वाचनम्
ಭಾಗಸೂಚನಾ
ಶತಾನಂದರ ಪ್ರಶ್ನೆ, ಶ್ರೀರಾಮನಿಂದ ಆದ ಅಹಲ್ಯೋದ್ಧಾರವನ್ನು ವಿಶ್ವಾಮಿತ್ರರು ತಿಳಿಸಿದುದು, ಶತಾನಂದರು ಶ್ರೀರಾಮನನ್ನು ಅಭಿನಂದಿಸಿದುದು, ಶತಾನಂದರು ವಿಶ್ವಾಮಿತ್ರರ ಹಿಂದಿನ ಕಥೆ ಹೇಳಿದುದು
ಮೂಲಮ್ - 1
ತಸ್ಯ ತದ್ವಚನಂ ಶ್ರುತ್ವಾ ವಿಶ್ವಾಮಿತ್ರಸ್ಯ ಧೀಮತಃ ।
ಹೃಷ್ಟರೋಮಾ ಮಹಾತೇಜಾಃ ಶತಾನಂದೋ ಮಹಾತಪಾಃ ॥
ಅನುವಾದ
ಧೀಮಂತರಾದ ವಿಶ್ವಾಮಿತ್ರರ ಮಾತನ್ನು ಕೇಳಿ ಮಹಾತೇಜಸ್ವೀ, ಮಹಾತಪಸ್ವೀ ಶತಾನಂದರ ಶರೀರದಲ್ಲಿ ರೋಮಾಂಚನ ಉಂಟಾಯಿತು.॥1॥
ಮೂಲಮ್ - 2
ಗೌತಮಸ್ಯ ಸುತೋ ಜ್ಯೆಷ್ಠ ಸ್ತಪಸಾ ದ್ಯೋತಿತಪ್ರಭಃ ।
ರಾಮಸಂದರ್ಶನಾದೇವ ಪರಂ ವಿಸ್ಮಯಮಾಗತಃ ॥
ಅನುವಾದ
ಅವರು ಗೌತಮರ ಜ್ಯೇಷ್ಠ ಪುತ್ರರಾಗಿದ್ದರು. ತಪಸ್ಸಿನಿಂದ ಅವರ ಕಾಂತಿಯು ಪ್ರಕಾಶಿಸುತ್ತಿತ್ತು. ಅವರು ಶ್ರೀರಾಮಚಂದ್ರನ ದರ್ಶನದಿಂದ ವಿಸ್ಮಿತರಾಗಿದರು.॥2॥
ಮೂಲಮ್ - 3
ಏತೌ ನಿಷಣ್ಣೌ ಸಂಪ್ರೇಕ್ಷ್ಯಶತಾನಂದೋ ನೃಪಾತ್ಮಜೌ ।
ಸುಖಾಸೀನೌ ಮುನಿಶ್ರೇಷ್ಠಂ ವಿಶ್ವಾಮಿತ್ರಮಥಾಬ್ರವೀತ್ ॥
ಅನುವಾದ
ಆ ರಾಜಕುಮಾರರಿಬ್ಬರೂ ಸುಖವಾಗಿ ಕುಳಿತಿರುವುದನ್ನು ನೋಡಿ ಶತಾನಂದರು ಮುನಿಶ್ರೇಷ್ಠ ವಿಶ್ವಾಮಿತ್ರರಲ್ಲಿ ಕೇಳಿದರು.॥3॥
ಮೂಲಮ್ - 4
ಅಪಿ ತೇ ಮುನಿಶಾರ್ದೂಲ ಮಮ ಮಾತಾ ಯಶಸ್ವಿನೀ ।
ದರ್ಶಿತಾ ರಾಜಪುತ್ರಾಯ ತಪೋದೀರ್ಘಮುಪಾಗತಾ ॥
ಅನುವಾದ
ಮುನಿವರ್ಯರೇ! ನನ್ನ ಯಶಸ್ವಿನೀ ತಾಯಿ ಅಹಲ್ಯೆಯು ಬಹಳ ದಿನಗಳಿಂದ ತಪಸ್ಸು ಮಾಡುತ್ತಿದ್ದಳು. ನೀವು ರಾಜಕುಮಾರ ಶ್ರೀರಾಮನಿಗೆ ಆಕೆಯ ದರ್ಶನ ಮಾಡಿಸಿದರೇನು.॥4॥
