०७७ दशरथाद्ययोध्यागमनम्

वाचनम्
ಭಾಗಸೂಚನಾ

ದಶರಥರಾಜನು ಪುತ್ರರ ಹಾಗೂ ವಧುಗಳೊಂದಿಗೆ ಅಯೋಧ್ಯಾಪ್ರವೇಶ, ಶತ್ರುಘ್ನ ಸಹಿತ ಭರತನು ಮಾವನ ಮನೆಗೆ ಹೋದುದು, ಶ್ರೀರಾಮನ ಸದ್ ವ್ಯವಹಾರಗಳಿಂದ ಎಲ್ಲರೂ ಸಂತೋಷಗೊಂಡುದು, ಸೀತಾ-ರಾಮರ ಪರಸ್ಪರ ಪ್ರೇಮ

ಮೂಲಮ್ - 1

ಗತೇ ರಾಮೇ ಪ್ರಶಾಂತಾತ್ಮಾ ರಾಮೋ ದಾಶರಥಿರ್ಧನುಃ ।
ವರುಣಾಯಾಪ್ರಮೇಯಾಯ ದದೌ ಹಸ್ತೇ ಮಹಾಯಶಾಃ ॥

ಅನುವಾದ

ಜಮದಗ್ನಿಕುಮಾರ ಪರಶುರಾಮರು ಹೊರಟುಹೋದ ಬಳಿಕ ಮಹಾಯಶಸ್ವೀ ದಶರಥನಂದನ ಶ್ರೀರಾಮನು ಶಾಂತಚಿತ್ತನಾಗಿ ಅಪಾರ ಶಕ್ತಿಶಾಲಿಯಾದ ವರುಣನ ಕೈಗೆ ಆ ಧನುಸ್ಸನ್ನು ಒಪ್ಪಿಸಿದನು.॥1॥

ಮೂಲಮ್ - 2

ಅಭಿವಾದ್ಯ ತತೋ ರಾಮೋವಸಿಷ್ಠ ಪ್ರಮುಖಾನೃಷೀನ್ ।
ಪಿತರಂ ವಿಕ್ವಲಂ ದೃಷ್ಟ್ವಾ ಪ್ರೋವಾಚ ರಘುನಂದನಃ ॥

ಅನುವಾದ

ಅನಂತರ ವಸಿಷ್ಠಾದಿ ಋಷಿಗಳಿಗೆ ನಮಸ್ಕರಿಸಿ ರಘುನಂದನ ಶ್ರೀರಾಮನು ಖಿನ್ನನಾದ ತನ್ನ ತಂದೆಯನ್ನು ನೋಡಿ ಅವರಲ್ಲಿ ಇಂತೆಂದನು.॥2॥

ಮೂಲಮ್ - 3

ಜಾಮದಗ್ನ್ಯೋ ಗತೋ ರಾಮಃ ಪ್ರಯಾತು ಚತುರಂಗಿಣೀ ।
ಅಯೋಧ್ಯಾಭಿಮುಖೀ ಸೇನಾ ತ್ವಯಾನಾಥೇನ ಪಾಲಿತಾ ॥

ಅನುವಾದ

ತಂದೆಯೇ! ಜಮದಗ್ನಿಕುಮಾರ ಪರಶುರಾಮರು ಹೊರಟು ಹೋದರು. ಈಗ ನಿನ್ನಿಂದ ಪಾಲಿತವಾದ ಚತುರಂಗ ಸೇನೆಯು ಅಯೋಧ್ಯೆಯ ಕಡೆಗೆ ಪ್ರಯಾಣ ಮಾಡಲಿ.॥3॥

ಮೂಲಮ್ - 4

ರಾಮಸ್ಯ ವಚನಂ ಶ್ರುತ್ವಾ ರಾಜಾದಶರಥಃ ಸುತಮ್ ।
ಬಾಹುಭ್ಯಾಂ ಸಂಪರಿಷ್ವಜ್ಯ ಮೂರ್ಧ್ನ್ಯುಘ್ರಾಯ ರಾಘವಮ್ ॥

