वाचनम्
ಭಾಗಸೂಚನಾ
ಬ್ರಹ್ಮದೇವರು ಭಗೀರಥನನ್ನು ಪ್ರಶಂಸಿಸಿ ಗಂಗಾಜಲದಿಂದ ಪಿತೃಗಳಿಗೆ ತರ್ಪಣವನ್ನೀಯಲು ಆಜ್ಞಾಪಿಸಿದುದು, ಭಗೀರಥನು ಎಲ್ಲ ಪಿತೃಕಾರ್ಯಗಳನ್ನು ಮುಗಿಸಿ ನಗರ ಪ್ರವೇಶಮಾಡಿದುದು, ಗಂಗಾವತರಣೋಪಾಖ್ಯಾನದ ಮಹಿಮೆ
ಮೂಲಮ್ - 1
ಸ ಗತ್ವಾ ಸಾಗರಂ ರಾಜಾ ಗಂಗಯಾನುಗತಸ್ತದಾ ।
ಪ್ರವಿವೇಶ ತಲಂ ಭೂಮೇರ್ಯತ್ರ ತೇ ಭಸ್ಮಸಾತ್ ಕೃತಾಃ ॥
ಮೂಲಮ್ - 2
ಭಸ್ಮನ್ಯಥಾಪ್ಲುತೇ ರಾಮ ಗಂಗಾಯಾಃ ಸಲಿಲೇನವೈ ।
ಸರ್ವಲೋಕಪ್ರಭುರ್ಬ್ರಹ್ಮಾ ರಾಜಾನಮಿದಮಬ್ರವೀತ್ ॥
ಅನುವಾದ
ಶ್ರೀರಾಮಾ! ಈ ಪ್ರಕಾರ ಭಗೀರಥನು ಗಂಗೆಯನ್ನು ಜೊತೆಗೆ ಕರೆದುಕೊಂಡು ಸಮುದ್ರದವರೆಗೆ ಹೋಗಿ ರಸಾತಲದಲ್ಲಿ ತನ್ನ ಪೂರ್ವಜರು ಭಸ್ಮವಾದಲ್ಲಿಗೆ ಪ್ರವೇಶಿಸಿದನು. ಆ ಭಸ್ಮರಾಶಿಯು ಗಂಗಾಜಲದಿಂದ ತೋಯ್ದು ಹೋದಾಗ ಸಮಸ್ತ ಲೋಕಗಳ ಸ್ವಾಮಿ ಭಗವಾನ್ ಬ್ರಹ್ಮದೇವರು ಅಲ್ಲಿಗೆ ಆಗಮಿಸಿ ರಾಜನಲ್ಲಿ ಇಂತೆಂದರು.॥1-2॥
ಮೂಲಮ್ - 3
ತಾರಿತಾ ನರಶಾರ್ದೂಲ ದಿವಂ ಯಾತಾಶ್ಚ ದೇವವತ್ ।
ಷಷ್ಟಿಃ ಪುತ್ರಸಹಸ್ರಾಣಿ ಸಗರಸ್ಯ ಮಹಾತ್ಮನಃ ॥
ಅನುವಾದ
ನರಶ್ರೇಷ್ಠನೇ! ಮಹಾತ್ಮಾ ಸಗರರಾಜನ ಅರವತ್ತು ಸಾವಿರ ಪುತ್ರರನ್ನು ನೀನು ಉದ್ಧಾರಮಾಡಿದೆ. ಈಗ ಅವರು ದೇವತೆಗಳಂತೆ ಸ್ವರ್ಗಲೋಕಕ್ಕೆ ತೆರಳಿರುವರು.॥3॥
ಮೂಲಮ್ - 4
ಸಾಗರಸ್ಯ ಜಲಂ ಲೋಕೇ ಯಾವತ್ಸ್ಥಾಸ್ಯತಿ ಪಾರ್ಥಿವ ।
ಸಗರಸ್ಯಾತ್ಮಜಾಃ ಸರ್ವೆ ದಿವಿ ಸ್ಥಾಸ್ಯಂತಿ ದೇವವತ್ ॥
