००३ अभिषेकसम्भारसङ्ग्रहणम्

वाचनम्
ಭಾಗಸೂಚನಾ

ದಶರಥನು ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಿದ್ಧತೆಯನ್ನು ಮಾಡುವಂತೆ ವಸಿಷ್ಠ-ವಾಮದೇವರನ್ನು ಪ್ರಾರ್ಥಿಸಿದುದು, ರಾಜನು ಸುಮಂತ್ರನ ಮೂಲಕ ಶ್ರೀರಾಮನನ್ನು ಕರೆಸಿಕೊಂಡು ರಾಜನೀತಿಯ ವಿಷಯಗಳನ್ನು ಹೇಳಿದುದು

ಮೂಲಮ್ - 1

ತೇಷಾಮಂಜಲಿಪದ್ಮಾನಿ ಪ್ರಗೃಹೀತಾನಿ ಸರ್ವಶಃ ।
ಪ್ರತಿಗೃಹ್ಯಾಬ್ರವೀದ್ರಾಜಾ ತೇಭ್ಯಃ ಪ್ರಿಯಹಿತಂ ವಚಃ ॥

ಅನುವಾದ

ಸಭಾಸದರು ಕಮಲದ ಮೊಗ್ಗಿನಂತೆ ಕೈಗಳೆರಡನ್ನು ಜೋಡಿಸಿ ತಲೆಯ ಮೇಲಿಟ್ಟು ದಶರಥನ ಪ್ರಸ್ತಾಪವನ್ನು ಸಂತೋಷವಾಗಿ ಸ್ವೀಕರಿಸಿದರು. ಅವರ ಆ ಪದ್ಮಾಂಜಲಿಯನ್ನು ಸ್ವೀಕರಿಸಿ ಮಹಾರಾಜನು ಅವರೆಲ್ಲರಲ್ಲಿ ಪ್ರಿಯವೂ, ಹಿತಕರವೂ ಆದ ಮಾತನ್ನು ಹೇಳಿದನು.॥1॥

ಮೂಲಮ್ - 2

ಅಹೋಽಸ್ಮಿ ಪರಮಪ್ರೀತಃ ಪ್ರಭಾವಶ್ಚಾತುಲೋ ಮಮ ।
ಯನ್ಮೇ ಜ್ಯೇಷ್ಠಂ ಪ್ರಿಯಂ ಪುತ್ರಂ ಯೌವರಾಜ್ಯಸ್ಥಮಿಚ್ಛಥ ॥

ಅನುವಾದ

ಪ್ರಜಾಜನರೇ! ನೀವು ನನ್ನ ಪರಮ ಪ್ರಿಯ ಜ್ಯೇಷ್ಠಪುತ್ರ ಶ್ರೀರಾಮನನ್ನು ಯುವರಾಜನಾಗುವುದನ್ನು ನೋಡಲು ಬಯಸುತ್ತಿರುವಿರಿ. ಇದರಿಂದ ನನಗೆ ಬಹಳ ಸಂತೋಷವಾಯಿತು ಹಾಗೂ ನನ್ನ ಪ್ರಭುಶಕ್ತಿಯು ಎಣೆಯಿಲ್ಲದಷ್ಟು ಹೆಚ್ಚಿದೆ.॥2॥

ಮೂಲಮ್ - 3

ಇತಿ ಪ್ರತ್ಯರ್ಚಿತಾನ್ ರಾಜಾ ಬ್ರಾಹ್ಮಣಾನಿದಮಬ್ರವೀತ್ ।
ವಸಿಷ್ಠಂ ವಾಮದೇವಂ ಚ ತೇಷಾಮೇವೋಪಶೃಣ್ವತಾಮ್ ॥

ಅನುವಾದ

ಇಂತಹ ಮಾತುಗಳಿಂದ ಪುರವಾಸಿಗಳನ್ನೂ, ಇತರ ಸಭಾಸದರನ್ನು ಸತ್ಕರಿಸಿ ರಾಜನು ಅವರು ಕೇಳುವಂತೆ ವಾಮದೇವ ಮತ್ತು ವಸಿಷ್ಠಾದಿ ಬ್ರಾಹ್ಮಣರಲ್ಲಿ ಈ ಪ್ರಕಾರ ಹೇಳಿದನು.॥3॥

ಮೂಲಮ್ - 4

ಚೈತ್ರಃ ಶ್ರೀಮಾನಯಂ ಮಾಸಃ ಪುಣ್ಯಃ ಪುಷ್ಪಿತಕಾನನಃ ।
ಯೌವರಾಜ್ಯಾಯ ರಾಮಸ್ಯ ಸರ್ವಮೇವೋಪಕಲ್ಪ್ಯತಾಮ್ ॥

ಅನುವಾದ

ಈ ಚೈತ್ರಮಾಸವು ಬಹಳ ಸುಂದರ ಹಾಗೂ ಪವಿತ್ರವಾಗಿದೆ. ಇದರಲ್ಲಿ ಎಲ್ಲ ವನ-ಉಪವನಗಳು ಚಿಗುರಿ, ಅರಳಿ ನಿಂತಿವೆ. ಆದ್ದರಿಂದ ಈ ಸಮಯದಲ್ಲಿ ಶ್ರೀರಾಮನ ಯುವರಾಜ ಪಟ್ಟಾಭಿಷೇಕ ಮಾಡಲು ಎಲ್ಲ ಸಾಮಗ್ರಿಗಳನ್ನು ನೀವು ಸಿದ್ಧಪಡಿಸಿರಿ.॥4॥

ಮೂಲಮ್ - 5½

ರಾಜ್ಞ ಸ್ತೂಪರತೇ ವಾಕ್ಯೇ ಜನಘೋಷೋ ಮಹಾನಭೂತ್ ।
ಶನೈಸ್ತಸ್ಮಿನ್ಪ್ರಶಾಂತೆ ಚ ಜನಘೋಷೇ ಜನಾಧಿಪಃ ॥
ವಸಿಷ್ಠಂ ಮುನಿಶಾರ್ದೂಲಂ ರಾಜಾ ವಚನಮಬ್ರವೀತ್ ।

ಅನುವಾದ

ರಾಜನ ಮಾತು ಮುಗಿಯುತ್ತಿರುವಂತೆಯೇ ಎಲ್ಲ ಜನರು ಹರ್ಷದಿಂದ ಜಯ ಜಯಕಾರ ಮಾಡಿದರು. ಆಗ ಅಲ್ಲಿ ಭಾರೀ ಗದ್ದಲವೇ ಉಂಟಾಯಿತು. ನಿಧಾನವಾಗಿ ಗದ್ದಲ ಶಾಂತವಾದಾಗ ಪ್ರಜಾಪಾಲಕ ದಶರಥನು ಮುನಿಪ್ರವರ ವಸಿಷ್ಠರಲ್ಲಿ ಇಂತೆಂದನು.॥5½॥

