वाचनम्
ಭಾಗಸೂಚನಾ
ತನ್ನ ನೂರು ಮಕ್ಕಳ ಮತ್ತು ಅಪಾರ ಸೈನ್ಯನಾಶವಾದಾಗ ವಿಶ್ವಾಮಿತ್ರನು ತಪಸ್ಸು ಮಾಡಿ ಮಹಾದೇವನಿಂದ ದಿವ್ಯಾಸ್ತ್ರಗಳನ್ನು ಪಡೆದು ಪುನಃ ವಸಿಷ್ಠರನ್ನು ಎದುರಿಸಿದುದು, ಬ್ರಹ್ಮದಂಡವನ್ನೆತ್ತಿಕೊಂಡು ವಸಿಷ್ಠರು ಅವನ ಮುಂದೆ ನಿಲ್ಲುವುದು
ಮೂಲಮ್ - 1
ತತಸ್ತಾನಾಕುಲಾನ್ ದೃಷ್ಟ್ವಾವಿಶ್ವಾಮಿತ್ರಾಸ್ತ್ರಮೋಹಿತಾನ್ ।
ವಸಿಷ್ಠಶ್ಚೋದಯಾಮಾಸ ಕಾಮಧುಕ್ ಸೃಜ ಯೋಗತಃ ॥
ಅನುವಾದ
ವಿಶ್ವಾಮಿತ್ರನ ಅಸ್ತ್ರಗಳಿಂದ ಘಾಸಿಗೊಂಡು ವ್ಯಾಕುಲರಾದುದನ್ನು ಕಂಡು ವಸಿಷ್ಠರು ಪುನಃ - ‘ಕಾಮಧೇನುವೇ! ಈಗ ಯೋಗಬಲದಿಂದ ಬೇರೆ ಸೈನಿಕರನ್ನು ಸೃಷ್ಟಿಮಾಡು’ ಎಂದು ಅಪ್ಪಣೆ ಮಾಡಿದರು.॥1॥
ಮೂಲಮ್ - 2
ತಸ್ಯಾ ಹುಂಕಾರತೋ ಜಾತಾಃ ಕಾಂಭೋಜಾ ರವಿಸನ್ನಿಭಾಃ ।
ಊಧಸಶ್ಚಾಥ ಸಂಭೂತಾಬರ್ಬರಾಃ ಶಸ್ತ್ರಪಾಣಯಃ ॥
ಅನುವಾದ
ಆಗ ಆ ಗೋವು ಪುನಃ ಹುಂಕಾರ ಮಾಡಿದಳು. ಆಕೆಯ ಹುಂಕಾರದಿಂದ ಸೂರ್ಯನಂತೆ ತೇಜಸ್ವೀ ಕಾಂಬೋಜರು ಉತ್ಪನ್ನರಾದರು. ಕೆಚ್ಚಲಿನಿಂದ ಶಸ್ತ್ರಧಾರೀ ಬರ್ಬರರು ಪ್ರಕಟರಾದರು.॥2॥
ಮೂಲಮ್ - 3
ಯೋನಿದೇಶಾಚ್ಚ ಯವನಾಃ ಶಕೃದ್ದೇಶಾಚ್ಛಕಾಃ ಸ್ಮೃತಾಃ ।
ರೋಮಕೂಪೇಷು ಮ್ಲೇಚ್ಛಾಶ್ಚ ಹಾರೀತಾಃ ಸಕಿರಾತಕಾಃ ॥
ಅನುವಾದ
ಯೋನಿಯಿಂದ ಯವನರು ಹಾಗೂ ಗುದದಿಂದ ಶಕರು ಉತ್ಪನ್ನರಾದರು. ರೋಮಕೂಪದಿಂದ ಮ್ಲೇಚ್ಚ, ಹಾರಿತ ಮತ್ತು ಕಿರಾತರು ಪ್ರಕಟರಾದರು.॥3॥
ಮೂಲಮ್ - 4
ತೈಸ್ತನ್ನಿಷೂದಿತಂ ಸರ್ವಂ ವಿಶ್ವಾಮಿತ್ರಸ್ಯ ತತ್ಕ್ಷಣಾತ್ ।
