०५४ शबलापहरणम्

वाचनम्
ಭಾಗಸೂಚನಾ

ಶಬಲೆಯನ್ನು ಬಲವಂತವಾಗಿ ಸೆಳೆದುಕೊಂಡು ಹೋಗಲು ವಿಶ್ವಾಮಿತ್ರನ ಪ್ರಯತ್ನ, ವಸಿಷ್ಠರಲ್ಲಿ ಶಬಲೆಯ ಪ್ರಲಾಪ, ಅವರ ಆಜ್ಞೆಯಂತೆ ಶಬಲೆಯಿಂದ ಶಕ-ಯವನ-ಪಹ್ಲವಾದಿಗಳ ಸೃಷ್ಟಿ ಮತ್ತು ವಿಶ್ವಾಮಿತ್ರನ ಸೈನ್ಯದ ಸಂಹಾರ

ಮೂಲಮ್ - 1

ಕಾಮಧೇನುಂ ವಸಿಷ್ಠೋಽಪಿ ಯದಾ ನ ತ್ಯಜತೇ ಮುನಿಃ ।
ತದಾಸ್ಯ ಶಬಲಾಂ ರಾಮ ವಿಶ್ವಾಮಿತ್ರೋಽನ್ವಕರ್ಷತ ॥

ಅನುವಾದ

ಶ್ರೀರಾಮಾ! ವಸಿಷ್ಠರು ಯಾವುದೇ ರೀತಿಯಲ್ಲೂ ಆ ಕಾಮಧೇನು ಗೋವನ್ನು ಕೊಡಲು ಒಪ್ಪದಿದ್ದಾಗ ವಿಶ್ವಾಮಿತ್ರನು ಆ ವರ್ಣಮಯ ಶಬಲಾಧೇನುವನ್ನು ಬಲವಂತವಾಗಿ ಸೆಳೆದುಕೊಂಡು ಹೊರಟನು.॥1॥

ಮೂಲಮ್ - 2

ನೀಯಮಾನಾ ತು ಶಬಲಾ ರಾಮ ರಾಜ್ಞಾಮಹಾತ್ಮನಾ ।
ದುಃಖಿತಾ ಚಿಂತಯಾಮಾಸ ರುದಂತೀ ಶೋಕಕರ್ಶಿತಾ ॥

ಅನುವಾದ

ರಘುನಂದನ! ಮಹಾತ್ಮಾ ವಿಶ್ವಾಮಿತ್ರರು ಹೀಗೆ ಗೋವನ್ನು ಸೆಳೆದೊಯ್ಯುವಾಗ ಅದು ಶೋಕಾಕುಲವಾಗಿ ಮನಸ್ಸಿನಲ್ಲೇ ಅಳುತ್ತಾ, ಅತ್ಯಂತ ದುಃಖಿತಳಾಗಿ ವಿಚಾರಮಾಡತೊಡಗಿತು.॥2॥

ಮೂಲಮ್ - 3

ಪರಿತ್ಯಕ್ತಾ ವಸಿಷ್ಠೇನ ಕಿಮಹಂ ಸುಮಹಾತ್ಮನಾ ।
ಯಾಹಂ ರಾಜಭೃತೈರ್ದೀನಾ ಹ್ರೀಯೇಯಂ ಭೃಶದುಃಖಿತಾ ॥

ಅನುವಾದ

ಅಯ್ಯೋ! ಮಹಾತ್ಮ ವಸಿಷ್ಠರು ನನ್ನನ್ನು ತ್ಯಜಿಸಿಬಿಟ್ಟರೇ? ಈ ರಾಜನ ಭತ್ಯರು ದೀನ ದುಃಖಿತೆಯಾದ ನನ್ನನ್ನು ಈ ಪ್ರಕಾರ ಸೆಳೆದುಕೊಂಡು ಹೋಗುತ್ತಿದ್ದಾರಲ್ಲ.॥3॥

ಮೂಲಮ್ - 4

ಕಿಂ ಮಯಾಪಕೃತಂ ತಸ್ಯ ಮಹರ್ಷೇರ್ಭಾವಿತಾತ್ಮನಃ ।
ಯನ್ಮಾಮನಾಗಸಂ ದೃಷ್ಟ್ವಾಭಕ್ತಾಂ ತ್ಯಜತಿ ಧಾರ್ಮಿಕಃ ॥

