वाचनम्
ಭಾಗಸೂಚನಾ
ವಿಶ್ವಾಮಿತ್ರರು ರಂಭೆಗೆ ಶಾಪಕೊಟ್ಟು ಪುನಃ ಘೋರ ತಪಸ್ಸಿನ ದೀಕ್ಷೆಯನ್ನು ಕೈಗೊಂಡರು
ಮೂಲಮ್ - 1
ಸುರಕಾರ್ಯಮಿದಂ ರಂಭೇ ಕರ್ತವ್ಯಂ ಸುಮಹತ್ತ್ವಯಾ ।
ಲೋಭನಂ ಕೌಶಿಕಸ್ಯೇಹ ಕಾಮಮೋಹಸಮನ್ವಿತಮ್ ॥
ಅನುವಾದ
(ಇಂದ್ರನು ಹೇಳಿದನು-) ರಂಭೇ! ದೇವತೆಗಳ ಒಂದು ಬಹುದೊಡ್ಡ ಕಾರ್ಯ ಎದುರಾಗಿದೆ. ಇದನ್ನು ನೀನು ಪೂರ್ಣಗೊಳಿಸಬೇಕಾಗಿದೆ. ನೀನು ಮಹರ್ಷಿ ವಿಶ್ವಾಮಿತ್ರರನ್ನು ಕಾಮಮೋಹಿತವಾಗುವಂತೆ ಮರುಳುಗೊಳಿಸು.॥1॥
ಮೂಲಮ್ - 2
ತಥೋಕ್ತಾ ಸಾಪ್ಸರಾ ರಾಮ ಸಹಸ್ರಾಕ್ಷೇಣ ಧೀಮತಾ ।
ವ್ರೀಡಿತಾ ಪ್ರಾಂಜಲಿರ್ವಾಕ್ಷ್ಯ ಪ್ರತ್ಯುವಾಚ ಸುರೇಶ್ವರಮ್ ॥
ಅನುವಾದ
ಶ್ರೀರಾಮಾ! ಬುದ್ಧಿವಂತ ಇಂದ್ರನು ಹೀಗೆ ಹೇಳಿದಾಗ ಆ ಅಪ್ಸರೆಯು ನಾಚಿಕೊಂಡು ಕೈಮುಗಿದು ದೇವೇಂದ್ರನಲ್ಲಿ ಇಂತೆಂದಳು.॥2॥
ಮೂಲಮ್ - 3
ಅಯಂ ಸುರಪತೇ ಘೋರೇ ವಿಶ್ವಾಮಿತ್ರೋ ಮಹಾಮುನಿಃ ।
ಕ್ರೋಧಮುತ್ಸ್ರಕ್ಷ್ಯತೇ ಘೋರಂ ಮಯಿ ದೇವ ನ ಸಂಶಯಃ ॥
ಅನುವಾದ
ಸುರಪತಿಯೇ! ಈ ಮಹಾಮುನಿ ವಿಶ್ವಾಮಿತ್ರರು ಬಹಳ ಭಯಂಕರರಾಗಿದ್ದಾರೆ. ದೇವ! ಇವರು ನನ್ನ ಮೇಲೆ ಭಯಾನಕ ಕ್ರೋಧವನ್ನು ಪ್ರಯೋಗಿಸುವರು, ಇದರಲ್ಲಿ ಸಂಶಯವೇ ಇಲ್ಲ.॥3॥
ಮೂಲಮ್ - 4
ತತೋ ಹಿ ಮೇ ಭಯಂ ದೇವ ಪ್ರಸಾದಂ ಕರ್ತುಮರ್ಹಸಿ ।
ಏವಮುಕ್ತಸ್ತಯಾ ರಾಮ ಸಭಯಂ ಭೀತಯಾ ತದಾ ॥
ಮೂಲಮ್ - 5
ತಾಮುವಾಚ ಸಹಸ್ರಾಕ್ಷೋ ವೇಪಮಾನಾಂ ಕೃತಾಂಜಲಿಮ್ ।
ಮಾ ಭೈಷೀ ರಂಭೇ ಭದ್ರಂ ತೇ ಕುರುಷ್ವ ಮಮ ಶಾಸನಮ್ ॥
ಅನುವಾದ