ಸಪದಾತಿಗಜಂ ಸಾಶ್ವಂ ಸರಥಂ ರಘುನಂದನ ॥
ಅನುವಾದ
ರಘನಂದನ! ಆ ಎಲ್ಲ ವೀರರು ಪದಾತಿ, ಗಜ, ರಥ ಸಹಿತ ವಿಶ್ವಾಮಿತ್ರನ ಎಲ್ಲ ಸೈನ್ಯವನ್ನು ತತ್ ಕ್ಷಣ ಸಂಹಾರ ಮಾಡಿಬಿಟ್ಟರು.॥4॥
ಮೂಲಮ್ - 5
ದೃಷ್ಟ್ವಾನಿಷೂದಿತಂ ಸೈನ್ಯಂ ವಸಿಷ್ಠೇನ ಮಹಾತ್ಮನಾ ।
ವಿಶ್ವಾಮಿತ್ರಸುತಾನಾಂ ತು ಶತಂ ನಾನಾ ವಿಧಾಯುಧಮ್ ॥
ಮೂಲಮ್ - 6
ಅಭ್ಯಧಾವತ್ ಸುಸಂಕ್ರುದ್ಧಂ ವಸಿಷ್ಠಂ ಜಪತಾಂ ವರಮ್ ।
ಹುಂಕಾರೇಣೈವ ತಾನ್ ಸರ್ವಾನ್ ನಿರ್ದದಾಹ ಮಹಾನೃಷಿಃ ॥
ಅನುವಾದ
ಮಹಾತ್ಮಾ ವಸಿಷ್ಠರಿಂದ ತಮ್ಮ ಸೈನ್ಯದ ಸಂಹಾರವನ್ನು ನೋಡಿ ವಿಶ್ವಾಮಿತ್ರನ ನೂರು ಪುತ್ರರು ಅತ್ಯಂತ ಕ್ರೋಧಗೊಂಡು, ನಾನಾ ಪ್ರಕಾರದ ಅಸ್ತ್ರ-ಶಸ್ತ್ರಗಳನ್ನೆತ್ತಿಕೊಂಡು, ಜಪ ಮಾಡುವವರಲ್ಲಿ ಶ್ರೇಷ್ಠರಾದ ವಸಿಷ್ಠರ ಮೇಲೆ ಎರಗಿದರು. ಆಗ ಆ ಮಹರ್ಷಿಯು ಹುಂಕಾರಮಾತ್ರದಿಂದ ಅವರೆಲ್ಲರನ್ನು ಸುಟ್ಟುಬಿಟ್ಟರು.॥5-6॥
ಮೂಲಮ್ - 7
ತೇ ಸಾಶ್ವರಥಪಾದಾತಾ ವಸಿಷ್ಠೇನ ಮಹಾತ್ಮನಾ ।
ಭಸ್ಮೀಕೃತಾ ಮುಹೂರ್ತೇನ ವಿಶ್ವಾಮಿತ್ರಸುತಾಸ್ತಥಾ ॥
ಅನುವಾದ
ಮಹಾತ್ಮಾ ವಸಿಷ್ಠರಿಂದ ವಿಶ್ವಾಮಿತ್ರನ ಎಲ್ಲ ಪುತ್ರರು ಕ್ಷಣಮಾತ್ರದಲ್ಲಿ ಕುದುರೆ, ರಥ, ಪದಾತಿ ಸಹಿತ ಸೈನಿಕರೆಲ್ಲ ಸುಟ್ಟು ಬೂದಿಯಾದರು.॥7॥
ಮೂಲಮ್ - 8
ದೃಷ್ಟ್ವಾ ವಿನಾಶಿತಾನ್ ಸರ್ವಾನ್ ಬಲಂ ಚ ಸುಮಹಾಯಶಾಃ ।
ಸವ್ರೀಡಂ ಚಿಂತಯಾವಿಷ್ಟೋ ವಿಶ್ವಾಮಿತ್ರೋಽಭವತ್ತದಾ ॥
ಅನುವಾದ
