०५७ त्रिशङ्कोर् यजनप्रार्थना

वाचनम्
ಭಾಗಸೂಚನಾ

ವಿಶ್ವಾಮಿತ್ರರ ತಪಸ್ಸು, ತ್ರಿಶಂಕುವು ಯಜ್ಞಮಾಡಿಸಲು ವಸಿಷ್ಠರನ್ನು ಪ್ರಾರ್ಥಿಸಿದುದು, ಅವರ ಅಸಮ್ಮತಿ, ತ್ರಿಶಂಕುವು ವಸಿಷ್ಠರ ಪುತ್ರರನ್ನು ಶರಣುಹೊಂದುವುದು

ಮೂಲಮ್ - 1

ತತಃ ಸಂತಪ್ತಹೃದಯಃ ಸ್ಮರನ್ನಿಗ್ರಹಮಾತ್ಮನಃ ।
ವಿನಿಃಶ್ವಸ್ಯ ವಿನಿಃಶ್ವಸ್ಯ ಕೃತವೈರೋ ಮಹಾತ್ಮನಃ ॥

ಮೂಲಮ್ - 2

ಸ ದಕ್ಷಿಣಾಂ ದಿಶಂ ಗತ್ವಾ ಮಹಿಷ್ಯಾ ಸಹ ರಾಘವ ।
ತತಾಪ ಪರಮಂ ಘೋರಂ ವಿಶ್ವಾಮಿತ್ರೋ ಮಹಾತಪಾಃ ॥

ಅನುವಾದ

ಶ್ರೀರಾಮಾ! ಅನಂತರ ವಿಶ್ವಾಮಿತ್ರರು ತನ್ನ ಪರಾಜಯವನ್ನು ನೆನೆನೆನೆದು ಮನಸ್ಸಿನಲ್ಲಿ ಸಂತ್ರಸ್ತರಾದರು. ಮಹಾತ್ಮಾ ವಸಿಷ್ಠರಲ್ಲಿ ವೈರ ಕಟ್ಟಿಕೊಂಡು ಮಹಾತಪಸ್ವಿ ವಿಶ್ವಾಮಿತ್ರನು ಪದೇ ಪದೇ ನಿಟ್ಟುಸಿರುಬಿಡುತ್ತಾ ತನ್ನ ರಾಣಿಯೊಂದಿಗೆ ದಕ್ಷಿಣ ದಿಕ್ಕಿಗೆ ಹೋಗಿ ಅತ್ಯಂತ ಉತ್ಕೃಷ್ಟ ಹಾಗೂ ಭಯಂಕರ ತಪಸ್ಸಿಗೆ ತೊಡಗಿದನು.॥1-2॥

ಮೂಲಮ್ - 3½

ಫಲಮೂಲಾಶನೋ ದಾಂತಶ್ಚಚಾರ ಪರಮಂ ತಪಃ ।
ಅಥಾಸ್ಯ ಜಜ್ಞಿರೇ ಪುತ್ರಾಃ ಸತ್ಯಧರ್ಮಪರಾಯಣಾಃ ॥
ಹವಿಷ್ಪಂದೋ ಮಧುಷ್ಪಂದೋದೃಢನೇತ್ರೋ ಮಹಾರಥಃ ।

ಅನುವಾದ

ಅಲ್ಲಿ ಮನ ಇಂದ್ರಿಯಗಳನ್ನು ವಶಪಡಿಸಿಕೊಂಡು, ಅವರು ಫಲ-ಮೂಲಗಳನ್ನು ತಿನ್ನುತ್ತಾ ಉತ್ತಮ ತಪಸ್ಸಿಗೆ ತೊಡಗಿದ್ದರು. ಅಲ್ಲಿ ಹವಿಷ್ಪಂದ, ಮಧುಷ್ಪಂದ, ದೃಢನೇತ್ರ ಮತ್ತು ಮಹಾರಥ ಎಂಬ ನಾಲ್ವರು ಪುತ್ರರು ಹುಟ್ಟಿದರು. ಅವರು ಸತ್ಯ ಮತ್ತು ಧರ್ಮದಲ್ಲಿ ತತ್ಪರರಾಗಿದ್ದರು.॥3½॥

