वाचनम्
ಭಾಗಸೂಚನಾ
ಜನಕರಾಜನ ಸಂದೇಶ ಪಡೆದು ದಶರಥ ಮಹಾರಾಜನು ಮಂತ್ರಿಗಳೊಂದಿಗೆ ಮಿಥಿಲೆಗೆ ಹೊರಟಿದುದು
ಮೂಲಮ್ - 1
ಜನಕೇನ ಸಮಾದಿಷ್ಟಾ ದೂತಾಸ್ತೇ ಕ್ಲಾಂತವಾಹನಾಃ ।
ತ್ರಿರಾತ್ರಮುಷಿತಾ ಮಾರ್ಗೇ ತೇಽಯೋಧ್ಯಾಂ ಪ್ರಾವಿಶನ್ಪುರೀಮ್ ॥
ಅನುವಾದ
ಜನಕರಾಜನ ಅಪ್ಪಣೆ ಪಡೆದ ಸಚಿವರು ಮತ್ತು ರಾಜಭಟರು ಅಯೋಧ್ಯೆಗೆ ಹೊರಟರು. ದಾರಿಯಲ್ಲಿ ವಾಹನಗಳು ಬಳಲಿದ ಕಾರಣ ಮೂರು ದಿನ ವಿಶ್ರಾಂತಿ ಪಡೆದು ನಾಲ್ಕನೆಯ ದಿನ ಅವರು ಅಯೋಧ್ಯೆಗೆ ತಲುಪಿದರು.॥1॥
ಮೂಲಮ್ - 2
ತೇ ರಾಜವಚನಾದ್ ಗತ್ವಾ ರಾಜವೇಶ್ಮ ಪ್ರವೇಶಿತಾಃ ।
ದದೃಶುರ್ದೇವಸಂಕಾಶಂ ವೃದ್ಧಂ ದಶರಥಂ ನೃಪನ್ ॥
ಅನುವಾದ
ರಾಜಾಜ್ಞೆಯಂತೆ ಅವರು ಅರಮನೆಯನ್ನು ಪ್ರವೇಶಿಸಿ, ದೇವಸದೃಶನಾದ ತೇಜಸ್ವೀ ವೃದ್ಧ ದಶರಥರಾಜನ ದರ್ಶನ ಪಡೆದರು.॥2॥
ಮೂಲಮ್ - 3
ಬದ್ಧಾಂಜಲಿಪುಟಾಃ ಸರ್ವೇ ದೂತಾ ವಿಗತಸಾಧ್ವಸಾಃ ।
ರಾಜಾನಂ ಪ್ರಶ್ರಿತಂ ವಾಕ್ಯಮಬ್ರುವನ್ಮಧುರಾಕ್ಷರಮ್ ॥
ಮೂಲಮ್ - 4
ಮೈಥಿಲೋ ಜನಕೋ ರಾಜಾ ಸಾಗ್ನಿಹೋತ್ರ ಪುರಸ್ಕೃತಃ ।
ಮುಹುರ್ಮುಹುರ್ಮಧುರಯಾ ಸ್ನೇಹಸಂಯುಕ್ತಯಾಗಿರಾ ॥
ಮೂಲಮ್ - 5
ಕುಶಲಂ ಚಾವ್ಯಯಂ ಚೈವ ಸೋಪಾಧ್ಯಾಯಪುರೋಹತಮ್ ।
ಜನಕಸ್ತ್ವಾಂ ಮಹಾರಾಜ ಪೃಚ್ಛತೇ ಸಪುರಃಸರಮ್ ॥
ಅನುವಾದ
