वाचनम्
ಭಾಗಸೂಚನಾ
ಪಿತೃದೇವತೆಗಳಿಂದ ಇಂದ್ರನಿಗೆ ಮೇಷವೃಷಣಗಳ ಸಂಯೋಜನೆ, ಶ್ರೀರಾಮನಿಂದ ಅಹಲ್ಯೆಯ ಉದ್ಧಾರ, ಅಹಲ್ಯಾ ಗೌತಮರಿಂದ ಶ್ರೀರಾಮನಿಗೆ ಸತ್ಕಾರ
ಮೂಲಮ್ - 1
ಅಫಲಸ್ತು ತತಃ ಶಕ್ರೋ ದೇವಾನಗ್ನಿಪುರೋಗಮಾನ್ ।
ಅಬ್ರವೀತ್ ತ್ರಸ್ತನಯನಃ ಸಿದ್ಧಗಂಧರ್ವಚಾರಣಾನ್ ॥
ಅನುವಾದ
ಅನಂತರ ವೃಷಣ ರಹಿತನಾದ ಇಂದ್ರನು ಬಹಳ ದೈನ್ಯ ಮುಖಭಾವದಿಂದ ಅಗ್ನಿಯೇ ಮೊದಲಾದ ದೇವತೆಗಳಲ್ಲಿ, ಸಿದ್ಧ ಗಂಧರ್ವರಲ್ಲಿ, ಚಾರಣರಲ್ಲಿ ದೀನ ಧ್ವನಿಯಲ್ಲಿ ಹೀಗೆ ಹೇಳಿದನು.॥1॥
ಮೂಲಮ್ - 2
ಕುರ್ವತಾ ತಪಸೋ ವಿಘ್ನಂ ಗೌತಮಸ್ಯ ಮಹಾತ್ಮನಃ ।
ಕ್ರೋಧಮುತ್ಪಾದ್ಯ ಹಿ ಮಯಾ ಸುರಕಾರ್ಯಮಿದಂ ಕೃತಮ್ ॥
ಅನುವಾದ
ದೇವತೆಗಳಿರಾ! ಮಹಾತ್ಮಾ ಗೌತಮರ ತಪಸ್ಸಿನಲ್ಲಿ ವಿಘ್ನವನ್ನು ಉಂಟುಮಾಡಿ ಅವರನ್ನು ಕ್ರೋಧಿತಗೊಳಿಸಿ, ನಾನು ಈ ದೇವತೆಗಳ ಕಾರ್ಯವನ್ನೇ ನೆರವೇರಿಸಿದೆ.॥2॥
ಮೂಲಮ್ - 3
ಅಫಲೋಽಸ್ಮಿ ಕೃತಸ್ತೇನ ಕ್ರೋಧಾತ್ ಸಾ ಚ ನಿರಾಕೃತಾ ।
ಶಾಪಮೋಕ್ಷೇಣ ಮಹತಾ ತಪೋಽಸ್ಯಾಪಹೃತಂ ಮಯಾ ॥
ಅನುವಾದ
ಮುನಿಯು ಕ್ರೋಧದಿಂದ ಭಾರೀ ಶಾಪ ಕೊಟ್ಟು ನನ್ನನ್ನು ಅಂಡಕೋಶ ರಹಿತನನ್ನಾಗಿಸಿದನು ಹಾಗೂ ತನ್ನ ಪತ್ನಿಯನ್ನು ತ್ಯಜಿಸಿಬಿಟ್ಟನು. ಇದರಿಂದ ನನ್ನಿಂದ ಅವರ ತಪಸ್ಸಿನ ಅಪಹರಣವಾಯಿತು.॥3॥
ಮೂಲಮ್ - 4
ತಸ್ಮಾತ್ಸುರವರಾಃ ಸರ್ವೇ ಸರ್ಷಿಸಂಘಾಃ ಸಚಾರಣಾಃ ।
ಸುರಕಾರ್ಯಕರಂ ಯೂಯಂ ಸಫಲಂ ಕರ್ತುಮರ್ಹಥ ॥
ಅನುವಾದ
