वाचनम्
ಭಾಗಸೂಚನಾ
ಶ್ರೀರಾಮನೇ ಮೊದಲಾದ ನಾಲ್ವರು ಸಹೋದರರ ವಿವಾಹಗಳು
ಮೂಲಮ್ - 1
ಯಸ್ಮಿಂಸ್ತು ದಿವಸೇ ರಾಜಾ ಚಕ್ರೇ ಗೋದಾನಮುತ್ತಮಮ್ ।
ತಸ್ಮಿಂಸ್ತು ದಿವಸೇ ವೀರೋ ಯುಧಾಜಿತ್ಸಮುಪೇಯಿವಾನ್ ॥
ಮೂಲಮ್ - 2
ಪುತ್ರಃ ಕೇಕಯರಾಜಸ್ಯ ಸಾಕ್ಷಾದ್ಭರತಮಾತುಲಃ ।
ದೃಷ್ಟ್ವಾ ಪೃಷ್ಟ್ವಾ ಚ ಕುಶಲಂ ರಾಜಾನಮಿದಮಬ್ರವೀತ್ ॥
ಅನುವಾದ
ದಶರಥ ರಾಜನು ಪುತ್ರರ ವಿವಾಹ ನಿಮಿತ್ತ ಉತ್ತಮ ಗೋದಾನ ಮಾಡಿದ ದಿನವೇ ಭರತನ ಸೋದರಮಾವ ಕೇಕಯ ರಾಜಕುಮಾರ ವೀರ ಯುಧಾಜಿತ್ತು ಅಲ್ಲಿಗೆ ಆಗಮಿಸಿದನು. ಅವನು ಮಹಾರಾಜನ ದರ್ಶನ ಪಡೆದು ಕ್ಷೇಮ-ಸಮಾಚಾರ ಕೇಳಿ, ಈ ಪ್ರಕಾರ ಹೇಳಿದನು.॥1-2॥
ಮೂಲಮ್ - 3
ಕೇಕಯಾಧಿಪತೀ ರಾಜಾ ಸ್ನೇಹಾತ್ಕುಶಲಮಬ್ರವೀತ್ ।
ಯೇಷಾಂ ಕುಶಲಕಾಮೋಽಸಿ ತೇಷಾಂ ಸಂಪ್ರತ್ಯನಾಮಯಮ್ ॥
ಮೂಲಮ್ - 4
ಸ್ವಸ್ರೀಯಂ ಮಮ ರಾಜೇಂದ್ರ ದ್ರಷ್ಟುಕಾಮೋ ಮಹೀಪತಿಃ ।
ತದರ್ಥಮುಪಯಾತೋಽಹಮಯೋಧ್ಯಾಂ ರಘುನಂದನ ॥
ಅನುವಾದ
ರಘುನಂದನ! ಕೇಕಯದೇಶದ ಮಹಾರಾಜರು ತುಂಬು ಸ್ನೇಹದಿಂದ ನಿಮ್ಮೆಲ್ಲರ ಕ್ಷೇಮ-ಸಮಾಚಾರ ಕೇಳಿರುವರು. ನಮ್ಮಲ್ಲಿಯೂ ಎಲ್ಲರೂ ಈಗ ಆರೋಗ್ಯ-ಆನಂದದಿಂದ ಇರುವರು. ರಾಜೇಂದ್ರನೇ! ಕೇಕಯ ಅರಸು ನನ್ನ ಅಳಿಯ ಭರತನನ್ನು ನೋಡಲು ಬಯಸುತ್ತಿರುವರು. ಇವರನ್ನು ಕರೆದುಕೊಂಡು ಹೋಗಲು ನಾನು ಅಯೋಧ್ಯೆಗೆ ಬಂದಿದ್ದೆ.॥3-4॥
ಮೂಲಮ್ - 5½
ಶ್ರುತ್ವಾ ತ್ವಹಮಯೋಧ್ಯಾಯಾಂ ವಿವಾಹಾರ್ಥಂ ತವಾತ್ಮಜಾನ್ ।
ಮಿಥಿಲಾಮುಪಯಾತಾಂಸ್ತು ತ್ವಯಾ ಸಹ ಮಹೀಪತೇ ॥
ತ್ವರಯಾಭ್ಯುಪಯಾತೋಽಹಂ ದ್ರಷ್ಟುಕಾಮಃ ಸ್ವಸುಃ ಸುತಮ್ ।
ಅನುವಾದ
ಆದರೆ ಪೃಥಿವೀ ಪಾಲಕರೇ! ನಿಮ್ಮ ಎಲ್ಲ ಪುತ್ರರ ವಿವಾಹಕ್ಕಾಗಿ ನಿಮ್ಮೊಂದಿಗೆ ಮಿಥಿಲೆಗೆ ಬಂದಿರುವರು ಎಂದು ಅಯೋಧ್ಯೆಯಲ್ಲಿ ಕೇಳಿ, ನಾನು ಇಲ್ಲಿಗೆ ಬಂದಿರುವೆನು; ಏಕೆಂದರೆ ನನ್ನ ಸಹೋದರಿಯ ಮಗನನ್ನು ನೋಡುವ ಆಸೆ ನನ್ನ ಮನಸ್ಸಿನಲ್ಲಿತ್ತು.॥5½॥