ಅನುವಾದ
ಭೂಪಾಲನೇ! ಈ ಜಗತ್ತಿನಲ್ಲಿ ಸಾಗರದ ನೀರು ಇರುವ ತನಕ ಸಗರನ ಎಲ್ಲ ಪುತ್ರರು ದೇವತೆಗಳಂತೆ ಸ್ವರ್ಗ ಲೋಕದಲ್ಲಿ ಪ್ರತಿಷ್ಠಿತರಾಗಿರುವರು.॥4॥
ಮೂಲಮ್ - 5
ಇಯಂ ಚ ದುಹಿತಾ ಜ್ಯೇಷ್ಠಾತವ ಗಂಗಾ ಭವಿಷ್ಯತಿ ।
ತ್ವತ್ಕೃತೇನ ಚ ನಾಮ್ನಾಥ ಲೋಕೇ ಸ್ಥಾಸ್ಯತಿ ವಿಶ್ರುತಾ ॥
ಅನುವಾದ
ಈ ಗಂಗೆಯು ನಿನಗೂ ಜೇಷ್ಠಪುತ್ರಿಯಾಗಿ, ನಿನ್ನ ನಾಮವನ್ನೇ ಪಡೆದು ಭಾಗೀರಥೀ ಎಂದು ಜಗತ್ತಿನಲ್ಲಿ ವಿಖ್ಯಾತಳಾಗುವಳು.॥5॥
ಮೂಲಮ್ - 6
ಗಂಗಾ ತ್ರಿಪಥಗಾನಾಮ ದಿವ್ಯಾ ಭಾಗೀರಥೀತಿ ಚ ।
ತ್ರೀನ್ ಪಥೋ ಭಾವಯಂತೀತಿ ತಸ್ಮಾತ್ತ್ರಿಪಥಗಾ ಸ್ಮೃತಾ ॥
ಅನುವಾದ
ತ್ರಿಪಥಗಾ, ದಿವ್ಯಾ, ಭಾಗೀರಥೀ, ಈ ಮೂರೂ ಹೆಸರುಗಳಿಂದ ಗಂಗೆಯು ಪ್ರಸಿದ್ಧಳಾಗಿರುವಳು. ಈಕೆ ಆಕಾಶ, ಭೂಮಿ ಮತ್ತು ಪಾತಾಳ ಈ ಮೂರನ್ನು ಪವಿತ್ರಗೊಳಿಸುತ್ತಾ ಹರಿಯುವಳು. ಅದಕ್ಕಾಗಿ ತ್ರಿಪಥಗಾ ಎಂದು ತಿಳಿಯಲಾಗಿದೆ.॥6॥
ಮೂಲಮ್ - 7
ಪಿತಾಮಹಾನಾಂ ಸರ್ವೇಷಾಂ ತ್ವಮತ್ರ ಮನುಜಾಧಿಪ ।
ಕುರುಷ್ವ ಸಲಿಲಂ ರಾಜನ್ ಪ್ರತಿಜ್ಞಾಮಪವರ್ಜಯ ॥
ಅನುವಾದ
ಮಹಾರಾಜನೇ! ಈಗ ನೀನು ಗಂಗಾಜಲದಿಂದ ಇಲ್ಲಿ ನಿನ್ನ ಎಲ್ಲ ಪ್ರಪಿತಾಮಹರಿಗೆ ತರ್ಪಣಕೊಡು ಹಾಗೂ ಈ ಪ್ರಕಾರ ನೀನು ಹಾಗೂ ನಿನ್ನ ಪೂರ್ವಜರು ಮಾಡಿದ ಪ್ರತಿಜ್ಞೆಯನ್ನು ಪೂರ್ಣಗೊಳಿಸಿದೆ.॥7॥
ಮೂಲಮ್ - 8
ಪೂರ್ವಕೇಣ ಹಿತೇ ರಾಜಂ ಸ್ತೇನಾತಿ ಯಶಸಾ ತದಾ ।
