०७१ जनककुलवर्णनम्

वाचनम्
ಭಾಗಸೂಚನಾ

ಜನಕನು ತನ್ನ ವಂಶವನ್ನು ಪರಿಚಯ ಮಾಡಿಕೊಟ್ಟುದು, ಶ್ರೀರಾಮನಿಗೆ ಸೀತೆಯನ್ನು ಲಕ್ಷ್ಮಣನಿಗೆ ಊರ್ಮಿಳೆಯನ್ನು ಮದುವೆ ಮಾಡಿಕೊಡುವುದಾಗಿ ಮಾತು ಕೊಟ್ಟುದು

ಮೂಲಮ್ - 1

ಏವಂ ಬ್ರುವಾಣಂ ಜನಕಃ ಪ್ರತ್ಯುವಾಚ ಕೃತಾಂಜಲಿಃ ।
ಶ್ರೋತುಮರ್ಹಸಿ ಭದ್ರಂ ತೇ ಕುಲಂ ನಃಪರಿಕೀರ್ತಿತಮ್ ॥

ಮೂಲಮ್ - 2

ಪ್ರದಾನೇ ಹಿ ಮನುಶ್ರೇಷ್ಠ ಕುಲಂ ನಿರವಶೇಷತಃ ।
ವಕ್ತವ್ಯಂ ಕುಲಜಾತೇನ ತನ್ನಿಬೋಧ ಮಹಾಮತೇ ॥

ಅನುವಾದ

ಮಹರ್ಷಿ ವಸಿಷ್ಠರು ಈ ಪ್ರಕಾರ ಇಕ್ಷ್ವಾಕು ವಂಶದ ಪರಿಚಯ ಮಾಡಿಕೊಟ್ಟ ಬಳಿಕ ಜನಕರಾಜನು ಕೈಮುಗಿದು ಅವರಲ್ಲಿ ಹೇಳಿದನು-ಮುನಿಶ್ರೇಷ್ಠರೇ! ನಿಮಗೆ ಒಳ್ಳೆಯದಾಗಲಿ. ಈಗ ನಾವೂ ನಮ್ಮ ಕುಲದ ಪರಿಚಯ ಮಾಡಿಕೊಡುವೆವು. ಕೇಳಿರಿ - ಮಹಾಮತೇ! ಕುಲೀನ ಪುರುಷರು ಕನ್ಯಾದಾನದ ಸಮಯದಲ್ಲಿ ತಮ್ಮ ಕುಲದ ಪೂರ್ಣ ಪರಿಚಯವನ್ನು ಮಾಡಿಕೊಡುವುದು ವಾಡಿಕೆಯಾಗಿದೆ. ಆದ್ದರಿಂದ ತಾವು ಕೇಳುವ ಕೃಪೆ ಮಾಡಿರಿ.॥1-2॥

ಮೂಲಮ್ - 3

ರಾಜಾಭೂತ್ತ್ರಿಷು ಲೋಕೇಷು ವಿಶ್ರುತಃ ಸ್ವೇನ ಕರ್ಮಣಾ ।
ನಿಮಿಃ ಪರಮಧರ್ಮಾತ್ಮಾ ಸರ್ವಸತ್ತ್ವವತಾಂ ವರಃ ॥

ಅನುವಾದ

ಪ್ರಾಚೀನ ಕಾಲದಲ್ಲಿ ನಿಮಿ ಎಂಬ ಓರ್ವ ಪರಮ ಧಾರ್ಮಿಕ ರಾಜನಿದ್ದನು. ಅವರು ಸಮಸ್ತ ಧೈರ್ಯಶಾಲೀ ಪುರುಷರಲ್ಲಿ ಶ್ರೇಷ್ಠರು ಹಾಗೂ ಪರಾಕ್ರಮಶಾಲಿಯಾಗಿದ್ದು ಮೂರು ಲೋಕಗಳಲ್ಲಿ ವಿಖ್ಯಾತರಾಗಿದ್ದರು.॥3॥

