वाचनम्
ಭಾಗಸೂಚನಾ
ವಿಶ್ವಾಮಿತ್ರರು ಭರತ ಮತ್ತು ಶತ್ರುಘ್ನರಿಗೆ ಕುಶಧ್ವಜನ ಕನ್ಯೆಯರನ್ನು ವರಣ ಮಾಡಿದುದು, ಜನಕನ ಒಪ್ಪಿಗೆ, ದಶರಥನು ತನ್ನ ಮಕ್ಕಳ ಕಲ್ಯಾಣಕ್ಕಾಗಿ ನಾಂದೀಶ್ರಾದ್ಧ - ಗೋದಾನ ಮುಂತಾದ ಕರ್ಮಗಳನ್ನು ಮಾಡಿದುದು
ಮೂಲಮ್ - 1
ತಮುಕ್ತವಂತಂ ವೈದೇಹಂ ವಿಶ್ವಾಮಿತ್ರೋ ಮಹಾಮುನಿಃ ।
ಉವಾಚ ವಚನಂ ವೀರಂ ವಸಿಷ್ಠ ಸಹಿತೋ ನೃಪಮ್ ॥
ಅನುವಾದ
ವಿದೇಹರಾಜಾ ಜನಕನು ತನ್ನ ಮಾತನ್ನು ಮುಗಿಸಿದಾಗ ವಸಿಷ್ಠ ಸಹಿತ ವಿಶ್ವಾಮಿತ್ರರು ಆ ವೀರ ಅರಸನಲ್ಲಿ ಈ ಪ್ರಕಾರ ನುಡಿದರು.॥1॥
ಮೂಲಮ್ - 2
ಅಚಿಂತ್ಯಾನ್ಯಪ್ರಮೇಯಾಣಿ ಕುಲಾನಿ ನರಪುಂಗವ ।
ಇಕ್ಷ್ವಾಕೂಣಾಂ ವಿದೇಹಾನಾಂ ನೈಷಾಂ ತುಲ್ಯೋಽಸ್ತಿ ಕಶ್ಚನ ॥
ಅನುವಾದ
ನರಶ್ರೇಷ್ಠನೇ! ಇಕ್ಷ್ವಾಕು ಮತ್ತು ವಿದೇಹ ಎರಡೂ ರಾಜರ ವಂಶಗಳು ಅಚಿಂತ್ಯವೂ ಅಪ್ರಮೇಯವೂ ಆಗಿವೆ. ಇವೆರಡಕ್ಕೆ ಸಮಾನವಾದ ಬೇರೆ ಯಾವುದೇ ವಂಶವಿಲ್ಲ.॥2॥
ಮೂಲಮ್ - 3
ಸದೃಶೋ ಧರ್ಮಸಂಬಂಧಃ ಸದೃಶೋ ರೂಪಸಂಪದಾ ।
ರಾಮಲಕ್ಷ್ಮಣಯೋ ರಾಜನ್ ಸೀತಾ ಚೋರ್ಮಿಲಯಾ ಸಹ ॥
ಅನುವಾದ
ರಾಜನೇ! ಇವೆರಡು ಕುಲಗಳಲ್ಲಿ ಸ್ಥಾಪಿತವಾಗುವ ಧರ್ಮ ಸಂಬಂಧವು ಸರ್ವಥಾ ಪರಸ್ಪರ ಯೋಗ್ಯವಾಗಿದೆ. ರೂಪ ವೈಭವದ ದೃಷ್ಟಿಯಿಂದಲೂ ಸಮಾನವಾಗಿದೆ; ಏಕೆಂದರೆ ಊರ್ಮಿಲಾ ಸಹಿತ ಸೀತೆಯು ಶ್ರೀರಾಮ-ಲಕ್ಷ್ಮಣರಿಗೆ ಅನುರೂಪರಾಗಿದ್ದಾರೆ.॥3॥
ಮೂಲಮ್ - 4
ವಕ್ತವ್ಯಂ ಚ ನರಶ್ರೇಷ್ಠ ಶ್ರೂಯತಾಂ ವಚನಂ ಮಮ ।
ಭ್ರಾತಾ ಯವೀಯಾನ್ ಧರ್ಮಜ್ಞ ಏಷ ರಾಜಾ ಕುಶಧ್ವಜಃ ॥
ಮೂಲಮ್ - 5
ಅಸ್ಯಧರ್ಮಾತ್ಮನೋ ರಾಜನ್ ರೂಪೇಣಾಪ್ರತಿಮಂ ಭುವಿ ।