ಧರ್ಮಿಣಾಂ ಪ್ರವರೇಣಾಥ ನೈಷ ಪ್ರಾಪ್ತೋ ಮನೋರಥಃ ॥
ಅನುವಾದ
ರಾಜನೇ! ನಿನ್ನ ಪೂರ್ವಜ ಧರ್ಮಾತ್ಮರಲ್ಲಿ ಶ್ರೇಷ್ಠ ಮಹಾಯಶಸ್ವೀ ಸಗರರಾಜನೂ ಗಂಗೆಯನ್ನು ಇಲ್ಲಿಗೆ ತರಲು ಬಯಸುತ್ತಿದ್ದನು. ಆದರೆ ಅವನ ಈ ಮನೋರಥ ಪೂರ್ಣವಾಗಲಿಲ್ಲ.॥8॥
ಮೂಲಮ್ - 9
ತಥೈವಾಂಶುಮತಾ ವತ್ಸ ಲೋಕೇಽಪ್ರತಿಮತೇಜಸಾ ।
ಗಂಗಾಂ ಪ್ರಾರ್ಥಯತಾ ನೇತುಂ ಪ್ರತಿಜ್ಞಾ ನಾಪವರ್ಜಿತಾ ॥
ಮೂಲಮ್ - 10
ರಾಜರ್ಷಿಣಾ ಗುಣವತಾ ಮಹರ್ಷಿಸಮತೇಜಸಾ ।
ಮತ್ತುಲ್ಯತಪಸಾ ಚೈವ ಕ್ಷತ್ರಧರ್ಮಸ್ಥಿತೇನ ಚ ॥
ಅನುವಾದ
ವತ್ಸ! ಈ ಪ್ರಕಾರ ಲೋಕದಲ್ಲಿ ಅಪ್ರತಿಮ ಪ್ರಭಾವಶಾಲಿ, ಉತ್ತಮ ಗುಣವಿಶಿಷ್ಟ, ಮಹರ್ಷಿ ತುಲ್ಯತೇಜಸ್ವೀ, ನನ್ನಂತೆಯೇ ತಪಸ್ವೀ ಹಾಗೂ ಕ್ಷತ್ರಿಯ ಧರ್ಮ ಪರಾಯಣ ರಾಜರ್ಷಿ ಅಂಶುಮಂತನೂ ಕೂಡ ಗಂಗೆಯನ್ನು ತರಲು ಇಚ್ಛಿಸುತ್ತಿದ್ದನು. ಆದರೆ ಅವನಿಂದಲೂ, ಈ ಪೃಥ್ವಿಗೆ ಗಂಗೆಯನ್ನು ತರುವ ಪ್ರತಿಜ್ಞೆಯನ್ನು ಪೂರ್ಣಮಾಡಲಾಗಲಿಲ್ಲ.॥9-10॥
ಮೂಲಮ್ - 11
ದಿಲೀಪೇನ ಮಹಾಭಾಗ ತವ ಪಿತ್ರಾತಿತೇಜಸಾ ।
ಪುನರ್ನ ಶಕಿತಾ ನೇತುಂ ಗಂಗಾಂ ಪ್ರಾರ್ಥಯತಾನಘ ॥
ಅನುವಾದ
ನಿಷ್ಪಾಪ ಮಹಾಭಾಗನೇ! ಅತ್ಯಂತ ತೇಜಸ್ವೀ ನಿನ್ನ ತಂದೆ ದಿಲೀಪನೂ ಗಂಗೆಯನ್ನು ತರಲು ಇಚ್ಛಿಸುತ್ತಾ ಈ ಕಾರ್ಯದಲ್ಲಿ ಯಶಸ್ವಿಯಾಗಲಿಲ್ಲ.॥11॥
ಮೂಲಮ್ - 12
ಸಾ ತ್ವಯಾ ಸಮತಿಕ್ರಾಂತಾ ಪ್ರತಿಜ್ಞಾ ಪುರುಷರ್ಷಭ ।
ಪ್ರಾಪ್ತೋಽಸಿ ಪರಮಂ ಲೋಕೇ ಯಶಃ ಪರಮಸಮ್ಮತಮ್ ॥
ಅನುವಾದ