ಮೂಲಮ್ - 4

ತಸ್ಯ ಪುತ್ರೋ ಮಿಥಿರ್ನಾಮ ಜನಕೋ ಮಿಥಿಪುತ್ರಕಃ ।
ಪ್ರಥಮೋಜನಕೋ ರಾಜಾ ಜನಕಾದಪ್ಯುದಾವಸುಃ ॥

ಅನುವಾದ

ಅವರಿಗೆ ಮಿಥಿ ಎಂಬ ಪುತ್ರನು ಹುಟ್ಟಿದನು. ಮಿಥಿಯ ಪುತ್ರ ಜನಕನಾದನು. ಇವರೇ ನಮ್ಮ ಕುಲದ ಮೊದಲನೆಯ ಜನಕರಾದರು (ಇವರ ಹೆಸರಿನಲ್ಲೇ ನಮ್ಮ ವಂಶದ ಪ್ರತಿಯೊಬ್ಬ ರಾಜನನ್ನು ಜನಕನೆಂದೇ ಕರೆಯುತ್ತಾರೆ.) ಜನಕನಿಂದ ಉದಾವಸು ಹುಟ್ಟಿದನು.॥4॥

ಮೂಲಮ್ - 5

ಉದಾವಸೋಸ್ತು ಧರ್ಮಾತ್ಮಾ ಜಾತೋ ವೈ ನಂದಿವರ್ಧನಃ ।
ನಂದಿವರ್ಧಸುತಃ ಶೂರಃ ಸುಕೇತುರ್ನಾಮ ನಾಮತಃ ॥

ಅನುವಾದ

ಉದಾವಸುವಿನಿಂದ ಧರ್ಮಾತ್ಮಾ ನಂದಿವರ್ಧನ, ನಂದಿವರ್ಧನನಿಗೆ ಸುಕೇತು ಎಂಬ ವೀರ ಪುತ್ರ ಹುಟ್ಟಿದನು.॥5॥

ಮೂಲಮ್ - 6

ಸುಕೇತೋರಪಿ ಧರ್ಮಾತ್ಮಾ ದೇವರಾತೋ ಮಹಾಬಲಃ ।
ದೇವರಾತಸ್ಯ ರಾಜರ್ಷೇರ್ಬೃಹದ್ರಥ ಇತಿ ಸ್ಮೃತಃ ॥

ಅನುವಾದ

ಸುಕೇತುವಿಗೆ ದೇವರಾತನೆಂಬ ಪುತ್ರನಾದನು. ದೇವರಾತನು ಮಹಾಬಲವಂತನು ಮತ್ತು ಧರ್ಮಾತ್ಮಾ ಆಗಿದ್ದನು. ರಾಜರ್ಷಿ ದೇವರಾತನಿಗೆ ಬೃಹದ್ರಥನೆಂಬ ಪ್ರಸಿದ್ಧ ಪುತ್ರನು ಹುಟ್ಟಿದನು.॥6॥

ಮೂಲಮ್ - 7

ಬೃಹದ್ರಥಸ್ಯ ಶೂರೋಽಭೂನ್ಮಹಾವೀರಃ ಪ್ರತಾಪವಾನ್ ।
ಮಹಾವೀರಸ್ಯ ಧೃತಿಮಾನ್ ಸುಧೃತಿಃ ಸತ್ಯವಿಕ್ರಮಃ ॥

ಅನುವಾದ

ಬೃಹದ್ರಥನ ಪುತ್ರ ಮಹಾವೀರನಾದನು. ಅವನು ಶೂರ, ಪ್ರತಾಪಿಯಾಗಿದ್ದನು. ಮಹಾವೀರನಿಂದ ಸುಧೃತಿಯಾದನು. ಅವನು ಧೈರ್ಯವಂತ ಮತ್ತು ಸತ್ಯಪರಾಕ್ರಮಿಯಾಗಿದ್ದನು.॥7॥

ಮೂಲಮ್ - 8

ಸುಧೃತೇರಪಿ ಧರ್ಮಾತ್ಮಾ ಧೃಷ್ಟಕೇತುಃ ಸುಧಾರ್ಮಿಕಃ ।
ಧೃಷ್ಟಕೇತೋಶ್ಚ ರಾಜರ್ಷೇರ್ಹರ್ಯಶ್ವಇತಿ ವಿಶ್ರುತಃ ॥

ಅನುವಾದ

ಸುಧೃತಿಯಲ್ಲಿ ಪರಮಧಾರ್ಮಿಕ, ಧರ್ಮಾತ್ಮ ದೃಷ್ಟಕೇತು ಹುಟ್ಟಿದನು. ರಾಜರ್ಷಿ ದೃಷ್ಟಕೇತುವಿಗೆ ಹರ್ಯಶ್ವ ಎಂಬ ವಿಖ್ಯಾತ ಪುತ್ರನಾದನು.॥8॥

