वाचनम्
ಭಾಗಸೂಚನಾ
ಕಾಮಧೇನುವಿನ ಸಹಾಯದಿಂದ ವಸಿಷ್ಠರು ವಿಶ್ವಾಮಿತ್ರನನ್ನೂ, ಅವನ ಪರಿವಾರವನ್ನೂ ಯಥೋಚಿತವಾಗಿ ಸತ್ಕರಿಸಿದುದು, ವಿಶ್ವಾಮಿತ್ರನು ಕಾಮಧೇನುವನ್ನು ಬಯಸಿದುದು, ವಸಿಷ್ಠರ ಅಸಮ್ಮತಿ
ಮೂಲಮ್ - 1
ಏವಮುಕ್ತ್ವಾ ವಸಿಷ್ಠೇನ ಶಬಲಾ ಶತ್ರುಸೂದನ ।
ವಿದಧೆ ಕಾಮಧುಕ್ಕಾಮಾನ್ ಯಸ್ಯ ಯಸ್ಯೇಪ್ಸಿತಂ ಯಥಾ ॥
ಅನುವಾದ
ಶತ್ರುಸೂದನನೆ! ಮಹರ್ಷಿ ವಸಿಷ್ಠರು ಹೀಗೆ ಹೇಳಿದಾಗ ವಿಚಿತ್ರವರ್ಣಮಯ ಆ ಕಾಮಧೇನುವು ಯಾರಿಗೆ ಯಾವ ಬಯಕೆ ಇತ್ತೋ ಅವರಿಗಾಗಿ ಅಂತಹ ಭೋಜನ ಸಾಮಗ್ರಿಯನ್ನು ಅಣಿಗೊಳಿಸಿದಳು.॥1॥
ಮೂಲಮ್ - 2
ಇಕ್ಷೂನ್ಮಧೂಂಸ್ತಥಾ ಲಾಜಾನ್ ಮೈರೇಯಾಂಶ್ಚ ವರಾಸವಾನ್ ।
ಪಾನಾನಿ ಚ ಮಹಾರ್ಹಾಣಿ ಭಕ್ಷ್ಯಾಂಶ್ಚೊಚ್ಚಾವಚಾನಪಿ ॥
ಅನುವಾದ
ಕಬ್ಬಿನರಸ, ಜೇನು, ಅರಳು, ಮೈರೆಯ, ಶ್ರೇಷ್ಠ ಆಸವ, ಪಾನಕ, ಲಡ್ಡುಕ, ಅಪೂಪ, ಫೇಣಿಕಾ ಮೊದಲಾದ ಅನೇಕ ಪ್ರಕಾರದ ಅಮೂಲ್ಯ ಭಕ್ಷ್ಯ ಪದಾರ್ಥಗಳನ್ನು ಸಿದ್ಧಗೊಳಿಸಿದಳು.॥2॥
ಮೂಲಮ್ - 3
ಉಷ್ಣಾಢ್ಯಸ್ಯೌದನಸ್ಯಾತ್ರರಾಶಯಃ ಪರ್ವತೋಪಮಾಃ ।
ಮೃಷ್ಟಾನ್ಯನ್ನಾನಿ ಸೂಪಾಂಶ್ಚ ದಧಿಕುಲ್ಯಾಸ್ತಥೈವ ಚ ॥
ಅನುವಾದ
ಬಿಸಿ-ಬಿಸಿ ಅನ್ನದ ರಾಶಿ-ರಾಶಿಗಳೇ ಸಿದ್ಧವಾದುವು, ಮೃಷ್ಟಾನ್ನ (ಪಾಯಸ) ತೊವ್ವೆ, ಸಾರು, ಸಿದ್ಧವಾಯಿತು. ಹಾಲು, ಮೊಸರು, ತುಪ್ಪ, ಮೊದಲಾದವುಗಳ ಕಾಲುವೆಗಳೇ ಹರಿದವು.॥3॥
ಮೂಲಮ್ - 4
ನಾನಾಸ್ವಾದುರಸಾನಾಂ ಚ ಖಾಂಡವಾನಾಂ ತಥೈವ ಚ ।
ಭೋಜನಾನಿ ಸುಪೂರ್ಣಾನಿ ಗೌಡಾನಿ ಚ ಸಹಸ್ರಶಃ ॥
ಅನುವಾದ