ಅನುವಾದ

ಪವಿತ್ರ ಅಂತಃಕರಣವುಳ್ಳ ಆ ಮಹರ್ಷಿಗೆ ನಾನು ಯಾವ ಅಪರಾಧವನ್ನು ಮಾಡಿದೆ. ಆ ಧರ್ಮಾತ್ಮಾ ಮುನಿಗಳು ನನ್ನನ್ನು ನಿರಪರಾಧಿ ಹಾಗೂ ತನ್ನ ಭಕ್ತಳೆಂದು ತಿಳಿದಿದ್ದರೂ ತ್ಯಜಿಸುತ್ತಿದ್ದಾರಲ್ಲ.॥4॥

ಮೂಲಮ್ - 5½

ಇತಿ ಸಂಚಿಂತಯಿತ್ವಾ ತು ನಿಃಶ್ವಸ್ಯಪುನಃ ಪುನಃ ।
ಜಗಾಮ ವೇಗೇನ ತದಾ ವಸಿಷ್ಠಂ ಪರಮೌಜಸಮ್ ॥
ನಿರ್ಧೂಯ ತಾಂ ಸ್ತದಾ ಭತ್ಯಾನ್ ಶತಶಃ ಶತ್ರುಸೂದನ ।

ಅನುವಾದ

ಶತ್ರುಸೂದನ! ಹೀಗೆ ಯೋಚಿಸುತ್ತಾ ಆ ಗೋವು ಪದೇ ಪದೇ ನಿಟ್ಟುಸಿರುಬಿಡತೊಡಗಿತು. ರಾಜನ ನೂರಾರು ಸೇವಕರನ್ನು ಕೊಡಹಿ ಮಹಾತೇಜಸ್ವಿ ವಸಿಷ್ಠರ ಬಳಿಗೆ ವೇಗವಾಗಿ ಓಡುತ್ತಾ ಬಂದಳು.॥5½॥

ಮೂಲಮ್ - 6

ಜಗಾಮನಿಲವೇಗೇನ ಪಾದಮೂಲಂ ಮಹಾತ್ಮನಃ ॥

ಮೂಲಮ್ - 7

ಶಬಲಾ ಸಾ ರುದಂತೀ ಚ ಕ್ರೋಶಂತೀ ಚೇದಮಬ್ರವೀತ್ ।
ವಸಿಷ್ಠಸ್ಯಾಗ್ರತಃ ಸ್ಥಿತ್ವಾ ರುದಂತೀ ಮೇಘನಿಃಸ್ವನಾ ॥

ಅನುವಾದ

ಆ ಶಬಲಾ ಗೋವು ವಾಯುವಿನಂತೆ ವೇಗವಾಗಿ ಆ ಮಹಾತ್ಮರ ಚರಣಗಳ ಬಳಿಗೆ ಬಂದು,ಅವರ ಮುಂದೆ ನಿಂತು, ಮೇಘಗಂಭೀರ ಸ್ವರದಿಂದ ಅಳುತ್ತಾ ಕಿರುಚುತ್ತಾ ಅವರಲ್ಲಿ ಈ ಪ್ರಕಾರ ನುಡಿದಳು.॥6-7॥

ಮೂಲಮ್ - 8

ಭಗವನ್ ಕಿಂ ಪರಿತ್ಯಕ್ತಾ ತ್ವಯಾಹಂ ಬ್ರಹ್ಮಣಃ ಸುತ ।
ಯಸ್ಮಾದ್ರಾಜಭಟಾ ಮಾಂ ಹಿ ನಯಂತೇ ತ್ವತ್ಸಕಾಶತಃ ॥

ಅನುವಾದ

ಭಗವನ್! ಬ್ರಹ್ಮರ್ಷಿಯೇ! ನೀವು ನನ್ನನ್ನು ತ್ಯಜಿಸಿಬಿಟ್ಟರೇನು? ಈ ರಾಜನ ಸೈನಿಕರು ನನ್ನನ್ನು ನಿಮ್ಮಿಂದ ದೂರಕ್ಕೆ ಕೊಂಡುಹೋಗುತ್ತಿದ್ದಾರಲ್ಲ.॥8॥