(ಒಂದು ವೇಳೆ ನಾನು ಅವರ ತಪಸ್ಸಿನಲ್ಲಿ ವಿಘ್ನವನ್ನು ಉಂಟು ಮಾಡದಿದ್ದರೆ, ಅವರು ದೇವತೆಗಳ ರಾಜ್ಯವನ್ನು ಕಸಿದುಕೊಳ್ಳುತ್ತಿದ್ದರು. ಆದ್ದರಿಂದ ಹೀಗೆ ಮಾಡಿ) ನಾನು ದೇವತೆಗಳ ಕಾರ್ಯವನ್ನೇ ಸಿದ್ಧಗೊಳಿಸಿರುವೆನು. ಆದ್ದರಿಂದ ಶ್ರೇಷ್ಠ ದೇವತೆಗಳಿರಾ! ನೀವೆಲ್ಲ, ಋಷಿ ಸಮುದಾಯವನ್ನು ಮತ್ತು ಚಾರಣರು ಸೇರಿ ನನ್ನನ್ನು ವೃಷಣಯುಕ್ತನನ್ನಾಗಿಸಲು ಪ್ರಯತ್ನಿಸಿರಿ.॥4॥
ಮೂಲಮ್ - 5
ಶತಕ್ರತೋರ್ವಚಃ ಶ್ರುತ್ವಾ ದೇವಾಃ ಸಾಗ್ನಿಪುರೋಗಮಾಃ ।
ಪಿತೃದೇವಾನುಪೇತ್ಯಾಹುಃಸರ್ವೇ ಸಹ ಮರುದ್ಗಣೈಃ ॥
ಅನುವಾದ
ಇಂದ್ರನ ಈ ಮಾತನ್ನು ಕೇಳಿ ಮರುದ್ಗಣ ಸಹಿತ ಅಗ್ನಿಯೇ ಮೊದಲಾದ ಸಮಸ್ತ ದೇವತೆಗಳು ಕವ್ಯವಾಹನ ಮೊದಲಾದ ಪಿತೃದೇವತೆಗಳ ಬಳಿಗೆ ಹೋಗಿ ಹೇಳಿದರು.॥5॥
ಮೂಲಮ್ - 6
ಅಯಂ ಮೇಷಃ ಸವೃಷಣಃ ಶಕ್ರೋ ಹೃವೃಷಣಃ ಕೃತಃ ।
ಮೇಷಸ್ಯ ವೃಷಣೌ ಗೃಹ್ಯ ಶಕ್ರಾಯಾಶು ಪ್ರಯಚ್ಛತ ॥
ಅನುವಾದ
ಪಿತೃಗಳೇ! ಈ ನಿಮ್ಮ ಟಗರಿಗೆ ವೃಷಣಗಳಿವೆ ಹಾಗೂ ಇಂದ್ರನು ವೃಷಣ ರಹಿತನಾಗಿರುವನು. ಆದ್ದರಿಂದ ಈ ಟಗರಿನ ಎರಡೂ ವೃಷಣಗಳನ್ನು ಬೇಗನೆ ಇಂದ್ರನಿಗೆ ಅರ್ಪಿಸಿರಿ.॥6॥
ಮೂಲಮ್ - 7
ಅಫಲಸ್ತು ಕೃತೋ ಮೇಷಃ ಪರಾಂ ತುಷ್ಟಿಂ ಪ್ರದಾಸ್ಯತಿ ।
ಭವತಾಂ ಹರ್ಷಣಾರ್ಥಂ ಚ ಯೇಚ ದಾಸ್ಯಂತಿ ಮಾನವಾಃ ।
ಅಕ್ಷಯಂ ಹಿ ಫಲಂ ತೇಷಾಂ ಯೂಯಂ ದಾಸ್ಯಥ ಪುಷ್ಕಲಮ್ ॥
ಅನುವಾದ