ಮೂಲಮ್ - 6½
ಅಥ ರಾಜಾ ದಶರಥಃ ಪ್ರಿಯಾತಿಥಿಮುಪಸ್ಥಿತಮ್ ॥
ದೃಷ್ಟ್ವಾ ಪರಮಸತ್ಕಾರೈಃ ಪೂಜಾನಾರ್ಹಮಪೂಜಯತ್ ।
ಅನುವಾದ
ಮಹಾರಾಜಾ ದಶರಥನು ತನ್ನ ಪ್ರಿಯ ಅತಿಥಿಯು ಬಂದಿರುವುದನ್ನು ನೋಡಿ, ಬಹಳ ಸತ್ಕಾರದೊಂದಿಗೆ ಅವನನ್ನು ಬರಮಾಡಿಕೊಂಡನು; ಏಕೆಂದರೆ ಅವನು ಸಮ್ಮಾನ ಪಡೆಯಲು ಯೋಗ್ಯನಾಗಿದ್ದನು.॥6½॥
ಮೂಲಮ್ - 7
ತತಸ್ತಾಮುಷಿತೋ ರಾತ್ರಿಂ ಸಹ ಪುತ್ರೈರ್ಮಹಾತ್ಮಭಿಃ ॥
ಮೂಲಮ್ - 8
ಪ್ರಭಾತೇ ಪುನರುತ್ಥಾಯ ಕೃತ್ವಾ ಕರ್ಮಾಣಿ ಕರ್ಮವಿತ್ ।
ಋಷೀಂಸ್ತದಾ ಪುರಸ್ಕೃತ್ಯ ಯಜ್ಞವಾಟಮುಪಾಗಮತ್ ॥
ಅನುವಾದ
ಅನಂತರ ಮಹಾತ್ಮರಾದ ತಮ್ಮ ಪುತ್ರರೊಂದಿಗೆ ಅಂದಿನ ಇರುಳನ್ನು ಕಳೆದು, ಆ ತತ್ವಜ್ಞ ನರೇಶನು ಪ್ರಾತಃಕಾಲದಲ್ಲಿ ಎದ್ದು ನಿತ್ಯಕರ್ಮಗಳನ್ನು ಪೂರೈಸಿ ಋಷಿಗಳನ್ನು ಮುಂದಿಟ್ಟುಕೊಂಡು ಜನಕನ ಯಜ್ಞಶಾಲೆಗೆ ಆಗಮಿಸಿದನು.॥7-8॥
ಮೂಲಮ್ - 9
ಯುಕ್ತೇ ಮುಹೂರ್ತೇ ವಿಜಯೇ ಸರ್ವಾಭರಣಭೂಷಿತೈಃ ।
ಭ್ರಾತೃಭಿಃ ಸಹಿತೋ ರಾಮಃ ಕೃತಕೌತುಕಮಂಗಲಃ ॥
ಮೂಲಮ್ - 10
ವಸಿಷ್ಠಂ ಪುರತಃ ಕೃತ್ವಾ ಮಹರ್ಷೀನಪರಾನಪಿ ।
ವಸಿಷ್ಠೋ ಭಗವಾನೇತ್ಯ ವೈದೇಹಮಿದಮಬ್ರವೀತ್ ॥
ಅನುವಾದ
ಅನಂತರ ವಿವಾಹದ ಯೋಗ್ಯ ವಿಜಯ ಎಂಬ ಮುಹೂರ್ತ ಬಂದಾಗ ವರನಿಗೆ ಯೋಗ್ಯವಾದ ವೇಷ-ಭೂಷಣಗಳಿಂದ ಅಲಂಕೃತರಾದ ಸಹೋದರರೊಂದಿಗೆ ಶ್ರೀರಾಮಚಂದ್ರನು ಅಲ್ಲಿಗೆ ಬಂದನು. ಅವರು ವಿವಾಹ ಕಾಲೋಚಿತ ಮಂಗಳಕರವಾದ ಎಲ್ಲ ಕಾರ್ಯಗಳನ್ನು ಪೂರೈಸಿಕೊಂಡಿದ್ದರು ಹಾಗೂ ವಸಿಷ್ಠಮುನಿ ಹಾಗೂ ಇತರ ಮಹರ್ಷಿಗಳನ್ನು ಮುಂದಿಟ್ಟುಕೊಂಡು ವಿವಾಹ ಮಂಟಪಕ್ಕೆ ಆಗಮಿಸಿದ್ದರು. ಆಗ ಪೂಜ್ಯರಾದ ವಸಿಷ್ಠರು ವಿದೇಹ ರಾಜನ ಬಳಿಗೆ ಹೋಗಿ ಈ ಪ್ರಕಾರ ಹೇಳಿದರು.॥9-10॥
ಮೂಲಮ್ - 11
ರಾಜಾ ದಶರಥೋ ರಾಜನ್ ಕೃತಕೌತುಕಮಂಗಲೈಃ ।