ಆದ್ದರಿಂದ ದೇವೇಶ್ವರ! ನಾನು ಅವರಿಗೆ ಬಹಳ ಹೆದರುತ್ತೇನೆ. ನೀವು ನನ್ನ ಮೇಲೆ ಕೃಪೆ ಮಾಡಿರಿ. ಶ್ರೀರಾಮಾ! ಹೆದರಿರುವ ರಂಭೆಯು ಹೀಗೆ ಹೇಳಿದಾಗ ಸಹಸ್ರಾಕ್ಷ ಇಂದ್ರನು ಕೈಮುಗಿದು ನಿಂತಿರುವ, ಗಡ-ಗಡನೆ ನಡುಗುತ್ತಿರುವ ರಂಭೆಯಲ್ಲಿ ಹೀಗೆಂದನು - ರಂಭೆಯೇ! ನೀನು ಭಯಪಡಬೇಡ. ನಿನಗೆ ಒಳ್ಳೆಯದಾಗಲಿ. ನೀನು ನನ್ನ ಆಜ್ಞೆಯನ್ನು ಒಪ್ಪಿಕೋ.॥4-5॥
ಮೂಲಮ್ - 6
ಕೋಕಿಲೋ ಹೃದಯಗ್ರಾಹೀ ಮಾಧವೇ ರುಚಿರದ್ರುಮೇ ।
ಅಹಂ ಕಂದರ್ಪಸಹಿತಃ ಸ್ಥಾಸ್ಯಾಮಿ ತವ ಪಾರ್ಶ್ವತಃ ॥
ಅನುವಾದ
ವಸಂತ ಋತುವಿನಲ್ಲಿ ಪ್ರತಿಯೊಂದು ವೃಕ್ಷಗಳು ನವ ಪಲ್ಲವಗಳಿಂದ ಪರಮ ಸುಂದರವಾಗಿ ಶೋಭಿಸುತ್ತಿರುವಾಗ, ತನ್ನ ಮಧುರ ಕೂಜನದಿಂದ ಎಲ್ಲರ ಹೃದಯಗಳನ್ನು ಸೆಳೆಯುವ ಕೋಗಿಲೆ ಮತ್ತು ಮನ್ಮಥನೊಂದಿಗೆ ನಾನೂ ನಿನ್ನ ಬಳಿ ಇರುವೆನು.॥6॥
ಮೂಲಮ್ - 7
ತ್ವಂ ಹಿ ರೂಪಂ ಬಹುಗುಣಂ ಕೃತ್ವಾ ಪರಮಭಾಸ್ವರಮ್ ।
ತಮೃಷಿಂ ಕೌಶಿಕಂ ಭದ್ರೇ ಭೇದಯಸ್ವ ತಪಸ್ವಿನಮ್ ॥
ಅನುವಾದ
ಮಂಗಳಾಂಗಿಯೇ! ನೀನು ನಿನ್ನ ಪರಮಕಾಂತಿಯುಕ್ತ ರೂಪವನ್ನು, ಹಾವ-ಭಾವವೇ ಮೊದಲಾದ ವಿವಿಧ ಗುಣಗಳಿಂದ ಸಂಪನ್ನಗೊಳಿಸಿ, ಅದರಿಂದ ವಿಶ್ವಾಮಿತ್ರ ಮುನಿಯನ್ನು ತಪಸ್ಸಿನಿಂದ ವಿಚಲಿತಗೊಳಿಸು.॥7॥
ಮೂಲಮ್ - 8
ಸಾ ಶ್ರುತ್ವಾ ವಚನಂ ತಸ್ಯ ಕೃತ್ವಾ ರೂಪಮನುತ್ತಮಮ್ ।
ಲೋಭಯಾಮಾಸ ಲಲಿತಾ ವಿಶ್ವಾಮಿತ್ರಂ ಶುಚಿಸ್ಮಿತಾ ॥
ಅನುವಾದ
ದೇವರಾಜನ ಈ ಮಾತನ್ನು ಕೇಳಿ ಆ ಮಧುರ ಮುಗುಳ್ನಗೆಯುಳ್ಳ ಸುಂದರೀ ಅಪ್ಸರೆಯು ಪರಮೋತ್ತಮ ರೂಪವನ್ನಾಂತು ವಿಶ್ವಾಮಿತ್ರನನ್ನು ಮರುಳುಗೊಳಿಸ ತೊಡಗಿದಳು.॥8॥
ಮೂಲಮ್ - 9
ಕೋಕಿಲಸ್ಯ ತು ಶುಶ್ರಾವವಲ್ಗು ವ್ಯಾಹರತಃ ಸ್ವನಮ್ ।
