०६५ विश्वामित्र-ब्रह्मर्षित्व-प्राप्तिः

वाचनम्
ಭಾಗಸೂಚನಾ

ವಿಶ್ವಾಮಿತ್ರರ ಘೋರ ತಪಸ್ಸು, ಬ್ರಹ್ಮರ್ಷಿತ್ವ ಪ್ರಾಪ್ತಿ, ಜನಕನಿಂದ ವಿಶ್ವಾಮಿತ್ರರ ಪ್ರಶಂಸೆ

ಮೂಲಮ್ - 1

ಅಥ ಹೈಮವತೀಂ ರಾಮ ದಿಶಂ ತ್ಯಕ್ತ್ವಾ ಮಹಾಮುನಿಃ ।
ಪೂರ್ವಾಂ ದಿಶಮನುಪ್ರಾಪ್ಯ ತಪಸ್ತೇಪೇ ಸುದಾರುಣಮ್ ॥

ಅನುವಾದ

(ಶತಾನಂದರು ಹೇಳುತ್ತಿದ್ದಾರೆ -) ಶ್ರೀರಾಮಾ! ಹಿಂದಿನಂತೆ ಪ್ರತಿಜ್ಞೆ ಮಾಡಿದ ಬಳಿಕ ಮಹಾಮುನಿ ವಿಶ್ವಾಮಿತ್ರರು ಉತ್ತರ ದಿಕ್ಕನ್ನು ತ್ಯಜಿಸಿ ಪೂರ್ವದಿಕ್ಕಿಗೆ ಹೊರಟು ಹೋದರು ಮತ್ತು ಅಲ್ಲಿ ನೆಲೆಸಿ ಅತ್ಯಂತ ಕಠೋರ ತಪಸ್ಸು ಮಾಡತೊಡಗಿದರು.॥1॥

ಮೂಲಮ್ - 2

ವೌನಂ ವರ್ಷಸಹಸ್ರಸ್ಯ ಕೃತ್ವಾ ವ್ರತಮನುತ್ತಮಮ್ ।
ಚಕಾರಾಪ್ರತಿಮಂ ರಾಮ ತಪಃ ಪರಮದುಷ್ಕರಮ್ ॥

ಅನುವಾದ

ರಘುನಂದನ! ಒಂದು ಸಾವಿರ ವರ್ಷಗಳವರೆಗೆ ಉತ್ತಮ ಮೌನವ್ರತವನ್ನು ಕೈಗೊಂಡು ಅವರು ಪರಮ ದುಷ್ಕರ ತಪಸ್ಸಿನಲ್ಲಿ ತೊಡಗಿದರು. ಅವರ ಆ ತಪಸ್ಸಿಗೆ ತುಲನೆಯೇ ಇರಲಿಲ್ಲ.॥2॥

ಮೂಲಮ್ - 3

ಪೂರ್ಣೇ ವರ್ಷಸಹಸ್ರೇ ತು ಕಾಷ್ಠಭೂತಂ ಮಹಾಮುನಿಮ್ ।
ವಿಘ್ನೈರ್ಬಹುಭಿರಾಧೂತಂ ಕ್ರೋಧೋ ನಾಂತರಮಾವಿಶತ್ ॥

ಅನುವಾದ

ಒಂದು ಸಾವಿರ ವರ್ಷಪೂರ್ಣವಾಗುವವರೆಗೆ ಆ ಮಹಾ ಮುನಿಗಳು ಕಟ್ಟಿಗೆಯಂತೆ ನಿಶ್ಚೇಷ್ಟರಾಗಿ ಇದ್ದರು. ನಡು-ನಡುವೆ ಅವರ ಮೇಲೆ ಅನೇಕ ವಿಘ್ನಗಳ ಆಕ್ರಮಣವಾದುವು. ಆದರೆ ಕ್ರೋಧ ಅವರೊಳಗೆ ನುಸುಳಲಿಲ್ಲ.॥3॥

ಮೂಲಮ್ - 4

ಸ ಕೃತ್ವಾ ನಿಶ್ಚಯಂ ರಾಮ ತಪ ಆತಿಷ್ಠತಾವ್ಯಯಮ್ ।
ತಸ್ಯ ವರ್ಷಸಹಸ್ರಸ್ಯ ವ್ರತೇ ಪೂರ್ಣೇ ಮಹಾವ್ರತಃ ॥

ಮೂಲಮ್ - 5

ಭೋಕ್ತುಮಾರಬ್ಧವಾನನ್ನಂ ತಸ್ಮಿನ್ಕಾಲೇ ರಘೂತ್ತಮ ।
ಇಂದ್ರೋ ದ್ವಿಜಾತಿರ್ಭೂತ್ವಾ ತಂ ಸಿದ್ಧಮನ್ನಮಯಾಚತ ॥

ಅನುವಾದ

ಶ್ರೀರಾಮಾ! ತನ್ನ ನಿಶ್ಚಯದಲ್ಲಿ ಅಚಲರಾಗಿದ್ದ ಅವರು ಅಕ್ಷಯ ತಪಸ್ಸನ್ನು ಮಾಡಿದರು. ಅವರ ಒಂದು ಸಾವಿರ ವರ್ಷಗಳ ವ್ರತ ಪೂರ್ಣವಾದಾಗ, ಆ ಮಹಾವ್ರತಧಾರೀ ಮಹರ್ಷಿಯ ವ್ರತ ಸಮಾಪ್ತ ಮಾಡಿ ಅನ್ನವನ್ನು ಸ್ವೀಕರಿಸಲು ಉದ್ಯುಕ್ತರಾದರು. ರಘುಕುಲಭೂಷಣ! ಇದೇ ಸಮಯ ಇಂದ್ರನು ಬ್ರಾಹ್ಮಣ ವೇಷದಿಂದ ಒಂದು ಅವರು ಸಿದ್ಧಪಡಿಸಿದ ಅನ್ನವನ್ನು ಬೇಡಿದನು.॥4-5॥

