०६३ विश्वामित्रतपोनाशः

वाचनम्
ಭಾಗಸೂಚನಾ

ತಪಸ್ಸಿನ ಫಲವಾಗಿ ವಿಶ್ವಾಮಿತ್ರರಿಗೆ ಋಷಿತ್ವ-ಮಹರ್ಷಿತ್ವ ಪ್ರಾಪ್ತಿ, ಮೇನಕೆಯಿಂದ ಅವರ ತಪೋಭಂಗ, ಬ್ರಹ್ಮರ್ಷಿಗಳಾಗಲು ಘೋರವಾದ ತಪಸ್ಸು

ಮೂಲಮ್ - 1

ಪೂರ್ಣೇ ವರ್ಷಸಹಸ್ರೇ ತು ವ್ರತಸ್ನಾತಂ ಮಹಾಮುನಿಮ್ ।
ಅಭ್ಯಗಚ್ಛನ್ಸುರಾಃ ಸರ್ವೇ ತಪಃ ಫಲಚಿಕೀರ್ಷವಃ ॥

ಅನುವಾದ

(ಶತಾನಂದರು ಹೇಳುತ್ತಿದ್ದಾರೆ - ಶ್ರೀ ರಾಮಾ!) ಒಂದು ಸಾವಿರ ವರ್ಷ ಪೂರ್ಣವಾದಾಗ ವಿಶ್ವಾಮಿತ್ರರು ವ್ರತ ಸ್ನಾನ ಮಾಡಿದರು. ವ್ರತ ಸಮಾಪ್ತಿಯಾದಾಗ ಬ್ರಹ್ಮಾದಿ ಸಮಸ್ತ ದೇವತೆಗಳು ತಪಸ್ಸಿನ ಫಲವನ್ನು ಕೊಡಲು ಅಲ್ಲಿಗೆ ಬಂದರು.॥1॥

ಮೂಲಮ್ - 2

ಅಬ್ರವೀತ್ಸುಮಹಾತೇಜಾ ಬ್ರಹ್ಮಾಸುರುಚಿರಂ ವಚಃ ।
ಋಷಿಸ್ತ್ವಮಸಿ ಭದ್ರಂ ತೇ ಸ್ವಾರ್ಜಿತೈಃ ಕರ್ಮಭಿಃ ಶುಭೈಃ ॥

ಅನುವಾದ

ಆಗ ಮಹಾತೇಜಸ್ವೀ ಬ್ರಹ್ಮದೇವರು ಮಧುರವಾಣಿಯಿಂದ - ಮುನಿಯೇ! ನಿನಗೆ ಮಂಗಳವಾಗಲಿ. ಈಗ ನೀನು ಗಳಿಸಿದ ಶುಭ ಕರ್ಮಗಳ ಪ್ರಭಾವದಿಂದ ಋಷಿಯಾದೆ.॥2॥

ಮೂಲಮ್ - 3

ತಮೇವಮುಕ್ತ್ವಾ ದೇವೇಶಸ್ತ್ರಿದಿವಂ ಪುನರಭ್ಯಗಾತ್ ।
ವಿಶ್ವಾಮಿತ್ರೋ ಮಹಾತೇಜಾ ಭೂಯಸ್ತೇಪೇ ಮಹತ್ತಪಃ ॥

ಅನುವಾದ

ವಿಶ್ವಾಮಿತ್ರರಲ್ಲಿ ಹೀಗೆ ಹೇಳಿ ದೇವೇಶ್ವರ ಬ್ರಹ್ಮದೇವರು ತಮ್ಮ ಲೋಕಕ್ಕೆ ತೆರಳಿದರು. ಇತ್ತ ಮಹಾತೇಜಸ್ವೀ ಮುನಿಗಳು ಪುನಃ ಭಾರೀ ತಪಸ್ಸಿಗೆ ತೊಡಗಿದರು.॥3॥

ಮೂಲಮ್ - 4

ತತಃ ಕಾಲೇನ ಮಹತಾ ಮೇನಕಾ ಪರಮಾಪ್ಸರಾಃ ।
ಪುಷ್ಕರೇಷು ನರಶ್ರೇಷ್ಠ ಸ್ನಾತುಂ ಸಮುಪಚಕ್ರಮೇ ॥

ಅನುವಾದ

ನರಶ್ರೇಷ್ಠನೇ! ಅನಂತರ ಬಹಳ ಸಮಯ ಕಳೆದಾಗ ಪರಮಸುಂದರೀ ಅಪ್ಸರೆ ಮೇನಕೆಯು ಪುಷ್ಕರಕ್ಕೆ ಬಂದು ಅಲ್ಲಿ ಸ್ನಾನಮಾಡಲು ಸಿದ್ಧಳಾದಳು.॥4॥