ಅಂಡಕೋಶದಿಂದ ರಹಿತವಾದ ಈ ಟಗರು ಇದೇ ಸ್ಥಾನದಲ್ಲಿ ನಿಮಗೆ ಪರಮಸಂತೋಷ ಕೊಡುವನು. ಆದ್ದರಿಂದ ಯಾವ ಮನುಷ್ಯನು ನಿಮಗೆ ಪ್ರಸನ್ನತೆಯಿಂದ ವೃಷಣರಹಿತ ಟಗರನ್ನು ದಾನ ಮಾಡುವನೋ, ಆ ದಾನಕ್ಕೆ ನೀವು ಉತ್ತಮ ಪೂರ್ಣ ಫಲವನ್ನು ಕೊಡಿರಿ.॥7॥
ಮೂಲಮ್ - 8
ಅಗ್ನೇಸ್ತು ವಚನಂ ಶ್ರುತ್ವಾ ಪಿತೃದೇವಾಃ ಸಮಾಗತಾಃ ।
ಉತ್ಪಾಟ್ಯ ಮೇಷವೃಷಣೌ ಸಹಸ್ರಾಕ್ಷೇ ನ್ಯವೇಶಯನ್ ॥
ಅನುವಾದ
ಅಗ್ನಿಯ ಈ ಮಾತನ್ನು ಕೇಳಿ ಪಿತೃದೇವತೆಗಳು ಒಂದೆಡೆ ಸೇರಿ ಟಗರಿನ ವೃಷಣಗಳನ್ನು ಕಿತ್ತು ಇಂದ್ರನ ಶರೀರದಲ್ಲಿ ಉಚಿತ ಸ್ಥಾನದಲ್ಲಿ ಜೋಡಿಸಿದರು.॥8॥
ಮೂಲಮ್ - 9
ತದಾಪ್ರಭೃತಿ ಕಾಕುತ್ಸ್ಥ ಪಿತೃದೇವಾಃ ಸಮಾಗತಾಃ ।
ಅಫಲಾನ್ ಭುಂಜತೇ ಮೇಷಾನ್ ಫಲೈಸ್ತೇಷಾಮಯೋಜಯನ್ ॥
ಅನುವಾದ
ಕಾಕುತ್ಸ್ಥನೇ! ಅಂದಿನಿಂದ ಅಲ್ಲಿ ಬಂದಿರುವ ಸಮಸ್ತ ಪಿತೃದೇವತೆಗಳು ಅಂಡಕೋಶರಹಿತ ಟಗರನ್ನೇ ಉಪಯೋಗಿಸುತ್ತಾರೆ ಮತ್ತು ದಾನಿಗೆ ಅವರ ದಾನದ ಫಲವನ್ನು ಕೊಡುತ್ತಾರೆ.॥9॥
ಮೂಲಮ್ - 10
ಇಂದ್ರಸ್ತು ಮೇಷವೃಷಣಸ್ತದಾಪ್ರಭೃತಿ ರಾಘವ ।
ಗೌತಮಸ್ಯ ಪ್ರಭಾವೇಣ ತಪಸಾ ಚ ಮಹಾತ್ಮನಃ ॥
ಅನುವಾದ
ರಘುನಂದನ! ಆಗಿನಿಂದ ಮಹಾತ್ಮಾ ಗೌತಮರ ತಪಸ್ಸಿನ ಪ್ರಭಾವದಿಂದ ಇಂದ್ರನಿಗೆ ಟಗರಿನ ವೃಷಣಗಳನ್ನು ಧರಿಸಬೇಕಾಯಿತು.॥10॥
ಮೂಲಮ್ - 11
ತದಾಗಚ್ಛ ಮಹಾತೇಜ ಆಶ್ರಮಂ ಪುಣ್ಯಕರ್ಮಣಃ ।
ತಾರಯೈನಾಂ ಮಹಾಭಾಗಾಮಹಲ್ಯಾಂ ದೇವರೂಪಿಣೀಮ್ ॥
ಅನುವಾದ
ಮಹಾತೇಜಸ್ವೀ ರಾಮಾ! ಈಗ ನೀನು ಪುಣ್ಯಕರ್ಮ ಮಹರ್ಷಿ ಗೌತಮರ ಈ ಆಶ್ರಮಕ್ಕೆ ನಡೆ ಹಾಗೂ ಈ ದೇವ ರೂಪಿಣಿ ಮಹಾಭಾಗಾ ಅಹಲ್ಯೆಯ ಉದ್ಧಾರ ಮಾಡು.॥11॥
