०५२ वसिष्ठ-विश्वामित्र-संवादः

वाचनम्
ಭಾಗಸೂಚನಾ

ಮಹರ್ಷಿ ವಸಿಷ್ಠರಿಂದ ವಿಶ್ವಾಮಿತ್ರನ ಸತ್ಕಾರ. ಬೇಕಾದ ವಸ್ತುಗಳನ್ನು ಸೃಷ್ಟಿಗೊಳಿಸುವಂತೆ ಕಾಮಧೇನುವಿಗೆ ಆದೇಶ

ಮೂಲಮ್ - 1

ಸ ದೃಷ್ಟ್ವಾ ಪರಮಪ್ರೀತೋ ವಿಶ್ವಾಮಿತ್ರೋ ಮಹಾಬಲಃ ।
ಪ್ರಣತೋ ವಿನಯಾದ್ ವೀರೋ ವಸಿಷ್ಠಂ ಜಪತಾಂ ವರಮ್ ॥

ಅನುವಾದ

ಜಪ ಮಾಡುವವರಲ್ಲಿ ಶ್ರೇಷ್ಠರಾದ ವಸಿಷ್ಠರ ದರ್ಶನ ಪಡೆದು ಮಹಾಬಲಿ ವೀರ ವಿಶ್ವಾಮಿತ್ರನು ಬಹಳ ಸಂತೋಷದಿಂದ ಹಾಗೂ ವಿನಯದಿಂದ ಅವರ ಚರಣಗಳಲ್ಲಿ ನಮಸ್ಕರಿಸಿದನು.॥1॥

ಮೂಲಮ್ - 2

ಸ್ವಾಗತಂ ತವ ಚೇತ್ಯುಕ್ತೋ ವಸಿಷ್ಠೇನ ಮಹಾತ್ಮನಾ ।
ಆಸನಂ ಚಾಸ್ಯ ಭಗವಾನ್ ವಸಿಷ್ಠೋ ವ್ಯಾದಿದೇಶಹ ॥

ಅನುವಾದ

ಆಗ ಮಹಾತ್ಮ ವಸಿಷ್ಠರು ರಾಜನೇ! ನಿನಗೆ ಸ್ವಾಗತವಿರಲಿ. ಹೀಗೆ ಹೇಳಿ ಪೂಜ್ಯರಾದ ವಸಿಷ್ಠರು ರಾಜನಿಗೆ ಕುಳಿತುಕೊಳ್ಳಲು ಆಸನ ನೀಡಿದರು.॥2॥

ಮೂಲಮ್ - 3

ಉಪವಿಷ್ಟಾಯಚ ತದಾ ವಿಶ್ವಾಮಿತ್ರಾಯ ಧೀಮತೇ ।
ಯಥಾನ್ಯಾಯಂ ಮುನಿವರಃ ಫಲಮೂಲಮುಪಾಹರತ್ ॥

ಅನುವಾದ

ಧೀಮಂತ ವಿಶ್ವಾಮಿತ್ರನು ಆಸನದಲ್ಲಿ ವಿರಾಜಿಸಿದಾಗ ಮುನಿವರ ವಸಿಷ್ಠರು ಅವನಿಗೆ ವಿಧಿವತ್ತಾಗಿ ಫಲ-ಮೂಲಗಳ ಉಪಾಹಾರ ಅರ್ಪಿಸಿದರು.॥3॥

ಮೂಲಮ್ - 4

ಪ್ರತಿಗೃಹ್ಯ ತು ತಾಂ ಪೂಜಾಂ ವಸಿಷ್ಠಾದ್ರಾಜಸತ್ತಮಃ ।
ತಪೋಗ್ನಿಹೋತ್ರಶಿಷ್ಯೇಷು ಕುಶಲಂ ಪರ್ಯಪೃಚ್ಛತ ॥