ಮೂಲಮ್ - 9

ಹರ್ಯಶ್ವಸ್ಯ ಮರುಃ ಪುತ್ರೋಮರೋಃ ಪುತ್ರಃ ಪ್ರತೀಂಧಕಃ ।
ಪ್ರತೀಂಧಕಸ್ಯ ಧರ್ಮಾತ್ಮಾ ರಾಜಾ ಕೀರ್ತಿರಥಃ ಸುತಃ ॥

ಅನುವಾದ

ಹರ್ಯಶ್ವನ ಪುತ್ರ ಮರು, ಮರುವಿನ ಪುತ್ರ ಪ್ರತೀಂಧಕ ಮತ್ತು ಪ್ರತೀಂಧಕನಿಗೆ ಧರ್ಮಾತ್ಮಾ ರಾಜಾ ಕೀರ್ತಿರಥ ಹುಟ್ಟಿದನು.॥9॥

ಮೂಲಮ್ - 10

ಪುತ್ರಃ ಕೀರ್ತಿರಥಸ್ಯಾಪಿ ದೇವಮೀಢ ಇಥಿ ಸ್ಮೃತಃ ।
ದೇವಮೀಢಸ್ಯ ವಿಬುಧೋ ವಿಬುಧಸ್ಯ ಮಹೀಧ್ರಕಃ ॥

ಅನುವಾದ

ಕೀರ್ತಿರಥನ ಪುತ್ರ ದೇವಮೀಢನೆಂಬುವನು ವಿಖ್ಯಾತನಾದನು. ದೇವಮೀಢನಿಗೆ ವಿಬುಧ ಮತ್ತು ವಿಭುದನಿಗೆ ಮಹೀಧ್ರಕ ಪುತ್ರನಾದನು.॥10॥

ಮೂಲಮ್ - 11

ಮಹೀಧ್ರಕಸುತೋ ರಾಜಾ ಕೀರ್ತಿರಾತೋ ಮಹಾಬಲಃ ।
ಕೀರ್ತಿರಾತಸ್ಯ ರಾಜರ್ಷೇರ್ಮಹಾರೋಮಾ ವ್ಯಜಾಯತ ॥

ಅನುವಾದ

ಮಹೀಧ್ರಕನ ಪುತ್ರ ಮಹಾಬಲಿ ಕೀರ್ತಿರಾತನಾದನು. ರಾಜರ್ಷಿ ಕೀರ್ತಿರಾತನಿಗೆ ಮಹಾರೋಮಾ ಪುತ್ರನು ಹುಟ್ಟಿದನು.॥11॥

ಮೂಲಮ್ - 12

ಮಹಾರೋಮ್ಣಸ್ತು ಧರ್ಮಾತ್ಮಾ ಸ್ವರ್ಣರೋಮಾ ವ್ಯಜಾಯತ ।
ಸ್ವರ್ಣರೋಮಸ್ತು ರಾಜರ್ಷೇರ್ಹ್ರಸ್ವರೋಮಾ ವ್ಯಜಾಯತ ॥

ಅನುವಾದ

ಮಹಾರೋಮನಿಂದ ಧರ್ಮಾತ್ಮಾ ಸ್ವರ್ಣರೋಮನು ಹುಟ್ಟಿದನು. ರಾಜರ್ಷಿ ಸ್ವರ್ಣರೋಮನಿಂದ ಹ್ರಸ್ವರೋಮ ಉತ್ಪನ್ನನಾದನು.॥12॥

ಮೂಲಮ್ - 13

ತಸ್ಯ ಪುತ್ರದ್ವಯಂ ರಾಜ್ಞೇ ಧರ್ಮಜ್ಞಸ್ಯ ಮಹಾತ್ಮನಃ ।
ಜ್ಯೇಷ್ಠೋಽಹಮನುಜೋ ಭ್ರಾತಾ ಮಮ ವೀರಃ ಕುಶಧ್ವಜಃ ॥

