०६६ शिवधनुर्दर्शनम्

वाचनम्
ಭಾಗಸೂಚನಾ

ಜನಕರಾಜನು ವಿಶ್ವಾಮಿತ್ರರನ್ನೂ, ರಾಮ-ಲಕ್ಷ್ಮಣರನ್ನೂ ಸತ್ಕರಿಸಿ, ಅವರಿಗೆ ತನ್ನ ಅರಮನೆಯಲ್ಲಿದ್ದ ಧನುಸ್ಸಿನ ಇತಿಹಾಸವನ್ನು ತಿಳಿಸಿ, ರಾಮನು ಧನುಸ್ಸಿನ ಶಿಂಜಿನಿಯನ್ನು ಸೆಳೆದು ಕಟ್ಟಿದರೆ ಸೀತೆಯನ್ನು ಕೊಟ್ಟು ವಿವಾಹ ಮಾಡುವುದಾಗಿ ಹೇಳಿದುದು

ಮೂಲಮ್ - 1

ತತಃ ಪ್ರಭಾತೇ ವಿಮಲೇ ಕೃತಕರ್ಮಾ ನರಾಧಿಪಃ ।
ವಿಶ್ವಾಮಿತ್ರಂ ಮಹಾತ್ಮಾನಮಾಜುಹಾವ ಸರಾಘವಮ್ ॥

ಮೂಲಮ್ - 2

ತಮರ್ಚಯಿತ್ವಾ ಧರ್ಮಾತ್ಮಾ ಶಾಸ್ತ್ರದೃಷ್ಟೇನ ಕರ್ಮಣಾ ।
ರಾಘವೌ ಚ ಮಹಾತ್ಮಾನೌ ತದಾ ವಾಕ್ಯಮುವಾಚ ಹ ॥

ಅನುವಾದ

ಮರುದಿನ ವಿಮಲ ಪ್ರಭಾತಕಾಲ ಉದಯಿಸಿದಾಗ ಧರ್ಮಾತ್ಮಾ ಜನಕನು ತನ್ನ ನಿತ್ಯಕರ್ಮವನ್ನು ಪೂರೈಸಿ ಶ್ರೀರಾಮ-ಲಕ್ಷ್ಮಣ ಸಹಿತ ವಿಶ್ವಾಮಿತ್ರರನ್ನು ಕರೆಸಿ, ಶಾಸ್ತ್ರಕ್ಕನುಸಾರ ಮುನಿಯನ್ನು ಹಾಗೂ ಮಹಾತ್ಮರಾದ ಇಬ್ಬರೂ ರಾಜಕುಮಾರರನ್ನು ಪೂಜಿಸಿ ಈ ಪ್ರಕಾರ ಹೇಳಿದನು.॥1-2॥

ಮೂಲಮ್ - 3

ಭಗವಾನ್ ಸ್ವ್ವಾಗತಂ ತೇಽಸ್ತು ಕಿಂಕರೋಮಿ ತವಾನಘ ।
ಭವಾನಾಜ್ಞಾಪಯತು ಮಾಮಾಜ್ಞಾಪ್ಯೋ ಭವತಾ ಹ್ಯಹಮ್ ॥

ಅನುವಾದ

ಪೂಜ್ಯರೇ! ನಿಮಗೆ ಸ್ವಾಗತವಿರಲಿ. ಪುಣ್ಯಾತ್ಮ ಮಹರ್ಷಿಗಳೇ! ನಾನು ತಮ್ಮ ಯಾವ ಸೇವೆ ಮಾಡಲಿ? ಏಕೆಂದರೆ ನಾನು ನಿಮ್ಮ ಆಜ್ಞಾಪಾಲಕನಾಗಿರುವೆನು, ಅದಕ್ಕಾಗಿ ಅಪ್ಪಣೆಯಾಗಬೇಕು.॥3॥

ಮೂಲಮ್ - 4

ಏವಮುಕ್ತಃ ಸ ಧರ್ಮಾತ್ಮಾ ಜನಕೇನ ಮಹಾತ್ಮನಾ ।
ಪ್ರತ್ಯುವಾಚ ಮುನಿಶ್ರೇಷ್ಠೋ ವಾಕ್ಯಂ ವಾಕ್ಯವಿಶಾರದಃ ॥

