वाचनम्
ಭಾಗಸೂಚನಾ
ದಿತಿಯು ತನ್ನ ಪುತ್ರರನ್ನು ಮರುದ್ಗಣರಾಗಿಸಿ ದೇವಲೋಕದಲ್ಲಿ ಇರಿಸುವಂತೆ ಇಂದ್ರನಲ್ಲಿ ಹೇಳಿದುದು, ಇಂದ್ರನಿಂದ ಒಪ್ಪಿಗೆ, ದಿತಿಯ ತಪೋವನದಲ್ಲೇ ಇಕ್ವಾಕ್ಷು ಪುತ್ರ ವಿಶಾಲನ ಮೂಲಕ ವಿಶಾಲಾ ನಗರದ ನಿರ್ಮಾಣ, ಅಲ್ಲಿಯ ಆಗಿನ ರಾಜಾ ಸುಮತಿಯಿಂದ ವಿಶ್ವಾಮಿತ್ರರ ಸತ್ಕಾರ
ಮೂಲಮ್ - 1
ಸಪ್ತಧಾ ತು ಕೃತೇ ಗರ್ಭೇ ದಿತಿಃ ಪರಮದುಃಖಿತಾ ।
ಸಹಸ್ರಾಕ್ಷಂ ದುರಾಧರ್ಷಂ ವಾಕ್ಯಂ ಸಾನುನಯಾಬ್ರವೀತ್ ॥
ಅನುವಾದ
ಇಂದ್ರನು ತನ್ನ ಗರ್ಭವನ್ನು ಏಳು ತುಂಡುಗಳಾಗಿಸಿದಾಗ ದಿತಿಗೆ ಅತೀವ ದುಃಖವಾಯಿತು. ಆಕೆಯು ದುರ್ಧರ್ಷ ವೀರ ಸಹಸ್ರಾಕ್ಷ ಇಂದ್ರನಲ್ಲಿ ಕೇಳಿಕೊಂಡಳು.॥1॥
ಮೂಲಮ್ - 2
ಮಮಾಪರಾಧಾದ್ಗರ್ಭೋಽಯಂ ಸಪ್ತಧಾ ಶಕಲೀಕೃತಃ ।
ನಾಪರಾಧೋಹಿ ದೇವೇಶ ತವಾತ್ರ ಬಲಸೂದನ ॥
ಅನುವಾದ
ದೇವೇಶ! ಬಲಸೂದನ! ನನ್ನ ಅಪರಾಧದಿಂದಲೇ ಈ ಗರ್ಭವು ಏಳು ತುಂಡುಗಳಾದವು. ಇದರಲ್ಲಿ ನಿನ್ನ ಯಾವ ದೋಷವೂ ಇಲ್ಲ.॥2॥
ಮೂಲಮ್ - 3
ಪ್ರಿಯಂ ತ್ವತ್ ಕೃತ ಮಿಚ್ಛಾಮಿ ಮಮ ಗರ್ಭವಿಪರ್ಯಯೇ ।
ಮರುತಾಂ ಸಪ್ತ ಸಪ್ತಾನಾಂ ಸ್ಥಾನಪಾಲಾ ಭವಂತು ತೇ ॥
ಅನುವಾದ
ನೀನು ಕ್ರೂರತೆಯಿಂದ ಈ ಗರ್ಭವನ್ನು ನಾಶ ಮಾಡಿದ ನಿಮಿತ್ತದಿಂದ ಅದರ ಪರಿಣಾಮದಿಂದ ನಿನಗಾಗಿ ಹಾಗೂ ನನಗೂ ಪ್ರಿಯವಾಗುವಂತೆ, ಸುಖಕರವಾದ ಉಪಾಯವನ್ನು ಮಾಡಲು ನಾನು ಬಯಸುತ್ತಿರುವೆನು. ನನ್ನ ಗರ್ಭದ ಏಳು ತುಂಡುಗಳೂ ಏಳು ವ್ಯಕ್ತಿಗಳಾಗಿ ಏಳು ಮರುದ್ಗಣಗಳ ಸ್ಥಾನಗಳನ್ನು ಪಾಲಿಸುವವರಾಗಲಿ.॥3॥
