वाचनम्
ಭಾಗಸೂಚನಾ
ಸುಮತಿರಾಜನಿಂದ ಸತ್ಕೃತರಾದ ಕೌಶಿಕ-ರಾಮ-ಲಕ್ಷ್ಮಣರು ಮಿಥಿಲೆಗೆ ಪ್ರಯಾಣಮಾಡಿದುದು, ದಾರಿಯಲ್ಲಿ ಪಾಳುಬಿದ್ದ ಗೌತಮಾಶ್ರಮದ ವಿವರಣೆ - ಇಂದ್ರ ಮತ್ತು ಅಹಲ್ಯೆಯರಿಗೆ ಗೌತಮರ ಶಾಪ
ಮೂಲಮ್ - 1
ಪೃಷ್ಟ್ವಾ ತು ಕುಶಲಂ ತತ್ರ ಪರಸ್ಪರಸಮಾಗಮೇ ।
ಕಥಾಂತೇ ಸುಮತಿರ್ವಾಕ್ಯಂ ವ್ಯಾಜಹಾರಮಹಾಮುನಿಮ್ ॥
ಅನುವಾದ
ಅಲ್ಲಿ ಪರಸ್ಪರ ಸಮಾಗಮದಲ್ಲಿ ಒಬ್ಬರು ಮತ್ತೊಬ್ಬರ ಕ್ಷೇಮ-ಸಮಾಚಾರ ಕೇಳಿ ಮಾತುಕತೆಯಾಡಿ, ಕೊನೆಯಲ್ಲಿ ಸುಮತಿಯು ಮಹಾಮುನಿ ವಿಶ್ವಾಮಿತ್ರರಲ್ಲಿ ಹೇಳಿದನು.॥1॥
ಮೂಲಮ್ - 2
ಇಮೌ ಕುಮಾರೌ ಭದ್ರಂ ತೇ ದೇವತುಲ್ಯಪರಾಕ್ರಮೌ ।
ಗಜಸಿಂಹಗತೀ ವೀರೌ ಶಾರ್ದೂಲವೃಷಭೋಪಮೌ ॥
ಅನುವಾದ
‘ಬ್ರಹ್ಮರ್ಷಿಗಳೇ! ನಿಮಗೆ ಮಂಗಳವಾಗಲಿ’. ಇವರಿಬ್ಬರು ರಾಜಕುಮಾರರು ದೇವತೆಗಳಂತೆ ಪರಾಕ್ರಮಿಗಳು ಎಂದು ತೋರುತ್ತಾರೆ. ಇವರ ನಡಿಗೆ ಗಜ ಮತ್ತು ಸಿಂಹದಂತೆ ಗಂಭೀರವಾಗಿದೆ. ಇವರೀರ್ವರು ವೀರರು ಸಿಂಹ ಮತ್ತು ಗೂಳಿಯಂತೆ ಕಂಡು ಬರುತ್ತಿರುವರು.॥2॥
ಮೂಲಮ್ - 3
ಪದ್ಮಪತ್ರವಿಶಾಲಾಕ್ಷೌ ಖಡ್ಗತೂಣಧನುರ್ಧರೌ ।
ಅಶ್ವಿನಾವಿವ ರೂಪೇಣ ಸಮುಪಸ್ಥಿತಯೌವನೌ ॥
ಅನುವಾದ
ಇವರ ವಿಶಾಲಕಣ್ಣುಗಳು ಕಮಲದಳಗಳಂತೆ ಶೋಭಿಸುತ್ತಿವೆ. ಇಬ್ಬರೂ ಖಡ್ಗ, ಧನುಷ್ಯ, ಬತ್ತಳಿಕೆಗಳನ್ನು ಧರಿಸಿರುವರು. ತಮ್ಮ ರೂಪ ಸೌಂದರ್ಯದಿಂದ ಅಶ್ವಿನಿದೇವತೆಗಳನ್ನು ನಾಚಿಸುತ್ತಾ, ಯೌವನದ ಹೊಸ್ತಿಲಿನಲ್ಲಿ ಅಡಿಯನ್ನಿಟ್ಟಿರುವರು.॥3॥
ಮೂಲಮ್ - 4
ಯದೃಚ್ಛಯೈವ ಗಾಂ ಪ್ರಾಪ್ತೌ ದೇವಲೋಕಾದಿವಾಮರೌ ।
ಕಥಂ ಪದ್ಭ್ಯಾಮಿಹ ಪ್ರಾಪ್ತೌ ಕಿಮರ್ಥಂ ಕಸ್ಯ ವಾ ಮುನೇ ॥