ಸುತಾದ್ವಯಂ ನರಶ್ರೇಷ್ಠಪತ್ನ್ಯರ್ಥಂ ವರಯಾಮಹೇ ॥
ಮೂಲಮ್ - 6
ಭರತಸ್ಯ ಕುಮಾರಸ್ಯ ಶತ್ರುಘ್ನಸ್ಯ ಚ ಧೀಮತಃ ।
ವರಯೇ ತೇ ಸುತೇ ರಾಜಂಸ್ತಯೋರರ್ಥೇ ಮಹಾತ್ಮನೋಃ ॥
ಅನುವಾದ
ನರಶ್ರೇಷ್ಠನೇ! ಮುಂದೆ ನಾನೂ ಏನೋ ಹೇಳುವುದಿದೆ; ಕೇಳು - ರಾಜನೇ! ಧರ್ಮಜ್ಞನಾದ ನಿನ್ನ ತಮ್ಮ ಕುಶ ಧ್ವಜನಿಗೂ ಇಬ್ಬರು ಕನ್ಯೆಯರಿರುವರು. ಅವರು ಭೂಮಂಡಲದಲ್ಲಿ ಅನುಪಮ ಸುಂದರಿಯರಾಗಿದ್ದಾರೆ. ನರಶ್ರೇಷ್ಠ ಭೂಪಾಲನೇ! ನಾನು ಆ ಇಬ್ಬರು ಕನ್ಯೆಯರನ್ನು ಕುಮಾರ ಭರತ ಮತ್ತು ಬುದ್ಧಿವಂತ ಶತ್ರುಘ್ನ ಈ ರಾಜಕುಮಾರರಿಗೆ ಧರ್ಮಪತ್ನಿಯರಾಗಿಸಲು ವರಣ ಮಾಡುತ್ತೇನೆ.॥4-6॥
ಮೂಲಮ್ - 7
ಪುತ್ರಾ ದಶರಥಸ್ಯೇಮೇ ರೂಪಯೌವನಶಾಲಿನಃ ।
ಲೋಕಪಾಲೋಪಮಾಃ ಸರ್ವೇ ದೇವತುಲ್ಯಪರಾಕ್ರಮಾಃ ॥
ಅನುವಾದ
ದಶರಥರಾಜನ ಈ ಎಲ್ಲ ಪುತ್ರರು ರೂಪ ಮತ್ತು ಯೌವನದಿಂದ ಸುಶೋಭಿತರೂ, ಲೋಕಪಾಲಕರಂತೆ ತೇಜಸ್ವಿಗಳೂ, ದೇವತೆಗಳಂತೆ ಪರಾಕ್ರಮಿಗಳೂ ಆಗಿದ್ದಾರೆ.॥7॥
ಮೂಲಮ್ - 8
ಉಭಯೋರಪಿ ರಾಜೇಂದ್ರ ಸಂಬಂಧೇನಾನುಬಧ್ಯತಾಮ್ ।
ಇಕ್ಷ್ವಾಕು ಕುಲಮವ್ಯಗ್ರಂ ಭವತಃ ಪುಣ್ಯಕರ್ಮಣಃ ॥
ಅನುವಾದ
ರಾಜೇಂದ್ರನೇ! ಭರತ-ಶತ್ರುಘ್ನ ಇವರಿಬ್ಬರಿಗೂ ಕನ್ಯಾದಾನ ಮಾಡಿ ನೀನು ಈ ಸಮಸ್ತ ಇಕ್ಷ್ವಾಕು ಕುಲದೊಂದಿಗೆ ಸಂಬಂಧಿತನಾಗು. ನೀನು ಪುಣ್ಯಪುರುಷನಾಗಿರುವೆ. ನಿನ್ನ ಮನಸ್ಸಿನಲ್ಲಿ ವ್ಯಗ್ರತೆ ಬಾರದಿರಲಿ. (ಅರ್ಥಾತ್ ಇಂತಹ ಮಹಾ ಸಮ್ರಾಟನೊಂದಿಗೆ ನಾನು ಒಂದೇ ಸಮಯದಲ್ಲಿ ನಾಲ್ಕು ವೈವಾಹಿಕ ಸಂಬಂಧಗಳನ್ನು ಹೇಗೆ ನಿರ್ವಹಿಸಬಲ್ಲೆನು? ಎಂದು ಚಿಂತಿಸಬೇಕಾಗಿಲ್ಲ.॥8॥
ಮೂಲಮ್ - 9
ವಿಶ್ವಾಮಿತ್ರವಚಃ ಶ್ರುತ್ವಾ ವಸಿಷ್ಠಸ್ಯ ಮತೇ ತದಾ ।
