०७४ परशुरामागमनम्

वाचनम्
ಭಾಗಸೂಚನಾ

ವಿಶ್ವಾಮಿತ್ರರು ತಮ್ಮ ಆಶ್ರಮಕ್ಕೆ ತೆರಳಿದುದು, ಜನಕನು ಹೆಣ್ಣುಮಕ್ಕಳಿಗೆ ಅಪಾರವಾದ ಬಳುವಳಿಗಳನ್ನು ಕೊಟ್ಟು ದಶರಥನೊಡನೆ ಕಳುಹಿಸಿಕೊಟ್ಟಿದ್ದು, ಮಾರ್ಗದಲ್ಲಿ ಶುಭಾಶುಭ ಶಕುನಗಳು, ಪರಶುರಾಮನ ಆಗಮನ

ಮೂಲಮ್ - 1

ಅಥ ರಾತ್ರ್ಯಾಂ ವ್ಯತೀತಾಯಂ ವಿಶ್ವಾಮಿತ್ರೋ ಮಹಾಮುನಿಃ ।
ಅಪೃಷ್ಟ್ವಾ ತೌ ಚ ರಾಜಾನೌ ಜಗಾಮೋತ್ತರಪರ್ವತಮ್ ॥

ಅನುವಾದ

ರಾತ್ರಿ ಕಳೆದು ಬೆಳಗಾದಾಗ ಮಹಾಮುನಿ ವಿಶ್ವಾಮಿತ್ರರು ರಾಜಾ ಜನಕ ಮತ್ತು ದಶರಥ ರಾಜನ ಅನುಮತಿಯನ್ನು ಪಡೆದು ಹಿಮವತ್ ಪರ್ವತದ ಕೌಶಿಕೀ ನದೀ ತಟದಲ್ಲಿದ್ದ ತಮ್ಮ ಆಶ್ರಮಕ್ಕೆ ಹೊರಟುಹೋದರು.॥1॥

ಮೂಲಮ್ - 2

ವಿಶ್ವಾಮಿತ್ರೇ ಗತೇ ರಾಜಾ ವೈದೇಹಂ ಮಿಥಿಲಾಧಿಪಮ್ ।
ಅಪೃಷ್ಟ್ವೈವ ಜಗಾಮಾಶು ರಾಜಾ ದಶರಥಃ ಪುರೀಮ್ ॥

ಅನುವಾದ

ವಿಶ್ವಾಮಿತ್ರರು ಹೊರಟು ಹೋದ ಬಳಿಕ ದಶರಥನೂ ಕೂಡ ಮಿಥಿಲಾ ನರೇಶನ ಅನುಮತಿಯನ್ನು ಪಡೆದು ಶೀಘ್ರವಾಗಿ ತನ್ನ ಅಯೋಧ್ಯೆಗೆ ಹೋಗಲು ಸಿದ್ಧನಾದನು.॥2॥

ಮೂಲಮ್ - 3

ಅಥ ರಾಜಾ ವಿದೇಹಾನಾಂ ದದೌ ಕನ್ಯಾಧನಂ ಬಹು ।
ಗವಾಂ ಶತಸಹಸ್ರಾಣಿ ಬಹೂನಿ ಮಿಥಿಲೇಶ್ವರಃ ॥

ಮೂಲಮ್ - 4

ಕಂಬಲಾನಾಂ ಚ ಮುಖ್ಯಾನಾಂ ಕ್ಷೌಮಾನ್ ಕೋಟ್ಯಂಬರಾಣಿ ಚ ।
ಹಸ್ತಶ್ವರಥಪಾದಾತಂ ದಿವ್ಯರೂಪಂ ಸ್ವಲಂಕೃತಮ್ ॥

ಅನುವಾದ

ಆಗ ಜನಕನು ತನ್ನ ಕನ್ಯೆಯರಿಗಾಗಿ ಬಳುವಳಿಯಾಗಿ ಬಹಳಷ್ಟು ಧನವನ್ನೂ, ಅನೇಕ ಲಕ್ಷ ಗೋವುಗಳನ್ನೂ ಕೋಟಿ ಸಂಖ್ಯೆಯಲ್ಲಿ ಉತ್ತಮವಾದ ಜರತಾರೀ ರೇಶ್ಮೆ ಮತ್ತು ಹತ್ತಿಯ ಬಟ್ಟೆಗಳನ್ನೂ, ಬಗೆಬಗೆಯ ಆಭರಣಗಳಿಂದ ಅಲಂಕೃತವಾದ ಅನೇಕ ದಿವ್ಯ ಗಜ, ಹಯ, ರಥಗಳನ್ನೂ ಕಾಲಾಳುಗಳನ್ನೂ ಉಡುಗೊರೆಯಾಗಿ ಕೊಟ್ಟನು.॥3-4॥