ಮೂಲಮ್ - 4
ವಾತಸ್ಕಂಧಾ ಇಮೇ ಸಪ್ತ ಚರಂತು ದಿವಿ ಪುತ್ರಕ ।
ಮಾರುತಾ ಇತಿ ವಿಖ್ಯಾತಾ ದಿವ್ಯರೂಪಾಮಮಾತ್ಮಜಾಃ ॥
ಅನುವಾದ
ಮಗು! ದಿವ್ಯ ರೂಪಧಾರೀ ನನ್ನ ಪುತ್ರರು ‘ಮರುತ್’ ಎಂಬ ಹೆಸರಿನಿಂದ ಪ್ರಸಿದ್ಧರಾಗಿ ಆಕಾಶದಲ್ಲಿ ವಿಖ್ಯಾತವಾದ ಏಳು ವಾತಸ್ಕಂಧಗಳಾಗಲಿ. ಆವಹ, ಪ್ರವಹ, ಸಂವಹ, ಉದ್ವಹ, ವಿವಹ, ಪರಿವಹ ಮತ್ತು ಪರಾವಹ, ಇವು ಏಳು ವಾತಸ್ಕಂಧಗಳೆಂದು ಹೇಳುತ್ತಾರೆ. ಅವುಗಳಲ್ಲಿ ಈ ಮರುತ್ತುಗಳು ವಿಚರಿಸಲಿ.॥4॥
ಮೂಲಮ್ - 5
ಬ್ರಹ್ಮಲೋಕಂ ಚರತ್ವೇಕ ಇಂದ್ರಲೋಕಂ ತಥಾಪರಃ ।
ದಿವ್ಯವಾಯುರಿತಿಖ್ಯಾತಸ್ತೃತೀಯೋಽಪಿ ಮಹಾಯಶಾಃ ॥
ಅನುವಾದ
(ಮೇಲೆ ಹೇಳಿದ ಏಳು ಮರುತ್ತಗಳು ಏಳು-ಏಳರ ಗಣಗಳಾಗಿವೆ. ಈ ಪ್ರಕಾರ ನಲವತ್ತೊಂಭತ್ತು ಮರುತ್ತುಗಳು ಎಂದು ತಿಳಿಯಬೇಕು. ಇದರಲ್ಲಿ-) ಪ್ರಥಮ ಗಣವು ಬ್ರಹ್ಮಲೋಕದಲ್ಲಿ ವಿಚರಿಸಲಿ, ಎರಡನೆಯದು ಇಂದ್ರಲೋಕದಲ್ಲಿ ಸಂಚರಿಸಲಿ, ಮೂರನೆಯದು ಮಹಾಯಶಸ್ವೀ, ಮರುದ್ಗಣರು ದಿವ್ಯವಾಯುವೆಂದು ವಿಖ್ಯಾತವಾಗಿ ಅಂತರಿಕ್ಷದಲ್ಲಿ ವಿಹರಿಸಿಲಿ.॥5॥
ಮೂಲಮ್ - 6½
ಚತ್ವಾರಸ್ತು ಸುರಶ್ರೇಷ್ಠದಿಶೋ ವೈ ತವ ಶಾಸನಾತ್ ।
ಸಂಚರಿಷ್ಯಂತಿ ಭದ್ರಂ ತೇಕಾಲೇನ ಹಿಮಮಾತ್ಮಜಾಃ ॥
ತ್ವತ್ಕೃತೇನೈವ ನಾಮ್ನಾ ವೈ ಮಾರುತಾ ಇತಿ ವಿಶ್ರುತಾಃ ।
ಅನುವಾದ
