०७५ शिवधनुर्वृत्तान्तम्

वाचनम्
ಭಾಗಸೂಚನಾ

ದಶರಥನ ಮಾತನ್ನು ತಿರಸ್ಕರಿಸುತ್ತಾ ಪರಶುರಾಮನು ಶ್ರೀರಾಮನಿಗೆ ವೈಷ್ಣವ ಧನುಸ್ಸಿಗೆ ಹೆದೆಯೇರಿಸಲು ಹೇಳಿದುದು

ಮೂಲಮ್ - 1

ರಾಮ ದಾಶರಥೇ ವೀರ ವೀರ್ಯಂ ತೇ ಶ್ರೂಯತೇಽದ್ಭುತಮ್ ।
ಧನುಷೋ ಭೇದನಂ ಚೈವ ನಿಖಿಲೇನ ಮಯಾ ಶ್ರುತಮ್ ॥

ಅನುವಾದ

ದಶರಥನಂದನ ಶ್ರೀರಾಮಾ! ವೀರನೇ! ನಿನ್ನ ಪರಾಕ್ರಮ ಅದ್ಭುತವಾಗಿದೆ ಎಂದು ಕೇಳಲಾಗುತ್ತದೆ. ನೀನು ಶಿವನ ಧನುಸ್ಸನ್ನು ಮುರಿದ ಸಮಾಚಾರವು ನನ್ನ ಕಿವಿಗೆ ಬಿದ್ದಿದೆ.॥1॥

ಮೂಲಮ್ - 2

ತದದ್ಭುತಮಚಿಂತ್ಯಂ ಚ ಭೇದನಂ ಧನುಷಸ್ತಥಾ ।
ತಚ್ಛ್ರುತ್ವಾಹಮನುಪ್ರಾಪ್ತೋ ಧನುರ್ಗೃಹ್ಯಾಪರಂ ಶುಭಮ್ ॥

ಅನುವಾದ

ಆ ಧನುಸ್ಸನ್ನು ಮುರಿಯುವುದು ಅದ್ಭುತ ಹಾಗೂ ಅಚಿಂತ್ಯವಾಗಿದೆ. ಅದು ತುಂಡಾದ ಮಾತನ್ನು ಕೇಳಿ ನಾನು ಇನ್ನೊಂದು ಉತ್ತಮ ಧನುಸ್ಸನ್ನು ತೆಗೆದುಕೊಂಡು ಬಂದಿರುವೆನು.॥2॥

ಮೂಲಮ್ - 3

ತದಿದಂ ಘೋರಸಂಕಾಶಂ ಜಾಮದಗ್ನ್ಯಂ ಮಹದ್ಧನುಃ ।
ಪೂರಯಸ್ವ ಶರೇಣೈವ ಸ್ವಬಲಂ ದರ್ಶಯಸ್ವ ಚ ॥

ಅನುವಾದ

ಇದೋ ಇದು ಜಮದಗ್ನಿಯ ಕುಮಾರ ಪರಶುರಾಮನ ಭಯಂಕರ ಮತ್ತು ವಿಶಾಲ ಧನುಸ್ಸಾಗಿದೆ. ನೀನು ಇದನ್ನು ಸೆಳೆದು ಇದಕ್ಕೆ ಬಾಣವನ್ನು ಹೂಡಿ ನಿನ್ನ ಬಲವನ್ನು ತೋರಿಸು.॥3॥

ಮೂಲಮ್ - 4

ತದಹಂ ತೇ ಬಲಂ ದೃಷ್ಟ್ವಾ ಧನುಷೋಽಪ್ಯಸ್ಯ ಪೂರಣೇ ।
ದ್ವಂದ್ವಯುದ್ಧಂ ಪ್ರದಾಸ್ಯಾಮಿ ವೀರ್ಯಶ್ಲಾಘ್ಯಮಹಂ ತವ ॥

ಅನುವಾದ

ನೀನು ಈ ಮಹಾ ಧನುಸ್ಸಿನ ತೋಲನ - ಪೂರಣ - ಶರಸಂಧಾನಾದಿಗಳನ್ನು ಮಾಡಿ, ನಿನ್ನ ಅದ್ಭುತ ಬಲವನ್ನು ತೊರಿಸಿದೆಯಾದರೆ, ಬಳಿಕ ನಾನು ನಿನಗೆ ವೀರ್ಯಶ್ಲಾಘ್ಯವಾದ ದ್ವಂದ್ವ ಯುದ್ಧವನ್ನು ಕೊಡುತ್ತೇನೆ.॥4॥