ಮೂಲಮ್ - 5

ಗತೋ ರಾಮ ಇತಿ ಶ್ರುತ್ವಾ ಹೃಷ್ಟಃ ಪ್ರಮುದಿತೋ ನೃಪಃ ।
ಪುನರ್ಜಾತಂ ತದಾ ಮೇನೇ ಪುತ್ರಮಾತ್ಮಾನಮೇವ ಚ ॥

ಅನುವಾದ

ಶ್ರೀರಾಮನ ಮಾತನ್ನು ಕೇಳಿ ದಶರಥನು ಪುತ್ರನಾದ ರಘುನಾಥನನ್ನು ಬರಸೆಳೆದು ತಬ್ಬಿಕೊಂಡು ನೆತ್ತಿಯನ್ನು ಆಘ್ರಾಣಿಸಿದನು. ‘ಪರಶುರಾಮರು ಹೊರಟುಹೋದರು’ ಇದನ್ನು ಕಂಡು ದಶರಥ ಬಹಳ ಹರ್ಷಗೊಂಡು ಆನಂದಮಗ್ನನಾದನು. ಆಗ ಅವನು ತನ್ನ ಮತ್ತು ತನ್ನ ಮಕ್ಕಳ ಪುನರ್ಜನ್ಮವಾದಂತೆ ತಿಳಿದನು.॥4-5॥

ಮೂಲಮ್ - 6

ಚೋದಯಾಮಾಸ ತಾಂ ಸೇನಾಂ ಜಗಾಮಾಶು ತತಃ ಪುರೀಮ್ ।
ಪತಾಕಾಧ್ವಜಿನೀಂ ರಮ್ಯಾಂ ತೂರ್ಯೋದ್ ಘುಷ್ಟನಿನಾದಿತಾಮ್ ॥

ಅನುವಾದ

ಬಳಿಕ ದಶರಥನು ತನ್ನ ಸೈನ್ಯಕ್ಕೆ ನಗರದ ಕಡೆಗೆ ನಡೆಯಲು ಆಜ್ಞಾಪಿಸಿದನು. ಅಲ್ಲಿಂದ ಹೊರಟು ಶೀಘ್ರವಾಗಿ ಅಯೋಧ್ಯೆಯನ್ನು ತಲುಪಿದರು. ಆಗ ಅಯೋಧ್ಯೆಯು ತಳಿರು ತೋರಣ, ಧ್ವಜ-ಪತಾಕೆಗಳಿಂದ ಅಲಂಕೃತವಾಗಿತ್ತು; ಅದರಿಂದ ನಗರವು ವಿಶೇಷವಾಗಿ ಶೋಭಿಸುತ್ತಿತ್ತು. ಬಗೆಬಗೆಯ ಮಂಗಳ ವಾದ್ಯಗಳ ಧ್ವನಿಗಳಿಂದ ನಗರವು ಪ್ರತಿಧ್ವನಿಸುತ್ತಿತ್ತು.॥6॥

ಮೂಲಮ್ - 7

ಸಿಕ್ತರಾಜಪಥಾಂ ರಮ್ಯಾಂ ಪ್ರಕೀರ್ಣಕುಸುಮೋತ್ಕರಾಮ್ ।
ರಾಜಪ್ರವೇಶಸುಮುಖೈಃ ಪೌರೈರ್ಮಂಗಲಪಾಣಿಭಿಃ ॥

ಮೂಲಮ್ - 8

ಸಂಪೂರ್ಣಾಂ ಪ್ರಾವಿಶದ್ರಾಜಾ ಜನೌಘೈಃ ಸಮಲಂಕೃತಾಮ್ ।
ಪೌರೈಃ ಪ್ರತ್ಯುದ್ಗತೋ ದೂರಂ ದ್ವಿಜೈಶ್ಚ ಪುರವಾಸಿಭಿಃ ॥