ಬಗೆ ಬಗೆಯ ರುಚಿಕರ ರಸ, ಖಾಂಡವ (ಶ್ರೀಖಂಡ) ಹಾಗೂ ನಾನಾ ಬಗೆಯ ಭೋಜನಗಳಿಂದ ತುಂಬಿದ ಸಾವಿರಾರು ಬೆಳ್ಳಿಯ ತಟ್ಟೆಗಳು ಅಣಿಗೊಂಡವು.॥4॥
ಮೂಲಮ್ - 5
ಸರ್ವಮಾಸೀತ್ ಸುಸಂತುಷ್ಟಂ ಹೃಷ್ಟಪುಷ್ಟಜನಾಯುತಮ್ ।
ವಿಶ್ವಾಮಿತ್ರಬಲಂ ರಾಮ ವಸಿಷ್ಠೇನ ಸುತರ್ಪಿತಮ್ ॥
ಅನುವಾದ
ಶ್ರೀರಾಮಾ! ಮಹರ್ಷಿ ವಸಿಷ್ಠರು ವಿಶ್ವಾಮಿತ್ರರ ಎಲ್ಲ ಸೈನ್ಯವನ್ನು ಚೆನ್ನಾಗಿ ತೃಪ್ತಿಪಡಿಸಿದರು. ಆ ಸೈನ್ಯದಲ್ಲಿ ದಷ್ಟ - ಪುಷ್ಟರಾದ ಅನೇಕ ಯೋಧರಿದ್ದರು. ಅವರೆಲ್ಲರಿಗೆ ಆ ದಿವ್ಯ ಭೊಜನ ಉಂಡು ಬಹಳ ಸಂತೋಷವಾಯಿತು.॥5॥
ಮೂಲಮ್ - 6
ವಿಶ್ವಾಮಿತ್ರೋ ಹಿ ರಾಜರ್ಷಿರ್ಹೃಷ್ಟ ಪುಷ್ಟಸ್ತದಾಭವತ್ ।
ಸಾಂತಃಪುರವರೋ ರಾಜಾ ಸಬ್ರಾಹ್ಮಣಪುರೋಹಿತಃ ॥
ಅನುವಾದ
ರಾಜರ್ಷಿ ವಿಶ್ವಾಮಿತ್ರರೂ ಕೂಡ ಆಗ ಅಂತಃಪುರದ ರಾಣಿಯರೊಂದಿಗೆ, ಬ್ರಾಹ್ಮಣ, ಪುರೋಹಿತರೊಂದಿಗೆ ಭೋಜನ ಮಾಡಿ ಬಹಳ ಹೃಷ್ಟ-ಪುಷ್ಟನಾದನು.॥6॥
ಮೂಲಮ್ - 7
ಸಾಮಾತ್ಯೋ ಮಂತ್ರಿಸಹಿತಃ ಸಭೃತ್ಯಃ ಪೂಜಿತಸ್ತದಾ ।
ಯುಕ್ತಃ ಪರಮಹರ್ಷೇಣ ವಸಿಷ್ಠಮಿದಮಬ್ರವೀತ್ ॥
ಅನುವಾದ
ಅಮಾತ್ಯರು, ಮಂತ್ರಿಗಳು, ಭೃತ್ಯರ ಸಹಿತ ಪೂಜಿತನಾಗಿ ರಾಜನು ಬಹಳ ಸಂತೋಷಗೊಂಡು, ವಸಿಷ್ಠರಲ್ಲಿ ಹೀಗೆ ಹೇಳಿದನು.॥7॥
ಮೂಲಮ್ - 8
ಪೂಜಿತೋಽಹಂ ತ್ವಯಾ ಬ್ರಹ್ಮನ್ ಪೂಜಾರ್ಹೇಣ ಸುಸತ್ಕೃತಃ ।
ಶ್ರೂಯತಾಮಭಿಧಾಸ್ಯಾಮಿ ವಾಕ್ಯಂ ವಾಕ್ಯವಿಶಾರದ ।
ಅನುವಾದ
ಬ್ರಹ್ಮರ್ಷಿಗಳೇ! ತಾವು ಸ್ವತಃ ನನಗೆ ಪೂಜನೀಯರಾಗಿರುವಿರಿ, ಹಾಗಿದ್ದರೂ ನೀವೇ ನನ್ನನ್ನು ಪೂಜಿಸಿದಿರಿ. ಬಗೆಬಗೆಯಿಂದ ಸ್ವಾಗತ-ಸತ್ಕಾರ ಮಾಡಿದಿರಿ. ವಾಕ್ಯಕುಶಲರಾದ ಮಹರ್ಷಿಗಳೇ! ಈಗ ನಾನು ಒಂದು ಮಾತನ್ನು ಹೇಳುವೆನು ಕೇಳಿರಿ.॥8॥
