००१ रामगुणवर्णनम्

वाचनम्
ಭಾಗಸೂಚನಾ

ಶ್ರೀರಾಮನ ಸದ್ಗುಣಗಳ ವರ್ಣನೆ, ದಶರಥನು ಶ್ರೀರಾಮನಿಗೆ ಯುವರಾಜ ಪಟ್ಟಾಭಿಷೇಕ ಮಾಡಲು ಯೋಚಿಸಿದುದು, ಬೇರೆ ಬೇರೆ ಸಾಮಂತರಾಜರನ್ನು, ನಗರ ಪ್ರಮುಖರನ್ನು ರಾಜ ಸಭೆಗೆ ಬರಲು ಆಹ್ವಾನಿಸಿದುದು

ಮೂಲಮ್ - 1

ಗಚ್ಛತಾ ಮಾತುಲಕುಲಂ ಭರತೇನ ತದಾನಘಃ ।
ಶತ್ರುಘ್ನೋ ನಿತ್ಯಶತ್ರುಘ್ನೋ ನೀತಃ ಪ್ರೀತಿಪುರಸ್ಕೃತಃ ॥

ಅನುವಾದ

(ಮೊದಲೇ ಹೇಳಿದ ಪ್ರಕಾರ) ತಂದೆ ತಾಯಿಗಳ ಅನುಮತಿ ಪಡೆದು ಸೋದರ ಮಾವನ ಮನೆಗೆ ಹೊರಟ ಮಹಾತ್ಮನಾದ ಭರತನು ಕಾಮಾದಿ ಶತ್ರುಗಳನ್ನು ಅನುದಿನವೂ ನಾಶ ಮಾಡುವ ನಿಷ್ಪಾಪಿ ಶತ್ರುಘ್ನನನ್ನು ಪ್ರೇಮ ವಶನಾಗಿ ತನ್ನ ಜೊತೆಗೆ ಕರೆದುಕೊಂಡು ಹೋದನು.॥1॥

ಮೂಲಮ್ - 2

ಸ ತತ್ರ ನ್ಯವಸದ್ ಭ್ರಾತ್ರಾ ಸಹ ಸತ್ಕಾರಸತ್ಕೃತಃ ।
ಮಾತುಲೇನಾಶ್ವಪತಿನಾ ಪುತ್ರಸ್ನೇಹೇನ ಲಾಲಿತಃ ॥

ಅನುವಾದ

ಮಾವನ ಮನೆಯಲ್ಲಿ ತಮ್ಮನೊಂದಿಗೆ ಅವನ ಆದರ, ಸತ್ಕಾರ ತುಂಬಾ ಚೆನ್ನಾಗಿ ನಡೆಯಿತು. ಅವನು ಸುಖವಾಗಿ ಅಲ್ಲಿ ಇರತೊಡಗಿದನು. ಅಶ್ವಯೂಥದ ಅಧಿಪತಿಯಾದ ಅವನ ಮಾವ ಯುಧಾಜಿತ್ತು ಅವರಿಬ್ಬರನ್ನು ಮಕ್ಕಳಿಗಿಂತಲೂ ಹೆಚ್ಚು ಸ್ನೇಹದಿಂದ ಲಾಲಿಸಿ ಪೋಷಿಸುತ್ತಿದ್ದನು.॥2॥

ಮೂಲಮ್ - 3

ತತ್ರಾಪಿ ನಿವಸಂತೌ ತೌ ತರ್ಪ್ಯಮಾಣೌ ಚ ಕಾಮತಃ ।
ಭ್ರಾತರೌ ಸ್ಮರತಾಂ ವೀರೌ ವೃದ್ಧಂ ದಶರಥಂ ನೃಪಮ್ ॥

ಅನುವಾದ

ಮಾವನ ಮನೆಯಲ್ಲಿ ಆ ಇಬ್ಬರು ವೀರರ ಎಲ್ಲ ಇಚ್ಛೆಗಳೂ ಪೂರ್ಣವಾಗುತ್ತಿದ್ದರೂ, ಅಲ್ಲಿ ಇರುವಾಗ ಅವರಿಗೆ ವೃದ್ಧರಾದ ತಂದೆ ದಶರಥನನ್ನು ಸದಾ ಸ್ಮರಿಸುತ್ತಲೇ ಇದ್ದರು.॥3॥

ಮೂಲಮ್ - 4

ರಾಜಾಪಿ ತೌ ಮಹಾತೇಜಾಃ ಸಸ್ಮಾರ ಪ್ರೋಷಿತೌ ಸುತೌ ।
ಉಭೌ ಭರತಶತ್ರುಘ್ನೌ ಮಹೇಂದ್ರವರುಣೋಪಮೌ ॥

ಅನುವಾದ

ಮಹಾತೇಜಸ್ವೀ ದಶರಥನೂ ಕೂಡ ಪರದೇಶಕ್ಕೆ ಹೋದ ಮಹೇಂದ್ರ ಮತ್ತು ವರುಣರಂತಹ ತನ್ನ ಪರಾಕ್ರಮಿ ಪುತ್ರರಾದ ಭರತ-ಶತ್ರುಘ್ನರನ್ನು ಯಾವಾಗಲೂ ಸ್ಮರಿಸುತ್ತಿದ್ದನು.॥4॥

ಮೂಲಮ್ - 5

ಸರ್ವ ಏವ ತು ತಸ್ಯೇಷ್ಟಾಶ್ಚತ್ವಾರಃ ಪುರುಷರ್ಷಭಾಃ ।
ಸ್ವಶರೀರಾದ್ವಿನಿರ್ವೃತ್ತಾಶ್ಚತ್ವಾರ ಇವ ಬಾಹವಃ ॥

ಅನುವಾದ

ತನ್ನ ಶರೀರದಿಂದಲೇ ಹೊರಬಿದ್ದಿರುವ ನಾಲ್ಕು ತೋಳುಗಳಂತಿದ್ದ ಪುರುಷ ಶಿರೋಮಣಿ ನಾಲ್ವರು ಪುತ್ರರೂ ದಶರಥನಿಗೆ ಬಹಳ ಪ್ರಿಯರಾಗಿಯೇ ಇದ್ದರು.॥5॥

ಮೂಲಮ್ - 6

ತೇಷಾಮಪಿ ಮಹಾತೇಜಾ ರಾಮೋ ರತಿಕರಃ ಪಿತುಃ ।
ಸ್ವಯಂಭೂರಿವ ಭೂತಾನಾಂ ಬಭೂವ ಗುಣವತ್ತರಃ ॥

ಅನುವಾದ

ಆದರೂ ಅವರಲ್ಲಿಯೂ ಮಹಾತೇಜಸ್ವೀ ಶ್ರೀರಾಮನು ಎಲ್ಲರಿಗಿಂತ ಹೆಚ್ಚು ಸದ್ಗುಣ ಸಂಪನ್ನನಾದ್ದರಿಂದ ಸಮಸ್ತ ಪ್ರಾಣಿಗಳಿಗೆ ಬ್ರಹ್ಮದೇವರಂತೆ ದಶರಥನಿಗೆ ವಿಶೇಷ ಪ್ರೀತಿವರ್ಧಕನಾಗಿದ್ದನು.॥6॥

ಮೂಲಮ್ - 7

ಸ ಹಿ ದೇವೈರುದೀರ್ಣಸ್ಯ ರಾವಣಸ್ಯ ವಧಾರ್ಥಿಭಿಃ ।
ಅರ್ಥಿತೋ ಮಾನುಷೇ ಲೋಕೇ ಜಜ್ಞೇ ವಿಷ್ಣುಃ ಸನಾತನಃ ॥

ಅನುವಾದ

ಇದಕ್ಕೆ ಇನ್ನೊಂದು ಕಾರಣವೂ ಇತ್ತು-ಶ್ರೀರಾಮನು ಸಾಕ್ಷಾತ್ ಸನಾತನ ವಿಷ್ಣು ಆಗಿದ್ದನು ಹಾಗೂ ಪ್ರಚಂಡ ರಾವಣನ ವಧೆಯನ್ನು ಇಚ್ಛಿಸುವ ದೇವತೆಗಳ ಪ್ರಾರ್ಥನೆಯಂತೆ ಮನುಷ್ಯಲೋಕದಲ್ಲಿ ಅವತರಿಸಿದ್ದನು.॥7॥