ಪುರುಷ ಪ್ರವರ! ಗಂಗೆಯನ್ನು ಭೂಮಿಗೆ ಕರೆತರುವ ಆ ಪ್ರತಿಜ್ಞೆಯನ್ನು ನೀನು ಪೂರ್ಣಗೊಳಿಸಿದೆ. ಇದರಿಂದ ಪ್ರಪಂಚದಲ್ಲಿ ನಿನಗೆ ಪರಮೋತ್ತಮ ಮಹಾಯಶವು ಪ್ರಾಪ್ತವಾಗಿದೆ.॥12॥
ಮೂಲಮ್ - 13
ತಚ್ಚ ಗಂಗಾವತರಣಂ ತ್ವಯಾ ಕೃತಮರಿಂದಮ ।
ಅನೇನ ಚ ಭವಾನ್ಪ್ರಾಪ್ತೋ ಧರ್ಮಸ್ಯಾಯತನಂ ಮಹತ್ ॥
ಅನುವಾದ
ಶತ್ರುದಮನ! ನೀನು ಗಂಗೆಯನ್ನು ಪೃಥ್ವಿವಿಗೆ ತಂದು ಪೂರ್ಣಗೊಳಿಸಿದ ಕಾರ್ಯದಿಂದ ಧರ್ಮಕ್ಕೆ ಆಶ್ರಯವಾದ ಮಹತ್ತಾದ ಬ್ರಹ್ಮಲೋಕದ ಅಧಿಕಾರವನ್ನು ಪಡೆದಿರುವೆ.॥13॥
ಮೂಲಮ್ - 14
ಪ್ಲಾವಯಸ್ವ ತ್ವಮಾತ್ಮಾನಂ ನರೋತ್ತಮ ಸದೋಚಿತೇ ।
ಸಲಿಲೇ ಪುರುಷಶ್ರೇಷ್ಠ ಶುಚಿಃ ಪುಣ್ಯಫಲೋ ಭವ ॥
ಅನುವಾದ
ನರಶ್ರೇಷ್ಠನೇ! ಪುರುಷಪ್ರವರನೇ! ಗಂಗೆಯ ಜಲವು ಸದಾಕಾಲ ಸ್ನಾನಯೋಗ್ಯವಾಗಿದೆ. ನೀನು ಸ್ವತಃ ಸ್ನಾನ ಮಾಡಿ, ಪವಿತ್ರನಾಗಿ ಪುಣ್ಯಫಲವನ್ನು ಪಡೆದುಕೋ.॥14॥
ಮೂಲಮ್ - 15
ಪಿತಾಮಹಾನಾಂ ಸರ್ವೇಷಾಂ ಕುರುಷ್ವ ಸಲಿಲಕ್ರಿಯಾಮ್ ।
ಸ್ವಸ್ತಿ ತೇಽಸ್ತು ಗಮಿಷ್ಯಾಮಿ ಸ್ವಂ ಲೋಕಂ ಗಮ್ಯತಾಂ ನೃಪ ॥
ಅನುವಾದ
ನರೇಶ್ವರ! ನೀನು ನಿನ್ನ ಎಲ್ಲ ಪಿತಾಮಹರಿಗೆ ತರ್ಪಣಗಳನ್ನು ಕೊಡು. ನಿನಗೆ ಮಂಗಳವಾಗಲಿ. ಈಗ ನಾನು ನನ್ನ ಲೋಕಕ್ಕೆ ಹೋಗುವೆನು. ನೀನೂ ಕೂಡ ನಿನ್ನ ರಾಜಧಾನಿಗೆ ತೆರಳು.॥15॥
ಮೂಲಮ್ - 16
ಇತ್ಯೇವಮುಕ್ತ್ವಾದೇವೇಶಃ ಸರ್ವಲೋಕ ಪಿತಾಮಹಃ ।
ಯಥಾಗತಂ ತಥಾ ಗಚ್ಛದ್ದೇವಲೋಕಂ ಮಹಾಯಶಾಃ ॥
ಅನುವಾದ