ಮೂಲಮ್ - 9½
ಗವಾಂಶತಸಹಸ್ರೇಣ ದೀಯತಾಂ ಶಬಲಾ ಮಮ ।
ರತ್ನಂ ಹಿ ಭಗವನ್ನೇತದ್ ರತ್ನಹಾರೀ ಚ ಪಾರ್ಥಿವಃ ॥
ತಸ್ಮಾನ್ಮೇ ಶಬಲಾಂ ದೇಹಿ ಮಮೈಷಾಧರ್ಮತೋ ದ್ವಿಜ ।
ಅನುವಾದ
ಪೂಜ್ಯರೇ! ನೀವು ನನ್ನಿಂದ ಒಂದು ಲಕ್ಷ ಗೋವುಗಳನ್ನು, ಪಡೆದು ಈ ವರ್ಣಮಯ ಶಬಲಾ ಗೋವನ್ನು ನನಗೆ ಕೊಡಿರಿ. ಏಕೆಂದರೆ ಈ ಗೋವು ರತ್ನರೂಪವಾಗಿದೆ. ಹಾಗೂ ರತ್ನಗಳನ್ನು ಪಡೆಯುವ ಅಧಿಕಾರಿ ರಾಜನಾಗಿರುತ್ತಾನೆ. ಬ್ರಾಹ್ಮಣೋತ್ತಮರೇ! ನಾನು ಹೇಳಿದುದರ ಕಡೆಗೆ ಗಮನ ಕೊಟ್ಟು ನನಗೆ ಈ ಶಬಲಾ ಗೋವನ್ನು ಕೊಡಿರಿ; ಏಕೆಂದರೆ ಇದು ಧರ್ಮತಃ ನನ್ನ ವಸ್ತುವಾಗಿದೆ.॥9½॥
ಮೂಲಮ್ - 10½
ಏವಮುಕ್ತಸ್ತು ಭಗವಾನ್ ವಸಿಷ್ಠೋ ಮುನಿಪುಂಗವಃ ॥
ವಿಶ್ವಾಮಿತ್ರೇಣ ಧರ್ಮಾತ್ಮಾ ಪ್ರತ್ಯುವಾಚ ಮಹೀಪತಿಮ್ ।
ಅನುವಾದ
ವಿಶ್ವಾಮಿತ್ರನು ಹೀಗೆ ಹೇಳಿದಾಗ ಧರ್ಮಾತ್ಮಾ ಮುನಿವರ ಭಗವಾನ್ ವಸಿಷ್ಠರು ರಾಜನಿಗೆ ಉತ್ತರಿಸುತ್ತಾ ಹೀಗೆ ಹೇಳಿದರು.॥10½॥
ಮೂಲಮ್ - 11
ನಾಹಂ ಶತಸಹಸ್ರೇಣ ನಾಪಿ ಕೋಟಿಶತೈರ್ಗವಾಮ್ ॥
ಮೂಲಮ್ - 12
ರಾಜನ್ ದಾಸ್ಯಾಮಿ ಶಬಲಾಂ ರಾಶಿಭೀ ರಜತಸ್ಯ ವಾ ।
ನ ಪರಿತ್ಯಾಗಮರ್ಹೇಯಂ ಮತ್ಸಕಾಶಾದರಿಂದಮ ॥
ಅನುವಾದ
ಶತ್ರುಗಳನ್ನು ದಮನಮಾಡುವ ನರೇಶ್ವರನೇ! ನಾನು ಒಂದು ಲಕ್ಷ ಅಥವಾ ಕೋಟಿ ಹಸುಗಳನ್ನು ಇಲ್ಲವೇ ಬೆಳ್ಳಿಯ ಬೆಟ್ಟಗಳನ್ನೇ ಪಡೆದರೂ ಅದರ ಬದಲಿಗೆ ಈ ಶಬಲೆಯನ್ನು ಕೊಡಲಾರೆ. ಈಕೆ ನನ್ನಿಂದ ಬೇರೆಯಾಗಲು ಸಾಧ್ಯವೇ ಇಲ್ಲ.॥11-12॥
ಮೂಲಮ್ - 13
ಶಾಶ್ವತೀ ಶಬಲಾ ಮಹ್ಯಂ ಕೀರ್ತಿರಾತ್ಮವತೋ ಯಥಾ ।