ಅನುವಾದ

ಮಹಾತ್ಮಾ ಜನಕನು ಹೀಗೆ ಹೇಳಿದಾಗ ವಾಕ್ಯವಿಶಾರದರಾದ ಧರ್ಮಾತ್ಮಾ ಮುನಿಶ್ರೇಷ್ಠ ವಿಶ್ವಾಮಿತ್ರರು ಅವನಲ್ಲಿ ಇಂತೆಂದರು.॥4॥

ಮೂಲಮ್ - 5

ಪುತ್ರೌ ದಶರಥಸ್ಯೇಮೌ ಕ್ಷತ್ರಿಯೌ ಲೋಕವಿಶ್ರುತೌ ।
ದ್ರಷ್ಟುಕಾವೌ ಧನುಃಶ್ರೇಷ್ಠಂ ಯದೇತತ್ತ್ವಯಿ ತಿಷ್ಠತಿ ॥

ಅನುವಾದ

ಮಹಾರಾಜಾ! ಇವರಿಬ್ಬರೂ ದಶರಥರಾಜನ ವಿಶ್ವವಿಖ್ಯಾತ ಕ್ಷತ್ರಿಯ ವೀರಪುತ್ರರಾಗಿದ್ದಾರೆ. ನಿನ್ನ ಬಳಿ ಇರುವ ಶ್ರೇಷ್ಠ ಧನುಸ್ಸನ್ನು ನೋಡಲು ಇಚ್ಛಿಸುತ್ತಿರುವರು.॥5॥

ಮೂಲಮ್ - 6

ಏತದ್ದರ್ಶಯ ಭದ್ರಂ ತೇ ಕೃತಕಾಮೌ ನೃಪಾತ್ಮಜೌ ।
ದರ್ಶನಾದಸ್ಯ ಧನುಷೋ ಯಥೇಷ್ಟಂ ಪ್ರತಿಯಾಸ್ಯತಃ ॥

ಅನುವಾದ

ನಿನಗೆ ಮಂಗಳವಾಗಲಿ, ಆ ಧನುಷ್ಯವನ್ನು ಇವರಿಗೆ ತೋರಿಸು. ಇದರಿಂದ ಇವರ ಇಚ್ಛೆ ಪೂರ್ಣವಾಗುವುದು. ಮತ್ತೆ ಈ ರಾಜಕುಮಾರರಿಬ್ಬರೂ ಆ ಧನುಸ್ಸಿನ ದರ್ಶನದಿಂದ ಸಂತುಷ್ಟರಾಗಿ ಇಚ್ಛಾನುಸಾರ ತಮ್ಮ ರಾಜಧಾನಿಗೆ ಮರಳುವರು.॥6॥

ಮೂಲಮ್ - 7

ಏವಮುಕ್ತಸ್ತುಜನಕಃ ಪ್ರತ್ಯುವಾಚ ಮಹಾಮುನಿಮ್ ।
ಶ್ರೂಯತಾಮಸ್ಯ ಧನುಷೋ ಯದರ್ಥಮಿಹ ತಿಷ್ಠತಿ ॥

ಅನುವಾದ

ಮುನಿಯು ಹೀಗೆ ಹೇಳಿದಾಗ ಜನಕನು ಮಹಾಮುನಿ ವಿಶ್ವಾಮಿತ್ರರಲ್ಲಿ ಹೇಳುತ್ತಾನೆ - ಮುನಿವರ್ಯರೇ! ಈ ಧನುಸ್ಸಿನ ವೃತ್ತಾಂತವನ್ನು ಕೇಳಿರಿ. ಯಾವ ಉದ್ದೇಶದಿಂದ ಈ ಬಿಲ್ಲು ಇಲ್ಲಿ ಇರಿಸಲಾಗಿದೆಯೋ ಅದನ್ನು ಹೇಳುವೆನು.॥7॥

ಮೂಲಮ್ - 8

ದೇವರಾತ ಇತಿ ಖ್ಯಾತೋ ನಿಮೇಃರ್ಜ್ಯೇಷ್ಠೋ ಮಹೀಪತಿಃ ।
ನ್ಯಾಸೋಽಯಂ ತಸ್ಯ ಭಗವನ್ ಹಸ್ತೇ ದತ್ತೋ ಮಹಾತ್ಮನಃ ॥

