००२ रामभिषेकचर्चा

वाचनम्
ಭಾಗಸೂಚನಾ

ಮಹಾಸಭೆಯಲ್ಲಿ ದಶರಥನು ಶ್ರೀರಾಮನಿಗೆ ಯುವರಾಜ್ಯಾಭಿಷೇಕ ಮಾಡುವ ವಿಷಯವನ್ನು ಪ್ರಸ್ತಾಪಿಸಿದುದು, ಸಭಾಸದರು ಶ್ರೀರಾಮನ ಗುಣಗಳನ್ನು ವರ್ಣಿಸಿ ದಶರಥನ ಅಭಿಪ್ರಾಯವನ್ನು ಅನುಮೋದಿಸಿದುದು

ಮೂಲಮ್ - 1

ತತಃ ಪರಿಷದಂ ಸರ್ವಾಮಾಮಂತ್ರ್ಯ ವಸುಧಾಧಿಪಃ ।
ಹಿತಮುದ್ಧರ್ಷಣಂ ಚೈವಮುವಾಚ ಪ್ರಥಿತಂ ವಚಃ ॥

ಮೂಲಮ್ - 2

ದುಂದುಭಿಸ್ವರಕಲ್ಪೇನ ಗಂಭೀರೇಣಾನುನಾದಿನಾ ।
ಸ್ವರೇಣ ಮಹತಾ ರಾಜಾ ಜೀಮೂತ ಇವ ನಾದಯನ್ ॥

ಅನುವಾದ

ಬಳಿಕ ಭುವಿಗೊಡೆಯನಾದ ದಶರಥನು ಸಭಾಮಂದಿರದಲ್ಲಿ ಕುಳಿತಿದ್ದ ರಾಜರನ್ನು, ಪ್ರಜೆಗಳನ್ನು ಉದ್ದೇಶಿಸಿ ಸರ್ವರಿಗೂ ಹಿತಕರವೂ, ಹರ್ಷಜನಕವೂ ಆದ ಮಾತನ್ನು ಮೇಘ ಗಂಭೀರ ಧ್ವನಿಯಂತೆ ಗಟ್ಟಿಯಾಗಿ ಹೀಗೆ ಹೇಳಿದನ.॥1-2॥

ಮೂಲಮ್ - 3

ರಾಜಲಕ್ಷಣಯುಕ್ತೇನ ಕಾಂತೇನಾನುಪಮೇನ ಚ ।
ಉವಾಚ ರಸಯುಕ್ತೇನ ಸ್ವರೇಣ ನೃಪತಿರ್ನೃಪಾನ್ ॥

ಅನುವಾದ

ದಶರಥನು ರಾಜೋಚಿತ ಸ್ನಿಗ್ಧತೆಯಿಂದ ಕೂಡಿದ ದನಿಯಲ್ಲಿ ಗಂಭೀರವಾಗಿಯೂ, ಅನುಪಮವೂ, ಮಧುರವಾಗಿ ಮಾತನಾಡುತ್ತಿದ್ದನು. ಅದ್ಭುತ ರಸಮಯ ಸ್ವರದಲ್ಲಿ ಎಲ್ಲ ರಾಜರನ್ನು ಸಂಬೋಧಿಸಿ ಹೇಳಿದನು.॥3॥

ಮೂಲಮ್ - 4

ವಿದಿತಂ ಭವತಾಮೇತದ್ಯಥಾ ಮೇ ರಾಜ್ಯಮುತ್ತಮಮ್ ।
ಪೂರ್ವಕೈರ್ಮಮ ರಾಜೇಂದ್ರೈಃ ಸುತವತ್ಪರಿಪಾಲಿತಮ್ ॥

ಅನುವಾದ

ಸಜ್ಜನರೇ! ನಮ್ಮ ಪೂರ್ವಜರಾದ ರಾಜಾಧಿರಾಜರು ಈ ಶ್ರೇಷ್ಠವಾದ ರಾಜ್ಯವನ್ನು ಪ್ರಜೆಗಳನ್ನು ಹೇಗೆ ಮಕ್ಕಳಂತೆ ಪಾಲಿಸಿದ್ದರು ಎಂಬುದು ನಿಮಗೆಲ್ಲರಿಗೆ ತಿಳಿದೇ ಇದೆ.॥4॥

ಮೂಲಮ್ - 5

ಸೋಽಹಮಿಕ್ಷ್ವಾಕುಭಿಃ ಸರ್ವೈರ್ನರೇಂದ್ರೈಃ ಪ್ರತಿಪಾಲಿತಮ್ ।
ಶ್ರೇಯಸಾ ಯೋಕ್ತುಮಿಚ್ಛಾಮಿ ಸುಖಾರ್ಹಮಖಿಲಂ ಜಗತ್ ॥

ಅನುವಾದ

ಸಮಸ್ತ ಇಕ್ಷ್ವಾಕು ನರೇಶರು ಯಾವುದನ್ನು ಪಾಲಿಸಿದರೋ, ಆ ಸುಖಯೋಗ್ಯವಾದ ಈ ಭೂಮಂಡಲವನ್ನು ಇನ್ನು ಹೆಚ್ಚಿನ ಶ್ರೇಯಸ್ಸಿನೆಡೆಗೆ ಒಯ್ಯಲು ನಾನು ಬಯಸುತ್ತಿರುವೆನು.॥5॥

ಮೂಲಮ್ - 6

ಮಯಾಪ್ಯಾಚರಿತಂ ಪೂರ್ವೈಃ ಪಂಥಾನಮನುಗಚ್ಛತಾ ।
ಪ್ರಜಾ ನಿತ್ಯಮನಿದ್ರೇಣ ಯಥಾಶಕ್ತ್ಯಭಿರಕ್ಷಿತಾಃ ॥

ಅನುವಾದ

ನನ್ನ ಪೂರ್ವಜರು ಯಾವ ಮಾರ್ಗದಲ್ಲಿ ನಡೆದರೋ, ಅದನ್ನೇ ಅನುಸರಿಸುತ್ತಾ ನಾನೂ ಕೂಡ ಜಾಗರೂಕನಾಗಿದ್ದು; ಸಮಸ್ತ ಪ್ರಜಾಜನರನ್ನು ಯಥಾಶಕ್ತಿ ರಕ್ಷಿಸಿರುವೆನು.॥6॥

ಮೂಲಮ್ - 7

ಇದಂ ಶರೀರಂ ಕೃತ್ಸ್ನಸ್ಯ ಲೋಕಸ್ಯ ಚರತಾ ಹಿತಮ್ ।
ಪಾಂಡುರಸ್ಯಾತಪತ್ರಸ್ಯ ಚ್ಛಾಯಾಯಾಂ ಜರಿತಂ ಮಯಾ ॥

ಅನುವಾದ

ಸಮಸ್ತ ಜಗತ್ತಿನ ಹಿತ ಸಾಧನೆಯನ್ನು ಮಾಡುತ್ತಾ ನನ್ನ ಶರೀರವು ಶ್ವೇತಚ್ಛತ್ರದ ನೆರಳಿನಲ್ಲಿ ಮುದಿಯಾಯಿತು.॥7॥

ಮೂಲಮ್ - 8

ಪ್ರಾಪ್ಯ ವರ್ಷ ಸಹಸ್ರಾಣಿ ಬಹೂನ್ಯಾಯೂಂಷಿ ಜೀವತಃ ।
ಜೀರ್ಣಸ್ಯಾಸ್ಯ ಶರೀರಸ್ಯ ವಿಶ್ರಾಂತಿಮಭಿರೋಚಯೇ ॥

