ್ನ ಅಣ್ಣನನ್ನು ಅನುಸರಿಸುವವನೂ, ಧರ್ಮಾತ್ಮನೂ, ದಯಾಳು ಮತ್ತು ಜೀತೆಂದ್ರಿಯನಾಗಿದ್ದರೂ ಮನುಷ್ಯರ ಚಿತ್ತ ಸಾಧಾರಣವಾಗಿ ಸ್ಥಿರವಾಗಿರುವುದಿಲ್ಲ ಎಂದು ನನ್ನ ಅಭಿಪ್ರಾಯವಾಗಿದೆ. ರಘುನಂದನ! ಧರ್ಮಪರಾಯಣ ಸತ್ಪುರುಷರ ಮನಸ್ಸೂ ಕೂಡ ಬೇರೆ-ಬೇರೆ ಕಾರಣಗಳಿಂದ ರಾಗ-ದ್ವೇಷಕ್ಕೆ ಬಲಿಯಾಗುತ್ತದೆ.॥26-27॥

ಮೂಲಮ್ - 28

ಇತ್ಯುಕ್ತಃ ಸೋಽಭ್ಯನುಜ್ಞಾತಃ ಶ್ವೋಭಾವಿನ್ಯಭಿಷೇಚನೇ ।
ವ್ರಜೇತಿ ರಾಮಃ ಪಿತರಮಭಿವಾದ್ಯಾಭ್ಯಯಾದ್ಗೃಹಮ್ ॥

ಅನುವಾದ

ರಾಜನು ಹೀಗೆ ಹೇಳಿ, ನಾಳೆ ನಡೆಯುವ ಪಟ್ಟಾಭಿಷೇಕದ ನಿಮಿತ್ತ ವ್ರತಪಾಲಿಸಲು ಅಪ್ಪಣೆ ಮಾಡಿದ ಬಳಿಕ ಶ್ರೀರಾಮ ಚಂದ್ರನು ತಂದೆಗೆ ವಂದಿಸಿ ತನ್ನ ಅರಮನೆಗೆ ಮರಳಿದನು.॥28॥

ಮೂಲಮ್ - 29

ಪ್ರವಿಶ್ಯ ಚಾತ್ಮನೋ ವೇಶ್ಮ ರಾಜ್ಞಾಽಽದಿಷ್ಟೇಽಭಿಷೇಚನೇ ।
ತತ್ಕ್ಷಣಾದೇವ ನಿಷ್ಕ್ರಮ್ಯ ಮಾತುರಂತಃ ಪುರಂ ಯಯೌ ॥

ಅನುವಾದ

ರಾಜನು ಪಟ್ಟಾಭಿಷೇಕದ ನಿಮಿತ್ತ ವ್ರತಪಾಲನೆಯನ್ನು ತಿಳಿಸಿದುದನ್ನು ಸೀತೆಗೆ ಹೇಳಲು ತನ್ನ ಅರಮನೆಯನ್ನು ಪ್ರವೇಶಿಸಿದಾಗ, ಶ್ರೀರಾಮನು ಅಲ್ಲಿ ಸೀತೆಯನ್ನು ನೋಡದಿದ್ದಾಗ ಅವನು ಕೂಡಲೇ ಅಲ್ಲಿಂದ ಹೊರಟು ತಾಯಿಯ ಅಂತಃಪುರಕ್ಕೆ ಹೋದನು.॥29॥

ಮೂಲಮ್ - 30

ತತ್ರ ತಾಂ ಪ್ರವಣಾಮೇವ ಮಾತರಂ ಕ್ಷೌಮವಾಸಿನೀಮ್ ।
ವಾಗ್ಯತಾಂ ದೇವತಾಗಾರೇ ದದರ್ಶಾಯಾಚತೀಂ ಶ್ರಿಯಮ್ ॥