ತನ್ನ ಸಮಸ್ತ ಪುತ್ರರು ಹಾಗೂ ಎಲ್ಲ ಸೈನ್ಯವು ವಿನಾಶವಾದುದನ್ನು ಕಂಡು ಮಹಾ ಯಶಸ್ವೀ ವಿಶ್ವಾಮಿತ್ರನು ನಾಚಿಕೆಪಟ್ಟು ಚಿಂತಿತನಾದನು.॥8॥
ಮೂಲಮ್ - 9
ಸಮುದ್ರ ಇವ ನಿರ್ವೇಗೋ ಭಗ್ನದಂಷ್ಟ್ರ ಇವೋರಗಃ ।
ಉಪರಕ್ತ ಇವಾದಿತ್ಯಃ ಸದ್ಯೋ ನಿಷ್ಪ್ರಭತಾಂ ಗತಃ ॥
ಅನುವಾದ
ಸಮುದ್ರದಂತೆ ಅವನ ಎಲ್ಲ ವೇಗವು ಶಾಂತವಾಯಿತು. ಹಲ್ಲು ಕಿತ್ತ ಹಾವಿನಂತೆ, ರಾಹುಗ್ರಸ್ತ ಸೂರ್ಯನಂತೆ ಅವನು ತತ್ ಕ್ಷಣ ನಿಸ್ತೇಜನಾದನು.॥9॥
ಮೂಲಮ್ - 10
ಹತಪುತ್ರಬಲೋ ದೀನೋ ಲೂನಪಕ್ಷ ಇವ ದ್ವಿಜಃ ।
ಹತಸರ್ಪಬಲೋತ್ಸಾಹೋ ನಿರ್ವೇದಂ ಸಮಪದ್ಯತ ॥
ಅನುವಾದ
ಪುತ್ರರು ಹಾಗೂ ಸೈನ್ಯವು ಸತ್ತುಹೋದುದರಿಂದ ಅವನು ರೆಕ್ಕೆಕಿತ್ತ ಪಕ್ಷಿಯಂತೆ ದೀನನಾದನು. ಅವನ ಎಲ್ಲ ಬಲ ಮತ್ತು ಉತ್ಸಾಹ ನಾಶವಾಯಿತು. ಅವನು ಮನಸ್ಸಿನಲ್ಲಿ ಬಹಳ ಖಿನ್ನನಾದನು.॥10॥
ಮೂಲಮ್ - 11
ಸ ಪುತ್ರಮೇಕಂ ರಾಜ್ಯಾಯ ಪಾಲಯೇತಿ ನಿಯುಜ್ಯ ಚ ।
ಪೃಥಿವೀಂ ಕ್ಷತ್ರಧರ್ಮೇಣ ವನಮೇವಾಭ್ಯಪದ್ಯತ ॥
ಅನುವಾದ
ಉಳಿದಿರುವ ಅವನ ಒಬ್ಬನೇ ಮಗನನ್ನು ರಾಜಪಟ್ಟ ಕಟ್ಟಿ, ರಾಜ್ಯದ ರಕ್ಷಣೆಗಾಗಿ ನಿಯುಕ್ತಗೊಳಿಸಿದನು ಹಾಗೂ ಕ್ಷತ್ರಿಯ ಧರ್ಮಕ್ಕನುಸಾರ ರಾಜ್ಯದ ಪಾಲನೆಯ ಆಜ್ಞೆ ಇತ್ತು ವಿಶ್ವಾಮಿತ್ರನು ವನಕ್ಕೆ ತೆರಳಿದನು.॥11॥
ಮೂಲಮ್ - 12
ಸ ಗತ್ವಾ ಹಿಮವತ್ಪಾರ್ಶ್ವೆ ಕಿನ್ನರೋರಗಸೇವಿತಮ್ ।
ಮಹಾದೇವಪ್ರಸಾದಾರ್ಥಂ ತಪಸ್ತೇಪೇ ಮಹಾತಪಾಃ ॥
ಅನುವಾದ