ಅನುವಾದ

ಅನೇಕ ಸಾವಿರ (ಅರವತ್ತು ಸಾವಿರ) ವರ್ಷ ಆಯುಸ್ಸು ಪಡೆದು ಬದುಕಿದ ಈ ಜರಾಜೀರ್ಣ ಶರೀರಕ್ಕೆ ವಿಶ್ರಾಂತಿ ಕೊಡಲು ನಾನು ಬಯಸುತ್ತಿರುವೆನು.॥8॥

ಮೂಲಮ್ - 9

ರಾಜಪ್ರಭಾವಜುಷ್ಟಾಂ ಚ ದುರ್ವಹಾಮಜಿತೇಂದ್ರಿಯೈಃ ।
ಪರಿಶ್ರಾಂತೋಽಸ್ಮಿ ಲೋಕಸ್ಯ ಗುರ್ವೀಂ ಧರ್ಮಧುರಂ ವಹನ್ ॥

ಅನುವಾದ

ಧರ್ಮಪೂರ್ವಕ ಜಗತ್ತಿನ ಸಂರಕ್ಷಣೆಯ ಭಾರೀ ಭಾರವನ್ನು ರಾಜರು ಶೌರ್ಯಾದಿ ಪ್ರಭಾವಗಳಿಂದಲೇ ಹೊರಬಲ್ಲರು. ಅಜಿತೇಂದ್ರಿಯ ಪುರುಷರು ಈ ಭಾರವನ್ನು ಹೊರುವುದು ಅತ್ಯಂತ ಕಠಿಣವಾಗಿದೆ. ನಾನು ಬಹಳ ದಿನಗಳಿಂದ ಈ ಭಾರವನ್ನು ಹೊತ್ತು ಹೊತ್ತು ಬಳಲಿ ಹೋಗಿರುವೆನು.॥9॥

ಮೂಲಮ್ - 10

ಸೋಽಹಂ ವಿಶ್ರಾಮಮಿಚ್ಛಾಮಿ ಪುತ್ರಂ ಕೃತ್ವಾ ಪ್ರಜಾಹಿತೇ ।
ಸಂನಿಕೃಷ್ಣಾನಿಮಾನ್ಸರ್ವಾನನುಮಾನ್ಯ ದ್ವಿಜರ್ಷಭಾನ್ ॥

ಅನುವಾದ

ಅದಕ್ಕಾಗಿ ಇಲ್ಲಿ ಕುಳಿತಿರುವ ಈ ಸಮಸ್ತ ಶ್ರೇಷ್ಠ ದ್ವಿಜರ ಅನುಮತಿ ಪಡೆದು, ಪ್ರಜಾಜನರ ಹಿತದ ಕಾರ್ಯದಲ್ಲಿ ನನ್ನ ಪುತ್ರ ಶ್ರೀರಾಮನನ್ನು ನಿಯುಕ್ತಗೊಳಿಸಿ, ನಾನು ರಾಜಕಾರ್ಯದಿಂದ ವಿಶ್ರಮಿಸಲು ಬಯಸುತ್ತಿರವೆನು.॥10॥

ಮೂಲಮ್ - 11

ಅನುಜಾತೋ ಹಿ ಮಾಂ ಸರ್ವೈರ್ಗುಣೈಃ ಶ್ರೇಷ್ಠೋ ಮಮಾತ್ಮಜಃ ।
ಪುರಂದರಸಮೋ ವೀರ್ಯೇ ರಾಮಃ ಪರಪುರಂಜಯಃ ॥

ಅನುವಾದ

ನನ್ನ ಪುತ್ರ ಶ್ರೀರಾಮನು ನನಗಿಂತಲೂ ಸರ್ವಗುಣಗಳಲ್ಲಿ ಶ್ರೇಷ್ಠನಾಗಿ ಇದ್ದಾನೆ. ಶತ್ರುಗಳ ರಾಜ್ಯಗಳನ್ನು ಗೆಲ್ಲಬಲ್ಲ ಶ್ರೀರಾಮಚಂದ್ರನು ಬಲ-ಪರಾಕ್ರಮದಲ್ಲಿ ದೇವೇಂದ್ರನಂತೆ ಇರುವನು.॥11॥

ಮೂಲಮ್ - 12

ತಂ ಚಂದ್ರಮಿವ ಪುಷ್ಯೇಣ ಯುಕ್ತಂ ಧರ್ಮಭೃತಾಂ ವರಮ್ ।
ಯೌವರಾಜ್ಯೇ ನಿಯೋಕ್ತಾಸ್ಮಿ ಪ್ರಾತಃ ಪುರುಷಪುಂಗವಮ್ ॥

ಅನುವಾದ

ಪುಷ್ಯ ನಕ್ಷತ್ರದಿಂದ ಕೂಡಿದ ಚಂದ್ರನಂತೆ, ಸಮಸ್ತ ಕಾರ್ಯ ಸಾಧನೆಗಳಲ್ಲಿ ಕುಶಲನೂ, ಧರ್ಮಾತ್ಮರಲ್ಲಿ ಶ್ರೇಷ್ಠನೂ ಆದ ಪುರುಷಶ್ರೇಷ್ಠ ಶ್ರೀರಾಮಚಂದ್ರನಿಗೆ ನಾಳೆ ಬೆಳಿಗ್ಗೆ ಪುಷ್ಯ ನಕ್ಷತ್ರದಲ್ಲಿ ಪಟ್ಟಾಭಿಷೇಕ ಮಾಡುವೆನು.॥12॥

ಮೂಲಮ್ - 13

ಅನುರೂಪಃ ಸ ವೋ ನಾಥೋ ಲಕ್ಷ್ಮೀವಾಲ್ಲಕ್ಷ್ಮಣಾಗ್ರಜಃ ।
ತ್ರೈಲೋಕ್ಯಮಪಿ ನಾಥೇನ ಯೇನ ಸ್ಯಾನ್ನಾಥವತ್ತರಮ್ ॥

ಅನುವಾದ

ಲಕ್ಷ್ಮಣಾಗ್ರಜನಾದ ಶ್ರೀಮಾನ್ ರಾಮನು ನಿಮಗೆಲ್ಲರಿಗೆ ಯೋಗ್ಯ ಒಡೆಯನಾಗುವನು. ಅವನಂತಹ ಒಡೆಯನಿಂದ ಮೂರು ಲೋಕಗಳೂ ಕೂಡ ಪರಮ ಸನಾಥವಾಗಬಲ್ಲದು.॥13॥

ಮೂಲಮ್ - 14

ಅನೇನ ಶ್ರೇಯಸಾ ಸದ್ಯಃ ಸಂಯೋಕ್ಷ್ಯೇಽಹಮಿಮಾಂ ಮಹೀಮ್ ।
ಗತಕ್ಲೇಶೋ ಭವಿಷ್ಯಾಮಿ ಸುತೇ ತಸ್ಮಿನ್ನಿವೇಶ್ಯ ವೈ ॥

ಅನುವಾದ

ಈ ಶ್ರೀರಾಮನು ಮಂಗಳಸ್ವರೂಪನಾಗಿದ್ದಾನೆ. ಇವನಿಗೆ ಬೇಗನೆ ಪಟ್ಟಾಭಿಷೇಕ ಮಾಡಿ ನಾನು ಈ ಭೂಮಂಡಲವನ್ನು ತತ್ಕಾಲ ಶ್ರೇಯೋಭಾಗಿಯಾಗಿಸುವೆನು. ನನ್ನ ಪುತ್ರ ಶ್ರೀರಾಮನ ಮೇಲೆ ರಾಜ್ಯದ ಭಾರವನ್ನು ಹೊರಿಸಿ ನಾನು ಸರ್ವಥಾ ಕ್ಲೇಶ ರಹಿತ, ನಿಶ್ಚಿಂತನಾಗುವೆನು.॥14॥