ಅನುವಾದ
ಇವರನ್ನು ನೋಡಿದರೆ ಈ ಇಬ್ಬರು ದೇವಕುಮಾರರು ವೇಷಮರೆಸಿ, ದೇವಲೋಕದಿಂದ ಪೃಥ್ವಿಗೆ ಬಂದಂತೆ ಅನಿಸುತ್ತದೆ. ಮುನಿಯೇ! ಇವರಿಬ್ಬರು ಯಾರ ಪುತ್ರರು? ಯಾವುದಕ್ಕಾಗಿ ಇಲ್ಲಿಗೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ.॥4॥
ಮೂಲಮ್ - 5
ಭೂಷಯಂತಾವಿಮಂ ದೇಶಂ ಚಂದ್ರಸೂರ್ಯಾವಿವಾಂಬರಮ್ ।
ಪರಸ್ಪರೇಣ ಸದೃಶೌ ಪ್ರಮಾಣೇಂಗಿತಚೇಷ್ಟಿತೈಃ ॥
ಅನುವಾದ
ಚಂದ್ರ-ಸೂರ್ಯರು ಆಕಾಶದ ಶೋಭೆಯನ್ನು ಹೆಚ್ಚಿಸುತ್ತಿರುವಂತೆ, ಈ ಇಬ್ಬರು ಕುಮಾರರು ಈ ದೇಶವನ್ನು ಸುಶೋಭಿತ ಗೊಳಿಸುತ್ತಿದ್ದಾರೆ. ದೇಹದ ಎತ್ತರ, ಮನೋಭಾವ ಸೂಚಕ ಸಂಕೇತ ಹಾಗೂ ನಡೆನುಡಿಗಳಲ್ಲಿ ಒಬ್ಬರು ಮತ್ತೊಬ್ಬರಿಗೆ ಸಮವಾಗಿದ್ದಾರೆ.॥5॥
ಮೂಲಮ್ - 6
ಕಿಮರ್ಥಂ ಚ ನರಶ್ರೇಷ್ಠೌ ಸಂಪ್ರಾಪ್ತೌ ದುರ್ಗಮೇ ಪಥಿ ।
ವರಾಯುಧಧರೌ ವೀರೌ ಶ್ರೋತುಮಿಚ್ಛಾಮಿ ತತ್ತ್ವತಃ ॥
ಅನುವಾದ
ಶ್ರೇಷ್ಠ ಆಯುಧಧಾರಿಯಾದ ಇವರಿಬ್ಬರು ನರಶ್ರೇಷ್ಠ ವೀರರು ಈ ದುರ್ಗಮ ಮಾರ್ಗದಿಂದ ಏಕೆ ಬಂದಿರುವರು? ಇದನ್ನು ನಾನು ಯಥಾರ್ಥವಾಗಿ ತಿಳಿಯಲು ಬಯಸುತ್ತಿರುವೆನು.॥6॥
ಮೂಲಮ್ - 7
ತಸ್ಯ ತದ್ವಚನಂ ಶ್ರುತ್ವಾ ಯಥಾವೃತ್ತಂ ನ್ಯವೇದಯತ್ ।
ಸಿದ್ಧಾಶ್ರಮನಿವಾಸಂ ಚ ರಾಕ್ಷಸಾನಾಂ ವಧಂ ಯಥಾ ।
ವಿಶ್ವಾಮಿತ್ರವಚಃ ಶ್ರುತ್ವಾ ರಾಜಾ ಪರಮವಿಸ್ಮಿತಃ ॥
ಅನುವಾದ
ಸುಮತಿಯ ಈ ಮಾತನ್ನು ಕೇಳಿ ವಿಶ್ವಾಮಿತ್ರರು ಎಲ್ಲ ವೃತ್ತಾಂತವನ್ನು ಸವಿಸ್ತಾರವಾಗಿ ರಾಜನಿಗೆ ತಿಳಿಸಿದರು. ಸಿದ್ಧಾಶ್ರಮದಲ್ಲಿನ ವಾಸ, ರಾಕ್ಷಸರ ವಧೆಯ ಪ್ರಸಂಗವನ್ನು ಅರುಹಿದರು. ವಿಶ್ವಾಮಿತ್ರರ ಈ ಮಾತನ್ನು ಕೇಳಿ ಸುಮತಿ ರಾಜನಿಗೆ ಬಹಳ ವಿಸ್ಮಯವಾಯಿತು.॥7॥
