वाचनम्
ಭಾಗಸೂಚನಾ
ದೇವ-ದಾನವರು ಸಮುದ್ರವನ್ನು ಕಡೆದುದು, ರುದ್ರನಿಂದ ಹಾಲಾಹಲ ವಿಷಪಾನ, ಮಹಾವಿಷ್ಣುವಿನ ಸಹಾಯದಿಂದ ಮಂದರ ಪರ್ವತವನ್ನು ಮೇಲಕ್ಕೆತ್ತಿದುದು, ಧನ್ವಂತಿರಿಯೇ ಮೊದಲಾದ ರತ್ನಗಳ ಉತ್ಪತ್ತಿ, ದೇವಾಸುರ ಸಂಗ್ರಾಮದಲ್ಲಿ ದೈತ್ಯರ ಸಂಹಾರ
ಮೂಲಮ್ - 1
ವಿಶ್ವಾಮಿತ್ರವಚಃ ಶ್ರುತ್ವಾ ರಾಘವಃ ಸಹಲಕ್ಷ್ಮಣಃ ।
ವಿಸ್ಮಯಂ ಪರಮಂ ಗತ್ವಾ ವಿಶ್ವಾಮಿತ್ರಮಥಾಬ್ರವೀತ್ ॥
ಅನುವಾದ
ವಿಶ್ವಾಮಿತ್ರರ ಮಾತುಗಳನ್ನು ಕೇಳಿ ಲಕ್ಷ್ಮಣ ಸಹಿತ ಶ್ರೀರಾಮಚಂದ್ರನಿಗೆ ಬಹಳ ವಿಸ್ಮಯವಾಯಿತು. ಅವರು ಮುನಿಗಳ ಬಳಿ ಈ ಪ್ರಕಾರ ನುಡಿದರು.॥1॥
ಮೂಲಮ್ - 2
ಅತ್ಯದ್ಭುತಮಿದಂ ಬ್ರಹ್ಮನ್ ಕಥಿತಂ ಪರಮಂ ತ್ವಯಾ ।
ಗಂಗಾವತರಣಂ ಪುಣ್ಯಂ ಸಾಗರಸ್ಯಾಪಿ ಪೂರಣಮ್ ॥
ಅನುವಾದ
ಬ್ರಹ್ಮರ್ಷಿಗಳೇ! ಗಂಗೆಯು ಸ್ವರ್ಗದಿಂದ ಇಳಿದ ಹಾಗೂ ಸಮುದ್ರವನ್ನು ತುಂಬಿದ ಈ ಪರಮೋತ್ತಮ ಮತ್ತು ಅತ್ಯಂತ ಅದ್ಭುತ ಕಥೆಯನ್ನು ಹೇಳಿದಿರಿ.॥2॥
ಮೂಲಮ್ - 3
ಕ್ಷಣಭೂತೇವ ನೌ ರಾತ್ರಿಃ ಸಂವೃತ್ತೇಯಂ ಪರಂತಪಃ ।
ಇಮಾಂ ಚಿಂತಯತೋಃ ಸರ್ವಾಂ ನಿಖಿಲೇನ ಕಥಾಂ ತವ ॥
ಅನುವಾದ
ಕಾಮ-ಕ್ರೋಧಾದಿ ಶತ್ರುಗಳಿಗೆ ಸಂತಾಪ ಕೊಡುವ ಮಹರ್ಷಿಗಳೇ! ನೀವು ತಿಳಿಸಿದ ಈ ಸಂಪೂರ್ಣ ಕಥೆಯನ್ನು ಕೇಳಿ ಅದರ ಕುರಿತು ವಿಚಾರ ಮಾಡುತ್ತಾ ಸಹೋದರರಾದ ನಮ್ಮಿಬ್ಬರಿಗೆ ರಾತ್ರಿಯು ಕ್ಷಣದಂತೆ ಕಳೆದುಹೋಯಿತು.॥3॥
ಮೂಲಮ್ - 4
ತಸ್ಯ ಸಾ ಶರ್ವರೀ ಸರ್ವಾ ಮಮ ಸೌಮಿತ್ರಿಣಾ ತದಾ ।
ಜಗಾಮ ಚಿಂತಯಾನಸ್ಯ ವಿಶ್ವಾಮಿತ್ರಕಥಾಂ ಶುಭಾಮ್ ॥
ಅನುವಾದ
ವಿಶ್ವಾಮಿತ್ರರೇ! ಲಕ್ಷ್ಮಣನೊಂದಿಗೆ ನಾನು ಈ ಶುಭಕಥೆಯ ಕುರಿತು ವಿಚಾರಮಾಡುತ್ತಾ ಇಡೀ ರಾತ್ರಿಯು ಕಳೆದು ಹೋಯಿತು.॥4॥
ಮೂಲಮ್ - 5
ತತಃ ಪ್ರಭಾತೇ ವಿಮಲೇ ವಿಶ್ವಾಮಿತ್ರಂ ತಪೋಧನಮ್ ।
ಉವಾಚ ರಾಘವೋ ವಾಕ್ಯಂ ಕೃತಾಹ್ನಿಕಮರಿಂದಮಃ ॥
ಅನುವಾದ
ಅನಂತರ ನಿರ್ಮಲ ಪ್ರಭಾತಕಾಲ ಉಪಸ್ಥಿತವಾದಾಗ ತಪೋಧನ ವಿಶ್ವಾಮಿತ್ರರು ನಿತ್ಯಕರ್ಮಗಳನ್ನು ಪೂರೈಸಿದಾಗ ಶತ್ರುದಮನ ಶ್ರೀರಾಮಚಂದ್ರನು ಅವರ ಬಳಿಗೆ ಹೋಗಿ ಇಂತೆಂದನು.॥5॥
ಮೂಲಮ್ - 6
ಗತಾ ಭಗವತೀ ರಾತ್ರಿಃ ಶ್ರೋತವ್ಯಂ ಪರಮಂ ಶ್ರುತಮ್ ।