ಅನುವಾದ

ರಾಜಬೀದಿಗಳಲ್ಲಿ ಪನ್ನೀರನ್ನು ಸಿಂಪಡಿಸಿದ್ದರು. ಅದರಿಂದ ಪುರಿಯ ಶೋಭೆ ಅವರ್ಣನೀಯವಾಗಿತ್ತು. ಸುಗಂಧಿತ ಪುಷ್ಪಗಳನ್ನು ರಾಶಿರಾಶಿಯಾಗಿ ಚೆಲ್ಲಿದ್ದರು. ಪ್ರಜಾಜನರು ಕೈಗಳಲ್ಲಿ ಮಾಂಗಲಿಕ ವಸ್ತುಗಳನ್ನು ಎತ್ತಿಕೊಂಡು ರಾಜನ ಪ್ರವೇಶ ಮಾರ್ಗದಲ್ಲಿ ನಿಂತಿದ್ದರು. ಹೀಗೆ ಅಲಂಕೃತವಾದ ಅಯೋಧ್ಯೆಯನ್ನು ರಾಜನು ಪ್ರವೇಶಿಸಿದನು. ನಾಗರಿಕರು, ಪುರಪ್ರಮುಖರು, ಬ್ರಾಹ್ಮಣರು, ಸ್ವಲ್ಪ ದೂರ ಮುಂದೆ ಹೋಗಿ ಮಹಾರಾಜನನ್ನು ಸ್ವಾಗತಿಸಿದರು.॥7-8॥

ಮೂಲಮ್ - 9

ಪುತ್ರೈರನುಗತಃ ಶ್ರೀಮಾನ್ಶ್ರೀಮದ್ಭಿಶ್ಚ ಮಹಾಯಶಾಃ ।
ಪ್ರವೀವೇಶ ಗೃಹಂ ರಾಜಾ ಹಿಮವತ್ಸದೃಶಂ ಪ್ರಿಯಮ್ ॥

ಅನುವಾದ

ತನ್ನ ಕಾಂತಿಯುಕ್ತ ಪುತ್ರರೊಂದಿಗೆ ಮಹಾಯಶಸ್ವೀ ಶ್ರೀಮಾನ್ ರಾಜಾ ದಶರಥನು ಹಿಮಾಲಯದಂತೆ ಸುಂದರ ಹಾಗೂ ಗಗನಚುಂಬಿಯಾದ ತನ್ನ ಅರಮನೆಯನ್ನು ಪ್ರವೇಶಿಸಿದನು.॥9॥

ಮೂಲಮ್ - 10½

ನನಂದ ಸ್ವಜನೈರಾಜಾ ಗೃಹೇ ಕಾಮೈಃ ಸುಪೂಜಿತಃ ।
ಕೌಸಲ್ಯಾ ಚ ಸುಮಿತ್ರಾ ಚ ಕೈಕೇಯೀ ಚ ಸುಮಧ್ಯಮಾ ॥
ವಧೂಪ್ರತಿಗ್ರಹೇ ಯುಕ್ತಾ ಯಾಶ್ಚಾನ್ಯಾ ರಾಜಯೋಷಿತಃ ।

ಅನುವಾದ

ಅರಮನೆಯಲ್ಲಿ ಸ್ವಜನರಿಂದ ಮನೋವಾಂಛಿತ ವಸ್ತುಗಳಿಂದ ಪೂಜಿತನಾದ ದಶರಥನು ಪರಮಾನಂದವನ್ನು ಹೊಂದಿದನು. ಮಹಾರಾಣಿ ಕೌಸಲ್ಯೆ, ಸುಮಿತ್ರೆ, ಸುಂದರಿಯಾದ ಕೈಕೆ ಹಾಗೂ ಇತರ ರಾಜಪುತ್ರಿಯರೆಲ್ಲರೂ ಸೊಸೆಯರಿಗೆ ಆರತಿ ಎತ್ತಲು ಹೊರಟರು.॥10॥