ಮೂಲಮ್ - 6½

ಅಭಿಷೇಕಾಯರಾಮಸ್ಯ ಯತ್ಕರ್ಮ ಸಪರಿಚ್ಛದಮ್ ॥
ತದದ್ಯ ಭಗವನ್ಸರ್ವಮಾಜ್ಞಾಪಯಿತುಮರ್ಹಸಿ ।

ಅನುವಾದ

ಪೂಜ್ಯರೇ! ಶ್ರೀರಾಮನ ಪಟ್ಟಾಭಿಷೇಕಕ್ಕೆ ಅವಶ್ಯವಾದ ಕಾರ್ಯವನ್ನು ಸಾಂಗೋಪಾಂಗವಾಗಿ ತಿಳಿಸಿರಿ. ಇಂದೇ ಅದೆಲ್ಲವನ್ನು ಸಿದ್ಧಪಡಿಸುವಂತೆ ಸೇವಕರಿಗೆ ಆಜ್ಞಾಪಿಸಿರಿ.॥6॥

ಮೂಲಮ್ - 7½

ತಚ್ಛ್ರುತ್ವಾ ಭೂಮಿಪಾಲಸ್ಯ ವಸಿಷ್ಠೋ ಮುನಿಸತ್ತಮಃ ॥
ಆದಿದೇಶಾಗ್ರತೋ ರಾಜ್ಞಃ ಸ್ಥಿತಾನ್ಯುಕ್ತಾನ್ ಕೃತಾಂಲೀನ್ ।

ಅನುವಾದ

ಮಹಾರಾಜನ ಮಾತನ್ನು ಕೇಳಿ ಮುನಿವರ ವಸಿಷ್ಠರು ರಾಜನ ಎದುರಿಗೇ, ಆಜ್ಞಾಪಾಲನೆಗಾಗಿ ಕೈಜೋಡಿಸಿ ನಿಂತಿರುವ ಸೇವಕರಲ್ಲಿ ಹೇಳಿದರು.॥7॥

ಮೂಲಮ್ - 8

ಸುವರ್ಣಾದೀನಿ ರತ್ನಾನಿ ಬಲೀನ್ ಸರ್ವೌಷಧೀರಪಿ ॥

ಮೂಲಮ್ - 9

ಶುಕ್ಲಮಾಲ್ಯಾನಿ ಲಾಜಾಂಶ್ಚಪೃಥಕ್ಚಮಧುಸರ್ಪಿಷೀ ।
ಅಹತಾನಿ ಚ ವಾಸಾಂಸಿ ರಥಂ ಸರ್ವಾಯುಧಾನ್ಯಪಿ ॥

ಮೂಲಮ್ - 10

ಚತುರಂಗಬಲಂ ಚೈವ ಗಜಂ ಚ ಶುಭಲಕ್ಷಣಮ್ ।
ಚಾಮರವ್ಯಜನೇ ಚೋಭೇ ಧ್ವಜಂ ಛತ್ರಂ ಚ ಪಾಂಡುರಮ್ ॥

ಮೂಲಮ್ - 11

ಶತಂ ಚ ಶಾತಕುಂಭಾನಾಂ ಕುಂಭಾನಾಮಗ್ನಿ ವರ್ಚಸಾಮ್
ಹಿರಣ್ಯಶೃಂಗಮೃಷಭಂ ಸಮಗ್ರಂ ವ್ಯಾಘ್ರಚರ್ಮ ಚ ॥

ಮೂಲಮ್ - 12

ಯಚ್ಛಾನ್ಯತ್ಕಿಂಚಿದೇಷ್ಟವ್ಯಂ ತತ್ಸರ್ವಮುಪಕಲ್ಪ್ಯತಾಮ್ ।
ಉಪಸ್ಥಾಪಯತ ಪ್ರಾತರಗ್ನ್ಯಗಾರೇ ಮಹೀಪತೇಃ ॥

ಅನುವಾದ

ನೀವು ದೇವಪೂಜೆಗೆ ಬೇಕಾದ ಸಾಮಗ್ರಿ ಸುವರ್ಣಾದಿ ರತ್ನಗಳನ್ನು, ಎಲ್ಲ ಪ್ರಕಾರದ ಸರ್ವೌಷಧಿಗಳು, ಶ್ವೇತಪುಷ್ಪಗಳ ಮಾಲೆಗಳು, ಅರಳು, ಬೇರೆ-ಬೇರೆ ಪಾತ್ರೆಗಳಲ್ಲಿ ಜೇನು ಮತ್ತು ತುಪ್ಪ, ಹೊಸ ವಸ್ತ್ರಗಳು, ರಥ, ಎಲ್ಲ ಪ್ರಕಾರದ ಅಸ್ತ್ರ-ಶಸ್ತ್ರಗಳು, ಚತುರಂಗ ಸೈನ್ಯ, ಉತ್ತಮ ಲಕ್ಷಣಯುಕ್ತ ಪಟ್ಟದ ಆನೆ, ಉತ್ತಮ ಎರಡು ಚಾಮರಗಳು, ಧ್ವಜ, ಶ್ವೇತಚ್ಛತ್ರ, ಅಗ್ನಿಯಂತೆ ಹೊಳೆಯುವ ನೂರು ಚಿನ್ನದ ಕಲಶಗಳು, ಸುವರ್ಣಾಲಂಕೃತ ಕೊಂಬುಗಳುಳ್ಳ ಒಂದು ಹೋರಿ, ಇಡೀ ವ್ಯಾಘ್ರಚರ್ಮ, ಹಾಗೂ ಬೇಕಾದ ಇತರ ಎಲ್ಲ ವಸ್ತುಗಳನ್ನು ಅಣಿಗೊಳಿಸಿ, ಪ್ರಾತಃಕಾಲವೇ ಮಹಾರಾಜನ ಅಗ್ನಿಶಾಲೆಗೆ ಕಳಿಸಿಕೊಡಿರಿ.॥8-12॥

ಮೂಲಮ್ - 13

ಅಂತಃಪುರಸ್ಯ ದ್ವಾರಾಣಿ ಸರ್ವಸ್ಯ ನಗರಸ್ಯ ಚ ।
ಚಂದನಸ್ರಗ್ಭಿರರ್ಚ್ಯಂತಾಂ ಧೂಪೈಶ್ಚ ಘ್ರಾಣಹಾರಿಭಿಃ ॥