ಮೂಲಮ್ - 9

ಏವಮುಕ್ತಸ್ತು ಬ್ರಹ್ಮರ್ಷಿರಿದಂ ವಚನಮಬ್ರವೀತ್ ।
ಶೋಕಸಂತಪ್ತಹೃದಯಾಂ ಸ್ವಸಾರಮಿವ ದುಃಖಿತಾಮ್ ॥

ಅನುವಾದ

ಶಬಲೆಯು ಹೀಗೆ ಹೇಳಿದಾಗ ಬ್ರಹ್ಮರ್ಷಿ ವಸಿಷ್ಠರು ಶೋಕ ಸಂತಪ್ತ ಹೃದಯವುಳ್ಳ ದುಃಖಿತೆಯಾದ ತಂಗಿಯಂತಿದ್ದ ಆ ಗೋವಿನಲ್ಲಿ ಹೀಗೆ ಹೇಳಿದರು.॥9॥

ಮೂಲಮ್ - 10

ನ ತ್ವಾಂ ತ್ಯಜಾಮಿ ಶಬಲೇ ನಾಪಿ ಮೇಽಪಕೃತಂ ತ್ವಯಾ ।
ಏಷ ತ್ವಾಂ ನಯತೇ ರಾಜಾ ಬಲಾನ್ಮತ್ತೋ ಮಹಾಬಲಃ ॥

ಅನುವಾದ

ಶಬಲೇ! ನಾನು ನಿನ್ನನ್ನು ತ್ಯಜಿಸುತ್ತಿಲ್ಲ. ನೀನು ನನಗೆ ಯಾವುದೇ ಅಪರಾಧ ಮಾಡಲಿಲ್ಲ. ಈ ಮಹಾಬಲಿರಾಜನು ಬಲೋನ್ಮತ್ತನಾಗಿ ನಿನ್ನನ್ನು ನನ್ನಿಂದ ಕಸಿದುಕೊಂಡು ಹೋಗುತ್ತಿದ್ದಾನೆ.॥10॥

ಮೂಲಮ್ - 11

ನಹಿ ತುಲ್ಯಂ ಬಲಂ ಮಹ್ಯಂ ರಾಜಾ ತ್ವದ್ಯ ವಿಶೇಷತಃ ।
ಬಲೀ ರಾಜಾ ಕ್ಷತ್ರಿಯಶ್ಚ ಪೃಥಿವ್ಯಾಃ ಪತಿರೇವ ಚ ॥

ಅನುವಾದ

ಇವನಂತೆ ನನ್ನಲ್ಲಿ ಬಲವಿಲ್ಲ. ವಿಶೇಷವಾಗಿ ಈಗ ಇವನು ರಾಜಪದವಿಯಲ್ಲಿ ಪ್ರತಿಷ್ಠಿತನಾಗಿದ್ದಾನೆ. ರಾಜ, ಕ್ಷತ್ರಿಯ ಹಾಗೂ ಈ ಪೃಥ್ವಿಯ ಪಾಲಕ ಆದ್ದರಿಂದ ಈತನು ಬಲವಂತಪಡಿಸುತ್ತಿದ್ದಾನೆ.॥11॥

ಮೂಲಮ್ - 12

ಇಯಮಕ್ಷೌಹಿಣೀ ಪೂರ್ಣಾ ಸವಾಜಿರಥಾಕುಲಾ ।
ಹಸ್ತಿಧ್ವಜಸಮಾಕೀರ್ಣಾ ತೇನಾಸೌ ಬಲವತ್ತರಃ ॥

ಅನುವಾದ

ಇವನ ಬಳಿ ಆನೆ, ಕುದುರೆ, ರಥಗಳಿಂದ ಕೂಡಿದ ಈ ಅಕ್ಷೌಹಿಣಿ ಸೈನ್ಯವಿದೆ. ಆನೆಗಳ ಬೆನ್ನಮೇಲೆ ಇರುವ ಅಂಬಾರಿಗಳಲ್ಲಿ ಧ್ವಜಗಳು ಹಾರಾಡುತ್ತಿವೆ. ಇದರಿಂದಲೂ ಇವನು ನನ್ನಿಂದ ಪ್ರಬಲನಾಗಿದ್ದಾನೆ.॥12॥