ಮೂಲಮ್ - 8
ಅತಿಥೀ ಪರಮಂ ಪ್ರಾಪ್ತೌ ಪುತ್ರೌ ದಸರಥಸ್ಯತೌ ।
ಪುಜಯಾಮಾಸ ವಿಧಿವತ್ ಸತ್ಕಾರಾರ್ಹೌ ಮಹಾಬಲೌ ॥
ಅನುವಾದ
ಅವನು ಪರಮ ಆದರಣೀಯ ಅತಿಥಿಯಾಗಿ ಬಂದಿರುವ ಆ ಇಬ್ಬರು ಮಹಾಬಲಿ ದಶರಥ ಪುತ್ರರನ್ನು ವಿಧಿವತ್ತಾಗಿ ಆತಿಥ್ಯ-ಸತ್ಕಾರ ಮಾಡಿದನು.॥8॥
ಮೂಲಮ್ - 9
ತತಃ ಪರಮಸತ್ಕಾರಂ ಸುಮತೇಃ ಪ್ರಾಪ್ಯರಾಘವೌ ।
ಉಷ್ಯ ತತ್ರ ನಿಶಾಮೇಕಾಂ ಜಗ್ಮತುರ್ಮಿಥಿಲಾಂ ತತಃ ॥
ಅನುವಾದ
ಸುಮತಿಯಿಂದ ಉತ್ತಮ ಆದರ ಸತ್ಕಾರ ಪಡೆದು ರಘುವಂಶಿ ಕುಮಾರರಾದ ಅವರಿಬ್ಬರೂ ಒಂದು ಇರುಳನ್ನು ಅಲ್ಲೇ ಕಳೆದರು ಹಾಗೂ ಮರುದಿನ ಬೆಳಗ್ಗೆ ವಿಶ್ವಾಮಿತ್ರರೊಂದಿಗೆ ಮಿಥಿಲೆಯ ಕಡೆಗೆ ಹೊರಟರು.॥9॥
ಮೂಲಮ್ - 10
ತಾಂ ದೃಷ್ಟ್ವಾ ಮುನಯಃ ಸರ್ವೇ ಜನಕಸ್ಯ ಪುರೀಂ ಶುಭಾಮ್ ।
ಸಾಧು ಸಾಧ್ವಿತಿ ಶಂಸಂತೋ ಮಿಥಿಲಾಂ ಸಮಪೂಜಯನ್ ॥
ಅನುವಾದ
ಮಿಥಿಲೆಗೆ ತಲುಪಿ ಜನಕಪುರಿಯ ಸುಂದರ ಶೋಭೆಯನ್ನು ನೋಡಿ ಎಲ್ಲ ಮಹರ್ಷಿಗಳು ಸಾಧು-ಸಾಧು ಎಂದು ಹೇಳುತ್ತಾ ಅವರನ್ನು ಭೂರಿ-ಭೂರಿ ಪ್ರಶಂಸಿಸತೊಡಗಿದರು.॥10॥
ಮೂಲಮ್ - 11
ಮಿಥಿಲೋಪವನೇ ತತ್ರ ಆಶ್ರಮಂ ದೃಶ್ಯ ರಾಘವಃ ।
ಪುರಾಣಂ ನಿರ್ಜನಂ ರಮ್ಯಂ ಪಪ್ರಚ್ಛಮುನಿಪುಂಗವಮ್ ॥
ಅನುವಾದ
ಮಿಥಿಲೆಯ ಉಪವನದಲ್ಲಿ ಒಂದು ಹಳೆಯ ಆಶ್ರಮವಿತ್ತು. ಅದು ಅತ್ಯಂತ ರಮಣೀಯವಾಗಿದ್ದರೂ ನಿರ್ಜನವಾಗಿ ಕಾಣುತ್ತಿತ್ತು. ಅದನ್ನು ನೋಡಿ ಶ್ರೀರಾಮಚಂದ್ರನು ಮುನಿವರ ವಿಶ್ವಾಮಿತ್ರರಲ್ಲಿ ಕೇಳಿದನು.॥11॥
ಮೂಲಮ್ - 12
ಇದಮಾಶ್ರಮಸಂಕಾಶಂ ಕಿಂ ನ್ವಿದಂ ಮುನಿವರ್ಜಿತಮ್ ।
ಶ್ರೋತುಮಿಚ್ಛಾಮಿ ಭಗವನ್ಕಸ್ಯಾಯಂ ಪೂರ್ವ ಆಶ್ರಮಃ ॥