ಜನಕಃ ಪ್ರಾಂಜಲಿರ್ವಾಕ್ಯಮುವಾಚಮುನಿಪುಂಗವೌ ॥
ಅನುವಾದ
ವಸಿಷ್ಠರ ಸಮ್ಮತಿಯಿಂದ ವಿಶ್ವಾಮಿತ್ರರ ಈ ಮಾತನ್ನು ಕೇಳಿದಾಗ ಜನಕನು ಕೈಮುಗಿದು ಇಬ್ಬರೂ ಮುನಿಗಳಲ್ಲಿ ಇಂತೆಂದನು.॥9॥
ಮೂಲಮ್ - 10
ಕುಲಂ ಧನ್ಯಮಿದಂ ಮನ್ಯೇ ಯೇಷಾಂ ತೌ ಮುನಿಪುಂಗವೌ ।
ಸದೃಶಂ ಕುಲಸಂಬಂಧಂ ಯದಾಜ್ಞಾಪಯತಃ ಸ್ವಯಮ್ ॥
ಅನುವಾದ
ಮುನಿಪುಂಗವರೇ! ನಾನು ನನ್ನ ಕುಲವನ್ನು ಧನ್ಯವಾಯಿತೆಂದು ತಿಳಿಯುತ್ತೇನೆ. ನೀವಿಬ್ಬರೂ ಇಕ್ವಾಕ್ಷುವಂಶಕ್ಕೆ ಯೋಗ್ಯವೆಂದು ತಿಳಿದು ನಮ್ಮೊಂದಿಗೆ ಸಂಬಂಧ ಬೆಳೆಸಲು ಆಜ್ಞೆ ಕೊಡುತ್ತಿದ್ದೀರಿ.॥10॥
ಮೂಲಮ್ - 11
ಏವಂ ಭವತು ಭದ್ರಂ ವಃ ಕುಶಧ್ವಜಸುತೇ ಇಮೇ ।
ಪತ್ನ್ಯೌ ಭಜೇತಾಂ ಸಹಿತೌ ಶತ್ರುಘ್ನಭರತಾವುಭೌ ॥
ಅನುವಾದ
ನಿಮಗೆ ಮಂಗಳವಾಗಲಿ, ನೀವು ಹೇಳಿದಂತೆಯೇ ಆಗುವುದು. ಸದಾಕಾಲ ಜೊತೆ-ಜೊತೆಯಾಗಿ ಇರುವ ಈ ಭರತ ಮತ್ತು ಶತ್ರುಘ್ನರು ಕುಶಧ್ವಜನ ಕನ್ಯೆಯರನ್ನು ತಮ್ಮ-ತಮ್ಮ ಧರ್ಮಪತ್ನಿಯಾಗಿ ಸ್ವೀಕರಿಸಲಿ.॥11॥
ಮೂಲಮ್ - 12
ಏಕಾಹ್ನಾ ರಾಜಪುತ್ರೀಣಾಂ ಚತಸೄಣಾಂ ಮಹಾಮುನೇ ।
ಪಾಣೀನ್ ಗೃಹ್ಣಂತು ಚತ್ವಾರೋ ರಾಜಪುತ್ರಾ ಮಹಾಬಲಾಃ ॥
ಅನುವಾದ
ಮಹಾಮುನಿಗಳೇ! ಈ ಮಹಾಬಲಶಾಲಿಗಳಾದ ನಾಲ್ವರು ರಾಜಕುಮಾರರು ಒಂದೇ ದಿನ ನಮ್ಮ ನಾಲ್ಕು ಮಂದಿ ರಾಜಕುಮಾರಿಯರ ಪ್ರಾಣಿಗ್ರಹಣ ಮಾಡಲಿ.॥12॥
ಮೂಲಮ್ - 13
ಉತ್ತರೇ ದಿವಸೇ ಬ್ರಹನ್ ಫಲ್ಗುನೀಭ್ಯಾಂ ಮನೀಷಿಣಃ ।
ವೈವಾಹಿಕಂ ಪ್ರಶಂಸಂತಿ ಭಗೋ ಯತ್ರ ಪ್ರಜಾಪತಿಃ ॥
ಅನುವಾದ