ಅಸ್ಯಾಂ ಹವ್ಯಂ ಚ ಕವ್ಯಂ ಚ ಪ್ರಾಣಾಯಾತ್ರಾ ತಥೈವ ಚ ॥
ಅನುವಾದ
ಮನಸ್ವೀ ಪುರುಷನ ಅಕ್ಷಯ ಕೀರ್ತಿಯು ಎಂದೂ ಅಗಲಿರಲಾರದು, ಅದರಂತೆ ನನ್ನೊಂದಿಗೆ ಸಂಬಂಧ ವಿರಿಸುವ ಶಬಲಾ ಗೋವು ನನ್ನಿಂದ ಬೇರೆಯಾಗಿ ಇರಲಾರಳು. ನನ್ನ ಹವ್ಯ-ಕವ್ಯ ಮತ್ತು ಜೀವನ ನಿರ್ವಾಹ ಈಕೆಯನ್ನೇ ಅವಲಂಬಿಸಿದೆ.॥13॥
ಮೂಲಮ್ - 14
ಆಯತ್ತಮಗ್ನಿಹೋತ್ರಂ ಚ ಬಲಿರ್ಹೋಮಸ್ತಥೈವ ಚ ।
ಸ್ವಾಹಾಕಾರವಷಟ್ಕಾರೌ ವಿದ್ಯಾಶ್ಚ ವಿವಿಧಾಸ್ತಥಾ ॥
ಅನುವಾದ
ನನ್ನ ಅಗ್ನಿಹೋತ್ರ, ಬಲಿ, ಹೋಮ, ಸ್ವಾಹಾ, ವಷಟ್ಕಾರ ಹಾಗೂ ವಿವಿಧ ವಿದ್ಯೆಗಳು ಈ ಕಾಮಧೇನುವಿನ ಅಧೀನವಾಗಿವೆ.॥14॥
ಮೂಲಮ್ - 15½
ಆಯತ್ತಮತ್ರ ರಾಜರ್ಷೇ ಸರ್ವಮೇತನ್ನ ಸಂಶಯಃ ।
ಸರ್ವಸ್ವಮೇತತ್ ಸತ್ಯೇನ ಮಮ ತುಷ್ಟಿಕರೀ ತಥಾ ॥
ಕಾರಣೈರ್ಬಹುಭೀ ರಾಜನ್ ನ ದಾಸ್ಯೇ ಶಬಲಾಂ ತವ ।
ಅನುವಾದ
ರಾಜರ್ಷಿಯೇ! ನನ್ನದೆಲ್ಲವೂ ಈ ಗೋವಿನ ಅಧೀನವಾಗಿದೆ. ಇದರಲ್ಲಿ ಸಂಶಯವೇ ಇಲ್ಲ. ನಾನು ನಿಜವನ್ನೇ ಹೇಳುತ್ತಿದ್ದೇನೆ. ಈ ಹಸುವೇ ನನ್ನ ಸರ್ವಸ್ವವಾಗಿದೆ. ಇದೇ ನನ್ನನ್ನು ಎಲ್ಲ ರೀತಿಯಿಂದ ಸಂತುಷ್ಟಗೊಳಿಸುವಳು. ರಾಜನೇ! ಇಂತಹ ಅನೇಕ ಕಾರಣಗಳಿವೆ, ಆದ್ದರಿಂದ ನಾನು ಬಾಧ್ಯನಾಗಿ ಈ ಶಬಲಾಗೋವನ್ನು ನಿನಗೆ ಕೊಡಲಾಗುವುದಿಲ್ಲ.॥15½॥
ಮೂಲಮ್ - 16½
ವಸಿಷ್ಠೇನೈವಮುಕ್ತಸ್ತು ವಿಶ್ವಾಮಿತ್ರೋಽಬ್ರವೀತ್ ತದಾ ॥
ಸಂರಬ್ಧತರಮತ್ಯರ್ಥಂ ವಾಕ್ಯಂ ವಾಕ್ಯವಿಶಾರದಃ ।
ಅನುವಾದ
ವಸಿಷ್ಠರು ಹೀಗೆ ಹೇಳಿದಾಗ ಮಾತಿನಲ್ಲಿ ಕುಶಲನಾದ ವಿಶ್ವಾಮಿತ್ರನು ಅತ್ಯಂತ ಕ್ರೋಧದಿಂದ ಇಂತೆಂದನು.॥16½॥
ಮೂಲಮ್ - 17½
ಹೈರಣ್ಯಕಕ್ಷಗ್ರೈವೇಯಾನ್ ಸುವಣಾಂಕುಶಭೂಷಿತಾನ್ ॥