ಮೂಲಮ್ - 5

ತಸ್ಯ ತದ್ವಚನಂ ಶ್ರುತ್ವಾ ರಾಜಾ ದಶರಥಸ್ತದಾ ।
ವಿಷಣ್ಣವದನೋ ದೀನಃ ಪ್ರಾಂಜಲಿರ್ವಾಕ್ಯಮಬ್ರವೀತ್ ॥

ಅನುವಾದ

ಪರಶುರಾಮನ ಮಾತನ್ನು ಕೇಳಿ ಆಗ ದಶರಥನ ಮುಖದಲ್ಲಿ ವಿಷಾದ ಆವರಿಸಿತು. ಅವನು ದೀನಭಾವದಿಂದ ಕೈಮುಗಿದು ಹೇಳಿದನು.॥5॥

ಮೂಲಮ್ - 6

ಕ್ಷತ್ರರೋಷಾತ್ಪ್ರಶಾಂತಸ್ತ್ವಂ ಬ್ರಾಹ್ಮಣಶ್ಚ ಮಹಾತಪಾಃ ।
ಬಾಲಾನಾಂ ಮಮ ಪುತ್ರಾಣಾಮಭಯಂ ದಾತುಮರ್ಹಸಿ ॥

ಮೂಲಮ್ - 7

ಭಾರ್ಗವಾಣಾಂ ಕುಲೇ ಜಾತಃ ಸ್ವಾಧ್ಯಾಯವ್ರತಶಾಲಿನಾಮ್ ।
ಸಹಸ್ರಾಕ್ಷೇ ಪ್ರತಿಜ್ಞಾಯ ಶಸ್ತ್ರಂ ಪ್ರಕ್ಷಿಪ್ತವಾನಸಿ ॥

ಅನುವಾದ

ಬ್ರಾಹ್ಮಣೊತ್ತಮನೇ! ತಾವು ಸ್ವಾಧ್ಯಾಯ, ವ್ರತದಿಂದ ಶೋಭಿಸುವ ಭೃಗುವಂಶೀ ಬ್ರಾಹ್ಮಣರ ಕುಲದಲ್ಲಿ ಉತ್ಪನ್ನರಾಗಿ ಸ್ವತಃ ಮಹಾತಪಸ್ವೀ ಬ್ರಹ್ಮಜ್ಞಾನಿಗಳಾಗಿರುವಿರಿ. ಕ್ಷತ್ರಿಯರ ಮೇಲೆ ರೋಷ ಪ್ರಕಟಸಿ ಈಗ ಶಾಂತರಾಗಿರುವಿರಿ, ಅದಕ್ಕಾಗಿ ನನ್ನ ಪುತ್ರರಿಗೆ ನೀವು ಅಭಯದಾನ ಕೊಡುವ ಕೃಪೆ ಮಾಡಬೇಕು. ಏಕೆಂದರೆ ತಾವು ಇಂದ್ರನ ಬಳಿ ಪ್ರತಿಜ್ಞೆ ಮಾಡಿ ಶಸ್ತ್ರಗಳನ್ನು ತ್ಯಾಗ ಮಾಡಿ ಬಿಟ್ಟಿರುವಿರಿ.॥6-7॥

ಮೂಲಮ್ - 8

ಸ ತ್ವಂ ಧರ್ಮಪರೋ ಭೂತ್ವಾ ಕಶ್ಯಪಾಯ ವಸುಂಧರಾಮ್ ।
ದತ್ತ್ವಾವನಮುಪಾಗಮ್ಯ ಮಹೇಂದ್ರಕೃತಕೇತನಃ ॥

ಅನುವಾದ

ಹೀಗೆ ತಾವು ಧರ್ಮದಲ್ಲಿ ತತ್ಪರರಾಗಿ ಕಶ್ಯಪರಿಗೆ ಭೂಮಿಯನ್ನು ದಾನ ಮಾಡಿ ವನಕ್ಕೆ ಹೋಗಿ ಮಹೇಂದ್ರ ಪರ್ವತದಲ್ಲಿ ಆಶ್ರಮ ರಚಿಸಿಕೊಂಡು ಇರುತ್ತೀರಿ.॥8॥