ಆ ಎಲ್ಲ ದೂತರು ಕೈಮುಗಿದುಕೊಂಡು ನಿರ್ಭಯರಾಗಿ ರಾಜನಲ್ಲಿ ಮಧುರವಾಗಿ, ವಿನಯದಿಂದ ಹೀಗೆ ಹೇಳಿದರು-ಮಹಾರಾಜರೇ! ಮಿಥಿಲಾಪತಿ ಜನಕ ರಾಜನು ಅಗ್ನಿಹೋತ್ರದ ಅಗ್ನಿಯನ್ನು ಮುಂದಿರಿಸಿಕೊಂಡು ಸ್ನೇಹಯುಕ್ತ ಮಧುರವಾಣಿಯಿಂದ ಸೇವಕರ ಸಹಿತ ನಿಮ್ಮ ಹಾಗೂ ನಿಮ್ಮ ಉಪಾಧ್ಯಾಯ ಮತ್ತು ಪುರೋಹಿತರ ಕ್ಷೇಮ ಸವಾಚಾರವನ್ನು ಪದೇ-ಪದೇ ಕೇಳಿರುವರು.॥3-5॥
ಮೂಲಮ್ - 6
ಪೃಷ್ಟ್ವಾ ಕುಶಲಮವ್ಯಗ್ರಂ ವೈದೇಹೋ ಮಿಥಿಲಾಧಿಪಃ ।
ಕೌಶಿಕಾನುಮತೇ ವಾಕ್ಯಂ ಭವಂತಮಿದಮಬ್ರವೀತ್ ॥
ಅನುವಾದ
ಈ ಪ್ರಕಾರ ನಮ್ರತಾಪೂರ್ವಕವಾಗಿ ಕುಶಲವನ್ನು ಕೇಳಿ ಮಿಥಿಲಾಪತಿ ವಿದೇಹರಾಜರು ಮಹರ್ಷಿ ವಿಶ್ವಾಮಿತ್ರರ ಅಪ್ಪಣೆಯಂತೆ ಈ ಸಂದೇಶವನ್ನು ಕಳಿಸಿರುವರು .॥6॥
ಮೂಲಮ್ - 7
ಪೂರ್ವಂ ಪ್ರತಿಜ್ಞಾ ವಿದಿತಾ ವೀರ್ಯಶುಲ್ಕಾ ಮಮಾತ್ಮಜಾ ।
ರಾಜಾನಶ್ಚ ಕೃತಾಮರ್ಷಾ ನಿರ್ವೀರ್ಯಾ ವಿಮುಖೀಕೃತಾಃ ॥
ಅನುವಾದ
ಮಹಾರಾಜರೇ! ನಾನು ಮೊದಲೇ ಮಾಡಿದ್ದ ಪ್ರತಿಜ್ಞೆಯ ಸಂಗತಿ ನಿಮಗೆ ತಿಳಿದಿರಬಹುದು. ನಾನು ನನ್ನ ಪುತ್ರಿಯ ವಿವಾಹಕ್ಕಾಗಿ ಪರಾಕ್ರಮವನ್ನೇ ವೀರ್ಯಶುಲ್ಕನಾಗಿ ನಿಯತಗೊಳಿಸಿದ್ದೆ. ಅದನ್ನು ಕೇಳಿ ಎಷ್ಟೋರಾಜರು ಅಸಹನೆಯಿಂದ ಬಂದು ಪರಾಕ್ರಮಹೀನರಾಗಿ ಮರಳಿ ಮನೆಗಳಿಗೆ ತೆರಳಿದರು.॥7॥
ಮೂಲಮ್ - 8
ಸೇಯಂ ಮಮ ಸುತಾರಾಜನ್ ವಿಶ್ವಾಮಿತ್ರಪುರಸ್ಕೃತೈಃ ।
ಯದೃಚ್ಛಯಾಗತೈ ರಾಜನ್ ನಿರ್ಜಿತಾತವ ಪುತ್ರಕೈಃ ॥
ಅನುವಾದ
ನರೇಶ್ವರರೇ! ವಿಶ್ವಾಮಿತ್ರರ ಜೊತೆಗೆ ಅಕಸ್ಮಾತ್ತಾಗಿ ತಿರುಗಾಡುತ್ತಾ ಬಂದಿರುವ ನಿಮ್ಮ ಪುತ್ರ ಶ್ರೀರಾಮನು ತನ್ನ ಪರಾಕ್ರಮದಿಂದ ನನ್ನ ಈ ಕನ್ಯೆಯನ್ನು ಗೆದ್ದುಕೊಂಡಿರುವನು.॥8॥
ಮೂಲಮ್ - 9