ಹೀಗೆ ಹೇಳಿ ಸರ್ವಲೋಕ ಪಿತಾಮಹ ಮಹಾಯಶಸ್ವೀ ದೇವೇಶ್ವರ ಬ್ರಹ್ಮ ದೇವರು ತನ್ನ ಲೋಕಕ್ಕೆ ಮರಳಿ ಹೋದರು.॥16॥
ಮೂಲಮ್ - 17
ಭಗೀರಥಸ್ತು ರಾಜರ್ಷಿಃ ಕೃತ್ವಾ ಸಲಿಲಮುತ್ತಮಮ್ ।
ಯಥಾಕ್ರಮಂ ಯಥಾನ್ಯಾಯಂ ಸಾಗರಾಣಾಂ ಮಹಾಯಶಾಃ ॥
ಮೂಲಮ್ - 18
ಕೃತೋದಕಃ ಶುಚೀ ರಾಜಾ ಸ್ವಪುರಂ ಪ್ರವಿವೇಶ ಹ ।
ಸಮೃದ್ಧಾರ್ಥೋ ನರಶ್ರೇಷ್ಠಸ್ವರಾಜ್ಯಂ ಪ್ರಶಶಾಸ ಹ ॥
ಅನುವಾದ
ನರಶ್ರೇಷ್ಠ ರಾಮಾ! ಮಹಾಯಶಸ್ವೀ ರಾಜರ್ಷಿ ಭಗೀರಥನೂ ಗಂಗೆಯ ಪುಣ್ಯತೀರ್ಥದಿಂದ ಕ್ರಮವಾಗಿ ಎಲ್ಲ ಸಗರ ಪುತ್ರರಿಗೆ ವಿಧಿವತ್ತಾಗಿ ತರ್ಪಣ ನೀಡಿ, ಪವಿತ್ರನಾಗಿ ತನ್ನ ನಗರಕ್ಕೆ ಹೊರಟು ಹೋದನು. ಈ ಪ್ರಕಾರ ಸಫಲ ಮನೋರಥನಾಗಿ ಅವನು ತನ್ನ ರಾಜ್ಯವನ್ನು ಆಳುತ್ತಿದ್ದನು.॥17-18॥
ಮೂಲಮ್ - 19
ಪ್ರಮುಮೋದ ಚ ಲೋಕಸ್ತಂ ನೃಪಮಾಸಾದ್ಯ ರಾಘವ ।
ನಷ್ಟಶೋಕಃ ಸಮೃದ್ಧಾರ್ಥೋ ಬಭೂವ ವಿತಗಜ್ವರಃ ॥
ಅನುವಾದ
ರಘುನಂದನ! ತನ್ನ ರಾಜನನ್ನು ನೋಡಿ ಪ್ರಜಾವರ್ಗಕ್ಕೆ ಬಹಳ ಸಂತೋಷವಾಯಿತು. ಎಲ್ಲರೂ ಶೋಕಮುಕ್ತರಾದರು. ಎಲ್ಲರ ಮನೋರಥಗಳು ಪೂರ್ಣವಾಗಿ ನಿಶ್ಚಿಂತರಾದರು.॥19॥
ಮೂಲಮ್ - 20
ಏಷ ತೇ ರಾಮ ಗಂಗಾಯಾ ವಿಸ್ತರೋಽಭಿಹಿತೋ ಮಯಾ ।
ಸ್ವಸ್ತಿ ಪ್ರಾಪ್ನುಹಿ ಭದ್ರಂ ತೇ ಸಂಧ್ಯಾಕಾಲೋಽತಿವರ್ತತೇ ॥
ಅನುವಾದ
ಶ್ರೀರಾಮಾ! ಈ ಗಂಗೆಯ ಕಥೆಯನ್ನು ವಿಸ್ತಾರವಾಗಿ ನಿನಗೆ ತಿಳಿಸಿದೆ. ನಿನಗೆ ಮಂಗಳವಾಗಲೀ. ನೋಡು ಈಗ ಸಂಧ್ಯಾಕಾಲ ಕಳೆಯುತ್ತಾ ಇದೇ, ಬಾ, ಸಂಧ್ಯಾವಂದನಾದಿಗಳನ್ನು ಪೂರೈಸಿಕೋ.॥20॥
