०६१ शुनःशेफकथा

वाचनम्
ಭಾಗಸೂಚನಾ

ಪುಷ್ಕರ ತೀರ್ಥದಲ್ಲಿ ವಿಶ್ವಾಮಿತ್ರರ ತಪಸ್ಸು, ಋಚೀಕನ ನಡುಮಗನಾದ ಶುನಃಶೇಪನನ್ನು ಅಂಬರೀಷನು ಯಜ್ಞಪಶುವಾಗಿ ಕ್ರಯಕ್ಕೆ ಪಡೆದುದು

ಮೂಲಮ್ - 1

ವಿಶ್ವಾಮಿತ್ರೋ ಮಹಾತೇಜಾಃ ಪ್ರಸ್ಥಿತಾನ್ವೀಕ್ಷ್ಯ ತಾನೃಷೀನ್ ।
ಅಬ್ರವೀನ್ನರಶಾರ್ದೂಲ ಸರ್ವಾಂಸ್ತಾನ್ ವನವಾಸಿನಃ ॥

ಅನುವಾದ

(ಶತಾನಂದರು ಹೇಳುತ್ತಿದ್ದಾರೆ) - ಪುರುಷಸಿಂಹ ಶ್ರೀರಾಮಾ! ಯಜ್ಞಕ್ಕೆ ಬಂದಿರುವ ಆ ಎಲ್ಲ ವನವಾಸೀ ಋಷಿಗಳು ಅಲ್ಲಿಂದ ಹೋಗುವಾಗ ನೋಡಿದ ಮಹಾತೇಜಸ್ವೀ ವಿಶ್ವಾಮಿತ್ರರು ಹೀಗೆಂದರು.॥1॥

ಮೂಲಮ್ - 2

ಮಹಾವಿಘ್ನಃ ಪ್ರವೃತ್ತೋಽಯಂ ದಕ್ಷಿಣಾಮಾಸ್ಥಿತೋದಿಶಮ್ ।
ದಿಶಮನ್ಯಾಂ ಪ್ರಪತ್ಸ್ಯಾಮಸ್ತತ್ರ ತಪ್ಸ್ಯಾಮಹೇ ತಪಃ ॥

ಅನುವಾದ

ಮಹರ್ಷಿಗಳೇ! ಈ ದಕ್ಷಿಣ ದಿಕ್ಕಿನಲ್ಲಿ ಇರುವುದರಿಂದ ನಮ್ಮ ತಪಸ್ಸಿನಲ್ಲಿ ಮಹಾವಿಘ್ನ ಉಂಟಾಗಿದೆ. ಆದ್ದರಿಂದ ಈಗ ನಾವು ಬೇರೆ ದಿಕ್ಕಿಗೆ ಹೋಗುವೆವು. ಅಲ್ಲಿದ್ದು ತಪಸ್ಸು ಮಾಡುವೆವು.॥2॥

ಮೂಲಮ್ - 3

ಪಶ್ಚಿಮಾಯಾಂ ವಿಶಾಲಾಯಾಂಪುಷ್ಕರೇಷು ಮಹಾತ್ಮನಃ ।
ಸುಖಂ ತಪಶ್ಚರಿಷ್ಯಾಮೋ ಸುಖಂ ತದ್ಧಿ ತಪೋವನಮ್ ॥

ಅನುವಾದ

ವಿಶಾಲ ಪಶ್ಚಿಮ ದಿಶೆಯಲ್ಲಿ ಮಹಾತ್ಮಾ ಬ್ರಹ್ಮದೇವರ ಮೂರು ಪುಷ್ಕರಗಳಿವೆ. ಅವುಗಳ ಹತ್ತಿರ ಇದ್ದು ನಾವು ಸುಖವಾಗಿ ತಪಸ್ಸು ಮಾಡುವೆವು. ಏಕೆಂದರೆ ಆ ತಪೋವನವು ಬಹಳ ಸುಖಮಯವಾಗಿದೆ.॥3॥