ಮೂಲಮ್ - 5

ತಾಂ ದದರ್ಶ ಮಹಾತೇಜಾ ಮೇನಕಾಂ ಕುಶಿಕಾತ್ಮಜಃ ।
ರೂಪೇಣಾಪ್ರತಿಮಾಂ ತತ್ರ ವಿದ್ಯುತಂ ಜಲದೇ ಯಥಾ ॥

ಅನುವಾದ

ಮಹಾತೇಜಸ್ವೀ ಕುಶಿಕನಂದನ ವಿಶ್ವಾಮಿತ್ರರು ಅಲ್ಲಿ ಆ ಮೇನಕೆಯನ್ನು ನೋಡಿದರು. ಆಕೆಯು ಅತುಲವಾದ ರೂಪ ಲಾವಣ್ಯದಿಂದ ಮೋಡಗಳಲ್ಲಿನ ವಿದ್ಯುಲ್ಲತೆಯಂತೆ ಆ ಪುಷ್ಕರ ಜಲದಲ್ಲಿ ಶೋಭಿಸುತ್ತಿದ್ದಳು.॥5॥

ಮೂಲಮ್ - 6

ಕಂದರ್ಪ ದರ್ಪವಶಗೋ ಮುನಿಸ್ತಾಮಿದಮಬ್ರವೀತ್ ।
ಅಪ್ಸರಃ ಸ್ವಾಗತಂ ತೇಽಸ್ತು ವಸ ಚೇಹ ಮಮಾಶ್ರಮೇ ॥

ಅನುವಾದ

ಆಕೆಯನ್ನು ನೋಡಿ ಮುನಿಯು ಕಾಮಪರವಶರಾದರು ಹಾಗೂ ಆಕೆಯಲ್ಲಿ ಹೇಳಿದರು ಅಪ್ಸರಾ! ನಿನಗೆ ಸ್ವಾಗತವಿರಲಿ. ನೀನು ನನ್ನ ಈ ಆಶ್ರಮದಲ್ಲೇ ವಾಸಿಸು.॥6॥

ಮೂಲಮ್ - 7

ಅನುಗೃಹ್ಣೀಷ್ವ ಭದ್ರಂ ತೇ ಮದನೇನ ವಿಮೋಹಿತಮ್ ।
ಇತ್ಯುಕ್ತಾ ಸಾ ವರಾರೋಹಾ ತತ್ರ ವಾಸಮಥಾಕರೋತ್ ॥

ಅನುವಾದ

ನಿನಗೆ ಒಳ್ಳೆಯದಾಗಲಿ ನಾನು ಕಾಮದಿಂದ ಮೋಹಿತನಾಗಿರುವೆನು. ನನ್ನ ಮೇಲೆ ದಯೆತೋರು. ಅವರು ಹೀಗೆ ಹೇಳಿದಾಗ ಸುಂದರಿಯಾದ ಮೇನಕೆಯು ಅಲ್ಲೇ ಇರತೊಡಗಿದಳು.॥7॥

ಮೂಲಮ್ - 8½

ತಪಸೋ ಹಿ ಮಹಾವಿಘ್ನೋವಿಶ್ವಾಮಿತ್ರಮುಪಾಗಮತ್ ।
ತಸ್ಯಾಂ ವಸನ್ತ್ಯಾಂ ವರ್ಷಾಣಿ ಪಂಚ ಪಂಚ ಚ ರಾಘವ ॥
ವಿಶ್ವಾಮಿತ್ರಾಶ್ರಮೇ ಸೌಮ್ಯೇ ಸುಖೇನ ವ್ಯತಿಚಕ್ರಮುಃ ।

ಅನುವಾದ

ಈ ಪ್ರಕಾರ ತಪಸ್ಸಿನ ದೊಡ್ಡ ವಿಘ್ನವು ವಿಶ್ವಾಮಿತ್ರರ ಬಳಿ ತಾನಾಗಿ ಉಪಸ್ಥಿತವಾಯಿತು. ರಘುನಂದನ! ಮೇನಕೆಯು ವಿಶ್ವಾಮಿತ್ರರ ಆ ಸೌಮ್ಯ ಆಶ್ರಮದಲ್ಲಿ ಇರುತ್ತಾ ಹತ್ತು ವರ್ಷಗಳು ಸುಖವಾಗಿ ಕಳೆದವು.॥8½॥