ತಚ್ಛ ರತ್ನಂ ಧನುರ್ದಿವ್ಯಂ ಮಧ್ಯೇ ಭಗ್ನಂ ಮಹಾತ್ಮನಾ ।
ರಾಮೇಣ ಹಿ ಮಹಾಬಾಹೋ ಮಹತ್ಯಾಂ ಜನಸಂಸದಿ ॥
ಅನುವಾದ
ಮಹಾಬಾಹೋ! ಮಹಾತ್ಮಾ ಶ್ರೀರಾಮನು ಮಹಾನ್ ಜನಸಮುದಾಯದ ನಡುವೆ ನನ್ನ ಬಳಿ ಇಟ್ಟಿದ್ದ ರತ್ನಸ್ವರೂಪ ದಿವ್ಯಬಿಲ್ಲನ್ನು ಮುರಿದುಬಿಟ್ಟನು.॥9॥
ಮೂಲಮ್ - 10
ಅಸ್ಮೈ ದೇಯಾ ಮಯಾ ಸೀತಾ ವೀರ್ಯಶುಲ್ಕಾಮಹಾತ್ಮನೇ ।
ಪ್ರತಿಜ್ಞಾಂ ತರ್ತುಮಿಚ್ಛಾಮಿ ತದನುಜ್ಞಾತುಮರ್ಹಸಿ ॥
ಅನುವಾದ
ಆದ್ದರಿಂದ ನಾನು ಈ ಮಹಾತ್ಮಾ ಶ್ರೀರಾಮಚಂದ್ರನಿಗೆ ನನ್ನ ವೀರ್ಯಶುಲ್ಕಾ ಕನ್ಯೆ ಸೀತೆಯನ್ನು ಕೊಡುವೆನು. ಹೀಗೆ ಮಾಡಿ ನಾನು ನನ್ನ ಪ್ರತಿಜ್ಞೆಯಿಂದ ಪಾರಾಗುವೆನು. ತಾವು ಇದಕ್ಕಾಗಿ ನನಗೆ ದಯಮಾಡಿ ಆಜ್ಞಾಪಿಸಿರಿ.॥10॥
ಮೂಲಮ್ - 11
ಸೋಪಾಧ್ಯಾಯೋ ಮಹಾರಾಜ ಪುರೋಹಿತ ಪುರಸ್ಕೃತಃ ।
ಶೀಘ್ರಮಾಗಚ್ಛ ಭದ್ರಂ ತೇದ್ರಷ್ಟುಮರ್ಹಸಿ ರಾಘವೌ ॥
ಅನುವಾದ
ಮಹಾರಾಜ! ನೀವು ತಮ್ಮ ಗುರುಗಳು ಹಾಗೂ ಪುರೋಹಿತರೊಂದಿಗೆ ಇಲ್ಲಿಗೆ ಶೀಘ್ರವಾಗಿ ಆಗಮಿಸಿ ತಮ್ಮ ಇಬ್ಬರು ಪುತ್ರರಾದ ರಘುಕುಲಭೂಷಣ ಶ್ರೀರಾಮ-ಲಕ್ಷ್ಮಣರನ್ನು ನೋಡಿರಿ. ನಿಮಗೆ ಮಂಗಳವಾಗಲಿ.॥11॥
ಮೂಲಮ್ - 12
ಪ್ರತಿಜ್ಞಾಂ ಮಮ ರಾಜೇಂದ್ರ ನಿರ್ವರ್ತಯಿತುಮರ್ಹಸಿ ।
ಪುತ್ರಯೋರುಭಯೋರೇವ ಪ್ರೀತಿಂ ತ್ವಮುಪಲಪ್ಸ್ಯಸೇ ॥
ಅನುವಾದ
ರಾಜೇಂದ್ರರೇ! ಇಲ್ಲಿಗೆ ಆಗಮಿಸಿ ತಾವು ನನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಿರಿ. ನೀವು ಇಲ್ಲಿಗೆ ಬರುವುದರಿಂದ ಇಬ್ಬರೂ ಪುತ್ರರ ವಿವಾಹ ಆನಂದವನ್ನು ಪಡೆಯುವಿರಿ.॥12॥