ಅನುವಾದ

ಅಂತಃಪುರ ಹಾಗೂ ನಗರದ ಸಮಸ್ತ ಬಾಗಿಲುಗಳನ್ನು ಚಂದನ ಪುಷ್ಪಮಾಲೆಗಳಿಂದ ಅಲಂಕರಿಸಿರಿ. ಎಲ್ಲೆಡೆ ಜನರನ್ನು ಆಕರ್ಷಿಸುವಂತಹ ಸುಗಂಧ ಧೂಪವನ್ನು ಹಚ್ಚಿರಿ.॥13॥

ಮೂಲಮ್ - 14

ಪ್ರಶಸ್ತ ಮನ್ನಂಗುಣವದ್ ದಧಿಕ್ಷೀರೋಪಸೇಚನಮ್ ।
ದ್ವಿಜಾನಾಂ ಶತಸಾಹಸ್ರಂ ಯತ್ಪ್ರಕಾಮಮಲಂ ಭವೇತ್ ॥

ಅನುವಾದ

ಒಂದು ಲಕ್ಷ ಬ್ರಾಹ್ಮಣ ಸಂತರ್ಪಣೆಗೆ ಸಾಕಾಗುವಷ್ಟು ಹಾಲು, ಮೊಸರು, ತುಪ್ಪಗಳಿಂದ ಕೂಡಿದ ಉತ್ತಮ ಪಕ್ವಾನ್ನಗಳಿಂದ ಕೂಡಿದ ಭಕ್ಷ್ಯ ಭೋಜ್ಯಗಳನ್ನು ಸಿದ್ಧಗೊಳಿಸಿರಿ.॥14॥

ಮೂಲಮ್ - 15

ಸತ್ಕೃತ್ಯ ದ್ವಿಜಮುಖ್ಯಾನಾಂ ಶ್ವಃ ಪ್ರಭಾತೇಪ್ರದೀಯತಾಮ್ ।
ಘೃತಂ ದಧಿ ಚ ಲಾಜಾಶ್ಚ ದಕ್ಷಿಣಾಶ್ಚಾಪಿ ಪುಷ್ಕಲಾಃ ॥

ಅನುವಾದ

ನಾಳೆ ಪ್ರಾತಃಕಾಲ ಶ್ರೇಷ್ಠ ಬ್ರಾಹ್ಮಣರನ್ನು ಸತ್ಕರಿಸಿ ಅವರಿಗೆ ಅನ್ನದಾನ ಮಾಡಿ, ಜೊತೆಗೆ ತುಪ್ಪ, ಮೊಸರು, ಅರಳು ಮತ್ತು ಹೇರಳವಾಗಿ ದಕ್ಷಿಣೆಯನ್ನು ಕೊಡಿರಿ.॥15॥

ಮೂಲಮ್ - 16

ಸೂರ್ಯೆಽಭ್ಯುದಿತಮಾತ್ರೇ ಶ್ವೋ ಭವಿತಾ ಸ್ವಸ್ತಿವಾಚನಮ್ ।
ಬ್ರಾಹ್ಮಣಾಶ್ಚ ನಿಮಂತ್ರ್ಯಂತಾಂ ಕಲ್ಪ್ಯಂತಾಮಾಸನಾನಿ ಚ ॥

ಅನುವಾದ

ನಾಳೆ ಸೂರ್ಯೋದಯವಾಗುತ್ತಲೇ ಸ್ವಸ್ತಿಪುಣ್ಯಾಹ ನಡೆಯುವುದು, ಅದಕ್ಕಾಗಿ ಬ್ರಾಹ್ಮಣರನ್ನು ಆಮಂತ್ರಿಸಿರಿ. ಅವರಿಗೆ ಉತ್ತಮ ಆಸನಗಳ ವ್ಯವಸ್ಥೆ ಮಾಡಿರಿ.॥16॥

ಮೂಲಮ್ - 17½

ಆಬಧ್ಯಂತಾಂ ಪತಾಕಾಶ್ಚ ರಾಜಮಾರ್ಗಶ್ಚಸಿಚ್ಯತಾಮ್ ।
ಸರ್ವೇ ಚ ತಾಲಾಪಚರಾ ಗಣಿಕಾಶ್ಚ ಸ್ವಲಂಕೃತಾಃ ॥
ಕಕ್ಷ್ಯಾಂ ದ್ವಿತೀಯಾಮಾಸಾದ್ಯ ತಿಷ್ಠಂತು ನೃಪವೇಶ್ಮನಃ ।

ಅನುವಾದ

ನಗರದಲ್ಲಿ ಎಲ್ಲೆಡೆ ಧ್ವಜ-ಪತಾಕೆಗಳು ಹಾರಾಡಲಿ. ರಾಜಮಾರ್ಗಗಳ ಮೇಲೆ ಧೂಳು ಏಳದಂತೆ ಪನ್ನೀರನ್ನು ಸಿಂಪಡಿಸಿರಿ. ಸಮಸ್ತ ಸಂಗೀತ ನಿಪುಣ ವಿದ್ವಾಂಸರು, ಸುಂದರ ವೇಷಭೂಷಣಗಳಿಂದ ಅಲಂಕೃತ ವಾರಾಂಗನಾ ನರ್ತಕಿಯರು, ಅರಮನೆಯ ಎರಡನೇ ಪ್ರಾಂಗಣದಲ್ಲಿ ಉಪಸ್ಥಿತರಾಗಿರಲಿ.॥17½॥

ಮೂಲಮ್ - 18½

ದೇವಾಯತನಚೈತ್ಯೇಷು ಸಾನ್ನಭಕ್ಷ್ಯಾಃ ಸದಕ್ಷಿಣಾಃ ॥
ಉಪಸ್ಥಾಪಯಿತವ್ಯಾಃ ಸ್ಯುರ್ಮಾಲ್ಯಯೋಗ್ಯಾಃ ಪೃಥಕ್ಪೃಥಕ್ ।

ಅನುವಾದ

ದೇವಮಂದಿರಗಳಲ್ಲಿ, ಭಜನಾಮನೆಗಳಲ್ಲಿ, ವೃತ್ತಗಳಲ್ಲಿ ಇರುವ ಎಲ್ಲ ದೇವತೆಗಳಿಗೆ ಪ್ರತ್ಯೇಕ-ಪ್ರತ್ಯೇಕವಾಗಿ ನೈವೇದ್ಯ, ತಾಂಬೂಲ ದಕ್ಷಿಣೆ ಕೊಡಬೇಕು.॥18½॥

