०७० दशरथवंशकथनम्

वाचनम्
ಭಾಗಸೂಚನಾ

ಜನಕನು ತನ್ನ ತಮ್ಮ ಕುಶಧ್ವಜನನ್ನು ಸಂಕಾಶ್ಯ ನಗರದಿಂದ ಕರೆಸಿದುದು, ದಶರಥರಾಜನ ಇಚ್ಛೆಯಂತೆ ವಸಿಷ್ಠರು ಸೂರ್ಯವಂಶದ ಪರಿಚಯ ಮಾಡಿಕೊಡುತ್ತಾ, ಶ್ರೀರಾಮ ಮತ್ತು ಲಕ್ಷ್ಮಣರಿಗಾಗಿ ಸೀತೆ ಹಾಗೂ ಊರ್ಮಿಳೆಯನ್ನು ವರಣಮಾಡಿದುದು

ಮೂಲಮ್ - 1

ತತಃ ಪ್ರಭಾತೇ ಜನಕಃ ಕೃತಕರ್ಮಾ ಮಹರ್ಷಿಭಿಃ ।
ಉವಾಚ ವಾಕ್ಯಂ ವಾಕ್ಯಜ್ಞಃ ಶತಾನಂದಂ ಪುರೋಹಿತಮ್ ॥

ಅನುವಾದ

ಅನಂತರ ಬೆಳಗಾದಾಗ ಜನಕನು ಮಹರ್ಷಿಗಳ ಸಹಯೋಗದಿಂದ ತನ್ನ ಯಜ್ಞಕಾರ್ಯವನ್ನು ನೆರವೇರಿಸಿದನು ಹಾಗೂ ವಾಕ್ಯಮರ್ಮಜ್ಞನಾದ ನರೇಶನು ತನ್ನ ಪುರೋಹಿತ ಶತಾನಂದರಲ್ಲಿ ಈ ಪ್ರಕಾರ ಹೇಳಿದನು.॥1॥

ಮೂಲಮ್ - 2

ಭ್ರಾತಾ ಮಮ ಮಹಾತೇಜಾವೀರ್ಯವಾನತಿಧಾರ್ಮಿಕಃ ।
ಕುಶಧ್ವಜ ಇತಿ ಖ್ಯಾತಃ ಪುರೀಮಧ್ಯವಸಚ್ಛುಭಾಮ್ ॥

ಮೂಲಮ್ - 3

ವಾರ್ಯಾಫಲಕಪರ್ಯಂತಾಂ ಪಿಬನ್ನಿಕ್ಷುಮತೀಂ ನದೀಮ್ ।
ಸಾಂಕಾಶ್ಯಾಂ ಪುಣ್ಯಸಂಕಾಶಾಂ ವಿಮಾನಮಿವ ಪುಷ್ಪಕಮ್ ॥

ಅನುವಾದ

ಬ್ರಾಹ್ಮಣೋತ್ತಮರೇ! ಮಹಾತೇಜಸ್ವೀ ಮತ್ತು ಪರಾಕ್ರಮಿ ನನ್ನ ತಮ್ಮ ಕುಶಧ್ವಜನು ಧರ್ಮಾತ್ಮನಾಗಿದ್ದು, ಈಗ ಇಕ್ಷುಮತಿ ನದಿಯ ಜಲವನ್ನು ಕುಡಿಯುತ್ತಾ, ಅದರ ತೀರದಲ್ಲಿ ನೆಲೆಸಿದ ಕಲ್ಯಾಣಮಯಿ ಸಾಂಕಾಶ್ಯ ನಗರಿಯಲ್ಲಿ ವಾಸಿಸುತ್ತಿರುವನು. ಆ ನಗರದ ಸುತ್ತಲೂ ಇರುವ ಕೋಟೆಯನ್ನು ರಕ್ಷಿಸಲು ದೊಡ್ಡ-ದೊಡ್ಡ ತೋಪುಗಳನ್ನು ಇಟ್ಟಿದ್ದನು. ಆ ಪುರಿಯು ಪುಷ್ಪಕ ವಿಮಾನದಂತೆ ವಿಸ್ತೃತವಾಗಿದ್ದು, ಪುಣ್ಯದಿಂದ ಸಿಗುವ ಸ್ವರ್ಗಲೋಕದಂತೆ ಸುಂದರವಾಗಿತ್ತು.॥2-3॥

ಮೂಲಮ್ - 4

ತಮಹಂ ದ್ರಷ್ಟುಮಿಚ್ಛಾಮಿ ಯಜ್ಞಗೋಪ್ತಾ ಸ ಮೇ ಮತಃ ।
ಪ್ರೀತಿಂ ಸೋಽಪಿ ಮಹಾತೇಜಾ ಇಮಾಂ ಭೋಕ್ತಾ ಮಯಾ ಸಹ ॥

ಅನುವಾದ

ಅಲ್ಲಿರುವ ನನ್ನ ತಮ್ಮನು ಈ ಶುಭ ಸಂದರ್ಭದಲ್ಲಿ ಇಲ್ಲಿ ಉಪಸ್ಥಿತನಾಗಿರುವುನ್ನು ನೋಡಲು ನಾನು ಬಯಸುತ್ತೇನೆ. ಏಕೆಂದರೆ ನನ್ನ ದೃಷ್ಟಿಯಿಂದ ಅವನು ಈ ಯಜ್ಞದ ಸಂರಕ್ಷಕನಾಗಿರುವನು. ಮಹಾತೇಜಸ್ವೀ ಕುಶಧ್ವಜನೂ ನನ್ನೊಂದಿಗೆ ಸೀತಾ-ರಾಮರ ವಿವಾಹದ ಈ ಮಂಗಲ ಸಮಾರಂಭದ ಸುಖ ಪಡೆಯಲಿ.॥4॥