ಮೂಲಮ್ - 11

ತತಃ ಸೀತಾಂ ಮಹಾಭಾಗಾಮೂರ್ವಿಲಾಂ ಚ ಯಶಸ್ವಿನೀಮ್ ॥

ಮೂಲಮ್ - 12

ಕುಶಧ್ವಜಸುತೇ ಚೋಭೇ ಜಗೃಹುರ್ನೃಪಯೋಷಿತಃ ।
ಮಂಗಲಾಲಾಪನೈರ್ಹೋಮೈಃ ಶೋಭಿತಾಃ ಕ್ಷೌಮವಾಸಸಃ ॥

ಅನುವಾದ

ಅನಂತರ ರಾಜ ಪರಿವಾರದ ಆ ಸ್ತ್ರೀಯರು ಪರಮ ಸೌಭಾಗ್ಯವತೀ ಸೀತೆ, ಯಶಸ್ವಿನೀ ಊರ್ಮಿಳೆ, ಕುಶಧ್ವಜನ ಕನ್ಯೆಯರಾದ ಮಾಂಡವೀ ಮತ್ತು ಶ್ರುತಕೀರ್ತಿ ಇವರನ್ನು ಪಲ್ಲಕ್ಕಿಗಳಿಂದ ಇಳಿಸಿ, ಮಂಗಳ ಗೀತೆಗಳನ್ನು ಹಾಡುತ್ತಾ ಎಲ್ಲ ವಧುಗಳನ್ನು ಒಳಗೆ ಕರೆದುಕೊಂಡು ಹೋದರು. ಅವರೆಲ್ಲ ಪ್ರವೇಶ ಕಾಲಿಕ ಹೋಮ ಕರ್ಮದಿಂದ ಸುಶೋಭಿತರಾಗಿದ್ದು ರೇಶ್ಮೆಯ ಸೀರೆಗಳಿಂದ ಅಲಂಕೃತರಾಗಿದ್ದರು.॥11-12॥

ಮೂಲಮ್ - 13½

ದೇವತಾಯತನಾನ್ಯಾಶು ಸರ್ವಾಸ್ತಾಃ ಪ್ರತ್ಯಪೂಜಯನ್ ।
ಅಭಿವಾದ್ಯಾಭಿವಾದ್ಯಾಂಶ್ಚ ಸರ್ವಾ ರಾಜಸುತಾಸ್ತದಾ ॥
ರೇಮಿರೇ ಮುದಿತಾಃ ಸರ್ವಾ ಭರ್ತೃಭಿರ್ಮುದಿತಾ ರಹಃ ।

ಅನುವಾದ

ಅವರೆಲ್ಲರನ್ನು ದೇವರ ಮನೆಗೆ ಕರೆದುಕೊಂಡು ಹೋಗಿ ಸೊಸೆಯರಿಂದ ದೇವತಾ ಪೂಜೆ ಮಾಡಿಸಿದರು. ಅನಂತರ ನವವಧುಗಳಾಗಿ ಬಂದಿರುವ ಆ ಎಲ್ಲ ರಾಜಕುಮಾರಿಯರು ವಂದನೀಯರಾದ ಅತ್ತೆ ಮಾವಂದಿರು ಆದಿ ಎಲ್ಲರ ಚರಣಗಳಿಗೆ ನಮಸ್ಕರಿಸಿದರು ಹಾಗೂ ತಮ್ಮ-ತಮ್ಮ ಪತಿಗಳೊಂದಿಗೆ ಏಕಾಂತದಲ್ಲಿ ಇದ್ದು ಅವರೆಲ್ಲರೂ ಬಹಳ ಆನಂದದಿಂದ ದಿನಕಳೆಯ ತೊಡಗಿದರು.॥13½॥

ಮೂಲಮ್ - 14

ಕೃತದಾರಾಃ ಕೃತಾಸ್ತ್ರಾಶ್ಚ ಸಧನಾಃ ಸಸುಹೃಜ್ಜನಾಃ ॥

ಮೂಲಮ್ - 15½

ಶುಶ್ರೂಷಮಾಣಾಃ ಪಿತರಂ ವರ್ತಯಂತಿ ನರರ್ಷಭಾಃ ।
ಕಸ್ಯಚಿತ್ತ್ವಥ ಕಾಲಸ್ಯ ರಾಜಾ ದಶರಥಃ ಸುತಮ್ ॥
ಭರತಂ ಕೈಕಯೀಪುತ್ರಮಬ್ರವೀದ್ರಘುನಂದನಃ ।