ಮೂಲಮ್ - 6

ತಸ್ಮೈ ದತ್ವಾ ತದಾ ಸಿದ್ಧಂ ಸರ್ವಂ ವಿಪ್ರಾಯ ನಿಶ್ಚಿತಃ ।
ನಿಃಶೇಷಿತೇಽನ್ನೇ ಭಗವಾನಭುಕ್ತೈವ ಮಹಾತಪಾಃ ॥

ಅನುವಾದ

ಆಗ ಅವರು ಆ ಎಲ್ಲ ಸಿದ್ಧತೆಗಳಿಸಿದ ಭೋಜನವನ್ನು ಆ ಬ್ರಾಹ್ಮಣನಿಗೆ ಕೊಡಲು ನಿಶ್ಚಯಿಸಿ ಕೊಟ್ಟುಬಿಟ್ಟರು. ಆ ಅನ್ನದಲ್ಲಿ ಏನೂ ಉಳಿಯಲಿಲ್ಲ. ಅದಕ್ಕಾಗಿ ಆ ಮಹಾತಪಸ್ವೀ ಭಗವಾನ್ ವಿಶ್ವಾಮಿತ್ರರು ಉಣ್ಣದೆ ಕುಡಿಯದೆ ಹಾಗೇ ಇದ್ದುಬಿಟ್ಟರು.॥6॥

ಮೂಲಮ್ - 7

ನ ಕಿಂಚಿದವದದ್ ವಿಪ್ರಂ ಮೌನವ್ರತಮುಪಾಸ್ಥಿತಃ ।
ತಥೈವಾಸೀತ್ಪುನರ್ವೌನಮನುಚ್ಛ್ವಾಸಂ ಚಕಾರ ಹ ॥

ಅನುವಾದ

ಹೀಗಿದ್ದರೂ ಅವರು ಆ ಬ್ರಾಹ್ಮಣನಲ್ಲಿ ಏನನ್ನೂ ಮಾತನಾಡಲಿಲ್ಲ. ತಮ್ಮ ಮೌನವ್ರತವನ್ನು ಯಥಾರ್ಥವಾಗಿ ಪಾಲಿಸಿದರು. ಅನಂತರ ಪುನಃ ಮೊದಲಿನಂತೆ ಶ್ವಾಸೋಚ್ಛ್ವಾಸ ರಹಿತ ಮೌನವ್ರತದ ಅನುಷ್ಠಾನವನ್ನು ಪ್ರಾರಂಭಿಸಿದರು.॥7॥

ಮೂಲಮ್ - 8

ಅಥ ವರ್ಷಸಹಸ್ರಂ ಚ ನೋಚ್ಛ್ವಸನ್ ಮುನಿಪುಂಗವಃ ।
ತಸ್ಯಾನುಚ್ಛ್ವ ಸಮಾನಸ್ಯ ಮೂರ್ಧ್ನಿ ಧೂಮೋ ವ್ಯಜಾಯತ ॥

ಅನುವಾದ

ಪೂರಾ ಒಂದು ಸಾವಿರ ವರ್ಷಗಳವರೆಗೆ ಆ ಮುನಿಶ್ರೇಷ್ಠರು ಶ್ವಾಸವನ್ನೂ ತೆಗೆದುಕೊಳ್ಳಲಿಲ್ಲ. ಈ ರೀತಿ ಉಸಿರು ತೆಗೆದುಕೊಳ್ಳದಿರುವುದರಿಂದ ಅವರ ಮಸ್ತಕದಿಂದ ಹೊಗೆ ಏಳತೊಡಗಿತು.॥8॥

ಮೂಲಮ್ - 9

ತ್ರೈಲೋಕ್ಯಂ ಯೇನ ಸಂಭ್ರಾಂತಮಾತಾಪಿತಮಿವಾಭವತ್ ।
ತತೋ ದೇವರ್ಷಿ ಗಂಧರ್ವಾಃ ಪನ್ನಗೋರಗರಾಕ್ಷಸಾಃ ॥

ಮೂಲಮ್ - 10

ಮೋಹಿತಾಸ್ತಪಸಾ ತಸ್ಯ ತೇಜಸಾ ಮಂದರಶ್ಮಯಃ
ಕಶ್ಮಲೋಪಹತಾಃ ಸರ್ವೇ ಪಿತಾಮಹಮಥಾಬ್ರುವನ್ ॥

ಅನುವಾದ

ಅದರಿಂದ ಮೂರೂ ಲೋಕದ ಪ್ರಾಣಿಗಳು ಗಾಬರಿಗೊಂಡರು, ಎಲ್ಲರೂ ಸಂತಪ್ತರಾದರು. ಆಗ ದೇವತೆಗಳು, ಋಷಿಗಳು, ಗಂಧರ್ವರು, ನಾಗರು, ಸರ್ಪರು ಮತ್ತು ರಾಕ್ಷಸರು ಹೀಗೆ ಎಲ್ಲರೂ ಮುನಿಯ ತಪಸ್ಸಿನಿಂದ ಮೋಹಿತರಾದರು. ಅವರ ತೇಜದಿಂದ ಎಲ್ಲರ ಕಾಂತಿಯು ಮಂಕಾಯಿತು. ಅವರೆಲ್ಲರೂ ದುಃಖದಿಂದ ವ್ಯಾಕುಲರಾಗಿ ಪಿತಾಮಹ ಬ್ರಹ್ಮದೇವರಲ್ಲಿ ಹೇಳಿದರು.॥9-10॥

