वाचनम्
ಭಾಗಸೂಚನಾ
ಚತುರಂಗಬಲ ಸಹಿತ ದಶರಥನು ಮಿಥಿಲೆಗೆ ಪ್ರಯಾಣ ಮಾಡಿದುದು, ಅಲ್ಲಿ ಜನಕರಾಜನಿಂದ ಅವನ ಸ್ವಾಗತ-ಸತ್ಕಾರ
ಮೂಲಮ್ - 1
ತತೋ ರಾತ್ರ್ಯಾಂ ವ್ಯತೀತಾಯಾಂ ಸೋಪಾಧ್ಯಾಯಃ ಸಬಾಂಧವಃ ।
ರಾಜಾ ದಶರಥೋ ಹೃಷ್ಟಃ ಸುಮಂತ್ರಮಿದಮಬ್ರವೀತ್ ॥
ಅನುವಾದ
ಅನಂತರ ರಾತ್ರೆ ಕಳೆದಾಗ ಉಪಾಧ್ಯಾಯ ಮತ್ತು ಬಂಧು ಬಾಂಧವರ ಸಹಿತ ದಶರಥನು ಅತ್ಯಂತ ಹರ್ಷಗೊಂಡು ಸುಮಂತ್ರನಲ್ಲಿ ಇಂತೆಂದನು.॥1॥
ಮೂಲಮ್ - 2
ಅದ್ಯ ಸರ್ವೇ ಧನಾಧ್ಯಕ್ಷಾ ಧನಮಾದಾಯ ಪುಷ್ಕಲಮ್ ।
ವ್ರಜಂತ್ವಗ್ರೇ ಸುವಿಹಿತಾ ನಾನಾರತ್ನ ಸಮನ್ವಿತಾಃ ॥
ಅನುವಾದ
ಇಂದು ನಮ್ಮ ಎಲ್ಲ ಧನಾಧ್ಯಕ್ಷರು ಬಹಳಷ್ಟು ಧನವನ್ನೆತ್ತಿಕೊಂಡು ನಾನಾ ಪ್ರಕಾರದ ರತ್ನಗಳಿಂದ ಸಂಪನ್ನರಾಗಿ ಎಲ್ಲರ ಮುಂದೆ ನಡೆಯಲಿ; ಅವರ ರಕ್ಷಣೆಗಾಗಿ ಎಲ್ಲ ರೀತಿಯ ಸುವ್ಯವಸ್ಥೆ ಇರಬೇಕು.॥2॥
ಮೂಲಮ್ - 3
ಚತುರಂಗಬಲಂ ಚಾಪಿ ಶೀಘ್ರಂ ನಿರ್ಯಾತು ಸರ್ವಶಃ ।
ಮಮಾಜ್ಞಾಸಮಕಾಲಂ ಚ ಯಾನಂ ಯುಗ್ಯಮನುತ್ತಮಮ್ ॥
ಅನುವಾದ
ಎಲ್ಲ ಚತುರಂಗಿಣೀ ಸೇನೆಯೂ ಶೀಘ್ರವಾಗಿ ಹೊರಡಲಿ. ನನ್ನ ಅಪ್ಪಣೆಯಂತೆ ಸುಂದರವಾದ ಪಲ್ಲಕ್ಕಿಗಳು, ಉತ್ತಮವಾದ ಕುದುರೆಯೇ ಮೊದಲಾದ ವಾಹನಗಳು ಸಿದ್ಧವಾಗಿ ನಡೆಯಲಿ.॥3॥
ಮೂಲಮ್ - 4
ವಸಿಷ್ಠೋ ವಾಮದೇವಶ್ಚ ಜಾಬಾಲಿರಥ ಕಶ್ಯಪಃ ।
ಮಾರ್ಕಂಡೇಯ ಸ್ತುದೀರ್ಘಾಯುರ್ಋಷಿಃ ಕಾತ್ಯಾಯನಸ್ತಥಾ ॥
ಮೂಲಮ್ - 5
ಏತೇ ದ್ವಿಜಾಃ ಪ್ರಯಾಂತ್ವ್ವಗ್ರೇ ಸ್ಯಂದನಂ ಯೋಜಯಸ್ವ ಮೇ ।
ಯಥಾ ಕಾಲಾತ್ಯಯೋ ನ ಸ್ಯಾದ್ದೂತಾ ಹಿ ತ್ವರಯಂತಿ ಮಾಮ್ ॥