ಮೂಲಮ್ - 5

ಏವಮುಕ್ತೇ ತು ವಚನೇ ಶತಾನಂದಸ್ಯ ಸನ್ನಿಧೌ ।
ಆಗತಾಃ ಕೇಚಿದವ್ಯಗ್ರಾಜನಕಸ್ತಾನ್ ಸಮಾದಿಶತ್ ॥

ಅನುವಾದ

ರಾಜನು ಹೀಗೆ ಹೇಳಿದಾಗ ಶತಾನಂದರ ಬಳಿಗೆ ಕೆಲವು ಧೀರ ಪುರುಷರು ಬಂದರು. ಆಗ ರಾಜಾ ಜನಕನು ಹೇಳಿದ ಮಾತನ್ನು ಅವರಿಗೆ ಶತಾನಂದರು ತಿಳಿಸಿದರು.॥5॥

ಮೂಲಮ್ - 6

ಶಾಸನಾತ್ತು ನರೇಂದ್ರಸ್ಯ ಪ್ರಯಯುಃ ಶೀಘ್ರವಾಜಿಭಿಃ ।
ಸಮಾನೇತುಂ ನರವ್ಯಾಘ್ರಂ ವಿಷ್ಣುಮಿಂದ್ರಾಜ್ಞಯಾಯಥಾ ॥

ಅನುವಾದ

ರಾಜನ ಆಜ್ಞೆಯಂತೆ ಆ ಶ್ರೇಷ್ಠದೂತರು ವೇಗವಾಗಿ ಓಡುವ ಕುದುರೆಗಳನ್ನು ಏರಿ ಪುರುಷಸಿಂಹ ಕುಶಧ್ವಜನನ್ನು ಕರೆತರಲು ಹೊರಟರು. ಇಂದ್ರನ ಆಜ್ಞೆಯಂತೆ ಅವನ ದೂತರು ವಿಷ್ಣುವನ್ನು ಕರೆತರಲು ಹೋಗುವಂತೆ ಇತ್ತು.॥6॥

ಮೂಲಮ್ - 7

ಸಾಂಕಾಶ್ಯಾಂ ತೇ ಸಮಾಗಮ್ಯ ದದೃಶುಶ್ಚಕುಶಧ್ವಜಮ್ ।
ನ್ಯವೇದಯನ್ಯಥಾವೃತ್ತಂ ಜನಕಸ್ಯ ಚ ಚಿಂತಿತಮ್ ॥

ಅನುವಾದ

ಸಾಂಕಾಶ್ಯವನ್ನು ತಲುಪಿ ಅವರು ಕುಶಧ್ವಜನನ್ನು ಕಂಡು, ಮಿಥಿಲೆಯ ಯಥಾರ್ಥ ಸಮಾಚಾರ ಹಾಗೂ ಜನಕನ ಅಭಿಪ್ರಾಯವನ್ನು ನಿವೇದಿಸಿಕೊಂಡರು.॥7॥

ಮೂಲಮ್ - 8

ತದ್ವೃತ್ತಂ ನೃಪತಿಃ ಶ್ರುತ್ವಾ ದೂತಶ್ರೇಷ್ಠೈರ್ಮಹಾಜವೈಃ ।
ಆಜ್ಞಯಾ ತು ನರೇಂದ್ರಸ್ಯ ಆಜಗಾಮ ಕುಶಧ್ವಜಃ ॥

ಅನುವಾದ

ಆ ಮಹಾವೇಗಶಾಲಿ ಶ್ರೇಷ್ಠ ದೂತರಿಂದ ಮಿಥಿಲೆಯ ಎಲ್ಲ ವೃತ್ತಾಂತವನ್ನು ಕೇಳಿ ಕುಶಧ್ವಜ ಮಹಾರಾಜನು ಜನಕನ ಅಪ್ಪಣೆಯಂತೆ ಮಿಥಿಲೆಗೆ ಬಂದನು.॥8॥

ಮೂಲಮ್ - 9½

ಸ ದದರ್ಶ ಮಹಾತ್ಮಾನಂ ಜನಕಂ ಧರ್ಮವತ್ಸಲಮ್ ।
ಸೋಽಭಿವಾದ್ಯ ಶತಾನಂದಂ ಜನಕಂಚಾತಿಧಾರ್ಮಿಕಮ್ ॥
ರಾಜಾರ್ಹಂ ಪರಮಂ ದಿವ್ಯಮಾನಸಂ ಸೋಽಧ್ಯರೋಹತ ।

ಅನುವಾದ

ಅಲ್ಲಿ ಅವನು ಧರ್ಮವತ್ಸಲ ಮಹಾತ್ಮಾ ಜನಕನನ್ನು ದರ್ಶಿಸಿದನು. ಮತ್ತೆ ಶತಾನಂದರು ಹಾಗೂ ಅತ್ಯಂತ ಧಾರ್ಮಿಕ ಜನಕನಿಗೆ ಪ್ರಣಾಮ ಮಾಡಿ, ರಾಜನಿಗೆ ಯೋಗ್ಯವಾದ ಪರಮ ದಿವ್ಯ ಸಿಂಹಾಸನದಲ್ಲಿ ವಿರಾಜಿಸಿದನು.॥9॥

ಮೂಲಮ್ - 10

ಉಪವಿಷ್ಟಾವುಭೌ ತೌ ತು ಭ್ರಾತರಾವಮಿತದ್ಯುತೀ ॥

ಮೂಲಮ್ - 11½

ಪ್ರೇಷಯಾಮಾಸತುರ್ವೀರೌ ಮಂತ್ರಿಶ್ರೇಷ್ಠಂ ಸುದಾಮನಮ್ ।
ಗಚ್ಛ ಮಂತ್ರಿಪತೇ ಶೀಘ್ರಮಿಕ್ಷ್ವಾಕುಮಮಿತಪ್ರಭಮ್ ॥
ಆತ್ಮಜೈಃ ಸಹ ದುರ್ಧರ್ಷಮಾನಯಸ್ವ ಸಮಂತ್ರಿಣಮ್ ।