ಪುತ್ರೈರ್ನರವರಶ್ರೇಷ್ಠೋ ದಾತಾರಮಭಿಕಾಂಕ್ಷತೇ ॥
ಅನುವಾದ
ರಾಜನೇ! ದಶರಥ ಮಹಾರಾಜನು ತನ್ನ ಪುತ್ರರ ವೈವಾಹಿಕ ಸೂತ್ರಬಂಧನಾದಿ ಮಂಗಲಾಚಾರವನ್ನು ನೆರವೇರಿಸಿ, ಪುತ್ರರೊಂದಿಗೆ ಆಗಮಿಸಿರುವನು. ಒಳಗೆ ಬರಲು ದಾತೃನಾದ ನಿನ್ನ ಅನುಮತಿಯನ್ನು ಪ್ರತೀಕ್ಷಿಸುತ್ತಿದ್ದಾರೆ.॥11॥
ಮೂಲಮ್ - 12
ದಾತೃಪ್ರತಿಗ್ರಹೀತೃಭ್ಯಾಂ ಸರ್ವಾರ್ಥಾಃಸಂಭವಂತಿ ಹಿ ।
ಸ್ವಧರ್ಮಂ ಪ್ರತಿಪದ್ಯಸ್ವ ಕೃತ್ವಾ ವೈವಾಹ್ಯಮುತ್ತಮಮ್ ॥
ಅನುವಾದ
ಏಕೆಂದರೆ ದಾತಾ ಮತ್ತು ಪ್ರತಿಗ್ರಹಿತಾ (ಕೊಡುವವನು ಮತ್ತು ಪಡೆಯುವವನು) ಇವರ ಸಂಯೋಗವಾದಾಗಲೇ ಸಮಸ್ತ ದಾನ-ಧರ್ಮಗಳ ಸಂಪಾದನೆ ಸಂಭವಿಸುತ್ತದೆ, ಆದ್ದರಿಂದ ನೀನು ವಿವಾಹ ಕಾಲೋಚಿತ ಶುಭಕರ್ಮಗಳನ್ನು ಮಾಡಿ ವರನನ್ನು ಒಳಗೆ ಕರೆದು ಕನ್ಯಾದಾನರೂಪಿ ಸ್ವಧರ್ಮವನ್ನು ಪಾಲಿಸು.॥12॥
ಮೂಲಮ್ - 13
ಇತ್ಯುಕ್ತಃ ಪರಮೋದಾರೋ ವಸಿಷ್ಠೇನ ಮಹಾತ್ಮನಾ ।
ಪ್ರತ್ಯುವಾಚ ಮಹಾತೇಜಾ ವಾಕ್ಯಂ ಪರಮಧರ್ಮವಿತ್ ॥
ಅನುವಾದ
ಮಹಾತ್ಮ ವಸಿಷ್ಠರು ಹೀಗೆ ಹೇಳಿದಾಗ ಪರಮ ಉದಾರ, ಪರಮ ಧರ್ಮಜ್ಞ, ಮಹಾ ತೇಜಸ್ವೀ ಜನಕ-ರಾಜನು ಈ ಪ್ರಕಾರ ಉತ್ತರಿಸಿದನು.॥13॥
ಮೂಲಮ್ - 14
ಕಃ ಸ್ಥಿತಃ ಪ್ರತಿಹಾರೋ ಮೇ ಕಸ್ಯಾಜ್ಞಾಂ ಸಂಪ್ರತೀಕ್ಷ್ಯತೇ ।
ಸ್ವಗೃಹೇ ಕೋ ವಿಚಾರೋಽಸ್ತಿ ಯಥಾ ರಾಜ್ಯಮಿದಂ ತವ ॥
ಮೂಲಮ್ - 15
ಕೃತಕೌತುಕಸರ್ವಸ್ವಾ ವೇದಿಮೂಲಮುಪಾಗತಾಃ ।
ಮಮ ಕನ್ಯಾ ಮುನಿಶ್ರೇಷ್ಠ ದೀಪ್ತಾ ಬಹ್ನೇರಿವಾರ್ಚಿಷಃ ॥
ಅನುವಾದ
ಮುನಿಶ್ರೇಷ್ಠರೇ! ಮಹಾರಾಜರಿಗಾಗಿ ನನ್ನಲ್ಲಿ ಯಾವ ಕಾವಲುಗಾರ ನಿಂತಿದ್ದಾನೆ? ಅವರು ಯಾರ ಆದೇಶವನ್ನು ಪ್ರತೀಕ್ಷಿಸುತ್ತಿದ್ದಾರೆ? ತನ್ನ ಮನೆಗೇ ಬರಲು ಏನು ಯೋಚನೆ? ಈ ರಾಜ್ಯ ನನ್ನದಿರುವಂತೆ ನಿಮ್ಮದೂ ಆಗಿದೆ. ನಮ್ಮ ಕನ್ಯೆಯರ ವೈವಾಹಿಕ ಸೂತ್ರಬಂಧನರೂಪೀ ಮಂಗಲಕೃತ್ಯ ನೆರವೇರಿದೆ. ಈಗ ಅವರು ಯಜ್ಞವೇದಿಯ ಬಳಿ ಬಂದು ಕುಳಿತಿರುವರು ಮತ್ತು ಪ್ರಜ್ವಲಿತ ಅಗ್ನಿಶಿಖೆಯಂತೆ ಪ್ರಕಾಶಿಸುತ್ತಿದ್ದಾರೆ.॥14-15॥