ಮೂಲಮ್ - 15

ಯದೀದಂ ಮೇಽನುರೂಪಾರ್ಥಂ ಮಯಾ ಸಾಧು ಸುಮಂತ್ರಿತಮ್ ।
ಭವಂತೋ ಮೇಽನುಮನ್ಯಂತಾ ಕಥಂ ವಾ ಕರವಾಣ್ಯಹಮ್ ॥

ಅನುವಾದ

ನನ್ನ ಈ ಪ್ರಸ್ತಾಪವು ನಿಮಗೆಲ್ಲರಿಗೆ ಒಪ್ಪಿಗೆಯಾದರೆ, ನಾನು ಯೋಚಿಸಿದುದು ಚೆನ್ನಾಗಿದ್ದರೆ, ನೀವೆಲ್ಲ ಇದಕ್ಕಾಗಿ ನನಗೆ ಸಂತೋಷದಿಂದ ಅನುಮತಿ ಕೊಡಿರಿ ಅಥವಾ ನಾನು ಏನು ಮಾಡಬೇಕೆಂಬುದನ್ನು ತಿಳಿಸಿರಿ.॥15॥

ಮೂಲಮ್ - 16

ಯದ್ಯಪ್ಯೇಷಾ ಮಮಪ್ರೀತಿರ್ಹಿತಮನ್ಯದ್ವಿಚಿಂತ್ಯ ತಾಮ್ ।
ಅನ್ಯಾ ಮಧ್ಯಸ್ಥ ಚಿಂತಾ ತು ವಿಮರ್ದಾಭ್ಯಧಿಕೋದಯಾ ॥

ಅನುವಾದ

ಈ ಶ್ರೀರಾಮನ ಪಟ್ಟಾಭಿಷೇಕದ ವಿಚಾರ ನನಗೆ ಹೆಚ್ಚು ಪ್ರಿಯಕರ ವಿಷಯವಾಗಿದ್ದರೂ, ಇದಲ್ಲದೆ ಎಲ್ಲರ ಹಿತಕ್ಕಾಗಿ ಬೇರೆ ಯಾವುದಾದರೂ ಸಂಗತಿ ಇದ್ದರೆ ತಾವು ಯೋಚಿಸಿರಿ. ಏಕೆಂದರೆ, ಮಧ್ಯಸ್ಥರ ವಿಚಾರ ಏಕಪಕ್ಷೀಯ ಮನುಷ್ಯನಿಗಿಂತ ವಿಲಕ್ಷಣವಾಗಿರುತ್ತದೆ. ಅದು ಪೂರ್ವಪಕ್ಷ ಮತ್ತು ಅಪರಪಕ್ಷವನ್ನು ಗಮನಿಸಿ ನಿರ್ಣಯಿಸಿದ ಕಾರಣ ಹೆಚ್ಚು ಶ್ರೇಯಸ್ಕರವಾಗಿರುತ್ತದೆ.॥16॥

ಮೂಲಮ್ - 17

ಇತಿ ಬ್ರುವಂತಂ ಮುದಿತಾಃ ಪ್ರತ್ಯನಂದನ್ ನೃಪಾ ನೃಪಮ್ ।
ವೃಷ್ಟಿ ಮಂತಂ ಮಹಾಮೇಘಂ ನರ್ದಂತ ಇವ ಬರ್ಹಿಣಃ ॥

ಅನುವಾದ

ದಶರಥನು ಹೀಗೆ ಹೇಳುತ್ತಿರುವಾಗ ಅಲ್ಲಿ ಉಪಸ್ಥಿತರಾದ ರಾಜರೆಲ್ಲರೂ ಅತ್ಯಂತ ಪ್ರಸನ್ನರಾಗಿ - ನವಿಲುಗಳು ಕೇಕಾರವ ಮಾಡುತ್ತಾ ಮಳೆಗರೆಯುವ ಮೋಡಗಳನ್ನು ಅಭಿನಂದಿಸುವಂತೆ, ದಶರಥನನ್ನು ಅಭಿನಂದಿಸಿದರು.॥17॥

ಮೂಲಮ್ - 18

ಸ್ನಿಗ್ಧೋಽನುನಾದಃ ಸಂಜಜ್ಞೇ ತತೋ ಹರ್ಷಸಮೀರಿತಃ ।
ಜನೌಘೋದ್ಘುಷ್ಟ ಸಂನಾದೋ ಮೇದಿನೀಂ ಕಂಪಯನ್ನಿವ ॥

ಅನುವಾದ

ಅನಂತರ ಸಮಸ್ತ ಜನ ಸಮುದಾಯದ ಹರ್ಷಧ್ವನಿ ಎಲ್ಲೆಡೆ ಕೇಳಿಬಂತು, ಅದು ಭೂಮಿಯೇ ನಡುಗುತ್ತಿದೆಯೋ ಎಂಬಷ್ಟು ಪ್ರಬಲವಾಗಿತ್ತು.॥18॥

ಮೂಲಮ್ - 19

ತಸ್ಯ ಧರ್ಮಾರ್ಥವಿದುಷೋ ಭಾವಮಾಜ್ಞಾಯ ಸರ್ವಶಃ ।
ಬ್ರಾಹ್ಮಣಾ ಬಲಮುಖ್ಯಾಶ್ಚ ಪೌರಜಾನಪದೈಃ ಸಹ ॥

ಮೂಲಮ್ - 20

ಸಮೇತ್ಯ ತೇ ಮಂತ್ರಯಿತುಂ ಸಮತಾಗತಬುದ್ಧಯಃ ।
ಊಚುಶ್ಚ ಮನಸಾ ಜ್ಞಾತ್ವಾ ವೃದ್ಧಂ ದಶರಥಂ ನೃಪಮ್ ॥

ಅನುವಾದ

ಧರ್ಮ ಮತ್ತು ಅರ್ಥವನ್ನು ತಿಳಿದ ಮಹಾರಾಜಾ ದಶರಥನ ಅಭಿಪ್ರಾಯವನ್ನು ಸರಿಯಾಗಿ ತಿಳಿದು, ಸಮಸ್ತ ಬ್ರಾಹ್ಮಣರು, ಸೇನಾಪತಿಗಳು, ಪುರ ಪ್ರಮುಖರು ಒಟ್ಟಿಗೆ ಕುಳಿತು ಪರಸ್ಪರ ವಿಚಾರ ವಿಮರ್ಶೆ ಮಾಡಿ ಒಂದು ನಿಶ್ಚಯಕ್ಕೆ ಬಂದು ವೃದ್ಧನಾದ ರಾಜಾ ದಶರಥದಲ್ಲಿ ಈ ಪ್ರಕಾರ ನುಡಿದರು.॥19-20॥

ಮೂಲಮ್ - 21

ಅನೇಕ ವರ್ಷಸಾಹಸ್ರೋ ವೃದ್ಧಸ್ತ್ವಮಸಿ ಪಾರ್ಥಿವ ।
ಸ ರಾಮಂ ಯುವರಾಜಾನಮಭಿಷಿಂಚಸ್ವ ಪಾರ್ಥಿವಮ್ ॥

ಅನುವಾದ

ಪೃಥಿವೀಪತೇ! ನಿಮಗೆ ಅನೇಕ ಸಾವಿರ ವರ್ಷ ವಯಸ್ಸಾಗಿ ಈಗ ಮುದುಕರಾಗಿರುವಿರಿ. ಆದ್ದರಿಂದ ಪೃಥಿವಿಯ ಪಾಲನೆಯಲ್ಲಿ ಸಮರ್ಥನಾದ ನಿಮ್ಮ ಪುತ್ರ ಶ್ರೀರಾಮನನ್ನು ಅವಶ್ಯವಾಗಿ ಯುವರಾಜನಾಗಿ ಪಟ್ಟಾಭಿಷೇಕ ಮಾಡಿರಿ.॥21॥

