वाचनम्
ಭಾಗಸೂಚನಾ
ಶ್ರೀರಾಮನು ಶಿವಧನುಸ್ಸನ್ನು ಮುರಿದುದು, ಜನಕನು ವಿಶ್ವಾಮಿತ್ರರ ಆಜ್ಞೆಯಂತೆ ದಶರಥನನ್ನು ಕರೆತರಲು ಮಂತ್ರಿಗಳನ್ನು ಕಳಿಸಿದುದು
ಮೂಲಮ್ - 1
ಜನಕಸ್ಯ ವಚಃ ಶ್ರುತ್ವಾ ವಿಶ್ವಾಮಿತ್ರೋ ಮಹಾಮುನಿಃ ।
ಧನುರ್ದರ್ಶಯ ರಾಮಾಯ ಇತಿ ಹೋವಾಚ ಪಾರ್ಥಿವಮ್ ॥
ಅನುವಾದ
ಜನಕನ ಮಾತನ್ನು ಕೇಳಿ ಮಹಾಮುನಿ ವಿಶ್ವಾಮಿತ್ರರು ಹೇಳಿದರು - ರಾಜನೇ! ನೀನು ಶ್ರೀರಾಮನಿಗೆ ನಿನ್ನ ಧನುಸ್ಸನ್ನು ತೋರಿಸು.॥1॥
ಮೂಲಮ್ - 2
ತತಃ ಸ ರಾಜಾ ಜನಕಃ ಸಚಿವಾನ್ ವ್ಯಾದಿದೇಶ ಹ ।
ಧನುರಾನೀಯತಾಂ ದಿವ್ಯಂ ಗಂಧಮಾಲ್ಯಾನುಲೇಪಿತಮ್ ॥
ಅನುವಾದ
ಆಗ ಜನಕನು ಮಂತ್ರಿಗಳಿಗೆ - ಚಂದನ ಮತ್ತು ಮಾಲೆಗಳಿಂದ ಅಲಂಕೃತವಾದ ಆ ದಿವ್ಯ ಧನುಸ್ಸನ್ನು ಇಲ್ಲಿಗೆ ತೆಗೆದುಕೊಂಡು ಬನ್ನಿ ಎಂದು ಆಜ್ಞಾಪಿಸಿದನು.॥2॥
ಮೂಲಮ್ - 3
ಜನಕೇನ ಸಮಾದಿಷ್ಟಾಃ ಸಚಿವಾಃ ಪ್ರಾವಿಶನ್ ಪುರಮ್ ।
ತದ್ಧನುಃ ಪುರತಃ ಕೃತ್ವಾ ನಿರ್ಜಗ್ಮುರಮಿತೌಜಪಃ ॥
ಅನುವಾದ
ರಾಜಾ ಜನಕನ ಆಜ್ಞೆ ಪಡೆದು ಆ ಅಮಿತ ತೇಜಸ್ವೀ ಮಂತ್ರಿಗಳು ನಗರಕ್ಕೆ ಹೋಗಿ, ಆ ಧನುಸ್ಸನ್ನು ಮುಂದೆ ಮಾಡಿ ಪುರಿಯಿಂದ ಹೊರಗೆ ಹೊರಟರು.॥3॥
ಮೂಲಮ್ - 4
ನೃಣಾಂ ಶತಾನಿ ಪಂಚಾಶದ್ ವ್ಯಾಯತಾನಾಂ ಮಹಾತ್ಮನಾಮ್ ।
ಮಂಜೂಷಾಮಷ್ಟಚಕ್ರಾಂ ತಾಂ ಸಮೂಹುಸ್ತೇ ಕಥಂಚನ ॥
ಅನುವಾದ
ಆ ಧನುಸ್ಸು ಎಂಟು ಗಾಲಿಗಳುಳ್ಳ ಉಕ್ಕಿನ ದೊಡ್ಡ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಅದನ್ನು ಮಹಾ ಬಲಿಷ್ಠರಾದ ಐದು ಸಾವಿರ ವೀರರು ಹೇಗೋ ಕಷ್ಟಪಟ್ಟು ಅಲ್ಲಿಯವರೆಗೆ ತರುವಂತಾಯಿತು.॥4॥