ಮೂಲಮ್ - 16
ಸದ್ಯೋಽಹಂ ತ್ವತ್ಪ್ರತೀಕ್ಷೋಽಸ್ಮಿ ವೇದ್ಯಾಮಸ್ಯಾಂ ಪ್ರತಿಷ್ಠಿತಃ ।
ಅವಿಘ್ನಂ ಕ್ರಿಯತಾಂ ಸರ್ವಂ ಕಿಮರ್ಥಂ ಹಿ ವಿಲಂಬ್ಯತೇ ॥
ಅನುವಾದ
ಈಗಲಾದರೋ ನಾನೂ ನಿಮ್ಮ ಪ್ರತೀಕ್ಷೆಯಲ್ಲೇ ವೇದಿಯಲ್ಲಿ ಕುಳಿತಿರುವೆನು. ನೀವು ನಿರ್ವಿಘ್ನವಾಗಿ ಎಲ್ಲ ಕಾರ್ಯವನ್ನು ಪೂರ್ಣಗೊಳಿಸಿರಿ. ಏಕೆ ವಿಳಂಬಿಸುತ್ತಿರುವಿರಿ.॥16॥
ಮೂಲಮ್ - 17
ತದ್ವಾಕ್ಯಂ ಜನಕೇನೋಕ್ತಂ ಶ್ರುತ್ವಾ ದಶರಥಸ್ತದಾ ।
ಪ್ರವೇಶಯಾಮಾಸ ಸುತಾನ್ ಸರ್ವಾನೃಷಿಗಣಾನಪಿ ॥
ಅನುವಾದ
ಜನಕನು ಹೇಳಿದ ಮಾತನ್ನು ವಸಿಷ್ಠರಿಂದ ಕೇಳಿದ ಮಹಾರಾಜಾ ದಶರಥನು ಆಗ ತನ್ನ ಪುತ್ರರು ಹಾಗೂ ಸಮಸ್ತ ಮಹರ್ಷಿಗಳೊಂದಿಗೆ ಒಳಗೆ ಪ್ರವೇಶಿಸಿದನು.॥17॥
ಮೂಲಮ್ - 18½
ತತೋ ರಾಜಾ ವಿದೇಹಾನಾಂ ವಸಿಷ್ಠಮಿದಮಬ್ರವೀತ್ ।
ಕಾರಯಸ್ವ ಋಷೇ ಸರ್ವಾಮೃಷಿಭಿಃ ಸಹ ಧಾರ್ಮಿಕ ॥
ರಾಮಸ್ಯ ಲೋಕರಾಮಸ್ಯ ಕ್ರಿಯಾಂ ವೈವಾಹಿಕೀಂ ಪ್ರಭೋ ।
ಅನುವಾದ
ಅನಂತರ ವಿದೇಹರಾಜನು ವಸಿಷ್ಠರಲ್ಲಿ ಹೀಗೆ ಹೇಳಿದನು - ಧರ್ಮಾತ್ಮಾ ಮಹರ್ಷಿಗಳೇ! ಸ್ವಾಮಿ! ನೀವು ಋಷಿಗಳೊಂದಿಗೆ ಲೋಕಾಭಿರಾಮ ಶ್ರೀರಾಮನ ವಿವಾಹದ ಎಲ್ಲ ಕಾರ್ಯಗಳನ್ನು ಮಾಡಿಸಿರಿ.॥18½॥
ಮೂಲಮ್ - 19
ತಥೇತ್ಯುಕ್ತ್ವಾತು ಜನಕಂ ವಸಿಷ್ಠೋ ಭಗವಾನೃಷಿಃ ॥
ಮೂಲಮ್ - 20
ವಿಶ್ವಾಮಿತ್ರಂ ಪುರಸ್ಕೃತ್ಯ ಶತಾನಂದಂ ಚ ಧಾರ್ಮಿಕಮ್ ।
ಪ್ರಪಾಮಧ್ಯೇ ತು ವಿಧಿವದ್ವೇದಿಂ ಕೃತ್ವಾ ಮಹಾತಪಾಃ ॥
ಮೂಲಮ್ - 21
ಅಲಂಚಕಾರ ತಾಂ ವೇದಿಂ ಗಂಧಪುಷ್ಪೈಃ ಸಮಂತತಃ ।
ಸುಪರ್ಣಪಾಲಿಕಾಭಿಶ್ಚ ಚಿತ್ರಕುಂಭೈಶ್ಚ ಸಾಂಕುರೈಃ ॥
ಮೂಲಮ್ - 22
ಅಂಕುರಾಢ್ಯೈಃ ಶರಾವೈಶ್ಚ ಧೂಪಪಾತ್ರೈಃ ಸಧೂಪಕೈಃ ।