ಮೂಲಮ್ - 8

ಕೌಸಲ್ಯಾ ಶುಶುಭೇ ತೇನ ಪುತ್ರೇಣಾಮಿತತೇಜಸಾ ।
ಯಥಾ ವರೇಣ ದೇವಾನಾಮದಿತಿರ್ವಜ್ರಪಾಣಿನಾ ॥

ಅನುವಾದ

ಆ ಅಮಿತ ತೇಜಸ್ವೀ ಶ್ರೀರಾಮಚಂದ್ರನಿಂದ ಮಹಾರಾಣಿ ಕೌಸಲ್ಯೆಯು-ವಜ್ರಧಾರೀ ದೇವೇಂದ್ರನಿಂದ ದೇವಮಾತೆ ಅದಿತಿಯು ಶೋಭಿಸುವಂತೆ ಪರಮಶೋಭಿತಳಾಗಿದ್ದಳು.॥8॥

ಮೂಲಮ್ - 9

ಸ ಹಿ ರೂಪೋಪಪನ್ನಶ್ಚ ವೀರ್ಯವಾನನಸೂಯಕಃ ।
ಭೂಮಾವನುಪಮಃ ಸೂನುರ್ಗುಣೈರ್ದಶರಥೋಪಮಃ ॥

ಅನುವಾದ

ಶ್ರೀರಾಮನು ಬಹಳ ರೂಪವಂತ ಮತ್ತು ಪರಾಕ್ರಮಿಯಾಗಿದ್ದನು. ಅವನು ಯಾರ ದೋಷವನ್ನೂ ನೋಡುತ್ತಿರಲಿಲ್ಲ. ಭೂಮಂಡಲದಲ್ಲಿ ಅವನಿಗೆ ಸಮಾರಾದವರು ಯಾರೂ ಇರಲಿಲ್ಲ. ಅವನು ತನ್ನ ಗುಣಗಳಿಂದ ತಂದೆ ದಶರಥನಿಗೆ ಸಮಾನನಾಗಿದ್ದು, ಯೋಗ್ಯಪುತ್ರನಾಗಿದ್ದನು.॥9॥

ಮೂಲಮ್ - 10

ಸ ಚ ನಿತ್ಯಂ ಪ್ರಶಾಂತಾತ್ಮಾ ಮೃದುಪೂರ್ವಂ ಚ ಭಾಷತೇ ।
ಉಚ್ಯಮಾನೋಽಪಿ ಪರುಷಂ ನೋತ್ತರಂ ಪ್ರತಿಪದ್ಯತೇ ॥

ಅನುವಾದ

ಅವನು ಸದಾ ಶಾಂತಚಿತ್ತನಾಗಿದ್ದನು, ಮತ್ತು ಮೃದುವಾದ ಮಾತುಗಳನ್ನಾಡುವವನಾಗಿದ್ದನು. ಯಾರಾದರೂ ಅವನೊಡನೆ ಕಠೋರವಾಗಿ ಮಾತನಾಡಿದರೂ ಅವನು ನಿಷ್ಠುರತೆಯಿಂದ ಉತ್ತರಿಸುತ್ತಿರಲಿಲ್ಲ.॥10॥

ಮೂಲಮ್ - 11

ಕದಾಚಿದುಪಕಾರೇಣ ಕೃತೇನೈಕೇನ ತುಷ್ಯತಿ ।
ನ ಸ್ಮರತ್ಯಪಕಾರಾಣಾಂ ಶತಮಪ್ಯಾತ್ಮ ವತ್ತಯಾ ॥

ಅನುವಾದ

ಯಾರಾದರೂ ಎಂದಾದರೂ ಯಾವುದಾದರೂ ಉಪಕಾರ ಮಾಡಿದ್ದರೂ ಶ್ರೀರಾಮನು ಸಂತುಷ್ಟನಾಗಿದ್ದು ಅದನ್ನು ಎಂದೂ ಮರೆಯುತ್ತಿರಲಿಲ್ಲ. ಮನಸ್ಸನ್ನು ಹತೋಟಿಯಲ್ಲಿರಿಸಿಕೊಂಡ ಕಾರಣ ಯಾರಾದರೂ ನೂರು ಅಪರಾಧ ಮಾಡಿದರೂ ಅವನ್ನು ಸ್ಮರಿಸುತ್ತಿರಲಿಲ್ಲ.॥11॥

ಮೂಲಮ್ - 12

ಶೀಲವೃದ್ಧೈ ರ್ಜ್ಞಾನವೃದ್ಧೈರ್ವಯೋವೃದ್ಧೈಶ್ಚ ಸಜ್ಜನೈಃ ।
ಕಥಯನ್ನಾಸ್ತ ವೈನಿತ್ಯಮಸ್ತ್ರಯೋಗ್ಯಾಂತರೇಷ್ವಪಿ ॥

ಅನುವಾದ

ಅಸ್ತ್ರ-ಶಸ್ತ್ರಗಳ ಅಭ್ಯಾಸಕ್ಕೆ ನಿಗದಿತ ಸಮಯದಲ್ಲಿಯೂ ಕೂಡ ನಡು-ನಡುವೆ ಅವಕಾಶ ಸಿಕ್ಕಿದಾಗಲೆಲ್ಲ ಉತ್ತಮ ಚಾರಿತ್ರ್ಯಸಂಪನ್ನ, ಜ್ಞಾನವೃದ್ಧರಾದ ಸತ್ಪುರುಷರೊಂದಿಗೆ ಮಾತುಕತೆಯಲ್ಲಿ ತೊಡಗಿ ಅವರಿಂದ ಅನುಭವ ಪಡೆಯುತ್ತಿದ್ದನು.॥12॥

ಮೂಲಮ್ - 13

ಬುದ್ಧಿಮಾನ್ಮಧುರಾಭಾಷೀ ಪೂರ್ವಭಾಷೀ ಪ್ರಿಯಂವದಃ ।
ವೀರ್ಯವಾನ್ನ ಚ ವೀರ್ಯೇಣ ಮಹತಾ ಸ್ವೇನ ವಿಸ್ಮಿತಃ ॥

ಅನುವಾದ

ಶ್ರೀರಾಮನು ತುಂಬಾ ಬುದ್ಧಿವಂತನಾಗಿದ್ದು, ಸದಾ ಮಧುರವಾಗಿಯೇ ಮಾತನಾಡುತ್ತಿದ್ದನು. ತಾನೇ ಮುಂದಾಗಿ ಮನುಷ್ಯರಲ್ಲಿ ಮಾತನಾಡುತ್ತಿದ್ದನು. ಜನರಿಗೆ ಪ್ರಿಯವಾಗುವಂತೆಯೇ ಸದಾ ನುಡಿಯುತ್ತಿದ್ದನು. ಬಲ-ಪರಾಕ್ರಮಗಳಿಂದ ಸಂಪನ್ನನಾಗಿದ್ದರೂ ಎಂದು ಗರ್ವ ಪಡುತ್ತಿರಲಿಲ್ಲ.॥13॥

ಮೂಲಮ್ - 14

ನ ಚಾನೃತಕಥೋ ವಿದ್ವಾನ್ ವೃದ್ಧಾನಾಂ ಪ್ರತಿಪೂಜಕಃ ।
ಅನುರಕ್ತಃ ಪ್ರಜಾಭಿಶ್ಚ ಪ್ರಜಾಶ್ಚಾಪ್ಯನುರಜ್ಯತೇ ॥

ಅನುವಾದ

ಸುಳ್ಳನ್ನಂತೂ ಅವನು ಎಂದೂ ಮಾತನಾಡುತ್ತಿರಲಿಲ್ಲ. ಶ್ರೀರಾಮನು ವಿದ್ವಾಂಸನಾಗಿದ್ದು ಮತ್ತು ವೃದ್ಧರನ್ನು ಸದಾ ಗೌರವಿಸುತ್ತಿದ್ದನು. ಪ್ರಜಾ ಜನರಿಗೆ ಶ್ರೀರಾಮನ ಮೇಲೆ ಹಾಗೂ ರಾಮನಿಗೆ ಪ್ರಜೆಗಳ ಮೇಲೆ ಹೆಚ್ಚಿನ ಅನುರಾಗವಿತ್ತು.॥14॥