ಮೂಲಮ್ - 22

ಇಚ್ಛಾಮೋ ಹಿ ಮಹಾಬಾಹುಂ ರಘುವೀರಂ ಮಹಾಬಲಮ್ ।
ಗಜೇನ ಮಹತಾ ಯಾಂತಂ ರಾಮಂ ಛತ್ರಾವೃತಾನನಮ್ ॥

ಅನುವಾದ

ರಘುಕುಲ ವೀರ, ಮಹಾಬಲಶಾಲಿ, ಮಹಾಬಾಹು ಶ್ರೀರಾಮನು ಪಟ್ಟದಾನೆಯ ಮೇಲೆ ಕುಳಿತು, ಶ್ವೇತಚ್ಛತ್ರದ ನೆರಳಿನಲ್ಲಿ ಮೆರವಣಿಗೆಯಲ್ಲಿ ಬರುವ ಅವನ ಮುಖಕಮಲವನ್ನು ನಾವೆಲ್ಲರೂ ನೋಡಬೇಕೆಂದು ಬಹಳ ಇಚ್ಛಿಸುತ್ತಿದ್ದೇವೆ.॥22॥

ಮೂಲಮ್ - 23

ಇತಿ ತದ್ವಚನಂ ಶ್ರುತ್ವಾ ರಾಜಾ ತೇಷಾಂ ಮನಃಪ್ರಿಯಮ್ ।
ಅಜಾನನ್ನಿವ ಜಿಜ್ಞಾಸುರಿದಂ ವಚನಮಬ್ರವೀತ್ ॥

ಅನುವಾದ

ದಶರಥನ ಮನಸ್ಸಿಗೆ ಪ್ರಿಯವಾದ ಅವರ ಮಾತನ್ನು ಕೇಳಿ ರಾಜನು ಕೇಳದವನಂತೆ ನಟಿಸಿ, ಅವರೆಲ್ಲರ ಮನೋಭಾವವನ್ನು ಪುನಃ ತಿಳಿಯುವ ಇಚ್ಛೆಯಿಂದ ಹೀಗೆಂದನು.॥23॥

ಮೂಲಮ್ - 24

ಶ್ರುತ್ವೈತದ್ ವಚನಂ ಯನ್ಮೇ ರಾಘವಂ ಪತಿಮಿಚ್ಛಥ ।
ರಾಜಾನಃ ಸಂಶಯೋಽಯಂ ಮೇ ತದಿದಂ ಬ್ರೂತ ತತ್ತ್ವತಃ ॥

ಅನುವಾದ

ರಾಜರೇ! ನನ್ನ ಮಾತನ್ನು ಕೇಳಿ ನೀವು ಶ್ರೀರಾಮನನ್ನು ರಾಜನಾಗಿಸುವ ಇಚ್ಛೆಯನ್ನು ಪ್ರಕಟಿಸಿದಿರಿ. ಇದರಲ್ಲಿ ನನಗೆ ಉಂಟಾದ ಸಂಶಯವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ತಾವು ಕೇಳಿ ಇದರ ಯಥಾರ್ಥ ಉತ್ತರ ಕೊಡಿರಿ.॥24॥

ಮೂಲಮ್ - 25

ಕಥಂ ನು ಮಯಿ ಧರ್ಮೇಣ ಪೃಥಿವೀಮನುಶಾಸತಿ ।
ಭವಂತೋ ದ್ರಷ್ಟುಮಿಚ್ಛಂತಿ ಯುವರಾಜಂ ಮಹಾಬಲಮ್ ॥

ಅನುವಾದ

ನಾನು ಧರ್ಮಪೂರ್ವಕ ಈ ಭೂಮಿಯನ್ನು ನಿರಂತರ ಪಾಲಿಸುತ್ತಾ ಇದ್ದೇನೆ. ಹೀಗಿದ್ದರೂ ನಾನಿರುವಾಗಲೇ ನೀವು ಮಹಾಬಲಿ ಶ್ರೀರಾಮನನ್ನು ಯುವರಾಜನಾಗಿ ನೋಡಲು ಏಕೆ ಬಯಸುತ್ತಿರುವಿರಿ.॥25॥

ಮೂಲಮ್ - 26

ತೇ ತಮೂಚುರ್ಮಹಾತ್ಮಾನಃ ಪೌರಜಾನಪದೈಃ ಸಹ ।
ಬಹವೋ ನೃಪ ಕಲ್ಯಾಣಗುಣಾಃ ಸಂತಿ ಸುತಸ್ಯ ತೇ ॥

ಅನುವಾದ

ಇದನ್ನು ಕೇಳಿ ಆ ರಾಜರೆಲ್ಲ ಪುರ ಪ್ರಮುಖರೊಂದಿಗೆ ದಶರಥನಲ್ಲಿ ಹೀಗೆ ನುಡಿದರು - ಮಹಾರಾಜಾ! ನಿಮ್ಮ ಪುತ್ರ ಶ್ರೀರಾಮನಲ್ಲಿ ಅನಂತ ಕಲ್ಯಾಣಮಯ ಸದ್ಗುಣಗಳು ಇವೆ.॥26॥

ಮೂಲಮ್ - 27

ಗುಣಾನ್ ಗುಣವತೋ ದೇವ ದೇವಕಲ್ಪಸ್ಯ ಧೀಮತಃ ।
ಪ್ರಿಯಾನಾನಂದನಾನ್ಕೃತ್ಸಾನ್ ಪ್ರವಕ್ಷ್ಯಾಮೋಽದ್ಯ ತಾನ್ ಶೃಣು ॥

ಅನುವಾದ

ಒಡೆಯಾ! ದೇವತೆಗಳಂತೆ ಬುದ್ಧಿವಂತನೂ, ಗುಣವಂತನೂ ಶ್ರೀರಾಮಚಂದ್ರನ ಎಲ್ಲ ಗುಣಗಳು ಎಲ್ಲರಿಗೂ ಪ್ರಿಯವಾಗಿ, ಆನಂದದಾಯಕಗಳಾಗಿವೆ. ನಾವು ಈಗ ಅವನ್ನು ಕಿಂಚಿತ್ತಾಗಿ ವರ್ಣಿಸುವೆವು ಕೇಳಿರಿ.॥27॥

ಮೂಲಮ್ - 28

ದಿವ್ಯೈರ್ಗುಣೈಃ ಶಕ್ರಸಮೋ ರಾಮಃ ಸತ್ಯಪರಾಕ್ರಮಃ ।
ಇಕ್ಷ್ವಾಕುಭ್ಯೋಽಪಿ ಸರ್ವೇಭ್ಯೋ ಹ್ಯತಿರಿಕ್ತೋ ವಿಶಾಂಪತೇ ॥

ಅನುವಾದ

ಪ್ರಜಾನಾಥನೇ! ಸತ್ಯಪರಾಕ್ರಮಿ ಶ್ರೀರಾಮನು ದೇವೇಂದ್ರನಂತೆ ದಿವ್ಯಗುಣಸಂಪನ್ನನಾಗಿರುವನು. ಇಕ್ಷ್ವಾಕು ಕುಲದಲ್ಲೇ ಇವನು ಎಲ್ಲರಿಗಿಂತ ಶ್ರೇಷ್ಠನಾಗಿರುವನು.॥28॥