ಶಂಖಪಾತ್ರೈಃ ಸ್ರುವೈಃ ಸ್ರಗ್ಭಿಃಪಾತ್ರೈರರ್ಘ್ಯಾದಿಪೂಜಿತೈಃ ॥
ಮೂಲಮ್ - 23
ಲಾಜಪೂರ್ಣೈಶ್ಚ ಪಾತ್ರೀಭಿರಕ್ಷತೈರಪಿ ಸಂಸ್ಕೃತೈಃ ।
ದರ್ಭೈಃ ಸಮೈಃ ಸಮಾಸ್ತೀರ್ಯ ವಿಧಿವನ್ಮಂತ್ರಪೂರ್ವಕಮ್ ॥
ಮೂಲಮ್ - 24
ಅಗ್ನಿ ಮಾಧಾಯ ತಂ ವೇದ್ಯಾಂ ವಿಧಿಮಂತ್ರಪುರಸ್ಕೃತಮ್ ।
ಜುಹಾವಾಗ್ನೌ ಮಹಾತೇಜಾ ವಸಿಷ್ಠೊಮುನಿಪುಂಗವಃ ॥
ಅನುವಾದ
ಆಗ ಜನಕನಲ್ಲಿ ‘ಹಾಗೆಯೇ ಆಗಲಿ’ ಎಂದು ಹೇಳಿ ಮಹಾತಪಸ್ವೀ ಭಗವನ್ ವಸಿಷ್ಠ ಮುನಿಗಳು ವಿಶ್ವಾಮಿತ್ರ ಹಾಗೂ ಧರ್ಮಾತ್ಮಾ ಶತಾನಂದರನ್ನು ಮುಂದಿಟ್ಟುಕೊಂಡು ವಿವಾಹ ಮಂಟಪದ ಮಧ್ಯದಲ್ಲಿ ವಿಧಿವತ್ತಾಗಿ ವೇದಿಯನ್ನು ನಿರ್ಮಿಸಿ, ಗಂಧ, ಪುಷ್ಪಾದಿಗಳಿಂದ ಅದನ್ನು ಸುಂದರವಾಗಿ ಅಲಂಕರಿಸಿದರು. ಜೊತೆಗೆ ಅನೇಕ ಸ್ವರ್ಣಪಾಲಿಕೆಗಳಿಂದಲೂ ಅಂಕುರಗಳಿಂದ ಕೂಡಿದ ಸಚಿತ್ರ ಕಲಶಗಳಿಂದಲೂ, ಅಂಕುರ ಪೂರ್ಣವಾದ ಶರಾವೆಗಳಿಂದಲೂ ಧೂಪಸಹಿತ ಧೂಪಪಾತ್ರೆಗಳಿಂದಲೂ ಶಂಖಪಾತ್ರೆಗಳಿಂದಲೂ ಸ್ರುಕ್-ಸ್ರುವಗಳಿಂದಲೂ, ಅಯಾ ಪಾತ್ರೆಗಳಿಂದಲೂ, ಅರಳು ತುಂಬಿದ ಪಾತ್ರೆಗಳಿಂದಲೂ, ಅಕ್ಷತೆಯಿಂದ ತುಂಬಿದ ಪಾತ್ರೆಗಳಿಂದಲೂ ಅಲಂಕರಿಸಿದ್ದರು. ಅನಂತರ ಮಹಾ ತೇಜಸ್ವೀ ಮುನಿವರ ವಸಿಷ್ಠರು ದರ್ಭೆಗಳನ್ನು ವೇದಿಯ ಸುತ್ತಲೂ ಹರಡಿ, ಮಂತ್ರೋಚ್ಚಾರಪೂರ್ವಕ ಅಗ್ನಿಸ್ಥಾಪನೆ ಮಾಡಿ, ವಿಧಿವತ್ತಾಗಿ ಮಂತ್ರೋಚ್ಚಾರಪೂರ್ವಕ ಪ್ರಜ್ವಲಿತ ಅಗ್ನಿಯಲ್ಲಿ ಹವನ ಮಾಡಿದರು.॥19-24॥
ಮೂಲಮ್ - 25
ತತಃ ಸೀತಾಂ ಸಮಾನೀಯ ಸರ್ವಾಭರಣಭೂಷಿತಾಮ್ ।
ಸಮಕ್ಷಮಗ್ನೇಃ ಸಂಸ್ಥಾಪ್ಯ ರಾಘವಾಭಿಮುಖೇ ತದಾ ॥
ಮೂಲಮ್ - 26
ಅಬ್ರವೀಜ್ಜನಕೋ ರಾಜಾ ಕೌಸಲ್ಯಾನಂದವರ್ಧನಮ್ ।
ಇಯಂ ಸೀತಾ ಮಮ ಸುತಾ ಸಹಧರ್ಮಚರೀ ತವ ॥
ಮೂಲಮ್ - 27
ಪ್ರತೀಚ್ಛ ಚೈನಾಂ ಭದ್ರಂ ತೇ ಪಾಣಿಂ ಗೃಹ್ಣೀಷ್ವ ಪಾಣಿನಾ ।
ಪತಿವ್ರತಾ ಮಹಾಭಾಗಾ ಛಾಯೇವಾನುಗತಾ ಸದಾ ॥
ಅನುವಾದ