ಅನುವಾದ
ಪೂಜ್ಯರೇ! ಇದು ಯಾವ ಸ್ಥಾನವಾಗಿದೆ? ನೋಡಲು ಆಶ್ರಮದಂತೆ ಇದ್ದರೂ ಒಬ್ಬ ಮುನಿಯೂ ಕಾಣುವುದಿಲ್ಲ. ಮೊದಲು ಇದು ಯಾರ ಆಶ್ರಮವಾಗಿತ್ತು? ಇದನ್ನು ಕೇಳಲು ನಾನು ಬಯಸುತ್ತಿರುವೆನು.॥12॥
ಮೂಲಮ್ - 13
ತಚ್ಪುೃತ್ವಾ ರಾಘವೇಣೋಕ್ತಂ ವಾಕ್ಯಂ ವಾಕ್ಯವಿಶಾರದಃ ।
ಪ್ರತ್ಯುವಾಚ ಮಹಾತೇಜಾ ವಿಶ್ವಾಮಿತ್ರೋ ಮಹಾಮುನಿಃ ॥
ಅನುವಾದ
ಶ್ರೀರಾಮಚಂದ್ರನ ಈ ಪ್ರಶ್ನೆಯನ್ನು ಕೇಳಿ ವಾಕ್ಯವಿಶಾರಾದರಾದ ಮಹಾತೇಜಸ್ವಿ ಮಹಾಮುನಿ ವಿಶ್ವಾಮಿತ್ರರು ಈ ಪ್ರಕಾರ ಉತ್ತರಿಸತೊಡಗಿದರು.॥13॥
ಮೂಲಮ್ - 14
ಹಂತ ತೇ ಕಥಯಿಷ್ಯಾಮಿ ಶೃಣು ತತ್ತ್ವೇನ ರಾಘವ ।
ಯಸ್ಯೈತ ಶ್ರಮಪದಂ ಶಪ್ತಂ ಕೋಪಾನ್ಮಹಾತ್ಮನಃ ॥
ಅನುವಾದ
ರಘುನಂದನ! ಹಿಂದೆ ಯಾವ ಮಹಾತ್ಮರ ಈ ಆಶ್ರಮವಿತ್ತೋ ಅವರು ಕ್ರೋಧದಿಂದ ಇದನ್ನು ಶಪಿಸಿದ್ದರು. ಅವರ ಈ ಆಶ್ರಮದ ಎಲ್ಲ ವೃತ್ತಾಂತವನ್ನು ನಿನಗೆ ತಿಳಿಸುವೆನು. ಯಥಾರ್ಥವಾಗಿ ಇದನ್ನು ಕೇಳು.॥14॥
ಮೂಲಮ್ - 15
ಗೌತಮಸ್ಯ ನರಶ್ರೇಷ್ಠ ಪೂರ್ವಮಾಸೀನ್ಮಹಾತ್ಮನಃ ।
ಆಶ್ರಮೋ ದಿವ್ಯಸಂಕಾಶಃ ಸುರೈರಪಿ ಸುಪೂಜಿತಃ ॥
ಅನುವಾದ
ನರಶ್ರೇಷ್ಠನೇ! ಹಿಂದಿನ ಕಾಲದಲ್ಲಿ ಈ ಸ್ಥಾನವು ಮಹಾತ್ಮಾ ಗೌತಮರ ಆಶ್ರಮವಾಗಿತ್ತು. ಆಗ ಈ ಆಶ್ರಮವು ದಿವ್ಯವಾಗಿ ಕಂಡು ಬರುತ್ತಿತ್ತು. ದೇವತೆಗಳೂ ಕೂಡ ಇದರ ಪೂಜೆ ಹಾಗೂ ಪ್ರಶಂಸೆ ಮಾಡುತ್ತಿದ್ದರು.॥15॥
ಮೂಲಮ್ - 16
ಸ ಚಾತ್ರ ತಪ ಆತಿಷ್ಠದಹಲ್ಯಾಸಹಿತಃ ಪುರಾ ।
ವರ್ಷಪೂಗಾನ್ಯನೇಕಾನಿ ರಾಜಪುತ್ರ ಮಹಾಯಶಃ ॥
ಅನುವಾದ