ಮೂಲಮ್ - 9½

ಅಥ ಕಾಲೇ ಗತೇ ತಸ್ಮಿನ್ವಿಶ್ವಾಮಿತ್ರೋ ಮಹಾಮುನಿಃ ॥
ಸವ್ರೀಡ ಇವ ಸಂವೃತ್ತಶ್ಚಿಂತಾಶೋಕಪರಾಯಣಃ ।

ಅನುವಾದ

ಇಷ್ಟು ಸಮಯ ಕಳೆದುಹೋದಾಗ ಮಹಾಮುನಿ ವಿಶ್ವಾಮಿತ್ರರು ಲಜ್ಜಿತರಾಗಿ ಚಿಂತೆಯಲ್ಲಿ ಮುಳುಗಿದರು.॥9½॥

ಮೂಲಮ್ - 10½

ಬುದ್ಧಿರ್ಮುನೇಃ ಸಮುತ್ಪನ್ನಾ ಸಾಮರ್ಷಾ ರಘುನಂದನ ॥
ಸರ್ವಂ ಸುರಾಣಾಂ ಕರ್ಮೆತತ್ ತಪೋಽಪಹರಣಂ ಮಹತ್ ।

ಅನುವಾದ

ರಘುನಂದನ! ಇದೆಲ್ಲವೂ ದೇವತೆಗಳ ಷಡ್ಯಂತ್ರವಾಗಿದೆ ಎಂದು ಮುನಿಯು ರೋಷಗೊಂಡು ಮನಸ್ಸಿನಲ್ಲಿ ಅಂದುಕೊಂಡರು. ಅವರು ನನ್ನ ತಪಸ್ಸನ್ನು ಅಪಹರಿಸಲು ಈ ಮಹತ್ತಾದ ಪ್ರಯತ್ನಮಾಡಿರುವರು.॥10½॥

ಮೂಲಮ್ - 11½

ಅಹೋರಾತ್ರಾಪದೇಶೇನ ಗತಾಃ ಸಂವತ್ಸರಾ ದಶ ॥
ಕಾಮಮೋಹಾಭಿಭೂತಸ್ಯ ವಿಘ್ನೋಽಯಂ ಪ್ರತ್ಯುಪಸ್ಥಿತಃ ।

ಅನುವಾದ

ನಾನು ಕಾಮಜನಿತ ಮೋಹದಿಂದ ಹೀಗೆ ಆಕ್ರಾಂತನಾಗಿ ಹತ್ತು ವರ್ಷಗಳು ಒಂದು ರಾತ್ರೆಯಂತೆ ಕಳೆದುಹೋದವು. ಇದು ನನ್ನ ತಪಸ್ಸಿನಲ್ಲಿ ಬಹಳ ದೊಡ್ಡ ವಿಘ್ನ ಉಪಸ್ಥಿತವಾಯಿತು.॥11½॥

ಮೂಲಮ್ - 12

ಸನಿಃಶ್ವಸನ್ ಮುನಿವರಃ ಪಶ್ಚಾತ್ತಾಪೇನ ದುಃಖಿತಃ ॥

ಅನುವಾದ

ಹೀಗೆ ವಿಚಾರಮಾಡುತ್ತಾ ಮುನಿವರ ವಿಶ್ವಾಮಿತ್ರರು ನಿಟ್ಟುಸಿರುಬಿಡುತ್ತಾ ಪಶ್ಚಾತ್ತಾಪದಿಂದ ದುಃಖಿತರಾದರು.॥12॥

ಮೂಲಮ್ - 13½

ಭೀತಾಮಪ್ಸರಸಂ ದೃಷ್ಟ್ವಾ ವೇಪಂತಿ ಪ್ರಾಂಜಲಿಂ ಸ್ಥಿತಾಮ್ ।
ಮೇನಕಾಂ ಮಧುರೈವಾಕ್ಯೈರ್ವಿಸೃಜ್ಯ ಕುಶಿಕಾತ್ಮಜಃ ॥
ಉತ್ತರಂ ಪರ್ವತಂ ರಾಮ ವಿಶ್ವಾಮಿತ್ರೋ ಜಗಾಮ ಹ ।

