वाचनम्
ಭಾಗಸೂಚನಾ
ಹವಿರ್ಭಾಗಗಳನ್ನು ಸ್ವೀಕರಿಸಲು ದೇವತೆಗಳು ಬಾರದಿರಲು ವಿಶ್ವಾಮಿತ್ರರು ತಪೋಬಲದಿಂದಲೇ ತ್ರಿಶಂಕುವನ್ನು ಸ್ವರ್ಗಕ್ಕೆ ಕಳಿಸಿದುದು, ಇಂದ್ರನು ತ್ರಿಶಂಕುವನ್ನು ಸ್ವರ್ಗದಿಂದ ತಳ್ಳಿದುದು, ದೇವತೆಗಳ ಪ್ರಾರ್ಥನೆಯಂತೆ ಆ ಕಾರ್ಯವನ್ನು ನಿಲ್ಲಿಸಿದುದು
ಮೂಲಮ್ - 1
ತಪೋಬಲಹತಾನ್ ಜ್ಞಾತ್ವಾ ವಾಸಿಷ್ಠಾನ್ಸಮಹೋದಯಾನ್ ।
ಋಷಿಮಧ್ಯೇ ಮಹಾತೇಜಾ ವಿಶ್ವಾಮಿತ್ರೋಽಭ್ಯಭಾಷತ ॥
ಅನುವಾದ
(ಶತಾನಂದರು ಹೇಳುತ್ತಿದ್ದಾರೆ ಶ್ರೀರಾಮಾ) - ಮಹೋದಯ ಸಹಿತ ವಸಿಷ್ಠರ ಪುತ್ರರು ತನ್ನ ತಪೋಬಲದಿಂದ ನಾಶವಾಗಿರುವುದನ್ನು ತಿಳಿದು ಮಹಾತೇಜಸ್ವಿ ವಿಶ್ವಾಮಿತ್ರರು ಋಷಿಗಳ ಸಭೆಯಲ್ಲಿ ಇಂತೆಂದರು.॥1॥
ಮೂಲಮ್ - 2
ಅಯಮಿಕ್ಷ್ವಾಕುದಾಯಾದಸ್ತ್ರಿಶಂಕುರಿತಿ ವಿಶ್ರುತಃ ।
ಧರ್ಮಿಷ್ಠಶ್ಚ ವದಾನ್ಯಶ್ಚ ಮಾಂ ಚೈವ ಶರಣಂ ಗತಃ ॥
ಅನುವಾದ
ಮುನಿಗಳೇ! ಇವನು ಇಕ್ವಾಕ್ಷುವಂಶದಲ್ಲಿ ಉತ್ಪನ್ನ ರಾಜಾ ತ್ರಿಶಂಕು ಆಗಿದ್ದಾನೆ. ಈ ವಿಖ್ಯಾತ ನರೇಶನು ದೊಡ್ಡ ಧರ್ಮಾತ್ಮನಾಗಿದ್ದು, ದಾನಿಯಾಗಿರುವನು ಹಾಗೂ ಈಗ ನನ್ನ ಆಶ್ರಯದಲ್ಲಿ ಇರುವನು.॥2॥
ಮೂಲಮ್ - 3½
ಸ್ವೇನಾನೇನ ಶರೀರೇಣ ದೇವಲೋಕಜಿಗೀಷಯಾ ।
ಯಥಾಯಂ ಸ್ವಶರೀರೇಣ ದೇವಲೋಕಂ ಗಮಿಷ್ಯತಿ ॥
ತಥಾ ಪ್ರವರ್ತ್ಯತಾಂ ಯಜ್ಞೋ ಭವದ್ಭಿಶ್ಚ ಮಯಾ ಸಹ ।
ಅನುವಾದ
ಇವನು ಸಶರೀರಿಯಾಗಿ ದೇವಲೋಕಕ್ಕೆ ಹೋಗಬೇಕೆಂದು ಬಯಸುತ್ತಿದ್ದಾನೆ. ಆದ್ದರಿಂದ ನೀವು ನನ್ನೊಂದಿಗೆ ಇದ್ದು, ಇವನಿಗೆ ಈ ಶರೀರದಿಂದಲೇ ದೇವಲೋಕ ಪ್ರಾಪ್ತವಾಗುವಂತಹ ಯಜ್ಞದ ಅನುಷ್ಠಾನ ಮಾಡಿರಿ.॥3½॥
ಮೂಲಮ್ - 4