ಸುರಶ್ರೇಷ್ಠನೇ! ನಿನಗೆ ಮಂಗಳವಾಗಲಿ. ಉಳಿದ ನಾಲ್ವರು ನನ್ನ ಪುತ್ರರು ನಿನ್ನ ಆಜ್ಞೆಯಂತೆ ಎಲ್ಲ ದಿಕ್ಕುಗಳಲ್ಲಿ ಸಂಚರಿಸಲಿ. ನೀನು ಇಟ್ಟ ಹೆಸರಿನಿಂದಲೇ (ನೀನು ‘ಮಾ ರುದಃ’ ಅಳಬೇಡ ಎಂದು ತಡೆದಿದ್ದೆ. ಆ ‘ಮಾರುದಃ’ ಈ ವಾಕ್ಯದಿಂದಲೇ) ಅವರೆಲ್ಲರೂ ಮಾರುತರೆಂದೇ ಖ್ಯಾತವಾಗಲಿ.॥6½॥
ಮೂಲಮ್ - 7½
ತಸ್ಯಾಸ್ತದ್ವಚನಂ ಶ್ರುತ್ವಾ ಸಹಸ್ರಾಕ್ಷಃ ಪುರಂದರಃ ॥
ಉವಾಚ ಪ್ರಾಂಜಲಿರ್ವಾಕ್ಯಮಿತೀದಂ ಬಲಸೂದನಃ ।
ಅನುವಾದ
ದಿತಿಯ ಮಾತನ್ನು ಕೇಳಿ ಬಲಿಷ್ಠ ದೈತ್ಯರನ್ನು ಕೊಲ್ಲುವ ಸಹಸ್ರಾಕ್ಷ ಇಂದ್ರನು ಕೈಮುಗಿದುಕೊಂಡು ಇಂತೆಂದನು.॥7½॥
ಮೂಲಮ್ - 8½
ಸರ್ವಮೇತದ್ಯಥೋಕ್ತಂ ತೇ ಭವಿಷ್ಯತಿ ನ ಸಂಶಯಃ ॥
ವಿಚರಿಷ್ಯಂತಿ ಭದ್ರಂ ತೇ ದೇವರೂಪಾಸ್ತವಾತ್ಮಜಾಃ ।
ಅನುವಾದ
ಅಮ್ಮಾ! ‘ನಿನಗೆ ಮಂಗಳವಾಗಲಿ’ ನೀನು ಹೇಳಿದಂತೆಯೇ ಎಲ್ಲವೂ ಆಗುವುದು; ಇದರಲ್ಲಿ ಸಂದೇಹವೇ ಇಲ್ಲ. ನಿನ್ನ ಈ ಪುತ್ರರು ದೇವರೂಪರಾಗಿ ವಿಚರಿಸಲಿ.॥8½॥
ಮೂಲಮ್ - 9½
ಏವಂ ತೌ ನಿಶ್ಚಯಂಕೃತ್ವಾ ಮಾತಾಪುತ್ರೌ ತಪೋವನೇ ॥
ಜಗ್ಮತುಸ್ತ್ರಿದಿವಂರಾಮ ಕೃತಾರ್ಥಾವಿತಿ ನಃ ಶ್ರುತಮ್ ।
ಅನುವಾದ
ಶ್ರೀರಾಮಾ! ಆ ತಪೊವನದಲ್ಲಿ ಹೀಗೆ ನಿಶ್ಚಯಿಸಿ ಆ ಮಾತಾ-ಪುತ್ರರು ಕೃತಕೃತ್ಯರಾಗಿ ಸ್ವರ್ಗಲೋಕಕ್ಕೆ ತೆರಳಿದರು; ಎಂದು ನಾವು ಕೇಳಿದ್ದೇವೆ.॥9½॥
ಮೂಲಮ್ - 10½
ಏಷ ದೇಶಃ ಸ ಕಾಕುತ್ಸ್ಥ ಮಹೇಂದ್ರಾಧ್ಯುಷಿತಃ ಪುರಾ ॥
ದಿತಿಂ ಯತ್ರ ತಪಃ ಸಿದ್ಧಾಮೇವಂ ಪರಿಚಚಾರ ಸಃ ।
ಅನುವಾದ