ದದಾಮಿ ಕುಂಜರಾಣಾಂ ತೇ ಸಹಸ್ರಾಣಿ ಚತುರ್ದಶ ।
ಅನುವಾದ
ಮುನಿಗಳೇ! ನಾನು ನಿಮಗೆ ಹದಿನಾಲ್ಕು ಸಾವಿರ ಆನೆಗಳನ್ನು ಕೊಡುವೆನು. ಅವನ್ನು ಕಟ್ಟುವ ಹಗ್ಗ ಕೊರಳ ಆಭರಣಗಳು, ಅಂಕುಶ ಎಲ್ಲವೂ ಚಿನ್ನದ್ದಾಗಿದ್ದು, ವಿಭೂಷಿತಗೊಳಿಸಲಾಗುವುದು.॥17½॥
ಮೂಲಮ್ - 18
ಹೈರಣ್ಯಾನಾಂ ರಥಾನಾಂ ಚಶ್ವೇತಾಶ್ವಾನಾಂ ಚತುರ್ಯುಜಾಮ್ ॥
ಮೂಲಮ್ - 19
ದದಾಮಿ ತೇ ಶತಾನ್ಯಷ್ಟೌ ಕಿಂಕಿಣೀಕ ವಿಭೂಷಿತಾನ್ ।
ಹಯಾನಾಂ ದೇಶಜಾತಾನಾಂ ಕುಲಜಾನಾಂ ಮಹೌ ಜಸಾಮ್ ।
ಸಹಸ್ರಮೇಕಂ ದಶ ಚ ದದಾಮಿ ತವ ಸುವ್ರತ ॥
ಮೂಲಮ್ - 20
ನಾನಾವರ್ಣವಿಭಕ್ತಾನಾಂ ವಯಃಸ್ಥಾನಾಂ ತಥೈವ ಚ
ದದಾಮ್ಯೇಕಾಂ ಗವಾಂ ಕೋಟಿಂ ಶಬಲಾ ದೀಯತಾಂ ಮಮ ॥
ಅನುವಾದ
ಸುವ್ರತರಾದ ಮುನೀಶ್ವರರೇ! ಇಷ್ಟಲ್ಲದೆ ನಾನು ಎಂಟುನೂರು ಸುವರ್ಣಮಯ ರಥಗಳನ್ನು ಕೊಡುವೆನು. ಅವುಗಳು ಬಂಗಾರದ ಗೆಜ್ಜೆಗಳಿಂದ ಶೋಭಿತವಾಗಿವೆ ಮತ್ತು ಪ್ರತಿಯೊಂದು ರಥಕ್ಕೆ ನಾಲ್ಕು - ಬಿಳಿಯ ಕುದುರೆಗಳನ್ನು ಹೂಡಲಾಗಿದೆ. ಉತ್ತಮ ದೇಶದಲ್ಲಿ ಹುಟ್ಟಿದ ಹನ್ನೊಂದು ಸಾವಿರ ಕುದುರೆಗಳನ್ನೂ ತಮ್ಮ ಸೇವೆಯಲ್ಲಿ ಅರ್ಪಿಸುವೆನು. ಇಷ್ಟೇ ಅಲ್ಲದೆ ನಾನಾ ವಿಧದ ಬಣ್ಣಗಳುಳ್ಳ ತರುಣ ಒಂದು ಕೋಟಿ ಗೋವುಗಳನ್ನು ಕೊಡುವೆನು ಆದರೆ ಈ ಶಬಲಾ ಗೋವನ್ನು ನನಗೆ ಕೊಡಿರಿ.॥18-20॥
ಮೂಲಮ್ - 21
ಯಾವದಿಚ್ಛಸಿ ರತ್ನಾನಿ ಹಿರಣ್ಯಂ ವಾ ದ್ವಿಜೋತ್ತಮ ।
ತಾವದ್ದದಾಮಿ ತೇ ಸರ್ವಂ ದೀಯತಾಂ ಶಬಲಾ ಮಮ ॥
ಅನುವಾದ
ದ್ವಿಜಶ್ರೇಷ್ಠರೇ! ಇವುಗಳಲ್ಲದೆ ನೀವು ಬಯಸಿದಷ್ಟು ರತ್ನ-ಸುವರ್ಣವನ್ನು ನಿಮಗೆ ಕೊಡಲು ನಾನು ಸಿದ್ಧನಾಗಿದ್ದೇನೆ, ಆದರೆ ಈ ವರ್ಣಮಯ ಹಸುವನ್ನು ನನಗೆ ಕೊಡಿರಿ.॥21॥