ಅನುವಾದ

ಪೂಜ್ಯರೇ! ನಿಮಿಯ ಜ್ಯೇಷ್ಠಪುತ್ರ ರಾಜಾ ದೇವರಾತ ಎಂಬುವನು ವಿಖ್ಯಾತನಾಗಿದ್ದನು. ಆ ಮಹಾತ್ಮನ ಕೈಯಲ್ಲಿ ಈ ಧನುಸ್ಸು ಒತ್ತೆಯಾಗಿ ಇಡಲ್ಪಟ್ಟಿತ್ತು.॥8॥

ಮೂಲಮ್ - 9

ದಕ್ಷಯಜ್ಞ ವಧೇ ಪೂರ್ವಂ ಧನುರಾಯಮ್ಯ ವೀರ್ಯವಾನ್ ।
ವಿಧ್ವಂಸ್ಯ ತ್ರಿದಶಾನ್ ರೋಷಾತ್ಸಲೀಲಮುದಮಬ್ರವೀತ್ ॥

ಮೂಲಮ್ - 10

ಯಸ್ಮಾದ್ಭಾಗಾರ್ಥಿನೋ ಭಾಗಂ ನಾಕಲ್ಪಯತ ಮೇ ಸುರಾಃ ।
ವರಾಙ್ಗಾನಿ ಮಹಾರ್ಹಾಣಿ ಧನುಷಾ ಶಾತಯಾಮಿ ವಃ ॥

ಅನುವಾದ

ಹಿಂದಿನ ಕಾಲದಲ್ಲಿ ದಕ್ಷಯಜ್ಞ ವಿಧ್ವಂಸದ ಸಮಯ ಪರಮ ಪರಾಕ್ರಮಿ ಭಗವಾನ್ ಶಂಕರನು ಲೀಲೆಯಿಂದಲೇ ಈ ಧನುಸ್ಸನ್ನು ಬಗ್ಗಿಸಿ ರೋಷದಿಂದ ದೇವತೆಗಳಲ್ಲಿ ಹೇಳಿದನು-ದೇವತೆಗಳಿರಾ! ನಾನು ಯಜ್ಞದಲ್ಲಿ ಭಾಗವನ್ನು ಪಡೆಯಲು ಬಯಸುತ್ತಿದ್ದೆ. ಆದರೆ ನೀವು ಕೊಡಲಿಲ್ಲ. ಅದಕ್ಕಾಗಿ ಈ ಧನುಸ್ಸಿನಿಂದ ನಾನು ನಿಮ್ಮೆಲ್ಲರ ಶ್ರೇಷ್ಠವಾದ ಮಸ್ತಕವನ್ನು ಕತ್ತರಿಸಿಬಿಡುವೆನು.॥9-10॥

ಮೂಲಮ್ - 11

ತತೋ ವಿಮನಸಃ ಸರ್ವೇ ದೇವಾ ವೈ ಮುನಿಪುಂಗವ ।
ಪ್ರಸಾದಯಂತ ದೇವೇಶಂ ತೇಷಾಂ ಪ್ರಿತೋಽಭವದ್ಭವಃ॥

ಅನುವಾದ

ಮುನಿಶ್ರೇಷ್ಠರೇ! ಇದನ್ನು ಕೇಳಿ ಸಮಸ್ತ ದೇವತೆಗಳು ಬೇಸರಗೊಂಡು, ದೇವಾಧಿದೇವ ಮಹಾದೇವನನ್ನು ಸ್ತೋತ್ರಗಳಿಂದ ಒಲಿಸಿಕೊಳ್ಳಲು ತೊಡಗಿದರು. ಕೊನೆಗೆ ಭಗವಾನ್ ಶಿವನು ಅವರ ಮೇಲೆ ಪ್ರಸನ್ನನಾದನು.॥11॥

ಮೂಲಮ್ - 12½

ಪ್ರೀತಿಯುಕ್ತಸ್ತು ಸರ್ವೇಷಾಂ ದದೌ ತೇಷಾಂ ಮಹಾತ್ಮನಾಮ್ ।
ತದೇತದ್ ದೇವದೇವಸ್ಯ ಧನೂರತ್ನಂ ಮಹಾತ್ಮನಃ ॥
ನ್ಯಾಸಭೂತಂ ತದಾ ನ್ಯಸ್ತಮಸ್ಮಾಕಂ ಪೂರ್ವಜೇ ವಿಭೌ ।