ಮೂಲಮ್ - 11

ಬಹುಭಿಃ ಕಾರಣೈರ್ದೇವ ವಿಶ್ವಾಮಿತ್ರೋ ಮಹಾಮುನಿಃ ।
ಲೋಭಿತಃ ಕ್ರೋಧಿತಶ್ಚೈವ ತಪಸಾ ಚಾಭಿವರ್ಧತೇ ॥

ಅನುವಾದ

ದೇವ! ನಾನಾ ವಿಧವಾಗಿ ಮಹಾಮುನಿ ವಿಶ್ವಾಮಿತ್ರರಿಗೆ ಲೋಭ ಮತ್ತು ಕ್ರೋಧ ಬರುವಂತೆ ಪ್ರಯತ್ನಿಸಲಾಯಿತು. ಆದರೂ ಅವರು ತಮ್ಮ ತಪಸ್ಸಿನ ಪ್ರಭಾವದಿಂದ ಮುಂದುವರಿಯುತ್ತಲೇ ಇದ್ದಾರೆ.॥11॥

ಮೂಲಮ್ - 12

ನಹ್ಯಸ್ಯ ವೃಜಿನಂ ಕಿಂಚಿದ್ ದೃಶ್ಯತೇ ಸೂಕ್ಷ್ಮಮಪ್ಯುತ ।
ನ ದೀಯತೇ ಯದಿ ತ್ವಸ್ಯಮನಸಾ ಯದಿಭೀಪ್ಸಿತಮ್ ॥

ಮೂಲಮ್ - 13

ವಿನಾಶಯತಿ ತ್ರೈಲೋಕ್ಯಂ ತಪಸಾ ಸಚರಾಚರಮ್ ।
ವ್ಯಾಕುಲಾಶ್ಚದಿಶಃ ಸರ್ವಾ ನ ಚ ಕಿಂಚಿತ್ಪ್ರಕಾಶತೇ ॥

ಅನುವಾದ

ಅವರಲ್ಲಿ ನಮಗೆ ಸಣ್ಣ ದೋಷವೂ ಕೂಡ ಕಂಡು ಬರುವುದಿಲ್ಲ. ಇವರಿಗೆ ಮನೋ ವಾಂಛಿತ ವಸ್ತು ಕೊಡದಿದ್ದರೆ ಅವರು ತಮ್ಮ ತಪಸ್ಸಿನಿಂದ ಚರಾಚರ ಪ್ರಾಣಿಗಳ ಸಹಿತ ಮೂರೂ ಲೋಕಗಳನ್ನು ನಾಶ ಮಾಡಿಬಿಡುವರು. ಈಗ ಎಲ್ಲ ದಿಕ್ಕುಗಳು ಹೊಗೆಯಿಂದ ಆವರಿಸಿಹೋಗಿವೆ, ಎಲ್ಲಿಯೂ ಏನೂ ಕಾಣುವುದಿಲ್ಲ.॥12-13॥

ಮೂಲಮ್ - 14

ಸಾಗರಾಃ ಕ್ಷುಭಿತಾಃ ಸರ್ವೇ ವಿಶೀರ್ಯಂತೇ ಚ ಪರ್ವತಾಃ ॥
ಪ್ರಕಂಪತೇ ಚ ವಸುಧಾ ವಾಯುರ್ವಾತೀಹ ಸಂಕುಲಃ ।

ಅನುವಾದ

ಸಮುದ್ರಗಳು ಕ್ಷುಬ್ಧವಾಗಿವೆ. ಎಲ್ಲ ಪರ್ವತಗಳು ವಿವರ್ಣವಾಗುತ್ತಿವೆ, ಧರೆಯು ನಡುಗುತ್ತಾ ಇದೆ, ಮತ್ತು ಪ್ರಚಂಡ ಚಂಡಮಾರುತ ಬೀಸುತ್ತಾ ಇದೆ.॥14॥

ಮೂಲಮ್ - 15

ಬ್ರಹ್ಮನ್ನ ಪ್ರತಿಜಾನೀಮೋ ನಾಸ್ತಿಕೋ ಜಾಯತೇ ಜನಃ ॥
ಸಂಮೂಢಮಿವ ತ್ರೈಲೋಕ್ಯಂ ಸಂಪ್ರಕ್ಷುಭಿತಮಾನಸಮ್ ।

ಅನುವಾದ

ಬ್ರಹ್ಮದೇವರೇ! ಈ ಉಪದ್ರಗಳ ನಿವಾರಣೆಯ ಉಪಾಯ ನಮಗೆ ತೋಚುವುದಿಲ್ಲ. ಎಲ್ಲ ಜನರು ನಾಸ್ತಿಕರಂತೆ ಕರ್ಮಾನುಷ್ಠಾನ ಶೂನ್ಯರಾಗಿದ್ದಾರೆ. ಮೂರೂ ಲೋಕಗಳ ಪ್ರಾಣಿಗಳ ಮನಸ್ಸುಗಳು ಕ್ಷುಬ್ಧವಾಗಿದೆ. ಎಲ್ಲರೂ ಕಿಂಕರ್ತವ್ಯ ಮೂಢರಂತಾಗಿದ್ದಾರೆ.॥15॥