ಮೂಲಮ್ - 5
ಅಪಿ ರಾಮೇ ಮಹಾತೇಜಾ ಮಮ ಮಾತಾ ಯಶಸ್ವಿನೀ ।
ವನ್ಯೈರುಪಾಹರತ್ಪೂಜಾಂ ಪೂಜಾರ್ಹೇ ಸರ್ವದೇಹಿನಾಮ್ ॥
ಅನುವಾದ
ಮಹಾತೇಜಸ್ವೀ ಹಾಗೂ ಯಶಸ್ವಿನೀ ನನ್ನ ತಾಯಿ ಅಹಲ್ಯೆಯು ಕಾಡಿನ ಫಲ-ಮೂಲಗಳಿಂದ ಸಮಸ್ತ ದೇಹಧಾರಿಗಳಿಗೆ ಪೂಜನೀಯನಾದ ಶ್ರೀರಾಮಚಂದ್ರನನ್ನು ಆದರ-ಸತ್ಕಾರ ಮಾಡಿದಳೇನು.॥5॥
ಮೂಲಮ್ - 6
ಅಪಿ ರಾಮಾಯ ಕಥಿತಂ ಯದ್ವೃತ್ತಂ ತತ್ಪುರಾತನಮ್ ।
ಮಮ ಮಾತುರ್ಮಹಾತೇಜೋ ದೇವೇನ ದುರನುಷ್ಠಿತಮ್ ॥
ಅನುವಾದ
ಮಹಾತೇಜಸ್ವೀ ಮುನಿಗಳೇ! ನೀವು ಶ್ರೀರಾಮನಿಗೆ ನನ್ನ ತಾಯಿಯ ಕುರಿತು ದೇವೇಂದ್ರನಿಂದ ಕಪಟ ಹಾಗೂ ದುರಾಚಾರದಿಂದ ಘಟಿಸಿದ ಆ ಹಳೆಯ ವೃತ್ತಾಂತವನ್ನು ಹೇಳಿದಿರಾ.॥6॥
ಮೂಲಮ್ - 7
ಅಪಿ ಕೌಶಿಕ ಭದ್ರಂ ತೇ ಗುರುಣಾ ಮಮ ಸಂಗತಾ ।
ಮಮ ಮಾತಾ ಮುನಿಶ್ರೇಷ್ಠ ರಾಮಸಂದರ್ಶನಾದಿತಃ ॥
ಅನುವಾದ
ಮುನಿಶ್ರೇಷ್ಠ ಕೌಶಿಕರೇ! ನಿಮಗೆ ಮಂಗಳವಾಗಲಿ. ಶ್ರೀರಾಮಚಂದ್ರನ ದರ್ಶನಾದಿಗಳ ಪ್ರಭಾವದಿಂದ ನನ್ನ ತಾಯಿಯು ಶಾಪಮುಕ್ತಳಾಗಿ, ತಂದೆಯೊಂದಿಗೆ ಬೆಸಗೊಂಡಳೇ.॥7॥
ಮೂಲಮ್ - 8
ಅಪಿ ಮೇ ಗುರುಣಾ ರಾಮಃ ಪೂಜಿತಃ ಕುಶಿಕಾತ್ಮಜ ।
ಇಹಾಗತೋ ಮಹಾತೇಜಾಃ ಪೂಜಾಂ ಪ್ರಾಪ್ಯ ಮಹಾತ್ಮನಃ ॥
ಅನುವಾದ
ಕುಶಿಕನಂದನರೇ! ಏನು ನನ್ನ ತಂದೆಯವರು ಶ್ರೀರಾಮನನ್ನು ಪೂಜಿಸಿದರೇನು? ಆ ಮಹಾತ್ಮರ ಪೂಜೆಯನ್ನು ಸ್ವೀಕರಿಸಿ ಈ ಮಹಾತೇಜಸ್ವೀ ಶ್ರೀರಾಮನು ಇಲ್ಲಿಗೆ ಆಗಮಿಸಿರುವನೇನು.॥8॥
ಮೂಲಮ್ - 9
ಅಪಿ ಶಾಂತೇನ ಮನಸಾ ಗುರುರ್ಮೇ ಕುಶಿಕಾತ್ಮಜ ।