ವಿಶ್ವಾಮಿತ್ರವಚಃ ಶ್ರುತ್ವಾ ಸರ್ವ ಏವ ಮಹರ್ಷಯಃ ॥
ಮೂಲಮ್ - 5½
ಊಚುಃ ಸಮೇತಾಃ ಸಹಸಾಧರ್ಮಜ್ಞಾ ಧರ್ಮಸಂಹಿತಮ್ ।
ಅಯಂ ಕುಶಿಕದಾಯಾದೋ ಮುನಿಃ ಪರಮಕೋಪನಃ ॥
ಯದಾಹ ವಚನಂ ಸಮ್ಯಗೇತತ್ಕಾರ್ಯಂ ನ ಸಂಶಯಃ ।
ಅನುವಾದ
ವಿಶ್ವಾಮಿತ್ರರ ಮಾತನ್ನು ಕೇಳಿ ಧರ್ಮವನ್ನು ಬಲ್ಲ ಎಲ್ಲ ಮಹರ್ಷಿಗಳು ಒಂದೆಡೆ ಸೇರಿ ಪರಸ್ಪರ ಧರ್ಮಯುಕ್ತವಾಗಿ ಚರ್ಚಿಸಿದರು - ಬ್ರಾಹ್ಮಣರೇ! ಕುಶಿಕ ಪುತ್ರ ವಿಶ್ವಾಮಿತ್ರ ಮುನಿಗಳು ಬಹಳ ಕ್ರೋಧಿತರಾಗಿದ್ದಾರೆ. ಇವರು ಹೇಳಿದುದನ್ನು ಸರಿಯಾಗಿ ಪಾಲಿಸಬೇಕು. ಇದರಲ್ಲಿ ಸಂಶಯವೇ ಇಲ್ಲ.॥4-5½॥
ಮೂಲಮ್ - 6
ಅಗ್ನಿಕಲ್ಪೋ ಹಿ ಭಗವಾನ್ ಶಾಪಂ ದಾಸ್ಯತಿ ರೋಷಿತಃ ॥
ಮೂಲಮ್ - 7
ತಸ್ಮಾತ್ಪ್ರವರ್ತ್ಯತಾಂ ಯಜ್ಞಃ ಸಶರೀರೋ ಯಥಾ ದಿವಿಮ್ ।
ಗಚ್ಛೇದಿಕ್ಷ್ವಾಕುದಾಯಾದೋ ವಿಶ್ವಾಮಿತ್ರಸ್ಯ ತೇಜಸಾ ॥
ಅನುವಾದ
ಈ ಪೂಜ್ಯ ವಿಶ್ವಾಮಿತ್ರರು ಅಗ್ನಿಯಂತೆ ತೇಜಸ್ವಿಯಾಗಿದ್ದಾರೆ. ಇವರ ಮಾತನ್ನು ಒಪ್ಪಿಕೊಳ್ಳದಿದ್ದರೆ, ಇವರು ರೋಷದಿಂದ ಶಾಪಕೊಡುವರು. ಅದಕ್ಕಾಗಿ ವಿಶ್ವಾಮಿತ್ರರ ತೇಜದಿಂದ ಈ ಇಕ್ಷ್ವಾಕುನಂದನ ತ್ರಿಶಂಕು ಸಶರೀರವಾಗಿ ಸ್ವರ್ಗಲೋಕಕ್ಕೆ ಹೋಗುವಂತಹ ಯಜ್ಞವನ್ನು ಆರಂಭಿಸಬೇಕಾಗಿದೆ.॥6-7॥
ಮೂಲಮ್ - 8
ತತಃ ಪ್ರವರ್ತ್ಯತಾಂ ಯಜ್ಞಃ ಸರ್ವೇ ಸಮಧಿತಿಷ್ಠತ ।
ಏವಮುಕ್ತ್ವಾ ಮಹರ್ಷಯಃ ಸಂಜಹ್ರುಸ್ತಾಃ ಕ್ರಿಯಾಸ್ತದಾ ॥
ಅನುವಾದ
ಈ ರೀತಿ ವಿಚಾರ ಮಾಡಿ ಅವರು ಸರ್ವಸಮ್ಮತಿಯಿಂದ ಯಜ್ಞವನ್ನು ಆರಂಭಿಸಲಾಗುವುದು ಎಂದು ನಿಶ್ಚಯಿಸಿ ಮಹರ್ಷಿಗಳು ತಮ್ಮ ತಮ್ಮ ಕಾರ್ಯವನ್ನು ಪ್ರಾರಂಭಿಸಿದರು.॥8॥
ಮೂಲಮ್ - 9½