ಅನುವಾದ

ಧರ್ಮಜ್ಞ ಮಹಾತ್ಮಾ ರಾಜಾ ಹ್ರಸ್ವರೋಮನಿಗೆ ಹಿರಿಯವನಾದ ನಾನು ಹಾಗೂ ಕಿರಿಯವ ನನ್ನ ತಮ್ಮ ವೀರ ಕುಶಧ್ವಜ ಎಂಬ ಇಬ್ಬರು ಹುಟ್ಟಿದೆವು.॥13॥

ಮೂಲಮ್ - 14

ಮಾಂ ತು ಜ್ಯೇಷ್ಠಂ ಪಿತಾ ರಾಜ್ಯೇ ಸೋಽಭಿಷಿಚ್ಯಪಿತಾಮಮ ।
ಕುಶಧ್ವಜಂ ಸಮಾವೇಶ್ಯ ಭಾರಂ ಮಯಿ ವನಂ ಗತಃ ॥

ಅನುವಾದ

ನನ್ನ ತಂದೆ ಹಿರಿಯವನಾದ ನನ್ನನ್ನು ರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿದನು. ಕುಶಧ್ವಜನ ಎಲ್ಲ ಭಾರವನ್ನು ನನಗೆ ಒಪ್ಪಿಸಿ ವನಕ್ಕೆ ಹೊರಟು ಹೋದನು.॥14॥

ಮೂಲಮ್ - 15

ವೃದ್ಧೇ ಪಿತರಿ ಸ್ವರ್ಯಾತೇ ಧರ್ಮೇಣ ಧುರಮಾವಹಮ್ ।
ಭ್ರಾತರಂ ದೇವಸಂಕಾಶಂ ಸ್ನೇಹಾತ್ ಪಶ್ಯನ್ ಕುಶಧ್ವಜಮ್ ॥

ಅನುವಾದ

ವೃದ್ಧಪಿತನು ಸ್ವರ್ಗಸ್ಥನಾದ ಮೇಲೆ ನನ್ನ ದೇವತುಲ್ಯ ತಮ್ಮ ಕುಶಧ್ವಜನನ್ನು ಸ್ನೇಹ ದೃಷ್ಟಿಯಿಂದ ನೋಡುತ್ತಾ ಈ ರಾಜ್ಯವನ್ನು ಧರ್ಮದಿಂದ ಆಳತೊಡಗಿದೆನು.॥15॥

ಮೂಲಮ್ - 16

ಕಸ್ಯಚಿತ್ತ್ವಥ ಕಾಲಸ್ಯ ಸಾಂಕಾಶ್ಯಾದಗತಃ ಪುರಾತ್ ।
ಸುಧನ್ವಾ ವೀರ್ಯವಾನ್ ರಾಜಾ ಮಿಥಿಲಾಮವರೋಧಕಃ ॥

ಅನುವಾದ

ಕೆಲ ಕಾಲದ ಬಳಿಕ ಪರಾಕ್ರಮಿ ರಾಜಾ ಸುಧನ್ವನು ಸಾಂಕಾಶ್ಯ ನಗರದಿಂದ ಬಂದು ಮಿಥಿಲೆಯನ್ನು ಮುತ್ತಿದನು.॥16॥

ಮೂಲಮ್ - 17

ಸ ಚ ಮೇ ಪ್ರೇಷಯಾಮಾಸ ಶೈವಂ ಧನುರನುತ್ತಮಮ್ ।
ಸೀತಾ ಚ ಕನ್ಯಾ ಪದ್ಮಾಕ್ಷೀ ಮಹ್ಯಂ ವೈ ದೀಯತಾಮಿತಿ ॥

ಅನುವಾದ

ಅವನು ದೂತನನ್ನು ಕಳಿಸಿ - ‘ನೀನು ಶಿವನ ಪರಮೋತ್ತಮ ಧನುಸ್ಸು ಮತ್ತು ನಿನ್ನ ಕಮಲಲೋಚನ ಕನ್ಯೆ ಸೀತೆಯನ್ನು ನನಗೆ ಒಪ್ಪಿಸಿ ಬಿಡು’ ಎಂಬ ಸಂದೇಶವನ್ನು ಹೇಳಿ ಕಳಿಸಿದನು.॥17॥