ಮೂಲಮ್ - 5

ವಿಶ್ವಾಮಿತ್ರೋ ಮಹಾತೇಜಾ ವನಸ್ಪತಿಗಣೇ ತದಾ ।
ಸರ್ವತ್ರ ಕುಶಲಂ ಪ್ರಾಹ ವಸಿಷ್ಠೋರಾಜಸತ್ತಮಮ್ ॥

ಅನುವಾದ

ವಸಿಷ್ಠರಿಂದ ಆತಿಥ್ಯವನ್ನು ಸ್ವೀಕರಿಸಿ ರಾಜಶಿರೋಮಣಿ ಮಹಾತೇಜಸ್ವೀ ವಿಶ್ವಾಮಿತ್ರನು ಅವರ ತಪಸ್ಸು, ಅಗ್ನಿಹೋತ್ರ, ಶಿಷ್ಯವರ್ಗವನ್ನು ಮತ್ತು ಲತಾ-ವೃಕ್ಷಾದಿಗಳ ಕ್ಷೇಮ ಸಮಾಚಾರ ಕೇಳಿದನು ಮತ್ತೆ ವಸಿಷ್ಠರು ರಾಜನಲ್ಲಿ ಎಲ್ಲವೂ ಕುಶಲ ಮಂಗಲವಾಗಿರುವುದನ್ನು ತಿಳಿಸಿದರು.॥4-5॥

ಮೂಲಮ್ - 6

ಸುಖೋಪವಿಷ್ಟಂ ರಾಜಾನಂ ವಿಶ್ವಾಮಿತ್ರಂ ಮಹಾತಪಾಃ ।
ಪಪ್ರಚ್ಛ ಜಪತಾಂ ಶ್ರೇಷ್ಠೋ ವಸಿಷ್ಠೋ ಬ್ರಹ್ಮಣಃಸುತಃ ॥

ಅನುವಾದ

ಜಪ ಮಾಡುವವರಲ್ಲಿ ಶ್ರೇಷ್ಠ ಬ್ರಹ್ಮಕುಮಾರ ಮಹಾತಪಸ್ವೀ ವಸಿಷ್ಠರು ಸುಖವಾಗಿ ಕುಳಿತಿರುವ ರಾಜಾ ವಿಶ್ವಾಮಿತ್ರನಲ್ಲಿ ಈ ಪ್ರಕಾರ ಕೇಳಿದರು.॥6॥

ಮೂಲಮ್ - 7

ಕಚ್ಚಿತ್ತೇ ಕುಶಲಂ ರಾಜನ್ ಕಚ್ಚಿದ್ಧರ್ಮೇಣ ರಂಜಯನ್ ।
ಪ್ರಜಾಃ ಪಾಲಯಸೇ ರಾಜನ್ ರಾಜವೃತ್ತೇನ ಧಾರ್ಮಿಕ ॥

ಅನುವಾದ

ರಾಜನೇ! ನೀನು ಕುಶಲನಾಗಿರುವೆಯಲ್ಲ? ಧರ್ಮಾತ್ಮಾ ನರೇಶನೇ! ನೀನು ಧರ್ಮಪೂರ್ವಕ ಪ್ರಜೆಯನ್ನು ಸಂತೋಷ ಪಡಿಸುತ್ತಾ ರಾಜೋಚಿತ ರೀತಿ-ನೀತಿಯಿಂದ ಪ್ರಜೆಯನ್ನು ಪಾಲಿಸುತ್ತಿರುವೆಯಲ್ಲ.॥7॥

ಮೂಲಮ್ - 8

ಕಚ್ಚಿತ್ತೇ ಸಂಭೃತಾ ಭೃತ್ಯಾಃ ಕಚ್ಚಿತ್ತಿಷ್ಠಂತಿ ಶಾಸನೇ ।
ಕಚ್ಚಿತ್ತೇ ವಿಜಿತಾಃ ಸರ್ವೇ ರಿಪವೋ ರಿಪುಸೂದನ ॥

ಅನುವಾದ

ಶತ್ರುಸೂದನ! ನೀನು ನಿನ್ನ ಭೃತ್ಯರನ್ನು ಚೆನ್ನಾಗಿ ಪೋಷಿಸುತ್ತಿರುವೆಯಲ್ಲ? ಅವರು ನಿನ್ನ ಆಜ್ಞೆಗಧೀನರಾಗಿ ಇರುವರಲ್ಲ? ನೀನು ಸಮಸ್ತ ಶತ್ರುಗಳ ಮೇಲೆ ವಿಜಯಸಾಧಿಸಿರುವೆಯಲ್ಲ.॥8॥