ಮೂಲಮ್ - 15

ಸಾನು ಕ್ರೋಶೋ ಜಿತಕ್ರೋಧೋ ಬ್ರಾಹ್ಮಣಪ್ರತಿಪೂಜಕಃ ।
ದೀನಾನುಕಂಪಿ ಧರ್ಮಜ್ಞೋ ನಿತ್ಯಂ ಪ್ರಗ್ರಹವಾನ್ ಶುಚಿಃ ॥

ಅನುವಾದ

ಅವನು ಪರಮ ದಯಾಳುವಾಗಿದ್ದು, ಕ್ರೋಧವನ್ನು ಗೆದ್ದಿದ್ದನು. ಬ್ರಾಹ್ಮಣರನ್ನು ಸದಾ ಪೂಜಿಸುತ್ತಿದ್ದನು. ದೀನ-ದುಃಖಿಗಳ ಕುರಿತು ಮನಸ್ಸಿನಲ್ಲಿ ಹೆಚ್ಚಿನ ದಯೆ ಇರುತ್ತಿತ್ತು. ಧರ್ಮರಹಸ್ಯವನ್ನು ಅರಿತಿದ್ದು, ಇಂದ್ರಿಯಗಳನ್ನು ಸದಾ ವಶದಲ್ಲಿರಿಸಿಕೊಂಡು, ಒಳಗೆ-ಹೊರಗೆ ಪರಮ ಪವಿತ್ರನಾಗಿದ್ದನು.॥15॥

ಮೂಲಮ್ - 16

ಕುಲೋಚಿತಮತಿಃ ಕ್ಷಾತ್ರಂ ಸ್ವಧರ್ಮಂ ಬಹು ಮನ್ಯತೇ ।
ಮನ್ಯತೇ ಪರಯಾ ಪ್ರೀತ್ಯಾ ಮಹತ್ಸ್ವರ್ಗಫಲಂ ತತಃ ॥

ಅನುವಾದ

ತನ್ನ ಕುಲೋಚಿತ ಆಚಾರ, ದಯೆ, ಉದಾರತೆ ಮತ್ತು ಶರಣಾಗತ ರಕ್ಷಣೆಯಲ್ಲೇ ಶ್ರೀರಾಮನ ಮನಸ್ಸು ತೊಡಗಿರುತ್ತಿತ್ತು. ಅವನು ತನ್ನ ಕ್ಷತ್ರಿಯ ಧರ್ಮಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಿದ್ದನು. ಆ ಕ್ಷತ್ರಿಯ ಧರ್ಮದ ಪಾಲನೆಯಿಂದ ಮಹಾನ್ ಸ್ವರ್ಗಫಲದ ಪ್ರಾಪ್ತಿ ಎಂದು ತಿಳಿಯುತ್ತಿದ್ದು, ಬಹು ಸಂತೋಷದಿಂದ ಅದರಲ್ಲಿ ಸಂಲಗ್ನವಾಗಿದ್ದನು.॥16॥

ಮೂಲಮ್ - 17

ನಾಶ್ರೇಯಸಿ ರತೋ ಯಶ್ಚನ ವಿರುದ್ಧಕಥಾರುಚಿಃ ।
ಉತ್ತರೋತ್ತರಯುಕ್ತೀನಾಂ ವಕ್ತಾ ವಾಚಸ್ಪತಿರ್ಯಥಾ ॥

ಅನುವಾದ

ಅಮಂಗಲಕರ ನಿಷಿದ್ಧ ಕರ್ಮಗಳಲ್ಲಿ ಎಂದೂ ಪ್ರವೃತ್ತನಾಗುತ್ತಿರಲಿಲ್ಲ; ಶಾಸ್ತ್ರವಿರುದ್ಧ ಮಾತುಗಳು ಅವನಿಗೆ ಎಂದಿಗೂ ರುಚಿಸುತ್ತಿರಲಿಲ್ಲ; ಶ್ರೀರಾಮನು ತನ್ನ ನ್ಯಾಯಯುಕ್ತ ಪಕ್ಷದ ಸಮರ್ಥನೆಯಲ್ಲಿ ಬೃಹಸ್ಪತಿಯಂತೆ ಒಂದಕ್ಕಿಂತ ಒಂದು ಮಿಗಿಲಾದ ಯುಕ್ತಿಗಳನ್ನು ಪ್ರಸ್ತುತಪಡಿಸುತ್ತಿದ್ದನು.॥17॥

ಮೂಲಮ್ - 18

ಅರೋಗಸ್ತರುಣೋ ವಾಗ್ಮೀ ವಪುಷ್ಮಾನ್ ದೇಶಕಾಲವಿತ್ ।
ಲೋಕೇ ಪುರುಷಸಾರಜ್ಞಃ ಸಾಧುರೇಕೋ ವಿನಿರ್ಮಿತಃ ॥

ಅನುವಾದ

ಅವನ ಶರೀರ ನಿರೋಗಿಯಾಗಿತ್ತು ಹಾಗೂ ತಾರುಣ್ಯಾವಸ್ಥೆ ಇತ್ತು. ರಾಮನು ಉತ್ತಮ ವಕ್ತಾ ಆಗಿದ್ದು, ಸುಂದರ ದೇಹದಿಂದ ಸುಶೋಭಿಸುತ್ತಾ, ದೇಶ-ಕಾಲಗಳ ತತ್ತ್ವವನ್ನು ತಿಳಿದವನಾಗಿದ್ದನು. ಅವನನ್ನು ನೋಡಿದರೆ-ವಿಧಾತನು ಜಗತ್ತಿನ ಸಮಸ್ತ ಪುರುಷರ ಸಾರತತ್ತ್ವವನ್ನು ತಿಳಿಯುವ ಸಾಧುಪುರುಷನ ರೂಪದಲ್ಲಿ ಏಕಮಾತ್ರ ಶ್ರೀರಾಮನನ್ನು ಪ್ರಕಟಪಡಿಸಿರುವನೋ ಎಂದು ಅನಿಸುತ್ತಿತ್ತು.॥18॥

ಮೂಲಮ್ - 19

ಸ ತು ಶ್ರೇಷ್ಠೈ ರ್ಗುಣೈರ್ಯುಕ್ತಃ ಪ್ರಜಾನಾಂ ಪಾರ್ಥಿವಾತ್ಮಜಃ ।
ಬಹಿಶ್ಚರ ಇವ ಪ್ರಾಣೋ ಬಭೂವ ಗುಣತಃ ಪ್ರಿಯಃ ॥

ಅನುವಾದ

ರಾಜಕುಮಾರ ಶ್ರೀರಾಮನು ಶ್ರೇಷ್ಠಗುಣಗಳಿಂದ ಕೂಡಿದ್ದನು. ಅವನು ತನ್ನ ಸದ್ಗುಣಗಳಿಂದಾಗಿ ಪ್ರಜಾಜನರಿಗೆ ಹೊರಗೆ ಸಂಚರಿಸುವ ಪ್ರಾಣದಂತೆ ಪ್ರಿಯನಾಗಿದ್ದನು.॥19॥

ಮೂಲಮ್ - 20

ಸರ್ವವಿದ್ಯಾವ್ರತಸ್ನಾತೋ ಯಥಾವತ್ ಸಾಂಗವೇದವಿತ್ ।
ಇಷ್ವಸ್ತ್ರೇ ಚ ಪಿತುಃ ಶ್ರೇಷ್ಠೋ ಬಭೂವ ಭರತಾಗ್ರಜಃ ॥

ಅನುವಾದ

ಭರತಾಗ್ರಜ ಶ್ರೀರಾಮನು ಸಮಸ್ತ ವಿದ್ಯೆಗಳ ವ್ರತಗಳಲ್ಲಿ ನಿಷ್ಣಾತನಾಗಿದ್ದು, ಆರು ಅಂಗಗಳ ಸಹಿತ ವೇದಗಳ ಯಥಾರ್ಥ ಜ್ಞಾನಿಯಾಗಿದ್ದನು. ಅಸ್ತ್ರವಿದ್ಯೆಯಲ್ಲಂತೂ ತನ್ನ ತಂದೆಯನ್ನು ಮೀರಿಸಿದ್ದನು.॥20॥