ಅನಂತರ ಜನಕರಾಜನು ಎಲ್ಲ ಪ್ರಕಾರದ ಒಡವೆಗಳಿಂದ ಸೀತೆಯನ್ನು ಶೃಂಗರಿಸಿ ತಂದು ಅಗ್ನಿಯ ಬಳಿ ಶ್ರೀರಾಮಚಂದ್ರನ ಮುಂದೆ ಕುಳ್ಳಿರಿಸಿದನು ಹಾಗೂ ಕೌಸಲ್ಯಾನಂದ ವರ್ಧನನಾದ ಶ್ರೀರಾಮನಲ್ಲಿ ಹೇಳಿದನು - ರಘುನಂದನ! ನಿನಗೆ ಮಂಗಳವಾಗಲಿ. ಈ ನನ್ನ ಪುತ್ರಿ ಸೀತೆಯು ನಿನಗೆ ಸಹಧರ್ಮಿಣಿಯ ರೂಪದಲ್ಲಿ ಉಪಸ್ಥಿತಳಿರುವಳು, ಈಕೆಯನ್ನು ಸ್ವೀಕರಿಸು ಹಾಗೂ ಈಕೆಯ ಪಾಣಿಗ್ರಹಣ ಮಾಡು. ಪರಮಪತಿವ್ರತೆಯಾದ ಈಕೆಯು ಮಹಾ ಸೌಭಾಗ್ಯವತಿಯಾಗಿ ನೆರಳಿನಂತೆ ಸದಾ ನಿನ್ನನ್ನು ಅನುಸರಿಸುವಳು.॥25-27॥
ಮೂಲಮ್ - 28
ಇತ್ಯುಕ್ತ್ವಾಪ್ರಾಕ್ಷಿಪದ್ರಾಜಾ ಮಂತ್ರಪೂತಂ ಜಲಂ ತದಾ ।
ಸಾಧು ಸಾಧ್ವಿತಿ ದೇವಾನಾಮೃಷೀಣಾಂ ವದತಾಂ ತದಾ ॥
ಅನುವಾದ
ಹೀಗೆ ಹೇಳಿ ರಾಜನು ಶ್ರೀರಾಮನ ಕೈಗೆ ಮಂತ್ರಪೂತ ಸಂಕಲ್ಪ ಜಲವನ್ನು ಅರ್ಪಿಸಿದನು. ಆಗ ದೇವತೆಗಳೂ ಮತ್ತು ಋಷಿಗಳೂ ಸಾಧು-ಸಾಧು ಎಂದು ಹೇಳಿ ಹಾರೈಸಿದರು.॥28॥
ಮೂಲಮ್ - 29
ದೇವದುಂದುಭಿನಿರ್ಘೋಷಃ ಪುಷ್ಪವರ್ಷೋ ಮಹಾನಭೂತ್ ।
ಏವಂ ದತ್ತ್ವಾ ಸುತಾಂ ಸೀತಾಂ ಮಂತ್ರೋದಕಪುರಸ್ಕೃತಾಮ್ ॥
ಮೂಲಮ್ - 30½
ಅಬ್ರವೀಜ್ಜನಕೋ ರಾಜಾ ಹರ್ಷೇಣಾಭಿಪರಿಪ್ಲುತಃ ।
ಲಕ್ಷ್ಮಣಾಗಚ್ಛ ಭದ್ರಂ ತೇ ಊರ್ಮಿಲಾ ಮುದ್ಯತಾಂ ಮಯಾ ॥
ಪ್ರತೀಚ್ಛ ಪಾಣಿಂ ಗೃಹ್ಣೀಷ್ವ ಮಾ ಭೂತ್ಕಾಲಸ್ಯ ಪರ್ಯಯಃ ।
ಅನುವಾದ
ದೇವ ದುಂದುಬಿಗಳು ಮೊಳಗಿದವು. ಆಕಾಶದಿಂದ ಭಾರೀ ಪುಷ್ಪವೃಷ್ಟಿಯಾಯಿತು. ಈ ಪ್ರಕಾರ ಸಂಕಲ್ಪ ಮಂತ್ರದ ಜಲದೊಂದಿಗೆ ತನ್ನ ಪುತ್ರೀ ಸೀತೆಯನ್ನು ದಾನಮಾಡಿ ಹರ್ಷಿತನಾದ ಜನಕನು ಲಕ್ಷ್ಮಣನಲ್ಲಿ - ‘ಲಕ್ಷ್ಮಣ ನಿನಗೆ ಮಂಗಳವಾಗಲಿ ಬಾ. ನಾನು ಊರ್ಮಿಳೆಯನ್ನು ನಿನ್ನ ಸೇವೆಗಾಗಿ ಕೊಡುತ್ತಿದ್ದೇನೆ, ಈಕೆಯನ್ನು ಸ್ವೀಕರಿಸು. ಈಕೆಯ ಪಾಣಿಗ್ರಹಣ ಮಾಡು. ಇದರಲ್ಲಿ ತಡ ಮಾಡಬೇಡ’ ಎಂದು ಹೇಳಿದನು.॥29-30½॥
ಮೂಲಮ್ - 31½