ಅನುವಾದ
ವಸಿಷ್ಠ, ವಾಮದೇವ, ಜಾಬಾಲಿ, ಕಶ್ಯಪ, ದೀರ್ಘರ್ಜೀವಿ ಮಾರ್ಕಂಡೇಯ ಮುನಿ, ಕಾತ್ಯಾಯನ ಇವರೆಲ್ಲ ಬ್ರಹ್ಮರ್ಷಿಗಳು ಮುಂದೆ ಮುಂದೆ ನಡೆಯಲಿ. ನನ್ನ ರಥವನ್ನೂ ಸಿದ್ಧಗೊಳಿಸಿರಿ, ತಡಮಾಡಬಾರದು. ಜನಕರಾಜನ ದೂತರು ನಮ್ಮನ್ನು ಅವಸರ ಪಡಿಸುತ್ತಿದ್ದಾರೆ.॥4-5॥
ಮೂಲಮ್ - 6
ವಚನಾಚ್ಚ ನರೇಂದ್ರಸ್ಯ ಸೇನಾ ಚ ಚತುರಂಗಿಣೀ ।
ರಾಜಾನಮೃಷಿಭಿಃ ಸಾರ್ಧಂ ವ್ರಜಂತಂ ಪೃಷ್ಠತೋಽನ್ವಯಾತ್ ॥
ಅನುವಾದ
ರಾಜನ ಆಜ್ಞೆಗನುಸಾರ ಚತುರಂಗಿಣಿ ಸೈನ್ಯ ಸಿದ್ಧವಾಯಿತು. ಋಷಿಗಳ ಜೊತೆಗೆ ಯಾತ್ರೆ ಮಾಡುತ್ತಿರುವ ದಶರಥನ ಹಿಂದೆ - ಹಿಂದೆ ನಡೆಯಿತು.॥6॥
ಮೂಲಮ್ - 7
ಗತ್ವಾ ಚತುರಹಂ ಮಾರ್ಗಂ ವಿದೇಹಾನಭ್ಯುಪೇಯಿವಾನ್ ।
ರಾಜಾ ಚ ಜನಕಃ ಶ್ರೀಮಾನ್ ಶ್ರುತ್ವಾ ಪೂಜಾಮಕಲ್ಪಯತ್ ॥
ಅನುವಾದ
ನಾಲ್ಕು ದಿನ ದಾರಿ ನಡೆದು ಅವರೆಲ್ಲರೂ ವಿದೇಹ ದೇಶಕ್ಕೆ ತಲುಪಿದರು. ಅವರ ಆಗಮನದ ಸಮಾಚಾರ ತಿಳಿದು ಶ್ರೀಮಾನ್ ರಾಜಾ ಜನಕನು ಸ್ವಾಗತ ಸತ್ಕಾರದ ಸಿದ್ಧತೆಯನ್ನು ಮಾಡಿದನು.॥7॥
ಮೂಲಮ್ - 8
ತತೋ ರಾಜಾನಮಾಸಾಧ್ಯ ವೃದ್ಧಂ ದಶರಥಂ ನೃಪಮ್ ।
ಮುದಿತೋ ಜನಕೋ ರಾಜಾ ಪ್ರಹರ್ಷಂ ಪರಮಂ ಯಯೌ ॥
ಅನುವಾದ
ಅನಂತರ ಆನಂದ ಮಗ್ನನಾದ ಜನಕನು ವೃದ್ಧನಾದ ಮಹಾರಾಜಾ ದಶರಥನ ಬಳಿಗೆ ಬಂದನು. ಅವರನ್ನು ಭೆಟ್ಟಿಯಾಗಿ ಬಹಳ ಹರ್ಷಿತನಾದನು.॥8॥
ಮೂಲಮ್ - 9
ಉವಾಚ ವಚನಂ ಶ್ರೇಷ್ಠೋ ನರಶ್ರೇಷ್ಠಂ ಮುದಾನ್ವಿತಮ್ ।
ಸ್ವಾಗತಂತೇ ನರಶ್ರೇಷ್ಠ ದಿಷ್ಟ್ಯಾಪ್ರಾಪ್ತೋಽಸಿ ರಾಘವ ॥
