वाचनम्
ಭಾಗಸೂಚನಾ
ವಸಿಷ್ಠ ಪುತ್ರರ ಶಾಪದಿಂದ ತ್ರಿಶಂಕುವಿಗೆ ಚಾಂಡಾಲತ್ವ ಪ್ರಾಪ್ತಿ, ವಿಶ್ವಾಮಿತ್ರರನ್ನು ಶರಣುಹೊಂದಿ ಯಾಗವನ್ನು ಮಾಡಿಸುವಂತೆ ತ್ರಿಶಂಕುವಿನ ಪ್ರಾರ್ಥನೆ
ಮೂಲಮ್ - 1
ತತಸ್ತ್ರಿಶಂಕೋರ್ವಚನಂ ಶ್ರುತ್ವಾ ಕ್ರೋಧಸಮನ್ವಿತಮ್ ।
ಋಷಿಪುತ್ರಶತಂ ರಾಮ ರಾಜಾನಮಿದಮಬ್ರವೀತ್ ॥
ಮೂಲಮ್ - 2
ಪ್ರತ್ಯಾಖ್ಯಾತೋಽಸಿ ದುರ್ಮೇಧೋ ಗುರುಣಾ ಸತ್ಯವಾದಿನಾ ।
ತಂ ಕಥಂ ಸಮತಿಕ್ರಮ್ಯ ಶಾಖಾಂತರಮುಪೇಯಿವಾನ್ ॥
ಅನುವಾದ
ರಘುನಂದನ! ರಾಜಾ ತ್ರಿಶಂಕುವಿನ ಈ ಮಾತನ್ನು ಕೇಳಿ ಆ ಮೂರು ವಸಿಷ್ಠರ ಪುತ್ರರು ಸಿಟ್ಟುಗೊಂಡು ಈ ಪ್ರಕಾರ ಹೇಳಿದರು - ಎಲೈ ದುರ್ಬುದ್ಧಿಯೇ! ಸತ್ಯವಾದಿಗಳಾದ ನಿನ್ನ ಗುರುಗಳು ನಿನ್ನನ್ನು ನಿರಾಕರಿಸುವಾಗ ನೀನು ಅವರನ್ನು ಉಲ್ಲಂಘಿಸಿ ಇನ್ನೊಂದು ಶಾಖೆಯನ್ನು ಹೇಗೆ ಆಶ್ರಯಿಸಿದೆ.॥1-2॥
ಮೂಲಮ್ - 3
ಇಕ್ಷ್ವಾಕೂಣಾಂ ಹಿ ಸರ್ವೇಷಾಂ ಪುರೋಧಾಃ ಪರಮಾ ಗತಿಃ ।
ನ ಚಾತಿಕ್ರಮಿತುಂ ಶಕ್ಯಂ ವಚನಂ ಸತ್ಯವಾದಿನಃ ॥
ಅನುವಾದ
ಸಮಸ್ತ ಇಕ್ವಾಕ್ಷುವಂಶೀ ಕ್ಷತ್ರಿಯರಿಗೆ ಪುರೋಹಿತ ವಸಿಷ್ಠರೇ ಪರಮಗತಿಯಾಗಿದ್ದಾರೆ. ಆ ಸತ್ಯವಾದೀ ಮಹಾತ್ಮರ ಮಾತನ್ನು ಯಾರೂ ಮೀರಿಹೋಗಲಾರರು.॥3॥
ಮೂಲಮ್ - 4
ಅಶಕ್ಯಮಿತಿ ಸೋವಾಚ ವಸಿಷ್ಠೋ ಭಗವಾನೃಷಿಃ ।
ತಂ ವಯಂ ವೈ ಸಮಾಹರ್ತುಂ ಕ್ರತುಂ ಶಕ್ತಾಃ ಕಥಂಚನ ॥
ಅನುವಾದ
ಯಾವ ಯಜ್ಞಕರ್ಮವನ್ನು ಭಗವಾನ್ ವಸಿಷ್ಠ ಮುನಿಗಳು ಅಸಂಭವವೆಂದು ತಿಳಿದಾಗ ನಾವು ಅದನ್ನು ಹೇಗೆ ಮಾಡಬಲ್ಲೆವು.॥4॥
ಮೂಲಮ್ - 5½