ತರಾಮ ಸರಿತಾಂ ಶ್ರೇಷ್ಠಾಂ ಪುಣ್ಯಾಂ ತ್ರಿಪಥಗಾಂ ನದೀಮ್ ॥
ಅನುವಾದ
ಮುನಿಗಳೇ! ಈ ಪೂಜನೀಯ ರಾತ್ರಿಯು ಕಳೆಯಿತು. ಕೇಳಲು ಯೋಗ್ಯವಾದ ಸರ್ವೋತ್ತಮ ಕಥೆಯನ್ನು ನಾನು ಕೇಳಿದೆ. ಈಗ ನಾವು ನದಿಗಳಲ್ಲಿ ಶ್ರೇಷ್ಠವಾದ ಪುಣ್ಯಸಲಿಲಾ ತ್ರಿಪಥಗಾಮಿನೀ ಗಂಗಾನದಿಯನ್ನು ದಾಟಿ ಹೋಗೋಣ.॥6॥
ಮೂಲಮ್ - 7
ನೌರೇಷಾ ಹಿ ಸುಖಾಸ್ತೀರ್ಣಾ ಋಷೀಣಾಂ ಪುಣ್ಯಕರ್ಮಣಾಮ್ ।
ಭಗವಂತಮಿಹ ಪ್ರಾಪ್ತಂ ಜ್ಞಾತ್ವಾ ತ್ವರಿತಮಾಗತಾ ॥
ಅನುವಾದ
ಸದಾ ಪುಣ್ಯಕರ್ಮಗಳಲ್ಲಿ ತತ್ಪರರಾದ ಋಷಿಗಳು ಈ ದೋಣಿಯನ್ನು ಸಿದ್ಧಗೊಳಿಸಿರುವರು. ಇದರಲ್ಲಿ ವಿಶ್ರಮಿಸಲು ಉತ್ತಮ ಆಸನವಿದೆ. ಪರಮಪೂಜ್ಯರಾದ ಮಹರ್ಷಿಗಳಾದ ನೀವು ಇಲ್ಲಿರುವುದನ್ನು ತಿಳಿದು, ಋಷಿಗಳು ಕಳಿಸಿದ ಈ ನಾವೆಯು ವೇಗವಾಗಿ ಇಲ್ಲಿಗೆ ಬಂದಿದೆ.॥7॥
ಮೂಲಮ್ - 8
ತಸ್ಯ ತದ್ವಚನಂ ಶ್ರುತ್ವಾ ರಾಘವಸ್ಯ ಮಹಾತ್ಮನಃ ।
ಸಂತಾರಂ ಕಾರಯಾಮಾಸ ಸರ್ಷಿಸಂಘಸ್ಯ ಕೌಶಿಕಃ ॥
ಅನುವಾದ
ಮಹಾತ್ಮಾ ರಘುನಂದನ ಈ ಮಾತನ್ನು ಕೇಳಿ ವಿಶ್ವಾಮಿತ್ರರು ಮೊದಲಿಗೆ ಋಷಿಗಳ ಸಹಿತ ರಾಮ-ಲಕ್ಷ್ಮಣರನ್ನು ದಾಟಿಸಿದರು.॥8॥
ಮೂಲಮ್ - 9
ಉತ್ತರಂ ತೀರಮಾಸಾದ್ಯ ಸಂಪೂಜ್ಯರ್ಷಿಗಣಂ ತತಃ ।
ಗಂಗಾಕೂಲೇ ನಿವಿಷ್ಟಾಸ್ತೇ ವಿಶಾಲಾಂ ದದೃಶುಃ ಪುರೀಮ್ ॥
ಅನುವಾದ
ಆನಂತರ ತಾವೂ ಉತ್ತರ ತೀರವನ್ನು ತಲುಪಿ, ಅಲ್ಲಿರುವ ಋಷಿಗಳನ್ನು ಸತ್ಕರಿಸಿದರು. ಮತ್ತೆ ಎಲ್ಲರೂ ಗಂಗಾತೀರದಲ್ಲಿ ನಿಂತು ವಿಶಾಲಾ ಎಂಬ ಪುರಿಯ ಶೋಭೆಯನ್ನು ನೋಡತೊಡಗಿದರು.॥9॥
ಮೂಲಮ್ - 10
ತತೋ ಮುನಿವರಸ್ತೂರ್ಣಂ ಜಗಾಮ ಸಹರಾಘವಃ ।
ವಿಶಾಲಾಂ ನಗರೀಂ ರಮ್ಯಾಂ ದಿವ್ಯಾಂ ಸ್ವರ್ಗೋಪಮಾಂ ತದಾ ॥
ಅನುವಾದ
ಬಳಿಕ ಶ್ರೀರಾಮ-ಲಕ್ಷ್ಮಣರನ್ನು ಕರೆದುಕೊಂಡು ಮುನಿವರ ವಿಶ್ವಾಮಿತ್ರರು ಕೂಡಲೇ ಆ ದಿವ್ಯವೂ, ರಮಣೀಯವೂ ಆದ ವಿಶಾಲನಗರದ ಕಡೆಗೆ ಹೊರಟರು. ಅದು ತನ್ನ ಸುಂದರ ಶೋಭೆಯಿಂದ ಸ್ವರ್ಗದಂತೆ ಕಂಡುಬರುತ್ತಿತ್ತು.॥10॥
ಮೂಲಮ್ - 11
ಅಥ ರಾಮೋ ಮಹಾಪ್ರಾಜ್ಞೋ ವಿಶ್ವಾಮಿತ್ರಂ ಮಹಾಮುನಿಮ್ ।
ಪಪ್ರಚ್ಛ ಪ್ರಾಂಜಲಿರ್ಭೂತ್ವಾ ವಿಶಾಲಾಮುತ್ತಮಾಂ ಪುರೀಮ್ ॥
ಅನುವಾದ
ಆಗ ಪರಮ ಪ್ರಾಜ್ಞನಾದ ಶ್ರೀರಾಮನು ಕೈಮುಗಿದು, ಆ ಉತ್ತಮ ವಿಶಾಲಾಪುರಿಯ ವಿಷಯದಲ್ಲಿ ಮುನಿಗಳಲ್ಲಿ ಈ ರೀತಿ ಕೇಳಿದನು.॥11॥