ಮೂಲಮ್ - 16½

ಭಾಸ್ಕರೋ ನಿಷ್ಪ್ರಭಶ್ಚೈವ ಮಹರ್ಷೇಸ್ತಸ್ಯ ತೇಜಸಾ ॥
ಬುದ್ಧಿಂ ನ ಕುರುತೇ ಯಾವನ್ನಾಶೇ ದೇವ ಮಹಾಮುನಿಃ ॥
ತಾವತ್ಪ್ರಸಾದೋಭಗವಾನಗ್ನಿರೂಪೋ ಮಹಾದ್ಯುತಿಃ ।

ಅನುವಾದ

ಮಹರ್ಷಿ ವಿಶ್ವಾಮಿತ್ರರ ತೇಜದಿಂದ ಸೂರ್ಯನ ಪ್ರಭೆ ಮಂಕಾಗಿದೆ. ಭಗವಂತನೇ! ಈ ಮಹಾಕಾಂತಿಯುಳ್ಳ ಮುನಿಯು ಅಗ್ನಿ ಸ್ವರೂಪರಾಗಿದ್ದಾರೆ. ದೇವ! ಮಹಾಮುನಿ ವಿಶ್ವಾಮಿತ್ರರು ಜಗತ್ತನ್ನು ವಿನಾಶಗೊಳಿಸುವ ವಿಚಾರ ಮಾಡುವ ಮೊದಲೇ ಇವರನ್ನು ಪ್ರಸನ್ನಗೊಳಿಸಬೇಕು.॥16½॥

ಮೂಲಮ್ - 17½

ಕಾಲಾಗ್ನಿನಾ ಯಥಾ ಪೂರ್ವಂ ತ್ರೈಲೋಕ್ಯಂ ದಹ್ಯತೇಽಖಿಲಮ್ ॥
ದೇವರಾಜ್ಯಂ ಚಿಕೀರ್ಷೇತ ದೀಯತಾಮಸ್ಯ ಯನ್ಮನಃ ।

ಅನುವಾದ

ಹಿಂದೆ ಪ್ರಳಯಕಾಲದ ಅಗ್ನಿಯು ಸಂಪೂರ್ಣ ಮೂರು ಲೋಕಗಳನ್ನು ಸುಟ್ಟು ಹಾಕಿತ್ತೋ, ಹಾಗೆಯೇ ಇವರು ಎಲ್ಲರನ್ನು ಸುಟ್ಟು ಬೂದಿಯಾಗಿಸುವರು. ಇವರು ದೇವತೆಗಳ ರಾಜ್ಯವನ್ನೇ ಬಯಸುವುದಾದರೆ ಅದನ್ನೂ ಇವರಿಗೆ ಕೊಡಲಾಗುವುದು. ಇವರ ಮನಸ್ಸಿನಲ್ಲಿರುವ ಯಾವುದೇ ಅಭಿಲಾಷೆ ಇದ್ದರೆ ಅದನ್ನೂ ಪೂರ್ಣಗೊಳಿಸಲಾಗುವುದು.॥17½॥

ಮೂಲಮ್ - 18½

ತತಃ ಸುರಗಣಾಃ ಸರ್ವೇ ಪಿತಾಮಹಪುರೋಗಮಾಃ ॥
ವಿಶ್ವಾಮಿತ್ರಂ ಮಹಾತ್ಮಾನಂ ವಾಕ್ಯಂ ಮಧುರಮಬ್ರುವನ್ ।

ಅನುವಾದ

ಅನಂತರ ಬ್ರಹ್ಮಾದಿ ಸಮಸ್ತ ದೇವತೆಗಳು ಮಹಾತ್ಮಾ ವಿಶ್ವಾಮಿತ್ರರ ಬಳಿಗೆ ಹೋಗಿ ಮಧುರವಾಗಿ ಇಂತೆಂದರು.॥18½॥

ಮೂಲಮ್ - 19½

ಬ್ರಹ್ಮರ್ಷೇ ಸ್ವಾಗತಂ ತೇಽಸ್ತು ತಪಸಾಸ್ಮ ಸುತೋಷಿತಾಃ ॥
ಬ್ರಾಹ್ಮಣ್ಯಂ ತಪಸೋಗ್ರೇಣ ಪ್ರಾಪ್ತವಾನಸಿ ಕೌಶಿಕ ।

ಅನುವಾದ

ಬ್ರಹ್ಮರ್ಷಿಯೇ! ನಿಮಗೆ ಸ್ವಾಗತವಿರಲಿ. ನಾವು ನಿಮ್ಮ ತಪಸ್ಸಿನಿಂದ ತುಂಬಾ ಸಂತುಷ್ಟರಾಗಿದ್ದೇವೆ. ಕುಶಿಕನಂದನ! ನೀನು ನಿನ್ನ ಉಗ್ರತಪಸ್ಸಿನಿಂದ ಬ್ರಾಹ್ಮಣತ್ವವನ್ನು ಪಡೆದಿರುವೆ.॥19½॥

ಮೂಲಮ್ - 20½

ದೀರ್ಘಮಾಯುಶ್ಚ ತೇ ಬ್ರಹ್ಮನ್ ದದಾಮಿ ಸಮರುದ್ಗಣಃ ॥
ಸ್ವಸ್ತಿ ಪ್ರಾಪ್ನುಹಿ ಭದ್ರಂ ತೇ ಗಚ್ಛ ಸೌಮ್ಯ ಯಥಾಸುಖಮ್ ।