ಮೂಲಮ್ - 18

ತಸ್ಯಾಪ್ರದಾನಾನ್ಮಹರ್ಷೇ ಯುದ್ಧಮಾಸೀನ್ಮಯಾ ಸಹ ।
ಸ ಹತೋಽಭಿಮುಖೋ ರಾಜಾ ಸುಧನ್ವಾ ತು ಮಯಾ ರಣೇ ॥

ಅನುವಾದ

ಮಹರ್ಷಿಗಳೇ! ನಾನು ಅವನ ಬೇಡಿಕೆಯನ್ನು ಪೂರೈಸಲಿಲ್ಲ. ಆದ್ದರಿಂದ ನನ್ನೊಂದಿಗೆ ಅವನ ಯುದ್ಧವಾಯಿತು. ಆ ಸಂಗ್ರಾಮದಲ್ಲಿ ಯುದ್ಧಮಾಡುತ್ತಿರುವಾಗ ನನ್ನ ಕೈಯಿಂದ ಸುಧನ್ವನು ಹತನಾದನು.॥18॥

ಮೂಲಮ್ - 19

ನಿಹತ್ಯ ತಂ ಮುನಿಶ್ರೇಷ್ಠ ಸುಧನ್ವಾನಂ ನರಾಧಿಪಮ್ ।
ಸಾಂಕಾಶ್ಯೇ ಭ್ರಾತರಂ ಶೂರಮಭ್ಯಷಿಂಚಂ ಕುಶಧ್ವಜಮ್ ॥

ಅನುವಾದ

ಮುನಿಶ್ರೇಷ್ಠರೇ! ರಾಜಾ ಸುಧನ್ವನನ್ನು ಕೊಂದು ನಾನು ಸಾಂಕಾಶ್ಯನಗರದಲ್ಲಿ ನನ್ನ ಶೂರವೀರ ತಮ್ಮ ಕುಶಧ್ವಜನನ್ನು ಪಟ್ಟಾಭಿಷೇಕ ಮಾಡಿದೆನು.॥19॥

ಮೂಲಮ್ - 20

ಕನೀಯಾನೇಷ ಮೇ ಭ್ರಾತಾ ಅಹಂ ಜ್ಯೇಷ್ಠೋ ಮಹಾಮುನೇ ।
ದದಾಮಿ ಪರಮಪ್ರೀತೋ ವಧ್ವೌ ತೇ ಮುನಿಪುಂಗವ ॥

ಅನುವಾದ

ಮಹಾಮುನಿಗಳೇ! ಇವನು ನನ್ನ ಕಿರಿಯ ತಮ್ಮ ಕುಶಧ್ವಜನಾಗಿದ್ದಾನೆ ಮತ್ತು ನಾನು ಇವನಿಗೆ ಅಣ್ಣನಾಗಿದ್ದೇನೆ. ಮುನಿವರರೇ! ನಾನು ಬಹಳ ಸಂತೋಷದಿಂದ ನಿಮಗೆ ಇಬ್ಬರು ವಧುಗಳನ್ನು ಕೊಡುತ್ತಿದ್ದೇನೆ.॥20॥

ಮೂಲಮ್ - 21

ಸೀತಾಂ ರಾಮಾಯ ಭದ್ರಂ ತೇ ಊರ್ಮಿಲಾಂ ಲಕ್ಷಣಾಯ ವೈ ।
ವೀರ್ಯಶುಲ್ಕಾಂ ಮಮ ಸುತಾಂ ಸೀತಾಂ ಸುರಸುತೋಪಮಾಮ್ ॥