ಮೂಲಮ್ - 29

ರಾಮಃ ಸತ್ಪುರುಷೋ ಲೋಕೇ ಸತ್ಯಃ ಧರ್ಮಪರಾಯಣಃ ।
ಸಾಕ್ಷಾದ್ರಾಮಾದ್ವಿನಿರ್ವೃತ್ತೋ ಧರ್ಮಶ್ಚಾಪಿ ಶ್ರಿಯಾ ಸಹ ॥

ಅನುವಾದ

ಶ್ರೀರಾಮನು ಜಗತ್ತಿನಲ್ಲಿ ಸತ್ಯವಾದಿಯೂ, ಸತ್ಯಪರಾಯಣನೂ, ಸತ್ಪುರುಷನೂ ಆಗಿದ್ದಾನೆ. ಸಾಕ್ಷಾತ್ ಶ್ರೀರಾಮನೇ ಅರ್ಥದ ಜೊತೆಗೆ ಧರ್ಮವನ್ನೂ ಪ್ರತಿಷ್ಠಿತಗೊಳಿಸಿರುವನು.॥29॥

ಮೂಲಮ್ - 30

ಪ್ರಜಾಸುಖತ್ವೇ ಚಂದ್ರಸ್ಯ ವಸುಧಾಯಾಃ ಕ್ಷಮಾಗುಣೈಃ ।
ಬುದ್ಧ್ಯಾ ಬೃಹಸ್ಪತೇಸ್ತುಲ್ಯೋ ವೀರ್ಯೇ ಸಾಕ್ಷಾಚ್ಛಚೀಪತೇಃ ॥

ಅನುವಾದ

ಇವನು ಪ್ರಜೆಗಳಿಗೆ ಸುಖಕೊಡುವುದರಲ್ಲಿ ಚಂದ್ರನಂತೆಯೂ, ಕ್ಷಮೆಯಲ್ಲಿ ಪೃಥಿವಿಗೆ ಸಮಾನನೂ, ಬುದ್ಧಿಯಲ್ಲಿ ಬೃಹಸ್ಪತಿಗೆ ಸಮನೂ, ಬಲಪರಾಕ್ರಮದಲ್ಲಿ ಸಾಕ್ಷಾತ್ ಶಚೀಪತಿ ಇಂದ್ರನಿಗೆ ಸಮನೂ ಆಗಿರುವನು.॥30॥

ಮೂಲಮ್ - 31

ಧರ್ಮಜ್ಞಃ ಸತ್ಯ ಸಂಧಶ್ಚ ಶೀಲವಾನನಸೂಯಕಃ ।
ಕ್ಷಾಂತಃ ಸಾಂತ್ವಯಿತಾ ಶ್ಲಕ್ಷ್ಣಃ ಕೃತಜ್ಞೋ ವಿಜಿತೇಂತೇಯಃ ॥

ಮೂಲಮ್ - 32

ಮೃದುಶ್ಚ ಸ್ಥಿರಚಿತ್ತಶ್ಚ ಸದಾ ಭವ್ಯೋಽನಸೂಯಕಃ ।
ಪ್ರಿಯವಾದೀ ಚ ಭೂತಾನಾಂ ಸತ್ಯವಾದೀ ಚ ರಾಘವಃ ॥

ಅನುವಾದ

ಶ್ರೀರಾಮನು ಧರ್ಮಜ್ಞನೂ, ಸತ್ಯಪ್ರತಿಜ್ಞನೂ, ಶೀಲವಂತನೂ, ಬೇರೆಯವರ ದೋಷಗಳನ್ನು ನೋಡದವನೂ, ಶಾಂತನೂ, ದೀನ-ದುಃಖಿಗಳಿಗೆ ಸಾಂತ್ವನ ನೀಡುವವನೂ, ಮೃದುಭಾಷಿಯೂ, ಕೃತಜ್ಞನೂ, ಜಿತೇಂದ್ರಿಯನೂ, ಕೋಮಲ ಸ್ವಭಾವುಳ್ಳವನೂ, ಸಮಸ್ತ ಪ್ರಾಣಿಗಳಲ್ಲಿ ಪ್ರಿಯವಾಗಿ ಮಾತ ನಾಡುವವನೂ, ಸತ್ಯವಾದಿಯೂ ಆಗಿದ್ದಾನೆ.॥31-32॥

ಮೂಲಮ್ - 33

ಬಹುಶ್ರುತಾನಾಂ ವೃದ್ಧಾನಾಂ ಬ್ರಾಹ್ಮಣಾನಾಮುಪಾಸಿತಾ ।
ತೇನಾಸ್ಯೇಹಾತುಲಾ ಕೀರ್ತಿರ್ಯಶಸ್ತೇಜಶ್ಚ ವರ್ಧತೇ ॥

ಅನುವಾದ

ಅವನು ಬಹುಶ್ರುತ ವೃದ್ಧ ವಿದ್ವಾಂಸರಾದ ಬ್ರಾಹ್ಮಣರ ಉಪಾಸಕನಾಗಿದ್ದಾನೆ. ಸದಾಕಾಲ ಅವರ ಸಂಗದಲ್ಲಿ ಇರುತ್ತಾನೆ. ಇದರಿಂದ ಈ ಜಗತ್ತಿನಲ್ಲಿ ಶ್ರೀರಾಮನ ಅನುಪಮ ಕೀರ್ತಿ, ಯಶ ಮತ್ತು ತೇಜದ ವಿಸ್ತಾರವಾಗುತ್ತಾ ಇದೆ.॥33॥

ಮೂಲಮ್ - 34

ದೇವಾಸುರ ಮನುಷ್ಯಾಣಾಂ ಸರ್ವಾಸ್ತ್ರೇಷು ವಿಶಾರದಃ ।
ಸಮ್ಯಗ್ವಿದ್ಯಾವ್ರತಸ್ನಾತೋ ಯಥಾವತ್ ಸಾಂಗವೇದವಿತ್ ॥

ಅನುವಾದ

ದೇವತೆಗಳ, ಅಸುರರ, ಮನುಷ್ಯರ ಎಲ್ಲ ಅಸ್ತ್ರಗಳ ಜ್ಞಾನ ಇವನಿಗೆ ವಿಶೇಷವಾಗಿದೆ. ಅವನು ಷಡಂಗ ಸಹಿತ ವೇದದ ಯಥಾರ್ಥ ವಿದ್ವಾಂಸನೂ, ಸಂಪೂರ್ಣ ವಿದ್ಯೆಗಳಲ್ಲಿ ಚೆನ್ನಾಗಿ ನಿಷ್ಣಾತನೂ ಆಗಿರುವನು.॥34॥

ಮೂಲಮ್ - 35

ಗಾಂಧರ್ವೇ ಚ ಭುವಿ ಶ್ರೇಷ್ಠೋ ಬಭೂವ ಭರತಾಗ್ರಜಃ ।
ಕಲ್ಯಾಣಾಭಿಜನಃ ಸಾಧುರದೀನಾತ್ಮಾ ಮಹಾಮತಿಃ ॥

ಅನುವಾದ

ಭರತಾಗ್ರಜ ಶ್ರೀರಾಮನು ಗಾಂಧರ್ವವೇದ (ಸಂಗೀತ ಶಾಸ್ತ್ರ)ದಲ್ಲಿಯೂ ಈ ಜಗತ್ತಿನಲ್ಲಿ ಎಲ್ಲರಿಗಿಂತ ಶ್ರೇಷ್ಠನಾಗಿದ್ದಾನೆ. ಶ್ರೇಯಸ್ಸಿನ ಜನ್ಮಭೂಮಿಯೇ ಅವನಾಗಿರುವನು. ಅವನ ಸ್ವಭಾವ ಸಾಧು-ಸತ್ಪುರುಷರಂತೇ ಇದೆ. ಹೃದಯ ಉದಾರ ಮತ್ತು ಬುದ್ಧಿ ವಿಶಾಲವಾಗಿದೆ.॥35॥