ಕಿನ್ನರರಿಂದ ಮತ್ತು ನಾಗಗಳಿಂದ ಸೇವಿತವಾದ ಹಿಮಾಲಯದ ಪಾರ್ಶ್ವ ಭಾಗಕ್ಕೆ ಹೋಗಿ ಮಹಾದೇವನನ್ನು ಒಲಿಸಿಕೊಳ್ಳಲು ತಪಸ್ಸನ್ನು ಆಶ್ರಯಿಸಿ, ತಪಸ್ಸಿನಲ್ಲಿ ಮುಳುಗಿದನು.॥12॥
ಮೂಲಮ್ - 13
ಕೇನಚಿತ್ತ್ವಥ ಕಾಲೇನ ದೇವೇಶೋ ವೃಷಭಧ್ವಜಃ ।
ದರ್ಶಯಾಮಾಸ ವರದೋ ವಿಶ್ವಾಮಿತ್ರಂ ಮಹಾಮುನಿಮ್ ॥
ಅನುವಾದ
ಕೆಲವು ಸಮಯದ ಬಳಿಕ ವರದಾಯಕ ದೇವೇಶ್ವರ ಭಗವಾನ್ ವೃಷಭಧ್ವಜನು ಮಹಾಮುನಿ ವಿಶ್ವಾಮಿತ್ರರಿಗೆ ದರ್ಶನಕೊಟ್ಟು ಇಂತೆಂದನು.॥13॥
ಮೂಲಮ್ - 14
ಕಿಮರ್ಥಂ ತಪ್ಯಸೇ ರಾಜನ್ ಬ್ರೂಹಿಯತ್ತೇ ವಿವಕ್ಷಿತಮ್ ।
ವರದೋಽಸ್ಮಿ ವರೋ ಯಸ್ತೇ ಕಾಂಕ್ಷಿತಃ ಸೋಽಭಿಧೀಯತಾಮ್ ॥
ಅನುವಾದ
ರಾಜನೇ! ಏತಕ್ಕಾಗಿ ತಪಸ್ಸನ್ನು ಮಾಡುತ್ತಿರುವೆ? ಏನು ಬೇಕು ಹೇಳು. ನಾನು ನಿನಗೆ ವರ ಕೊಡಲೆಂದೇ ಬಂದಿರುವೆನು. ನಿನಗೆ ಅಭೀಷ್ಟವಾದ ವರವನ್ನು ಕೇಳು.॥14॥
ಮೂಲಮ್ - 15
ಏವಮುಕ್ತಸ್ತು ದೇವೇನ ವಿಶ್ವಾಮಿತ್ರೋ ಮಹಾತಪಾಃ ।
ಪ್ರಣಿಪತ್ಯ ಮಹಾದೇವಂ ವಿಶ್ವಾಮಿತ್ರೋಽಬ್ರವೀದಿದಮ್ ॥
ಅನುವಾದ
ಮಹಾದೇವನು ಹೀಗೆ ಹೇಳಿದಾಗ ಮಹಾ ತಪಸ್ವೀ ವಿಶ್ವಾಮಿತ್ರರು ಅವನಿಗೆ ಸಾಷ್ಟಾಂಗ ವಂದಿಸಿ ಇಂತೆಂದರು .॥15॥
ಮೂಲಮ್ - 16
ಯದಿ ತುಷ್ಟೋ ಮಹಾದೇವ ಧನುರ್ವೇದೋಮಮಾನಘ ।
ಸಾಂಗೋಪಾಂಗೋಪನಿಷದಃ ಸರಹಸ್ಯಃ ಪ್ರದೀಯತಾಮ್ ॥
ಅನುವಾದ
ಪುಣ್ಯಾತ್ಮನಾದ ಮಹಾದೇವನೇ! ನೀನು ಸಂತುಷ್ಟನಾಗಿದ್ದರೆ, ಅಂಗ, ಉಪಾಂಗ, ಉಪನಿಷತ್ತು ಮತ್ತು ರಹಸ್ಯಗಳೊಂದಿಗೆ ಧನುರ್ವೇದವನ್ನು ನನಗೆ ಕರುಣಿಸು.॥16॥