ಅನುವಾದ

ಮಹಾತ್ಮರಾದ ದೇವತೆಗಳ ಮೇಲೆ ಪ್ರಸನ್ನನಾಗಿ ಶಿವನು ಈ ಧನುಸ್ಸನ್ನು ಅವರಿಗೆ ಅರ್ಪಿಸಿದನು. ದೇವಾಧಿದೇವ ಮಹಾತ್ಮಾ ಭಗವಾನ್ ಶಂಕರನ ಧನುಷ್ಯರತ್ನ ಇದೇ ಆಗಿದೆ. ನನ್ನ ಪೂರ್ವಜ ಮಹಾರಾಜಾ ದೇವರಾತನಲ್ಲಿ ಇದನ್ನು ನ್ಯಾಸರೂಪದಲ್ಲಿ ಇಡಲ್ಪಟ್ಟಿತ್ತು.॥12½॥

ಮೂಲಮ್ - 13

ಅಥ ಮೇ ಕೃಷತಃ ಕ್ಷೇತ್ರಂ ಲಾಂಗಲಾದುತ್ಥಿತಾ ತತಃ ॥

ಮೂಲಮ್ - 14

ಕ್ಷೇತ್ರಂ ಶೋಧಯತಾ ಲಬ್ಧಾ ನಾಮ್ನಾ ಸೀತೇತಿ ವಿಶ್ರುತಾ ।
ಭೂತಲಾದುತ್ಥಿತಾ ಸಾ ತು ವ್ಯವರ್ಧತ ಮಮಾತ್ಮಜಾ ॥

ಅನುವಾದ

ಒಂದು ದಿನ ನಾನು ಯಜ್ಞಕ್ಕಾಗಿ ಭೂಮಿ ಶೋಧಿಸುತ್ತಿದ್ದಾಗ ಹೊಲದಲ್ಲಿ ಊಳುತ್ತಿದ್ದೆ. ಆಗಲೇ ನೇಗಿಲಿನ ತುದಿಯಿಂದ ಉತ್ತ ಭೂಮಿಯಿಂದ ಒಂದು ಕನ್ಯೆ ಪ್ರಕಟಗೊಂಡಳು. (ನೇಗಿಲಿನಿಂದ ಊಳುತ್ತಿರುವಾಗ ಉಂಟಾದ ಗೆರೆಗೆ ಸೀತಾ ಎಂದು ಹೇಳುತ್ತಾರೆ.) ಆ ಸೀತೆಯಿಂದ ಪ್ರಕಟಳಾದ ಕಾರಣ ಆಕೆಯ ಹೆಸರು ಸೀತಾ ಎಂದು ಇಡಲಾಯಿತು. ಭೂಮಿಯಿಂದ ಪ್ರಕಟಳಾದ ಆ ನನ್ನ ಕನ್ಯೆಯು ಕ್ರಮವಾಗಿ ಬೆಳೆದು ದೊಡ್ಡವಳಾಗಿರುವಳು.॥13-14॥

ಮೂಲಮ್ - 15½

ವೀರ್ಯಶುಲ್ಕೇತಿ ಮೇ ಕನ್ಯಾ ಸ್ಥಾಪಿತೇಯಮಯೋನಿಜಾ ।
ಭೂತಲಾದುತ್ಥಿತಾಂ ತಾಂ ತು ವರ್ಧಮಾನಾಂ ಮಮಾತ್ಮಜಾಮ್ ॥
ವರಯಾಮಾಸುರಾಗತ್ಯ ರಾಜಾನೋ ಮುನಿಪುಂಗವ ।