ಬ್ರಹ್ಮರ್ಷಿಗಳೇ! ಮುಂದಿನ ಎರಡು ದಿನಗಳಲ್ಲಿ ಫಲ್ಗುಣಿ ಎಂಬ ಎರಡು ನಕ್ಷತ್ರಗಳಿವೆ. ಇದರಲ್ಲಿ ಮೊದಲ ದಿನ ಪೂರ್ವ ಫಲ್ಗುಣಿ, ಎರಡನೆಯ ದಿನ ಉತ್ತರಾ ಫಲ್ಗುಣಿ ನಕ್ಷತ್ರವಿದೆ. ಅದರ ದೇವತೆ ಪ್ರಜಾಪತಿ ಭಗ(ಹಾಗೂ ಅರ್ಯಮಾ)ವಾಗಿದೆ. ಜ್ಞಾನಿಗಳಾದವರು ಈ ನಕ್ಷತ್ರದಲ್ಲಿ ವಿವಾಹ ಕಾರ್ಯ ಮಾಡುವುದು ಬಹಳ ಉತ್ತಮವೆಂದು ತಿಳಿಸುತ್ತಾರೆ.॥13॥
ಮೂಲಮ್ - 14
ಏವಮುಕ್ತ್ವಾ ವಚಃ ಸೌಮ್ಯಂ ಪ್ರತ್ಯುತ್ಥಾಯ ಕೃತಾಂಜಲಿಃ ।
ಉಭೌ ಮುನಿವರೌ ರಾಜಾ ಜನಕೋ ವಾಕ್ಯಮಬ್ರವೀತ್ ॥
ಅನುವಾದ
ಈ ಪ್ರಕಾರ ಮನೋಹರ ಮಾತನ್ನು ಹೇಳಿ ರಾಜಾ ಜನಕನು ಎದ್ದು ನಿಂತು ಆ ಇಬ್ಬರೂ ಮುನಿವರರಲ್ಲಿ ಕೈಮುಗಿದು ಇಂತೆಂದನು-॥14॥
ಮೂಲಮ್ - 15
ಪರೋ ಧರ್ಮಃ ಕೃತೋ ಮಹ್ಯಂ ಶಿಷ್ಯೋಽಸ್ಮಿ ಭವತೋಸ್ತಥಾ ।
ಇಮಾನ್ಯಾಸನಮುಖ್ಯಾನಿ ಆಸ್ಯತಾಂ ಮುನಿಪುಂಗವೌ ॥
ಅನುವಾದ
ನೀವು ಕನ್ಯೆಯರ ವಿವಾಹವನ್ನು ನಿಶ್ಚಯಿಸಿ ನನಗೆ ಮಹಾನ್ ಧರ್ಮವನ್ನು ಒದಗಿಸಿ ಕೊಟ್ಟಿರುವಿರಿ. ನಾನು ನಿಮ್ಮಿಬ್ಬರಿಗೂ ಶಿಷ್ಯನಾಗಿದ್ದೇನೆ. ಮುನಿವರರೇ! ಈ ಶ್ರೇಷ್ಠ ಆಸನಗಳಲ್ಲಿ ತಾವಿಬ್ಬರೂ ವಿರಾಜವಾನರಾಗಿರಿ.॥15॥
ಮೂಲಮ್ - 16
ಯಥಾ ದಶರಥಸ್ಯೇಯಂ ತಥಾಯೋಧ್ಯಾ ಪುರೀ ಮಮ ।
ಪ್ರಭುತ್ವೇ ನಾಸ್ತಿ ಸಂದೇಹೋ ಯಥಾರ್ಹಂ ಕರ್ತುಮರ್ಹಥ ॥
ಅನುವಾದ
ನಿಮಗೆ ರಾಜಾ ದಶರಥನ ಅಯೋಧ್ಯೆಯಂತೆಯೇ ಈ ನನ್ನ ಮಿಥಿಲೆಯೂ ಆಗಿದೆ. ಇದರ ಮೇಲೆ ಪೂರ್ಣ ಅಧಿಕಾರ ನಿಮಗಿದೆ. ಇದರಲ್ಲಿ ಸಂದೇಹವೇ ಇಲ್ಲ. ಆದ್ದರಿಂದ ತಾವು ಯಥಾಯೋಗ್ಯ ನನಗೆ ಅಪ್ಪಣೆ ಮಾಡಿರಿ.॥16॥
ಮೂಲಮ್ - 17
ತಥಾ ಬ್ರುವತಿ ವೈದೇಹೇ ಜನಕೇ ರಘುನಂದನಃ ।
ರಾಜಾ ದಶರಥೋ ಹೃಷ್ಟಃ ಪ್ರತ್ಯುವಾಚ ಮಹೀಪತಿಮ್ ॥
ಅನುವಾದ