ಮೂಲಮ್ - 5

ದದೌ ಕನ್ಯಾಶತಂ ತಾಸಾಂ ದಾಸೀದಾಸಮನುತ್ತಮಮ್ ।
ಹಿರಣ್ಯಸ್ಯ ಸುವರ್ಣಸ್ಯ ಮುಕ್ತಾನಾಂ ವಿದ್ರುಮಸ್ಯ ಚ ॥

ಅನುವಾದ

ತಮ್ಮ ಪುತ್ರಿಯರಿಗಾಗಿ ಸಖಿಯ ರೂಪದಲ್ಲಿ ನೂರು-ನೂರು ಕನ್ಯೆಯರನ್ನು ಮತ್ತು ಉತ್ತಮ ಅಸಂಖ್ಯ ದಾಸ- ದಾಸಿಯರನ್ನು ಅರ್ಪಿಸಿದನು. ಇವಲ್ಲದೆ ರಾಜನು ಕನ್ಯೆಯರಿಗೆ ಒಂದು ಕೋಟಿ ಸ್ವರ್ಣಮುದ್ರೆಗಳನ್ನೂ, ರಜತ ಮುದ್ರೆಗಳನ್ನೂ, ಮುತ್ತು ಹವಳಗಳನ್ನೂ ಕೊಟ್ಟನು.॥5॥

ಮೂಲಮ್ - 6

ದದೌ ರಾಜಾಸುಸಂತುಷ್ಟಃ ಕನ್ಯಾಧನಮನುತ್ತಮಮ್ ।
ದತ್ತ್ವಾ ಬಹುವಿಧಂ ರಾಜಾ ಸಮನುಜ್ಞಾಪ್ಯ ಪಾರ್ಥಿವಮ್ ॥

ಮೂಲಮ್ - 7½

ಪ್ರವಿವೇಶ ಸ್ವನಿಲಯಂ ಮಿಥಿಲಾಂ ಮಿಥಿಲೇಶ್ವರಃ ।
ರಾಜಾಪ್ಯಯೋಧ್ಯಾಪತಿಃ ಸಹ ಪುತ್ರೈರ್ಮಹಾತ್ಮಭಿಃ ॥
ಋಷೀನ್ ಸರ್ವಾನ್ಪುರಸ್ಕೃತ್ಯ ಜಗಾಮ ಸಬಲಾನುಗಃ ।

ಅನುವಾದ

ಈ ಪ್ರಕಾರ ಜನಕನು ಬಹಳ ಹರ್ಷದಿಂದ ಉತ್ತಮೋತ್ತಮ ನಾನಾ ಪ್ರಕಾರದ ವಸ್ತುಗಳನ್ನು ಬಳುವಳಿಯಾಗಿ ಕೊಟ್ಟನು. ದಶರಥನ ಅನುಮತಿಯನ್ನು ಪಡೆದು ಪುನಃ ಜನಕನು ಅಂತಃಪುರಕ್ಕೆ ಹೋಗಿ ಪ್ರಯಾಣದ ಸಿದ್ಧತೆಯನ್ನು ಮಾಡಿದನು. ಅಯೋಧ್ಯಾ ನರೇಶ ದಶರಥನೂ ಸಮಸ್ತ ಮಹರ್ಷಿಗಳನ್ನು ಮುಂದಿಟ್ಟುಕೊಂಡು ಮಹಾತ್ಮರಾದ ಪುತ್ರರ, ಸೈನಿಕ, ಸೇವಕರೊಂದಿಗೆ ತನ್ನ ರಾಜಧಾನಿಯ ಕಡೆಗೆ ಹೊರಟನು.॥6-7½॥