ಅನುವಾದ

ಬ್ರಹ್ಮನ್! ಮರುದ್ಗಣಗಳ ಸಹಿತ ನಾನು ನಿನಗೆ ದೀರ್ಘಾಯುಸ್ಸನ್ನು ಕರುಣಿಸಿದ್ದೇನೆ. ಹೋಗು ನಿನಗೆ ಮಂಗಳವಾಗಲಿ. ಸೌಮ್ಯ! ನೀನು ಮಂಗಲಕ್ಕೆ ಭಾಗಿಯಾಗಿರುವೆ. ನಿನಗೆ ಇಚ್ಛೆ ಇರುವಲ್ಲಿ ಸುಖವಾಗಿ ಹೋಗು.॥20½॥

ಮೂಲಮ್ - 21½

ಪಿತಾಮಹವಚಃ ಶ್ರುತ್ವಾ ಸರ್ವೇಷಾಂ ತ್ರಿದಿವೌಕಸಾಮ್ ॥
ಕೃತ್ವಾ ಪ್ರಣಾಮಂ ಮುದಿತೋ ವ್ಯಾಜಹಾರ ಮಹಾಮುನಿಃ ।

ಅನುವಾದ

ಪಿತಾಮಹ ಬ್ರಹ್ಮದೇವರ ಮಾತನ್ನು ಕೇಳಿ ಮಹಾಮುನಿ ವಿಶ್ವಾಮಿತ್ರರು ಅತ್ಯಂತ ಪ್ರಸನ್ನರಾಗಿ, ಸಮಸ್ತ ದೇವತೆಗಳಿಗೆ ವಂದಿಸುತ್ತಾ ಹೇಳಿದನು.॥21½॥

ಮೂಲಮ್ - 22

ಬ್ರಾಹ್ಮಣ್ಯಂ ಯದಿ ಮೇ ಪ್ರಾಪ್ತಂ ದೀರ್ಘಮಾಯುಸ್ತಥೈವ ಚ ॥

ಮೂಲಮ್ - 23

ಓಂಕಾರೋಽಥ ವಷಟ್ಕಾರೋ ವೇದಾಶ್ಚ ವರಯಂತು ಮಾಮ್ ।
ಕ್ಷತ್ರವೇದವಿದಾಂ ಶ್ರೇಷ್ಠೋ ಬ್ರಹ್ಮವೇದವಿದಾಮಪಿ ॥

ಮೂಲಮ್ - 24

ಬ್ರಹ್ಮಪುತ್ರೋ ವಸಿಷ್ಠೋ ಮಾಮೇವಂ ವದತು ದೇವತಾಃ ।
ಯದ್ಯೇವಂ ಪರಮಃ ಕಾಮಃ ಕೃತೋ ಯಾಂತು ಸುರರ್ಷಭಾಃ ॥

ಅನುವಾದ

ದೇವತೆಗಳಿರಾ! ನಿಮ್ಮ ಕೃಪೆಯಿಂದ ನನಗೆ ಬ್ರಾಹ್ಮಣತ್ವ ಮತ್ತು ದೀರ್ಘಾಯುಷ್ಯ ಪ್ರಾಪ್ತಿಯಾಗಿದ್ದರೆ ಓಂಕಾರ, ವಷಟ್ ಮತ್ತು ನಾಲ್ಕು ವೇದಗಳು ತಾನಾಗಿ ಬಂದು ನನ್ನನ್ನು ವರಣ ಮಾಡಲಿ. ಇದಲ್ಲದೆ ಕ್ಷತ್ರಿಯ-ವೇದ (ಧನುರ್ವೇದ) ಹಾಗೂ ಬ್ರಹ್ಮವೇದ (ಋಗ್ವೇದವೇ ನಾಲ್ಕು ವೇದಗಳು) ಜ್ಞಾನಿಗಳಲ್ಲಿ ಎಲ್ಲರಿಗಿಂತ ಶ್ರೇಷ್ಠರಾದ ಬ್ರಹ್ಮಪುತ್ರ ವಸಿಷ್ಠರು ಸ್ವತಃ ಬಂದು-ನೀನು ಬ್ರಾಹ್ಮಣನಾಗಿರುವೆ ಎಂದು ನನ್ನಲ್ಲಿ ಹೇಳಲಿ, ಹೀಗಾದರೆ ನನ್ನ ಉತ್ತಮ ಮನೋರಥ ಪೂರ್ಣವಾಯಿತೆಂದು ನಾನು ತಿಳಿಯುವೆನು. ಆಗ ನೀವೆಲ್ಲ ಶ್ರೇಷ್ಠ ದೇವತೆಗಳು ಇಲ್ಲಿಂದ ಹೋಗಬಲ್ಲಿರಿ.॥22-24॥

ಮೂಲಮ್ - 25

ತತಃ ಪ್ರಸಾದಿತೋ ದೇವೈರ್ವಸಿಷ್ಠೋ ಜಪತಾಂ ವರಃ ।
ಸಖ್ಯಂ ಚಕಾರ ಬ್ರಹ್ಮರ್ಷಿರೇವಮಸ್ತ್ವಿತಿ ಚಾಬ್ರವೀತ್ ॥

ಅನುವಾದ

ಆಗ ದೇವತೆಗಳು ಮಂತ್ರ ಜಪಿಸುವವರಲ್ಲಿ ಶ್ರೇಷ್ಠರಾದ ವಸಿಷ್ಠ ಮುನಿಯನ್ನು ಪ್ರಸನ್ನಗೊಳಿಸಿದರು. ಅನಂತರ ಬ್ರಹ್ಮರ್ಷಿ ವಸಿಷ್ಠರು ‘ಹಾಗೆಯೇ ಆಗಲಿ’ ಎಂದು ಹೇಳಿ ವಿಶ್ವಾಮಿತ್ರರು ಬ್ರಹ್ಮರ್ಷಿಯಾಗುವುದನ್ನು ಸ್ವೀಕರಿಸಿದರು ಹಾಗೂ ಅವರೊಂದಿಗೆ ಮಿತ್ರತ್ವವನ್ನು ಸ್ಥಾಪಿಸಿಕೊಂಡರು.॥25॥