ಮೂಲಮ್ - 13

ಏವಮುಕ್ತಾ ವಸಿಷ್ಠೇನ ಪ್ರತ್ಯುವಾಚ ವಿನೀತವತ್ ।
ವಚನಂ ವಚನಜ್ಞಾ ಸಾ ಬ್ರಹ್ಮರ್ಷಿಮತುಲಪ್ರಭಮ್ ॥

ಅನುವಾದ

ವಸಿಷ್ಠರು ಈ ಮಾತನ್ನು ಹೇಳಿದಾಗ ಮಾತಿನ ಮರ್ಮವನ್ನರಿತ ಆ ಕಾಮಧೇನುವು ಆ ಅನುಪಮ ತೇಜಸ್ವೀ ಬ್ರಹ್ಮರ್ಷಿಯಲ್ಲಿ ವಿನಯವಾಗಿ ಇಂತೆಂದಳು.॥13॥

ಮೂಲಮ್ - 14

ನ ಬಲಂ ಕ್ಷತ್ರಿಯಸ್ಯಾಹುರ್ಬ್ರಾಹ್ಮಣಾ ಬಲವತ್ತರಾಃ ।
ಬ್ರಹ್ಮನ್ ಬ್ರಹ್ಮಬಲಂ ದಿವ್ಯಂ ಕ್ಷಾತ್ರಾಚ್ಚ ಬಲವತ್ತರಮ್ ॥

ಅನುವಾದ

ಬ್ರಹ್ಮನ್! ಕ್ಷತ್ರಿಯರ ಬಲ ಏನೂ ಬಲವಲ್ಲ. ಬ್ರಾಹ್ಮಣರೇ ಕ್ಷತ್ರಿಯರಿಗಿಂತ ಹೆಚ್ಚು ಬಲವಂತರಾಗಿರುತ್ತಾರೆ. ಬ್ರಾಹ್ಮಣರ ಬಲ ದಿವ್ಯವಾಗಿದೆ. ಅದು ಕ್ಷತ್ರಿಯ ಬಲಕ್ಕಿಂತ ಹೆಚ್ಚು ಪ್ರಬಲವಾಗಿರುತ್ತದೆ.॥14॥

ಮೂಲಮ್ - 15

ಅಪ್ರಮೇಯಂ ಬಲಂ ತುಭ್ಯಂ ನ ತ್ವಯಾ ಬಲವತ್ತರಃ ।
ವಿಶ್ವಾಮಿತ್ರೋ ಮಹಾವೀರ್ಯಸ್ತೇಜಸ್ತವ ದುರಾಸದಮ್ ॥

ಅನುವಾದ

ನಿಮ್ಮಲ್ಲಿ ಅಪ್ರಮೇಯ ಬಲವಿದೆ. ಮಹಾಪರಾಕ್ರಮಿ ವಿಶ್ವಾಮಿತ್ರನು ನಿಮಗಿಂತ ಹೆಚ್ಚು ಬಲವಂತನಲ್ಲ. ನಿಮ್ಮ ತೇಜ ದುರ್ಧರ್ಷವಾಗಿದೆ.॥15॥

ಮೂಲಮ್ - 16

ನಿಯುಂಕ್ಷ್ವಮಾಂ ಮಹಾತೇಜಸ್ತ್ವಂ ಬ್ರಹ್ಮಬಲ ಸಂಭೃತಾಮ್ ।
ತಸ್ಯ ದರ್ಪಂ ಬಲಂ ಯತ್ನಂ ನಾಶಯಾಮಿ ದುರಾತ್ಮನಃ ॥