ಅನುವಾದ

ಆಗ ಅಪ್ಸರೆ ಮೇನಕೆಯು ಭಯಗೊಂಡು ಗಡ-ಗಡ ನಡುಗುತ್ತಾ ಕೈಮುಗಿದುಕೊಂಡು ಅವರ ಮುಂದೆ ನಿಂತುಕೊಂಡಳು. ಆಕೆಯ ಕಡೆಗೆ ನೋಡಿ ಕುಶಿಕನಂದನ ವಿಶ್ವಾಮಿತ್ರರು ಮಧುರ ಮಾತುಗಳಿಂದ ಆಕೆಯನ್ನು ಬೀಳ್ಕೊಟ್ಟು ತಾನು ಉತ್ತರದ ಹಿಮಾಲಯಕ್ಕೆ ಹೊರಟುಹೋದರು.॥13½॥

ಮೂಲಮ್ - 14½

ಸ ಕೃತ್ವಾ ನೈಷ್ಠಿಕೀಂ ಬುದ್ಧಿಂ ಜೇತುಕಾಮೋ ಮಹಾಯಶಾಃ ॥
ಕೌಶಿಕೀತೀರಮಾಸಾದ್ಯ ತಪಸ್ತೇಪೇ ದುರಾಸದಮ್ ।

ಅನುವಾದ

ಅಲ್ಲಿ ಆ ಮಹಾಯಶಸ್ವೀ ಮುನಿಯು ನಿಶ್ಚಯಾತ್ಮಿಕಾ ಬುದ್ಧಿಯನ್ನು ಆಶ್ರಯಿಸಿ, ಕಾಮದೇವನನ್ನು ಗೆಲ್ಲಲು ಕೌಶಿಕೀ ನದಿಯ ತೀರದಲ್ಲಿ ದುರ್ಜಯವಾದ ತಪಸ್ಸನ್ನು ಪ್ರಾರಂಭಿಸಿದರು.॥14½॥

ಮೂಲಮ್ - 15½

ತಸ್ಯ ವರ್ಷಸಹಸ್ರಾಣಿ ಘೋರಂ ತಪ ಉಪಾಸತಃ ॥
ಉತ್ತರೇ ಪರ್ವತೇ ರಾಮ ದೇವತಾನಾಮಭೂದ್ಭಯಮ್ ।

ಅನುವಾದ

ಶ್ರೀರಾಮಾ! ಆ ಉತ್ತರ ಪರ್ವತದಲ್ಲಿ ಒಂದು ಸಾವಿರ ವರ್ಷಗಳವರೆಗೆ ಘೋರ ತಪಸ್ಸಿನಲ್ಲಿ ತೊಡಗಿದ ವಿಶ್ವಾಮಿತ್ರರಿಂದ ದೇವತೆಗಳಿಗೆ ಬಹಳ ಭಯವುಂಟಾಯಿತು.॥15½॥

ಮೂಲಮ್ - 16½

ಆಮಂತ್ರಯನ್ ಸಮಾಗಮ್ಯ ಸರ್ವೇ ಸರ್ಷಿಗಣಾಃ ಸುರಾಃ ॥
ಮಹರ್ಷಿಶಬ್ದಂ ಲಭತಾಂ ಸಾಧ್ವಯಂ ಕುಶಿಕಾತ್ಮಜಃ ।

ಅನುವಾದ

ಎಲ್ಲ ದೇವತೆಗಳು ಮತ್ತು ಋಷಿಗಳು ಸೇರಿ ಪರಸ್ಪರ ವಿಚಾರ ಮಾಡತೊಡಗಿದರು. ಈ ಕುಶಿಕನಂದನ ವಿಶ್ವಾಮಿತ್ರರು ಮಹರ್ಷಿ ಪದವಿ ಪಡೆಯಲಿ. ಇದೇ ಇವರಿಗಾಗಿ ಒಳ್ಳೆಯ ಮಾತಾಗಬಹುದು.॥16½॥

ಮೂಲಮ್ - 17

ದೇವತಾನಾಂ ವಚಃ ಶ್ರುತ್ವಾ ಸರ್ವಲೋಕಪಿತಾಮಹಃ ॥

ಮೂಲಮ್ - 18½

ಅಬ್ರವೀನ್ಮಧುರಂ ವಾಕ್ಯಂ ವಿಶ್ವಾಮಿತ್ರಂ ತಪೋಧನಮ್ ।
ಮಹರ್ಷೇ ಸ್ವಾಗತಂ ವತ್ಸ ತಪಸೋಗ್ರೇಣತೋಷಿತಃ ॥
ಮಹತ್ತ್ವಮೃಷಿಮುಖ್ಯತ್ವಂ ದದಾಮಿ ತವ ಕೌಶಿಕ ।