ಮೂಲಮ್ - 36½

ದ್ವಿಜೈರಭಿವಿನೀತಶ್ಚ ಶ್ರೇಷ್ಠೈರ್ಧರ್ಮಾರ್ಥನೈಪುಣೈಃ ।
ಯದಾ ವ್ರಜತಿ ಸಂಗ್ರಾಮಂ ಗ್ರಾಮಾರ್ಥೇ ನಗರಸ್ಯ ವಾ ॥
ಗತ್ವಾ ಸೌಮಿತ್ರಿಸಹಿತೋ ನಾವಿಜಿತ್ಯ ನಿವರ್ತತೇ ।

ಅನುವಾದ

ಧರ್ಮ ಮತ್ತು ಅರ್ಥದ ಪ್ರತಿಪಾದನೆಯಲ್ಲಿ ಕುಶಲ, ಶ್ರೇಷ್ಠ ಬ್ರಾಹ್ಮಣರು ಇವನಿಗೆ ಉತ್ತಮ ಶಿಕ್ಷಣ ಕೊಟ್ಟಿರುವರು. ಅವನು ಗ್ರಾಮ ಅಥವಾ ನಗರದ ರಕ್ಷಣೆಗಾಗಿ ಲಕ್ಷ್ಮಣನೊಂದಿಗೆ ಯುದ್ಧಕ್ಕೆ ಹೋದರೆ ವಿಜಯ ಪಡೆಯದೆ ಹಿಂತಿರುಗುವುದಿಲ್ಲ.॥36½॥

ಮೂಲಮ್ - 37

ಸಂಗ್ರಾಮಾತ್ ಪುನರಾಗತ್ಯ ಕುಂಜರೇಣ ರಥೇನವಾ ॥

ಮೂಲಮ್ - 38

ಪೌರಾನ್ ಸ್ವಜನವನ್ನಿತ್ಯಂ ಕುಶಲಂ ಪರಿಪೃಚ್ಛತಿ ।
ಪುತ್ರೇಷ್ವಗ್ನಿಷು ದಾರೇಷು ಪ್ರೇಷ್ಯಶಿಷ್ಯಗಣೇಷು ಚ ॥

ಅನುವಾದ

ಯುದ್ಧಭೂಮಿಯಿಂದ ಆನೆಗಳು, ರಥಗಳೊಂದಿಗೆ ಅಯೋಧ್ಯೆಗೆ ಪುನಃ ಮರಳಿದಾಗ ಶ್ರೀರಾಮನು ಪುರವಾಸಿಗಳಲ್ಲಿ ಸ್ವಜನರಂತೆ ಅವರ ಪುತ್ರರು, ಅಗ್ನಿಹೋತ್ರದ ಅಗ್ನಿಗಳು, ಪತ್ನಿಯರು, ಸೇವಕರು, ಶಿಷ್ಯರು ಇವರ ಕುರಿತು ಕ್ಷೇಮ ಸಮಾಚಾರ ಕೇಳುತ್ತಿದ್ದನು.॥37-38॥

ಮೂಲಮ್ - 39½

ನಿಖಿಲೇನಾನುಪೂರ್ವ್ಯಾ ಚ ಪಿತಾಪುತ್ರಾನಿವೌರಸಾನ್ ।
ಶುಶ್ರೂಷಂತೇ ಚ ವಃ ಶಿಷ್ಯಾಃ ಕಚ್ಚಿದ್ ವರ್ಮಸು ದಂಶಿತಾಃ ॥
ಇತಿ ವಃ ಪುರುಷವ್ಯಾಘ್ರಃ ಸದಾರಾಮೋಭಿಭಾಷತೇ ।

ಅನುವಾದ

ತಂದೆಯು ತನ್ನ ಔರಸ ಪುತ್ರರ ಕ್ಷೇಮ ಕೇಳುವಂತೆಯೇ ರಾಮನು ಸಮಸ್ತ ಪುರವಾಸಿಗಳಲ್ಲಿ ಕ್ರಮವಾಗಿ ಅವರ ಸಮಾಚಾರ ಕೇಳುತ್ತಾನೆ. ಪುರುಷಸಿಂಹ ಶ್ರೀರಾಮನು ಬ್ರಾಹ್ಮಣರಲ್ಲಿ - ನಿಮ್ಮ ಶಿಷ್ಯರು ನಿಮ್ಮ ಸೇವೆ ಮಾಡುತ್ತಿರುವರಲ್ಲ? ಎಂದು ಕೇಳುತ್ತಾ ಇರುತ್ತಾನೆ. ಕ್ಷತ್ರಿಯರಲ್ಲಿ - ನಿಮ್ಮ ಸೇವಕರು ಕವಚಾದಿಗಳಿಂದ ಸುಸಜ್ಜಿತರಾಗಿ ತಮ್ಮ ಸೇವೆಯಲ್ಲಿ ತತ್ಪರರಾಗಿರುವರಲ್ಲ? ಎಂದು ವಿಚಾರಿಸುತ್ತಾ ಇರುತ್ತಾನೆ.॥39½॥

ಮೂಲಮ್ - 40½

ವ್ಯಸನೇಷು ಮನುಷ್ಯಾಣಾಂಭೃಶಂ ಭವತಿ ದುಃಖಿತಃ ॥
ಉತ್ಸವೇಷು ಚ ಸರ್ವೇಷು ಪಿತೇವ ಪರಿತುಷ್ಯತಿ ।

ಅನುವಾದ

ನಗರವಾಸಿಗಳ ಮೇಲೆ ಸಂಕಟ ಬಂದಾಗ ಅವನು ಬಹಳ ದುಃಖಿತನಾಗುತ್ತಾನೆ. ಅವರೆಲ್ಲರ ಮನೆಗಳಲ್ಲಿ ಎಲ್ಲ ವಿಧದ ಉತ್ಸವಗಳು ನಡೆದಾಗ ಅವನಿಗೆ ತಂದೆಯಂತೆ ಸಂತೋಷವಾಗುತ್ತದೆ.॥40½॥

ಮೂಲಮ್ - 41

ಸತ್ಯವಾದೀ ಮಹೇಷ್ವಾಸೋ ವೃದ್ಧ ಸೇವೀ ಜಿತೇಂದ್ರಿಯಃ ॥

ಮೂಲಮ್ - 42

ಸ್ಮಿತಪೂರ್ವಾಭಿಭಾಷೀ ಚ ಧರ್ಮಂ ಸರ್ವಾತ್ಮನಾಶ್ರಿತಃ ।
ಸಮ್ಯಗ್ಯೋಕ್ತಾಶ್ರೇಯಸಾಂ ಚ ನ ವಿಗೃಹ್ಯಕಥಾರುಚಿಃ ॥