ಕಾಕುತ್ಸ್ಥನೇ! ಇದೇ ದೇಶದಲ್ಲಿ ಹಿಂದೆ ದೇವೇಂದ್ರನು ಇದ್ದು ತಪಃಸಿದ್ಧ ದಿತಿಯ ಸೇವೆ ಮಾಡಿದ್ದನು.॥10½॥
ಮೂಲಮ್ - 11
ಇಕ್ಷ್ವಾಕೋಸ್ತು ನರವ್ಯಾಘ್ರ ಪುತ್ರಃ ಪರಮಧಾರ್ಮಿಕಃ ॥
ಮೂಲಮ್ - 12
ಅಲಂಬುಷಾಯಾಮುತ್ಪನ್ನೋ ವಿಶಾಲ ಇತಿ ವಿಶ್ರುತಃ ।
ತೇನ ಚಾಸೀದಿಹ ಸ್ಥಾನೇ ವಿಶಾಲೇತಿ ಪುರೀ ಕೃತಾ ॥
ಅನುವಾದ
ಪುರುಷಸಿಂಹನೇ! ಹಿಂದೆ ಮಹಾರಾಜಾ ಇಕ್ಷಾಕ್ಷುಗೆ ಪರಮ ಧಾರ್ಮಿಕ ವಿಶಾಲನೆಂಬ ಒಬ್ಬ ಪ್ರಸಿದ್ಧ ಪುತ್ರನಿದ್ದನು. ಅವನು ಅಲಂಬುಷಾಳ ಗರ್ಭದಿಂದ ಹುಟ್ಟಿದನು. ಅವನೇ ಈ ಸ್ಥಾನದಲ್ಲಿ ವಿಶಾಲಾ ಎಂಬ ಪುರಿಯನ್ನು ನೆಲೆಗೊಳಿಸಿದ್ದನು.॥11-12॥
ಮೂಲಮ್ - 13
ವಿಶಾಲಸ್ಯ ಸುತೋ ರಾಮ ಹೇಮಚಂದ್ರೋ ಮಹಾಬಲಃ ।
ಸುಚಂದ್ರ ಇತಿ ವಿಖ್ಯಾತೋ ಹೇಮಚಂದ್ರಾದನಂತರಃ ॥
ಅನುವಾದ
ಶ್ರೀರಾಮಾ! ವಿಶಾಲನ ಪುತ್ರನ ಹೆಸರು ಹೇಮಚಂದ್ರನೆಂದಿತ್ತು. ಅವನು ಬಹಳ ಬಲಾಢ್ಯನಾಗಿದ್ದನು. ಹೇಮಚಂದ್ರನ ಪುತ್ರ ಸುಚಂದ್ರನೆಂದು ಖ್ಯಾತನಾಗಿದ್ದನು.॥13॥
ಮೂಲಮ್ - 14
ಸುಚಂದ್ರತನಯೋ ರಾಮ ಧೂಮ್ರಾಶ್ವ ಇತಿ ವಿಶ್ರುತಃ ।
ಧೂಮ್ರಾಶ್ವತನಯಶ್ಚಾಪಿ ಸೃಂಜಯಃ ಸಮಪದ್ಯತ ॥
ಅನುವಾದ
ಶ್ರೀರಾಮಚಂದ್ರ! ಸುಚಂದ್ರನ ಮಗ ಧೂಮ್ರಾಶ್ವ, ಧೂಮ್ರಾಶ್ವನ ಪುತ್ರ ಸೃಂಜಯನಾಗಿದ್ದನು.॥14॥
ಮೂಲಮ್ - 15
ಸೃಂಜಯಸ್ಯ ಸುತಃ ಶ್ರೀಮಾನ್ಸಹದೇವಃ ಪ್ರತಾಪವಾನ್ ।
ಕುಶಾಶ್ವಃ ಸಹದೇವಸ್ಯ ಪುತ್ರಃ ಪರಮಧಾರ್ಮಿಕಃ ॥
ಅನುವಾದ