ಮೂಲಮ್ - 19½

ದೀರ್ಘಾಸಿಬದ್ಧಗೋಧಾಶ್ಚ ಸಂನದ್ಧಾ ಹೃಷ್ಟವಾಸಸಃ ॥
ಮಹಾರಾಜಾಂಗನಂಶೂರಾಃ ಪ್ರವಿಶಂತು ಮಹೋದಯಮ್ ।

ಅನುವಾದ

ಉದ್ದವಾದ ಕತ್ತಿಗಳಿಂದಲೂ, ಗುರಾಣಿಗಳಿಂದಲೂ ಸನ್ನದ್ಧರಾದ, ಶುಭ್ರವಸ್ತ್ರಗಳನ್ನು ಧರಿಸಿರುವ ಶೂರವೀರ ಯೋಧರು ಮಹಾರಾಜರ ಮಹಾನ್ ಅಭ್ಯುದಯಶಾಲೀ ರಾಜಾಂಗಣದಲ್ಲಿ ಪ್ರವೇಶಿಸಲಿ.॥19½॥

ಮೂಲಮ್ - 20½

ಏವಂ ವ್ಯಾದಿಶ್ಯ ವಿಪ್ರೌ ತು ಕ್ರಿಯಾಸ್ತತ್ರ ಸುನಿಷ್ಠಿತೌ ॥
ಚಕ್ರತುಶ್ಚೈವ ಯಚ್ಛೇಷಂ ಪಾರ್ಥಿವಾಯ ನಿವೇದ್ಯ ಚ ।

ಅನುವಾದ

ಸೇವಕರಿಗೆ ಹೀಗೆ ಕಾರ್ಯಮಾಡುವಂತೆ ಆದೇಶಿಸಿ ಇಬ್ಬರೂ ಬ್ರಾಹ್ಮಣ ವಸಿಷ್ಠ, ವಾಮದೇವರು ಪುರೋಹಿತರಿಂದ ನೆರವೇರುವ ಕ್ರಿಯೆಗಳನ್ನು ಸ್ವತಃ ತಾವೇ ನಡೆಸಿದರು. ರಾಜನು ತಿಳಿಸಿದ ಕಾರ್ಯಗಳಲ್ಲದೆ ಬೇರೆ ಉಳಿದಿರುವ ಆವಶ್ಯಕ ಕರ್ತವ್ಯಗಳನ್ನೂ ಅವರಿಬ್ಬರೂ ರಾಜನ ಬಳಿ ಕೇಳಿ ನೆರವೇರಿಸಿದರು.॥20½॥

ಮೂಲಮ್ - 21½

ಕೃತಮಿತ್ಯೇವ ಚಾಬ್ರೂತಾಮಭಿಗಮ್ಯ ಜಗತ್ಪತಿಮ್ ॥
ಯಥೋಕ್ತವಚನಂ ಪ್ರೀತೌ ಹರ್ಷಯುಕ್ತೌ ದ್ವಿಜೋತ್ತಮೌ ।

ಅನುವಾದ

ಅನಂತರ ಮಹಾರಾಜರ ಬಳಿಗೆ ಹೋಗಿ ಹರ್ಷಯುಕ್ತರಾದ ಅವರಿಬ್ಬರೂ ಪ್ರೇಮದಿಂದ ರಾಜನೇ! ನೀವು ಹೇಳಿದಂತೆ ಎಲ್ಲ ಕಾರ್ಯಗಳು ನೆರವೇರಿವೆ ಎಂದು ನುಡಿದರು.॥21॥

ಮೂಲಮ್ - 22½

ತತಃ ಸುಮಂತ್ರಂ ದ್ಯುತಿಮಾನ್ರಾಜಾ ವಚನಮಬ್ರವೀತ್ ॥
ರಾಮಃಕೃತಾತ್ಮಾ ಭವತಾ ಶೀಘ್ರಮಾನೀಯತಾಮಿತಿ ।

ಅನುವಾದ

ಬಳಿಕ ತೇಜಸ್ವೀ ರಾಜಾ ದಶರಥನು ಸುಮಂತ್ರನಲ್ಲಿ - ‘ಸಖನೇ! ಪವಿತ್ರಾತ್ಮಾ ಶ್ರೀರಾಮನನ್ನು ನೀನು ಶೀಘ್ರವಾಗಿ ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದರು.॥22½॥

ಮೂಲಮ್ - 23½

ಸ ತಥೇತಿ ಪ್ರತಿಜ್ಞಾಯ ಸುಮಂತ್ರೋ ರಾಜಶಾಸನಾತ್ ॥
ರಾಮಂ ತತ್ರಾನಯಾಂಚಕ್ರೇ ರಥೇನ ರಥಿನಾಂ ವರಮ್ ।

ಅನುವಾದ

ಹಾಗೆಯೇ ಆಗಲಿ ಎಂದು ಹೇಳಿ ಸುಮಂತ್ರನು ಹೋಗಿ ರಾಜನ ಅಪ್ಪಣೆಯಂತೆ ರಥಿಗಳಲ್ಲಿ ಶ್ರೇಷ್ಠನಾದ ಶ್ರೀರಾಮನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಕರೆದುಕೊಂಡು ಬಂದನು.॥23½॥

ಮೂಲಮ್ - 24

ಅಥ ತತ್ರ ಸಹಾಸೀನಾಸ್ತದಾ ದಶರಥಂ ನೃಪಮ್ ॥

ಮೂಲಮ್ - 25½

ಪ್ರಾಚ್ಯೋದೀಚ್ಯಾ ಪ್ರತೀಚ್ಯಾಶ್ಚ ದಾಕ್ಷಿಣಾತ್ಯಾಶ್ಚ ಭೂಮಿಪಾಃ ।
ಮ್ಲೇಚ್ಛಾಶ್ಚಾರ್ಯಾಶ್ಚ ಯೇ ಚಾನ್ಯೇ ವನಶೈಲಾಂತವಾಸಿನಃ ॥
ಉಪಾಸಾಂಚಕ್ರಿರೇ ಸರ್ವೇ ತಂ ದೇವಾ ವಾಸವಂ ಯಥಾ ।

ಅನುವಾದ

ಆ ಸಭಾಮಂದಿರದಲ್ಲಿ ಸುಖಾಸೀನರಾಗಿದ್ದ ಪೂರ್ವ, ಉತ್ತರ, ಪಶ್ಚಿಮ ಮತ್ತು ದಕ್ಷಿಣದ ಭೂಪಾಲರು, ಮ್ಲೇಚ್ಛರು, ಆರ್ಯರು, ವನ-ಪರ್ವತಗಳಲ್ಲಿ ಇರುವ ಇತರ ಮನುಷ್ಯರು ಹೀಗೆ ಎಲ್ಲರೂ ಆಗ ದೇವತೆಗಳು ಇಂದ್ರನನ್ನು ಸುತ್ತುವರಿದು ಇರುವಂತೆ, ದಶರಥ ರಾಜನನ್ನು ಉಪಾಸಿಸುತ್ತಿದ್ದರು.॥24-25½॥