ಮೂಲಮ್ - 4

ಏವಮುಕ್ತ್ವಾ ಮಹಾತೇಜಾಃ ಪುಷ್ಕರೇಷು ಮಹಾಮುನಿಃ ।
ತಪ ಉಗ್ರಂ ದುರಾಧರ್ಷಂ ತೇಪೇಮೂಲ ಫಲಾಶನಃ ॥

ಅನುವಾದ

ಹೀಗೆ ಹೇಳಿ ಆ ಮಹಾತೇಜಸ್ವೀ ಮಹಾಮುನಿಗಳು ಪುಷ್ಕರಕ್ಕೆ ಹೋಗಿ, ಅಲ್ಲಿ ಫಲಮೂಲಗಳನ್ನು ತಿಂದು ಉಗ್ರವಾದ ಹಾಗೂ ದುರ್ಜಯ ತಪಸ್ಸನ್ನು ಮಾಡತೊಡಗಿದರು.॥4॥

ಮೂಲಮ್ - 5

ಏತಸ್ಮಿನ್ನೇವ ಕಾಲೇ ತು ಅಯೋಧ್ಯಾಧಿಪತಿರ್ಮಹಾನ್ ।
ಅಂಬರೀಷ ಇತಿ ಖ್ಯಾತೋ ಯಷ್ಟುಂ ಸಮುಪಚಕ್ರಮೇ॥

ಅನುವಾದ

ಅದೇ ದಿನಗಳಲ್ಲಿ ಅಯೋಧ್ಯೆಯ ಮಹಾರಾಜಾ ಅಂಬರೀಷನು ಒಂದು ಯಜ್ಞದ ಸಿದ್ಧತೆಯಲ್ಲಿ ತೊಡಗಿದ್ದನು.॥5॥

ಮೂಲಮ್ - 6

ತಸ್ಯ ವೈ ಯಜಮಾನಸ್ಯ ಪಶುಮಿಂದ್ರೋ ಜಹಾರ ಹ ।
ಪ್ರಣಷ್ಟೇ ತು ಪಶೌ ವಿಪ್ರೋ ರಾಜಾನಮಿದಮಬ್ರವೀತ್ ॥

ಅನುವಾದ

ಅವನು ಯಜ್ಞದಲ್ಲಿ ತೊಡಗಿದ್ದಾಗ ಇಂದ್ರನು ಅವನ ಯಜ್ಞಪಶುವನ್ನು ಕದ್ದುಬಿಟ್ಟನು. ಪಶುವು ಕಳ್ಳತನವಾದ್ದರಿಂದ ಪುರೋಹಿತನು ರಾಜನಲ್ಲಿ ಹೇಳಿದನು.॥6॥

ಮೂಲಮ್ - 7

ಪಶುರಭ್ಯಾಹೃತೋ ರಾಜನ್ ಪ್ರಣಷ್ಟಸ್ತವ ದುರ್ನಯಾತ್ ।
ಅರಕ್ಷಿತಾರಂ ರಾಜಾನಂ ಘ್ನಂತಿ ದೋಷಾ ನರೇಶ್ವರ ॥

ಅನುವಾದ

ರಾಜನೇ! ಇಲ್ಲಿಗೆ ತಂದಿರುವ ಪಶುವು ನಿನ್ನ ದುರ್ನೀತಿಯಿಂದ ಕಳೆದುಹೋಗಿದೆ. ನರೇಶ್ವರ! ಯಾವ ರಾಜನು ಯಜ್ಞಪಶುವನ್ನು ರಕ್ಷಿಸುವುದಿಲ್ಲವೋ ಅವನನ್ನು ಅನೇಕ ದೋಷಗಳು ನಾಶಮಾಡಿಬಿಡುತ್ತವೆ.॥7॥

ಮೂಲಮ್ - 8

ಪ್ರಾಯಶ್ಚಿತ್ತಂ ಮಹದ್ಧ್ಯೇತನ್ನರಂ ವಾ ಪುರುಷರ್ಷಭ ।
ಆನಯಸ್ವ ಪಶುಂ ಶೀಘ್ರಂ ಯಾವತ್ಕರ್ಮ ಪ್ರವರ್ತತೇ ॥