ಮಹಾಯಶಸ್ವೀ ರಾಜಪುತ್ರನೇ! ಹಿಂದೆ ಮಹರ್ಷಿ ಗೌತಮರು ತನ್ನ ಪತ್ನಿ ಅಹಲ್ಯೆಯೊಂದಿಗೆ ಇದ್ದು,ಇಲ್ಲಿ ತಪಸ್ಸು ಮಾಡುತ್ತಿದ್ದರು. ಅವರು ಬಹಳ ವರ್ಷಗಳು ತಪಸ್ಸನ್ನಾಚರಿಸಿದ್ದರು.॥16॥
ಮೂಲಮ್ - 17
ತಸ್ಯಾಂತರಂ ವಿದಿತ್ವಾ ಸಹಸ್ರಾಕ್ಷಃ ಶುಚಚೀಪತಿಃ ।
ಮುನಿವೇಷಧರೋಭೂತ್ವಾ ಅಹಲ್ಯಾಮಿದಮಬ್ರವೀತ್ ॥
ಅನುವಾದ
ಒಂದು ದಿನ ಮಹರ್ಷಿ ಗೌತಮರು ಆಶ್ರಮದಲ್ಲಿ ಇಲ್ಲದಿದ್ದಾಗ, ಸರಿಯಾದ ಸಂದರ್ಭವೆಂದು ತಿಳಿದ ಶಚೀಪತಿ ಇಂದ್ರನು ಗೌತಮ ಮುನಿಯ ವೇಷಧರಿಸಿ ಇಲ್ಲಿಗೆ ಬಂದು, ಅಹಲ್ಯೆಯಲ್ಲಿ ಇಂತೆಂದನು.॥17॥
ಮೂಲಮ್ - 18
ಋತುಕಾಲಂ ಪ್ರತೀಕ್ಷಂತೇ ನಾರ್ಥಿನಃ ಸುಸಮಾಹಿತೇ ।
ಸಂಗಮಂ ತ್ವಹಮಿಚ್ಛಾಮಿ ತ್ವಯಾ ಸಹ ಸುಮಧ್ಯಮೇ ॥
ಅನುವಾದ
ಸದಾ ಎಚ್ಚರವಾಗಿರುವ ಸುಂದರಿಯೇ! ರತಿಯನ್ನು ಇಚ್ಛಿಸುವ ಪುರುಷನು ಋತುಕಾಲವನ್ನು ಕಾಯುವುದಿಲ್ಲ. ಸುಂದರ ಕಟಿಯುಳ್ಳ ಸುಂದರಿಯೇ! ನಾನು (ಇಂದ್ರ) ನಿನ್ನೊಂದಿಗೆ ಸಮಾಗಮವನ್ನು ಬಯಸುತ್ತಿದ್ದೇನೆ.॥18॥
ಮೂಲಮ್ - 19
ಮುನಿವೇಷಂ ಸಹಸ್ರಾಕ್ಷಂ ವಿಜ್ಞಾಯ ರಘುನಂದನ ।
ಮತಿಂ ಚಕಾರ ದುರ್ಮೇಧಾ ದೇವರಾಜಕುತೂಹಲಾತ್ ॥
ಅನುವಾದ
ರಘುನಂದನ! ಮಹರ್ಷಿ ಗೌತಮರ ವೇಷಧರಿಸಿ ಬಂದಿರುವ ಇಂದ್ರನನ್ನು ಗುರುತಿಸಿದರೂ ಕೂಡ ಆ ದುರ್ಬುದ್ಧಿ ನಾರಿಯು ‘ಆಹಾ! ದೇವರಾಜ ಇಂದ್ರನು ನನ್ನನ್ನು ಬಯಸುತ್ತಿರುವನು’ ಹೀಗೆ ಕುತೂಹಲವಶಳಾಗಿ ಅವನೊಂದಿಗೆ ಸಮಾಗಮವನ್ನು ನಿಶ್ಚಯಿಸಿ ಆ ಪ್ರಸ್ತಾಪವನ್ನು ಸ್ವೀಕರಿಸಿದಳು.॥19॥
ಮೂಲಮ್ - 20½
ಅಥಾಬ್ರವೀತ್ ಸುರಶ್ರೇಷ್ಠಂ ಕೃತಾರ್ಥೇನಾಂತರಾತ್ಮನಾ ।
ಕೃತಾರ್ಥಾಸ್ಮಿ ಸುರಶ್ರೇಷ್ಠ ಗಚ್ಛ ಶೀಘ್ರಮಿತಃ ಪ್ರಭೋ ॥
ಆತ್ಮಾನಂ ಮಾಂ ಚ ದೇವೇಶ ಸರ್ವಥಾ ರಕ್ಷ ಗೌತಮಾತ್ ।