ಅನುವಾದ

ಶ್ರೀರಾಮನು ಸತ್ಯವಾದಿಯೂ, ಮಹಾಧನುರ್ಧರನೂ, ವೃದ್ಧರ ಸೇವಕನೂ, ಜಿತೇಂದ್ರಿಯನೂ ಆಗಿರುವನು. ಅವನು ಇತರರು ಮಾತನಾಡಿಸುವ ಮೊದಲೇ ಮುಗುಳ್ನಕ್ಕು ಮಾತನ್ನು ಪ್ರಾರಂಭಿಸುತ್ತಾನೆ. ಅವನು ಹೃತ್ಪೂರ್ವಕವಾಗಿ ಧರ್ಮವನ್ನು ಆಶ್ರಯಿಸಿರುವನು. ಅವನು ಶ್ರೇಯಸ್ಸನ್ನು ಸರಿಯಾಗಿ ಯೋಜಿಸುವವನಾಗಿದ್ದು, ನಿಂದನೀಯ ಮಾತುಗಳನ್ನು ಎಂದೂ ಆಡುವುದಿಲ್ಲ.॥41-42॥

ಮೂಲಮ್ - 43

ಉತ್ತರೋತ್ತರಯುಕ್ತೌ ಚ ವಕ್ತಾ ವಾಚಸ್ಪತಿರ್ಯಥಾ ।
ಸುಭ್ರೂರಾಯತತಾಮ್ರಾಕ್ಷಃ ಸಾಕ್ಷಾದ್ವಿಷ್ಣುರಿವ ಸ್ವಯಮ್ ॥

ಅನುವಾದ

ಮೇಲಿಂದ ಮೇಲೆ ಉತ್ತಮ ಯುಕ್ತಿಗಳಿಂದ ಮಾತುಕತೆಯಾಡುವುದರಲ್ಲಿ ಶ್ರೀರಾಮನು ದೇವಗುರು ಬೃಹಸ್ಪತಿಯಂತೆ ಇರುವನು. ಅವನ ಹುಬ್ಬುಗಳು ಸುಂದರವಾಗಿದ್ದು, ಕಣ್ಣುಗಳು ವಿಶಾಲವಾಗಿ ಕೆಂಪಾಗಿರುತ್ತವೆ. ಅವನು ಸಾಕ್ಷಾತ್ ವಿಷ್ಣುವಿನಂತೆ ಶೋಭಿಸುತ್ತಿರುವನು.॥43॥

ಮೂಲಮ್ - 44

ರಾಮೋ ಲೋಕಾಭಿರಾಮೋಽಯಂ ಶೌರ್ಯವೀರ್ಯ ಪರಾಕ್ರಮೈಃ ।
ಪ್ರಜಾಪಾಲನ ಸಂಯುಕ್ತೋ ನ ರಾಗೋಪಹತೇಂದ್ರಿಯಃ ॥

ಅನುವಾದ

ಸಂಪೂರ್ಣ ಲೋಕಗಳನ್ನು ಆನಂದಿತಗೊಳಿಸುವ ಈ ಶ್ರೀರಾಮನು ಶೌರ್ಯ-ಪರಾಕ್ರಮಾದಿಗಳಿಂದ ಸದಾಕಾಲ ಪ್ರಜಾಪಾಲನೆಯಲ್ಲಿ ತೊಡಗಿರುತ್ತಾನೆ. ಅವನ ಇಂದ್ರಿಯಗಳು ರಾಗಾದಿ ದೋಷಗಳಿಂದ ದೂಷಿತವಾಗುವುದಿಲ್ಲ.॥44॥

ಮೂಲಮ್ - 45

ಶಕ್ತಸ್ತ್ರೈಲೋಕ್ಯಮಪ್ಯೇಷ ಭೋಕ್ತುಂ ಕಿಂ ನು ಮಹೀಮಿಮಾಮ್ ।
ನಾಸ್ಯ ಕ್ರೋಧಃ ಪ್ರಸಾದಶ್ಚ ನಿರರ್ಥೋಽಸ್ತಿ ಕದಾಚನ ॥

ಅನುವಾದ

ಈ ಪೃಥಿವಿಯ ಮಾತೇನು ಅವನು ಮೂರು ಲೋಕಗಳನ್ನೂ ರಕ್ಷಿಸುತ್ತಿರುವನು. ಶ್ರೀರಾಮನ ಕ್ರೋಧ ಮತ್ತು ಪ್ರಸಾದ ಎಂದೂ ನಿರರ್ಥಕವಾಗುವುದಿಲ್ಲ.॥45॥

ಮೂಲಮ್ - 46

ಹಂತ್ಯೇಷ ನಿಯಮಾದ್ವಧ್ಯಾನವಧ್ಯೇಷು ನ ಕುಪ್ಯತಿ ।
ಯುನಕ್ತ್ಯರ್ಥೈಃ ಪ್ರಹೃಷ್ಟಶ್ಚ ತಮಸೌ ಯತ್ರ ತುಷ್ಯತಿ ॥

ಅನುವಾದ

ಯಾರು ಶಾಸ್ತ್ರಕ್ಕನುಸಾರ ಪ್ರಾಣದಂಡ ಪಡೆಯಲು ಅಧಿಕಾರಿಯಾಗಿರುವನೋ ಅವನನ್ನು ಇವನು ನಿಯಮ ಬದ್ಧವಾಗಿ ವಧಿಸಿ ಬಿಡುವನು. ಯಾರು ಶಾಸ್ತ್ರದೃಷ್ಟಿಯಿಂದ ಅವಧ್ಯನಾಗಿರುವನೋ, ಅವನ ಮೇಲೆ ಎಂದೂ ಕುಪಿತನಾಗುವುದಿಲ್ಲ. ಯಾರ ಮೇಲೆ ಇವನು ಸಂತುಷ್ಟನಾಗುವನೋ ಅವನಿಗೆ ಹೇರಳ ಧನವನ್ನು ಕೊಡುವನು.॥46॥

ಮೂಲಮ್ - 47

ದಾಂತೈಃ ಸರ್ವಪ್ರಜಾಕಾಂತೈಃ ಪ್ರೀತಿಸಂಜನನೈರ್ನೃಣಾಮ್ ।
ಗುಣೈರ್ವಿರೋಚತೇ ರಾಮೋ ದೀಪ್ತಃ ಸೂರ್ಯ ಇವಾಂಶುಭಿಃ ॥

ಅನುವಾದ

ಇಂದ್ರಿಯ ನಿಗ್ರಹಗಳಿಂದಲೂ, ಸಕಲ ಪ್ರಜೆಗಳಿಗೆ ಆಹ್ಲಾದವನ್ನುಂಟುಮಾಡುವ ಮತ್ತು ಮನುಷ್ಯರಿಗೆ ಪ್ರೀತಿಯನ್ನು ಹುಟ್ಟಿಸುವ ಗುಣಗಳಿಂದಲೂ ಶ್ರೀರಾಮನು ಕಿರಣಗಳಿಂದ ಯುಕ್ತನಾದ ಸೂರ್ಯನಂತೆ ಬೆಳಗುತ್ತಿದ್ದಾನೆ.॥47॥

ಮೂಲಮ್ - 48

ತಮೇವಂ ಗುಣಸಂಪನ್ನಂ ರಾಮಂ ಸತ್ಯಪರಾಕ್ರಮಮ್ ।
ಲೋಕಪಾಲೋಪಮಂ ನಾಥಮಕಾಮಯತ ಮೇದಿನೀ ॥

ಅನುವಾದ

ಇಂತಹ ಸಕಲಗುಣ ಸಂಪನ್ನ, ಲೋಕಪಾಲಕರಂತೆ ಪ್ರಭಾವಶಾಲಿ ಹಾಗೂ ಸತ್ಯಪರಾಕ್ರಮಿ ಶ್ರೀರಾಮನನ್ನು ಪೃಥಿವಿಯ ಜನತೆ ತನ್ನ ಸ್ವಾಮಿಯನ್ನಾಗಿಸಲು ಬಯಸುತ್ತಿದ್ದಾರೆ.॥48॥