ಸೃಂಜಯನ ಪ್ರತಾಪಿ ಪುತ್ರ ಶ್ರೀಮಾನ್ ಸಹದೇವನು. ಸಹದೇವನ ಪರಮಧಾರ್ಮಿಕ ಪುತ್ರನ ಹೆಸರು ಕುಶಾಶ್ವ ಎಂದಿತ್ತು.॥15॥
ಮೂಲಮ್ - 16
ಕುಶಾಶ್ವಸ್ಯ ಮಹಾತೇಜಾಃ ಸೋಮದತ್ತಃ ಪ್ರತಾಪವಾನ್ ।
ಸೋಮದತ್ತಸ್ಯ ಪುತ್ರಸ್ತು ಕಾಕುತ್ಸ್ಥ ಇತಿ ವಿಶ್ರುತಃ ॥
ಅನುವಾದ
ಕುಶಾಶ್ವನ ಮಹಾತೇಜಸ್ವೀ ಪುತ್ರ ಪ್ರತಾಪಿ ಸೋಮದತ್ತ. ಸೋಮದತ್ತನ ಪುತ್ರ ಕಾಕುತ್ಸ್ಥನೆಂದು ವಿಖ್ಯಾತನಾದನು.॥16॥
ಮೂಲಮ್ - 17
ತಸ್ಯ ಪುತ್ರೋ ಮಹಾತೇಜಾಃಸಂಪ್ರತ್ಯೇಷ ಪುರೀಮಿಮಾಮ್ ।
ಅವಸತ್ ಪರಮಪ್ರಖ್ಯಃ ಸುಮತಿರ್ನಾಮದುರ್ಜಯಃ ॥
ಅನುವಾದ
ಕಾಕುತ್ಸ್ಥನಿಗೆ ಮಹಾತೇಜಸ್ವೀ ಸುಮತಿ ಎಂಬ ಪುತ್ರ ಪ್ರಸಿದ್ಧನಾಗಿದ್ದನು. ಅವನು ಪರಮಶಾಂತಿವಂತನೂ, ದುರ್ಜಯವೀರನೂ ಆಗಿದ್ದಾನೆ. ಅವನೇ ಈಗ ಈ ಪುರಿಯಲ್ಲಿ ವಾಸಿಸುತ್ತಿರುವನು.॥17॥
ಮೂಲಮ್ - 18
ಇಕ್ಷ್ವಾಕೋಸ್ತು ಪ್ರಸಾದೇನ ಸರ್ವೇ ವೈಶಾಲಿಕಾ ನೃಪಾಃ ।
ದೀರ್ಘಾಯುಷೋ ಮಹಾತ್ಮಾನೋ ವೀರ್ಯವಂತಃ ಸುಧಾರ್ಮಿಕಾಃ ॥
ಅನುವಾದ
ಮಹಾರಾಜಾ ಇಕ್ವಾಕುವಿನ ಪ್ರಸಾದದಿಂದ ವೈಶಾಲಿಯ ಎಲ್ಲ ನೃಪರು ದೀರ್ಘಾಯು, ಮಹಾತ್ಮಾ, ಪರಾಕ್ರಮಿ ಮತ್ತು ಪರಮ ಧಾರ್ಮಿಕರಾಗುತ್ತಾ ಬಂದಿದ್ದಾರೆ.॥18॥
ಮೂಲಮ್ - 19
ಇಹಾದ್ಯ ರಂಜನೀಮೇಕಾಂ ಸುಖಂ ಸ್ವಪ್ಸ್ಯಾಮಹೇ ವಯಮ್ ।
ಶ್ವಃ ಪ್ರಭಾತೇ ನರಶ್ರೇಷ್ಠ ಜನಕಂ ದ್ರಷ್ಟುಮರ್ಹಸಿ ॥
ಅನುವಾದ
ನರಶ್ರೇಷ್ಠನೇ! ಇಂದಿನ ರಾತ್ರೆ ನಾವು ಇಲ್ಲೇ ಸುಖವಾಗಿ ಮಲಗಿ, ಮತ್ತೆ ನಾಳೆ ಬೆಳಗ್ಗೆ ಇಲ್ಲಿಂದ ಹೊರಟು ನೀನು ಮಿಥಿಲೆಯಲ್ಲಿ ಜನಕರಾಜನನ್ನು ದರ್ಶಿಸುವೆ.॥19॥