ಅನುವಾದ

ನನ್ನ ಈ ಅಯೋನಿಜ ಕನ್ಯೆಯ ವಿಷಯದಲ್ಲಿ-ಯಾರು ತನ್ನ ಪರಾಕ್ರಮದಿಂದ ಈ ಧನುಸ್ಸನ್ನು ಬಗ್ಗಿಸಿ ಹೆದೆಯೇರಿಸುವನೋ, ಅವನೊಂದಿಗೆ ಈಕೆಯ ವಿವಾಹ ಮಾಡುವೆನಾಗಿ ನಾನು ನಿಶ್ಚಯಿಸಿರುವೆನು. ಹೀಗೆ ಈಕೆಯನ್ನು ವೀರ್ಯಶುಲ್ಕಾ (ಪರಾಕ್ರಮಿರೂಪಿ ಶುಲ್ಕವುಳ್ಳ) ಆಗಿಸಿ ನನ್ನ ಅರಮನೆಯಲ್ಲಿ ಇರಿಸಿಕೊಂಡಿರುವೆನು. ಮುನಿಶ್ರೇಷ್ಠರೇ! ಭೂಮಿಯಿಂದ ಪ್ರಕಟಳಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನನ್ನ ಪುತ್ರೀ ಸೀತೆಯನ್ನು ಅನೇಕ ರಾಜರು ಇಲ್ಲಿಗೆ ಬಂದು ಯಾಚಿಸಿದರು.॥15½॥

ಮೂಲಮ್ - 16½

ತೇಷಾಂ ವರಯತಾಂ ಕನ್ಯಾಂ ಸರ್ವೇಷಾಂ ಪೃಥಿವೀಕ್ಷಿತಾಮ್ ॥
ವೀರ್ಯಶುಲ್ಕೇತಿ ಭಗವನ್ ನ ದದಾಮಿ ಸುತಾಮಹಮ್ ।

ಅನುವಾದ

ಆದರೆ ಪೂಜ್ಯರೇ! ಕನ್ಯೆಯನ್ನು ವರಣಮಾಡುವ ಆ ಎಲ್ಲ ರಾಜರಿಗೆ ನಾನು - ನನ್ನ ಕನ್ಯೆಯು ವೀರ್ಯ ಶಲ್ಕಾ ಆಗಿರುವಳು. ಎಂಬ ಮಾತನ್ನು ತಿಳಿಸಿದೆ. (ಉಚಿತ ಪರಾಕ್ರಮ ಪ್ರಕಟಿಸಿಯೇ ಯಾವನೇ ಪುರುಷನು ಇವಳೊಂದಿಗೆ ವಿವಾಹವಾಗುವ ಅಧಿಕಾರಿಯಾಗುತ್ತಾನೆ.) ಈ ಕಾರಣದಿಂದಲೇ ನಾನು ಇಂದಿನವರೆಗೆ ಕನ್ಯೆಯನ್ನು ಯಾರಿಗೂ ಕೊಟ್ಟಿಲ್ಲ.॥16½॥

ಮೂಲಮ್ - 17½

ತತಃ ಸರ್ವೇ ನೃಪತಯಃ ಸಮೇತ್ಯ ಮುನಿಪುಂಗವ ॥
ಮಿಥಾಲಾಮಪ್ಯುಪಾಗಮ್ಯ ವೀರ್ಯಂ ಜಿಜ್ಞಾಸವಸ್ತದಾ ।

ಅನುವಾದ

ಮುನಿಪುಂಗವರೇ! ಆಗ ಎಲ್ಲ ರಾಜರು ಸೇರಿ ಮಿಥಿಲೆಗೆ ಬಂದು, ಕೇಳತೊಡಗಿದರು - ರಾಜಕುಮಾರೀ ಸೀತೆಯನ್ನು ಪಡೆಯಲು ಎಂತಹ ಪರಾಕ್ರಮವನ್ನು ನಿಶ್ಚಯಿಸಲಾಗಿದೆ.॥17½॥

ಮೂಲಮ್ - 18½

ತೇಷಾಂ ಜಿಜ್ಞಾಸಮಾನಾನಾಂ ಶೈವಂ ಧನುರುಪಾಹೃತಮ್ ॥
ನ ಶೇಕುರ್ಗ್ರಹಣೇ ತಸ್ಯ ಧನುಷಸ್ತೋಲನೇಽಪಿ ವಾ ।

ಅನುವಾದ

ಪರಾಕ್ರಮದ ಜಿಜ್ಞಾಸೆ ಮಾಡುತ್ತಿರುವ ಆ ರಾಜನ ಎದುರಿಗೆ ನಾನು ಈ ಶಿವ ಧನುಸ್ಸನ್ನು ಇರಿಸಿದೆ, ಆದರೆ ಆ ರಾಜರು ಇದನ್ನು ಎತ್ತುವುದಿರಲಿ, ಅಲುಗಾಡಿಸಲೂ ಅಸಮರ್ಥರಾದರು.॥18½॥