ಅನುವಾದ
ರತಿಯ ಅನಂತರ ಆಕೆಯು ದೇವೇಂದ್ರನಲ್ಲಿ ಸಂತುಷ್ಟಚಿತ್ತಳಾಗಿ ನುಡಿದಳು - ಸುರಶ್ರೇಷ್ಠನೇ! ನಾನು ನಿಮ್ಮ ಸಮಾಗಮದಿಂದ ಕೃತಾರ್ಥಳಾದೆನು. ಸ್ವಾಮಿ! ಈಗ ನೀವು ಇಲ್ಲಿಂದ ಬೇಗನೇ ಹೊರಟುಹೋಗಿರಿ. ದೇವೇಶ್ವರ! ಮಹರ್ಷಿ ಗೌತಮರ ಕೋಪದಿಂದ ನಿಮ್ಮನ್ನು ರಕ್ಷಿಸಿಕೊಂಡು ನನ್ನನ್ನೂ ಎಲ್ಲ ರೀತಿಯಿಂದ ರಕ್ಷಿಸಿರಿ.॥20½॥
ಮೂಲಮ್ - 21½
ಇಂದ್ರಸ್ತು ಪ್ರಹಸನ್ ವಾಕ್ಯಮಹಲ್ಯಾಮಿದಮಬ್ರವೀತ್ ॥
ಸುಶ್ರೋಣಿ ಪರುತುಷ್ಟೋಽಸ್ಮಿ ಗಮಿಷ್ಯಾಮಿ ಯಥಾಗತಮ್ ।
ಅನುವಾದ
ಆಗ ಇಂದ್ರನು ಅಹಲ್ಯೆಯಲ್ಲಿ ನಗುತ್ತಾ ಹೇಳಿದನು - ಸುಂದರಿ! ನಾನೂ ಸಂತುಷ್ಟನಾಗಿದ್ದೇನೆ. ಈಗ ಬಂದಹಾಗೆಯೇ ಹೊರಟುಹೋಗುವೆನು.॥21½॥
ಮೂಲಮ್ - 22½
ಏವಂ ಸಂಗಮ್ಯ ತು ತದಾ ನಿಶ್ಚಕ್ರಾಮೋಟಜಾತ್ತತಃ ॥
ಸ ಸಂಭ್ರಮಾತ್ತ್ವರನ್ರಾಮ ಶಂಕಿತೋ ಗೌತಮಂ ಪ್ರತಿ ।
ಅನುವಾದ
ಶ್ರೀರಾಮ! ಈ ಪ್ರಕಾರ ಅಹಲ್ಯೆಯೊಂದಿಗೆ ಸಮಾಗಮ ಮಾಡಿ ಇಂದ್ರನು ಕುಟೀರದಿಂದ ಹೊರಗೆ ಹೊರಟಾಗ, ಗೌತಮರು ಬರುವ ಆಶಂಕೆಯಿಂದ ಬಹಳ ಆತುರವಾಗಿ ಓಡಿಹೋಗಲು ಪ್ರಯತ್ನಿಸತೊಡಗಿದನು.॥22½॥
ಮೂಲಮ್ - 23
ಗೌತಮಂ ಸ ದದರ್ಶಾಥ ಪ್ರವಿಶಂತಂ ಮಹಾಮುನಿಮ್ ॥
ಮೂಲಮ್ - 24½
ದೇವದಾನವದುರ್ಧರ್ಷಂ ತಪೋಬಲಸಮನ್ವಿತಮ್ ।
ತೀರ್ಥೋದಕಪರಿಕ್ಲಿನ್ನಂ ದೀಪ್ಯಮಾನಮಿವಾನಲಮ್ ॥
ಗೃಹೀತಸಮಿಧಂ ತತ್ರ ಸಕುಶಂ ಮುನಿಪುಂಗವಮ್ ।
ಅನುವಾದ
ಅಷ್ಟರಲ್ಲಿ ಅವನು ದೇವತೆಗಳಿಗೆ ಮತ್ತು ದಾನವರಿಗೆ ದುರ್ಧರ್ಷರೂ, ತಪೋಬಲ ಸಂಪನ್ನರೂ ಆದ ಮಹಾಮುನಿ ಗೌತಮರು ಕೈಯಲ್ಲಿ ಸಮಿಧೆಯನ್ನೆತ್ತಿಕೊಂಡು ಆಶ್ರಮವನ್ನು ಪ್ರವೇಶಿಸುವುದನ್ನು ನೋಡಿದನು. ಅವರ ಶರೀರ ತೀರ್ಥ ಸ್ನಾನದಿಂದ. ಒದ್ದೆಯಾಗಿತ್ತು ಮತ್ತು ಪ್ರಜ್ವಲಿತ ಅಗ್ನಿಯಂತೆ ಉದ್ದೀಪ್ತರಾಗಿದ್ದರು.॥23-24½॥