ಮೂಲಮ್ - 22
ಏವಮುಕ್ತಸ್ತು ಭಗವಾನ್ ವಿಶ್ವಾಮಿತ್ರೇಣ ಧೀಮತಾ ।
ನದಾಸ್ಯಾಮೀತಿ ಶಬಲಾಂ ಪ್ರಾಹ ರಾಜನ್ಕಥಂಚನ ॥
ಅನುವಾದ
ಬುದ್ಧಿವಂತ ವಿಶ್ವಾಮಿತ್ರನು ಹೀಗೆ ಹೇಳಿದಾಗ, ಭಗವಾನ್ ವಸಿಷ್ಠರು ಹೇಳಿದರು-ರಾಜನೇ! ನಾನು ಈ ವರ್ಣಮಯ ಗೋವನ್ನು ಯಾವ ವಿಧದಿಂದಲೂ ಕೊಡಲಾರೆ.॥22॥
ಮೂಲಮ್ - 23
ಏತದೇವ ಹಿ ಮೇ ರತ್ನಮೇತದೇವ ಹಿ ಮೇ ಧನಮ್ ।
ಏತದೇವ ಹಿ ಸರ್ವಸ್ವಮೇತದೇವ ಹಿ ಜೀವಿತಮ್ ॥
ಅನುವಾದ
ಇದೇ ನನ್ನ ರತ್ನವಾಗಿದೆ, ಇದೇ ನನ್ನ ಧನವಾಗಿದೆ, ಇದೇ ನನ್ನ ಸರ್ವಸ್ವವಾಗಿದೆ, ಇದೇ ನನ್ನ ಜೀವನವಾಗಿದೆ.॥23॥
ಮೂಲಮ್ - 24
ದರ್ಶಶ್ಚ ಪೌರ್ಣಮಾಸಶ್ಚ ಯಜ್ಞಾಶ್ಚೈವಾಪ್ತದಕ್ಷಿಣಾಃ ।
ಏತದೇವ ಹಿ ಮೇ ರಾಜನ್ ವಿವಿಧಾಶ್ಚ ಕ್ರಿಯಾಸ್ತಥಾ ॥
ಅನುವಾದ
ರಾಜನೇ ನನ್ನ ದರ್ಶ, ಪೌರ್ಣಮಾಸ್ಯ, ಧಾರಾಳ ದಕ್ಷಿಣೆಯುಳ್ಳ ಯಜ್ಞ, ಬಗೆ-ಬಗೆಯ ಪುಣ್ಯ ಕರ್ಮಗಳು ಈ ಗೋವೇ ಆಗಿದೆ. ಇದರ ಮೇಲೆಯೇ ನನ್ನದೆಲ್ಲವೂ ಅವಲಂಬಿಸಿದೆ.॥24॥
ಮೂಲಮ್ - 25
ಅತೋಮೂಲಾಃ ಕ್ರಿಯಾಃ ಸರ್ವಾ ಮಮ ರಾಜನ್ನ ಸಂಶಯಃ ।
ಬಹುನಾ ಕಿಂ ಪ್ರಲಾಪೇನ ನ ದಾಸ್ಯೇ ಕಾಮದೋಹೀನೀಮ್ ॥
ಅನುವಾದ
ನರೇಶನೇ! ನನ್ನ ಎಲ್ಲ ಶುಭ ಕರ್ಮಗಳ ಮೂಲ ಇದೇ ಆಗಿದೆ. ಇದರಲ್ಲಿ ಸಂಶಯವಿಲ್ಲ. ವ್ಯರ್ಥವಾಗಿ ಹೆಚ್ಚು ಮಾತನಾಡುವುದರಿಂದ ಏನು ಲಾಭ. ನಾನು ಈ ಕಾಮಧೇನುವನ್ನು ಎಂದಿಗೂ ಕೊಡಲಾರೆ.॥25॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಐವತ್ತಮೂರನೆಯ ಸರ್ಗ ಪೂರ್ಣವಾಯಿತು.॥53॥