ತಮೇವಮುಕ್ತ್ವಾ ಜನಕೋ ಭರತಂ ಚಾಭ್ಯಭಾಷತ ॥
ಗೃಹಾಣ ಪಾಣಿಂ ಮಾಂಡವ್ಯಾಃ ಪಾಣಿನಾ ರಘುನಂದನ ।
ಅನುವಾದ
ಲಕ್ಷ್ಮಣನಲ್ಲಿ ಹೀಗೆ ಹೇಳಿ ಜನಕನು ಭರತನಲ್ಲಿ - ‘ರಘುನಂದನ! ನೀನು ಮಾಂಡವಿಯ ಪಾಣಿಗ್ರಹಣ ಮಾಡು’ ಎಂದು ಹೇಳಿದನು.॥31½॥
ಮೂಲಮ್ - 32
ಶತ್ರುಘ್ನಂ ಚಾಪಿ ಧರ್ಮಾತ್ಮಾ ಅಬ್ರವೀನ್ಮಿಥಿಲೇಶ್ವರಃ ॥
ಮೂಲಮ್ - 33½
ಶ್ರುತಕೀರ್ತೇರ್ಮಬಾಹೋ ಪಾಣಿಂ ಗೃಹ್ಣೀಷ್ವ ಪಾಣಿನಾ ।
ಸರ್ವೇ ಭವಂತಃ ಸೌಮ್ಯಾಶ್ಚ ಸರ್ವೇ ಸುಚರಿತವ್ರತಾಃ ॥
ಪತ್ನೀಭಿಃ ಸಂತು ಕಾಕುತ್ಸ್ಥಾ ಮಾ ಭೂತ್ಕಾಲಸ್ಯ ಪರ್ಯಯಃ ।
ಅನುವಾದ
ಮತ್ತೆ ಧರ್ಮಾತ್ಮಾ ಮಿಥಿಲೇಶನು ಶತ್ರುಘ್ನನನ್ನು ಸಂಬೋಧಿಸುತ್ತಾ ‘ಮಹಾಬಾಹೋ! ನೀನು ಶ್ರುತಕೀರ್ತಿಯ ಪಾಣಿಗ್ರಹಣ ಮಾಡು’ ಎಂದು ಹೇಳಿದನು. ನೀವು ನಾಲ್ವರು ಸಹೋದರರೂ ಶಾಂತ ಸ್ವಭಾವದವರಾಗಿದ್ದೀರಿ. ನೀವೆಲ್ಲರೂ ಉತ್ತಮ ವ್ರತವನ್ನು ಪಾಲಿಸಿರುವಿರಿ. ಕಕುತ್ಸ್ಥ ಕುಲಭೂಷಣರಾದ ನೀವು ನಾಲ್ವರೂ ಪತ್ನಿಗಳಿಂದ ಯುಕ್ತರಾಗಿರಿ. ಈ ಕಾರ್ಯದಲ್ಲಿ ವಿಳಂಬ ಮಾಡುವುದು ಸರಿಯಲ್ಲ.॥32-33½॥
ಮೂಲಮ್ - 34
ಜನಕಸ್ಯ ವಚಃ ಶ್ರುತ್ವಾ ಪಾಣಿನ್ಪಾಣಿಭಿರಸ್ಪೃಶನ್ ॥
ಮೂಲಮ್ - 35
ಚತ್ವಾರಸ್ತೇ ಚತಸೄಣಾಂ ವಸಿಷ್ಠಸ್ಯ ಮತೇ ಸ್ಥಿತಾಃ ।
ಅಗ್ನಿಂ ಪ್ರದಕ್ಷಿಣಂ ಕೃತ್ವಾ ವೇದಿಂ ರಾಜಾನಮೇವ ಚ ॥
ಮೂಲಮ್ - 36
ಋಷೀಂಶ್ಚಾಪಿ ಮಹಾತ್ಮಾನಃ ಸಭಾರ್ಯ ರಘೂದ್ವಹಾಃ ।
ಯಥೋಕ್ತೇನ ತತಶ್ಚಕ್ರುರ್ವಿವಾಹಂ ವಿಧಿಪೂರ್ವಕಮ್ ॥
ಅನುವಾದ
ಜನಕನಾಡಿದ ಮಾತನ್ನು ಕೇಳಿ ಆ ನಾಲ್ವರೂ ರಾಜಕುಮಾರರು ನಾಲ್ವರು ರಾಜಕುಮಾರಿಯರ ಪಾಣಿಗ್ರಹಣ ಮಾಡಿದರು. ಮತ್ತೆ ವಸಿಷ್ಠರ ಸಮ್ಮತಿಯಿಂದ ಆ ರಘುಕುಲರತ್ನ ಮಹಾತ್ಮರಾದ ರಾಜಕುಮಾರರು ತಮ್ಮ-ತಮ್ಮ ಪತ್ನಿಯರೊಂದಿಗೆ ಅಗ್ನಿ, ವೇದೀ, ರಾಜಾ ದಶರಥ ಹಾಗೂ ಋಷಿಮುನಿಗಳ ಪ್ರದಕ್ಷಿಣೆ ಮಾಡಿದರು ಮತ್ತು ವೇದೋಕ್ತ ವಿಧಿಗನುಸಾರ ವೈವಾಹಿಕ ಕಾರ್ಯವನ್ನು ಪೂರ್ಣ ಗೊಳಿಸಿದರು.॥34-36॥