ಬಾಲಿಶಸ್ತ್ವಂ ನರಶ್ರೇಷ್ಠ ಗಮ್ಯತಾಂ ಸ್ವಪುರಂ ಪುನಃ ।
ಯಾಜನೇ ಭಗವಾನ್ ಶಕ್ತಸ್ತ್ರೈಲೋಕ್ಯಸ್ಯಾಪಿಪಾರ್ಥಿವ ॥
ಅವಮಾನಂ ಕಥಂ ಕರ್ತುಂ ತಸ್ಯ ಶಕ್ಷ್ಯಾಮಹೇ ವಯಮ್ ।
ಅನುವಾದ
ನರಶ್ರೇಷ್ಠನೇ! ನಿನು ಇನ್ನೂ ಬಾಲಕನಾಗಿರುವೆ (ಅಜ್ಞಾನಿ) ನಿನ್ನ ನಗರಕ್ಕೆ ಮರಳಿಹೋಗು. ಪೃಥ್ವಿನಾಥನೇ! ಭಗವಾನ್ ವಸಿಷ್ಠರು ಮೂರು ಲೋಕಗಳ ಯಜ್ಞವನ್ನು ಮಾಡಿಸಲು ಸಮರ್ಥರಾಗಿದ್ದಾರೆ. ನಾವು ಅವರ ಅಪಮಾನ ಹೇಗೆ ಮಾಡಬಲ್ಲೆವು.॥5½॥
ಮೂಲಮ್ - 6
ತೇಷಾಂ ತದ್ವಚನಂ ಶ್ರುತ್ವಾ ಕ್ರೋಧ ಪರ್ಯಾಕುಲಾಕ್ಷರಮ್ ॥
ಮೂಲಮ್ - 7½
ಸ ರಾಜಾ ಪುನರೇವೈತಾನಿದಂ ವಚನಮಬ್ರವೀತ್ ।
ಪ್ರತ್ಯಾಖ್ಯಾತೋ ಭಗವತಾ ಗುರುಪುತ್ರೈಸ್ತಥೈವ ಹಿ ॥
ಅನ್ಯಾಂ ಗತಿಂ ಗಮಿಷ್ಯಾಮಿ ಸ್ವಸ್ತಿ ವೋಽಸ್ತು ತಪೋಧನಾಃ ।
ಅನುವಾದ
ಗುರುಪುತ್ರರ ಕ್ರೋಧಯುಕ್ತ ಆ ಮಾತನ್ನು ಕೇಳಿ ತ್ರಿಶಂಕುರಾಜನು ಪುನಃ ಅವರಲ್ಲಿ ಇಂತೆಂದನು- ತಪೋಧನರೇ! ಭಗವಾನ್ ವಸಿಷ್ಠರಾದರೋ ನನ್ನನ್ನು ನಿರಾಕರಿಸಿದರು. ಗುರು ಪುತ್ರರಾದ ನೀವೂ ಕೂಡ ನನ್ನ ಪ್ರಾರ್ಥನೆಯನ್ನು ಸ್ವೀಕರಿಸುತ್ತಿಲ್ಲ; ಆದ್ದರಿಂದ ‘ನಿಮಗೆ ಮಂಗಳವಾಗಲಿ’, ಈಗ ನಾನು ಬೇರೆ ಯಾರಿಗಾದರೂ ಶರಣು ಹೋಗುವೆನು.॥6-7½॥
ಮೂಲಮ್ - 8
ಋಷಿಪುತ್ರಾಸ್ತು ತಚ್ಛ್ರುತ್ವಾ ವಾಕ್ಯಂ ಘೋರಾಭಿಸಂಹಿತಮ್ ।
ಮೂಲಮ್ - 9
ಶೇಪುಃ ಪರಮಸಂಕ್ರುದ್ಧಾಶ್ಚಂಡಾಲತ್ವಂ ಗಮಿಷ್ಯಸಿ ॥
ಇತ್ಯುಕ್ತ್ವಾ ತೇ ಮಹಾತ್ಮಾನೋ ವಿವಿಶುಃ ಸ್ವಂ ಸ್ವಮಾಶ್ರಮಮ್ ॥
ಅನುವಾದ