ಮೂಲಮ್ - 49

ವತ್ಸಃ ಶ್ರೇಯಸಿ ಜಾತಸ್ತೇ ದಿಷ್ಟ್ಯಾಸೌ ತವ ರಾಘವಃ ।
ದಿಷ್ಟ್ಯಾ ಪುತ್ರಗುಣೈರ್ಯುಕ್ತೋ ಮಾರೀಚ ಇವ ಕಾಶ್ಯಪಃ ॥

ಅನುವಾದ

ನಮ್ಮ ಸೌಭಾಗ್ಯದಿಂದ ನಿಮ್ಮ ಆ ಪುತ್ರ ಶ್ರೀ ರಘುನಾಥನು ಪ್ರಜೆಯ ಶ್ರೇಯಸ್ಸನ್ನು ಮಾಡಲು ಸಮರ್ಥನಾಗಿದ್ದಾನೆ. ನಿಮ್ಮ ಸೌಭಾಗ್ಯದಿಂದ ಅವನು ಮರೀಚಿನಂದನ ಕಶ್ಯಪನಂತೆ ಪುತ್ರೋಚಿತ ಗುಣಗಳಿಂದ ಸಂಪನ್ನನಾಗಿದ್ದಾನೆ.॥49॥

ಮೂಲಮ್ - 50

ಬಲಮಾರೋಗ್ಯಮಾಯುಶ್ಚ ರಾಮಸ್ಯ ವಿದಿತಾತ್ಮನಃ ।
ದೇವಾಸುರಮನುಷ್ಯೇಷು ಸಗಂಧರ್ವೋರಗೇಷು ಚ ॥

ಮೂಲಮ್ - 51

ಆಶಂಸತೇ ಜನಃ ಸರ್ವೋ ರಾಷ್ಟ್ರೇಪುರವರೇ ತಥಾ ।
ಆಭ್ಯಂತರಶ್ಚ ಬಾಹ್ಯಶ್ಚ ಪೌರಜಾನಪದೋ ಜನಃ ॥

ಅನುವಾದ

ದೇವತೆಗಳು, ಅಸುರರು, ಮನುಷ್ಯರು, ಗಂಧರ್ವರು ಮತ್ತು ನಾಗರು ಹೀಗೆ ಪ್ರತಿಯೊಂದು ವರ್ಗದ ಜನರು ಹಾಗೂ ಈ ರಾಜ್ಯದಲ್ಲಿರುವವರು, ರಾಜಧಾನಿಗೆ ಬಂದು ಹೋಗುವ ಜನರೆಲ್ಲರೂ ಸುವಿಖ್ಯಾತ ಶೀಲಸ್ವಭಾವವುಳ್ಳ ಶ್ರೀರಾಮಚಂದ್ರನ ಕುರಿತು ಸದಾ ಬಲ, ಆರೋಗ್ಯ ಮತ್ತು ಆಯುಸ್ಸನ್ನು ದೊರೆಯಲೆಂದು ಆಶಿಸುತ್ತಾರೆ.॥50-51॥

ಮೂಲಮ್ - 52

ಸ್ತ್ರಿಯೋ ವೃದ್ಧಾಸ್ತರುಣ್ಯಶ್ಚ ಸಾಯಂ ಪ್ರಾತಃ ಸಮಾಹಿತಾಃ ।
ಸರ್ವಾ ದೇವಾನ್ನಮಸ್ಯಂತಿ ರಾಮಸ್ಯಾರ್ಥೇ ಮನಸ್ವಿನಃ ।
ತೇಷಾಂ ತದ್ ಯಾಚಿತಂ ದೇವ ತ್ವತ್ಪ್ರಸಾದಾತ್ಸಮೃಧ್ಯತಾಮ್ ॥

ಅನುವಾದ

ಈ ನಗರದ ವೃದ್ಧ-ತರುಣ ಎಲ್ಲ ರೀತಿಯ ಸ್ತ್ರೀಯರು ಬೆಳಿಗ್ಗೆ, ಸಾಯಂಕಾಲ ಏಕಾಗ್ರಚಿತ್ತರಾಗಿ ಪರಮ ಉದಾರ ಶ್ರೀರಾಮಚಂದ್ರನು ಯುವರಾಜನಾಗುವಂತೆ ದೇವತೆಗಳಲ್ಲಿ ನಮಸ್ಕಾರಪೂರ್ವಕ ಪ್ರಾರ್ಥನೆ ಮಾಡುತ್ತಾ ಇರುತ್ತಾರೆ. ಸ್ವಾಮಿ! ಅವರ ಆ ಪ್ರಾರ್ಥನೆ ನಿಮ್ಮ ಕೃಪೆಯಿಂದ ಈಗ ಪೂರ್ಣವಾಗಬೇಕಾಗಿದೆ.॥52॥

ಮೂಲಮ್ - 53

ರಾಮಮಿಂದೀವರಶ್ಯಾಮಂ ಸರ್ವಶತ್ರುನಿಬರ್ಹಣಮ್ ।
ಪಶ್ಯಾಮೋ ಯೌವರಾಜ್ಯಸ್ಥಂ ತವ ರಾಜೋತ್ತಮಾತ್ಮಜಮ್ ॥

ಅನುವಾದ

ರಾಜೋತ್ತಮನೇ! ನೀಲಕಮಲದಂತೆ ಶ್ಯಾಮಲಕಾಂತಿಯಿಂದ ಸುಶೋಭಿತನೂ, ಸಮಸ್ತ ಶತ್ರುಗಳನ್ನು ಸಂಹಾರ ಮಾಡಲು ಸಮರ್ಥನೂ ಆದ ನಿಮ್ಮ ಜ್ಯೇಷ್ಠಪುತ್ರ ಶ್ರೀರಾಮನನ್ನು ಯುವರಾಜನಾಗಿರುವುದನ್ನು ನಾವು ನೋಡಲು ಬಯಸುತ್ತಿರುವೆವು.॥53॥

ಮೂಲಮ್ - 54

ತಂ ದೇವದೇವೋಪಮಮಾತ್ಮಜಂ ತೇ
ಸರ್ವಸ್ಯ ಲೋಕಸ್ಯ ಹಿತೇನಿವಿಷ್ಟಮ್ ।
ಹಿತಾಯ ನಃ ಕ್ಷಿಪ್ರಮುದಾರಜುಷ್ಟಂ
ಮುದಾಭಿಷೇಕ್ತುಂ ವರದ ತ್ವಮರ್ಹಸಿ ॥

ಅನುವಾದ

ಆದ್ದರಿಂದ ವರದಾಯಕ ಮಹಾರಾಜಾ! ದೇವಾಧಿದೇವ ಶ್ರೀವಿಷ್ಣುವಿನಂತೆ ಪರಾಕ್ರಮಿಯೂ, ಸಮಸ್ತ ಲೋಕಗಳ ಹಿತದಲ್ಲಿ ಸಂಲಗ್ನನಾಗಿರುವವನೂ, ಮಹಾಪುರುಷರಿಂದ ಸೇವಿತನೂ ಆದ ನಿಮ್ಮ ಪುತ್ರ ಶ್ರೀರಾಮಚಂದ್ರನ ಪಟ್ಟಾಭಿಷೇಕವನ್ನು ಸಂತೋಷದಿಂದ ಆದಷ್ಟು ಬೇಗ ಮಾಡಿರಿ. ಇದರಲ್ಲೇ ನಮ್ಮೆಲ್ಲರ ಹಿತವಿದೆ.॥54॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಎರಡನೆಯ ಸರ್ಗ ಪೂರ್ಣವಾಯಿತು.॥2॥