ಅನುವಾದ

ಮಹಾತೇಜಸ್ವೀ ಮಹರ್ಷಿಯೇ! ನಾನು ನಿಮ್ಮ ಬ್ರಹ್ಮಬಲದಿಂದ ಪರಿಪುಷ್ಟನಾಗಿರುವೆನು. ಆದ್ದರಿಂದ ನೀವು ಕೇವಲ ನನಗೆ ಅಪ್ಪಣೆ ಮಾಡಿರಿ. ನಾನು ಈ ದುರಾತ್ಮಾ ರಾಜನ ಬಲ, ಪ್ರಯತ್ನ, ಅಭಿಮಾನವನ್ನು ಈಗಲೇ ನುಚ್ಚು ನೂರಾಗಿಸುವೆನು.॥16॥

ಮೂಲಮ್ - 17

ಇತ್ಯುಕ್ತಸ್ತು ತಯಾ ರಾಮ ವಸಿಷ್ಠಸ್ತು ಮಹಾಯಶಾಃ ।
ಸೃಜಸ್ವೇತಿತದೋವಾಚ ಬಲಂ ಪರಬಲಾರ್ದನಮ್ ॥

ಅನುವಾದ

ಶ್ರೀರಾಮಾ! ಕಾಮಧೇನುವು ಹೀಗೆ ಹೇಳಿದಾಗ ಮಹಾಯಶಸ್ವೀ ವಸಿಷ್ಠರು ಹೇಳಿದರು - ಶತ್ರು ಸೈನ್ಯವನ್ನು ನಾಶಮಾಡುವಂತೆ ಸೈನಿಕರನ್ನು ಸೃಷ್ಟಿ ಮಾಡು.॥17॥

ಮೂಲಮ್ - 18

ತಸ್ಯ ತದ್ವಚನಂ ಶ್ರುತ್ವಾ ಸುರಭಿಃ ಸಾಸೃಜತ್ತದಾ ।
ತಸ್ಯಾ ಹುಂಭಾರವೋತ್ಸೃಷ್ಟಾಃ ಪಹ್ಲವಾಃಶತಶೋನೃಪ ॥

ಅನುವಾದ

ರಾಜಕುಮಾರ! ಅವರ ಈ ಅಪ್ಪಣೆ ಪಡೆದ ಆ ಗೋವು ಆಗ ಹಾಗೆಯೇ ಮಾಡಿದಳು. ಆಕೆಯ ಹೂಂಕಾರದಿಂದಲೇ ನೂರಾರು ಪಹ್ಲವ ಜಾತಿಯ ವೀರರ ಉತ್ಪತ್ತಿಯಾಯಿತು.॥18॥

ಮೂಲಮ್ - 19

ನಾಶಯಂತಿ ಬಲಂ ಸರ್ವಂ ವಿಶ್ವಾಮಿತ್ರಸ್ಯ ಪಶ್ಯತಃ ।
ಸ ರಾಜಾ ಪರಮಕ್ರುದ್ಧಃ ಕ್ರೋಧವಿಸ್ಫಾರಿತೇಕ್ಷಣಃ ॥

ಅನುವಾದ

ಇವರೆಲ್ಲರೂ ವಿಶ್ವಾಮಿತ್ರನು ನೋಡುನೋಡುತ್ತಿರುವಂತೆ ಅವನ ಎಲ್ಲ ಸೈನ್ಯವನ್ನು ನಾಶಮಾಡತೊಡಗಿದರು. ಇದರಿಂದ ರಾಜಾ ವಿಶ್ವಾಮಿತ್ರನಿಗೆ ಬಹಳ ಕ್ರೋಧ ಉಂಟಾಗಿ, ರೋಷಭೀಷಣನಾಗಿ ಕಣ್ಣು ಬಿಟ್ಟು ನೋಡತೊಡಗಿದನು.॥19॥

ಮೂಲಮ್ - 20

ಪಹ್ಲವಾನ್ನಾಶಯಾಮಾಸ ಶಸ್ತ್ರೈರುಚ್ಚಾವಚೈರಪಿ ।
ವಿಶ್ವಾಮಿತ್ರಾರ್ದಿತಾನ್ ದೃಷ್ಟ್ವಾ ಪಹ್ಲವಾನ್ ಶತಶಸ್ತದಾ ॥