ಮೂಲಮ್ - 9

ಕಚ್ಚಿದ್ಬಲೇಷು ಕೋಶೇಷು ಮಿತ್ರೇಷು ಚ ಪರಂತಪ ।
ಕುಶಲಂ ತೇ ನರವ್ಯಾಘ್ರ ಪುತ್ರ ಪೌತ್ರೆತಥಾನಘ ॥

ಅನುವಾದ

ಪರಂತಪ, ಪುರುಷ ಸಿಂಹ, ಪುಣ್ಯಾತ್ಮನಾದ ರಾಜನೇ! ನಿನ್ನ ಸೈನ್ಯ, ಕೋಶ, ಮಿತ್ರರು, ಪುತ್ರ-ಪೌತ್ರರು ಎಲ್ಲರೂ ಕುಶಲರುತಾನೆ.॥9॥

ಮೂಲಮ್ - 10

ಸರ್ವತ್ರ ಕುಶಲಂ ರಾಜಾ ವಸಿಷ್ಠಂ ಪ್ರತ್ಯುದಾಹರತ್ ।
ವಿಶ್ವಾಮಿತ್ರೋ ಮಹಾತೇಜಾ ವಸಿಷ್ಠಂ ವಿನಯಾನ್ವಿತಮ್ ॥

ಅನುವಾದ

ಆಗ ಮಹಾತೇಜಸ್ವಿ ರಾಜಾವಿಶ್ವಾಮಿತ್ರನು ವಿನಯಶೀಲ ವಸಿಷ್ಠರಲ್ಲಿ ಹೌದು, ಪೂಜ್ಯರೇ! ನಮ್ಮಲ್ಲಿ ಎಲ್ಲೆಡೆ ಕುಶಲವೇ ಇದೆ ಎಂದು ಉತ್ತರಿಸಿದನು.॥10॥

ಮೂಲಮ್ - 11

ಕೃತ್ವಾ ತೌ ಸುಚಿರಂ ಕಾಲಂ ಧರ್ಮಿಷ್ಠೌ ತಾಃ ಕಥಾಸ್ತದಾ ।
ಮುದಾ ಪರಮಯಾ ಯುಕ್ತೌ ಪ್ರೀಯೇತಾಂ ತೌ ಪರಸ್ಪರಮ್ ॥

ಅನುವಾದ

ಅನಂತರ ಆ ಇಬ್ಬರು ಧರ್ಮಾತ್ಮರು ಬಹಳ ಪ್ರಸನ್ನತೆಯಿಂದ ಬಹಳ ಹೊತ್ತು ಪರಸ್ಪರ ಮಾತುಕಥೆಯಾಡುತ್ತಾ ಇದ್ದರು. ಆಗ ಇಬ್ಬರಿಗೂ ಪರಸ್ಪರ, ಬಹಳ ಪ್ರೇಮವುಂಟಾಯಿತು.॥11॥