ಮೂಲಮ್ - 9

ಮಮ ಸರ್ವವಿನಾಶಾಯ ಸಂಪ್ರಾಪ್ತಸ್ತ್ವಂ ಮಹಾಮುನೇ ।
ನ ಚೈಕಸ್ಮಿನ್ ಹತೇ ರಾಮೇ ಸರ್ವೇ ಜೀವಾಮಹೇ ವಯಮ್ ॥

ಅನುವಾದ

ಮಹಾಮುನೇ! (ಈ ಪ್ರಕಾರ ಶಸ್ತ್ರತ್ಯಾಗದ ಪ್ರತಿಜ್ಞೆ ಮಾಡಿದರೂ) ತಾವು ನಮ್ಮ ಸರ್ವನಾಶ ಮಾಡಲಿಕ್ಕಾಗಿ ಹೇಗೆ ಬಂದಿರುವಿರಿ? (ನನ್ನ ರೋಷವಾದರೋ ಕೇವಲ ರಾಮನ ಮೇಲೆಯೇ ಇದೆ ಎಂದು ಹೇಳಿದರೆ-) ಏಕಮಾತ್ರ ರಾಮನನ್ನು ಕೊಂದರೆ ನಾವು ಯಾರೂ ಬದುಕಿರಲಾರೆವು.॥9॥

ಮೂಲಮ್ - 10

ಬ್ರುವತ್ಯೇವಂ ದಶರಥೇಜಾಮದಗ್ನ್ಯಃ ಪ್ರತಾಪವಾನ್ ।
ಅನಾದೃತ್ಯ ತು ತದ್ವಾಕ್ಯಂ ರಾಮಮೇವಾಭ್ಯಭಾಷತ ॥

ಅನುವಾದ

ದಶರಥನು ಹೀಗೆ ಹೇಳುತ್ತಲೇ ಇದ್ದನು. ಆದರೆ ಪ್ರತಾಪಿ ಪರಶುರಾಮನು ಅವನ ಮಾತನ್ನು ಲೆಕ್ಕಿಸದೆ ಶ್ರೀರಾಮನಲ್ಲೇ ಮಾತುಕತೆಯಲ್ಲೇ ತೊಡಗಿದ್ದನು.॥10॥

ಮೂಲಮ್ - 11

ಇಮೇ ದ್ವೇ ಧನುಷೀ ಶ್ರೇಷ್ಠೇ ದಿವ್ಯೇ ಲೋಕಾಭಿಪೂಜಿತೇ ।
ದೃಢೇ ಬಲವತೀ ಮುಖ್ಯೇ ಸುಕೃತೇ ವಿಶ್ವಕರ್ಮಣಾ ॥

ಅನುವಾದ

ಪರಶುರಾಮನು ಹೇಳಿದನು - ರಘುನಂದನ! ಇವೆರಡು ಧನುಸ್ಸುಗಳು ಶ್ರೇಷ್ಠ ಮತ್ತು ದಿವ್ಯವಾಗಿದ್ದವು. ಇಡೀ ಜಗತ್ತು ಇವನ್ನು ಪೂಜಿಸುತ್ತಿತ್ತು. ಸಾಕ್ಷಾತ್ ವಿಶ್ವಕರ್ಮನೇ ಇವನ್ನು ನಿರ್ಮಿಸಿದ್ದನು. ಇವು ಪ್ರಬಲ ಮತ್ತು ದೃಢವಾಗಿದ್ದವು.॥11॥

ಮೂಲಮ್ - 12

ಅನುಸೃಷ್ಟಂ ಸುರೈರೇಕಂ ತ್ರ್ಯಂಬಕಾಯಯುಯುತ್ಸವೇ
ತ್ರಿಪುರಘ್ನಂ ನರಿಶ್ರೇಷ್ಠ ಭಗ್ನಂ ಕಾಕುತ್ಸ್ಥ ಯತ್ತ್ವಯಾ ॥