ಯಾಜಕಶ್ಚ ಮಹಾತೇಜಾ ವಿಶ್ವಾಮಿತ್ರೋಽಭವತ್ ಕ್ರತೌ ।
ಋತ್ವಿಜಶ್ಚಾನುಪೂರ್ವ್ಯೇಣ ಮಂತ್ರವನ್ಮಂತ್ರಕೋವಿದಾಃ ॥
ಚಕ್ರುಃ ಸರ್ವಾಣಿ ಕರ್ಮಾಣಿ ಯಥಾಕಲ್ಪಂ ಯಥಾವಿಧಿ ।
ಅನುವಾದ
ಮಹಾತೇಜಸ್ವಿ ವಿಶ್ವಾಮಿತ್ರರೇ ಸ್ವತಃ ಆ ಯಜ್ಞದಲ್ಲಿ ಅಧ್ವರ್ಯುಗಳಾದರು. ಮತ್ತೆ ಕ್ರಮವಾಗಿ ಅನೇಕ ಮಂತ್ರವೇತ್ತರಾದ ಬ್ರಾಹ್ಮಣರು ಋತ್ವಿಜರಾದರು. ಅವರು ಕಲ್ಪಶಾಸ್ತ್ರಕ್ಕನುಸಾರ ವಿಧಿ ಮತ್ತು ಮಂತ್ರೋಚ್ಚಾರಣ ಪೂರ್ವಕ ಎಲ್ಲ ಕಾರ್ಯಗಳನ್ನು ನೆರವೇರಿಸಿದರು.॥9½॥
ಮೂಲಮ್ - 10
ತತಃ ಕಾಲೇನ ಮಹತಾ ವಿಶ್ವಾಮಿತ್ರೋ ಮಹಾತಪಾಃ ॥
ಮೂಲಮ್ - 11
ಚಕಾರಾವಾಹನಂ ತತ್ರಭಾಗಾರ್ಥಂ ಸರ್ವದೇವತಾಃ ।
ನಾಭ್ಯಾಗಮಂಸ್ತದಾ ತತ್ರ ಭಾಗಾರ್ಥಂ ಸರ್ವದೇವತಾಃ ॥
ಅನುವಾದ
ಅನಂತರ ಬಹಳ ಸಮಯದ ತನಕ ಪ್ರಯತ್ನಪೂರ್ವಕ ಮಂತ್ರಗಳನ್ನು ಜಪಿಸುತ್ತಾ ಮಹಾತಪಸ್ವೀ ವಿಶ್ವಾಮಿತ್ರರು ತಮ್ಮ-ತಮ್ಮ ಭಾಗವನ್ನು ಸ್ವೀಕರಿಸಲು ಎಲ್ಲ ದೇವತೆಗಳನ್ನು ಆವಾಹಿಸಿದರು. ಆದರೆ ಆಗ ಅಲ್ಲಿ ತಮ್ಮ ಭಾಗವನ್ನು ಸ್ವೀಕರಿಸಲು ಯಾವ ದೇವತೆಯೂ ಬರಲಿಲ್ಲ.॥10-11॥
ಮೂಲಮ್ - 12
ತತಃ ಕೋಪಸಮಾವಿಷ್ಟೋ ವಿಶ್ವಾಮಿತ್ರೋ ಮಹಾಮುನಿಃ ।
ಸ್ರುವಮುದ್ಯಮ್ಯ ಸಕ್ರೋಧಸ್ತ್ರೀಶಂಕುಮಿದಮಬ್ರವೀತ್ ॥
ಅನುವಾದ
ಇದರಿಂದ ಮಹಾಮುನಿ ವಿಶ್ವಾಮಿತ್ರರಿಗೆ ಭಾರೀ ಕ್ರೋಧ ಉಂಟಾಯಿತು. ಅವರು ಸ್ರುವೆಯನ್ನು ಎತ್ತಿ ಸಿಟ್ಟಿನಿಂದ ರಾಜಾ ತ್ರಿಶಂಕುವಿನಲ್ಲಿ ಹೀಗೆ ಹೇಳಿದರು.॥12॥
ಮೂಲಮ್ - 13
ಪಶ್ಯ ಮೇ ತಪಸೋ ವೀರ್ಯಂ ಸ್ವಾರ್ಜಿತಸ್ಯ ನರೇಶ್ವರ ।
ಏಷ ತ್ವಾಂ ಸ್ವಶರೀರೇಣ ನಯಾಮಿ ಸ್ವರ್ಗಮೋಜಸಾ ॥
ಅನುವಾದ