ಅನುವಾದ

ಶ್ರೀರಾಮನೇ ಆದಿ ಪುರುಷಶ್ರೇಷ್ಠ ನಾಲ್ವರು ಸಹೋದರರೂ ಅಸ್ತ್ರವಿದ್ಯೆಯಲ್ಲಿ ನಿಪುಣರಾಗಿದ್ದರು, ವಿವಾಹಿತರಾಗಿ, ಧನ ಮತ್ತು ಮಿತ್ರರೊಂದಿಗೆ ಇರುತ್ತಾ ತಂದೆಯ ಸೇವೆ ಮಾಡತೊಡಗಿದರು. ಸ್ವಲ್ಪ ಸಮಯ ಕಳೆದಾಗ ರಘುನಂದನ ದಶರಥನು ಕೈಕೇಯೀ ಕುಮಾರ ಭರತನಲ್ಲಿ ಹೇಳಿದನು.॥14-15½॥

ಮೂಲಮ್ - 16½

ಅಯಂ ಕೇಕಯರಾಜಸ್ಯ ಪುತ್ರೋ ವಸತಿ ಪುತ್ರಕ ॥
ತ್ವಾಂ ನೇತುಮಾಗತೋ ವೀರೋ ಯುಧಾಜಿನ್ಮಾತುಲಸ್ತವ ।

ಅನುವಾದ

ಮಗು! ನಿನ್ನ ಮಾವನಾದ ಕೇಕೆಯ ರಾಜಕುಮಾರ ವೀರ ಯುಧಾಜಿತ್ತು ನಿನ್ನನ್ನು ಕರೆದುಕೊಂಡು ಹೋಗಲು ಬಂದಿರುವನು. ಅನೇಕ ದಿನಗಳಿಂದ ಇಲ್ಲೇ ಇರುವನು.॥16½॥

ಮೂಲಮ್ - 17½

ಶ್ರುತ್ವಾ ದಶರಥಸ್ಯೈತದ್ ಭರತಃ ಕೇಕಯೀಸುತಃ ॥
ಗಮನಾಯಾಭಿಚಕ್ರಾಮ ಶತ್ರುಘ್ನಸಹಿತಸ್ತದಾ ।

ಅನುವಾದ

ದಶರಥನ ಮಾತನ್ನು ಕೇಳಿ ಕೈಕೇಯಿ ಕುಮಾರ ಭರತನು ಶತ್ರುಘ್ನನೊಂದಿಗೆ ಮಾವನ ಮನೆಗೆ ಹೋಗುವ ವಿಚಾರ ಮಾಡಿದನು.॥17॥

ಮೂಲಮ್ - 18½

ಆಪೃಚ್ಛ್ಯ ಪಿತರಂ ಶೂರೋ ರಾಮಂ ಚಾಕ್ಲಿಷ್ಟಕಾರಿಣಮ್ ॥
ಮಾತೃಶ್ಚಾಪಿ ನರಶ್ರೇಷ್ಠಃ ಶತ್ರುಘ್ನಸಹಿತೋ ಯಯೌ ।

ಅನುವಾದ

ಆ ನರಶ್ರೇಷ್ಠ ಶೂರವೀರನಾದ ಭರತನು ತಂದೆ ದಶರಥನ ಹಾಗೂ ಸುಲಭವಾಗಿ ಎಲ್ಲ ಮಹಾಕಾರ್ಯಗಳನ್ನು ಮಾಡುವ ಶ್ರೀರಾಮನ ಮತ್ತು ಎಲ್ಲ ತಾಯಂದಿರ ಅಪ್ಪಣೆ ಪಡೆದು ಶತ್ರುಘ್ನನೊಂದಿಗೆ ಹೊರಟನು.॥18½॥

ಮೂಲಮ್ - 19½

ಯುಧಾಜಿತ್ ಪ್ರಾಪ್ಯ ಭರತಂ ಸಶತ್ರುಘ್ನಂ ಪ್ರಹರ್ಷಿತಃ ॥
ಸ್ವಪುರಂ ಪ್ರಾಮಿಶದ್ವೀರಃ ಪಿತಾ ತಸ್ಯ ತುತೋಷ ಹ ।

ಅನುವಾದ

ಶತ್ರುಘ್ನ ಸಹಿತ ಭರತನನ್ನು ಜೊತೆಗೆ ಕರೆದುಕೊಂಡು ವೀರ ಯುಧಾಜಿತ್ತು ಬಹಳ ಹರ್ಷದಿಂದ ತನ್ನ ನಗರವನ್ನು ಪ್ರವೇಶಿಸಿದನು. ಇದರಿಂದ ಅವನ ತಂದೆಗೆ ಬಹಳ ಸಂತೋಷವಾಯಿತು.॥19½॥