ಮೂಲಮ್ - 17½
ಯಾನಿ ದೇವೇಷು ಚಾಸ್ತ್ರಾಣಿ ದಾನವೇಷು ಮಹರ್ಷಿಷು ।
ಗಂಧರ್ವಯಕ್ಷರಕ್ಷಃಸು ಪ್ರತಿಭಾಂತು ಮಮಾನಘ ॥
ತವ ಪ್ರಸಾದಾದ್ಭವತು ದೇವದೇವ ಮಮೇಪ್ಸಿತಮ್ ।
ಅನುವಾದ
ದೇವದೇವ ಮಹಾದೇವ! ದೇವತೆಗಳಲ್ಲಿ, ದಾನವರಲ್ಲಿ, ಮಹರ್ಷಿಗಳಲ್ಲಿ, ಗಂಧರ್ವ, ಯಕ್ಷ, ರಾಕ್ಷಸರ ಬಳಿ ಯಾವ ಯಾವ ಅಸ್ತ್ರಗಳಿವೆಯೋ, ಅವೆಲ್ಲವೂ ನಿನ್ನ ಕೃಪೆಯಿಂದ ನನ್ನ ಹೃದಯದಲ್ಲಿ ಸ್ಫುರಿಸಲಿ, ಇದೇ ನನ್ನ ಮನೋರಥವಾಗಿದ್ದು, ನನಗೆ ಪ್ರಾಪ್ತವಾಗಲಿ.॥17½॥
(ಶ್ಲೋಕ - 18 )
ಮೂಲಮ್
ಏವಮಸ್ತ್ವಿತಿ ದೇವೇಶೋ ವಾಕ್ಯಮುಕ್ತ್ವಾಗತಸ್ತದಾ ॥
ಮೂಲಮ್ - 19
ಪ್ರಾಪ್ಯ ಚಾಸ್ತ್ರಾಣಿ ದೇವೇಶಾದ್ವಿಶ್ವಾಮಿತ್ರೋ ಮಹಾಬಲಃ ।
ದರ್ಪೇಣ ಮಹತಾ ಯುಕ್ತೋ ದರ್ಪಪೂರ್ಣೋಽಭವತ್ತದಾ ॥
ಅನುವಾದ
ಆಗ ‘ತಥಾಸ್ತು’ ಎಂದು ಹೇಳಿ ದೇವೇಶ್ವರ ಭಗವಾನ್ ಶಂಕರನು ಹೊರಟು ಹೋದನು. ದೇವೇಶ್ವರ ಮಹಾದೇವನಿಂದ ಅಸ್ತ್ರಗಳನ್ನು ಪಡೆದು ಮಹಾಬಲಿ ವಿಶ್ವಾಮಿತ್ರನು ಭಾರಿ ಗರ್ವಿತನಾಗಿ ಅಭಿಮಾನದಿಂದ ತುಂಬಿಹೋದನು.॥18-19॥
ಮೂಲಮ್ - 20
ವಿವರ್ಧಮಾನೋ ವೀರ್ಯೇಣ ಸಮುದ್ರ ಇವ ಪರ್ವಣಿ ।
ಹತಂಮೇನೆ ತದಾ ರಾಮ ವಸಿಷ್ಠಮೃಷಿಸತ್ತಮಮ್ ॥
ಅನುವಾದ
ಪೌರ್ಣಿಮೆಯ ಚಂದ್ರನು ಸಮುದ್ರವನ್ನು ಉಕ್ಕಿಸುವಂತೆ ಅವನು ಪರಾಕ್ರಮದಿಂದ ತನ್ನನ್ನು ಸರ್ವಶ್ರೇಷ್ಠನೆಂದು ತಿಳಿಯ ತೊಡಗಿದನು. ಶ್ರೀರಾಮಾ! ಮುನಿಶ್ರೇಷ್ಠ ವಸಿಷ್ಠರು ಆಗ ಸತ್ತರೆಂದೇ ತಿಳಿದನು.॥20॥
ಮೂಲಮ್ - 21