ಇಹಾಗತೇನ ರಾಮೇಣ ಪೂಯತೇನಾಭಿವಾದಿತಃ ॥
ಅನುವಾದ
ವಿಶ್ವಾಮಿತ್ರರೇ! ಇಲ್ಲಿಗೆ ಬಂದು ನನ್ನ ತಂದೆ-ತಾಯಿಯರಿಂದ ಸಮ್ಮಾನಿತನಾದ ಶ್ರೀರಾಮನು ನನ್ನ ಪೂಜ್ಯ ತಂದೆಯನ್ನು ಶಾಂತಚಿತ್ತದಿಂದ ಅಭಿವಾದನ ಮಾಡಿದನೇನು.॥9॥
ಮೂಲಮ್ - 10
ತಚ್ಛ್ರುತ್ರಾ ವಚನಂ ತಸ್ಯ ವಿಶ್ವಾಮಿತ್ರೋ ಮಹಾಮುನಿಃ ।
ಪ್ರತ್ಯುವಾಚ ಶತಾನಂದಂ ವಾಕ್ಯಜ್ಞೋ ವಾಕ್ಯಕೋವಿದಮ್ ॥
ಅನುವಾದ
ಶತಾನಂದರ ಈ ಪ್ರಶ್ನೆಯನ್ನು ಕೇಳಿ ವಾಕ್ಯಕೋವಿದರಾದ ಮಹಾಮುನಿ ವಿಶ್ವಾಮಿತರು ಕುಶಲ ವಾಗ್ಮಿಗಳಾದ ಶತಾನಂದರಲ್ಲಿ ಹೀಗೆ ಉತ್ತರಿಸಿದರು-॥10॥
ಮೂಲಮ್ - 11
ನಾತಿಕ್ರಾಂತಂ ಮುನಿಶ್ರೇಷ್ಠ ಯತ್ಕರ್ತವ್ಯಂ ಕೃತಂ ಮಯಾ ।
ಸಂಗತಾ ಮುನಿನಾ ಪತ್ನೀ ಭಾರ್ಗವೇಣೇವ ರೇಣುಕಾ ॥
ಅನುವಾದ
ಮುನಿಶ್ರೇಷ್ಠರೇ! ನಾನು ವಿಶೇಷವೇನೂ ಮಾಡಲಿಲ್ಲ, ನನ್ನ ಕರ್ತವ್ಯವನ್ನು ನಾನು ಪೂರೈಸಿದೆ ಅಷ್ಟೇ. ಭಗುವಂಶೀ ಜಮದಗ್ನಿಯೊಂದಿಗೆ ಕೂಡಿಕೊಂಡ ರೇಣುಕೆಯಂತೆಯೇ ಮಹರ್ಷಿ ಗೌತಮರೊಂದಿಗೆ ಅಹಲ್ಯೆಯು ಸೇರಿಕೊಂಡಳು.॥11॥
ಮೂಲಮ್ - 12
ತಚ್ಛ್ರುತ್ವಾ ವಚನಂ ತಸ್ಯ ವಿಶ್ವಾಮಿತ್ರಸ್ಯ ಧೀಮತಃ ।
ಶತಾನಂದೋ ಮಹಾತೇಜಾ ರಾಮಂ ವಚನಮಬ್ರವೀತ್ ॥
ಅನುವಾದ
ಧೀಮಂತರಾದ ವಿಶ್ವಾಮಿತ್ರರ ಮಾತನ್ನು ಕೇಳಿ ಮಹಾ ತೇಜಸ್ವೀ ಶತಾನಂದರು ಶ್ರೀರಾಮಚಂದ್ರನಲ್ಲಿ ಇಂತೆಂದರು.॥12॥
ಮೂಲಮ್ - 13
ಸ್ವಾಗತಂ ತೇ ನರಶ್ರೇಷ್ಠ ದಿಷ್ಟ್ಯಾಪ್ರಾಪ್ತೋಽಸಿ ರಾಘವ ।
ವಿಶ್ವಾಮಿತ್ರಂ ಪುರಸ್ಕೃತ್ಯ ಮಹರ್ಷಿಮಪರಾಜಿತಮ್ ॥
ಅನುವಾದ