ಅನುವಾದ

ಅಲ್ಲಿಗೆ ಹೋಗಿ ನೋಡುತ್ತಿದ್ದಾನೆ - ತಾಯಿ ಕೌಸಲ್ಯೆಯು ರೇಶ್ಮೆ ಸೀರೆಯುಟ್ಟು ಮೌನವಾಗಿ ದೇವಮಂದಿರದಲ್ಲಿ ಕುಳಿತು ದೇವತಾರಾಧನೆಯಲ್ಲಿ ತೊಡಗಿರುವಳು ಮತ್ತು ಮಗನಿಗಾಗಿ ರಾಜಲಕ್ಷ್ಮಿಯನ್ನು ಯಾಚಿಸುತ್ತಾ ಪ್ರಾರ್ಥಿಸುತ್ತಿದ್ದಳು.॥30॥

ಮೂಲಮ್ - 31

ಪ್ರಾಗೇವ ಚಾಗತಾ ತತ್ರ ಸುಮಿತ್ರಾ ಲಕ್ಷ್ಮಣಸ್ತಥಾ ।
ಸೀತಾ ಚಾನಯಿತಾ ಶ್ರುತ್ವಾ ಪ್ರಿಯಂ ರಾಮಾಭಿಷೇಚನಮ್ ॥

ಅನುವಾದ

ಶ್ರೀರಾಮನ ಪಟ್ಟಾಭಿಷೇಕದ ಪ್ರಿಯ ಸಮಾಚಾರ ಕೇಳಿ ಸುಮಿತ್ರೆ ಮತ್ತು ಲಕ್ಷ್ಮಣ ಮೊದಲೇ ಅಲ್ಲಿಗೆ ಬಂದಿದ್ದರು. ಬಳಿಕ ಸೀತೆಯನ್ನು ಅಲ್ಲಿಗೆ ಕರೆಸಲಾಯಿತು.॥31॥

ಮೂಲಮ್ - 32

ತಸ್ಮಿನ್ಕಾಲೇಽಪಿ ಕೌಸಲ್ಯಾ ತಸ್ಥಾವಾಮೀಲಿತೇಕ್ಷಣಾ ।
ಸುಮಿತ್ರಯಾನ್ವಾಸ್ಯಮಾನಾ ಸೀತಯಾ ಲಕ್ಷ್ಮಣೇನ ಚ ॥

ಅನುವಾದ

ಶ್ರೀರಾಮಚಂದ್ರನು ಅಲ್ಲಿಗೆ ಬಂದಾಗ ಕೌಸಲ್ಯೆಯು ಕಣ್ಣುಗಳನ್ನು ಮುಚ್ಚಿ ಧ್ಯಾನಮಾಡುತ್ತಾ ಕುಳಿತಿದ್ದಳು ಹಾಗೂ ಸುಮಿತ್ರೆ, ಸೀತೆ ಮತ್ತು ಲಕ್ಷ್ಮಣ ಇವರು ಆಕೆಯ ಸೇವೆಯಲ್ಲಿ ನಿಂತಿದ್ದರು.॥32॥

ಮೂಲಮ್ - 33

ಶ್ರುತ್ವಾ ಪುಷ್ಯೇಚ ಪುತ್ರಸ್ಯ ಯೌವರಾಜ್ಯೇಽಭಿಷೇಚನಮ್ ।
ಪ್ರಾಣಾಯಾಮೇನ ಪುರುಷಂ ಧ್ಯಾಯಮಾನಾಜನಾರ್ದನಮ್ ॥

ಅನುವಾದ

ಪುಷ್ಯ ನಕ್ಷತ್ರಯೋಗದಲ್ಲಿ ಪುತ್ರನ ಯುವರಾಜ ಪಟ್ಟಾಭಿಷೇಕದ ಮಾತನ್ನು ಕೇಳಿ ಕೌಸಲ್ಯೆಯು ರಾಮನ ಮಂಗಲ ಕಾಮನೆಯಿಂದ ಪ್ರಾಣಾಯಾಮದೊಂದಿಗೆ ಪರಮ ಪುರುಷ ನಾರಾಯಣನನ್ನು ಧ್ಯಾನಿಸುತ್ತಾ ಇದ್ದಳು.॥33॥