ಮೂಲಮ್ - 25
ದೃಷ್ಟ್ವಾಸುರಪತಿಸ್ತ್ರಸ್ತೋ ವಿಷಣ್ಣವದನೋಭವತ್ ॥
ಮೂಲಮ್ - 26
ಅಥದೃಷ್ಟ್ವಾ ಸಹಸ್ರಾಕ್ಷಂ ಮುನಿವೇಷಧರಂ ಮುನಿಃ ।
ದುರ್ವೃತ್ತಂ ವೃತ್ತಸಂಪನ್ನೋ ರೋಷಾದ್ವಚನಮಬ್ರವೀತ್ ॥
ಅನುವಾದ
ಅವರನ್ನು ನೋಡುತ್ತಲೇ ದೇವೇಂದ್ರನು ಭಯದಿಂದ ನಡುಗಿಹೋದನು. ಅವನ ಮುಖದಲ್ಲಿ ವಿಷಾದ ತುಂಬಿತ್ತು. ದುರಾಚಾರೀ ಇಂದ್ರನು ಮುನಿಯವೇಷದಲ್ಲಿರುವುದನ್ನು ಕಂಡು, ಸದಾಚಾರ ಸಂಪನ್ನ ಮುನಿವರ ಗೌತಮರು ಸಿಟ್ಟಿನಿಂದ ಹೇಳಿದರು-॥25-26½॥
ಮೂಲಮ್ - 27
ಮಮ ರೂಪಂ ಸಮಾಸ್ಥಾಯ ಕೃತವಾನಸಿ ದುರ್ಮತೇ ।
ಅಕರ್ತವ್ಯಮಿದಂ ಯಸ್ಮಾದ್ವಿಫಲಸ್ತ್ವಂ ಭವಿಷ್ಯಸಿ ॥
ಅನುವಾದ
ದುರ್ಮತಿಯೇ! ನೀನು ನನ್ನ ರೂಪವನ್ನು ಧರಿಸಿ ಮಾಡಲು ಯೋಗ್ಯವಲ್ಲದ ಪಾಪಕರ್ಮವನ್ನು ಮಾಡಿರುವೆ. ಅದಕ್ಕಾಗಿ ನೀನು ವಿಲ(ಅಂಡಕೋಶ ರಹಿತ)ನಾಗಿ ಹೋಗುವೆ.॥27॥
ಮೂಲಮ್ - 28
ಗೌತಮೇನೈವಮುಕ್ತಸ್ಯ ಸುರೋಷೇಣ ಮಹಾತ್ಮನಾ ।
ಪೇತತುರ್ವೃಷಣೌ ಭೂಮೌ ಸಹಸ್ರಾಕ್ಷಸ್ಯ ತತ್ಕ್ಷಣಾತ್ ॥
ಅನುವಾದ
ರೋಷಗೊಂಡ ಮಹಾತ್ಮ ಗೌತಮರು ಹೀಗೆ ಹೇಳುತ್ತಲೇ ಸಹಸ್ರಾಕ್ಷ ಇಂದ್ರನ ಎರಡೂ ಅಂಡ ಕೋಶಗಳು ತತ್ಕ್ಷಣ ಭೂಮಿಗೆ ಬಿದ್ದುಹೋದವು.॥28॥
ಮೂಲಮ್ - 29
ತಥಾ ಶಪ್ತ್ವಾ ಚ ವೈ ಶಕ್ರಂ ಭಾರ್ಯಾಮಪಿ ಚ ಶಪ್ತವಾನ್ ।
ಇಹ ವರ್ಷಸಹಸ್ರಾಣಿ ಬಹೂನಿ ನಿವಸಿಷ್ಯಸಿ ॥
ಮೂಲಮ್ - 30
ವಾತಭಕ್ಷಾ ನಿರಾಹಾರಾ ತಪ್ಯಂತೀ ಭಸ್ಮಶಾಯಿನೀ ।
ಅದೃಶ್ಯಾ ಸರ್ವಭೂತಾನಾಮಾಶ್ರಮೇಽಸ್ಮಿನ್ವಸಿಷ್ಯಸಿ ॥