ಮೂಲಮ್ - 12

ತತೋ ವಸಿಷ್ಠೋಭಗವಾನ್ ಕಥಾಂತೇ ರಘುನಂದನ ।
ವಿಶ್ವಾಮಿತ್ರಮಿದಂ ವಾಕ್ಯಮುವಾಚ ಪ್ರಹಸನ್ನಿವ ॥

ಅನುವಾದ

ರಘುನಂದನ! ಮಾತುಕಥೆಯ ಬಳಿಕ ಭಗವಾನ್ ವಸಿಷ್ಠರು ವಿಶ್ವಾಮಿತ್ರನಲ್ಲಿ ನಗುತ್ತಾ ಇಂತೆಂದರು.॥12॥

ಮೂಲಮ್ - 13

ಆತಿಥ್ಯಂ ಕರ್ತುಮಿಚ್ಛಾಮಿ ಬಲಸ್ಯಾಸ್ಯ ಮಹಾಬಲ ।
ತವ ಚೈವಾಪ್ರಮೇಯಸ್ಯ ಯಥಾರ್ಹಂ ಸಂಪ್ರತೀಚ್ಛ ಮೇ ॥

ಅನುವಾದ

ಮಹಾಬಲಿ ರಾಜನೇ! ನಿನ್ನ ಪ್ರಭಾವ ಅಸೀಮವಾಗಿದೆ. ನಾನು ನಿನ್ನ ಮತ್ತು ಸೈನ್ಯದ ಯಥಾಯೋಗ್ಯ ಆತಿಥ್ಯ ಸತ್ಕಾರ ಮಾಡಲು ಬಯಸುತ್ತೇನೆ. ನೀನು ನನ್ನ ವಿನಂತಿಯನ್ನು ಸ್ವೀಕರಿಸು.॥13॥

ಮೂಲಮ್ - 14

ಸತ್ಕ್ರಿಯಾಂ ಹಿ ಭವಾನೇತಾಂ ಪ್ರತೀಚ್ಛತು ಮಯಾಕೃತಾಮ್ ।
ರಾಜಂಸ್ತ್ವಮತಿಥಿಶ್ರೇಷ್ಠಃ ಪೂಜನೀಯಃ ಪ್ರಯತ್ನತಃ ॥

ಅನುವಾದ

ರಾಜನೇ! ನೀನು ಅತಿಥಿಗಳಲ್ಲಿ ಶ್ರೇಷ್ಠನಾಗಿರುವೆ, ಅದಕ್ಕಾಗಿ ಪ್ರಯತ್ನಪೂರ್ವಕ ನಿನ್ನನ್ನು ಸತ್ಕರಿಸುವುದು ನನ್ನ ಕರ್ತವ್ಯವಾಗಿದೆ. ಆದ್ದರಿಂದ ನಾನು ಮಾಡುವ ಸತ್ಕಾರವನ್ನು ಸ್ವೀಕರಿಸಬೇಕ.॥14॥

ಮೂಲಮ್ - 15

ಏವಮುಕ್ತೋ ವಸಿಷ್ಠೇನ ವಿಶ್ವಾಮಿತ್ರೋ ಮಹಾಮತಿಃ ।
ಕೃತಮಿತ್ಯಬ್ರವೀದ್ರಾಜಾ ಪ್ರಿಯವಾಕ್ಯೇನ ಮೇ ತ್ವಯಾ ॥

ಅನುವಾದ

ವಸಿಷ್ಠರು ಹೀಗೆ ಹೇಳಿದಾಗ ಮಹಾ ಬುದ್ಧಿವಂತ ರಾಜಾ ವಿಶ್ವಾಮಿತ್ರನು ಹೇಳಿದನು - ಮುನಿಗಳೇ! ನಿಮ್ಮ ಸತ್ಕಾರಪೂರ್ಣ ವಚನಗಳಿಂದಲೇ ನನ್ನ ಎಲ್ಲ ಸತ್ಕಾರವಾದಂತಾಯಿತು.॥15॥

ಮೂಲಮ್ - 16

ಫಲಮೂಲೇನ ಭಗವನ್ ವಿದ್ಯತೇ ಯತ್ತವಾಶ್ರಮೇ ।
ಪಾದ್ಯೇನಾಚಮನೀಯೇನ ಭಗವದ್ದರ್ಶನೇನ ಚ ॥

ಅನುವಾದ

ಪೂಜ್ಯರೇ! ನಿಮ್ಮ ಆಶ್ರಮದಲ್ಲಿರುವ ಫಲ-ಮೂಲ, ಅರ್ಘ್ಯ-ಪಾದ್ಯ, ಆಚಮನೀಯ ಮೊದಲಾದ ವಸ್ತು ಗಳಿಂದ ನನ್ನ ಆದರ ಸತ್ಕಾರ ಚೆನ್ನಾಗಿ ನಡೆಯಿತು. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ದರ್ಶನವಾಯಿತು. ಇದರಿಂದಲೇ ನನ್ನ ಪೂಜೆ ಆಗಿ ಹೋಯಿತು.॥16॥