ಅನುವಾದ

ನರಶ್ರೇಷ್ಠನೇ! ಇವುಗಳಲ್ಲಿ ಒಂದನ್ನು ದೇವತೆಗಳು ತ್ರಿಪುರನ್ನು ಕೊಲ್ಲಲು ಭಗವಾನ್ ಶಂಕರನಿಗೆ ಕೊಟ್ಟಿದ್ದರು. ಕಾಕುತ್ಸ್ಥನೇ! ಅದರಿಂದ ತ್ರಿಪುರನ ನಾಶವಾಗಿತ್ತು. ನೀನು ಮುರಿದು ಹಾಕಿದ ಧನುಸ್ಸು ಅದೇ ಆಗಿತ್ತು.॥12॥

ಮೂಲಮ್ - 13

ಇದಂ ದ್ವಿತೀಯಂ ದುರ್ಧರ್ಷಂ ವಿಷ್ಣೋರ್ದತ್ತಂಸುರೋತ್ತಮೈಃ ।
ತದಿದಂ ವೈಷ್ಣವಂ ರಾಮಧನುಃ ಪರಪುರಂಜಯಮ್ ॥

ಅನುವಾದ

ಇನ್ನೊಂದು ದುರ್ಧರ್ಷ ಧನುಸ್ಸು ಇದೇ ನನ್ನ ಕೈಯಲ್ಲೇ ಇದೆ. ಇದನ್ನು ದೇವತೆಗಳು ಭಗವಾನ್ ವಿಷ್ಣುವಿಗೆ ಕೊಟ್ಟಿದ್ದರು. ಶ್ರೀರಾಮಾ! ಶತ್ರುನಗರವನ್ನು ಜಯಿಸುವ ವೈಷ್ಣವ ಧನಸ್ಸು ಇದೇ ಆಗಿದೆ.॥13॥

ಮೂಲಮ್ - 14½

ಸಮಾನಸಾರಂ ಕಾಕುತ್ಸ್ಥ ರೌದ್ರೇಣ ಧನುಷಾತ್ವಿದಮ್ ।
ತದಾ ತು ದೇವತಾಃ ಸರ್ವಾಃ ಪೃಚ್ಛಂತಿ ಸ್ಮ ಪಿತಾಮಹಮ್ ॥
ಶಿತಿಕಂಠಸ್ಯ ವಿಷ್ಣೋಶ್ಚ ಬಲಾಬಲನಿರೀಕ್ಷಯಾ ।

ಅನುವಾದ

ಕಾಕುತ್ಸ್ಥನೇ! ಇದೂ ಕೂಡ ಶಿವ ಧನುಸ್ಸಿನಂತೆ ಪ್ರಬಲವಾಗಿದೆ. ಹಿಂದೆ ಸಮಸ್ತ ದೇವತೆಗಳು ಭಗವಾನ್ ಶಿವ ಮತ್ತು ವಿಷ್ಣುವಿನ ಬಲಾಬಲದ ಕುರಿತು ಬ್ರಹ್ಮದೇವರಲ್ಲಿ ಕೇಳಿದರು - ಇವರಿಬ್ಬರಲ್ಲಿ ಯಾರು ಹೆಚ್ಚು ಬಲಶಾಲಿಗಳು.॥14½॥

ಮೂಲಮ್ - 15½

ಅಭಿಪ್ರಾಯಂ ತು ವಿಜ್ಞಾಯ ದೇವತಾನಾಂ ಪಿತಾಮಹಃ ॥
ವಿರೋಧಂ ಜನಯಾಮಾಸ ತಯೋಃ ಸತ್ಯವತಾಂ ವರಃ ।

ಅನುವಾದ

ದೇವತೆಗಳ ಅಭಿಪ್ರಾಯವನ್ನು ತಿಳಿದು ಸತ್ಯವಾದಿಗಳಲ್ಲಿ ಶ್ರೇಷ್ಠರಾದ ಪಿತಾಮಹ ಬ್ರಹ್ಮದೇವರು ಹರಿ-ಹರರಲ್ಲಿ ಪರಸ್ಪರ ವಿರೋಧ ಉಂಟಾಗುವಂತೆ ಮಾಡಿದರು.॥15½॥

ಮೂಲಮ್ - 16½

ವಿರೋಧೇ ತು ಮಹದ್ಯುದ್ಧಮಭವದ್ರೋಮಹರ್ಷಣಮ್ ॥
ಶಿತಿಕಂಠಸ್ಯ ವಿಷ್ಣೋಶ್ಚ ಪರಸ್ಪರಜಯೈಷಿಣೋಃ ।

ಅನುವಾದ

ವಿರೋಧ ಉಂಟಾದಾಗ ಒಬ್ಬರು ಮತ್ತೊಬ್ಬರನ್ನು ಜಯಿಸುವ ಇಚ್ಛೆಯುಳ್ಳ ಹರಿ-ಹರರಿಬ್ಬರಿಗೂ ರೋಮಾಂಚಕರ ಘೋರ ಯುದ್ಧ ಪ್ರಾರಂಭವಾಯಿತು.॥16½॥