ಅನುವಾದ

ದೇವತೆಗಳ ಮಾತನ್ನು ಕೇಳಿ ಸರ್ವಲೋಕಪಿತಾಮಹ ಬ್ರಹದೇವರು ತಪೋಧನ ವಿಶ್ವಾಮಿತ್ರರ ಬಳಿಗೆ ಹೋಗಿ ಮಧುರವಾಗಿ ನುಡಿದರು - ಎಲೈ ಮಹರ್ಷಿಯೇ! ನಿನಗೆ ಸ್ವಾಗತವಿರಲಿ. ವತ್ಸ ಕೌಶಿಕನೇ! ನಿನ್ನ ಉಗ್ರತಪಸ್ಸಿನಿಂದ ನಾನು ಬಹಳ ಸಂತುಷ್ಟನಾಗಿರುವೆನು. ನಿನಗೆ ಮಹತ್ವ ಮತ್ತು ಋಷಿಗಳಲ್ಲಿ ಶ್ರೇಷ್ಠತೆಯನ್ನು ಕರುಣಿಸುತ್ತಿರುವೆನು.॥17-18½॥

ಮೂಲಮ್ - 19

ಬ್ರಹ್ಮಣಸ್ತು ವಚಃ ಶ್ರುತ್ವಾ ವಿಶ್ವಾಮಿತ್ರಸ್ತಪೋಧನಃ ॥

ಮೂಲಮ್ - 20½

ಪ್ರಾಂಜಲಿಃ ಪ್ರಣತೋ ಭೂತ್ವಾ ಪ್ರತ್ಯುವಾಚಪಿತಾಮಹಮ್ ।
ಮಹರ್ಷಿಶಬ್ದಮತುಲಂ ಸ್ವಾರ್ಜಿತೈಃಕರ್ಮಭಿಃ ಶುಭೈಃ ॥
ಯದಿ ಮೇ ಭಗವನ್ನಾಹ ತತೋಽಹಂ ವಿಜಿತೇಂದ್ರಿಯಃ ।

ಅನುವಾದ

ಬ್ರಹ್ಮದೇವರ ಈ ವಚನವನ್ನು ಕೇಳಿ ತಪೋಧನ ವಿಶ್ವಾಮಿತ್ರರು ಕೈಮುಗಿದುಕೊಂಡು ಪ್ರಣಾಮಗೈದು ಹೇಳಿದರು. ಭಗವಂತನೇ! ನಾನು ಗಳಿಸಿದ ಶುಭಕರ್ಮಗಳಿಂದ ನನಗೆ ನೀವು ಬ್ರಹ್ಮರ್ಷಿಯ ಅನುಪಮ ಪದವಿಯನ್ನು ಕರುಣಿಸಿದರೆ ನಾನು ನನ್ನನ್ನು ಜಿತೇಂದ್ರಿಯನೆಂದು ತಿಳಿಯುವೆನು.॥19-20½॥

ಮೂಲಮ್ - 21½

ತಮುವಾಚ ತತೋ ಬ್ರಹ್ಮಾ ನ ತಾವತ್ತ್ವಂ ಜಿತೇಂದ್ರಿಯಃ ॥
ಯತಸ್ವ ಮುನಿಶಾರ್ದೂಲ ಇತ್ಯುಕ್ತ್ವಾ ತ್ರಿದಿವಂ ಗತಃ ।

ಅನುವಾದ

ಆಗ ಬ್ರಹ್ಮದೇವರು ಹೇಳಿದರು-ಮುನಿಶ್ರೇಷ್ಠನೇ! ಈಗ ನೀನು ಜಿತೇಂದ್ರಿಯನಾಗಲಿಲ್ಲ. ಅದಕ್ಕಾಗಿ ಪ್ರಯತ್ನಿಸು. ಎಂದು ತಿಳಿಸಿ ಅವರು ಸ್ವರ್ಗಲೋಕಕ್ಕೆ ತೆರಳಿದರು.॥21½॥

ಮೂಲಮ್ - 22½

ವಿಪ್ರಸ್ಥಿತೇಷು ದೇವೇಷು ವಿಶ್ವಾಮಿತ್ರೋ ಮಹಾಮುನಿಃ ॥
ಊರ್ಧ್ವಬಾಹುರ್ನಿರಾಲಂಬೋ ವಾಯುಭಕ್ಷಸ್ತಪಶ್ಚರನ್ ।