ಮೂಲಮ್ - 13
ಏವಂ ವಿದೇಹಾಧಿಪತಿರ್ಮಧುರಂ ವಾಕ್ಯಮಬ್ರವೀತ್ ।
ವಿಶ್ವಾಮಿತ್ರಾಭ್ಯನುಜ್ಞಾತಃ ಶತಾನಂದಮತೇ ಸ್ಥಿತಃ ॥
ಅನುವಾದ
ರಾಜನೇ! ಈ ಪ್ರಕಾರ ವಿದೇಹರಾಜನು ತಮ್ಮ ಬಳಿಗೆ ಈ ಶುಭ ಸಂದೇಶವನ್ನು ಕಳಿಸಿರುವನು. ಇದಕ್ಕಾಗಿ ಅವನಿಗೆ ವಿಶ್ವಾಮಿತ್ರರ ಆಜ್ಞೆ ಮತ್ತು ಶತಾನಂದರ ಸಮ್ಮತಿಯೂ ದೊರಕಿತ್ತು.॥13॥
ಮೂಲಮ್ - 14
ದೂತವಾಕ್ಯಂ ತು ತಚ್ಛ್ರುತ್ವಾ ರಾಜಾ ಪರಮಹರ್ಷಿತಃ ।
ವಸಿಷ್ಠಂ ವಾಮದೇವಂ ಚ ಮಂತ್ರಿಣಶ್ಚೈವಮಬ್ರವೀತ್ ॥
ಅನುವಾದ
ಸಂದೇಶವಾಹಕ ಮಂತ್ರಿಗಳ ಮಾತನ್ನು ಕೇಳಿ ದಶರಥರಾಜನು ಬಹಳ ಸಂತೋಷಗೊಂಡನು. ಅವನು ಮಹರ್ಷಿ ವಸಿಷ್ಠ, ವಾಮದೇವ ಹಾಗೂ ಇತರ ಮಂತ್ರಿಗಳಲ್ಲಿ ಹೇಳಿದನು.॥14॥
ಮೂಲಮ್ - 15
ಗುಪ್ತಃ ಕುಶಿಕಪುತ್ರೇಣ ಕೌಸಲ್ಯಾನಂದವರ್ಧನಃ ।
ಲಕ್ಷ್ಮಣೇನ ಸಹ ಭ್ರಾತ್ರಾ ವಿದೇಹೇಷು ವಸತ್ಯಸೌ ॥
ಅನುವಾದ
ಕುಶಿಕನಂದನ ವಿಶ್ವಾಮಿತ್ರರಿಂದ ಸುರಕ್ಷಿತನಾದ ಕೌಸಲ್ಯಾನಂದನವರ್ಧನ ಶ್ರೀರಾಮನು ತಮ್ಮ ಲಕ್ಷ್ಮಣನೊಂದಿಗೆ ವಿದೇಹ ದೇಶದಲ್ಲಿ ವಾಸಿಸುತ್ತಿರುವನು.॥15॥
ಮೂಲಮ್ - 16
ದೃಷ್ಟವೀರ್ಯಸ್ತು ಕಾಕುತ್ಸ್ಥೋ ಜನಕೇನ ಮಹಾತ್ಮನಾ ।
ಸಂಪ್ರದಾನಂ ಸುತಾಯಾಸ್ತು ರಾಘವೇ ಕರ್ತುಮಿಚ್ಛತಿ ॥
ಅನುವಾದ
ಅಲ್ಲಿ ಮಹಾತ್ಮಾ ಜನಕನು ಕಾಕುತ್ಸ್ಥ ಕುಲಭೂಷಣ ಶ್ರೀರಾಮನ ಪರಾಕ್ರಮವನ್ನು ಪ್ರತ್ಯಕ್ಷವಾಗಿ ನೋಡಿರುವನು. ಅದಕ್ಕಾಗಿ ಅವನು ತನ್ನ ಪುತ್ರಿ ಸೀತೆಯ ವಿವಾಹವನ್ನು ರಘುಕುಲರತ್ನ ಶ್ರೀರಾಮನೊಂದಿಗೆ ಮಾಡಲು ಬಯಸುತ್ತಿರುವನು.॥16॥