ವಿದೇಹ ರಾಜಾ ಜನಕನು ಹೀಗೆ ಹೇಳಿದಾಗ ರಘುಕುಲನಂದನ ದಶರಥನು ಸಂತೋಷಗೊಂಡು ಮಿಥಿಲಾ ನರೇಶನಲ್ಲಿ ಈ ಪ್ರಕಾರ ಉತ್ತರಿಸಿದನು.॥17॥
ಮೂಲಮ್ - 18
ಯುವಾಮಸಂಖ್ಯೇಯಗುಣೌ ಭ್ರಾತರೌ ಮಿಥಿಲೇಶ್ವರೌ ।
ಋಷಯೋ ರಾಜಸಂಘಾಶ್ಚ ಭವದ್ ಭಯಾಮಭಿಪೂಜಿತಾಃ ॥
ಅನುವಾದ
ಮಿಥಿಲೇಶ್ವರನೇ! ನೀಮ್ಮಿಬ್ಬರು ಸಹೋದರರ ಗುಣಗಳು ಅಸಂಖ್ಯವಾಗಿವೆ. ತಾವುಗಳು ಋಷಿಗಳನ್ನು ಹಾಗೂ ರಾಜ ಸಮೂಹವನ್ನು ಚೆನ್ನಾಗಿ ಸತ್ಕರಿಸಿರುವಿರಿ.॥18॥
ಮೂಲಮ್ - 19
ಸ್ವಸ್ತಿ ಪ್ರಾಪ್ನುಹಿ ಭದ್ರಂ ತೇ ಗಮಿಷ್ಯಾಮಃ ಸ್ವಮಾಲಯಮ್ ।
ಶ್ರಾದ್ಧಕರ್ಮಾಣಿ ಸರ್ವಾಣಿ ವಿಧಿವದ್ವಿಧಾಸ್ಯ ಇತಿ ಚಾಬ್ರವೀತ್ ॥
ಅನುವಾದ
ನಿಮಗೆ ಮಂಗಳವಾಗಲಿ, ನೀವು ಮಂಗಳಕ್ಕೆ ಭಾಗಿಯಾಗಿದ್ದೀರಿ. ಈಗ ನಾವು ನಮ್ಮ ವಿಶ್ರಾಂತಿ ಸ್ಥಾನಕ್ಕೆ ತೆರಳುವೆವು. ಅಲ್ಲಿಗೆ ಹೋಗಿ ನಾನು ವಿಧಿವತ್ತಾಗಿ ನಾಂದೀ ಮುಖಶ್ರಾದ್ಧ ಕಾರ್ಯವನ್ನು ನೇರವೇರಿಸುವೆನು.॥19॥
ಮೂಲಮ್ - 20
ತಮಾಪೃಷ್ಟ್ವಾ ನರಪತಿಂ ರಾಜಾ ದಶರಥಸ್ತದಾ ।
ಮುನಿಂದ್ರೌ ತೌ ಪುರಸ್ಕೃತ್ಯಜಗಾಮಾಶು ಮಹಾಯಶಾಃ ॥
ಅನುವಾದ
ಅನಂತರ ಮಿಥಿಲಾ ನರೇಶನ ಅನುಮತಿ ಪಡೆದು ಮಹಾಯಶಸ್ವೀ ದಶರಥನು ಮುನಿಶ್ರೇಷ್ಠ ವಿಶ್ವಾಮಿತ್ರ ಮತ್ತು ವಸಿಷ್ಠರನ್ನು ಮುಂದಿಟ್ಟುಕೊಂಡು ತಮ್ಮ ಬಿಡದಿಗೆ ಹಿಂದಿರುಗಿದನು.॥20॥
ಮೂಲಮ್ - 21
ಸ ಗತ್ವಾ ನಿಲಯಂ ರಾಜಾ ಶ್ರಾದ್ಧಂ ಕೃತ್ವಾ ವಿಧಾನತಃ ।
ಪ್ರಭಾತೇ ಕಾಲ್ಯಮುತ್ಥಾಯ ಚಕ್ರೇ ಗೋದಾನಮುತ್ತಮಮ್ ॥
ಅನುವಾದ
ಬಿಡದಿಗೆ ಬಂದು ರಾಜಾ ದಶರಥನು ವಿಧಿವತ್ತಾಗಿ ಅಭ್ಯುದಾಯಿಕ ನಾಂದೀ ಶ್ರಾದ್ಧವನ್ನು ನೆರವೇರಿಸಿ, ಮರುದಿನ ಪ್ರಾತಃಕಾಲದಲ್ಲಿ ರಾಜನು ಕಾಲೊಚಿತವಾದ ಉತ್ತಮ ಗೋದಾನ ಕರ್ಮವನ್ನು ಪೂರೈಸಿದನು.॥21॥