ಸಂಪ್ರಹೃಷ್ಟೇನ ಮನಸಾ ಸ ಚೈನಾಮವೈಕ್ಷತ ॥
ಅನುವಾದ
ವಿಶ್ವಾಮಿತ್ರರು ಕೋಗಿಲೆಯ ಮಧುರ ಕೂಜನವನ್ನು ಕೇಳಿದರು. ಪ್ರಸನ್ನಚಿತ್ತರಾದ ಅವರು ಅತ್ತಕಡೆ ನೋಡಿದಾಗ ಎದುರಿಗೆ ನಿಂತಿರುವ ರಂಭೆಯು ಕಂಡುಬಂದಳು.॥9॥
ಮೂಲಮ್ - 10
ಅಥ ತಸ್ಯ ಚ ಶಬ್ದೇನ ಗೀತೇನಾಪ್ರತಿಮೇನ ಚ ।
ದರ್ಶನೇನ ಚ ರಂಭಾಯಾ ಮುನಿಃ ಸಂದೇಹಮಾಗತಃ ॥
ಅನುವಾದ
ಕೋಗಿಲೆಯ ಕಲರವ, ವಸಂತನ ವೈಭವ, ಪ್ರತ್ಯಕ್ಷವಾಗಿ ಕಣ್ಮುಂದೆ ಇರುವ ರಂಭೆಯ ಅನುಪಮವಾದ ಸಂಗೀತದಿಂದ ಮುನಿಯ ಮನಸ್ಸಿನಲ್ಲಿ ಸಂದೇಹ ಉಂಟಾಯಿತು.॥10॥
ಮೂಲಮ್ - 11
ಸಹಸ್ರಾಕ್ಷಸ್ಯ ತತ್ಸರ್ವಂ ವಿಜ್ಞಾಯ ಮುನಿಪುಂಗವಃ ।
ರಂಭಾಂ ಕ್ರೋಧಸಮಾವಿಷ್ಟಃ ಶಶಾಪ ಕುಶಿಕಾತ್ಮಜಃ ॥
ಅನುವಾದ
ಇದೆಲ್ಲವೂ ದೇವೇಂದ್ರನ ಕುತಂತ್ರವೆಂದು ಅವರು ತಿಳಿದುಕೊಂಡರು. ಮತ್ತೆ ಮುನಿವರ ವಿಶ್ವಾಮಿತ್ರರು ಕ್ರೋಧಗೊಂಡು ರಂಭೆಗೆ ಶಾಪಕೊಡುತ್ತಾ ಹೇಳಿದರು.॥11॥
ಮೂಲಮ್ - 12
ಯನ್ಮಾಂ ಲೋಭಯಸೇ ರಂಭೇ ಕಾಮಕ್ರೋಧಜಯೈಷಿಣಮ್ ।
ದಶ ವರ್ಷಸಹಸ್ರಾಣಿ ಶೈಲೀ ಸ್ಥಾಸ್ಯಸಿ ದುರ್ಭಗೇ ॥
ಅನುವಾದ
ದುರ್ಭಗೇ ರಂಭೇ! ನಾನು ಕಾಮ ಮತ್ತು ಕ್ರೋಧದ ಮೇಲೆ ವಿಜಯವನ್ನು ಪಡೆಯಲು ಬಯಸುತ್ತೇನೆ ಹಾಗೂ ನೀನು ಬಂದು ನನ್ನನ್ನು ಮರಳುಗೊಳಿಸುತ್ತಿರುವೆ. ಆದ್ದರಿಂದ ಈ ಅಪರಾಧದಿಂದಾಗಿ ನೀನು ಹತ್ತು ಸಾವಿರ ವರ್ಷಗಳವರೆಗೆ ಕಲ್ಲಿನ ಪ್ರತಿಮೆಯಾಗಿ ನಿಂತಿರುವೆ.॥12॥
ಮೂಲಮ್ - 13
ಬ್ರಾಹ್ಮಣಃ ಸುಮಹಾತೇಜಾಸ್ತಪೋಬಲಸಮನ್ವಿತಃ ।
ಉದ್ಧರಿಷ್ಯತಿ ರಂಭೇ ತ್ವಾಂ ಮತ್ಕ್ರೋಧಕಲುಷೀಕೃತಾಮ್ ॥
ಅನುವಾದ