ನರೇಶ್ವರನೇ! ಈಗ ನೀನು ನಾನು ಗಳಿಸಿದ ತಪಸ್ಸಿನ ಬಲವನ್ನು ನೋಡು. ನಾನು ಈಗಲೇ ನಿನ್ನನ್ನು ನನ್ನ ಶಕ್ತಿಯಿಂದ ಸಶರೀರವಾಗಿ ಸ್ವರ್ಗಕ್ಕೆ ಕಳಿಸುತ್ತೇನೆ.॥13॥
ಮೂಲಮ್ - 14½
ದುಷ್ಪ್ರಾಪಂ ಸ್ವಶರೀರೇಣ ದಿವಂ ಗಚ್ಛ ನರೇಶ್ವರಃ ।
ಸ್ವಾರ್ಜಿತಂ ಕಿಂಚಿದಪ್ಯಸ್ತಿ ಮಯಾ ಹಿ ತಪಸಃ ಫಲಮ್ ॥
ರಾಜಂಸ್ತ್ವ ತೇಜಸಾ ತಸ್ಯ ಸಶರೀರೋ ದಿವಂ ವ್ರಜ ।
ಅನುವಾದ
ರಾಜನೇ! ಇಂದು ನೀನು ನಿನ್ನ ಈ ಶರೀರದೊಂದಿಗೇ ದುರ್ಲಭ ಸ್ವರ್ಗಲೋಕಕ್ಕೆ ಹೋಗು. ನರೇಶ್ವರಾ! ನಾನು ತಪಸ್ಸಿನಿಂದ ಏನಾದರೂ ಫಲವನ್ನು ಪ್ರಾಪ್ತಿಮಾಡಿಕೊಂಡಿದ್ದರೆ, ಅದರ ಪ್ರಭಾವದಿಂದ ನೀನು ಸಶರೀರಿಯಾಗಿ ಸ್ವರ್ಗಲೋಕಕ್ಕೆ ಹೋಗು.॥14½॥
ಮೂಲಮ್ - 15½
ಉಕ್ತವಾಕ್ಯೇ ಮುನೌ ತಸ್ಮಿನ್ ಸಶರೀರೋ ನರೇಶ್ವರಃ ॥
ದಿವಂ ಜಗಾಮ ಕಾಕುತ್ಸ್ಥ ಮುನೀನಾಂ ಪಶ್ಯತಾಂ ತದಾ ।
ಅನುವಾದ
ಶ್ರೀರಾಮಾ! ವಿಶ್ವಾಮಿತ್ರಮುನಿಗಳು ಇಷ್ಟು ಹೇಳುತ್ತಲೇ ರಾಜಾ ತ್ರಿಶಂಕು ಎಲ್ಲ ಮುನಿಗಳು ನೋಡು-ನೋಡುತ್ತಿದ್ದಂತೆ ತನ್ನ ಶರೀರದೊಂದಿಗೆ ಸ್ವರ್ಗಲೋಕಕ್ಕೆ ಹೊರಟು ಹೋದನು.॥15½॥
ಮೂಲಮ್ - 16½
ಸ್ವರ್ಗಲೋಕ ಗತಂ ದೃಷ್ಟ್ವಾ ತ್ರಿಶಂಕುಂ ಪಾಕಶಾಸನಃ ॥
ಸಹ ಸರ್ವೈಃ ಸುರಗಣೈರಿದಂ ವಚನಮಬ್ರವೀತ್ ।
ಅನುವಾದ
ತ್ರಿಶಂಕು ಸ್ವರ್ಗಲೋಕಕ್ಕೆ ತಲುಪಿರುವುದನ್ನು ನೋಡಿ ಸಮಸ್ತ ದೇವತೆಗಳೊಂದಿಗೆ ಪಾಕಶಾಸನ ಇಂದ್ರನು ರಾಜನಲ್ಲಿ ಇಂತೆಂದನು.॥16½॥
ಮೂಲಮ್ - 17½
ತ್ರಿಶಂಕೋ ಗಚ್ಛ ಭೂಯಸ್ತ್ವಂ ನಾಸಿ ಸ್ವರ್ಗಕೃತಾಲಯಃ ॥
ಗುರುಶಾಪಹತೋ ಮೂಢ ಪತ ಭೂಮಿಮವಾಕ್ಶಿರಾಃ ।
ಅನುವಾದ