ಮೂಲಮ್ - 17

ಸರ್ವಥಾ ಚ ಮಹಾಪ್ರಾಜ್ಞ ಪೂಜಾರ್ಹೇಣ ಸುಪೂಜಿತಃ ।
ನಮಸ್ತೇಽಸ್ತು ಗಮಿಷ್ಯಾಮಿ ಮೈತ್ರೇಣೇಕ್ಷಸ್ವ ಚಕ್ಷುಷಾ ॥

ಅನುವಾದ

ಮಹಾಜ್ಞಾನಿಗಳಾದ ಮಹರ್ಷಿಗಳೇ! ನೀವು ಸರ್ವಥಾ ನನಗೆ ಪೂಜನೀಯರಾಗಿದ್ದೀರಿ. ಹೀಗಿದ್ದರೂ ನೀವು ನನ್ನನ್ನು ಪೂಜಿಸಿದ್ದೀರಿ. ನಿಮಗೆ ವಂದನೆಗಳು; ಈಗ ನಾನು ಇಲ್ಲಿಂದ ಹೊರಡುವೆನು. ನೀವು ಮೈತ್ರಿಯುಕ್ತ ದೃಷ್ಟಿಯಿಂದ ನನ್ನ ಕಡೆಗೆ ನೋಡಿರಿ.॥17॥

ಮೂಲಮ್ - 18

ಏವಂ ಬ್ರುವಂತಂ ರಾಜಾನಂ ವಸಿಷ್ಠಃ ಪುನರೇವ ಹಿ ।
ನ್ಯಮಂತ್ರಯತ ಧರ್ಮಾತ್ಮಾ ಪುನಃ ಪುನರುದಾರಧೀಃ ॥

ಅನುವಾದ

ಹೀಗೆ ಹೇಳುತ್ತಿರುವ ವಿಶ್ವಾಮಿತ್ರನಲ್ಲಿ-ಉದಾರ ಬುದ್ಧಿಯುಳ್ಳ ಧರ್ಮಾತ್ಮಾ ವಸಿಷ್ಠರು ತಮ್ಮ ಆಮಂತ್ರಣವನ್ನು ಸ್ವೀಕರಿಸುವಂತೆ ಪದೇ ಪದೇ ಒತ್ತಾಯಪಡಿಸಿದರು.॥18॥

ಮೂಲಮ್ - 19

ಬಾಢಮಿತ್ಯೇವ ಗಾಧೇಯೋ ವಸಿಷ್ಠಂ ಪ್ರತ್ಯುವಾಚ ಹ ।
ಯಥಾಪ್ರಿಯಂ ಭಗವತಸ್ತಥಾಸ್ತು ಮುನಿಪುಂಗವ ॥

ಅನುವಾದ

ಆಗ ಗಾಧಿನಂದನ ವಿಶ್ವಾಮಿತ್ರನು ‘ಬಹಳ ಒಳ್ಳೆಯದು ನಿಮ್ಮ ಆಜ್ಞೆಯು ನನಗೆ ಒಪ್ಪಿಗೆಯಾಯಿತು.’ ಎಂದು ಉತ್ತರಿಸಿದನು. ಮುನಿವರ್ಯರೇ! ನೀವು ನನಗೆ ಪೂಜ್ಯರಾಗಿರುವಿರಿ. ನಿಮಗೆ ಪ್ರಿಯವಾಗುವಂತೆಯೇ ಆಗಲಿ.॥19॥

ಮೂಲಮ್ - 20

ಏವಮುಕ್ತಸ್ತಥಾ ತೇನ ವಸಿಷ್ಠೋ ಜಪತಾಂ ವರಃ ।
ಆಜುಹಾವ ತತಃ ಪ್ರೀತಃ ಕಲ್ಮಾಷೀಂ ಧೂತಕಲ್ಮಷಾಮ್ ॥

ಅನುವಾದ

ರಾಜನು ಹೀಗೆ ಹೇಳಿದಾಗ ಜಪಮಾಡುವವರಲ್ಲಿ ಶ್ರೇಷ್ಠರಾದ ವಸಿಷ್ಠರು ಬಹಳ ಸಂತಸಗೊಂಡರು. ಅವರು ಪಾಪರಹಿತಳಾಗಿದ್ದ, ವಿಚಿತ್ರ ವರ್ಣದಿಂದ ಕೂಡಿದ್ದ ತಮ್ಮ ಹೋಮಧೇನುವಾದ (ಕಾಮಧೇನು) ಶಬಲೆಯನ್ನು ಆದರದಿಂದ ಕರೆದರು.॥20॥