ಮೂಲಮ್ - 21

ಕಲ್ಯಾಣಾಭಿಜನಃ ಸಾಧುರದೀನಃ ಸತ್ಯವಾಗೃಜುಃ ।
ವೃದ್ಧೈರಭಿವಿನೀತಶ್ಚ ದ್ವಿಜೈರ್ಧರ್ಮಾರ್ಥದರ್ಶಿಭಿಃ ॥

ಅನುವಾದ

ಶ್ರೀರಾಮನು ಮಂಗಳ ಕಾರ್ಯಗಳಿಗೆ ತೌರುಮನೆಯಂತಿದ್ದು, ಸತ್ಪುರುಷನಾಗಿದ್ದನು; ದೈನ್ಯರಹಿತ, ಸತ್ಯವಂತನು. ಸರಳ ಸ್ವಭಾವದವನಾಗಿದ್ದು, ಧರ್ಮಾರ್ಥ ತತ್ತ್ವವನ್ನು ತಿಳಿದಿದ್ದ ವೃದ್ಧ ಬ್ರಾಹ್ಮಣರಿಂದ ಉತ್ತಮ ಶಿಕ್ಷಣ ಪಡೆದಿದ್ದನು.॥21॥

ಮೂಲಮ್ - 22

ಧರ್ಮಕಾಮಾರ್ಥತತ್ತ್ವಜ್ಞಃ ಸ್ಮೃತಿಮಾನ್ ಪ್ರತಿಭಾನವಾನ್ ।
ಲೌಕಿಕೇ ಸಮಯಾಚಾರೇ ಕೃತಕಲ್ಪೋ ವಿಶಾರದಃ ॥

ಅನುವಾದ

ಶ್ರೀರಾಮನು ಧರ್ಮ, ಅರ್ಥ, ಕಾಮ ಇವುಗಳ ತತ್ತ್ವವನ್ನು ಚೆನ್ನಾಗಿ ತಿಳಿದಿದ್ದನು. ಅವನು ಸ್ಮರಣಶಕ್ತಿಯಿಂದ ಸಂಪನ್ನನಾಗಿದ್ದು, ಪ್ರತಿಭಾಶಾಲಿಯಾಗಿದ್ದನು. ಅವನು ಲೋಕ ವ್ಯವಹಾರದಲ್ಲಿ ಸಮರ್ಥನೂ, ಸಮಯೋಚಿತ ಧರ್ಮಾಚರಣೆಯಲ್ಲಿ ಆಸಕ್ತನೂ, ರಾಜನೀತಿ ವಿಶಾರದನೂ ಆಗಿದ್ದನು.॥22॥

ಮೂಲಮ್ - 23

ನಿಭೃತಃ ಸಂವೃತಾಕಾರೋ ಗುಪ್ತಮಂತ್ರಃ ಸಹಾಯವಾನ್ ।
ಅಮೋಘಕ್ರೋಧಹರ್ಷಶ್ಚ ತ್ಯಾಗಸಂಯಮಕಾಲವಿತ್ ॥

ಅನುವಾದ

ಅವನು ವಿನಯಶೀಲನೂ, ತನ್ನ ಅಭಿಪ್ರಾಯವನ್ನು ಯಾರಿಗೂ ತಿಳಿಯದಂತೆ ಮರೆಯಾಗಿಸುವವನೂ, ಮಂತ್ರವನ್ನು ಗುಪ್ತವಾಗಿ ಇಡುವವನೂ, ಉತ್ತಮ ಸಹಾಯಕರಿಂದ ಸಂಪನ್ನನೂ ಆಗಿದ್ದನು. ಅವನ ಕ್ರೋಧ ಅಥವಾ ಹರ್ಷ ಎಂದೂ ನಿಷ್ಫಲವಾಗುತ್ತಿರಲಿಲ್ಲ. ಅವನು ವಸ್ತುಗಳ ತ್ಯಾಗ ಮತ್ತು ಸಂಗ್ರಹದ ಅವಕಾಶವನ್ನು ಚೆನ್ನಾಗಿ ತಿಳಿದಿದ್ದನು.॥23॥

ಮೂಲಮ್ - 24

ದೃಢಭಕ್ತಿಃ ಸ್ಥಿರಪ್ರಜ್ಞೋ ನಾಸದ್ಗ್ರಾಹೀ ನ ದುರ್ವಚಃ ।
ನಿಸ್ತಂದ್ರೀರಪ್ರಮತ್ತಶ್ಚ ಸ್ವದೋಷಪರದೋಷವಿತ್ ॥

ಅನುವಾದ

ಗುರುಹಿರಿಯರಲ್ಲಿ ಅವನಿಗೆ ದೃಢವಾದ ಭಕ್ತಿ ಇತ್ತು. ಅವನು ಸ್ಥಿತಪ್ರಜ್ಞನಾಗಿದ್ದು, ಅಸತ್ ವಸ್ತುಗಳನ್ನು ಎಂದೂ ಸ್ವೀಕರಿಸುತ್ತಿರಲಿಲ್ಲ. ಅವನು ಎಂದಿಗೂ ದುರ್ವಚನವನ್ನು ಆಡುತ್ತಿರಲಿಲ್ಲ. ಅವನು ಆಲಸ್ಯ ರಹಿತನೂ, ಪ್ರಮಾದ ಶೂನ್ಯನೂ, ತನ್ನ ಮತ್ತು ಇತರ ಮನುಷ್ಯರ ದೋಷಗಳನ್ನು ಚೆನ್ನಾಗಿ ತಿಳಿಯುವವನೂ ಆಗಿದ್ದನು.॥24॥

ಮೂಲಮ್ - 25

ಶಾಸ್ತ್ರಜ್ಞಶ್ಚ ಕೃತಜ್ಞಶ್ಚ ಪುರುಷಾಂತರಕೋವಿದಃ ।
ಯಃ ಪ್ರಗ್ರಹಾನುಗ್ರಹಯೋರ್ಯಥಾನ್ಯಾಯಂ ವಿಚಕ್ಷಣಃ ॥

ಅನುವಾದ

ಶ್ರೀರಾಮನು ಸಕಲ ಶಾಸ್ತ್ರಗಳನ್ನು ಬಲ್ಲವನೂ, ಕೃತಜ್ಞನೂ, ಪುರುಷರ ತಾರತಮ್ಯವನ್ನು ಅಥವಾ ಇತರ ಪುರುಷರ ಮನೋಭಾವವನ್ನು ತಿಳಿಯುವುದರಲ್ಲಿ ಕುಶಲನೂ ಆಗಿದ್ದನು. ಯಥಾಯೋಗ್ಯ ನಿಗ್ರಹ ಮತ್ತು ಅನುಗ್ರಹದಲ್ಲಿ ವಿಚಕ್ಷಣನಾಗಿದ್ದನು.॥25॥

ಮೂಲಮ್ - 26

ಸತ್ಸಂಗ್ರಹಾನುಗ್ರಹಣೇ ಸ್ಥಾನವಿನ್ನಿಗ್ರಹಸ್ಯ ಚ ।
ಆಯಕರ್ಮಣ್ಯುಪಾಯಜ್ಞಃ ಸಂದೃಷ್ಟವ್ಯಯಕರ್ಮವಿತ್ ॥

ಅನುವಾದ

ಸತ್ಪುರುಷರ ಸಂಗ್ರಹ ಮತ್ತು ಪಾಲನೆ, ದುಷ್ಟರ ನಿಗ್ರಹ ಇದರ ಸರಿಯಾದ ಜ್ಞಾನ ಅವನಿಗಿತ್ತು. ಧನವನ್ನು ಗಳಿಸುವ ಉಪಾಯಗಳನ್ನು ಚೆನ್ನಾಗಿ ತಿಳಿದಿದ್ದನು. (ಅರ್ಥಾತ್ - ಹೂವುಗಳನ್ನು ನಾಶಮಾಡದೆ ಮಧುವನ್ನು ಸಂಗ್ರಹಿಸುವ ಭ್ರಮರದಂತೆ, ಪ್ರಜೆಗಳಿಗೆ ಕಷ್ಟಕೊಡದೆ ನ್ಯಾಯಯುಕ್ತ ಧನವನ್ನು ಸಂಗ್ರಹಿಸುವುದರಲ್ಲಿ ಕುಶಲನಾಗಿದ್ದನು) ಶಾಸ್ತ್ರವಿಹಿತ ವ್ಯಯ ಕರ್ಮದ ಜ್ಞಾನ ಅವನಿಗೆ ಚೆನ್ನಾಗಿತ್ತು..॥26॥