ಮೂಲಮ್ - 34

ತಥಾ ಸನಿಯಮಾವೇವ ಸೋಽಭಿಗಮ್ಯಾಭಿವಾದ್ಯ ಚ ।
ಉವಾಚ ವಚನಂ ರಾಮೋ ಹರ್ಷಯಂಸ್ತಾಮಿದಂ ವರಮ್ ॥

ಅನುವಾದ

ಈ ಪ್ರಕಾರ ನಿಯಮದಲ್ಲಿ ತೊಡಗಿದ್ದ ತಾಯಿಯ ಬಳಿಗೆ ಹೋಗಿ ಶ್ರೀರಾಮನು ಆಕೆಗೆ ನಮಸ್ಕರಿಸಿ, ಆಕೆಗೆ ಹರ್ಷವಾಗುವಂತಹ ಈ ಶ್ರೇಷ್ಠ ಮಾತನ್ನು ಹೇಳಿದನು.॥34॥

ಮೂಲಮ್ - 35

ಅಂಬ ಪಿತ್ರಾ ನಿಯುಕ್ತೋಽಸ್ಮಿಪ್ರಜಾಪಾಲ ಕರ್ಮಣಿ ।
ಭವಿತಾ ಶ್ವೋಭಿಷೇಕೋಮೇ ಯಥಾ ಮೇ ಶಾಸನಂ ಪಿತುಃ ॥

ಮೂಲಮ್ - 36

ಸೀತಯಾಪ್ಯುಪವಸ್ತವ್ಯಾ ರಜನೀಯಂ ಮಯಾ ಸಹ ।
ಏವಮುಕ್ತಮುಪಾಧ್ಯಾಯೈಃ ಸ ಹಿ ಮಾಮುಕ್ತವಾನ್ಪಿತಾ ॥

ಅನುವಾದ

ಅಮ್ಮಾ! ತಂದೆಯವರು ನನ್ನನ್ನು ಪ್ರಜಾಪಾಲನೆಯ ಕರ್ಮದಲ್ಲಿ ನಿಯುಕ್ತಗೊಳಿಸಿರುವರು. ನಾಳೆ ನನ್ನ ಪಟ್ಟಾಭಿಷೇಕವಾಗುವುದು. ನನಗಾಗಿ ತಂದೆಯವರ ಆದೇಶದಂತೆಯೇ ಸೀತೆಯು ನನ್ನೊಂದಿಗೆ ಈ ರಾತ್ರಿ ಉಪವಾಸ ಮಾಡುವಳು. ಪುರೋಹಿತರು ಹೇಳಿದ ಮಾತನ್ನೇ ತಂದೆಯವರು ನನಗೆ ತಿಳಿಸಿರುವರು.॥35-36॥

ಮೂಲಮ್ - 37

ಯಾನಿ ಯಾನ್ಯತ್ರ ಯೋಗ್ಯಾನಿ ಶ್ವೋಭಾವಿನ್ಯಭಿಷೇಚನೇ ।
ತಾನಿ ಮೇ ಮಂಗಲಾನ್ಯದ್ಯವೈದೇಹ್ಯಾಶ್ಚೈವ ಕಾರಯ ॥

ಅನುವಾದ

ಆದ್ದರಿಂದ ನಾಳೆ ನಡೆಯುವ ಪಟ್ಟಾಭಿಷೇಕದ ನಿಮಿತ್ತ ಇಂದು ನನಗೆ ಮತ್ತು ಸೀತೆಗಾಗಿ ಆವಶ್ಯಕವಾದ ಮಂಗಲ ಕಾರ್ಯಗಳನ್ನು ಮಾಡಿಸುವವಳಾಗು.॥37॥

ಮೂಲಮ್ - 38

ಏತಚ್ಛ್ರುತ್ವಾ ತು ಕೌಸಲ್ಯಾ ಚಿರಕಾಲಾಭಿಕಾಂಕ್ಷಿತಮ್ ।
ಹರ್ಷಬಾಷ್ಪಾಕುಲಂ ವಾಕ್ಯಮಿದಂ ರಾಮಮಭಾಷತ ॥