ತ್ರಿಶಂಕುವಿನ ಈ ಮಹಾಘೋರ ಅತ್ಯಂತ ಕಟುವಾದ ಮಾತನ್ನು ಕೇಳಿದ ಮಹರ್ಷಿಗಳ ಪುತ್ರರು ಅತ್ಯಂತ ಕುಪಿತರಾಗಿ-ಎಲವೋ! ನೀನು ಚಾಂಡಾಲನಾಗಿ ಹೋಗು ಎಂದು ಶಪಿಸಿ, ಆ ಮಹಾತ್ಮರು ತಮ್ಮ ಆಶ್ರಮವನ್ನು ಪ್ರವೇಶಿಸಿದರು.॥8-9॥
(ಶ್ಲೋಕ 10½)
ಮೂಲಮ್
ಅಥ ರಾತ್ರ್ಯಾಂ ವ್ಯತೀತಾಯಾಂ ರಾಜಾ ಚಂಡಾಲತಾಂ ಗತಃ ।
ನೀಲವಸ್ತ್ರಧರೋ ನೀಲಃ ಪುರುಷೋ ಧ್ವಸ್ತಮೂರ್ಧಜಃ ॥
ಚಿತ್ಯಮಾಲ್ಯಾಂಗರಾಗಶ್ಚ ಆಯಸಾಭರಣೋಽಭವತ್ ।
ಅನುವಾದ
ಅನಂತರ ರಾತ್ರೆಯು ಕಳೆಯುತ್ತಲೇ ರಾಜಾ ತ್ರಿಶಂಕು ಚಾಂಡಾಲನಾದನು. ಅವನ ಶರೀರದ ಬಣ್ಣ ನೀಲಿಯಾಯಿತು. ಬಟ್ಟೆಗಳೂ ನೀಲಿಯಾದವು. ಶರೀರದಲ್ಲಿ ರುಕ್ಷತೆ ಉಂಟಾಯಿತು. ತಲೆಯ ಕೂದಲು ಚಿಕ್ಕದಾದವು. ಇಡೀ ಶರೀರವು ಚಿತಾಭಸ್ಮ ಲೇಪಿಸಿದಂತಿತ್ತು. ಬೇರೆ-ಬೇರೆ ಅವಯವಗಳಲ್ಲಿ ಕಬ್ಬಿಣದ ಒಡವೆಗಳು ಕಾಣಿಸಿಕೊಂಡವು.॥10½॥
ಮೂಲಮ್ - 11
ತಂ ದೃಷ್ಟ್ವಾ ಮಂತ್ರಿಣಃ ಸರ್ವೇತ್ಯಜ್ಯಚಂಡಾಲರೂಪಿಣಮ್ ॥
ಮೂಲಮ್ - 12
ಪ್ರಾದ್ರವನ್ ಸಹಿತಾ ರಾಮ ಪೌರಾ ಯೇಽಸ್ಯಾನುಗಾಮಿನಃ ।
ಏಕೋ ಹಿ ರಾಜಾ ಕಾಕುತ್ಸ್ಥ ಜಗಾಮ ಪರಮಾತ್ಮವಾನ್ ॥
ದಹ್ಯಮಾನೋ ದಿವಾರಾತ್ರಂ ವಿಶ್ವಾಮಿತ್ರಂ ತಪೋಧನಮ್ ।
ಅನುವಾದ
ಶ್ರೀರಾಮಾ! ತಮ್ಮ ರಾಜನು ಚಾಂಡಾಲನಾಗಿರುವುದನ್ನು ಕಂಡು ಎಲ್ಲ ಮಂತ್ರಿಗಳು, ಪುರ ಜನರು ಅವನನ್ನು ಬಿಟ್ಟು ಓಡಿಹೋದರು. ಕಾಕುತ್ಸ್ಥನೇ! ಆ ಧೀರಸ್ವಭಾವದ ಅರಸು ದಿನದಿಂದ ದಿನಕ್ಕೆ ಚಿಂತೆಯಲ್ಲಿ ಬೇಯತೊಡಗಿದನು ಹಾಗೂ ಒಬ್ಬಂಟಿಗನಾಗಿಯೇ ತಪೋಧನ ವಿಶ್ವಾಮಿತ್ರರಿಗೆ ಶರಣಾದನು.॥11-12॥
ಮೂಲಮ್ - 13
ವಿಶ್ವಾಮಿತ್ರಸ್ತು ತಂ ದೃಷ್ಟ್ವಾ ರಾಜಾನಂ ವಿಫಲೀಕೃತಮ್ ॥