ಮೂಲಮ್ - 19½

ತೇಷಾಂ ವೀರ್ಯವತಾಂ ವೀರ್ಯಮಲ್ಪಂ ಜ್ಞಾತ್ವಾ ಮಹಾಮುನೇ ॥
ಪ್ರತ್ಯಾಖ್ಯಾತಾ ನೃಪತಯಸ್ತನ್ನಿಭೋಧ ತಪೋಧನ ।

ಅನುವಾದ

ಮಹಾಮುನಿಯೇ! ಆ ಪರಾಕ್ರಮಿ ಅರಸರ ಶಕ್ತಿಯು ಬಹಳ ಅಲ್ಪವೆಂದು ತಿಳಿದು ನಾನು ಅವರಿಗೆ ಕನ್ಯೆಯನ್ನು ಕೊಡಲು ಒಪ್ಪಲಿಲ್ಲ. ತಪೋಧನರೇ! ಅನಂತರ ನಡೆದ ಘಟನೆಯನ್ನು ತಾವು ಆಲಿಸಿರಿ.॥19½॥

ಮೂಲಮ್ - 20½

ತತಃಪರಮಕೋಪೇನ ರಾಜಾನೋ ಮುನಿಪುಂಗವ ॥
ಅರುಂಧನ್ ಮಿಥಿಲಾಂ ಸರ್ವೇ ವೀರ್ಯಸಂದೇಹಮಾಗತಾಃ ।

ಅನುವಾದ

ಮುನಿಪುಂಗವರೇ! ನಾನು ತಿರಸ್ಕರಿಸಿದಾಗ ಈ ಎಲ್ಲ ರಾಜರು ಅತ್ಯಂತ ಕುಪಿತರಾಗಿ ತಮ್ಮ ಪರಾಕ್ರಮದ ವಿಷಯದಲ್ಲಿ ಸಂಶಯಪಟ್ಟು ಮಿಥಿಲೆಯನ್ನು ಎಲ್ಲೆಡೆಗಳಿಂದ ಆಕ್ರಮಿಸಿದರು.॥20½॥

ಮೂಲಮ್ - 21½

ಆತ್ಮಾನಮವಧೂತಂ ಮೇ ವಿಜ್ಞಾಯ ನೃಪಪುಂಗವಾಃ ॥
ರೋಷೇಣ ಮಹತಾವಿಷ್ಟಾಃ ಪಿಡಯನ್ಮಿಥಿಲಾಂ ಪುರೀಮ್ ।

ಅನುವಾದ

ರಾಜನಿಂದ ತಮ್ಮ ತಿರಸ್ಕಾರವಾಯಿತೆಂದು ತಿಳಿದು ಆ ಶ್ರೇಷ್ಠ ಅರಸರು ಅತ್ಯಂತ ರೋಷಗೊಂಡು ಮಿಥಿಲಾಪುರಿಯನ್ನು ಸುತ್ತಲಿನಿಂದ ಪೀಡಿಸತೊಡಗಿದರು.॥2½1॥

ಮೂಲಮ್ - 22½

ತತಃ ಸಂವತ್ಸರೋ ಪೂರ್ಣೇ ಕ್ಷಯಂ ಯಾತಾನಿ ಸರ್ವಶಃ ॥
ಸಾಧನಾನಿಮುನಿಶ್ರೇಷ್ಠ ತತೋಽಹಂ ಭೃಶದುಃಖಿತಃ ।

ಅನುವಾದ

ಮುನಿಶ್ರೇಷ್ಠರೇ! ಪೂರ್ಣ ಒಂದು ವರ್ಷದವರೆಗೆ ಅವರ ಮುತ್ತಿಗೆ ಹಾಗೆಯೇ ಇತ್ತು. ಅಷ್ಟರಲ್ಲಿ ಯುದ್ಧದ ಎಲ್ಲ ಸಾಧನೆಗಳು ಕ್ಷೀಣವಾದವು; ಇದರಿಂದ ನನಗೆ ಬಹಳ ದುಃಖವಾಯಿತು.॥22½॥