ಮೂಲಮ್ - 22
ಗವಾಂ ಶತಸಹಸ್ರಂ ಚ ಬ್ರಾಹ್ಮಣೇಭ್ಯೋ ನರಾಧಿಪಃ ।
ಏಕೈಕಶೋ ದದೌ ರಾಜಾ ಪುತ್ರಾನುದ್ದಿಶ್ಯ ಧರ್ಮತಃ ॥
ಅನುವಾದ
ದಶರಥರಾಜನು ತನ್ನ ಒಬ್ಬೊಬ್ಬ ಪುತ್ರರ ಮಂಗಲಕ್ಕಾಗಿ ಧರ್ಮಾನುಸಾರ ಒಂದೊಂದು ಲಕ್ಷ ಗೋವುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದನು.॥22॥
ಮೂಲಮ್ - 23
ಸುವರ್ಣಶೃಂಗ್ಯಃ ಸಂಪನ್ನಾಃ ಸವತ್ಸಾಃ ಕಾಂಸ್ಯದೋಹನಾಃ ।
ಗವಾಂ ಶತಸಹಸ್ರಾಣಿ ಚತ್ವಾರಿ ಪುರುಷರ್ಷಭಃ ॥
ಮೂಲಮ್ - 24
ವಿತ್ತಮನ್ಯಚ್ಚ ಸುಬಹು ದ್ವಿಜೇಭ್ಯೋ ರಘುನಂದನಃ ।
ದದೌ ಗೋದಾನಮುದ್ದಿಶ್ಯ ಪುತ್ರಾಣಾಂ ಪುತ್ರವತ್ಸಲಃ ॥
ಅನುವಾದ
ಆ ಗೋವುಗಳು ಸರ್ವಾಲಂಕಾರಗಳಿಂದ ಕೂಡಿದ್ದು, ಎಲ್ಲವುಗಳ ಜೊತೆಗೆ ಕರುಗಳಿದ್ದು, ಕಂಚಿನ ಕ್ಷೀರ ಪಾತ್ರೆಗಳನ್ನೂ ದಾನ ಮಾಡಿದನು. ಹೀಗೆ ಪುತ್ರವತ್ಸಲ ರಘುಕುಲನಂದನ ಪುರುಷಶ್ರೇಷ್ಠ ದಶರಥನು ನಾಲ್ಕು ಲಕ್ಷ ಗೋವುಗಳನ್ನು, ಹೇರಳ ಧನವನ್ನೂ ಪುತ್ರರ ಸಮಾವರ್ತನದ ಉದ್ದೇಶದಿಂದ ಬ್ರಾಹ್ಮಣರಿಗೆ ನೀಡಿದನು.॥23-24॥
ಮೂಲಮ್ - 25
ಸ ಸುತೈಃ ಕೃತಗೋದಾನೈರ್ವೃತಃ ಸಂನೃಪತಿಸ್ತದಾ ।
ಲೋಕಪಾಲೈರಿವಾಭಾತಿ ವೃತಃ ಸೌಮ್ಯಃ ಪ್ರಜಾಪತಿಃ॥
ಅನುವಾದ
ಗೋದಾನ ಕರ್ಮ ನೆರವೇರಿಸಿ ಬಂದ ಪುರೋಹಿತರೊಂದಿಗೆ ಇದ್ದ ದಶರಥನು ಲೋಕಪಾಲಕರಿಂದ ಸುತ್ತುವರೆದ ಶಾಂತ ಸ್ವಭಾವದ ಪ್ರಜಾಪತಿ ಬ್ರಹ್ಮದೇವರಂತೆ ಶೋಭಿಸುತ್ತಿದ್ದನು.॥25॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಎಪ್ಪತ್ತೆರಡನೆಯ ಸರ್ಗ ಪೂರ್ಣವಾಯಿತು. ॥72॥