ಮೂಲಮ್ - 37
ಪುಷ್ಪವೃಷ್ಟಿರ್ಮಹತ್ಯಾಸೀದಂತರಿಕ್ಷಾತ್ ಸುಭಾಸ್ವರಾ ।
ದಿವ್ಯದುಂದುಭಿನಿರ್ಘೋಷೈರ್ಗೀತವಾದಿತ್ರನಿಃಸ್ವನೈಃ ॥
ಮೂಲಮ್ - 38
ನನೃತುಶ್ಚಾಪ್ಸರಃ ಸಂಘಾ ಗಂಧರ್ವಾಶ್ಚ ಜಗುಃ ಕಲಮ್ ।
ವಿವಾಹೇ ರಘುಮುಖ್ಯಾನಾಂ ತದದ್ಭುತಮದೃಶ್ಯ ತ ॥
ಅನುವಾದ
ಆಗ ಆಕಾಶದಿಂದ ಸುಂದರವಾದ ಭಾರೀ ಪುಷ್ಪವೃಷ್ಟಿಯಾಯಿತು. ದಿವ್ಯ ದುಂದುಭಿಗಳ ಗಂಭೀರ ಧ್ವನಿ, ಮಂಗಳಗೀತೆಗಳ ಮಂಜುಳ ನಿನಾದ, ದಿವ್ಯವಾದ್ಯಗಳ ಮಧುರ ಘೋಷದೊಂದಿಗೆ ಅಪ್ಸರೆಯರ ತಂಡಗಳು ನರ್ತನ ಮಾಡತೊಡಗಿದರು. ಗಂಧರ್ವರು ಸುಸ್ವರವಾಗಿ ಹಾಡತೊಡಗಿದರು. ಆ ರಘುವಂಶ ಶಿರೋಮಣಿ ರಾಜಕುಮಾರರ ವಿವಾಹದಲ್ಲಿ ಇಂತಹ ಅದ್ಭುತ ದೃಶ್ಯ ಕಂಡುಬರುತ್ತಿತ್ತು.॥37-38॥
ಮೂಲಮ್ - 39
ಈದೃಶೇ ವರ್ತಮಾನೇ ತು ತೂರ್ಯೋದ್ಧುಷ್ಟನಿನಾದಿತೇ ।
ತ್ರಿರಗ್ನಿಂ ತೇ ಪರಿಕ್ರಮ್ಯ ಊಹುರ್ಭಾರ್ಯಾ ಮಹೌಜಸಃ ॥
ಅನುವಾದ
ಮಂಗಳ ವಾದ್ಯಗಳು ಪ್ರತಿಧ್ವನಿಸುತ್ತಿರುವಾಗ ವಿವಾಹೋತ್ಸವದಲ್ಲಿ ಆ ಮಹಾ ತೇಜಸ್ವೀ ರಾಜಕುಮಾರರು ಅಗ್ನಿಗೆ ಮೂರು ಪ್ರದಕ್ಷಿಣೆ ಬಂದು ಪತ್ನಿಯರನ್ನು ಸ್ವೀಕರಿಸಿ ವಿವಾಹಕಾರ್ಯವನ್ನು ನೆರವೇರಿಸಿದರು.॥39॥
ಮೂಲಮ್ - 40
ಅಥೋಪಕಾರ್ಯಂ ಜಗ್ಮುಸ್ತೇ ಸಭಾರ್ಯಾ ರಘುನಂದನಾಃ ।
ರಾಜಾಪ್ಯನುಯಯೌಪಶ್ಯನ್ಸರ್ಷಿಸಂಘಃ ಸಬಾಂಧವಃ ॥
ಅನುವಾದ
ಅನಂತರ ರಘುನಂದನರಾದ ನಾಲ್ವರು ಸಹೋದರರು ತಮ್ಮ ಪತ್ನಿಯರೊಂದಿಗೆ ತಮ್ಮ ಬಿಡದಿಯನ್ನು ಪ್ರವೇಶಿಸಿದರು. ರಾಜಾ ದಶರಥನೂ ಋಷಿಗಳ ಮತ್ತು ಬಂಧು-ಬಾಂಧವರೊಂದಿಗೆ ಮಕ್ಕಳು ಮತ್ತು ಸೊಸೆಯರನ್ನು ನೋಡುತ್ತಾ ಅವರ ಹಿಂದೆ - ಹಿಂದೆ ನಡೆದರು.॥40॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಎಪ್ಪತ್ತಮೂರನೆಯ ಸರ್ಗ ಪೂರ್ಣವಾಯಿತು.॥73॥