ನರಶ್ರೇಷ್ಠನೇ! ನಿನಗೆ ಸ್ವಾಗತವಿರಲಿ. ರಘುನಂದನ! ಯಾರಿಗೂ ಸೋಲದಿರುವ ಮಹರ್ಷಿ ವಿಶ್ವಾಮಿತ್ರರನ್ನು ಮುಂದೆ ಮಾಡಿ ಇಲ್ಲಿಯವರೆಗೆ ನೀನು ಆಗಮಿಸಿದ ಕಷ್ಟ ಮಾಡಿದುದು ನನ್ನ ಅಹೋಭಾಗ್ಯವಾಗಿದೆ.॥13॥
ಮೂಲಮ್ - 14
ಅಚಿಂತ್ಯಕರ್ಮಾ ತಪಸಾ ಬ್ರಹ್ಮರ್ಷಿರಮಿತಪ್ರಭಃ ।
ವಿಶ್ವಾಮಿತ್ರೋ ಮಹಾತೇಜಾ ವೇದ್ಮ್ಯೇನಂ ಪರಮಾಂ ಗತಿಮ್ ॥
ಅನುವಾದ
ಮಹರ್ಷಿ ವಿಶ್ವಾಮಿತ್ರರ ಕರ್ಮ ಅಚಿಂತ್ಯವಾಗಿದೆ. ಇವರು ತಪಸ್ಸಿನಿಂದ ಬ್ರಹ್ಮರ್ಷಿಪದವನ್ನು ಪಡೆದವರು. ಇವರ ಕಾಂತಿ ಅಸೀಮವಾಗಿದ್ದು, ಮಹಾತೇಜಸ್ವಿಗಳಾಗಿದ್ದಾರೆ. ನಾನು ಇವರನ್ನು ಬಲ್ಲೆನು. ಇವರು ಜಗತ್ತಿನ ಪರಮ ಹಿತೈಷಿಗಳಾಗಿದ್ದಾರೆ.॥14॥
ಮೂಲಮ್ - 15
ನಾಸ್ತಿಧನ್ಯತರೋ ರಾಮ ತ್ವತ್ತೋಽನ್ಯೋ ಭುವಿ ಕಶ್ಚನ ।
ಗೋಪ್ತಾ ಕುಶಿಕಪುತ್ರಸ್ತೇ ಯೇನ ತಪ್ತಂ ಮಹತ್ತಪಃ ॥
ಅನುವಾದ
ಶ್ರೀರಾಮ! ಈ ಪೃಥ್ವಿಯಲ್ಲಿ ನಿನಗಿಂತ ಹೆಚ್ಚಿನ ಧನ್ಯಾತಿಧನ್ಯರು ಬೇರೆ ಯಾರೂ ಇಲ್ಲ; ಏಕೆಂದರೆ ಕುಶಿಕನಂದನ ವಿಶ್ವಾಮಿತ್ರರು ನಿನಗೆ ರಕ್ಷಕರಾಗಿದ್ದಾರೆ. ಇವರು ಭಾರೀ ತಪಸ್ಸು ಮಾಡಿದವರು.॥15॥
ಮೂಲಮ್ - 16
ಶ್ರೂಯತಾಂ ಚಾಭಿಧಾಸ್ಯಾಮಿ ಕೌಶಿಕಸ್ಯ ಮಹಾತ್ಮನಃ ।
ಯಥಾಬಲಂ ಯಥಾವೃತ್ತಂ ತನ್ಮೇ ನಿಗದತಃ ಶೃಣು ॥
ಅನುವಾದ
ಮಹಾತ್ಮ ಕೌಶಿಕರ ಬಲ ಮತ್ತು ಸ್ವರೂಪವನ್ನು ಯಥಾರ್ಥವಾಗಿ ನಾನು ವರ್ಣಿಸುವೆನು. ನೀನು ಗಮನ ಕೊಟ್ಟು ಇದೆಲ್ಲವನ್ನು ನನ್ನಿಂದ ಕೇಳು.॥16॥
ಮೂಲಮ್ - 17
ರಾಜಾಽಽಸೀದೇಷ ಧರ್ಮಾತ್ಮಾ ದೀರ್ಘಕಾಲಮರಿಂದಮಃ ।
ಧರ್ಮಜ್ಞಃ ಕೃತವಿದ್ಯಶ್ಚ ಪ್ರಜಾನಾಂ ಚ ಹಿತೇ ರತಃ ॥