ಮೂಲಮ್ - 12
ಕತಮೋ ರಾಜವಂಶೋಽಯಂ ವಿಶಾಲಾಯಾಂ ಮಹಾಮುನೇ ।
ಶ್ರೋತುಮಿಚ್ಛಾಮಿ ಭದ್ರಂ ತೇ ಪರಂ ಕೌತೂಹಲಂ ಹಿ ಮೇ ॥
ಅನುವಾದ
ಮಹಾಮುನಿಗಳೇ! ನಿಮಗೆ ಮಂಗಳವಾಗಲಿ. ಈ ವಿಶಾಲಾ ನಗರದಲ್ಲಿ ಯಾವ ರಾಜವಂಶ ರಾಜ್ಯವಾಳುತ್ತಿದೆ? ಇದನ್ನು ಕೇಳಬೇಕೆಂದು ನನಗೆ ಬಹಳ ಉತ್ಕಂಠತೆ ಉಂಟಾಗಿದೆ.॥12॥
ಮೂಲಮ್ - 13
ತಸ್ಯ ತದ್ವಚನಂ ಶ್ರುತ್ವಾ ರಾಮಸ್ಯ ಮುನಿಪುಂಗವಃ ।
ಆಖ್ಯಾತುಂ ತತ್ಸಮಾರೇಭೇ ವಿಶಾಲಾಯಾಃ ಪುರಾತನಮ್ ॥
ಅನುವಾದ
ಶ್ರೀರಾಮನ ಈ ಮಾತನ್ನು ಕೇಳಿ ಮುನಿಶ್ರೇಷ್ಠ ವಿಶ್ವಾಮಿತ್ರರು ವಿಶಾಲಾಪುರಿಯ ಪ್ರಾಚೀನ ಇತಿಹಾಸವನ್ನು ವರ್ಣಿಸತೊಡಗಿದರು.॥13॥
ಮೂಲಮ್ - 14
ಶ್ರೂಯತಾಂ ರಾಮ ಶಕ್ರಸ್ಯ ಕಥಾಂ ಕಥಯತಃ ಶ್ರುತಾಮ್ ।
ಅಸ್ಮಿನ್ದೇಶೇ ತು ಯದ್ವೃತ್ತಂಶೃಣು ತತ್ತ್ವೇನರಾಘವ ॥
ಅನುವಾದ
ರಘನಂದನ ಶ್ರೀರಾಮಾ! ನಾನು ಇಂದ್ರನಿಂದ ಕೇಳಿದ ವಿಶಾಲಾಪುರಿಯ ವೈಭವವನ್ನು ಕುರಿತ ಕಥೆಯನ್ನು ನಾನು ಕೇಳಿದಂತೆ ನಿನಗೆ ಹೇಳುವೆನು, ಕೇಳು. ಈ ದೇಶದಲ್ಲಿ ಘಟಿಸಿದ ವೃತ್ತಾಂತವನ್ನು ಯಥಾರ್ಥವಾಗಿ ಶ್ರವಣಿಸು.॥14॥
ಮೂಲಮ್ - 15
ಪೂರ್ವಂ ಕೃತಯುಗೇ ರಾಮ ದಿತೇಃ ಪುತ್ರಾ ಮಹಾಬಲಾಃ ।
ಅದಿತೇಶ್ಚ ಮಹಾಭಾಗಾ ವೀರ್ಯವಂತಃ ಸುಧಾರ್ಮಿಕಾಃ ॥
ಅನುವಾದ
ಶ್ರೀರಾಮಾ! ಮೊದಲು ಕೃತಯುಗದಲ್ಲಿ ದಿತಿಯ ಪುತ್ರರು ದೈತ್ಯರು ಭಾರೀ ಬಲಿಷ್ಠರಾಗಿದ್ದರು ಮತ್ತು ಅದಿತಿಯ ಪರಮ ಧರ್ಮಾತ್ಮ ಪುತ್ರರಾದ ದೇವತೆಗಳೂ ಕೂಡ ಬಹಳ ಶಕ್ತಿಶಾಲಿಗಳಾಗಿದ್ದರು.॥15॥
ಮೂಲಮ್ - 16
ತತಸ್ತೇಷಾಂ ನರವ್ಯಾಘ್ರ ಬುದ್ಧಿರಾಸೀನ್ಮಹಾತ್ಮನಾಮ್ ।
ಅಮರಾ ಅಜರಾಶ್ಚೈವ ಕಥಂ ಸ್ಯಾಮೋ ನಿರಾಮಯಾಃ ॥
ಅನುವಾದ
ಪುರುಷಸಿಂಹನೇ! ಆ ಮಹಾತ್ಮರಾದ ದೇವತೆಗಳ ಮತ್ತು ದೈತ್ಯರ ಮನಸ್ಸಿನಲ್ಲಿ ನಾವು ಹೇಗೆ ಅಜರಾಮರ ಮತ್ತು ನಿರೋಗಿಗಳಾಗುವೆವು? ಎಂಬ ವಿಚಾರ ಉಂಟಾಯಿತು.॥16॥
ಮೂಲಮ್ - 17
ತೇಷಾಂ ಚಿಂತಯತಾಂ ತತ್ರ ಬುದ್ಧಿರಾಸೀದ್ವಿಪಶ್ಚಿತಾಮ್ ।
ಕ್ಷೀರೋದಮಥನಂ ಕೃತ್ವಾ ರಸಂ ಪ್ರಾಪ್ಸ್ಯಾಮ ತತ್ರ ವೈ ॥
ಅನುವಾದ