ಮೂಲಮ್ - 20½

ಗತೇಚ ಭರತೇ ರಾಮೋ ಲಕ್ಷ್ಮಣಶ್ಚ ಮಹಾಬಲಃ ॥
ಪಿತರಂ ವೇದಸಂಕಾಶಂ ಪೂಜಯಾಮಾಸತುಸ್ತದಾ ।

ಅನುವಾದ

ಭರತನು ಹೊರಟು ಹೋದ ಬಳಿಕ ಮಹಾಬಲಿ ಶ್ರೀರಾಮ ಮತ್ತು ಲಕ್ಷ್ಮಣರು ತಮ್ಮ ದೇವರಂತೆ ಇರುವ ತಂದೆಯ ಸೇವೆ-ಪೂಜೆಯಲ್ಲಿ ಮುಳುಗಿದರು.॥20½॥

ಮೂಲಮ್ - 21½

ಪಿತುರಾಜ್ಞಾಂ ಪುರಸ್ಕೃತ್ಯಪೌರಕಾರ್ಯಾಣಿ ಸರ್ವಶಃ ॥
ಚಕಾರ ರಾಮಃ ಸರ್ವಾಣಿ ಪ್ರಿಯಾಣಿ ಚ ಹಿತಾನಿ ಚ ।

ಅನುವಾದ

ತಂದೆಯ ಆಜ್ಞೆಯನ್ನು ಶಿರಸಾವಹಿಸಿ ಅವರು ನಗರವಾಸಿಯರ ಎಲ್ಲ ಕಾರ್ಯವನ್ನು ನೋಡಿಕೊಳ್ಳುವುದು ಹಾಗೂ ಅವರ ಎಲ್ಲ ಪ್ರಿಯವಾದ, ಹಿತಕರ ಕಾರ್ಯಗಳನ್ನು ಮಾಡತೊಡಗಿದರು.॥21½॥

ಮೂಲಮ್ - 22½

ಮಾತೃಭ್ಯೋ ಮಾತೃ ಕಾರ್ಯಾಣಿ ಕೃತ್ವಾ ಪರಮಯಂತ್ರಿತಃ ॥
ಗುರೂಣಾಂ ಗುರುಕಾರ್ಯಾಣಿ ಕಾಲೇ ಕಾಲೇಽನ್ವವೈಕ್ಷತ ।

ಅನುವಾದ

ಅವರು ಬಹಳ ಸಂಯಮದಲ್ಲಿದ್ದು, ಸಮಯಕ್ಕೆ ಸರಿಯಾಗಿ ಮಾತೆಯರ ಅವಶ್ಯಕ ಕಾರ್ಯಗಳನ್ನು ಪೂರ್ಣ ಗೊಳಿಸಿ, ಗುರುಜನರ ಭಾರೀ-ಭಾರೀ ಕಾರ್ಯಗಳನ್ನು ಕೂಡ ಸಿದ್ಧಗೊಳಿಸಲು ಗಮನಕೊಡುತ್ತಿದ್ದರು.॥22½॥

ಮೂಲಮ್ - 23½

ಏವಂ ದಶರಥಃ ಪ್ರೀತೋ ಬ್ರಾಹ್ಮಣಾ ನೈಗಮಾಸ್ತಥಾ ॥
ರಾಮಸ್ಯ ಶೀಲವೃತ್ತೇನ ಸರ್ವೇ ವಿಷಯವಾಸಿನಃ ।

ಅನುವಾದ

ಅವರ ಈ ಸದ್ವರ್ತನೆಯಿಂದ ದಶರಥನು, ವೇದವೇತ್ತರಾದ ಬ್ರಾಹ್ಮಣರು ಹಾಗೂ ವೈಶ್ಯವರ್ಗವು ಬಹಳ ಪ್ರಸನ್ನರಾಗಿದ್ದರು. ಶ್ರೀರಾಮನ ಉತ್ತಮ ಶೀಲ, ಸದ್ ವ್ಯವಹಾರದಿಂದ ಆ ರಾಜ್ಯದಲ್ಲಿ ವಾಸಿಸುತ್ತಿದ್ದವರೆಲ್ಲರೂ ಬಹಳ ಸಂತುಷ್ಟರಾದರು.॥23½॥