ಅನುವಾದ
ಈ ವಿಶ್ವಾಮಿತ್ರರು ಮೊದಲು ಧರ್ಮಾತ್ಮನಾದ ಒಬ್ಬ ರಾಜರಾಗಿದ್ದರು. ಇವರು ಶತ್ರುಗಳನ್ನು ದಮನಪೂರ್ವಕ ದೀರ್ಘ ಕಾಲದವರೆಗೆ ರಾಜ್ಯವಾಳಿದ್ದರು. ಇವರು ಧರ್ಮಜ್ಞರೂ, ವಿದ್ವಾಂಸರೂ ಆಗಿದ್ದು ಜೊತೆಗೆ ಪ್ರಜೆಯ ಹಿತ ಸಾಧನೆಯಲ್ಲಿ ತತ್ಪರರಾಗಿದ್ದರು.॥17॥
ಮೂಲಮ್ - 18
ಪ್ರಜಾಪತಿಸುತಸ್ತ್ವಾಸೀತ್ ಕುಶೋ ನಾಮ ಮಹೀಪತಿಃ ।
ಕುಶಸ್ಯ ಪುತ್ರೋ ಬಲವಾನ್ ಕುಶನಾಭಃ ಸುಧಾರ್ಮಿಕಃ ॥
ಅನುವಾದ
ಪೂರ್ವಕಾಲದಲ್ಲಿ ಪ್ರಜಾಪತಿಯ ಪುತ್ರ ಕುಶನೆಂಬ ಪ್ರಸಿದ್ಧ ರಾಜನೊಬ್ಬ ಆಗಿಹೋಗಿದ್ದನು. ಕುಶನ ಬಲವಂತ ಪುತ್ರನ ಹೆಸರು ಕುಶನಾಭ ಎಂದಿತ್ತು. ಅವನು ದೊಡ್ಡ ಧರ್ಮಾತ್ಮನಾಗಿದ್ದನು.॥18॥
ಮೂಲಮ್ - 19
ಕುಶನಾಭಸುತಸ್ತ್ವಾಸೀದ್ ಗಾಧಿರಿತ್ಯೇವ ವಿಶ್ರುತಃ ।
ಗಾಧೇಃ ಪುತ್ರೋ ಮಹಾತೇಜಾ ವಿಶ್ವಾಮಿತ್ರೋ ಮಹಾಮುನಿಃ ॥
ಅನುವಾದ
ಕುಶನಾಭನಿಗೆ ಗಾಧಿ ಎಂಬ ವಿಖ್ಯಾತ ಪುತ್ರನಿದ್ದನು. ಆ ಗಾಧಿಯ ಮಹಾತೇಜಸ್ವಿ ಪುತ್ರರೇ ಈ ಮಹಾಮುನಿ ವಿಶ್ವಾಮಿತ್ರರು.॥19॥
ಮೂಲಮ್ - 20
ವಿಶ್ವಾಮಿತ್ರೋ ಮಹಾತೇಜಾಃ ಪಾಲಯಾಮಾಸ ಮೇದಿನೀಮ್ ।
ಬಹುವರ್ಷ ಸಹಸ್ರಾಣಿ ರಾಜಾ ರಾಜ್ಯಮಕಾರಯತ್ ॥
ಅನುವಾದ
ಮಹಾತೇಜಸ್ವಿ ವಿಶ್ವಾಮಿತ್ರರಾಜರು ಅನೇಕ ಸಾವಿರ ವರ್ಷಗಳು ಈ ಪೃಥ್ವಿಯನ್ನು ಪಾಲಿಸುತ್ತಾ ರಾಜ್ಯವಾಳಿದರು.॥20॥
ಮೂಲಮ್ - 21
ಕದಾಚಿತ್ತು ಮಹಾತೇಜಾ ಯೋಜಯಿತ್ವಾ ವರೂಥಿನೀಮ್ ।
ಅಕ್ಷೌಹಿಣೀಪರಿವೃತಃ ಪರಿಚಕ್ರಾಮ ಮೇದಿನೀಮ್ ॥
ಅನುವಾದ