ಮೂಲಮ್ - 20
ಸುಮತಿಸ್ತು ಮಹಾತೇಜಾ ವಿಶ್ವಾಮಿತ್ರಮುಪಾಗತಮ್ ।
ಶ್ರುತ್ವಾ ನರವರಶ್ರೇಷ್ಠಃ ಪ್ರತ್ಯಾಗಚ್ಛನ್ಮಹಾಯಶಾಃ ॥
ಅನುವಾದ
ರಾಜರಲ್ಲಿ ಶ್ರೇಷ್ಠನೂ, ಮಹಾತೇಜಸ್ವಿಯೂ, ಮಹಾಯಶಸ್ವಿಯೂ ಆದ ರಾಜಾ ಸುಮತಿಯು ವಿಶ್ವಾಮಿತ್ರನನ್ನು ತನ್ನ ಪುರಿಯ ಸಮೀಪಕ್ಕೆ ಬಂದಿರುವರೆಂದು ತಿಳಿದು, ಅವರ ಸ್ವಾಗತಕ್ಕಾಗಿ ಸ್ವತಃ ಹೊರಟನು.॥20॥
ಮೂಲಮ್ - 21
ಪೂಜಾಂ ಚ ಪರಮಾಂ ಕೃತ್ವಾ ಸೋಪಾಧ್ಯಾಯಃಸಬಾಂಧವಃ ।
ಪ್ರಾಂಜಲಿಃ ಕುಶಲಂ ಪೃಷ್ಟ್ವಾ ವಿಶ್ರಾಮಿತ್ರಮಥಾಬ್ರವೀತ್ ॥
ಅನುವಾದ
ತನ್ನ ಪುರೋಹಿತ ಹಾಗೂ ಬಂಧು-ಬಾಂಧವರಿಂದೊಡಗೂಡಿ ರಾಜನು ವಿಶ್ವಾಮಿತ್ರರನ್ನು ವಿಧಿವತ್ತಾಗಿ ಪೂಜಿಸಿ ಕೈಮುಗಿದುಕೊಂಡು ಅವರ ಕ್ಷೇಮ-ಸಮಾಚಾರ ಕೇಳುತ್ತಾ ಇಂತೆಂದನು.॥21॥
ಮೂಲಮ್ - 22
ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಯಸ್ಯ ಮೇ ವಿಷಯಂ ಮುನೇ ।
ಸಂಪ್ರಾಪ್ತೋ ದರ್ಶನಂ ಚೈವ ನಾಸ್ತಿ ಧನ್ಯತರೋ ಮಮ ॥
ಅನುವಾದ
ಮುನಿಗಳೇ! ನಾನು ಧನ್ಯನಾದೆ. ನನ್ನ ಮೇಲೆ ನಿಮ್ಮ ದೊಡ್ಡ ಅನುಗ್ರಹವಿದೆ, ಏಕೆಂದರೆ ತಾವಾಗಿಯೇ ನನ್ನ ರಾಜ್ಯಕ್ಕೆ ಆಗಮಿಸಿ ನನಗೆ ದರ್ಶನ ಕೊಟ್ಟಿರುವಿರಿ. ಈಗ ನನಗಿಂತ ಹೆಚ್ಚು ಧನ್ಯನಾದ ಪುರುಷನು ಬೇರೊಬ್ಬನಿಲ್ಲ.॥22॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ನಲವತ್ತೇಳನೆಯ ಸರ್ಗ ಪೂರ್ಣವಾಯಿತು. ॥47॥