ಮೂಲಮ್ - 4

ಪೂರ್ಣೇ ವರ್ಷಸಹಸ್ರೇ ತು ಬ್ರಹ್ಮಾ ಲೋಕಪಿತಾಮಹಃ ॥

ಮೂಲಮ್ - 5½

ಅಬ್ರವೀನ್ಮಧುರಂ ವಾಕ್ಯಂ ವಿಶ್ವಾಮಿತ್ರಂ ತಪೋಧನಮ್ ।
ಜಿತಾ ರಾಜರ್ಷಿಲೋಕಾಸ್ತೇ ತಪಸಾ ಕುಶಿಕಾತ್ಮಜ ॥
ಅನೇನ ತಪಸಾ ತ್ವಾಂ ಹಿ ರಾಜರ್ಷಿರಿತಿ ವಿದ್ಮಹೇ ।

ಅನುವಾದ

ಒಂದು ಸಾವಿರ ವರ್ಷ ಪೂರ್ಣಗೊಂಡಾಗ ಲೋಕಪಿತಾಮಹ ಬ್ರಹ್ಮದೇವರು ತಪಸ್ಸಿನ ಧನಿಯಾದ ವಿಶ್ವಾಮಿತ್ರರಿಗೆ ದರ್ಶನ ಕೊಟ್ಟು, ಮಧುರವಾಗಿ ಹೀಗೆ ಹೇಳಿದರು - ಕುಶಿಕನಂದನ! ನೀನು ತಪಸ್ಸಿನಿಂದ ರಾಜರ್ಷಿಗಳ ಲೋಕವನ್ನು ಜಯಿಸಿದೆ. ಈ ತಪಸ್ಸಿನ ಪ್ರಭಾವದಿಂದ ನಾವು ನಿನ್ನನ್ನು ನಿಜರಾಜರ್ಷಿ ಎಂದು ತಿಳಿಯುತ್ತೇವೆ.॥4-5½॥

ಮೂಲಮ್ - 6½

ಏವಮುಕ್ತ್ವಾಮಹಾತೇಜಾ ಜಗಾಮ ಸಹ ದೈವತೈಃ ॥
ತ್ರಿವಿಷ್ಟಪಂ ಬ್ರಹ್ಮಲೋಕಂ ಲೋಕಾನಾಂ ಪರಮೇಶ್ವರಃ ।

ಅನುವಾದ

ಹೀಗೆ ಹೇಳಿ ಸಮಸ್ತ ಲೋಕಗಳ ಒಡೆಯ ಬ್ರಹ್ಮದೇವರು ದೇವತೆಗಳೊಂದಿಗೆ ಸ್ವರ್ಗ ಲೋಕವಾಗಿ ಬ್ರಹ್ಮಲೋಕಕ್ಕೆ ಹೊರಟುಹೋದರು.॥6½॥

ಮೂಲಮ್ - 7

ವಿಶ್ವಾಮಿತ್ರೋಽಪಿ ತಚ್ಛ್ರು ತ್ವಾಹ್ರಿಯಾ ಕಿಂಚಿದವಾಙ್ಮುಖಃ ॥

ಮೂಲಮ್ - 8½

ದುಃಖೇನ ಮಹತಾವಿಷ್ಟಃ ಸಮನ್ಯುರಿದಮಬ್ರವೀತ್ ।
ತಪಶ್ಚ ಸುಮಹತ್ತಪ್ತಂ ರಾಜರ್ಷಿರಿತಿ ಮಾಂ ವಿದುಃ ॥
ದೇವಾಃ ಸರ್ಷಿಗಣಾಃ ಸರ್ವೇ ನಾಸ್ತಿ ಮನ್ಯೇ ತಪಃ ಫಲಮ್ ।

ಅನುವಾದ

ಅವರ ಈ ಮಾತನ್ನು ಕೇಳಿ ವಿಶ್ವಾಮಿತ್ರರ ಮುಖವು ನಾಚಿಕೆಯಿಂದ ಬಾಗಿತು. ಅವರು ಬಹಳ ದುಃಖದಿಂದ ವ್ಯಥಿತರಾಗಿ ಮನಸ್ಸಿನಲ್ಲೇ ‘ಅಯ್ಯೋ! ನಾನು ಇಷ್ಟು ದೊಡ್ಡ ತಪಸ್ಸು ಮಾಡಿದರೂ, ಋಷಿಗಳ ಸಹಿತ ಸಮಸ್ತ ದೇವತೆಗಳು ನನ್ನನ್ನು ರಾಜರ್ಷಿಯೆಂದೇ ತಿಳಿಯುವರು. ಈ ತಪಸ್ಸಿನಿಂದ ಯಾವುದೇ ಫಲ ಸಿಗಲಿಲ್ಲ ಎಂದು ಅಂದುಕೊಂಡರು.॥7-8½॥