ಒಮ್ಮೆ ಮಹಾ ತೇಜಸ್ವೀ ರಾಜಾ ವಿಶ್ವಮಿತ್ರರು ಒಂದು ಅಕ್ಷೌಹಿಣಿ ಸೈನ್ಯದೊಂದಿಗೆ ಸಂಚರಿಸತೊಡಗಿದರು.॥21॥
ಮೂಲಮ್ - 22
ನಗರಾಣಿ ಚ ರಾಷ್ಟ್ರಾಣಿ ಸರಿತಶ್ಚ ಮಹಾಗಿರೀನ್ ।
ಆಶ್ರಮಾನ್ ಕ್ರಮಶೋ ರಾಜಾ ವಿಚಾರನ್ನಾಜಗಾಮ ಹ ॥
ಮೂಲಮ್ - 23
ವಸಿಷ್ಠಸ್ಯಾಶ್ರಮಪದಂ ನಾನಾ ಪುಷ್ಪಲತಾದ್ರುಮಮ್ ।
ನಾನಾಮೃಗಗಣಾಕೀರ್ಣಂ ಸಿದ್ಧಚಾರಣಸೇವಿತಮ್ ॥
ಅನುವಾದ
ಅವರು ಅನೇಕ ನಗರ, ರಾಷ್ಟ್ರಗಳನ್ನು ದೊಡ್ಡ ದೊಡ್ಡ ಪರ್ವತ ಮತ್ತು ಆಶ್ರಮಗಳನ್ನು ಕ್ರಮವಾಗಿ ಸಂಚರಿಸುತ್ತಾ ಮಹರ್ಷಿ ವಸಿಷ್ಠರ ಆಶ್ರಮಕ್ಕೆ ಬಂದು ತಲುಪಿದರು. ಆ ಆಶ್ರಮವು ನಾನಾ ವಿಧದ ಫಲ-ಪುಷ್ಟ, ಲತೆಗಳಿಂದ, ವೃಕ್ಷಗಳಿಂದ ಸುಶೋಭಿತವಾಗಿತ್ತು. ನಾನಾ ವನ್ಯಪಶುಗಳು ಅಲ್ಲಿ ಎಲ್ಲೆಡೆಗೆ ತುಂಬಿಕೊಂಡಿದ್ದವು ಹಾಗೂ ಸಿದ್ಧ-ಚಾರಣರೂ ಅಲ್ಲಿ ವಾಸಿಸುತ್ತಿದ್ದರು.॥22-23॥
(ಶ್ಲೋಕ 24)
ಮೂಲಮ್
ದೇವದಾನವಗಂಧರ್ವೈಃ ಕಿನ್ನರೈರುಪಶೋಭಿತಮ್ ।
ಪ್ರಶಾಂತಹರಿಣಾಕೀರ್ಣಂ ದ್ವಿಜಸಂಘ ನಿಷೇವಿತಮ್ ॥
ಬ್ರಹ್ಮರ್ಷಿಗಣಸಂಕೀರ್ಣಂ ದೇವರ್ಷಿಗಣಸೇವಿತಮ್ ।
ಅನುವಾದ
ದೇವತೆಗಳು, ದಾನವರು, ಗಂಧರ್ವರು, ಕಿನ್ನರರು ಅದರ ಶೋಭೆಯನ್ನು ಹೆಚ್ಚಿಸುತ್ತಿದ್ದರು. ಶಾಂತವಾದ ಮೃಗಗಳು ಅಲ್ಲಿ ತುಂಬಿದ್ದವು. ಬಹಳಷ್ಟು ಬ್ರಾಹ್ಮಣರು ಮತ್ತು ದೇವರ್ಷಿಗಳ ಸಮೂಹ ಅವನ್ನು ಸೇವಿಸುತ್ತಿತ್ತು.॥24॥
ಮೂಲಮ್ - 25
ತಪಶ್ಚರಣಸಂಸಿದ್ಧೈರಗ್ನಿಕಲ್ಪೈರ್ಮಹಾತ್ಮಭಿಃ ॥
ಮೂಲಮ್ - 26
ಸತತಂ ಸಂಕುಲಂ ಶ್ರೀಮದ್ ಬ್ರಹ್ಮಕಲ್ಪೈರ್ಮಹಾತ್ಮಭಿಃ ।
ಅಬ್ದಕ್ಷೈರ್ವಾಯುಭಕ್ಷೈಶ್ಚ ಶೀರ್ಣಪರ್ಣಾಶನೈಸ್ತಥಾ ॥