ಟಿಪ್ಪನೀ
  • ಶಾಸ್ತ್ರದಲ್ಲಿ ವ್ಯಯದ ವಿಧಾನ ಈ ಪ್ರಕಾರ ನೋಡಲಾಗುತ್ತದೆ -
    ಕಚ್ಚಿದಾಯಸ್ಯ ಚಾರ್ಧೇನ ಚತುರ್ಭಾಗೇನ ವಾ ಪುನಃ ।ಪಾದಭಾಗೈಸ್ತ್ರಿಭಿರ್ವಾಪಿ ವ್ಯಯಃ ಸಂ ಶುಧ್ಯತೇ ತವ ॥(ಮಹಾ.ಸಭಾ.5/7)
    ನಾರದರು ಹೇಳುತ್ತಾರೆ - ಯುಧಿಷ್ಠಿರನೇ! ನೀನು ಆದಾಯದ ನಾಲ್ಕನೆಯ ಒಂದು ಭಾಗ ಅಥವಾ ಅರ್ಧ, ಇಲ್ಲವೇ ನಾಲ್ಕನೆಯ ಮೂರು ಭಾಗದಿಂದ ನಿನ್ನ ಎಲ್ಲ ಖರ್ಚು ನಡೆಸುತ್ತಿರುವೆ ತಾನೇ?
ಮೂಲಮ್ - 27

ಶ್ರೈಷ್ಠ್ಯಂ ಶಾಸ್ತ್ರ ಸಮೂಹೇಷು ಪ್ರಾಪ್ತೋ ವ್ಯಾಮಿಶ್ರಕೇಷು ಚ ।
ಅರ್ಥ ಧಮೌ ಚ ಸಂಗೃಹ್ಯ ಸುಖತಂತ್ರೋನ ಚಾಲಸಃ ॥

ಅನುವಾದ

ಶ್ರೀರಾಮನು ಎಲ್ಲ ವಿಧದ ಅಸ್ತ್ರಸಮೂಹಗಳಲ್ಲಿ ಹಾಗೂ ಸಂಸ್ಕೃತ, ಪ್ರಾಕೃತ ಮೊದಲಾದ ಭಾಷೆಗಳಿಂದ ಮಿಶ್ರಿತ ನಾಟಕಾದಿಗಳ ಜ್ಞಾನದಲ್ಲಿ ನಿಪುಣನಾಗಿದ್ದನು. ಅವನು ಅರ್ಥ ಮತ್ತು ಧರ್ಮವನ್ನು ಪಾಲಿಸುತ್ತಾ ಅದಕ್ಕನುಕೂಲವಾದ ಕಾಮವನ್ನು ಸೇವಿಸುತ್ತಿದ್ದನು ಹಾಗೂ ಆಲಸ್ಯವನ್ನು ಎಂದಿಗೂ ಹತ್ತಿರ ಸುಳಿಯಗೊಡುತ್ತಿರಲಿಲ್ಲ.॥27॥

ಮೂಲಮ್ - 28

ವೈಹಾರಿಕಾಣಾಂ ಶಿಲ್ಪಾನಾಂ ವಿಜ್ಞಾತಾರ್ಥವಿಭಾಗವಿತ್ ।
ಆರೋಹೇ ವಿನಯೇ ಚೈವ ಯುಕ್ತೋ ವಾರಣವಾಜಿನಾಮ್ ॥

ಅನುವಾದ

ವಿಹಾರ (ಕ್ರೀಡೆ ಅಥವಾ ಮನೋರಂಜನೆ)ಕ್ಕೆ ಉಪಯೋಗಿಯಾದ ಸಂಗೀತ, ವಾದ್ಯ ಮತ್ತು ಚಿತ್ರಕಲೆ, ಶಿಲ್ಪಕಲೆ ಮೊದಲಾದವುಗಳಲ್ಲಿಯೂ ಅವನು ವಿಶೇಷಜ್ಞನಾಗಿದ್ದನು. ಅರ್ಥದ ವಿಭಾಜನವನ್ನು ಅವನು ಚೆನ್ನಾಗಿ ತಿಳಿದಿದ್ದನು** ಅವನು ಆನೆ, ಕುದುರೆಗಳ ಸವಾರಿ ಮಾಡುವುದು, ಅವುಗಳ ಬಗೆ ಬಗೆಯ ನಡೆಗಳ ಶಿಕ್ಷಣದಲ್ಲಿ ನಿಪುಣನಾಗಿದ್ದನು.॥28॥

ಟಿಪ್ಪನೀ

** ಕೆಳಗೆ ಬರೆದ ಐದು ವಸ್ತುಗಳಿಗೆ ಧನವನ್ನು ವಿಭಾಜನ ಮಾಡುವ ಮನುಷ್ಯನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿಯೂ ಸುಖಿಯಾಗುತ್ತಾನೆ. ಆ ವಸ್ತುಗಳು ಹೀಗಿವೆ - ಧರ್ಮ, ಯಶ, ಅರ್ಥ, ಆತ್ಮಾ ಮತ್ತು ಸ್ವಜನ.

Misc Detail

ಧರ್ಮಾಯ ಯಶಸೇರ್ಥಾಯ ಕಾಮಾಯ ಸ್ವಜನಾಯ ಚ ।ಪಂಚಧಾ ವಿಭಜನ್ ವಿತ್ತಮಿಹಾಮುತ್ರ ಚ ಮೋದತೇ ॥
(ಶ್ರೀಮದ್ಭಾಗವತ 8/19/37)

ಮೂಲಮ್ - 29

ಧನುರ್ವೇದವಿದಾಂ ಶ್ರೇಷ್ಠೋ ಲೋಕೇಽತಿರಥಸಂಮತಃ ।
ಅಭಿಯಾತಾ ಪ್ರಹರ್ತಾ ಚ ಸೇನಾನಯವಿಶಾರದಃ ॥

ಅನುವಾದ

ಶ್ರೀರಾಮಚಂದ್ರನು ಈ ಲೋಕದಲ್ಲಿ ಧನುರ್ವೇದದ ಎಲ್ಲ ವಿದ್ವಾಂಸರಲ್ಲಿ ಶ್ರೇಷ್ಠನಾಗಿದ್ದನು. ಅತಿರಥ ವೀರರೂ ಕೂಡ ಅವನನ್ನು ವಿಶೇಷವಾಗಿ ಸಮ್ಮಾನಿಸುತ್ತಿದ್ದರು. ಶತ್ರುಗಳ ಮೇಲೆ ಆಕ್ರಮಣ ಮತ್ತು ಪ್ರಹಾರ ಮಾಡುವುದರಲ್ಲಿಯೂ ಅವನು ಕುಶಲನಾಗಿದ್ದನು. ಸೈನ್ಯಸಂಚಾಲನೆಯ ನೀತಿಯಲ್ಲಿಯೂ ಹೆಚ್ಚು ನಿಪುಣನಾಗಿದ್ದನು.॥29॥

ಮೂಲಮ್ - 30

ಅಪ್ರಧೃಷ್ಯಶ್ಚ ಸಂಗ್ರಾಮೇ ಕ್ರುದ್ಧೈರಪಿ ಸುರಾಸುರೈಃ ।
ಅನಸೂಯೋ ಜಿತಕ್ರೋಧೋ ನ ದೃಪ್ತೋ ನ ಚ ಮತ್ಸರೀ ॥

ಅನುವಾದ

ಸಂಗ್ರಾಮದಲ್ಲಿ ಕುಪಿತರಾದ ಸಮಸ್ತ ದೇವತೆಗಳೂ ಹಾಗೂ ಅಸುರರೂ ಕೂಡ ರಾಮನನ್ನು ಸೋಲಿಸಲಾರರು. ಅವನಲ್ಲಿ ದೋಷದೃಷ್ಟಿಯು ಸರ್ವಥಾ ಅಭಾವವಾಗಿತ್ತು. ಅವನು ಕ್ರೋಧವನ್ನು ಗೆದ್ದಿದ್ದನು. ಅವನಲ್ಲಿ ದರ್ಪ ಮತ್ತು ಈರ್ಷ್ಯೆ ಅತ್ಯಂತ ಅಭಾವವಾಗಿತ್ತು.॥30॥