ಮೂಲಮ್ - 31
ಯದಾ ತ್ವೇತದ್ವನಂ ಘೋರಂ ರಾಮೋ ದಶರಥಾತ್ಮಜಃ ।
ಆಗಮಿಷ್ಯತಿ ದುರ್ಧರ್ಷಸ್ತದಾ ಪೂತಾ ಭವಿಷ್ಯಸಿ ॥
ಮೂಲಮ್ - 32
ತಸ್ಯಾತಿಥ್ಯೇನ ದುರ್ವೃತ್ತೇ ಲೋಭಮೋಹವಿವರ್ಜಿತಾ ।
ಮತ್ಸಕಾಶಂ ಮುದಾ ಯುಕ್ತಾ ಸ್ವಂ ವಪುರ್ಧಾರಯಿಷ್ಯಸಿ ॥
ಅನುವಾದ
ಇಂದ್ರನಿಗೆ ಹೀಗೆ ಶಾಪಕೊಟ್ಟು ಗೌತಮರು ತನ್ನ ಪತ್ನಿಯನ್ನೂ ಶಪಿಸಿದರು-ದುರಾಚಾರಿಣಿಯೇ! ನೀನೂ ಇಲ್ಲೇ ಅನೇಕ ಸಾವಿರ ವರ್ಷಗಳವರೆಗೆ ಕೇವಲ ಗಾಳಿಯನ್ನು ಸೇವಿಸಿಕೊಂಡು, ಉಪವಾಸವಿದ್ದು ಕಷ್ಟಪಡುತ್ತಾ ಬೂದಿಯಲ್ಲಿ ಬಿದ್ದುಕೊಂಡಿರು. ಸಮಸ್ತ ಪ್ರಾಣಿಗಳಿಂದ ಅದೃಶ್ಯಳಾಗಿ ಈ ಆಶ್ರಮದಲ್ಲಿ ವಾಸಿಸುವೆ. ದುರ್ಧರ್ಷ ದಶರಥನಂದನ ಶ್ರೀರಾಮನು ಈ ಘೋರ ವನಕ್ಕೆ ಪದಾರ್ಪಣ ಮಾಡುವನು, ಆಗ ನೀನು ಪವಿತ್ರಳಾಗುವೆ. ಅವನ ಆತಿಥ್ಯ ಸತ್ಕಾರ ಮಾಡುವುದರಿಂದ ನಿನ್ನ ಲೋಭ-ಮೋಹ ಮೊದಲಾದ ದೋಷಗಳು ದೂರವಾಗುವುವು. ಮತ್ತೆ ನೀನು ಸಂತೋಷದಿಂದ ನನ್ನ ಬಳಿಗೆ ಬಂದು ಹಿಂದಿನ ಶರೀರವನ್ನು ಪಡೆಯುವೆ.॥29-32॥
ಮೂಲಮ್ - 33
ಏವಮುಕ್ತ್ವಾ ಮಹಾತೇಜಾ ಗೌತಮೋ ದುಷ್ಟಚಾರಿಣೀಮ್ ।
ಇಮಮಾಶ್ರಮಮುತ್ಸೃಜ್ಯ ಸಿದ್ಧಚಾರಣ ಸೇವಿತೇ ।
ಹಿಮವಚ್ಛಿಖರೇ ರಮ್ಯೇ ತಪಸ್ತೇಪೇ ಮಹಾತಪಾಃ ॥
ಅನುವಾದ
ತನ್ನ ದುರಾಚಾರಿಣೀ ಪತ್ನಿಯಲ್ಲಿ ಹೀಗೆ ಹೇಳಿ ಮಹಾ ತೇಜಸ್ವಿ, ಮಹಾತಪಸ್ವೀ, ಗೌತಮರು ಈ ಆಶ್ರಮವನ್ನು ಬಿಟ್ಟು, ಸಿದ್ಧರೂ, ಚಾರಣರೂ ಸೇವಿಸುತ್ತಿದ್ದ ಹಿಮಾಲಯದ ರಮಣೀಯ ಶಿಖರದಲ್ಲಿ ತಪಸ್ಸು ಮಾಡತೊಡಗಿದರು.॥33॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ನಲವತ್ತೆಂಟನೆಯ ಸರ್ಗ ಪೂರ್ಣವಾಯಿತು. ॥48॥