ಅನುವಾದ

ಸಿಂಹಾಸನದಲ್ಲಿ ಕುಳಿತಿರುವ ಆ ಇಬ್ಬರು ಮಹಾ ತೇಜಸ್ವೀ ವೀರ ಸಹೋದರರು ಮಂತ್ರಿಪ್ರವರ ಸುದಾಮನನ್ನು ಕರೆಸಿ ಹೇಳಿದರು-ಮಂತ್ರಿ ಪ್ರವರನೇ! ನೀನು ಶೀಘ್ರವಾಗಿ ಅಮಿತ ತೇಜಸ್ವೀ ಇಕ್ಷ್ವಾಕು ಕುಲಭೂಷಣ ದಶರಥ ಮಹಾರಾಜರ ಬಳಿಗೆಹೋಗಿ, ಪುತ್ರರು, ಮಂತ್ರಿಗಳೊಂದಿಗೆ ಆ ದುರ್ಜಯ ನರೇಶನನ್ನು ಇಲ್ಲಿಗೆ ಕರೆದುಕೊಂಡು ಬಾ.॥10-11½॥

ಮೂಲಮ್ - 12½

ಔಪಕಾರ್ಯಾಂ ಸ ಗತ್ವಾತುರಘೂಣಾಂ ಕುಲವರ್ಧನಮ್ ॥
ದದರ್ಶ ಶಿರಸಾ ಚೈನಮಭಿವಾದ್ಯೇದಮಬ್ರವೀತ್ ।

ಅನುವಾದ

ಅಪ್ಪಣೆ ಪಡೆದ ಮಂತ್ರೀ ಸುದಾಮನು ಮಹಾರಾಜಾ ದಶರಥನ ಬಿಡದಿಗೆ ಹೋಗಿ ರಘುಕುಲದ ಕೀರ್ತಿಯನ್ನು ಹೆಚ್ಚಿಸುವ ಆ ನರೇಶನನ್ನು ನೋಡಿ, ತಲೆಬಾಗಿ ಅವನಿಗೆ ವಂದಿಸಿ ಈ ಪ್ರಕಾರ ಹೇಳಿದರು.॥12½॥

ಮೂಲಮ್ - 13½

ಅಯೋಧ್ಯಾಧಿಪತೇ ವೀರ ವೈದೇಹೋ ಮಿಥಿಲಾಧಿಪಃ ॥
ಸ ತ್ವಾಂ ದ್ರಷ್ಟುಂ ವ್ಯವಸಿತಃ ಸೋಪಾಧ್ಯಾಯ ಪುರೋಹಿತಮ್ ।

ಅನುವಾದ

ವೀರ ಅಯೋಧ್ಯಾ ನರೇಶರೇ! ಮಿಥಿಲಾಪತಿ ವಿದೇಹರಾಜ ಜನಕನು ಈಗ ಉಪಾಧ್ಯಾಯ, ಪುರೋಹಿತ ಸಹಿತ ತಮ್ಮ ದರ್ಶನ ಮಾಡಬೇಕೆಂದು ಬಯಸುತ್ತಿರುವನು.॥13½॥

ಮೂಲಮ್ - 14½

ಮಂತ್ರಿಶ್ರೇಷ್ಠವಚಃ ಶ್ರುತ್ವಾ ರಾಜಾ ಸರ್ಷಿಗಣಸ್ತಥಾ ॥
ಸಬಂಧುರಗಮತ್ ತತ್ರ ಜನಕೋ ಯತ್ರ ವರ್ತತೇ ।

ಅನುವಾದ

ಮಂತ್ರಿವರ ಸುದಾಮನ ಈ ಮಾತನ್ನು ಕೇಳಿ ರಾಜಾ ದಶರಥನು ಋಷಿಗಳು ಮತ್ತು ಬಂಧು-ಬಾಂಧವರೊಂದಿಗೆ ಜನಕ ರಾಜನು ಇರುವಲ್ಲಿಗೆ ಆಗಮಿಸಿದನು.॥14½॥

ಮೂಲಮ್ - 15½

ರಾಜಾ ಚ ಮಂತ್ರಿಸಹಿತಃ ಸೋಪಾಧ್ಯಾಯಃ ಸಬಾಂಧವಃ ॥
ವಾಕ್ಯಂ ವಾಕ್ಯವಿದಾಂ ಶ್ರೇಷ್ಠೋ ವೈದೇಹಮಿದಮಬ್ರವೀತ್ ।

ಅನುವಾದ

ಮಂತ್ರೀ, ಉಪಾಧ್ಯಾಯ ಮತ್ತು ಬಂಧು-ಬಾಂಧವರೊಂದಿಗೆ ರಾಜ ದಶರಥನು ವಾಗ್ಮಿಗಳಲ್ಲಿ ಶ್ರೇಷ್ಠನಾದ ವಿದೇಹ ರಾಜಾ ಜನಕನಲ್ಲಿ ಇಂತೆಂದನು.॥15½॥