ಮೂರ್ಖ ತ್ರಿಶಂಕುವೇ! ನೀನು ಮತ್ತೆ ಇಲ್ಲಿಂದ ಮರಳಿ ಹೋಗು ನಿನಗೆ ಸ್ವರ್ಗದಲ್ಲಿ ಸ್ಥಾನವಿಲ್ಲ. ನೀನು ಗುರುವಿನ ಶಾಪದಿಂದ ನಾಶವಾಗಿರುವೆ, ಆದ್ದರಿಂದ ಕೆಳಮುಖನಾಗಿ ಪುನಃ ಪೃಥ್ವಿಗೆ ಹೋಗಿ ಬೀಳು.॥17½॥
ಮೂಲಮ್ - 18½
ಏವಮುಕ್ತೋ ಮಹೇಂದ್ರೇಣ ತ್ರಿಶಂಕುರಪತತ್ಪುನಃ ॥
ವಿಕ್ರೋಶಮನಸ್ತ್ರಾಹೀತಿ ವಿಶ್ವಾಮಿತ್ರಂ ತಪೋಧನಮ್ ।
ಅನುವಾದ
ಇಂದ್ರನು ಇಷ್ಟು ಹೇಳುತ್ತಲೇ ತ್ರಿಶಂಕುರಾಜನು ತಪೋಧನ ವಿಶ್ವಾಮಿತ್ರರನ್ನು ಕೂಗುತ್ತಾ ಕಾಪಾಡಿ ಕಾಪಾಡಿ ಎಂದು ಬೊಬ್ಬಿಡುತ್ತಾ ಪುನಃ ಸ್ವರ್ಗದಿಂದ ಕೆಳಗೆ ಬೀಳುತ್ತಿದ್ದನು.॥18½॥
ಮೂಲಮ್ - 19½
ತಚ್ಛ್ರುತ್ವಾ ವಚನಂ ತಸ್ಯ ಕ್ರೋಶಮಾನಸ್ಯ ಕೌಶಿಕಃ ॥
ರೋಷಮಾಹಾರಯತ್ತೀವ್ರಂ ತಿಷ್ಠ ತಿಷ್ಠೇತಿ ಚಾಬ್ರವೀತ್ ।
ಅನುವಾದ
ಬೊಬ್ಬಿಡುತ್ತಾ ಕೂಗುತ್ತಿರುವ ತ್ರಿಶಂಕುವಿನ ಆ ಕರುಣ ಕೂಗನ್ನು ಕೇಳಿ ಕೌಶಿಕಮುನಿಗೆ ಬಹಳ ಸಿಟ್ಟು ಬಂತು. ಅವರು ತ್ರಿಶಂಕುವಿನಲ್ಲಿ ಹೇಳಿದರು - ರಾಜನೇ! ಅಲ್ಲೇ ನಿಲ್ಲು, ಅಲ್ಲೇ ನಿಂತುಬಿಡು. (ಹೀಗೆ ಹೇಳಿದಾಗ ತ್ರಿಶಂಕು ನಡುವಿನಲ್ಲೇ ನೇತಾಡುತ್ತಾ ನಿಂತುಬಿಟ್ಟನು.॥19½॥
ಮೂಲಮ್ - 20
ಋಷಿಮಧ್ಯೇ ಸ ತೇಜಸ್ವೀ ಪ್ರಜಾಪತಿರಿವಾಪರಃ ॥
ಮೂಲಮ್ - 21
ಸೃಜನ್ ದಕ್ಷಿಣಮಾರ್ಗಸ್ಥಾನ್ ಸಪ್ತರ್ಷೀನಪರಾನ್ಪುನಃ ।
ನಕ್ಷತ್ರವಂಶಮಪರಮಸೃಜತ್ ಕ್ರೋಧಮೂರ್ಛಿತಃ ॥
ಅನುವಾದ
ಅನಂತರ ತೇಜಸ್ವೀ ವಿಶ್ವಾಮಿತ್ರರು ಋಷಿಮಂಡಳಿಯ ನಡುವೆ ಇನ್ನೊಬ್ಬ ಪ್ರಜಾಪತಿಯಂತೆ ದಕ್ಷಿಣ ಮಾರ್ಗಕ್ಕಾಗಿ ಹೊಸ ಸಪ್ತರ್ಷಿಯರನ್ನು ಸೃಷ್ಟಿಸಿದರು. ಹಾಗೂ ಕ್ರೋಧಗೊಂಡು ಅವರು ನವೀನ ನಕ್ಷತ್ರಗಳನ್ನು ನಿರ್ಮಿಸಿದರು.॥20-21॥
ಮೂಲಮ್ - 22
ದಕ್ಷಿಣಾಂ ದಿಶಮಾಸ್ಥಾಯ ಋಷಿಮಧ್ಯೇಮಹಾಯಶಾಃ ।