ಅನುವಾದ
ರಾಜರಲ್ಲಿ ಶ್ರೇಷ್ಠ ಮಿಥಿಲಾ ನರೇಶನು ಆನಂದಮಗ್ನನಾಗಿ ಪುರುಷ ಪ್ರವರ ದಶರಥರಾಜನಲ್ಲಿ ಹೇಳಿದನು-ನರಶ್ರೇಷ್ಠರು ನಂದನರೇ! ತಮಗೆ ಸ್ವಾಗತವಿದೆ. ನೀವು ಇಲ್ಲಿಗೆ ಆಗಮಿಸಿದುದು ನನ್ನ ಸೌಭಾಗ್ಯವಾಗಿದೆ.॥9॥
ಮೂಲಮ್ - 10½
ಪುತ್ರಯೋರುಭಯೋಃ ಪ್ರೀತಿಂ ಲಪ್ಸ್ಯಸೇ ವೀರ್ಯನಿರ್ಜಿತಾಮ್ ।
ದಿಷ್ಟ್ಯಾಪ್ರಾಪ್ತೋ ಮಹಾತೇಜಾ ವಸಿಷ್ಠೋ ಭಗವಾನೃಷಿಃ ॥
ಸಹ ಸರ್ವೈರ್ದ್ವಿಜಶ್ರೇಷ್ಠೈರ್ದೇವೈರಿವ ಶತಕ್ರತುಃ ।
ಅನುವಾದ
ನೀವು ಇಲ್ಲಿ ತಮ್ಮ ಇಬ್ಬರೂ ಪುತ್ರರ ಪ್ರೀತಿ ಪಡೆಯುವಿರಿ. ಅದನ್ನು ಅವರು ಪರಾಕ್ರಮದಿಂದ ಗೆದ್ದುಕೊಂಡಿರುವರು. ಮಹಾ ತೇಜಸ್ವೀ ಭಗವಾನ್ ವಸಿಷ್ಠರೂ ನಮ್ಮ ಸೌಭಾಗ್ಯದಿಂದಲೇ ಇಲ್ಲಿಗೆ ಆಗಮಿಸಿರುವರು. ಇವರು ದೇವತೆಗಳೊಂದಿಗೆ ಇಂದ್ರನು ಶೋಭಿಸುತ್ತಿರುವಂತೆ ಶ್ರೇಷ್ಠ ಬ್ರಾಹ್ಮಣರೊಂದಿಗೆ ಶೋಭಿಸುತ್ತಿರುವರು.॥10½॥
ಮೂಲಮ್ - 11½
ದಿಷ್ಟ್ಯಾ ಮೇ ನಿರ್ಜಿತಾ ವಿಘ್ನಾ ದಿಷ್ಟ್ಯಾಮೇಪೂಜಿತಂ ಕುಲಮ್ ॥
ರಾಘವೈಃ ಸಹ ಸಂಬಂಧಾದ್ವೀರ್ಯಶ್ರೇಷ್ಠೈರ್ಮಹಾಬಲೈಃ ।
ಅನುವಾದ
ಸೌಭಾಗ್ಯದಿಂದ ನನ್ನ ಎಲ್ಲ ವಿಘ್ನ-ಬಾಧೆಗಳು ಪರಾಜಿತವಾದವು. ರಘುಕುಲದ ಮಹಾಪುರುಷರು ಮಹಾನ್ ಬಲ ಸಂಪನ್ನ ಮತ್ತು ಪರಾಕ್ರಮದಲ್ಲಿ ಎಲ್ಲರಿಗಿಂತ ಶ್ರೇಷ್ಠರಾಗಿದ್ದಾರೆ. ಈ ಕುಲದೊಂದಿಗೆ ಸಂಬಂಧ ಬೆಳೆದ ಕಾರಣ ಇಂದು ನನ್ನ ಕುಲದ ಸಮ್ಮಾನ ಹೆಚ್ಚಿದೆ.॥11½॥
ಮೂಲಮ್ - 12½
ಶ್ವಃ ಪ್ರಭಾತೇ ನರೇಂದ್ರ ತ್ವಂ ಸಂವರ್ತಯಿತುಮರ್ಹಸಿ ॥