ಅನುವಾದ

ಪುರುಷಶ್ರೇಷ್ಠನೇ! ಯಜ್ಞ ಕರ್ಮದ ಪ್ರಾರಂಭವಾಗುವ ಮೊದಲೇ ಕಳೆದುಹೋದ ಪಶುವನ್ನು ಹುಡುಕಿ ಬೇಗನೇ ಇಲ್ಲಿಗೆ ತೆಗೆದುಕೊಂಡು ಬಾ. ಇಲ್ಲವೆ ಅದರ ಪ್ರತಿನಿಧಿಯಾಗಿ ಯಾವುದಾದರೂ ಪುರುಷ ಪಶುವನ್ನು ಹಣಕೊಟ್ಟು ಖರೀದಿಸಿ ತೆಗೆದುಕೊಂಡು ಬಾ. ಇದೇ ಈ ಪಾಪದ ಮಹಾನ್ ಪ್ರಾಯಶ್ಚಿತ್ತವಾಗಿದೆ.॥8॥

ಮೂಲಮ್ - 9

ಉಪಾಧ್ಯಾಯವಚಃ ಶ್ರುತ್ವಾ ಸ ರಾಜಾ ಪುರುಷರ್ಷಭಃ ।
ಅನ್ವಿಯೇಷ ಮಹಾಬುದ್ಧಿಃ ಪಶುಂ ಗೋಭಿಃ ಸಹಸ್ರಶಃ ॥

ಅನುವಾದ

ಪುರೋಹಿತರ ಮಾತನ್ನು ಕೇಳಿ ಮಹಾಬುದ್ಧಿವಂತ ಪುರುಷಶ್ರೇಷ್ಠ ಅಂಬರೀಷರಾಜನು ಸಾವಿರಾರು ಗೋವುಗಳನ್ನು ಕೊಟ್ಟು ಖರೀದಿಸಲು ಒಬ್ಬ ಪುರುಷನನ್ನು ಹುಡುಕಿದನು.॥9॥

ಮೂಲಮ್ - 10

ದೇಶಾಂಜನಪದಾಂಸ್ತಾಂಸ್ತಾನ್ ನಗರಾಣಿ ವನಾನಿ ಚ ।
ಆಶ್ರಮಾಣಿ ಚ ಪುಣ್ಯಾನಿ ಮಾರ್ಗಮಾಣೋ ಮಹೀಪತಿಃ ॥

ಮೂಲಮ್ - 11

ಸ ಪುತ್ರಸಹಿತಂ ತಾತ ಸಭಾರ್ಯಂ ರಘುನಂದನ ।
ಭೃಗುತುಂಗೇ ಸಮಾಸೀನಮೃಚೀಕಂ ಸಂದದರ್ಶ ಹ ॥

ಅನುವಾದ

ಅಯ್ಯಾ ರಘುನಂದನ! ಬೇರೆ ಬೇರೆ ದೇಶಗಳಲ್ಲಿ, ನಗರಗಳಲ್ಲಿ, ವನಗಳಲ್ಲಿ ಹಾಗೂ ಪವಿತ್ರ ಆಶ್ರಮಗಳಲ್ಲಿ ಹುಡುಕುತ್ತಾ ಅಂಬರೀಷರಾಜನು ಭೃಗುತುಂಗ ಪರ್ವತಕ್ಕೆ ಹೋಗಿ, ಅಲ್ಲಿ ಅವನು ಪತ್ನೀ ಪುತ್ರರೊಂದಿಗೆ ಕುಳಿತಿರುವ ಋಚೀಕ ಮುನಿಯನ್ನು ದರ್ಶಿಸಿದನು.॥10-11॥

ಮೂಲಮ್ - 12

ತಮುವಾಚ ಮಹಾತೇಜಾಃ ಪ್ರಣಮ್ಯಾಭಿಪ್ರಸಾದ್ಯ ಚ ।
ಬ್ರಹ್ಮರ್ಷಿಂ ತಪಸಾ ದೀಪ್ತಂ ರಾಜರ್ಷಿರಮಿತಪ್ರಭಃ ॥