ಮೂಲಮ್ - 23½

ತತೋ ದೇವಗಣಾನ್ ಸರ್ವಾಂಸ್ತಪಸಾಹಂ ಪ್ರಸಾದಯಮ್ ॥
ದದುಶ್ಚ ಪರಮಪ್ರೀತಾಶ್ಚತುರಂಗಬಲಂ ಸುರಾಃ ।

ಅನುವಾದ

ಆಗ ನಾನು ತಪಸ್ಸಿನಿಂದ ಸರ್ವ ದೇವತೆಗಳನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದೆ. ದೇವತೆಗಳು ಬಹಳ ಪ್ರಸನ್ನರಾಗಿ, ಅವರು ನನಗೆ ಚತುರಂಗಿಣಿ ಸೈನ್ಯವನ್ನು ಕರುಣಿಸಿದರು.॥23½॥

ಮೂಲಮ್ - 24½

ತತೋ ಭಗ್ನಾ ನೃಪತಯೋ ಹನ್ಯಮಾನಾ ದಿಶೋಯಯುಃ ॥
ಅವೀರ್ಯಾ ವೀರ್ಯಸಂದಿಗ್ಧಾಃ ಸಾಮಾತ್ಯಾಃ ಪಾಪಕಾರಿಣಃ ।

ಅನುವಾದ

ಮತ್ತೆ ನಮ್ಮ ಸೈನಿಕರಿಂದ ಏಟು ತಿಂದು ಆ ಎಲ್ಲ ಪಾಪಾಚಾರಿ ರಾಜರಲ್ಲಿ ಯಾರು ಬಲಹೀನರಾಗಿದ್ದರೋ, ಯಾರು ತಮ್ಮ ಪರಾಕ್ರಮದಲ್ಲಿ ಸಂದಿಗ್ಧರಾಗಿದ್ದರೋ, ಅವರೆಲ್ಲರೂ ಮಂತ್ರಿಗಳೊಂದಿಗೆ ಬೇರೆ-ಬೇರೆ ದಿಕ್ಕುಗಳಿಗೆ ಓಡಿ ಹೋದರು.॥24½॥

ಮೂಲಮ್ - 25½

ತದೇತನ್ಮುನಿಶಾರ್ದೂಲ ಧನುಃ ಪರಮಭಾಸ್ವರಮ್ ॥
ರಾಮಲಕ್ಷ್ಮಣಯೋಶ್ಚಾಪಿ ದರ್ಶಯಿಷ್ಯಾಮಿ ಸುವ್ರತ ।

ಅನುವಾದ

ಮುನಿಶ್ರೇಷ್ಠರೇ! ಇದೇ ಅ ಪರಮ ಪ್ರಕಾಶಮಾನ ಧನುಸ್ಸು ಆಗಿದೆ. ಸುವ್ರತರಾದ ಮಹರ್ಷಿಗಳೇ! ನಾನು ಅದನ್ನು ಶ್ರೀರಾಮ ಮತ್ತು ಲಕ್ಷ್ಮಣರಿಗೂ ತೋರಿಸುವೆನು.॥25½॥

ಮೂಲಮ್ - 26

ಯದ್ಯಸ್ಯ ಧನುಷೋ ರಾಮಃ ಕುರ್ಯಾದಾರೋಪಣಂ ಮುನೇ ।
ಸುತಾಮಯೋನಿಜಾಂ ಸೀತಾಂ ದದ್ಯಾಂ ದಾಶರಥೇರಹಮ್ ॥

ಅನುವಾದ

ಮುನಿಯೇ! ಶ್ರೀರಾಮನು ಈ ಧನುಸ್ಸಿಗೆ ಹೆದೆಯೇರಿಸಿದರೆ ನಾನು ನನ್ನ ಅಯೋನಿಜ ಕನ್ಯಾ ಸೀತೆಯನ್ನು ಈ ದಶರಥಕುಮಾರನ ಕೈಗೆ ಒಪ್ಪಿಸುವೆನು.॥26॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಅರವತ್ತಾರನೆಯ ಸರ್ಗ ಪೂರ್ಣವಾಯಿತು.॥66॥