ಈ ಪ್ರಕಾರ ಚಿಂತಿಸುತ್ತಿರುವಾಗ ಆ ವಿಚಾರಶೀಲ ದೇವ-ದಾನವರಿಗೆ ತಾವು ಕ್ಷೀರಸಾಗರವನ್ನು ಮಂಥನ ಮಾಡಿದರೆ ನಿಶ್ಚಯವಾಗಿಯೂ ಅಮೃತಮಯ ರಸವನ್ನು ಪಡೆಯಬಹುದು ಎಂಬ ವಿಷಯ ಹೊಳೆಯಿತು.॥17॥
ಮೂಲಮ್ - 18
ತತೋ ನಿಶ್ಚಿತ್ಯ ಮಥನಂ ಯೋಕ್ತ್ರಂ ಕೃತ್ವಾ ಚ ವಾಸುಕಿಮ್ ।
ಮಂಥಾನಂ ಮಂದರಂ ಕೃತ್ವಾ ಮಮಂಥುರಮಿತೌಜಸಃ ॥
ಅನುವಾದ
ಸಮುದ್ರ ಮಂಥನವನ್ನು ಮಾಡುವ ಸಲುವಾಗಿ ಆ ಅಮಿತ ತೇಜಸ್ವೀ ದೇವತೆಗಳು ಹಾಗೂ ದೈತ್ಯರು ವಾಸುಕಿನಾಗನನ್ನು ಹಗ್ಗವಾಗಿಸಿ, ಮಂದರಾಚಲವನ್ನು ಕಡೆಗೋಲಾಗಿಸಿ, ಸಮುದ್ರಮಂಥನವನ್ನು ಪ್ರಾರಂಭಿಸಿದರು.॥18॥
ಮೂಲಮ್ - 19
ಅಥ ವರ್ಷಸಹಸ್ರೇಣ ಯೋಕ್ತ್ರಸರ್ಪಶಿರಾಂಸಿ ಚ ।
ವಮಂತೋಽತಿವಿಷಂ ತತ್ರ ದದಂಶುರ್ದಶನೈಃ ಶಿಲಾಃ ॥
ಅನುವಾದ
ಅನಂತರ ಒಂದು ಸಾವಿರ ವರ್ಷಗಳು ಕಳೆದುಹೋದಾಗ ಹಗ್ಗವಾಗಿದ್ದ ವಾಸುಕಿಯು ಅನೇಕ ಮುಖಗಳಿಂದ ವಿಷವನ್ನು ಉಗುಳುತ್ತ ಮಂದರಾಚಲದ ಶಿಲೆಗಳನ್ನು ಕಚ್ಚತೊಡಗಿತು.॥19॥
ಮೂಲಮ್ - 20
ಉತ್ಪಪಾತಾಗ್ನಿ ಸಂಕಾಶಂ ಹಾಲಾಹಲಮಹಾವಿಷಮ್ ।
ತೇನ ದಗ್ಧಂ ಜಗತ್ ಸರ್ವಂ ಸದೇವಾಸುರಮಾನುಷಮ್ ॥
ಅನುವಾದ
ಅದರಿಂದ ಆಗ ಅಲ್ಲಿ ಅಗ್ನಿಯಂತೆ ಸುಡುವ ಹಾಲಾಹಲ ಎಂಬ ಮಹಾಭಯಂಕರ ವಿಷವು ಉತ್ಪತ್ತಿಯಾಯಿತು. ಅದು ದೇವತೆಗಳು, ಅಸುರರು ಮತ್ತು ಮನುಷ್ಯರ ಸಹಿತ ಸಂಪೂರ್ಣ ಜಗತ್ತನ್ನು ಸುಡತೊಡಗಿತು.॥20॥
ಮೂಲಮ್ - 21
ಅಥ ದೇವಾ ಮಹಾದೇವಂ ಶಂಕರಂ ಶರಣಾರ್ಥಿನಃ ।
ಜಗ್ಮುಃ ಪಶುಪತಿಂ ರುದ್ರಂ ತ್ರಾಹಿ ತ್ರಾಹೀತಿ ತುಷ್ಟುವುಃ ॥
ಅನುವಾದ
ಇದನ್ನು ನೋಡಿ ದೇವತೆಗಳು ಎಲ್ಲರ ಕಲ್ಯಾಣ ಮಾಡುವ ಮಹಾನ್ ದೇವರಾದ ಪಶುಪತಿ ರುದ್ರನಿಗೆ ಶರಣಾಗಿ, ಕಾಪಾಡು ಕಾಪಾಡು ಎಂದು ಅವನನ್ನು ಸ್ತುತಿಸತೊಡಗಿದರು.॥21॥
ಮೂಲಮ್ - 22
ಏವಮುಕ್ತಸ್ತತೋ ದೇವೈರ್ದೇವದೇವೇಶ್ವರಃ ಪ್ರಭುಃ ।
ಪ್ರಾದುರಾಸೀತ್ತತೋಽತ್ರೈವ ಶಂಖಚಕ್ರಧರೋ ಹರಿಃ ॥
ಅನುವಾದ
ದೇವತೆಗಳು ಹೀಗೆ ಸ್ತುತಿಸಿದಾಗ ದೇವದೇವೇಶ್ವರ ಭಗವಾನ್ ಶಿವನು ಅಲ್ಲಿ ಪ್ರಕಟನಾದನು. ಮತ್ತೆ ಅಲ್ಲೇ ಶಂಖ- ಚಕ್ರ-ಗದಾಧಾರೀ ಭಗವಾನ್ ಶ್ರೀಹರಿಯೂ ಪ್ರತ್ಯಕ್ಷನಾದನು.॥22॥
ಮೂಲಮ್ - 23
ಉವಾಚೈನಂ ಸ್ಮಿತಂ ಕೃತ್ವಾ ರುದ್ರಂ ಶೂಲಧರಂ ಹರಿಃ ।
ದೈವತೈರ್ಮಥ್ಯಮಾನೇ ತು ಯತ್ಪೂರ್ವಂ ಸಮುಪಸ್ಥಿತಮ್ ॥
ಮೂಲಮ್ - 24