ಮೂಲಮ್ - 5
ತಾಮಾದಾಯ ಸುಮಂಜೂಷಾಮಾಯಸೀಂ ಯತ್ರ ತದ್ಧನುಃ ।
ಸುರೋಪಮಂ ತೇ ಜನಕಮೂಚುರ್ನೃಪತಿಮಂತ್ರಿಣಃ ॥
ಅನುವಾದ
ಕಬ್ಬಿಣದ ಪೆಟ್ಟಿಗೆಯಲ್ಲಿ ಇರಿಸಿದ್ದ ಆ ಧನುಸ್ಸನ್ನು ತಂದು ಮಂತ್ರಿಗಳು ದೇವೋಪಮ ರಾಜಾ ಜನಕನಲ್ಲಿ ಇಂತೆಂದರು.॥5॥
ಮೂಲಮ್ - 6
ಇದಂ ಧನುರ್ವರಂ ರಾಜನ್ ಪೂಜಿತಂ ಸರ್ವರಾಜಭಿಃ ।
ಮಿಥಿಲಾಧಿಪ ರಾಜೇಂದ್ರ ದರ್ಶನೀಯಂ ಯದೀಚ್ಛಸಿ ॥
ಅನುವಾದ
ಮಿಥಿಲಾಧಿಪತೇ! ರಾಜೇಂದ್ರನೇ! ಇದು ಸಮಸ್ತ ರಾಜರಿಂದ ಸಮ್ಮಾನಿತವಾದ ಶ್ರೇಷ್ಠ ಧನುಷ್ಯವಾಗಿದೆ. ತಾವು ಈ ಇಬ್ಬರು ರಾಜಕುಮಾರರಿಗೆ ತೋರಿಸಲು ಬಯಸುತ್ತಿದ್ದರೆ ತೋರಿಸಿರಿ.॥6॥
ಮೂಲಮ್ - 7
ತೇಷಾಂ ನೃಪೋ ವಚಃ ಶ್ರುತ್ವಾ ಕೃತಾಂಜಲಿರಭಾಷತ ।
ವಿಶ್ವಾಮಿತ್ರಂ ಮಹಾತ್ಮಾನಂ ತಾವುಭೌ ರಾಮಲಕ್ಷ್ಮಣೌ ॥
ಅನುವಾದ
ಅವರ ಮಾತನ್ನು ಕೇಳಿ ರಾಜಾ ಜನಕನು ಕೈಮುಗಿದು ಮಹಾತ್ಮಾ ವಿಶ್ವಾಮಿತ್ರರಿಗೆ ಹಾಗೂ ಇಬ್ಬರೂ ಸಹೋದರ ಶ್ರೀರಾಮಾ - ಲಕ್ಷ್ಮಣರಲ್ಲಿ ಇಂತೆಂದನು.॥7॥
ಮೂಲಮ್ - 8
ಇದಂ ಧನುರ್ವರಂ ಬ್ರಹ್ಮನ್ ಜನಕೈರಭಿಪೂಜಿತಮ್ ।
ರಾಜಭಿಶ್ಚ ಮಹಾವೀರ್ಯೈಶಕ್ತೈಃ ಪೂಜಿತಂ ತದಾ ॥
ಅನುವಾದ
ಬ್ರಹ್ಮರ್ಷಿಗಳೇ! ಇದೇ ಆ ಶ್ರೇಷ್ಠ ಧನುಸ್ಸು ಆಗಿದೆ. ಇದನ್ನು ಜನಕವಂಶೀಯ ನರೇಶ್ವರರು ಸದಾ ಪೂಜಿಸಿದ್ದಾರೆ ಹಾಗೂ ಇದನ್ನು ಎತ್ತಲು ಅಸಮರ್ಥರಾದ ಮಹಾಪರಾಕ್ರಮಿ ಅರಸರಿಂದಲೂ ಹಿಂದೆ ಸಮ್ಮಾನಿತವಾಗಿದೆ.॥8॥