ಮೂಲಮ್ - 26

ತೇಷಾಂ ಮಧ್ಯೇ ಸ ರಾಜರ್ಷಿರ್ಮರುತಾಮಿವ ವಾಸವಃ ॥

ಮೂಲಮ್ - 27

ಪ್ರಾಸಾದಸ್ಥೋ ದಶರಥೋ ದದರ್ಶಾಯಾಂತಮಾತ್ಮಜಮ್ ।
ಗಂಧರ್ವರಾಜಪ್ರತಿಮಂ ಲೋಕೇ ವಿಖ್ಯಾತಪೌರುಷಮ್ ॥

ಅನುವಾದ

ಅವರ ನಡುವೆ ಮಹಡಿಯ ಮೇಲೆ ಕುಳಿತಿರುವ ದಶರಥನು ಮರುದ್ಗಣಗಳ ಮಧ್ಯೇ ದೇವೇಂದ್ರನು ಶೋಭಿಸುವಂತೆ ಶೋಭಿಸುತ್ತಿದ್ದನು; ಅಲ್ಲಿಂದಲೇ ಗಂಧರ್ವರಾಜನಂತೆ ತೇಜಸ್ವಿಯೂ, ಸಮಸ್ತ ಜಗತ್ತಿನಲ್ಲಿ ವಿಖ್ಯಾತ ಪೌರುಷನೂ ಆದ ತನ್ನ ಪುತ್ರ ಶ್ರೀರಾಮನು ತನ್ನ ಬಳಿಗೆ ಬರುವುದನ್ನು ನೋಡಿದನು.॥26-27॥

ಮೂಲಮ್ - 28

ದೀರ್ಘಬಾಹುಂ ಮಹಾಸತ್ತ್ವಂ ಮತ್ತಮಾತಂಗಗಾಮಿನಮ್ ।
ಚಂದ್ರಕಾಂತಾನನಂ ರಾಮಮತೀವ ಪ್ರಿಯದರ್ಶನಮ್ ॥

ಮೂಲಮ್ - 29

ರೂಪೌದಾರ್ಯಗುಣೈಃ ಪುಂಸಾಂ ದೃಷ್ಟಿಚಿತ್ತಾಪಹಾರಿಣಮ್ ।
ಘರ್ಮಾಭಿತಪ್ತಾಃ ಪರ್ಜನ್ಯಂ ಹ್ಲಾದಯಂತಮಿವಪ್ರಜಾಃ ।

ಅನುವಾದ

ಶ್ರೀರಾಮನ ಭುಜಗಳು ನೀಳವಾಗಿದ್ದು, ಮಹಾ ಬಲಶಾಲಿಯಾಗಿದ್ದವು. ಅವನು ಮದಿಸಿದ ಗಜರಾಜನಂತೆ ಗಂಭೀರವಾಗಿ ನಡೆಯುತ್ತಿದ್ದನು. ಅವನ ಮುಖಮಂಡಲವು ಚಂದ್ರನಿಗಿಂತಲೂ ಹೆಚ್ಚು ಕಾಂತಿಯುಕ್ತವಾಗಿತ್ತು. ಶ್ರೀರಾಮನ ದರ್ಶನವು ಎಲ್ಲರಿಗೆ ಅತ್ಯಂತ ಪ್ರಿಯವಾಗಿತ್ತು. ಅವನು ತನ್ನ ರೂಪ ಮತ್ತು ಉದಾರತೆಯೇ ಮೊದಲಾದ ಗುಣಗಳಿಂದ ಜನರ ದೃಷ್ಟಿಯನ್ನು ಮತ್ತು ಮನಸ್ಸನ್ನು ಆಕರ್ಷಿಸುತ್ತಿದ್ದನು. ಬಿಸಿಲ ಬೇಗೆಯಲ್ಲಿ ಬೆಂದ ಪ್ರಾಣಿಗಳಿಗೆ ಮಳೆಯು ಆನಂದ ಕೊಡುವಂತೆಯೇ ಶ್ರೀರಾಮನು ಸಮಸ್ತ ಪ್ರಜೆಗೆ ಪರಮಾಹ್ಲಾದವನ್ನು ಕೊಡುತ್ತಾ ಇದ್ದನು.॥28-29॥

ಮೂಲಮ್ - 30½

ನ ತತರ್ಪ ಸಮಾಯಾಂತಂ ಪಶ್ಯಮಾನೋ ನರಾಧಿಪಃ ।
ಅವತಾರ್ಯ ಸುಮಂತ್ರಸ್ತು ರಾಘವಂ ಸ್ಯಂದನೋತ್ತಮಾತ್ ॥
ಪಿತುಃ ಸಮೀಪಂ ಗಚ್ಛಂತಂ ಪ್ರಾಂಜಲಿಃ ಪೃಷ್ಠ ತೋಽನ್ವಗಾತ್ ।

ಅನುವಾದ

ಬರುತ್ತಿರುವ ಶ್ರೀರಾಮಚಂದ್ರನ ಕಡೆಗೆ ನೆಟ್ಟನೋಟದಿಂದ ನೋಡುತ್ತಿದ್ದರೂ ದಶರಥನಿಗೆ ತೃಪ್ತಿ ಆಗುತ್ತಿರಲಿಲ್ಲ. ಸುಮಂತ್ರನು ಆ ಶ್ರೇಷ್ಠ ರಥದಿಂದ ಶ್ರೀರಾಮಚಂದ್ರನನ್ನು ಇಳಿಸಿದಾಗ ತಂದೆಯ ಬಳಿಗೆ ಹೋಗತೊಡಗಿದನು. ಆಗ ಸುಮಂತನೂ ಅವನ ಹಿಂದೆ-ಹಿಂದೆಯೇ ಕೈಮುಗಿದುಕೊಂಡು ಹೋದನು.॥30½॥

ಮೂಲಮ್ - 31½

ಸ ತಂ ಕೈಲಾಸಶೃಂಗಾಭಂ ಪ್ರಾಸಾದಂ ರಘುನಂದನಃ ॥
ಅರುರೋಹ ನೃಪಂ ದ್ರಷ್ಟುಂ ಸಹಸಾ ತೇನ ರಾಘವಃ ।

ಅನುವಾದ

ಆ ಅರಮನೆಯು ಕೈಲಾಸ ಶಿಖರದಂತೆ ಉಜ್ವಲ ಮತ್ತು ಎತ್ತರವಾಗಿತ್ತು. ರಘುನಂದನ ಶ್ರೀರಾಮನು ಮಹಾರಾಜನನ್ನು ದರ್ಶಿಸಲು ಸುಮಂತ್ರನೊಂದಿಗೆ ಲಗುಬಗೆಯಿಂದ ಮೇಲೇರಿದನು.॥31½॥