ಮೂಲಮ್ - 12
ವಿಶ್ವಾಮಿತ್ರವಚಃ ಶ್ರುತ್ವಾ ರಾಘವಃ ಸಹಲಕ್ಷ್ಮಣಃ ।
ವಿಶ್ವಾಮಿತ್ರಂ ಪುರಸ್ಕೃತ್ಯ ಆಶ್ರಮಂ ಪ್ರವಿವೇಶ ಹ ॥
ಅನುವಾದ
ವಿಶ್ವಾಮಿತ್ರರ ಈ ಮಾತನ್ನು ಕೇಳಿ ಲಕ್ಷ್ಮಣ ಸಹಿತ ಶ್ರೀರಾಮನು ಮಹರ್ಷಿಗಳನ್ನು ಮುಂದಿರಿಸಿಕೊಂಡು ಆ ಆಶ್ರಮವನ್ನು ಪ್ರವೇಶಿಸಿದನು.॥12॥
ಮೂಲಮ್ - 13
ದದರ್ಶ ಚ ಮಹಾಭಾಗಾಂ ತಪಸಾ ದ್ಯೋತಿತಪ್ರಭಾನ್ ।
ಲೋಕೈರಪಿ ಸಮಾಗಮ್ಯ ದುರ್ನಿರೀಕ್ಷ್ಯಾಂ ಸುರಾಸುರೈಃ ॥
ಅನುವಾದ
ಅಲ್ಲಿ ಹೋಗಿ ನೋಡಿದರೆ ಮಹಾಸೌಭಾಗ್ಯಶಾಲಿನೀ ಅಹಲ್ಯೆಯು ತನ್ನ ತಪಸ್ಸಿನಿಂದ ಪ್ರಕಾಶಿಸುತ್ತಿದ್ದಳು. ಈ ಲೋಕದ ಮನುಷ್ಯರು ಹಾಗೂ ಸಮಸ್ತ ದೇವತೆಗಳು, ಅಸುರರೂ ಅಲ್ಲಿಗೆ ಬಂದು ಆಕೆಯ ಪ್ರಖರತೆಯನ್ನು ನೋಡಲಾಗುತ್ತಿರಲಿಲ್ಲ.॥13॥
ಮೂಲಮ್ - 14
ಪ್ರಯತ್ನಾನ್ನಿರ್ಮಿತಾಂ ಧಾತ್ರಾ ದಿವ್ಯಾಂ ಮಾಯಾಮಯೀಮಿವ ।
ಧೂಮೇನಾಭಿಪರೀತಾಂಗೀಂ ದೀಪ್ತಾಮಗ್ನಿ ಶಿಖಾಮಿವ ॥
ಮೂಲಮ್ - 15
ಸತುಷಾರಾವೃತಾಂ ಸಾಭ್ರಾಂ ಪೂರ್ಣಚಂದ್ರ ಪ್ರಭಾಮಿವ ।
ಮಧ್ಯೇಂಽಭಸೋ ದುರಾಧರ್ಷಾಂ ದೀಪ್ತಾಂ ಸೂರ್ಯಪ್ರಭಾಮಿವ ॥
ಅನುವಾದ
ಆಕೆಯ ಸ್ವರೂಪವು ದಿವ್ಯವಾಗಿತ್ತು. ವಿಧಾತನು ಬಹಳ ಪ್ರಯತ್ನದಿಂದ ಆಕೆಯ ಅವಯವಗಳನ್ನು ನಿರ್ಮಿಸಿದ್ದನು. ಆಕೆ ವಾಯಾಮಯದಂತೆ ಕಂಡುಬರುತ್ತಿದ್ದಳು. ಹೊಗೆಯಿಂದ ಆವರಿಸಿದ ಪ್ರಜ್ವಲಿತ ಅಗ್ನಿಯಂತೆ ಕಾಣುತ್ತಿದ್ದಳು. ಅವಳನ್ನು ನೋಡಿದರೆ, ಮೋಡಗಳಿಂದ ಮುಚ್ಚಿ ಹೋದ ಚಂದ್ರನ ಪ್ರಭೆಯಂತೆ ಅನಿಸುತ್ತಿತ್ತು. ನೀರಿನಲ್ಲಿ ಪ್ರತಿಸ್ಫಲಿಸುವ ಸೂರ್ಯನ ದುರ್ಧರ್ಷ ಪ್ರಭೆಯಂತೆ ಕಣ್ಣಿಗೆ ಕಾಣುತ್ತಿದ್ದಳು.॥14-15॥