ಮೂಲಮ್ - 17
ಯದಿ ವೋ ರೋಚತೇ ವೃತ್ತಂ ಜನಕಸ್ಯ ಮಹಾತ್ಮನಃ ।
ಪುರೀಂ ಗಚ್ಛಾಮಹೇ ಶೀಘ್ರಂ ಮಾ ಭೂತ್ಕಾಲಸ್ಯ ಪರ್ಯಾಯಃ ॥
ಅನುವಾದ
ನಿಮ್ಮೆಲ್ಲರೂ ಇಷ್ಟಪಟ್ಟರೆ, ಸಮ್ಮತಿ ಇದ್ದರೆ ನಾವು ಜಾಗ್ರತೆಯಾಗಿ ಜನಕನ ಮಿಥಿಲಾಪುರಿಗೆ ಹೋಗೋಣ ಇದರಲ್ಲಿ ತಡಮಾಡುವುದು ಬೇಡ.॥17॥
ಮೂಲಮ್ - 18½
ಮಂತ್ರಿಣೋ ಬಾಢಮಿತ್ಯಾಹುಃ ಸಹ ಸರ್ವೈರ್ಮಹರ್ಷಿಭಿಃ ।
ಸುಪ್ರೀತಶ್ಚಾ ಬ್ರವೀದ್ ರಾಜಾ ಶ್ವೋ ಯಾತ್ರೇತಿ ಸಮನ್ತ್ರಿಣಃ ॥
ಅನುವಾದ
ಇದನ್ನು ಕೇಳಿ ಸಮಸ್ತ ಮಹರ್ಷಿಗಳ ಸಹಿತ ಮಂತ್ರಿಗಳು ‘ಬಹಳ ಒಳ್ಳೆಯದು’ ಎಂದು ಏಕಕಂಠದಿಂದ ಹೇಳಿ ಹೊರಡಲು ಸಮ್ಮತಿಸಿದರು. ರಾಜನು ಬಹಳ ಪ್ರಸನ್ನನಾಗಿ ಮಂತ್ರಿಗಳಲ್ಲಿ ನಾಳೆ ಬೆಳಿಗ್ಗೆಯೇ ಪ್ರಯಾಣ ಹೊರಡುವುದು ಎಂದು ಹೇಳಿದನು.॥18½॥
ಮೂಲಮ್ - 19½
ಮಂತ್ರಿಣಸ್ತು ನರೇಂದ್ರಸ್ಯ ರಾತ್ರಿಂ ಪರಮಸತ್ಕೃತಾಃ ।
ಊಚುಃ ಪಮುದಿತಾಃ ಸರ್ವೇ ಗುಣೈಃ ಸರ್ವೈಃ ಸಮನ್ವಿತಾಃ ॥
ಅನುವಾದ
ಮಹಾರಾಜಾ ದಶರಥನ ಎಲ್ಲ ಮಂತ್ರಿಗಳು ಸಮಸ್ತ ಸದ್ಗುಣಗಳಿಂದ ಸಂಪನ್ನರಾಗಿದ್ದರು. ರಾಜನು ಅವರನ್ನು ತುಂಬಾ ಸತ್ಕರಿಸಿದನು. ದಿಬ್ಬಣ ಹೊರಡುವ ಮಾತನ್ನು ಕೇಳಿ ಅವರು ಬಹಳ ಆನಂದದಿಂದ ರಾತ್ರಿಯನ್ನು ಕಳೆದರು.॥19½॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಅರವತ್ತೆಂಟನೆಯ ಸರ್ಗ ಪೂರ್ಣವಾಯಿತು.॥68॥