ಅನುವಾದ

ಚಿರಕಾಲದಿಂದ ತಾಯಿಯ ಹೃದಯದಲ್ಲಿದ್ದ ಅಭಿಲಾಷೆಯು ಪೂರ್ಣವಾಗುವ ಸೂಚನೆಯ ಮಾತನ್ನು ಕೇಳಿ ಕೌಸಲ್ಯೆಯು ಆನಂದಾಶ್ರುಗಳನ್ನು ಹರಿಸುತ್ತಾ ಗದ್ಗದ ಕಂಠದಿಂದ ಹೀಗೆ ನುಡಿದಳು.॥38॥

ಮೂಲಮ್ - 39

ವತ್ಸ ರಾಮ ಚಿರಂ ಜೀವ ಹತಾಸ್ತೇ ಪರಿಪಂಥಿನಃ ।
ಜ್ಞಾತೀನ್ಮೇ ತ್ವಂ ಶ್ರಿಯಾ ಯುಕ್ತಃ ಸುಮಿತ್ರಾಯಾಶ್ಚ ನಂದಯ ॥

ಅನುವಾದ

ಮಗು ಶ್ರೀರಾಮ! ಚಿರಂಜೀವಿಯಾಗು. ನಿನ್ನ ದಾರಿಯಲ್ಲಿ ವಿಘ್ನವನ್ನೊಡ್ಡುವ ಶತ್ರುಗಳು ನಾಶವಾಗಿ ಹೋಗಲಿ. ನೀನು ರಾಜಲಕ್ಷ್ಮಿಯುಕ್ತನಾಗಿ ನನ್ನ ಮತ್ತು ಸುಮಿತ್ರೆಯ ಬಂಧು ಬಾಂಧವರನ್ನು ಆನಂದವಾಗಿಸು.॥39॥

ಮೂಲಮ್ - 40

ಕಲ್ಯಾಣೇ ಬತ ನಕ್ಷತ್ರೇ ಮಯಾಜಾತೋಽಸಿ ಪುತ್ರಕ ।
ಯೇನ ತ್ವಯಾ ದಶರಥೋ ಗುಣೈರಾರಾಧಿತಃ ಪಿತಾ ॥

ಅನುವಾದ

ಮಗು! ನೀನು ನನ್ನಲ್ಲಿ ಯಾವುದೋ ಮಂಗಲಮಯ ನಕ್ಷತ್ರದಲ್ಲಿ ಹುಟ್ಟಿರುವೆ. ಅದರಿಂದ ನೀನು ನಿನ್ನ ಸದ್ಗುಣಗಳಿಂದ ತಂದೆ ದಶರಥನನ್ನು ಸಂತೋಷಪಡಿಸಿರುವೆ.॥40॥

ಮೂಲಮ್ - 41

ಅಮೋಘಂ ಬತ ಮೇ ಕ್ಷಾಂತಂ ಪುರುಷೇ ಪುಷ್ಕರೇಕ್ಷಣೇ ।
ಯೇಯಮಿಕ್ಷ್ವಾಕುರಾಜಶ್ರೀಃ ಪುತ್ರ ತ್ವಾಂ ಸಂಶ್ರಯಿಷ್ಯತಿ ॥

ಅನುವಾದ

ನಾನು ಕಮಲನಯನ ಭಗವಾನ್ ವಿಷ್ಣುವಿನ ಪ್ರಸನ್ನತೆಗಾಗಿ ಮಾಡಿದ ವ್ರತ-ಉಪವಾಸಾದಿಗಳು ಇಂದು ಸಫಲವಾದುದು ಹರ್ಷದ ಮಾತಾಗಿದೆ. ಮಗು! ಅದರ ಫಲದಿಂದಲೇ ಈ ಇಕ್ಷ್ವಾಕುಕುಲದ ರಾಜಲಕ್ಷ್ಮಿಯು ನಿನಗೆ ದೊರೆಯಲಿದೆ.॥41॥