ಮೂಲಮ್ - 24½

ತೇಷಾಮತಿಯಶಾ ಲೋಕೇರಾಮಃ ಸತ್ಯಪರಾಕ್ರಮಃ ॥
ಸ್ವಯಂಭೂರಿವ ಭೂತಾನಾಂ ಬಭೂವ ಗುಣವತ್ತರಃ ।

ಅನುವಾದ

ರಾಜನ ನಾಲ್ವರು ಪುತ್ರರಲ್ಲಿ ಸತ್ಯ ಪರಾಕ್ರಮಿ ಶ್ರೀರಾಮನೇ ಲೋಕಗಳಲ್ಲಿ-ಸಮಸ್ತ ಪ್ರಾಣಿಗಳಲ್ಲಿ ಸ್ವಯಂಭೂ ಬ್ರಹ್ಮದೇವರೇ ಅತ್ಯಂತ ಯಶಸ್ವೀ ಮತ್ತು ಮಹಾನ್ ಗುಣವಂತನಾಗಿರುವಂತೆಯೇ ಅತ್ಯಂತ ಯಶಸ್ವೀ ಗುಣವಂತನಾಗಿದ್ದನು.॥24½॥

ಮೂಲಮ್ - 25½

ರಾಮಶ್ಚ ಸೀತಯಾ ಸಾರ್ಧಂ ವಿಜಹಾರ ಬಹೂನೃತೂನ್ ॥
ಮನಸ್ವೀ ತದ್ಗತಮನಾಸ್ತಸ್ಯಾ ಹೃದಿ ಸಮರ್ಪಿತಃ ।

ಅನುವಾದ

ಶ್ರೀರಾಮಚಂದ್ರನು ಸದಾ ಸೀತೆಯ ಹೃದಯ ಮಂದಿರದಲ್ಲಿ ವಿರಾಜಿಸುತ್ತಿದ್ದನು ಹಾಗೂ ಮಹಾತ್ಮಾ ಶ್ರೀರಾಮನ ಮನಸ್ಸೂ ಕೂಡ ಸೀತೆಯಲ್ಲೇ ತೊಡಗಿರುತ್ತಿತ್ತು. ಶ್ರೀರಾಮನು ಸೀತೆಯೊಂದಿಗೆ ಅನೇಕ ಋತುಗಳಲ್ಲಿ ವಿಹರಿಸಿದನು.॥25॥

ಮೂಲಮ್ - 26

ಪ್ರಿಯಾ ತು ಸೀತಾ ರಾಮಸ್ಯ ದಾರಾಃ ಪಿತೃಕೃತಾ ಇತಿ ॥

ಮೂಲಮ್ - 27

ಗುಣಾದ್ರೂಪಗುಣಾಚ್ಚಾಪಿ ಪ್ರೀತಿರ್ಭೂಯೋಽಭಿವರ್ಧತೇ ।
ತಸ್ಯಾಶ್ಚ ಭರ್ತಾ ದ್ವಿಗುಣಂ ಹೃದಯೇ ಪರಿವರ್ತತೇ ॥

ಅನುವಾದ

ಸೀತೆಯು ಶ್ರೀರಾಮನಿಗೆ ಬಹಳ ಪ್ರಿಯಳಾಗಿದ್ದಳು; ಏಕೆಂದರೆ ಆಕೆಯು ರಾಜಾ ಜನಕನಿಂದ ಶ್ರೀರಾಮನಿಗೆ ಪತ್ನಿಯಾಗಿ ಸಮರ್ಪಿತಳಾಗಿದ್ದಳು. ಸೀತೆಯ ಪಾತಿವ್ರತ್ಯವೇ ಆದಿ ಗುಣಗಳಿಂದ ಹಾಗೂ ಆಕೆಯ ಸೌಂದರ್ಯ ಗುಣಗಳಿಂದಲೂ ಶ್ರೀರಾಮನಿಗೆ ಆಕೆಯ ಕುರಿತು ಹೆಚ್ಚೆಚ್ಚು ಪ್ರೇಮ ಬೆಳೆಯುತ್ತಲೇ ಇತ್ತು. ಹೀಗೆ ಸೀತೆಯ ಹೃದಯದಲ್ಲಿಯೂ ತನ್ನ ಪತಿ ಶ್ರೀರಾಮನು ತನ್ನ ಗುಣ ಸೌಂದರ್ಯದ ಕಾರಣ ಇಮ್ಮಡಿಯಾದ ಪ್ರೀತಿಗೆ ಪಾತ್ರನಾಗಿರುತ್ತಿದ್ದನು.॥26-27॥