ಸೃಷ್ಟ್ವಾನಕ್ಷತ್ರವಂಶಂ ಚ ಕ್ರೋಧೇನ ಕಲುಷೀಕೃತಃ ॥
ಮೂಲಮ್ - 23
ಅನ್ಯಮಿಂದ್ರಂ ಕರಿಷ್ಯಾಮಿ ಲೋಕೋ ವಾಸ್ಯಾದನಿಂದ್ರಕಃ ।
ದೈವತಾನ್ಯಪಿ ಸಕ್ರೋಧಾತ್ ಸ್ರಷ್ಟುಂ ಸಮುಪಚಕ್ರಮೇ ॥
ಅನುವಾದ
ಆ ಮಹಾಯಶಸ್ವೀ ಮುನಿ ಕ್ರೋಧದಿಂದ ಕಲುಷಿತನಾಗಿ ದಕ್ಷಿಣ ದಿಕ್ಕಿನಲ್ಲಿ ಋಷಿಮಂಡಳಿಯ ನಡುವೆ ನೂತನ ನಕ್ಷತ್ರಪಾಲಿಕೆಯನ್ನು ಸೃಷ್ಟಿಸಿ - ‘ನಾನು ಇನ್ನೊಬ್ಬ ಇಂದ್ರನನ್ನು ಸೃಷ್ಟಿಮಾಡುವೆನು ಅಥವಾ ಇಂದ್ರರಹಿತ ಸ್ವರ್ಗಲೋಕವನ್ನೇ ಸೃಷ್ಟಿಸುವೆನು.’ ಎಂದು ವಿಚಾರ ಮಾಡತೊಡಗಿದರು. ಹೀಗೆ ನಿಶ್ಚಯಿಸಿ ಅವರು ಕ್ರೋಧಪೂರ್ವಕ ನೂತನ ದೇವತೆಗಳನ್ನು ಸೃಷ್ಟಿಸತೊಡಗಿದರು.॥22-23॥
ಮೂಲಮ್ - 24
ತತಃ ಪರಮಸಂಭ್ರಾಂತಾಃ ಸರ್ಷಿಸಂಘಾಃ ಸುರಾಸುರಾಃ ।
ವಿಶ್ವಾಮಿತ್ರಂ ಮಹಾತ್ಮಾನಮೂಚುಃ ಸಾನುನಯಂ ವಚಃ ॥
ಅನುವಾದ
ಇದರಿಂದ ಸಮಸ್ತ ದೇವತೆಗಳು, ಅಸುರರು ಋಷಿ ಮುನಿಗಳ ಸಮುದಾಯ ಬಹಳ ಗಾಬರಿಗೊಂಡರು. ಎಲ್ಲರೂ ಅಲ್ಲಿಗೆ ಬಂದು ಮಹಾತ್ಮಾ ವಿಶ್ವಾಮಿತ್ರರಲ್ಲಿ ವಿನಯದಿಂದ ನುಡಿದರು.॥24॥
ಮೂಲಮ್ - 25
ಅಯಂ ರಾಜಾ ಮಹಾಭಾಗ ಗುರುಶಾಪಪರಿಕ್ಷತಃ ।
ಸಶರೀರೋ ದಿವಂ ಯಾತುಂ ನಾರ್ಹತ್ಯೇವ ತಪೋಧನ ॥
ಅನುವಾದ
ಮಹಾಭಾಗರೇ! ಈ ತ್ರಿಶಂಕು ರಾಜನು ಗುರುಗಳ ಶಾಪದಿಂದ ತನ್ನ ಪುಣ್ಯವನ್ನು ಕಳೆದುಕೊಂಡು ಚಾಂಡಾಲನಾಗಿರುವನು. ಆದ್ದರಿಂದ ತಪೋಧನರೇ! ಇವನು ಸಶರೀರನಾಗಿ ಸ್ವರ್ಗಕ್ಕೆ ಹೋಗಲು ಖಂಡಿತವಾಗಿ ಅಧಿಕಾರಿಯಲ್ಲ.॥25॥
ಮೂಲಮ್ - 26
ತೇಷಾಂ ತದ್ವಚನಂಶೃತ್ವಾ ದೇವಾನಾಂ ಮುನಿಪುಂಗವಃ ।
ಅಬ್ರವೀತ್ಸುಮಹದ್ವಾಕ್ಯಂ ಕೌಶಿಕಃ ಸರ್ವದೇವತಾಃ ॥
ಅನುವಾದ