ಮೂಲಮ್ - 16
ಸಾ ಹಿ ಗೌತಮವಾಕ್ಯೇನ ದುರ್ನಿರೀಕ್ಷ್ಯಾ ಬಭೂವ ಹ ।
ತ್ರಯಾಣಾಮಪಿ ಲೋಕಾನಾಂ ಯಾವದ್ರಾಮಸ್ಯ ದರ್ಶನಮ್ ।
ಶಾಪಸ್ಯಾಂತಮುಪಾಗಮ್ಯ ತೇಷಾಂ ದರ್ಶನಮಾಗತಾ ॥
ಅನುವಾದ
ಗೌತಮರ ಶಾಪವಶ ಶ್ರೀರಾಮಚಂದ್ರನ ದರ್ಶನವಾಗುವ ಮೊದಲು ಮೂರು ಲೋಕದ ಯಾವ ಪ್ರಾಣಿಗೂ ಆಕೆಯ ದರ್ಶನ ದುರ್ಲಭವಾಗಿತ್ತು. ಶ್ರೀರಾಮನ ದರ್ಶನದಿಂದ ಆಕೆಯ ಶಾಪವು ಅಂತ್ಯವಾಗಿ ಅವಳು ಎಲ್ಲರಿಗೆ ಕಾಣುವಂತಾದಳು.॥16॥
ಮೂಲಮ್ - 17
ರಾಘವೌ ತು ತದಾ ತಸ್ಯಾಃ ಪಾದೌ ಜಗೃಹತುರ್ಮುದಾ ।
ಸ್ಮರಂತೀ ಗೌತಮವಚಃ ಪ್ರತಿಜಗ್ರಾಹ ಸಾ ಹಿ ತೌ ॥
ಮೂಲಮ್ - 18
ಪಾದ್ಯಮರ್ಘ್ಯಂ ತಥಾಽಽತಿಥ್ಯಂ ಚಕಾರ ಸುಸಮಾಹಿತಾ ।
ಪ್ರತಿಜಗ್ರಾಹ ಕಾಕುತ್ಸ್ಥೋ ವಿಧಿದೃಷ್ಟೇನ ಕರ್ಮಣಾ ॥
ಅನುವಾದ
ಆಗ ಶ್ರೀರಾಮಲಕ್ಷ್ಮಣರು ಬಹಳ ಸಂತೋಷದಿಂದ ಅಹಲ್ಯೆಯ ಎರಡೂ ಚರಣಗಳನ್ನು ಸ್ಪರ್ಶಿಸಿದರು. ಮಹರ್ಷಿ ಗೌತಮರ ಮಾತನ್ನು ನೆನೆದು ಅಹಲ್ಯೆಯು ಭಕ್ತಿಯಿಂದ ಆದರಣೀಯ ಅತಿಥಿಗಳಾದ ಈ ಸಹೋದರರನ್ನು ಅರ್ಘ್ಯಪಾದ್ಯಾದಿಗಳಿಂದ ಪೂಜಿಸಿದಳು. ಶ್ರೀರಾಮಚಂದ್ರನು ಶಾಸ್ತ್ರವಿಧಿಗನುಸಾರವಾಗಿ ಅಹಲ್ಯೆಯ ಆತಿಥ್ಯವನ್ನು ಸ್ವೀಕರಿಸಿದನು.॥17-18॥
ಮೂಲಮ್ - 19
ಪುಷ್ಪವೃಷ್ಟಿರ್ಮಹತ್ಯಾಸೀದ್ ದೇವದುನ್ದುಭಿನಿಃಸ್ವನೈಃ ।
ಗಂಧರ್ವಾಪ್ಸರಸಾಂ ಚೈವ ಮಹಾನಾಸೀತ್ಸಮುತ್ಸವಃ ॥
ಅನುವಾದ