ಮೂಲಮ್ - 14
ಚಂಡಾಲರೂಪಿಣಂ ರಾಮ ಮುನಿಃ ಕಾರುಣ್ಯಮಾಗತಃ ।
ಕಾರುಣ್ಯಾತ್ಸಮಹಾತೇಜಾ ವಾಕ್ಯಂ ಪರಮಧಾರ್ಮಿಕಃ ॥
ಮೂಲಮ್ - 15½
ಇದಂ ಜಗಾದ ಭದ್ರಂ ತೇ ರಾಜಾನಂ ಘೋರದರ್ಶನಮ್ ।
ಕಿಮಾಗಮನಕಾರ್ಯಂ ತೇ ರಾಜಪುತ್ರ ಮಹಾಬಲ ॥
ಅಯೋಧ್ಯಾಧಿಪತೇವೀರ ಶಾಪಾಚ್ಚಂಡಾಲತಾಂ ಗತಃ ।
ಅನುವಾದ
ಶ್ರೀರಾಮಾ! ವಿಶ್ವಾಮಿತ್ರರು ನಿಷ್ಫಲ ಜೀವನನಾದ ರಾಜನನ್ನು ನೋಡಿದರು. ಅವನನ್ನು ಚಾಂಡಾಲ ರೂಪದಲ್ಲಿ ನೋಡಿ ಆ ಮಹಾತೇಜಸ್ವಿ ಪರಮಧರ್ಮಾತ್ಮಾ ಮುನಿಯ ಹೃದಯದಲ್ಲಿ ಕರುಣೆ ತುಂಬಿತು. ಅವರು ದಯಾರ್ದ್ರವಾಗಿ ಭಯಂಕರವಾಗಿ ಕಂಡುಬರುವ ರಾಜಾ ತ್ರಿಶಂಕುವಿನಲ್ಲಿ ಹೇಳಿದರು-ಮಹಾಬಲಿ ರಾಜಕುಮಾರ! ನಿನಗೆ ಒಳ್ಳೆಯದಾಗಲಿ. ಯಾವ ಕಾರ್ಯದಿಂದ ಇಲ್ಲಿ ಬರೋಣವಾಯಿತು. ವೀರ ಅಯೋಧ್ಯಾ ನರೇಶನೇ! ನೀನು ಶಾಪದಿಂದ ಚಾಂಡಾಲನಾಗಿರುವಂತೆ ಅನಿಸುತ್ತದೆ.॥13-15½॥
(ಶ್ಲೋಕ 16½)
ಮೂಲಮ್
ಅಥ ತದ್ವಾಕ್ಯಮಾಕರ್ಣ್ಯ ರಾಜಾ ಚಂಡಾಲತಾಂ ಗತಃ ॥
ಅಬ್ರವೀತ್ಪ್ರಾಂಜಲಿರ್ವಾಕ್ಯಂ ವಾಕ್ಯಜ್ಞೋ ವಾಕ್ಯಕೋವಿದಮ್ ।
ಅನುವಾದ
ವಿಶ್ವಾಮಿತ್ರರ ಮಾತನ್ನು ಕೇಳಿ ಚಾಂಡಾಲ ಭಾವವನ್ನು ಹೊಂದಿದ, ಮಾತಿನ ಮರ್ಮವನ್ನು ತಿಳಿದ ತ್ರಿಶಂಕು ರಾಜನು ಕೈಮುಗಿದು ವಾಕ್ಯಾರ್ಥ ಕೋವಿದರಾದ ವಿಶ್ವಾಮಿತ್ರರಲ್ಲಿ ಇಂತೆಂದನು.॥16½॥
(ಶ್ಲೋಕ 17½)
ಮೂಲಮ್
ಪ್ರತ್ಯಾಖ್ಯಾತೋಽಸ್ಮಿ ಗುರುಣಾ ಗುರುಪುತ್ರೈಸ್ತಥೈವ ಚ ॥
ಅನವಾಪ್ಯೈವ ತಂ ಕಾಮಂ ಮಯಾ ಪ್ರಾಪ್ತೋ ವಿಪರ್ಯಯಃ ।
ಅನುವಾದ