ಮೂಲಮ್ - 32½

ಸ ಪ್ರಾಂಜಲಿರಭಿಪ್ರೇತ್ಯ ಪ್ರಣತಃ ಪಿತುರಂತಿಕೇ ॥
ನಾಮ ಸ್ವಂ ಶ್ರಾವಯನ್ರಾಮೋ ವವಂದೇ ಚರಣೌ ಪಿತುಃ ।

ಅನುವಾದ

ಶ್ರೀರಾಮನು ಕೈಗಳೆರಡನ್ನು ಮುಗಿದು ವಿನೀತಭಾವದಿಂದ ತಂದೆಯ ಬಳಿಗೆ ಹೋದನು ಹಾಗೂ ತನ್ನ ಹೆಸರನ್ನು ಹೇಳಿಕೊಂಡು ರಾಜನ ಚರಣಗಳಿಗೆ ದೀರ್ಘದಂಡ ನಮಸ್ಕಾರ ಮಾಡಿದನು.॥32½॥

ಮೂಲಮ್ - 33½

ತಂ ದೃಷ್ಟ್ವಾ ಪ್ರಣತಂ ಪಾರ್ಶ್ವೇ ಕೃತಾಂಜಲಿಪುಟಂ ನೃಪಃ ॥
ಗೃಹ್ಯಾಂಜಲೌ ಸಮಾಕೃಷ್ಯ ಸಸ್ವಜೇ ಪ್ರಿಯಮಾತ್ಮಜಮ್ ।

ಅನುವಾದ

ಶ್ರೀರಾಮನು ಬಳಿಗೆ ಬಂದು ಕೈಮುಗಿದು ನಮಸ್ಕರಿಸುವುದನ್ನು ನೋಡಿ ರಾಜನು ತನ್ನ ಪುತ್ರನನ್ನು ಬರಸೆಳೆದು ಅಪ್ಪಿಕೊಂಡನು.॥33½॥

ಮೂಲಮ್ - 34½

ತಸ್ಮೈ ಚಾಭ್ಯುದ್ಯತಂಸಮ್ಯಙ್ಮಣಿಕಾಂಚನಭೂಷಿತಮ್ ॥
ದಿದೇಶ ರಾಜಾ ರುಚಿರಂ ರಾಮಾಯ ಪರಮಾಸನಮ್ ।

ಅನುವಾದ

ಆಗ ರಾಜನು ಮೊದಲೇ ಶ್ರೀರಾಮಚಂದ್ರನಿಗಾಗಿ ಸಿದ್ಧಪಡಿಸಿದ ರತ್ನ ಖಚಿತ ಸುವರ್ಣ ಭೂಷಿತ ಒಂದು ಪರಮ ಸುಂದರ ಸಿಂಹಾಸನದಲ್ಲಿ ಅವನಿಗೆ ಕುಳಿತುಕೊಳ್ಳಲು ಆಜ್ಞಾಪಿಸಿದನು.॥34½॥

ಮೂಲಮ್ - 35½

ತಥಾಽಽಸನವರಂ ಪ್ರಾಪ್ಯ ವ್ಯದೀಪಯತ ರಾಘವಃ ॥
ಸ್ವಯೈವ ಪ್ರಭಯಾ ಮೇರುಮುದಯೇ ವಿಮಲೋ ರವಿಃ ।

ಅನುವಾದ

ನಿರ್ಮಲ ಸೂರ್ಯನು ಉದಯಕಾಲದಲ್ಲಿ ಮೇರುಪರ್ವತವನ್ನು ತನ್ನ ಕಿರಣಗಳಿಂದ ಬೆಳಗುವಂತೆಯೇ ಶ್ರೀ ರಘುನಾಥನು ಆ ಶ್ರೇಷ್ಠ ಸಿಂಹಾಸನದಲ್ಲಿ ಕುಳಿತು ತನ್ನ ಪ್ರಭೆಯಿಂದ ಅದನ್ನು ಪ್ರಕಾಶಿತಗೊಳಿಸಿದನು.॥35½॥

ಮೂಲಮ್ - 36½

ತೇನ ವಿಭ್ರಾಜಿತಾ ತತ್ರ ಸಾ ಸಭಾಪಿ ವ್ಯರೋಚತ ॥
ವಿಮಲಗ್ರಹನಕ್ಷತ್ರಾ ಶಾರದೀ ದ್ಯೌರಿವೇಂದುನಾ ।

ಅನುವಾದ

ಅವನಿಂದ ಪ್ರಕಾಶಿತವಾದ ಆ ಸಭೆಯು ನಿರ್ಮಲಗ್ರಹ-ನಕ್ಷತ್ರಗಳಿಂದ ತುಂಬಿದ ಶರತ್ಕಾಲದ ಆಕಾಶವು ಚಂದ್ರನಿಂದ ಬೆಳಗುವಂತೆ ಬಹಳ ಶೋಭಿಸುತ್ತಿತ್ತು.॥36½॥

ಮೂಲಮ್ - 37½

ತಂ ಪಶ್ಯಮಾನೋ ನೃಪತಿಸ್ತುತೋಷ ಪ್ರಿಯಮಾತ್ಮಜಮ್ ॥
ಅಲಂಕೃತಮಿವಾತ್ಮಾನಮಾದರ್ಶತಲಸಂಸ್ಥಿತಮ್ ।

ಅನುವಾದ

ಸುಂದರ ವೇಷ-ಭೂಷಣಗಳಿಂದ ಅಲಂಕೃತನಾದವನು ತನ್ನ ಪ್ರತಿಬಿಂಬವನ್ನೇ ಕನ್ನಡಿಯಲ್ಲಿ ನೋಡಿ ಸಂತೋಷ ಪಡುವಂತೆ, ದಶರಥನು ಶೋಭಾಶಾಲಿ ತನ್ನ ಪುತ್ರ ಶ್ರೀರಾಮನನ್ನು ನೋಡಿ ಬಹಳ ಪ್ರಸನ್ನನಾದನು.॥37½॥

ಮೂಲಮ್ - 38½

ಸ ತಂ ಸುಸ್ಥಿತಮಾಭಾಷ್ಯ ಪುತ್ರಂ ಪುತ್ರವತಾಂ ವರಃ ॥
ಉವಾಚೇದಂ ವಚೋ ರಾಜಾ ದೇವೇಂದ್ರ ಮೀವ ಕಾಶ್ಯಪಃ ।

ಅನುವಾದ

ಕಶ್ಯಪರು ತನ್ನ ಪುತ್ರ ದೇವೇಂದ್ರನನ್ನು ಕರೆಯುವಂತೆ ಪುತ್ರವಂತರಲ್ಲಿ ಶ್ರೇಷ್ಠನಾದ ದಶರಥನು ಸಿಂಹಾಸನದಲ್ಲಿ ಕುಳಿತಿರುವ ತನ್ನ ಪುತ್ರ ಶ್ರೀರಾಮನನ್ನು ಸಂಬೋಧಿಸುತ್ತಾ ಅವನಲ್ಲಿ ಇಂತೆಂದನು.॥38½॥