ರಂಭೆ ಶಾಪದ ಅವಧಿ ಪೂರ್ಣಗೊಂಡಾಗ ಓರ್ವ ಮಹಾತ್ಮ ತೇಜಸ್ವೀ ಮತ್ತು ತಪೋಬಲ ಸಂಪನ್ನ (ಬ್ರಹ್ಮದೇವರ ಪುತ್ರ ವಸಿಷ್ಠರು) ಬ್ರಾಹ್ಮಣನು ನನ್ನ ಕ್ರೋಧದಿಂದ ಕಲುಷಿತಳಾದ ನಿನ್ನನ್ನು ಉದ್ಧಾರ ಮಾಡುವರು.॥13॥
ಮೂಲಮ್ - 14
ಏವಮುಕ್ತ್ವಾ ಮಹಾತೇಜಾ ವಿಶ್ವಾಮಿತ್ರೋಮಹಾಮುನಿಃ ।
ಅಶಕ್ನುವನ್ಧಾರಯಿತುಂ ಕೋಪಂ ಸಂತಾಪಮಾತ್ಮನಃ ॥
ಅನುವಾದ
ಹೀಗೆ ಹೇಳಿ ಮಹಾತೇಜಸ್ವೀ ಮಹಾಮುನಿ ವಿಶ್ವಾಮಿತ್ರರು ತನ್ನ ಕ್ರೋಧವನ್ನು ತಡೆಯಲಾಗದಿದ್ದರಿಂದ ಮನಸ್ಸಿನಲ್ಲೇ ಸಂತಪ್ತರಾದರು.॥14॥
ಮೂಲಮ್ - 15
ತಸ್ಯ ಶಾಪೇನ ಮಹತಾ ರಂಭಾ ಶೈಲೀ ತದಾಭವತ್ ।
ವಚಃ ಶ್ರುತ್ವಾ ಚ ಕಂದರ್ಪೋ ಮಹರ್ಷೇಃ ಸ ಚ ನಿರ್ಗತಃ ॥
ಅನುವಾದ
ಮುನಿಯ ಶಾಪದಿಂದ ರಂಭೆಯು ತಕ್ಷಣ ಕಲ್ಲಿನ ಮೂರ್ತಿಯಾಗಿಬಿಟ್ಟಳು. ಮಹರ್ಷಿಯ ಆ ಶಾಪಯುಕ್ತ ವಚನವನ್ನು ಕೇಳಿ ಕಂದರ್ಪ ಮತ್ತು ಇಂದ್ರನು ಅಲ್ಲಿಂದ ಕಾಲು ಕಿತ್ತರು.॥15॥
ಮೂಲಮ್ - 16
ಕೋಪೇನ ಚ ಮಹಾತೇಜಾಸ್ತಪೋಽಪಹರಣೇ ಕೃತೇ ।
ಇಂದ್ರಿಯೈರಜಿತೈ ರಾಮ ನ ಲೇಭೇ ಶಾಂತಿಮಾತ್ಮನಃ ॥
ಅನುವಾದ
ಶ್ರೀರಾಮಾ! ಕ್ರೋಧದಿಂದ ತಪಸ್ಸಿನ ಕ್ಷಯವಾಯಿತು ಮತ್ತು ಇಂದ್ರಿಯಗಳು ಇನ್ನೂ ಹತೋಟಿಗೆ ಬರಲಿಲ್ಲ. ಹೀಗೆ ವಿಚಾರ ಮಾಡಿ ಆ ಮಹಾತೇಜಸ್ವೀ ಮುನಿಯ ಚಿತ್ತಕ್ಕೆ ಶಾಂತಿ ಸಿಗದೇಹೋಯಿತು.॥16॥
ಮೂಲಮ್ - 17
ಬಭೂವಾಸ್ಯ ಮನಶ್ಚಿಂತಾ ತಪೋಽಪಹರಣೇ ಕೃತೇ ।
ನೈವಂ ಕ್ರೋಧಂ ಗಮಿಷ್ಯಾಮಿ ನ ಚ ವಕ್ಷ್ಯೇ ಕಥಂಚನ ॥
ಅನುವಾದ
ತಪಸ್ಸು ಅಪಹರಣವಾದಾಗ ಅವರ ಮನಸ್ಸಿನಲ್ಲಿ ‘ಈಗಿನಿಂದ ಕ್ರೋಧವನ್ನು ಮಾಡಲಾರೆ ಮತ್ತು ಯಾವುದೇ ಸ್ಥಿತಿಯಲ್ಲೂ ಮನಸ್ಸಿನ ಸಂಯಮ ಕಳೆದುಕೊಳ್ಳುವುದಿಲ್ಲ.’ ಎಂಬ ವಿಚಾರ ಉಂಟಾಯಿತು.॥17॥