ಮೂಲಮ್ - 9
ನೈತತ್ ಸುರಗಣಾಃ ಸರ್ವೇ ಸಾಸುರಾ ನ ಚ ರಾಕ್ಷಸಾಃ ।
ಗಂಧರ್ವಯಕ್ಷಪ್ರವರಾಃ ಸಕಿನ್ನರಮಹೋರಗಾಃ ॥
ಅನುವಾದ
ಇದನ್ನು ಸಮಸ್ತ ದೇವತೆಗಳು, ಅಸುರರು, ರಾಕ್ಷಸರು, ಗಂಧರ್ವರು, ದೊಡ್ಡ-ದೊಡ್ಡ ಯಕ್ಷರು, ಕಿನ್ನರರು, ಮಹಾ ನಾಗಗಳೂ ಕೂಡ ಇದನ್ನು ಎತ್ತಲು ಸಾಧ್ಯವಾಗಲಿಲ್ಲ.॥9॥
ಮೂಲಮ್ - 10
ಕ್ವ ಗತಿರ್ಮಾನುಷಾಣಾಂ ಚ ಧನುಷೋಽಸ್ಯ ಪ್ರಪೂರಣೇ ।
ಆರೋಪಣೇ ಸಮಾಯೋಗೇ ವೇಪನೇ ತೋಲನೇ ತಥಾ ॥
ಅನುವಾದ
ಹಾಗಿರುವಾಗ ಈ ಬಿಲ್ಲನ್ನು ಹೆದೆ ಏರಿಸುವುದು, ಇದಕ್ಕೆ ಬಾಣ ಹೂಡುವುದು, ಪ್ರತ್ಯಂಚೆ ಸೆಳೆದು ಟಂಕಾರ ಮಾಡುವುದು ಎತ್ತಿ ಅತ್ತ - ಇತ್ತ ಅಲುಗಾಡಿಸುವುದು, ಇದೆಲ್ಲ ಮಾಡುವ ಮನುಷ್ಯರಿಗೆ ಶಕ್ತಿ ಎಲ್ಲಿದೆ.॥10॥
ಮೂಲಮ್ - 11
ತದೇತದ್ಧನುಷಾಂ ಶ್ರೇಷ್ಠಮಾನೀತಂ ಮುನಿಪುಂಗವ ।
ದರ್ಶಯೈತನ್ಮಹಾಭಾಗ ಅನಯೋ ರಾಜಪುತ್ರಯೋಃ ॥
ಅನುವಾದ
ಮುನಿಪುಂಗವರೇ! ಈ ಶ್ರೇಷ್ಠಧನುಸ್ಸು ಇಲ್ಲಿಗೆ ತರಲಾಗಿದೆ. ಮಹಾಭಾಗರೇ! ತಾವು ಇದನ್ನು ಈ ಇಬ್ಬರೂ ರಾಜಕುಮಾರರಿಗೆ ತೋರಿಸಿರಿ.॥11॥
ಮೂಲಮ್ - 12
ವಿಶ್ವಾಮಿತ್ರಃ ಸರಾಮಸ್ತು ಶ್ರುತ್ವಾ ಜನಕಭಾಷಿತಮ್ ।
ವತ್ಸ ರಾಮ ಧನುಃ ಪಶ್ಯ ಇತಿ ರಾಘವಮಬ್ರವೀತ್ ॥
ಅನುವಾದ
ಶ್ರೀರಾಮಸಹಿತ ವಿಶ್ವಾಮಿತ್ರರು ಜನಕನ ಮಾತನ್ನು ಕೇಳಿ ರಘುನಂದನಲ್ಲಿ ಹೇಳಿದರು-ವತ್ಸರಾಮಾ! ಈ ಧನುಸ್ಸನ್ನು ನೋಡ.॥12॥
ಮೂಲಮ್ - 13