ಮೂಲಮ್ - 21

ಭೂಯ ಏವಾಸೃಜದ್ ಘೋರಾನ್ಯವನಮಿಶ್ರಿತಾನ್ ।
ತೈರಾಸೀತ್ ಸಂವೃತಾ ಭೂಮಿಃ ಶಕೈರ್ಯವನಮಿಶ್ರಿತೈಃ ॥

ಅನುವಾದ

ಅವನು ಸಣ್ಣ-ದೊಡ್ಡ ಅನೇಕ ವಿಧದ ಅಸ್ತ್ರಗಳನ್ನು ಪ್ರಯೋಗಿಸಿ ಆ ಪಹ್ಲವರನ್ನು ಸಂಹರಿಸಿದನು. ವಿಶ್ವಾಮಿತ್ರನಿಂದ ಆ ನೂರಾರು ಪಹ್ಲವರು ನಾಶವಾಗುವುದನ್ನು ನೋಡಿ, ಶಬಲೆಯು ಆಗ ಪುನಃ ಯವನಮಿಶ್ರಿತ ಶಕ-ಜಾತಿಯ ಭಯಂಕರ ವೀರರನ್ನು ಸೃಷ್ಟಿಸಿದಳು. ಆ ಯವನ ಮಿಶ್ರಿತ ಶಕರಿಂದ ಅಲ್ಲಿಯ ಎಲ್ಲ ಭೂಮಿ ತುಂಬಿ ಹೋಯಿತು. ಮಿಶ್ರಿತ.॥20-21॥

ಮೂಲಮ್ - 22

ಪ್ರಭಾವದ್ಭಿರ್ಮಹಾವೀರ್ಯೈರ್ಹೇಮಕಿಂಜಲ್ಕಸಂನಿಭೈಃ ।
ತೀಕ್ಷ್ಣಾಸಿಪಟ್ಟಿಶಧರೈರ್ಹೇಮವರ್ಣಾಂಬರಾವೃತೈಃ ॥

ಮೂಲಮ್ - 23

ನಿರ್ದಗ್ಧಂ ತದ್ಬಲಂ ಸರ್ವಂ ಪ್ರದೀಪ್ತೈರಿವಪಾವಕೈಃ ।
ತತೋಽಸ್ತ್ರಾಣಿ ಮಹಾತೇಜಾ ವಿಶ್ವಾಮಿತ್ರೋ ಮುಮೋಚ ಹ ।
ತೈಸ್ತೇ ಯವನಕಾಂಬೋಜಾ ಬರ್ಬರಾಶ್ಚ ಕುಲೀಕೃತಾಃ ॥

ಅನುವಾದ

ಆ ವೀರರು ಮಹಾಪರಾಕ್ರಮಿ ಮತ್ತು ತೇಜಸ್ವಿಗಳಾಗಿದ್ದರು. ಅವರ ಶರೀರ ಕಾಂತಿಯು ಸುವರ್ಣ ಹಾಗೂ ಕೇಸರದಂತೆ ಇತ್ತು. ಅವರು ಬಂಗಾರದ ವರ್ಣದ ಬಟ್ಟೆಗಳನ್ನು ಧರಿಸಿದ್ದರು. ಅವರು ಕೈಗಳಲ್ಲಿ ಹರಿತವಾದ ಖಡ್ಗ, ಪಟ್ಟೆಶ ಧರಿಸಿದ್ದರು. ಪ್ರಜ್ವಲಿತ ಅಗ್ನಿಯಂತೆ ಪ್ರಕಾಶಿಸುತ್ತಿದ್ದ ಆ ವೀರರು ವಿಶ್ವಾಮಿತ್ರನ ಎಲ್ಲ ಸೈನ್ಯಗಳನ್ನು ಭಸ್ಮಮಾಡಲು ತೊಡಗಿದರು. ಆಗ ಮಹಾತೇಜಸ್ವಿ ವಿಶ್ವಾಮಿತ್ರನು ಅವರ ಮೇಲೆ ಅನೇಕ ಅಸ್ತ್ರಗಳನ್ನು ಪ್ರಯೋಗಿಸಿದನು. ಆ ಅಸ್ತ್ರಗಳ ಏಟುಗಳಿಂದ ಯವನ, ಕಾಂಬೋಜ, ಬರ್ಬರ ಜಾತಿಯ ಯೋಧರು ವ್ಯಾಕುಲಾದರು.॥22-23॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಐವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು. ॥54॥