ಮೂಲಮ್ - 16½

ವಿದಿತಂ ತೇ ಮಹಾರಾಜ ಇಕ್ಷ್ವಾಕುಕುಲದೈವತಮ್ ॥
ವಕ್ತಾಸರ್ವೇಷು ಕೃತ್ಯೇಷು ವಸಿಷ್ಠೋ ಭಗವಾನೃಷಿಃ ।

ಅನುವಾದ

ಮಹಾರಾಜರೇ! ಇಕ್ಷ್ವಾಕು ಕುಲದ ದೇವತೆ ಈ ಮಹರ್ಷಿ ವಸಿಷ್ಠರೇ ಆಗಿರುವುದು ನಿಮಗೆ ತಿಳಿದಿರಬಹುದು. ನಮ್ಮಲ್ಲಿ ಎಲ್ಲ ಕಾರ್ಯಗಳಲ್ಲಿ ಭಗವಾನ್ ವಸಿಷ್ಠರೇ ಕರ್ತವ್ಯವನ್ನು ಉಪದೇಶಿಸುವರು ಹಾಗೂ ಇವರ ಆಜ್ಞೆಯನ್ನೇ ಪಾಲಿಸಲಾಗುತ್ತದೆ.॥16½॥

ಮೂಲಮ್ - 17½

ವಿಶ್ವಾಮಿತ್ರಾಭ್ಯನುಜ್ಞಾತಃ ಸಹ ಸರ್ವೈರ್ಮಹರ್ಷಭಿಃ ॥
ಏಷ ವಕ್ಷ್ಯತಿ ಧರ್ಮಾತ್ಮಾ ವಸಿಷ್ಠೋ ಮೇ ಯಥಾಕ್ರಮಮ್ ।

ಅನುವಾದ

ಸಮಸ್ತ ಮಹರ್ಷಿಗಳ ಸಹಿತ ವಿಶ್ವಾಮಿತ್ರರು ಅಪ್ಪಣೆ ಮಾಡಿದರೆ ಧರ್ಮಾತ್ಮಾ ಈ ವಸಿಷ್ಠರು ಮೊದಲು ನನ್ನ ಕುಲ ಪರಂಪರೆಯ ಪರಿಚಯ ಕ್ರಮವಾಗಿ ಮಾಡಿಸುವರು.॥17½॥

ಮೂಲಮ್ - 18½

ತೂಷ್ಣೀಂಭೂತೇ ದಶರಥೇ ವಸಿಷ್ಠೋ ಭಗವಾನೃಷಿಃ ॥
ಉವಾಚ ವಾಕ್ಯಂ ವಾಕ್ಯಜ್ಞೋ ವೈದೇಹಂ ಸಪುರೋಧಸಮ್ ।

ಅನುವಾದ

ಹೀಗೆ ಹೇಳಿ ದಶರಥ ರಾಜನು ಸುಮ್ಮನಾದಾಗ ವಾಕ್ವಿದರಾದ ಭಗವಾನ್ ವಸಿಷ್ಠ ಮುನಿಗಳು ಪುರೋಹಿತ ಸಹಿತ ವಿದೇಹರಾಜನಲ್ಲಿ ಈ ಪ್ರಕಾರ ಹೇಳಿದರು.॥18½॥

ಮೂಲಮ್ - 19

ಅವ್ಯಕ್ತಪ್ರಭವೋ ಬ್ರಹ್ಮಾ ಶಾಶ್ವತೋ ನಿತ್ಯ ಅವ್ಯಯಃ ॥

ಮೂಲಮ್ - 20

ತಸ್ಮಾನ್ಮರೀಚಿಃ ಸಂಜಜ್ಞೇ ಮರೀಚೇಃ ಕಶ್ಯಪಃ ಸುತಃ ।
ವಿವಸ್ವಾನ್ಕಶ್ಯಪಾಜ್ಜಜ್ಞೇ ಮನುರ್ವೈವಸ್ವತಃ ಸ್ಮೃತಃ ॥

ಅನುವಾದ

ಅವ್ಯಕ್ತದಿಂದ ಬ್ರಹ್ಮನ ಉತ್ಪತ್ತಿಯಾಗಿದೆ. ಅವರು ಸ್ವಯಂಭೂ, ನಿತ್ಯ, ಶಾಶ್ವತ, ಅವಿನಾಶಿಯಾಗಿದ್ದಾರೆ. ಅವರಿಂದ ಮರೀಚಿಯ ಜನನವಾಯಿತು. ಮರೀಚಿಯ ಪುತ್ರ ಕಶ್ಯಪ, ಕಶ್ಯಪನಿಂದ ವಿವಸ್ವಾನ್ ಮತ್ತು ವಿವಸ್ವತನಿಂದ ವೈವಸ್ವತ ಮನುವು ಹುಟ್ಟಿದನು.॥19-20॥

ಮೂಲಮ್ - 21

ಮನುಃ ಪ್ರಜಾಪತಿಃ ಪೂರ್ವಮಿಕ್ಷ್ವಾಕುಶ್ಚ ಮನೋಃ ಸುತಃ ।
ತಮಿಕ್ಷ್ವಾಕುಮಯೋಧ್ಯಾಯಾಂ ರಾಜಾನಂ ವಿದ್ಧಿ ಪೂರ್ವಕಮ್ ॥

ಅನುವಾದ

ಮನು ಮೊದಲ ಪ್ರಜಾಪತಿಯಾಗಿದ್ದನು, ಅವನಿಗೆ ಇಕ್ಷ್ವಾಕು ಎಂಬ ಪುತ್ರನಾದನು. ಆ ಇಕ್ಷ್ವಾಕುವನ್ನೇ ಅಯೋಧ್ಯೆಯ ಪ್ರಥಮರಾಜನೆಂದು ನೀನು ತಿಳಿ.॥21॥

ಮೂಲಮ್ - 22

ಇಕ್ಷ್ವಾಕೋಸ್ತು ಸುತಃ ಶ್ರೀಮಾನ್ ಕುಕ್ಷಿರಿತ್ಯೇವ ವಿಶ್ರುತಃ ।
ಕುಕ್ಷೇರಥಾತ್ಮಜಃ ಶ್ರೀಮಾನ್ ವಿಕುಕ್ಷಿರುದಪದ್ಯತ ॥