ಮೂಲಮ್ - 18
ಅಥವಾ ನೋಚ್ಛ್ವಸಿಷ್ಯಾಮಿ ಸಂವತ್ಸರಶತಾನ್ಯಪಿ ।
ಅಹಂ ಹಿ ಶೋಷಯಿಷ್ಯಾಮಿ ಆತ್ಮಾನಂ ವಿಜಿತೇಂದ್ರಿಯಃ ॥
ಅನುವಾದ
ಸಾವಿರ ವರ್ಷಗಳವರೆಗೆ ನಾನು ಶ್ವಾಸವನ್ನೇ ತೆಗೆದುಕೊಳ್ಳುವುದಿಲ್ಲ. ಇಂದ್ರಿಯಗಳನ್ನು ಜಯಿಸಿ ಶರೀರವನ್ನು ಮೋಹ ಮುಕ್ತವಾಗಿ ಒಣಗಿಸುತ್ತೇನೆ.॥18॥
ಮೂಲಮ್ - 19
ತಾವದ್ಯಾವದ್ಧಿ ಮೇ ಪ್ರಾಪ್ತಂ ಬ್ರಾಹ್ಮಣ್ಯಂ ತಪಸಾರ್ಜಿತಮ್ ।
ಅನುಚ್ಛ್ವಸನ್ನಭುಂಜಾನಸ್ತಿಷ್ಠೇಯಂ ಶಾಶ್ವತೀಃ ಸಮಾಃ ॥
ಅನುವಾದ
ನನ್ನ ತಪಸ್ಸಿನಿಂದ ಗಳಿಸಿದ ಬ್ರಾಹ್ಮಣತ್ವವು ನನಗೆ ಪ್ರಾಪ್ತವಾಗುವ ತನಕ, ಬೇಕಾದರೂ ಅನಂತ ವರ್ಷ ಕಳೆದುಹೋದರೂ ನಾನು ಏನನ್ನೂ ತಿನ್ನದೆ, ಕುಡಿಯದೆ, ಉಸಿರನ್ನೂ ತೆಗೆದುಕೊಳ್ಳಲಾರೆ.॥19॥
ಮೂಲಮ್ - 20
ನ ಹಿ ಮೇ ತಪ್ಯಮಾನಸ್ಯ ಕ್ಷಯಂ ಯಾಸ್ಯಂತಿ ಮೂರ್ತಯಃ ।
ಏವಂ ವರ್ಷಸಹಸ್ರಸ್ಯ ದೀಕ್ಷಾಂ ಸ ಮುನಿಪುಂಗವಃ ।
ಚಕಾರಾಪ್ರತಿಮಾಂ ಲೋಕೇ ಪ್ರತಿಜ್ಞಾಂ ರಘುನಂದನ ॥
ಅನುವಾದ
‘ತಪಸ್ಸನ್ನು ಮಾಡುತ್ತಿರುವಾಗ ನನ್ನ ಶರೀರದ ಅವಯವಗಳು ಎಂದಿಗೂ ನಾಶವಾಗಲಾರದು’ ರಘುನಂದನ! ಹೀಗೆ ನಿಶ್ಚಯಿಸಿ ಮುನಿವರ ವಿಶ್ವಾಮಿತ್ರರು ಪುನಃ ಒಂದು ಸಾವಿರ ವರ್ಷಗಳವರೆಗೆ ತಪಸ್ಸು ಮಾಡಲಿಕ್ಕಾಗಿ ದೀಕ್ಷೆಯನ್ನು ಕೈಗೊಂಡರು. ಅವರು ಮಾಡಿದ ಪ್ರತಿಜ್ಞೆಗೆ ಈ ಪ್ರಪಂಚದಲ್ಲಿ ತುಲನೆಯೇ ಇಲ್ಲ.॥20॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಅರವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥64॥