ಅನುವಾದ

ಅಮಿತ ಕಾಂತಿಯುಳ್ಳ ಹಾಗೂ ಮಹಾತೇಜಸ್ವೀ ರಾಜರ್ಷಿ ಅಂಬರೀಷನು ತಪಸ್ಸಿನಿಂದ ಬೆಳಗುತ್ತಿರುವ ಮಹರ್ಷಿ ಋಚೀಕನಿಗೆ ನಮಸ್ಕರಿಸಿ, ಅವರನ್ನು ಪ್ರಸನ್ನಗೊಳಿಸಿ ಹೇಳಿದನು.॥12॥

ಮೂಲಮ್ - 13½

ಪೃಷ್ಟ್ವಾ ಸರ್ವತ್ರ ಕುಶಲಮೃಚೀಕಂ ತಮಿದಂ ವಚಃ ।
ಗವಾಂ ಶತಸಹಸ್ರೇಣ ವಿಕ್ರೀಣೀಷೇ ಸುತಂ ಯದಿ ॥
ಪಶೋರರ್ಥೇ ಮಹಾಭಾಗ ಕೃತಕೃತ್ಯೋಽಸ್ಮಿ ಭಾರ್ಗವ ।

ಅನುವಾದ

ಮೊದಲಿಗೆ ಅವನು ಋಚೀಕ ಮುನಿಯಲ್ಲಿ ಅವನ ಎಲ್ಲ ವಸ್ತುಗಳ ವಿಷಯದಲ್ಲಿ ಕ್ಷೇಮ-ಸವಾಚಾರ ಕೇಳಿದನು, ಬಳಿಕ ಮಹಾಭಾಗ ಭೃಗುನಂದನರೇ! ತಾವು ಒಂದು ಲಕ್ಷ ಗೋವುಗಳನ್ನು ಪಡೆದು ತಮ್ಮ ಒಬ್ಬ ಪುತ್ರನನ್ನು ಪಶುವಾಗಿಸಲು ವಾರಿದರೆ ನಾನು ಕೃತಕೃತ್ಯನಾಗುವೆನು.॥13½॥

ಮೂಲಮ್ - 14½

ಸರ್ವೇ ಪರಿಗತಾ ದೇಶಾ ಯಜ್ಞಿಯಂ ನ ಲಭೇ ಪಶುಮ್ ॥
ದಾತುಮರ್ಹಸಿ ಮೂಲ್ಯೇನ ಸುತಮೇಕಮಿತೋ ಮಮ ।

ಅನುವಾದ

ನಾನು ಎಲ್ಲ ದೇಶಗಳನ್ನು ಸುತ್ತಿ ಬಂದಿರುವೆನು. ಆದರೆ ಎಲ್ಲಿಯೂ ಯಜ್ಞೋಪಯೋಗಿ ಪಶು ಸಿಗಲಿಲ್ಲ. ಆದ್ದರಿಂದ ನೀವು ಉಚಿತ ಬೆಲೆಯನ್ನು ಪಡೆದು ನನಗೆ ನಿಮ್ಮ ಒಬ್ಬ ಪುತ್ರನನ್ನು ಕೊಟ್ಟುಬಿಡಿ.॥14½॥

ಮೂಲಮ್ - 15½

ಏವಮುಕ್ತೋ ಮಹಾತೇಜಾ ಋಚೀಕಸ್ತ್ವಬ್ರವೀದ್ವಚಃ ॥
ನಾಹಂ ಜ್ಯೇಷ್ಠಂ ನರಶ್ರೇಷ್ಠ ವಿಕ್ರೀಣೀಯಾಂ ಕಥಂಚನ ।

ಅನುವಾದ

ರಾಜನು ಹೀಗೆ ಹೇಳಿದಾಗ ಮಹಾ ತೇಜಸ್ವೀ ಋಚೀಕರು ಹೇಳಿದರು - ನರಶ್ರೇಷ್ಠನೇ! ನಾನು ನನ್ನ ಜೇಷ್ಠಪುತ್ರನನ್ನು ಎಂದಿಗೂ ಮಾರುವುದಿಲ್ಲ.॥15½॥