ಮೂಲಮ್ - 21

ಏಹ್ಯೇಹಿ ಶಬಲೇ ಕ್ಷಿಪ್ರಂ ಶೃಣು ಚಾಪಿ ವಚೋ ಮಮ ।
ಸಬಲಸ್ಯಾಸ್ಯ ರಾಜರ್ಷೇಃ ಕರ್ತುಂ ವ್ಯವಸಿತೋಸ್ಮ್ಯಹಮ್ ।
ಭೋಜನೇನ ಮಹಾರ್ಹೇಣ ಸತ್ಕಾರಂ ಸಂವಿಧತ್ಸ್ವಮೇ ॥

ಅನುವಾದ

ಶಬಲೇ! ಬೇಗ ಬಾ! ಓಡೋಡಿ ಬಾ! ನನ್ನ ಮಾತನ್ನು ಕೇಳು-ನಾನು ಸೈನ್ಯಸಹಿತ ಈ ರಾಜರ್ಷಿ ಮಹಾರಾಜನನ್ನು ಯೋಗ್ಯವಾದ ಉತ್ತಮ ಭೋಜನಾದಿಗಳಿಂದ ಸತ್ಕರಿಸಲು ನಿಶ್ಚಯಿಸಿರುವೆನು. ನೀನು ನನ್ನ ಮನೋರಥವನ್ನು ಸಫಲ ಗೊಳಿಸು.॥21॥

ಮೂಲಮ್ - 22

ಯಸ್ಯ ಯಸ್ಯ ಯಥಾಕಾಮಂ ಷಡ್ರಸೇಷ್ವಭಿ ಪೂಜಿತಮ್ ।
ತತ್ಸರ್ವಂ ಕಾಮಧುಕ್ ದಿವ್ಯೇ ಅಭಿವರ್ಷ ಕೃತೇ ಮಮ ॥

ಅನುವಾದ

ಷಡ್ರಸ ಭೋಜನದಲ್ಲಿ ಯಾರಿಗೆ ಯಾವುದು ಪ್ರಿಯವೋ, ಅವರಿಗೆ ಅದೆಲ್ಲವನ್ನು ಪ್ರಸ್ತುತಪಡಿಸು. ದಿವ್ಯ ಕಾಮಧೇನುವೇ! ಇಂದು ನಾನು ಹೇಳಿದಂತೆ ಈ ಅತಿಥಿಗಳಿಗೆ ಬೇಕಾದ ವಸ್ತುಗಳನ್ನು ಮಳೆಗರೆ.॥22॥

ಮೂಲಮ್ - 23

ರಸೇನಾನ್ನೇನ ಪಾನೇನ ಲೇಹ್ಯಚೋಷ್ಯೇಣ ಸಂಯುತಮ್ ।
ಅನ್ನಾನಾಂ ನಿಚಯಂ ಸರ್ವಂ ಸೃಜಸ್ವ ಶಬಲೇ ತ್ವರ ॥

ಅನುವಾದ

ಶಬಲೆ! ಸರಸ ಪದಾರ್ಥ, ಅನ್ನ, ಪಾನೀಯ, ಲೇಹ್ಯ, ಚೋಷ್ಯ ಇವುಗಳಿಂದ ಕೂಡಿದ ಬಗೆ ಬಗೆಯ ಆಹಾರಗಳ ರಾಶಿಯನ್ನೇ ಸಿದ್ಧಗೊಳಿಸು. ಎಲ್ಲ ಆವಶ್ಯಕ ವಸ್ತುಗಳನ್ನು ಬೇಗನೇ ಸೃಷ್ಟಿಮಾಡು, ವಿಲಂಬಿಸಬೇಡ.॥23॥

ಅನುವಾದ (ಸಮಾಪ್ತಿಃ)

ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಐವತ್ತೆರಡನೆಯ ಸರ್ಗ ಪೂರ್ಣವಾಯಿತು.॥52॥