ತತ್ತ್ವದೀಯಂ ಸುರಶ್ರೇಷ್ಠ ಸುರಾಣಾಮಗ್ರತೋ ಹಿ ಯತ್ ।
ಅಗ್ರಪೂಜಾಮಿಹ ಸ್ಥಿತ್ವಾಗೃಹಾಣೇದಂ ವಿಷಂ ಪ್ರಭೋ ॥
ಅನುವಾದ
ಶ್ರೀಹರಿಯು ತ್ರಿಶೂಲಧಾರೀ ಭಗವಾನ್ ರುದ್ರನಲ್ಲಿ ಮುಗುಳ್ನಗುತ್ತ ಹೇಳಿದನು-ಸುರಶ್ರೇಷ್ಠನೇ! ದೇವತೆಗಳು ಸಮುದ್ರಮಂಥನ ಮಾಡಿದಾಗ ಎಲ್ಲಕ್ಕಿಂತ ಮೊದಲಿಗೆ ದೊರೆತ ವಸ್ತುವು ನಿನ್ನ ಭಾಗವಾಗಿದೆ; ಏಕೆಂದರೆ ನೀನೇ ದೇವತೆಗಳ ಅಗ್ರಗಣ್ಯನಾಗಿರುವೆ. ಪ್ರಭೋ! ಅಗ್ರಪೂಜೆಯ ರೂಪದಲ್ಲಿ ಪ್ರಾಪ್ತವಾದ ಈ ವಿಷವನ್ನು ನೀನೇ ನಿಂತು ಸ್ವೀಕರಿಸು.॥23-24॥
ಮೂಲಮ್ - 25
ಇತ್ಯುಕ್ತ್ವಾ ಚ ಸುರಶ್ರೇಷ್ಠಸ್ತತ್ರೈವಾಂತರಧೀಯತ ।
ದೇವತಾನಾಂ ಭಯಂ ದೃಷ್ಟ್ವಾ ಶ್ರುತ್ವಾ ವಾಕ್ಯಂ ಚ ಶಾರ್ಙ್ಗೆಣಃ ॥
ಮೂಲಮ್ - 26
ಹಾಲಾಹಲಂ ವಿಷಂ ಘೋರಂ ಸಂಜಗ್ರಾಹಾಮೃತೋಪಮಮ್ ।
ದೇವಾನ್ವಿಸೃಜ್ಯ ದೇವೇಶೋ ಜಗಾಮ ಭಗವಾನ್ ಹರಃ ॥
ಅನುವಾದ
ಹೀಗೆ ಹೇಳಿ ದೇವ ಶಿರೋಮಣಿ ವಿಷ್ಣು ಅಲ್ಲಿಂದ ಅಂತರ್ಧಾನನಾದನು. ದೇವತೆಗಳ ಭಯವನ್ನು ನೋಡಿ, ಭಗವಾನ್ ವಿಷ್ಣುವಿನ ಮಾತನ್ನು ಕೇಳಿ ದೇವೇಶ್ವರ ಭಗವಾನ್ ರುದ್ರನು ಆ ಘೋರ ಹಾಲಾಹಲ ವಿಷವನ್ನು ಅಮೃತವೆಂದು ತಿಳಿದು ತನ್ನ ಕಂಠದಲ್ಲಿ ಧರಿಸಿಕೊಂಡನು ಹಾಗೂ ದೇವತೆಗಳನ್ನು ಸಂತುಷ್ಟಗೊಳಿಸಿದನು. ತಾನೂ ತನ್ನ ಸ್ಥಾನಕ್ಕೆ ಹೊರಟು ಹೋದನು.॥25-26॥
ಮೂಲಮ್ - 27
ತತೋ ದೇವಾಸುರಾಃ ಸರ್ವೇ ಮಮಂಥೂರಘುನಂದನ ।
ಪ್ರವಿವೇಶಾಥ ಪಾತಾಲಂ ಮಂಥಾನಃ ಪರ್ವತೋತ್ತಮಃ ॥
ಅನುವಾದ
ರಘುನಂದನ! ಅನಂತರ ದೇವತೆಗಳು ಮತ್ತು ಅಸುರರು ಎಲ್ಲ ಸೇರಿ ಕ್ಷೀರಸಾಗರ ಮಂಥನ ಮಾಡತೊಡಗಿದರು. ಆಗ ಕಡೆಗೋಲಾಗಿದ್ದ ಉತ್ತಮ ಮಂದರ ಪರ್ವತವು ಪಾತಾಳಕ್ಕೆ ಮುಳುಗಿಹೋಯಿತು.॥27॥
ಮೂಲಮ್ - 28½
ತತೋ ದೇವಾಃ ಸಗಂಧರ್ವಾಸ್ತುಷ್ಟುವುರ್ಮಧುಸೂದನಮ್ ।
ತ್ವಂ ಗತಿಃ ಸರ್ವಭೂತಾನಾಂ ವಿಶೇಷೇಣ ದಿವೌಕಸಾಮ್ ॥
ಪಾಲಯಾಸ್ಮಾನ್ಮಹಾಬಾಹೋ ಗಿರಿಮುದ್ಧರ್ತುಮರ್ಹಸಿ ।
ಅನುವಾದ
ಆಗ ದೇವತೆಗಳು, ಗಂಧರ್ವರು ಭಗವಾನ್ ಮಧುಸೂದನನನ್ನು ಸ್ತುತಿಸತೊಡಗಿದರು-ಮಹಾಬಾಹೋ! ನೀನೇ ಸಮಸ್ತ ಪ್ರಾಣಿಗಳ ಪಾಲಕನಾಗಿರುವೆ. ವಿಶೇಷವಾಗಿ ದೇವತೆಗಳ ಅವಲಂಬನ ನೀನೇ ಆಗಿರುವೆ. ನೀನು ನಮ್ಮನ್ನು ರಕ್ಷಿಸಿ, ಈ ಪರ್ವತವನ್ನು ಮೇಲಕ್ಕೆತ್ತು.॥28½॥