ಮೂಲಮ್ - 31

ನಾವಜ್ಞೇಯಶ್ಚ ಭೂತಾನಾಂ ನ ಚ ಕಾಲವಶಾನುಗಃ ।
ಏವಂ ಶ್ರೇಷ್ಠೈರ್ಗುಣೈರ್ಯುಕ್ತಃ ಪ್ರಜಾನಾಂ ಪಾರ್ಥಿವಾತ್ಮಜಃ ॥

ಮೂಲಮ್ - 32

ಸಮ್ಮತಸ್ತ್ರಿಷು ಲೋಕೇಷು ವಸುಧಾಯಾಃ ಕ್ಷಮಾಗುಣೈಃ ।
ಬುದ್ಧ್ಯಾ ಬೃಹಸ್ಪತೇಸ್ತುಲ್ಯೋ ವೀರ್ಯೇ ಚಾಪಿ ಶಚೀಪತೇಃ ॥

ಅನುವಾದ

ಯಾವುದೇ ಪ್ರಾಣಿಯ ಮನಸ್ಸಿನಲ್ಲಿ ರಾಮನ ಕುರಿತು ಅವಹೇಳನಕಾರೀ ಭಾವ ಇರಲಿಲ್ಲ. ಅವನು ಕಾಲಕ್ಕೆ ವಶನಾಗಿ ಅದರ ಹಿಂದೆ-ಹಿಂದೆ ನಡೆಯುವವನಾಗಿರಲಿಲ್ಲ. (ಕಾಲವೇ ಅವನ ಹಿಂದೆ-ಹಿಂದೆ ನಡೆಯುತ್ತಿತ್ತು) ಈ ಪ್ರಕಾರ ಉತ್ತಮ ಗುಣಗಳಿಂದ ಯುಕ್ತನಾದ ಕಾರಣ ರಾಜಕುಮಾರ ಶ್ರೀರಾಮನು ಸಮಸ್ತ ಪ್ರಜೆಗಳಿಗೆ ಮತ್ತು ಮೂರು ಲೋಕದ ಪ್ರಾಣಿಗಳಿಗೆ ಆದರಣೀಯನಾಗಿದ್ದನು. ಅವನು ಪೃಥಿವಿಯಂತೆ ಕ್ಷಮಾಶೀಲನಾಗಿದ್ದನು. ಬುದ್ಧಿಯಲ್ಲಿ ಬೃಹಸ್ಪತಿಗೆ ಹಾಗೂ ಬಲಪರಾಕ್ರಮದಲ್ಲಿ ಶಚೀಪತಿ ಇಂದ್ರನಿಗೆ ಸಮಾನನಾಗಿದ್ದನು.॥31-32॥

ಮೂಲಮ್ - 33

ತಥಾ ಸರ್ವಪ್ರಜಾಕಾಂತೈಃ ಪ್ರೀತಿಸಂಜನನೈಃ ಪಿತುಃ ।
ಗುಣೈರ್ವಿರುರುಚೇ ರಾಮೋ ದೀಪ್ತಃ ಸೂರ್ಯ ಇವಾಂಶುಭಿಃ ॥

ಅನುವಾದ

ಸೂರ್ಯನು ತನ್ನ ಕಿರಣಗಳಿಂದ ಪ್ರಕಾಶಿತನಾಗಿರುವಂತೆಯೇ ಶ್ರೀರಾಮಚಂದ್ರನು ಸಮಸ್ತ ಪ್ರಜಾ ಜನಕ್ಕೆ ಪ್ರಿಯನಾಗಿ, ತಂದೆಯ ಪ್ರೀತಿಯನ್ನು ಹೆಚ್ಚಿಸುವ ಸದ್ಗುಣಗಳಿಂದ ಸುಶೋಭಿತನಾಗಿದ್ದನು.॥33॥

ಮೂಲಮ್ - 34

ತಮೇವಂ ವೃತ್ತಸಂಪನ್ನಮಪ್ರಧೃಷ್ಯಪರಾಕ್ರಮಮ್ ।
ಲೋಕನಾಥೋಪಮಂ ನಾಥಮಕಾಮಯತ ಮೇದಿನೀ ॥

ಅನುವಾದ

ಇಂತಹ ಸದಾಚಾರ ಸಂಪನ್ನ, ಅಜೇಯ ಪರಾಕ್ರಮಿ ಮತ್ತು ಲೋಕಪಾಲಕರಂತೆ ತೇಜಸ್ವಿಯಾದ ಶ್ರೀರಾಮಚಂದ್ರನನ್ನು ಪೃಥಿವಿಯು (ಭೂಮಂಡಲ ಹಾಗೂ ಭೂಮಂಡಲದ ಪ್ರಜೆಗಳು) ತನ್ನ ಸ್ವಾಮಿಯನ್ನಾಗಿಸಲು ಇಚ್ಛಿಸಿದಳು.॥34॥

ಮೂಲಮ್ - 35

ಏತೈಸ್ತು ಬಹುಭಿರ್ಯುಕ್ತಂ ಗುಣೈರನುಪಮೈಃ ಸುತಮ್ ।
ದೃಷ್ಟ್ವಾ ದಶರಥೋ ರಾಜಾ ಚಕ್ರೇ ಚಿಂತಾಂ ಪರಂತಪಃ ॥

ಅನುವಾದ

ಅನೇಕ ಅನುಪಮ ಗುಣಗಳಿಂದ ಯುಕ್ತನಾದ ತನ್ನ ಪುತ್ರ ಶ್ರೀರಾಮನನ್ನು ನೋಡಿ ಪರಂತಪನಾದ ದಶರಥರಾಜನು ಮನಸ್ಸಿನಲ್ಲೇ ಚಿಂತಿಸಲು ತೊಡಗಿದನು.॥35॥

ಮೂಲಮ್ - 36

ಅಥ ರಾಜ್ಞೋ ಬಭೂವೈವಂ ವೃದ್ಧಸ್ಯ ಚಿರಜೀವಿನಃ ।
ಪ್ರೀತಿರೇಷಾ ಕಥಂ ರಾಮೋ ರಾಜಾ ಸ್ಯಾನ್ಮಯಿ ಜೀವತಿ ॥

ಅನುವಾದ

ಆ ಚಿರಂಜೀವಿ ವೃದ್ಧನಾದ ದಶರಥನ ಮನಸ್ಸಿನಲ್ಲಿ - ನಾನು ಜೀವಿಸಿ ಇರುವಾಗಲೇ ಶ್ರೀರಾಮಚಂದ್ರನು ಹೇಗೆ ರಾಜನಾಗಬಲ್ಲನು, ಅವನ ಪಟ್ಟಾಭಿಷೇಕದಿಂದ ದೊರೆಯುವ ಸಂತೋಷ ನನಗೆ ಹೇಗೆ ಪ್ರಾಪ್ತವಾಗಬಹುದು? ಎಂಬ ಚಿಂತೆ ಉಂಟಾಯಿತು.॥36॥

ಮೂಲಮ್ - 37

ಏಷಾ ಹೃಸ್ಯ ಪರಾ ಪ್ರೀತಿರ್ಹೃದಿ ಸಂಪರಿವರ್ತತೇ ।
ಕದಾ ನಾಮ ಸುತಂ ದ್ರಕ್ಷ್ಯಾಮ್ಯಭಿಷಿಕ್ತಮಹಂ ಪ್ರಿಯಮ್ ॥

ಅನುವಾದ

ಅವನ ಮನಸ್ಸಿನಲ್ಲಿ ನನ್ನ ಪ್ರಿಯ ಪುತ್ರ ಶ್ರೀರಾಮನ ಪಟ್ಟಾಭಿಷೇಕವನ್ನು ಎಂದು ನೋಡುವೆನು? ಎಂಬ ಉತ್ತಮ ಅಭಿಲಾಷೆಯು ಪದೇ-ಪದೇ ಸುತ್ತತೊಡಗಿತು.॥37॥