ಯಜ್ಞಸ್ಯಾಂತೇ ನರಶ್ರೇಷ್ಠ ವಿವಾಹಮೃಷಿಸತ್ತಮೈಃ ।
ಅನುವಾದ
ಶ್ರೇಷ್ಠ ನರೇಂದ್ರನೆ! ನಾಳೆ ಬೆಳಿಗ್ಗೆ ಈ ಎಲ್ಲ ಮಹರ್ಷಿಗಳೊಂದಿಗೆ ಉಪಸ್ಥಿತರಾಗಿ ನನ್ನ ಯಜ್ಞವು ಸಮಾಪ್ತವಾದ ಬಳಿಕ ನೀವು ಶ್ರೀರಾಮನ ವಿವಾಹದ ಶುಭಕಾರ್ಯ ನೆರವೇರಿಸಿರಿ.॥12½॥
ಮೂಲಮ್ - 13½
ತಸ್ಯ ತದ್ವಚನಂ ಶ್ರುತ್ವಾ ಋಷಿಮಧ್ಯೇ ನರಾಧಿಪಃ ॥
ವಾಕ್ಯಂ ವಾಕ್ಯವಿದಾಂ ಶ್ರೇಷ್ಠಃ ಪ್ರತ್ಯುವಾಚ ಮಹೀಪತಿಮ್ ।
ಅನುವಾದ
ಋಷಿಗಳ ಗುಂಪಿನಲ್ಲಿ ಜನಕನ ಮಾತನ್ನು ಕೇಳಿ, ವಾಗ್ಮಿಗಳಲ್ಲಿ ಶ್ರೇಷ್ಠರೂ ಹಾಗೂ ವಾಕ್ಯ ಮರ್ಮಜ್ಞನೂ ಆದ ಮಹಾರಾಜ ದಶರಥನು ಮಿಥಿಲಾ ನರೇಶನನ್ನು ಕುರಿತು ಹೀಗೆ ಉತ್ತರಿಸಿದನು.॥13½॥
ಮೂಲಮ್ - 14½
ಪ್ರತಿಗ್ರಹೋ ದಾತೃವಶಃ ಶ್ರುತಮೇತನ್ಮಯಾ ಪುರಾ ॥
ಯಥಾ ವಕ್ಷ್ಯಸಿ ಧರ್ಮಜ್ಞ ತತ್ಕರಿಷ್ಯಾಮಹೇವಯಮ್ ।
ಅನುವಾದ
ಧರ್ಮಜ್ಞನೇ! ಪ್ರತಿಗ್ರಹಿಯು ಧಾತೃವಿನ ಅಧೀನನಾಗಿರುತ್ತಾನೆ ಎಂದು ನಾನು ಹಿಂದಿನಿಂದಲೂ ಕೇಳುತ್ತಾ ಬಂದಿದ್ದೇನೆ. ಆದ್ದರಿಂದ ನೀವು ಹೇಳಿದಂತೆಯೇ ನಾವು ಮಾಡುವೆವು.॥14½॥
ಮೂಲಮ್ - 15½
ತದ್ ಧರ್ಮಿಷ್ಠಂ ಯಶಸ್ಯಂ ಚ ವಚನಂ ಸತ್ಯವಾದಿನಃ ॥
ಶ್ರುತ್ವಾ ವಿದೇಹಾಧಿಪತಿಃ ಪರಂ ವಿಸ್ಮಯಮಾಗತಃ ।
ಅನುವಾದ
ಸತ್ಯವಾದೀ ರಾಜಾ ದಶರಥನ ಧರ್ಮಾನುಕೂಲ ಮತ್ತು ಯಶೋವರ್ಧಕ ಮಾತನ್ನು ಕೇಳಿ ವಿದೇಹ ರಾಜನಿಗೆ ಬಹಳ ವಿಸ್ಮಯವಾಯಿತು.॥15½॥
ಮೂಲಮ್ - 16½
ತತಃ ಸರ್ವೇ ಮನಿಗಣಾಃ ಪರಸ್ಪರಸಮಾಗಮೇ ॥
ಹರ್ಷೇಣ ಮಹತಾ ಯುಕ್ತಾಸ್ತಾಂ ರಾತ್ರಿಮವಸನ್ಸುಖಮ್ ।