ಮೂಲಮ್ - 29½
ಇತಿ ಶ್ರುತ್ವಾ ಹೃಷೀಕೇಶಃ ಕಾಮಠಂ ಪೂರಮಾಸ್ಥಿತಃ ॥
ಪರ್ವತಂ ಪೃಷ್ಠತಃ ಕೃತ್ವಾ ಶಿಶ್ಯೇ ತತ್ರೋದಧೌ ಹರಿಃ ।
ಅನುವಾದ
ಇದನ್ನು ಕೇಳಿ ಭಗವಾನ್ ಹೃಷೀಕೇಶನು ಕಚ್ಛಪ (ಆಮೆಯ) ರೂಪವನ್ನು ಧರಿಸಿ, ಆ ಪರ್ವತವನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ಶ್ರೀಹರಿಯು ಅಲ್ಲೇ ಸಮುದ್ರದಲ್ಲಿ ಮಲಗಿಬಿಟ್ಟನು.॥29½॥
ಮೂಲಮ್ - 30½
ಪರ್ವತಾಗ್ರಂ ತು ಲೋಕಾತ್ಮಾ ಹಸ್ತೇನಾಕ್ರಮ್ಯ ಕೇಶವಃ ॥
ದೇವಾನಾಂ ಮಧ್ಯತಃ ಸ್ಥಿತ್ವಾ ಮಮಂಥ ಪುರುಷೋತ್ತಮಃ ।
ಅನುವಾದ
ಮತ್ತೆ ವಿಶ್ವಾತ್ಮಾ ಪುರುಷೋತ್ತಮ ಭಗವಾನ್ ಕೇಶವನು ಆ ಪರ್ವತ ಶಿಖರವನ್ನು ಕೈಯಿಂದ ಒತ್ತಿ ಹಿಡಿದು, ಇನ್ನೊಂದು ರೂಪದಿಂದ ದೇವತೆಗಳ ನಡುವೆ ನಿಂತು ಸ್ವತಃ ಸಮುದ್ರವನ್ನು ಕಡೆಯತೊಡಗಿದನು.॥30½॥
ಮೂಲಮ್ - 31
ಅಥ ವರ್ಷ ಸಹಸ್ರೇಣ ಆಯುರ್ವೇದಮಯಃ ಪುಮಾನ್ ॥
ಮೂಲಮ್ - 32
ಉದತಿಷ್ಠತ್ಸುಧರ್ಮಾತ್ಮಾ ಸದಂಡಃ ಸಕಮಂಡಲುಃ ।
ಪೂರ್ವಂ ಧನ್ವಂತರೀರ್ನಾಮ ಅಪ್ಸರಾಶ್ಚ ಸುವರ್ಚಸಃ ॥
ಅನುವಾದ
ಅನಂತರ ಒಂದು ಸಾವಿರ ವರ್ಷ ಕಳೆದ ಮೇಲೆ ಆ ಕ್ಷೀರಸಾಗರದಿಂದ ಓರ್ವ ಆಯುರ್ವೇದಮಯ ಧರ್ಮಾತ್ಮಾ ಪುರುಷನು ಪ್ರಕಟಗೊಂಡನು. ಅವನ ಒಂದು ಕೈಯಲ್ಲಿ ದಂಡ ಮತ್ತು ಮತ್ತೊಂದು ಕೈಯಲ್ಲಿ ಕಮಂಡಲು ಇತ್ತು. ಅವನ ಹೆಸರು ಧನ್ವಂತರಿ ಎಂದಾಗಿತ್ತು. ಅವನ ಪ್ರಾಕಟ್ಯದ ಬಳಿಕ ಸಾಗರದಿಂದ ಸುಂದರಿಯರಾದ ಅನೇಕ ಅಪ್ಸರೆಯರು ಪ್ರಕಟಗೊಂಡರು.॥31-32॥
ಮೂಲಮ್ - 33
ಅಪ್ಸು ನಿರ್ಮಥನಾದೇವ ರಸಸ್ತಸ್ಮಾದ್ವರಸ್ತ್ರಿಯಃ ।
ಉತ್ಪೇತುರ್ಮನುಜಶ್ರೇಷ್ಠ ತಸ್ಮಾದಪ್ಸರಸೋಽಭವನ್ ॥
ಅನುವಾದ
ನರಶ್ರೇಷ್ಠನೇ! ಮಂಥನ ಮಾಡಿದ್ದರಿಂದಲೇ ಅಪ್(ಜಲ) ದಿಂದ ಆ ಸುಂದರ ಸ್ತ್ರೀಯರು ಉತ್ಪನ್ನರಾಗಿದ್ದರು. ಆದ್ದರಿಂದ ಅವರನ್ನು ಅಪ್ಸರೆಯರೆಂದು ಹೇಳುತ್ತಾರೆ.॥33॥
ಮೂಲಮ್ - 34
ಷಷ್ಠಿಃ ಕೋಟ್ಯೋಽಭವಂಸ್ತಾಸಾಮಪ್ಸರಾಣಾಂ ಸುವರ್ಚಸಾಮ್ ।
ಅಸಂಖ್ಯೇಯಾಸ್ತು ಕಾಕುತ್ಸ್ಥ ಯಾಸ್ತಾಸಾಂಪರಿಚಾರಿಕಾಃ ॥
ಅನುವಾದ
ಕಾಕುತ್ಸ್ಥನೇ! ಆ ಸುಂದರ ಕಾಂತಿಯುಳ್ಳ ಅಪ್ಸರೆಯರ ಸಂಖ್ಯೆ ಅರವತ್ತು ಕೋಟಿಯಾಗಿತ್ತು. ಅವರ ಪರಿಚಾರಕೆಯರು ಲೆಕ್ಕವಿಲ್ಲದಷ್ಟು ಅಸಂಖ್ಯರಾಗಿದ್ದರು.॥34॥