(ಶ್ಲೋಕ 27)
ಮೂಲಮ್
ಫಲಮೂಲಾಶನೈರ್ದಾಂತೈರ್ಜಿತದೋಷೈರ್ಜಿತೇಂದ್ರಿಯೈಃ ।
ಋಷಿಭಿರ್ವಾಲಖಿಲ್ಯೈಶ್ಚ ಜಪಹೋಮಪರಾಯಣೈಃ ॥
(ಶ್ಲೋಕ 28)
ಮೂಲಮ್
ಅನ್ಯೈರ್ವೈಖಾನಸೈಶ್ಚೈವ ಸಮಂತಾದುಪಶೋಭಿತಮ್ ।
ವಸಿಷ್ಠಸ್ಯಾಶ್ರಮಪದಂ ಬ್ರಹ್ಮಲೋಕಮಿವಾಪರಮ್ ।
ದದರ್ಶ ಜಯತಾಂ ಶ್ರೇಷ್ಠೋ ವಿಶ್ವಾಮಿತ್ರೋ ಮಹಾಬಲಃ ॥
ಅನುವಾದ
ತಪಸ್ಸಿನಿಂದ ಸಿದ್ಧರಾದ ಯಜ್ಞೇಶ್ವರನಂತೆ ತೇಜಸ್ವೀ ಮಹಾತ್ಮರು, ಬ್ರಹ್ಮನಿಗೆ ಸಮಾನರಾದ ಮಹಾಮಹಿಮ ಮಹಾತ್ಮರು ಸದಾಕಾಲ ಆಶ್ರಮದಲ್ಲಿ ನೆರೆದಿರುತ್ತಿದ್ದರು. ಅವರಲ್ಲಿ ಕೆಲವರು ಬರೀ ನೀರನ್ನು ಕುಡಿದು ಇರುತ್ತಿದ್ದರೆ, ಕೆಲವರು ಗಾಳಿಯನ್ನೇ ಕುಡಿದು ಇರುತ್ತಿದ್ದರು. ಎಷ್ಟೊ ಮಹಾತ್ಮರು ಫಲ ಮೂಲ ತಿಂದುಕೊಂಡು ಅಥವಾ ಒಣಗಿದ ತರಗೆಲೆಗಳನ್ನು ತಿನ್ನುತ್ತಾ ಇರುತ್ತಿದ್ದರು. ರಾಗಾದಿ ದೋಷಗಳನ್ನು ಗೆದ್ದು ಮನ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡ ಅನೇಕ ಋಷಿಮುನಿಗಳು ಜಪ-ಹೋಮಗಳಲ್ಲಿ ತೊಡಗಿದರು. ವಾಲಖಿಲ್ಯಮುನಿಗಳು ಹಾಗೂ ಇತರ ವೈಖಾನಸ ಮಹಾತ್ಮರು ಎಲ್ಲೆಡೆ ಇದ್ದು ಆ ಆಶ್ರಮದ ಶೋಭೆಯನ್ನು ಹೆಚ್ಚಿಸಿದರು. ಇವೇ ವಿಶೇಷಗಳ ಕಾರಣ ಮಹರ್ಷಿ ವಸಿಷ್ಠರ ಆಶ್ರಮವು ಇನ್ನೊಂದು ಬ್ರಹ್ಮಲೋಕದಂತೆ ಅನಿಸುತ್ತಿತ್ತು. ವಿಜಯೀ ವೀರರಲ್ಲಿ ಶ್ರೇಷ್ಠ ಮಹಾಬಲಿ ವಿಶ್ವಾಮಿತ್ರರು ವಸಿಷ್ಠರನ್ನು ದರ್ಶಿಸಿದರು.॥25-28॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ಐವತ್ತೊಂದನೆಯ ಸರ್ಗ ಪೂರ್ಣವಾಯಿತು.॥51॥