ಮೂಲಮ್ - 22

ದ್ವಿತೀಯಾಮೂರ್ಮಿಲಾಂ ಚೈವ ತ್ರಿರ್ವದಾಮಿ ನ ಸಂಶಯಃ ।
ದದಾಮಿ ಪರಮಪ್ರೀತೋ ವಧ್ವೌ ತೇ ಮುನಿಪುಂಗವ ॥

ಅನುವಾದ

ನಿಮಗೆ ಒಳ್ಳೆಯದಾಗಲಿ. ನಾನು ಸೀತೆಯನ್ನು ಶ್ರೀರಾಮನಿಗೆ ಮತ್ತು ಊರ್ಮಿಳೆಯನ್ನು ಲಕ್ಷ್ಮಣನಿಗೆ ಸಮರ್ಪಿಸುತ್ತಿದ್ದೇನೆ. ಯಾರನ್ನು ಪಡೆಯಲು ಪರಾಕ್ರಮವೇ ಶರತ್ತಾಗಿದೆಯೋ ಆ ದೇವಕನ್ಯೆಯಂತೆ ಇರುವ ಸುಂದರಿಯಾದ ನನ್ನ ಹಿರಿಯ ಪುತ್ರಿ ಸೀತೆಯನ್ನು ಶ್ರೀರಾಮನಿಗಾಗಿ ಹಾಗೂ ಇನ್ನೊಬ್ಬ ಪುತ್ರಿ ಊರ್ಮಿಳೆಯನ್ನು ಲಕ್ಷ್ಮಣನಿಗಾಗಿ ಕೊಡುವೆನು. ನಾನು ಈ ಮಾತನ್ನು ತ್ರಿವಾರ ಹೇಳುತ್ತಿದ್ದೇನೆ. ಇದರಲ್ಲಿ ಸಂಶಯವೇ ಇಲ್ಲ. ಮುನಿಶ್ರೇಷ್ಠರೇ! ನಾನು ಪರಮಪ್ರಸನ್ನನಾಗಿ ನಿಮಗೆ ಇಬ್ಬರು ಸೊಸೆಯರನ್ನು ಕೊಡುತ್ತಾ ಇದ್ದೇನೆ.॥21-22॥

ಮೂಲಮ್ - 23

ರಾಮಲಕ್ಷ್ಮಣಯೋ ರಾಜನ್ಗೋದಾನಂ ಕಾರಯಸ್ವ ಹ ।
ಪಿತೃಕಾರ್ಯಂ ಚ ಭದ್ರಂ ತೇ ತತೋ ವೈವಾಹಿಕಂ ಕುರು ॥

ಅನುವಾದ

(ವಸಿಷ್ಠರಲ್ಲಿ ಹೀಗೆ ಹೇಳಿ ರಾಜಾ ಜನಕನು ಮಹಾರಾಜಾ ದಶರಥನಲ್ಲಿ ಹೇಳಿದನು -) ರಾಜನೇ! ಈಗ ತಾವು ಶ್ರೀರಾಮ ಮತ್ತು ಲಕ್ಷ್ಮಣರ ಮಂಗಳಕ್ಕಾಗಿ ಇವರಿಂದ ಗೋದಾನ ಮಾಡಿಸಿರಿ. ನಿಮಗೆ ಶ್ರೇಯಸ್ಸಾಗಲಿ. ನಾಂದೀ ಮುಖ ಶ್ರಾದ್ಧವೂ ನೆರವೇರಿಸಿರಿ. ಬಳಿಕ ವಿವಾಹದ ಕಾರ್ಯ ಆರಂಭಿಸಿರಿ.॥23॥

ಮೂಲಮ್ - 24

ಮಘಾ ಹ್ಯದ್ಯ ಮಹಾಬಾಹೋ ತೃತೀಯ ದಿವಸೇ ವಿಭೋ ।
ಫಲ್ಗುನ್ಯಾಮುತ್ತರೇ ರಾಜಂಸ್ತಸ್ಮಿನ್ವೈವಾಹಿಕಂ ಕುರು ।
ರಾಮಲಕ್ಷ್ಮಣಯೋರರ್ಥೇ ದಾನಂ ಕಾರ್ಯಂ ಸುಖೋದಯಮ್ ॥

ಅನುವಾದ

ಮಹಾಬಾಹೋ! ಪ್ರಭೋ! ಇಂದು ಮಘಾನಕ್ಷತ್ರವಾಗಿದೆ. ರಾಜನೇ! ಇಂದಿನಿಂದ ಮೂರನೆಯ ದಿನ ಉತ್ತರಾ ಫಲ್ಗುಣೀ ನಕ್ಷತ್ರದಲ್ಲಿ ವೈವಾಹಿಕ ಕಾರ್ಯ ನಡೆಯಲಿ. ಇಂದು ಶ್ರೀರಾಮ-ಲಕ್ಷ್ಮಣರ ಅಭ್ಯುದಯಕ್ಕಾಗಿ (ಗೋ, ಭೂ, ತಿಲ, ಸುವರ್ಣ ಮೊದಲಾದ) ದಾನ ಮಾಡಬೇಕು. ಏಕೆಂದರೆ ಅದು ಮುಂದೆ ಸುಖಕೊಡುವುದಾಗಿದೆ.॥24॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಎಪ್ಪತ್ತೊಂದನೆಯ ಸರ್ಗ ಪೂರ್ಣವಾಯಿತು. ॥71॥