ಮೂಲಮ್ - 26

ಬ್ರಹ್ಮರ್ಷಿಸ್ತ್ವಂ ನ ಸಂದೇಹಃ ಸರ್ವಂ ಸಂಪದ್ಯುತೇ ತವ ।
ಇತ್ಯುಕ್ತ್ವಾ ದೇವತಾಶ್ಚಾಪಿ ಸರ್ವಾ ಜಗ್ಮುರ್ಯಥಾತಮ್ ॥

ಅನುವಾದ

‘ಮುನಿಗಳೇ! ನೀವು ಬ್ರಹ್ಮರ್ಷಿಗಳಾದಿರಿ, ಇದರಲ್ಲಿ ಸಂದೇಹವೇ ಇಲ್ಲ. ನಿಮ್ಮ ಬ್ರಾಹ್ಮಣೋಚಿತ ಎಲ್ಲ ಸಂಸ್ಕಾರಗಳು ನೆರವೇರಿದವು’ ಎಂದು ಹೇಳಿ ದೇವತೆಗಳು ತಮ್ಮ ತಮ್ಮ ಸ್ಥಾನಗಳಿಗೆ ಮರಳಿಹೋದರು.॥26॥

ಮೂಲಮ್ - 27

ವಿಶ್ವಾಮಿತ್ರೋಽಪಿ ಧರ್ಮಾತ್ಮಾಲಬ್ಧ್ವಾ ಬ್ರಾಹ್ಮಣ್ಯಮುತ್ತಮಮ್ ।
ಪೂಜಯಾಮಾಸ ಬ್ರಹ್ಮರ್ಷಿಂ ವಸಿಷ್ಠಂ ಜಪತಾಂ ವರಮ್ ॥

ಅನುವಾದ

ಹೀಗೆ ಉತ್ತಮ ಬ್ರಾಹ್ಮಣತ್ವ ಪಡೆದುಕೊಂಡು ಧರ್ಮಾತ್ಮಾ ವಿಶ್ವಾಮಿತ್ರರೂ ಕೂಡ ಮಂತ್ರಜಪ ಮಾಡುವವರಲ್ಲಿ ಶ್ರೇಷ್ಠರಾದ ಬ್ರಹ್ಮರ್ಷಿ ವಸಿಷ್ಠರನ್ನು ಪೂಜಿಸಿದರು.॥27॥

ಮೂಲಮ್ - 28

ಕೃತಕಾಮೋ ಮಹೀಂ ಸರ್ವಾಂ ಚಚಾರ ತಪಸಿ ಸ್ಥಿತಃ ।
ಏವಂ ತ್ವನೇನ ಬ್ರಾಹ್ಮಣ್ಯಂ ಪ್ರಾಪ್ತಂ ರಾಮ ಮಹಾತ್ಮನಾ ॥

ಅನುವಾದ

ಈ ರೀತಿ ತನ್ನ ಮನೋರಥ ಸಫಲವಾಗಿಸಿಕೊಂಡು ತಪಸ್ಸಿನಲ್ಲಿ ತೊಡಗಿರುತ್ತಲೇ ಸಮಸ್ತ ಪೃಥ್ವಿಯಲ್ಲಿ ಸಂಚರಿಸತೊಡಗಿದರು. ಶ್ರೀರಾಮಾ! ಹೀಗೆ ಕಠೋರ ತಪಸ್ಸು ಮಾಡಿ ಈ ಮಹಾತ್ಮರು ಬ್ರಾಹ್ಮಣತ್ವವನ್ನು ಪಡೆದುಕೊಂಡರು.॥28॥

ಮೂಲಮ್ - 29

ಏಷ ರಾಮ ಮುನಿಶ್ರೇಷ್ಠ ಏಷ ವಿಗ್ರಹವಾಂಸ್ತಪಃ ।
ಏಷ ಧರ್ಮಃ ಪರೋ ನಿತ್ಯಂ ವೀರ್ಯಸ್ಯೈಷ ಪರಾಯಣಮ್ ॥

ಅನುವಾದ

ರಘುನಂದನ! ಈ ವಿಶ್ವಾಮಿತ್ರರು ಸಮಸ್ತ ಮುನಿಗಳಲ್ಲಿ ಶ್ರೇಷ್ಠರಾಗಿದ್ದಾರೆ. ಇವರು ತಪಸ್ಸಿನ ಮೂರ್ತಿಮಂತ ಸ್ವರೂಪರಾಗಿದ್ದಾರೆ. ಉತ್ತಮ ಧರ್ಮದ ಸಾಕ್ಷಾತ್ ಮೂರ್ತಿಯಾಗಿದ್ದಾರೆ. ಪರಾಕ್ರಮದ ಪರಮ ನಿಧಿಗಳಾಗಿದ್ದಾರೆ.॥29॥

ಮೂಲಮ್ - 30½

ಏವಮುಕ್ತ್ವಾಮಹಾತೇಜಾ ವಿರರಾಮ ದ್ವಿಜೋತ್ತಮಃ ।
ಶತಾನಂದವಚಃ ಶ್ರುತ್ವಾ ರಾಮಲಕ್ಷ್ಮಣಸಂನಿಧೌ ॥
ಜನಕಃ ಪ್ರಾಂಜಲಿರ್ವಾಕ್ಯಮುವಾಚ ಕುಶಿಕಾತ್ಮಜಮ್ ।