ಮಹರ್ಷಿಯೇ! ನನ್ನನ್ನು ಗುರುಗಳು ಹಾಗೂ ಗುರುಪುತ್ರರು ತಿರಸ್ಕರಿಸಿದರು. ನಾನು ಬಯಸುತ್ತಿದ್ದ ಮನೋಭೀಷ್ಟ ವಸ್ತುವನ್ನು ಪಡೆಯದೆ, ಇಚ್ಛೆಗೆ ವಿರುದ್ಧವಾಗಿ ಅನರ್ಥಕ್ಕೆ ಭಾಗಿಯಾದೆನು.॥17½॥
(ಶ್ಲೋಕ 18½)
ಮೂಲಮ್
ಸಶರೀರೋ ದಿವಂ ಯಯಾಮಿತಿ ಮೇ ಸೌಮ್ಯದರ್ಶನಮ್ ॥
ಮಯಾ ಚೇಷ್ಟಂ ಕ್ರತುಶತಂ ತಚ್ಛ ನಾವಾಪ್ಯತೇ ಫಲಮ್ ।
ಅನುವಾದ
ಸೌಮ್ಯದರ್ಶನ ಮುನೀಶ್ವರರೇ! ನಾನು ಇದೇ ಶರೀರದಿಂದ ಸ್ವರ್ಗಕ್ಕೆ ಹೋಗಬೇಕೆಂದು ಬಯಸಿದೆ. ಆದರೆ ಈ ಇಚ್ಛೆಯು ಪೂರ್ಣವಾಗದೆ ಹೋಯಿತು. ನಾನು ನೂರಾರು ಯಜ್ಞಗಳನ್ನು ಮಾಡಿದೆ; ಆದರೆ ಅವುಗಳ ಫಲವೂ ಸಿಗುತ್ತಿಲ್ಲ.॥18½॥
(ಶ್ಲೋಕ 19½)
ಮೂಲಮ್
ಅನೃತಂ ನೋಕ್ತಪೂರ್ವಂ ಮೇ ನ ಚ ವಕ್ಷ್ಯೇ ಕದಾಚನ ॥
ಕೃಚ್ಛ್ರೇಷ್ವಪಿ ಗತಃ ಸೌಮ್ಯ ಕ್ಷತ್ರಧರ್ಮೇಣ ತೇ ಶಪೇ ।
ಅನುವಾದ
ಸೌಮ್ಯರೇ! ನಾನು ಕ್ಷತ್ರಿಯ ಧರ್ಮದ ಮೇಲೆ ಆಣೆಯಿಟ್ಟು ಹೇಳುತ್ತೇನೆ-ದೊಡ್ಡ ದೊಡ್ಡ ಸಂಕಟಗಳಲ್ಲಿ ಬಿದ್ದರೂ, ನಾನು ಈ ಮೊದಲು ಎಂದೂ ಸುಳ್ಳು ಹೇಳಲಿಲ್ಲ; ಮುಂದೆಯೂ ಸುಳ್ಳು ಹೇಳಲಾರೆ.॥19½॥
ಮೂಲಮ್ - 20
ಯಜ್ಞೈರ್ಬಹುವಿಧೈರಿಷ್ಟಂ ಪ್ರಜಾ ಧರ್ಮೇಣ ಪಾಲಿತಾಃ ॥
ಮೂಲಮ್ - 21
ಗುರುವಶ್ಚ ಮಹಾತ್ಮಾನಃ ಶೀಲವೃತ್ತೇನ ತೋಷಿತಾಃ ।
ಧರ್ಮೇ ಪ್ರಯತಮಾನಸ್ಯ ಯಜ್ಞಂ ಚಾಹರ್ತುಮಿಚ್ಛತಃ ॥
ಮೂಲಮ್ - 22
ಪರಿತೋಷಂನ ಗಚ್ಛಂತಿ ಗುರವೋ ಮುನಿಪುಂಗವ ।
ದೈವಮೇವ ಪರಂ ಮನ್ಯೇ ಪೌರುಷಂ ತು ನಿರರ್ಥಕಮ್ ॥
ಅನುವಾದ