ಮೂಲಮ್ - 8

ಗಚ್ಛಂತಂ ತು ನರವ್ಯಾಘ್ರಂ ಸರ್ಷಿಸಂಘಂ ಸರಾಘವಮ್ ॥

ಮೂಲಮ್ - 9

ಘೋರಾಸ್ತು ಪಕ್ಷಿಣೋ ವಾಚೋ ವ್ಯಾಹರಂತಿ ಸಮಂತತಃ ।
ಭೌಮಾಶ್ಚೈವ ಮೃಗಾಃ ಸರ್ವೇ ಗಚ್ಛಂತಿ ಸ್ಮ ಪ್ರದಕ್ಷಿಣಮ್ ॥

ಅನುವಾದ

ಆಗ ಋಷಿ ಸಮೂಹ ಹಾಗೂ ಶ್ರೀರಾಮಚಂದ್ರನೊಡನೆ ಪ್ರಯಾಣ ಮಾಡುತ್ತಿರುವಾಗ ದಾರಿಯಲ್ಲಿ ಪಕ್ಷಿಗಳು ಅಲ್ಲಲ್ಲಿ ಘೋರವಾಗಿ ಅಪಸ್ವರದಿಂದ ಚೀರಾಡುತ್ತಿದ್ದವು. ಭೂಮಿಯಲ್ಲಿ ಸಂಚರಿಸುವ ಮೃಗಗಳು ದಶರಥನನ್ನು ಬಲಕ್ಕೆ ಹಾಕಿಕೊಂಡು ಮುಂದೆ ಹೋಗುತ್ತಿದ್ದವು.॥8-9॥

ಮೂಲಮ್ - 10½

ತಾನ್ ದೃಷ್ಟ್ವಾ ರಾಜಶಾರ್ದೂಲೋ ವಸಿಷ್ಠಂ ಪರ್ಯಪೃಚ್ಛತ ।
ಅಸೌಮ್ಯಾಃ ಪಕ್ಷಿಣೋ ಘೋರಾ ಮೃಗಾಶ್ಚಾಪಿ ಪ್ರದಕ್ಷಿಣಾಃ ॥
ಕಿಮಿದಂ ಹೃದಯೋತ್ಕಂಪಿಮನೋ ಮಮ ವಿಷೀದತಿ ।

ಅನುವಾದ

ಅದೆಲ್ಲವನ್ನು ನೋಡಿ ರಾಜಸಿಂಹ ದಶರಥನು ವಸಿಷ್ಠರಲ್ಲಿ ಕೇಳಿದನು - ಮುನಿವರ್ಯರೇ! ಒಂದು ಕಡೆ ಈ ಭಯಂಕರ ಪಕ್ಷಿಗಳು ಘೋರ ಶಬ್ಧ ಮಾಡುತ್ತಿವೆ, ಇನ್ನೊಂದು ಕಡೆ ಈ ಮೃಗಗಳು ಬಲಕ್ಕೆ ಹಾರಿ ಹೋಗುತ್ತಿವೆ, ಹೀಗೆ ಅಶುಭ ಮತ್ತು ಶುಭ ಎರಡೂ ರೀತಿಯ ಶಕುನಗಳು ಹೇಗೆ? ಇದರಿಂದ ನನ್ನ ಎದೆ ನಡುಗುತ್ತಿದೆ, ಮನಸ್ಸು ವಿಷಾದದಲ್ಲಿ ಮುಳುಗಿದೆ.॥10½॥

ಮೂಲಮ್ - 11

ರಾಜ್ಞೋ ದಶರಥಸ್ಯೈತಚ್ಛ್ರುತ್ವಾ ವಾಕ್ಯಂ ಮಹಾನೃಷಿಃ ॥

ಮೂಲಮ್ - 12½

ಉವಾಚ ಮಧುರಾಂ ವಾಣೀ ಶ್ರೂಯತಾಮಸ್ಯ ಯತ್ಫಲಮ್ ।
ಉಪಸ್ಥಿತಂ ಭಯಂ ಘೋರಂ ದಿವ್ಯಂ ಪಕ್ಷಿಮುಖಾಚ್ಚ್ಯುತಮ್ ॥
ಮೃಗಾಃ ಪ್ರಶಮಯಂತ್ಯೇತೇ ಸಂತಾಪಸ್ತ್ಯಜ್ಯತಾಮಯಮ್ ।