ಅನುವಾದ

ಹೀಗೆ ಹೇಳಿ ಮಹಾತೇಜಸ್ವೀ ವಿಪ್ರವರ ಶತಾನಂದರು ಸುಮ್ಮನಾದರು. ಶತಾನಂದರಿಂದ ಈ ಕಥೆಯನ್ನು ಕೇಳಿ ಮಹಾರಾಜ ಜನಕನು ಶ್ರೀರಾಮ-ಲಕ್ಷ್ಮಣರ ಬಳಿ ಕುಳಿತ್ತಿದ್ದ ವಿಶ್ವಾಮಿತ್ರರಿಗೆ ಕೈಮುಗಿದು ಇಂತೆಂದನು.॥30½॥

ಮೂಲಮ್ - 31

ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಯಸ್ಯ ಮೇ ಮುನಿಪುಂಗವ ॥

ಮೂಲಮ್ - 32

ಯಜ್ಞಂ ಕಾಕುತ್ಸ್ಥಸಹಿತಃ ಪ್ರಾಪ್ತವಾನಪಿ ಕೌಶಿಕ ।
ಪಾವಿತೋಹಂ ತ್ವಯಾ ಬ್ರಹ್ಮನ್ ದರ್ಶನೇನ ಮಹಾಮುನೇ ॥

ಅನುವಾದ

ಮುನಿಪುಂಗವ ಕೌಶಿಕರೇ! ನೀವು ಕಕುತ್ಸ್ಥಕುಲನಂದನ ಶ್ರೀರಾಮ-ಲಕ್ಷ್ಮಣರೊಂದಿಗೆ ನನ್ನ ಯಜ್ಞಕ್ಕೆ ಆಗಮಿಸಿದ್ದರಿಂದ ನಾನು ಧನ್ಯನಾದೆನು. ನೀವು ನನ್ನ ಮೇಲೆ ಬಹುದೊಡ್ಡ ಕೃಪೆ ಮಾಡಿರುವಿರಿ. ಮಹಾಮುನಿಗಳೇ! ಬ್ರಹ್ಮರ್ಷಿಗಳೇ! ತಾವು ದರ್ಶನಕೊಟ್ಟು ನನ್ನನ್ನು ಪವಿತ್ರಗೊಳಿಸಿದಿರಿ.॥31-32॥

ಮೂಲಮ್ - 33

ಗುಣಾಬಹುವಿಧಾಃ ಪ್ರಾಪ್ತಸ್ತವ ಸಂದರ್ಶನಾನ್ಮಯಾ ।
ವಿಸ್ತರೇಣ ಚ ವೈ ಬ್ರಹ್ಮನ್ ಕೀರ್ತ್ಯಮಾನಂ ಮಹತ್ತಪಃ ॥

ಮೂಲಮ್ - 34

ಶ್ರುತಂ ಮಯಾ ಮಹಾತೇಜೋ ರಾಮೇಣ ಚ ಮಹಾತ್ಮನಾ ।
ಸದಸ್ಯೈಃ ಪ್ರಾಪ್ಯ ಚ ಸದಃ ಶ್ರುತಾಸ್ತೇ ಬಹವೋ ಗುಣಾಃ ॥

ಅನುವಾದ

ತಮ್ಮ ದರ್ಶನದಿಂದ ನನಗೆ ದೊಡ್ಡ ಲಾಭವಾಗಿದೆ. ಅನೇಕ ಪ್ರಕಾರದ ಗುಣಗಳು ಉಪಲಬ್ಧವಾದವು. ಬ್ರಹ್ಮನ್! ಇಂದು ಈ ಸಭೆಯಲ್ಲಿ ಬಂದು ನಾನು ಮಹಾತ್ಮಾ ರಾಮಾ ಹಾಗೂ ಇತರ ಸದಸ್ಯರೊಂದಿಗೆ ತಮ್ಮ ಮಹಾನ್ ಪ್ರಭಾವದ ವರ್ಣನೆಯನ್ನು ಕೇಳಿದೆ, ಅನೇಕ ಗುಣಗಳನ್ನು ಕೇಳಿದೆನು. ಬ್ರಹ್ಮರ್ಷಿಯೇ! ಶತಾನಂದರು ನಿಮ್ಮ ಮಹಾನ್ ತಪಸ್ಸಿನ ವೃತ್ತಾಂತವನ್ನು ವಿಸ್ತಾರವಾಗಿ ತಿಳಿಸಿದರು.॥33-34॥

ಮೂಲಮ್ - 35

ಅಪ್ರಮೇಯಂ ತಪಸ್ತುಭ್ಯಮಪ್ರಮೇಯಂ ಚ ತೇ ಬಲಮ್ ।
ಅಪ್ರಮೇಯಾ ಗುಣಾಶ್ಚೈವ ನಿತ್ಯಂ ತೇ ಕುಶಿಕಾತ್ಮಜ ॥

ಅನುವಾದ

ಕುಶಿಕನಂದನರೇ! ನಿಮ್ಮ ತಪಸ್ಸು ಅಪ್ರಮೇಯವಾಗಿದೆ. ನಿಮ್ಮ ಬಲ ಅನಂತವಾಗಿದೆ. ಹಾಗೂ ಗುಣಗಳಂತೂ ಅಸಂಖ್ಯವಾಗಿದೆ.॥35॥