ಮೂಲಮ್ - 28

ಅಂತರ್ಗತಮಪಿ ವ್ಯಕ್ತಮಾಖ್ಯಾತಿ ಹೃದಯಂ ಹೃದಾ ॥
ತಸ್ಯ ಭೂಯೋವಿಶೇಷೇಣ ಮೈಥಿಲೀ ಜನಕಾತ್ಮಜಾ ।
ದೇವತಾಭಿಃ ಸಮಾ ರೂಪೇ ಸೀತಾ ಶ್ರೀರಿವ ರೂಪಿಣೀ ॥

ಅನುವಾದ

ಜನಕನಂದಿನಿ ಮಿಥಿಲೇಶ ಕುಮಾರಿ ಸೀತೆಯು ಶ್ರೀರಾಮನ ಹೃದ್ಗತ ಅಭಿಪ್ರಾಯವನ್ನು ತನ್ನ ಹೃದಯದಿಂದಲೇ ತಿಳಿಯುತ್ತಿದ್ದಳು ಹಾಗೂ ಸ್ಪಷ್ಟರೂಪವಾಗಿ ತಿಳಿಸುತ್ತಿದ್ದಳು. ಆಕೆಯು ರೂಪದಲ್ಲಿ ದೇವಾಂಗನೆಯರಂತೆ ಇದ್ದು ಮೂರ್ತಿಮಂತ ಲಕ್ಷ್ಮಿಯಂತೆಯೇ ಅನಿಸುತ್ತಿದ್ದಳು.॥28॥

ಮೂಲಮ್ - 29

ತಯಾ ಸ ರಾಜರ್ಷಿಸುತೋಽಭಿಕಾಮಯಾ
ಸಮೇಯಿವಾನುತ್ತಮರಾಜಕನ್ಯಯಾ ।
ಅತೀವ ರಾಮಃ ಶುಶುಭೇ ಮುದಾನ್ವಿತೋ
ವಿಭುಃ ಶ್ರಿಯಾ ವಿಷ್ಣುರಿವಾಮರೇಶ್ವರಃ ॥

ಅನುವಾದ

ಶ್ರೇಷ್ಠ ರಾಜಕುಮಾರಿ ಸೀತೆಯು ಶ್ರೀರಾಮನ ಕಾಮನೆಯನ್ನು ಇರಿಸುತ್ತಿದ್ದಳು ಹಾಗೂ ಶ್ರೀರಾಮನೂ ಕೂಡ ಏಕಮಾತ್ರ ಆಕೆಯನ್ನೇ ಬಯಸುತ್ತಿದ್ದನು. ಲಕ್ಷ್ಮಿಯೊಂದಿಗೆ ದೇವೇಶ್ವರ ಭಗವಾನ್ ವಿಷ್ಣುವು ಶೋಭಿಸುತ್ತಿರುವಂತೆಯೇ ಸೀತಾದೇವಿಯೊಂದಿಗೆ ರಾಜರ್ಷಿ ದಶರಥ ಕುಮಾರ ಶ್ರೀರಾಮನು ಪರಮ ಪ್ರಸನ್ನನಾಗಿದ್ದು ಬಹಳ ಶೋಭಿಸುತ್ತಿದ್ದನು.॥29॥

ಮೂಲಮ್ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಎಪ್ತತ್ತೇಳನೆಯ ಸರ್ಗ ಪೂರ್ಣವಾಯಿತು.॥77॥
ಬಾಲಕಾಂಡ ಸಂಪೂರ್ಣವಾಯಿತು.