ಮೂಲಮ್ - 9½

ಏವಂ ನಿಶ್ಚಿತ್ಯ ಮನಸಾ ಭೂಯ ಏವ ಮಹಾತಪಾಃ ॥
ತಪಶ್ಚಚಾರ ಧರ್ಮಾತ್ಮಾ ಕಾಕುತ್ಸ್ಥಪರಮಾತ್ಮವಾನ್ ।

ಅನುವಾದ

ರಾಮಾ! ಮನಸ್ಸಿನಲ್ಲಿ ಹೀಗೆ ಯೋಚಿಸಿ ತನ್ನ ಮನಸ್ಸನ್ನು ವಶಪಡಿಸಿಕೊಂಡು ಮಹಾತಪಸ್ವೀ ಧರ್ಮಾತ್ಮಾ ವಿಶ್ವಾಮಿತ್ರರು ಪುನಃ ಭಾರೀ ತಪಸ್ಸಿಗೆ ತೊಡಗಿದರು.॥9½॥

ಮೂಲಮ್ - 10½

ಏತಸ್ಮಿನ್ನೇವ ಕಾಲೇ ತು ಸತ್ಯವಾದೀ ಜಿತೇಂದ್ರಿಯಃ ॥
ತ್ರಿಶಂಕುರಿತಿ ವಿಖ್ಯಾತ ಇಕ್ಷ್ವಾಕು ಕುಲವರ್ಧನಃ ।

ಅನುವಾದ

ಇದೇ ಸಮಯದಲ್ಲಿ ಇಕ್ವಾಕ್ಷು ಕುಲದ ಕೀರ್ತಿಯನ್ನು ಹೆಚ್ಚಿಸುವ ತ್ರಿಶಂಕು ಎಂಬ ಸತ್ಯವಾದಿ ಮತ್ತು ಜಿತೇಂದ್ರಿಯ ರಾಜನು ರಾಜ್ಯಭಾರ ಮಾಡುತ್ತಿದ್ದನು.॥10½॥

ಮೂಲಮ್ - 11½

ತಸ್ಯ ಬುದ್ಧಿಃ ಸಮುತ್ಪನ್ನಾ ಯಜೇಯಮಿತಿ ರಾಘವ ॥
ಗಚ್ಛೇಯಂ ಸ್ವಶರೀರೇಣ ದೇವತಾನಾಂ ಪರಾಂ ಗತಿಮ್ ।

ಅನುವಾದ

ರಘುನಂದನ! ಅವನ ಮನಸ್ಸಿನಲಿ - ‘ನನ್ನ ಈ ಶರೀರದೊಂದಿಗೆ ದೇವತೆಗಳ ಪರಮಗತಿಯಾದ ಸ್ವರ್ಗಲೋಕಕ್ಕೆ ಹೋಗುವಂತಹ ಯಜ್ಞವನ್ನು ಮಾಡುವೆನು’ ಎಂಬ ವಿಚಾರ ಬಂತು.॥11½॥

ಮೂಲಮ್ - 12½

ವಸಿಷ್ಠಂ ಸ ಸಮಾಹೂಯ ಕಥಯಾಮಾಸ ಚಿಂತಿತಮ್ ॥
ಅಶಕ್ಯಮಿತಿ ಚಾಪ್ಯುಕ್ತೋ ವಸಿಷ್ಠೇನ ಮಹಾತ್ಮನಾ ।

ಅನುವಾದ

ಆಗ ಅವನು ವಸಿಷ್ಠರನ್ನು ಕರೆಸಿ ಈ ವಿಚಾರವನ್ನು ತಿಳಿಸಿದನು. ಮಹಾತ್ಮಾ ವಸಿಷ್ಠರು ‘ಹೀಗೆ ಆಗುವುದು ಅಸಂಭವವಾಗಿದೆ’ ಎಂದು ಹೇಳಿದರು.॥12½॥

ಮೂಲಮ್ - 13½

ಪ್ರತ್ಯಾಖ್ಯಾತೋ ವಸಿಷ್ಠೇನ ಸ ಯಯೌ ದಕ್ಷಿಣಾಂ ದಿಶಮ್ ॥
ತತಸ್ತತ್ಕರ್ಮಸಿದ್ಧ್ಯರ್ಥಂ ಪುತ್ರಾಂಸ್ತಸ್ಯ ಗತೋ ನೃಪಃ ।