ಮೂಲಮ್ - 17½

ತದಾ ತು ಜೃಂಭಿತಂ ಶೈವಂಧನುರ್ಭೀಮಪರಾಕ್ರಮಮ್ ॥
ಹುಂಕಾರೇಣ ಮಹಾದೇವಃ ಸ್ತಂಭಿತೋಽಥ ತ್ರಿಲೋಚನಃ ।

ಅನುವಾದ

ಆ ಸಮಯದಲ್ಲಿ ಭಗವಾನ್ ವಿಷ್ಣುವು ಹುಂಕಾರ ಮಾತ್ರದಿಂದಲೇ ಶಿವನ ಬಲಶಾಲಿ ಧನುಸ್ಸನ್ನು ಶಿಥಿಲ ಗೊಳಿಸಿ, ತ್ರಿನೇತ್ರಧಾರೀ ಮಹಾದೇವನನ್ನು ಸ್ತಂಭೀಭೂತವಾಗಿಸಿದನು.॥17½॥

ಮೂಲಮ್ - 18½

ದೇವೈಸ್ತದಾ ಸಮಾಗಮ್ಯ ಸರ್ಷಿಸಂಘೈಃ ಸಚಾರಣೈಃ ॥
ಯಾಚಿತೌ ಪ್ರಶಮಂ ತತ್ರಜಗ್ಮತುಸ್ತೌ ಸುರೋತ್ತವೌ ।

ಅನುವಾದ

ಆಗ ಋಷಿಗಳು, ಚಾರಣರೂ ಸಹಿತ ದೇವತೆಗಳೆಲ್ಲ ಬಂದು ಆ ಶ್ರೇಷ್ಠದೇವತೆಗಳನ್ನು ಶಾಂತರಾಗುವಂತೆ ಪ್ರಾರ್ಥಿಸಿದರು ಮತ್ತೆ ಅವರಿಬ್ಬರೂ ಶಾಂತರಾದರು.॥18½॥

ಮೂಲಮ್ - 19½

ಜೃಂಭಿತಂ ತದ್ಧನುರ್ದೃಷ್ಟ್ವಾ ಶೈವಂ ವಿಷ್ಣುಪರಾಕ್ರಮೈಃ ॥
ಅಧಿಕಂ ಮೇನಿರೇ ವಿಷ್ಣುಂದೇವಾಃ ಸರ್ಷಿಗಣಾಸ್ತಥಾ ।

ಅನುವಾದ

ಭಗವಾನ್ ವಿಷ್ಣುವಿನ ಪರಾಕ್ರಮದಿಂದ ಶಿವನ ಧನುಸ್ಸು ಶಿಥಿಲವಾದುದನ್ನು ನೋಡಿ ಋಷಿಗಳ ಸಹಿತ ದೇವತೆಗಳು ಭಗವಾನ್ ವಿಷ್ಣುವನ್ನು ಶ್ರೇಷ್ಠನೆಂದು ತಿಳಿದರು.॥19½॥

ಮೂಲಮ್ - 20½

ಧನೂ ರುದ್ರಸ್ತು ಸಂಕ್ರುದ್ಧೋ ವಿದೇಹೇಷು ಮಹಾಯಶಾಃ ॥
ದೇವರಾತಸ್ಯ ರಾಜರ್ಷೇರ್ದದೌ ಹಸ್ತೇ ಸಸಾಯಕಮ್ ।

ಅನುವಾದ

ಅನಂತರ ಕುಪಿತನಾದ ಮಹಾಯಶಸ್ವಿ ರುದ್ರನು ಬಾಣಸಹಿತ ತನ್ನ ಧನುಸ್ಸನ್ನು ವಿದೇಹ ರಾಜರ್ಷಿ ದೇವರಾತನ ಕೈಗೆ ಒಪ್ಪಿಸಿದನು.॥20½॥