ತತೋ ಗತ್ವಾಽಽಶ್ರಮಪದಂ ಮುಮೋಚಾಸ್ತ್ರಾಣಿ ಪಾರ್ಥಿವಃ ।
ಯೈಸ್ತತ್ ತಪೋವನಂ ನಾಮ ನಿರ್ದಗ್ಧಂ ಚಾಸ್ತ್ರತೇಜಸಾ ॥
ಅನುವಾದ
ಮತ್ತೆ ಆ ವಿಶ್ವಪತಿ ವಿಶ್ವಾಮಿತ್ರನು ವಸಿಷ್ಠರ ಆಶ್ರಮಕ್ಕೆ ಹೋಗಿ ಬಗೆ ಬಗೆಯ ಅಸ್ತ್ರಗಳನ್ನು ಪ್ರಯೋಗಿಸತೊಡಗಿದನು. ಅವುಗಳ ತೇಜದಿಂದ ಆ ತಪೋವನವೆಲ್ಲ ಸುಡಲುತೊಡಗಿತು.॥21॥
ಮೂಲಮ್ - 22
ಉದೀರ್ಯಮಾಣಮಸ್ತ್ರಂ ತದ್ವಿಶ್ವಾಮಿತ್ರಸ್ಯ ಧೀಮತಃ ।
ದೃಷ್ಟ್ವಾ ವಿಪ್ರದ್ರುತಾ ಭೀತಾ ಮುನಯಃ ಶತಶೋ ದಿಶಃ ॥
ಅನುವಾದ
ಧೀಮಂತ ವಿಶ್ವಾಮಿತ್ರನ ಆ ಹೆಚ್ಚುತ್ತಿರುವ ಅಸ್ತ್ರಗಳ ತೇಜವನ್ನು ನೋಡಿ ಅಲ್ಲಿ ನೆಲೆಸಿದ ನೂರಾರು ಮುನಿಗಳು ಭಯಗೊಂಡು ಎಲ್ಲ ದಿಕ್ಕುಗಳಿಗೆ ಓಡಿ ಹೋದರು.॥22॥
ಮೂಲಮ್ - 23
ವಸಿಷ್ಠಸ್ಯ ಚ ಯೇ ಶಿಷ್ಯಾ ಯೇ ಚ ವೈ ಮೃಗಪಕ್ಷಿಣಃ ।
ವಿದ್ರವಂತಿ ಭಯಾದ್ಭೀತಾ ನಾನಾದಿಗ್ಭ್ಯಃ ಸಹಸ್ರಶಃ ॥
ಅನುವಾದ
ವಸಿಷ್ಠರ ಶಿಷ್ಯರು, ಅಲ್ಲಿಯ ಪಶು-ಪಕ್ಷಿಗಳು, ಸಾವಿರಾರು ಪ್ರಾಣಿಗಳು ಭಯಭೀತರಾಗಿ ಕಂಡ ಕಂಡ ದಿಕ್ಕುಗಳಿಗೆ ಪಲಾಯನ ಮಾಡಿದರು.॥23॥
ಮೂಲಮ್ - 24
ವಸಿಷ್ಠಸ್ಯಾಶ್ರಮಪದಂ ಶೂನ್ಯಮಾಸೀನ್ಮಹಾತ್ಮನಃ ।
ಮುಹೂರ್ತಮಿವ ನಿಃಶಬ್ದಮಾಸೀದೀರಿಣಸಂನಿಭಮ್ ॥
ಅನುವಾದ
ಮಹಾತ್ಮಾ ವಸಿಷ್ಠರ ಆ ಆಶ್ರಮವು ಶೂನ್ಯವಾಯಿತು. ಮುಹೂರ್ತ ಮಾತ್ರದಲ್ಲಿ ಬಂಜರು ಭೂಮಿಯಂತಾಗಿ, ನಿಶ್ಶಬ್ದವಾಯಿತು.॥24॥
ಮೂಲಮ್ - 25
ವದತೋ ವೈ ವಸಿಷ್ಠಸ್ಯ ಮಾ ಭೈರಿತಿ ಮುಹುರ್ಮುಹುಃ ।
ನಾಶಯಾಮ್ಯದ್ಯ ಗಾಧೇಯಂ ನೀಹಾರಮಿವ ಭಾಸ್ಕರಃ ॥