ಮೂಲಮ್ - 38

ವೃದ್ಧಿಕಾಮೋ ಹಿ ಲೋಕಸ್ಯ ಸರ್ವಭೂತಾನುಕಂಪಕಃ ।
ಮತ್ತಃ ಪ್ರಿಯತರೋ ಲೋಕೇ ಪರ್ಜನ್ಯ ಇವ ವೃಷ್ಟಿಮಾನ್ ॥

ಅನುವಾದ

‘ಶ್ರೀರಾಮನು ಎಲ್ಲ ಜನರ ಅಭ್ಯುದಯವನ್ನು ಬಯಸುತ್ತಿರುವನು, ಸಮಸ್ತ ಜೀವಿಗಳ ಮೇಲೆ ದಯೆ ತೋರುವನು. ಅವನು ಲೋಕದಲ್ಲಿ ಮಳೆಗರೆ ಯುವ ಮೇಘದಂತೆ ನನಗಿಂತಲೂ ಮಿಗಿಲಾಗಿ ಪ್ರಿಯನಾಗಿರುವನು’ ಎಂದು ಯೋಚಿಸತೊಡಗಿದನು.॥38॥

ಮೂಲಮ್ - 39

ಯಮಶಕ್ರಸಮೋ ವೀರ್ಯೇ ಬೃಹಸ್ಪತಿಸಮೋ ಮತೌ ।
ಮಹೀಧರಸಮೋ ಧೃತ್ಯಾಂ ಮತ್ತಶ್ಚ ಗುಣವತ್ತರಃ ॥

ಅನುವಾದ

ಶ್ರೀರಾಮನು ಬಲ-ಪರಾಕ್ರಮದಲ್ಲಿ ಯಮ ಮತ್ತು ಇಂದ್ರರಿಗೆ ಸಮಾನನೂ, ಬುದ್ಧಿಯಲ್ಲಿ ಬೃಹಸ್ಪತಿಗೆ ಸಮನೂ, ಧೈರ್ಯದಲ್ಲಿ ಪರ್ವತದಂತೆಯೂ, ಗುಣಗಳಲ್ಲಿ ನನಗಿಂತಲೂ ಸರ್ವಥಾ ಶ್ರೇಷ್ಠನೂ ಆಗಿರುವನು.॥39॥

ಮೂಲಮ್ - 40

ಮಹೀಮಹಮಿಮಾಂ ಕೃತ್ಸ್ನಾಮಧಿತಿಷ್ಠಂತಮಾತ್ಮಜಮ್ ।
ಅನೇನ ವಯಸಾ ದೃಷ್ಟ್ವಾ ಯಥಾ ಸ್ವರ್ಗಮವಾಪ್ನುಯಾಮ್ ॥

ಅನುವಾದ

ನಾನು ಈ ವಯಸ್ಸಿನಲ್ಲಿ ಮಗನಾದ ಶ್ರೀರಾಮನು ಇಡೀ ಪೃಥಿವಿಯ ರಾಜ್ಯವನ್ನು ಆಳುತ್ತಿರುವುದನ್ನು ನೋಡಿ ಯಥಾಕಾಲದಲ್ಲಿ ಸುಖವಾಗಿ ಸ್ವರ್ಗವನ್ನು ಪಡೆದುಕೊಳ್ಳುವುದೇ ನನ್ನ ಜೀವನದ ಸಾರ್ಥಕತೆಯಾಗಿದೆ.॥40॥

ಮೂಲಮ್ - 41

ಇತ್ಯೇವಂ ವಿವಿಧೈಸ್ತೈಸ್ತೈರನ್ಯಪಾರ್ಥಿವದುರ್ಲಭೈಃ ।
ಶಿಷ್ಟೈರಪರಿಮೇಯೈಶ್ಚ ಲೋಕೇ ಲೋಕೋತ್ತರೈರ್ಗುಣೈಃ ॥

ಮೂಲಮ್ - 42

ತಂ ಸಮೀಕ್ಷ್ಯ ತದಾ ರಾಜಾ ಯುಕ್ತಂ ಸಮುದಿತೈರ್ಗುಣೈಃ ।
ನಿಶ್ಚಿತ್ಯ ಸಚಿವೈಃ ಸಾರ್ಧಂ ಯೌವರಾಜ್ಯಮಮನ್ಯತ ॥

ಅನುವಾದ

ಹೀಗೆ ವಿಚಾರ ಮಾಡಿ ನಾನಾ ಪ್ರಕಾರದ ವಿಲಕ್ಷಣ, ಸಜ್ಜನೋಚಿತ, ಬೇರೆ ರಾಜರಿಗೆ ದುರ್ಲಭವಾದ ಅಸಂಖ್ಯ ಲೋಕೋತ್ತರ ಗುಣಗಳಿಂದ ವಿಭೂಷಿತನಾದ ಶ್ರೀರಾಮನನ್ನು ನೋಡಿ ದಶರಥ ರಾಜನು ಮಂತ್ರಿಗಳಲ್ಲಿ ಸಲಹೆ ಪಡೆದು ಅವನನ್ನು ಯುವರಾಜನನ್ನಾಗಿಸಲು ನಿಶ್ಚಯಿಸಿದನು.॥41-42॥

ಮೂಲಮ್ - 43

ದಿವ್ಯಂತರಿಕ್ಷೇ ಭೂವೌ ಚ ಘೋರಮುತ್ಪಾತಜಂ ಭಯಮ್ ।
ಸಂಚಚಕ್ಷೇಽಥ ಮೇಧಾವೀ ಶರೀರೇ ಚಾತ್ಮನೋ ಜರಾಮ್ ॥

ಅನುವಾದ

ಮೇಧಾವೀ ಮಹಾರಾಜಾ ದಶರಥನು ಮಂತ್ರಿಯ ಬಳಿ ಸ್ವರ್ಗ, ಅಂತರಿಕ್ಷ, ಭೂತಳದಲ್ಲಿ ಕಂಡುಬರುವ ಉತ್ಪಾತಗಳ ಘೋರ ಭಯವನ್ನು ಸೂಚಿಸಿ, ತನ್ನ ಶರೀರದಲ್ಲಿ ವೃದ್ಧಾವಸ್ಥೆಯ ಆಗಮನದ ಮಾತನ್ನು ತಿಳಿಸಿದನು.॥43॥

ಮೂಲಮ್ - 44

ಪೂರ್ಣಚಂದ್ರಾನನಸ್ಯಾಥ ಶೋಕಾಪನುದಮಾತ್ಮನಃ ।
ಲೋಕೇ ರಾಮಸ್ಯ ಬುಬುಧೇ ಸಂಪ್ರಿಯತ್ವಂ ಮಹಾತ್ಮನಃ ॥

ಅನುವಾದ

ಪೂರ್ಣಚಂದ್ರನಂತೆ ಮನೋಹರ ಮುಖವುಳ್ಳ ಮಹಾತ್ಮಾ ಶ್ರೀರಾಮನು ಸಮಸ್ತ ಪ್ರಜೆಗಳಿಗೆ ಪ್ರಿಯನಾಗಿದ್ದನು. ಲೋಕದಲ್ಲಿ ಅವನು ಸರ್ವಪ್ರಿಯನಾದುದು ರಾಜನ ಆಂತರಿಕ ಶೋಕವನ್ನು ದೂರಗೊಳಿಸುವುದಾಗಿತ್ತು, ಇದನ್ನು ರಾಜನು ಚೆನ್ನಾಗಿ ತಿಳಿದಿದ್ದನು.॥44॥

ಮೂಲಮ್ - 45

ಆತ್ಮನಶ್ಚ ಪ್ರಜಾನಾಂ ಚ ಶ್ರೇಯಸೇ ಚ ಪ್ರಿಯೇಣ ಚ ।
ಪ್ರಾಪ್ತ ಕಾಲೇ ಸ ಧರ್ಮಾತ್ಮಾ ಭಕ್ತ್ಯಾ ತ್ವರಿತವಾನ್ ನೃಪಃ ॥

ಅನುವಾದ

ಅನಂತರ ಪಟ್ಟಾಭಿಷೇಕಕ್ಕೆ ಸಕಾಲ ಬಂದಾಗ ಧರ್ಮಾತ್ಮಾ ದಶರಥನು ತನ್ನ ಮತ್ತು ಪ್ರಜೆಯ ಕಲ್ಯಾಣಕ್ಕಾಗಿ ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಶೀಘ್ರವಾಗಿ ಸಿದ್ಧತೆಗಳನ್ನು ಮಾಡಲು ಮಂತ್ರಿಗಳಿಗೆ ಆಜ್ಞಾಪಿಸಿದನು. ಈ ಅವಸರಕ್ಕೆ ಅವನ ಹೃದಯದಲ್ಲಿದ್ದ ಪ್ರೇಮ ಹಾಗೂ ಪ್ರಜೆಯ ಅನುರಾಗವೂ ಕಾರಣವಾಗಿತ್ತು.॥45॥