ಮೂಲಮ್ - 21

ಇದಂ ಚ ವೈಷ್ಣವಂ ರಾಮ ಧನುಃ ಪರಪುರಂಜಯಮ್ ॥
ಋಚೀಕೇ ಭಾರ್ಗವೇ ಪ್ರಾದಾದ್ವಿಷ್ಣುಃ ಸ ನ್ಯಾಸಮುತ್ತಮಮ್ ।

ಅನುವಾದ

ಶ್ರೀರಾಮಾ! ಶತ್ರುನಗರವನ್ನು ಗೆಲ್ಲಬಲ್ಲ ಈ ವೈಷ್ಣವ ಧನುಸ್ಸನ್ನು ಭಗವಾನ್ ವಿಷ್ಣುವು ಭೃಗುವಂಶೀ ಋಚೀಕ ಮುನಿಗಳಿಗೆ ನ್ಯಾಸರೂಪವಾಗಿ ಕೊಟ್ಟನು.॥21॥

ಮೂಲಮ್ - 22½

ಋಚೀಕಸ್ತು ಮಹಾತೇಜಾಃ ಪುತ್ರಸ್ಯಾಪ್ರತಿಕರ್ಮಣಃ ॥
ಪಿತುರ್ಮಮ ದದೌದಿವ್ಯಂ ಜಮದಗ್ನೇರ್ಮಹಾತ್ಮನಃ ।

ಅನುವಾದ

ಮತ್ತೆ ಮಹಾತೇಜಸ್ವೀ ಋಚೀಕರು ಪ್ರತೀಕಾರ ಭಾವನಾರಹಿತನಾದ ತನ್ನ ಪುತ್ರ ಹಾಗೂ ನನ್ನ ತಂದೆ ಮಹಾತ್ಮ ಜಮದಗ್ನಿಗೆ ಈ ದಿವ್ಯಧನುಸ್ಸನ್ನು ಕೊಟ್ಟರು.॥22½॥

ಮೂಲಮ್ - 23½

ನ್ಯಸ್ತಶಸ್ತ್ರೇ ಪಿತರಿ ಮೇ ತಪೋಬಲಸಮನ್ವಿತೇ ॥
ಅರ್ಜುನೋ ವಿದಧೇ ಮೃತ್ಯುಂ ಪ್ರಾಕೃತಾಂಬುದ್ಧಿಮಾಸ್ಥಿತಃ ।

ಅನುವಾದ

ತಪೋಬಲ ಸಂಪನ್ನರಾದ ನನ್ನ ತಂದೆ ಜಮದಗ್ನಿಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಧ್ಯಾನಸ್ಥರಾಗಿ ಕುಳಿತ್ತಿದ್ದಾಗ, ಪ್ರಾಕೃತ ಬುದ್ಧಿಯ ಕಾರ್ತವೀರ್ಯಾರ್ಜುನನು ಅವರನ್ನು ಕೊಂದು ಹಾಕಿದನು.॥23½॥

ಮೂಲಮ್ - 24

ವಧಮಪ್ರತಿರೂಪಂ ತು ಪಿತುಃ ಶ್ರುತ್ವಾಸುದಾರುಣಮ್ ।
ಕ್ಷತ್ರಮುತ್ಸಾಯದಂ ರೋಷಾಜ್ಜಾತಂ ಜಾತಮನೇಕಶಃ ॥

ಅನುವಾದ

ತಂದೆಯವರಿಗೆ ಯೋಗ್ಯವಲ್ಲದ ಈ ಅತ್ಯಂತ ಭಯಂಕರ ವಧೆಯ ಸಮಾಚಾರ ಕೇಳಿ ನಾನು ರೋಷದಿಂದ ಪದೇ-ಪದೇ ಉತ್ಪನ್ನರಾದ ಕ್ಷತ್ರಿಯರನ್ನು ಅನೇಕ ಸಲ ಸಂಹಾರ ಮಾಡಿದೆ.॥24॥

ಮೂಲಮ್ - 25

ಪೃಥಿವೀಂ ಚಾಖಿಲಾಂ ಪ್ರಾಪ್ಯ ಕಶ್ಯಪಾಯಮಹಾತ್ಮನೇ ।
ಯಜ್ಞಸ್ಯಾಂತೇಽದದಂ ರಾಮ ದಕ್ಷಿಣಾಂ ಪುಣ್ಯಕರ್ಮಣೇ ॥