ಮೂಲಮ್ - 42

ಇತ್ಯೇವಮುಕ್ತೋ ಮಾತ್ರಾ ತು ರಾಮೋ ಭ್ರಾತರಮಬ್ರವೀತ್ ।
ಪ್ರಾಂಜಲಿಂ ಪ್ರಹ್ವಮಾಸೀನಮಭಿವೀಕ್ಷ್ಯ ಸ್ಮಯನ್ನಿವ ॥

ಅನುವಾದ

ತಾಯಿಯು ಹೀಗೆ ಹೇಳಿದಾಗ ಶ್ರೀರಾಮನು ವಿನಯದಿಂದ ಕೈಮುಗಿದು ನಿಂತಿರುವ ತಮ್ಮ ಲಕ್ಷ್ಮಣ ಕಡೆಗೆ ನೋಡಿ ಮುಗುಳ್ನಗುತ್ತಾ ಹೇಳಿದನು.॥42॥

ಮೂಲಮ್ - 43

ಲಕ್ಷ್ಮಣೇಮಾಂ ಮಯಾ ಸಾರ್ಧಂ ಪ್ರಶಾಧಿ ತ್ವಂ ವಸುಂಧರಾಮ್ ।
ದ್ವಿತೀಯಂ ಮೇಽಂತರಾತ್ಮಾನಂ ತ್ವಾಮಿಯಂ ಶ್ರೀರುಪಸ್ಥಿತಾ ॥

ಅನುವಾದ

ಲಕ್ಷ್ಮಣಾ! ನೀನು ನನ್ನೊಂದಿಗೆ ಈ ಪೃಥಿವಿಯ ಶಾಸನ ಮಾಡು. ನೀನು ನನಗೆ ದ್ವಿತೀಯ ಅಂತರಾತ್ಮನಾಗಿರುವೆ. ಈ ರಾಜಲಕ್ಷ್ಮೀ ನಿನಗೇ ಪ್ರಾಪ್ತವಾಗುತ್ತಾ ಇದೆ.॥43॥

ಮೂಲಮ್ - 44

ಸೌಮಿತ್ರೇ ಭುಂಕ್ಷ್ವ ಭೋಗಾಂಸ್ತ್ವಮಿಷ್ಟಾನ್ ರಾಜ್ಯಫಲಾನಿ ಚ ।
ಜೀವಿತಂ ಚಾಪಿ ರಾಜ್ಯಂ ಚ ತ್ವದರ್ಥಮಭಿಕಾಮಯೇ ॥

ಅನುವಾದ

ಸುಮಿತ್ರಾನಂದನನೇ! ನೀನು ಬೇಕಾದ ಭೋಗಗಳನ್ನು ಮತ್ತು ರಾಜ್ಯದ ಶ್ರೇಷ್ಠ ಫಲಗಳನ್ನು ಅನುಭವಿಸು. ನಿನಗಾಗಿಯೇ ನಾನು ಈ ಜೀವನ ಹಾಗೂ ರಾಜ್ಯವನ್ನು ಬಯಸುವೆನು.॥44॥

ಮೂಲಮ್ - 45

ಇತ್ತುಕ್ತ್ವಾ ಲಕ್ಷ್ಮಣಂ ರಾಮೋ ಮಾತರಾವಭಿವಾದ್ಯ ಚ ।
ಅಭ್ಯನುಜ್ಞಾಪ್ಯ ಸೀತಾಂ ಚ ಯಯೌ ಸ್ವಂ ಚ ನಿವೇಶನಮ್ ॥

ಅನುವಾದ

ಲಕ್ಷ್ಮಣನಲ್ಲಿ ಹೀಗೆ ಹೇಳಿ ಶ್ರೀರಾಮನು ಇಬ್ಬರೂ ತಾಯಂದಿರ ಚರಣಗಳಿಗೆ ವಂದಿಸಿ, ಅವರಿಂದ ಬೀಳ್ಕೊಂಡು ಸೀತೆಯೊಂದಿಗೆ ತನ್ನ ಅರಮನೆಗೆ ನಡೆದನು.॥45॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ನಾಲ್ಕನೆಯ ಸರ್ಗ ಪೂರ್ಣವಾಯಿತು. ॥4॥