ಬ್ರಹ್ಮರ್ಷೇವಚನಾದ್ ರಾಮೋ ಯತ್ರ ತಿಷ್ಠತಿ ತದ್ಧನುಃ ।
ಮಂಜೂಷಾಂ ತಾಮಪಾವೃತ್ಯ ದೃಷ್ಟ್ವಾ ಧನುರಥಾಬ್ರವೀತ್ ॥
ಅನುವಾದ
ಮಹರ್ಷಿಗಳ ಆಜ್ಞೆಯಂತೆ ಶ್ರೀರಾಮನು ಧನುಸ್ಸು ಇಟ್ಟಿರುವ ಪೆಟ್ಟಿಗೆಯನ್ನು ತೆರೆದು ಆ ಧನುಸ್ಸನ್ನು ನೋಡಿ ಹೇಳಿದನು -॥13॥
ಮೂಲಮ್ - 14
ಇದಂ ಧನುರ್ವರಂ ದಿವ್ಯಂ ಸಂಪ್ಪೃಶಾಮೀಹ ಪಾಣಿನಾ ।
ಯತ್ನವಾಂಶ್ಚ ಭವಿಷ್ಯಾಮಿ ತೋಲನೇ ಪೂರಣೇಽಪಿ ವಾ ॥
ಅನುವಾದ
ಸರಿ ಈಗ ನಾನು ಈ ದಿವ್ಯ ಹಾಗೂ ಶ್ರೇಷ್ಠ ಧನುಸ್ಸಿಗೆ ಕೈಹಚ್ಚಿ, ಎತ್ತಲೂ ಮತ್ತು ಹೆದೆಯೇರಿಸಲು ಪ್ರಯತ್ನಿಸುವೆನು.॥14॥
ಮೂಲಮ್ - 15
ಬಾಢಮಿತ್ಯಬ್ರವೀದ್ ರಾಜಾ ಮುನಿಶ್ಚ ಸಮಭಾಷತ ।
ಲೀಲಯಾ ಸ ಧನುರ್ಮಧ್ಯೇ ಜಗ್ರಾಹ ವಚನಾನ್ಮುನೇಃ ॥
ಮೂಲಮ್ - 16
ಪಶ್ಯತಾಂ ನೃಸಹಸ್ರಾಣಾಂ ಬಹೂನಾಂ ರಘುನಂದನಃ ।
ಆರೋಪ್ಯಯತ್ ಸ ಧರ್ಮಾತ್ಮಾ ಸಲೀಲಮಿವತದ್ಧನುಃ ॥
ಅನುವಾದ
ಆಗ ರಾಜನು ಮತ್ತು ಮುನಿಗಳು ಏಕಸ್ವರದಲ್ಲಿ ಹೇಳಿದರು - ‘ಹಾಗೆಯೇ ಮಾಡು’. ಮುನಿಗಳ ಆಜ್ಞೆಯಂತೆ ರಘುಕುಲನಂದನ ಧರ್ಮಾತ್ಮಾ ಶ್ರೀರಾಮನು ಆ ಧನುಸ್ಸನ್ನು ನಡುವಿನಲ್ಲಿ ಹಿಡಿದು ಸಲೀಸಾಗಿ ಎತ್ತಿಕೊಂಡನು ಹಾಗೂ ಲೀಲಾಜಾಲವಾಗಿ ಅದನ್ನು ಬಗ್ಗಿಸಿ ಹೆದೆಯೇರಿಸಿದನು. ಆಗ ಅನೇಕ ಸಾವಿರ ಮನುಷ್ಯರ ದೃಷ್ಟಿ ಅವನ ಮೇಲೆ ನೆಟ್ಟಿತ್ತು.॥15-16॥
ಮೂಲಮ್ - 17
ಆರೋಪಯಿತ್ವಾ ಮೌರ್ವೀಂ ಚಪೂರಯಾಮಾಸ ತದ್ಧನುಃ ।
ತದ್ ಬಭಂಜ ಧನುರ್ಮಧ್ಯೇ ನರಶ್ರೇಷ್ಠೋ ಮಹಾಯಶಾಃ ॥
ಅನುವಾದ