ಅನುವಾದ
ವಸಿಷ್ಠರು ಪದೇ ಪದೇ ಹೇಳತೊಡಗಿದರು - ಹೆದರಬೇಡಿ. ಸೂರ್ಯನು ಮಂಜನ್ನು ಇಲ್ಲವಾಗಿಸುವಂತೆ, ಈಗಲೇ ಗಾಧಿ ಪುತ್ರನನ್ನು ನಾಶಮಾಡಿಬಿಡುವೆನು.॥25॥
ಮೂಲಮ್ - 26
ಏವಮುಕ್ತ್ವಾ ಮಹಾತೇಜಾ ವಸಿಷ್ಠೋ ಜಪತಾಂ ವರಃ ।
ವಿಶ್ವಾಮಿತ್ರಂ ತದಾ ವಾಕ್ಯಂ ಸರೋಷಮಿದಮಬ್ರವೀತ್ ॥
ಅನುವಾದ
ಜಪ ಮಾಡುವವರಲ್ಲಿ ಶ್ರೇಷ್ಠರಾದ ಮಹಾತಪಸ್ವೀ ವಸಿಷ್ಠರು ಹೀಗೆ ಹೇಳಿ, ವಿಶ್ವಾಮಿತ್ರನಲ್ಲಿ ರೋಷದಿಂದ ಇಂತು ನುಡಿದರು.॥26॥
ಮೂಲಮ್ - 27
ಆಶ್ರಮಂ ಚಿರಸಂವೃದ್ಧಂ ಯದ್ವಿನಾಶಿತವಾನಸಿ ।
ದುರಾಚಾರೋಹಿ ಯನ್ಮೂಢಸ್ತಸ್ಮಾತ್ತ್ವಂ ನ ಭವಿಷ್ಯಸಿ ॥
ಅನುವಾದ
ಎಲವೋ! ದೀರ್ಘ ಕಾಲದಿಂದ ಸಾಕಿದ, ನಳನಳಿಸುತ್ತಿರುವ ಈ ಆಶ್ರಮವನ್ನು ನಾಶಮಾಡಿದೆ, ಹಾಳುಗೆಡಹಿದೆ, ಆದ್ದರಿಂದ ನೀನು ದುರಾಚಾರೀ, ವಿವೇಕಶೂನ್ಯನಾಗಿರುವೆ. ಈ ಪಾಪದಿಂದಾಗಿ ನೀನು ಕ್ಷೇಮವಾಗಿ ಇರಲಾರೆ.॥27॥
ಮೂಲಮ್ - 28
ಇತ್ಯುಕ್ತ್ವಾ ಪರಮಕ್ರುದ್ಧೋ ದಂಡಮುದ್ಯಮ್ಯ ಸತ್ವರಃ ।
ವಿಧೂಮ ಇವ ಕಾಲಾಗ್ನಿರ್ಯಮದಂಡಮಿವಾಪರಮ್ ॥
ಅನುವಾದ
ಹೀಗೆ ಹೇಳಿ ಅವರು ಅತ್ಯಂತ ಕೃದ್ಧರಾಗಿ ಧೂಮರಹಿತ ಕಾಲಾಗ್ನಿಯಂತೆ ಉರಿದೆದ್ದು, ಇನ್ನೊಂದು ಯಮದಂಡದಂತೆ ಭಯಂಕರ ಯೋಗದಂಡವನ್ನು ಕೈಯಲ್ಲೆತ್ತಿಕೊಂಡು ಅವನನ್ನು ಎದುರಿಸಲು ಸಿದ್ಧವಾದರು.॥28॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಐವತ್ತೈದನೆಯ ಸರ್ಗ ಪೂರ್ಣವಾಯಿತು. ॥55॥