ಅನುವಾದ

ವಸಿಷ್ಠರು ಹೀಗೆ ಖಂಡಿತವಾದ ಉತ್ತರ ಕೊಟ್ಟಾಗ, ಆ ರಾಜನು ಆ ಕರ್ಮದ ಸಿದ್ಧಿಗಾಗಿ ದಕ್ಷಿಣ ದಿಕ್ಕಿನಲ್ಲಿ ಇರುವ ಅವರ ಪುತ್ರರ ಬಳಿಗೆ ನಡೆದನು.॥13½॥

ಮೂಲಮ್ - 14

ವಾಸಿಷ್ಠಾ ದೀರ್ಘತಪಸಸ್ತಪೋ ಯತ್ರ ಹಿ ತೇಪಿರೇ ॥

ಮೂಲಮ್ - 15

ತ್ರಿಶಂಕುಸ್ತು ಮಹಾತೇಜಾಃ ಶತಂ ಪರಮಭಾಸ್ವರಮ್ ।
ವಸಿಷ್ಠ ಪುತ್ರಾನ್ ದದೃಶೇ ತಪ್ಯಮಾನಾನ್ ಮನಸ್ವಿನಃ ॥

ಅನುವಾದ

ವಸಿಷ್ಠರ ಪುತ್ರರು ಅಲ್ಲಿ ದೀರ್ಘ ಕಾಲದಿಂದ ತಪಸ್ಸಿನಲ್ಲಿ ಪ್ರವೃತ್ತರಾಗಿದ್ದರು. ಆ ಸ್ಥಾನಕ್ಕೆ ತಲುಪಿ ಮಹಾತೇಜಸ್ವಿ ತ್ರಿಶಂಕುವು-ಮನಸ್ಸನ್ನು ವಶಪಡಿಸಿಕೊಂಡ ಆ ನೂರು ಪರಮ ತೇಜಸ್ವಿ ವಸಿಷ್ಠ ಕುಮಾರರು ತಪಸ್ಸು ಮಾಡುತ್ತಿರುವುದನ್ನು ನೋಡಿದನು.॥14-15॥

ಮೂಲಮ್ - 16½

ಸೋಽಭಿಗಮ್ಯ ಮಹಾತ್ಮಾನಃ ಸರ್ವಾನೇವ ಗುರೋಃ ಸುತಾನ್ ।
ಅಭಿವಾದ್ಯಾನುಪೂರ್ವೇಣ ಹ್ರಿಯಾ ಕಿಂಚಿದವಾಙ್ಮುಖಃ ॥
ಅಬ್ರವೀತ್ ಸಮಹಾತ್ಮಾನಃ ಸರ್ವಾನೇವ ಕೃತಾಂಜಲಿಃ ।

ಅನುವಾದ

ಆ ಎಲ್ಲ ಮಹಾತ್ಮಾ ಗುರುಪುತ್ರರ ಬಳಿಗೆ ಹೋಗಿ ಅವನು ಕ್ರಮವಾಗಿ ಅವರಿಗೆ ನಮಸ್ಕರಿಸಿ, ಲಜ್ಜೆಯಿಂದ ಮುಖ ತಗ್ಗಿಸಿಕೊಂಡು ಕೈಮುಗಿದು ಆ ಮಹಾತ್ಮರೆಲ್ಲರಲ್ಲಿ ಇಂತೆಂದನು.॥16½॥

ಮೂಲಮ್ - 17

ಶರಣಂ ವಃ ಪ್ರಪನ್ನೋಽಹಂ ಶರಣ್ಯಾನ್ ಶರಣಂ ಗತಃ ॥

ಮೂಲಮ್ - 18

ಪ್ರತ್ಯಾಖ್ಯಾತೋಹಿ ಭದ್ರಂ ವೋ ವಸಿಷ್ಠೇನ ಮಹಾತ್ಮನಾ ।
ಯಷ್ಟುಕಾಮೋ ಮಹಾಯಜ್ಞಂ ತದನುಜ್ಞಾತುಮರ್ಹಥ ॥

ಅನುವಾದ

ಗುರುಪುತ್ರರೇ! ತಾವು ಶರಣಾಗತ ವತ್ಸಲರಾಗಿರುವಿರಿ. ನಾನು ನಿಮಗೆ ಶರಣು ಬಂದಿರುವೆನು. ನಿಮಗೆ ಮಂಗಳವಾಗಲಿ. ಮಹಾತ್ಮಾ ವಸಿಷ್ಠರು ನನ್ನ ಯಜ್ಞವನ್ನು ಮಾಡಿಸಲು ಒಪ್ಪಿಕೊಳ್ಳಲಿಲ್ಲ. ನಾನು ಒಂದು ಮಹಾನ್ ಯಜ್ಞವನ್ನು ಮಾಡಲು ಬಯಸುತ್ತೇನೆ. ತಾವು ಅದಕ್ಕೆ ಅಪ್ಪಣೆ ಕೊಡಬೇಕು.॥17-18॥