ಮೂಲಮ್ - 16½

ಋಚೀಕಸ್ಯ ವಚಃ ಶ್ರುತ್ವಾ ತೇಷಾಂ ಮಾತಾ ಮಹಾತ್ಮನಾಮ್ ॥
ಉವಾಚ ನರಶಾರ್ದೂಲಮಂಬರೀಷಮಿದಂ ವಚಃ ।

ಅನುವಾದ

ಋಚೀಕ ಮುನಿಯ ಮಾತನ್ನು ಕೇಳಿದ ಆ ಮಹಾತ್ಮಾ ಪುತ್ರರ ತಾಯಿಯು ಪುರುಷಸಿಂಹ ಅಂಬರೀಷನಲ್ಲಿ ಇಂತೆಂದಳು.॥16½॥

ಮೂಲಮ್ - 17

ಅವಿಕ್ರೇಯಂ ಸುತಂ ಜ್ಯೇಷ್ಠಂ ಭಗವಾನಾಹ ಭಾರ್ಗವಃ ॥

ಮೂಲಮ್ - 18

ಮಮಾಪಿ ದಯಿತಂ ವಿದ್ಧಿ ಕನಿಷ್ಠಂ ಶುನಕಂ ಪ್ರಭೋ ।
ತಸ್ಮಾತ್ಕನೀಯಸಂ ಪುತ್ರಂ ನ ದಾಸ್ಯೇ ತವ ಪಾರ್ಥಿವ ॥

ಅನುವಾದ

ಪ್ರಭುವೇ! ಜ್ಯೇಷ್ಠ ಪುತ್ರನನ್ನು ಎಂದಿಗೂ ಮಾರಲು ಯೋಗ್ಯವಲ್ಲ ಎಂದು ಭಗವಾನ್ ಭಾರ್ಗವರು ಹೇಳುತ್ತಾರೆ. ಆದರೆ ಎಲ್ಲರಿಗಿಂತ ಕಿರಿಯ ಪುತ್ರ ಶುನಕನು ನನಗೆ ಬಹಳ ಪ್ರಿಯನಾಗಿರುವುದು ನಿನಗೆ ತಿಳಿದಿರಲಿ. ಆದ್ದರಿಂದ ಭೂಪಾಲನೇ! ನಾನು ನಮ್ಮ ಕಿರಿಯಪುತ್ರನನ್ನು ನಿಮಗೆ ಎಂದಿಗೂ ಕೊಡಲಾರೆ.॥17-18॥

ಮೂಲಮ್ - 19

ಪ್ರಾಯೇಣ ಹಿ ನರಶ್ರೇಷ್ಠ ಜ್ಯೇಷ್ಠಾಃ ಪಿತೃಷು ವಲ್ಲಭಾಃ ।
ಮಾತೄಣಾಂ ಚ ಕನೀಯಾಂಸಸ್ತಸ್ಮಾದ್ರಕ್ಷೇ ಕನೀಯಸಮ್ ॥

ಅನುವಾದ

ನರಶ್ರೇಷ್ಠನೇ! ಸಾಮಾನ್ಯವಾಗಿ ಹಿರಿಯ ಮಗ ತಂದೆಗೆ ಪ್ರಿಯನಾಗಿರುತ್ತಾನೆ. ಕಿರಿಯ ಪುತ್ರ ತಾಯಂದಿರಿಗೆ ಪ್ರಿಯನಾಗಿರುತ್ತಾನೆ. ಆದ್ದರಿಂದ ನಾನು ನನ್ನ ಕಿರಿಯ ಪುತ್ರನನ್ನು ಅವಶ್ಯವಾಗಿ ರಕ್ಷಿಸುವೆನು.॥19॥

ಮೂಲಮ್ - 20

ಉಕ್ತವಾಕ್ಯೇ ಮುನೌ ತಸ್ಮಿನ್ಮುನಿಪತ್ನ್ಯಾಂ ತಥೈವ ಚ ।
ಶುನಃಶೇಪಃ ಸ್ವಯಂ ರಾಮ ಮಧ್ಯಮೋ ವಾಕ್ಯಮಬ್ರವೀತ್ ॥

ಅನುವಾದ

ಶ್ರೀರಾಮಾ! ಮುನಿ ಮತ್ತು ಅವರ ಪತ್ನಿಯು ಹೀಗೆ ಹೇಳಿದಾಗ ನಡುವಣ ಪುತ್ರ ಶುನಃಶೇಪನು ಸ್ವತಃ ಹೇಳಿದನು.॥20॥