ಆಗ ದೇವದುಂದುಭಿಗಳು ಮೊಳಗಿದವು. ಜೊತೆಗೆ ಆಕಾಶದಿಂದ ಪುಷ್ಪವೃಷ್ಟಿಯಾಯಿತು. ಗಂಧರ್ವರು ಮತ್ತು ಅಪ್ಸರೆಯರು ಮಹೋತ್ಸವವನ್ನು ಆಚರಿಸತೊಡಗಿದರು.॥19॥
ಮೂಲಮ್ - 20
ಸಾಧು ಸಾಧ್ವಿತಿ ದೇವಾಸ್ತಾಮಹಲ್ಯಾಂ ಸಮಪೂಜಯನ್ ।
ತಪೋಬಲವಿಶುದ್ಧಾಂಗೀಂ ಗೌತಮಸ್ಯ ವಶಾನುಗಾಮ್ ॥
ಅನುವಾದ
ಮಹರ್ಷಿ ಗೌತಮರ ಅಧೀನದಲ್ಲಿರುವ ಅಹಲ್ಯೆಯು ತನ್ನ ತಪಸ್ಸಿನ ಶಕ್ತಿಯಿಂದ ವಿಶುದ್ಧ ಸ್ವರೂಪವನ್ನು ಹೊಂದಿದಳು. ಇದನ್ನು ನೋಡಿ ಸಮಸ್ತ ದೇವತೆಗಳು ಆಕೆಗೆ ಧನ್ಯವಾದಗಳನ್ನು ಕೊಡುತ್ತಾ ಭೂರಿ-ಭೂರಿ ಪ್ರಶಂಸಿಸಿದರು.॥20॥
ಮೂಲಮ್ - 21
ಗೌತಮೋಽಪಿ ಮಹಾತೇಜಾ ಅಹಲ್ಯಾಸಹಿತಃ ಸುಖೀ ।
ರಾಮಂ ಸಂಪೂಜ್ಯ ವಿಧಿವತ್ ತಪಸ್ತೇಪೇ ಮಹಾತಪಾಃ ॥
ಅನುವಾದ
ಮಹಾತೇಜಸ್ವೀ, ಮಹಾತಪಸ್ವೀ, ಗೌತಮರೂ ಅಹಲ್ಯೆಯನ್ನು ಪಡೆದು ಪರಮ ಸುಖಿಗಳಾದರು. ಅವರೂ ಕೂಡ ಶ್ರೀರಾಮನನ್ನು ವಿಧಿವತ್ತಾಗಿ ಪೂಜಿಸಿ, ತಪಸ್ಸನ್ನು ಪ್ರಾರಂಭಿಸಿದರು.॥21॥
ಮೂಲಮ್ - 22
ರಾಮೋಽಪಿ ಪರಮಾಂ ಪೂಜಾಂ ಗೌತಮಸ್ಯ ಮಹಾಮುನೇಃ ।
ಸಕಾಶಾದ್ ವಿಧಿವತ್ ಪ್ರಾಪ್ಯ ಜಗಾಮ ಮಿಥಿಲಾಂ ತತಃ ॥
ಅನುವಾದ
ಮಹಾಮುನಿ ಗೌತಮರಿಂದ ವಿಧಿವತ್ತಾದ ಉತ್ತಮ ಪೂಜೆ, ಆದರ ಸತ್ಕಾರ ಪಡೆದು ಶ್ರೀರಾಮನು ಮುನಿವರ ವಿಶ್ವಾಮಿತ್ರರೊಂದಿಗೆ ಮಿಥಿಲಾಪುರಿಗೆ ಹೊರಟನು.॥22॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ನಲವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು. ॥49॥