ಮೂಲಮ್ - 46

ನಾನಾ ನಗರವಾಸ್ತವ್ಯಾನ್ ಪೃಥಗ್ಜಾನಪದಾನಪಿ ।
ಸಮಾನಿನಾಯ ಮೇದಿನ್ಯಾಂ ಪ್ರಧಾನಾನ್ಪೃಥಿವೀಪತಿಃ ॥

ಅನುವಾದ

ದಶರಥನು ಬೇರೆ ಬೇರೆ ನಗರ ನಿವಾಸಿಗಳಾದ ಮುಖ್ಯ-ಮುಖ್ಯ ಪುರುಷರನ್ನು ಹಾಗೂ ಇತರ ಸಾಮಂತ ರಾಜರನ್ನು ಮಂತ್ರಿಗಳ ಮೂಲಕ ಅಯೋಧ್ಯೆಗೆ ಕರೆಸಿಕೊಂಡನು.॥46॥

ಮೂಲಮ್ - 47

ತಾನ್ವೇಶ್ಮನಾನಾಭರಣೈರ್ಯಥಾರ್ಹಂ ಪ್ರತಿಪೂಜಿತಾನ್ ।
ದದರ್ಶಾಲಂಕೃತೋ ರಾಜಾ ಪ್ರಜಾಪತಿರಿವ ಪ್ರಜಾಃ ॥

ಅನುವಾದ

ಅವರೆಲ್ಲರಿಗೂ ಉಳಕೊಳ್ಳಲು ಯೋಗ್ಯ ವಸತಿಗಳನ್ನು ಕಲ್ಪಿಸಿ, ಅನೇಕ ಪ್ರಕಾರದ ಆಭೂಷಣಗಳಿಂದ ಅವರನ್ನು ಯಥಾಯೋಗ್ಯ ಸತ್ಕರಿಸಿದನು. ಅನಂತರ ತಾನೂ ಅಲಂಕೃತನಾಗಿ ದಶರಥನು - ಪ್ರಜಾಪತಿ ಬ್ರಹ್ಮನು ಪ್ರಜಾ ವರ್ಗವನ್ನು ಭೆಟ್ಟಿಯಾಗುವಂತೆ ಸಾಮಂತ ರಾಜರೆಲ್ಲರನ್ನು ಭೆಟ್ಟಿಯಾದನು.॥47॥

ಮೂಲಮ್ - 48

ನ ತು ಕೇಕಯರಾಜಾನಂ ಜನಕಂ ವಾ ನರಾಧಿಪಃ ।
ತ್ವರಯಾ ಚಾನಯಾಮಾಸ ಪಶ್ಚಾತ್ತೌ ಶ್ರೋಷ್ಯತಃ ಪ್ರಿಯಮ್ ॥

ಅನುವಾದ

ಅವಸರದ ಕಾರಣ ದಶರಥನು ಕೇಕೆಯ ರಾಜನನ್ನು ಹಾಗೂ ಮಿಥಿಲಾಪತಿ ಜನಕನನ್ನು ಕರೆಸಲಿಲ್ಲ.* ಅವನು ಅವರಿಬ್ಬರೂ ಸಂಬಂಧಿಗಳಿಗೆ ಈ ಪ್ರಿಯ ಸಮಾಚಾರ ಮತ್ತೆ ತಿಳಿಸಿದರಾಯಿತು ಎಂದು ಯೋಚಿಸಿದನು.॥48॥

ಟಿಪ್ಪನೀ
  • ಕೇಕೇಯ ನರೇಶನೊಂದಿಗೆ ಭರತ - ಶತ್ರುಘ್ನರೂ ಬರುತ್ತಾರೆ. ಇವರೆಲ್ಲರೊಂದಿಗೆ ಜನಕನು ಇರುವುದರಿಂದ ಶ್ರೀರಾಮನ ಪಟ್ಟಾಭಿಷೇಕ ನೆರವೇರುವುದು ಹಾಗೂ ಅವನಿಗೆ ವನಕ್ಕೆ ಹೋಗಲಾಗುವುದಿಲ್ಲ. ಈ ಭಯದಿಂದ ದೇವತೆಗಳು ದಶರಥನಿಗೆ ಅವರನ್ನು ಕರೆಸುವ ಬುದ್ಧಿ ಕೊಡಲಿಲ್ಲ.
ಮೂಲಮ್ - 49

ಅಥೋಪವಿಷ್ಟೇ ನೃಪತೌ ತಸ್ಮಿನ್ ಪರಪುರಾರ್ದನೇ ।
ತತಃ ಪ್ರವಿವಿಶುಃ ಶೇಷಾ ರಾಜಾನೋ ಲೋಕಸಮ್ಮತಾಃ ॥

ಅನುವಾದ

ಅನಂತರ ಶತ್ರುನಗರವನ್ನು ನಾಶಮಾಡುವ ರಾಜಾ ದಶರಥನ ಸಭಾ ಸ್ಥಾನಕ್ಕೆ ಬಂದು ಕುಳಿತಾಗ (ಕೇಕೆಯರಾಜ ಮತ್ತು ಜನಕನನ್ನು ಬಿಟ್ಟು) ಉಳಿದ ಎಲ್ಲ ಲೋಕಪ್ರಿಯ ಅರಸರು ರಾಜಸಭೆಯನ್ನು ಪ್ರವೇಶಿಸಿದರು.॥49॥

ಮೂಲಮ್ - 50

ಅಥ ರಾಜವಿತೀರ್ಣೇಷು ವಿವಿಧೇಷ್ವಾಸನೇಷು ಚ ।
ರಾಜಾನವೇವಾಭಿಮುಖಾ ನಿಷೇದುರ್ನಿಯತಾ ನೃಪಾಃ ॥

ಅನುವಾದ

ಆ ಎಲ್ಲ ಅರಸರು ರಾಜನು ನೀಡಿದ ನಾನಾ ಪ್ರಕಾರದ ಸಿಂಹಾಸನಗಳಲ್ಲಿ ದಶರಥನಿಗೆ ಅಭಿಮುಖರಾಗಿ ವಿನೀತಭಾವದಿಂದ ಕುಳಿತುಕೊಂಡರು.॥50॥

ಮೂಲಮ್ - 51

ಸ ಲಬ್ಧಮಾನೈರ್ವಿನಯಾನ್ವಿತೈರ್ನೃಪೈಃ
ಪುರಾಲಯೈರ್ಜಾನಪದೈಶ್ಚ ಮಾನವೈಃ ।
ಉಪೋಪವಿಷ್ಟೈರ್ನೃಪತಿರ್ವೃತೋ ಬಭೌ
ಸಹಸ್ರಚಕ್ಷುರ್ಭಗವಾನಿವಾಮರೈಃ ॥

ಅನುವಾದ

ರಾಜನಿಂದ ಸಮ್ಮಾನಿತರಾಗಿ ವಿನೀತಭಾವದಿಂದ ದಶರಥನ ಸುತ್ತಲೂ ಕುಳಿತಿರುವ ಸಾಮಂತ ರಾಜರು ಹಾಗೂ ನಗರ ಪ್ರಮುಖ ಜನರಿಂದ ಸುತ್ತುವರಿದು ಆಗ ದೇವತೆಗಳ ನಡುವೆ ವಿರಾಜಿಸುವ ಸಹಸ್ರನೇತ್ರಧಾರೀ ಭಗವಾನ್ ಇಂದ್ರನು ಶೋಭಿಸುವಂತೆ ಅಯೋಧ್ಯಾಧಿಪತಿ ಶೋಭಿಸುತ್ತಿದ್ದನು.॥51॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅಯೋಧ್ಯಾಕಾಂಡದಲ್ಲಿ ಮೊದಲನೆಯ ಸರ್ಗ ಪೂರ್ಣವಾಯಿತು. ॥1॥