ಮೂಲಮ್ - 36

ತೃಪ್ತಿರಾಶ್ಚರ್ಯಭೂತಾನಾಂ ಕಥಾನಾಂ ನಾಸ್ತಿ ಮೇ ವಿಭೋ ।
ಕರ್ಮಕಾಲೋ ಮುನಿಶ್ರೇಷ್ಠ ಲಂಬತೇ ರವಿಮಂಡಲಮ್ ॥

ಅನುವಾದ

ಸ್ವಾಮಿ! ನಿಮ್ಮ ಆಶ್ಚರ್ಯಮಯ ಕಥೆಗಳ ಶ್ರವಣದಿಂದ ನನಗೆ ಸಾಕೆನಿಸಲಿಲ್ಲ. ಆದರೆ ಮುನಿಶ್ರೇಷ್ಠರೇ! ಯಜ್ಞದ ಸಮಯ ಆಗುತ್ತಾ ಇದೆ, ಸೂರ್ಯನು ಪಶ್ಚಿಮಾಂಬುಧಿಯನ್ನು ಸೇರುತ್ತಿದ್ದಾನೆ.॥36॥

ಮೂಲಮ್ - 37

ಶ್ವಃ ಪ್ರಭಾತೇ ಮಹಾತೇಜೋ ದ್ರಷ್ಟುಮರ್ಹಸಿ ಮಾಂಪುನಃ ।
ಸ್ವಾಗತಂ ಜಪತಾಂ ಶ್ರೇಷ್ಠ ಮಾಮನುಜ್ಞಾತುಮರ್ಹಸಿ ॥

ಅನುವಾದ

ಜಪ ಮಾಡುವವರಲ್ಲಿ ಶ್ರೇಷ್ಠ ಮಹಾ ತೇಜಸ್ವೀ ಮುನಿಗಳೇ! ನಿಮಗೆ ಸ್ವಾಗತವಿರಲಿ. ನಾಳೆ ಪ್ರಾತಃಕಾಲ ಪುನಃ ನನಗೆ ದರ್ಶಕೊಡಿರಿ. ಈಗ ನನಗೆ ಹೋಗಲು ಅಪ್ಪಣೆ ಕೊಡಿರಿ.॥37॥

ಮೂಲಮ್ - 38

ಏವಮುಕ್ತೋ ಮುನಿವರಃ ಪ್ರಶಸ್ಯ ಪುರುಷರ್ಷಭಮ್ ।
ವಿಸಸರ್ಜಾಶು ಜನಕಂ ಪ್ರೀತಂ ಪ್ರೀತಮನಾಸ್ತದಾ ॥

ಅನುವಾದ

ರಾಜನು ಹೀಗೆ ಹೇಳಿದಾಗ ಮುನಿವರ ವಿಶ್ವಾಮಿತ್ರರು ಮನಸ್ಸಿನಲ್ಲೇ ತುಂಬಾ ಪ್ರಸನ್ನರಾದರು. ಅವರು ಪ್ರೀತಿಯಿಂದ ನರಶ್ರೇಷ್ಠ ಜನಕರಾಜನನ್ನು ಪ್ರಶಂಸಿಸಿ, ಅವನನ್ನು ಬೀಳ್ಕೊಟ್ಟರು.॥38॥

ಮೂಲಮ್ - 39

ಏವಮುಕ್ತ್ವಾಮುನಿಶ್ರೇಷ್ಠಂ ವೈದೇಹೋ ಮಿಥಿಲಾಧಿಪಃ ।
ಪ್ರದಕ್ಷಿಣಂ ಚಕಾರಾಶು ಸೋಪಾಧ್ಯಾಯಃ ಸಬಾಂಧವಃ ॥

ಅನುವಾದ

ಆಗ ಮಿಥಿಲಾಪತಿ ವಿದೇಹ ರಾಜಾ ಜನಕನು ಮುನಿಶ್ರೇಷ್ಠ ವಿಶ್ವಾಮಿತ್ರರಲ್ಲಿ ಹಿಂದಿನಂತೆ ಮಾತನಾಡಿ ಅವನು ಪುರೋಹಿತ ಮತ್ತು ಬಂಧು-ಬಾಂಧವರೊಂದಿಗೆ ಅವರಿಗೆ ಪ್ರದಕ್ಷಿಣೆ ಬಂದು, ಅಲ್ಲಿಂದ ಹೊರಟುಹೋದನು.॥39॥

ಮೂಲಮ್ - 40

ವಿಶ್ವಾಮಿತ್ರೋಽಪಿ ಧರ್ಮಾತ್ಮಾ ಸಹರಾಮಃ ಸಲಕ್ಷ್ಮಣಃ ।
ಸ್ವವಾಸಮಭಿಚಕ್ರಾಮ ಪೂಜ್ಯಮಾನೋ ಮಹತ್ಮಭಿಃ ॥

ಅನುವಾದ

ಅನಂತರ ಧರ್ಮಾತ್ಮಾ ವಿಶ್ವಾಮಿತ್ರರೂ ಮಹಾತ್ಮರಿಂದ ಪೂಜಿತರಾಗಿ ಶ್ರೀರಾಮಾ-ಲಕ್ಷ್ಮಣರೊಂದಿಗೆ ತಮ್ಮ ವಿಶ್ರಾಮ ಸ್ಥಾನಕ್ಕೆ ಮರಳಿದರು.॥40॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಅರವತ್ತೈದನೆಯ ಸರ್ಗ ಪೂರ್ಣವಾಯಿತು. ॥65॥