ಮೂಲಮ್ - 39

ಜ್ಯೇಷ್ಠಾಯಾಮಸಿ ಮೇ ಪತ್ನ್ಯಾಂ ಸದೃಶ್ಯಾಂ ಸದೃಶಃ ಸುತಃ ॥

ಮೂಲಮ್ - 40½

ಉತ್ಪನ್ನಸ್ತ್ವಂ ಗುಣಜ್ಯೇಷ್ಠೋ ಮಮ ರಾಮಾತ್ಮಜಃ ಪ್ರಿಯಃ ।
ತ್ವಯಾ ಯತಃ ಪ್ರಜಾಶ್ಚೇಮಾಃ ಸ್ವಗುಣೈರನುರಂಜಿತಾಃ ॥
ತಸ್ಮಾತ್ತ್ವಂ ಪುಷ್ಯಯೋಗೇನ ಯೌವರಾಜ್ಯಮವಾಪ್ನುಹಿ ।

ಅನುವಾದ

ಮಗು! ನೀನು ನನ್ನ ಹಿರಿಯ ರಾಣಿ ಕೌಸಲ್ಯೆಯ ಗರ್ಭದಿಂದ ಉತ್ಪನ್ನನಾಗಿರುವೆ. ನೀನು ನಿನ್ನ ತಾಯಿಗೆ ಅನುರೂಪನೇ ಆಗಿರುವೆ. ಶ್ರೀರಾಮಾ! ನೀನು ಗುಣಗಳಲ್ಲಿ ನನ್ನನ್ನೂ ಮೀರಿಸಿರುವೆ. ಆದ್ದರಿಂದ ನನಗೆ ಪ್ರಿಯಪುತ್ರನಾಗಿರುವೆ. ನೀನು ತನ್ನ ಗುಣಗಳಿಂದ ಈ ಸಮಸ್ತ ಪ್ರಜೆಗಳನ್ನು ಸಂತೋಷಪಡಿಸಿರುವೆ. ಅದಕ್ಕಾಗಿ ನಾಳೆ ಪುಷ್ಯ ನಕ್ಷತ್ರದ ಯೋಗದಲ್ಲಿ ಯುವರಾಜ ಪಟ್ಟವನ್ನು ಸ್ವೀಕರಿಸು.॥39-40½॥

ಮೂಲಮ್ - 41

ಕಾಮತಸ್ತ್ವಂ ಪ್ರಕೃತ್ಯ್ವೆವ ನಿರ್ಣೀತೋ ಗುಣವಾನಿತಿ ॥

ಮೂಲಮ್ - 42

ಗುಣವತ್ಯಪಿ ತು ಸ್ನೇಹಾತ್ಪುತ್ರ ವಕ್ಷ್ಯಾಮಿ ತೇ ಹಿತಮ್ ।
ಭೂಯೋ ವಿನಯಮಾಸ್ಥಾಯ ಭವ ನಿತ್ಯಂಜಿತೇಂದ್ರಿಯಃ ॥

ಅನುವಾದ

ಮಗು! ನೀನು ಸ್ವಾಭಾವಿಕವಾಗಿ ಗುಣವಂತನಾಗಿದ್ದರೂ, ನಿನ್ನ ವಿಷಯದಲ್ಲಿ ಎಲ್ಲರ ನಿರ್ಣಯ ಹೀಗೆ ಆಗಿದ್ದರೂ, ಸದ್ಗುಣ ಸಂಪನ್ನನಾಗಿದ್ದರೂ ನಾನು ಸ್ನೇಹವಶದಿಂದ ನಿನಗೆ ಕೆಲವು ಹಿತದ ಮಾತನ್ನು ತಿಳಿಸುವೆನು. ನೀನು ಇನ್ನೂ ಹೆಚ್ಚು ವಿನಯವನ್ನು ಆಶ್ರಯಿಸಿ ಸದಾ ಜಿತೇಂದ್ರಿಯನಾಗಿರು.॥41-42॥

ಮೂಲಮ್ - 43

ಕಾಮಕ್ರೋಧಸಮುತ್ಥಾನಿ ತ್ಯಜಸ್ವ ವ್ಯಸನಾನಿ ಚ ।
ಪರೋಕ್ಷಯಾ ವರ್ತಮಾನೋ ವೃತ್ತ್ಯಾ ಪ್ರತ್ಯಕ್ಷಯಾತಥಾ ॥

ಅನುವಾದ

ಕಾಮ ಮತ್ತು ಕ್ರೋಧದಿಂದ ಉಂಟಾಗುವ ದುರ್ವ್ಯಸನಗಳನ್ನು ಸರ್ವಥಾ ತ್ಯಜಿಸಿಬಿಡು. ಪರೋಕ್ಷ ವೃತ್ತಿಯಿಂದ (ಗುಪ್ತಚರರಿಂದ ಯಥಾರ್ಥವಾದ ಮಾತನ್ನು ತಿಳಿದುಕೊಂಡು) ಹಾಗೂ ಪ್ರತ್ಯಕ್ಷ ವೃತ್ತಿಯಿಂದ (ಅರ್ಥಾತ್ ರಾಜಸಭೆಯಲ್ಲಿ ಮುಂದೆ ಬಂದು ಜನತೆಯು ಹೇಳಿದ ವೃತ್ತಾಂತವನ್ನು ಪ್ರತ್ಯಕ್ಷ ನೋಡಿ ಕೇಳಿ) ಸರಿಯಾಗಿ ನ್ಯಾಯನಿರ್ಣಯ ಮಾಡು.॥43॥

ಮೂಲಮ್ - 44

ಅಮಾತ್ಯಪ್ರಭೃತೀಃ ಸರ್ವಾಃ ಪ್ರಜಾಶ್ಚೈವಾನುರಂಜಯ ।
ಕೋಷ್ಠಾಗಾರಾಯುಧಾಗಾರೈಃ ಕೃತ್ವಾ ಸನ್ನಿಚಯಾನ್ಬಹೂನ್ ॥

ಮೂಲಮ್ - 45

ಇಷ್ಟಾನುರಕ್ತ ಪ್ರಕೃತಿರ್ಯಃ ಪಾಲಯತಿ ಮೇದಿನೀಮ್ ।
ತಸ್ಯ ನಂದತಿ ಮಿತ್ರಾಣಿ ಲಬ್ಧ್ವಾಮೃತಮಿವಾಮರಾಃ ॥