ಅನುವಾದ

ದೇವತೆಗಳು ಹೊರಟುಹೋದ ಬಳಿಕ ಮಹಾಮುನಿ ವಿಶ್ವಾಮಿತ್ರರು ಪುನಃ ಘೋರ ತಪಸ್ಸನ್ನು ಪ್ರಾರಂಭಿಸಿದರು. ಅವರು ಎರಡೂ ಭುಜಗಳನ್ನು ಮೇಲಕ್ಕೆತ್ತಿ ಯಾವುದೇ ಆಧಾರವಿಲ್ಲದೆ ನಿಂತುಕೊಂಡು ಕೇವಲ ಗಾಳಿಯನ್ನೇ ಕುಡಿಯುತ್ತಾ ತಪಸ್ಸಿನಲ್ಲಿ ಮುಳುಗಿದರು.॥22½॥

ಮೂಲಮ್ - 23

ಧರ್ಮೇ ಪಂಚತಪಾ ಭೂತ್ವಾ ವರ್ಷಾಸ್ವಾಕಾಶಸಂಶ್ರಯಃ ॥

ಮೂಲಮ್ - 24

ಶಿಶಿರೇ ಸಲಿಲೇಶಾಯೀ ರಾತ್ರ್ಯಹಾನಿ ತಪೋಧನಃ ।
ಏವಂ ವರ್ಷಸಹಸ್ರಂ ಹಿ ತಪೋ ಘೋರಮುಪಾಗಮತ್ ॥

ಅನುವಾದ

ಬೇಸಿಗೆಯಲ್ಲಿ ಪಂಚಾಗ್ನಿಗಳನ್ನು, ಸೇವಿಸುತ್ತಾ, ಮಳೆಗಾಲದಲ್ಲಿ ಬಯಲಿನಲ್ಲಿ ಇರುತ್ತಾ, ಚಳಿಗಾಲದಲ್ಲಿ ಹಗಲು ರಾತ್ರೆ ನೀರಿನಲ್ಲಿ ನಿಂತುಕೊಳ್ಳುತ್ತಿದ್ದರು. ಹೀಗೆ ಆ ತಪೋಧನರು ಒಂದು ಸಾವಿರ ವರ್ಷಗಳವರೆಗೆ ಘೋರ ತಪಸ್ಸು ಮಾಡಿದರು.॥23-24॥

ಮೂಲಮ್ - 25

ತಸ್ಮಿನ್ ಸಂತಪ್ಯಮಾನೇ ತು ವಿಶ್ವಾಮಿತ್ರೇ ಮಹಾಮುನೌ ।
ಸಂತಾಪಃ ಸುಮಹಾನಾಸೀತ್ಸುರಾಣಾಂ ವಾಸವಸ್ಯ ಚ ॥

ಅನುವಾದ

ಮಹಾಮುನಿ ವಿಶ್ವಾಮಿತ್ರರು ಇಂತಹ ಘೋರ ತಪಸ್ಸು ಮಾಡುತ್ತಿರುವಾಗ ದೇವತೆಗಳಲ್ಲಿ ಮತ್ತು ಇಂದ್ರನ ಮನಸ್ಸಿನಲ್ಲಿ ಭಾರೀ ಸಂತಾಪ ಉಂಟಾಯಿತು.॥25॥

ಮೂಲಮ್ - 26

ರಂಭಾಮಪ್ಸರಸಂ ಶಕ್ರಃ ಸರ್ವೈಃ ಸಹ ಮರುದ್ಗಣೈಃ ।
ಉವಾಚಾತ್ಮಹಿತಂ ವಾಕ್ಯಮಹಿತಂ ಕೌಶಿಕಸ್ಯ ಚ ॥

ಅನುವಾದ

ಸಮಸ್ತ ಮರುದ್ಗಣಗಳ ಸಹಿತ ಇಂದ್ರನು ಆಗ ರಂಭಾ ಅಪ್ಸರೆಯಲ್ಲಿ ತಮಗೆ ಹಿತಕರ ಹಾಗೂ ವಿಶ್ವಾಮಿತ್ರರಿಗೆ ಅಹಿತಕರವಾದ ಮಾತನ್ನು ಹೇಳಿದನು.॥26॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಅರವತ್ತ ಮೂರನೆಯ ಸರ್ಗ ಪೂರ್ಣವಾಯಿತು.॥63॥