ಅನುವಾದ

ಇಕ್ಷ್ವಾಕುವಿನ ಪುತ್ರನ ಹೆಸರು ಕುಕ್ಷಿ ಎಂದಿತ್ತು. ಅವನು ಬಹಳ ತೇಜಸ್ವಿಯಾಗಿದ್ದನು. ಕುಕ್ಷಿ ಅವನಿಂದ ವಿಕುಕ್ಷಿ ಎಂಬ ಕಾಂತಿಯುಳ್ಳ ಪುತ್ರನು ಹುಟ್ಟಿದನು.॥22॥

ಮೂಲಮ್ - 23

ವಿಕುಕ್ಷೇಸ್ತು ಮಹಾತೇಜಾ ಬಾಣಃ ಪುತ್ರಃ ಪ್ರತಾಪವಾನ್ ।
ಬಾಣಸ್ಯ ತು ಮಹಾತೇಜಾ ಅನರಣ್ಯಃ ಪ್ರತಾಪವಾನ್ ॥

ಅನುವಾದ

ವಿಕುಕ್ಷಿವಿನ ಪುತ್ರ ಮಹಾತೇಜಸ್ವಿ ಮತ್ತು ಪ್ರತಾಪಿ ಬಾಣ ಎಂಬುವನಾದನು. ಬಾಣನ ಪುತ್ರ ಅನರಣ್ಯನಾಗಿದ್ದನು. ಅವನು ಬಹಳ ತೇಜಸ್ವೀ ಮತ್ತು ಪ್ರತಾಪಿಯಾಗಿದ್ದನು.॥23॥

ಮೂಲಮ್ - 24

ಅನರಣ್ಯಾತ್ ಪೃಥುರ್ಜಜ್ಞೇ ತ್ರಿಶಂಕುಸ್ತುಪೃಥೋ ರಪಿ ।
ತ್ರಿಶಂಕೋರಭವತ್ಪುತ್ರೋ ಧುಂಧುಮಾರೋಮಹಾಯಶಾಃ ॥

ಅನುವಾದ

ಅನರಣ್ಯನಿಂದ ಪೃಥು, ಪೃಥುವಿನಿಂದ ತ್ರಿಶಂಕು ಹುಟ್ಟಿದನು. ತ್ರಿಶಂಕುವಿನ ಪುತ್ರ ಮಹಾಯಶಸ್ವಿ ಧುಂಧುಮಾರ ಆಗಿದ್ದನು.॥24॥

ಮೂಲಮ್ - 25

ಧುಂಧುಮಾರಾನ್ಮಹಾತೇಜಾ ಯುವನಾಶ್ವೋ ಮಹಾರಥಃ ।
ಯುವನಾಶ್ವಸುತಶ್ಚಾಸೀನ್ಮಾಂಧಾತಾ ಪೃಥಿವೀಪತಿಃ ॥

ಅನುವಾದ

ಧುಂಧುಮಾರನಿಂದ ಮಹಾತೇಜಸ್ವಿ ಮಹಾರಥಿ ಯುವನಾಶ್ವನ ಜನ್ಮವಾಯಿತು. ಯುವನಾಶ್ವನ ಪುತ್ರ ಮಾಂಧಾತಾ ಆದನು. ಅವನು ಸಮಸ್ತ ಭೂಮಂಡಲಕ್ಕೆ ಒಡೆಯನಾಗಿದ್ದನು.॥25॥

ಮೂಲಮ್ - 26

ಮಾಂಧಾತುಸ್ತು ಸುತಃ ಶ್ರೀಮಾನ್ ಸುಸಂಧಿರುದಪದ್ಯತ ।
ಸುಸಂಧೇರಪಿ ಪುತ್ರೌ ದ್ವೌ ಧ್ರುವಸಂಧಿಃ ಪ್ರಸೇನಜಿತ್ ॥

ಅನುವಾದ

ಮಾಂಧಾತನಿಂದ ಸುಸಂಧಿ ಎಂಬ ಕಾಂತಿಯುಳ್ಳ ಪುತ್ರನ ಜನ್ಮವಾಯಿತು. ಸುಸಂಧಿಗೆ ಧ್ರುವಸಂಧಿ ಮತ್ತು ಪ್ರಸೇನಜಿತ್ ಎಂಬ ಇಬ್ಬರು ಪುತ್ರರು ಹುಟ್ಟಿದರು.॥26॥

ಮೂಲಮ್ - 27

ಯಶಸ್ವೀ ಧ್ರುವಸಂಧೇಸ್ತು ಭರತೋ ನಾಮ ನಾಮತಃ ।
ಭರತಾತ್ ತು ಮಹಾತೇಜಾ ಅಸಿತೋ ನಾಮ ಜಾಯತ ॥

ಅನುವಾದ

ಧ್ರುವಸಂಧಿಯಿಂದ ಭರತನೆಂಬ ಯಶಸ್ವಿ ಪುತ್ರನಾದನು. ಭರತನಿಂದ ಮಹಾತೇಜಸ್ವೀ ಅಸಿತನ ಉತ್ಪತ್ತಿಯಾಯಿತು.॥27॥