ಪ್ರತ್ಯಂಚೆಯನ್ನು ಏರಿಸಿ ಮಹಾಯಶಸ್ವೀ ನರಶ್ರೇಷ್ಠ ಶ್ರೀರಾಮನು ಆ ಧನುಸ್ಸವನ್ನು ಕಿವಿಯವರೆಗೆ ಸೆಳೆದಾಗ ಅದು ನಡುವಿನಲ್ಲಿ ತುಂಡಾಯಿತು.॥17॥
ಮೂಲಮ್ - 18
ತಸ್ಯ ಶಬ್ದೋ ಮಹಾನಾಸೀನ್ನಿರ್ಘಾತಸಮನಿಃಸ್ವನಃ ।
ಭೂಮಿಕಂಪಶ್ಚ ಸುಮಹಾನ್ ಪರ್ವತಸ್ಯೇವ ದೀರ್ಯತಃ ॥
ಅನುವಾದ
ಆ ಧನುಸ್ಸು ಮುರಿದಾಗ ವಜ್ರಪಾತದಂತೆ ಭಾರೀ ಸದ್ದು ಆಯಿತು. ಪರ್ವತಗಳೇ ಉರುಳಿ ಬೀಳುತ್ತವೋ ಅನಿಸಿತು. ಆಗ ಮಹಾ ಭೂಕಂಪವಾಯಿತು.॥18॥
ಮೂಲಮ್ - 19
ನಿಪೇತುಶ್ಚ ನರಾಃ ಸರ್ವೇ ತೇನ ಶಬ್ದೇನ ಮೋಹಿತಾಃ ।
ವರ್ಜಯಿತ್ವಾ ಮುನಿವರಂ ರಾಜಾನಂ ತೌ ಚ ರಾಘವೌ ॥
ಅನುವಾದ
ಮುನಿವರ ವಿಶ್ವಾಮಿತ್ರರು, ರಾಜಾ ಜನಕ, ರಘುಕುಲ ಭೂಷಣ ಇಬ್ಬರೂ ಸಹೋದರ ಶ್ರೀರಾಮ-ಲಕ್ಷ್ಮಣರು ಬಿಟ್ಟು, ಅಲ್ಲಿಗೆ ಬಂದಿರುವ ಇತರರೆಲ್ಲರೂ ಧನುಸ್ಸು ಮುರಿದ ಆ ಭಯಂಕರ ಶಬ್ದದಿಂದ ಮೂರ್ಛಿತರಾದರು.॥19॥
ಮೂಲಮ್ - 20
ಪ್ರತ್ಯಾಶ್ವಸ್ತೇ ಜನೇ ತಸ್ಮಿನ್ ರಾಜಾ ವಿಗತಸಾಧ್ವಸಃ ।
ಉವಾಚ ಪಾಂಜಲಿರ್ವಾಕ್ಯಂ ವಾಕ್ಯಜ್ಞೋ ಮುನಿಪುಂಗವಮ್ ॥
ಅನುವಾದ
ಸ್ವಲ್ಪ ಹೊತ್ತಿನಲ್ಲಿ ಎಲ್ಲರೂ ಎಚ್ಚರಗೊಂಡಾಗ ನಿರ್ಭಯನಾದ ರಾಜಾ ಜನಕನು ಅಂಜಲಿಬದ್ದನಾಗಿ ವಾಕ್ಯ ಕುಶಲರಾದ ಮುನಿವರ ವಿಶ್ವಾಮಿತ್ರರಲ್ಲಿ ಹೇಳಿದನು.॥20॥
ಮೂಲಮ್ - 21
ಭಗವನ್ ದೃಷ್ಟವೀರ್ಯೋ ಮೇ ರಾಮೋ ದಶರಥಾತ್ಮಜಃ ।
ಅತ್ಯದ್ಭುತಮಚಿಂತ್ಯಂ ಚ ಅತರ್ಕಿತಮಿದಂ ಮಯಾ ॥
ಅನುವಾದ