ಅನುವಾದ

ದಶರಥನ ಮಾತನ್ನು ಕೇಳಿ, ಮಹರ್ಷಿ ವಸಿಷ್ಠರು ಮಧುರವಾಗಿ ನುಡಿದರು-ರಾಜನೇ! ಈ ಶಕುನದ ಫಲವನ್ನು ಕೇಳು- ಆಕಾಶದಲ್ಲಿ ಪಕ್ಷಿಗಳು ಮಾಡುತ್ತಿರುವ ಕೆಟ್ಟ ಶಬ್ದದಿಂದ ಈಗ ಯಾವುದೋ ಘೋರ ಭಯವು ಮುಂದಾಗುವುದು ಎಂದು ತಿಳಿಯುತ್ತದೆ. ಆದರೆ ನಮ್ಮನ್ನು ಬಲಕ್ಕಿಟ್ಟು ಸಾಗುತ್ತಿರುವ ಮೃಗಗಳಿಂದ ಆ ಭಯವು ಶಾಂತವಾಗುವುದನ್ನು ಸೂಚಿಸುತ್ತದೆ. ಅದಕ್ಕಾಗಿ ನೀನು ಚಿಂತಿಸಬೇಡ.॥11-12½॥

ಮೂಲಮ್ - 13

ತೇಷಾಂ ಸಂವದತಾಂ ತತ್ರ ವಾಯುಃ ಪ್ರಾದುರ್ಬಭೂವ ಹ ॥

ಮೂಲಮ್ - 14½

ಕಂಪಯನ್ಮೇದೀನಿಂ ಸರ್ವಾಂ ಪಾತಯಂಶ್ಚ ಮಹಾದ್ರುಮಾನ್ ।
ತಮಸಾ ಸಂವೃತಃ ಸೂರ್ಯಃ ಸರ್ವೇ ನಾವೇದಿಷುರ್ದಿಶಃ ॥
ಭಸ್ಮನಾ ಚಾವೃತಂ ಸರ್ವಂ ಸಂಮೂಢಮಿವತದ್ಬಲಮ್ ।

ಅನುವಾದ

ಇವರು ಹೀಗೆ ಮಾತನಾಡುತ್ತಿರುವಾಗಲೇ ಅಲ್ಲಿ ದೊಡ್ಡದಾದ ಬಿರುಗಾಳಿ ಎದ್ದಿತು. ಅದು ಭೂಮಿಯನ್ನು ನಡುಗಿಸುತ್ತಾ ಹೆಮ್ಮರಗಳನ್ನು ನೆಲಸಮ ಮಾಡುತ್ತಿತ್ತು. ನೆಲದಿಂದ ಎದ್ದ ಧೂಳಿನಿಂದ ಸೂರ್ಯನು ಮುಚ್ಚಿಹೋದನು. ಎಲ್ಲೆಡೆ ಧೂಳು ತುಂಬಿದ್ದರಿಂದ ದಿಗ್ಭ್ರಮೆಯಾಗಿ ಸೈನಿಕರೆಲ್ಲರಿಗೆ ಮುಂದೇನು ಮಾಡಬೇಕೆಂದು ತೋಚದಂತಾಯಿತು.॥13-14½॥

ಮೂಲಮ್ - 15

ವಸಿಷ್ಠ ಋಷಯಶ್ಚಾನ್ಯೇ ರಾಜಾ ಚ ಸಸುತಸ್ತದಾ ॥

ಮೂಲಮ್ - 16

ಸಸಂಜ್ಞಾ ಇವ ತತ್ರಾಸನ್ ಸರ್ವಮನ್ಯದ್ವಿಚೇತನಮ್ ।
ತಸ್ಮಿಂಸ್ತಮಸಿ ಘೋರೇ ತು ಭಸ್ಮಚ್ಛನ್ನೇವ ಸಾ ಚಮೂಃ ॥

ಅನುವಾದ

ಆಗ ಕೇವಲ ವಸಿಷ್ಠ ಮುನಿಗಳು, ಇತರ ಋಷಿಗಳು, ಪುತ್ರರ ಸಹಿತ ದಶರಥ ಇವರು ಮಾತ್ರ ಎಚ್ಚರವಾಗಿದ್ದರು; ಉಳಿದವರೆಲ್ಲ ನಿಶ್ಚೇಷ್ಟಿತರಂತಾದರು. ಆ ಘೋರ ಅಂಧಕಾರದಲ್ಲಿ ರಾಜನ ಸೈನ್ಯವೆಲ್ಲ ಮುಚ್ಚಿಹೋಯಿತು.॥15-16॥

ಮೂಲಮ್ - 17

ದದರ್ಶ ಭೀಮಸಂಕಾಶಂ ಜಟಾಮಂಡಲಧಾರಿಣಮ್ ।
ಭಾರ್ಗವಂ ಜಾಮದಗ್ನ್ಯೇಯಂ ರಾಜಾ ರಾಜವಿಮರ್ದಿನಮ್ ॥

ಮೂಲಮ್ - 18

ಕೈಲಾಸಮಿವ ದುರ್ಧರ್ಷಂ ಕಾಲಾಗ್ನಿಮಿವ ದುಃಸಹಮ್ ।
ಜ್ವಲಂತಮಿವ ತೇಜೋಭಿರ್ದುರ್ನಿರೀಕ್ಷ್ಯಂ ಪೃಥಗ್ಜನೈಃ ॥

ಮೂಲಮ್ - 19

ಸ್ಕಂಧೇ ಚಾಸಜ್ಜ್ಯ ಪರಶುಂ ಧನುರ್ವಿದ್ಯುದ್ಗಣೋಪಮಮ್ ।
ಪ್ರಗೃಹ್ಯ ಶರಮುಗ್ರಂ ಚ ತ್ರಿಪುರಘ್ನಂಯಥಾ ಶಿವಮ್ ॥

ಅನುವಾದ

ಆಗ ದಶರಥ ನೋಡುತ್ತಾನೆ - ಕ್ಷತ್ರಿಯ ಕುಲಾಂತಕ, ಭೃಗುನಂದನ ಜಮದಗ್ನಿಕುಮಾರ ಪರಶುರಾಮನು ಎದುರಿಗೆ ಬರುತ್ತಿದ್ದನು. ಅವನು ಭಯಂಕರವಾಗಿ ಕಾಣುತ್ತಿದ್ದನು. ತಲೆಯಲ್ಲಿ ಭಾರೀ ಜಟೆಯನ್ನೂ ಧರಿಸಿದ್ದನು. ಅವನು ಕೈಲಾಸದಂತೆ ದುರ್ಜಯನಾಗಿದ್ದು, ಕಾಲಾಗ್ನಿಯಂತೆ ದುಃಸಹನಾಗಿದ್ದನು. ತೇಜೋಮಂಡಲದಿಂದ ಜಾಜ್ವಲ್ಯನಾಗಿದ್ದನು. ಹೆಗಲಲ್ಲಿ ಗಂಡು ಕೊಡಲಿಯನ್ನು ಇಟ್ಟುಕೊಂಡು, ಕೈಯಲ್ಲಿ ವಿದ್ಯುತ್ತಿನಂತೆ ಹೊಳೆಯುವ ಧನುರ್ಬಾಣಗಳನ್ನು ಧರಿಸಿ, ತ್ರಿಪುರ ವಿನಾಶಕ ಭಗವಾನ್ ಶಿವನಂತೆ ಕಂಡು ಬರುತ್ತಿದ್ದನು.॥17-19॥

ಮೂಲಮ್ - 20½

ತಂ ದೃಷ್ಟ್ವಾ ಭೀಮಸಂಕಾಶಂ ಜ್ವಲಂತಮಿವ ಪಾವಕಮ್ ।
ವಸಿಷ್ಠ ಪ್ರಮುಖಾ ವಿಪ್ರಾಜಪಹೋಮಪರಾಯಣಾಃ ॥
ಸಂಗತಾ ಮುನಯಃ ಸರ್ವೇ ಸಂಜಜಲ್ಪುರಥೋಮಿಥಃ ।

ಅನುವಾದ

ಪ್ರಜ್ವಲಿತ ಅಗ್ನಿಯಂತೆ ಭಯಂಕರವಾಗಿ ಕಾಣುವ ಪರುಶುರಾಮನು ಬಂದುದನ್ನು ನೋಡಿ, ಜಪ-ಹೋಮಗಳಲ್ಲಿ ತತ್ಪರರಾಗಿರುವ ವಸಿಷ್ಠರೇ ಮೊದಲಾದ ಎಲ್ಲ ಬ್ರಹ್ಮರ್ಷಿಗಳು ಒಟ್ಟಿಗೆ ಸೇರಿ ಪರಸ್ಪರ ಹೀಗೆ ಮಾತನಾಡತೊಡಗಿದರು.॥20½॥