ನಾನು ನಾನಾ ವಿಧವಾದ ಯಜ್ಞಗಳ ಅನುಷ್ಠಾನ ಮಾಡಿದೆ, ಪ್ರಜೆಯನ್ನು ಧರ್ಮದಿಂದ ಪಾಲಿಸಿದೆ, ಶೀಲ ಮತ್ತು ಸದಾಚಾರದಿಂದ ಮಹಾತ್ಮರ ಹಾಗೂ ಗುರುಹಿರಿಯರನ್ನು ಸಂತುಷ್ಟರನ್ನಾಗಿಸಲು ಪ್ರಯತ್ನಿಸಿರುವೆ. ಆಗಲೂ ನಾನು ಯಜ್ಞವನ್ನು ಮಾಡಲು ಬಯಸುತ್ತಿದ್ದೆ. ಆದ್ದರಿಂದ ನನ್ನ ಈ ಪ್ರಯತ್ನವು ಧರ್ಮಕ್ಕಾಗಿಯೇ ಇತ್ತು. ಮುನಿಶ್ರೇಷ್ಠರೇ! ಆದರೂ ಗುರುಜನರು ನನ್ನ ಮೇಲೆ ಸಂತುಷ್ಟರಾಗಲಿಲ್ಲ. ಇದನ್ನು ನೋಡಿ ದೈವವನ್ನೇ ಹಿರಿದೆಂದು ನಾನು ತಿಳಿಯುತ್ತೇನೆ. ಪುರುಷಾರ್ಥವಾದರೋ ನಿರರ್ಥಕವೆಂದೇ ತಿಳಿಯುತ್ತೇನೆ.॥20-22॥
ಮೂಲಮ್ - 23
ದೈವೇನಾಕ್ರಮ್ಯತೇ ಸರ್ವಂ ದೈವಂ ಹಿ ಪರಮಾ ಗತಿಃ ।
ತಸ್ಯಮೇ ಪರಮಾರ್ತಸ್ಯ ಪ್ರಸಾದಮಭಿಕಾಂಕ್ಷತಃ ।
ಕರ್ತುಮರ್ಹಸಿ ಭದ್ರಂ ತೇ ದೈವೋಪಹತಕರ್ಮಣಃ ॥
ಅನುವಾದ
ದೈವವು ಎಲ್ಲರ ಮೇಲೆ ಆಕ್ರಮಣ ಮಾಡುತ್ತದೆ. ದೈವವೇ ಎಲ್ಲರ ಪರಮಗತಿಯಾಗಿದೆ. ಮುನಿಗಳೇ! ನಾನು ಅತ್ಯಂತ ಆರ್ತನಾಗಿ ನಿಮ್ಮ ಕೃಪೆಯನ್ನು ಬಯಸುತ್ತೇನೆ. ದೈವವು ನನ್ನ ಪುರುಷಾರ್ಥವನ್ನು ಅದುಮಿ ಬಿಟ್ಟಿದೆ. ನಿಮಗೆ ಮಂಗಳವಾಗಲಿ, ನೀವು ನನ್ನ ಮೇಲೆ ಅವಶ್ಯಕವಾಗಿ ಕೃಪೆ ಮಾಡಿರಿ.॥23॥
ಮೂಲಮ್ - 24
ನಾನ್ಯಾಂ ಗತಿಂ ಗಮಿಷ್ಯಾಮಿ ನಾನ್ಯಚ್ಛಶರಣಮಸ್ತಿ ಮೇ ।
ದೈವಂ ಪುರುಷಕಾರೇಣ ನಿವರ್ತಯಿತುಮರ್ಹಸಿ ॥
ಅನುವಾದ
ಈಗ ನಾನು ನೀವಲ್ಲದೆ ಬೇರೆ ಯಾರಿಗೂ ಶರಣು ಹೋಗಲಾರೆ. ಬೇರೆ ಯಾರೂ ನನಗೆ ಶರಣು ಕೊಡುವವರು ಇಲ್ಲ. ನೀವೇ ತಮ್ಮ ಪುರುಷಾರ್ಥದಿಂದ ನನ್ನ ದುರ್ದೈವನ್ನು ನಿವಾರಿಸಿಬಿಡಿ.॥24॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಐವತ್ತೆಂಟನೆಯ ಸರ್ಗ ಪೂರ್ಣವಾಯಿತು. ॥58॥