ಅನುವಾದ

ಶ್ರೀರಾಮಾ! ಮತ್ತೆ ಇಡೀ ಪೃಥ್ವಿಯ ಮೇಲೆ ಅಧಿಕಾರ ಸ್ಥಾಪಿಸಿ ನಾನು ಒಂದು ಯಜ್ಞಮಾಡಿದೆ. ಆ ಯಜ್ಞ ಸಮಾಪ್ತಿಯಲ್ಲಿ ಪುಣ್ಯಕರ್ಮಾ ಮಹಾತ್ಮಾ ಕಶ್ಯಪರಿಗೆ ದಕ್ಷಿಣೆಯಾಗಿ ಇಡೀ ಭೂಮಿಯನ್ನು ದಾನ ಮಾಡಿದೆ.॥25॥

ಮೂಲಮ್ - 26

ದತ್ತ್ವಾ ಮಹೇಂದ್ರನಿಲಯಸ್ತಪೋಬಲಸಮನ್ವಿತಃ ।
ಶ್ರುತ್ವಾ ತು ಧನುಷೋ ಭೇದಂ ತತೋಽಹಂ ದ್ರುತಮಾಗತಃ ॥

ಅನುವಾದ

ಪೃಥ್ವಿಯನ್ನು ದಾನಮಾಡಿ ನಾನು ಮಹೇಂದ್ರ ಪರ್ವತದಲ್ಲಿ ಇರತೊಡಗಿ, ಅಲ್ಲಿ ತಪಸ್ಸು ಮಾಡಿ ತಪೋಬಲ ಸಂಪನ್ನನಾದೆ. ಶಿವನ ಧನುಸ್ಸು ಮುರಿದ ಸಮಾಚಾರ ಕೇಳಿ ಅಲ್ಲಿಂದ ನಾನು ಶೀಘ್ರವಾಗಿ ಇಲ್ಲಿಗೆ ಬಂದಿರುವೆನು.॥26॥

ಮೂಲಮ್ - 27

ತದೇವಂ ವೈಷ್ಣವಂ ರಾಮ ಪಿತೃಪೈತಾಮಹಂ ಮಹತ್ ।
ಕ್ಷತ್ರಧರ್ಮಂ ಪುರಸ್ಕೃತ್ಯ ಗೃಹ್ಣೀಷ್ವ ಧನುರುತ್ತಮಮ್ ॥

ಮೂಲಮ್ - 28

ಯೋಜಯಸ್ವ ಧನುಃಶ್ರೇಷ್ಠೇ ಶರಂ ಪರಪುರಂಜಯಮ್ ।
ಯದಿ ಶಕ್ತೋಽಸಿ ಕಾಕುತ್ಸ್ಥ ದ್ವಂದ್ವಂ ದಾಸ್ಯಾಮಿ ತೇ ತತಃ ॥

ಅನುವಾದ

ಶ್ರೀರಾಮಾ! ಹೀಗೆ ಈ ಮಹಾ ವೈಷ್ಣವ ಧನುಸ್ಸು ನನ್ನ ತಂದೆ, ಅಜ್ಜಂದಿರ ಅಧಿಕಾರದಲ್ಲಿ ಇದ್ದು ನನ್ನ ಬಳಿಗೆ ಬಂದಿದೆ; ಈಗ ನೀನು ಕ್ಷತ್ರಿಯ ಧರ್ಮವನ್ನು ಪುರಸ್ಕರಿಸಿ ಈ ಧನುಸ್ಸನ್ನು ಕೈಗೆ ಎತ್ತಿಕೋ ಮತ್ತು ಈ ಧನುಸ್ಸನ್ನು ಬಗ್ಗಿಸಿ, ಶತ್ರುನಗರದ ಮೇಲೆ ವಿಜಯ ಸಾಧಿಸಲು ಸಮರ್ಥವಾದ ಬಾಣವನ್ನು ಹೂಡು. ನೀನು ಹೀಗೆ ಮಾಡಿದರೆ ನಾನು ನಿನ್ನೊಡನೆ ದ್ವಂದ್ವ ಯುದ್ಧ ಮಾಡುವೆನು.॥27-28॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಎಪ್ಪತ್ತೈದನೆಯ ಸರ್ಗ ಪೂರ್ಣವಾಯಿತು.॥75॥