ಮೂಲಮ್ - 21

ಪಿತಾ ಜ್ಯೇಷ್ಠಮವಿಕ್ರೇಯಂ ಮಾತಾ ಚಾಹ ಕನೀಯಸಮ್ ।
ವಿಕ್ರೇಯಂ ಮಧ್ಯಮಂ ಮನ್ಯೇ ರಾಜಪುತ್ರ ನಯಸ್ವಮಾಮ್ ॥

ಅನುವಾದ

ರಾಜಪುತ್ರನೇ! ತಂದೆಯು ಹಿರಿಯವನನ್ನು ಮತ್ತು ತಾಯಿಯು ಕಿರಿಯ ಪುತ್ರನನ್ನು ಮಾರಲು ಅಸಾಧ್ಯವೆಂದು ತಿಳಿದಿರುವರು. ಆದ್ದರಿಂದ ಇವರಿಬ್ಬರ ದೃಷ್ಟಿಯಲ್ಲಿ ನಡುವಣ ಪುತ್ರನು ಮಾರಲು ಯೋಗ್ಯವಾಗಿದ್ದಾನೆ, ಎಂದು ನಾನು ತಿಳಿಯುತ್ತೇನೆ. ಅದಕ್ಕಾಗಿ ನೀನು ನನ್ನನ್ನೇ ಕೊಂಡು ಹೋಗು.॥21॥

ಮೂಲಮ್ - 22

ಅಥ ರಾಜಾ ಮಹಾಬಾಹೋ ವಾಕ್ಯಾಂತೇ ಬ್ರಹ್ಮವಾದಿನಃ ।
ಹಿರಣ್ಯಸ್ಯ ಸುವರ್ಣಸ್ಯ ಕೋಟಿಭೀ ರತ್ನರಾಶಿಭಿಃ ॥

ಮೂಲಮ್ - 23

ಗವಾಂ ಶತಸಹಸ್ರೇಣ ಶುನಃಶೇಪಂ ನರೇಶ್ವರಃ ।
ಗೃಹೀತ್ವಾ ಪರಮಪ್ರೀತೋ ಜಗಾಮ ರಘುನಂದನ ॥

ಅನುವಾದ

ಮಹಾಬಾಹು ರಘುನಂದನ! ಬ್ರಹ್ಮವಾದೀ ನಡುವಣ ಪುತ್ರನು ಹೀಗೆ ಹೇಳಿದಾಗ ಅಂಬರೀಷ ರಾಜನು ಬಹಳ ಸಂತೋಷಗೊಂಡು, ಒಂದು ಕೋಟಿ ಸ್ವರ್ಣಮುದ್ರೆಗಳನ್ನು, ರಾಶಿ-ರಾಶಿ ರತ್ನಗಳನ್ನು ಮತ್ತು ಒಂದು ಲಕ್ಷ ಗೋವುಗಳ ಬದಲಿಗೆ ಶುನಃಶೇಪನನ್ನು ಖರೀದಿಸಿಕೊಂಡು ಅವನು ಅರಮನೆಗೆ ಹೊರಟನು.॥22-23॥

ಮೂಲಮ್ - 24

ಅಂಬರೀಷಸ್ತು ರಾಜರ್ಷೀ ರಥಮಾರೋಪ್ಯ ಸತ್ವರಃ ।
ಶುನಃಶೇಪಂ ಮಹಾತೇಜಾ ಜಗಾಮಾಶು ಮಹಾಯಶಾಃ ॥

ಅನುವಾದ

ಮಹಾ ತೇಜಸ್ವೀ, ಮಹಾಯಶಸ್ವೀ ರಾಜರ್ಷಿ ಅಂಬರೀಷನು ಶುನಃಶೇಪನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಅವಸರವಾಗಿ ವೇಗವಾಗಿ ಹೊರಟನು.॥24॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಅರವತ್ತೊಂದನೆಯ ಸರ್ಗ ಪೂರ್ಣವಾಯಿತು.॥61॥