ಆ ದೇವತೆಗಳ ಮಾತನ್ನು ಕೇಳಿ ಮುನಿವರ ಕೌಶಿಕರು ಸಮಸ್ತ ದೇವತೆಗಳಲ್ಲಿ ಪರಮೋತ್ಕೃಷ್ಟ ಮಾತನ್ನು ಹೇಳಿದರು.॥26॥
ಮೂಲಮ್ - 27
ಸಶರೀರಸ್ಯ ಭದ್ರಂ ವಸ್ತ್ರಿಶಂಕೋರಸ್ಯ ಭೂಪತೇಃ ।
ಆರೋಹಣಂ ಪ್ರತಿಜ್ಞಾತಂ ನಾನೃತಂ ಕರ್ತುಮುತ್ಸಹೇ ॥
ಅನುವಾದ
ದೇವತೆಗಳಿರಾ! ನಿಮಗೆ ಮಂಗಳವಾಗಲಿ. ನಾನು ತ್ರಿಶಂಕು ರಾಜನನ್ನು ಸದೇಹವಾಗಿ ಸ್ವರ್ಗಕ್ಕೆ ಕಳಿಸುವ ಪ್ರತಿಜ್ಞೆ ಮಾಡಿರುವೆನು. ಆದ್ದರಿಂದ ಅದನ್ನು ನಾನು ಸುಳ್ಳಾಗಿಸಲಾರೆ.॥27॥
ಮೂಲಮ್ - 28
ಸ್ವರ್ಗೋಽಸ್ತು ಸಶರೀರಸ್ಯ ತ್ರಿಶಂಕೋರಸ್ಯ ಶಾಶ್ವತಃ ।
ನಕ್ಷತ್ರಾಣಿ ಚ ಸರ್ವಾಣಿ ಮಾಮಕಾನಿ ಧ್ರುವಾಣ್ಯಥ ॥
ಮೂಲಮ್ - 29
ಯಾವಲ್ಲೋಕಾ ಧರಿಷ್ಯಂತಿ ತಿಷ್ಠನ್ತ್ವೇತಾನಿ ಸರ್ವಶಃ ।
ಯತ್ ಕೃತಾನಿ ಸುರಾಃ ಸರ್ವೇ ತದನುಜ್ಞಾತುಮರ್ಹಥ ॥
ಅನುವಾದ
ಈ ತ್ರಿಶಂಕು ಮಹಾರಾಜನಿಗೆ ಸದಾ ಸ್ವರ್ಗಲೋಕದ ಸುಖ ಸಿಗುತ್ತಾ ಇರಲಿ. ನಾನು ನಿರ್ಮಿಸಿದ ನಕ್ಷತ್ರಗಳು ಸದಾ ಇರಲಿ. ಜಗತ್ತು ಇರುವತನಕ ನಾನು ಸೃಷ್ಟಿಸಿದ ಎಲ್ಲ ವಸ್ತುಗಳು ಇದ್ದುಕೊಂಡಿರಲಿ. ದೇವತೆಗಳಿರಾ! ನೀವೆಲ್ಲರೂ ಇದನ್ನು ಅನುಮೋದಿಸಿರಿ.॥28-29॥
ಮೂಲಮ್ - 30
ಏವಮುಕ್ತಾಃ ಸುರಾಃ ಸರ್ವೇ ಪ್ರತ್ಯೂಚುರ್ಮುನಿಪುಂಗವಮ್ ।
ಏವಂ ಭವತು ಭದ್ರಂ ತೇ ತಿಷ್ಠನ್ತ್ವೇತಾನಿಸರ್ವಶಃ ॥
ಮೂಲಮ್ - 31
ಗಗನೇ ತಾನ್ಯನೇಕಾನಿ ವೈಶ್ವಾನರಪಥಾದ್ಬಹಿಃ ।
ನಕ್ಷತ್ರಾಣಿ ಮುನಿಶ್ರೇಷ್ಠ ತೇಷು ಜ್ಯೋತಿಃಷು ಜಾಜ್ವಲನ್ ॥
ಮೂಲಮ್ - 32½
ಅವಾಕ್ಶಿರಾಸ್ತ್ರೀ ಶಂಕುಶ್ಚ ತಿಷ್ಠತ್ವಮರಸಂನಿಭಃ ।
ಅನುಯಾಸ್ಯಂತಿ ಚೈತಾನಿ ಜ್ಯೋತಿಂಷಿ ನೃಪಸತ್ತಮಮ್ ॥