ಮೂಲಮ್ - 28

ಯಸ್ಯೈತೇ ಪ್ರತಿರಾಜಾನ ಉದಪದ್ಯಂತ ಶತ್ರವಃ ।
ಹೈಹಯಾಸ್ತಾಲಜಂಘಾಶ್ಚ ಶೂರಾಶ್ಚ ಶಶಿಬಿಂದವಃ ॥

ಅನುವಾದ

ಅಸಿತರಾಜನಿಗೆ ಹೈಹಯ, ತಾಲಜಂ ಮತ್ತು ಶಶಬಿಂದು ಎಂಬ ಮೂವರು ಶತ್ರುಗಳಾಗಿದ್ದರು.॥28॥

ಮೂಲಮ್ - 29

ತಾಂಶ್ಚ ಸ ಪ್ರತಿಯುಧ್ಯನ್ವೈ ಯುದ್ಧೇ ರಾಜಾ ಪ್ರವಾಸಿತಃ ।
ಹಿಮವಂತಮುಪಾಗಮ್ಯ ಭಾರ್ಯಾಭ್ಯಾಂ ಸಹಿತಸ್ತದಾ ॥

ಅನುವಾದ

ಅಸಿತನು ಅವರೊಡನೆ ಯುದ್ಧಮಾಡುವಾಗ ಸೋತು ನಗರದಿಂದ ಹೊರಬಿದ್ದು ತನ್ನ ಇಬ್ಬರು ರಾಣಿಯರೊಂದಿಗೆ ಹಿಮಾಲಯಕ್ಕೆ ಹೋಗಿ ವಾಸಿಸಿದನು.॥29॥

ಮೂಲಮ್ - 30½

ಅಸಿತೋಽಲ್ಪಬಲೋ ರಾಜಾ ಕಾಲಧರ್ಮಮುಪೇಯಿವಾನ್ ।
ದ್ವೇ ಚಾಸ್ಯ ಭಾರ್ಯೇ ಗರ್ಭಿಣ್ಯೌ ಬಭೂವತುರಿತಿ ಶ್ರುತಿಃ ॥
ಏಕಾ ಗರ್ಭವಿನಾಶಾಯ ಸಪತ್ನೈ ಸಗರಂ ದದೌ ।

ಅನುವಾದ

ರಾಜಾ ಅಸಿತನ ಬಳಿ ಸ್ವಲ್ಪವೇ ಸೈನ್ಯ ಉಳಿದಿತ್ತು. ಅವನು ಅಲ್ಲೇ ಮೃತ್ಯು ಮುಖವಾದನು. ರಾಜನು ಸಾಯುವಾಗ ಅವನ ಇಬ್ಬರೂ ರಾಣಿಯರು ಗರ್ಭವತಿಯರಾಗಿದ್ದರು ಎಂದು ಕೇಳಿದ್ದೇವೆ. ಅವರಲ್ಲಿ ಒಬ್ಬಾಕೆಯು ಸವತಿಯ ಗರ್ಭವನ್ನು ನಾಶ ಮಾಡಲಿಕ್ಕಾಗಿ ಊಟದಲ್ಲಿ ವಿಷವನ್ನು ತಿನ್ನಿಸಿದಳು.॥30½॥

ಮೂಲಮ್ - 31

ತತಃ ಶೈಲವರೇ ರಮ್ಯೇ ಬಭೂವಾಭಿರತೋ ಮುನಿಃ ॥

ಮೂಲಮ್ - 32

ಭಾರ್ಗವಶ್ಚ್ಯವನೋ ನಾಮ ಹಿಮವಂತಮುಪಾಶ್ರಿತಃ ।
ತತ್ರ ಚೈಕಾ ಮಹಾಭಾಗಾ ಭಾರ್ಗವಂ ದೇವವರ್ಚಸಮ್ ॥

ಮೂಲಮ್ - 33

ವವಂದೇ ಪದ್ಮಪತ್ರಾಕ್ಷೀ ಕಾಂಕ್ಷಂತೀ ಸುತಮುತ್ತಮಮ್ ।
ತಮೃಷಿಂ ಸಾಭ್ಯುಪಾಗಮ್ಯ ಕಾಲಿಂದೀ ಚಾಭ್ಯವಾದಯತ್ ॥

ಅನುವಾದ

ಆಗ ಆ ರಮಣೀಯ ಶ್ರೇಷ್ಠ ಪರ್ವತದಲ್ಲಿ ಭೃಗುಕುಲೋತ್ಪನ್ನ ಮಹಾಮುನಿ ಚ್ಯವನರು ತಪಸ್ಸಿನಲ್ಲಿ ತೊಡಗಿದ್ದರು. ಹಿಮಾಲಯದಲ್ಲೇ ಅವರ ಆಶ್ರಮವಿತ್ತು. ರಾಜಾ ಅಸಿತನ ರಾಣಿಯರಲ್ಲಿ ವಿಷನ್ನುಂಡವಳ ಹೆಸರು ಕಾಲಿಂದಿ ಎಂದಿತ್ತು. ಅರಳಿದ ಕಮಲದಂತೆ ಕಣ್ಣುಗಳುಳ್ಳ ಮಹಾಭಾಗಾ ಕಾಲಿಂದಿಯ ಓರ್ವ ಉತ್ತಮ ಪುತ್ರನನ್ನು ಹಡೆಯಲು ಬಯಸುತ್ತಿದ್ದಳು. ಆಕೆಯು ದೇವತುಲ್ಯ ಭೃಗುನಂದನ ಚ್ಯವನರ ಬಳಿಗೆ ಹೋಗಿ ಅವರಿಗೆ ವಂದಿಸಿಕೊಂಡಳು.॥31-33॥

ಮೂಲಮ್ - 34

ಸ ತಾಮಭ್ಯವದದ್ ವಿಪ್ರಃ ಪುತ್ರೇಪ್ಸುಂ ಪುತ್ರಜನ್ಮನಿ ।
ತವ ಕುಕ್ಷೌ ಮಹಾಭಾಗೇ ಸುಪುತ್ರಃ ಸುಮಹಾಬಲಃ ॥