ಮೂಲಮ್ - 19

ಗುರುಪುತ್ರಾನಹಂ ಸರ್ವಾನ್ ನಮಸ್ಕೃತ್ಯ ಪ್ರಸಾದಯೇ ।
ಶಿರಸಾ ಪ್ರಣೋತ ಯಾಚೇ ಬ್ರಾಹ್ಮಣಾಂಸ್ತಪಸಿ ಸ್ಥಿತಾನ್ ॥

ಮೂಲಮ್ - 20

ತೇ ಮಾಂ ಭವಂತಃ ಸಿದ್ಧ್ಯರ್ಥಂ ಯಾಜಯಂತು ಸಮಾಹಿತಾಃ ।
ಸಶರೀರೋ ಯಥಾಹಂ ವೈ ದೇವಲೋಕಮವಾಪ್ನುಯಾಮ್ ॥

ಅನುವಾದ

ನಾನು ಸಮಸ್ತ ಗುರುಪುತ್ರರನ್ನು ನಮಸ್ಕರಿಸಿ ಪ್ರಸನ್ನಗೊಳಿಸಲು ಬಯಸುತ್ತಿರುವೆನು. ನೀವು ತಪಸ್ಸಿನಲ್ಲಿ ಮುಳುಗಿರುವ ಬ್ರಾಹ್ಮಣರಾಗಿರುವಿರಿ. ನಾನು ನಿಮ್ಮ ಚರಣಗಳಲ್ಲಿ ತಲೆಯನ್ನಿಟ್ಟು ಪ್ರಾರ್ಥಿಸುತ್ತಿರುವೆನು. ನೀವು ಏಕಾಗ್ರಚಿತ್ತರಾಗಿ ನನ್ನ ಅಭೀಷ್ಟ ಸಿದ್ಧಿಗಾಗಿ ನಾನು ಈ ಶರೀರದೊಂದಿಗೆ ದೇವಲೋಕಕ್ಕೆ ಹೋಗಬಹುದಾದ ಯಾವುದಾದರೂ ಯಜ್ಞವನ್ನು ನನ್ನಿಂದ ಮಾಡಿಸಬೇಕು.॥19-20॥

ಮೂಲಮ್ - 21

ಪ್ರತ್ಯಾಖ್ಯಾತೋ ವಸಿಷ್ಠೇನ ಗತಿಮನ್ಯಾಂ ತಪೋಧನಾಃ ।
ಗುರುಪುತ್ರಾನೃತೇ ಸರ್ವಾನ್ನಾಹಂ ಪಶ್ಯಾಮಿ ಕಾಂಚನ ॥

ಅನುವಾದ

ತಪೋಧನರೇ! ಮಹಾತ್ಮಾ ವಸಿಷ್ಠರು ಒಪ್ಪಿಕೊಳ್ಳದಿದ್ದಾಗ ಈಗ ನನಗೆ ಸಮಸ್ತ ಗುರುಪುತ್ರರಿಗೆ ಶರಣು ಹೋಗುವುದಲ್ಲದೆ ಬೇರೆ ಗತಿಯೇ ಕಾಣುವುದಿಲ್ಲ.॥21॥

ಮೂಲಮ್ - 22

ಇಕ್ಷ್ವಾಕೂಣಾಂ ಹಿ ಸರ್ವೇಷಾಂ ಪುರೋಧಾಃ ಪರಮಾಗತಿಃ ।
ತಸ್ಮಾದನಂತರಂ ಸರ್ವೇ ಭವಂತೋ ದೈವತಂ ಮಮ ॥

ಅನುವಾದ

ಸಮಸ್ತ ಇಕ್ವಾಕ್ಷು ವಂಶೀಯರಿಗೆ ಪುರೋಹಿತರಾದ ವಸಿಷ್ಠರೇ ಪರಮಗತಿ ಆಗಿದ್ದಾರೆ. ಅವರ ನಂತರ ನೀವೇ ನನಗೆ ಪರಮ ದೇವತೆಗಳಾಗಿದ್ದೀರಿ.॥22॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಐವತ್ತೇಳನೆಯ ಸರ್ಗ ಪೂರ್ಣವಾಯಿತು.॥57॥