ಮೂಲಮ್ - 35
ನ ತಾಃ ಸ್ಮ ಪ್ರತಿಗೃಹ್ಣಂತಿ ಸರ್ವೇ ತೇ ದೇವದಾನವಾಃ ।
ಅಪ್ರತಿಗ್ರಹಣಾದೇವ ತಾ ವೈ ಸಾಧಾರಣಾಃ ಸ್ಮೃತಾಃ ॥
ಅನುವಾದ
ಆ ಅಪ್ಸರೆಯರನ್ನು ಸಮಸ್ತ ದೇವತೆಗಳು ಮತ್ತು ದಾನವರು ಯಾರೂ ತಮ್ಮ ಪತ್ನಿಯಾಗಿ ಸ್ವೀಕರಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಅವರು ಸಾಧಾರಣಾ (ಸಾಮಾನ್ಯ) ಎಂದು ತಿಳಿಯಲಾಗಿದೆ.॥35॥
ಮೂಲಮ್ - 36
ವರುಣಸ್ಯ ತತಃ ಕನ್ಯಾ ವಾರುಣೀ ರಘುನಂದನ ।
ಉತ್ಪಪಾತ ಮಹಾಭಾಗಾ ಮಾರ್ಗಮಾಣಾ ಪರಿಗ್ರಹಮ್ ॥
ಅನುವಾದ
ರಘುನಂದನ! ಅನಂತರ ಸುರೆಯ ಅಭಿಮಾನೀ ದೇವಿಯಾದ ವರುಣನ ಕನ್ಯೆ ವಾರುಣಿಯು ಪ್ರಕಟಳಾದಳು. ಆಕೆ ತನ್ನನ್ನು ಸ್ವೀಕರಿಸುವ ಪುರುಷನನ್ನು ಹುಡುಕುತ್ತಿದ್ದಳು.॥36॥
ಮೂಲಮ್ - 37
ದಿತೇಃ ಪುತ್ರಾನ ತಾಂ ರಾಮಜಗೃರ್ಹುರ್ವರುಣಾತ್ಮಜಾಮ್ ।
ಅದಿತೇಸ್ತು ಸುತಾ ವೀರ ಜಗೃಹುಸ್ತಾಮನಿಂದಿತಾಮ್ ॥
ಅನುವಾದ
ವೀರ ಶ್ರೀರಾಮಾ! ದೈತ್ಯರು ಆ ವರುಣಕನ್ಯೆ ಸುರೆಯನ್ನು ಸ್ವೀಕರಿಸಲಿಲ್ಲ. ಆದರೆ ಅದಿತಿಯ ಪುತ್ರರು ಈ ಅನಿಂದ್ಯ ಸುಂದರಿಯನ್ನು ಗ್ರಹಣಮಾಡಿಕೊಂಡರು.॥37॥
ಮೂಲಮ್ - 38
ಅಸುರಾಸ್ತೇನ ದೈತೇಯಾಃಸುರಾಸ್ತೇನಾದಿತೇಃ ಸುತಾಃ ।
ಹೃಷ್ಟಾಃ ಪ್ರಮುದಿತಾಶ್ಚಾಸನ್ ವಾರುಣೀಗ್ರಹಣಾತ್ಸುರಾಃ ॥
ಅನುವಾದ
ಸುರೆಯಿಂದ ರಹಿತರಾದ್ದರಿಂದಲೇ ದೈತ್ಯರು ‘ಅಸುರ’ರಾದರು ಮತ್ತು ಸುರೆಯನ್ನು ಸೇವಿಸಿದ್ದ ಕಾರಣ ಅದಿತಿಯ ಪುತ್ರರಿಗೆ ‘ಸುರ’ ಎಂಬ ಸಂಜ್ಞೆ ಆಯಿತು. ವಾರುಣಿಯನ್ನು ಗ್ರಹಿಸಿದ್ದರಿಂದ ದೇವತೆಗಳು ಹರ್ಷಗೊಂಡು ಆನಂದಿತರಾದರು.॥38॥
ಮೂಲಮ್ - 39
ಉಚ್ಚೈಃಶ್ರವಾ ಹಯಶ್ರೇಷ್ಠೋ ಮಣಿರತ್ನಂ ಚ ಕೌಸ್ತುಭಮ್ ।
ಉದತಿಷ್ಠನ್ನರಶ್ರೇಷ್ಠ ತಥೈವಾಮೃತಮುತ್ತಮಮ್ ॥
ಅನುವಾದ
ನರಶ್ರೇಷ್ಠನೇ! ಅನಂತರ ಕುದುರೆಗಳಲ್ಲಿ ಉತ್ತಮವಾದ ಉಚ್ಚೈಃಶ್ರವಾ, ಕೌಸ್ತುಭರತ್ನ ಹಾಗೂ ಪರಮೋತ್ತಮ ಅಮೃತದ ಪ್ರಾಕಟ್ಯವಾಯಿತು.॥39॥
ಮೂಲಮ್ - 40
ಅಥ ತಸ್ಯ ಕೃತೇ ರಾಮ ಮಹಾನಾಸೀತ್ಕುಲಕ್ಷಯಃ ।
ಅದಿತೇಸ್ತು ತತಃ ಪುತ್ರಾ ದಿತಿಪುತ್ರಾನಯೋಧಯನ್ ॥
ಅನುವಾದ