ಅನುವಾದ
ಅನಂತರ ಎಲ್ಲ ಮಹರ್ಷಿಗಳು ಪರಸ್ಪರ ಭೆಟ್ಟಿಯಾಗಿ ಬಹಳ ಸಂತೋಷಗೊಂಡು, ಎಲ್ಲರೂ ಸುಖವಾಗಿ ಅಂದಿನ ಇರುಳನ್ನು ಕಳೆದರು.॥16½॥
ಮೂಲಮ್ - 17½
ಅಥ ರಾಮೋ ಮಹಾತೇಜಾ ಲಕ್ಷ್ಮಣೇನ ಸಮಂ ಯಯೌ ॥
ವಿಶ್ವಾಮಿತ್ರಂ ಪುರಸ್ಕತ್ಯ ಪಿತುಃ ಪಾದಾವುಪಸ್ಪೃಶನ್ ।
ಅನುವಾದ
ಇತ್ತ ಮಹಾತೇಜಸ್ವೀ ಶ್ರೀರಾಮನು ವಿಶ್ವಾಮಿತ್ರರನ್ನು ಮುಂದೆ ಮಾಡಿ ಲಕ್ಷ್ಮಣನೊಂದಿಗೆ ತಂದೆಯ ಬಳಿಗೆ ಬಂದು ಅವರ ಚರಣಗಳಿಗೆ ವಂದಿಸಿದನು.॥17½॥
ಮೂಲಮ್ - 18½
ರಾಜಾ ಚ ರಾಘವೌ ಪುತ್ರೌ ನಿಶಾಮ್ಯ ಪರಿಹರ್ಷಿತಃ ॥
ಉವಾಸ ಪರಮಪ್ರೀತೋ ಜನಕೇನಾಭಿಪೂಜಿತಃ ।
ಅನುವಾದ
ರಾಜಾ ದಶರಥನೂ ಜನಕನಿಂದ ಆದರ-ಸತ್ಕಾರ ಪಡೆದು ಬಹಳ ಹರ್ಷಿತನಾದನು. ತನ್ನ ಇಬ್ಬರೂ ರಘುಕುಲರತ್ನ ಪುತ್ರರನ್ನು ಸಕುಶಲರಾಗಿ ನೋಡಿ ಅವನಿಗೆ ಅಪಾರ ಹರ್ಷವಾಯಿತು. ಅವನು ಸುಖವಾಗಿ ಅಲ್ಲಿ ರಾತ್ರೆಯನ್ನು ಕಳೆದನು.॥18½॥
ಮೂಲಮ್ - 19
ಜನಕೋಽಪಿ ಮಹಾತೇಜಾಃ ಕ್ರಿಯಾಂ ಧರ್ಮೇಣ ತತ್ತ್ವವಿತ್ ।
ಯಜ್ಞಸ್ಯ ಚ ಸುತಾಭ್ಯಾಂ ಚ ಕೃತ್ವಾ ರಾತ್ರಿಮುವಾಸ ಹ ॥
ಅನುವಾದ
ಮಹಾತೇಜಸ್ವೀ ತತ್ತ್ವಜ್ಞ ಜನಕರಾಜನು ಕೂಡ ಧರ್ಮಕ್ಕನುಸಾರ ಯಜ್ಞಕಾರ್ಯವನ್ನು ನೆರವೇರಿಸಿದನು ಹಾಗೂ ತನ್ನ ಇಬ್ಬರೂ ಕನ್ಯೆಯರ ಮಂಗಲಾಚಾರ ನಡೆಸಿ, ಸುಖವಾಗಿ ಆ ರಾತ್ರಿಯನ್ನು ಕಳೆದನು.॥19॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಅರವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥69॥