ಪೂಜ್ಯರೇ! ದಶರಥನಂದನ ಶ್ರೀರಾಮನ ಪರಾಕ್ರಮವನ್ನು ಇಂದು ನಾನು ಪ್ರತ್ಯಕ್ಷವಾಗಿ ನೋಡಿದೆ. ಮಹಾದೇವನ ಧನುಸ್ಸನನ್ನು ಹೆದೆ ಏರಿಸುವುದು ಅತ್ಯಂತ ಅದ್ಭುತ, ಅಚಿಂತ್ಯ ಮತ್ತು ಅತರ್ಕಿತ ಘಟನೆಯಾಗಿದೆ.॥21॥
ಮೂಲಮ್ - 22
ಜನಕಾನಾಂ ಕುಲೇ ಕೀರ್ತಿಮಾಹರಿಷ್ಯತಿ ಮೇ ಸುತಾ ।
ಸೀತಾ ಭರ್ತಾರಮಾಸಾದ್ಯ ರಾಮಂ ದಶರಥಾತ್ಮಜಮ್ ॥
ಅನುವಾದ
ನನ್ನ ಪುತ್ರಿ ಸೀತೆಯು ದಶರಥಕುಮಾರ ಶ್ರೀರಾಮನನ್ನು ಪತಿರೂಪದಲ್ಲಿ ಪಡೆದು ಜನಕವಂಶದ ಕೀರ್ತಿಯನ್ನು ಹೆಚ್ಚಿಸುವಳು.॥22॥
ಮೂಲಮ್ - 23
ಮಮ ಸತ್ಯಾ ಪ್ರತಿಜ್ಞಾ ಸಾ ವೀರ್ಯಶುಲ್ಕೇತಿ ಕೌಶಿಕ ।
ಸೀತಾ ಪ್ರಾಣೈರ್ಬಹುಮತಾ ದೇಯಾ ರಾಮಾಯ ಮೇ ಸುತಾ ॥
ಅನುವಾದ
ಕುಶಿಕನಂದನರೇ! ಸೀತೆಯನ್ನು ವೀರ್ಯಶುಲ್ಕಾ ಎಂದು ನಾನು ಮಾಡಿದ ಪ್ರತಿಜ್ಞೆಯು ಇಂದು ಸತ್ಯ ಹಾಗೂ ಸಫಲವಾಯಿತು. ಸೀತೆಯು ನನಗೆ ಪ್ರಾಣಕ್ಕಿಂತಲೂ ಹೆಚ್ಚಿನವಳಾಗಿದ್ದಾಳೆ. ನನ್ನ ಈ ಪುತ್ರಿಯನ್ನು ನಾನು ಶ್ರೀರಾಮನಿಗೆ ಸಮರ್ಪಿಸುವೆನು.॥23॥
ಮೂಲಮ್ - 24
ಭವತೋಽನುಮತೇ ಬ್ರಹ್ಮನ್ ಶೀಘ್ರಂ ಗಚ್ಛಂತು ಮಂತ್ರಿಣಃ ।
ಮಮ ಕೌಶಿಕ ಭದ್ರಂ ತೇ ಅಯೋಧ್ಯಾಂ ತ್ವರಿತಾ ರಥೈಃ ॥
ಮೂಲಮ್ - 25
ರಾಜಾನಂ ಪ್ರಶ್ರಿತೈರ್ವಾಕ್ಯೈರಾನಯಂತು ಪುರಂ ಮಮ ।
ಪ್ರದಾನಂ ವೀರ್ಯಶುಲ್ಕಾಯಾಃ ಕಥಯಂತು ಚಸರ್ವಶಃ ॥
ಅನುವಾದ
ಬ್ರಹ್ಮರ್ಷಿಗಳೇ! ಕುಶಿಕನಂದನರೇ! ನಿಮಗೆ ಮಂಗಳವಾಗಲಿ. ನಿಮ್ಮ ಆಜ್ಞೆಯಾದರೆ ನನ್ನ ಮಂತ್ರಿಗಳು ರಥಾರೂಢರಾಗಿ ಶೀಘ್ರವಾಗಿ ಅಯೋಧ್ಯೆಗೆ ಹೋಗಿ, ವಿನಯಯುಕ್ತವಾದ ವಚನಗಳಿಂದ ಮಹಾರಾಜಾ ದಶರಥರನ್ನು ನನ್ನ ನಗರಕ್ಕೆ ಕರೆದುಕೊಂಡು ಬರಲಿ. ಜೊತೆಗೆ ಇಲ್ಲಿಯ ಎಲ್ಲ ಸಮಾಚಾರ ನಿವೇದಿಸಿಕೊಂಡು ಯಾರಿಗಾಗಿ ಪರಾಕ್ರಮ ಶುಲ್ಕವನ್ನು ನಿಯತಗೊಳಿಸಿತ್ತೋ ಆ ಜನಕಕುಮಾರಿ ಸೀತೆಯ ವಿವಾಹ ಶ್ರೀರಾಮಚಂದ್ರನೊಂದಿಗೆ ಆಗುವುದಿದೆ ಎಂದು ತಿಳಿಸಲಿ.॥24-25॥
ಮೂಲಮ್ - 26
ಮುನಿಗುಪ್ತೌ ಚ ಕಾಕುತ್ಸ್ಥೌ ಕಥಯಂತು ನೃಪಾಯ ವೈ ।
ಪ್ರೀತಿಯುಕ್ತಂ ತು ರಾಜಾನಮಾನಯಂತು ಸುಶೀಘ್ರಗಾಃ ॥
ಅನುವಾದ
ಈ ಮಂತ್ರಿಗಳು ಮಹಾರಾಜ ದಶರಥನಿಗೆ ‘ನಿಮ್ಮ ಇಬ್ಬರು ಪುತ್ರರು ರಾಮ-ಲಕ್ಷ್ಮಣರು ವಿಶ್ವಾಮಿತ್ರರೊಂದಿಗೆ ಸುರಕ್ಷಿತರಾಗಿ ಮಿಥಿಲೆಗೆ ಬಂದಿರುವರು’ ಎಂದೂ ಹೇಳಲಿ. ಹೀಗೆ ಪ್ರೀತಿಯುಕ್ತ ತಿಳಿಸಿ ದಶರಥರಾಜರನ್ನು ಶ್ರೀ ಗಾಮಿ ಸಚಿವರು ಬೇಗನೇ ಇಲ್ಲಿಗೆ ಕರೆತರಲಿ.॥26॥
ಮೂಲಮ್ - 27
ಕೌಶಿಕಸ್ತು ತಥೇತ್ಯಾಹ ರಾಜಾ ಚಾಭಾಷ್ಯ ಮಂತ್ರಿಣಃ ।
ಅಯೋಧ್ಯಾಂ ಪ್ರೇಷಯಾಮಾಸ ಧರ್ಮಾತ್ಮಾ ಕೃತಶಾಸನಾನ್ ।
ಯಥಾವೃತ್ತಂ ಸಮಾಖ್ಯಾತುಮಾನೇತುಂ ಚ ನೃಪಂ ತಥಾ ॥
ಅನುವಾದ
ವಿಶ್ವಾಮಿತ್ರರು ‘ತಥಾಸ್ತು’ ಎಂದು ಹೇಳಿ ರಾಜನ ಮಾತನ್ನು ಸಮರ್ಥಿಸಿದರು. ಆಗ ಧರ್ಮಾತ್ಮಾ ರಾಜಾ ಜನಕನು ತನ್ನ ಆಜ್ಞೆಯನ್ನು ಪಾಲಿಸುವ ಮಂತ್ರಿಗಳಿಗೆ ಸರಿಯಾಗಿ ತಿಳಿಸಿ, ಇಲ್ಲಿಯ ಎಲ್ಲ ಸಮಾಚಾರವನ್ನು ಸರಿಯಾಗಿ ಮಹಾರಾಜ ದಶರಥನಿಗೆ ತಿಳಿಸಿಕೊಟ್ಟನು.॥27॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಅರವತ್ತೇಳನೆಯ ಸರ್ಗ ಪೂರ್ಣವಾಯಿತು.॥67॥