ಮೂಲಮ್ - 21

ಕಚ್ಚಿತ್ಪಿತೃವಧಾಮರ್ಷೀ ಕ್ಷತ್ರಂ ನೋತ್ಸಾದಯಿಷ್ಯತಿ ॥

ಮೂಲಮ್ - 22

ಪೂರ್ವಂ ಕ್ಷತ್ರವಧಂ ಕೃತ್ವಾ ಗತಮನ್ಯುರ್ಗ ಜ್ವರಃ ।
ಕ್ಷತ್ರಸ್ಯೋತ್ಸಾದನಂ ಭೂಯೋ ನ ಖಲ್ವಸ್ಯ ಚಿಕೀರ್ಷಿತಮ್ ॥

ಅನುವಾದ

ಹಿಂದೊಮ್ಮೆ ಈ ಪರಶುರಾಮನು ಕ್ಷತ್ರಿಯನೊಬ್ಬನಿಂದ ಆದ ತನ್ನ ತಂದೆಯ ವಧೆಯಿಂದಾಗಿ ಬಹಳ ಕುಪಿತನಾಗಿದ್ದರೂ ಈಗ ಕ್ಷತ್ರಿಯರನ್ನು ವಿನಾಶಮಾಡಲಾರನು; ಏಕೆಂದರೆ ಹಿಂದೆ ಕ್ಷತ್ರಿಯರನ್ನು ವಧಿಸಿ ಇವನು ತನ್ನ ಕೋಪವನ್ನು ಬಿಟ್ಟು ಚಿಂತಾರಹಿತನಾಗಿದ್ದನು. ಆದ್ದರಿಂದ ಪುನಃ ಕ್ಷತ್ರಿಯರನ್ನು ಸಂಹರಿಸುವುದು ಇವನಿಗೆ ಇಷ್ಟವಿಲ್ಲ ಎಂದು ನಿಶ್ಚಯವಾಗಿ ಹೇಳಬಹುದು.॥21-22॥

ಮೂಲಮ್ - 23

ಏವಮುಕ್ತ್ವಾ ರ್ಘ್ಯಮಾದಾಯ ಭಾವರ್ಗಂ ಭೀಮದರ್ಶನಮ್ ।
ಋಷಯೋ ರಾಮ ರಾಮೇತಿ ಮಧುರಂ ವಾಕ್ಯಮಬ್ರುವನ್ ॥

ಅನುವಾದ

ಹೀಗೆ ಹೇಳಿ ಋಷಿಗಳು ಭಯಂಕರವಾಗಿ ಕಾಣುವ ಭೃಗುನಂದನ ಪರಶುರಾಮನನ್ನು ಸ್ವಾಗತಿಸಿ, ಆರ್ಘ್ಯವನ್ನು ಅರ್ಪಿಸುತ್ತಾ ರಾಮಾ! ಭಾರ್ಗವ! ಎಂದು ಸವಿಮಾತುಗಳಿಂದ ವಾರ್ತಾಲಾಪ ಮಾಡಿದರು.॥23॥

ಮೂಲಮ್ - 24

ಪ್ರತಿಗೃಹ್ಯ ತು ತಾಂ ಪೂಜಾಮೃಷಿದತ್ತಾಂ ಪ್ರತಾಪವಾನ್ ।
ರಾಮಂ ದಾಶರಥಿಂ ರಾಮೋ ಜಾಮದಗ್ನ್ಯೋಽಭ್ಯಭಾಷತ ॥

ಅನುವಾದ

ಋಷಿಗಳು ಇತ್ತ ಪೂಜೆಯನ್ನು ಸ್ವೀಕರಿಸಿ ಪ್ರತಾಪಿ ಜಮದಗ್ನಿನಂದನ ಪರುಶುರಾಮನು ದಶರಥನಂದನ ಶ್ರೀರಾಮನಲ್ಲಿ ಹೀಗೆ ಹೇಳಿದನು.॥24॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಎಪ್ಪತ್ತನಾಲ್ಕನೆಯ ಸರ್ಗ ಪೂರ್ಣವಾಯಿತು. ॥74॥