ಅನುವಾದ

ಮಂತ್ರಿ, ಸೇನಾಪತಿ ಮೊದಲಾದ ಎಲ್ಲ ಅಧಿಕಾರಿಗಳನ್ನು ಮತ್ತು ಪ್ರಜಾಜನರನ್ನು ಸದಾ ಸಂತೋಷವಾಗಿ ಇರಿಸಬೇಕು. ರಾಜಭಂಡಾರ ಹಾಗೂ ಶಸ್ತ್ರಾಗಾರ ಮುಂತಾದವುಗಳಿಂದ ಉಪಯೋಗಿ ವಸ್ತುಗಳನ್ನು ಹೆಚ್ಚಾಗಿ ಸಂಗ್ರಹಿಸಿ, ಮಂತ್ರಿ, ಸೇನಾಪತಿ, ಪ್ರಜೆ ಮೊದಲಾದ ಸಮಸ್ತ ಪ್ರಕೃತಿಗಳನ್ನು ಪ್ರಿಯರಾಗಿ ತಿಳಿದು ಅವರನ್ನು ತನ್ನ ಕುರಿತು ಅನುರಕ್ತರಾಗಿಸಿಕೊಂಡು ಪೃಥಿವಿಯನ್ನು ಪಾಲಿಸುವ ರಾಜನ ಮಿತ್ರರು ಅಮೃತ ಪಡೆದ ದೇವತೆಗಳು ಪ್ರಸನ್ನರಾಗಿರುವಂತೆ ಸಂತೋಷ ಭರಿತರಾಗಿರುತ್ತಾರೆ.॥44-45॥

ಮೂಲಮ್ - 46½

ತಸ್ಮಾತ್ಪುತ್ರ ತ್ವಮಾತ್ಮಾನಂ ನಿಯಮ್ಯೈವಂ ಸಮಾಚರ ।
ತಚ್ಛ್ರುತ್ವಾ ಸುಹೃದಸ್ತಸ್ಯ ರಾಮಸ್ಯ ಪ್ರಿಯಕಾರಿಣಃ ॥
ತ್ವರಿತಾಃ ಶೀಘ್ರಮಾಗತ್ಯಕೌಸಲ್ಯಾಯೈ ನ್ಯವೇದಯನ್ ।

ಅನುವಾದ

ಅದಕ್ಕಾಗಿ ಮಗು! ನೀನು ನಿನ್ನ ಚಿತ್ತವನ್ನು ವಶದಲ್ಲಿರಿಸಿಕೊಂಡು ಈ ಪ್ರಕಾರ ಉತ್ತಮ ಆಚರಣೆ ಪಾಲಿಸುತ್ತಾ ಇರು. ರಾಜನ ಈ ಮಾತನ್ನು ಕೇಳಿ ಶ್ರೀರಾಮಚಂದ್ರನಿಗೆ ಪ್ರಿಯಮಾಡುವ ಸುಹೃದಯರು ಕೂಡಲೇ ತಾಯಿ ಕೌಸಲ್ಯೆಯ ಬಳಿಗೆ ಹೋಗಿ ಆಕೆಗೆ ಈ ಶುಭ ಸಮಾಚಾರವನ್ನು ತಿಳಿಸಿದರು.॥46½॥

ಮೂಲಮ್ - 47½

ಸಾ ಹಿರಣ್ಯಂ ಚ ಗಾಶ್ಚೈವ ರತ್ನಾನಿ ವಿವಿಧಾನಿ ಚ ॥
ವ್ಯಾದಿದೇಶ ಪ್ರಿಯಾಖ್ಯೇಭ್ಯಃ ಕೌಸಲ್ಯಾ ಪ್ರಮದೋತ್ತಮಾ ।

ಅನುವಾದ

ನಾರಿಯರಲ್ಲಿ ಶ್ರೇಷ್ಠಳಾದ ಕೌಸಲ್ಯೆಯು ಆ ಪ್ರಿಯ ಸಂವಾದವನ್ನು ತಿಳಿಸಿದ ಆ ಸುಹೃದರಿಗೆ ಬಗೆ-ಬಗೆಯ ರತ್ನ, ಸುವರ್ಣ, ಗೋವುಗಳನ್ನು ಉಡುಗೊರೆಯಾಗಿ ನೀಡಿದಳು.॥47½॥

ಮೂಲಮ್ - 48

ಅಥಾಭಿವಾದ್ಯ ರಾಜಾನಂ ರಥಮಾರುಹ್ಯ ರಾಘವಃ ।
ಯಯೌ ಸ್ವಂ ದ್ಯುತಿಮದ್ವೇಶ್ಮ ಜನೌಘೈಃ ಪರಿಪೂಜಿತಃ ॥

ಅನುವಾದ

ಅನಂತರ ಶ್ರೀರಾಮಚಂದ್ರನು ರಾಜನಿಗೆ ನಮಸ್ಕರಿಸಿ ರಥಾರೂಢನಾಗಿ, ಪ್ರಜಾಜನರಿಂದ ಸಮ್ಮಾನಿತನಾಗುತ್ತಾ ತನ್ನ ಭವನವನ್ನು ಸೇರಿದನು.॥48॥

ಮೂಲಮ್ - 49

ತೇ ಚಾಪಿ ಪೌರಾ ನೃಪತೇರ್ವಚಸ್ತ-
ಚ್ಛ್ರುತ್ವಾತದಾ ಲಾಭಮಿವೇಷ್ಟಮಾಶು ।
ನರೇಂದ್ರ ಮಾಮಂತ್ರ್ಯ ಗೃಹಾಣಿ ಗತ್ವಾ
ದೇವಾನ್ ಸಮಾನರ್ಚುರಜಿಪ್ರಹೃಷ್ಟಾಃ ॥

ಅನುವಾದ

ನಗರನಿವಾಸಿಗಳು ರಾಜನ ಮಾತನ್ನು ಕೇಳಿ ಮನಸ್ಸಿನಲ್ಲೇ-ನಮಗೆ ಬೇಗನೆ ನಮ್ಮ ಅಭೀಷ್ಟವಸ್ತು ದೊರೆಯುವುದು ಎಂದು ಅಂದುಕೊಂಡು, ಮಹಾರಾಜನ ಅಪ್ಪಣೆ ಪಡೆದು ತಮ್ಮ ಮನೆಗಳಿಗೆ ತೆರಳಿ, ಅತ್ಯಂತ ಹರ್ಷದಿಂದ ಅಭೀಷ್ಟಸಿದ್ಧಿಗಾಗಿ ದೇವತೆಗಳನ್ನು ಪೂಜಿಸತೊಡಗಿದರು.॥49॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೂರನೆಯ ಸರ್ಗ ಪೂರ್ಣವಾಯಿತು. ॥3॥