ಶ್ರೀರಾಮಾ! ಆ ಅಮೃತಕ್ಕಾಗಿಯೇ ದೇವತೆಗಳ ಮತ್ತು ಅಸುರರ ಕುಲದವರ ಮಹಾ ಸಂಹಾರವಾಯಿತು. ಅದಿತಿಯ ಪುತ್ರರು ದ್ವಿತೀಯ ಪುತ್ರರೊಂದಿಗೆ ಯುದ್ಧಮಾಡತೊಡಗಿದರು.॥40॥
ಮೂಲಮ್ - 41
ಏಕತಾಮಗಮನ್ಸರ್ವೇ ಅಸುರಾ ರಾಕ್ಷಸೈಃ ಸಹ ।
ಯುದ್ಧಮಾಸೀನ್ಮಹಾಘೋರಂ ವೀರ ತ್ರೈಲೋಕ್ಯಮೋಹನಮ್ ॥
ಅನುವಾದ
ಸಮಸ್ತ ಅಸುರರು ರಾಕ್ಷಸರೊಂದಿಗೆ ಒಂದಾದರು. ವೀರನೇ! ದೇವತೆಗಳೊಂದಿಗೆ ಅವರ ನಘೋರ ಸಂಗ್ರಾಮ ನಡೆಯಿತು. ಅದು ಮೂರು ಲೋಕಗಳನ್ನು ಮೋಹದಲ್ಲಿ ಕೆಡವುದಂತಹುದಾಗಿತ್ತು.॥41॥
ಮೂಲಮ್ - 42
ಯದಾ ಕ್ಷಯಂ ಗತಂ ಸರ್ವಂ ತದಾ ವಿಷ್ಣುರ್ಮಹಾಬಲಃ ।
ಅಮೃತಂ ಸೋಽಹರತ್ ತೂರ್ಣಂ ಮಾಯಾಮಾಸ್ಥಾಯ ಮೋಹಿನೀಮ್ ॥
ಅನುವಾದ
ದೇವತೆಗಳ ಮತ್ತು ಅಸುರರ ಎಲ್ಲ ಸಮೂಹವು ಕ್ಷೀಣವಾಗತೊಡಗಿದಾಗ ಮಹಾಬಲಿ ಭಗವಾನ್ ವಿಷ್ಣುವು ಮೋಹಿನೀ ಮಾಯೆಯನ್ನು ಆಶ್ರಯಿಸಿ ಕೂಡಲೇ ಅಮೃತವನ್ನು ಅಪಹರಿಸಿದನು.॥42॥
ಮೂಲಮ್ - 43
ಯೇ ಗತಾಭಿಮುಖಂ ವಿಷ್ಣುಮಕ್ಷರಂ ಪುರುಷೋತ್ತಮಮ್ ।
ಸಂಪಿಷ್ಟಾಸ್ತೇ ತದಾ ಯುದ್ಧೇ ವಿಷ್ಣುನಾ ಪ್ರಭವಿಷ್ಣುನಾ ॥
ಅನುವಾದ
ದೈತ್ಯರು ಬಲವಂತವಾಗಿ ಅಮೃತವನ್ನು ಕಸಿದುಕೊಳ್ಳಲು ಅವಿನಾಶೀ ಪುರುಷೋತ್ತಮ ಭಗವಾನ್ ವಿಷ್ಣುವಿನ ಎದುರಿಗೆ ಬಂದಾಗ, ಪ್ರಭಾವಶಾಲಿ ಭಗವಾನ್ ವಿಷ್ಣುವು ಅವರನ್ನು ಯುದ್ಧದಲ್ಲಿ ಅರೆದುಹಾಕಿದನು.॥43॥
ಮೂಲಮ್ - 44
ಅದಿತೇರಾತ್ಮಜಾ ವೀರಾ ದಿತೇಃ ಪುತ್ರಾನ್ನಿಜಘ್ನಿರೇ ।
ಅಸ್ಮಿನ್ ಘೋರೇ ಮಹಾಯುದ್ಧೇ ದೈತೇಯಾದಿತ್ಯಯೋರ್ಭೃಶಮ್ ॥
ಅನುವಾದ
ದೇವತೆಗಳ ಮತ್ತು ದೈತ್ಯರ ಆ ಘೋರ ಮಹಾಯುದ್ಧದಲ್ಲಿ ಅದಿತಿಯ ವೀರ ಪುತ್ರರಿಂದ ದಿತಿಯ ಪುತ್ರರು ಹೆಚ್ಚಿನ ಸಂಖ್ಯೆಯಲ್ಲಿ ಸಂಹರಿಸಲ್ಪಟ್ಟರು.॥44॥
ಮೂಲಮ್ - 45
ನಿಹತ್ಯ ದಿತಿಪುತ್ರಾಂಸ್ತು ರಾಜ್ಯಂ ಪ್ರಾಪ್ಯ ಪುರಂದರಃ ।
ಶಶಾಸ ಮುದಿತೋ ಲೋಕಾನ್ ಸರ್ಷಿಸಂಘಾನ್ಸಚಾರಣಾನ್ ॥
ಅನುವಾದ
ದೈತ್ಯರ ವಧೆಯನ್ನು ಮಾಡಿದ ಬಳಿಕ ಮೂರು ಲೋಕದ ರಾಜ್ಯವನ್ನು ಪಡೆದ ದೇವೇಂದ್ರನು ಬಹಳ ಸಂತೋಷಗೊಂಡನು ಹಾಗೂ ಋಷಿಗಳ, ಚಾರಣಗಳ ಸಹಿತ ಸಮಸ್ತ ಲೋಕಗಳನ್ನು ಆಳತೊಡಗಿದನು.॥45॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ನಲವತ್ತೈದನೆಯ ಸರ್ಗ ಪೂರ್ಣವಾಯಿತು.॥45॥