ಕೃತಾರ್ಥಂ ಕೀರ್ತಿಮಂತಂ ಚ ಸ್ವರ್ಗಲೋಕಗತಂ ಯಥಾ ।
ಅನುವಾದ
ಅವರು ಹೀಗೆ ಹೇಳಿದಾಗ ಎಲ್ಲ ದೇವತೆಗಳು ಮುನಿವರ ವಿಶ್ವಾಮಿತ್ರರಲ್ಲಿ ಹೇಳಿದರು - ಮಹರ್ಷಿಯೇ! ಹಾಗೆಯೇ ಆಗಲಿ. ಇವೆಲ್ಲ ವಸ್ತುಗಳು ಇದ್ದುಕೊಂಡಿರಲಿ. ನಿಮಗೆ ಮಂಗಳವಾಗಲಿ. ಮುನಿಶ್ರೇಷ್ಠರೇ! ನೀವು ರಚಿಸಿದ ಅನೇಕ ನಕ್ಷತ್ರಗಳು ಆಕಾಶದಲ್ಲಿ ವೈಶ್ವಾನರ ಪಥದಿಂದ ಹೊರಗೆ ಪ್ರಕಾಶಿತವಾಗುವುವು ಹಾಗೂ ಅದೇ ಜ್ಯೋತಿರ್ಮಯ ನಕ್ಷತ್ರಗಳ ನಡುವೆ ತಲೆಕೆಳಗಾಗಿ ತ್ರಿಶಂಕು ಕೂಡ ಪ್ರಕಾಶಮಾನವಾಗಲಿ. ಅಲ್ಲಿ ಅವನ ಸ್ಥಿತಿ ದೇವತೆಗಳಂತೆ ಇರುವುದು. ಇವೆಲ್ಲ ನಕ್ಷತ್ರಗಳು ಈ ಕೃತಾರ್ಥ ಹಾಗೂ ಯಶಸ್ವೀ ನೃಪಶ್ರೇಷ್ಠನನ್ನು ಸ್ವರ್ಗೀಯ ಪುರುಷನಂತೆ ಅನುಸರಿಸುತ್ತಾ ಇರುವವು.॥30-32½॥
ಮೂಲಮ್ - 33½
ವಿಶ್ವಾಮಿತ್ರಸ್ತು ಧರ್ಮಾತ್ಮಾ ಸರ್ವದೇವೈರಭಿಷ್ಟುತಃ ॥
ಋಷಿಮಧ್ಯೇ ಮಹಾತೇಜಾ ಬಾಢಮಿತ್ಯೇವ ದೇವತಾಃ ।
ಅನುವಾದ
ಅನಂತರ ಸಮಸ್ತ ದೇವತೆಗಳು ಋಷಿಗಳ ನಡುವೆಯೇ ಮಹಾತೇಜಸ್ವೀ ಧರ್ಮಾತ್ಮಾ ವಿಶ್ವಾಮಿತ್ರರನ್ನು ಸ್ತುತಿಸಿದರು. ಇದರಿಂದ ಸಂತೋಷಗೊಂಡ ಅವರು ‘ಬಹಳ ಒಳ್ಳೆಯದು’ ಎಂದು ಹೇಳಿ ದೇವತೆಗಳ ಮಾತನ್ನು ಒಪ್ಪಿಕೊಂಡರು.॥33½॥
ಮೂಲಮ್ - 34
ತತೋ ದೇವಾ ಮಹಾತ್ಮಾನೋ ಯಶಯಶ್ಚ ತಪೋಧನಾಃ ।
ಜಗ್ಮುರ್ಯಥಾಗತಂ ಸರ್ವೇ ಯಜ್ಞಸ್ಯಾಂತೇನರೋತ್ತಮ ॥
ಅನುವಾದ
ನರಶ್ರೇಷ್ಠ ಶ್ರೀರಾಮಾ! ಅನಂತರ ಯಜ್ಞ ಸಮಾಪ್ತವಾದಾಗ ಎಲ್ಲ ದೇವತೆಗಳು ಹಾಗೂ ತಪೋಧನ ಮಹರ್ಷಿಗಳು ತಮ್ಮ ತಮ್ಮ ಸ್ಥಾನಗಳಿಗೆ ಮರಳಿಹೋದರು.॥34॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಅರವತ್ತನೆಯ ಸರ್ಗ ಪೂರ್ಣವಾಯಿತು.॥60॥