ಮೂಲಮ್ - 35

ಮಹಾವೀರ್ಯೋ ಮಹಾತೇಜಾ ಅಚಿರಾತ್ಸಂಜನಿಷ್ಯತಿ ।
ಗರೇಣ ಸಹಿತಃ ಶ್ರೀಮಾನ್ಮಾ ಶುಚಃಕಮಲೇಕ್ಷಣೇ ॥

ಅನುವಾದ

ಆಗ ಬ್ರಹ್ಮರ್ಷಿ ಚ್ಯವನರು ಪುತ್ರನನ್ನು ಬಯಸುತ್ತಿದ್ದ ಕಾಲಿಂದಿಯ ಬಳಿ ಪುತ್ರ ಜನ್ಮದ ವಿಷಯದಲ್ಲಿ ಹೇಳಿದರು - ಮಹಾಭಾಗಳೇ! ನಿನ್ನ ಉದರದಿಂದ ಮಹಾಬಲವಂತ ಮಹಾತೇಜಸ್ವಿ, ಮಹಾಪರಾಕ್ರಮಿಯಾದ ಒಬ್ಬ ಕಾಂತಿಯುಕ್ತ ಬಾಲಕನು ಕೆಲವೇ ದಿವಸಗಳಲ್ಲಿ ಗರ(ವಿಷ)ಸಹಿತ ಹುಟ್ಟುವನು. ಆದ್ದರಿಂದ ಕಮಲಲೋಚನೇ! ನೀನು ಪುತ್ರನ ವಿಷಯದಲ್ಲಿ ಚಿಂತಿಸಬೇಡ.॥34-35॥

ಮೂಲಮ್ - 36

ಚ್ಯವನಂ ತು ನಮಸ್ಕೃತ್ಯ ರಾಜಪುತ್ರೀ ಪತಿವ್ರತಾ ।
ಪತ್ಯಾ ವಿರಹಿತಾ ತಸ್ಮಾತ್ಪುತ್ರಂ ದೇವೀ ವ್ಯಜಾಯತ ॥

ಅನುವಾದ

ಆ ವಿಧವೆ ರಾಜಕುಮಾರಿ ಕಾಲಿಂದಿಯು ಪತಿವ್ರತೆಯಾಗಿದ್ದಳು. ಆ ದೇವಿಯು ಮಹರ್ಷಿ ಚ್ಯವನರಿಗೆ ನಮಸ್ಕರಿಸಿ ತನ್ನ ಆಶ್ರಮಕ್ಕೆ ಮರಳಿದಳು. ಸಕಾಲದಲ್ಲಿ ಆಕೆಯು ಒಂದು ಪುತ್ರರತ್ನಕ್ಕೆ ಜನ್ಮ ನೀಡಿದಳು.॥36॥

ಮೂಲಮ್ - 37

ಸಪತ್ನ್ಯಾ ತು ಗರಸ್ತಸ್ಮೈ ದತ್ತೋ ಗರ್ಭಜಿಘಾಂಸಯಾ ।
ಸಹತೇನ ಗರೇಣೈವ ಸಂಜಾತಃ ಸಗರೋಽಭವತ್ ॥

ಅನುವಾದ

ಆಕೆಯ ಸವತಿಯು ಗರ್ಭವನ್ನು ನಾಶಮಾಡಲು ಉಣಿಸಿದ ಗರ(ವಿಷ)ಸಹಿತ ಹುಟ್ಟಿದ ಕಾರಣ ಆ ರಾಜಕುಮಾರನು ‘ಸಗರ’ ಎಂಬ ಹೆಸರಿನಿಂದ ಖ್ಯಾತನಾದನು.॥37॥

ಮೂಲಮ್ - 38

ಸಗರಸ್ಯಾಸಮಂಜಸ್ತು ಅಸಮಂಜದಥಾಂಶುಮಾನ್ ।
ದಿಲೀಪೋಽಂಶುಮತಃ ಪುತ್ರೋ ದಿಲೀಪಸ್ಯ ಭಗೀರಥಃ ॥

ಅನುವಾದ

ಸಗರನ ಪುತ್ರ ಅಸಮಂಜ ಮತ್ತು ಅಸಮಂಜನ ಪುತ್ರ ಅಂಶುಮಂತನಾದನು. ಅಂಶುಮಂತನ ಪುತ್ರ ದಿಲೀಪ ಹಾಗೂ ದಿಲೀಪನ ಪುತ್ರನು ಭಗೀರಥನಾದನು.॥38॥

ಮೂಲಮ್ - 39

ಭಗೀರಥಾತ್ ಕಕುತ್ಸ್ಥಶ್ಚ ಕಕುತ್ಸ್ಥಾಚ್ಚ ರಘುಸ್ತಥಾ ।
ರಘೋಸ್ತು ಪುತ್ರಸ್ತೇಜಸ್ವೀ ಪ್ರವೃದ್ಧಃ ಪುರುಷಾದಕಃ ॥

ಅನುವಾದ

ಭಗೀರಥನಿಂದ ಕಕುತ್ಸ್ಥ, ಕಕುತ್ಸ್ಥನಿಂದ ರಘುವಿನ ಜನ್ಮವಾಯಿತು. ರಘುವಿಗೆ ತೇಜಸ್ವೀ ಪುತ್ರ ಪ್ರವೃದ್ಧ ಹುಟ್ಟಿದನು. ಅವನು ಶಾಪದಿಂದ ರಾಕ್ಷಸನಾಗಿದ್ದನು.॥39॥

ಮೂಲಮ್ - 40

ಕಲ್ಮಾಷಪಾದೋಽಪ್ಯಭವತ್ ತಸ್ಮಾಜ್ಜಾತಸ್ತು ಶಂಖಣಃ ।
ಸುದರ್ಶನಃ ಶಂಖಣಸ್ಯ ಅಗ್ನಿವರ್ಣಃ ಸುದರ್ಶನಾತ್ ॥