ಮೂಲಮ್ - 21
ಧನ್ಯಂ ಯಶಸ್ಯಮಾಯುಷ್ಯಂ ಪುತ್ರ್ಯಂ ಸ್ವರ್ಗ್ಯಮಥಾಪಿ ಚ ।
ಯಃ ಶ್ರಾವಯತಿ ವಿಪ್ರೇಷು ಕ್ಷತ್ರಿಯೇಷ್ವಿತರೇಷು ಚ ॥
ಮೂಲಮ್ - 22
ಪ್ರೀಯಂತೇ ಪಿತರಸ್ತಸ್ಯ ಪ್ರೀಯಂತೇ ದೈವತಾನಿ ಚ ।
ಇದಮಾಖ್ಯಾನಮಾಯುಷ್ಯಂ ಗಂಗಾವತರಣಂ ಶುಭಮ್ ॥
ಅನುವಾದ
ಈ ಗಂಗಾವತರಣದ ಮಂಗಲಮಯ ಉಪಾಖ್ಯಾನವು ಆಯುಸ್ಸನ್ನು ಹೆಚ್ಚಿಸುವಂತಹದಾಗಿದೆ. ಧನ, ಯಶ, ಆಯುಸ್ಸು, ಪುತ್ರ ಮತ್ತು ಸ್ವರ್ಗಪ್ರಾಪ್ತಿ ಮಾಡಿಸಿಕೊಡುತ್ತದೆ. ಬ್ರಾಹ್ಮಣರು, ಕ್ಷತ್ರಿಯರು ಹಾಗೂ ಇತರ ವರ್ಣದ ಜನರೂ ಕೂಡ ಯಾರು ಈ ಕಥೆಯನ್ನು ಕೇಳುತ್ತಾರೋ, ಅವರ ಮೇಲೆ ದೇವತೆಗಳು, ಪಿತೃಗಳು ಪ್ರಸನ್ನರಾಗುವರು.॥21-22॥
ಮೂಲಮ್ - 23
ಯಃ ಶೃಣೋತಿ ಚ ಕಾಕುತ್ಸ್ಥ ಸರ್ವಾನ್ಕಾಮಾನವಾಪ್ನುಯಾತ್ ।
ಸರ್ವೇ ಪಾಪಾಃ ಪ್ರಣಶ್ಯಂತಿ ಆಯುಃ ಕೀರ್ತಿಶ್ಚ ವರ್ಧತೇ ॥
ಅನುವಾದ
ಕಾಕುತ್ಸ್ಥ ಕುಲಭೂಷಣನೇ! ಯಾರು ಇದನ್ನು ಶ್ರವಣಿಸುವರೋ ಅವರ ಎಲ್ಲ ಕಾಮನೆಗಳೂ ಪೂರೈಸಲ್ಪಡುವುವು. ಅವರ ಸಕಲ ಪಾಪಗಳು ನಾಶವಾಗಿ ಆಯುಸ್ಸು ವೃದ್ಧಿಸಿ, ಕೀರ್ತಿಯು ವಿಸ್ತಾರವಾಗುತ್ತದೆ.॥23॥
ಅನುವಾದ (ಸಮಾಪ್ತಿಃ)
ವಾಲ್ಮೀಕಿ ವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಬಾಲಕಾಂಡದಲ್ಲಿ ನಲವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು. ॥44॥