ಅನುವಾದ

ಅವನೇ ಕಲ್ಮಾಷಪಾದನೆಂದು ಪ್ರಸಿದ್ಧನಾಗಿದ್ದನು. ಅವನಿಗೆ ಶಂಖಣನೆಂಬ ಪುತ್ರನು ಹುಟ್ಟಿದನು. ಶಂಖಣನ ಪುತ್ರ ಸುದರ್ಶನ ಮತ್ತು ಸುದರ್ಶನನಿಗೆ ಅಗ್ನಿವರ್ಣ ಹುಟ್ಟಿದನು.॥40॥

ಮೂಲಮ್ - 41

ಶೀಘ್ರಗಸ್ತ್ವಗ್ನಿವರ್ಣಸ್ಯ ಶೀಘ್ರಗಸ್ಯ ಮರುಃ ಸುತಃ ।
ಮರೋಃ ಪ್ರಶುಶ್ರುಕಸ್ತ್ವಾಸೀದಂಬರೀಷಃ ಪ್ರಶುಶ್ರುಕಾತ್ ॥

ಅನುವಾದ

ಅಗ್ನಿವರ್ಣನಿಂದ ಶೀಘ್ರಗ, ಶೀಘ್ರಗನ ಪುತ್ರ ಮರು ಆಗಿದ್ದನು. ಮರುವಿನಿಂದ ಪ್ರಶುಶ್ರುಕ ಹಾಗೂ ಪಶುಶ್ರುಕನಿಂದ ಅಂಬರೀಷನ ಜನ್ಮವಾಯಿತು.॥41॥

ಮೂಲಮ್ - 42

ಅಂಬರೀಷಸ್ಯ ಪುತ್ರೋಽಭೂನ್ನಹುಷಃ ಮಹೀಪತಿಃ ।
ನಹುಷಸ್ಯ ಯಯಾತಿಸ್ತು ನಾಭಾಗಸ್ತು ಯಯಾತಿಜಃ ॥

ಮೂಲಮ್ - 43

ನಾಭಾಗಸ್ಯ ಬಭೂವಾಜ ಅಜಾದ್ದಶರಥೋಽಭವತ್ ।
ಅಸ್ಮಾದ್ದಶರಥಾಜ್ಜಾತೌ ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಅಂಬರೀಷನ ಪುತ್ರ ನಹುಷನಾದನು. ನಹುಷನಿಂದ ಯಯಾತಿ, ಯಯಾತಿಯ ಪುತ್ರ ನಾಭಾಗನಾಗಿದ್ದನು. ನಾಭಾಗನಿಂದ ಅಜ ಮಹಾರಾಜ, ಅಜ ಮಹಾರಾಜನಿಂದ ದಶರಥನ ಜನ್ಮವಾಯಿತು. ಇದೇ ಮಹಾರಾಜಾ ದಶರಥನಿಂದ ಇವರೀರ್ವರು ರಾಮ-ಲಕ್ಷ್ಮಣ ಸಹೋದರರು ಹುಟ್ಟಿದರು.॥42-43॥

ಮೂಲಮ್ - 44

ಆದಿವಂಶವಿಶುದ್ಧಾನಾಂ ರಾಜ್ಞಾಂ ಪರಮಧರ್ಮಿಣಾಮ್ ।
ಇಕ್ಷ್ವಾಕುಕುಲ ಜಾತಾನಾಂ ವೀರಾಣಾಂ ಸತ್ಯವಾದಿನಾಮ್ ॥

ಅನುವಾದ

ಇಕ್ವಾಕ್ಷು ಕುಲದಲ್ಲಿ ಉತ್ಪನ್ನರಾದ ರಾಜರ ವಂಶವು ಆದಿಕಾಲದಿಂದಲೇ ಶುದ್ಧವಾಗಿದೆ. ಇವರೆಲ್ಲರೂ ಪರಮ ಧರ್ಮಾತ್ಮರೂ, ವೀರರೂ, ಸತ್ಯವಾದಿಗಳೂ ಆಗಿದ್ದರು.॥44॥

ಮೂಲಮ್ - 45

ರಾಮಲಕ್ಷ್ಮಣಯೋರರ್ಥೇ ತ್ವತ್ಸುತೇ ವರಯೇ ನೃಪ ।
ಸದೃಶಾಭ್ಯಾಂ ನರಶ್ರೇಷ್ಠ ಸದೃಶೇ ದಾತುಮರ್ಹಸಿ ॥

ಅನುವಾದ

ನರಶ್ರೇಷ್ಠ ರಾಜನೇ! ಇದೇ ಇಕ್ವಾಕ್ಷು ಕುಲದಲ್ಲಿ ಉತ್ಪನ್ನರಾದ ಶ್ರೀರಾಮ ಮತ್ತು ಲಕ್ಷ್ಮಣರಿಗಾಗಿ ನಾನು ನಿನ್ನ ಇಬ್ಬರು ಕನ್ಯೆಯರನ್ನು ವರಣ ಮಾಡುತ್ತೇನೆ. ಇವರು ನಿನ್ನ ಕನ್ಯೆಯರಿಗೆ ಯೋಗ್ಯರಾಗಿದ್ದಾರೆ ಹಾಗೂ ನಿನ್ನ ಕನ್ಯೆಯರು ಇವರಿಗೆ ಯೋಗ್ಯರಾಗಿದ್ದಾರೆ. ಆದ್ದರಿಂದ ನೀನು ಇವರಿಗೆ ಕನ್ಯಾದಾನ ಮಾಡು.॥45॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಎಪ್ಪತ್ತನೆಯ ಸರ್ಗ ಪೂರ್ಣವಾಯಿತು. ॥70॥